ಒಟ್ಟು ಪುಟವೀಕ್ಷಣೆಗಳು

ಶನಿವಾರ, ಮಾರ್ಚ್ 18, 2017

ಅನುಸಂಧಾನ-೪

ಚಾರಿತ್ರಿಕ ಸತ್ಯ V/S  ಸಾಹಿತ್ಯಕ ಸತ್ಯ.

ಚರಿತ್ರೆ ಮತ್ತು ಸಾಹಿತ್ಯ ಪರಂಪರೆ ಯಾವತ್ತೂ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಚಲಿಸುವ ಸತ್ಯಗಳು. ಚರಿತ್ರೆಯನ್ನು ಆಳುವ ವರ್ಗ ಬರೆಯಿಸುವ ಪ್ರಯತ್ನದಲ್ಲಿದ್ದರೆ ಸಾಹಿತಿಯೊಬ್ಬ ಆಯಾ ಕಾಲದ ಸತ್ಯಗಳನ್ನು ತನಗೆ ಹೊಂದುವ ಮಾಧ್ಯಮದಲ್ಲಿ ಪ್ರಕಟಿಸುತ್ತಾ ಸಾಹಿತ್ಯಕ ಸತ್ಯವೊಂದನ್ನು ಮುಂದಿನ ತಲೆಮಾರಿಗೆ ದಾಟಿಸುವ ಪ್ರಯತ್ನದಲ್ಲಿರುತ್ತಾನೆ. ಚರಿತ್ರಕಾರ ಅರಸೊತ್ತಿಗೆಯ ಅಥವ ಆಳುವವರ ಹಂಗಿನಲ್ಲಿರುವುದರಿಂದ ಸತ್ಯಕ್ಕಿಂತಲೂ ಮುಖ್ಯವಾಗಿ ಆಳುವವರನ್ನು ಸಂಪ್ರೀತಗೊಳಿಸುವ ಉದ್ದೇಶದಿಂದ ವಿಷಯಾಂತರ ಮಾಡುತ್ತಲೇ ವೈಭವೀಕರಿಸಿದ ಸಂಗತಿಗಳಿಂದ ಇತಿಹಾಸದ ಪುಟಗಳನ್ನು ತುಂಬಿಸುತ್ತಿರುತ್ತಾನೆ. ಆದರೆ ನಿಷ್ಠಾವಂತ ಸಾಹಿತಿ ಮಾತ್ರ ಇದ್ದುದನ್ನು ಇದ್ದಂತೆಯೇ ವರ್ತಮಾನದ ಸತ್ಯವನ್ನು ಭವಿಷ್ಯದ ಉಪಯೋಗಕ್ಕಾಗಿ ದಾಖಲಿಸುವುದರಲ್ಲಿ ಮಗ್ನನಾಗಿರುತ್ತಾನೆ.

ಈ ಮಾತನ್ನು ಸಮರ್ಥಿಸಲು ಕೆಲವೊಂದು ಉದಾಹರಣೆಗಳನ್ನೀಗ ನೋಡೋಣ. ವಿಜಯನಗರದ ಅರಸರ ಕಾಲವೆಂದರೆ ಇತಿಹಾಸದ ಪ್ರಕಾರ ಭಾರೀ ವೈಭವದ ಸತ್ಯ ನ್ಯಾಯ ಮತ್ತು ಸಂಪಧ್ಭರಿತ ಕಾಲ. ಸರಿ ಸುಮಾರು ಇದೇ ಅವಧಿಯಲ್ಲಿ ಅಂದರೆ ೧೫ನೇ ಶತಮಾನದ ಅಂತ್ಯದಲ್ಲೇ ದಾಸ ಸಾಹಿತ್ಯ ಮುಂಚೂಣಿಯಲ್ಲಿದ್ದ ಕಾಲದಲ್ಲೇ ದಾಸ ಶ್ರೇಷ್ಠ ಪುರಂದರ ದಾಸರ ರಚನೆಯೊಂದು  "ಸತ್ಯವಂತರಿಗಿದು ಕಾಲವಲ್ಲ , ದುಷ್ಟ ಜನರಿಗಿದು ಸುಭಿಕ್ಷ ಕಾಲ" ಎಂದು ಆ ಕಾಲವನ್ನು ಬಣ್ಣಿಸುತ್ತದೆ. ನಮ್ಮ ಜನಪದರಂತೂ ರಾಮ ರಾಜ್ಯವಾಳಿದರೂ ರಾಗಿ ಬೀಸೋದು ತಪ್ಪುವುದಿಲ್ಲ ಎಂಬ ಅಪ್ಪಟ ಸತ್ಯವನ್ನು ನಂಬಿದವರು. ಹಾಗಾಗಿಯೇ ಸದ್ಯ ನಾವೆಲ್ಲರೂ ಮೇಲಿಂದ ಮೇಲೆ ಚರ್ಚಿಸುತ್ತಿರುವ ಟಿಪ್ಪು ಮತ್ತು ಭಗತ್ ಸಿಂಗರನ್ನು ಚರಿತ್ರೆ ಹೇಳಿದ ಸತ್ಯದಲ್ಲಿ ಅಳೆಯಬೇಕೋ ಅಥವ ಆ ಕಾಲದ ಸಾಹಿತ್ಯದಲ್ಲಿ ಒಡಮೂಡಿರುವ ಬೆಳಕಲ್ಲಿ ಅರಿಯಬೇಕೋ? ಸದ್ಯ ನಮ್ಮ ಮುಂದೆ ಹಲವು ಚರಿತ್ರೆಗಳಿವೆ. ಈಗಾಗಲೇ ಚರ್ಚಿಸಿದಂತೆ ಆಯಾ ಕಾಲದ ಚರಿತ್ರಕಾರರು ತಮಗೆ ಅನುಕೂಲ ಕಂಡ ಹಾಗೆ ಇತಿಹಾಸವನ್ನು ನಿರ್ಮಿಸಿರುವ ಕಾರಣ ಆಯಾ ಪಂಥ ಬದ್ಧತೆ ಮತ್ತು ಪ್ರಾಂತ್ಯಬದ್ಧಗಳಾಚೆಗೆ ಇವನ್ನು ನಂಬುವುದು ಅಥವ ಬಿಡುವುದು ಜನಮಾನಸಕ್ಕೆ ಬಿಟ್ಟ ಸಂಗತಿಗಳಾಗಿವೆ.

ಸ್ವಾತಂತ್ರೋತ್ತರ ಭಾರತದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ಕುರಿತಂತೆಯೇ ಹಲವು ಸತ್ಯಗಳು ನಮ್ಮಮುಂದಿವೆ. ಬ್ರಿಟಿಷರಿಂದ ಭಾರತವನ್ನು ಬಿಡಿಸಿಕೊಟ್ಟ ಮಹಾತ್ಮರ ಆತ್ಮ ಚರಿತ್ರೆಗೂ ಅವರ ಬದುಕಿನ ಮುಖ್ಯ ಘಟ್ಟಗಳನ್ನು ಕುರಿತಂತೆ ಇರುವ ಗಾಂಧಿ ವರ್ಸೆಸ್ ಗಾಂಧಿ ನಾಟಕದ ವಸ್ತುವಿಗೂ ಅಜಗಜಾಂತರ ವ್ಯತ್ಯಾಸಗಳಿವೆ. ೧೯೭೫ರಿಂದ ೧೯೭೭ರವರೆಗಿನ ತುರ್ತುಪರಿಸ್ಥಿತಿಯ ಕಾಲವನ್ನು ಕುರಿತೂ ಹಲವು ಜಿಜ್ಞಾಸೆಗಳಿವೆ. ಇಂದಿರಾ ಅಂದರೆ ಇಂಡಿಯಾ ಇಂಡಿಯಾ ಅಂದರೆ ಇಂದಿರಾ ಅಂದ ಭಟ್ಟಂಗಿಗಳ ಹಾಗೆಯೇ ಆಕೆಯನ್ನು ದುರ್ಗೆಯೆಂದು ಚಿತ್ರಿಸಿದ ಕಲಾವಿದರೂ ಇದ್ದಾರೆ. ಅದುವರೆಗೂ ಭಾರತವನ್ನಾಳಿದ ಕಾಂಗ್ರೆಸ್ಸನ್ನು ಧೂಳೀಪಟ ಮಾಡಿದ ಕೀರ್ತಿ ಈ ತುರ್ತುಪರಿಸ್ಥಿತಿಯದೇ ಕೊಡುಗೆ ಅನ್ನುವದರಲ್ಲಿ ಯಾವ ಅನುಮಾನಗಳೂ ಇಲ್ಲದಿರುವಾಗ ಹೊಗಳುಭಟರ ಕಲಾವಿದರ ಅನ್ನಿಸಿಕೆಗಳು ವೈಯುಕ್ತಿಕ ಮಟ್ಟದವೋ ಇತಿಹಾಸಕ್ಕೆ ಸಂದ ಸತ್ಯಗಳೋ ಎನ್ನುವುದನ್ನು ಪರಿಶೀಲಿಸಬೇಕು.

ಇನ್ನು ಚರಿತ್ರೆಯ ಅಂಶವೊಂದನ್ನುಹಿನ್ನೆಲೆಯನ್ನಾಗಿ ಇಟ್ಟುಕೊಂಡು ರಚಿತವಾಗುವ ಸಾಹಿತ್ಯಕ ಕೃತಿಗಳು ಸಮಾಜದ ಮೇಲೆ ಬೀರುವ ಪರಿಣಾಮಗಳು ಯಾವತ್ತೂ ಅಪಾರವಾಗಿರುತ್ತವೆ. ಬಸವಣ್ಣನವರ ಕಲ್ಯಾಣ ಕ್ರಾಂತಿಯ ವಸ್ತುವನ್ನು ಹೊಂದಿದ್ದ ಲಂಕೇಶರ ಸಂಕ್ರಾಂತಿ, ಕಾರ್ನಾಡರ ತುಘಲಕ್ ಮತ್ತು ತಲೆದಂಡ, ಬೈರಪ್ಪನವರ ಆವರಣ ಮುಂತಾದವು ಇತಿಹಾಸವನ್ನು ವರ್ತಮಾನದ ಕಣ್ಣಲ್ಲಿ ಕಂಡ ಅಪರೂಪದ ಪ್ರಯೋಗಗಳು. ಇನ್ನು ಪುರಾಣ ರಾಮಾಯಣ ಮಹಾಭಾರತಗಳಂತೂ ಆಧುನಿಕ ಮನೋಭೂಮಿಕೆಯ ಮೇಲೆ ಇನ್ನಿಲ್ಲದ ಪರಿಣಾಮ ಬೀರುತ್ತಿರುವ ಕಾರಣ ಇಂದಿಗೂ ಆ ಮಹಾಕಾವ್ಯಗಳು ಹೊಸ ಹೊಸ ರೀತಿಯಲ್ಲಿ ಅನಾವರಣಗೊಳ್ಳುತ್ತಲೇ ಇವೆ.
ಮಹಾಭಾರತವನ್ನು ಪುನರ್ ರಚಿಸಿದ ಪರ್ವ,(ಬೈರಪ್ಪ) ಪುರಾಣ ಪ್ರಸಂಗವೊಂದನ್ನು ಆಧುನಿಕ ಜಿಜ್ಞಾಸೆಗೆ ದೂಡಿದ ಯಯಾತಿ, (ಕಾರ್ನಾಡ್) ಪರಮಾತ್ಮನನ್ನೇ ಪ್ರಶ್ನಿಸಿದ ಜಲಗಾರ (ಕುವೆಂಪು) ಹುಡುಕುತ್ತಾ ಹೋದರೆ ಇತಿಹಾಸವನ್ನು ಪ್ರಶ್ನಿಸಿದ  ಹಲವು ಕೃತಿಗಳು ಕನ್ನಡ ಸಾಹಿತ್ಯದಲ್ಲಿ ಒಡಮೂಡಿರುವುದನ್ನು ಕಾಣಬಹುದು. ಇನ್ನು ಬ್ರಿಟಿಷ್ ಆಡಳಿತ ಕಟ್ಟಿಕೊಟ್ಟ ಮೆಕಾಲೆ ಪ್ರಣೀತ ನಮ್ಮ ವಿದ್ಯಾಭ್ಯಾಸದ ಕ್ರಮ ಸಮಷ್ಟಿಯ ಸುಖಕ್ಕಿಂತಲೂ ವೈಯುಕ್ತಿಕ ಲಾಭದ ಮೇಲೇ ದೃಷ್ಟಿ ಇಟ್ಟುಕೊಂಡಿರುವ ಕಾರಣ ವರ್ಗಾಧಾರಿತ ವರ್ಣಾಶ್ರಮ ಧರ್ಮವನ್ನು ಜಾತಿ ಸೂಚಕವನ್ನಾಗಿ ಬದಲಿಸಿತು. ಭಾರತವಷ್ಟೇ ಅಲ್ಲದೆ ಜಾಗತಿಕ ಸಾಹಿತ್ಯದ ಮೇರು ಕೃತಿಗಳಾದ ವೇದಗಳನ್ನು ಸ್ಮೃತಿಗಳನ್ನು ವಿವಿಧ ನ್ಯಾಯಗಳನ್ನು
ಅಲ್ಲಗಳೆದು ಅವೆಲ್ಲವನ್ನೂ ಸಂಕುಚಿತ ಮನೋಸ್ಥಿತಿಯಿಂದ ನೋಡುವಂತೆ ಮಾಡಿದ್ದೂ ಆಧುನಿಕ ವಿದ್ಯಾಭ್ಯಾಸದ ಕ್ರಮವೇ!

ಚರಿತ್ರೆಯು ಬರೆಸಲ್ಪಡುವ ಸರಕಾದರೆ ಸಾಹಿತ್ಯವು‌ ಸಮುದಾಯವೊಂದು ಕಣ್ಣಾರೆ ಕಂಡು ದಾಖಲಿಸಿದ ಅಪ್ಪಟ ಸಾಕ್ಷಿಯಾಗಿದೆ. ಹಾಗಾಗಿಯೇ ಚರಿತ್ರಕಾರರು ಸೃಷ್ಟಿಸುವ ಸುಳ್ಳಿಗಿಂತಲೂ ಸಾಹಿತ್ಯವು ಸೃಷ್ಟಿಸುವ ಸತ್ಯಗಳು ಜನಮಾನಸದಲ್ಲಿ‌ ಚಿರಕಾಲ ನಿಲ್ಲುತ್ತವೆ ಮತ್ತು ಚಿಂತನೆಗೆ ಹಚ್ಚುತ್ತವೆ.

ಅನುಸಂಧಾನ-೩

ಕಾವ್ಯವನ್ನು ಬಗೆಯುವ ಬಗೆ

ನಮ್ಮಲ್ಲಿ ಬಹಳ ಜನ ಕವಿತೆಯೆಂದರೆ ಕವಿಗೋಷ್ಠಿಯೆಂದರೆ ಮೂಗು ಮುರಿಯುತ್ತೇವೆ. ಕವಿತೆಯನ್ನು ಓದುವುದು ಅಥವ ಬರೆಯುವುದೆಂದರೆ ಮಾಡಲು ಬೇರೇನೂ ಕೆಲಸವಿಲ್ಲದವರು ಹೊಂಚಿಕೊಂಡ ಕೆಲಸವೆಂದು ಅನ್ನುವವರೂ ಇದ್ದಾರೆ. ಆದರೂ ಸಾಹಿತ್ಯ ಸಮ್ಮೇಳನಗಳ ಮುಖ್ಯ ಆಕರ್ಷಣೆಯೇ ಕವಿಗೋಷ್ಠಿಗಳಾಗಿರುವುದೂ ವಿಶೇಷವೇ. ಪಂಡಿತರಿಗಷ್ಟೇ ಕವಿತೆ ಪಾಮರರಿಗೆ ಏಕದರ ಗೊಡವೆ ಅನ್ನುವವರೂ ಇದ್ದಾರೆ. ಇನ್ನು ಕವಿಯಲ್ಲದವರು ಅಥವ ಕವಿತೆಯ ಗೊಡವೆ ಬೇಡದೆಯೂ ಕವಿತೆಯ ಜೊತೆಗೆ ಅನಿವಾರ್ಯವಾಗಿ ಬೆರೆಯುವವರೆಂದರೆ ಅದನ್ನು ಪಠ್ಯವಾಗಿ ಓದಲೇಬೇಕಿರುವ ವಿದ್ಯಾರ್ಥಿಗಳು ಮತ್ತು ಅದನ್ನವರಿಗೆ ಪಾಠ ಹೇಳಬೇಕಾದ ಗುರುತರ ಜಾವಾಬ್ದಾರಿ ಹೊಂದಿರುವ ಅಧ್ಯಾಪಕರು.
ಕವಿತೆಯನ್ನು ಪಾಠ ಮಾಡುವುದು ಎಂದರೆ ಅಧ್ಯಾಪಕರಿಗೆ ಹಿಂಜರಿಕೆ.ವರ್ಷಾವಧಿ  ಪರೀಕ್ಷೆಯಲ್ಲಿ ಕವಿತೆಗಳ ಮೇಲೆ ಕೇಳಿದ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆಯುವುದೆಂದರೆ ವಿದ್ಯಾರ್ಥಿಗಳಿಗೆ ಅಂಜಿಕೆ. ಅರ್ಥವಾಗದು ಎಂಬ ಅಂಜಿಕೆ ಹುಡುಗರಿಗೆ. ಅರ್ಥವಾಗದಿದ್ದರೆ ಎಂಬ ಅಂಜಿಕೆ ಅಧ್ಯಾಪಕರಿಗೆ. ಓದಿದ ಕವಿತೆ ಅರ್ಥವಾಗದಿದ್ದರೆ ನಮ್ಮ ಅಹಂಕಾರಕ್ಕೆ ಪೆಟ್ಟು. ಅದಕ್ಕೇ ನಮಗೆ ಕವಿತೆಯ ಉಸಾಬರಿಯೇ ಬೇಡ ಎಂದು ಮುಖ ತಿರುಗಿಸುವ ಮಂದಿ ಬಹಳ. ಕವಿತೆಯೊಂದನ್ನು ಓದಿದೊಡನೆಯೇ ಅದು ಅರ್ಥವಾಗಲೇ ಬೇಕು ಎಂದು ದಯವಿಟ್ಟು ಹಠಮಾಡಬೇಡಿ. ಕವಿತೆಯನ್ನು ಅರ್ಥದ ಗೂಟಕ್ಕೆ ಕಟ್ಟಬೇಡಿ. ಅದನ್ನು ಸುಮ್ಮನೆ ವಿಹಾರಕ್ಕೆ ಬಿಡಿ. ಅಂಗಳದಲ್ಲಿ ಆಡಬಯಸುವ ಪುಟ್ಟ ಮಗುವಿನಂತೆ ಕವಿತೆ ಆರಾಮಾಗಿ ನಿಮ್ಮ ಮನದ ಅಂಗಳದಲ್ಲಿ ಆಡಿಕೊಳ್ಳಲಿ. ಕವಿತೆಯ ಭಯವನ್ನು ಗೆಲ್ಲಲು ನಾವು ಆರಂಭದಲ್ಲಿ ಕೈಗೊಳ್ಳಬೇಕಾದ ಸುಲಭ ಉಪಾಯವಿದು.

ಸುಮ್ಮನೆ ಓದುತ್ತಾ ಹೋದರೆ, ಓದುತ್ತಲೇ ಹೋದರೆ ಹೇಗೆ ಈಗ ತಾನೇ ಓಡಾಡಲು ಪ್ರಾರಂಭಿಸಿರುವ ಮಗು ತನ್ನ ಆಟದಲ್ಲಿ ಒಂದು ಲಯ ಕಂಡೀತೋ ಹಾಗೆಯೇ ನೀವೂ ಕವಿತೆಯನ್ನು ಕಾಣಬೇಕು. ಮಗು  ನರ್ತಕರಂತೆ  ಪಾದವನ್ನು ನೆಲಕ್ಕೆ ಜಬ್ಬುವ ಚಂದ ನೋಡಿ. ಅದರ ತೊಡರುಗಾಲು ನಡೆ ನಿಮಗೆ ಸುಖ ಕೊಡದೆ ಇದ್ದೀತೆ? ಅದರ ತೊದಲು ತೊದಲು ನುಡಿ ಜೊಲ್ಲಿನಲ್ಲಿ ಬೆರೆತು ತುಟಿಯಾಚೆ ಜಾರುವ ಚೆಲುವಿಗೆ ಅರ್ಥವನ್ನೇಕೆ ಹಚ್ಚುವಿರಿ? ಕವಿತೆ ಹೇಗೆ ನಡೆಯುವುದು, ಹೇಗೆ ನಗುವುದು, ಹೇಗೆ ಅತಾರ್ಕಿಕವನ್ನು ಪಲುಕುವುದು ಗಮನಿಸಿ.
ಕವಿತೆ ಎಂದರೆ ಮೊದಲು ಗಮನಿಸ ಬೇಕಾದದ್ದು ಅದನ್ನು ಕವಿಯು ಹೇಗೆ ಗುನುಗುನಿಸುವ ಮಾತುಗಳನ್ನು ಹಿಡಿದು ನೇಯ್ದು ಮಾಲೆ ಮಾಡಿದ್ದಾನೆ ಎಂಬುದನ್ನು ಓದಿನ ಮೂಲಕವೇ ದಕ್ಕಿಸಿಕೊಳ್ಳಬೇಕು.
ಕವಿತೆಯ ಗ್ರಹಿಕೆ ಎಂಬುದು ಕವಿತೆಯ ಶಬ್ದ ಸಾಮಗ್ರಿಯಿಂದ ನೀವೇ ಸ್ವಂತ ಕಟ್ಟಿಕೊಂಡ ಗ್ರಹಿಕೆ ಎಂಬುದನ್ನು ಮರೆಯದಿರಿ. ಈ ಪದ್ಯದ ಇನ್ನೊಬ್ಬ ಓದುಗ ಭಿನ್ನವಾದ ಬೇರೆ ಒಂದು ಗ್ರಹಿಕೆಯನ್ನೇ ತನ್ನ ಓದಿನಿಂದ ಕಟ್ಟಿಕೊಂಡರೆ ನೀವು ಆತಂಕಗೊಳ್ಳಬೇಕಿಲ್ಲ. ಸದ್ಯಕ್ಕೆ ಇದು ನಿಮ್ಮ ಕಾವ್ಯ ಗ್ರಹಿಕೆ. ಮುಂದೆ ನಿಮ್ಮ ಓದು ಪರಿಷ್ಕಾರಗೊಂಡಂತೆ ಕವಿತೆ ಬೇರೊಂದು ವಿಭಿನ್ನವಾದ ಗ್ರಹಿಕೆಯನ್ನೇ ಕಟ್ಟಿಕೊಳ್ಳಬಲ್ಲುದು. ಕವಿತೆ ಒಂದೇ; ಆದರೆ ಅದರ ಗ್ರಹಿಕೆಗಳೂ ಅನಂತ. ಈ ನಂಬಿಕೆ ಮತ್ತು ವಿಶ್ವಾಸದೊಂದಿಗೆ ಹೊಸ ಕಾವ್ಯಾರ್ಥಿಗಳು ತಮ್ಮ ಕಾವ್ಯ ಶೋಧವನ್ನು ಮುಂದುವರೆಸಲಿ. ಕವಿತೆಯೆಂಬುದು ನಿರಂತರ ವಿಕಸನಶೀಲವಾದ ಒಂದು ಜೈವಿಕ ಭಾಷಾನುಸಂಧಾನ ಎಂಬ ಅರಿವು ನಿಮಗಿರಲಿ.

ಇನ್ನು ನವ್ಯ ನವೋದಯ ಬಂಡಾಯ ಇತ್ಯಾದಿ ಇತ್ಯಾದಿ ಪ್ರಬೇಧಗಳೆಲ್ಲ ನಮ್ಮ ಓದಿನ ರುಚಿಯನ್ನು ಮತ್ತು ಕವಿತೆಗಳ ಓದಿನ ಮೂಲಕ ನಾವೇ ಕಟ್ಟಿಕೊಂಡ ಗ್ರಹಿಕೆಗಳನ್ನು ಅಳೆಯುವ ಸಾಧನವಾಗಿವೆಯೇ ವಿನಾ ಅವೇ ಅಂತಿಮವಲ್ಲ. ಏಕೆಂದರೆ ಒಂದು ಕಾಲದಲ್ಲಿ ಗಣ ಪ್ರಸ್ತಾರ ಛಂದೋಬಂಧವಿರದುದನ್ನು ಕಾವ್ಯವೆಂದು ಒಪ್ಪುತ್ತಿರಲಿಲ್ಲ. ನಂತರ ಬಂದ ನವೋದಯ ಸಾಹಿತ್ಯ ಮಾರ್ಗ ಲಯ ಮತ್ತು ಭಾವಗೀತಾತ್ಮಕ ಶೈಲಿಯನ್ನು ಮೈಗೂಡಿಸಿಕೊಂಡಿದ್ದರೆ ನಂತರದ ಪ್ರಗತಿಶೀಲ ಮಾರ್ಗ ಸರ್ವ ಸಮಾನತೆಯನ್ನು ಒಟ್ಟು ಜನಕಲ್ಯಾಣವನ್ನು ಬಯಸುವ ಸಮಾಜವಾದದ ಆಯಕಟ್ಟಿನ ಮೇಲೆ ನಿಂತಿತ್ತು. ನವ್ಯ ಕಾವ್ಯವಂತೂ ಕನ್ನಡ ಕಾವ್ಯ ಕೃಷಿಯ ಜಮೀನಿನ ಮೇಲೆ ಬಿದ್ದ ಹೊಸ ಬಗೆಯ ಬೆಳೆ. ಅಲ್ಲಿಯವರೆಗೂ ಮನುಷ್ಯನ ಆಂತರಿಕ ಸಂಗತಿಗಳನ್ನು ಅಷ್ಟಾಗಿ ಪ್ರಕಟಪಡಿಸದೇ ಪ್ರಾಕೃತಿಕ ಬಣ್ಣನೆಯಲ್ಲೇ ಕಳೆದು ಹೋಗಿದ್ದವರು ತಮ್ಮ ತಮ್ಮ ಜೀವನದ ಖಾಸಗೀ ಸಂಗತಿಗಳಿಗೂ ಕಾವ್ಯದ ಸ್ಪರ್ಶ ಕೊಟ್ಟ ಸಂದರ್ಭವಿದು.

ಇನ್ನು ಬಂಡಾಯ ಮಾರ್ಗ ಕನ್ನಡಕಾವ್ಯ ಪರಂಪರೆಗೆ ಹೊಸ ದಿಕ್ಕು ದೆಸೆಗಳನ್ನು‌ ಕೊಟ್ಟು ಬೇಡಿಕೆಯನ್ನು ಹಕ್ಕಾಗಿ ಪ್ರಕಟಿಸುವ ಧೈರ್ಯವಾಗಿ ಮೊಳಗಿದ್ದು ಈಗ ಇತಿಹಾಸ.

ಇನ್ನು ಸದ್ಯದ ಕಾವ್ಯ ಇನ್ನೂ ತನ್ನ ದಾರಿಯನ್ನು ಸ್ಪಷ್ಟಗೊಳಿಸಿಕೊಳ್ಳಬೇಕಿದೆ. ನವೋದಯದ ರಮ್ಯತೆ ಕಳೆದು ನವ್ಯದ ಪ್ರತಿಮೆ ರೂಪಕಗಳೂ ಸವೆದು ಬಂಡಾಯದ ದನಿ ಉಡುಗಿಹೋಗಿರುವ ಸಂದರ್ಭದಲ್ಲಿ ಕಾವ್ಯವೆಂದರೆ ಆ ಕ್ಷಣ ಅನ್ನಿಸಿದ್ದನ್ನು ತತ್ ಕ್ಷಣವೇ ಬರೆದು ಪ್ರಕಟಿಸುವ ಸಾಮಾಜಿಕ ಜಾಲತಾಣಗಳ ಪುಟಗಳಾಗಿ ಬದಲಾಗುತ್ತಿದೆ. ಇದು ಗಮನಿಸಬೇಕಾದ ಮುಖ್ಯ ಸಂಗತಿ. ಕವಿತೆ ಬರೆಯುವವರೆಂದರೆ ಅದ್ಯಾಪಕರೇ ಎಂಬ ಹುಸಿಯನ್ನು ವರ್ತಮಾನದ ಕವಿಗಳು ಅಳಿಸಿಹಾಕಿದ್ದಾರೆ. ಬದುಕಿನ ಹಲವು ಸ್ತರಗಳಿಂದ ಅನುಭವಗಳಿಂದ ಹುರಿಗೊಂಡ ಅನೇಕ ಮನಸ್ಸುಗಳು ಆಧುನಿಕ ಕಾವ್ಯ ಪ್ರಕಾರವನ್ನು ಕಟ್ಟುತ್ತಿವೆ. ತಮಗನ್ನಿಸಿದ್ದನ್ನು ನಿರ್ಭಿಡೆಯಿಂದ ಸ್ಪಷ್ಟವಾಗಿ ಹೇಳುವ ಸಿದ್ಧ ಸಾಮಗ್ರಿ ಈಕಾಲದ ಕವಿಗಳಿಗಿರುವುದು ವಿಶೇಷ.

ದಿನಕ್ಕೊಂದು ಕವಿಯ ಒಂದೇ ಒಂದು ಕವಿತೆಯನ್ನು ಅಭ್ಯಾಸ ಮಾಡುವ ಕ್ರಮವನ್ನು ರೂಢಿಸಿಕೊಂಡರೆ ನಾವೇ ಅತ್ಯುತ್ತಮ ವಿಮರ್ಶಕರಾಗಲು ಸಾಧ್ಯ. ಆದರೆ ಅದಕ್ಕೂ ಮೊದಲು ನಮಗೆ ನಾವೇ ಹಾಕಿಕೊಂಡಿರುವ ಆದರ್ಶದ ಗೆರೆಗಳನ್ನು ಅಳಿಸಿಕೊಳ್ಳಬೇಕು. ಎಲ್ಲವನ್ನೂ ಎಲ್ಲವನ್ನೂ ಮುಗ್ಧತೆಯಿಂದ ನೋಡುವ ಗುಣವನ್ನು ಸಾಧಿಸಬೇಕು. ಆಗ ಬರಿಯ ಪ್ರಕಟಿತ ಕವಿತೆಯೇನು ಬದುಕಿನ ಹಲವು ಪಲುಕಗಳಲ್ಲಿ ನಿತ್ಯನೂತನ ಸಂಗತಿಗಳಲ್ಲಿರುವ ಕಾವ್ಯವನ್ನು ಅರಿಯಲು ಸಾಧ್ಯ. ಏನಂತೀರಿ?

ಅನುಸಂಧಾನ-೨

ಅನುಸಂಧಾನ-೨


ಸಾಹಿತ್ಯ ಸಮ್ಮೇಳನ ಹಾಗೂ ಹಣಕಾಸಿನ ವಹಿವಾಟು

ನಿನ್ನೆಯಷ್ಟೇ ೮೨ನೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ರಾಯಚೂರಿನಲ್ಲಿ ಸಂಪನ್ನಗೊಂಡಿದೆ. ಪ್ರಾಯಶಃ ವ್ಯಾಪಾರವಾಗದೇ ಉಳಿದ ಪುಸ್ತಕಗಳನ್ನು ಪುಸ್ತಕದಂಗಡಿಯವರು‌ ಮುಂದಿನ ಯಾವ ಸಮ್ಮೇಳನಕ್ಕೆ ಹೊತ್ತೊಯ್ಯಬಹುದೆಂದು ಯೋಚಿಸುತ್ತಿರಬಹುದು. ಹಾಗೇ ಗೋಷ್ಠಿಗಳಲ್ಲಿ ಪಾಲ್ಗೊಂಡ 'ವಿದ್ವಾಂಸರು' ಮುಂದಿನ ಸಮ್ಮೇಳನಗಳಲ್ಲೂ ತಮ್ಮ ಹೆಸರು ಇದ್ದೇ ಇರುವುದನ್ನು ಖಾತರಿಗೊಳಿಸಿಕೊಳ್ಳುವುದರಲ್ಲಿ ನಿರತರಾಗಿರಬಹುದು. ತಾಲೂಕು ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಅಧ್ಯಕ್ಷತೆ ವಹಿಸಿದ್ದವರೇ ಅಖಿಲ ಭಾರತ ಸಮ್ಮೇಳನದ ಕವಿಗೋಷ್ಠಿಯಲ್ಲೂ ಅಧ್ಯಕ್ಷತೆ ವಹಿಸುತ್ತಾರೆ. ಮತ್ತೆ ಯಾರಾದರೂ ಪ್ರೀತಿಯಿಂದ ಕರೆದರೆ ಹೋಬಳಿಗೂ ಬಂದಾರು. ಇದೇ ಶ್ರೀಯುತರು ಉಡುಪಿಯ ಸಮ್ಮೇಳನದಲ್ಲೂ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ‌ ಕಾವ್ಯವಾಚನ ಆರಂಭವಾಗುವ ಮೊದಲೇ ತಮ್ಮ ಆಶೀರ್ವಚನ ನೀಡಿದ್ದರು. ಹೀಗೆ ವಿವಿಧ ಗೋಷ್ಠಿಗಳಲ್ಲಿ ಮತ್ತೆ ಮತ್ತೆ ಪ್ರಸ್ತಾಪವಾಗುವವರ ವಿನಾ ಅನ್ಯ ಬರಹಗಾರರ ಬಗ್ಗೆ ಪರಿಷತ್ತಿಗೆ ಗೊತ್ತೇ ಇಲ್ಲವೇನೋ? ಕರೆದರು ಅನ್ನುವ ಕಾರಣ ಕೊಟ್ಟು ಮತ್ತೆ ಮತ್ತೆ ತಮ್ಮನ್ನೇ ಪ್ರತಿಷ್ಠಾಪಿಸಿಕೊಳ್ಳುವ ಈ ಹಿರಿಯರಿಗೂ ನಾಚಿಕೆ ಮಾನ ಮರ್ಯಾದೆಗಳಿಲ್ಲದಿರುವುದು ಶೃತವಾಗಿದೆ.

ಈಗ ನಮ್ಮ ಸರ್ಕಾರದ ಬಳಿ ಹಣ ಜಾಸ್ತಿಯಾಗಿ ಜಿಲ್ಲಾ ಮತ್ತು ತಾಲ್ಲೂಕು ಸಮ್ಮೇಳನಗಳಿಗೂ ಲಕ್ಷಾಂತರ ರೂಪಾಯಿಗಳ ಅನುದಾನ ಘೋಷಿತವಾಗಿರುವುದರಿಂದ ಸಾಹಿತ್ಯ ಸಮ್ಮೇಳನಗಳೆಂದರೆ, ಪುಸ್ತಕದ ವ್ಯಾಪಾರ ಮತ್ತು ಸಾಹಿತ್ಯದ ಹೆಸರಿನಲ್ಲಿ ನಡೆಯುವ  ಹಣಕಾಸಿನ ವಹಿವಾಟಾಗಿಬಿಟ್ಟಿದೆ. ಇಲ್ಲದಿದ್ದರೆ ಈಗ ಇಷ್ಟೊಂದು ಜಿಲ್ಲಾ, ತಾಲ್ಲೂಕು ಸಮ್ಮೇಳನಗಳು ಎಲ್ಲಿ ನಡೆಯುತ್ತಿದ್ದವು? ಇನ್ನು ಎಲ್ಲ ಹೋಬಳಿಗಳಲ್ಲೂ ಸಮ್ಮೇಳನಗಳನ್ನು ನಡೆಸಲೇಬೇಕೆಂದು ನಿರ್ಧರಿಸಿಬಿಟ್ಟರೆ  ವರ್ಷವಿಡೀ ಅನ್ಯ ಕಾರ್ಯ ನಿಮಿತ್ತ ರಜಾ ಚೀಟಿಗಳಿಗಾಗಿ ಸಾಹಿತ್ಯಾಸಕ್ತರು ಕೆಲಸ ಕಾರ್ಯಗಳನ್ನು ಬದಿಗೊತ್ತಿ ಸಮ್ಮೇಳನಗಳಿಂದ ಸಮ್ಮೇಳನಗಳಿಗೆ ತಿರುಗುತ್ತಾ ತಮ್ಮ ಜೀವನವನ್ನು ಪಾವನಗೊಳಿಸಿಕೊಳ್ಳಬಹುದು.

ಬಹುತೇಕ ಸಮ್ಮೇಳನಗಳು ಆಯಾಊರಿನಲ್ಲಿರುವ ಮಠ ಮಾನ್ಯಗಳ ಸಹಕಾರ ಮತ್ತು ಸಾನ್ನಿಧ್ಯದಲ್ಲಿ ನಡೆಯುವುದರಿಂದ ನಮ್ಮ ಜನಕ್ಕೆ ಸಾಹಿತ್ಯ ಸಮ್ಮೇಳನವೂ ಒಂದೇ, ಧರ್ಮದ ಹೆಸರಿನಲ್ಲಿ ನಡೆಯುವ ಜಾತಿ ಸಮ್ಮೇಳನವೂ ಒಂದೇ! ಉದ್ಘಾಟನೆಗೆ ಆಗಮಿಸುವ ಶಾಸಕರು ಸಚಿವರು ಅವರ ಹಿಂಬಾಲಕರು ಮತ್ತು ಸಮಾರೋಪದ ನಂತರ ನಡೆಸಲೇಬೇಕಿರುವ ನಗೆಹಬ್ಬದ ದರಿದ್ರ ಜೋಕುಗಳಿಗೆ ಜನ ಜಮಾಯಿಸುತ್ತಾರೆ. ಉಳಿದಂತೆ ನೆಪಕ್ಕೆ ನಡೆಯುವ ಗೋಷ್ಠಿಗಳು ಖಾಲಿ ಕುರ್ಚಿಗಳಿಗೆ ಸಾಕ್ಷಿಯಾಗುತ್ತವೆ. ಸ್ಥಳೀಯ ಸಂಪನ್ಮೂಲದ ಕಾರಣಕೊಟ್ಟುಕೊಂಡು ರಾಜಕೀಯದವರ, ಮಠ ಮಾನ್ಯಗಳ ಒಡ್ಡೋಲಗವಾಗಿ ಪರಿವರ್ತಿತವಾಗುವ ಸಮ್ಮೇಳನಗಳ ಫಲಶೃತಿಯಾದರೂ ಏನು? ಯಾರಿಗೂ ಉತ್ತರ ಗೊತ್ತಿಲ್ಲ. ನೂರು ವರ್ಷಗಳ ಇತಿಹಾಸವಿರುವ ಸಾಹಿತ್ಯ ಪರಿಷತ್ತಿನ ವಿವೇಕಕ್ಕೇನಾಗಿದೆ ? ಈ ಪ್ರಶ್ನೆಗೆ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಅರ್ಥವೇ ಇಲ್ಲವೆಂದು ಕಾಣುತ್ತದೆ. ಏಕೆಂದೆರೆ, ಸಾಹಿತ್ಯ ಪರಿಷತ್ತಿಗೂ, ಸಾಹಿತ್ಯ- ಸಂಸ್ಕೃತಿಗಳಿಗೂ ಸಂಬಂಧ ಕಳಚಿಹೋಗಿ ಬಹಳ ವರ್ಷಗಳೇ ಆಗಿವೆ ಎಂಬುದೀಗ ರಹಸ್ಯದ ಮಾತೇನಲ್ಲ. ರಾಜ್ಯ ಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟದ ಸಾಹಿತ್ಯ ಪರಿಷತ್ ಚುನಾವಣೆಗಳು ನಡೆಯುವುದು ಒಂದು ರಾಜಕೀಯ ಚುನಾವಣೆಯಂತೆಯೇ! ಜಾತಿ ಮತ್ತು ವ್ಯಕ್ತಿಕೇಂದ್ರಿತ ವ್ಯವಸ್ಥೆಯಲ್ಲಿಯೇ.

ಈಗ ಜಿಲ್ಲಾ, ತಾಲ್ಲೂಕು ಸಮ್ಮೇಳನಗಳಿಗೂ ಲಕ್ಷಾಂತರ ರೂ. ಅನುದಾನ ಘೋಷಿತವಾಗಿರುವುದರಿಂದ ಸ್ಪರ್ಧೆ ರಾಜಕೀಯವಾಗಿ ಇನ್ನೂ ಬಿರುಸಾಗಿ, ಯಾರು ಯಾರೋ-ಊರ ಪುಢಾರಿಗಳೆಲ್ಲ-ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾಗಿ ಆಯ್ಕೆಯಾಗುತ್ತಿದ್ದಾರೆ, ಇಲ್ಲವೇ ನಾಮನಿರ್ದೇಶಿತರಾಗುತ್ತಿದ್ದಾರೆ. ಹೀಗಾಗಿ ಸಾಹಿತ್ಯ ಸಮ್ಮೇಳನವೆಂದರೆ, ಸ್ವಾಗತ ಸಮಿತಿ, ವೇದಿಕೆ ಸಮಿತಿ, ಚಪ್ಪರ ಸಮಿತಿ, ಮೆರವಣಿಗೆ ಸಮಿತಿ, ವಸತಿ ಸಮಿತಿ, ಊಟೋಪಚಾರಗಳ ಸಮಿತಿ ಇತ್ಯಾದಿ ಸಮಿತಿಗಳಲ್ಲದೆ, ಪ್ರತಿ ಗೋಷ್ಠಿಯ ಪ್ರಾರ್ಥನೆ, ಸ್ವಾಗತ, ನಿರೂಪಣೆ, ವಂದನಾರ್ಪಣೆಗಳ ಹೆಸರಲ್ಲಿ ಆಹ್ವಾನ ಪತ್ರಿಕೆಯಲ್ಲಿ ಮತ್ತು ವೇದಿಕೆಯ ಮೇಲೆ ಕಾಣಿಸಿಕೊಂಡು ‘ಮಿಂಚ’ ಬಯಸುವ ಹುಂಬ ಪ್ರದರ್ಶನವೇ ಎಂಬಂತಾಗಿದೆ. ಒಂದು ದಿನದ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಜನರ ಹೆಸರು ಮುದ್ರಿತವಾಗುವುದು ಸಾಮಾನ್ಯವಾಗಿದೆ.ಇಂತಹವರ ಮಧ್ಯೆ ಅಲ್ಲಲ್ಲಿ ಸೂಕ್ಷ್ಮತೆಗಳುಳ್ಳ ಜನರೂ ಇದ್ದಾರೆಂಬುದೂ ನಿಜ. ಆದರೆ ಅವರು ಅಲ್ಪಸಂಖ್ಯಾತರು; ಅಸಹಾಯಕರು.

ಮೊನ್ನೆ ಮೊನ್ನೆ ನಡೆದ ನಮ್ಮ ತಾಲ್ಲೂಕು  ಸಮ್ಮೇಳನದ ನೇಪಥ್ಯದಲ್ಲಿದ್ದ ನನಗೀಗ ನಾಚಿಕೆಯಾಗುತ್ತಿದೆ. ಸಮ್ಮೇಳನ ಯಶಸ್ವಿಯಾಯಿತೆಂದು ಬೀಗುತ್ತಿದ್ದ ಕಾರ್ಯಕಾರಣಿ ಸಮಿತಿ ಇನ್ನೂ ಉಳಿಸಿಕೊಂಡಿರುವ ಹಲವು ವೆಚ್ಚಗಳ ಬಿಲ್ಲುಗಳನ್ನು ಪಾವತಿಸಬೇಕಿದೆ. ಕಾರ್ಯಕ್ರಮವೇ ಮುಗಿದುಹೋಗಿರುವುದರಿಂದ ಇನ್ನು ಯಾರೂ ಹಣ ಕೊಡಲಾರರು.  ನಮ್ಮ ಸಮ್ಮೇಳನಾಧ್ಯಕ್ಷರಂತೂ 'ನನಗೆ ಸಂತೋಷವಾಗಿದೆ’ ಎಂದರು.‘ಆದರೆ ನನಗೆ ಸಂತೋಷವಾಗಿಲ್ಲ’ ಎಂದ ನಾನು, ‘ಸಾಹಿತ್ಯ ಸಮ್ಮೇಳನ ಸಾಹಿತ್ಯದ ಘನತೆ-ಗೌರವಗಳೊಂದಿಗೆ ನಡೆಯಬೇಕು. ಇಂತಹ ಸಮಾರಂಭಗಳು ಊರಿನ  ಜನ ತಮ್ಮ ಜಾತಿ ನಡವಳಿಕೆಗಳನ್ನು ಮೀರಿ ನಡೆಯುವಂತಹ ಸಾಂಸ್ಕೃತಿಕ ವಾತಾವರಣ ನಿರ್ಮಿಸಬೇಕು. ಆದರೆ ಇಲ್ಲಿ ಅಂತಹ ನಡವಳಿಕೆಗಳನ್ನು ಪುಷ್ಟೀಕರಿಸುವ ಹಲವು ಸಂಗತಿಗಳಿಗೆ ನಾವು ಸಾಕ್ಷಿಯಾಗಬೇಕಾಯಿತಲ್ಲ" ಎಂದು ನನ್ನ ಮತ್ತು ನನ್ನ ಗೆಳೆಯರ ಬೇಸರವನ್ನು ವ್ಯಕ್ತಪಡಿಸಿದೆ.

ಜೊತೆಗೆ ಈ ಮಾತುಗಳನ್ನೂ ಹೇಳಿದೆ: ‘ಸ್ವಾಮೀಜಿಗಳನ್ನು ರಾಜಕಾರಣಿಗಳನ್ನು ಸಾಹಿತ್ಯ ಸಮ್ಮೇಳನಗಳಿಗೆ ಕರೆಯಬಾರದೆಂದಲ್ಲ. ಏಕೆಂದರೆ ನಮ್ಮ ಸಾಹಿತಿಗಳಲ್ಲನೇಕರು ಸ್ವಾಮೀಜಿಗಳಂತೆಯೇ ಸಾಹಿತ್ಯ ಮಠಗಳನ್ನು ಕಟ್ಟಿಕೊಂಡಿದ್ದಾರೆ! ಇರಲಿ ಬಿಡಿ , ಆದರೆ ಮಠಾಧೀಶರಿಗೆ ಮತ್ತು ರಾಜಕಾರಣಿಗಳಿಗೆ ಈ ಸಂದರ್ಭಕ್ಕೆ ಎಷ್ಟು ಉಚಿತವೋ ಅಷ್ಟು ಮಾತ್ರ ಗೌರವ ಸಲ್ಲಿಸಬೇಕು. ಅವರಿಗೆ ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ಮೀರಿದ ಗೌರವಗಳನ್ನು ಪ್ರದರ್ಶಿಸಬಾರದು. ಅದು ಸಾಧ್ಯವಾಗದಿದ್ದ ಮೇಲೆ ಸಮ್ಮೇಳನಕ್ಕೊಬ್ಬ ಅಧ್ಯಕ್ಷರ ಅಗತ್ಯವಾದರೂ ಏಕೆ ಬೇಕು?'


ಅನುಸಂಧಾನ-೧

"ಅನುಸಂಧಾನ"-೧
'ಸಂಪರ್ಕ ಯುಗದ ಅನುಸಂಧಾನ'

ನಾವೀಗ ಬದುಕುತ್ತಿರುವ ಕಾಲಮಾನಕ್ಕೆ "ಸಂಪರ್ಕ ಯುಗ" ವೆಂದು ಕರೆಯುತ್ತಿದ್ದೇವೆ. ನಾವು ವ್ಯಾಪಕವಾಗಿ ಬಳಸುತ್ತಿರುವ "ಸಂಪರ್ಕ" ಎಂಬ ಪದಕ್ಕೆ ಕೆಲವೇ ದಶಕಗಳ ಹಿಂದೆ 'ಕಮ್ಯುನಿಕೇಷನ್' ಎಂದು ಇದ್ದ ಅರ್ಥಕ್ಕೂ ಇದೀಗ ನಾವದನ್ನು ಬಳಸುತ್ತಿರುವ ಅರ್ಥಕ್ಕೂ ಗಾವುದ ಗಾವುದ ದೂರವಿದೆ.  ಹಳೆಯ ಪದಕೋಶಗಳಲ್ಲಿ ಸಂಪರ್ಕವೆಂಬ ಶಬ್ದಕ್ಕೆ ಕೂಡುವುದು, ಸ್ಪರ್ಶ, ಮಿಲನ ಮುಂತಾದ ಭೌತಿಕ ಸಂಬಂಧ ಸೂಚಕವಾಗಿದ್ದದ್ದು ಈಗ ದೂರದಿಂದ ನಡೆಯುವ ಸಂವಹನಕ್ಕೂ ಅನ್ವಯಿಸುತ್ತಿದೆ. ಅಷ್ಟೇ ಅಲ್ಲ, ಹಿಂದಿನ ಸಂಪರ್ಕವು ವ್ಯಕ್ತಿ ಮತ್ತು ಸಮುದಾಯಗಳ ಪರಸ್ಪರ ಸಂಬಂಧವನ್ನು ಹೆಚ್ಚಿಸುವ ಕ್ರಿಯೆಯಲ್ಲಿ ತೊಡಗಿದ್ದರೆ ಹೊಸ ಕಾಲದ ಸಂಪರ್ಕ ಸಾಧನಗಳು ಅಸಮಾನತೆಯನ್ನು ಪೋಷಿಸುವ ಮತ್ತು ಅಧಿಕಾರಸ್ಥರ ಹಾಗೂ ಧನವಂತರ ಪ್ರತಿಷ್ಠೆಗಳಾಗಿ ಬದಲಾಗುತ್ತಿದೆ. ಹಳೆಕಾಲದ ಪರಿಕಲ್ಪನೆಯೊಂದು ಹೊಸಕಾಲದಲ್ಲಿ ಪಡೆಯುವ ಸ್ವರೂಪಗಳಿಂದಾಗಿ ಶಬ್ದಕೋಶಗಳೇ ವಿಪರೀತಾರ್ಥಗಳಾಗಿ ಬದಲಾಗುವುದು ಸೋಜಿಗವೇ ಸರಿ.

ನಮ್ಮ ಕಾಲದ ಅಂದರೆ ಆಧುನಿಕ ಕಾಲದ ಕಟುಟೀಕಾಕಾರನಾದ ಇವಾನ್ ಇಲಿಚ್ ಹೀಗೆ ಬದಲಾಗುತ್ತಿರುವ ಹಲವು ಅರ್ಥಪಲ್ಲಟಗಳನ್ನು ಕುರಿತು ತೀವ್ರ ವಿಷಾದ ಪಡುತ್ತಾನೆ. ಇವಾನ್ ಇಲಿಚ್ ಹೇಳುವ ಹಾಗೆ ಆಧುನಿಕವೆಂದು ನಾವೆಲ್ಲ ಕರೆಯುವ ಈ ಕಾಲದಲ್ಲಿ "ಶಿಕ್ಷಣ" ದಿಂದಾಗಿ ನಮ್ಮ "ತಿಳುವಳಿಕೆ" ಕಡಿಮೆಯಾಗುತ್ತಿದೆ. "ಸಂಪರ್ಕ ಸಾಧನಗಳು" ಪರಸ್ಪರರ ಐಹಿಕ ಸಂಪರ್ಕವನ್ನೇ ಕಡಿಮೆಮಾಡಿದೆ. "ವೈದ್ಯಕೀಯ" ಸೌಲಭ್ಯಗಳಿಂದಾಗಿಯೇ "ಅನಾರೋಗ್ಯ" ಹೆಚ್ಚುತ್ತಿದೆ. "ಭದ್ರತಾ ಯೋಜನೆ" ಗಳಿಂದಾಗಿಯೇ 'ಅಪಾಯ'ಗಳು ಹೆಚ್ಚುತ್ತಿವೆ. ಮದುವೆ ಸಮಾರಂಭ, ಸಂಗೀತ ಸಭೆ, ಸಂಸ್ಕೃತಿ ಚಿಂತನೆ, ಕಡೆಗೆ ಶವಸಂಸ್ಕಾರ ಸಂಧರ್ಭಗಳಲ್ಲೂ ಎದುರಿಗಿರುವವರನ್ನು ಬಿಟ್ಟು ಮತ್ತೆಲ್ಲೋ ದೂರದಲ್ಲಿರುವವರೊಂದಿಗೆ ಮೊಬೈಲಿನಲ್ಲಿ ಮಾತನಾಡುತ್ತಲೇ ಇರುವ ನಾವೆಲ್ಲರೂ ಅಸಂಗತ ನಾಟಕವೊಂದರ ಪಾತ್ರಧಾರಿಗಳಾಗಿ ಬದಲಾಗಿಬಿಟ್ಟಿದ್ದೇವೆ.

ಸಂಪರ್ಕವೆಂಬ ಪರಿಕಲ್ಪನೆಯ ಇಂಥ ವೈಪರೀತ್ಯಕ್ಕೆ ವಿರುದ್ಧವಾಗಿ "ಅನುಸಂಧಾನ" ವೆಂಬ ಎದುರುಬದುರು ಕೂತು ಪರಸ್ಪರ ಚರ್ಚಿಸಿ ಹೊಸ ವಿನ್ಯಾಸ ಪಡೆಯುವ ಚಿಂತನೆಯ ರೀತಿಗೆ ನಿಮ್ಮನ್ನು ಕರೆದೊಯ್ಯುವ ಕ್ರಮವಾಗಿ ಈ ಅಂಕಣವನ್ನು ಬರೆಯಲು ಉದ್ದೇಶಿಸಿದ್ದೇನೆ. ಅನುಸಂಧಾನವೆಂದರೆ ಈಗಾಗಲೇ ಸ್ಥಾಪಿತವಾಗಿರುವ ಕ್ರಮವೊಂದನ್ನು ಆಧುನಿಕ ಅನುಭವಗಳ ಮೂಲಕ ಒರೆಗೆ ಹಚ್ಚಿ ಅದರ ಟೊಳ್ಳು ಮತ್ತು ಗಟ್ಟಿತನಗಳನ್ನು ತೆರೆದಿಡುವ ಪರಿಕ್ರಮ. ಕಾವ್ಯದ ಅರ್ಥವಂತಿಕೆಯನ್ನು ಹೆಚ್ಚಿಸುವ ಸಲುವಾಗಿ ಮತ್ತು ಕಾವ್ಯದ ಒಳ ತಿರುಳನ್ನು ಬಗೆಯುವ ಕ್ರಮವಾಗಿ ಬಳಸಲಾಗುತ್ತಿರುವ ಈ "ಅನುಸಂಧಾನ" ಎಂಬ ಶಬ್ದ ಕೇವಲ ಕಾವ್ಯಾಭ್ಯಾಸಿಗಳಿಗಷ್ಟೇ ಸೀಮಿತವಾಗದೇ ಕಾವ್ಯಕ್ಕಿಂತಲೂ ಮಿಗಿಲಾದ ಬದುಕಿನ ಅರ್ಥವಂತಿಕೆಯನ್ನು ಅಳೆಯುವ ಉಪಕರಣವಾಗಲಿ ಎಂಬ ಉದ್ದೇಶದಿಂದ ಈ ಅಂಕಣಕ್ಕೆ "ಅನುಸಂಧಾನ" ವೆಂದು ಕರೆದಿದ್ದೇನೆ.

ಜೊತೆಗೇ ಅಂಕಣಗಳೆಂದರೆ ತುಂಬ ಕ್ಲಿಷ್ಟಕರವಾಗಿ ಮತ್ತು ಗ್ರಾಂಥಿಕವಾಗಿ ಮಾತ್ರ ಬರೆಯಬೇಕೆಂಬ ಪೂರ್ವ ಸೂರಿಗಳ ಫರ್ಮಾನನ್ನು ತಿರಸ್ಕರಿಸಿ ಆಧುನಿಕ ಮನಸ್ಥಿತಿಗಳನ್ನು ಅನಾವರಣಗೊಳಿಸುವ ಸಲುವಾಗಿ ನಿ(ನ)ಮ್ಮೊಳಗಿನೊಂದಿಗೆ ನಿರಂತರ ಮಾತನಾಡುತ್ತಲೇ ಇರುವ ಅವಕಾಶಕ್ಕಾಗಿ ಈ ಅಂಕಣವನ್ನು ಕೇವಲ ಒಂದು ವಿಷಯಕ್ಕೆ ಸೀಮಿತಗೊಳಿಸದೇ ಆಧುನಿಕ ಬದುಕಿನ ಹಲವು ಸ್ಥಿತ್ಯಂತರಗಳನ್ನು ಪುನರ್ವಿಮರ್ಶಿಸುವ ವೇದಿಕೆಯನ್ನಾಗಿ ಕಟ್ಟುವುದು ಉದ್ದೇಶವಾಗಿದೆ.

ಸಿನಿಮಾ , ರಂಗಭೂಮಿ, ಸಾಹಿತ್ಯ, ಸಂಸ್ಕೃತಿ, ರಾಜಕಾರಣ, ಕೃಷಿ, ಉದ್ಯೋಗ ಇತ್ಯಾದಿ ಇತ್ಯಾದಿ ಬದುಕಿನ ವಿವಿಧ ಮಗ್ಗುಲುಗಳನ್ನು ವಿವಿಧ ಆಯಾಮಗಳಲ್ಲಿ ನೋಡಬೇಕೆನ್ನುವ ನಿಲುವಿನ ದ್ಯೋತಕ ಈ ಅನುಸಂಧಾನ. ವಿಷಯಗಳನ್ನು  ಪರ ವಿರೋಧದ ನಿಲುವಿನಲ್ಲಿಡದೇ ಕೇವಲ ವಿಷಯವನ್ನಾಗಿ ಚರ್ಚಿಸುತ್ತ‌, ಅವಲೋಕಿಸುತ್ತ ಹೋದರೆ ಅಡಿಗರು ಹೇಳಿದ ಹಾಗೆ ನೆಲವನ್ನಗೆದು ಅದಿರನ್ನು ಮೇಲೆತ್ತಬಹುದು. ಇಷ್ಟ ದೇವತೆಯ ವಿಗ್ರಹವನ್ನೂ ನಿರ್ಮಿಸಿಕೊಳ್ಳಬಹುದು.

ಈದಿನ ‘ಅನುಸಂಧಾನ’ದ ತೆರೆ ಎದ್ದಿದೆ. ಪ್ರತಿ ಸೋಮವಾರ ಪ್ರಸ್ತುತ ಸಂದರ್ಭದ ವಸ್ತು ವಿಷಯಗಳನ್ನೆತ್ತಿಕೊಂಡು ಚರ್ಚೆಗೆ ಕೂರೋಣ. ನವನೀತವನ್ನು ಪಡೆಯುವ ಸಂಕಲ್ಪ ಮಾಡೋಣ.

ಭಾನುವಾರ, ಮಾರ್ಚ್ 2, 2014

ಶೋಧನೆಗೆ ಸಿಕ್ಕು ಹೈರಾಣಾದ ರಾಮ ಮತ್ತು ಗಾಂಧಿ.




ಹೆಗ್ಗೋಡಿನ ನೀನಾಸಂ ತಿರುಗಾಟದ ಹೆಸರಿನಲ್ಲಿ ಪ್ರತಿವರ್ಷ ದೇಶಾದ್ಯಂತ ನಡೆಸುವ ನಾಟಕ ಪ್ರದರ್ಶನಗಳಿಗೆ ತನ್ನದೇ ಆದ ಪ್ರೇಕ್ಷಕ ವರ್ಗವನ್ನು ಸಂಪಾದಿಸಿಕೊಂಡಿರುವುದು ರಂಗಾಸಕ್ತರೆಲ್ಲರಿಗೂ ತಿಳಿದ ವಿಷಯ. ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಪ್ರಥಮ ಪ್ರದರ್ಶನ ನಡೆಸಿ ಅಲ್ಲಿನ ಪ್ರತಿಕ್ರಿಯಗಳನ್ನು ಗಮನಿಸಿ ಅಲ್ಪಸ್ವಲ್ಪ ಬದಲಾವಣೆಯೊಡನೆ ಸಂಚಾರಕ್ಕೆ ಹೊರಡುವ ತಂಡ ರಂಗಾಸಕ್ತರಿರುವ ಆದರೆ ರಂಗಪ್ರದರ್ಶನಗಳಿಗೆ ಅಪರೂಪಕ್ಕೆ ಅವಕಾಶವಿರುವ ಊರುಗಳಲ್ಲಿ ತನ್ನ ಪ್ರಯೋಗಗಳನ್ನು ಪ್ರದರ್ಶಿಸುವುದರಿಂದಲೋ ಏನೋ ನೀನಾಸಂ ನಾಟಕಗಳ ಪ್ರದರ್ಶನಕ್ಕೆ ಇಂಥ ಊರುಗಳಲ್ಲಿ ಜನರ ಪ್ರತಿಕ್ರಿಯೆ ಮೇಲು ಸ್ತರದ್ದಾಗಿರುತ್ತದೆ. ತಿಪಟೂರಿನ ಭೂಮಿ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಹಾಸ್ಯನಟ ನರಸಿಂಹ ರಾಜು ನೆನಪಲ್ಲಿ ನಡೆಸಿದ ನಾಟಕೋತ್ಸವದಲ್ಲಿ ನೀನಾಸಂ ತನ್ನ ನಾಟಕಗಳನ್ನು ಪ್ರದರ್ಶಿಸಿತು.
೨೦೧೩ರ ತಿರುಗಾಟದಲ್ಲಿ ನೀನಾಸಂ ಎಂ.ಎಲ್. ಶ್ರೀಕಂಠೇಗೌಡರ ಸೀತಾಸ್ವಯಂವರಂ ಮತ್ತು ಮರಾಠಿ ಮೂಲದ ಅಜಿತ್ ದಳವಿಯವರ ಡಿ.ಎಸ್.ಚೌಗಲೆ ಅನುವಾದಿತ ಗಾಂಧಿ ವಿರುದ್ಧ ಗಾಂಧಿ ನಾಟಕಗಳನ್ನು  ಪ್ರದರ್ಶಿಸುತ್ತಿದೆ. ನಾಟಕಗಳ ಅಯ್ಕೆಗೂ ಮಾರ್ಗಸೂಚಿಗಳನ್ನು ಇಟ್ಟುಕೊಂಡಿರುವ ನೀನಾಸಂ,  ಜಾಗತಿಕ ವಲಯದಲ್ಲಿ ಶ್ರೇಷ್ಠವಾದುದೆಂದು ಈಗಾಗಲೇ ಪ್ರಸಿದ್ಧಗೊಂಡಿರುವ  ಕೃತಿಯೊಂದರ ಜೊತೆಗೆ ಮೂಲ ಕನ್ನಡ ಅಥವ ಸಂಸ್ಕೃತದ ಕ್ಲಾಸಿಕ್‌ಗಳನ್ನು ಪ್ರದರ್ಶಿಸುತ್ತ ಬಂದಿದೆ. ಗಾಂಧಿ ವಿರುದ್ಧ ಗಾಂಧಿ ಸಂಕೀರ್ಣ ವಸ್ತುವನ್ನು ಇಟ್ಟುಕೊಂಡ ಬಹು ಚರ್ಚಿತ ಕಥಾನಕವಾದರೆ, ಸೀತಾ ಸ್ವಯಂವರಂ ಆಧುನಿಕ ಕನ್ನಡ ಸಾಹಿತ್ಯದ ಆರಂಭದ ಕಾಲದಲ್ಲಿ ಪ್ರಹಸನದ ಜೊತೆ ಜೊತೆಗೇ ನಾಟಕೀಯ ಅಂಶಗಳುಳ್ಳ ಮೂಲ ರಾಮಾಯಣದ ವಿಶಿಷ್ಟ ರೂಪಾಂತರ. ಎರಡೂ ನಾಟಕಗಳ ನಾಯಕರೂ ಆದರ್ಶಕ್ಕೆ ಕಟ್ಟುಬಿದ್ದು ಶೋಧನೆಗೊಳಗಾದವರೇ ಆಗಿರುವುದು ವಿಶೇಷ. ಏಕೆಂದರೆ ಶ್ರೀರಾಮನನ್ನು ಮರ್ಯಾದಾ ಪುರುಷೋತ್ತಮನೆಂದು ನಂಬಿರುವ ನಮಗೆ ಗಾಂಧಿ ಆದರ್ಶದ ಪರಿಪಾಕ. ಆ ಕಾರಣದಿಂದಾಗಿ ರಾಮ ಮತ್ತು ಗಾಂಧಿ ಯಾವತ್ತಿಗೂ ಪ್ರಸ್ತುತರೇ ಮತ್ತು ಜನಸಮುದಾಯವೊಂದು ತನ್ನನ್ನು ತಾನು ವಿಮರ್ಶಿಸಿಕೊಳ್ಳಲು, ತಿದ್ದಿಕೊಳ್ಳಲು ಈ ಎರಡೂ ಪಾತ್ರಗಳ ಪರಿಧಿ ಮಹತ್ವದ್ದು.
ಮೊದಲ ನಾಟಕ ಸೀತಾ ಸ್ವಯಂವರಂನಲ್ಲಿ ರಾವಣನಿಂದ ರಾಮನ ಸತ್ವ ಪರೀಕ್ಷೆಯಾದರೆ ಎರಡನೆಯ  ನಾಟಕ ಗಾಂಧಿ ವಿರುದ್ಧ ಗಾಂಧಿಯಲ್ಲಿ ಮಹಾತ್ಮನ ಪರೀಕ್ಷೆ ಅವರ ಮಗ ಹರಿಲಾಲನ ಮೂಲಕವೇ ನಡೆಯುತ್ತದೆ. ಪರೀಕ್ಷೆಯಲ್ಲಿ ಸತ್ ಅಂದರೆ ಆದರ್ಶ ಗೆದ್ದಿತೇನೋ ಸರಿ. ಆದರೆ ಪ್ರತಿನಾಯಕರೇಕೆ ತಮ್ಮ ಸೋಲು ತಿಳಿದಿದ್ದೂ ಈ ಪರೀಕ್ಷೆಗೆ ಮುಂದಾಗುತ್ತಾರೆ ಎನ್ನುವುದು ಸೋಜಿಗವಲ್ಲದೇ ಮತ್ತೇನು? ಅಗ್ನಿಗೆ ಪತಂಗ ಹಾಯುವಂತೆ ಪ್ರತಿನಾಯಕರ ಪಾತ್ರಗಳು ನಾಯಕನ ಪಾತ್ರದೊಂದಿಗೆ ಕರಗಿಹೋಗುತ್ತವೆ, ಆ ಮೂಲಕ ಗೊಂದಲದಲ್ಲಿರುವ ವರ್ತಮಾನಕ್ಕೆ ಸ್ಪಷ್ಟ ದಿಕ್ಕನ್ನೂ, ನೇರ ದಾರಿಯನ್ನೂ ಕಲಿಸಿಕೊಡುತ್ತವೆ. ಶ್ರೀಕಂಠೇಶಗೌಡರ ಸೀತಾಸ್ವಯಂವರಂ ಮೂಲ ರಾಮಾಯಣದ ಬಾಲಕಾಂಡದ ವಿಸ್ತರಿತ ಕಲ್ಪಿತ ರೂಪ. ವಿಶ್ವಾಮಿತ್ರರು ರಾಮ ಲಕ್ಷ್ಮಣರನ್ನು ಕೌಶಿಕಾಶ್ರಮಕ್ಕೆ ಕರೆತಂದಿರುವಾಗಲೇ ಸೀತೆಯ ರೂಪಲಾವಣ್ಯಗಳನ್ನು ಅವರಿವರಿಂದ ಕೇಳಿತಿಳಿದುಕೊಂಡ ರಾವಣ ಅವಳನ್ನು ವರಿಸುವ ಸಲುವಾಗಿ ರಾಮನ ರೂಪದಲ್ಲಿ ಮಿಥಿಲೆಗೆ ಬರುತ್ತಾನೆ. ಅವನ ಸಹಚರರಾದ ಮಾರೀಚ ಕರಾಳರೂ ವೇಷ ಬದಲಿಸಿಕೊಂಡು ರಾವಣನನ್ನನುಸರಿಸುತ್ತಾರೆ. ಹೀಗೆ ಪಾತ್ರಗಳೇ ಅದಲುಬದಲಾಗಿ ನಿಜದ ರಾಮನನ್ನೇ ಗೊಂದಲದಲ್ಲಿ ಕೆಡವಿ ಮಾಯಾ ಸೀತೆಯ ಮೋಹಕ್ಕೆ ರಾಮನೇ ಮಾರುಹೋಗಿ ಅಗ್ನಿಗೆ ಹಾಯಲು ಹವಣಿಸುತ್ತಾನೆ. ನಿಜದ ರಾಮನಾರೆಂದು ಪರೀಕ್ಷಿಸಲು ಜನಕಮಹಾರಾಜ ಶಿವಧನಸ್ಸನ್ನೆತ್ತಿ ಹೆಗಲೇರಿಸುವ ಪಂಥ ಒಡ್ಡುತ್ತಾನೆ. ರಾವಣನನ್ನು ಅವಮಾನಿಸಿದ ಕ್ಷತ್ರಿಯ ರಾಮನನ್ನು ಭಾರ್ಗವ ರಾಮ ಬಂದು ಶ್ರೀರಾಮನ ಪ್ರತಾಪಕ್ಕೆ ಮಾರುಹೋಗುವುದರೊಂದಿಗೆ ನಾಟಕ ಮುಗಿಯುತ್ತದೆ.
ಇಡೀ ನಾಟಕವನ್ನು ಯಕ್ಷಗಾನದ ನಾಟ್ಯರೂಪದಲ್ಲೆ ಪ್ರಸ್ತುತಪಡಿಸುವ ನಿರ್ದೇಶಕ ಮಂಜುನಾಥ ಬಡಿಗೇರರು ಸಾಂಪ್ರದಾಯಿಕ ಕಲಾಶೈಲಿಯನ್ನು ಆಧುನಿಕ ಮಾಧ್ಯಮಕ್ಕೆ ಬಗ್ಗಿಸಲು ಸಾಕಷ್ಟು ಶ್ರಮ ವಹಿಸಿದ್ದಾರೆ. ಆದರೆ ಚಂಡೆಯ ಸದ್ದಿಗೆ ತಕ್ಕನಾದ ಏರುದನಿಯ ಸಂಭಾಷಣೆ ಆಧುನಿಕ ರಂಗಪ್ರಯೋಗದಲ್ಲಿ ಅಸಾಧ್ಯವಾದ ಕಾರಣ ಸೂಕ್ಷ್ಮಗಳು ಕಳೆದುಹೋಗಿ ಸಾಂಧ್ರ ರಸಾನುಭವ ಒಡಮೂಡಿಲ್ಲ. ಆದರೂ ಪುಷ್ಪಕ ವಿಮಾನದ ಕಲ್ಪನೆ, ಮುಖವಾಡಗಳ ಉಪಯೋಗ, ನೆರಳು ಬೆಳಕಿನ ವೈವಿಧ್ಯತೆ ಪ್ರಯೋಗವನ್ನು ಗೆಲ್ಲಿಸುತ್ತದೆ. ರಾವಣ ಪಾತ್ರಧಾರಿಯ ಅಂಗ ಸೌಷ್ಠವದೆದುರು ಶ್ರೀರಾಮನ ಪಾತ್ರಧಾರಿ ಸಪೂರ. ಮಾರೀಚ ಕರಾಳ ಪರಶುರಾಮರೆದುರು ಉಳಿದ ಪಾತ್ರಗಳು ಗೌಣ. ಹಿನ್ನೆಲೆ ಸಂಗೀತವೂ ಅದ್ಭುತವೇ.
ಇನ್ನು ಗಾಂಧಿ ವಿರುದ್ಧ ಗಾಂಧಿ ಮಹಾತ್ಮ ಗಾಂಧಿಯವರ ವೈಯುಕ್ತಿಕ ಬದುಕಿನ ಒಂದು ಸೀಳುನೋಟ. ಆದರ್ಶದ ಹೆಸರಿನಲ್ಲಿ ಗಾಂಧಿ ತಮ್ಮ ಕುಟುಂಬದ ಸದಸ್ಯರನ್ನು ಹೆಜ್ಜೆಹೆಜ್ಜೆಗೂ ಅವಮಾನಿಸಿದರು, ತಾತ್ವಿಕ ಅನುಸಂಧಾನವೇ ಮುಖ್ಯವಾಗಿದ್ದ ಗಾಂಧಿ ಸ್ವಂತ ಮಕ್ಕಳ ಶಿಕ್ಷಣಕ್ಕೂ ಎರವಾಗಿದ್ದರು ಎಂಬೆಲ್ಲ ಖಾಸಗಿ ವಿವರಗಳ ಸೂಕ್ಷ್ಮಸ್ತರದ ಅತಿಭಾವುಕತೆಯನ್ನೇ (ಮೆಲೋಡ್ರಾಮ) ಮಾದರಿಯಾಗಿಟ್ಟುಕೊಂಡಿರುವ ಪ್ರಯೋಗ. ಕಡೆಯ ದೃಶ್ಯದಲ್ಲಿ ರಾಜಘಾಟಿನ ಪ್ರತಿಭಟನೆಗಳ ಬಗ್ಗೆ ಗಾಂಧಿ ಪಾತ್ರಧಾರಿ ಹೇಳುವ ವ್ಯಂಗ್ಯದಮಾತೇ ಇಡೀ ನಾಟಕವನ್ನು ಬಂಧಿಸಿರುವ ವಸ್ತು.
ನಾಟಕದುದ್ದಕ್ಕೂ ಹರಿಲಾಲನ ಶೋಧನೆಗೊಳಪಡುವಂತೆ ಚಿತ್ರಿತವಾಗಿರುವ ಗಾಂಧಿಯ ಪಾತ್ರಚಿತ್ರಣ ಈಗಾಗಲೇ ನಾವೆಲ್ಲ ಮೂರ್ತೀಕರಿಸಿಕೊಂಡಿರುವ ಗಾಂಧಿಯ ಪಾತ್ರವನ್ನು ಅಲ್ಲಗಳೆಯುವಷ್ಟು ಶಕ್ತಿಶಾಲಿಯಾಗಿ ಮೂಡಿಬಂದಿದೆ. ಏಕೆಂದರೆ ಹರಿಲಾಲನ ಪಾತ್ರಸೃಷ್ಟಿಯೇ ಅದ್ಭುತ ಕಲ್ಪನೆ ಮತ್ತು ನಾಟಕೀಯ ಅಂಶಗಳಿಂದ ಸುಪುಷ್ಟವಾಗಿದೆ. ಚಳವಳಿ ಮತ್ತು ನೈತಿಕ ಶಿಕ್ಷಣವೇ ಮುಖ್ಯವೆಂದು ಭಾವಿಸಿದ್ದ ಗಾಂಧಿ ಹರಿಲಾಲ ಬ್ಯಾರಿಸ್ಟರ್ ಆಗುವುದನ್ನು ಪ್ರೋತ್ಸಾಹಿಸಲಿಲ್ಲವೆಂಬ ಏಕೈಕ ಕಾರಣಕ್ಕೆ ಹರಿಲಾಲ ತಂದೆ ತನ್ನ ವಿರೋಧಿ ಎಂದೇ ಭಾವಿಸುತ್ತಾನೆ. ಮುಂದೆ ತನ್ನ ನಡಾವಳಿಗಳಿಂದ ಗಾಂಧಿಯ ವ್ಯಕ್ತಿತ್ವವನ್ನು ಭಗ್ನಗೊಳಿಸುತ್ತ ಹೋಗುವ ಹರಿಲಾಲ ಅದರಲ್ಲಿ ಸಾಕಷ್ಟು ಸಫಲನೂ ಆಗುತ್ತಾನೆ. ಕಟ್ಟಿಕೊಂಡಿರುವ ಆದರ್ಶವನ್ನು ಭಂಗಿಸುವುದೆಂದರೆ ವ್ಯಕ್ತಿತ್ವದ ದೃಷ್ಟಿಕೋನವನ್ನೇ ಬದಲಿಸಿದಂತೆ. ಈ ನಿಟ್ಟಿನಲ್ಲಿ ನಾಟಕಕಾರರ ಯತ್ನ ಯಶಸ್ವಿಯಾಗಿದೆ. ನಾಟಕದುದ್ದಕ್ಕೂ ಗಾಂಧೀತತ್ವ ವಿಚಾರಗಳನ್ನು ವಿರೋಧಿಸುತ್ತಲೇ ಇರುವ ಹರಿಲಾಲ ತನ್ನನ್ನು ಪರಿಚಯಿಸಿಕೊಳ್ಳುವುದು ಮಾತ್ರ ತಾನು ಛೋಟ ಗಾಂಧಿಯೆಂದೇ! ಸ್ವಾರಸ್ಯವೆಂದರೆ ಅವನು ಮುಸ್ಲಿಮನಾಗಿ ಮತಾಂತರ ಗೊಂಡಾಗ ಕೂಡ ಅವನು ಅಬ್ದುಲ್ಲಗಾಂಧಿಯಾಗಿಯೇ ಇರುತ್ತಾನೆ. ಅಂದರೆ ಗಾಂಧಿ ಎನ್ನುವುದರಿಂದ ಅವನು ಬಿಡಿಸಿಕೊಳ್ಳಲಾರ, ಥೇಟ್ ಈ ಹೊತ್ತಿನ ಭಾರತದ ರಾಜಕಾರಣದಂತೆ, ಗಾಂಧಿಯ ತತ್ವವನ್ನು ಅರ್ಥಮಾಡಿಕೊಳ್ಳದೆಯೂ ಗಾಂಧಿ ಪಟಕ್ಕೆ ಮಾತ್ರ ಹೂಹಾರ ತಗುಲಿಸುವ ನಮ್ಮ ರಾಜಕೀಯ ಪಕ್ಷಗಳಂತೆ!
ಮೂಲ ನಾಟಕದಲ್ಲಿನ ತಾಕತ್ತೇ ಬೃಹತ್ತಾಗಿರುವಾಗ ನಿರ್ದೇಶಕ ಎಂ. ಗಣೇಶ್ ಪಾತ್ರಗಳಲ್ಲಿನ ಅತಿಭಾವುಕತೆಯನ್ನೇ ನಾಟಕದ ಜೀವಾಳವಾಗಿಸಿದ್ದಾರೆ. ಸಂಘರ್ಷಗಳ ನಿರ್ವಹಣೆಯನ್ನು ನೋವಿನ ಮೂಲಕವೂ ವ್ಯಕ್ತಪಡಿಸಬಹುದೆಂಬ ಸತ್ಯ ಅವರಿಗೆ ತಿಳಿದಿಲ್ಲದಿರುವುದರಿಂದಲೇ ಕಂಠಪೂರ್ತಿ ಕುಡಿದು ಬಂದಾಗಲೂ ಹರಿಲಾಲ ತಾಯಿಯ ತೊಡೆಯ ಮೇಲೆ ತಲೆಯಿಟ್ಟು ಮಲಗುವುದು ಸಾಧ್ಯವಾಗಿದೆ! ನಿರ್ದೇಶಕರ ದೃಷ್ಟಿ ಹರಿಲಾಲನ ಕಡೆಗೇ ಇರುವುದರಿಂದ ಗಾಂಧಿಯನ್ನು ಅವನು ರಿಂಗ್ ಮಾಸ್ಟರ್ ಎಂದು ಸಂಬೋಧಿಸುತ್ತಾನೆ!
ಇದುವರೆಗೂ ಗಾಂಧಿ ಎಂಬ ಶಬ್ದ ನಮ್ಮೊಳಗೆ ತುಂಬಿದ್ದ ಆದರ್ಶವನ್ನು ಭಗ್ನಗೊಳಿಸುವುದರಲ್ಲಿ ನಾಟಕ ಯಶಸ್ವಿಯಾಗಿದೆ. ಕಡೆಯ ದೃಶ್ಯದಲ್ಲಿ ಹರಿಲಾಲ ತಪ್ಪೊಪ್ಪಿಕೊಳ್ಳದೆಯೇ ತನ್ನ ದಾರಿ ತನ್ನದೆನ್ನುವ ಹಾಗೆ ಗಾಂಧಿಯ ವಿರುದ್ಧ ದಿಕ್ಕಿನಲ್ಲಿ ನಡೆದು ಹೋಗುವುದು ಕೂಡ ಒಟ್ಟೂ ನಾಟಕ ಸೃಜಿಸುವ ಅಂತರಾರ್ಥ.
ಪುತಿನ ಅವರ ಮೇಲೊಂದು ಗರುಡ ಹಾರುತಿಹುದು, ಕೆಳಗದರ ನೆರಳು ಓಡುತಿಹುದು ಮತ್ತು ಮೂಡ್ನಾಕೂಡು ಚಿನ್ನಸ್ವಾಮಿಯವರ ನಮ್ಮ ಎಲುಬಿನ ಹಂದರದೊಳಗೊಂದು ಕವಿತೆಗಳನ್ನು ಸಶಕ್ತವಾಗಿ ಬಳಸಲಾಗಿದೆ. ಹಿರಿಯ ಹರಿಲಾಲನ ಪಾತ್ರದಲ್ಲಿ ತಾನೇ ಸ್ವತಃ ಹರಿಲಾಲನೇ ಆಗಿಬಿಡುವ ಚಂದ್ರಶೇಖರ ಯಶಸ್ವಿ ನಟನಾಗುವುದರಲ್ಲಿ ಸಂದೇಹಗಳೇ ಬೇಕಿಲ್ಲ. ಸ್ವತಃ ಕಥಾವಸ್ತುವೇ ಇಲ್ಲಿ ನಾಯಕನಾಗಿರುವುದರಿಂದ ಪಾತ್ರಧಾರಿಗಳು ಬರಿಯ ನೆಪಕ್ಕಷ್ಟೇ ನಟಿಸುತ್ತಾರೆ. ಕಥೆಯೇ ಎಲ್ಲರನ್ನೂ ಎಲ್ಲವನ್ನೂ ಮುನ್ನಡೆಯಿಸಿಬಿಡುತ್ತದೆ. ರಂಗಸಜ್ಜಿಕೆ, ಹಿತವಾದ ಸಂಗೀತಗಳು ಕೂಡ ಪ್ರದರ್ಶನಕ್ಕೆ ಕಳೆಕೊಟ್ಟಿವೆ.