ಬೆಂಕಿ ಕಡ್ಡಿ- ಬೆಳಕು,ಶಾಖ ಮತ್ತು ಉರಿಯ ಚಿಕ್ಕತುಂಡು.ನಾವೆಲ್ಲರೂ ಈ ಲೌಕಿಕದ ಬೆಂಕಿಯಲ್ಲಿ ಬೇಯುತ್ತಲೇ ಮತ್ತೊಂದು ಬೆಳಕು, ಶಾಖ ಮತ್ತು ಉರಿಯನ್ನು ಸೃಜಿಸುತ್ತಿರುವವರು.ಅದಕ್ಕೆಂದೇ ಈ ಬರಹಗಳ ಶೀರ್ಷಿಕೆ "ಬೆಂಕಿಕಡ್ಡಿ". ಈಗಾಗಲೇ ಪ್ರಕಟಿಸಿರುವ ಸಂಕಲನಗಳಿಂದ ಮತ್ತು ಹೊಸ ಪದ್ಯ ಹಾಗೇ ಆಕಾಶವಾಣಿಯ ಚಿಂತನಕ್ಕೆ ಬರೆದ ಲೇಖನಗಳನ್ನೂ ಸೇರಿಸುವ ಇರಾದೆ ಈ ಬ್ಲಾಗಿಗನಿಗೆ.
ಒಟ್ಟು ಪುಟವೀಕ್ಷಣೆಗಳು
ಶನಿವಾರ, ನವೆಂಬರ್ 15, 2008
ಅವನು ಮತ್ತು ನೆರಳು
ತನಗಿಂತಲೂ ದೊಡ್ಡದಾಗುತ್ತಿರುವ
ತನ್ನದೇ ನೆರಳಿಗೆ ಹೆದರಿ
ಗಡಗಡ ನಡುಗಿ
ಅದರಿಂದ ತಪ್ಪಿಸಿಕೊಳ್ಳಲು
ಓಡಿದ, ಓಡಿದ, ಓಡಿದ.....
ದರಿದ್ರದ ನೆರಳು
ಅವನ ಇತಿಹಾಸ ನುಂಗಿ
ಬೃಹದಾಕಾರವಾಗಿ ಬೆಳೆದು
ಗಹಗಹಿಸಿ ನಕ್ಕಿತು.
ತಪ್ಪಿಸಿಕೊಂಡಷ್ಟೂ ಮತ್ತೆ
ಕತ್ತಿಗೇ ಹತ್ತಿ ಕೂತು
ಕತ್ತಿ ಝಳುಪಿಸಿ
ಭೂತವನ್ನಾವಹಿಸುವ ವರ್ತಮಾನ
ಮತ್ತದರ ದುರಂತ ಛಾಯೆ....
ಮನೆಯ ಮಾಡಿಗೆ ಏರಿ
ಮಂಡಿಗೆ ತಲೆ ತೂರಿಸಿ ಕೂತು ಅತ್ತ
ಕಣ್ಣು ತೆರೆದರೇನಾಶ್ಚರ್ಯ?
ನೆರಳೂ ಅವನ ಸಮನಾಗಿ
ಬೆನ್ನ ಮೇಲೆ ಕೈ ಇಟ್ಟು ಸಂತೈಸಿದೆ....
ಬಿಕ್ಕುತ್ತಲೇ ಅದಕ್ಕೆ ಕೈ ಮುಗಿದು
ಬೆಳಕಿನತ್ತ ಮೆಲ್ಲಗೆ ತವಳಿದ.
ಅರೆ, ನೆರಳೀಗ ಮಾಯವಾಗಿದೆ
ಅವನನ್ನೆದುರಿಸದೇ ಕತ್ತಲಿಗೆ ಓಡಿದೆ....
ಅವನ ಮುಖದಲ್ಲೊಂದು ಮಂದಹಾಸ
ಮುಂದಿನ ದಾರಿ ಎಷ್ಟು ಸುಸೂತ್ರ?!
*****
ನಿರ್ಧಾರ
ಹುಟ್ಟಿದ ಶಾಖವ ಕಣ್ಣಿಗೊತ್ತಿಕೊಳ್ಳುವ ಅಪ್ಪ,
ಬೆರಳಿಗೆ ಬೆರಳು ಹೊಸೆದು
ಸೂರ್ಯನನೂ ದಿಟ್ಟಿಸುತ್ತಾನೆ....
ಹೀಗೆ ಇರದ ಶಾಖವ ಹುಟ್ಟಿಸಿ
ಹಾಗೇ ಉರಿವ ಸೂರ್ಯನನೂ ತಗ್ಗಿಸಿ
ಬ್ರಹ್ಮಾಂಡದ ಸಂತಸವನೆಲ್ಲ
ತನ್ನೊಳಕ್ಕೆ ಎಳೆದುಕೊಂಡು ಸುಖಿಸುತ್ತಾನೆ....
ಕಣ್ಣು, ಕಿವಿ, ಮೂಗು, ತುಟಿ, ನಾಭಿ
ಇತ್ಯಾದಿ ಸೂಕ್ಷ್ಮಗಳನ್ನೆಲ್ಲ ಮುಟ್ಟಿಕೊಳ್ಳುತ್ತಲೇ
ಪ್ರತಿ ಆಚಮನಕ್ಕೂ ಮತ್ತೆ ಮತ್ತೆ
ತನ್ನೊಳಗನ್ನು ಮೀಯುಸುತ್ತಲೇ ಇದ್ದಾನೆ....
ನಾನು ಏನೆಲ್ಲ ಭೌತಿಕದ ಸವಲತ್ತುಗಳಿದ್ದರೂ
ನನ್ನೊಳಕ್ಕಿಳಿಯದ ನನ್ನದೇ ಪಾತ್ರವನ್ನು ದ್ವೇಷಿಸುತ್ತಿದ್ದೇನೆ...
ಅದಕ್ಕೇ ನನ್ನ ಮಗ ಅವನಜ್ಜನ ಜೊತೆಗಿರುವಷ್ಟೂ ಹೊತ್ತು
ಅವನನ್ನು ಈ ಇಹದ ಲೌಕಿಕಕ್ಕೆಳೆಯದಿರಲು ನಿರ್ಧರಿಸಿದ್ದೇನೆ.
********
ಭಾನುವಾರ, ನವೆಂಬರ್ 2, 2008
aLate
ಹಿಂದೆಂದೋ ರಾಮಾನುಜನ್ ಪರಿಚಯಿಸಿದ್ದ
ಆ ಅದೇ ಅಂಗುಲದ ಹುಳು
ಮೊನ್ನೆ ಮಾರ್ಕೆಟ್ಟಲ್ಲಿ ಅಚಾನಕ್ಕಾಗಿ ಸಿಕ್ಕು
ಉಭಯ ಕುಶಲೋಪರಿ ಕೇಳಿತು:
ಗುಬ್ಬಚ್ಚಿಯ ಬಾಲ, ಮುದಿ ಗೂಬೆಯ ಹೊಟ್ಟೆ
ಹಂಸದ ಕತ್ತು, ಹಾಗೇ ಹಾಲಕ್ಕಿಯ ಮೂಗು
ಕೊಕ್ಕರೆಯಂತೇ ಇದ್ದ ಇನ್ಯಾರದೋ ತೆಳ್ಳನೆಯ ಕಾಲು,
ಉದ್ದವಾಗುವ ನಾಲಿಗೆ, ಕುಕ್ಕುವ ಕೊಕ್ಕು,
ಯೋನಿ, ಲಿಂಗಗಳನ್ನಳೆಯುವಾಗಲೂ ಸಂತ-
ನಂತಿದ್ದೂ, ಹಾಡನ್ನಳೆಯುವ ನೆವದಲ್ಲಲೆದೂ ಅಳೆದೂ
ಸವೆದಿರುವ ತನ್ನ ಅಳತೆಯ ಪಟ್ಟಿ-
ಗೆ ಪ್ರಮಾಣ ಪತ್ರ ಕೊಟ್ಟವರ ಪಟ್ಟಿ ಬಿಡಿಸಿಟ್ಟಿತು.
ಹಾಗೇ ಬುದ್ಧ, ಬಸವ, ಗಾಂಧಿ, ಏಸು
ಕನಕ, ಪುರಮ್ದರರ ಜೊತೆಗೇ ಬೆರೆವ
ಅದೆಷ್ಟೆಷ್ಟೋ ಹೆಸರುಗಳನುದ್ಧರಿಸಿತು.
ನಿಖರವಾಗದವರಳತೆ ಸೋತೆನೆಂದಿತು.
ಇಷ್ಟಿಷ್ಟೇ ಎಂದು ತುಂಬಿಸಿಕೊಂಡಿದ್ದ ಕೈಯ ಚೀಲ
ಭಾರವೆನ್ನಿಸಿ ಕೈ ಬದಲಿಸಲು, ದೃಷ್ಟಿ ಬದಲಿಸಿದೆ.
ಆ ಹುಳು ಮತ್ತೆಲ್ಲೋ ಮರೆಯಾಗಿ ಹೋಯಿತು!
ಮಗ ಬರೆದ ಚಿತ್ರ
ಬಣ್ಣ ಮಾಸಿರುವ ಒಳ ಗೋಡೆಗಳ ಮೇಲೆ
ಮಗ ಬಿಡಿಸಿದ ಎಷ್ಟೊಂದು ಚಿತ್ರಗಳು,
ಆನೆ ಕುದುರೆ ಸಾಲು, ಜೊತೆಗೆ ಸಾಗುತ್ತಿದೆ ರೈಲು
ಮೊನ್ನೆ ಬಿಡಿಸಿದ್ದ ಚಿತ್ರಕ್ಕೆ ಇವತ್ತು ಫಿನಿಶಿಂಗ್ ಲೈನು!
ಪೆನ್ನು, ಪೆನ್ಸಿಲ್, ಕಡೆಗೆ ಕೈಗೆ ಸಿಕ್ಕಿದ ಚೂಪು ಚಾಕು
ಗೆರೆ ಕೊರೆಯುವುದಕ್ಕೆ ಏನೋ ಒಂದು ಬೇಕು
ನಿರ್ದಿಷ್ಟ ಅಸ್ಪಷ್ಟಗಳ ನಡುವೆ ಅಸಂಗತದ ಹಾರ
ಮಾಮೂಲಿನಂತಲ್ಲದೇ ಏನನ್ನೋ ಧ್ಯಾನಿಸುವ ಹುನ್ನಾರ!
ಸೋಪು ಬುರುಜಿನ ಗಟ್ಟದ್ರಾವಣದಲ್ಲಿ ಸ್ಪಂಜನ್ನದ್ದಿ
ಗೋಡೆಯೊರಸುವ ಕಾಯಕಕ್ಕಿಳಿದಇವಳು,
ಏಕೋ, ಗೆರೆಗಳಿಗಿರುವ ಜೀವಂತಿಕೆಯನ್ನರಿಯುವುದೇ ಇಲ್ಲ:
ಅಥವ
ಅಳಿಯದೇ ಉಳಿದುಬಿಡುವ ಚಿತ್ರಗಳಿಗೆ ಅಂಜಿದ್ದಾಳೋ,
ಅದೂ ಅರ್ಥವಾಗುತ್ತಿಲ್ಲ!
*********
ಶನಿವಾರ, ನವೆಂಬರ್ 1, 2008
ಉರಿಯ ಉಯ್ಯಾಲೆಯಲಿ.......
ಚರಿತ್ರೆಯ ಹಾಳೆಗಳನ್ನೆಲ್ಲ ತಿರುವಿ
ಉಳಿದ ಭಗ್ನಾವಶೇಷಗಳ ನಡುವೆ-
ಮದೋನ್ಮತ್ತ ರಾಜ ದರಬಾರುಗಳು
ಸಿಂಹಾಸನಕ್ಕಂಟಿ ನಿಂತ ಸಾಲಭಂಜಿಕೆಯರು
ಮಾಯೆ ಮುಸುಕಿನ ನೃತ್ಯಾಂಗನೆಯರು....
ಹಗಲ ಬೆಳಕಲ್ಲೂ ದೀಪ ಹಿಡಿದರಷ್ಟೇ
ಅರಿವಿಗೆ ಬರುವ ಸತ್ಯ, ನ್ಯಾಯದ ಮಸಕು ನೆರಳುಗಳು.
೨
ಯುದ್ಧದ ಜ್ವಾಲೆಗೆ ಹೆದರಿ, ಬೆವರಿದಾಗೆಲ್ಲ-
ಕಪ್ಪ, ಕಾಣಿಕೆ, ಹೊಸ ಹೊಸ ಸಂಬಂಧಗಳು
ತುಕ್ಕು ಹಿಡಿದ ಕತ್ತಿ, ಬಾಣ, ಭರ್ಜಿಗಳಿಗೆಲ್ಲ
ಮತ್ತೆ ಮತ್ತೆ ಹರಿತವಾಗುವವಕಾಶಗಳು
ಚೆಲ್ಲಾಪಿಲ್ಲಿ ಚದುರಿ ಹೋಗುವ ರಾಜ ಮನೆತನದ ಕೊಂಡಿಗಳು
ಹೆಣ್ಣು, ಹೊನ್ನು, ಮಣ್ಣುಗಳ ಕಾರಣಕ್ಕನವರತ
ಬದಲಾಗುತ್ತಲೇ ಇರುವ ಮನುಷ್ಯ ವಾಸನೆಗಳು......
೩
ರಣಾಂಗಣದರಿವಿರದ ಉತ್ತರರ ಬಡಾಯಿಗಳು
ಶರಶಯ್ಯೆಯಲಿ ದಿನಗಳೆಣಿಸುತ್ತಿರುವ ಪ್ರತಿಜ್ಞೆಗಳು
ಒಡೆದದ್ದನ್ನೆಲ್ಲ ಒಂದುಗೂಡಿಸುವ ಹುಂಬ ವಿಶ್ವಾಸಗಳು
ಮಣ್ಣ ಕಣ್ಣಿನಲಿ, ಎದ್ದ ಧೂಳಿನಲಿ ರೆಕ್ಕೆ ಝಾಡಿಸುವ ಹಿಟ್ಟು ಹುಂಜಗಳು
ಗುಹೇಶ್ವರನ ಜೊತೆಜೊತೆಗೇ ಮಲ್ಲಿಕಾರ್ಜುನನ ಹೆಜ್ಜೆಗಳು,
ವಿಷದ ಬಟ್ಟಲಲ್ಲಿ ಪ್ರತ್ಯಕ್ಷವಾಗುವ ಮೂಗ ನತ್ತುಗಳು
ಒಂದರ ಮೇಲೊಂದು ಅಡಿಕಿರಿದ ಪ್ರತಿಮೆ, ರೂಪಕಗಳು.....
೪
ಅಂತಃಪುರದಲ್ಲುಳಿದರೆ; ಬರಿಯ ಅಂಗಸುಖ
ಬಯಲಿಗಿಳಿಯುವುದೆಂತು?- ಮೋಹಿತನೀ ಆತ್ಮ ಸಖ.
ಸಿದ್ಧ ಉತ್ತರದ ಪ್ರಮೇಯಗಳ ಬಿಡಿಸುವುದಕ್ಕೆ
ಬಲಸುತ್ತಲೇ ಇರುವ ಮತ್ತದೇ ಹಳೆಯ ಸೂತ್ರ
ಎಷ್ಟು ಸುತ್ತಿದರೂ ಸವೆಯದೇ ತಿರುಗುತ್ತಿರುವ ಕಾಲ ಚಕ್ರ!
ಆದರೂ ಈ ಇದೇ ಚಕ್ರತೀರ್ಥದ ಮಡುಗಳಲ್ಲೇ ಸಿಲುಕಿ
ನಡೆಯುತ್ತಲೇ ಇದೆ ಜನಮೇಜಯರ ಮೇಜವಾನಿ ಸಾಲು......
೫
ಗಾಳಿ ಕಡೆಯುವದಕ್ಕೇಕೆ ಬೆಳ್ಳಿಮಂತಿನ ಗೊಡವೆ?
ಮನಸನುದ್ದೀಪಸಲು ಸೋತ ಜಡವೆ?
ಚರಿತ್ರೆಯ ಚಹರೆಗಳಿರದ ಕನಸ ನೇಯುವೆನೆನಲು
ಉರಿಯ ಉಯ್ಯಾಲೆಯಲಿ ಕುಳಿತೇ ಭವವನ್ನು ಮೀಟಬೇಕು,
ಯುದ್ಧ ಸೋತ ಭರತರಿಗೇ ಪಟ್ಟ ಬಿಟ್ಟು ಕೊಡಬೇಕು!
ಹುಲಿಯಂಕೆ ಗಡಿಯಾರಗಳೆಲ್ಲ ನಿಂತಲ್ಲೇ ನಿಂತರೆ,
ಚೌಕಟ್ಟಿನೊಳಗಿಟ್ಟ ಚಿತ್ರಗಳಿಗೂ ಸಿಗಬಹುದು ಬಿಡುಗಡೆ!?