ಒಟ್ಟು ಪುಟವೀಕ್ಷಣೆಗಳು

ಗುರುವಾರ, ನವೆಂಬರ್ 19, 2009

ಮಣ್ಣಿನ ವಾಸನೆ ಉಳಿಸಿಕೊಂಡ ಗೋಡೆಗೆ ಬರೆದ ನವಿಲು

ಅತ್ಯಂತ ಜನಪ್ರಿಯ ಸಾಹಿತ್ಯ ಪ್ರಕಾರವಾದ ಸಣ್ಣಕತೆ ಕಾಲದಿಂದ ಕಾಲಕ್ಕೆ ತನ್ನೊಳಗಿನ ಆಂತರಿಕ ಶಿಸ್ತನ್ನು ಬದಲಿಸಿಕೊಳ್ಳದೆಯೂ ಮೇಲ್ನೋಟದ ಬದಲಾವಣೆಗಳಿಗೆ ಪಕ್ಕಾಗುತ್ತಲೇ ಬಂದಿದೆ. ಆಧುನಿಕ ಕನ್ನಡ ಕಥಾಜಗತ್ತಂತೂ ವರ್ತಮಾನದ ಬದುಕಿನ ಎಲ್ಲ ಮುಖಗಳನ್ನು ಒಳಗೊಳ್ಳುತ್ತಲೇ ಸ್ಥಿತ್ಯಂತರದ ಸಾಕ್ಷಿಯಾಗಿ ದಾಖಲಾಗುತ್ತಲೇ ಇದೆ. ಒಂದು ಸಿದ್ಧ ಚೌಕಟ್ಟನ್ನು, ‘ಕತೆ’ ಇರಲೇಬೇಕೆಂಬ ನಿಯಮವನ್ನೂ ಮೀರಿ ಈ ಹೊತ್ತಿನ ಕಥೆಗಾರರು ಬರೆಯತೊಡಗಿದ್ದಾರೆ. ಬಂಡಾಯ ಮತ್ತು ಹೋರಾಟದ ಹಾದಿಗಳನ್ನು ಮೇಲ್ನೋಟಕ್ಕೆ ಬಿಟ್ಟುಕೊಟ್ಟಂತಿದ್ದರೂ, ಬದುಕಿನ ಒಂದು ಸಣ್ಣ ಘಟನೆಯನ್ನೂ ವಿಸ್ತರಿಸಿ ಅದನ್ನು ಮಾನವೀಯ ನೆಲೆಯ ಮೂಲಕ ಕತೆಕಟ್ಟಿಕೊಡುವ ಪ್ರಯತ್ನ ಢಾಳಾಗಿ ಕಾಣಸಿಗುತ್ತಿದೆ.
ಇದಕ್ಕೆ ಇತ್ತಿಚಿನ ಉದಾಹರಣೆಯೆಂದರೆ ಸಂದೀಪ ನಾಯಕರ ‘ಗೋಡೆಗೆ ಬರೆದ ನವಿಲು’. 2009ನೇ ಸಾಲಿನ ಛಂದ ಪುಸ್ತಕ ಬಹುಮಾನ ಪಡೆದ ಈ ಕಥಾಸಂಕಲನದಲ್ಲಿ ಇರುವ ಒಂದು ಡಜನ್ ಕತೆಗಳೆಲ್ಲವೂ ಇದುವರೆಗೂ ನಾವು ಕತೆ ಎಂದು ನಂಬಿರುವ ರೀತಿಯಿಂದ ಭಿನ್ನವಾಗಿ, ಆದರೆ ಬದುಕಿನ ಸಣ್ಣ ಸಣ್ಣ ಘಟನೆಗಳನ್ನೇ ಮೂಲವಾಗಿಟ್ಟುಕೊಂಡು ಹೆಣೆದಿರುವ ಬದುಕಿನ ಮೌಲ್ಯ ಮಾಪನದಂತಿವೆ. ಇಲ್ಲಿನ ಎಲ್ಲ ಕಥೆಗಳ ಮೂಲ ಉತ್ತರಕನ್ನಡದ ನೆಲ ಮತ್ತು ಅಲ್ಲಿನ ಸಂಸ್ಕೃತಿಗಳನ್ನು ಆಧರಿಸಿದುವೇ ಆಗಿರುವುದೂ ವಿಶೇಷವಾಗಿದೆ. ಸಂಕಲನದ ಕತೆಗಳ ಕೆಲಪಾತ್ರಗಳು ಹಲವು ಕತೆಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವುದೂ ಒಂದು ಬಗೆಯಲ್ಲಿ ಕತೆಗಾರ ಆ ಮೂಲಕ ಹಳೆಯ ಕತೆಗಳ ಕೊಂಡಿಯನ್ನು ಬೇರೆ ಬೇರೆ ಕತೆಗಳ ಕೇಂದ್ರ ಪಾತ್ರಗಳನ್ನು ವಿಮರ್ಶಿಸಲು, ಉದ್ದೀಪಿಸಲು ಬಳಸಿಕೊಂಡ ತಂತ್ರವೆಂದೇ ನನಗನಿಸುತ್ತಿದೆ. ನಗರ ಕೇಂದ್ರಿತ ಸಮಸ್ಯೆಗಳಿಲ್ಲದಿದ್ದರೂ ಇಲ್ಲಿನ ಬಹುತೇಕ ಕತೆಗಳ ಪಾತ್ರಗಳು ನಗರದಲ್ಲಿದ್ದೂ ಊರಿನ ಧ್ಯಾನದಲ್ಲಿ ನಿರತವಾಗಿರುವುದು ಮತ್ತು ಒಂದಲ್ಲ ಒಂದು ವಿಧದಿಂದ ಮತ್ತೆ ಊರಿನ ತೆಕ್ಕೆಗೆ ಬೀಳುವುದೂ ನಡೆದಿದೆ. ಜಾತಿಯ ಸಮಸ್ಯೆ, ಪರಿಸರ ಹಾನಿಯ ಎಚ್ಚರ, ಶೋಷಣೆಯೇ ಮುಂತಾದ ಸಾಮಾಜಿಕ ಅನಿಷ್ಟಗಳೂ ಇಲ್ಲಿನ ಕತೆಗಳಲ್ಲಿ ಇದ್ದರೂ ಅವನ್ನು ದೊಡ್ಡ ಭೂತವಾಗಿಸಿ ಅಥವ ಅವುಗಳ ವಿರುದ್ಧದ ಬಂಡಾಯದ ಕೂಗಾಗಲೀ ಇಲ್ಲದಿರುವುದೂ ಗಮನಿಸಬೇಕಾದ ವಿಷಯವೇ ಆಗಿದೆ. ಸಂಯಮ ಮೀರದ ಹದವಾದ ಭಾಷೆ ಇಲ್ಲಿನ ಕತೆಗಳ ಮುಖ್ಯ ಬಂಡವಾಳ. ಕೆಲವೇ ಕೆಲವು ಪಾತ್ರಗಳಲ್ಲೇ ಕತೆಯನ್ನು ಬೆಳೆಸಿ ಮುಗಿಸುವ ರೀತಿ ಕೂಡ ಗಮನಿಸಬೇಕಾದ ಸಂಗತಿಯಾಗಿದೆ. ಏಕೆಂದರೆ ಸಣ್ಣಕತೆಯೊಂದರಲ್ಲೇ ಕಾದಂಬರಿಗಾಗುವಷ್ಟು ಪಾತ್ರಗಳನ್ನು ಸೃಷ್ಟಿಸಿ ಅವುಗಳ ಪೋಷಣೆಗೆ ಗಮನ ಕೊಡದೇ ಬರೀ ಉದ್ದೋಉದ್ದುದದ ಕತೆಗಳನ್ನು ಬರೆಯುತ್ತಿರುವವರ ನಡುವೆ ಸಂದೀಪ ನಾಯಕರ ಕತೆಗಳೆಲ್ಲವೂ ಹೆಚ್ಚೆಂದರೆ ಹತ್ತುಪುಟಗಳ ಮಿತಿಯಲ್ಲೇ ಮುಗಿದುಬಿಡುವುದೂ ಮತ್ತೊಂದು ಅಂಶ. ಪ್ರಾಯಶಃ ಸಂದೀಪರು ಸಾಪ್ತಾಹಿಕವೊಂದರ ಉಸ್ತುವಾರಿ ನೋಡುತ್ತಿರುವ ಕಾರಣ ಉಳಿದ ಬರಹಗಾರರ ಬರಹಗಳನ್ನು ಪುಟಮಿತಿ, ಪದಮಿತಿಗಳ ಲೆಕ್ಕಾಚಾರದಲ್ಲಿ ‘ಕತ್ತರಿಸುತ್ತಿರುವ’ ಅನುಭವ ಇಲ್ಲಿನ ಕತೆಗಳು ಉದ್ದವಾಗದಂತೆ ನಿಯಂತ್ರಣ ಹೇರಿದೆಯೋ ಎಂಬ ಅನುಮಾನವೂ ಹುಟ್ಟುತ್ತದೆ. ಉದಾಹರಣೆಗೆ ‘ಬಾಗಿಲ ಮುಂದೆ’ ಎನ್ನುವ ಕತೆಯಂತೂ ಸುರುವಾಗುವ ಮೊದಲೇ ಮುಗಿದುಬಿಡುತ್ತದೆ. ಓದುಗನನ್ನು ಥಟ್ಟನೆ, ಹಟಾತ್ತನೆ ಸರಳ ಸಂಗತಿಯ ಅನಾವರಣದ ಮೂಲಕ ಖುಷಿಗೊಳಿಸಬಹುದೆಂಬ ಲೆಕ್ಕಾಚಾರ ಇಲ್ಲೆಲ್ಲ ಕೆಲಸ ಮಾಡಿದಂತಿದೆ.
ಸ್ವಗತದ ನಿರೂಪಣೆ ಮತ್ತು ಉತ್ತಮಪುರುಷದ ಗೊಂದಲಗಳಿಲ್ಲದೇ ಕತೆಗಳನ್ನು ಕಟ್ಟುವುದರಲ್ಲಿ ಕತೆಗಾರರು ಗೆದ್ದಿದ್ದಾರಾದರೂ ಒಂದು ಓದಿನ ನಂತರ ಮರು ಓದು ಬಯಸುವ ವಸ್ತುಗಳು ಇಲ್ಲಿನ ಕತೆಗಳಲ್ಲಿದ್ದರೂ ತೀರ ಸರಳೀಕೃತ ಕಥನ ವಿಧಾನದಿಂದಾಗಿ ಆ ಅವಕಾಶವನ್ನು ಕತೆಗಾರರೇ ಕಳೆದುಕೊಂಡಿದ್ದಾರೆ. ಬಾಗಿಲ ಮುಂದೆ, ಕಂಡಷ್ಟೇ ಆಕಾಶ ಮತ್ತು ಸಹಿ ಕತೆಗಳು ಇನ್ನೂ ವಿಸ್ತರಿಸಬಹುದಾದ ಅವಕಾಶವನ್ನು ಕಳೆದುಕೊಂಡ ಕಾರಣಕ್ಕೆ ಬರಿಯ ತುಟಿತುದಿಯ ಅನುಕಂಪವನ್ನಷ್ಟೇ ಹುಟ್ಟಿಸುತ್ತವೆ. ಪ್ರಾಯಶಃ ಕತೆಗಾರರು ಉದ್ದನೆಯ ಕತೆಗಳನ್ನು ಓದುಗರು ಇಷ್ಟಪಡಲಾರರೆಂಬ ತಮ್ಮದೇ ನಿರ್ಧಾರದಲ್ಲಿ ಎಡವಿದರೇನೋ ಅನ್ನಿಸುತ್ತದೆ. ಈ ಮೂರೂ ಕತೆಗಳೂ ಸ್ವಲ್ಪ ಪರಿಶ್ರಮ ಪಟ್ಟಿದ್ದರೆ ಬಹಳ ಕಾಲ ಕಾಡುವ ವಸ್ತುವನ್ನಿಟ್ಟುಕೊಂಡಿದ್ದೂ ಅವಸರದಲ್ಲಿ ಮುಗಿಸಿಬಿಟ್ಟ ಕಾರಣ ಬರಿಯ ಹಳಹಳಿಕೆಗಳಾಗೇ ಉಳಿದುಬಿಡುತ್ತವೆ. ‘ಆನೆ ಸಾಕಿದ ಮನೆಗೆ ಎರಡು ಹೂ ದಂಡೆ’ ಇಂಥ ಮಿತಿಗಳನ್ನು ಮೀರಿದ ಕಾರಣ ಸಂಕಲನದ ಯಶಸ್ವೀ ಕತೆಗಳಲ್ಲೊಂದಾಗಿದೆ. ‘ಕರೆ’ಯ ಮೋನಪ್ಪ ಮತ್ತು ‘ಮರೆತು ಹೋದ ಒಂದು ಸಂಬಂಧ’ದ ವೆಂಕಟಣ್ಣ ವರ್ತಮಾನದಲ್ಲಿ ಚಲಾವಣೆ ಕಳಕೊಂಡ ನಾಣ್ಯಗಳಾಗಿ ಕಾಡುತ್ತಾರೆ. ಹಾಗೆಯೇ ಹಿರಿಯರು ಆಧುನಿಕ ಜೀವನದಲ್ಲಿ ಹೇಗೆ ಮೂಲೆಗುಂಪಾಗುತ್ತಿದ್ದಾರೆ ಮತ್ತವರ ಪ್ರಸ್ತುತತೆಯನ್ನೇ ಕಳಕೊಳ್ಳುತ್ತಿದ್ದಾರೆ ಅನ್ನುವುದನ್ನೂ ದಟ್ಟವಾಗಿ ದಾಖಲಿಸಿವೆ. ‘ಉರುಳಿತೊಂದು ಮರ’ ಕತೆಗಾರರು ತಮಗೂ ಪರಿಸರ ಪ್ರಜ್ಞೆ ಕಾಡುತ್ತಿದೆ ಎನ್ನುವ ಕಾರಣಕ್ಕೆ ಬರೆದಂತೆ ಕಾಣುತ್ತದೆ. ಉಳಿದ ಕತೆಗಳಲ್ಲಿರುವ ‘ಓಟ’ ಮತ್ತು ಹಿಡಿತ ಸಿಗದ ಕಾರಣ ಹಾಗೂ ನಾಯಕನನ್ನು ಉದ್ಧಾಮನನ್ನಾಗಿ ಚಿತ್ರಿಸಲೇಬೇಕೆಂಬ ಹಟ ಇಲ್ಲಿ ಕೆಲಸ ಮಾಡಿರುವ ಕಾರಣ ‘ಉರುಳಿತೊಂದು ಕತೆ’ಯಾಗಿಬಿಟ್ಟಿದೆ. ‘ಇಲ್ಲಿ ಬಂದೆವು ಸುಮ್ಮನೆ’ ಮನುಷ್ಯನ ಆಸೆಗಳ ಮತ್ತು ಲಂಪಟತನದ ಅನಾವರಣವಾಗಿರುವುದರಿಂದ ಹಾಗೂ ಒಂದಲ್ಲ ಒಂದು ಕಾರಣಕ್ಕೆ ಬೇಸ್ತು ಬೀಳಲೇಬೇಕಾದ ಅನಿವಾರ್ಯತೆಗಳು ಎಲ್ಲರ ಬದುಕಿನಲ್ಲೂ ಘಟಿಸುವುದರಿಂದ ಓದುವಾಗ ಹಾಯೆನ್ನಿಸುತ್ತದೆ. ಅವರಿವರ ನಡುವಿನ ಆಟದ ದಾಳವಾದ ಮೋಹನನಂಥ ಪಾತ್ರಗಳನ್ನು ಕತೆಗಾರರು ಏಕೋ ಪೋಷಿಸಲು ಮನಸ್ಸು ಮಾಡದ್ದರಿಂದ ಪಾಪ ಈ ಕತೆಯ ಮೋಹನ ಮತ್ತು ‘ಒಂಭತ್ತು, ಎಂಟು, ಎಂಟು’ ಕತೆಯ ಮಂಕಾಳಜ್ಜಿ ಬಡವಾಗಿದ್ದಾರೆ. ಹಾಗೆ ನೋಡಿದರೆ ಹೇಳಹೊರಟದ್ದು ಒಂದಾದರೆ ಆಗುವುದು ಮತ್ತೊಂದಾಗುವ ಕಾರಣದಿಂದಾಗಿ ‘ಒಂಭತ್ತು, ಎಂಟು, ಎಂಟು’ ಮತ್ತು‘ಬೊಂಬೆಗೊಂದು ಸೀರೆ’ ಗಮನ ಸೆಳೆಯುತ್ತವೆ. ದಾರಿ ತಪ್ಪಿದ ಅಕ್ಕನ ಹುಡುಕಾಟದಲ್ಲಿನ ದೇವಿ ಮತ್ತು ಮನೆ ಬಿಟ್ಟು ಓಡಿ ಬಂದ ಶರಣ್ ಕಡೆಗೂ ವ್ಯವಸ್ಥೆಯ ಕೈಯಲ್ಲಿನ ಗೊಂಬೆಗಳಾಗುತ್ತಾರೆ. ಮೂಲತಃ ಅಲ್ಪತೃಪ್ತಿಯ ಈ ಎರಡೂ ಪಾತ್ರಗಳನ್ನೂ ಅವರ ಯತ್ನದಲ್ಲಿ ಉತ್ತೀರ್ಣರನ್ನಾಗಿಸದ ಕತೆಗಾರರು ಆ ಕಾರಣಕ್ಕೇ ಮೆಚ್ಚುಗೆ ಗಳಿಸುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ ‘ಇನ್ನೊಂದೇ ಕಥೆ’ಯ ಶಶಕ್ಕ ಮತ್ತು ‘ನಿನ್ನಲ್ಲೇ ಇರಲಿ’ಯ ಮುಕುಂದರನ್ನು ದಡ ಸೇರಿಸುವ ಕತೆಗಾರರು ಆಶ್ಚರ್ಯ ಹುಟ್ಟಿಸುತ್ತಾರೆ.
ವ್ಯಕ್ತಿಯ ಒಳತುಮುಲಗಳನ್ನು, ಆ ವ್ಯಕ್ತಿ ಲೌಕಿಕದ ವ್ಯವಹಾರಗಳಲ್ಲಿ ಕಾಯ್ದುಕೊಳ್ಳಬೇಕಾದ ಎಚ್ಚರವನ್ನೂ ಜೊತೆಜೊತೆಯಾಗಿ ನಿರ್ವಹಿಸುವುದು ಕತೆಗಾರರಿಂದ ಸಾಧ್ಯವಾಗಿರುವುದು ಒಟ್ಟೂ ಸಂಕಲನದ ಧನಾತ್ಮಕ ಯತ್ನವಾಗಿದೆ. ಆದರೆ ದುರಂತಗಳಲ್ಲೇ ಅಂತ್ಯವಾಗುವ ಇಲ್ಲಿನ ಬಹುತೇಕ ಕತೆಗಳು ನಿರಾಶವಾದವನ್ನು ಪುಷ್ಟೀಕರಿಸುವುದು ಅಷ್ಟೇ ಋಣಾತ್ನಕವಾಗಿದೆ. ನಿರಾಶೆ, ವಿಷಾದ, ಸೋಲುಗಳಲ್ಲೇ ಉಳಿಯುವ ಇಲ್ಲಿನ ಬಹುತೇಕ ಪಾತ್ರಗಳು ಇರುವುದೇ ಸೀಮಿತ ಚೌಕಟ್ಟಿನ ಸರಳ ಸಮಸ್ಯೆಗಳಲ್ಲಿ. ಈ ಪಾತ್ರಗಳು ಸೀಮಿತ ಪ್ರದೇಶದ ಸರಳ ಸಮಸ್ಯೆಗಳಲ್ಲಿ ಒದ್ದಾಡುತ್ತಿದ್ದರೂ ಅವನ್ನು ಉತ್ಪ್ರೇಕ್ಷಿಸದ ಕಥನ ಕ್ರಮ ಮತ್ತು ಅಂಥ ಸನ್ನಿವೇಶ ನಿರ್ಮಾಣದ ಕಾರಣ ಸಣ್ಣ ಚೌಕಟ್ಟಿನಲ್ಲಿ ಬಿಡಿಸಿಟ್ಟ ಚಿತ್ರಗಳಾಗಿವೆ. ಇಲ್ಲಿನ ಎಲ್ಲ ಕತೆಗಳ ಪಾತ್ರಗಳೂ ಅರೆಶಿಕ್ಷಿತರಾಗಿರುವುದು ಮತ್ತು ಕೆಳಸ್ತರದ ಸಮಾಜದಿಂದ ಬಂದವರಾಗಿರುವುದೂ ಸಂಕಲನದ ವಿಶೇಷಗಳಲ್ಲೊಂದಾಗಿದೆ. ಜೊತೆಗೇ ಬರಿಯ ಮುಜುಗರದ ಕಾರಣದಿಂದಾಗಿ ವಿನಮ್ರರಂತಿರಬೇಕಾದ ಪಾತ್ರಗಳ ಅನಿವಾರ್ಯತೆಯನ್ನೂ ಚಿತ್ರಿಸಿದೆ.
‘ಗೋಡೆಗೆ ಬರೆದ ನವಿಲು’ ಹೆಸರಿನ ಕತೆ ಸಂಕಲನದಲ್ಲಿಲ್ಲದೇ ಹೋದರೂ ಒಟ್ಟು ಸಂಕಲನ ಮನೆಯ ಮುಂದಿನ ಗೋಡೆಯ ಅಲಂಕಾರಕ್ಕೆ ಬರೆದ ನವಿಲಿನ ಚಿತ್ರದ ಹಾಗೆ ಕತೆಗಾರರು ಅವರ ಕುಶಲ ಕತೆಗಾರಿಕೆಗೆ ತಾವೇ ಕೊಟ್ಟುಕೊಂಡ ಹೆಸರಾಗಿದೆ. ‘ಅಗಣಿತ ಚಹರೆ’ ಸಂದೀಪ ನಾಯಕರ ಮೊದಲ ಪ್ರಕಟಿತ ಕವನ ಸಂಕಲನ. ಕವಿಯಾಗಿ ಅವರಿಗಿದ್ದ ಭರವಸೆಗಳು ಕತೆಗಾರರಾದ ಕೂಡಲೇ ಏಕೆ ಹೊರಟುಹೋದವೋ ತಿಳಿಯದಾಗಿದೆ. ಆದರೆ ಕವಿತೆಗಳ ಜೊತೆಯಲ್ಲಿದ್ದ ಯಕ್ಷಗಾನ, ತಾಜಾ ಮೀನು, ಬಸ್ ಸ್ಟಾಂಡು, ಬಂಡಿಹಬ್ಬ ಇಲ್ಲಿನ ಕತೆಗಳಿಗೂ ವಿಸ್ತರಿಸಿರುವ ಕಾರಣಕ್ಕೆ ‘ಮಣ್ಣಿನ ವಾಸನೆ’ಉಳಿಸಿಕೊಂಡ ಕತೆಗಾರರಾಗಿಯೂ ಉಳಿಯುತ್ತಾರೆ.
ಪುಸ್ತಕ: ಗೋಡೆಗೆ ಬರೆದ ನವಿಲು. (ಕಥಾ ಸಂಕಲನ)
ಕತೆಗಾರ: ಸಂದೀಪ ನಾಯಕ
ಪ್ರಕಾಶಕರು: ಛಂದ ಪುಸ್ತಕ, ಬೆಂಗಳೂರು ಬೆಲೆ:ರೂ ೬೦/-

ಕಾಮೆಂಟ್‌ಗಳಿಲ್ಲ: