ಒಟ್ಟು ಪುಟವೀಕ್ಷಣೆಗಳು

ಮಂಗಳವಾರ, ಡಿಸೆಂಬರ್ 23, 2008

ಮಾತೆಂಬ ಜ್ಯೋತಿರ್ಲಿಂಗ

ಮಾತು- ಭಾಷೆಯೊಂದನ್ನು ಆಡುವ ಸ್ವರೂಪ. ನಾವುಕನ್ನಡಿಗರು, ಅವರು ತಮಿಳರು, ನೀವು ತುಳುವರು ಎಂದು ಹೇಳುವಾಗೆಲ್ಲ ಭಾಷೆಯನ್ನೇ ಅವರವರ ಪರ್ಯಾಯವಾಗಿ ಬಳಸುತ್ತೇವೆ. ಭಾಷೆಯ ಮೂಲಕ ಜನರನ್ನು ಗುರ್ತಿಸುವುದು ಜಾತಿಯ ಮೂಲಕ ಗುರ್ತಿಸುವುದಕ್ಕಿಂತಲೂ ಒಳ್ಳೆಯದೇ ತಾನೆ? ‘ಭಾಷ್’ ಎಂಬ ಸಂಸ್ಕೃತದ ಧಾತುವಿಗೆ ಹೇಳು, ತಿಳಿಸು ಎಂಬ ಅರ್ಥ ಇರುವುದಾದರೂ, ‘ಸೊಲ್’ ಎಂಬ ಕನ್ನಡದ ರೂಪಕ್ಕಿರುವ ಅರ್ಥವೂ ಇದೇ ಬಗೆಯದು. ಅಂದರೆ ಒಂದು ಹೇಳಿಕೆಯನ್ನು ಕೊಡುವುದಕ್ಕೆ ಬಳಸುವ ಮಾಧ್ಯಮವನ್ನು ಭಾಷೆ ಎಂದು ಕರೆಯುವುದಾದಲ್ಲಿ ಆ ಮಾಧ್ಯಮವು ಬಳಸುವ ಶಬ್ದರೂಪಗಳನ್ನು ‘ಮಾತು’ ಎಂದು ಒಪ್ಪಿಕೊಳ್ಳಬೇಕಾಗುತ್ತದೆ. ನಮಗರ್ಥವಾಗದ ಪ್ರಾಣಿಗಳ ಕೂಗುಗಳು ಅವು ಬಳಸುವ ಭಾಷೆಯ ಮಾತುಗಳೇ ತಾನೆ? ಕಾಗೆಯ ಕೂಗನ್ನು, ಗುಬ್ಬಿಯ ದನಿಯನ್ನು ಗಮನವಿಟ್ಟು ಕೇಳಿದರೆ ಅವುಗಳ ಕೂಗಿನ ಸ್ತರ ಸಂದರ್ಭಕ್ಕೆ ತಕ್ಕಂತೆ ಬದಲಾಗುವುದನ್ನು ಗುರ್ತಿಸಬಹುದು. ಮಾತು ಜ್ಯೋತಿರ್ಲಿಂಗ ಎಂಬ ಸಾಲಿನ ಅರ್ಥ ಈಗ ಎಟುಕಲಿಕ್ಕೆ ಸಾಧ್ಯವಾದೀತು. ಆದರೆ ಭಾಷೆ ಅನ್ನುವುದು ಪ್ರಮಾಣಮಾಡು ಎನ್ನುವ ಅರ್ಥವನ್ನೂ ತನ್ನೊಟ್ಟಿಗೇ ಇಟ್ಟುಕೊಂಡಿರುವುದರಿಂದ ಯಾವತ್ತೂ ಆಡುವುದನ್ನು ಮನಸ್ಸಾಕ್ಷಿಪೂರ್ವಕವಾಗಿ ಸ್ಪಷ್ಟವಾಗಿ ಮತ್ತು ಪ್ರಾಮಾಣಿಕವಾಗಿಯೇ ಆಡಬೇಕು ಎಂದಾಯಿತು. ಆದರೆ ಇವತ್ತು ಶಾಸ್ತ್ರೀಯ ಭಾಷೆಯ ವಿಷಯದಲ್ಲಿ ನಡೆಯುತ್ತಿರುವ ಸಂಗತಿಗಳನ್ನು ನೋಡಿದರೆ ‘ಭಾಷೆ’ಎನ್ನುವುದರ ಹಿಂದೆ ಮನಸ್ಸಾಕ್ಷಿ ಇರಲೇಬೇಕು ಎನ್ನುವುದಕ್ಕೂ ಪುರಾವೆ ದೊರಕುತ್ತಿದೆ.

ಮಾತು- ಒಂದು ಪ್ರಭೆ. ಮಾತಿನ ಪ್ರಭೆಯಿಲ್ಲದಿದ್ದಲ್ಲಿ ಜಗತ್ತು ಕತ್ತಲಲ್ಲಿರುತ್ತಿತ್ತು ಅನ್ನುತ್ತಾನೆ ಒಬ್ಬ ಭಾಷಾತಜ್ಞ. ಮಾತನಾಡುವ ವಿಶೇಷ ಶಕ್ತಿ ಇರುವ ಏಕ ಮಾತ್ರ ಜೀವಿಯಾಗಿರುವ ಮನುಷ್ಯ ತನ್ನ ಮಾತಿಗೆ ಮಿತಿ, ನಿರ್ಮಿತಿ ಮತ್ತು ಪ್ರಾದೇಶಿಕತೆಗಳ ಕಾರಣ ಕೊಟ್ಟು ಹಲವು ಭಾಷೆಗಳನ್ನು ಕಟ್ಟುತ್ತ ಹೋದ. ಒಂದೇ ಭಾಷೆಯು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುವುದನ್ನೂ ನಾವು ನೋಡಿದ್ದೇವೆ. ಹಾಗೆಯೇ ದಿನ ಕಳೆದ ಹಾಗೆಲ್ಲ ಭಾಷೆಯೊಂದರ ಬಳಸುವಿಕೆ ಅದರ ವಿಸ್ತರಣೆಯನ್ನು ಬಿಂಬಿಸುವ ಹಾಗೇ ಬಳಸಲಾರದ ಕಾರಣಕ್ಕೆ ಅದು ಸಾಯುವುದನ್ನೂ ನಾವು ಗಮನಿಸಿದ್ದೇವೆ. ಎಲ್ಲೆಲ್ಲಿ ಮಾಧ್ಯಮವಾಗಿ ಭಾಷೆ ಬಳಕೆಯಾಗುವುದಿಲ್ಲವೋ ಅಲ್ಲೆಲ್ಲ ಅದು ತನ್ನ ಆಯುಷ್ಯವನ್ನು ಕಳೆದುಕೊಳ್ಳುತ್ತಲೇ ಇದೆ. ಕನ್ನಡವನ್ನೇ ಉದಾಹರಿಸಿದರೂ ಸಾಕು. ಹಳೆಗನ್ನಡ, ನಡುಗನ್ನಡ ಮುಗಿದು ಈಗ ಬಳಕೆಯಲ್ಲಿರುವ ಹೊಸಗನ್ನಡವೂ ಸಾಕಷ್ಟು ಬದಲಾವಣೆಗಳಿಗೆ ತನ್ನನ್ನು ತೆರೆದುಕೊಳ್ಳುತ್ತಲೇ ಇದೆ. ಇನ್ನು ಆದಿಮಾನವನಾಡಿದ ಮಾತು ಹೇಗೆ ನಮಗೆ ಅರ್ಥವಾಗಲು ಸಾಧ್ಯ? ಪುರಾಣಯುಗದ ಮಾತು ವಿಜ್ಞಾನ-ತಂತ್ರ ಜ್ಞಾನಯುಗದಲ್ಲಿ ಕವಡೆಯ ಕಿಮ್ಮತ್ತನ್ನೂ ಉಳಿಸಿಕೊಂಡಿಲ್ಲ. ಅದು ಸಾಧ್ಯವೂ ಇಲ್ಲದ ಮಾತು! ನಿನ್ನೆ ಆಡಿದ ಮಾತು ಇವತ್ತಿಗೆ ಬೇರೆಯದೇ ಅರ್ಥವನ್ನು ಕೊಡುವುದೂ ಇದೆ. ಹೊಸ ಹೊಸ ಪದಗಳ ಸೇರ್ಪಡೆ ಭಾಷೆಯೊಂದರ ಶ್ರೀಮಂತಿಕೆಯನ್ನು ಹೆಚ್ಚಿಸುತ್ತದೆಯಾದರೂ ಸದ್ಯ ಬೆಂಗಳೂರಿನ ಕನ್ನಡದಲ್ಲಿ ಬಳಸಲಾಗುತ್ತಿರುವ ಜೋಷ್, ಬೊಂಬಾಟ್, ಮಸ್ತು ಇವೆಲ್ಲದರ ಮೂಲ ಯಾವುದಿರಬಹುದೆಂಬ ಕುತೂಹಲವನ್ನೂ ಹುಟ್ಟಿಹಾಕುತ್ತಿದೆ. ಮನುಷ್ಯನ ಮಾತು ನಿರಂತರವಾಗಿ ಪರಿವರ್ತನಶೀಲವಾಗಿರುವುದರಿಂದಲೇ ನಾವದನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಬಲ್ಲೆವು, ಬದಲಾಯಿಸಬಲ್ಲೆವು.

ಮಾತು- ನಮಗಿರುವ ಒಂದು ಸಾಧನ. ಬುದ್ಧಿ ಬಲದ ಪ್ರತೀಕ. ಅದು ಒಂದು ಕಲೆ ಕೂಡ. ಎಲ್ಲರಿಗೂ ಇದು ಒಲಿಯದು. ಒಲಿದವರಂತೂ ಹಿಂದಿರುಗಿ ನೋಡರು. ದೂರದರ್ಶನ ವಾಹಿನಿಗಳಲ್ಲಂತೂ ಹರಟೆಮಲ್ಲರಿಗೆ ಮನ್ನಣೆ. ಮಣೆ. ಮಾತು ಬಲ್ಲವ ಮಾಣಿಕ್ಯ ತಂದ ಎನ್ನುವುದು ಇವರಿಗೇ ಅನ್ವಯಿಸುವುದು. ಮಾತು ಅರಿಯದವ ಜಗಳ ತಂದ ಎನ್ನುವುದು ನಮ್ಮ ಲೋಕಸಭಾಸದಸ್ಯರ/ ವಿಧಾನ ಸಭಾ ಸದಸ್ಯರ ಮಾತುಗಳನ್ನು ಕೇಳಿದಾಗೆಲ್ಲ ಅಲ್ಲಲ್ಲ, ನೋಡಿದಾಗೆಲ್ಲ ಶೃತವಾಗುತ್ತಲೇ ಇದೆ. ಮಾತಿನಿಂದ ಲಾಭವಾಗುವ ಹಾಗೇ ಹಾನಿಯಾಗುವುದು, ಗೆಲುವು ಸಿಗುವ ಹಾಗೇ ಸೋಲು ಎದಿರಾಗುವುದು, ಗೆಳೆಯರು ಸಿಗುವ ಹಾಗೇ ಸಣ್ಣ ಮಾತೊಂದರ ಬಳಕೆ ಶಾಶ್ವತ ಭಿನ್ನಮತವನ್ನು ಹೆಗಲಿಗಂಟಿಸಿದ ಪ್ರಸಂಗಗಳು ಎಲ್ಲರ ಬದುಕಿನಲ್ಲೂ ಇದ್ದೇ ಇರುತ್ತವೆ.

ಮಾತು- ಆಯುಧವಾಗಿರುವಂತೆಯೇ ಯುದ್ಧವೆಬ್ಬಿಸುವ ಅಸ್ತ್ರವಾಗಿಯೂ ಬಳಸಿದ್ದಿದೆ. ಮಿತಿಯಿಲ್ಲದ ಅತಿಯಾದ ಮಾತು ಅಪಾಯವನ್ನು ಹಾಗೇ ಅಂಥ ಮಾತುಗಾರರಿಂದ ಉಪಾಯವಾಗಿ ತಪ್ಪಿಸಿಕೊಳ್ಳುವುದನ್ನೂ ನಮಗೆ ಕಲಿಸಿದೆ. ಮಾತು ಬೆಳ್ಳಿ ಮೌನ ಬಂಗಾರ ಎನ್ನುವುದೂ ಒಂದು ಮುಖ್ಯ ಮಾತು! ಒಂದಾಡಿದರೆ ಹೆಚ್ಚು ಮತ್ತೊಂದಾಡಿದರೆ ಕಡಿಮೆ ಎನ್ನುವ ಪ್ರಸಂಗಗಳೂ, ಪರಿಸ್ಥಿತಿಗಳೂ ಇದ್ದೇ ಇರುತ್ತವೆ. ಮಾತುಗಾರಿಕೆಯನ್ನು ಅರ್ಥಗಾರಿಕೆ ಎನ್ನುವ ರೀತಿಯಲ್ಲಿ ಬಳಸುವುದೂ ಇದೆ. ಪಾಪ, ಈ ಅರ್ಥಗಾರಿಕೆಯವರದಂತೂ ಹುಲಿ ಮೇಲಿನ ಸವಾರಿ. ಬಿಡುವ ಹಾಗಿಲ್ಲ, ಹಿಡಿದು ಕೊಳ್ಳುವ ಹಾಗೂ ಇಲ್ಲ. ಗುರ್ರೆನ್ನುವ ಹುಲಿಯ ಹಾಗೇ ಮಾತು ಇವರ ಜೊತೆ ಸದಾ ಯುದ್ಧಕ್ಕೆ ನಿಂತೇ ಇರುತ್ತದೆ. ಪಳಗಿಸಿ ಮಟ್ಟಹಾಕಿದರೆ ಮುಂದಿನ ವೇದಿಕೆ ದಕ್ಕೀತು. ಇಲ್ಲದಿದ್ದರೆ ಅನ್ಯ ಅರ್ಥದಾರಿಯನ್ನು ಹುಟ್ಟುಹಾಕೀತು.

ಮಾತು- ಅನೇಕಾನೇಕ ರೀತಿಯಲ್ಲಿ, ಬಗೆಯಲ್ಲಿ ನಮ್ಮನ್ನಾವರಿಸಿದೆ. ಅತ್ತೆ ಬಳಸುವ ಚುಚ್ಚುಮಾತು, ತಂದೆ-ಮಕ್ಕಳ ನಡುವಿನ ಬಿಚ್ಚುಮಾತು, ಅಮ್ಮ ಮಗುವಿಗೆ ಬಳಸುವ ಮೃದು ಮಾತು, ಬಾಸ್ ಬಳಸುವ ಕಟು ಮಾತು, ಯೂನಿಯನ್ ಲೀಡರ್ಗಳು ಬಳಸುವ ನೇರ ಮಾತು, ಹಿರಿಯ ಸಹೋದ್ಯೋಗಿಗಳು ಹೇಳುವ ಕಿವಿಮಾತು, ಅಫೇರ್ಗಳನ್ನು ಬಿತ್ತರಿಸುವ ಪಿಸುಮಾತು, ಒಂದೊಂದು ಮಾತಿನ ರೀತಿಗೂ ಭಿನ್ನ ಭಿನ್ನ ಪರಿಣಾಮ, ಭಿನ್ನವಾಗದೇ ಉಳಿದವನೇ ಪುಣ್ಯಾತ್ಮ.

ಮಾತು- ಒಂದು ಬಗೆಯ ಮೋಡಿ. ಮನಸ್ಸನ್ನು ಗೆದ್ದು, ದೇಹವನ್ನು ಜಗ್ಗುವ ಖೋಡಿ. ಹಿಂದೆಲ್ಲ ಪಾರ್ಕುಗಳಲ್ಲಿ, ಈಗೀಗ ಬ್ರೌಸಿಂಗ್ ಕೇಂದ್ರಗಳಲ್ಲಿ ಒಟ್ಟೊಟ್ಟಿಗೆ ಇರುವ ಜೋಡಿಗಳ ಮಾತು ಕಣ್ಣಲ್ಲಿ, ಹೆಣೆದ ಬೆರಳಲ್ಲಿ, ಕಳಿಸಿದ ಮೆಸೇಜುಗಳಲ್ಲಿ. ಮೋಡದಲ್ಲಿ ಪ್ರಿಯತಮೆಗೆ ಸಂದೇಶ ಕಳಿಸಿದ ದೇಶದಲ್ಲಿ ಈಗ ಮೊಬೈಲ್ನಲ್ಲಿ ಬೆಲೆ ಇರದ, ಅಂದರೆ ಕರೆನ್ಸಿ ಖರ್ಚಾಗದೇ, ಸಂದೇಶ ಪೆಟ್ಟಿಗೆ ಭರ್ತಿಯಾಗುವ ಹಾಗೆ ಅವರಿವರು ಹೇಳಿದ್ದನ್ನೆಲ್ಲ ತನ್ನದೇ ಎನ್ನುವ ಹಾಗೆ ಹೇಳುವ ಸಂದೇಶದ ಮಾತು.

ಮಾತು- ಅದೂ ಒಂದು ಚಟ. ಪರಿಣಾಮ ಕಟು. ಬರಿಯ ಮಾತೇ ಬಂಡವಾಳವಾಗಿ ಲೋಕ ಗೆದ್ದ ವೀರರೂ ಇದ್ದಾರೆ. ಮಾತಿನ ಭರದಲ್ಲಿ ಕೊಚ್ಚಿ ಹೋದ ಕನಸಿಗರೂ ಇದ್ದಾರೆ. ನಮ್ಮ ಲೋಕನಾಯಕರು ಭಾಷಣಕ್ಕೆ ಬಳಸಿದ ಸಮಯವನ್ನು ನಾಡು ಕಟ್ಟುವುದಕ್ಕೆ ಬಳಸಿದ್ದರೆ ಅದರ ಮಾತೇ ಬೇರೆಯಾಗುತ್ತಿತ್ತು. ಗಾಂಧಿಯವರ ಒಂದೇ ಒಂದು ಮಾತಿಗೆ ಮನೆ, ಸಂಸಾರಗಳನ್ನು ಬಿಟ್ಟು ಚಳವಳಿಗೆ ಧುಮುಕಿದವರ ಸಾಕಷ್ಟು ಕತೆಗಳು ಇವೆ.

ಮಾತು- ನುಡಿದರೆ ಮುತ್ತಿನ ಹಾರದಂತಿರಬೇಕು ಅನ್ನುವುದಕ್ಕೂ, ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕು ಅನ್ನುವುದಕ್ಕೂ ವ್ಯತ್ಯಾಸಗಳಿದ್ದೇ ಇವೆ. ಮುತ್ತಿನ ಹಾರದಂತಿರುವ ಮಾತು ಸ್ಫಟಿಕದ ಹಾಗೆ ಶುಭ್ರವಾಗಿರಲು ಹೇಗೆ ಸಾಧ್ಯ? ಮಾತು ಮಾಣಿಕ್ಯದ ಹೊಳಪಿನಂತಿದ್ದರೆ ಕಣ್ಣು ಕುಕ್ಕದೇ ಇರಲು ಸಾಧ್ಯವೇ? ಜಗಮೆಚ್ಚಿ ಅಹುದು ಅಹುದು ಎನ್ನುವ ಹಾಗೆ ಮಾತಾಡಬೇಕು ಅಂದರೆ ಒಂದೋ ಪಕ್ಕಾ ಎಡ ಪಂಥೀಯನಾಗಿ ಜಾಗತೀಕರಣ ವಿರೋಧೀ ನಿಲುವಿನಲ್ಲಿ ಎದುರಿದ್ದವರನ್ನು ಬಗ್ಗು ಬಡಿಯಬೇಕು ಅಥವ ಬಲ ಪಂಥೀಯನಾಗಿ ಪರಂಪರೆಯ ಶ್ರೇಷ್ಠತೆಯನ್ನು ವೈಭವೀಕರಿಸಿ ವರ್ತಮಾನದ ಮರ್ಯಾದೆಯನ್ನು ಬೆತ್ತಲಾಗಿಸಬೇಕು. ಮೃದು ವಚನಗಳೇ ಸಕಲ ಜಪಂಗಳಯ್ಯ, ಮೃದು ವಚನಗಳೇ ಸಕಲ ತಪಂಗಳಯ್ಯ ಎಂದ ವಚನಕಾರರು ‘ವಚನ’ ಎಂಬ ಮತ್ತೊಂದು ರೀತಿಯ ಮಾತಿನ ಉಪಯೋಗವನ್ನು ಶೃತಪಡಿಸಿದ್ದಾರೆ. ವಚನ ಎನ್ನುವುದನ್ನು ಮಾತು ಎನ್ನುವುದಕ್ಕೆ ಪೂರಕವಾಗಿ ಬಳಸಬಹುದಾದರೂ ವಚನ ಎನ್ನುವುದು ಮಾತು ಕೊಡು, ಮಾತು ಉಳಿಸಿಕೊ ಎನ್ನುವ ಅಂತರಾರ್ಥವನ್ನೇ ಸೂಚಿಸುತ್ತದೆ. ಹಾಗೇ ವಚನ ಎನ್ನುವುದು ವಾಚ್ಯ ಎಂಬ ಮೂಲ ಧಾತುವನ್ನೇ ಅಶ್ರಯಿಸಿರುವುದರಿಂದ, ಅದು ಕೇಳುವುದಕ್ಕೆ ಹಿತವೂ, ಪಾಲಿಸುವುದಕ್ಕೆ ಕಷ್ಟಕರವೂ ಆದುದೇ ಆಗಿರುತ್ತದೆ.

ಮಾತು- ಅದೊಂದು ವ್ರತ. ದಶರಥನಂಥವರಿಗೆ, ಕರ್ಣನಿಗೆ ಕೊಟ್ಟಮಾತು ಬಹು ಮಹತ್ವದ್ದು. ಮಾತು ಕೊಟ್ಟಕಾರಣಕ್ಕೆ ನಾಲಗೆ ಕಳಕೊಂಡ ಭೈರವಿ ವೆಂಕಟಸುಬ್ಬಯ್ಯನಂಥವರೂ ಇದ್ದಾರೆ. ಮಾತಿಗಷ್ಟೇ ಹಾಗಂದಿದ್ದೆ ಎಂದು ಮುಂದೊಂದು ದಿನ ಮಾತು ಕದ್ದವರೂ ಇದ್ದಾರೆ. ಮಾತಾಡುವ ಜನರಿರುವಂತೇ ಅವರಿವರನ್ನು ಮಾತಿಗೆಳೆದು ಸಿಕ್ಕಿಸುವ ಬುದ್ಧಿವಂತರಿಗೆ ‘ಲಂಗರು’- ಆಂಖರ್ ಎಂಬ ಆಂಗ್ಲ ಶಬ್ದದ ಸಹಜ ಉಪಯೋಗ. ಮಾತಲ್ಲಿ ಮನುಷ್ಯರನ್ನೇ ಕಟ್ಟಿಹಾಕುವ ಇವರ ಕಾಯಕ ದೂರದರ್ಶನಕ್ಕಷ್ಟೇ ಸೀಮಿತವಾಗಿರುವುದು ಮಾತ್ರ ನಮ್ಮೆಲ್ಲರ ದೌರ್ಭಾಗ್ಯ. ಮಾತು ಬೇಡವೇ ಬೇಡ ಎಂಬಂತೆ ಸದಾ ಮೌನಿಗಳಾಗಿರುವವರೂ ಇದ್ದಾರೆ. ಹೀಗೆ ಲೋಕೋ ಭಿನ್ನ ಭಾವಃ, ಲೋಕೋ ಭಿನ್ನ ರುಚಿಃ, ಹಲವು ಮಾತಪ್ಪಗಳ ಜೊತೆ ಮಾತುಗೇಡಿಗಳು, ಮಾತುಗಳ್ಳರ ಹಾಗೇ ಮಾತಿಗೆ ಕಟ್ಟುಬಿದ್ದವರು.

ಮಾತು- ನುಡಿ ಎಂಬುದರ ಪ್ರಬೇಧ. ಸತ್ಯದ ಮಾತು, ಅಸತ್ಯದ ಮಾತು, ಮೋಸದ ಮಾತು, ನ್ಯಾಯದ ಮಾತು. ಇದರ ಜೊತೆ ಜೊತೆಗೇ ಪಾರ್ವತೀಪ-ರಮೇಶ್ವರರನ್ನು ಶಬ್ದಾರ್ಥಗಳಲ್ಲಿ ಕಂಡ ಕಾಳಿದಾಸ, ಸತ್ಯವ ನುಡಿದೆಡೆ ದೇವಲೋಕ, ಮಿಥ್ಯವ ನುಡಿದೆಡೆ ಮರ್ತ್ಯಲೋಕ ಎಂದ ಶರಣರೂ ಪ್ರತ್ಯಕ್ಷರಾಗಿ ಸಾಕ್ಷಿ ಹೇಳುತ್ತಾರೆ. ಮಾತನ್ನು ಜ್ಯೋತಿ ಎಂದು ಕರೆದವರಿಗೆ ಇದ್ದ ಮೋಹ ಯಾವ ಮಟ್ಟದ್ದು? ಅವರು ಮಾತಿನ ಬಗ್ಗೆ ಇಟ್ಟುಕೊಂಡಿದ್ದ ಪವಿತ್ರ ಭಾವನೆಯ ಆಳ ಅಳೆಯಲಾರದಂಥದು. ಮಾತು ಜ್ಯೋತಿರ್ಲಿಂಗ ಅನ್ನುವುದು ಪರಿಶುದ್ಧತೆಯ ಪರಾಕಾಷ್ಟತೆಯದು.

ಮಾತು ಭಾವೇಕತೆಯ ಸಾಧನವಾಗಿರುವಂತೆಯೇ ವಿರಸದ ಮುನ್ನುಡಿಯೂ ಆಗಿರುವುದು ದುರ್ದೈವ. ಪಕ್ಕದ ರಾಜ್ಯಗಳ ವರ್ತನೆಗಳು ನಮ್ಮ ಸಹನೆಯ ಗಡಿಮೀರಿಸುವ ಸಂದರ್ಭಗಳೂ ಆಗುತ್ತಿರುವುದೂ ಈ ಹೊತ್ತಿನ ವರ್ತಮಾನ. ಅಭಿಮಾನದ ಬದಲಿಗೆ ದುರಭಿಮಾನ, ಮಮಕಾರದ ಬದಲಿಗೆ ಅಹಂಕಾರ ಇರುವಕಡೆಯಲ್ಲೆಲ್ಲ ಹೀಗೇ ಆಗುವುದು. ಅಯ್ಯಾ ಎಂದೊಡೆ ಸ್ವರ್ಗ ಎಂದು ಭಾವಿಸಿರುವ ನಮಗೆ ಎಲವೋ ಎಂದೇ ಸಂಬೋಧಿಸುವ ಅನ್ಯರ ಉಪಟಳಕ್ಕೆ ಆತ್ಮ ಗೌರವವಿಲ್ಲದೇ ಸ್ವ ಲಾಭಕ್ಕೆ ಅನ್ಯರನ್ನು ಓಲೈಸುವ ನಮ್ಮೊಳಗಿನವರೇ ಆಗಿರುವುದೂ ಬರಿಯ ಮಾತೇನೂ ಅಲ್ಲ.

ಇನ್ನು ನಮ್ಮ ನಡೆ ನುಡಿಗಳಲ್ಲಿ ಸಾಮ್ಯತೆ ಇರಬೇಕು ಎನ್ನುವುದೂ ಒಂದು ನೀತಿ. ಅದು ಸಹಜ ರೀತಿ. ಆದರೆ ಹೇಳುವುದು ಒಂದು, ಮಾಡುವುದು ಮತ್ತೊಂದು. ಇದು ನಮ್ಮ ಹಲವರ ರೀತಿ. ನುಡಿಯಲ್ಲಿ ಎಚ್ಚೆತ್ತು, ನಡೆಯಲ್ಲಿ ತಪ್ಪಿದರೆ ಹಿಡಿದಿರ್ದ ಲಿಂಗವು ಘಟಸರ್ಪವಾಗುವುದು ಎನ್ನುವುದೂ ಒಂದು ಮಾತೇ! ಹಾಗೇ ಘಟಸರ್ಪಗಳಾಗುತ್ತ ಹೋಗಿದ್ದರೆ ಈವತ್ತು ಮನುಷ್ಯರ ಜೊತೆಜೊತೆಗೇ ಘಟಸರ್ಪಗಳೂ ತುಂಬಿರಬೇಕಾಗುತ್ತಿತ್ತು. ಅಷ್ಟು ಮಾತು ಕದ್ದವರು, ನಾವು. ನುಡಿದು ಹುಸಿವ, ನಡೆದು ತಪ್ಪುವ ಪ್ರಪಂಚ ನಾನೊಲ್ಲೆ ಎಂದಿದ್ದ ಬಸವಣ್ಣ ಅಪ್ಪಿತಪ್ಪಿ ಈ ಕಾಲದಲ್ಲಿ ಹುಟ್ಟಿದ್ದರೇನು ಮಾಡುತ್ತಿದ್ದನೋ ಪಾಪ. ಕಲ್ಯಾಣದ ಕ್ರಾಂತಿಯಾಗುವ ಮೊದಲೇ ಅವನು ಭ್ರಾಂತನಾಗುತ್ತಿದ್ದ, ಅಷ್ಟೆ.

ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು. ಇದೂ ಒಂದು ಗಾದೆ ಮಾತು. ಮಾತು ಮುಖ್ಯವಾದರೂ ಬರಿಯ ಮಾತೇ ಮುಖ್ಯವಲ್ಲ. ತೂತು ಇರದಿದ್ದರೆ ಗಾಳಿಯಾಡುವುದಾದರೂ ಎಲ್ಲಿಂದ? ಆದರೆ ತೂತೇ ದೊಡ್ಡದಾದರೆ ಉರಿ ಹರಡಿ ಹೋಗುತ್ತದೆ. ವ್ಯರ್ಥವಾಗುತ್ತದೆ. ಮಾತೂ ಹಾಗೆಯೇ. ವ್ಯರ್ಥವಾಗದ ಹಾಗೇ ನಮ್ಮ ಮಾತು ಇರಬೇಕು. ಒಂದು ತುತ್ತು ಬೇಕೆನ್ನಿಸುವ ಮೊದಲೇ ಊಟ ಮುಗಿಸಬೇಕು ಎನ್ನುವ ಹಾಗೇ ಇನ್ನೂ ಕೇಳಬೇಕಿತ್ತು ಎನ್ನುವ ಹಾಗೇ ನಮ್ಮ ಭಾಷಣಕಾರರೂ ತಮ್ಮ ಭಾಷಣ ನಿಲ್ಲಿಸಿದರೆ ಬರಿಯ ಮಾತೆಂಬ ಭ್ರಮೆಯಲ್ಲಿ ಲೋಕ ಲೋಲಕದ ಚಲನೆ ಮರೆತು ಕುಳಿತ ನಮ್ಮಂಥವರಿಗೆ ಹೊಸದಾರಿ ಸಿಕ್ಕೀತು. ಹೊಸಬರಾಗಿ ನಡೆ ನುಡಿಯನ್ನೂ ಕಲಿಯಬಹುದಿತ್ತು. ಆದರೆ ಏನು ಮಾಡೋಣ? ನಾವೆಲ್ಲ ಈಗಾಗಲೇ ನಮ್ಮ ನಮ್ಮ ಕ್ಷೇತ್ರಗಳಲ್ಲಿ ನಮ್ಮ ಮಾತನ್ನೇ ಸತ್ಯವೆಂದು ನಂಬಿದ್ದೇವೆ. ನಂಬಿ ಕೆಟ್ಟವರಿಲ್ಲವೋ ಎನ್ನುವ ಮಾತು ನಮಗೂ ಗೊತ್ತಿದೆ ಅಲ್ಲವೆ?
ಕೃಪೆ: ಹೊಸದಿಗಂತ ದೀಪಾವಳಿ ವಿಶೇಷಾಂಕ ೨೦೦೮ರಲ್ಲಿ ಪ್ರಕಟಿತ ಪ್ರಬಂಧ
-

ಕಾಮೆಂಟ್‌ಗಳಿಲ್ಲ: