ಒಟ್ಟು ಪುಟವೀಕ್ಷಣೆಗಳು

ಸೋಮವಾರ, ಜೂನ್ 27, 2011

ಅಂತರಂಗದ ಅಭ್ಯಾಸಕ್ಕೊಂದು ಪುಟ್ಟ ಟಿಪ್ಪಣಿ - ರಾಧಿಕಾ ನಡಹಳ್ಳಿ-ತುಂಬಿಕೊಳ್ಳುವ ತವಕ

ಅಂತರಂಗದ ಅಭ್ಯಾಸಕ್ಕೊಂದು ಪುಟ್ಟ ಟಿಪ್ಪಣಿ.
ಸಮಕಾಲೀನ ಕನ್ನಡ ಕಾವ್ಯ ಕ್ರಿಯೆಯು ಇಷ್ಟೂ ದಿನ ಹರಿದು ಬಂದ ಕಾವ್ಯ ಪರಂಪರೆಯನ್ನೇ ಹೊರಳು ಹಾದಿಗೆ ತಂದು ನಿಲ್ಲಿಸಿರುವ ಸಂದರ್ಭವಿದು. ಕಾವ್ಯ ಕ್ರಿಯೆಗೆ ಪರಂಪರೆಯ ಅರಿವು ಮತ್ತು ಅನುಭವಗಳ ಪಾರಮ್ಯ ಬೇಕೆನ್ನುವ ಮೂಲ ಮಂತ್ರವನ್ನೇ ಧಿಕ್ಕರಿಸಿ ನುಡಿದುದೆಲ್ಲವನ್ನೂ ಕಾವ್ಯ ಸಂಭವವೆಂದು ತಮಗೊಲಿದ ಮಿತಿಯ ಐಕಾನುಗಳಲ್ಲಿ ಪರ್ಯಾಲೋಚಿಸುತ್ತಿರುವ ಆಧುನಿಕ ಕವಿತೆಗಳ ವಿಪುಲ ಸಾಮ್ರಾಜ್ಯ ಮುದ್ರಣಮಾಧ್ಯಮವನ್ನು ಮೀರಿ ನಿಂತು, ಅಂತರ್ಜಾಲದ ಸಾಮಾಜಿಕ ತಾಣಗಳಲ್ಲಿ, ವೆಬ್ ಪುಟಗಳಲ್ಲಿ, ಹಾಗೇ ಅನ್ನಿಸಿದ್ದೆಲ್ಲವನ್ನೂ ಬರೆದು ಬರೆದ ತಕ್ಷಣವೇ ಪ್ರಕಟಿಸಿಯೂ ಬಿಡುವ ಅವಕಾಶವಿರುವ ಬ್ಲಾಗುಗಳಲ್ಲಿ ತನ್ನ ವಿಸ್ತರತೆಯನ್ನು ಮೆರೆಯುತ್ತಿದೆ.

ಕಾವ್ಯದ ವಿಪುಲ ಬೆಳೆಯಿರುವ ಹಸಿರುಕ್ರಾಂತಿಯಂತೇ ತೋರುವ ಕಾವ್ಯಕ್ರಾಂತಿಯ ಈ ದಿನಗಳಲ್ಲಿ ಯುವ ಬರಹಗಾರರ ಮೊದಲ ಪುಸ್ತಕಕ್ಕೆ ಪ್ರೋತ್ಸಾಹ ಧನ ನೀಡಿ ಪುಸ್ತಕ ಪ್ರಕಟಿಸುವುದಕ್ಕೆ ನೆರವಾಗುತ್ತಿರುವ ಪುಸ್ತಕ ಪ್ರಾಧಿಕಾರದ ಯೋಜನೆಯಡಿ ರಾಧಿಕಾ ಅವರ ಈ ಸಂಕಲನ ‘ತುಂಬಿಕೊಳ್ಳುವ ತವಕ’ ಪ್ರಕಟವಾಗುತ್ತಿದೆ. ರೂಪಕಗಳಿಗೂ ಪದ್ಯದ ಶೀರ್ಷಿಕೆಗಳಿಗೂ ಬರ ಬಂದಿರುವ ಕಾಲದಲ್ಲಿ ಚಿಂತನೆಗೆ ಹಚ್ಚಬಲ್ಲ ತಲೆಬರಹ ನೀಡಿರುವ ಕವಿಗೆ ಅಭಿನಂದನೆ.

ಹೊಸ ಕವಿಯ ಮೊದಲ ಸಂಕಲನದ ಸಮಸ್ಯೆಗಳು ಸಂಕೀರ್ಣವಾಗಿರುತ್ತವೆ. ಎಷ್ಟು ಕವಿತೆಗಳನ್ನು ಸೇರಿಸಬೇಕೆನ್ನುವುದರಿಂದ ಹಿಡಿದು ಅವುಗಳ ಅನುಕ್ರಮಣಿಕೆಯ ಕ್ರಮ, ಪ್ರಕಾಶಕರ ಜೊತೆ ಮಾಡಿಕೊಳ್ಳಲೇ ಬೇಕಾದ ಒಡಂಬಡಿಕೆಗಳು, ಪ್ರಕಟಣೆಯ ಹಿಂದಿನ ಹಲವು ಹಂತಗಳನ್ನು ಸುಸೂತ್ರವಾಗಿ ನಿವಾರಿಸಿಕೊಳ್ಳುವ ಜಾಣತನ-ಇತ್ಯಾದಿ, ಇತ್ಯಾದಿ. ಅದೃಷ್ಟಕ್ಕೆ ಈ ಕವಿಯ ಪ್ರಸ್ತುತ ಸಂಕಲನದಲ್ಲಿ ಕಡಿಮೆ ಸಂಖ್ಯೆಯಲ್ಲಿ ಕವಿತೆಗಳಿರುವುದು, ‘ಸಂಚಯ’ ಇದನ್ನು ಪ್ರಕಟಿಸುತ್ತಿರುವುದು ಕವಿಯ ಕಾವ್ಯ ಪ್ರವೇಶದ ಹಾದಿಯನ್ನು ಸುಗಮಗೊಳಿಸಿವೆ. ಪುಸ್ತಕ ಪ್ರಕಟನೆಯ ಹಿಂದಿನ ಕರಾಳ ಹಸ್ತಗಳ ಹಿಡಿತದಿಂದಲೂ ಅವರು ಪಾರಾಗಿದ್ದಾರೆ.

ಒಬ್ಬ ಕವಿ ತನ್ನ ಕಾವ್ಯ ಸೃಷ್ಟಿಗೆ ತನ್ನದೇ ಆದ ಮನೋಧರ್ಮವೊಂದನ್ನು ಸ್ಥಾಪಿಸಿಕೊಂಡಿರುತ್ತಾನೆ ಮತ್ತು ಸ್ಥಾಪಿಸಿಕೊಂಡಿರಲೇ ಬೇಕು. ಬದುಕಿನಲ್ಲಿ ನಿತ್ಯ ಕಾಡುತ್ತಲೇ ಇರುವ ಮೂಲಭೂತ ಸಮಸ್ಯೆಗಳಿಗೆ ಅವನು ನೀಡುವ ಪ್ರತಿಕ್ರಿಯೆ ಮತ್ತು ಅಂಥ ಸಮಸ್ಯೆಗಳು ಆ ಕವಿಯ ಭಾವಕೋಶದ ಮೇಲೆ ಕೆತ್ತಿದ ಸಾಮಾಜಿಕ ಮತ್ತು ಭಾವನಾತ್ಮಕ ಸ್ಥಿತ್ಯಂತರಗಳು ಅವನ ಕಾವ್ಯ ಕ್ರಿಯೆಗೆ ಪುಷ್ಟಿ ನೀಡುತ್ತವೆ. ವರ್ತಮಾನದ ಸಂಗತಿಗಳಿಗೆ ತಟ್ಟನೆ ನೀಡಿ ಬಿಡುವ ಪ್ರತಿಕ್ರಿಯೆಗಳು ಬರಿಯ ಹೇಳಿಕೆಗಳಾಗೇ ಉಳಿದುಬಿಡುತ್ತವೆ. ಹಾಗಾದಾಗ ಅಪ್ಪಟ ಕಾವ್ಯ ಹುಟ್ಟಲಾರದು. ಹೀಗೆ ಲೋಕದ ಸಂಗತಿಗಳಿಗೆ ಭಾವನಾತ್ಮಕ ಪ್ರತಿಕ್ರಿಯೆ ನೀಡುವಲ್ಲಿ ಇರುವ ಅತಿ ಸೂಕ್ಷ್ಮ ಸಂಗತಿಯೇ ಕಾವ್ಯವಾಗಿ ಅರಳುತ್ತದೆ. ಭಾಷೆಯನ್ನು ದುಡಿಸಿಕೊಳ್ಳುವ ಹಲವು ಸಾಧ್ಯತೆಗಳ ಅರಿವಿನ ಜೊತೆಗೇ ಖಾಸಗಿ ಅನುಭವವನ್ನು ಪರಂಪರೆಯ ತಟ್ಟೆಯಲ್ಲಿಟ್ಟು ತೂಗಿ ನೋಡುವ ವ್ಯವಧಾನವೂ ಕವಿಗೆ ಇರಬೇಕಾಗುತ್ತದೆ. ನಮ್ಮ ಅನೇಕ ಯುವ ಕವಿಗಳಿಗೆ ಈ ತಾಳ್ಮೆ ಮತ್ತು ಸಂಯಮಗಳು ಇಲ್ಲದಿರುವುದರಿಂದಲೇ ಅವರಿಗೆ ಆ ಕ್ಷಣದಲ್ಲಿ ಅನ್ನಿಸಿದ್ದನ್ನೂ ಓದುಗರೂ ಕಾವ್ಯವೆಂದು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಒದಗಿ ಬಿಟ್ಟಿದೆ. ಪ್ರಸ್ತುತ ಸಂಕಲನದಲ್ಲಿ ‘ನಾನು’ ಅನ್ನುವ ಆತ್ಮ ಪ್ರತ್ಯಯದಲ್ಲೇ ಬದುಕಿನ ವಿವಿಧ ಮಗ್ಗುಲಗಳನ್ನು ವಿಶಿಷ್ಟವಾಗಿ ಮತ್ತು ಪ್ರತಿರಮ್ಯತೆಯ ಸ್ಥಾಯಿಯಲ್ಲೇ ಹಿಡಿದಿರುವ ರಾಧಿಕಾ ನಡಹಳ್ಳಿಯವರ ಈ ಸಂಕಲನ ಆಧುನಿಕ ಬಿಕ್ಕಟ್ಟುಗಳಿಂದ ಪಾರಾಗಿದೆಯೆಂದು ಧೈರ್ಯವಾಗಿ ಹೇಳಬಹುದು.

ಚಳಿಗಾಲ ಕವಿತೆ
ಕೆಂಡದ ನೆನಪ ಅಗ್ಗಿಷ್ಟಿಕೆಯ ಮುಂದೆ
ಬಿಸಿ ನೆನಪ ಹೊದ್ದು ಕೈ ಉಜ್ಜುತ್ತ ಕೂತಿದೆ
ಅಗ್ಗಿಷ್ಟಿಕೆಯ ಕೆಂಡದ ಬಿಸಿಯ ತನ್ನೊಳಗೂ
ಆವಾಹಿಸಿಕೊಳ್ಳಲು ಸಜ್ಜಾಗಿದೆ (ಸಂಕೇತ)

‘ಕವಿತೆ’ ಎಂದರೆ ಯಾವುದೆನ್ನುವ ನಿತ್ಯನೂತನ ಪ್ರಶ್ನೆ ಇವರ ಈ ಸಂಕಲನ್ದುದ್ದಕ್ಕೂ ಚಾಚಿಕೊಂಡಿದೆ. ವ್ಯಾಖ್ಯಾನ ಕವಿಯ ಕೆಲಸವಲ್ಲ. ಅದು ಓದುಗನ ಹಕ್ಕು. ಬರಿಯ ಹೇಳಿಕೆಗಳಾಗದ ಇಂಥ ಸಾಲುಗಳು ಅರ್ಥದ ಸಮುದ್ರದಲ್ಲಿ ಎದ್ದೆದ್ದು ಹಾರುವ ಅಲೆಗಳಂತೆ ಮೊದಲ ಓದಿನಲ್ಲೇ ವಿಸ್ಮಯಗೊಳಿಸುತ್ತವೆ, ತನ್ಮಯಗೊಳಿಸುತ್ತವೆ.

ಮೌನದುರಿಯ ಮಾತಿನಲಾರಿಸಬಹುದೇ
ಮಾತಿನುರಿಯ ಮೌನದಲಿ ಮರೆಸಬಹುದೇ
ಮಾತ ಮರೆಸಲು ಮೌನದ ಮೊರೆಯೇ
ಮೌನ ಮುಗಿಸಲು ಮಾತಿನ ಹೊಳೆಯೇ (ವ್ಯತ್ಯಾಸ)

ಶಬ್ದ ಮತ್ತು ಅದರೊಳಗಿನ ಲಯದ ಹದವರಿತ ಮನಸ್ಸು, ಆಶಯ ಮತ್ತು ಆಕೃತಿಗಳ ಅನನ್ಯ ಸಂಯೋಜನೆಯನ್ನು ನಿರ್ಮಿಸಬಲ್ಲುದು. ಹೀಗಾದಾಗಲೇ ಲಯ ವಿನ್ಯಾಸ ತನಗೆ ತಾನೇ ಏರ್ಪಡುತ್ತದೆ. ಈ ಕಾರಣಕ್ಕೆ ಇಲ್ಲಿನ ಬಹುತೇಕ ಪದ್ಯಗಳು ನಮ್ಮೊಳಗನ್ನು ಬೆಳಗುತ್ತವೆ.

ಇರುಳು ಅರ್ಧ ಕಳೆದಿದೆ
ಕೆಲ ತಾಸಿಗೆ ಹೊಸ ಬೆಳಕಿದೆ
ಎದೆಯೊಳಗಿನ್ನೂ ಕತ್ತಲಿದೆ
ನೀ ಬಂದ ಮೇಲಷ್ಟೇ ಬೆಳಗಲಿದೆ (ಪ್ರಥಮ)

ಎನ್ನುವುದು ಮೊದಲ ಓದಿಗೆ ಬರಿಯ ಅಂತ್ಯ ಪ್ರಾಸದ ಸರ್ಕಸ್ಸಿನಂತೆ ಕಂಡರೂ ಮರು ಓದಿಗೆ ಕವಿಯು ‘ಪ್ರಥಮ’ ಅನ್ನುವುದನ್ನು ಸಂಖ್ಯಾಸೂಚಕವಾಗಿ ಬಳಸಿದ್ದಾರೋ, ಪುರುಷ ವಾಚಕವಾಗಿ ಬಳಸಿದ್ದಾರೋ, ಅಥವ ಶ್ರೇಣೀಕರಣದ ವ್ಯಂಗ್ಯವಾಗಿ ಬಳಸಿದ್ದಾರೋ ಎನ್ನುವ ಕುತೂಹಲ ಹುಟ್ಟುತ್ತದೆ. ಪ್ರಯೋಗಗಳೇ ಕಡಿಮೆಯಾಗುತ್ತಿರುವ ಕಾಲದಲ್ಲಿ ಇದೂ ಉಚಿತವೇ!

ಅವನುಸಿರು ಒಮ್ಮೆಯೂ
ಸುಳಿಯದ ಗಾಳಿಯಲ್ಲೂ
ಅದೇನೋ ಗಂಧ ತೇಲಿದಂತಾಗಿ
ಹೃದಯ ಬಡಿತ ಏರಿ
ಕೊಂಚ ಬೆವರಿದಳು (ತಿಳಿ)

ಹರೆಯದ ಪುಳಕಗಳನ್ನು ಸಮರ್ಥವಾಗಿ ತೆರೆದಿಡುವ ಈ ಸಾಲುಗಳು ಹೃದಯ ಬಡಿತ ಏರಿ/ ಕೊಂಚ ಬೆವರಿದಳು ಅನ್ನುವುದು ಆಧುನಿಕ ಮನೋಭಾವದವರಿಗೆ ವಿಶಿಷ್ಠವೆನ್ನಿಸದಿದ್ದರೂ _ ಏಕೆಂದರೆ ಆಧುನಿಕ ಬದುಕು ಬಗೆಯುತ್ತಿರುವ ಜೀವನ ಕ್ರಮದಲ್ಲಿ ಅಮೂರ್ತ ಭಾವನೆಗಳಿಗಿಂತಲೂ ಮೂರ್ತ ಅನುಭವದ್ದೇ ಮೇಲುಗೈಯ್ಯಾಗಿರುವ ಕಾರಣ- ಒಳ್ಳೆಯ ಸಾಲುಗಳಾಗಿ ಕಾಣುತ್ತವೆ. ಆದರೂ ಪದ್ಯ ಮುಂದುವರೆಸಿದ ಕವಿ

ಬಣ್ಣ ತಿಳಿಯದ ಕಣ್ಣ ಕುರಿತು
ಕನಸ ಕಟ್ಟದಿದ್ದರೂ
ಇಂದಿನ ಮನಸ ಖುಷಿಯ
ನೆನಪಿಗೊಂದು ಕಾವ್ಯ ಬರೆದಿಟ್ಟಳು (ತಿಳಿ)

ಅನ್ನುವುದು ವ್ಯರ್ಥ ಮುಂದುವರೆಸಿದ ಸಾಲುಗಳಾಗಿ ತೋರುತ್ತವೆ. ಅಮೂರ್ತವಾಗಿ ಹೊಳೆದುದನ್ನು ಮೂರ್ತವಾಗಿ ತೋರಿಸಲೇಬೇಕೆನ್ನುವ ಹಟ ಕಾವ್ಯವಾಗುವುದಿಲ್ಲ ಎನ್ನುವ ಅರಿವು ಕವಿಗೆ ಹುಟ್ಟಬೇಕು.

ಅರರೇ ಇಲ್ಲೇ ಬಾಗಿಲಲ್ಲೇ ನಿಲ್ಲಿಸಿ ಏನಿದು ಯೋಚನೆ
ಹೋಗು ಒಳಗೆ- ಇದೋ ಬಂದೆ
ಇಟ್ತ ಚುಕ್ಕೆಯ ಎಳೆ ಸೇರಿಸಿ
ಅಮ್ಮಾ ನೋಡಲ್ಲಿ ಯಾರು ಬಂದರು?! (ಎಳೆ)

ಎಲ್ಲೆಲ್ಲೋ ಬಿಡಿಸಿಟ್ಟಿರುವ ಚುಕ್ಕೆಗಳನ್ನು ಸೇರಿಸಿ ರಂಗವಲ್ಲಿ ಅರಳಿಸುವ ಹಾಗೇ ಬದುಕಿನ ಚುಕ್ಕೆಗಳಾಗಿರುವ ನಮ್ಮೊಳಗನ್ನೂ ಸಂಬಂಧದ ಎಳೆ ಸೇರಿಸಿ ಜೋಡಿಸಬೇಕಿದೆ. ಇಂಥ ಹಂಬಲ ಈ ಕವಿಗಿದೆ. ಸಂಬಂಧಗಳನ್ನೇ ನಿರಾಕರಿಸುವ ‘ಸ್ಟೇ ಟುಗೆದರ್’ ಕಾಲದಲ್ಲಿ ಇದೂ ಅಪರೂಪವೇ.

ತಲ್ಲಣಗೊಳಿಸಿದ ಅನುಭವ
ಒಳಗಿದ್ದರೆ ಕ್ಷಣ ಕ್ಷಣ
ಅಣು ಅಣು ತಲ್ಲಣ
ಹೊರಬಂದ ಕ್ಷಣ ನಿರಾಳ
ಮರುಕ್ಷಣ ಅನುಮಾನ
ಪ್ರಶ್ನೆಗಳ ಆಕ್ರಮಣ (ಬರೆ)

ಕಬ್ಬಿಣದ ಸಲಾಕೆಯನ್ನು ನಿಗಿ ನಿಗಿ ಬೆಂಕಿಯಲ್ಲಿ ಕಾಯಿಸಿ ಮೈ ಸುಡುವ ‘ಬರೆ’ಯ ಹಾಗೇ ಬರೆಯುವುದು ಕೂಡ ಮನಸ್ಸನ್ನು ಸುಟ್ಟು ಸುಟ್ಟು ಶೋಧಿಸಬೇಕಾದದ್ದು. ಬರೆ ಎನ್ನುವ ಪದವೇ ಅನುಭವದ ಅರ್ಥಕೋಶದಿಂದ ಕಾಣೆಯಾಗುತ್ತಿರುವ ದಿನಗಳಲ್ಲಿ ಆ ಶಬ್ದವನ್ನೇ ಶಬ್ದ ಗಾರುಡಿಯನ್ನಾಗಿಸಿಕೊಂಡಿರುವ ಕ್ರಮ ಅವರ ತಕ್ಕಮಟ್ಟಿನ ಸಾಧನೆಯ ಕುರುಹಾಗಿ ಕಾಣುತ್ತದೆ.

ಹಗಲೆಲ್ಲ ಕವಿತೆ ಧ್ಯಾನ
ಇರುಳು ಅದರದೇ ಸನ್ನಿಧಾನ (ಪಾಠ)

ಕವಿತೆಯನ್ನು ಮತ್ತು ಕವಿತೆ ಹುಟ್ಟುವ ರೀತಿಯನ್ನೂ ಈ ಕವಿ ತಮ್ಮ ಹಲವು ರಚನೆಗಳಲ್ಲಿ ಚಿಂತಿಸಿದ್ದಾರೆ. ಚಿಂತನೆಯ ಲವಲೇಷವೂ ಇರದ ದುರ್ಭರ ದಿನಗಳಲ್ಲಿ ಈಕೆಯ ಕಾವ್ಯ ಕನ್ನಿಕೆ ನಡೆಯುತ್ತಿರುವುದೂ ಸೋಜಿಗವೆನ್ನಿಸುತ್ತದೆ.

ನಿನ್ನ ಕೊರಳ ಮೌನದ ನಕಲಿ
ಆಭರಣ ಕಳಚಿ ನಿಲ್ಲು
ಇಲ್ಲಿ ಸಂಭ್ರಮದಿಂದ ಕಾದಿದೆ
ಅಸಲಿ ಮಾತಿನ ಮುತ್ತಿನ ಹಾರ (ಹಾರದ ನಿರೀಕ್ಷೆ)

ಅನ್ನುವಲ್ಲಿ ಕೂಡ ‘ಹಾರದ ನಿರೀಕ್ಷೆ’ ಎನ್ನುವುದು ಕೊರಳಿಗೆ ಹಾಕುವ ಹಾರವೋ ಅಥವ ಹಾಗೇ ಹಗುರಕ್ಕೆ ಹಾರದೇ ಭದ್ರವಾಗಿ ನಿಲ್ಲುವ ನಿರೀಕ್ಷೆಯೇ ಎನ್ನುವ ಪರಿ ಕೂಡ ಓದುಗನ ವಿಸ್ತರಣೆಗೆ ಬಿಟ್ಟ ವಿಚಾರ.

ಇಷ್ಟೆಲ್ಲ ಹೇಳಿದ ಮಾತ್ರಕ್ಕೆ ಈ ಸಂಕಲನದ ಉಳಿದ ಪದ್ಯಗಳಿಗೂ ಈ ಮಾತು ಅನ್ವಯಿಸುತ್ತದೆ ಎನ್ನುವಂತಿಲ್ಲ. ಏಕೆಂದರೆ ಬರಿಯ ನಿರೀಕ್ಷೆಗಳು, ಕನಸುಗಳು, ಹೇಳಿಕೆಗಳನ್ನು ಕೂಡ ಪದ್ಯವಾಗಿಸುವ ಧಾರಾಳ ವಾಚಾಳಿತನ ಉಳಿದ ಹಲವು ಪದ್ಯಗಲಲ್ಲಿ ಕಾಣುತ್ತದೆ. ಒಂದು ಸಂಕಲನವೆಂದರೆ ಗಟ್ಟಿ ಮತ್ತು ಜೊಳ್ಳು ಕಾಳುಗಳ ಮಿಶ್ರಣ. ಗಟ್ಟಿಕಾಳುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಜೊಳ್ಳು ಕಾಳುಗಳು ಕಡಿಮೆ ಇದ್ದರೆ ಓದುಗ ಬದುಕುತ್ತಾನೆ. ಇಲ್ಲಿ ಜೊಳ್ಳು ಕಾಳುಗಳು ವಿಪರೀತಾವಾಗದೇ ಇರುವುದು ಸಮಾಧಾನದ ಅಂಶ.

ಸ್ವಮಗ್ನ ಸ್ಥಿತಿಗಳಲ್ಲಿ ಅನ್ನಿಸಿದ್ದನ್ನು ಕಾವ್ಯವೆನ್ನುವ ಆಧುನಿಕ ಕಾಲದಲ್ಲಿ ಹೃದಯೊಳಕ್ಕೂ ಇಳಿಯುವ ಸಾರ್ಥಕ ಸಾಲುಗಳನ್ನು ನೀಡಿರುವ ಕವಿಗೆ ಅಭಿನಂದನೆ ಸಲ್ಲಿಸುತ್ತಲೇ ಅವರು ಕನ್ನಡ ಕಾವ್ಯ ಪರಂಪರೆಯೊಂದಿಗೆ ತಮ್ಮ ಪುಟ್ಟ ಹೆಜ್ಜೆಗಳನ್ನೂ ಸೇರಿಸಬೇಕೆನ್ನುವ ತವಕವಿರುವುದನ್ನು ಗುರುತಿಸಿದ್ದೇನೆ. ಅದಕ್ಕೆ ತಯಾರಿಯಾಗಿ ಈಗಾಗಲೇ ತನಗೆ ದಕ್ಕಿರುವ ಸಂಗತಿಗಳಾಚೆಗಿನ ದಕ್ಕದ ಸಂಗತಿಗಳಿಗೂ ಕವಿ ಕಣ್ಣು ಕೈ ಕಿವಿಗಳನ್ನು ಚಾಚಬೇಕಿದೆ. ದೀರ್ಘ ಪರಂಪರೆಯ ಸವಿಸ್ತಾರ ಆಲಾಪಗಳನ್ನು ಅಭ್ಯಸಿಸುತ್ತಲೇ ಕಾಲಕ್ಕೆ ತಕ್ಕುದಾದ ಹ್ರಸ್ವ ಸ್ವರ ಪ್ರಸ್ತಾರವನ್ನೂ ಈಕೆ ದಕ್ಕಿಸಿಕೊಳ್ಳಲಿ ಎನ್ನುವ ಆಶಯದ ಜೊತೆಗೇ ನೀವೂ ಪದ್ಯಗಳನ್ನು ನಿಮ್ಮದಾಗಿಸಿಕೊಳ್ಳಿ ಎಂದು ಬಿನ್ನವಿಸಿಕೊಳ್ಳುತ್ತಾ ಸ್ನೇಹದ ಹೆಸರಲ್ಲಿ ಇಂಥ ಅಪ್ಪಟ ಜವಾಬ್ದಾರಿ ನೀಡಿದ ಪ್ರಕಾಶಕ ಮಿತ್ರ ಶ್ರೀ ಡಿ.ವಿ.ಪ್ರಹ್ಲಾದರನ್ನೂ ನೆನೆಯುತ್ತೇನೆ. ನಮಸ್ಕಾರ.




ಭಾನುವಾರ, ಜೂನ್ 26, 2011

ಬೆಂಗಳೂರು ಪದ್ಯಗಳು



ಬೆಂಗಳೂರೆಂಬ ಅಪ್ಪಟ ಸುಂದರಿಗೆ
ಅದೆಷ್ಟೆಷ್ಟೋ ಮಿಂಡರು: ಕಣ್ಣು ಹೊಡೆದು
ಬಳಿಗೆ ಕರೆಯುವವರ ಹಾಗೇ ಗೌರವವಾಗಿ
ಕಾಣುವವರೂ ಕೂಡ ಬೆಚ್ಚಿಬೀಳುತ್ತಾರೆ-
ಅವಳ ಉದ್ದೋಉದ್ದದ ಯೋನಿಗೆ
ಬೊಗಸೆ ತುಂಬಿಯೂ ಉಳಿದು ಚೆಲ್ಲುವ ಮೊಲೆಗೆ
ಯಾವತ್ತಿಗೂ ಯಾರೂ ಚಿತ್ತು ಮಾಡಲಾಗದ ಅವಳ ಧಗೆಗೆ!



ಬೆಂಗಳೂರೆಂಬ ಮಾಯದೇವತೆಗೆ
ವರ ಕೊಡಲು ಅದೆಷ್ಟೆಷ್ಟೋ ಹಸ್ತಗಳು: ಸಲಹಲು
ಥೇಟು ಅಮ್ಮನದೇ ಕೈಗಳು, ಜಾಡಿಸಿ ಒದೆಯಲು
ಸಶಕ್ತ ಕಾಲುಗಳು, ಕರೆದು ಕೂರಿಸಿ ಹಸಿದ ಹೊಟ್ಟೆಗೆ
ಹಿಟ್ಟು ಹಾಕುವ ಬೀದಿ ಬದಿಯ ಅಂಗಡಿಗಳು
ಮೆಜೆಸ್ಟಿಕ್ಕಿನ ಸ್ಲಮ್ಮಿನಲ್ಲಿ ಆಡುವ ಬಡಕಲು ದೇಹಗಳು
ಮತ್ತು ಆ ದೇಹಗಳನ್ನು ಸಾಕಲು ಒದಗುವ ದೇಹ ವ್ಯಾಪಾರಗಳು!



ಬೆಂಗಳೂರೆಂಬ ಮಾಯಾಮೋಹಿನಿಗೆ
ಐಟಿ ಬೀಟಿಗಳೆಂಬ ಅವಳಿ ಮಕ್ಕಳುಗಳು
ಕಷ್ಟ ಸುಖ ಅರಿಯದ ಅರಿವಳಿಕೆ ಕುಡಿದ ಜೀವ ಕುಡಿಗಳು
ವೀಕೆಂಡಿನಲ್ಲಷ್ಟೇ ಸೂರ್ಯನ ಮುಖ ನೋಡುವ ದಂದುಗಗಳು
ಪ್ಲಾಸ್ಟಿಕ್ಕ್ ಕಾರ‍್ಡಿಗೆ ಮನುಷ್ಯರಿಗಿಂತಲೂ ಮಿಗಿಲಾದ ಬೆಲೆಗಳು
ಗಾಡಿಗೆ, ಮನೆಗೆ, ಮಜಾ, ಮೋಜವಾನಿಗೂ ಸಿಕ್ಕುವ ಸಾಲಗಳು
ಪಡೆದು ತೀರಿಸಲಾಗದೇ ರೈಲಿನಡಿಗೆ ಬೀಳುವ ದೇಹಗಳು!



ಟ್ರಾಫಿಕ್ ಜಾಮಿನಲ್ಲಿ ಪೇಪರ್ ಮಾರುವ ಮಾನವಂತರು
ಕಾರಿಗಡ್ದಡ್ಡ ನುಗ್ಗಿ ಕಾಸಿಗೆ ಕೈ ಚಾಚುವ ಖೋಜಾಗಳು
ಸುಳ್ಳು ಸುಳ್ಳೇ ಭರ್ತಿಯಾಗುವ ಸರ್ಕಾರೀ ಆಸ್ಪತ್ರೆಗಳ ಬೆಡ್ಡುಗಳು
ಪೀಕ್ ಅವರಿನಲ್ಲಿ ಸರ್ರನೆ ಸರಿದು ಹೋಗುವ ಗೂಟದ ಕಾರುಗಳು
ಈ ಮೂಲೆಯಿಂದ ಆ ಮೂಲೆಗೆ ಸಾಗುವ ಬಿಗ್ ಸರ್ಕಲ್ ಬಸ್ಸುಗಳು
ಸಾಯಿಬಾಬಾನ ದರ್ಶನಕ್ಕೆ ನಿಂತಷ್ಟೇ ನಿಷ್ಠೆಯಲ್ಲಿ ಗೋಭಿ ಮಂಚೂರಿಗೆ
ಇನಾಕ್ಸ್ ಥಿಯೇಟರಿಗೆ, ಶವದ ದರ್ಶನಕ್ಕೆ ಕಾದಿರುವ ಕಡು ಮೋಹಿಗಳು!



ಬೆಂಗಳೂರೆಂಬ ನಿಜಗಳು, ನಿಜದ ತಲೆಗೆ ಮೊಟಕುವ ಸುಳ್ಳುಗಳು
ಸುಳ್ಳು ಸುಳ್ಳೇ ಬ್ರೇಕಿಂಗ್ ಸುದ್ದಿಯ ಸದ್ದು ಹೊರಡಿಸುವ ಚ್ಯಾನಲ್ಲುಗಳು
ದುಃಖ ಮಡುಗಟ್ಟಿರುವಾಗಲೂ ಸಿನಿಮಾದ ಹಾಡು ಒದರುತ್ತಲೇ ಇರುವ ಎಫೆಮ್ಮುಗಳು
ಶ್ರೀ ಸಾಮಾನ್ಯನ ಸಂಸಾರ ಸರಿಗಮದ ತರಾನಗಳು
ಇಲ್ಲಿರಲೂ ಆಗದೇ ಓಡಿ ಹೋಗಲೂ ಆಗದ ಅಸಂಖ್ಯಾತ ಕನಸುಗಳು
ರಂಗಶಂಕರ, ಕಲಾಕ್ಷೇತ್ರ, ಎಡಿಯೆಗಳಲ್ಲಷ್ಟೇ ಇಣುಕುವ ಮೌಲ್ಯಗಳು.
ಬಿಟ್ಟೆನೆಂದರೂ ಬಿಡದ ಮಾಯಿಯ ಮುಖದ ಸುಕ್ಕುಗಳು!

(ಇವತ್ತಿನ ವಿಜಯಕರ್ನಾಟಕದಲ್ಲಿ ಪ್ರಕಟಿತ)

ಪ್ರಾರ್ಥನೆ

ಪ್ರಾರ್ಥನೆ
ಪ್ರಭೂ,
ಸುಳ್ಳಿನ ಪುಗ್ಗೆಯನ್ನೂದಿ
ಭ್ರಮೆಯ ಮತ್ತಿನಲ್ಲಿ ಮೈ ಮರೆತಿದ್ದೇನೆ
ನಿಜದ ಸೂಜಿ ಮೊನೆ ತಾಗಿಸಬೇಡ
ವಾಸ್ತವಕ್ಕಿಲ್ಲಿ ಕಿಮ್ಮತ್ತೇ ಇಲ್ಲ.

ಪ್ರಭೂ,
ಕೃತಕ ಹೂವಿನ ಹಾರತೊಡಿಸಿ
ಸನ್ಮಾನ ಸಂಭ್ರಮದ ಮಾತೆತ್ತಿದ್ದೇನೆ
ತಾಜಾ ಕುಸುಮದ ಉಸಿರಟ್ಟಬೇಡ
ಸಹಜಕ್ಕಿಲ್ಲಿ ಅವಕಾಶವಿಲ್ಲ.

ಪ್ರಭೂ,
ನಿಸ್ತೇಜದ ಮುಖಕ್ಕಷ್ಟು ರಂಗು ಬಳಿದು
ಮುಖವಾಡದೊಳಡಗಿಸಿಟ್ಟಿದ್ದೇನೆ
ನಿಜದ ಮಾತೆತ್ತಿ ತತ್ತಿಗೆ ಕಾವಿಡಬೇಡ
ಸಂತತಿಯ ಸಲಹುವುದಕ್ಕೆ ಸಮಯವಿಲ್ಲಿಲ್ಲ.

ಪ್ರಭೂ,
ಮೇಲ್ನೋಟದ ತಿಳುವಳಿಕೆಯನ್ನೇ
ಜ್ಞಾನವೆಂದು ಬಿಂಬಿಸಿದ್ದೇನೆ
ಪರಂಪರಾಗತ ಪರಾಮರ್ಶೆಗೊಡ್ಡಬೇಡ
ಪೂರ್ಣಾವದಿಯ ಪಿಂಚಣಿಗಿನ್ನು ಕೆಲವೇ ನಿಮಿಷ!

(ಇವತ್ತಿನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ)

ಶನಿವಾರ, ಜೂನ್ 18, 2011

ಕೆರೆ ಕೊಟ್ಟ ಕರೆ......

ಕೆರೆ ಕೊಟ್ಟ ಕರೆ.. ..
ನನ್ನ ಹುಟ್ಟೂರು ತರೀಕೆರೆ. ಬದುಕಿನ ಬಹುಭಾಗ ಕಳೆದದ್ದು ಅಂದರೆ ಹೆಂಡತಿ, ಮಕ್ಕಳು ಮನೆ ಕಟ್ಟಿಸಿದ್ದು ಅರಸೀಕೆರೆ. ಈಗ ಕಾರ್ಯಾರ್ಥ ಇರುವುದು ಬೆಂಗಳೂರಿನ ಕೆರೆಯೊಂದನ್ನು ಅಚ್ಚುಕಟ್ಟು ಮಾಡಿ ನಿರ್ಮಿಸಲಾದ ಬಡಾವಣೆ ಚನ್ನಮ್ಮನ ಕೆರೆ. ನಿನ್ನ ಪ್ರವರ ಯಾರು ಕೇಳಿದ್ದು ಅಂತ ಗೊಣಗಿದಿರಾ? ಸ್ವಲ್ಪ ಇರಿ. ಕೆರೆ ಅನ್ನುವ ಅಂತ್ಯಪ್ರಾಸ ಇರುವ ಊರುಗಳು ಕೆರೆಯ ಹಂಗೇ ಇಲ್ಲದೆ ಹೇಗೆ ಈಗ ಬದುಕು ಕಳೆದುಕೊಳ್ಳುತ್ತಿವೆ ಅಂತ ಕೊಂಚ ಆಲೋಚಿಸುವುದು ಈ ಬರಹದ ಉದ್ದೇಶ.

ಹಾಗೆ ನೋಡಿದರೆ ಎಲ್ಲ ಊರುಗಳಿಗೂ ಒಂದಲ್ಲ ಒಂದು ಕೆರೆಯ ಸಂಬಂಧ ಇರಲಿಕ್ಕೇ ಬೇಕು. ಕೃಷಿಗೆ, ನಿತ್ಯದ ಉಪಯೋಗಕ್ಕೆ, ಊರಿಗೊಂದು ನೀರಿನ ಮೂಲ ನೆಲೆ ಬೇಕೇ ಬೇಕು. ಬಯಲು ಸೀಮೆಯ ತರೀಕೆರೆ, ತುರುವೇಕೆರೆ, ನೊಣವಿನಕೆರೆ ಮುಂತಾದ ಸ್ಥಳ ನಾಮಗಳು ಆಯಾ ಊರುಗಳಲ್ಲಿರುವ ಕೆರೆಗಳಿಂದ ಬಂದದ್ದಾದರೆ, ತುಮಕೂರು ಪ್ರಾಂತ್ಯದ ಅಮ್ಮಸಂದ್ರ, ಬಾಣಸಂದ್ರ, ತಿಪ್ಪಸಂದ್ರ ಮುಂತಾದವು ಕೆರೆಗಿಂತಲೂ ದೊಡ್ಡದಾದ ನೀರಿನ ತಾಣ ಸಮುದ್ರ ಅನ್ನುವ ಅರ್ಥ ಸೂಸುವ ಸಂದ್ರಗಳ ಮೂಲಕ ಬಂದದ್ದು. ಎಮ್ಮೆಗಳು ಆರಾಮಾಗಿ ವಿಶ್ರಮಿಸಬಹುದಾದ ಜಾಗಕ್ಕೂ ಸಂದ್ರ ಅಂತ ಕರೆದಿರುವುದು ಆ ಜನ ಸಮುದ್ರವನ್ನು ಕಾಣದೇ ಇದ್ದುದ್ದಕ್ಕೇ ಇರಬಹುದೇನೋ? ಇನ್ನು ಹುಬ್ಬಳ್ಳಿಯ ಕಡೆ ಹೊಂಡ ಎನ್ನುವ ಅಂತ್ಯಪ್ರಾಸದ ಹಲವು ಹೆಸರುಗಳು ಸಿಕ್ಕುವಂತೆಯೇ ದಕ್ಷಿಣಕನ್ನಡದ ಬಹುತೇಕ ನೀರ ಝರಿಗಳಿಗೆ ತೀರ್ಥ ಅಂತ ಕರೆಯುವುದೂ ವಾಡಿಕೆ. ಈಗ ಹೆಸರಿಗಷ್ಟೇ ಕೆರೆ ಅಂತ ಅಂತ್ಯವಾಗುವ ಊರುಗಳಲ್ಲಿರಲಿ, ಬಹುತೇಕ ಎಲ್ಲ ಊರುಗಳಲ್ಲೂ ನಜೀರ್ ಸಾಬರ ದಯದಿಂದ ಹೆಜ್ಜೆಗೊಂದು ಕೊಳವೆ ಬಾವಿ ಬಂದ ಕಾರಣ ಆ ಊರುಗಳ ಕೆರೆಗಳೆಲ್ಲ ಸ್ಟೇಡಿಯಂಗಳಾಗಿ ಅಥವ ಹೊಸಬಡಾವಣೆಗಳಾಗಿ ಬದಲಾಗಿವೆ. ಕೆರೆ ಅನ್ನುವ ಪದಕ್ಕಿರುವ ನಿಘಂಟಿನರ್ಥಕ್ಕಿಂತಲೂ ಕೆರೆಗೆ ಹಾರವಾದ ಭಾಗೀರಥಿಯ ಕತೆಗೊತ್ತಿರುವವರಿಗೆ ಈ ಕೆರೆಗಳ ಜೊತೆಗಿರುವ ಭಾವನಾತ್ಮಕ ಸಂಬಂಧಗಳನ್ನು ಅರಿಯುವುದು ಸುಲಭ ಸಾಧ್ಯ.

ಕುಕ್ಕರಹಳ್ಳಿಯ ಕೆರೆ ಮೈಸೂರಿನವರಿಗಷ್ಟೇ ಅಲ್ಲದೇ ಕುವೆಂಪು ಮೂಲಕ ಕನ್ನಡ ಬಲ್ಲ ಎಲ್ಲರಿಗೂ ಗೊತ್ತಾದ ಹಾಗೇ, ತರೀಕೆರೆ ಏರಿ ಮೇಲೆ ಮೂರು ಕರಿಕುರಿಮರಿ ಮೇಯ್ತಿತ್ತೂ ಅನ್ನುವ ನಾಲಿಗೆ ಹೊರಳಿಸುವ ಪದಗಳ ಮೂಲಕ ಗೊತ್ತಿದ್ದ ತರೀಕೆರೆ ಈಗ ವಿಮರ್ಶಕ ರಹಮತ್ ಹೆಸರಿಗೆ ಅಂಟಿಸಿಕೊಂಡ ಕಾರಣಕ್ಕೂ ಖ್ಯಾತಿಗೆ ಬಂದಿದೆ. ಕಳ್ಳರಸೀಕೆರೆ ಅಂತಲೇ ಖ್ಯಾತವಾದ ಅರಸೀಕೆರೆಯಲ್ಲೇ ನಟ ರಾಜಕುಮಾರ್‌ಗೆ ನಟಸಾರ್ವಭೌಮ ಅನ್ನುವ ಬಿರುದು ಬಂದದ್ದು ಅಂತ ಎಷ್ಟೋ ಜನರಿಗೆ ಗೊತ್ತೇ ಇಲ್ಲ! ಊರಿಗೆ ಬಂದವಳು ಕೆರೆಯ ನೀರಿಗೆ ಬಾರಳೇ ಅನ್ನುವ ಹಾಗೇ ಆ ಕೆರೇಲಿ ಹುಟ್ಟಿದಾಕೇನು, ಗೇಕೇನು, ಗೆಡ್ಡೇನು, ಗೆಣಸೇನು? ಅನ್ನುವ ಎಲ್ಲರ ಮಾನವನ್ನೂ ಕಳೆದು ಬಿಸಾಕುವ ಗಾದೆ ಮಾತೂ ಅಷ್ಟೇ ಪ್ರಖ್ಯಾತವಾದದ್ದು. ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೋ ಅನ್ನುವ ದಾಸರ ಮಾತಿನ ಅಂತರಾರ್ಥ ಹಾಗೆಲ್ಲ ಲೌಕಿಕದ ಕೆಸರಲ್ಲಿ ಬಿದ್ದಿರುವ ನನ್ನಂಥ ಸಾಮಾನ್ಯರಿಗೆ ಅರ್ಥವಾಗದ್ದು.
ತಮ್ಮ ಹೆಸರಿನ ಪಕ್ಕದಲ್ಲೇ ಕೆರೆ ಅನ್ನುವ ಅಭಿದಾನವಿದ್ದೂ ಕೃಷಿಗಿರಲಿ ನಿತ್ಯೋಪಯೋಗದ ನೀರಿಗೂ ತತ್ವಾರವಿರುವ ಹಲವು ಹತ್ತು ಊರುಗಳ ಪಟ್ಟಿ ಕ್ಷಣಾರ್ಧದಲ್ಲಿ ಸಿದ್ಧಪಡಿಸಿಕೊಡಬಹುದು. ಅಂಥ ಊರಿನ ಕೆರೆಗಳ ಪಕ್ಕದ ಜಮೀನು ತೋಟಗಳವರು ತಮ್ಮ ಜಾಗವನ್ನು ಒತ್ತರಿಸಿ ಒತ್ತರಿಸಿ ಕೆರೆಯ ಮೂಲ ಆಕಾರಕ್ಕೆ ಕುಂದು ತಂದಿರುವ ಘಟನೆಗಳು ಕೆರೆಯಿರುವ ಎಲ್ಲ ಊರುಗಳ ಮಾಮೂಲಿ ಕರ್ಮಕಾಂಡ. ಮೊದಲೆಲ್ಲ ಕೆರೆ ಎಂದರೆ ಕುಡಿಯುವ ನೀರಿನ ಆಕರ. ಸಂಜೆ ಸೂರ್ಯ ಕಂತುವ ಮೊದಲು ಹಾಗೇ ಬೆಳಗು ಹರಿದು ಸೂರ್ಯ ನೆತ್ತಿ ಮೇಲೆ ಏರುವ ಮೊದಲೂ ಸೊಂಟದಲ್ಲೊಂದು ತಲೆಯ ಮೇಲೊಂದು ಬಿಂದಿಗೆಯಿಟ್ಟುಕೊಂಡ ಚೆಲುವೆಯರು ನೀರಿಗೆ ಕೆರೆಯ ದಾರಿ ಹಿಡಿದು ಬರುತ್ತಿದ್ದರೆಂದರೆ ಆ ಹೆಂಗೆಳೆಯರ ಗುಂಪು ಕಲರವ ಮಾಡುತ್ತ ಕಾಲು ಕಾಲಿಗೆ ತೊಡರುವ ತಮ್ಮ ಕಂದಮ್ಮಗಳನ್ನು ನಿವಾರಿಸಿಕೊಳ್ಳುತ್ತ ಆ ದಾರಿಯುದ್ದಕ್ಕೂ ಜಗಲಿಗಳ ಮೇಲೆ ಸೊಪ್ಪು ಶೋಧಿಸುತ್ತಲೋ, ಹೂವು ಕಟ್ಟುತ್ತಲೋ ಕುಳಿತಿರುತ್ತಿದ್ದ ಅಜ್ಜಮ್ಮಗಳನ್ನು ಮಾತನಾಡಿಸುತ್ತ ಕಷ್ಟ-ಸುಖ ಹೇಳಿಕೊಳ್ಳುತ್ತ ಹೋಗುತ್ತಿದ್ದರೆಂದರೆ ಆ ಮೋಜನ್ನು ಈಗ ವರ್ಣಿಸಲೂ ಅಸಾಧ್ಯವಾಗಿದೆ. ದನಕರುಗಳನ್ನು ಮೇಯಿಸಲು ಕೆರೆಯ ಏರಿಯ ಮೇಲೇ ಅಟ್ಟಿಕೊಂಡು ಹೋದ ದನಗಾಹಿಗಳ ಹಿಂದೆಯೇ ಕತ್ತೆಗಳ ಬೆನ್ನ ಮೇಲೆ ಬಟ್ಟೆಗಳ ಹೊರೆ ಹೊರಿಸಿಕೊಂಡು ಅಗಸರ ಕ್ಯಾರವಾನು ಬರುತ್ತಿತ್ತು. ಕೆರೆಯ ಮುಂದಣ ಪಾವಟಿಕೆಗಳ ಬಳಿ ಕುಡಿಯುವ ನೀರಿನ ಘಟ್ಟಗಳಿದ್ದರೆ ಜಾತಿಗೊಂದೊಂದರಂತೆ ಇರುತ್ತಿದ್ದ ಸ್ನಾನಘಟ್ಟಗಳಲ್ಲಿ ಆಯಾ ಕುಲಕಸುಬು ಬಿಡುವು ಕೊಟ್ಟ ವಾರದ ದಿನಗಳಲ್ಲಿ ಆಯಾ ಜಾತಿಯವರು ಮಡಿಯಾಗುತ್ತಿದ್ದರು. ಕೋಡಿ ಹತ್ತಿರವಿದ್ದ ದೋಭಿಘಾಟಿನಲ್ಲಿ ಊರವರೆಲ್ಲರ ಬಟ್ಟೆಗಳೂ ಮಡಿಯಾಗಿ ಕೋಡಿ ಕಲ್ಲುಗಳಲ್ಲಿ ಒಗೆದು ಒಣಹಾಕಿದ ಬಟ್ಟೆಗಳು ಸೂರ್ಯನ ಪ್ರಖರತೆಯನ್ನೇ ತಗ್ಗಿಸಿಬಿಡುತ್ತಿದ್ದವು. ಬಟ್ಟೆಯೊಗೆದು ಹಿಂಡಿ ಕಲ್ಲಿನ ಮೇಲೆ ಒಣಹಾಕಿ ಅವು ಗಾಳಿಗೆ ಹಾರದಂತೆ ಅವುಗಳ ಮೇಲೊಂದು ಪುಟ್ಟಕಲ್ಲಿನ ಭಾರವನ್ನು ಇರಿಸಿ ಪಾದಗಳನ್ನು ತರಚು ಕಲ್ಲುಗಳ ಮೇಲೆ ಉಜ್ಜುತ್ತಿದ್ದಾಗ ಪಾದದ ಸೀಳಿದ ಸಂದುಗಳಲ್ಲಿದ್ದ ಕೊಳೆ ತಿನ್ನಲು ಪಾದ ಚುಂಬಿಸುತ್ತಿದ್ದ ಮೀನಿನ ನೆನಪು ಬಲು ಮೋಜು. ಬಟ್ಟೆಯೊಗೆದು ಮೆತ್ತಗಾಗಿದ್ದ ಬೆಳೆದ ಉಗುರುಗಳನ್ನು ಕತ್ತರಿಸಿಹಾಕುವುದೂ ಎಷ್ಟು ಸುಲಭದ ಕೆಲಸವಾಗಿತ್ತು. ನೈಲ್ ಕಟ್ಟರಿನಲ್ಲಿ ಗಂಟೆಗಟ್ಟಲೇ ಒದ್ದಾಡಿದರೂ ಸ್ವಚ್ಛವಾಗದ ಟ್ರಿಂ ಆಗದ ಬೆರಳ ಉಗುರುಗಳು ಕ್ಷಣಾರ್ಧದಲ್ಲಿ ಸುಲಭವಾಗಿ ಸಾಪುಗೊಳ್ಳುತ್ತಿದ್ದುದ್ದರ ಮಜವೇ ಬೇರೆ.

ಊರಿನವರೆಲ್ಲರ ನೀರಿನ ಅಗತ್ಯತೆಯನ್ನೂ ಊರಿನಲ್ಲಿದ್ದ ಒಂದು ಕೆರೆಯೇ ಪೂರೈಸುತ್ತಿದ್ದದ್ದು ಈಗಲೂ ಆಶ್ಚರ್ಯದ ಮಾತೇ. ಜನ ಜಾನುವಾರುಗಳಿಗಾಗಿ ಮಿಕ್ಕುವಂತೆ ಆ ಕೆರೆಯನ್ನು ಪರಿಪೋಷಿಸುತ್ತಿದ್ದ ರೀತಿಯೂ ಸ್ತುತ್ಯಾರ್ಹವೇ. ತಳವಾರ ನೀರುಕಂಟಿ ಭದ್ರಯ್ಯ ಯಾವ ಜಲತಜ್ಞ ಇಂಜಿನಿಯರಿಗಿಂತಲೂ ಮಿಗಿಲಾಗಿ ಕೆರೆಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದನೆಂದರೆ ಸ್ವತಃ ಪಟೇಲರು, ಶ್ಯಾನುಭೋಗರು ಅಥವ ಒಮ್ಮೊಮ್ಮೆ ಅಮಲ್ದಾರರು ಉಸ್ತುವಾರಿಯ ಬಗ್ಗೆ ನಿಗಾ ವಹಿಸುವುದು ಹೆಚ್ಚುಕಡಿಮೆ ಮಾಡಿದರೂ ಅವನು ತಡೆದುಕೊಳ್ಳುತ್ತಿರಲಿಲ್ಲ. ಕೆರೆಯ ತೂಬೆತ್ತಿ ನೀರು ಬಿಡುವುದಕ್ಕೂ ಅವನ ಪಂಚಾಂಗವೇ ಬೇರೆಯದಿತ್ತು. ಯಾರ ಜಮೀನಲ್ಲಿ ಯಾವ ಯಾವ ಬೆಳೆ ಬೆಳೆದಿದ್ದಾರೆ, ಅದಕ್ಕೆ ಅಗತ್ಯವಿರುವ ನೀರೆಷ್ಟು ಎನ್ನುವುದರ ಸಂಪೂರ್ಣ ವಿವರ ಅವನಲ್ಲಿರುತ್ತಿತ್ತು. ಕೆರೆಯ ಸ್ವಚ್ಛತೆಗೆ ಕೊಂಚ ಭಂಗ ತಂದವರಿಗೂ ಅವನ ದಂಡದ ಭರಾಟೆ ಗೊತ್ತಿರುತ್ತಿತ್ತು. ಬೇಸಿಗೆಯ ಕಡೆಯಲ್ಲೊಮ್ಮೆ ಕೆರೆಯ ಹೂಳೆತ್ತಿ ಶುದ್ಧ ಮಾಡುವುದಕ್ಕೆ ಗಾಡಿಗಿಷ್ಟೆಂದು ಸುಂಕ ವಸೂಲಿಮಾಡಿ, ಆಬಾದು ಮಾಡುವವರಿಗೆ, ತೆಂಗಿನ ಸಸಿ ಹಾಕಿಸುವ ಉದ್ದೇಶವುಳ್ಳವರಿಗೆ ತಳವಾರರ ಮಾರ್ಗದರ್ಶನ ಇದ್ದೇ ಇರುತ್ತಿತ್ತು. ಜೊತೆಗೇ ಕೆರೆಗೆ ನೀರಿನ ಹರಿವು ಎಲ್ಲೆಲ್ಲಿಂದ ಬರಬೇಕೋ ಆಯಾ ಮಾರ್ಗಗಳನ್ನು ಸಾಪುಗೊಳಿಸಿ ಮಳೆಗಾಲಕ್ಕೆ ಪೂರ್ವದಲ್ಲೇ ಒಂದು ವಿಚಕ್ಷಣೆ ಕೂಡ ನಡೆದಿರುತ್ತಿತ್ತು. ಒಮ್ಮೊಮ್ಮೆ ಬಟಾಬೇಸಿಗೆಯಲ್ಲಿ ಕೆರೆಯನೀರೊಣಗಿ ಪರಿಸ್ಥಿತಿ ವಿಪರೀತಕ್ಕಿಟ್ಟುಕೊಂಡಾಗಲೂ ನೀರುಕಂಟಿಯ ಲೆಕ್ಕಾಚಾರವೇ ಬೇರೆಯಾಗಿರುತ್ತಿತ್ತು. ಪಂಚಾಯತಿನವರ ತಾಲ್ಲೂಕು ಅಮಲ್ದಾರರ ಸಹಾಯ ಪಡೆದು ಕುಡಿಯುವ ನೀರಿನ ಘಟ್ಟವಿದ್ದಲ್ಲಿ ತೋಡುಗುಂಡಿ ತೆಗೆದು ಒಸರುವ ನೀರಒರತೆಯನ್ನು ಇನಿತೂ ಹಾಳಾಗದಂತೆ ಕಾಪಾಡಿ ಜನಜಾನುವಾರುಗಳನ್ನು ಜಲಕ್ಷಾಮದಿಂದ ಪೊರೆಯುತ್ತಿದ್ದ ಆ ದಿನಗಳಲ್ಲಿನ ಸ್ವಾರ್ಥ ರಹಿತ ಜನಸೇವೆಯ ಕಿಲುಬೂ ಈ ಹೊತ್ತಿನ ನಮ್ಮ ಅಧಿಕಾರಷಾಹಿಗಳಿಗಿಲ್ಲದಿರುವುದು ನಮ್ಮ ದೌರ್ಭಾಗ್ಯ.
ಯಾವಾಗ ಕೊಳಾಯಿಗಳಲ್ಲಿ ನೀರು ಮನೆಯ ಅಂಗಳಕ್ಕೆ ಬರತೊಡಗಿತೋ ಆವತ್ತಿನ ದಿನದಿಂದಲೇ ಕೆರೆಗಳಿಗೆ ಶಾಪ ಹಿಡಿಯಿತೆನ್ನಬೇಕು. ಸ್ವಲ್ಪವೂ ಶ್ರಮ ಪಡದೇ ಕುಡಿದ ನೀರು ಅಲ್ಲಾಡದ ಹಾಗೆ ಅನುಕೂಲಗಳು ಸಿಕ್ಕುವಂತಾದರೆ ಮನುಷ್ಯ ಹೆಚ್ಚು ಹೆಚ್ಚು ಸ್ವಾರ್ಥಿಯಾಗುತ್ತಾನೆ ಅನ್ನುವುದು ಸತ್ಯ. ಯಾವಾಗ ಕೆರೆಯ ದಾರಿ ಜನ ಮರೆತರೋ ಪೋಲಿಪಟಾಲಮ್ಮುಗಳಿಗೆ, ದನಗಾಹಿಗಳಿಗೆ, ಬಹಿರ್ದೆಸೆಗೆಂದು ಕೋಡಿಯ ತುದಿಯವರೆಗೂ ಓಡಬೇಕಲ್ಲ ಎಂದು ಪರಿತಪಿಸುತ್ತಿದ್ದ ಶುದ್ಧ ಸೋಂಬೇರಿಗಳಿಗೆ ಈಗ ಸುಲಭವಾಯ್ತು. ಸುಂಕ ಕಟ್ಟದೇ ಬೇಕಾಬಿಟ್ಟಿ ಕೆರೆಯ ಮಣ್ಣನ್ನೆತ್ತಿಕೊಂಡು ಹೋಗುವವರಿಗೆ ಕಾಲ ನಡೆಸಿತು. ಕೆರೆಯ ಗೋಡು ಹೇಗೆಂದರೆ ಹಾಗೇ ತೋಡಿದ ಕಾರಣ ಸೊಳ್ಳೆಗಳಿಗೂ, ಹಂದಿಗಳಿಗೂ ಸಾಮ್ರಾಜ್ಯವನ್ನೇರ್ಪಡಿಸಿಕೊಳ್ಳಲು ತಾಂಬೂಲ ಕೊಟ್ಟಂತಾಯಿತು. ಕೆರೆಯ ಅಂಗಳದಲ್ಲಿ ಮಾತ್ರ ರಾರಾಜಿಸುತ್ತಿದ್ದ ಆಪಿನ ಜೊತೆಗೇ ಇತರ ಮುಳ್ಳುಕಂಟಿಗಳೂ, ಪೊದೆಗಳೂ ಬೆಳೆದ ಕಾರಣ ಕೆರೆಯ ಅಂಗಳವೇ ಸಾರ್ವಜನಿಕ ಶೌಚಾಲಯವಾಗಿ ಪರಿವರ್ತನೆಗೊಂಡು ಕೆರೆಯ ಏರಿಯ ಮೇಲಿನ ಸೊಗಾಸಾದ ಸಂಜೆಯ ಸುತ್ತಾಟ ಮರಣಾಂತಿಕ ಶಿಕ್ಷೆಯಾಗಿ ಬದಲಾಯಿತು, ಒತ್ತುವರಿ ಮಾಡುವವರಿಗೆ ಸಿಕ್ಕ ನಿಧಿಯೂ ಆಯಿತು. ಕಾಲ ಕಳೆದಂತೆ ನೀರಿನ ಒರತೆಗಳು ಅಕ್ಕಪಕ್ಕದ ಸ್ಥಳಗಳಲ್ಲಿ ತೋಡಿದ ಕೊಳವೆಬಾವಿಗಳಿಂದಾಗಿ ಮಾಯವಾಗಿ ಕೆರೆಯ ಅಂಗಳವೆಂಬುದು ಶೋಭೆಕಳೆದುಕೊಂಡು ಗಲೀಜಿನ ಗ್ಯಾರೇಜಾಯಿತು, ಮುನಿಸಿಪಾಲಿಟಿಯವರು ಕಸತಂದು ಹೊತ್ತು ಹಾಕುವ ತೊಟ್ಟಿಯಾಗಿಯೂ ಬದಲಾಯಿತು. ಕೋಡಿ ಹರಿಯುತ್ತಿದ್ದ ಅಕ್ಕಪಕ್ಕದ ಜಾಗ ವಸತಿಹೀನರ ಆಕ್ರಮಣಕ್ಕೆ ತುತ್ತಾಗಿ ಅಕ್ರಮ ಸಕ್ರಮದ ಅರ್ಜಿಗೆ ವಸ್ತುವಾಗಿ ಬದಲಾಯಿತು. ತಳವಾರ ತೋಟಿಗಳು ಕಾಲವಾಗಿ ಅವರ ಮಕ್ಕಳು ಅವರಿವರ ಬಾಯಿಂದ ಅವರ ಹಿರೀಕರ ಬದುಕನ್ನು ತಿಳಿಯುವ ಮಟ್ಟಿಗೆ ಕಾಲ ಓಡುತ್ತೋಡುತ್ತ ಇವತ್ತಿನ ಮಟ್ಟಿಗೆ ಬಂದು ನಿಂತಿದೆ.

ಈಗ ಯಾವುದೇ ಊರಿಗೆ ಹೋಗಿ ನೋಡಿ. ವರ್ಷದ ಒಂದಲ್ಲ ಒಂದು ಕಾಲದಲ್ಲಿ ಕುಡಿಯುವ ನೀರಿಗೆ ತತ್ವಾರವಿದ್ದೇ ಇರುತ್ತದೆ. ಮಳೆಗಾಲ ಚೆನ್ನಾಗಿ ನಡೆಸಿದರೂ ಬಿದ್ದ ನೀರು ಅಂತರ್ಜಲವಾಗಿ ಬದಲಾಗದೇ ಹರಿದು ಹೋಗಿ ಕೆರೆಕಟ್ಟೆಗಳು ಪೋಷಿಸುವವರಿಲ್ಲದೇ ಒಣಗಿಹೋಗಿ ಎಲ್ಲ ಊರುಗಳವರೂ ಭೂಮಿಯ ಆಳದಾಳದಿಂದ ನೀರನ್ನೆತ್ತುವ ಕೊಳವೆಬಾವಿಗೆ ಶರಣು ಹೋಗಿದ್ದಾರೆ. ಸಹಜವಾಗಿ ನೈಸರ್ಗಿಕವಾಗಿ ಸಿಕ್ಕ ನೀರನ್ನು ಸರಿಯಾಗಿ ಹಿಡಿದಿಟ್ಟುಕೊಳ್ಳದ ಕಾರಣ ಕೊಳವೆಬಾವಿಗಳಿಂದ ಹೊರಬರುವ ಸಲ್ಫೇಟ್ ನೀರನ್ನೋ ಅಥವ ಇತರ ವಿಷಕಾರೀ ವಸ್ತುಗಳಿಂದ ಒಡಗೂಡಿದ ನೀರನ್ನೇ ಜನ ಜಾನುವರು ಉಪಯೋಗಿಸಲೇ ಬೇಕಾದ ಅನಿವಾರ್ಯತೆಯೊದಗಿದೆ. ನಮ್ಮನ್ನು ಪೊರೆಯಬೇಕಾದ ಸರ್ಕಾರಗಳೇ ನೆಲದ ಅದಿರನ್ನು ಕದ್ದು ತೆಗೆದು ಮಾರಾಟವಾಡುವವರ ಅಡುಂಬೊಲವಾಗಿರುವಾಗ ಕೆರೆಯ ನೀರಿಗೆ ಯಾವ ದೊಣ್ಣೆನಾಯಕನ ಅಪ್ಪಣೆ ಯಾರಿಗೆ ಬೇಕಾಗಿದೆ?

ಇದೇನು ಕೆರೆಗಳ ಬಗ್ಗೆ ಹೇಳುತ್ತ ಇದ್ದವನು ಗಲೀಜು ರಾಜಕೀಯಕ್ಕೆ ವಿಷಯಾಂತರ ಮಾಡಿದೆ ಅಂತ ಗೊಣಗಿದಿರಾ? ಇವತ್ತು ರಾಜಕೀಯ ಇಲ್ಲದ ಒಂದೇ ಒಂದು ಸಣ್ಣ ಕ್ಷೇತ್ರ ತೋರಿಸಿ. ನಾವೆಲ್ಲರೂ ರಾಜಕೀಯ ಮಾಡಲೇಬೇಕು. ಅಂದರೆ ರಾಜನಿರಲಿ ಬಿಡಲಿ ನಮ್ಮ ಸವಲತ್ತುಗಳನ್ನು ಆಪೋಷನ ತೆಗೆದುಕೊಳ್ಳುವ ಯಾರದೇ ವಿರುದ್ಧವೂ ನಮ್ಮ ಬಂಡುತನ ತೋರಲೇಬೇಕು. ಯಾವ ಕೆರೆ ಅಭಿವೃದ್ಧಿಯ ಹೆಸರಲ್ಲಿ ಎಷ್ಟು ಕೋಟಿಗಳ ಸ್ವಾಹ ಆಗಿದೆ ಅಂತ ಬೇಕಾದರೆ ಆರ್.ಟಿ.ಐನಲ್ಲಿ ಅರ್ಜಿ ಸಲ್ಲಿಸಿ ಬರೇ ಹತ್ತು ರೂಪಾಯಿಯಲ್ಲಿ ಸಮಗ್ರ ವಿವರ ಪಡೀಬಹುದು. ವಿಷಯ ಯಾಕೆ ಎತ್ತಿದೆ ಅಂದರೆ ಇತ್ತೀಚೆಗೆ ಹಿಂದೆಲ್ಲ ತಳವಾರ ತೋಟಿಗಳು ಮಾಡುತ್ತ ಇದ್ದ ಕೆಲಸವನ್ನು ಅಂದರೆ ಕೆರೆ ಬಾವಿ ತೋಡುಗಳನ್ನು ನಿರ್ವಹಿಸಲು ಸರ್ಕಾರದ ಒಂದು ಇಲಾಖೆಯೇ ಇದೆಯಂತೆ. ಕೆರೆ ತೊರೆಗಳ ಹೂಳೆತ್ತಿಸಿ ಅಲ್ಲಿ ಮೀನುಗಾರಿಕೆಯನ್ನು ಅಭಿವೃದ್ಧಿಪಡಿಸಿ, ಅವರಿವರು ಒತ್ತರಿಸದಂತೆ ತಡೆಯಲು, ಶುದ್ಧ ನೀರನ್ನು ಜನ ಜಾನುವಾರಿಗೆ ನೀಡುವ ಸಲುವಾಗಿ ಆ ಇಲಾಖೆಗೆ ವರ್ಷೇ ವರ್ಷೇ ಬಜೆಟ್ಟಿನಲ್ಲಿ ಕೋಟಿಗಳ ಮೊತ್ತ ನಿಗದಿಮಾಡಲಾಗಿರುತ್ತದೆ. ಆದರೆ ಎಲ್ಲ ಊರುಗಳ ಕೆರೆಗಳ ಏರಿಯ ಕಲ್ಲುಗಳು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿವೆ, ನಗರೀಕರಣದ ಕಾರಣ ಗಮನಿಸುವವರಿಲ್ಲದೇ ಗಲೀಜು ಗುಂಡಿಗಳಾಗುತ್ತಿವೆ.

ಹೊತ್ತುಗೊತ್ತಿಲ್ಲದೇ ಬರುವ ನಲ್ಲಿ ನೀರಿಗೆ ತೆರಿಗೆ ಕಟ್ಟಿಯೂ ಶಬರಿಯೋಪಾದಿಯಲ್ಲಿ ಅದರ ಬರವಿಗೆ ಕಾಯುತ್ತಿರುವ ಜನಸಮುದಾಯದ ಸಾಮಾನ್ಯ ಸದಸ್ಯನಾದ ನನಗೂ ಈ ಸಾರಿಗೆ ಬಸ್ಸುಗಳ ಸಂಚಾರ, ನಗರ ಜೀವನದ ತಲ್ಲಣ-ತವಕಗಳು, ಏರುತ್ತಿರುವ ನಿತ್ಯಬಳಕೆಯ ವಸ್ತುಗಳ ಬೆಲೆ ಕನಿಷ್ಠ ಇಷ್ಟು ಹೊತ್ತಾದರೂ ಅವೆಲ್ಲ ತರಲೆ, ತಾಪತ್ರಯಗಳನ್ನು ಮರೆಸಿ, ಮಾಯವಾದ ಮದಗದಂಥ ಹಲವು ಕೆರೆಗಳ ಕುರಿತು ಆಲೋಚಿಸುವಂತೆ ಮಾಡಿತು. ಜಲದ ಕಣ್ಣುಗಳನ್ನು ತೆರಸುವ ಆ ಮೂಲಕ ಶುದ್ಧವಾದುದನ್ನು ಪಡೆಯುವ ಅವಕಾಶ ಆಧುನಿಕ ಮನೋಭೂಮಿಕೆಯಲ್ಲಿರುವ ನಮ್ಮಿಂದ ಸಾಧ್ಯವಿಲ್ಲದಿರುವುದೇ ಈ ಹೊತ್ತಿನ ನಮ್ಮ ಸಮಸ್ಯೆಗಳಿಗೆ ಮೂಲ. ಬಳಸುವ ನೀರಿನ ಮೂಲ ಯಾವುದು ಎಂದು ತಿಳಿಯುವ ಗೋಜಿಗೂ ಹೋಗದೇ ನಲ್ಲಿಯಲ್ಲಿ ಸುರಿಯುವ ನೀರನ್ನು ದಂಢಿಯಾಗಿ ಬಳಸುತ್ತಿರುವ ನಮ್ಮ ಕುರುಡು ಆ ನೀರು ನಿಲ್ಲುವವರೆಗೂ ಅನ್ಯರಿಗಿರಲಿ ನಮಗೇ ಗೊತ್ತಾಗುವುದಿಲ್ಲ ಅನ್ನುವುದು ಸದ್ಯದ ಸತ್ಯ. ಕೆರೆಯ ಶುದ್ಧಿಗೆ ಮೊದಲು ನಮ್ಮೊಳಗಿನ ಕರೆಗೆ ಓಗೊಡೋಣ, ನಂತರ ಕೆರೆ ಕಟ್ಟೆಗಳಿಗೆ ನೀರು ಹಾಯಿಸುವ ಮಾತನಾಡೋಣ. ಏನಂತೀರಿ?