ಒಟ್ಟು ಪುಟವೀಕ್ಷಣೆಗಳು

ಭಾನುವಾರ, ಜನವರಿ 25, 2009

ತಪಸ್ಸೆಂಬ ತಾಪ

‘ತಪಸ್ಸು’ ಎಂಬ ಪದವನ್ನು ನಿತ್ಯದ ಮಾತುಗಳಲ್ಲಿ ನಾವೆಲ್ಲ ಬಳಸುತ್ತಲೇ ಇರುತ್ತೇವೆ. ತಪಸ್ಸು ಎಂಬ ಪದ ‘ತಪ್’ ಧಾತುವಿನಿಂದ ನಿಷ್ಪನ್ನವಾದ ಪದ. ಅಂದರೆ ಕಷ್ಟ ಪಡು ಎಂದರ್ಥ. ಒಂದು ಉದ್ದೇಶ ಸಾಧನೆಗಾಗಿ ದೈಹಿಕ ಕಾಮನೆಗಳನ್ನು, ಲೌಕಿಕದ ಸುಖಸವಲತ್ತುಗಳನ್ನು ಸ್ವಯಂಪ್ರೇರಣೆಯಿಂದ ಬಿಟ್ಟುಕೊಟ್ಟು ಕಷ್ಟಕ್ಕೆ ಒಡ್ಡಿಕೊಳ್ಳುವುದು ತಪಸ್ಸು. ಹಿಮಾಲಯದ ತಪ್ಪಲಿಗೋ, ಗುಹೆಯ ಏಕಾಂತಕ್ಕೋ ತೆರಳಿದ ಮಾತ್ರಕ್ಕೇ ತಾಪಕ್ಕೆ ಸಿಲುಕಿದವರೆಲ್ಲ ತಪಸ್ವಿಗಳಾಗುವುದಿಲ್ಲ. ಸಂಕಲ್ಪವನ್ನು ಸ್ವಶಕ್ತಿಯ ಮೂಲಕ ಸಿದ್ಧಿಯ ನೆಲೆಗೆ ಒಯ್ಯುವುದು ತಪಸ್ಸಿನ ಉದ್ದೇಶ. ಅದರ ಪರಿಕಲ್ಪನೆ ವೇದೋಪನಿಷತ್ತುಗಳ ಕಾಲದಿಂದಲೂ ಪರಂಪರೆ ನಮಗೆ ಕಲಿಸುತ್ತ ಬಂದಿದೆ. ಮನಸ್ಸು ಮತ್ತು ಇಂದ್ರಿಯಗಳ ಮೇಲಿನ ಅಪಾರ ಹಿಡಿತವೇ ತಪಸ್ಸಿನ ಮೂಲ. ಪಂಚೇದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮಗಳು ಲೌಕಿಕದ ವಿವಿಧ ಸಂವೇದನೆಗಳನ್ನು ಮೊಗೆಮೊಗೆದು ಮನಸ್ಸಿನ ಕಣಜದೊಳಗೆ ತುಂಬುತ್ತಲೇ ಇರುತ್ತವೆ. ಹಾಗೆ ಸಿಕ್ಕ ಸಂವೇದನೆಗಳನ್ನು ಅನುಭವಿಸುವಂತೆ ಮನಸ್ಸು ದೇಹವನ್ನು ಪ್ರಚೋದಿಸುತ್ತದೆ. ಪ್ರಲೋಭನೆಗೆ ಒಳಗಾದಾಗ ಸಹಜವಾಗಿ ಚಂಚಲವಾಗುವ ಮನಸ್ಸು ದೇಹದ ಮೇಲಿನ ಹಿಡಿತವನ್ನು ಕಳೆದುಕೊಳ್ಳುತ್ತದೆ. ಆಕರ್ಷಣೆಯ ಸುಳಿಗೆ ಸಿಕ್ಕ ದೇಹ ಉತ್ಕಂಠಿತತೆಯ ಮೋಹದಲ್ಲಿ ಪರಿವೆಯ ಇರವನ್ನೇ ಮರೆಮಾಚುತ್ತದೆ.

ಸಿದ್ಧಿ ಮತ್ತು ಸಾಧನೆಯ ಉದ್ದೇಶವಿದ್ದವರು ಸಹಜವಾಗಿ ಲೌಕಿಕ ಒಡ್ಡುವ ಆಮಿಷಗಳಿಂದ ಹೊರಗಿರಲು ಪ್ರಯತ್ನಿಸುತ್ತಲೇ ಇರುತ್ತಾರೆ. ಒಮ್ಮೆ ಸಿದ್ಧಿ ಕೈ ವಶವಾಯಿತೆಂದರೆ ನಂತರ ಲೌಕಿಕದ ಯಾವ ಆಮಿಷಗಳೂ ಸಿದ್ಧಿಸಿದ ಬಲದ ಮುಂದೆ ಅಗಣ್ಯವಾಗುತ್ತವೆ. ದುರಂತವೆಂದರೆ ಸಾಧನೆಯ ಹೊಸ್ತಿಲು ಮುಟ್ಟಿದೊಡನೆಯೇ ಅದು ತಮ್ಮ ಪಾಲಿಗೆ ಸಿದ್ಧಿಸಿತೆಂದು ಭಾವಿಸುವ ಅಲ್ಪಮತಿಗಳು ಲೌಕಿಕ ಒಡ್ಡುವ ಮಾನ, ಸನ್ಮಾನಗಳ, ಭರದಲ್ಲಿ ಸಿಲುಕಿ ಸ್ವಲ್ಪದರಲ್ಲೇ ಸಿಗಬಹುದಾಗಿದ್ದ ಸಿದ್ಧಿಯಿಂದ ಬಹು ಬೇಗ ಬಲುದೂರಕ್ಕೆ ಕ್ರಮಿಸಿಬಿಡುತ್ತಾರೆ. ಸಿದ್ಧಿ ಎಂಬುದು ಆಗ ಅಂಥವರಿಗೆ ಎಟುಕದ ನಕ್ಷತ್ರವಾಗುತ್ತದೆ. ಸದಾ ಚಂಚಲತೆಗೆ ಸಿಕ್ಕು ಇಂದ್ರಿಯದ ಹತೋಟಿಯನ್ನು ಕಳೆದುಕೊಳ್ಳುವ ಮನಸ್ಸನ್ನು ನಿಗ್ರಹಿಸುವ ಕ್ರಿಯೆ ಅತಿ ಕಷ್ಟಕರವಾದುದು. ಅದು ತಾಪದಾಯ್ಕವಾದುದು. ಸದಾ ಸುಡುತ್ತಲೇ ಇರುವಂಥದು. ಆದುದರಿಂದಲೇ ಅದು ತಪಸ್ಸು.

ನಮ್ಮ ಪ್ರಾಚೀನ ಪರಂಪರೆಯಲ್ಲಂತೂ ತಪಸ್ಸಿನ ಪ್ರಸ್ತಾಪ ಆಗಾಗ ಬರುತ್ತಲೇ ಇರುತ್ತದೆ. ದೇವಗಂಗೆಯನ್ನು ಪಿತೃಮೋಕ್ಷಕ್ಕಾಗಿ ಧರೆಗೆ ತಂದ ಭಗೀರಥನ ಹೆಸರಂತೂ ಸರ್ವದಾ ಪ್ರಸ್ತಾಪ ಯೋಗ್ಯವಾದುದೇ ಆಗಿದೆ. ವಿಶ್ವಾಮಿತ್ರನೆಂಬ ಸಾಮಾನ್ಯ ಬ್ರಹ್ಮರ್ಷಿ ಎಂಬ ಅಸಾಮಾನ್ಯ ಪದವಿ ಪಡೆದುದರ ಹಿಂದೆ ತಪಸ್ಸಿನ ಬಲವಿದೆ. ಗಾಂಧಿ ಬಸವರೂ ತಪಸ್ವಿಗಳಾಗಿದ್ದಕ್ಕೇ ಲೌಕಿಕದ ಆಮಿಷಗಳನ್ನು ಗೆದ್ದು ತಮ್ಮ ಸಾಧನೆಯ ದಾರಿಯನ್ನು ಲೋಕಕ್ಕೆ ತಿಳಿಸಲು ಸಾಧ್ಯವಾದದ್ದು. ಸಂಕಲ್ಪವೆಂಬುದು ಸಿದ್ಧಿಯಾಗಿ ಬದಲಾದಾಗ ತಪಸ್ಸಿನ ಉದ್ದೇಶ ಪರಿಪೂರ್ಣವಾಗುತ್ತದೆ. ‘ತಪೋ ಬ್ರಹ್ಮೇತಿ’ ಎನ್ನುತ್ತದೆ ಉಪನಿಷತ್ತು. ಭಗವದ್ಗೀತೆ ತಪಸ್ಸನ್ನು ಮೂರು ಬಗೆಯಲ್ಲಿ ವಿಭಾಗಿಸಿ ಕಾಯಿಕ, ವಾಚಿಕ ಮತ್ತು ಮಾನಸಿಕ ಎಂದು ಹೆಸರಿಸುತ್ತದೆ. ಶುಚಿತ್ವ, ಸರಳತೆ, ಬ್ರಹ್ಮಚರ್ಯ, ಅಹಿಂಸೆ ಇವ್ಯ್ ಕಾಯಿಕ ತಪಸ್ಸಿನ ಧಾತುಗಳು. ಉದ್ವೇಗಕ್ಕೆ ಅವಕಾಶ ಕೊಡದೇ ಹಿತವೂ, ಪ್ರಿಯವೂ, ಸತ್ಯವೂ ಆದ ಮಾತನಾಡುವುದು ವಾಚಿಕ ತಪಸ್ಸು. ಮನಸ್ಸನ್ನು ಹದಗೊಳಿಸಿಕೊಂಡು ಆಹ್ಲಾದತೆಯನ್ನು ಕಾಪಾಡಿಕೊಳ್ಳುವುದು, ಇಂದ್ರಿಯಗಳನ್ನು ನಿಗ್ರಹಿಸಿಕೊಳ್ಳುತ್ತಲೇ ಭಾವಶುದ್ಧಿಯನ್ನು ಕಾಪಾಡಿಕೊಳ್ಳುವುದು ಮಾನಸಿಕ ತಪಸ್ಸು. ಕಾಯಿಕ ಮತ್ತು ವಾಚಿಕ ತಪಸ್ಸುಗಳನ್ನು ನಮ್ಮದಾಗಿಸಿಕೊಳ್ಳಬಹುದಾದರೂ ಮಾನಸಿಕ ತಪಸ್ಸು ಸುಲಭಕ್ಕೆ ಒಗ್ಗಿ ಬಗ್ಗುವಂಥದಲ್ಲ. ಅದಕ್ಕೆ ಅಚಲ ಸಂಕಲ್ಪ ಮತ್ತು ಸತತ ಸಾಧನೆ ಬೇಕಾಗುತ್ತದೆ. ವಿದ್ಯಾರ್ಥಿಯೊಬ್ಬ ತನ್ನ ಓದಿನಲ್ಲಿ ಹಿರಿದನ್ನು ಸಾಧಿಸಬೇಕಾದರೆ ಅವನಿಗೆ ತಾನು ವಿದ್ಯಾರ್ಥಿ ಎಂಬ ಅರಿವಿನ ಜೊತೆಜೊತೆಗೇ ತಾನು ಸಾಗಬೇಕಾದ ದಾರಿಯ ಸ್ಪಷ್ಟ ಕಲ್ಪನೆ ಇರಬೇಕಾಗುತ್ತದೆ. ಗೊಂದಲಕ್ಕೆ ಬಿದ್ದ ಹಾಗೆಲ್ಲ ಅವನ ಶೈಕ್ಷಣಿಕ ಶ್ರೇಯಾಂಕಗಳು ಕಡಿಮೆಯಾಗುತ್ತ ಹೋಗುತ್ತವೆ. ಈ ಮಾತು ಕಲೆ, ಸಾಹಿತ್ಯ, ವಿಜ್ಞಾನ, ಆಧ್ಯಾತ್ಮ, ಕೃಷಿ, ವಾಣಿಜ್ಯ- ಹೀಗೆ ಬದುಕಿನ ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುತ್ತದೆ.

ತಪಸ್ಸು ಎಂಬುದು ಜಟಾಜೂಟಗಳನ್ನು ಬಿಟ್ಟುಕೊಂಡು ಮರವೊಂದರ ಕೆಳಗೆ ಕೂತ ಮಾತ್ರಕ್ಕೆ ಎಟುಕುವಂಥದಲ್ಲ. ತೋರುಗಾಣಿಕೆಗೇ ತಪಸ್ಸಿಗೆ ಕೂತವರ ಮಾತು ಬೇರೆ!. ತಪಸ್ಸು ಎಂಬುದು ಸವೆದುಹೋದ ಅರ್ಥಕಳಕೊಂಡ ಪದವಲ್ಲ. ಅದು ಎತ್ತೆತ್ತರದ ಸುಮೇರುಗಳಿಗೆ ಮನುಷ್ಯನ ಮನಸ್ಸನ್ನು ಒಯ್ಯುವ ಮತ್ತು ಅಂಥ ಎತ್ತರದಲ್ಲೂ ವಿನಮ್ರತೆಯನ್ನು ಕಾಪಾಡಿಕೊಳ್ಳುವ ಕಲೆಯನ್ನು ಕಲಿಸುವ ವಿಷಿಷ್ಟ ಬೆರಗು. ನಮ್ಮ ಸಣ್ಣತನಗಳನ್ನು ಕಳೆದು ಹೊಸ ಎತ್ತರಗಳನ್ನು ಕೊಡುವ ಸಾಧನ.

ಬುಧವಾರ, ಜನವರಿ 21, 2009

ವ್ರುತ್ತದೊಳಗಿನ ಬದುಕು

ಬದುಕು ವಿಸ್ತಾರವಾದುದು. ಅದಕ್ಕೆ ಚೌಕಟ್ಟನ್ನು ಕಟ್ಟಿದಷ್ಟೂ ದೃಷ್ಟಿಗೆ ಮಿತಿ ಬರುತ್ತದೆ. ಮಿತಿಗಳಾಚೆಯೇ ಇರುವ ಬದುಕು ಸುಲಭಕ್ಕೆ ದಕ್ಕುವುದಿಲ್ಲ. ಮಿತಿಯೊಳಗೇ ನಾವು ಬದುಕಿದರೆ, ಚಿಂತಿಸಿದರೆ ನಮ್ಮಾಚೆಗೂ ಇರುವ ಬದುಕ ಮಜಲು ನಮಗೆ ಅರ್ಥವೇ ಆಗುವುದಿಲ್ಲ. ಹೀಗೆಲ್ಲ ಮಾತಿಗೆ ಹೇಳಬಹುದಾದರೂ ಮೂಲತಃ ನಾವೆಲ್ಲ ನಮ್ಮ ನಮ್ಮ ಮಿತಿಯೊಳಗೇ ಬದುಕ ಕಡಲನ್ನು ಈಜುವ ಅಭ್ಯಾಸ ಮಾಡಿಕೊಂಡಿರುತ್ತೇವೆ. ಹಳ್ಳ, ಕೆರೆ, ಬಾವಿಗಳಲ್ಲಿ ಸುಲಭವಾಗಿ ಈಜುವವರು ಸಮುದ್ರಕ್ಕೆ ಹೆದರಬಹುದು. ಆಳ ಅಗಲಗಳ ಪರಿವೆಯಿಲ್ಲದೇ ಸಿಕ್ಕ ಸಿಕ್ಕ ನೀರಿಗೆ ಧುಮುಕುವುದೂ ಅಪಾಯದ ಮಾತೇ. ಹಾಗಾಗಿಯೇ ನಾವೆಲ್ಲ ನಮಗೆ ಗೊತ್ತಿರುವ ದೇಶ ಮತ್ತು ಭಾಷೆಗಳಲ್ಲಿ ಬದುಕಲು ಇಚ್ಛಿಸುತ್ತೇವೆ. ಗೊತ್ತಿದ್ದೂ ನಾಲ್ಕು ಗೋಡೆಗಳ ಬಂಧನದಲ್ಲಿ, ಕಿಟಕಿ, ಬಾಗಿಲು, ಪರದೆಗಳ ಹಂಗಿನಲ್ಲೇ ಇರಲು ಇಚ್ಛಿಸುತ್ತೇವೆ. ನಮಗೆಲ್ಲರಿಗೂ ಪ್ರಿಯವಾದ ಏಕಾಂತದಲ್ಲಿ ಇದ್ದುಬಿಡಲು ಪ್ರಯತ್ನಿಸುತ್ತೇವೆ. ಜೊತೆ ಜೊತೆಗೇ ನಾವೇ ಸೃಷ್ಟಿಸಿಕೊಂಡ ಈ ಮಿತಿಯನ್ನು ಮೀರುವ ಮತ್ತು ಹೊರಗಿರುವ ವಿಸ್ತಾರ ಬಯಲನ್ನು ಅದು ಕೊಡುವ ಸ್ವಾತಂತ್ರ್ಯದ ಬಗೆಯನ್ನೂ ಯೋಚಿಸುತ್ತಲೇ ಇರುತ್ತೇವೆ. ಬಯಲಲ್ಲಿ ಬೀಳಬಹುದಾದ ಮಂಜು ಮತ್ತು ಗಾಳಿಯ ಕಲ್ಪನೆ ತಿಳಿಯಿತೋ ಪುನಃ ನಮ್ಮ ನಾಲ್ಕು ಗೋಡೆಗಳ ಬೆಚ್ಚನೆಯ ಮನೆಯತ್ತ ನಡೆಯುತ್ತೇವೆ.

ಬಯಲು ವಿಸ್ತಾರದೊಟ್ಟಿಗೇ ಸ್ವಾತಂತ್ರ್ಯವನ್ನು ಕೊಡಬಹುದಾದರೂ ಅದು ಭಯದ ಮೂಲ. ಅಭದ್ರತೆಯ ಸೇತು. ಏಕೆಂದರೆ ಬಯಲ ಅನಂತತೆಯನ್ನು ಗ್ರಹಿಸುವ ಚಿತ್ತಬಲ ಸುಲಭಕ್ಕೆ ಒಲಿಯುವಂಥದಲ್ಲ. ಸಾಮಾಜಿಕ ಜೀವಿಯಾಗಿ ಒಂದು ಮನೆ, ಮನೆತನ ಮತ್ತು ನಡವಳಿಕೆಗಳಿಗೆ ಮಿತಿಗೊಳಿಸಿಕೊಂಡ ನಮ್ಮ ಚಟುವಟಿಕೆಗಳು ಬಯಲ ಅನುಭವ ಜನ್ಯ ಸತ್ಯಗಳನ್ನು ಅರ್ಥಮಾಡಿಕೊಳ್ಳುವುದನ್ನು ನಿಷೇದಿಸುತ್ತವೆ. ಅಂಥ ಸ್ವಾತಂತ್ರ್ಯವನ್ನು ಇಟ್ಟುಕೊಂಡಿರುವ ಮರ, ಗಿಡ, ಬಳ್ಳಿಗಳು, ಕ್ರಿಮಿ, ಕೀಟ, ಪ್ರಾಣಿಗಳು ಕತ್ತಲೆ, ಬೆಳಕು, ಗಾಳಿ ಸದ್ದುಗಳು ನಮ್ಮನ್ನು ಅಧೀರರನಾಗಿಸುತ್ತವೆ. ಹಾಗಾಗಿಯೇ ಮಿತಿಯ ಅರಿವಿರುವ ಮನುಷ್ಯ ತನ್ನಾಚೆಯ ಜಗತ್ತನ್ನು ಅರಿಯುವುದನ್ನು ಬೇಕೆಂತಲೇ ಮರೆಯುತ್ತಾನೆ. ತನಗೆ ಸಿಕ್ಕಿರುವುದರಲ್ಲೇ ಮೈ ಮರೆಯುತ್ತಾನೆ.

ನಾವೆಲ್ಲ ನಾವು ಬದುಕುತ್ತಿರುವ ಬಗೆಯನ್ನೆ ಅನನ್ಯವನ್ನು ಭಾವಿಸಿದ್ದೇವೆ. ನಾವು ಉಪಜೀವನಕ್ಕೆ ನೆಚ್ಚಿರುವ ಕಸುಬನ್ನೇ ಅಂತಿಮವೆಂದು ಭಾವಿಸಿದ್ದೇವೆ. ನಮ್ಮ ಅನುಭವವನ್ನೇ ಪರಮಸತ್ಯವೆಂದು ನಂಬಿಬಿಟ್ಟಿದ್ದೇವೆ. ನಮ್ಮಾಚೆಗೂ ಒಂದು ಜಗತ್ತಿದೆ. ಅಲ್ಲಿಯೂ ನಮ್ಮಂತೆಯೇ ಯೋಚಿಸುವ, ನಮ್ಮದೇ ತಹತಹಕಿಯ ಜೀವಿಗಳಿದ್ದಾರೆಂದು ಮರೆತುಬಿಟ್ಟಿದ್ದೇವೆ. ಸಮೂಹದ ಸಾಧ್ಯತೆಗಳನ್ನು ನಿರಾಕರಿಸಿದಷ್ಟೂ ನಮ್ಮ ಮಿತಿಯ ವ್ಯಾಸ ಕುಗ್ಗುತ್ತ ಬರುತ್ತದೆ. ದುರಂತವೆಂದರೆ ನಾವೆಲ್ಲ ನಮ್ಮ ಜೀವನವೆ ಭದ್ರವೆಂದು ಅನ್ಯರಿಗೂ ಇರುವ ಇದೇ ಬಗೆಯ ಕಾಳಜಿಯನ್ನು ಮೋಹವೆಮು ಬಗೆಯುತ್ತೇವೆ. ಹಾಗೆಯೇ ನಮ್ಮದು ಮಾತ್ರ ಸಮಸ್ಯೆ. ಉಳಿದವರೆಲ್ಲ ಪಾರಾಗಿದ್ದಾರೆಂದೂ ಭ್ರಮಿಸಿರುತ್ತೇವೆ.

ನಮ್ಮ ಸಮಾಜವನ್ನು ಸಾವಧಾನವಾಗಿ, ಸೂಕ್ಷ್ಮವಾಗಿ ಗಮನಿಸಿದರೆ ಇಂತಹ ನೂರಾರು ವೃತ್ತಗಳು ನಮ್ಮೆಲ್ಲರನ್ನೂ ಸುತ್ತುವರಿದಿರುವ ಸತ್ಯ ಗೋಚರಿಸುತ್ತದೆ. ಒಂದೊಂದಕ್ಕೂ ತನ್ನದೇ ಆದ ವ್ಯಾಸ, ತ್ರಿಜ್ಯ ಮತ್ತು ಕ್ಷೇತ್ರಫಲಗಳಿದ್ದು ಅಂತಹ ಹಲವು ವೃತ್ತಗಳು ನಮ್ಮೆಲ್ಲರ ಬದುಕನ್ನೂ ಆವರಿಸಿರುತ್ತವೆ. ಒಂದೊಂದೂ ಮತ್ತೊಂದಕ್ಕೆ ಸೇರದ ಬೆರೆಯಲಿಚ್ಛಿಸದ ವೃತ್ತಗಳು. ತನ್ನನ್ನು ಸುತ್ತುವರೆದಿರುವ ವೃತ್ತದಾಚೆಗೆಂದೂ ನೋಡದ, ಮತ್ತೊಂದು ವೃತ್ತದಲ್ಲಿರುವವರ ಪರಿಸ್ಥಿತಿಯರಿಯದ ನಮ್ಮ ಈ ಮಿತಿಗಳೇ ಸಾಮಾಜಿಕ ವೈರುಧ್ಯಗಳನ್ನು ಬಿತ್ತುತ್ತಿರುವ ಮತ್ತು ಇರುವವರ ಹಾಗೂ ಇಲ್ಲದಿರುವವರ ನಡುವಣ ಅಂತರವನ್ನು ಹೆಚ್ಚಿಸುತ್ತಲೇ ಇರುವ ಕಾರಣಗಳೆಂದು ನಾವಾರೂ ಅರಿಯದಿರುವುದೇ ನಮ್ಮ ನಡುವಣ ಹಲವು ಸಮ್ಸ್ಯೆಗಳ ಮೂಲ ಕಾರಣವಾಗಿದೆ. ನೂರಾರು ವೃತ್ತಗಳು! ಆ ವೃತ್ತಗಳಳೊಗೆ ಮತ್ತೆ ನೂರು ಸೀಳುಗಳು. ಗುಂಪು, ಗುಂಪಾಗಿ, ಮತ್ತೆ ಮತ್ತೆ ವಿಭಜನೆಯಾಗುತ್ತಾ, ಸೀಳಿಕೊಳ್ಳುತ್ತಾ, ಒಂದಕ್ಕೊಂದು ದೂರವಾಗಿ ನಮ್ಮ ಚಿಪ್ಪಿನೊಳಗೆ ನಾವೇ ಬಂಧಿಯಾಗುತ್ತಾ ಅಪರಿಚಿತವಾಗುತ್ತಾ ಹೋಗುವ ಕವಲು ದಾರಿಗಳು.

ಆದರೆ ಒಂದು ನಾಗರೀಕ ಸಮಾಜ ಸುಸಂಸ್ಕೃತವಾಗಬೇಕೆಂದರೆ, ಇಡಿಯಾಗಿ ತನ್ನ ಸ್ವರೂಪ ಪ್ರದರ್ಶಿಸಬೇಕೆಂದರೆ ಈ ವೃತ್ತಗಳನ್ನು ನಿವಾರಿಸಬೇಕು. ವೃತ್ತಗಳ ವ್ಯಾಸವನ್ನು ಹಿರಿದುಮಾಡುತ್ತ ಸಮಷ್ಟಿಯಲ್ಲಿ ಎಲ್ಲರನ್ನೂ, ಎಲ್ಲವನ್ನೂ ಒಳಗೊಳಿಸಬೇಕು. ಏಕನಾದದ ಸಮೂಹ ಗೀತೆಗೆ ಎಲ್ಲರನ್ನೂ ಅನುಗೊಳಿಸಬೇಕು. ದೂರದೃಷ್ಟಿಯುಳ್ಳ ಸಮೂಹ ನಾಯಕತ್ವ ಪ್ರಭುತ್ವವನ್ನು ಪ್ರಶ್ನಿಸುವ ಎದೆಗಾರಿಕೆ ತೋರಬೇಕು. ಆಗ ಅಂಥ ಸಂದರ್ಭ ಬಯಲ ಸ್ವಾತಂತ್ರವನ್ನು ಅನುಭವಿಸುವ ರೀತಿಗೆ ನಮ್ಮನ್ನು ಸಜ್ಜುಗೊಳಿಸುತ್ತದೆ.

ಗುರುವಾರ, ಜನವರಿ 8, 2009

ಬೆಂಕಿ ಕಡ್ಡಿಗಳು

ಬೆಂಕಿ ಕಡ್ಡಿಗಳು,
ನಾನು, ನೀನು, ಅವನು, ಅವಳು
ಹೌದು, ನಾವೆಲ್ಲರೂ ಬೆಂಕಿಯ ತುಂಡುಗಳು:

ನಮ್ಮ ತಲೆಯ ಮೇಲಷ್ಟು ಮದ್ದು ಮೆತ್ತಿ,
ಒಬ್ಬರ ಮೇಲೊಬ್ಬರನ್ನು ತುರುಕಿ,
ಪುಟ್ಟ ಪೆಟ್ಟಿಗೆಯೊಳಗಿಟ್ಟು ಭದ್ರ ಮಾಡಿದ್ದಾರೆ:

ಬೇಕಿನಿಸಿದಾಗೆಲ್ಲ ನಮ್ಮಲ್ಲೊಬ್ಬರನ್ನೆಳೆದು
ಚರಕ್ಕನೆ ಗೀರಿ ಬೆಂಕಿ ಹೊತ್ತಿಸುತ್ತಾರೆ,
ಚಳಿಯ ಮೈಯನ್ನು ಕಾಯಿಸಿ ಕೊಳ್ಳುತ್ತಾರೆ.

ಬೆಂಕಿ ಹೊತ್ತಿಸಿದ ಸಂಭ್ರಮದಲ್ಲಿ
ಸುಟ್ಟು ಭಸ್ಮವಾಗುವ ನಮಗೇ
ನಮ್ಮ ಶಕ್ತಿ ಗೊತ್ತಿಲ್ಲ; ಹಾಗಾಗಿ

ಜೊತೆಜೊತೆಯಾಗಿದ್ದರೂ ಅತಂತ್ರ ಸ್ಥಿತಿ ಹೋಗಲ್ಲ
ಈ ಪುಟ್ಟ ಪೆಟ್ಟಿಗೆಯ ವಾಸವೂ ತಪ್ಪೋಲ್ಲ!

ಗುರುವಾರ, ಜನವರಿ 1, 2009

ವಿಮಾ ರಂಗದ ಮೇಲೆ ಉದಾರೀಕರಣದ ಕರಿ ನೆರಳು

ವಿಮಾರಂಗದ ಮೇಲೆ ಉದಾರೀಕರಣದ ಕರಿನೆರಳು
ಸದ್ಯೋವರ್ತಮಾನದ ಜಾಗತಿಕ ಹಣಕಾಸು ಪರಿಸ್ಥಿತಿ ತಿಳಿದವರಿಗೆ ಈಗಿನ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ವಿವರಿಸಬೇಕಿಲ್ಲ. ಈಗಾಗಲೇ ನಮ್ಮ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಹಲವು ‘ದೈತ್ಯ’ ಕಂಪನಿಗಳು ಮತ್ತವುಗಳ ಒಡೆತನದಲ್ಲಿದ್ದ ಬ್ಯಾಂಕು, ವಿಮೆ, ಇತರೆ ಹಣಕಾಸು ವ್ಯವಹಾರಗಳೆಲ್ಲ ಕುಸಿದುಬಿದ್ದು ಆ ಕಂಪನಿಗಳು ದಿವಾಳಿಯಾಗಿರುವ , ಆಗುತ್ತಿರುವ ಸಂದರ್ಭ ಇದು. ಅಮೇರಿಕಾದಲ್ಲಾದ ತಲ್ಲಣಗಳು ಹೀಗೆ ಇಡೀ ವಿಶ್ವವನ್ನೇ ಅಲ್ಲಾಡಿಸಬಹುದೆಂದು ಜಾಗತೀಕರಣ ಪ್ರಕ್ರಿಯೆ ಶುರುವಾಗುವ ಮುನ್ನ ಊಹಿಸಲು ಸಾಧ್ಯವೂ ಇರಲಿಲ್ಲ. ಆದರೆ ಈಗ ಜಾಗತೀಕರಣದ ಬಲೆ ಬೀಸಿ ಎಲ್ಲ ಸಾರ್ವಭೌಮ ದೇಶಗಳನ್ನೂ ತನ್ನ ಹಿಡಿತದಲ್ಲಿಟ್ಟುಕೊಂಡಿರುವ ಅಮೆರಿಕಕ್ಕೆ ನೆಗಡಿಯಾದರೆ ಈ ದೇಶಗಳ ಮೂಗಿನಲ್ಲಿ ನೀರು ಸೋರತೊಡಗುತ್ತದೆ. ಅದು ಕೆಮ್ಮಿದರೆ ಈ ದೇಶಗಳು ಆಸ್ಪತ್ರೆ ಸೇರುತ್ತವೆ.

ಅಮೇರಿಕದ ಆರ್ಥಿಕತೆ ಅಪಾಯದ ಅಂಚು ತಲುಪಿದೆ ಎಂದು ಹೇಳಲು ನಾವೇನು ಆರ್ಥಿಕ ತಜ್ಞರಾಗಿರಬೇಕಿಲ್ಲ. ಜಾಗತೀಕರಣ ಮತ್ತು ಉದಾರೀಕರಣದ ಹುಚ್ಚು ಹತ್ತಿಸಿ ಎಲ್ಲ ಅರ್ಥವ್ಯವಸ್ಥೆಯನ್ನೂ ಖಾಸಗಿಯವರಿಗೆ ಒಪ್ಪಿಸಿದ ಪರಿಣಾಮ ಇದು. ಜಗತ್ತಿನ ಎಲ್ಲ ದೇಶಗಳೂ ಪರಸ್ಪರ ವ್ಯಾವಹಾರಿಕವಾಗಿ ಬೆಸೆದುಕೊಂಡಿರುವ ಕಾರಣ ಅಮೆರಿಕದ ಬಿಕ್ಕಟ್ಟು ಎಲ್ಲ ದೇಶಗಳ ಅರ್ಥ ವ್ಯವಸ್ಥೆಯ ಮೇಲೂ ತನ್ನ ಪರಿಣಾಮ ತೋರುತ್ತ ಸಾಗಿದೆ. ಬ್ರಜಿಲ್ ಮತ್ತು ಇಂಡೋನೇಷಿಯಾದ ಪರಿಸ್ಥಿತಿಯಂತೂ ಶೋಚನೀಯವಾಗಿದೆ. ನಮ್ಮ ದೇಶದ ಮೇಲೆ ಈ ಕಂಪನದ ಪರಿಣಾಮ ತೀವ್ರವಾಗಿಲ್ಲವಾದರೂ ಅಲ್ಪ ಸ್ವಲ್ಪ ನಷ್ಟ ಉಂಟುಮಾಡಿದೆ. ಅಮೆರಿಕ ಮತ್ತು ಸಾಫ್ಟ್ವೇರನ್ನು ನಂಬಿದ್ದ ಬಹುತೇಕ ಖಾಸಗಿ ಸಂಸ್ಥೆಗಳು ತಮ್ಮ ನೌಕರರ ಸಂಖ್ಯೆ ತಗ್ಗಿಸುತ್ತಲೋ, ಅಥವಾ ಅವರ ಸಂಬಳ ಕಡಿತಗೊಳಿಸಿಯೋ ಸುದ್ದಿ ಮಾಡುತ್ತಲೇ ಇವೆ. ಮಾಧ್ಯಮ ಕ್ಷೇತ್ರದ ಮೇಲೂ ಇದರ ಕರಿನೆರಳು ಬಿದ್ದ ಕಾರಣ ನಿಯತಕಾಲಿಕೆಗಳ ಅವಧಿ ಬದಲಾಗತೊಡಗಿದೆ. ಕನ್ನಡದಲ್ಲೂ ಪ್ರಕಟವಾಗುವ ‘ದಿ ಸಂಡೆ ಇಂಡಿಯನ್’ ಪತ್ರಿಕೆಯ ಸ್ಥಳೀಯ ಸಾಪ್ತಾಹಿಕ ಆವೃತ್ತಿಗಳು ಪಾಕ್ಷಿಕ ಪತ್ರಿಕೆಗಳಾಗಿ ಬದಲಾಗಿವೆ.

ಪುಣ್ಯದ ಮಾತೆಂದರೆ ನಮ್ಮ ದೇಶದ ಸಾರ್ವಜನಿಕ ವಲಯದ ಬ್ಯಾಂಕು ಮತ್ತು ವಿಮಾ ವಲಯ ‘ಜಾಗತಿಕ ಕುಸಿತ’ವೆಂದು ಬಿಂಬಿಸಲಾಗಿರುವ ಅಮೆರಿಕಾ ಪ್ರಣೀತ ಅರ್ಥ ವ್ಯವಸ್ಥೆಯ ನರಳಾಟವನ್ನು ಮೆಟ್ಟಿ ನಿಂತಿವೆ. ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ ದೊಡ್ಡ ಮಟ್ಟದಲ್ಲಿ ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತಿರುವುದರ ಜೊತೆಜೊತೆಗೇ ಇನ್ನಿತರ ರಾಷ್ಠ್ರೀಕೃತ ಬ್ಯಾಂಕುಗಳೂ ವಿವಿಧ ಹುದ್ದೆಗಳಿಗೆ ನೇಮಕಾತಿಯ ವಿವರಗಳನ್ನು ಪ್ರಕಟಿಸುತ್ತಲೇ ಇವೆ. ಈ ದೇಶದ ಅತಿದೊಡ್ಡ ವಿಮಾ ಸಂಸ್ಥೆಯಾದ ಎಲ್ಲೈಸಿ ಬರುವ ವರ್ಷದಲ್ಲಿ ಹತ್ತು ಸಾವಿರ ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆಯೆಂದು ಅದರ ಅಧ್ಯಕ್ಷರು ಪ್ರಕಟಿಸಿದ್ದಾರೆ. ಈ ಸಂಸ್ಥೆಗಳು ಗಟ್ಟಿಯಾಗಿ ನಿಲ್ಲಲು ಅವೆಲ್ಲ ಸಾರ್ವಜನಿಕ ವಲಯದಲ್ಲಿರುವುದು ಮತ್ತು ಜನರಿಗೆ ಉತ್ತರ ದಾಯಿತ್ವವನ್ನು ಹೊಂದಿರುವುದೂ ಕಾರಣ.

ಅಮೆರಿಕಕ್ಕೇನಾಗಿತ್ತು? ಹಣಕಾಸು ಬಂಡವಾಳದ ತೀರದ ದಾಹ ಹಾಗೂ ಅನಿರ್ಭಂಧಿತ ಮುಕ್ತ ಮಾರುಕಟ್ಟೆಯು ಅಲ್ಲಿನ ಪ್ರಭುತ್ವದ ನಿಯಂತ್ರಣ ಪರಿಧಿಯಿಂದ ದೂರ ಉಳಿದದ್ದೇ ಎಂದು ಈಗಾಗಲೇ ವಿಶ್ಲೇಷಿಸಲಾಗಿದೆ. ಅಲ್ಲಿ ಗೃಹಸಾಲ ನೀಡುತ್ತಿದ್ದ ಖಾಸಗೀ ಸಂಸ್ಥೆಗಳು ತಮಗೆ ಅಡವಿಡಲಾಗುವ ಸ್ಥಿರಾಸ್ತಿಯ ಮೌಲ್ಯವನ್ನು ಊಹಾತ್ಮಕವಾಗಿ ಹೆಚ್ಚಿಸಿ ಅರ್ಜಿದಾರನ ಸಾಲ ವಾಪಸಾತಿಯ ಅರ್ಹತೆಗಳನ್ನು ಲೆಕ್ಕಿಸದೇ ಸಾಲ ನೀಡಿದವು. ಸರ್ಕಾರದ ನಿಯಂತ್ರಣ ಪರಿಧಿಯನ್ನು- ಅವು ಬರಿಯ ಕಾಗದದ ಹುಲಿಗಳು-ಬೇಕೆಂತಲೇ ಕಣ್ತಪ್ಪಿಸಿ ಹೂಡಿಕೆದಾರರನ್ನು ಪುಸಲಾಯಿಸಿ ಸಾರ್ವಜನಿಕ ಬಂಡವಾಳ ಸಂಗ್ರಹಿಸಲಾಯಿತು. ಯಾವಾಗ ಸ್ತಿರಾಸ್ಥಿಯ ಮಾರುಕಟ್ಟೆ ಮೌಲ್ಯ ಸರಿಯಾಗಿ ಅಳೆಯಲಾಯಿತೋ ಆವಾಗ ಹೀಗೆ ಊಹಾತ್ಮಕವಾಗಿ ಆಕಾಶದೆತ್ತರಕ್ಕೆ ಜಿಗಿದಿದ್ದ ಈ ಖಾಸಗೀ ಹಣಕಾಸು ಸಂಸ್ಥೆಗಳ ಶೇರು ಬೆಲೆ ನೆಲ್ಲ ಕಚ್ಚ ತೊಡಗಿದವು. ಮೊದಲೇ ಹೀಗಾಗಬಹುದೆಂದು ಅರಿತಿದ್ದ ದೈತ್ಯರು ವಹಿವಾಟಿನಿಂದ ದೂರ ಉಳಿಯತೊಡಗಿದ ಕಾರಣ ಪರಿಸ್ಥಿತಿ ಮತ್ತಷ್ಟು ಹದ ಕೆಟ್ಟಿತು. ಪರಿಣಾಮ ಈ ಖಾಸಗಿಯವರ ಹುಚ್ಚಾಟಗಳ ಮೇಲೆ ಬಂಡವಾಳ ಹೂಡಿದ್ದವರೆಲ್ಲ ಪಾತಾಳಕ್ಕೆ ಬಿದ್ದರು. ಲಾಭಕ್ಕಿಂತಲೂ ಬರಿಯ ಕೈ ಬದಲಾವಣೆಯನ್ನೇ ನಂಬಿಕೊಂಡಿದ್ದ ಅದೆಷ್ಟೋ ಚಿಕ್ಕ ಪುಟ್ಟ ಕಂಪನಿಗಳು ಬಾಗಿಲು ಹಾಕಿಕೊಂಡವು. ಅವು ಜಾಗತಿಕ ಮಾರುಕಟ್ಟೆಯ ಹಲವು ಸ್ತರಗಳಲ್ಲಿ ಹೂಡಿದ್ದ ಅಥವ ಈಗಾಗಲೇ ಅಲ್ಪಸ್ವಲ್ಪ ಮುಂಗಡ ಕೊಟ್ಟು ಕಾದಿರಿಸಿದ್ದ ವ್ಯವಹಾರಗಳನ್ನೆಲ್ಲ ಅರ್ಧಕ್ಕೇ ಬಿಟ್ಟವು. ಪರಿಣಾಮ ಅಮೆರಿಕವನ್ನೇ ನಂಬಿಕೊಂಡಿರುವ ಸಾಫ್ಟ್ವೇರ್ ಪ್ರಪಂಚ ಅಲ್ಲಾಡತೊಡಗಿತು.

ಒಂದು ಅಂದಾಜಿನಂತೆ ಒಂದು ಟ್ರಿಲಿಯನ್ ಅಮೆರಿಕನ್ ಡಾಲರ್ ಹಣ ಈ ಜಾಗತಿಕ ಕುಸಿತದಿಂದಾಗಿ ಕೊಚ್ಚಿಹೋಗಿದೆ. ಬೇರ್ಸ್ಟರ್ನ್, ಎಐಜಿ, ಅವಿವಾ, ಫೋರ್ಟಿಸ್ ಇನ್ನೂ ಮುಂತಾದ ಹೂಡಿಕೆ, ಬ್ಯಾಂಕಿಂಗ್ ಮತ್ತು ವಿಮಾ ವ್ಯವಹಾರದ ಕಂಪೆನಿಗಳು ಮತ್ತೆ ತಲೆ ಎತ್ತಲಾರದ ದುರವಸ್ಥೆ ತಲುಪಿದವು. ಅಮೆರಿಕದ ಸರ್ಕಾರ ನಷ್ಟ ಪೀಡಿತ ಹಣಕಾಸು ಸಂಸ್ಥೆಗಳಿಗೆ, ಬ್ಯಾಂಕ್ ಮತ್ತು ವಿಮಾ ಕಂಪನಿಗಳಿಗೆ ೭೦೦ ಬಿಲಿಯನ್ ಡಾಲರ್ ನೆರವು ಘೋಷಿಸಿ ಅವುಗಳ ನೆರವಿಗೆ ನಿಂತಿದೆ. ಎಐಜಿ ಕಂಪನಿಯ ೭೯.೯% ಶೇರುಗಳನ್ನು ಸರ್ಕಾರವೇ ಖರೀದಿಸಿ ಅದಕ್ಕೆ ೮೫ ಬಿಲಿಯನ್ ಡಾಲರ್ ನೆರವು ಕೊಟ್ಟಿದೆ. ಬ್ಯಾಂಕ್ ಆಫ್ ಅಮೆರಿಕ ಮೆರಿಲ್ ಲಿಂಚ್ ಕಂಪನಿಯನ್ನು ವಶಪಡಿಸಿಕೊಂಡಿದೆ. ಬ್ರಿಟನ್ ಸರ್ಕಾರವಂತೂ ಖಾಸಗೀ ಬ್ಯಾಂಕುಗಳನ್ನೆಲ್ಲ ತನ್ನ ಸುಪರ್ದಿಗೆ ತೆಗೆದುಕೊಂಡು ಪುನಃ ರಾಷ್ಠ್ರೀಕರಣದ ಕೆಲಸಕ್ಕೆ ಕೈ ಹಾಕಿದೆ.

ಪರಿಸ್ಥಿತಿ ಹೀಗಿರುವಾಗ ಲಜ್ಜರಹಿತವಾದ ಮತ್ತು ಅಮೆರಿಕದ ಅಣತಿಗೆ ತಕ್ಕಂತೆ ಕುಣಿಯುತ್ತಿರುವ ಮನಮೋಹನ್ ಸಿಂಗ್ ಪ್ರಣೀತ ಉದಾರವಾದೀ ಸರ್ಕಾರ ಲೋಕಸಭೆ ಮತ್ತು ರಾಜ್ಯಸಭೆಗಳ ಕಲಾಪದಲ್ಲಿ ವಿಮಾ ಮಸೂದೆಗೆ ತಿದ್ದುಪಡಿ ತರುವ ಅಧಿಸೂಚನೆ ಮಂಡಿಸಿದೆ. ಹೊಸ ವಿಧೇಯಕದ ಪ್ರಕಾರ ವಿಮಾ ವಲಯದಲ್ಲಿ ಖಾಸಗೀ ಬಂಡವಾಳ ಹೂಡಿಕೆ ೪೯% ಕ್ಕೆ ಏರುತ್ತದೆ. ಮತ್ತು ಸಾರ್ವಜನಿಕ ರಂಗದ ವಿಮಾ ಸಂಸ್ಥೆ ಎಲ್ಲೈಸಿಯ ಬಂಡವಾಳವನ್ನು ಈಗಿರುವ ೫ ಕೋಟಿಗಳಿಂದ ೧೦೦ ಕೋಟಿಗಳಿಗೆ ಹೆಚ್ಚಿಸಿ ಸಾರ್ವಜನಿಕವಾಗಿ ಅದನ್ನು ಸಂಗ್ರಹಿಸಲಾಗುತ್ತದೆ. ಅಂದರೆ ಅದನ್ನು ಖಾಸಗಿಯವರಿಗೆ ಹಂತಹಂತವಾಗಿ ಬಿಟ್ಟುಕೊಡಲಾಗುತ್ತದೆ. ಮೇಲ್ನೋಟಕ್ಕೆ ಇದೊಂದು ಉದಾರವಾದೀ ಸರ್ಕಾರದ ಧೃಢ ಹೆಜ್ಜೆಯಂತೆ ಮತ್ತು ಬಂಡವಾಳವನ್ನು ಆಕರ್ಷಿಸುವ ಯೋಜನೆಯಂತೆ ಕಂಡರೂ ಇದೂ ಅಮೆರಿಕದ ಕನಸನ್ನು ನನಸಾಗಿಸುವ ದುರುದ್ದೇಶ ಹೊಂದಿರುವ ಮತ್ತು ಈ ದೇಶದ ಅಸಂಖ್ಯಾತ ಜನರು ಸಾರ್ವಜನಿಕ ಸಂಸ್ಥೆಗಳ ಮೇಲೆ ಇಟ್ಟಿರುವ ಅಚಲ ವಿಶ್ವಾಸವನ್ನೇ ಪ್ರಶ್ನಿಸುತ್ತಿರುವ ವಿಧೇಯಕವಾಗಿದೆ. ಸರ್ಕಾರದ ಪಂಚವಾರ್ಷಿಕ ಯೋಜನೆಗಳೂ ಸೇರಿದಂತೆ ದೇಶದ ಬಹುತೇಕ ನೀರಾವರಿ, ಸಾರಿಗೆ ಮತ್ತು ವಿದ್ಯುತ್ ಯೋಜನೆಗಳಿಗೆ ಹಣಕಾಸು ನೆರವು ನೀಡುತ್ತಿದ್ದ ಬೃಹತ್ ಉದ್ಯಮವೊಂದು ಖಾಸಗಿಯವರ ಪಾಲಾದರೆ ದೇಶದ ಆರ್ಥಿಕತೆಯ ಮೇಲಾಗುವ ಪರಿಣಾಮಗಳು ಒಂದೆರಡಲ್ಲ. ಮುಖ್ಯವಾಗಿ ಜಾಗತಿಕ ವಿಮಾವಲಯದಲ್ಲಿ ತಾವೇ ದೈತ್ಯರೆಂದು ಬಿಂಬಿಸಿಕೊಳ್ಳುವ ಎಐಜಿ, ಪ್ಯುಡೆನ್ಶಿಯಲ್, ಅವಿವಾ ಈಗಾಗಲೇ ನಷ್ಟದ ಭರದಿಂದ ಕುಸಿದು ಕೂತಿದ್ದರೂ ಈ ನೆಲದಲ್ಲಿ ಈಗಾಗಲೇ ಕಾಲಿಟ್ಟಿರುವುದರಿಂದ ಸಾರ್ವಜನಿಕ ಸಂಸ್ಥೆಯೊಂದು ಇಷ್ಟು ದಿನಗಳ ಕಾಲ ಸಂಗ್ರಹಿಸಿರುವ ದೊಡ್ಡ ಮೊತ್ತದ ‘ಲೈಫ್ ಫಂಡ್’ ಮತ್ತು ವಿಶ್ವಾಸದ ಜಾಲವನ್ನು ಬೇಧಿಸಿ ಲಾಭಬಡುಕತನದ ಪೈಪೋಟಿಯ ಮೂಲಕ ಹುಚ್ಚು ಹಿಡಿಸುತ್ತವೆ. ಲಾಭದ ಆಸೆಗೆ ಬಿದ್ದ ಗ್ರಾಹಕರು ಅರಿವು ಪಡೆಯುವುದರೊಳಗಾಗಿ ತಮ್ಮ ಕಷ್ಟಾರ್ಜಿತವನ್ನೆಲ್ಲ ಕಳೆದುಕೊಂಡಿರುತ್ತಾರೆ. ಶೇರು ಮಾರುಕಟ್ಟೆಯೆಂಬ ಮಾಯಾಮೋಹಿನಿಯ ಪಾಶದ ಜೂಜಿಗೆ ಬಿದ್ದ ಸಾಮಾನ್ಯ ಹೂಡಿಕೆದಾರ ತನ್ನದೆಲ್ಲವನ್ನೂ ಕಳೆದುಕೊಳ್ಳುತ್ತಾನೆ.

ಖಾಸಗೀ ಕಂಪನಿಗಳ ಕೆಲ ಸ್ವಾರಸ್ಯಗಳು:
1.AIG (ಟಾಟಾ ಕಂಪನಿಯ ಸಹಯೋಗಿ) ದಿವಾಳಿ ಘೋಷಿಸಲು ಕೆಲವೇ ಗಂಟೆಗಳ ಮೊದಲು ಅಮೆರಿಕದ ಸರ್ಕಾರ ಕೊಡಮಾಡಿದ ೮೫ ಬಿಲಿಯನ್ ಡಾಲರ್ ಮೂಲಕ ಕೃತಕ ಉಸಿರಾಟ ಪಡೆಯಿತು.
೨. ಪ್ಯುಡೆನ್ಶಿಯಲ್ ದಾವೆ ಕೊಡಲಾಗದೇ ತನ್ನನ್ನು ತಾನು ದಿವಾಳಿ ಎಂದು ಘೋಷಿಸಿಕೊಂಡಿದ್ದ ಇತಿಹಾಸ ಹೊಂದಿದೆ.
೩. ಫೋರ್ಟಿಸ್ ತನ್ನೆಲ್ಲ ಹಕ್ಕುಗಳನ್ನು ಯೂರೋಪಿನ ಮೂರು ದೇಶಗಳಿಗೆ ಮಾರಿಕೊಂಡಿದೆ.
೪. ING ಮತ್ತು aegon ಕಂಪೆನಿಗಳಿಗೆ ಡಚ್ ಸರ್ಕಾರ ಹಣಕಾಸು ಸಹಾಯ ವಿಸ್ತರಿಸಿ ಬೆಂಬಲಿಸಿದೆ.
೫. ಅಮೆರಿಕ, ಯೂರೋಪ್, ಜಪಾನ್ ದೇಶಗಳಲ್ಲಿ ವಿಮಾ ವಹಿವಾಟು ಋಣಾತ್ಮಕವಾಗುತ್ತಿದೆ.

ಜಾಗತಿಕ ಸ್ಥಿತಿ ಹೀಗಿರುವಾಗ ಮುಕ್ತ ಮಾರುಕಟ್ಟೆಯ ಉದಾರೀಕರಣ ನೀತಿ ವಿಫಲವಾಗಿರುವ ಉದಾಹರಣೆ ಕಣ್ಣೆದುರೇ ಇರುವಾಗ ಅಲ್ಲದೇ ಅಮೆರಿಕಾ, ಯೂರೋಪ್, ಡಚ್ ಸರ್ಕಾರಗಳು ತಮ್ಮ ದೇಶದ ಕಂಪನಿಗಳು ದಿವಾಳಿಯಾಗುವುದನ್ನು ತಪ್ಪಿಸಲು ಅವನ್ನೆಲ್ಲ ಕೊಂಡು ಕೊಂಡು ರಾಷ್ಟ್ರೀಕರಣ ಮಾಡುತ್ತಿರುವ ವರ್ತಮಾನದಲ್ಲಿ ನಮ್ಮ ದೇಶದ ನೇತಾರರು ನಮ್ಮ ಸಾರ್ವಜನಿಕ ವಲಯವನ್ನು ಖಾಸಗಿಗೊಳಿಸುವ ವಿಧೇಯಕವನ್ನು ಮಡಿಸುತ್ತಿದ್ದಾರೆ. ಆ ಮೂಲಕ ಅಮೆರಿಕದ ದುರುದ್ದೇಶಗಳನ್ನು ಈ ದೇಶದ ಸಾಮಾನ್ಯ ಜನತೆಯ ಮೇಲೆ ಹೇರುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಜಾಗತಿಕ ಬಿಕ್ಕಟ್ಟಿನ ಪರಿಣಾಮ ನಮ್ಮ ಅರ್ಥ ವ್ಯವಸ್ಥೆಯ ಮೇಲಾಗದಂತೆ ನಮ್ಮ ಸಾರ್ವಜನಿಕ ರಂಗವನ್ನು ಬಲಪಡಿಸಬೇಕಿತ್ತು. ಅದು ಬಿಟ್ಟು ನಷ್ಟದಲ್ಲಿರುವ ವಿದೇಶೀ ಕಂಪನಿಗಳಿಗೆ ನಡೆಮುಡಿ ಹಾಸುತ್ತಿರುವ ಕಾರಣವಾದರೂ ಏನು? ಜಾಗತಿಕ ಹಣಕಾಸು ಬಂಡವಾಳ ಅಂದರೆ ಅಮೆರಿಕದ ಪ್ರಾಬಲ್ಯ ಮತ್ತು ಇಷ್ಟಾರ್ಥವನ್ನು ಪೂರೈಸಲು ದೇಶದ ಆರ್ಥಿಕ ಹಿತಾಸಕ್ತಿಯನ್ನು ಬಲಿಕೊಡಲು ಈ ಸರ್ಕಾರ ಹೊರಟಿದೆ.

ಇನ್ನು ಕೆಲವೇ ದಿನಗಳ ತನ್ನ ಆಯುಷ್ಯ ಹೊಂದಿರುವ ಈ ಸರ್ಕಾರ ಜನ ವಿರೋಧಿ ಮತ್ತು ದೇಶದ ಆರ್ಥಿಕ ಭದ್ರತೆಗೆ ವಿರುದ್ಧವಾದ ಈ ಸನ್ನದನ್ನು ಪ್ರಕಟಿಸುವ ಉದ್ದೇಶವಾದರೂ ಏನು? ನಮ್ಮ ಎಷ್ಟು ಜನ ಲೋಕಸಭಾಸದಸ್ಯರಿಗೆ/ ರಾಜ್ಯ ಸಭಾ ಸದಸ್ಯರಿಗೆ ಭವಿಷ್ಯದ ಚಿಂತೆ ಇದೆ? ಎಷ್ಟು ಜನರಿಗೆ ಸಮಸ್ಯೆಯ ಅರಿವಿದೆ? ಅದನ್ನು ನಾವು ಅವರಿಗೆ ತಿಳಿಸಿ ಹೇಳಬೇಕಿದೆ. ಸಮೂಹ ಮಾಧ್ಯಮಗಳ ಮೂಲಕ ಜನಸಾಮಾನ್ಯರಿಗೆ ಪರಿಸ್ಥಿತಿಯನ್ನು ವಿವರಿಸುವ ಕೆಲಸ ಈಗ ಜರೂರಾಗಿ ಆಗಬೇಕಿದೆ. ಮತ್ತು ನಮ್ಮ ಮುದ್ರಣ ಮಾಧ್ಯಮವೂ ಸಮಸ್ಯೆಯನ್ನು ಕೂಲಂಕುಷವಾಗಿ ಅವಲೋಕಿಸುವ ಮತ್ತು ವಿಶ್ಲೇಷಿಸುವುದೂ ಅತ್ಯಗತ್ಯ ಮಾಡಲೇ ಬೇಕಾದ ಕೆಲಸವಾಗಿದೆ.