ಒಟ್ಟು ಪುಟವೀಕ್ಷಣೆಗಳು

ಭಾನುವಾರ, ಜೂನ್ 30, 2013

ಸಮ್ಮೇಳನ ಅಧ್ಯಕ್ಷತೆಯ ಭಾಷಣ

ಕನ್ನಡದ ಪ್ರಿಯ ಬಂಧುಗಳೇ,
ಎಲ್ಲರಿಗೂ ನನ್ನ ಗೌರವ ಪೂರ್ವಕ ನಮಸ್ಕಾರಗಳು. ಅಧ್ಯಕ್ಷ ಪದವಿಯ ಈ ಗೌರವವನ್ನು ಸದ್ಯಕ್ಕಂತೂ ನಾನು ನಿರೀಕ್ಷಿಸಿರಲಿಲ್ಲ. ಇಂಥ ಗೌರವವನ್ನು ಕೊಡಮಾಡಿದ ಪರಿಷತ್ತಿನ ಕಾರ್ಯಕಾರೀ ಮಂಡಲಿಗೆ, ಸ್ವಾಗತ ಸಮಿತಿಗೆ ನಾನು ಕೃತಜ್ಞ.
ಎಲ್ಲಿಂದ ಮಾತು ಆರಂಭಿಸಲಿ? ಯಾವೆಲ್ಲ ವಿಷಯಗಳನ್ನು ಪರಿಷತ್ತಿನ ದಾಖಲೆಯಾಗಿ ಉಳಿಯುವ ಈ ಭಾಷಣದಲ್ಲಿ ಸೇರಿಸಲಿ ಎಂದು ಆಲೋಚಿಸುತ್ತಿರುವಾಗಲೇ ಅಲ್ಲಮನ ‘ಶಬ್ದ ಸೂತಕ’ ಅನ್ನುವ ಪದ ನನ್ನನ್ನು ಕಾಡತೊಡಗಿದೆ. ಈವರೆವಿಗೂ ಯಾರೂ ಯೋಚಿಸದ, ಬಿಂಬಿಸದ, ಸೂಚಿಸದ ಆಲೋಚನೆಗಳೇನೂ ನನ್ನಲ್ಲಿಲ್ಲ. ಏಕೆಂದರೆ ಸಾಹಿತಿಯೊಬ್ಬ ಸ್ವತಃ ಏನನ್ನೂ ಹೊಸದಾಗಿ ಸೃಷ್ಟಿಸಲಾರ. ವ್ಯಾಸೋಚ್ಚಿಸ್ಟಂ ಜಗತ್ ಸರ್ವಂ ಎಂಬ ಮಾತು ನಿಮಗೆಲ್ಲರಿಗೂ ಗೊತ್ತಿದೆ. ತನ್ನ ಕಣ್ಣಮುಂದಿನ ಸಮಸ್ಯೆಗಳಿಗೆ ವಿಚಾರಿಯೊಬ್ಬ ದಾರಿಯನ್ನು ಹುಡುಕಬಲ್ಲ ಅಷ್ಟೆ. ಹಾಗೆ ಸಮುದಾಯದೊಂದಿಗೆ ಅನುಸಂಧಾನ ಮಾಡಿದಾಗ ಹೊಳೆದ ಕೆಲವು ವಿಚಾರಗಳನ್ನುಚರ್ಚಿಸಬಯಸುತ್ತೇನೆ.
ದೀರ್ಘ ಇತಿಹಾಸವುಳ್ಳ ಸಾಹಿತ್ಯ ಪರಿಷತ್ತಿನ ತಾಲ್ಲೂಕು, ಜಿಲ್ಲೆ ಮತ್ತು ಅಖಿಲ ಭಾರತ ಸಮ್ಮೇಳನಗಳ ಅಧ್ಯಕ್ಷ ಭಾಷಣಗಳ ಪ್ರತಿಗಳನ್ನು ಮುಂದಿಟ್ಟುಕೊಂಡು ಟಿಪ್ಪಣಿ ಮಾಡಿಕೊಳ್ಳಲು ಕೂತಾಗ ಈ ಸ್ಥಾನ ಗೌರವ ಎಷ್ಟು ಮಹತ್ವದ್ದೆಂದು ಅರಿವಾಯಿತು. ಕನ್ನಡ ನಾಡುನುಡಿಗಳನ್ನು ಕಟ್ಟಿ ಬೆಳೆಸಿದ ಅನುಭವ ಜನ್ಯ ಸಿದ್ಧತೆಯಿಂದಾಗಿ ನಾಡು ನುಡಿಗಳ ಏಳಿಗೆಗಾಗಿ ಪ್ರತಿಯೊಬ್ಬ ಅಧ್ಯಕ್ಷರೂ ತಮ್ಮ ಒಳನೋಟಗಳಿಂದ ಕೂಡಿದ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಕನ್ನಡದ ಸೋಂಕಿಲ್ಲದ, ಕಂಪ್ಯೂಟರುಗಳಿಲ್ಲದೇ ಅಣುವಿನಷ್ಟು ಕೆಲಸವೂ ಆಗದ ಸಂಸ್ಥೆಯಲ್ಲಿ ಹೊಟ್ಟೆಪಾಡಿಗೆ ದುಡಿಯುತ್ತಿರುವ ನಾನು ಪರಿಷತ್ತಿಗಾಗಲೀ, ಕನ್ನಡ ಸಾಹಿತ್ಯ ನಿಮರ್ಾತೃಗಳಿಗಾಗಲೀ ಸಲಹೆ ಸೂಚನೆಗಳನ್ನು ಕೊಡುವಷ್ಟು ಶಕ್ತನಲ್ಲ. ಅಲ್ಲದೇ ರಾಜಕೀಯವಾಗಿ, ಸಾಮಾಜಿಕವಾಗಿ ಆಗಬೇಕಿರುವ ಕೆಲಸಗಳಿಗೆ ಸಾಹಿತಿಯೊಬ್ಬನ ಚಿಂತನೆಗಳು ಕೇವಲ ತೋರುಬೆರಳಷ್ಟೇ ವಿನಾ ಅದೇನೂ ಲಕ್ಷ್ಮಣ ರೇಖೆಯಲ್ಲ. ಆದರೂ ಕಳೆದ ಮೂವತ್ತು ವರ್ಷಗಳಿಂದ ಬರವಣಿಗೆಯಲ್ಲಿ ತೊಡಗಿ, ಸಾಂಸ್ಕೃತಿಕ ಲೋಕದ ಒಳ ಪದರಗಳನ್ನು ಅತಿ ಹತ್ತಿರದಿಂದ ಕಂಡಿರುವ ನನಗೆ ಇವತ್ತಿನ ಸಾಹಿತ್ಯಕ, ಸಾಂಸ್ಕೃತಿಕ ವ್ಯಕ್ತಿಗಳು ತಮ್ಮ ಶಕ್ತಿ ಮತ್ತು ವ್ಯಾಪ್ತಿಯಾಚೆಗಿನ ಪ್ರಭಾವಳಿ ಪಡೆಯಲು ಏನೆಲ್ಲ ಹುನ್ನಾರಗಳನ್ನು ಮಾಡುತ್ತಿದ್ದಾರೆಂದು ವಿವರಿಸ ಹೊರಟರೆ ಈ ಐಕಾನುಗಳೆಲ್ಲ ನಾಚಿಕೆಯಿಂದ ತಲೆ ತಗ್ಗಿಸಬೇಕಾದ ಹಲವು ಘಟನೆಗಳು ನಡೆದಿವೆ, ನಡೆಯುತ್ತಿವೆ. ಉದಾಹರಣೆಗೆ ಕನ್ನಡವನ್ನು ಶಾಸ್ತ್ರೀಯ ಭಾಷೆಯೆಂದು ಕೇಂದ್ರ ಸರ್ಕಾರ ಘೋಷಿಸಿದ ದಿನ ಸಿಹಿ ಹಂಚಿ, ಪಟಾಕಿ ಸಿಡಿಸಿ ನಾವೆಲ್ಲ ಸಂಭ್ರಮ ಪಟ್ಟೆವು. ಮುಂದೆ ಅದೇನಾಯಿತು? ಕನ್ನಡದ ಉದ್ಧಾರಕ್ಕೆ ಶಾಸ್ತ್ರೀಯ ಭಾಷೆಯ ಕೋಡು ಎಷ್ಟರ ಮಟ್ಟಿಗೆ ಸಹಕಾರಿಯಾಯಿತು? ಪ್ರಾಯಶಃ ವಿಶ್ವ ವಿದ್ಯಾಲಯಗಳಲ್ಲಿ ಸಂಶೋಧಕರಾಗಿ ಕೆಲಸಮಾಡುವವರಿಗೆ ಹೆಚ್ಚಿನ ಅವಕಾಶ, ಬೇರೆ ಭಾಷೆಗಳಿಂದ ಕನ್ನಡಕ್ಕೆ ನೇರ ಅನುವಾದದ ಸೌಲಭ್ಯ, ಕನ್ನಡ ಬೋಧಕರಿಗೆ ವಿಶ್ವ ವಿದ್ಯಾಲಯ ಮಟ್ಟದಲ್ಲಿ ಸಂಬಳ ಸಾರಿಗೆಗಳ ಹೆಚ್ಚಳ. ಜನ ಸಾಮಾನ್ಯರ ಮೇಲೆ ಯಾವ ಪ್ರಭಾವವನ್ನೂ ಮಾಡದ ಇಂಥ ಘೋಷಣೆಗಳ ಬಗ್ಗೆಯೇ ಅನುಮಾನಗಳು ಹುಟ್ಟುತ್ತವೆ. ನಮ್ಮ ದುರದೃಷ್ಟ. ಸರೋಜಿನಿ ಮಹಿಷಿ ವರದಿಯಾಗಲೀ, ಡಿ.ಎಂ.ನಂಜುಂಡಪ್ಪ ವರದಿಗಳನ್ನಾಗಲೀ ಕಡೆಗೆ ಕಾವೇರಿ ನೀರು ಹಂಚಿಕೆಯ ವ್ಯಾಜ್ಯದ ಬಗೆಗಿನ ಟ್ರಿಬ್ಯುನಲ್ ವರದಿಗಳನ್ನು ಅಧ್ಯಯನ ಮಾಡದೇ ಚಳವಳಿಗೆ ಕರೆನೀಡುವ ರಾಜಕೀಯ ನಾಯಕರನ್ನೂ, ಅವರನ್ನು ಓಲೈಸಲು ಆ ಕ್ಷಣಕ್ಕೆ ಜನರ ಅತ್ಮಾಭಿಮಾನವನ್ನು ಪ್ರಶ್ನಿಸುವ ಮಾತುಗಳನ್ನಾಡುವ ಹೋರಾಟಗಾರರನ್ನೂ ನಾವು ಅರ್ಥ ಮಾಡಿಕೊಳ್ಳದೇ ದಾರಿ ತಪ್ಪುತ್ತಿರುವುದು ಮಾತ್ರ ಸತ್ಯ. ನವೆಂಬರ್ನಲ್ಲಿ ಮಾತ್ರ ಕನ್ನಡಿಗರಾಗುವ ನಮಗೆ ನಮ್ಮ ಸಾಂಸ್ಕೃತಿಕ ಸಂಗತಿಗಳ ಅರಿವಿಗಿಂತಲೂ ಜನಾಕರ್ಷಣೆಯ ಸಂಗತಿಗಳಲ್ಲೇ ಹೆಚ್ಚಿನ ಆಸಕ್ತಿ ಇರುವುದು ದೌರ್ಭಾಗ್ಯ.
ಕನ್ನಡದ ಉದ್ಧಾರದ ಬಗ್ಗೆ ಮೇಲಿಂದ ಮೇಲೆ ಮಾತನಾಡುವ ನಾವು ಭಾಷೆಯೊಂದು ಅರಳಿ ಬೆಳೆಯಬೇಕಾದ ಪ್ರಾಥಮಿಕ ಹಂತದ ಶಿಕ್ಷಣದಲ್ಲಿ ಕನ್ನಡದ ಸ್ಥಾನವೇನಿದೆ ಎಂದು ಪ್ರಾಯೋಗಿಕವಾಗಿ ಆಲೋಚಿಸುವುದೇ ಇಲ್ಲ. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಮುಗಿಸುವುದಿರಲಿ, ಅದನ್ನೊಂದು ಐಚ್ಚಿಕ ವಿಷಯವನ್ನಾಗಿ ಆಯ್ಕೆ ಮಾಡುವ ಸ್ವಾತಂತ್ರವನ್ನೂ ವಿದ್ಯಾಥರ್ಿಗಳಿಗೆ ನಮ್ಮ ಶೈಕ್ಷಣಿಕ ವ್ಯವಸ್ಥೆ ನೀಡಿಲ್ಲ. ಅದರಲ್ಲೂ ಪದವಿ ಹಂತದಲ್ಲಿ ವಿಜ್ಞಾನವನ್ನು ಮುಖ್ಯ ವಿಷಯವನ್ನಾಗಿ ಆಯ್ಕೆ ಮಾಡಿಕೊಳ್ಳುವ ವಿದ್ಯಾಥರ್ಿ ಭಾಷೆಯನ್ನು ಭಾಷೆಯನ್ನಾಗಿ ಕಲಿಯಬಹುದೇ ವಿನಾ ಮುಖ್ಯ ವಿಷಯವನ್ನಾಗಿ ಕಲಿಯುವ ಅವಕಾಶ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿಲ್ಲ. ಆದರೆ ಹಿಂದೆ ಇದ್ದ, ಮತ್ತು ಸದ್ಯ ದೇಶದ ಕೆಲವೇ ವಿಶ್ವವಿದ್ಯಾಲಯಗಳಲ್ಲಿ ಮಾತ್ರ ಲಭ್ಯವಿರುವ ಆನರ್ಸ್ ತರಗತಿಗಳಲ್ಲಿ ಈ ಸೌಲಭ್ಯ ಇದೆ. ಇದು ನಮ್ಮಲ್ಲಿ ಎಷ್ಟು ಜನಕ್ಕೆ ಗೊತ್ತಿದೆ ಅನ್ನುವುದು ಮುಖ್ಯ. ಇನ್ನು ನಗರ ಮತ್ತು ನಗರ ಸಮೀಪದ ಕೆಳಮಧ್ಯಮ ವರ್ಗ ತಮ್ಮ ಸಮೀಪದಲ್ಲೇ ಇರುವ ಖಾಸಗಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುತ್ತಾರೆಯೇ ವಿನಾ ಸಕರ್ಾರದ ಶಾಲೆಗಳತ್ತ ಸುಳಿಯುವುದೂ ಇಲ್ಲ. ಯಾವ ತರಬೇತಿಯೂ ಇಲ್ಲದ ಆದರೆ ಡಾಂಭಿಕತೆಯೊಂದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗೀ ಶಾಲೆಗಳು ನಾಯಿಕೊಡೆಗಳ ಹಾಗೆ ತಲೆಯೆತ್ತುತ್ತಿದ್ದರೆ, ದಶಮಾನಗಳ ಇತಿಹಾಸವಿರುವ ಸರ್ಕಾರೀ ಶಾಲೆಗಳು ಶಿಕ್ಷಕ-ವಿದ್ಯಾರ್ಥಿ ಅನುಪಾತವಿಲ್ಲದೇ ವರ್ಷದಿಂದ ವರ್ಷಕ್ಕೆ ಮುಚ್ಚುತ್ತ ಹೋಗುತ್ತಿವೆ. ಸರ್ಕಾರದ ಕಾರ್ಯ ಸೂಚಿ, ಬಿಸಿಯೂಟ, ಸಮವಸ್ತ್ರ, ಉಚಿತ ಪಠ್ಯ ಪುಸ್ತಕದ ಆಕರ್ಷಣೆಗಳಿದ್ದರೂ ದಿನದಿಂದ ದಿನಕ್ಕೆ ಸರ್ಕಾರೀ ಶಾಲೆಗಳಲ್ಲಿ ಹಾಜರಾತಿ ಮತ್ತು ದಾಖಲಾತಿಗಳು ಕಡಿಮೆಯಾಗುತ್ತಿರುವ ಕಾರಣವನ್ನು ವಿಶ್ಲೇಷಿಸದೇ ಬರಿಯ ವೇದಿಕೆಯ ಭಾಷಣಗಳಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಕಳೆದ ವರ್ಷಗಳಲ್ಲಿ ಸರ್ಕಾರೀ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ತೆರೆಯುವ ಹುಂಬ ನಿರ್ಧಾರ ಕೂಡ ಯಾವ ಪುರುಷಾರ್ಥವನ್ನೂ ಸಾಧಿಸಲಾಗಲಿಲ್ಲವೆನ್ನುವುದು ಸದ್ಯದ ಆತಂಕವನ್ನು ಇನ್ನೂ ಹೆಚ್ಚು ಮಾಡುತ್ತಿದೆ. ಸದ್ಯ ವೇದಿಕೆಯ ಮೇಲಿರುವ ಮತ್ತು ಈ ಸಭೆಯಲ್ಲಿ ಹಾಜರಿರುವ ಮೂವತ್ತು-ನಲವತ್ತು ವರ್ಷಗಳಿಗಿಂತ ಹೆಚ್ಚಿನ ವಯೋಮಾನದವರೆಲ್ಲರೂ ಓದಿರುವುದು ಕನ್ನಡ ಮಾಧ್ಯಮದ ಸರ್ಕಾರದ ಶಾಲೆಗಳಲ್ಲೇ! ಈ ಖಾಸಗೀ ಶಾಲೆಗಳ ಹುನ್ನಾರ ಶುರುವಾಗಿ ಹೆಚ್ಚೆಂದರೆ ಇಪ್ಪತ್ತೈದು ವರ್ಷಗಳಾಗಿರಬಹುದು. ಈ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದಲ್ಲೇ ಕಲಿತವರ ಇಂಗ್ಲಿಷ್ಗಿಂತಲೂ ಕನ್ನಡದ ಶಾಲೆಗಳಲ್ಲಿ ಕಲಿತ ನಮ್ಮ ಇಂಗ್ಲಿಷ್ ವ್ಯಾಕರಣ ದೋಷಗಳಿಂದ ಮುಕ್ತವಾಗಿದೆಯೆಂದು ಹೇಳಿಕೊಳ್ಳಲು ಹೆಮ್ಮೆ ಎನ್ನಿಸುತ್ತದೆ. ದೂರದೃಷ್ಟಿಯಿಲ್ಲದ, ಯಾವ ಸೌಲಭ್ಯಗಳನ್ನೂ ಕೊಡದ ಖಾಸಗಿಯವರಿಗೆ ಶಾಲೆಗಳನ್ನು ತೆರೆಯುವ ಅವಕಾಶ ಕೊಟ್ಟ ಅಧಿಕಾರಿಗಳನ್ನೂ, ಅವರಿಗೆ ಅಂಥ ನಿರ್ದೇಶನಗಳನ್ನು ಕೊಡುವ ರಾಜಕೀಯ ನಾಯಕರನ್ನೂ ಕನ್ನಡಾಂಬೆ ಖಂಡಿತ ಕ್ಷಮಿಸಲಾರಳು.
ಇದು ರಾಜಕೀಯವನ್ನು ಕುರಿತು ಮಾತನಾಡುವ ವೇದಿಕೆಯಲ್ಲ. ಸಾಹಿತ್ಯವನ್ನು ಕುರಿತಂತೆ ಚರ್ಚಿಸುವ, ಸಂಸ್ಕೃತಿ ಚಿಂತನೆಯನ್ನು ಬಿತ್ತುವ ವೇದಿಕೆ ಎನ್ನುವುದು ಸತ್ಯದ ಮಾತಾದರೂ ನಮ್ಮ ಯಾವ ಚರ್ಚಿಗಳು, ಚಿಂತನೆಗಳು ರಾಜಕೀಯದ ಸೋಂಕಿಲ್ಲದೇ ನಡೆಯುವ ತಾಕತ್ತು ಹೊಂದಿವೆ ಅನ್ನುವುದು ಮುಖ್ಯವಾದ ಮಾತು. ‘ರಾಜಕೀಯ’ ಅನ್ನುವ ಶಬ್ದ ಪಡೆದಿರುವ ಅಪಭ್ರಂಶ ಇದು. ರಾಜರನ್ನು ಅಂದರೆ ನಾಯಕರನ್ನು ಸೃಷ್ಟಿಸುವ, ಅವರ ಯೋಚನೆಗಳಿಗೆ ಹರಿತ್ತನ್ನು ನೀಡುವುದೇ ರಾಜಕೀಯ. ಅಂದರೆ ಸಾಹಿತ್ಯ ಸಂಸ್ಕೃತಿಗಳ ನಾಯಕರನ್ನೂ ಸಂಗತಿಗಳನ್ನೂ ನಿರ್ಮಿಸುವ ಕೆಲಸ ಇಲ್ಲಿ ನಡೆಯುತ್ತಿದೆಯಾದ್ದರಿಂದ ಇದು ರಾಜಕೀಯದ ಸೋಂಕಿಲ್ಲದ್ದು ಅನ್ನುವುದೇ ಉಢಾಫೆಯ ಮಾತು. ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಗತಿಗಳು ಸಾಮಾಜಿಕ ನೆಲೆಯ ಮೇಲೇ ನಿಂತಿರುವಂಥವು. ಅಂದರೆ ಆಯಾ ಪ್ರದೇಶದ ಸಾಮಾಜಿಕ ರಾಜಕೀಯ ಮತ್ತು ಭೌಗೋಲಿಕ ಸಂಗತಿಗಳು ಆಯಾ ಪ್ರದೇಶದ ಸಾಹಿತ್ಯ ಸಂಸ್ಕೃತಿಗಳ ಮೇಲೆ ಪ್ರಭಾವ ಬೀರುತ್ತವೆ ಮತ್ತು ಹೊಸ ಆಲೋಚನೆಗಳಿಗೆ ಕಾರಣೀ ಭೂತವಾಗುತ್ತವೆ. ಇದರ ಜೊತೆಗೆ ಐತಿಹಾಸಿಕ ಸತ್ಯಗಳು ಮತ್ತು ಸಾಹಿತ್ಯಕ ಸತ್ಯಗಳು ಯಾವತ್ತೂ ಬೇರೆ ಬೇರೆಯಾಗಿರುವುದರಿಂದ ಮುಂದೊಂದು ಕಾಲಕ್ಕೆ ಯಾವುದು ನಿಜವಾದ ಸತ್ಯವೆನ್ನುವುದೂ ಗೊಂದಲಕ್ಕೆ ಕಾರಣವಾಗುತ್ತವೆ. ಉದಾಹರಣೆಗೆ ನಾನೀಗ ಉಲ್ಲೇಖಿಸುವುದು ಕನ್ನಡ ಪರಂಪರೆಯ ಉಚ್ಛ್ರಾಯದ್ದೆಂದು ನಂಬಲಾಗಿರುವ ವಿಜಯನಗರದ ಅರಸರ ಕಾಲ. ನಾವೆಲ್ಲ ಇತಿಹಾಸದ ಪಠ್ಯಗಳಲ್ಲಿ ಓದಿರುವ ಹಾಗೆ ವಿಜಯನಗರದ ಅರಸರ ಕಾಲದಲ್ಲಿ ಮುತ್ತು ರತ್ನಗಳನ್ನೂ, ವಜ್ರ ವೈಢೂರ್ಯಗಳನ್ನೂ ದಾರಿಬದಿಯಲ್ಲಿ ಮಾರಲಾಗುತ್ತಿತ್ತು ಮತ್ತು ಕಳ್ಳಕಾಕರ ಭೀತಿಯಿಲ್ಲದೇ ಜನ ಬದುಕಿದ್ದರು. ಇದು ಐತಿಹಾಸಿಕ ಸತ್ಯ. ಅಂದರೆ ಇತಿಹಾಸವನ್ನು ದಾಖಲಿಸಿದವರು ಬರೆದ ಸತ್ಯ. ಇದೇ ಕಾಲದಲ್ಲಿ ಅಂದರೆ ವಿಜಯ ನಗರದ ಅರಸರ ಕಾಲದಲ್ಲೇ ಬದುಕಿದ್ದ ದಾಸಶ್ರೇಷ್ಠ ಪುರಂದರ ದಾಸರ ಪದ್ಯವೊಂದನ್ನು ಉಲ್ಲೇಖಿಸುವುದಾದರೆ ಅದು ‘ಸತ್ಯವಂತರಿಗಿದು ಕಾಲವಲ್ಲ, ದುಷ್ಠ ಜನರಿಗೇ ಸುಭಿಕ್ಷ ಕಾಲ’. ಈಗ ನೀವೇ ಯೋಚಿಸಿ ನೋಡಿ. ಇತಿಹಾಸವನ್ನು ಹೊಟ್ಟೆಪಾಡಿಗೆ ಅಂದಂದಿನ ರಾಜಕೀಯನಾಯಕರನ್ನು ಮೆಚ್ಚಿಸಲು ದಾಖಲಿಸಿದ ಸತ್ಯಕ್ಕೂ, ಮತ್ತು ಸಾಮಾಜಿಕವಾಗಿ ನೊಂದು ಬೆಂದು ಸಾಹಿತ್ಯದ ಮೂಲಕ ಅಂದಂದಿನ ಸನ್ನಿವೇಶಗಳನ್ನು ಚಿತ್ರಿಸುವ ಸಾಹಿತ್ಯಕ ಸತ್ಯಕ್ಕೂ ಇರುವ ಅಂತರವನ್ನು. ಅಂದರೆ ನಾವೇ ಸೃಷ್ಟಿಸುವ ಐತಿಹಾಸಿಕ ಸತ್ಯಕ್ಕಿಂತಲೂ ಸಾಹಿತ್ಯಕ ಸತ್ಯ ಹೆಚ್ಚು ಮಹತ್ವದ್ದಾಗಿರುತ್ತದೆ.
ಮೇಲಿನ ಮಾತನ್ನು ಸಮರ್ಥಿಸುವ ಸಲುವಾಗಿ ನಾವೀಗ ಸ್ವಾತಂತ್ರೋತ್ತರದಲ್ಲಿ ನಮ್ಮ ಶಾಸನ ಸಭೆಗಳಲ್ಲಿ ನಮ್ಮನ್ನು ಪ್ರತಿನಿಧಿಸಿದ್ದ ಜನನಾಯಕರ ವರ್ತನೆ ಮತ್ತು ಅವರ ನಿಲುವುಗಳನ್ನೀಗ ಪರಿಶೀಲಿಸಬೇಕು. ಪ್ರಜಾಪ್ರಭುತ್ವವನ್ನು ಕುರಿತು ನಾವೆಷ್ಟೇ ಜಂಭ ಕೊಚ್ಚಿಕೊಂಡರೂ ಅದರ ವಿರೋಧಾಭಾಸಗಳನ್ನು ಮತದಾನದ ವ್ಯವಸ್ಥೆಯ ಮೂಲಕವೇ ಅಲ್ಲಗಳೆಯಬಹುದು. ಪ್ರತಿಶತ ಐವತ್ತಕ್ಕಿಂತಲೂ ಕಡಿಮೆ ಪ್ರಮಾಣದ ಮತದಾನ ನಡೆದಾಗಲೂ ಹೆಚ್ಚಿನ ಮತ ಪಡೆದವರು ಗೆಲ್ಲುತ್ತಾರೆನ್ನುವುದೇ ಈ ಆಯ್ಕೆಯ ಪ್ರಕ್ರಿಯೆಯ ಹಿಂದಿನ ಚೋದ್ಯ. ಏನೇ ಇರಲಿ ಸರ್ವ ಸಮ್ಮತ ಎನ್ನುವುದು ಇರದ ಕಾಲದಲ್ಲಿ ಇದು ಸಹಜವೇ. ಹೀಗೆ ಆರಿಸಿ ಹೋದ ಜನಪ್ರತಿನಿಧಿಗಳು ಅಧಿವೇಶನಗಳಲ್ಲಿ ಎಷ್ಟು ದಿನ ಭಾಗವಹಿಸುತ್ತಾರೆ, ಸ್ಥಳೀಯ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತಾರೆ ಎನ್ನುವುದು ಮುಖ್ಯ. ಅಲ್ಲದೇ ಅತಿ ಮುಖ್ಯ ವಿಚಾರಗಳ ಚರ್ಚೆಯ ಕಾಲದಲ್ಲಿ ಅವುಗಳನ್ನು ಧ್ವನಿಮತದ ಮೂಲಕ ಅಂಗೀಕರಿಸುವ ಸನ್ನಿವೇಶಗಳಲ್ಲಿ ಅವರ ನಿಲುವೇನು ಎನ್ನುವುದು ಇಲ್ಲಿ ಮುಖ್ಯ. ತಾವು ಪ್ರತಿನಿಧಿಸುತ್ತಿರುವ ಪ್ರದೇಶದ ಸಮಸ್ಯೆಗಳಿಗಿಂತಲೂ ತಾವು ಪ್ರತಿನಿಧಿಸುವ ಪಕ್ಷದ ನಿಲುವನ್ನೇ ಬಲವಾಗಿ ಪ್ರತಿಪಾದಿಸುವ ನಾಯಕರಿಂದ ನಮಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಇದು ಈಗಾಗಲೇ ಶೃತವಾಗಿರುವ ಸತ್ಯ ಕೂಡ. ಆದರೆ ಕಳೆದೆರಡು ವಿಧಾನಸಭಾ ಕಾರ್ಯಕಲಾಪಗಳಲ್ಲಿ ಅರಸೀಕೆರೆಯ ಸಮಸ್ಯೆಗಳು ಶಾಸನ ಸಭೆಯಲ್ಲಿ, ಮಾಧ್ಯಮಗಳಲ್ಲಿ ಹೆಚ್ಚು ಹೆಚ್ಚು ಚರ್ಚಿತವಾಗುತ್ತಿರುವುದು ನಮ್ಮ ಭಾಗ್ಯ. ಅಧ್ಯಯನ ಮತ್ತು ಅನುಸಂಧಾನಗಳ ಮೂಲಕ ಸ್ಥಳೀಯ ಸಮಸ್ಯೆಗಳನ್ನು ಅರಿತು ಅವಕ್ಕೆ ತಕ್ಕುನಾದ ಉತ್ತರವನ್ನು ಕಂಡುಕೊಳ್ಳುತ್ತಿರುವ ಶಾಸಕರನ್ನು ಅಭಿನಂದಿಸಲೇಬೇಕು. ಅದಕ್ಕೆ ಪೂರಕವಾಗಿ ನಾವೆಲ್ಲ ಸ್ಪಂದಿಸುವುದು ಮತ್ತು ಪ್ರಾದೇಶಿಕ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ಪಕ್ಷ ರಾಜಕೀಯ ಮಾಡದಿರುವುದೂ ಒಳ್ಳೆಯದೆಂಬುದನ್ನು ನಾವೆಲ್ಲರೂ ಅರಿಯಬೇಕು.
ನಾವೆಲ್ಲ ಸದ್ಯ ಅಬಿವೃದ್ಧಿ ಎನ್ನುವ ಮಾತನ್ನು ಆಗಾಗ ಜಪಿಸುತ್ತಿರುತ್ತೇವೆ. ಅಭಿವೃದ್ಧಿಯೆಂದರೆ ಚತುಷ್ಪಥ ರಸ್ತೆಗಳು, ಅದರ ಮೇಲೆ ಹಾಯುವ ವಿದೇಶೀ ಮೋಟಾರು ಕಾರುಗಳು, ಹೆದ್ದಾರಿಯನ್ನಾಕ್ರಮಿಸಿ ನಿಂತಿರುವ ಗಗನ ಚುಂಬೀ ಕಟ್ಟಡಗಳು, ಊರಿನ ಎಲ್ಲ ಓಣಿಗಳನ್ನೂ ಕಾಂಕ್ರೀಟು ಹಾದಿಗಳನ್ನಾಗಿಸಿ, ಇರುಳ ಕತ್ತಲಲ್ಲಿ ಝಗಮಗಿಸುವ ನಿಯಾನ್ ದೀಪಗಳಲ್ಲಿ ಮೀಯುವುದು. ಇದರಿಂದಾಗಿ ನಮ್ಮ ಅಂತಸ್ತು ಏರಿದೆಯೆಂದು ಅಂದುಕೊಳ್ಳುತ್ತೇವೆ, ನಮ್ಮೂರಿಗೆ ಸೌಂದರ್ಯ ಬಂತೆಂದು ಭ್ರಮಿಸುತ್ತೇವೆ. ಲಾಭವಾಗುವುದು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಮಾತ್ರ. ನಿಜಕ್ಕೂ ಅಭಿವೃದ್ಧಿಯೆಂದರೆ ಆ ಪ್ರದೇಶದ ಜನರ ತಲಾ ಆದಾಯವನ್ನು ಹೆಚ್ಚಿಸುವ ಪರಿಕ್ರಮ. ಅಂದರೆ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡೇ ಕೈಗಾರಿಕೆಗಳನ್ನು ಸ್ಥಾಪಿಸುವುದು, ಸ್ಥಳೀಯರನ್ನೇ ಉದ್ಯೋಗದಲ್ಲಿ ತೊಡಗಿಸುವುದು, ಕೃಷಿ ಚಟುವಟಿಕೆಗಳಿಗೆ ಪೂರಕವಾದ ಇತರ ಚತುವಟಿಕೆಗಳಾದ ಹೈನುಗಾರಿಕೆ, ಪ್ರಾಣಿಸಾಕಣೆ ಇತ್ಯಾದಿ ಕಸುಬುಗಳನ್ನು ಸಂವರ್ಧಿಸುವಂತೆ ಮಾಡುವುದಾಗಿದೆ. ದುರಂತವೆಂದರೆ ಸದ್ಯದ ವರ್ತಮಾನದಲ್ಲಿ ಮಳೆ ಬೆಳೆಗಳಿಲ್ಲದೇ ರೈತರು ಕಂಗಾಲಾಗಿದ್ದರೆ, ಕಾರ್ಮಿಕರು ಜಾಗತೀಕರಣದ ದಾಳಿಯಿಂದಾಗಿ ಮಂಕಾಗಿದ್ದಾರೆ. ಮಧ್ಯಮ ವರ್ಗದ ಜನ ಕೊಳ್ಳುಬಾಕ ಸಂಸ್ಕೃತಿಯ ಕಾರಣದಿಂದಾಗಿ ಕೆಲಸಕ್ಕೆ ಬಾರದ ವಸ್ತುಗಳನ್ನು ಕೊಳ್ಳುವುದರಲ್ಲಿ ನಿರತರಾಗಿ ನಮ್ಮ ಸಂಸ್ಕೃತಿಯ ಮೇಲಾಗುತ್ತಿರುವ ದಾಳಿಯನ್ನು ಅರಿಯದವರಾಗಿದ್ದಾರೆ. ಕೃಷಿಯನ್ನು ಬಲವಂತವಾಗಿ ನಿಲ್ಲಿಸಿ ಅಳಿದುಳಿದಿರುವ ಭೂಮಿಯನ್ನೂ ಎಸ್ ಇ ಜಡ್ ಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಇದ್ದ ಚೂರು ಪಾರು ಭೂಮಿಯನ್ನೂ ವಶಪಡಿಸಿಕೊಳ್ಳುವ ಕಾನೂನಿಗೆ ಕರುಣೆ ಎಂಬ ಶಬ್ದದ ಹಂಗೂ ಇದ್ದಂತಿಲ್ಲ. ಭೂಮಿ ಜೊತೆಗಿನ ಸಂಬಂಧ ವಾಣಿಜ್ಯೀಕರಣದ ಮೂಲ ಸ್ರೋತವಾಗಿ ಅದಿರು ಬಗೆದು ಮಾರುವವರ ತೆರೆದ ಮಾರುಕಟ್ಟೆಯಾಗಿರುವ ವರ್ತಮಾನದಲ್ಲಿ ನಮ್ಮದೆಂದು ಹೇಳಿಕೊಳ್ಳಲು ಉಳಿದಿರುವುದೇನೂ ಇಲ್ಲ. ನಮ್ಮ ಅಂಗಾಂಗಗಳನ್ನೆಲ್ಲ ವಿಶ್ವ ಸಂಸ್ಥೆಗೆ ಒತ್ತೆ ಇಟ್ಟಿರುವ ಕರಾಳ ದಿನಗಳಿವು. ಹೊಟ್ಟೆ ಪಾಡಿಗೆ ಮಾಡಲೇ ಬೇಕಿರುವ ಕೂಲಿಯ ಕೆಲಸ ನಮ್ಮೆಲ್ಲರ ಬಲವನ್ನು ನುಂಗಿ ನೊಣೆಯುತ್ತಿದೆ. ನಮ್ಮ ಬುದ್ಧಿ ಮತ್ತು ಇಂದ್ರಿಯಗಳು ಮಾಧ್ಯಮಗಳು ಸೃಷ್ಟಿಸಿರುವ ತಿರುಚಿದ ಸತ್ಯಗಳಲ್ಲಿ, ಜಾಹೀರಾತಿನ ಸುಳ್ಳುಗಳಲ್ಲಿ ಜಡಗೊಂಡಿವೆ. ಇನ್ನು ನಮ್ಮನ್ನಾಳುತ್ತಿರುವವರು ಸುಳ್ಳು ಸುಳ್ಳೇ ಸೃಷ್ಟಿಸಿದ ಅಭಿವೃದ್ಧಿಯ ಪಥದಲ್ಲಿ ನಮ್ಮ ಚಕ್ರವಿಲ್ಲದ ಬಂಡಿ ನಿಂತಲ್ಲೇ ನಿಂತಿದೆ. ನಾವೆಲ್ಲ ಬದುಕಿನ ಹಕ್ಕನ್ನೇ ಕಳೆದುಕೊಂಡವರಂತೆ ಕುಡಿಯುವ ನೀರನ್ನೂ ದುಡ್ಡು ಕೊಟ್ಟು ಕೊಳ್ಳುವ ಅನಿವಾರ್ಯದಲ್ಲಿ ಸಿಲುಕಿದ್ದೇವೆ. ಇಂಥ ಸಂಧಿಗ್ಢದಲ್ಲಿ ಸಾಹಿತ್ಯ ಎನ್ನುವುದು ಹೇಗೆ ತಾನೇ ಸತ್ವ ಭರಿತ ಮಾತುಗಳನ್ನಾಡಲು ಸಾಧ್ಯ? ಈ ಹಿನ್ನೆಲೆಯಲ್ಲೇ ಸಂಸ್ಕಾರವಿಲ್ಲದ ಶ್ರೀಮಂತಿಕೆಯನ್ನು ಸಾಹಿತ್ಯ ಪರಂಪರೆ ನಿರಂತರವಾಗಿ ಧಿಕ್ಕರಿಸುತ್ತಲೇ ಬಂದಿದೆ.
ಈ ಹಿಂದಿನ ನಾಲ್ಕು ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರುಗಳಾಗಿದ್ದ ಕೃ.ನ.ಮೂರ್ತಿ, ಬಿ.ಎನ್.ರಾಮಸ್ವಾಮಿ, ಡಾ. ಡಿ.ಎನ್.ಯೋಗೀಶ್ ಮತ್ತು ಡಾ. ರೇಣುಕಾ ಬಂಗಾರಿ ಅವರ ಸಾಹಿತ್ಯ ಸೇವೆಯನ್ನು ಸ್ಮರಿಸುತ್ತಲೇ ಸದ್ಯೋ ವರ್ತಮಾನದ ಸಾಹಿತ್ಯ ನಿರ್ಮಾರ್ತೃಗಳೆಂದು ಹೆಸರಾಗಿರುವ ಸ. ಉಷಾ ಮತ್ತು ಎಂ.ಆರ್. ಕಮಲ ಅವರನ್ನು ಅಭಿನಂದಿಸುತ್ತೇನೆ. ಡಾ. ಬಿ.ಡಿ.ಕುಮಾರ್, ಡಾ.ಎಚ್.ಅರ್.ಸ್ವಾಮಿ, ಡಾ.ಹರಶಿವಮೂರ್ತಿ, ಕೆ.ಸಿ.ಬಸಪ್ಪ, ಮಮತಾ ಅರಸೀಕೆರೆ, ಕೆ.ರಾಮಕೃಷ್ಣ, ಎನ್.ವಿ.ರಾಮಕೃಷ್ಣಪ್ಪ, ಎಚ್.ಡಿ.ದಿವಾಕರ್, ಪದ್ಮ ಮೂರ್ತಿ, ಪರಮೇಶ್, ಗ್ಯಾರಂಟಿ ರಾಮಣ್ಣ, ವೈಲೆಟ್ ಪಿಂಟೋ, ಡಾ.ವೈ.ಡಿ.ನಂಜುಂಡಪ್ಪ, ಜಾವಗಲ್ ಪ್ರಸನ್ನ, ಸಿ.ಎಂ. ಕಪನೇಗೌಡ, ಚಾಂದ್ ಬಾಷಾ, ಮುದ್ದುಮಲ್ಲೇಶ್,ಮಂಜುನಾಥರಾವ್, ತ್ರಿಮೂರ್ತಿ  ಮುಂತಾದವರನ್ನು ನೆನೆಯದಿದ್ದರೆ ಅರಸೀಕೆರೆಯ ಸಾಹಿತ್ಯ ಇತಿಹಾಸವನ್ನು ಹೇಳಿದಂತಾಗುವುದಿಲ್ಲ. ಅಲ್ಲದೇ ತಾಲ್ಲೂಕು ಸಾಹಿತ್ಯ ಪರಿಷತ್ತನ್ನು ಕಟ್ಟಿಬೆಳೆಸಿದ್ದಕ್ಕಾಗಿ ಎಸ್.ಪರಶಿವಮೂರ್ತಿ, ಜಿ.ಎಸ್.ಶಿವಲಿಂಗಪ್ಪ, ಜಿ.ಎಸ್.ಸಿದ್ದಪ್ಪ, ಎಚ್.ಡಿ.ತಿಮ್ಮಪ್ಪ, ಬಿ.ಎಸ್.ಲಕ್ಷ್ಮಣರಾವ್, ಬೊಮ್ಮಣ್ಣ, ಸಿ.ರಾಮಚಂದ್ರ, ಬಿ.ಎಸ್.ಸೇತೂರಾಂ, ಚಂದ್ರಶೇಖರ ಬಾಬು, ಜಾವಗಲ್ ವಸಂತ ಕುಮಾರ್, ಮೇಲೆಗೌಡ, ಸಿ.ಬಿ.ಕುಮಾರ್ ಮುಂತಾದವರನ್ನು ನೆನೆಯಲೇಬೇಕು.
ಈ ಬೆಳಿಗ್ಗೆಯ ಮೆರವಣಿಗೆಯನ್ನು ಇಲ್ಲಿ ನಡೆಯುವ ಕಾರ್ಯಕಲಾಪಗಳನ್ನೂ ಒಟ್ಟಿನಲ್ಲಿ ಸಮುದಾಯವೊಂದು ಪಡುವ ಸಂಭ್ರಮವನ್ನು ‘ವೇಸ್ಟ್’ಎಂದು ಮೂಗು ಮುರಿಯುವವರೂ ಇದ್ದಾರೆ. ಇಲ್ಲಿನೆಲ್ಲ ಚಟುವಟಿಕೆಗಳನ್ನು ಜಾತಿ ಮಸೂರದಿಂದ ನೋಡಿ ಕಿಚ್ಚು ಹಚ್ಚುವವರೂ ಇದ್ದಾರೆ. ಸತ್ಯವೆಂದರೆ ಇಂಥ ವಿಘ್ನ ಸಂತೋಷಿಗಳನ್ನು ನಮ್ಮ ಸಂಸ್ಕೃತಿ ಕಾಲು ಕಸ ಮಾಡಿದೆ. ಈ ಮೆರವಣಿಗೆ, ಸಂಭ್ರಮ, ಸಡಗರ, ಚಡಪಡಿಕೆಗಳೆಲ್ಲವೂ ಕನ್ನಡ ಸಮುದಾಯವನ್ನು ಜನಮಾನಸದಲ್ಲಿ ಅಚ್ಚಳಿಯದಂತೆ ಕಡೆಯುವ ಮತ್ತು ಕನ್ನಡದ ಅಸ್ಮಿತೆಗೆ ಬಲವನ್ನು, ಶ್ರೇಯಸ್ಸನ್ನೂ ಕೊಟ್ಟಿರುವ ಸತ್ಯವೆಂದು ನಾವೆಲ್ಲರೂ ಅರಿಯಬೇಕು.
ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಲ್ಲದಿದ್ದರೆ ಬದುಕು ನರಕವಾಗುವುದಂತೂ ಸತ್ಯ. ಸಾಹಿತ್ಯವೆಂದರೆ ಖ್ಯಾತ ಬರಹಗಾರರ ಪುಸ್ತಕಗಳನ್ನು ಓದುವುದಷ್ಟೇ ಅಲ್ಲ. ನಮ್ಮ ಮನೆಮನೆಗಳಲ್ಲಿ ಬಾಯಿಂದ ಬಾಯಿಗೆ ಹರಡಿರುವ ಮೌಖಿಕ ಸಾಹಿತ್ಯದ ಸಿರಿ ಮತ್ತು ಜಾನಪದದ ಸೊಗಡು ಪ್ರಕಟಿತ ಸಾಹಿತ್ಯಕ್ಕಿಂತ ಕಮ್ಮಿಯೇನಲ್ಲ. ಅಕ್ಷರಬಾರದವರೂ ಜೈಮಿನಿಯನ್ನು, ಲಕ್ಷ್ಮೀಷನ ಭಾರತವನ್ನು ಹಾಡುತ್ತಿದ್ದವರ ನೆಲವಿದು. ‘ಏಗ್ದಾಗೆಲ್ಲ ಐತೆ’ ಅಂತ ನಂಬಿದ ಸಿದ್ಧ ಪುರುಷರು ಮತ್ತು ಯೋಗಿಗಳೂ ಅವತರಿಸಿದ ಮಣ್ಣು ಇದು. ಇಂಥ ಕಸ್ತೂರಿಯ ಮಣ್ಣು ನೆಲದಲ್ಲಿ ಕನಸನ್ನು ನೇಯುತ್ತಿರುವ ನಾವೇ ಧನ್ಯರು. ಹಿಂದೊಂದು ಕಾಲದಲ್ಲಿ ಕನ್ನಡ ವೃತ್ತಿ ರಂಗಭೂಮಿಯ ಖ್ಯಾತನಾಮರು ಅರಸೀಕೆರೆಯಲ್ಲಿ ಮೊಕ್ಕಾಂ ಹೂಡದೇ ಇರುತ್ತಿರಲಿಲ್ಲವಂತೆ. ಗುಬ್ಬಿ ವೀರಣ್ಣನವರು, ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯನವರ ತಂದೆ ಹಿರಣ್ಣಯ್ಯನವರು ಈ ಊರಿನ ಅನ್ನದಾನಿಗಳನ್ನು ಉಳಿದೆಲ್ಲ ಊರುಗಳ ಕ್ಯಾಂಪಿನಲ್ಲಿ ಕೊಂಡಾಡುತ್ತಿದ್ದುದ್ದು ನಾಟಕಾಸಕ್ತರಿಗೆಲ್ಲರಿಗೂ ತಿಳಿದ ವಿಷಯ. ಖ್ಯಾತ ನಟ ಬಾಲಕೃಷ್ಣ ಇದೇ ಊರಿನವರು. ವರನಟ ರಾಜಕುಮಾರ್ಗೆ ‘ನಟಸಾರ್ವಭೌಮ’ ನೆಂಬ ಬಿರುದು ಕೊಟ್ಟಿದ್ದು ಅರಸೀಕೆರೆಯ ಕಳ್ಳನ ಕಟ್ಟೆಯ ರಂಗಮಂಟಪದಲ್ಲಿ ಎನ್ನುವುದು ಬಹುತೇಕ ಹಿರಿಯರಿಗಷ್ಟೇ ನೆನಪಿರುವ ವರ್ತಮಾನ. ಇಂಥ ಈ ಊರಲ್ಲಿ ಸದ್ಯ ರಂಗಚಟುವಟಿಕೆಗಳು ಹೇಳಿಕೊಳ್ಳುವ ಪ್ರಮಾಣದಲ್ಲಿ ನಡೆಯದಿದ್ದರೂ ಕೆಆರ್ವಿಪಿಯ ಎಚ್ ಆರ್ ಸ್ವಾಮಿ ಮತ್ತು ಮಮತಾ ಇನ್ನೂ ನಾಟಕಗಳನ್ನು ನಿರ್ಮಿಸುವುದರಲ್ಲಿ ನಿರತರಾಗಿರುವುದು ಸಮಾಧಾನದ ವಿಚಾರ. ಕಳೆದ ನಾಲ್ಕೈದು ವರ್ಷಗಳಿಂದ ಸಾಣೇಹಳ್ಳಿಯ ಶಿವಸಂಚಾರದ ನಾಟಕಗಳನ್ನು ತರಳಬಾಳು ಯುವ ವೇದಿಕೆ ಆಹ್ವಾನಿಸುತ್ತಿದೆಯಾದರೂ ರಾಜ್ಯಾದ್ಯಂತ ಸಂಚರಿಸುವ ನೀನಾಸಂ ಮತ್ತು ರಂಗಾಯಣವನ್ನೂ ನಮ್ಮೂರಿಗೆ ಕರೆ ತರುವ ಪ್ರಯತ್ನ ಮಾಡದಿರುವುದು ಏಕೋ ಅರ್ಥವಾಗದ ವಿಷಯ. ಎಂ ಎಸ್ ಸುಬ್ಬುಲಕ್ಷ್ಮಿ, ಜೇಸುದಾಸ್, ಬಾಲಮುರಳಿ ಕೃಷ್ಣ, ಕುನ್ನೈಕುಡಿ, ಕದ್ರಿ ಗೋಪಾಲನಾಥರಂಥ ಕಲಾವಿದರನ್ನು ಕರೆಸಿ ಸಂಗೀತದ ರಸದೌತಣ ನೀಡುತ್ತಿದ್ದ ಗಣಪತಿ ಸೇವಾಸಮಿತಿ ತನ್ನ ಮರು ಜೀವಂತಿಕೆಯನ್ನು ಕಳೆದ ವರ್ಷದಿಂದ ಪಡೆದದ್ದೂ ಸಂಗೀತಾಸಕ್ತರಿಗೆಲ್ಲ ಖುಷಿಯ ವಿಚಾರ. ಮಹಾತ್ಮ ಪಿಕ್ಚರ್ಸ್ ಸಂಸ್ಥೆಯ ಹುಟ್ಟಿದೂರು ಅರಸೀಕೆರೆ. ಕನ್ನಡ ಚಿತ್ರ ರಂಗದ ಖ್ಯಾತ ಪೋಷಕ ನಟ ಶ್ರೀ ದೊಡ್ಡಣ್ಣ ನಮ್ಮೂರಿನವರೇ ಅನ್ನುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ. ಗುರುಪ್ರಸಾದ್ ನಿರ್ದೆಶನದ ಹೊಸ ಸಿನಿಮಾ ‘ಡೈರೆಕ್ಟರ್ಸ್ ಸ್ಪೆಷಲ್’ ಚಿತ್ರದ ನಾಯಕ ನಟ ಧನಂಜಯ ಕಾಳೇನಹಳ್ಳಿ ಹಟ್ಟಿಯವರು ಅನ್ನುವುದು ಖುಷಿಯ ವಿಷಯ. ಸದ್ಯ ಮುಚ್ಚಿರುವ ವೆಂಕಟೇಶ್ವರ ಚಲನಚಿತ್ರ ಮಂದಿರ ಕಲಾಮಂದಿರವಾಗಿ ಪರಿವರ್ತಿತವಾಗುತ್ತಿರುವುದು ರಂಗಾಸಕ್ತರೆಲ್ಲರಿಗೂ ಹೊಸ ಹುಮ್ಮಸ್ಸನ್ನು ನೀಡಿದೆಯೆಂದರೆ ಅದೇನೂ ಅತಿಶಯೋಕ್ತಿಯಲ್ಲ.
ರಾಜಕೀಯ / ಸಾಮಾಜಿಕ ಆಶೋತ್ತರಗಳು:
1. ಮಳೆಯ ನೀರನ್ನೇ ನಂಬಿರುವ ಬಯಲು ಪ್ರದೇಶದ ಈ ತಾಲ್ಲೂಕಿಗೆ ನೀರಾವರಿ ಎನ್ನುವುದು ಕನಸಿನ ಮಾತು. ಏತ ನೀರಾವರಿಯ ಕನಸನ್ನು ಬಿತ್ತಿರುವ ಶಾಸಕರು ತಮ್ಮೆಲ್ಲ ಪ್ರಯತ್ನಗಳನ್ನು ಕ್ರೋಢೀಕರಿಸಿ ಅದನ್ನು ಆಗುಗೊಳಿಸಲೆಂಬುದು ಎಲ್ಲರ ಆಸೆ.
2. ಅಂತರ್ಜಲದ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಿರುವುದೇ ಈ ಹೊತ್ತಿನ ಬಹುತೇಕ ಸಮಸ್ಯೆಗಳ ಮೂಲ. ಮೂರನೇ ಮಹಾಯುದ್ಧವೆಂಬುದೇನಾದರೂ ನಡೆದರೆ ಅದು ನೀರು ಹಂಚಿಕೆಯ ಕಾರಣಕ್ಕಾಗಿ ಆಗುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯ ಬೇಡ. ಕುಡಿಯುವ ನೀರಿಗೇ ತತ್ವಾರವೆದ್ದಿರುವ ಕಾಲದಲ್ಲಿ ಜಲ ಮರು ಪೂರಣವೊಂದೇ ಇರುವ ಏಕೈಕ ದಾರಿ. ರೈತರು ತಮ್ಮ ಹೊಲಗಳಲ್ಲಿ ಇಂಗುಗುಂಡಿಗಳನ್ನು, ಒಡ್ಡುಗಳನ್ನೂ ನಿರ್ಮಿಸುವುದರ ಮೂಲಕ ಅಂತರ್ಜಲದ ಪ್ರಮಾಣವನ್ನು ಕಾಪಾಡಬೇಕು. ಸರ್ಕಾರದ ವಿವಿಧ ಯೋಜನೆಗಳನ್ನು ಕಡೆಯ ಮನುಷ್ಯನವರೆಗೆ ಮುಟ್ಟಿಸುವ ಪ್ರಯತ್ನಕ್ಕೆ ಎಲ್ಲ ನಾಗರೀಕರೂ ಶ್ರಮಿಸಬೇಕು.
3. ಸ್ವಾತಂತ್ರೋತ್ತರದ ಅರವತ್ತು ವರ್ಷಗಳ ಇತಿಹಾಸಕ್ಕೆ ಹೋಲಿಸಿದರೆ ಕಳೆದ ಕೆಲವು ವರ್ಷಗಳಲ್ಲಿ ನಗರದ ಕುಡಿಯುವ ನೀರಿನ ಸಮಸ್ಯೆ ತಕ್ಕಮಟ್ಟಿಗೆ ಸುಧಾರಿಸಿದೆ. ಹೇಮಾವತಿಯನ್ನು ತಿಪಟೂರಿನ ಮೂಲಕ ಪಡೆಯುತ್ತಿದ್ದ ನಮಗೆ ಇದೀಗ ಚನ್ನರಾಯಪಟ್ಟಣದ ಗನ್ನಿಗಡದಿಂದ ನೇರವಾಗಿ ಹರಿಸುವ ಉದ್ದೇಶದಲ್ಲಿರುವ ಶಾಸಕರು ಆಧುನಿಕ ಭಗೀರಥನಂತೆ ಕಾಣುತ್ತಾರೆಂದರೆ ವಿರೋಧಿಗಳೂ ಅಲ್ಲಗಳೆಯಲಾರರು. ಯಗಚಿ ನದಿಯ ನೀರು ತಾಲ್ಲೂಕಿನ ಹಲವು ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಬಲ್ಲುದು.
4. ತೆಂಗು ಬೆಳೆಗಾರರ ಆತಂಕವಂತೂ ಗಗನ ಮುಟ್ಟಿದೆ. ಮಳೆ ಇಲ್ಲದೇ ಅಂತರ್ಜಲದ ಪ್ರಮಾಣ ಕುಸಿದು ತೆಂಗಿನ ತೋಟಗಳೆಲ್ಲ ಸೊರಗಿ ನಿಂತಿವೆ. ಕಲ್ಪವೃಕ್ಷವೆಂದು ಕರೆಯುವ ತೆಂಗು ನತಮಸ್ತಕವಾಗಿ ನಿಂತಿದೆ. ನೀರಾವರಿ ಕಾಣದ ರೈತ ‘ನೀರಾ’ ಮೂಲಕ ಕಂಡಿದ್ದ ಕನಸುಗಳು ಕಮರಿ ಹೋಗಿವೆ. ಸಕರ್ಾರದ ಮಟ್ಟದಲ್ಲಿ ಅದನ್ನೆಚ್ಚರಿಸುವಂತೆ ದೊಡ್ಡ ಪ್ರಮಾಣದಲ್ಲಿ ಚಳವಳಿಯೊಂದು ನಡೆಯಬೇಕಿದೆ. ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರು ಮತ್ತು ರಕ್ಷಣಾ ವೇದಿಕೆಯ ನಾರಾಯಣ ಗೌಡರು ಹುಟ್ಟಿದೂರಿನ ಋಣ ತೀರಿಸಲಾದರೂ ಪ್ರಸ್ತಾಪಿತ ಚಳವಳಿಯ ನೇತೃತ್ವ ವಹಿಸಬೇಕಾಗಿದೆ. ಅದಕ್ಕಾಗಿ ತೆಂಗನ್ನು ಮುಖ್ಯ ವ್ಯವಸಾಯವನ್ನಾಗಿ ಮಾಡಿಕೊಂಡಿರುವ ಅರಸೀಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ, ಹೊಸದುರ್ಗ ಮತ್ತು ಕಡೂರು ತಾಲ್ಲೂಕುಗಳನ್ನು ಒಗ್ಗೂಡಿಸಿ ಈ ಎಲ್ಲ ಊರುಗಳಿಗೂ ಕೇಂದ್ರ ಸ್ಥಾನದಲ್ಲಿರುವ ಅರಸೀಕೆರೆಯನ್ನೇ ಜಿಲ್ಲಾಕೇಂದ್ರವಾಗುಳ್ಳ ಹೊಸ ಕಲ್ಪತರು ಜಿಲ್ಲೆಯನ್ನು ನಿರ್ಮಾಣಮಾಡಬೇಕಿದೆ.
5. ಜಿಲ್ಲಾ ಕೇಂದ್ರ ಹಾಸನವನ್ನು ಸಂಪರ್ಕಿಸುವ ರಸ್ತೆ ದುರಸ್ತಿಯಾಗದೇ ದಶಕಗಳೇ ಸಂದಿವೆ. ರಸ್ತೆ ನಿರ್ಮಾಣದ ಕೆಲಸದಲ್ಲಿ ರಾಜಕೀಯ ಮಾಡದೇ ಎಲ್ಲ ನಾಯಕರೂ ಸಂಯಮದಿಂದ ವರ್ತಿಸಬೇಕಾಗಿದೆ.
ನನ್ನ ಮಾತು ಮುಗಿಸುವ ಮೊದಲು ಮತ್ತೆ ಪಟ್ಟಿಮಾಡಲೇಬೇಕಿರುವ ಅಂಶಗಳೆಂದರೆ;
ಕನ್ನಡ ಅಂದರೆ ಸಾವಿರ ವರ್ಷಗಳಿಂದ ನಮ್ಮ ಪೂವರ್ಿಕರು ಜತನದಿಂದ ರೂಪಿಸಿ ಶೇಖರಿಸಿಕೊಂಡು ಬಂದಿರುವ ಒಂದು ಸಮುದಾಯದ ವಿವೇಕ. ಆ ವಿವೇಕವು ಕಾವ್ಯವಾಗಿ, ನಾಟಕವಾಗಿ, ಕಾದಂಬರಿಯಾಗಿ, ಕಥೆಗಳಾಗಿ, ಈ ನೆಲದ ಹೋರಾಟಗಳಾಗಿ, ಚಿಂತನೆಗಳಾಗಿ ರೂಪುಗೊಂಡಿದೆ ಮತ್ತು ಅದು ಮುಂದುವರಿಯುತ್ತಲೂ ಇದೆ ಎಂಬುದು ನನ್ನ ನಮ್ರ ತಿಳುವಳಿಕೆ.
ಇಂಥ ಘನವಾದ ವಿವೇಕದಲ್ಲಿ ಸಹಿಷ್ಣುತೆ ಎಂಬುದು ಕೂಡ ಸ್ಥಾಯಿಯಾಗಿ ನಿಂತಿರುವ ಗುಣಲಕ್ಷಣ. ಆ ಅಂಥ ಸಹಿಷ್ಣುತೆಯೇ ಹಲವು ತತ್ವಗಳಿಗೆ ಕಾರಣವಾಗಿ ‘ದಯೆ ಇಲ್ಲದ ಧರ್ಮ ಅದಾವುದಯ್ಯ’ ಎಂದು ಕೇಳುತ್ತಲೇ, ಪರಧರ್ಮ ಸಹಿಷ್ಣುತೆಯನ್ನು ಅಭ್ಯಾಸ ಮಾಡಿಕೊಳ್ಳಿ ಎಂಬ ದೊಡ್ಡ ವಿವೇಕವನ್ನು ಸಮುದಾಯಕ್ಕೆ ಕೊಟ್ಟಿದೆ. ಇಂಥದನ್ನೇ ನಾವು ಕೆಲವರು ಸಾಹಿತ್ಯ, ಕಾವ್ಯ, ರಾಜಕಾರಣ, ರಂಗಭೂಮಿಯ ಮೂಲಕ ಪದೇಪದೇ ನಿರ್ವಚಿಸುತಿದ್ದೇವೆ .
ಹಲವಾರು ಅವಸ್ತಾಂತರಗಳಿಗೆ ಒಳಗಾಗಿಯೂ ವೃದ್ಧಿಸುತ್ತಲೇ ಇರುವ ಈ ಕನ್ನಡವೇ ಕಲಿಸಿದ ವಿವೇಕವು, ಬದುಕಿನ ವಿವೇಕವಾಗಿ ಹಾಗೂ ಬದುಕುವ ವಿವೇಕವಾಗಿ ನಮ್ಮ ಮುಂದಿದೆ. ಇಂಥ ವಿವೇಕವು ಕಾಲಾಂತರದಲ್ಲಿ ಹೊಸ ಅರ್ಥಗಳಿಗೆ, ವ್ಯಾಖ್ಯಾನಗಳಿಗೆ ಕಾರಣವಾಗುವುದು ಸಹಜ ಮತ್ತು ಸತ್ಯದ ವಿಷಯವಾಗಿದೆ.
ಕನ್ನಡ ಅಂದರೆ ದೈಹಿಕ ಶ್ರಮ ಹಾಗೂ ಮಾನಸಿಕ ಶ್ರಮ ಒಟ್ಟುಗೂಡಿದ ಒಂದು ಸಮುದಾಯದ ದೊಡ್ಡ ಜೆಸ್ಚರ್. ಅದು ಸಾಹಿತ್ಯ, ಚಿತ್ರಕಲೆ, ರಂಗಭೂಮಿ, ಸಂಗೀತ, ಹೋರಾಟ, ಸಂಘಟನೆಯ ಕ್ರಿಯೆಗಳ ಮೂಲಕ ಇಲ್ಲಿನ ಜನರನ್ನ, ಸಮಾಜವನ್ನ, ರಾಜಕಾರಣವನ್ನ ರೂಪಿಸಿದೆ.
ಇಂಥ ಸಮಷ್ಠಿ ಕ್ರಿಯೆಗಳಿಗೆ ಅನ್ಯ ಭಾಷೆಯ ಸಂಸ್ಕೃತಿಗಳೂ ಪ್ರಭಾವಬೀರುವ ಕಾರಣದಿಂದಾಗಿ ಸಮುದಾಯದ ಪ್ರಜ್ಞೆಯೂ ಜಾಗೃತಗೊಳ್ಳುತ್ತದೆ ಎಂಬುದು ಕೂಡ ನಾವು ಒಪ್ಪಿಕೊಳ್ಳಲೇಬೇಕಾದ ಅಂಶ.
ಇಂಡಿಯಾ ದೇಶ ಅನ್ನುವ ಈ ವಿಶಾಲ ಭಿತ್ತಿಯಲ್ಲಿ ಕನ್ನಡದ ಜಗತ್ತು ತನ್ನನ್ನು ತಾನು ರೂಪಿಸಿಕೊಂಡಿದೆ ಹಾಗೂ ಪುನರ್ ರೂಪಿಸಿಕೊಳ್ಳುತ್ತಲೂ ಇರುತ್ತದೆ. ಈ ಇಂಥದನ್ನೇ ನಾನು ಸಮುದಾಯದ ವಿರಾಟ್ ಅಭಿವ್ಯಕ್ತಿ ಎಂದು ಕರೆಯುತ್ತೇನೆ. ಈ ಅಭಿವ್ಯಕ್ತಿಯು ಆದಿಕವಿ ಪಂಪನಿಂದ ಹಿಡಿದು, ಈ ಹೊತ್ತಿನಲ್ಲಿ ಬರೆಯುತ್ತಿರುವ ಬರಹಗಾರರ ತನಕ ಒಳವಿವೇಕವಾಗಿ ಮುಂದುವರೆದುಕೊಂಡು ಬಂದಿದೆ.
ನಮ್ಮ ಈ ಸಮಕಾಲೀನ ಕನ್ನಡ ಜಗತ್ತಿನಲ್ಲಿ ಭಾಷೆಯನ್ನು ಒಂದು ಆಯುಧವಾಗಿ, ಅಸ್ತ್ರವಾಗಿ ಬೆಳಸುವ ಅವಾಂತರಕಾರಿ ಚಟುವಟಿಕೆ ಕಂಡುಬರುತ್ತಿರುವುದು ನಮ್ಮ ಕನ್ನಡದ ವಿವೇಕಕ್ಕೆ ದೊಡ್ಡ ಪೆಟ್ಟಾಗಿದೆ ಎಂದು ಭಾವಿಸುತ್ತೇನೆ. ಕನ್ನಡ ಭಾಷೆ ಎಂದರೆ ಹಲವು ಭಾಷೆಗಳಿಂದ ವಿವೇಕವನ್ನು ಕಲಿತು ಈ ನೆಲದ ವಿವೇಕವಾಗಿ ರೂಪಿಸಿಕೊಂಡಿರುವ ಒಂದು ದೊಡ್ಡ ಸಂಚಯಿತ ಕುಶಲತೆ. ಅಂಥ ಕುಶಲತೆ ಹಾಗೂ ಗಟ್ಟಿತನಗಳೇ ನಮ್ಮನ್ನು ಪೊರೆಯುತ್ತಾ ಬಂದಿದೆ ಎಂದೂ ನಾನು ಭಾವಿಸುತ್ತೇನೆ.
ನನ್ನ ಸಮಕಾಲೀನ ಕಾಲದಲ್ಲಿ ಕನ್ನಡದ ಸಮಾಜವಾದೀ ಚಿಂತನೆಯು ರೂಪಿಸಿದ ಮುಖ್ಯ ಹೋರಾಟಗಳಾದ ರೈತ ಹಾಗೂ ದಲಿತ ಚಳುವಳಿಗಳು ಹೊಸ ಜನಾಂಗವು ಸಾಹಿತ್ಯವನ್ನು ನೋಡುವ ಕ್ರಮವೊಂದನ್ನು ರೂಪಿಸಲೆತ್ನಿಸಿದೆ. ಸಾಹಿತ್ಯವನ್ನಷ್ಟೇ ಅಲ್ಲದೆ ಅನ್ಯಕಲೆಗಳನ್ನೂ ಕೂಡ ಪ್ರಭಾವಿಸಿದೆ. ಈ ಚಳುವಳಿಗಳ ಮುಖ್ಯ ಭೂಮಿಕೆ ಗ್ರಾಮ ಅಥವಾ ಗ್ರಾಮಸಮಾಜ. ಅಲ್ಲಿನ ಆಥರ್ಿಕ, ಸಾಂಸ್ಕೃತಿಕ ಹಾಗೂ ರಾಜಕಾರಣದ ಆಯಾಮಗಳನ್ನು ಪರಿಶೀಲಿಸಿಕೊಳ್ಳುವುದು ಜಾಗತೀಕರಣದ ಸಂದರ್ಭದಲ್ಲಿ ತುಂಬಾ ಮುಖ್ಯವಾದುದು ಎಂದು ನಾನು ತಿಳಿದಿದ್ದೇನೆ.
ಇಲ್ಲಿಗೆ ನನ್ನ ಈ ಭಾಷಣವನ್ನು ಮುಗಿಸುತ್ತಿದ್ದೇನೆ. ಸರ್ಕಾರಕ್ಕಾಗಲೀ, ಸಮುದಾಯಕ್ಕಾಗಲೀ ಕರೆಕೊಡುವ ಯಾವ ಆಕರ್ಷಕ ಹೇಳಿಕೆಗಳಾಗಲೀ ಅಧಿಕಾರವಾಗಲೀ ಇರದ ನಾನು ಈ ಅಕ್ಷರ ಜಾತ್ರೆಯ ಉತ್ಸವ ಮೂರ್ತಿ ಮಾತ್ರ. ಮೂಲ ದೇವರು ಸಾಹಿತ್ಯ ಪರಿಷತ್ತೆಂಬ ಕನ್ನಡಿಗರ ಏಕೈಕ ಸಂಸ್ಥೆ. ಅರ್ಚನೆ, ಸಹಸ್ರನಾಮ, ಅವಧಾನಗಳೇನಿದ್ದರೂ ಸಲ್ಲಬೇಕಿರುವುದು ಮೂಲದೇವರಿಗೆ. ಮೆರವಣಿಗೆ, ಉತ್ಸವಕ್ಕಷ್ಟೇ ಉತ್ಸವಮೂರ್ತಿಯ ಅಗತ್ಯ. ಮಾರುಕಟ್ಟೆಯ ಜಾಹೀರಾತು ಹಾಗೂ ಟೆಲಿವಿಷನ್ ಮಾಧ್ಯಮ ಸ್ಟೋರಿಗಳಿಗೆ ಶೃತಿಗೊಂಡಿರುವ ನಮ್ಮ ಮಿದುಳನ್ನು ಸಾಹಿತ್ಯ ಮತ್ತು ಸಂಸ್ಕೃತಿಗಳ ಚಿಂತನೆಗೆ ಒಂದೇ ಒಂದು ಕ್ಷಣ ಒಮ್ಮೆ ಒಪ್ಪಿಸಿ ನೋಡಿ, ನಿಮ್ಮೊಳಗೇ ಎಂಥ ಮಾರ್ಪಾಡಾಗುವುದೆಂದು ಅನುಭವಿಸಿ ಎಂದಷ್ಟೇ ತಮ್ಮಲ್ಲಿ ನಮ್ರವಾಗಿ ವಿನಂತಿಸಿಕೊಳ್ಳುತ್ತೇನೆ.
ಮತ್ತೊಮ್ಮೆ ಎಲ್ಲರಿಗೂ ನಮಸ್ಕಾರ.
(ಚಿತ್ರ ಕೃಪೆ  ಅವಧಿ)