ಒಟ್ಟು ಪುಟವೀಕ್ಷಣೆಗಳು

ಭಾನುವಾರ, ನವೆಂಬರ್ 14, 2010

ಮಕ್ಕಳ ದಿನಕ್ಕೆ ಹೀಗೊಂದು ಆಲೋಚನೆ.. .. .. .. ..

ಮಕ್ಕಳ ದಿನಕ್ಕೆ ಹೀಗೊಂದು ಆಲೋಚನೆ.. .. .. .. ..

ನವಂಬರ್ ೧೪ರ ಈ ದಿನ ಮಕ್ಕಳ ದಿನಾಚರಣೆ. ಮಹಿಳೆಯರಿಗೆ, ಹೆತ್ತವರಿಗೆ, ಪ್ರೀತಿಯಲ್ಲಿ ಬಿದ್ದವರಿಗೆ, ಪರಿಸರಕ್ಕೆ, ಪಾಠ ಹೇಳುವ ಮಾಸ್ತರರಿಗೆ ಹೀಗೆ ಎಲ್ಲರಿಗೂ ದಿನಾಚರಣೆಗಳನ್ನು ಆಚರಿಸುವ ನಾವು ನಿಜದ ಅರ್ಥದಲ್ಲಿ ಈ ದಿನಾಚರಣೆಗಳಿಗಿರುವ ಮಹತ್ವವನ್ನು ಮರೆತುಬಿಟ್ಟಿದ್ದೇವೆ. ಮಾಧ್ಯಮಗಳಲ್ಲಿ ಬರುವ ವರದಿಗಳು, ಸಂಘ ಸಂಸ್ಥೆಗಳು ನಡೆಸುವ ಸನ್ಮಾನ, ಗೌರವರ್ಪಣೆಗಳಲ್ಲೇ ಬಹುತೇಕ ದಿನಾಚರಣೆಗಳು ಕಳೆದುಹೋಗಿಬಿಡುತ್ತಿವೆ. ಶಾಲಾ ಕಾಲೇಜುಗಳಂತೂ ಭಾಷಣ ಸ್ಪರ್ಧೆಯನ್ನೋ, ಲೇಖನಸ್ಪರ್ಧೆಯನ್ನೋ ನಡೆಸಿ ತಮ್ಮ ಜವಾಬ್ದಾರಿಯನ್ನು ಮುಗಿಸಿಕೊಳ್ಳುತ್ತಿವೆ. ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳಂತೂ ಸಿನಿಮಾ ಹಾಡುಗಳ ಸಿಡಿಗಳಿಗೆ ಕೈಕಾಲಾಡಿಸುವ ವ್ಯರ್ಥ ಉಪಕ್ರಮಗಳಾಗೇ ನಿಲ್ಲುತ್ತಿವೆ.

ಉದಾಹರಣೆಗೆ ಮಕ್ಕಳದಿನಾಚರಣೆಯನ್ನು ನಾವು ನಡೆಸುತ್ತಿರುವ ಕ್ರಮವನ್ನೇ ನೋಡಿ. ಪಂಡಿತ ನೆಹರೂ ತಮ್ಮ ಜನ್ಮದಿನಾಚರಣೆಯನ್ನು ಮಕ್ಕಳ ದಿನವನ್ನಾಗಿ ಆಚರಿಸಲು ಹೇಳಿದ್ದನ್ನೇ ಮತ್ತೆ ಮತ್ತೆ ನೆನೆಯುತ್ತ, ಅವರು ಅಂದೆಂದೋ ಧರಿಸಿದ್ದ ದಿರಿಸನ್ನೋ, ಅವರು ಬರಹಗಾರರಾಗಿದ್ದನ್ನೋ ಅಥವಾ ಅವರು ಜಾರಿಗೆ ತಂದ ಪಂಚಶೀಲ ತತ್ವವನ್ನೋ ಪುನಃ ಪುನಃ ಹೇಳಿ ಅವರು ಕೋಟಿನ ಗುಂಡಿಗೆ ಸಿಕ್ಕಿಸಿಕೊಳ್ಳುತ್ತಿದ್ದ ಗುಲಾಬಿಯನ್ನು ನಾಚಿಸುತ್ತೇವೆ. ನೆಹರೂ ಯಾವಕಾರಣಕ್ಕೆ ಮಕ್ಕಳಿಗೆ ಇಷ್ಟು ಮಹತ್ವ ನೀಡಿದರು? ಅವರೇಕೆ ಎಲ್ಲ ಮಕ್ಕಳಿಗೂ ‘ಚಾಚಾ’ಆಗಿರಲು ಬಯಸಿದ್ದರು ಎಂದು ಬಹುತೇಕರು ಆಲೋಚಿಸುವುದೇ ಇಲ್ಲ.

‘ಪ್ರತಿಯೊಂದು ಮಗುವೂ ಮನುಷ್ಯನೊಬ್ಬನ ತಂದೆ’ ಎನ್ನುವ ಆಂಗ್ಲ ಗಾದೆಯೊಂದಿದೆ. ಬಾಲ್ಯದಲ್ಲಿ ಕಲಿತ ಬುದ್ಧಿ-ಮನಸ್ಸುಗಳೇ ಮುಂದಿನ ದಿನಮಾನಗಳನ್ನು ರೂಪಿಸುವುದರಿಂದ ಎಲ್ಲರ ಬಾಲ್ಯವೂ ಪರಿಶುದ್ಧವಾಗಿರುತ್ತದೆ ಎನ್ನುವ ಮಾತೂ ಇದೆ. ಹಸಿವು, ನೀರಡಿಕೆ, ನಿದ್ದೆಗಳು ಮಾತ್ರ ಮಕ್ಕಳು ದೊಡ್ಡವರನ್ನು ಕಾಡುವಂತೆ ಮಾಡುತ್ತವೆ. ಉಳಿದಂತೆ ಮಕ್ಕಳ ಮನಸ್ಸು ಎಷ್ಟು ನಿರ್ಮಲವಾಗಿರುತ್ತದೆ ಅಂದರೆ ಅದಕ್ಕೆಂದೇ ನಮ್ಮ ಹಿರಿಯರು ಮಕ್ಕಳನ್ನೂ ದೇವರ ಸ್ವರೂಪ ಅಂತ ಕರೆದದ್ದು. ಕೂಡು ಕುಟುಂಬ ವ್ಯವಸ್ಥೆ ಇದ್ದಷ್ಟೂ ದಿನ ಮಕ್ಕಳು ಪಂಕ್ತಿಭೇದವಿಲ್ಲದೇ, ತರತಮಗಳ ಸೋಕಿಲ್ಲದೇ ಉಂಡು ಆಡಿ ನಲಿಯುತ್ತಿದ್ದವು. ಅಜ್ಜನೋ, ಅಜ್ಜಿಯೋ. ದೊಡ್ಡಮ್ಮ, ದೊಡ್ಡಪ್ಪನೋ ನೀತಿ ಕತೆಗಳನ್ನು ಹೇಳುವ ಮೂಲಕ ಒಳಿತು ಕೆಡುಕಗಳ ವ್ಯತ್ಯಾಸವನ್ನು ಮನದಟ್ಟು ಮಾಡಿ ಮಗುವಿನ ಮನಸ್ಸಿನಲ್ಲಿ ನೈತಿಕತೆಯ ಬೀಜನೆಟ್ಟು ಬೆಳಸಿರುತ್ತಿದ್ದರು. ಅವರು ಕಲಿಸುವ ಬಾಯಿಪಾಠ, ಮಗ್ಗಿ, ಶ್ಲೋಕ, ಅಮರಗಳಿಗೆ ಕಾದು ಉಳಿದ ಮಕ್ಕಳೊಂದಿಗೆ ಬೆರೆತು ಆಡಿ ನಲಿದು ಬಾಲ್ಯವೆಂಬ ಬೆಲ್ಲದ ರುಚಿ ನಿರಂತರ ಉಳಿಯುವಂತೆ ಅದನ್ನು ಸವಿಯುತ್ತಿದ್ದವು. ನಮ್ಮ ಜನಪದರು ಸೃಷ್ಟಿಸಿರುವ ಕತೆ ಹಾಡುಗಳಲ್ಲಂತೂ ಮಕ್ಕಳಿಗೆ ಇಷ್ಟವಾಗುವ ಗಿಡ,ಮರ,ಪಶು, ಪಕ್ಷಿಗಳೂ ಮಾತನಾಡಿ ಬದುಕಿನ ಸೂಕ್ಷ್ಮಗಳನ್ನು ಮಗುವಿನ ಮನಸ್ಸಿನೊಳಗಿಳಿಸಿ ಆ ಮಗು ತನ್ನ ಭಾವೀ ಜೀವನ ರೂಪಿಸಿಕೊಳ್ಳುವ ನಿಜದ ಯತ್ನವಾಗಿ ಇರುತ್ತಿತ್ತು. ಊರೊಳಗಿನ ಉತ್ಸವ, ಜಾತ್ರೆ, ಹಬ್ಬಗಳಲ್ಲಿ ಮನೆಯವರೆಲ್ಲ ಭಾಗವಹಿಸುವ ಮೂಲಕ ಮನುಷ್ಯ ಸಂಬಂಧಗಳ ಅನಾವರಣವನ್ನು ತಮಗೆ ಗೊತ್ತಿಲ್ಲದೇ ಮಕ್ಕಳು ಅರಿಯುತ್ತಿದ್ದವು. ಶಾಲೆ ಮುಗಿದ ಮೇಲೆ ದೊಡ್ಡಬಯಲಲ್ಲಿ ಚಿನ್ನಿದಾಂಡು, ಕಬಡ್ಡಿಗಳನ್ನಾಡಿ ಊರ ಹೊರಗಿನ ತೋಪಿನಲ್ಲಿ ಮರಕೋತಿ ಆಟವಾಡಿ, ರಜಾ ದಿನಗಳಲ್ಲಿ ಹಳ್ಳದಲ್ಲಿ ಈಜಿ ದೈಹಿಕ ಸಾಮರ್ಥ್ಯದ ಜೊತೆಜೊತೆಗೇ ತಾರ್ಕಿಕ ಪ್ರಜ್ಞೆಯನ್ನೂ ಹಿಂದಿನ ಕಾಲದ ಮಕ್ಕಳು ಪಡೆಯುತ್ತಿದ್ದರು.

ಮನೆತುಂಬ ಮಕ್ಕಳಿರುವ ಕಾಲ ಈಗ ಬದಲಾಗಿದೆ. ವಿಘಟಿತ ಕುಟುಂಬ ವ್ಯವಸ್ಥೆ ಎಲ್ಲ ಮನೆ ಊರುಗಳಲ್ಲೂ ವಿಸ್ತರಿಸಿ ನಗರೀಕರಣದ ನೆರಳು ಮನೆಗೊಂದೇ ಮಗುವೆಂಬ ಸೂತ್ರವನ್ನು ಪಠಿಸಿ,ಹೆತ್ತವರ ಹಣೆಯಲ್ಲಿ ಮಗುವಿನ ಭವಿಷ್ಯದ ಚಿಂತೆಯ ಗೆರೆಯನ್ನು ಢಾಳಾಗಿಸಿದೆ. ಬಾಲ್ಯದ ಆಟೋಟಗಳಿಗಿಂತಲೂ ಅರಿವಿರದ ಭಾಷೆಯ ರೈಮುಗಳನ್ನು ಮನಸ್ಸಿಗೊಗ್ಗದ ಶೈಲಿಯಲ್ಲಿ ಹಾಡಿಸುತ್ತ, ಕೃತಕತೆಯನ್ನೆ ಸಹಜವೆಂದುಕೊಳ್ಳುವ ಹಾಗೆ ಬೆಳಸುತ್ತ ನೈಸರ್ಗಿಕವಾಗಿ ಬಿಡುಗಡೆಯಾಗಬೇಕಿರುವ ಮುಗ್ಧತೆಯ ಆವರಣಕ್ಕೆ ಕೌಶಲ್ಯದ ಹೆಸರಿನ ಮೇಲಾಟಗಳು ದಾಳಿ ಇಟ್ಟಿವೆ. ಸಹಜವಾದ ಬೇಕು ಬೇಡಗಳಿಗಿಂತಲೂ ಒತ್ತಾಯದ ಹೇರಿಕೆಗಳು ಮಕ್ಕಳ ಮುಗ್ಧತೆಯನ್ನೇ ಆಪೋಷನ ತೆಗೆದುಕೊಂಡಿವೆ. ‘ಇಂದಿನ ಮಕ್ಕಳೇ ನಾಳಿನ ಪ್ರಜೆಗಳು’ ಎಂದು ಹೇಳುತ್ತಲೇ ಆ ಮಕ್ಕಳನ್ನು ಇರುಳು ಕಂಡ ಬಾವಿಗೆ ಹಗಲಲ್ಲಿ ನೂಕುವ ಕಾಯಕ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ವ್ಯವಸ್ಥಿತವಾಗಿ ನಡೆಯುತ್ತಿದೆ, ಅಷ್ಟೆ.

ಮಕ್ಕಳ ಶಿಕ್ಷಣ, ಅವರ ಹಕ್ಕುಗಳ ಕುರಿತಂತೆ ಇರುವ ನಮ್ಮ ಕಾನೂನುಗಳು, ಕಡ್ಡಾಯ ಶಿಕ್ಷಣದ ಮಹತ್ವ ಇತ್ಯಾದಿ ಬಹುಚರ್ಚಿತ ವಿಷಯಗಳನ್ನು ಬಿಟ್ಟು ಮೇಲ್ನೋಟಕ್ಕೆ ಸಿಗಬಹುದಾದ ಮಕ್ಕಳ ಸಾಹಿತ್ಯ ಮತ್ತು ಮಕ್ಕಳ ಸಿನಿಮಾಗಳನ್ನು ಕುರಿತು ಯೋಚಿಸಹೋದರೆ ಅಲ್ಲೂ ಇದೇ ಕತೆಯೇ! ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಸಾಕಷ್ಟು ವಿಪುಲವಾಗಿಯೇ ಇದೆ. ಅನ್ಯದೇಶಗಳಿಂದ ಬಂದು ನಮ್ಮ ಮಕ್ಕಳ ಮನಸ್ಸಲ್ಲಿ ಕೂತುಬಿಟ್ಟಿರುವ ಡಾನ್ ಕ್ವಿಕ್ಸೋಟ, ಅಲೀಸ್ ಇನ್ ವಂಡರ್ ಲ್ಯಾಂಡ್, ಸಿಂಡ್ರೆಲ, ಡಿಸ್ನಿ ವರ್ಲ್ಡ್‌ನ ಟಾಮ್ ಅಂಡ್ ಜೆರ್ರಿ ಮತ್ತಿತರ ಕತೆಗಳು, ಕಾರ್ಟೂನ್ ನೆಟ್‌ವರ್ಕಿನ ಬಹುತೇಕ ತರ್ಕಾತೀತ ಸಶೇಷ ಧಾರಾವಾಹಿಗಳಿಗಿಂತಲೂ ಸಶಕ್ತವಾದ ಅವಕ್ಕಿಂತಲೂ ಕುತೂಹಲ ಮತ್ತು ನೈತಿಕತೆಯನ್ನು ಇನ್ನಷ್ಟು ವಿವರವಾಗಿ ಬಗೆಯಬಲ್ಲ ಸಾಹಿತ್ಯ ಕೃತಿಗಳು ನಮ್ಮಲ್ಲೇ ಇವೆ. ಆದರೆ ಅವನ್ನು ನಮ್ಮ ಭಾಷೆಗಿರುವ ಮಾರುಕಟ್ಟೆಯ ಮಿತಿಯಲ್ಲಿ ಪುನರ್ ನಿರ್ಮಿಸುವುದು ಸಾಧ್ಯವಿಲ್ಲವಾಗಿದೆ. ಪಂಚತಂತ್ರದ ಕತೆಗಳು, ರಾಮಾಯಣ ಮಹಾಭಾರತದ ಕತೆಗಳನ್ನು ಈಗಾಗಲೇ ವಿದೇಶೀ ಸಂಸ್ಥೆಗಳು ಪುನಃ ರೂಪಿಸುತ್ತಿರುವುದನ್ನೂ ಮರೆಯಬಾರದು. ಆದರೆ ಇದು ಹೇಳುವಷ್ಟು ಅಥವ ಬರೆಯುವಷ್ಟು ಸುಲಭದ್ದಲ್ಲ. ಏಕೆಂದರೆ ಮಕ್ಕಳ ಬಹುಮುಖ ಬೆಳವಣಿಗೆಗೆ ಅಂದರೆ ಅವರ ಮಾನಸಿಕ, ಬೌದ್ಧಿಕ, ಸಾಮಾಜಿಕ ಹಾಗೂ ಭಾಷಾ ಬೆಳವಣಿಗೆಯ ಸಹಕಾರಿಯಾಗಿಯೂ ಇವನ್ನೆಲ್ಲ ನಾವು ಉಪಯೋಗಿಸಿಕೊಳ್ಳಬೇಕು ಎಂಬ ವಾದ ಈ ಹಂತದಲ್ಲೇ ಹುಟ್ಟುತ್ತದೆ. ಮಕ್ಕಳ ಸಹಜ ಕುತೂಹಲವನ್ನು ತಣಿಸುವವೆನ್ನುವ ಏಕೈಕ ಕಾರಣ ಇಲ್ಲಿ ಸಾಕಾಗುವುದಿಲ್ಲ. ಇಂಥ ವಿಷಯಗಳಲ್ಲಿ ಸಂಶೋಧನೆ ಮತ್ತು ಪ್ರಯೋಗಗಳನ್ನು ನಡೆಸದ ಹೊರತೂ ಇವನ್ನೆಲ್ಲ ಬರಿಯ ಚರ್ಚೆಯ ವಸ್ತುವನ್ನಾಗಿಯಷ್ಟೇ ನಾವು ಪರಿಗಣಿಸಬೇಕು.

ಮಕ್ಕಳ ಮನಸ್ಸಿಗೆ ಮುದ ನೀಡುವ ಸಾಹಿತ್ಯ ಹೇಗಿರಬೇಕು? ಅವರು ಯಾವ ರೀತಿಯ ಸಾಹಿತ್ಯ ಇಷ್ಟಪಡುತ್ತಾರೆ? ಅವರ ಬುದ್ಧಿ ಭಾವನೆಗಳ ಬೆಳವಣಿಗೆಗೆ ಇಂಬು ನೀಡಬಲ್ಲ ವಿಷಯ ವಿವೇಚನೆ ನಮ್ಮ ಸಾಹಿತಿಗಳಿಗಿದೆಯೇ? ಸಾಹಿತ್ಯದ ಯಾವ ಪ್ರಕಾರ ಮಕ್ಕಳಿಗೆ ಖುಷಿ ಕೊಡುತ್ತದೆ? ಇತ್ಯಾದಿ ಪ್ರಶ್ನೆಗಳಿಗೆ ಸಮಂಜಸ ಉತ್ತರಗಳು ನಮಗಿನ್ನೂ ದೊರೆತಿಲ್ಲ. ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವನ್ನೂ ನಾವು ಮಾಡಿಲ್ಲ. ಮುಂದುವರೆದ ದೇಶಗಳಲ್ಲಿ ಜಾರಿಯಲ್ಲಿರುವ ಮಕ್ಕಳ ಕಾನೂನುಗಳನ್ನು, ಅವರ ಹಕ್ಕುಗಳನ್ನೂ ಕೇಳಿ ತಿಳಿದು ಭಯಗೊಂಡಿರುವ ನಾವು ಈ ದೇಶದಲ್ಲಿ ಅಂಥದೊಂದು ಪ್ರಯತ್ನಕ್ಕೆ ಕೈಹಾಕುವ ಎದೆಗಾರಿಕೆ ಇಟ್ಟುಕೊಂಡಿದ್ದೇವೆಯೇ ಎನ್ನುವುದೂ ಇಲ್ಲಿ ಮುಖ್ಯ. ನಮ್ಮಲ್ಲಿ ವಿಪುಲವಾಗಿ ಲಭ್ಯವಿರುವ ನೀತಿ ಬೋಧಕ ಕೃತಿಗಳು ಇಂದಿನ ಮಕ್ಕಳಲ್ಲಿ ನೈತಿಕತೆಯನ್ನು ಉಳಿಸಿ ಬೆಳಸಬಲ್ಲವೇ ಎನ್ನುವುದೂ ಮುಖ್ಯಪ್ರಶ್ನೆ. ವೈಜ್ಞಾನಿಕವಾಗಿ ತುಂಬ ಮುಂದುವರೆದ ಕಾಲದಲ್ಲಿ ಪಾರ್ವತಿಯ ಮೈಯ ಬೆವರಿನಿಂದ ಗಣೇಶ ಹುಟ್ಟಿದ ಅಂತ ಹೇಳಹೋದರೆ ಅವಳೇನು ನಿತ್ಯವೂ ಸ್ನಾನ ಮಾಡುತ್ತಿರಲಿಲ್ಲವಾ ಅನ್ನುವ ಪ್ರಶ್ನೆ ಚಿಣ್ಣರಿಂದ ಹುಟ್ಟುತ್ತದೆ. ರಾಮ ಸೀತೆಯರು ಕಾಡಿಗೆ ಹೋದರು ಅಂದರೆ ಪಿಕ್‌ನಿಕ್‌ಗೆ ಹೋದರಾ ಅಂತ ಕೇಳುವ ಮಕ್ಕಳೂ ಇದ್ದಾರೆ. ಬಾಣ ಬಿರುಸುಗಳು, ಗದೆ, ತೋಮರಗಳು, ಗಜಾಶ್ವಗಳು ಅಣುಬಾಂಬಿನ ಕಾಲದಲ್ಲಿ ಓಬಿರಾಯನ ಕಾಲದ ವ್ಯರ್ಥ ಪರಿಕರಗಳಾಗಿ ಕಾಣುತ್ತವೆ. ಇದರ ಜೊತೆಜೊತೆಗೇ ಮಕ್ಕಳ ಸಾಹಸದ ಧಾರಾವಾಹಿಗಳನ್ನು ನೋಡಿ ಅದನ್ನು ಅನುಸರಿಸಲು ಹೋಗಿ ಅಪಾಯ ಎದುರಿಸಿದ ಮಕ್ಕಳೂ ಕಡಿಮೆ ಏನಿಲ್ಲ. ಅಲ್ಲದೇ ಈ ಕಾಲದ ಮಕ್ಕಳು ಓದುವುದಕ್ಕಿಂತಲೂ ನೋಡುವುದನ್ನೇ, ಅನುಸರಿಸುವುದನ್ನೇ ಹೆಚ್ಚು ಇಷ್ಟಪಡುವವರು. ಏಕೆಂದರೆ ಇಂದಿನ ಬಹುತೇಕ ಮಕ್ಕಳು ಕಲಿಯುತ್ತಿರುವುದು ಇಂಗ್ಲಿಷಿನಲ್ಲಿ. ಅವರ ಓದುವ ಸಾಮರ್ಥ್ಯವೇನಾದರೂ ಇದ್ದರೆ ಅದು ಅವರು ಕಲಿಯುತ್ತಿರುವ ಇಂಗ್ಲಿಷಿನಲ್ಲಿ ಮಾತ್ರ. ಮೂರನೆಯ ಭಾಷೆಯನ್ನಾಗಿ ಅವರು ಮಾತೃ ಭಾಷೆ ಕಲಿಯುವುದರಿಂದ ಜೊತೆಗೆ ಇಂಗ್ಲಿಷಿನಲ್ಲಿ ಮಾತನಾಡುವುದು ಬಹುತೇಕ ಶಾಲೆಗಳಲ್ಲಿ ಕಡ್ಡಾಯವೂ ಆಗಿರುವುದರಿಂದ ಈ ಮಕ್ಕಳು ಕನ್ನಡದ ಪತ್ರಿಕೆಗಳಲ್ಲಿ ಪ್ರಕಟವಾಗುವ ಸಾಹಿತ್ಯವನ್ನು ಓದುತ್ತಾರೆನ್ನುವುದು ಬರಿಯ ಊಹೆಯ ಮಾತು.

ಸಂಶೋಧನಾ ಮಾಹಿತಿಯಿಲ್ಲದೇ ಮಕ್ಕಳ ಮನಸ್ಸನ್ನು ಉದ್ದೀಪಿಸಿ ಅವರಿಗೆ ಅಗತ್ಯವಿರುವ ಕಸುವನ್ನು ಕೊಡುತ್ತೇವೆನ್ನುವುದು ಉಢಾಫೆಯೇ ಆಗುತ್ತದೆ. ವಿವಿಧ ಪೇಯಗಳ ಜಾಹೀರಾತುಗಳಲ್ಲಿ ನಟಿಸುವ ಅಮ್ಮಂದಿರಿಗೆ ಮಾತ್ರ ಮಕ್ಕಳ ಅಗತ್ಯ ಗೊತ್ತಿರುವುದು ಈ ಕಾರಣಕ್ಕೇ! ಸೈದ್ಧಾಂತಿಕ ಅಡಿಪಾಯಗಳ ಮನಶಾಸ್ತ್ರೀಯ ಅಧ್ಯಯನ ಮಾತ್ರ ಇಂಥ ಸಮಸ್ಯೆಗಳನ್ನು ನೀಗಬಲ್ಲುದು. ನಾವೀಗ ಬದುಕುತ್ತಿರುವ ಸಮಾಜ, ಸನ್ನಿವೇಶ, ಆರ್ಥಿಕ ಸವಲತ್ತು, ವಿದ್ಯಾಭ್ಯಾಸದ ಮಟ್ಟ, ಅಂಧಶ್ರದ್ಧೆಗಳು, ಜಾತಿಯ ವಿಷಬೀಜಗಳು, ಲಿಂಗ ಭೇದಗಳು, ಮಕ್ಕಳ ಮನಸ್ಸಿಗೆ ನಿಲುಕದ ಹಾಗೆ ಬೆಳಸುತ್ತೇವೆನ್ನುವುದು ಮತ್ತೆ ಉಢಾಫೆಯೇ. ಇನ್ನು ಮಕ್ಕಳ ಆರೋಗ್ಯ ಮತ್ತು ದೈಹಿಕ ಬೆಳವಣಿಗೆಗಳ ಬಗ್ಗೆ ಸಾಕಷ್ಟು ಮಾಹಿತಿ ನಮಗಿದೆ ಎನ್ನುವುದು ಸಮಾಧಾನದ ವಿಚಾರ. ಪೋಲಿಯೋದಂಥ ಪಿಡುಗು, ಸಿಡುಬಿನಂಥ ಮಹಾಮಾರಿಗಳನ್ನು ನಾವು ಎದುರಿಸಿ ಗೆದ್ದಿದ್ದೇವೆ.

ಆದರೆ ಮಕ್ಕಳ ಸಾಹಿತ್ಯವೆನ್ನುವುದು ದೊಡ್ದವರು ಮಕ್ಕಳಿಗೆಂದು ಬರೆದ ಸರಕಾಗೇ ಉಳಿಯುತ್ತಿದೆ. ಮಕ್ಕಳ ಮನಸ್ಸಿಗೆ ಇದು ಖುಷಿಕೊಡುತ್ತದೆ ಎನ್ನುವ ಊಹಾಪೋಹಗಳಲ್ಲೇ ದೊಡ್ಡವರು ಬರೆದೂ ಬರೆದೂ ಪ್ರಕಟಿಸುತ್ತಿದ್ದೇವೆ. ಪ್ರಾಥಮಿಕ ಶಾಲೆಯ ಪಾಠವೊಂದರಲ್ಲಿ ‘ಅವಳು ಕಮಲ ಇವನು ಬಸವ’ ಎಂದು ಲಿಂಗ ತಾರತಮ್ಯವನ್ನು ಮೆರೆಸುವ ನಾವು ‘ಕಮಲಳ ಲಂಗ ಝಳ ಝಳ’ ಎಂದು ಹೇಳಿ ಅವಳನ್ನು ಲಂಗಕ್ಕೇ ಮಿತಿಗೊಳಿಸುತ್ತೇವೆ. ಇನ್ನು ಮಕ್ಕಳಿಗೆಂದೇ ತಯಾರಾಗುವ ಚಲನಚಿತ್ರಗಳು ಮಕ್ಕಳಿಗೇನು ಬೇಕೋ ಅದನ್ನು ಬಿಟ್ಟು ಉಳಿದೆಲ್ಲ ಮಾರುಕಟ್ಟೆಯ ಮಸಾಲೆಗಳನ್ನು ಇಟ್ಟುಕೊಂಡಿರುತ್ತದೆ. ಕೋತಿ, ಹಾವು, ದೈವ ಮಹಿಮೆ ಇಲ್ಲದೇ ನಮ್ಮ ಮಕ್ಕಳ ಚಿತ್ರಗಳು ನಿರ್ಮಾಣವಾಗುವುದಿಲ್ಲ.ಮಕ್ಕಳ ಅಲೋಚನೆಗಳಿಗೆ ಗಗನದಗಲದ ವಿಶ್ವಾಸವನ್ನು ತುಂಬಿ ಅವರ ಮಾನಸಿಕ, ಬೌದ್ಧಿಕ ವಿಸ್ತರಣಕ್ಕೆ ಸಹಕರಿಸಿದ ಚಿತ್ರಗಳು ಬಂದಿರುವುದು ತೀರ ಅಪರೂಪಕ್ಕೆ. ವೈಜ್ಞಾನಿಕವಾಗಿ ತುಂಬ ಮುಂದುವರೆದಿರುವ ಈ ಕಾಲದಲ್ಲಿ ಮೌಢ್ಯ ಮತ್ತು ಅತಿಮಾನುಷ ಶಕ್ತಿಗಳನ್ನು ಕೊಂಡಾಡುವ ಮಕ್ಕಳ ಚಿತ್ರಗಳನ್ನು ಮೊದಲು ನಿಷೇದಿಸಬೇಕಿದೆ. ಬರಿಯ ಮನರಂಜನೆಯೊಂದೇ ಮಕ್ಕಳ ಚಿತ್ರಗಳ ಮುಖ್ಯ ಉದ್ದೇಶವಾಗಬಾರದು. ಮಕ್ಕಳ ಚಿತ್ರಗಳಲ್ಲೂ ನಾಯಕ-ನಾಯಕಿ ಡ್ಯುಯೆಟ್ ಹಾಡುವುದು, ಅವರ ಪ್ರೀತಿಗಾಗಿ ಮಕ್ಕಳು ಸೇತುವೆಯಾಗುವುದು ಮೊದಲು ನಿಲ್ಲಬೇಕು.

ಈಗಲೂ ಪ್ರಸ್ತುತವಾಗುವ ಪಂಜೆಯವರ ಹಲವು ಕವಿತೆಗಳನ್ನು ನಮ್ಮ ಮಕ್ಕಳು ಕಲಿತಿಲ್ಲ ಎನ್ನುವುದರ ಅರಿವು ನಮಗಿಲ್ಲದಿರುವುದೂ ನೆನಪಾಗಬೇಕಿದೆ. ಪ್ರಾಥಮಿಕ ಶಿಕ್ಷಣದ ಪಠ್ಯಕ್ರಮ ನಿರೂಪಿಸುವ ಜವಾಬ್ದಾರಿ ಹೊತ್ತ ಹಲವರು ಶಿಕ್ಷಣ ಕ್ಷೇತ್ರಕ್ಕಿಂತಲೂ ರಾಜಕೀಯ ವರಸೆಗಳನ್ನು ಅರಿತವರಾಗಿರುತ್ತಾರೆ ಎನುವುದನ್ನು ಬಿಡಿಸಿ ಹೇಳಬೇಕಿಲ್ಲ. ಕಾರಂತರು ಪ್ರಾಯೋಗಿಕವಾಗಿ ನಡೆಸಿದ್ದ ಬಾಲವನ, ಕೇಂದ್ರ ಸರ್ಕಾರ ರೂಪಿಸಿರುವ ಜವಾಹರ ನೆಹರು ವಿದ್ಯಾಲಯ, ಸರ್ಕಾರೀ ಶಾಲೆಗಳಲ್ಲಿ ಇರುವ ಪಠ್ಯಕ್ರಮ, ಅಲ್ಲಿ ವಿತರಿಸಲಾಗುತ್ತಿರುವ ಪಠ್ಯ ಪರಿಕರಗಳು,ಸಮವಸ್ತ್ರ ಸಂಹಿತೆ, ನಮ್ಮ ಮುಂದೇ ಇರುವ ಅವಕಾಶಗಳಾಗಿವೆ. ಖಾಸಗಿ ಶಾಲೆಗಳು ಬೋಧನೆಗೆ ಬಳಸುತ್ತಿರುವ ಅಪಾಯಕಾರೀ ಕ್ರಮಗಳನ್ನು, ಮಕ್ಕಳ ಮನಸ್ಸಿನ ಮೇಲೆ ಹೆಚ್ಚುತ್ತಿರುವ ಒತ್ತಡಗಳನ್ನೂ ಗಮನಿಸಬೇಕು. ಧಾರ್ಮಿಕ ಸಂಸ್ಥೆಗಳು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾರ್ಥನೆಯ ಹೆಸರಲ್ಲಿ ಎಳೆಯ ಮನಸ್ಸುಗಳ ಮೇಲೆ ಹೇರಲಾಗುತ್ತಿರುವ ಒತ್ತಡಗಳನ್ನು ನಾವು ಅರಿಯಬೇಕಿದೆ.

ಪ್ರಾಥಮಿಕ ಶಿಕ್ಷಣವನ್ನು ಎಲ್ಲ ಶಾಲೆಗಳಲ್ಲೂ ಏಕ ಸೂತ್ರದಡಿಯಲ್ಲಿ ಕೊಡದಿದ್ದರೆ ನಾವೇ ನಮ್ಮ ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ಸಾಮಾಜಿಕ ವೈರುಧ್ಯವನ್ನು ಕಲಿಸಿಕೊಟ್ಟಂತಾಗುತ್ತದೆ. ಮತ್ತು ಮೆಕಾಲೆಯಿಂದ ಬಳುವಳಿಯಾಗಿ ಬಂದಿರುವ ಗುಮಾಸ್ತೆಗಳನ್ನು ಸೃಷ್ಟಿಸುತ್ತಿರುವ ಶಿಕ್ಷಣ ಕ್ರಮ ಮುಂದುವರಿಕೆಯಾಗಿಯೇ ಉಳಿಯುತ್ತದೆ. ಇದಕ್ಕಿರುವ ಏಕೈಕ ಉಪಾಯವೆಂದರೆ ಪ್ರಾಥಮಿಕ ಶಿಕ್ಷಣವನ್ನು ಮಾತೃ ಭಾಷೆಯಲ್ಲಿ ಕಡ್ಡಾಯ ಮಾಡುವುದು. ಮತ್ತು ಪ್ರಾಥಮಿಕ ಶಿಕ್ಷಣವನ್ನು ಖಾಸಗೀ ಕಬಂಧ ಬಾಹುಗಳಿಂದ ತಪ್ಪಿಸಿ, ಸಾರ್ವಜನಿಕಗೊಳಿಸಿ ಕಡ್ಡಾಯವಾಗಿಸಿ ಅದನ್ನು ಸರ್ಕಾರವೇ ನಿರ್ವಹಿಸುವುದು. ಮಕ್ಕಳಿಗೇನು ಬೇಕೆಂಬುದನ್ನು ಕಪೋಲಕಲ್ಪಿತ ಸಂಗತಿಯನ್ನಾಗಿಸದೇ ವಿಧಿವತ್ತಾದ ಸಂಶೋಧನೆಯಿಂದ ತಿಳಿದುಕೊಳ್ಳಬೇಕಿದೆ. ಆಗ ಮಾತ್ರ ಮಕ್ಕಳ ದಿನಾಚರಣೆಗೆ ಒಂದು ಅರ್ಥ ಬಂದೀತು. ಇಲ್ಲದೇ ಹೋದರೆ ಅದೂ ಸರ್ಕಾರ ನಡೆಸುವ ಇತರ ಉತ್ಸವಗಳ ಹಾಗೇ ನಮ್ಮ ರಾಷ್ಟ್ರೀಯ ಹಬ್ಬಗಳ ಹಾಗೇ ತೋರುಗಾಣಿಕೆಯ ಸಂಕೇತವಾದೀತು, ಅಷ್ಟೆ.

ಶನಿವಾರ, ಅಕ್ಟೋಬರ್ 16, 2010

ಕರುಣಾಳು ಬಾ ಬೆಳಕೇ...

ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು. . . .ಕವಿ ಬೆಳಕನ್ನು ಆರ್ತವಾಗಿ ಪ್ರಾರ್ಥಸಿದ್ದಾನೆ. ಬೆಳಕೆಂಬುದು ಭಗವಂತನ ನೆರಳು ಅಂದವನು ಗ್ರೀಕ್ ದಾರ್ಶನಿಕ ಪ್ಲೇಟೋ. ಭೌತಿಕ ವಸ್ತುಗಳ ನೆರಳು ಕಪ್ಪನೆಯ ಬಣ್ನದಲ್ಲಿದ್ದರೆ ಭಗವಂತನ ನೆರಳು ಬೆಳಕಿನ ರೂಪದಲ್ಲಿರುತ್ತದೆ ಎನ್ನುತ್ತ್ತಾನೆ ಒಬ್ಬ ಭಕ್ತಿ ಕವಿ. ಸ್ವಯಂ ಪ್ರಕಾಶನೆಂದು ವೇದಗಳು ಪ್ರಮಾಣಿಸಿರುವ ಭಗವಂತನ ನೆರಳೇ ಬೆಳಕಿನ ರೂಪದಲ್ಲಿ ಈ ಜಗತ್ತನ್ನು ಕಾಪಿಡುತ್ತಿದೆಯೆಂದು ನಂಬಿದವರೂ ಬಹಳ ಜನರಿದ್ದಾರೆ. ಲೋಕ ಜೀವನದ ಸಾತತ್ಯವನ್ನು ಕೆಡದಂತೆ ನಡೆಸಿಕೊಡುವುದೇ ಬೆಳಕಿನ ಮೂಲಸ್ವರೂಪನಾದ ಸೂರ್ಯನ ಕೆಲಸವೂ ಆಗಿರುವುದರಿಂದ ಸೂರ್ಯನನ್ನೇ ಭಗವಂತನೆಂದು ಕರೆಯಲೂ ಅಡ್ಡಿಯಿಲ್ಲ. ದೇವರ ಅಸ್ತಿತ್ವನ್ನು ನಂಬುವುದು ಅಥವ ಬಿಡುವುದೂ ಅವರವರ ಮನೋಧರ್ಮಕ್ಕೆ ಬಿಟ್ಟ ವಿಚಾರವಾದರೂ ಬೆಳಕೆಂಬುದು ಆಸ್ತಿಕರಿಗೂ ನಾಸ್ತಿಕರಿಗೂ ಸಮಾನವಾಗಿ ಜೀವನ ನಿರ್ವಹಣೆಯ ಮೂಲಸ್ರೋತವಾಗಿರುವುದನ್ನು ಅಲ್ಲಗಳೆಯಲಾಗದು. ಬೆಳಕಿನ ಉಪಯೋಗ ಸಂದೇಹಾತೀತವಾದುದು. ದ್ವಂದ್ವಾತೀತವಾದುದು. ಬೆಳಕಿಲ್ಲದೇ ಬದುಕು ಸಾಗುವುದಿಲ್ಲ. ಬದುಕನ್ನು ಅನುಭವಿಸಲು ಆಸ್ವಾದಿಸಲು ಬೆಳಕು ಬೇಕೇ ಬೇಕು.

ಭಾರತೀಯ ದಾರ್ಶನಿಕ ವಿವೇಚನೆಯ ಪ್ರಕಾರ ಭಗವಂತನ ರೂಪವು ಇಂದ್ರಿಯ ಗೋಚರವಾಗಿರುವ ನಮ್ಮ ಸುತ್ತಮುತ್ತಲಿನ ಪ್ರಪಂಚವೇ ಆಗಿದೆ. ಅದು ಮುಮುಕ್ಷುವಿನ ಅನುಭವಕ್ಕೆ ಬರುವುದು ಆ ಮುಮುಕ್ಷು ಆ ಅರಿವನ್ನು ಪಡೆದಾಗ ಮಾತ್ರ. ಆದರೆ ತೀರ ಸಾಮನ್ಯರಾದ ನಮ್ಮೆಲ್ಲರಿಗೂ ಭಗವಂತನ ಕೃಪಾಶೀರ್ವಾದಗಳು ಬೆಳಕಿನ ಸ್ವರೂಪದಲ್ಲಿ ಕಾಪಾಡುತ್ತಿದೆ ಅಂದರೆ ತಪ್ಪಾಗಲಾರದು. ಬೆಳಕು ಅಂದರೆ ಶಕ್ತಿಯ ಮೂಲ, ಜ್ಞಾನದ ಆಕರ. ಅರಿವಿನ ಕೇಂದ್ರ,. ಚರಾಚರ ಪ್ರಕೃತಿಯ ವಿವಿಧ ರೂಪಗಳು ಕಾಣುವುದು ಬೆಳಕಿನ ಸಹಾಯದಿಂದ ಮಾತ್ರ ಸಾಧ್ಯವಿರುವ ಸಂಗತಿಯಾದ್ದರಿಂದ ಬೆಳಕನ್ನು ಬರಿಯ ಬೆಳಕಾಗಿ ನೋಡಲಾಗದು. ಹೊರ ಜಗತ್ತಿನ ಬೆಳಕಿಗೆ ಸಂವಾದಿಯಾಗಿ ನಮ್ಮೆಲ್ಲರೊಳಗೂ ಒಂದೊಂದು ಬೆಳಕಿನ ಗಣಿಯೇ ಇದೆ. ಆದರೆ ಆ ಗಣಿಯನ್ನು ಬಗೆದು ಒಳಗಿನ ಖನಿಜವನ್ನೆತ್ತಿ ತರುವುದು ಹಾಗೆ ತಂದ ಖನಿಜವನ್ನು ಶೋಧಿಸಿ, ಕಾಯಿಸಿ, ಲೋಹವನ್ನಾಗಿ ಪರಿವರ್ತಿಸಿ ಇಷ್ಟ ದೇವತೆಯ ವಿಗ್ರಹವನ್ನಾಗಿ ಕಟೆದು ನಿಲ್ಲಿಸುವುದು ಅಷ್ಟೇನೂ ಸುಲಭಕ್ಕೆ ದಕ್ಕದ ಸಂಗತಿ. ನಮ್ಮೊಳಗಿರುವ ವಿವೇಕವೆಂಬ ಬತ್ತಿಯನ್ನು ಅರಿವಿನ ತೈಲದೊಂದಿಗೆ ಸಮ್ಮೇಳಿಸಿ ಜ್ಞಾನದ ಬೆಳಕನ್ನು ಪಡೆಯಬಹುದೆಂದು ಸಮರ್ಥ ರಾಮದಾಸರು ಹೇಳಿದ್ದಾರೆ. ವಿವೇಕವೆಂಬ ಸಾಕ್ಷಿಪ್ರಜ್ಞೆ ಬೆಳಕನ್ನು ಮಂಕಾಗದಂತೆ ಕಾಯುವ ತವನಿಧಿ. ಬೆಳಕು ನಂದಿಹೋಗಿ ಕತ್ತಲಾವರಿಸದಂತೆ ಕಾಪಾಡಿಕೊಳ್ಳಬೇಕಾದ ನಿರಂತರ ಎಚ್ಚರ ಎಂಬ ಜವಾಬ್ದಾರಿ ನಮ್ಮೆಲ್ಲರದು. ನಮ್ಮೊಳಗಿನ ವ್ಯಕ್ತಿಗೆ ವ್ಯಕ್ತಿತ್ವ ಲಭಿಸಬೇಕಾದರೆ ನೈತಿಕ ವಿಕಸನವೆಂಬ ಬೆಳಕಿನ ಅನಿವಾರ್ಯತೆ ಇದ್ದೇ ಇದೆ.

ಭೂಮಿಯ ಮೇಲಿನ ಸಕಲ ಜೀವಾತ್ಮ ಕೋಟಿಗಳಿಗೆ ಸೂರ್ಯನೇ ಆದಿಮೂಲವಾಗಿದ್ದಾನೆ. ವೈಜ್ಞಾನಿಕವಾಗಿಯೂ ಸೂರ್ಯನೇ ಈ ಲೋಕದ ಸಕಲ ಭೌತಿಕ, ಜೈವಿಕ, ಮಾನಸಿಕ ಚಟುವಟಿಕೆಗಳ ಪ್ರೇರಕ ಶಕ್ತಿಯಾಗಿದ್ದಾನೆ, ಪೋಷಕನಾಗಿದ್ದಾನೆ, ನಿಯಂತ್ರಕನೂ ಆಗಿ ಕಾಪಾಡುತ್ತಿದ್ದಾನೆ. ದ್ಯುತಿ ಸಂಷ್ಲೇಷಣೆಯ ಮೂಲಕ ಜೈವಿಕ ಚಟುವಟಿಕೆಗಳಿಗೆ ಪ್ರೇರಕ ಶಕ್ತಿಯಾಗಿರುವುದರ ಜೊತೆ ಜೊತೆಗೇ ನೀರು-ಆವಿ-ಮೋಡ-ಮಳೆಗಳ ಜಲಚಕ್ರವನ್ನು ಯಶಸ್ವಿಯಾಗಿ, ನಿರಂತರವಾಗಿ, ಬೇಸರಿಸದೇ ಮಾಡುತ್ತಿರುವವನೇ ಸೂರ್ಯನಾರಾಯಣ. ಹಾಗೆಂದೇ ಸಂಧ್ಯಾ ಸಮಯದಲ್ಲಿ ಅರ್ಘ್ಯವನ್ನು ನೀಡುವುದರ ಮೂಲಕ ನಮ್ಮ ಹಿರಿಯರು ಸೂರ್ಯನಿಗೆ ಸದಾ ಕೃತಜ್ಞತೆಯನ್ನು ಸೂಚಿಸುತ್ತಿದ್ದರು. ದಿನ,ರಾತ್ರಿ,ವಾರ,ಪಕ್ಷ,ಮಾಸ,ಸಂವತ್ಸರಗಳ ನಿಲ್ಲದ ಗಡಿಯಾರದ ಮೂಲ ಶಕ್ತಿ ಸೂರ್ಯನೆಂಬ ಬೆಳಕೇ ಆಗಿದೆ. ಸೂರ್ಯುನು ಸ್ಥಾವg. ಜಂಗಮ ಸ್ವರೂಪವಾದ ಸಮಸ್ತ ಜಗತ್ತಿನ ಆತ್ಮವೇ ಅವನಾಗಿದ್ದಾನೆ.

ಬೆಳಕೆಂದರೆ ಬದುಕು. ಕತ್ತಲೆಂದರೆ ಸಾವು. ಬದುಕಿನಲ್ಲಿ ಕತ್ತಲು ಅನಿವಾರ್ಯ. ಕತ್ತಲ ಬಿಡುಗಡೆಗೆ ಬೆಳಕೊಂದೇ ಆಧಾರ. ಹಾಗಾಗಿಯೆ ಕವಿ ಹಾಡಿಯೇ ಹಾಡುತ್ತಾನೆ- ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು... ... ...

ಮೌನವೆಂಬ ಮಹಾನಿಧಿ

ಮೌನವನ್ನು ಕುರಿತು ಮಾತನಾಡಿದರೆ ಅಥವ ಅದನ್ನು ಕುರಿತು ಬರೆಯುತ್ತ ಹೋದರೆ ಅದು ವಿರೋಧಾಭಾಸವೇ ಆಗುತ್ತದೆ. ಏಕೆಂದರೆ ಮೌನವೆನ್ನುವುದು ಅದರ ಶುದ್ಧ ಸ್ವರೂಪದಲ್ಲಿ ಒಂದು ಅನಿರ್ವಚನೀಯ ಸ್ಥಿತಿ. ಅಂದರೆ ಮಾತುಗಳೆಲ್ಲವನ್ನೂ ನಿರಾಕರಿಸಿದ ಮತ್ತು ಕೇವಲ ಅನುಭವದ ಮೂಲಕವೇ ಸಕಲಕ್ಕೂ ಉತ್ತರಕೊಡಬಲ್ಲ ತಾಕತ್ತು ಮೌನಕ್ಕಿದೆ. ಸರಿಯಾದ ಮಾತುಗಳು ಹುಟ್ಟುವುದೂ ಮೌನದ ಗರ್ಭದಲ್ಲೇ!

ಸದಾ ಮಾತನಾಡುತ್ತಲೇ ಇರುವುದು ಶಕ್ತಿಯ ಅಪವ್ಯಯ ಅನ್ನುತ್ತಾರೆ ತಿಳಿದವರು. ಅವರ ಪ್ರಕಾರ ಮೌನವೆನ್ನುವುದು ಶಕ್ತಿ ಸಂಚಯನದ ಒಂದು ಸಾಧನ. ಜನರಿಂದ ಬಹಳ ದೂರವೇ ಉಳಿಯುವ ಯೋಗಿಗಳೂ, ಸಿದ್ಧಪುರಷರೂ ಮೌನಿಗಳಾಗಿದ್ದರೂ ಜನರ ಒಳದನಿಗಳನ್ನು ಆಲಿಸಿ ಸಮಾಧಾನಕಾರವಾದ ಉತ್ತರವನ್ನು ನೀಡಬಲ್ಲವರು. ಪರಿಪೂರ್ಣ ಮೌನ ಎಂಥವರಲ್ಲೇ ಆಗಲಿ ನಿರ್ಮಲ ಭಾವಗಳನ್ನು ಉದ್ದೀಪಿಸಬಲ್ಲುದು. ಎಮರ್ಸನ್ ‘ಭಗವಂತನಾಡುವ ಪಿಸುಮಾತುಗಳನ್ನು ಆಲಿಸಲು ಮೌನವೊಂದೇ ಸಾಧನ’ ಎನ್ನುತ್ತಾನೆ. ಮೌನದ ಮೂಲಕವೇ ಜಿಜ್ಞಾಸುಗಳೊಂದಿಗೆ ಭಗವಾನ್ ರಮಣರು ಮಾತನಾಡುತ್ತಿದ್ದರೆಂಬ ಪ್ರತೀತಿಯೂ ಇದೆ. ರಮಣರು ಹೇಳುವ ಹಾಗೆ ಮೌನವೆಂಬುದೇ ಅನಂತವಾದ ಮಾತು.

ಸಾತ್ವಿಕ ಮೌನವು ಅಂತರಂಗದ ಕೊಳೆಯನ್ನು ಗುಡಿಸಿಹಾಕುವ ಪೊರಕೆಯಾಗಿದೆ. ಅಂತರಂಗವು ಶುಚಿಯಾಗಿ ವಿವೇಕ, ಆರ್ದ್ರತೆ, ಸಹೃದಯತೆ, ಸಹಸ್ಪಂದನ ಇತ್ಯಾದಿ ದೈವೀಗುಣಗಳು ವ್ಯಕ್ತಿತ್ವದಲ್ಲಿ ಪಡಿಮೂಡಿ ಬರಬೇಕಾದರೆ ಮೌನದ ವ್ರತ ಹಿಡಿಯಲೇ ಬೇಕಾಗುತ್ತದೆ. ಯೋಚನೆಗಳಿಗೆ ಸರಿಯಾದ ದಿಕ್ಕು ದೆಶೆ, ಭಾವನೆಗಳಿಗೆ ಗಟ್ಟಿ ಬುನಾದಿ ಬರುವುದು ಮೌನದಿಂದ ಮಾತ್ರ ಸಾಧ್ಯವಿರುವ ಸಂಗತಿಗಳು. ಆಡುವ ಮಾತಿಗೆ ತೂಕ, ಘನತೆ, ಅರ್ಥವಂತಿಕೆಗಳೆಲ್ಲ ಬೇಕಾದರೆ ಮಾತನ್ನು ಅಪರೂಪಕ್ಕೆ ಮಾತ್ರ ಆಡಬೇಕಾಗುತ್ತದೆ. ಅದೇ ವಾಚಾಳಿಯ ಮಾತು ಯಾವತ್ತೂ ಹಗುರಾಗಿ ನಗಣ್ಯವೆನ್ನಿಸುಕೊಳ್ಳುತ್ತಲೇ ಇರುತ್ತದೆ.

ಮೌನವೆಂದರೆ ಮಾತನಾಡದೇ ಸುಮ್ಮನಿರುವುದು ಎಂದಲ್ಲ. ಹೊರಗೆ ಮಾತಲ್ಲಿ ತೋರಿಸದಿದ್ದರೂ ಒಳಗೇ ಸದಾ ಕಾಡುವ ಚಿಂತೆ, ಬಯಕೆ, ಭಯ, ಗೊಂದಲ ಮುಂತಾದುವಕ್ಕೆ ಕುದಿಯುತ್ತಲೇ ಇರುವ ಸಂದರ್ಭಗಳು ಸಾಮಾನ್ಯ ಮನುಷ್ಯನ ಜೀವನದಲ್ಲಿ ಇದ್ದೇಇರುವ ಸಂಗತಿಗಳು. ಅವುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದೇ ಮೌನದ ಸಾಧನೆ. ಮನಸ್ಸಿನೊಳಗಿನ ಎಲ್ಲ ಚಲನೆಗಳನ್ನೂ ಹಿಡಿತದಲ್ಲಿಟ್ಟುಕೊಂಡು ಬುದ್ಧಿಯನ್ನು ಯಾವುದೋ ಶ್ರದ್ಧಾಕೇಂದ್ರವೊಂದರಲ್ಲಿ ನಿಲ್ಲಿಸುವುದು ವಾಚಾಳಿಯಿಂದ ಸಾಧ್ಯವಿಲ್ಲದ ಸಂಗತಿ. ಮೌನೋಪಾಸನೆಯಿಂದ ಮಾತ್ರ ಶ್ರದ್ಧ್ಧೆಯ ವಿವೇಕ ಹೆಚ್ಚುತ್ತದೆ.

ಬದುಕಿನ ಹಲವು ಸ್ತರಗಳಲ್ಲಿ ಮಾತು ಸೋತು ಹೋದಾಗ ಮೌನ ಗೆದ್ದಿರುವ ಸಂದರ್ಭಗಳಿದ್ದೇ ಇರುತ್ತವೆ. ಅತ್ಯಂತ ನವಿರು ಭಾವಗಳನ್ನು ಮಾತು ಸ್ಪಷ್ಟವಾಗಿ ಹೊರಹಾಕದೇ ಹೋದ ನಿದರ್ಶನಗಳೂ ಇರುತ್ತವೆ. ಆದರೆ ವಾತ್ಸಲ್ಯ, ಕರುಣೆ, ಅನುರಾಗ ಮುಂತಾದ ಸ್ನಿಗ್ಧ ಭಾವಗಳನ್ನು ಮೌನ ಯಶಸ್ವಿಯಾಗಿ ಅಭಿವ್ಯಕ್ತಿಸಿ ಹೃದಯ ಸಂವಾದವನ್ನು ಆರಂಭಿಸಿಬಿಡುತ್ತದೆ.
ಮೌನದ ದೇಗುಲದಲ್ಲಿ ಮಾತೇ ಜ್ಯೋತಿರ್ಲಿಂಗವಾಗಿ ಬದಲಾಗುತ್ತದೆ. ಮೌನದ ಮಣ್ಣಿನಲ್ಲಿ ಮಾತಿನ ಬೀಜ ಬೆಳಕೇ ಆಗಿ ಕುಡಿಯೊಡೆಯುತ್ತದೆ. ಮೌನದ ಚಿಪ್ಪೊಡೆದು ಬಂದ ಮಾತಿಗೆ ಮುತ್ತಿನ ಬೆಲೆ ಬರುತ್ತದೆ.

ಪು.ತಿ.ನ ತಮ್ಮ ಕವಿತೆಯೊಂದರಲ್ಲಿ ಹಾಡಿದ ಹಾಗೆ- ಭಾವನೆ ಕಾಯುವ ನಾಂತಿಹ ಮೌನ, ಮೋಕ್ಷಾನಂದದ ಜೀವನ್ ಮೌನ, ಓ ಕಡು ಸೋಜಿಗವೀ ಮೌನ! ಚಿನ್ಮೌನ!

ಶಬ್ದ ಮಾಲಿನ್ಯದಿಂದ ಆವೃತವಾಗಿರುವ ಪ್ರಸ್ತುತ ವರ್ತಮಾನದಲ್ಲಿ ಶುದ್ಧ ಮೌನದ ದಾರಿ ಸುಲಭಕ್ಕೆ ಸರಳಕ್ಕೆ ಸಿಕ್ಕಲಾರದು. ಮಾತು ಮತ್ತು ಮೌನದ ನಡುವೆ ಇರುವುದು ಸೇತುವೆಯಲ್ಲ, ಬದಲಿಗೆ ಅದು ಇರುವ ಇಲ್ಲದಿರುವ ತೆಳ್ಳನೆಯ, ಅಳಿಸಿಬಿಡಬಹುದಾದ ಬದಲಿಸಿಬಿಡಬಹುದಾದ ಬಹುಶೃತ ಧಾರೆ. ಅದರ ವ್ಯತ್ಯಾಸ ಸಾಧನೆಯಿಂದಷ್ಟೇ ಗುರ್ತಿಸಲು ಸಾಧ್ಯವಿರುವಂತಹುದು.

ಭಾನುವಾರ, ಅಕ್ಟೋಬರ್ 3, 2010

ಅಂಗಿ

ಅಂಗಿ

ಇಷ್ಟೂ ದಿನ ತೊಟ್ಟು, ಬಣ್ಣ ಮಾಸಿರುವ
ಮೇಲಂಗಿಯನ್ನು ಕಳಚಿ ಹ್ಯಾಂಗರಿಗೆ ಹಾಕುವಾಗ
ಅಥವ
ಹಾಗೇ ಅಲ್ಲಿಂದ ತೆಗೆದು ತೊಟ್ಟುಕೊಳ್ಳುವಾಗ
ಮೂಗಿಗಡರುವ ಬೆವರ ವಾಸನೆ
ಮತ್ಯಾವುದೋ ಸ್ಮೃತಿಗೆ ದಬ್ಬುತ್ತದೆ
ಯಾವ ಯಾವುದೋ ಘಟನೆಗಳನ್ನು ತಬ್ಬುತ್ತದೆ.

ಹಾಗೆ ನೋಡಿದರೆ
ಹೊಸ ಅಂಗಿಗಳಿಗೆ ವಾಸನೆ
ಅಷ್ಟು ಸುಲಭಕ್ಕೆ ಹತ್ತಿಕೊಳ್ಳುವುದಿಲ್ಲ
ವಾದರೂ,
ತೊಟ್ಟು, ಕೊಳೆಯಾಗಿ ಮಡಿಮಾಡುವ ಹೊತ್ತಲ್ಲಿ
ಎಲ್ಲಿ ಬಣ್ಣ ಬಿಡುತ್ತದೋ ಎಂಬ ಜಿಜ್ಞಾಸೆ
ಯ ಜೊತೆ ಜೊತೆಗೇ ತೊಳೆಯುವ ಕಾಲಕ್ಕೆಲ್ಲಿ
ಉಳಿದ ಬಟ್ಟೆಗಳಿಗೂ
ಬಣ್ಣವಂಟಿಸಿಬಿಡುತ್ತದೋ ಎಂಬ ಆತಂಕ.

ಅಜ್ಜನ ಕಾಲವೇ ವಾಸಿ,
ಅಂಗಿ ತೊಡದೇ ಹಾಗೇ ತೆರೆದೆದೆಯಲ್ಲಿ
ದ್ದರೂ, ಅಂಗವಸ್ತ್ರದ ಮರೆ
ನೆಪಕ್ಕೆ, ಕೂತಾಗಲೂ ಜಪಕ್ಕೆ.

ವಾರ್ಡ್‌ರೋಬಿನ ತುಂಬ
ಲೆಕ್ಕಕ್ಕೆ ಸಿಕ್ಕದ ಅಷ್ಟೊಂದು ಅಂಗಿಗಳಿರುವಾಗಲೂ
ತೊಟ್ಟು ಮೆರದದ್ದಕ್ಕಿಂತ ಅನ್ಯರ ಮೈಮೇಲಿರುವ
ಅಂಗಿಗಳ ರಂಗು, ವಿನ್ಯಾಸ
ಕಾಡುತ್ತಲೇ ಇರುತ್ತವೆ-
ಬೆನ್ನಿಗಂಟಿದ ಬೇತಾಳದಂತೆ.

ಭಾನುವಾರ, ಆಗಸ್ಟ್ 8, 2010

ಸಹಜ ಸ್ವರದಲ್ಲೇ ಮನಸ್ಸು ಸೆಳೆಯುವ ‘ನೆಲದ ಕರುಣೆಯ ದನಿ’

ಸಹಜ ಸ್ವರದಲ್ಲೇ ಮನಸ್ಸು ಸೆಳೆಯುವ ‘ನೆಲದ ಕರುಣೆಯ ದನಿ’


‘ಗಾಯದ ತುಟಿಗಳಿಂದ ಮುರಿದ ಕೊಳಲನೂದಬೇಕಿದೆ’-ಎಂದು ವಾಸ್ತವದ ಸಂಕಟಗಳನ್ನು ತೆರೆದಿಡುವ ಶ್ರೀ ವೀರಣ್ಣ ಮಡಿವಾಳರ ತಮ್ಮ ಮೊದಲ ಕವನ ಸಂಕಲನ ‘ನೆಲದ ಕರುಣೆಯ ದನಿ’ ಯ ಮೂಲಕ ಸಾರಸ್ವತ ಲೋಕಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಮೊದಲ ಸಂಕಲನ ತರುವ ಎಲ್ಲ ಕವಿಗಳಿಗೂ ಇರುವ ಹಾಗೇ ವೀರಣ್ಣನವರಿಗೂ ಇಲ್ಲಿನ ಕವಿತೆಗಳ ಆಯ್ಕೆಯಲ್ಲಿ ದ್ವಂದ್ವಗಳು ಕಾಡಿರುವ ಕುರುಹುಗಳಿವೆ. ಮೊದಲ ಸಂಕಲನ ಪ್ರಕಟಿಸುವ ಕವಿಗೆ ಕಾಡುವ ವಿಚಿತ್ರ ಸಮಸ್ಯೆಯೆಂದರೆ ಎಲ್ಲವನ್ನೂ ಮೊಗೆ ಮೊಗೆದು ಹೇಳಬೇಕು ಎಂಬ ಉತ್ಸಾಹ ಮತ್ತು ಅಂಥ ಉತ್ಸಾಹದ ಜೊತೆಗೇ ಹೇಳುವ ರೀತಿಯಲ್ಲಿ ಬಳಸಬೇಕಾದ ಮಾರ್ಗದ ಅನುಸೂಚಿ.

ಕವಿಯೂ ಒಬ್ಬ ಸಾಮಾಜಿಕನೇ ಆಗಿರುವುದರಿಂದ ಅವನಿಗೂ ಎಲ್ಲರ ಹಾಗೇ ಬದುಕಿನ ಪರಿಕರಗಳು, ಅದಕ್ಕಾಗಿ ಮಾಡಬೇಕಿರುವ ತ್ಯಾಗ ಮತ್ತು ಸವಾಲುಗಳು ಹಾಗೇ ಬದುಕಿನ ಆಸೆ-ವಿಷಾದಗಳು,ಆಕರ್ಷಣ-ವಿಕರ್ಷಣಗಳು, ಭೋಗ ಭಾಗ್ಯಗಳು ಕಾಡಿಯೇ ಕಾಡುತ್ತವೆ. ಒಬ್ಬ ಸಹಜ ಕವಿ ಅಂಥ ಸವಾಲುಗಳನ್ನೆದುರಿಸುತ್ತಲೇ ಸಮಾಜಕ್ಕೆ ಮುಖಾಮುಖಿಯಾಗುತ್ತಾನೆ ಮತ್ತು ತನ್ನ ಅನುಭವದ ಮೂಲಕವೇ ನಗ್ನ ಸತ್ಯಗಳಲ್ಲಿ ಅಡಗಿರುವ ಉತ್ತರಗಳನ್ನು ಪಡೆಯುತ್ತಾನೆ. ತನ್ನ ಅನುಭವಗಳನ್ನು ಅವನು ಹೇಗೆ ಮತ್ತು ಯಾವ ನೆಲೆಗಳಲ್ಲಿ ಅಭಿವ್ಯಕ್ತಿಸುತ್ತಾನೆ ಎನ್ನುವುದರ ಮೇಲೆ ಅವನ ಕವಿತೆಗಳ ಅಳಿವು-ಉಳಿವುಗಳು ನಿಂತಿರುತ್ತವೆ.

ವೀರಣ್ಣ ಮಡಿವಾಳರ ಕಾವ್ಯ ನಿಜ ಬದುಕಿನ ಅಗ್ನಿದಿವ್ಯದಿಂದೆದ್ದು ಬಂದಿರುವುದರಿಂದ ಈ ಸಂಕಲನದ ಬಹುತೇಕ ಕವಿತೆಗಳು ಬರಿಯ ಕವಿತೆಗಳಾಗದೇ ಅನುಭವದ ಪಾರಮ್ಯವನ್ನು ಚಿತ್ರಿಸಿದ ಕುರುಹುಗಳಾಗಿವೆ, ದಮನಿತನೊಬ್ಬನ ಆತ್ಮಕತೆಯ ನೆಲೆಯಾಗಿವೆ, ಮತ್ತು ಯಾವ ಘೋಷಣೆ, ಸಿದ್ಧಾಂತಗಳ ನೆರವಿಲ್ಲದ ವಿನಮ್ರ ಹೇಳಿಕೆಗಳ ಬಿಕ್ಕುಗಳಾಗಿವೆ.

‘ನವಿಲು ನಲಿವ ನೆಲವ ತೊರೆದು, ಇಲ್ಲೇ ಎಲ್ಲೋ ಹಾಳಾಗಿ ಹೋಗಿರುವ ವಸಂತನನ್ನು ಹುಡುಕಲು ಹೊರಟ ನನ್ನ ಮೊದ ಮೊದಲ ತಪ್ಪು ಹೆಜ್ಜೆಗಳಿವು......’ ಎಂದು ಮೊದಲಲ್ಲೇ ಆತಂಕ ಮತ್ತು ಸಹಜ ಆಕ್ರೋಶದಿಂದ ಈ ಸಮಾಜದ ಕ್ರೌರ್ಯವನ್ನು ಪ್ರಶ್ನಿಸುತ್ತಾರಾದರೂ ಎಲ್ಲೂ ಅವರು ಸಾಮಾಜಿಕ ತಪ್ಪುಗಳಿಗೆ ಘೊರ ಶಿಕ್ಷೆಯ ತೀರ್ಪು ನೀಡುವುದಿಲ್ಲ. ಈ ಕವಿಗೆ ಅವನ ನಿಲುವುಗಳಲ್ಲಿ ಜಗಳವಿದೆ, ದುಃಖದ ಹನಿಗಳಾಗಿ ಮಡುಗಟ್ಟಿರುವ ಕವಿತೆಗಳ ಬಗ್ಗೆ ಒಲವಿದೆ, ಸಂಕಟವೇ ಸ್ಥಾಯಿಯಾಗಿ ನಿಂತ ಎದೆಯಾಳದ ಮಾತುಗಳ ನಿಜ ದರುಶನವೂ ಇದೆ.

ಹಸಿವೆಂದು ಊರಿಗೇ ಬೊಬ್ಬಿಟ್ಟರೂ/ಕಾಳು ಹಾಕುವ ಅಜ್ಜ ಮಲಗಿದ್ದಾನೆ/ರೊಟ್ಟಿ ನೀಡುವ ಹುಡುಗ ಹಸಿದಿದ್ದಾನೆ.. ..(ನೆಲದ ಕರುಣೆಯ ದನಿ) ಹೀಗೆ ಗಂಭೀರವಾಗಿ ನೆಲದ ಕರುಣೆಯ ದನಿಯನ್ನೂ, ಅದರ ಕರುಣಾಜನಕ ದನಿಯನ್ನೂ ಒಟ್ಟೊಟ್ಟಿಗೇ ವ್ಯಂಗ್ಯ ಮತ್ತು ವಿಷಾದಗಳೆರಡರಲ್ಲೂ ಸಮರ್ಥವಾಗಿ ಚಿತ್ರಿಸುವ ವೀರಣ್ಣ, ‘ಭೀತ ನಿರ್ಭೀತಗಳಿಲ್ಲದ ಅನವರತ ಏಕಾಂತ/ ವಿಶಾಲ ಬಯಲ ದಟ್ಟ ಕತ್ತಲಲಿ ಏಕಾಂಗಿ ಹಣತೆಯ ಮೈ ಬಸಿತ’ ಎನ್ನುವ ಚಿತ್ರಾತ್ಮಕ ನಿಲುವಿನಲ್ಲಿ ನಿಲ್ಲಿಸಿ, ‘ಏರುತ್ತಿರುವ ನಿಮ್ಮ ದನಿ/ನನ್ನದು ನನ್ನದು ನನ್ನದೇ’ ಎನ್ನುವಲ್ಲಿ ಸಮುದಾಯದ ಒಗ್ಗಟ್ಟನ್ನು ಬಯಸುತ್ತಲೇ ಶೋಷಣೆಯ ವಿರುದ್ಧ ಒಂದಾಗಬೇಕಾದ ಅನಿವಾರ್ಯತೆಯನ್ನು ಒತ್ತಿ ಹೇಳುತ್ತಾರೆ.


ಊರ ದೇವರ ದಿಬ್ಬಣ/ಬೀದಿಯಲಿ ಬರುವಾಗ/ ನಾವೇ ಹಡದಿ ಹಾಸಿಗೆಯಾಗಿ ಬಿದ್ದುಕೊಂಡೆವು
ಮಣ್ಣನಪ್ಪಿದ ಮಡಿಬಟ್ಟೆಯನು/ ಪಲ್ಲಕ್ಕಿ ಹೊತ್ತ ನೀವು ತುಳಿದಿರಿ/
ನಾವು ಎಷ್ಟೇ ನಲುಗಿದರೂ/ದೇವರು ನಮ್ಮನ್ನು ಮುಟ್ಟಲೇ ಇಲ್ಲ. (ಹಡದಿ ಹಾಸುವವರ ಹಾಡು)
ವ್ಯವಸ್ಥೆಯ ಕರಾಳ ಮುಖವನ್ನು ಸೂಕ್ಷ್ಮಗ್ರಾಹೀ ಕವಿಯೊಬ್ಬ ನೋವಿನ ದನಿಯಲ್ಲೇ ವ್ಯಂಗ್ಯ ಮತ್ತು ವಿಷಾದಗಳ ಮೂಲಕ ಸಾರ್ಥಕವಾಗಿ ಚಿತ್ರಿಸಬಲ್ಲ ಎಂದು ಪುರಾವೆ ನೀಡುವ ಸಾಲುಗಳಿವು.

ಕೊಕ್ಕನ್ನೇ ಕತ್ತಿಯಾಗಿಸಿ ವಚನ ಬಂಡಾಯದ ಕವಲು ಕಾದ ಹಕ್ಕಿ/ ಅಲ್ಲಮನ ಬಯಲಲಿ ಬಿದ್ದಿದೆ/
ತುತ್ತು ಕೂಳಿಗೂ ತತ್ವಾರ/ .. .. ದೇಹಿ ಎನ್ನಲು ಮನಸಿಲ್ಲದ ಸ್ವಾಭಿಮಾನಿ ಹಕ್ಕಿ (ಮಡಿವಾಳ ಹಕ್ಕಿ)
ತಾನು ಹೇಳಬೇಕಿರುವುದೆಲ್ಲಿ ಓದುಗನಿಗೆ ತಲುಪುವುದಿಲ್ಲವೋ ಎಂದು ಸಂಕಟವನ್ನು ಒತ್ತಿ ಹೇಳಬೇಕೆಂದು ಕವಿ ಈ ಸಾಲುಗಳನ್ನು ಬರೆದರೂ ‘ದೇಹಿ ಎನ್ನಲು ಮನಸಿಲ್ಲದ’ ಅಂದಮೇಲೆ ‘ಸ್ವಾಭಿಮಾನಿ ಹಕ್ಕಿ’ ಅಂತ ಕರೆಯುವುದು ದ್ವಿರುಕ್ತಿಯಾಗಿ ಬದಲಾಗಿ ಇಡೀ ಪದ್ಯ ಏರುತ್ತಿದ್ದ ಎತ್ತರದಿಂದ ಗಕ್ಕನೇ ಇಳಿಯತೊಡಗಿಬಿಡುತ್ತದೆ.

ಗಿಡುಗನ ಸುಳಿವು ಕಂಡರೂ ಹಕ್ಕಿ/ ಜತನದಿಂದ ಹೊರಬರಲೇ ಬೇಕು/ ಮರಿಗಳ ಹಸಿವ ನೀಗುವ ಸವಾಲಿದೆ (ಸವಾಲು)
ಎನ್ನುವಲ್ಲಿಈ ಕವಿ, ಬದುಕಿನ ಆತಂಕಗಳನ್ನೇ ಸವಾಲಾಗಿ ಸ್ವೀಕರಿಸಿದ ಮನಸ್ಥಿತಿಯನ್ನು ಬಿಚ್ಚಿಡುತ್ತಾರೆ.
ಅಡವಿಯಲಿ ನೀರಡಿಸಿ ನಡೆವಾಗ/ ಕಂಡ ಬಾವಿಯ ಇಣುಕಿದರೆ/ ಬಾವಿ ಮಣ್ಣು ಹೊತ್ತ/ ಅವ್ವನ ಋಣದ ಚಿತ್ರ ಬಾವಿ ತುಂಬ
ದಾಹ ನಾಪತ್ತೆ ( ಹರಕು ಅಂಗಿಯ ರೇಖಾ ಚಿತ್ರ) ಸರಳವಾಗಿ, ನೇರವಾಗಿ ಎದೆಗಿಳಿವ ಪ್ರತಿಮೆಗಳಲ್ಲಿ ಇಡೀ ಪದ್ಯವೇ ಮಾತನಾಡುತ್ತದೆ.

ನಲವತ್ತೇಳು ಕವಿತೆಗಳ ಜೊತೆಗೆ ಇಪ್ಪತ್ತನಾಲ್ಕು ಬಿಡಿ ಬಿಡಿ ಪದ್ಯಗಳನ್ನೂ ಸಂಕಲನದಲ್ಲಿ ಅಡಕಿರಿಸಿದ ಕಾರಣ ದೀರ್ಘ ಪದ್ಯಗಳಲ್ಲಿರುವ ವಿಷಾದ, ಆತಂಕ ಮತ್ತು ಉದ್ವಿಗ್ನತೆಯ ಬಿಸಿಗಳು ಬಿಡಿ ಬಿಡಿ ಪದ್ಯಗಳಲ್ಲಿರುವ, ಸಹಜ ಪ್ರೀತಿಯನ್ನು ಓದಿಗೆ ದಕ್ಕಿಸಲು ಅನನುಕೂಲವಾಗಿದೆ. ಉದಾಹರಣೆಗೆ
ನನ್ನ ಈ ಕಾಲು ಶತಮಾನದ/ ಬದುಕಿನ ಮೇಲಾಣೆ/ ಇದುವರೆಗೂ ಕಂಡಿರದ/ ನವ ನವೀನ ವಿಸ್ಮಯಗಳನ್ನು/ ನೀನು ಸೃಷ್ಟಿಸುತ್ತಿರುವೆ ಎಂದು ಓದಿಕೊಂಡಾಗ ಸಹಜವಾಗಿ ಆಗಬೇಕಾದ ರೋಮಾಂಚನ ಹುಟ್ಟದೇ ಬರಿಯ ನಿಸೂರು ಸ್ವರವೊಂದೇ ಉಳಿದುಬಿಡುತ್ತದೆ.

ಹೊಸ ಹೊಸ ಅನಿಭವಗಳನ್ನು ಓದುಗನಿಗೆ ಯಶಸ್ವಿಯಾಗಿ ದಾಟಿಸಬಲ್ಲ ವೀರಣ್ಣ ಮಡಿವಾಳರ, ತಮ್ಮ ಹೆಗಲ ಮೇಲೆ ಯಾತನೆಯ ಭಾರವನ್ನೇ ಹೊತ್ತಿದ್ದಾರೆ. ಈ ಕವಿತೆಗಳನ್ನು ಬರೆದಾದ ಮೇಲೆ ಅವರ ಭಾರದ ಅರಿವು ಓದುಗನಿಗೂ ದಾಟಿದೆ. ಸಂಕಲನದ ತುಂಬ ಅಸಹಾಯಕತೆಯ ಗಟ್ಟಿ ಬಿಕ್ಕುಗಳು ಕೇಳಿಸುತ್ತಿದ್ದರೂ, ಅದೆಲ್ಲೂ ವೃಥಾ ಕರುಣೆಯನ್ನು ಹಂಬಲಿಸುವ ದನಿಯಾಗದೇ, ಒಡಲಾಳವನ್ನು ಸಮರ್ಥವಾಗಿ ತೆರೆದಿಟ್ಟ ಅಳುವಿನ ಸೆಲೆಯೇ ಆಗಿದೆ. ಅವರು ತಮ್ಮ ಮಿತಿಯನ್ನೂ ಬಲ್ಲವರಾದ್ದರಿಂದಲೇ ಇಲ್ಲಿನೆಲ್ಲ ಕವಿತೆಗಳೂ ಕವಿತೆಗಳಾಗೇ ಅರಳಿವೆ, ಕವಿತೆಯಾಗದೇ ಉಳಿದವು ಅವರ ಸ್ವಗತವಾಗಿಯೂ ಓದುಗನನ್ನು ಕಾಡಿದೆ.

ಯಾರು ಬುದ್ಧಿ ಹೇಳಬೇಕು ಈ ಹುಂಬ ಹುಡುಗನಿಗೆ/ ಕೋಟಿ ವರುಷ ಬಾಳಿದ ಹೆಮ್ಮರದ ತುದಿಯನೇರಿ/
ಸಕಲ ಜೀವಕೂ ಕೇಳಿಸುವ ಹಾಗೆ/ ಮನುಕುಲದ ಉದ್ಧಾರ ಸೂತ್ರ ಪಠಿಸುತ್ತಾನಂತೆ (ಈ ಮಣ್ಣ ಚರಿತ್ರೆ)
ಕೃತಿ: ನೆಲದ ಕರುಣೆಯ ದನಿ (ಕವನ ಸಂಕಲನ) ಕವಿ: ವೀರಣ್ಣ ಮಡಿವಾಳರ
ಪ್ರಕಾಶಕರು: ಕೆಂಗುಲಾಬಿ ಪ್ರಕಾಶನ, ಕೂಡ್ಲಿಗಿ ವರ್ಷ: ೨೦೧೦ ಪುಟಗಳು ೧೧೬ ಬೆಲೆ: ರೂ. ೫೦/-
(ಕನ್ನಡಪ್ರಭದ ಇಂದಿನ ಸಾಪ್ತಾಹಿಕ ಪ್ರಭದಲ್ಲಿ ಪ್ರಕಟವಾಗಿರುವ ಲೇಖನ)

ಗುರುವಾರ, ಜುಲೈ 22, 2010

ಕಡಲ ತುಂಬಾ ಅವಿಶ್ರಾಂತ ಅಲೆಗಳು-

ಈ ಕಡಲ ತುಂಬ ಅವಿಶ್ರಾಂತ ಅಲೆಗಳು. . . . . .

‘ಕಡಲಿಗೆಷ್ಟೊಂದು ಬಾಗಿಲು’ ರೂಪ ಹಾಸನ ಅವರ ನಲವತ್ತು ಪದ್ಯಗಳ ಮೂರನೆಯ ಸಂಕಲನ. ‘ಒಂದಷ್ಟು ಹಸಿಮಣ್ಣು’ ‘ಬಾಗಿಲಾಚೆಯ ಮೌನ’ ಸಂಕಲನಗಳಿಂದ ಸಾರಸ್ವತ ಲೋಕದ ಹೆಬ್ಬಾಗಿಲು ಬಡಿದು ಅಲ್ಲಿ ಈಗಾಗಲೇ ಪ್ರತಿಷ್ಠಾಪನೆಗೊಂಡ ಕೆಲ ಹೆಸರುಗಳಲ್ಲಿ ರೂಪ ಅವರೂ ಒಬ್ಬರು. ವಿವಿಧ ಕವಿಗೋಷ್ಠಿಗಳ ಖಾಯಂ ಹೆಸರುಗಳಲ್ಲಿ ಒಬ್ಬರಾಗಿರುವ ರೂಪ, ಪದ್ಯ ಬರೆಯುವದರ ಜೊತೆಜೊತೆಗೆ ನಾಡಿನ ಬಹುತೇಕ ಯುವ ಬರಹಗಾರರೊಂದಿಗೆ ಸಾಹಿತ್ಯಕ ಒಡನಾಟಗಳನ್ನಿಟ್ಟುಕೊಂಡಿರುವ ಕಾರಣಕ್ಕೂ ವರ್ತಮಾನದ ತವಕ ತಲ್ಲಣಗಳ ಅಭಿವ್ಯಕ್ತಿಯನ್ನು ಪದ್ಯಗಳ ಮೂಲಕ ಸಹಜವಾಗಿ ಮತ್ತು ಕೃತ್ರಿಮತೆಯಿಲ್ಲದೇ ಪ್ರದರ್ಶಿಸಬಲ್ಲರು. ಸ.ಉಷಾ, ಪ್ರತಿಭಾ, ಸುನಂದಾ ಕಡಮೆ ಮುಂತಾದವರು ಸೃಷ್ಟಿಸಿಕೊಂಡಿರುವ ಪ್ರತ್ಯೇಕ ಲೋಕ ರೂಪ ಅವರ ಜಗತ್ತಿಗೆ ಹತ್ತಿರದ್ದು. ಅಂದರೆ ‘ಮಹಿಳೆ’ ಎಂಬ ಮೀಸಲಾತಿ ಬೇಡದೇ ಸಹಜ ಕವಿತೆಗಳನ್ನು ಅನುದಿನದ ವರ್ತಮಾನದ ಪಲುಕುಗಳಿಂದ ಆಯ್ದು ಪೋಣಿಸುವ ಕೆಲಸ ಇಲ್ಲೂ ಮುಂದುವರೆದಿದೆ.
ರೂಪಕಗಳನ್ನು ಗೃಹೀತದ ಅಡುಗೆಮನೆಯಿಂದಲೇ ನೇರ ತಂದು ಮುಂದಿಟ್ಟುಬಿಡುವುದು ಇವರಿಗೆ ಸಿದ್ಧಿಸಿದೆ. ದೋಸೆ, ಹಂಚು, ಸೂಜಿ, ಮಸಾಲೆ ಡಬ್ಬಿಗಳನ್ನೇ ತಮ್ಮ ರೂಪಕಗಳನ್ನಾಗಿ ಹಿಂದಿನ ಸಂಕಲನಗಳಲ್ಲಿ ಬಳಸಿದ್ದ ಕವಯತ್ರಿ ಈ ಸಂಕಲನದಲ್ಲಿ ಬಾಗಿಲೇ ಇಲ್ಲದ ಸದಾ ತೆರೆದೇ ಇರುವ ಕಡಲಿಗೂ ಬಾಗಿಲುಗಳನ್ನಿಟ್ಟು ಆ ಬಾಗಿಲುಗಳ ಮೂಲಕ ಒಳಬರುವ-ಹೊರಹೋಗುವ ಕ್ರಿಯೆಗಳನ್ನು ಧ್ಯಾನಿಸಿದ್ದಾರೆ. ಆದರೆ ಬಾಗಿಲುಗಳನ್ನೆಂದಿಗೂ ಜೋಡಿಸಲಾಗದ ಕಡಲಿನ ಅಗಾಧತೆಗೆ ಬಾಗಿಲನ್ನಿಡುವುದರ ಮೂಲಕ ಬೇರೆಯದೇ ಸಂದೇಶವನ್ನೇನಾದರೂ ಈಕೆ ಕೊಡಹೊರಟಿದ್ದಾರಾ ಎಂದು ಪರಿಶೀಲಿಸಬೇಕಾಗುತ್ತದೆ. ಕಡಲ ತುಂಬಿರುವ ಅವಿಶ್ರಾಂತ ಅಲೆಗಳ ಮೂಲಕವೂ ಕವಿತೆಯ ವಿದ್ಯುತ್ತನ್ನು ತಯಾರಿಸಿ ಕೊಡಬಹುದೆನ್ನುವ ಕನಸೇ ಈ ಸಂಕಲನದ ಹಿಂದಿರುವ ಕಣ್ಣಾಗಿದೆ.
‘ಕ್ಷಮಿಸಿ ಬಿಡು ಪ್ರಭುವೆ/ ನಾವು ಅವರಂತಲ್ಲ/ ಅವರಂತಿಲ್ಲದ್ದಕ್ಕೆ ಖೇದವೂ ಇಲ್ಲ’ ಎಂದು ಆರಂಭವಾಗುವ ‘ನಾವು ಅವರಂತಲ್ಲ’ ಎಂಬ ಕವಿತೆ ಉಳಿದ ಮಹಿಳೆಯರ ಕಾವ್ಯದ ಥರ ಯಥಾಪ್ರಕಾರ ಗಂಡಸರನ್ನು ಇಕ್ಕಳಕ್ಕೆ ಸಿಕ್ಕಿಸದೇ, ತಂತ್ರಕ್ಕೆ ಪ್ರತಿತಂತ್ರ ರೂಪಿಸುವ ಬದುಕಿನ ಚದುರಂಗದಾಟದ ಮೋಸಕ್ಕೆ ತಾನು ಬಲಿ ಬೀಳುವುದಿಲ್ಲವೆಂಬ ಶಪಥದ ಜೊತೆಜೊತೆಗೇ ‘ನಮ್ಮೆದೆಯ ನೋವು ಹಾಡಲು ಬಿಡು’ ಎಂದು ಪ್ರಾರ್ಥಿಸುತ್ತಲೇ ‘ನಾವು ಹೀಗೆಯೇ ನೋವ ಹಾಡುತ್ತೇವೆ/ಆಟವಾಡದೆಯೂ ಜೀವಂತವಿರುತ್ತೇವೆ/ಚರಿತ್ರೆಯಾಗದೆಯೂ ವರ್ತಮಾನದಲ್ಲಿರುತ್ತೇವೆ’ ಎಂಬ ನಿಲುವು ತಾಳುತ್ತದೆ. ಇಂಥದೇ ಆಶಯ ಇಲ್ಲಿನ ಹಲವು ಕವಿತೆಗಳಲ್ಲಿ ಬೇರೆ ಬೇರೆಯದೇ ರೂಪಗಳಲ್ಲಿ ಕಾಣಿಸಿಕೊಳ್ಳುತ್ತವೆ. ಬದುಕಿನ ಒಳಹೊರಗುಗಳನ್ನು, ಜೀವನದ ಅರ್ಥಾನರ್ಥಗಳನ್ನು, ಗಂಡು-ಹೆಣ್ಣಿನ ಸ್ಥಾನಮಾನಗಳನ್ನು ಸಂಕಲನದುದ್ದಕ್ಕೂ ರೂಪ ಪ್ರಶ್ನಿಸುತ್ತಲೇ ಇಂಥ ಪ್ರಶ್ನೆಗಳಿಗೆಲ್ಲ ತೀರ ಖಾಸಗಿಯದಾದರೂ ಸಾರ್ವಜನಿಕವೂ ಆಗಬಹುದಾದ ಉತ್ತರಗಳನ್ನು ಪಡೆದಿದ್ದಾರೆ. ಕವಿತೆಯೊಂದರ ವಸ್ತುವನ್ನು ವ್ಯಾಪ್ತಿಯಾಚೆಗೂ ಅರಳಿಸಬಲ್ಲರಾದರೂ ಅದೇಕೋ ಪ್ರಾಸಗಳ ತ್ರಾಸಿಗೆ ಬಿದ್ದಾಗಲೆಲ್ಲ ಅವರ ಚುರುಕುತನ, ಸಹಜ ನಡಿಗೆ ಅಲ್ಲೇ ನಿಂತಂತೆ ಭಾಸವಾಗುತ್ತದೆ.
‘ಆ ಹಾಳು ಅಸಮ ಪುರಾಣದ / ಕಥೆ ಮುಗಿದು/ ಯಾವುದೋ ಕಾಲವಾಯ್ತಲ್ಲ/ನನ್ನೊಳಗಿನವಳೇ/ನಿನಗಿನ್ನೂ ಅದರದೇ ಕನವರಿಕೆ’ ಎಂದು ಆರಂಭವಾಗುವ ಮೊದಲ ಪದ್ಯದಿಂದ ‘ಇಷ್ಟೇ ಹೀಗೇ ಎಂಬ ನಿರ್ಧಾರವಿಲ್ಲ/ ಕೊನೆ ಇಲ್ಲ ಮೊದಲೂ ಇಲ್ಲ/ ಎಲ್ಲೆಗಳ ದಾಟಿಯೂ ಉತ್ತರಗಳಿಲ್ಲ/ ಎಂದು ಕೊನೆಯಾಗುವ ಕಡೆಯ ಕವಿತೆಯವರೆಗೂ ಎಲ್ಲೂ ತನ್ನದೇ ಎಂಬ ಹಟವಾಗಲೀ, ಇದೇ ಇದೊಂದೇ ಬಿಡುಗಡೆಯ ದಾರಿ ಎಂಬ ಅಂತಿಮ ತೀರ್ಪಿಗೆ ಈಕೆ ಬೀಳದ ಕಾರಣಕ್ಕೆ ಎಲ್ಲ ಪದ್ಯಗಳಲ್ಲೂ ಸಹಜ ಜೈವಿಕತೆ ಇದೆ.
ಬೆಣ್ಣೆ ತುಪ್ಪವಾಗುವ ರೂಪಾಂತರದ ಹದವನ್ನು ‘ಅಮ್ಮನಾಗುವುದೆಂದರೆ’ ಕವಿತೆಯಲ್ಲಿ ಹೀಗೆ ಹೇಳುತ್ತಾರೆ-‘ಸಿದ್ಧಿಸಿದಂತೆಲ್ಲಾ, ಬೆಣ್ಣೆ ಉಕ್ಕುವುದಿಲ್ಲ/ ಮಾಗುವ ಸದ್ದಿಗೆ ಧ್ಯಾನಿಸಿ/ ಸ್ಥಿರಗೊಳ್ಳುತ್ತದೆ ಮನ. ಕರಟುವುದಿಲ್ಲ/ ಹಸಕಲಾಗುವುದಿಲ್ಲ,. ಸದಾ ಹದ ತುಪ್ಪ.’ ‘ನಿರಾಕರಣ’ ಎನ್ನುವ ಕವಿತೆ ಧ್ಯಾನಿಸುವ ಹದ ಎಲ್ಲರಿಗೂ ನಿಲುಕಿದರೆ ಪ್ರಾಯಶಃ ಸಮಾಜದ ಮೇಲು-ಕೀಳುಗಳೆಲ್ಲ ಕ್ಷಣದೊಳಗೇ ಅಳಿಯಬಹುದು. ಆದರೆ ಸ್ಪರ್ಧೆಗಿಳಿಯದೇ, ಗೋಲು ಹೊಡೆಯದೇ ಸುಮ್ಮನಿದ್ದೇ ವರ್ತಮಾನಕ್ಕೆ ಉತ್ತರಿಸುವುದು ಎಲ್ಲರಿಂದಲೂ ಸಾಧ್ಯವಿರುವ ಸಂಗತಿಗಳಲ್ಲವಲ್ಲ.
ಅದಲ್ಲ ಅದಲ್ಲ, ಒಂದು ಅಗುಳಿನ ಸತ್ಯ, ಅನಾಗತ ಹುಡುಕುತ್ತ, ಪರ್ಯಾಯ ಮುಂತಾದ ಕವಿತೆಗಳಲ್ಲಿ ಇತ್ತೀಚೆಗೆ ಕನ್ನಡ ಕಾವ್ಯವು ಅಧ್ಯಾತ್ಮಕ್ಕೆ ತೆರೆದುಕೊಳ್ಳುತ್ತಿರುವ ರೀತಿಯನ್ನು ತೆರೆದಿಟ್ಟರೆ, ಕವಿತೆಯನ್ನೇ ಕುರಿತ ಪದ್ಯಗಳಾದ ಅಂತರ ನಿರಂತರ, ಕಾಲಾಂತರ, ದಾರಿಗುಂಟ ಕವಿತೆ ನಿರಾಸೆಯನ್ನೇನೂ ಮಾಡುವುದಿಲ್ಲ. ಆದರೂ ಎಲ್ಲಿ ಎಲ್ಲಿ ಈ ಕವಿ ಪ್ರಾಸದ ಜೊತೆ ಏಗಲು ಹೋಗುತ್ತಾರೋ ಅಲ್ಲೆಲ್ಲ ಇವರ ಕವಿತೆಗಳೂ ಏದುಸಿರು ಬಿಟ್ಟಿವೆ, ಸಹಜ ನಡಿಗೆಯಿಂದ ಆಮೆ ವೇಗಕ್ಕೆ ಜರುಗಿವೆ.
ಮೊದಲ ಓದಿಗೆ, ಪತ್ರಿಕೆಗಳಲ್ಲಿ ಚಿತ್ರಗಳೊಂದಿಗೆ ಅಚ್ಚಾದ ಗಳಿಗೆಗಳಲ್ಲಿ ಇಲ್ಲಿನೆಲ್ಲ ಕವಿತೆಗಳೂ ಚಂದವಾಗಿ ಕಾಣುವುವಾದರೂ ಎರಡನೆಯ, ಮೂರನೆಯ ಮರು ಓದುಗಳಿಗೂ ಈ ಕವಿತೆಗಳು ಉಳಿಯಬಲ್ಲವೇ ಎಂಬುದು ಪ್ರಶ್ನೆ. ಹೊಸ ರೂಪಕಗಳನ್ನು ಸೃಷ್ಟಿಸದೇ, ಈಗಾಗಲೇ ತಮಗೊಲಿದು ಬಂದಿರುವ ಭಾಷೆ, ವಸ್ತು ವಿನ್ಯಾಸಗಳಲ್ಲೇ ಉಳಿದು, ಹೇಳಿದ್ದನ್ನೇ ಹೇಳುತ್ತಿರುವ ಇತರ ಕವಿಗಳ ನಿಂತಲ್ಲೇ ನಿಂತುಬಿಟ್ಟಿರುವ ಕಾವ್ಯದ ಬಂಡಿಗಳನ್ನೂ ಈಕೆ ಧ್ಯಾನಸ್ಥಸ್ಥಿತಿಯಲ್ಲಿ ಅಧ್ಯಯನ ಮಾಡಿದರೆ ತಾವೇ ನಿರ್ಮಿಸಿಕೊಂಡಿರುವ ಕೋಟೆಯಾಚೆಗೂ ಇಣುಕಬಲ್ಲರು. ಹೇಳದೇ ಉಳಿದ ಮಾತುಗಳನ್ನು, ಹೊಸ ಪ್ರಯೋಗಗಳನ್ನು, ಹೊಸ ರೂಪಕಗಳನ್ನೂ ಸೃಸ್ಟಿಸಬಲ್ಲರು.

ಎಚ್ಚೆಸ್ವಿ- ೬೭ರಲ್ಲೂ ಯುವಕ

ಎಚೆಸ್ವಿಗೆ ಅರವತ್ತೇಳು-ಅವರಿಗೊಂದು ನಮಸ್ಕಾರ ಮಾಡೇಳು. . . .
ಇದೇ ಜೂನ್ ೨೩ಕ್ಕೆ ಅರವತ್ತಾರು ತುಂಬಿ ಅರವತ್ತೇಳಕ್ಕೆ ಕಾಲಿಡುತ್ತಿರುವ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ (೨೩.೦೬.೧೯೪೪) ನವ್ಯೋತ್ತರ ಕನ್ನಡ ಕಾವ್ಯದ ಮುಖ್ಯ ವಾಹಿನಿಗಳಲ್ಲಿ ಖಂಡಿತವಾಗಿ ಗಮನಿಸಲೇಬೇಕಾದ ಪ್ರಮುಖ ಹೆಸರು. ಅವರ ಕಾವ್ಯ ಮಾರ್ಗ ಕೇವಲ ತೀವ್ರತೆಯೊಂದನ್ನೇ ಅಲ್ಲದೇ ಪ್ರಮಾಣದ ಕಾರಣದಿಂದಲೂ ಮಹತ್ವದ್ದಾಗಿದೆ. ೧೯೬೮ರಲ್ಲಿ ತಮ್ಮ ಮೊದಲ ಕವನ ಸಂಕಲನ ‘ಪರಿವೃತ್ತ’ ಪ್ರಕಟಿಸಿದ ಅವರು ೨೦೦೮ರಲ್ಲಿ ‘ಉತ್ತರಾಯಣ ಮತ್ತು. . .’ ಸಂಕಲನ ಪ್ರಕಟಿಸಿದಾಗ ಅದು ಅವರ ೬೪ನೇ ಕೃತಿಯಾಗಿತ್ತು, ಅಂದರೆ ಅವರ ಒಟ್ಟೂ ಬರವಣಿಗೆಯ ಗಾತ್ರ ಕನ್ನಡ ಸಾಹಿತ್ಯವನ್ನು ಎಷ್ಟು ಶ್ರೀಮಂತಗೊಳಿಸಿದೆ ಎಂದು ಮನಗಾಣಬಹುದು. ಪರಂಪರೆಯ ಸತ್ವದೊಡನೆ ಸ್ವಂತದ ಅನುಭವಗಳನ್ನು ಅನುಸಂಧಾನ ಮಾಡುತ್ತ ಪ್ರಾಚೀನ ಮತ್ತು ವರ್ತಮಾನಗಳ ಸಹಯೋಗವನ್ನು ಅವರು ಸಾಧಿಸುತ್ತಲೇ ಬಂದಿದ್ದಾರೆ. ನಾಟಕಗಳನ್ನು, ಅನುವಾದಗಳನ್ನು, ಮಕ್ಕಳ ಕಾದಂಬರಿ ಮತ್ತು ವಿಮರ್ಶೆಗಳನ್ನು ಹಾಗೇ ಕವನ ಸಂಕಲನಗಳನ್ನು ಕಾಲದಿಂದ ಕಾಲಕ್ಕೆ ಪ್ರಕಟಿಸುತ್ತ ಬಂದಿರುವ ಎಚೆಸ್ವಿ, ‘ಆ ಮುಖೇನ’ ಎಂಬ ಅಂಕಣಬರಹವನ್ನು ಉದಯವಾಣಿಗೆ ಬರೆಯುತ್ತಿದ್ದುದನ್ನೂ ಮರೆಯುವ ಹಾಗಿಲ್ಲ. ಇತ್ತೀಚೆಗೆ ‘ಅವದಿ’ಯಲ್ಲಿ ಅವರು ಬರೆದುಕೊಳ್ಳುತ್ತಿರುವ ಆತ್ಮಕತೆಯ ಪುಟಗಳು ಅವರ ಜೀವನದ ಹಲವು ವಿವರಗಳನ್ನು ನಮ್ಮ ಮುಂದಿಡುತ್ತಿದೆ. ಜೊತೆಗೇ ‘ಮುಕ್ತ ಮುಕ್ತ’ ಧಾರಾವಾಹಿಯ ಟೈಟ್ಲ್ ಸಾಂಗ್ ಅವರದೇ ಕಾಂಪೊಸಿಷನ್ನು ಎನ್ನುವುದು ಕೂಡ ಇಲ್ಲಿ ಬಹಳ ಮುಖ್ಯ. ಏಕೆಂದರೆ ಕಮರ್ಷಿಯಲ್ ಸೂತ್ರದ ಟೀವಿ ಧಾರಾವಾಹಿಯೊಂದರ ಶೀರ್ಷಿಕೆ ಗೀತೆಗೂ ಸಾಹಿತ್ಯದ ಸ್ಪರ್ಶ ಕೊಟ್ಟು ಅದನ್ನು ಮತ್ತೆ ಮತ್ತೆ ಕೇಳುವಂತೆ ಮಾಡಿರುವ ಮೋಡಿಗಾರರು ಅವರು. ‘ಪರಸ್ಪರ’ಎನ್ನುವ ಬ್ಲಾಗನ್ನು ನಿರ್ವಹಿಸುತ್ತಿರುವ ಅವರು ಹೊಸಕಾಲಮಾನದ ಎಲ್ಲ ಅನುಕೂಲಗಳ ಪ್ರಯೋಜನವನ್ನು ಪಡೆದಿದ್ದಾರೆ. ಮತ್ತೆ ಆ ಕಾರಣಕ್ಕೇ ವರ್ತಮಾನದ ತಲ್ಲಣಗಳನ್ನು ತಕ್ಕಮಟ್ಟಿಗಾದರೂ ಅರಿತು ಹೊಸ ಬರಹಗಾರರಿಗೆ ಮುನ್ನುಡಿ ಬೆನ್ನುಡಿಗಳ ಆಶೀರ್ವಚನವನ್ನೂ ನಡೆಸಿಕೊಡುತ್ತಿದ್ದಾರೆ. ‘ಚಿನ್ನಾರಿ ಮುತ್ತ’ ಚಲನಚಿತ್ರ ಕೂಡ ಅವರ ಕೊಡುಗೆಯೇ. ಭಾಷೆಯ ಲವಲವಿಕೆ, ಜೀವಂತಿಕೆ, ಸಹಜೋಲ್ಲಾಸ, ಚಿತ್ರಕಶಕ್ತಿ, ಲಾಲಿತ್ಯ, ವಸ್ತು ನಿರ್ವಹಣೆಯ ನಾವೀನ್ಯ, ಹೀಗೆ ಅವರ ಕಾವ್ಯೋದ್ಯೋಗವನ್ನು ಬೇರೆ ಬೇರೆ ನೆಲೆಗಳಿಂದ ವಿಷ್ಲೇಷಿಸಬಹುದಾದರೂ, ಅವರು ತಮ್ಮ ಹೊಸ ಸಂಕಲನಗಳ ಮೂಲಕ ಹುಡುಕುತ್ತಿರುವ ಕಾವ್ಯದ ಹಾದಿಯನ್ನು ಗಮನಿಸುವುದೇ ಒಂದು ಸೊಗಸು.
ತಮ್ಮ ಇತ್ತೀಚಿನ ಸಂಕಲನ ‘ಉತ್ತರಾಯಣ’ದ ಹಲವು ಕವಿತೆಗಳಲ್ಲಿ ಅವರು ಧ್ಯಾನಿಸಿರುವ ರೀತಿ ಕನ್ನಡ ಕಾವ್ಯ ಪರಂಪರೆಗೆ ಮತ್ತೊಂದು ಮಜಲನ್ನು ಜೋಡಿಸಿದೆ. ಅನೇಕಾನೇಕ ಕೃತಿಗಳನ್ನು ಈವರೆಗೆ ತಂದಿದ್ದರೂ, ಅವರ ಕಾವ್ಯದ ಮೂಲಕೇಂದ್ರ ಯಾವುದೆಂದು ಮೇಲ್ನೋಟಕ್ಕೆ ದಕ್ಕದಿರುವುದೂ ಒಂದು ಹೆಗ್ಗಳಿಕೆಯೇ. ಬರಿಯ ಕನ್ನಡಕ್ಕಷ್ಟೇ ಅಲ್ಲದೆ ವಸಾಹತೋತ್ತರ ಭಾರತೀಯ ಕಾವ್ಯ ಸಂದರ್ಭಕ್ಕೇ ಅವರು ಮಾದರಿಯಾಗಿದ್ದಾರೆ. ಮೂಲಸ್ವರೂಪದ ಅಭಿಜ್ಞಾನದಲ್ಲೇ ಅವರ ಸಾಹಿತ್ಯ ಯಾತ್ರೆ ನಡೆಯುತ್ತಿರುತ್ತದೆ. ಬರಿಯ ಛಂದೋವಿನ್ಯಾಸಗಳಲ್ಲಲ್ಲದೇ ತಾತ್ವಿಕ ಕಾರಣಗಳಿಂದಲೂ ಅವರ ಕಾವ್ಯಕೃಷಿ ಮಹತ್ವದ್ದಾಗಿದೆ. ತಮ್ಮ ಕಾವ್ಯೋದ್ಯೋಗದುದ್ದಕ್ಕೂ ಕಾವ್ಯದ ಸ್ವದೇಶೀಕರಣಕ್ಕೆ ಬದ್ಧರಾಗಿರುವ ಅವರು, ಕಾವ್ಯವನ್ನು ಅಮೂರ್ತದ ಆಗಸದಿಂದ ಮಣ್ಣ ನೆಲಕ್ಕೆ, ತಾತ್ವಿಕತೆಯ ಒಗಟಿನಿಂದ ಅನುಭವದ ನಿಜಕ್ಕೆ, ಕನಸಿನಾದರ್ಶಗಳನ್ನು ಕಥನಕಾವ್ಯದ ಅನುಸರಣದ ಕೆಲಸದಿಂದ ಅರಿವಿನಂಗಳಕ್ಕೆ ತಂದು ನಿಲ್ಲಿಸಿದ್ದಾರೆ. ಹಾಗೆಯೇ ಪುರಾಣದ ಪಾತ್ರಗಳಿಗೆ ಹೊಸ ಪೋಷಾಕು ತೊಡಿಸಿ ಬೆಚ್ಚಿಬೀಳಿಸಿದ್ದಾರೆ. ಶ್ರೀಸಂಸಾರಿ ಮತ್ತು ಆಪ್ತಗೀತೆ ಎಂಬ ಪದ್ಯಗಳಲ್ಲಿ ಅವರು ದೈವತ್ವಕ್ಕೆ ನೀಡಿದ ಮರುವ್ಯಾಖ್ಯಾನ ಕೂಡ ಗಮನೀಯವೇ ಆಗಿದೆ. ‘ಹರಿವ ಇರುವೆ ಕೂಡ ನೋಯದ ಹಾಗೆ, ಪಂಚಮದ ಇಂಚರ ಎಷ್ಟು ಮಾತ್ರಕ್ಕೂ ಒಡೆಯದ ಹಾಗೆ ಕಾಪಿಡಬೇಕೆನ್ನುವುದು’ ಅವರ ಕವಿಮನಸ್ಸಿನ ವೈಚಾರಿಕತೆಯಾಗಿದೆ. ಪೌರಾಣಿಕ ಸ್ಮೃತಿಯ ಮಂಥನದ ಮೂಲಕ ಆಧುನಿಕ ಕಾಲಕ್ಕೂ ಪ್ರಸ್ತುತವಾಗುವ ವೈಚಾರಿಕ ನವನೀತವನ್ನು ಹಂಚುತ್ತಿರುವ ಎಚೆಸ್ವಿ ಆಧುನಿಕ ಮನೋಭೂಮಿಕೆಯಲ್ಲಿರುವ ನಮ್ಮನ್ನೆಲ್ಲ ಪರಂಪರೆಯ ಆಗಸದವಕಾಶಕ್ಕೆ ಜೋಡಿಸಿ ಹೊಸ ಚಿಂತನೆಗಳು ಸಾಧ್ಯವಿದೆಯೆಂದು ಮನಗಾಣಿಸಿದ್ದಾರೆ.
ಎಚೆಸ್ವಿಯವರ ಕವಿತೆಗಳು ಸರಳವಾಗಿವೆಯೆನ್ನಿಸಿದರೂ ಅವು ಓದುಗನಲ್ಲಿ ಉಳಿಸುವ ಪ್ರಶ್ನೆಗಳು ದೊಡ್ಡವು. ಅವುಗಳ ಆಶಯವೂ ದೊಡ್ಡದೇ. ಕಾವ್ಯವೆಂದರೇನೆಂದು ಮತ್ತೆ ಮತ್ತೆ ಆಲೋಚಿಸುವ ಹಾಗೆ ಮಾಡುವ ಅವರ ಕಾವ್ಯಕ್ರಿಯೆಗೆ ಶರಣೆನ್ನಲೇ ಬೇಕಾಗುತ್ತದೆ. ಏಕೆಂದರೆ ವೈಚಾರಿಕತೆಗೆ ಪೂರ್ವ-ಪಶ್ಚಿಮ, ಎಡ-ಬಲ, ಇತ್ಯಾದಿ ಆಕೃತಿಗಳ ಪ್ರತ್ಯೇಕ ಅಸ್ತಿತ್ವವನ್ನೇ ಅವರ ಕಾವ್ಯ ನಿರಾಕರಿಸುತ್ತ ಬಂದಿದೆ. ಅನುಭವದ ಪಾತಳಿಯಲ್ಲೇ ಅರಿವಿನ ಆವಿಷ್ಕಾರ ಆಗಬೇಕೆನ್ನುವುದು ಈ ಕವಿ ಮೊದಲಿಂದಲೂ ಮಂಡಿಸುತ್ತ ಬಂದ ಗಂಧವಾಗಿದೆ, ಮತ್ತು ಅವರ ಕಾವ್ಯದುದ್ದಕ್ಕೂ ಅಂಟಿ ನಿಂತ ಪರಿಮಳವೂ ಅದೇ ಆಗಿದೆ. ಸಹನೌ, ಸೌಗಂಧಿಕಾ, ಮುಂತಾದ ಪದ್ಯಗಳಲ್ಲಿ ಅವರು ಕಟೆದು ನಿಲ್ಲಿಸುವ ಸಾಮಾಜಿಕ ಕಳಕಳಿ ಅವುಗಳನ್ನು ಓದಿಯೇ ಅನುಭವಿಸಬೇಕಾದ ಪಾರಮ್ಯಗಳು. ಸ್ಮೃತಿ ಮತ್ತು ಪುರಾಣಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುವ ಅವರು ಅವನ್ನು ತಮ್ಮ ಕಾವ್ಯದ ಅಲಂಕರಣಕ್ಕೆ ಬಳಸದೇ ಅವುಗಳ ತಳಹದಿಯಲ್ಲೇ ಹೊಸ ಆಲೋಚನೆಗಳ ಪಟ್ಟಕವನ್ನಾಗಿ ರೂಪಿಸಿ, ವರ್ತಮಾನದ ತಹತಹಿಕೆಗಳಿಗೆ ಉತ್ತರವನ್ನಾಗಿಸಿ ಆಶ್ಚರ್ಯ ಹುಟ್ಟಿಸುತ್ತಾರೆ. ‘ಭೂಮಿಯೂ ಒಂದು ಆಕಾಶ’ ಕವಿತೆಯಲ್ಲಿ ಸಂಬಂಧಗಳ ಅನಿವಾರ್ಯತೆಯನ್ನೂ, ಜೊತೆಗೇ ಅವೆಲ್ಲ ಹೇಗೆ ಅಪ್ರಾಕೃತ ಎಂದೂ ಹೇಳಿದ್ದಾರೆ. ಅಂದರೆ ಪುರಾಣ ಪ್ರತಿಮೆಯ ಮೂಲಕ ಸಮಕಾಲೀನ ತೊಡಕುಗಳನ್ನೂ, (ವಿಮುಕ್ತಿ) ಜೊತೆಗೆ ಸಮಕಾಲೀನ ಬದುಕನ್ನು ಪುರಾಣವಾಗಿಸುವ ಮೂಲಕವೂ (ಹರಿಗೋಲು, ಬಸವ ಪುರಾಣ ಥರದ ಕವಿತೆಗಳು) ಅವರು ಈಗಾಗಲೇ ಕಾವ್ಯಾಸಕ್ತರ ಗಮನವನ್ನೂ ಮನವನ್ನೂ ಸೆಳೆದಿದ್ದಾರೆ. ಕಥನ ಕಲೆ ಕೂಡ ಅವರಿಗೆ ಸಿದ್ಧಿಸಿದ ಕಲೆಯಾಗಿದ್ದರಿಂದಲೇ ಕಥನ ಕವನಗಳಲ್ಲೂ ಅವರ ಮುದ್ರೆ ಇದ್ದೇ ಇದೆ. ‘ಕಂಡದ್ದು’ ಕವಿತೆ ಓದುಗನನ್ನು ಬರಿಯ ಕವಿತೆಯಾಗಿ ಕಾಡದೇ ಅವನ ಸ್ವಂತ ಅನುಭವವಾಗಿಯೇ ಉಳಿದು ಬಿಡುತ್ತದೆ. ಹೀಗೆ ಕಾವ್ಯೋದ್ಯೋಗವೆಂಬ ಮಥನದಿಂದ ತಾತ್ವಿಕತೆಯ ಎಳೆಗಳನ್ನು ನೇಯ್ದು ಬೆಚ್ಚನೆಯ ಅರಿವಿನ ಹೊದಿಕೆಗಳನ್ನು ತಯಾರಿಸಿ ಕೊಡುತ್ತಿರುವ ಎಚೆಸ್ವಿ ಒಂದು ರೀತಿಯಲಿ ಕಬೀರನೇ ಆಗಿದ್ದಾರೆ. ಮಡಿವಂತಿಕೆಯ ಸೋಂಕಿಲ್ಲದ, ಸಾಮಾಜಿಕ ನ್ಯಾಯಕ್ಕೆ ಪರಿತಪಿಸುವ ಅವರೊಳಗಿನ ಕವಿ ಜಾಗತೀಕರಣ ಕಾಲದಲ್ಲೂ ಸ್ವದೇಶೀಕರಣದಲ್ಲಿ ನಿರತನಾಗಿದ್ದಾನೆ. ಸಮಕಾಲೀನ ಸಂದರ್ಭವನ್ನು ಪಾರಂಪರಿಕ ಕಾವ್ಯದೊಂದಿಗೆ ವಾದಿ-ಸಂವಾದಿಗಳ ಸ್ವರೂಪದಲ್ಲಿ ಮುಖಾಮುಖಿಯಾಗಿಸುತ್ತಲೇ ಗೇಯತೆಯನ್ನೂ ಅವರು ಉಳಿಸಿ ಬೆಳೆಸಿದ್ದಾರೆ.
ಆದರೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಶತಮಾನದ ಕನ್ನಡ ಕಾವ್ಯದ ಸಂಪಾದಕರಾಗಿ ಅವರು ಎಡವಟ್ಟು ಮಾಡಿಕೊಂಡಿದ್ದೂ ಇದೆ. ನೂರು ವರ್ಷಗಳ ಕಾವ್ಯ ಪರಂಪರೆಯ ಪ್ರಾತಿನಿಧಿಕ ಸಂಕಲನವಾಗಬೇಕಿದ್ದ ಅದು ಅವರ ಆಯ್ಕೆಯ ದ್ವಂದ್ವಗಳ ಕಾರಣ ಪೇಲವವಾದದ್ದೂ ಈಗ ಇತಿಹಾಸ. ಜೊತೆಗೇ ಸುಮ್ಮಸುಮ್ಮನೇ ಮುಲಾಜಿಗೆ ಸಿಕ್ಕಿಕೊಳ್ಳುವ ಅವರ ಮುಗ್ಢತೆ ಸಹ ಅವರನ್ನು ತೊಂದರೆಗಿಳಿಸಿದೆ. ಉದಾಹರಣೆಗೆ ಮುಕ್ತ ಮುಕ್ತ ಸೀರಿಯಲ್ಲಿನ ಅವರ ಜಡ್ಜು ಪಾತ್ರವನ್ನೇ ನೋಡಿ. ಪಾಪ ಪದ್ಯ ಬರೆದುಕೊಂಡಿದ್ದ ಅವರಿಗೆ ಗೌನು ಹಾಕಿ ಕೂರಿಸಿ ಸೀತಾರಾಂ ಮಜಾ ತೆಗೆದುಕೊಳ್ಳುತ್ತಿದ್ದಾರೆ.
ಎಂಭತ್ತರ ದಶಕದಲ್ಲಿ ಕ್ಯಾಸೆಟ್ಟು ಕವಿಗಳ ಒಂದು ದಂಡೇ ಸಾಂಸ್ಕೃತಿಕ ಲೋಕವನ್ನು ಗುತ್ತಿಗೆ ಹಿಡಿದಂತೆ ವರ್ತಿಸಿದ್ದು ಈಗ ಇತಿಹಾಸ. ದಾಸಪಂಥದವರೆಂದು ರಾಮಚಂದ್ರಶರ್ಮರಿಂದ ಮೂತಿಗೆ ಇಕ್ಕಿಸಿಕೊಂಡವರ ಪೈಕಿ ಎಚೆಸ್ವಿ ಕೂಡ ಒಬ್ಬರು. ಸಿ.ಅಶ್ವಥ್ ರಾಗಸಂಯೋಜನೆಯಲ್ಲಿ ಕ್ಯಾಸೆಟ್ಟುಗಳ ಸುಗ್ಗಿಯೋ ಸುಗ್ಗಿಯ ಕಾಲದಲ್ಲಿ ಪದ್ಯ ಬರೆಯುವ ಹುಕ್ಕಿಯಿದ್ದವರೆಲ್ಲ ರಾತ್ರಿ ಕಳೆದು ಬೆಳಗಾಗುವುದರಲ್ಲಿ ಖ್ಯಾತರಾಗಿಬಿಟ್ಟರು. ಈಗ ಆ ಸಾಲಿನಲ್ಲಿ ಉಳಿದಿರುವ ಏಕೈಕ ಹೆಸರೆಂದರೆ ಎಚೆಸ್ವಿಯವರದ್ದು ಮಾತ್ರ, ಏಕೆಂದರೆ ಬರೀಹಾಡುಗಳನ್ನಷ್ಟೇ ಅಲ್ಲದೇ ನಿಜ ಕವಿತೆಗಳನ್ನು ಬರೆಯುವ ತಾಕತ್ತಿದ್ದುದು ಅವರೊಬ್ಬರಿಗೆ ಮಾತ್ರ. ಉಳಿದವರೆಲ್ಲ ಯಾವ ಯಾವ ನಿಗೂಢ ಜಗತ್ತಿಗೆ ಸೇರಿಬಿಟ್ಟರೋ ಅರಿತವರಿಲ್ಲ.
ಜೊತೆಗೆ ಎಚೆಸ್ವಿಯವರ ವರ್ಷಕ್ಕೊಂದು ಪುಸ್ತಕ ತರಲೇಬೇಕೆನ್ನುವ ಛಲ ಕೂಡ ಅವರನ್ನು ಇನ್ನೂ ಸಾಹಿತ್ಯ ಲೋಕದ ಹೊಳೆಯುವ ತಾರೆಯಾಗಿಸಿದೆ. ನವ್ಯರ ಕಾಲದ ‘ಕ್ವಾಲಿಟಿ’ಯ ವಾದವನ್ನು ಧಿಕ್ಕರಿಸಿ ‘ಕ್ವಾಂಟಿಟಿ’ಯ ಮೂಲಕ ನವ್ಯೋತ್ತರರ ಅಜೆಂಡಾವನ್ನು ವಿಸ್ತರಿಸಿದ್ದು ಕೂಡ ಅವರೇ. ಇದರ ಜೊತೆಗೆ ಬರಹಗಾರನಾಗಿರುವವನಿಗೆ ಮಾಧ್ಯಮದ ಅಡೆತಡೆಗಳಿರಬಾರದೆಂಬ ಸೂತ್ರ ಕೂಡ ಅವರಲ್ಲಿರುವುದರಿಂದಲೇ ಬರೀ ಕಾವ್ಯಕ್ಕಂಟಿಕೊಳ್ಳದೇ ಅಭಿಜಾತ ಬರಹಗಾರರು ಮಾತ್ರ ಕೈ ಇಡಬಹುದಾದ ನಾಟಕ ರಚನೆಗೂ ಅವರು ಕೈ ಹಾಕಿದ್ದಾರೆ. ‘ಊರ್ಮಿಳೆ’ ಇದಕ್ಕೊಂದು ಅಪ್ಪಟ ಉದಾಹರಣೆ. ಮಕ್ಕಳ ಪದ್ಯಗಳೆಂದರೆ ಉತ್ತರಕರ್ನಾಟಕದವರೆಂಬ ಮಾತನ್ನು ಅಳಿಸಿದ್ದೂ ಎಚೆಸ್ವಿಯವರೇ! ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರೆದೂ ಆ ಎಲ್ಲ ಪ್ರಕಾರಗಳಲ್ಲೂ ಏಕಮುಖೀ ಯಶಸ್ಸು ಗಳಿಸಿದವರು ಕು.ವೆಂ.ಪು ನಂತರ ಎಚೆಸ್ವಿಯವರೊಬ್ಬರೇ ಇರಬೇಕು.
೨೦೦೦ರಲ್ಲಿ ಪ್ರಕಟವಾದ ಅವರ ‘ಭೂಮಿಯೂ ಒಂದು ಆಕಾಶ’ ಸಂಕಲನದ ಬಗ್ಗೆ ಪ್ರೊ.ಸಿ.ಎನ್.ರಾಮಚಂದ್ರನ್ ಹೇಳಿದ್ದ ಮಾತುಗಳನ್ನಿಲ್ಲಿ ಉಲ್ಲೇಖಿಸಲೇಬೇಕು: ಅಡಿಗರ ನಂತರ ವೆಂಕಟೇಶಮೂರ್ತಿಗಳಷ್ಟು ಸಮರ್ಥವಾಗಿ ರೂಪಕಗಳನ್ನು ಬಳಸುವ ಕನ್ನಡ ಕವಿಗಳು ಅಪರೂಪ. ನಿದರ್ಶನವಾಗಿ, ಮೊದಲ ಓದಿಗೇ ನಮ್ಮನ್ನು ಚಕಿತಗೊಳಿಸುವ,ಬೆಚ್ಚಿಸುವ,ಇಡಿಯಾಗಿ ಆವರಿಸುವ ಈ ರೂಪಕಗಳನ್ನು ಪರಿಗಣಿಸಬಹುದು. ‘ಮರಗಳು ನೆರಳ ಹಾಸಿದ್ದೇ ಹಾಸಿದ್ದು’, ‘ಹೇಳಿ ಕೇಳಿ ಹಗಲ ಕೊನೆ-ಹೊಗೆ ಬತ್ತಿಯ ತುಕಡಾ’, ‘ಕನ್ನಡಿ ಒಂದು ಅಲೆಯಿಲ್ಲದ ಕೊಳ’, ‘ಒಲೆಯಲ್ಲಿ ಬೂದು ಬಣ್ಣದ ಶಾಲು ಹೊದ್ದ ಕೆಂಡ’, ‘ಎಣ್ಣೆ ಕೊಳಗದೊಳಕ್ಕೆ ಬಿತ್ತೆ ಒಣಗಿದ ನಗೆಯ ಬಿದಿಗೆ ಚಕ್ಕೆ’, ‘ಅನಾದಿ ಕಾಲದಿಂದ ಪ್ರವಾಸಿಗಳ ಮುಂದೆ ಮೊಂಡು ಕೈಯೊಡ್ಡಿ ಕೂತಿರೋ ಕುಷ್ಠ ಹಿಡಿದ ತಿರುಕ’ (ಮುಕ್ಕಾದ ಉಗ್ರ ನರಸಿಂಹ..ಹಂಪೆಯಲ್ಲಿ) ಇತ್ಯಾದಿ,,. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಇಂಥ ಬಿಡಿ ರೂಪಕಳಾಚೆಗೂ ಕೆಲವೊಮ್ಮೆ ಇಡೀ ಕವನವೇ ರೂಪಕವಾಗಿಬಿಡುವ -‘ಮೀನು ಬುಟ್ಟಿಯಲ್ಲಿ ಅಂಟಿಕೊಂಡಿರುವ ಕಿರು ಮೀನಂತೆ’ ಹಾಗೆಯೇ ದೀರ್ಘ ಕಥಾನಕಗಳಲ್ಲಿ ಕೇಂದ್ರ ಪಾತ್ರವೇ ರೂಪಾಕಗವಾಗಿ ಮಾರ್ಪಡಬಹುದು ‘ವಿಮುಕಿ’ಯ ಗರುಡನಂತೆ.
ಖಾಸಗೀ ಬದುಕಿನ ಸುಖ, ದುಃಖಗಳನ್ನು, ನೋವು ನಲಿವುಗಳನ್ನು, ಹೇಳಿಕೊಳ್ಳಲಾರದ ಆದರೆ ಹೇಳಿಕೊಳ್ಳಲೇಬೇಕಾದ ಯಾತನೆಗಳನ್ನು ವೈಯುಕ್ತಿಕ ಪರಿಧಿಯಿಂದ ಬೇರ್ಪಡಿಸಿ ಅರ್ಥಪೂರ್ಣ ಸಾರ್ವತ್ರಿಕ ಪ್ರತಿಮೆಯನ್ನಾಗಿಸುವ ಕವಿಶ್ರದ್ಧೆ ಅವರಿಗಿರುವುದರಿಂದಲೇ ಶ್ರೀರಾಮನೂ ಅವರ ಕೈಯಲ್ಲಿ ಶ್ರೀಸಂಸಾರಿಯಾಗುತ್ತಾನೆ, ಉಡುಪಿಯ ಕೃಷ್ಣ ಕನಕನಿಗಾಗಿ ಕಿಂಡಿಯಲ್ಲಿ ಕಣ್ಣಿಟ್ಟು ಕಾಯುತ್ತಾನೆ. ಅವರ ಹುಟ್ಟುಹಬ್ಬದ ದಿನಕ್ಕೆ ಅವರದೇ ಮೂರು ಕವಿತೆಗಳನ್ನು ಆರಿಸಿ ಪೋಣಿಸಿದ್ದೇನೆ: ಅವರ ವೈಚಾರಿಕತೆಯ ರೀತಿ ಮೇಲ್ನೋಟಕ್ಕೆ ಸರಳವಾಗಿದ್ದರೂ ಹೇಗೆ ಗಾಢವಾಗಿದೆ ಅಂತ ತೋರಿಸಲು;

ಎಚ್.ಎಸ್.ವೆಂಕಟೇಶ ಮೂರ್ತಿ ಅವರ ಮೂರು ಕವಿತೆಗಳು
ಭೂಮಿಯೂ ಒಂದು ಆಕಾಶ
ಆಕಾಶದಲ್ಲಿ ಗ್ರಹ ತಾರೆಗಳು ಚಲ್ಲಾಪಿಲ್ಲಿ ಚೆಲ್ಲಿ ಬಿದ್ದಿದ್ದಾವೆ
ಅದು ವಶಿಷ್ಠ, ಅದು ಅರುಂಧತಿ
ಅವರು ಬೆಳಕಿನ ಕೈಚಾಚಿ ಪರಸ್ಪರ ವರಿಸಿದ್ದಾರೆ
ನವದಂಪತಿಗಳೇ... ಅವರಂತಿರಬೇಕು ಸತಿ-ಪತಿ.

ಆಕಾಶದಲ್ಲಿ ಗ್ರಹತಾರೆಗಳು ಚಲ್ಲಾಪಿಲ್ಲಿ ಚೆಲ್ಲಿ ಬಿದ್ದಿದ್ದಾವೆ
ಅದು ಸಪ್ತರ್ಷಿ ಮಂಡಲ, ಅವು ಭತ್ತದ ಅರಳು
ಸಪ್ತರ್ಷಿಗಳು ಅಗ್ನಿಕುಂಡದ ಸುತ್ತ ಕೂತಿದ್ದಾರೆ
ಹೋಮಾಗ್ನಿ ಉರಿಸಿ ಅಂತರತಮ ಕೆದಕುತ್ತ

ಆಕಾಶದಲ್ಲಿ ಗ್ರಹತಾರೆಗಳು ಚಲ್ಲಾಪಿಲ್ಲಿ ಚೆಲ್ಲಿ ಬಿದ್ದಿದ್ದಾವೆ
ಅವನು ಚಂದ್ರ ಅವಳು ತಾರೆ ಅವನು ಬುಧ
ಅವರದ್ದು ಚಿಕ್ಕ ಚೊಕ್ಕ ಸಂಸಾರ
ಒಡಕು ಮರೆತು ಒಡನಿರುವುದೇ ಸಂಸಾರದ ಹದ

ಆಕಾಶದಲ್ಲಿ ಗ್ರಹತಾರೆಗಳು ಚಲ್ಲಾಪಿಲ್ಲಿ ಚೆಲ್ಲಿ ಬಿದ್ದಿದ್ದಾವೆ
ಆಗಾಗ ಇವರ ಮನೆಗೆ ಅವರು ಅವರ ಮನೆಗೆ ಇವರು
ಇದು ಕುಟುಂಬ ಧರ್ಮ; ಇದು ಮಾನವತ್ವದ ಮಾರ್ಗ
ಆದರೆ ನಿಷ್ಠುರ ಸತ್ಯ: ಆಳದಲ್ಲಿ ಅವರೆಲ್ಲ ಏಕಾಂಗಿಗಳು

ಆಕಾಶದಲ್ಲಿ ಗ್ರಹತಾರೆಗಳು ಚಲ್ಲಾಪಿಲ್ಲಿ ಚೆಲ್ಲಿ ಬಿದ್ದಿದ್ದಾವೆ
ನಕಾಷೆ ಬಿಡಿಸಿದ್ದು ನಾವು-ಎಳೆದು ಅವರ ನಡುವೆ ಸಂಬಂಧದ ಗೆರೆ
ಅಂತರ್ಜಾಲ ಹೆಣೆದಿದ್ದೇವೆ,ವಿಶ್ವ ಕುಟುಂಬ ಕನಸಿದ್ದೇವೆ
ಆದರೂ ನಮಗೆ ಗೊತ್ತು-ಭೂಮಿಯೂ ಒಂದು ಆಕಾಶ, ಇಲ್ಲಿ
ನಾವೆಲ್ಲ ಗ್ರಹ ತಾರೆಗಳು.

ಕಂಡದ್ದು

ರಾತ್ರಿ ಮಳೆ ಮಿಂಚು, ವಿದ್ಯುತ್ತು ಹೋಗಿದೆ. ನೀವು
ಬಂದಾಗ ಮನೆಗೆ ಏನೇನೂ ಕಾಣುತ್ತಿಲ್ಲ
ಹೇಗೋ ಬಾಗಿಲು ತೆಗೆದು ಒಳಗೆ ಬರುವಿರಿ. ಬಂದು
ಕಡ್ಡಿಪೆಟ್ಟಿಗೆಗಾಗಿ ತಡವರಿಸುವಿರಿ, ಇಲ್ಲ.
ಸಿಗಲಿಲ್ಲ.ಸಿಡಿಮಿಡಿ.ಮನೆಯೊಡತಿ ಸಂಜೆಯೇ
ರಜ ಎಂದು ಮಗನೊಡನೆ ತಾಯಿಯೂರಿಗೆ. ನೀವು
ಚಡಪಡಿಸುವಿರಿ ಈಗ, ಅಡುಗೆ ಮನೆಯಲ್ಲಾಕೆ
ಕಿಟಕಿಯಲ್ಲಿಡುತ್ತಿದ್ದಳಲ್ಲವೆ ಹಣತೆಯನು?
ಹಣತೆ ಸಿಕ್ಕಿತು. ಅಲ್ಲೆ... ಅಲ್ಲೆ... ಕೆಳಗಡೆ ಹುಡುಕಿ
ಇದ್ದೀತು ಕಡ್ಡಿಪೆಟ್ಟಿಗೆ. ಹೌದು ಅಲ್ಲೆ ಇದೆ.
ಈಗ ಕಡ್ದಿಯ ಗೀರಿ ಮಣಿದೀಪ ಹೊತ್ತಿಸಿ.
ದೀಪವಷ್ಟೇ ಮೊದಲು ಕಾಣುವುದು. ಅಮೇಲೆ...
ಕಾಣುವುವು ಫ್ಲಾಸ್ಕು...ಬಿಸಿಯಡುಗೆ...ಕಾಸಿದ ಹಾಲು
ಪ್ರೀತಿ...ಕಳಕಳಿ...ಅಕರಾಸ್ತೆ...ಕವಿತೆಯ ಸಾಲು

ಹೀಗೇ ಒಂದು ರಾತ್ರಿ
ಬಿದಿಗೆ
ರಾತ್ರಿ
ಹಸಿರು ಸೀರೆ ಉಟ್ಟ
ಯಶೋದೆ
ಅಂಗಾತ ಮಲಗಿದ್ದಾಳೆ

ನೀಲ ಮೇಘ ಶ್ಯಾಮ
ಅವಳ
ಮೊಲೆತೊಟ್ಟಿಗೆ ತುಟಿ ಹಚ್ಚಿ
ಚೀಪುತ್ತಿದ್ದಾನೆ

ಡೊಂಕಾದ
ಅವನ ಕೆಳದುಟಿಗೆ ಬೆಳ್ಳಗೆ
ಹಾಲು ಮೆತ್ತಿದೆ.

ಅವನ ಚಂಡಿಕೆ ಹಾರಿ ಸೂಜಿಮಲ್ಲೆ
ಎಲ್ಲೆಲ್ಲೂ ಚೆಲ್ಲಿವೆ.

ಅರುಣ ಜೋಳದ ಕೂಡ್ಲಿಗಿ ಅವರ 'ಅವ್ವನ ಅಂಗನವಾಡಿ'

ವಾಚ್ಯವಾಗಿಯೇ ಉಳಿವ ಅಂಗನವಾಡಿಯ ಪದ್ಯಗಳು.

ಡಾ.ಅರುಣ ಜೋಳದಕೂಡ್ಲಿಗಿ ವಾಚಕರವಾಣಿ ಮತ್ತು ಓದುಗರ ಪತ್ರದ ಮೂಲಕ ನಿರಂತರವಾಗಿ ತಮ್ಮ ಸುತ್ತಲಿನ ಅನ್ಯಾಯಗಳನ್ನು ಕುಂದುಕೊರತೆಗಳನ್ನೂ ಅವರಿವರ ಕತೆ-ಕವಿತೆಗಳಿಗೆ ಪ್ರತಿಕ್ರಿಯೆಗಳನ್ನು ಬರೆಯುತ್ತಲೇ ಕವಿಯಾಗಿ ಅರಳಿದವರು. ಕಾವ್ಯ ಸ್ಪರ್ಧೆಗಳಲ್ಲೂ ತಮ್ಮ ಕವಿತೆಗಳಿಗೆ ಬಹುಮಾನಗಳನ್ನು ಪಡೆಯುವ ಮೂಲಕ ಎಡ ಪಂಥೀಯ ಆಶಯಗಳನ್ನು, ಸಮಾನತೆಯ ಕನಸುಗಳನ್ನೂ ತಮ್ಮ ಬರಗಳುದ್ದಕ್ಕೂ ಕಾಣಿಸುತ್ತಲೇ ಬಂದವರು. ಈಗಾಗಲೇ ‘ನೆರಳು ಮಾತಾಡುವ ಹೊತ್ತು’ (೨೦೦೪) ಕವನ ಸಂಕಲನವನ್ನೂ, ಮತ್ತು ‘ಸೊಂಡೂರಿನ ಭೂ ಹೋರಾಟಗಳು’ (೨೦೦೮) ಅಧ್ಯಯನ ಕೃತಿಯನ್ನೂ ಪ್ರಕಟಿಸಿ ಸಾರಸ್ವತ ಲೋಕದಲ್ಲಿ ದಾಖಲಾಗಿರುವವರು. ಅವರ ಎರಡನೇ ಕವನ ಸಂಕಲನ ‘ಅವ್ವನ ಅಂಗನವಾಡಿ’.

ಒಟ್ಟು ೪೧ ಪದ್ಯಗಳೆಂದು ಕರೆದಿರುವ ರಚನೆಗಳು ಈ ಸಂಕಲನದಲ್ಲಿವೆ. ಕಾವ್ಯ ಪರಂಪರೆಯ ಬೆರಗು ಹುಟ್ಟಿಸುವ ದನಿಗಳನ್ನು ಅಭ್ಯಸಿಸಿ ಆ ಮೂಲಕ ಅದನ್ನು ಪಡೆದ ಕವಿ, ಹಾಗೆ ತನಗೊಲಿದ ತನ್ನದೇ ದನಿಯಲ್ಲಿ ಕವಿತೆ ಕಟ್ಟಬೇಕೆಂಬ ಮತ್ತು ಪ್ರತಿಮೆ/ರೂಪಕಗಳ ಜೊತೆಗೇ ಕವಿಯು ಅನುಸಂಧಾನ ಮಾಡಬೇಕೆನ್ನುವ ‘ಪುರಾತನ’ ಮಾತುಗಳನ್ನೂ ಈ ಕವಿ ನೇರವಾಗಿ ಮತ್ತು ನಯವಾಗಿ ತಿರಸ್ಕರಿಸಿರುವುದು ಮೊದಲ ಓದಿಗೇ ಶೃತವಾಗುವ ಅಂಶಗಳು. ಏಕೆಂದರೆ ಕವಿತೆಯ ಕಟ್ಟುವಿಕೆಗೆ ಕವಿಯಾದವನಿಗೆ ಇರಲೇಬೇಕೆಂದು ಬಹುತೇಕರು ನಂಬಿರುವ ‘ಕವಿಸಮಯ’ ಮತ್ತು ಕಾವ್ಯಾನ್ವೇಷಣೆಯ ದೀರ್ಘಪಥವನ್ನು ಬೇಕೆಂತಲೇ ಬಿಟ್ಟುಕೊಟ್ಟು ತನಗೊಲಿದ ಕಾಲುದಾರಿಯಲ್ಲೇ ಇಲ್ಲಿನ ಎಲ್ಲ ಕವಿತೆಗಳನ್ನೂ ಅರುಣ ಅರಳಿಸಿದ್ದಾರೆ.

ಮುನ್ನುಡಿಕಾರ ಕೆ.ವಿ.ನಾರಾಯಣರವರು ಗುರ್ತಿಸಿರುವಂತೆ ಈ ಕಾಲದ ಹೊಸ ಬರಹಗಾರ ಹಳೆಯ ಕಾಲದವರ ಹಳಹಳಿಕೆಯ ಮಾತುಗಳು ನುಸುಳದಂತೆ ಇಲ್ಲವೇ ಎಲ್ಲರೂ ಮೆಚ್ಚಿದಂತೆ, ಯಾರಿಗೂ ಗೊತ್ತಾಗದಂತೆ ಬರೆಯುವ ಬಗೆಯಿಂದ ಇಲ್ಲಿನ ಪದ್ಯಗಳು ತಪ್ಪಿಸಿಕೊಂಡಿವೆ. ಅರುಣ ವಯಸ್ಸು ಮತ್ತು ಅನುಭವದಲ್ಲಿ ಇನ್ನೂ ಚಿಕ್ಕವರು. ಅವರು ಬೆಳೆದು ಬಂದ ವಾತಾವರಣದಲ್ಲಿ ಅವರು ಕಂಡುಂಡ ನೋವು, ಹತಾಶೆ ನಿರಾಶೆಗಳನ್ನು ತಮಗೊಲಿದ ಕಾವ್ಯಮಾರ್ಗದಲ್ಲಿ ಹೇಳಬಯಸಿದ್ದಾರೆ. ಇಲ್ಲಿನ ಎಲ್ಲ ಕವಿತೆಗಳಲ್ಲೂ ಸಂತಸದ ಸುಳಿವಾಗಲೀ, ಆನಂದದ ಕ್ಷಣಗಳಾಗಲೀ ಇಲ್ಲವೇ ಇಲ್ಲ. ಎಲ್ಲ ರಚನೆಗಳ ಹಿಂದೂ ನೋವು ನಿಟ್ಟುಸಿರು ಮತ್ತದಕ್ಕೆ ಮರುಗುವ ಹೃದಯದ ಹಾಡುಗಳಿವೆ. ಆದರೆ ಎಂತಹುದೇ ಕಷ್ಟಕಾರ್ಪಣ್ಯದಲ್ಲಿರುವ ವ್ಯಕ್ತಿಗೂ ಕ್ಷಣಕಾಲದವರೆಗಾದರೂ ಸಂತಸದ ಘಳಿಗೆಗಳಿದ್ದೇ ಇರುವುದರಿಂದ ಈ ಕವಿ ಬೇಕೆಂತಲೇ ಅವನ್ನು ನಿರಾಕರಿಸಿದ್ದಾರೋ ಅಥವ ಪ್ರಯತ್ನಪೂರ್ವಕವಾಗಿ ಬೇಕೆಂತಲೇ ನೋವು-ವಿಷಾದಗಳನ್ನೇ ತಮ್ಮ ಕಾವ್ಯಾಭಿವ್ಯಕ್ತಿಯ ಮಾಧ್ಯಮವನ್ನಾಗಿಸಿಕೊಂಡಿದ್ದಾರೋ ಎಂಬುದನ್ನು ಕವಿತೆಗಳ ಓದಿನಿಂದಲೇ ಮನಗಾಣಬಹುದು.

ಅವ್ವನ ರಂಗೋಲಿ-ಹೆಸರಿನ ಸಂಕಲನದ ಮೊದಲ ಪದ್ಯದಲ್ಲಿ ತನ್ನವ್ವ ಎಳೆದ ರಂಗೋಲಿಯ ಗೆರೆಗಳನ್ನೇ ದಾರವಾಗಿ ಮಾಡಿಕೊಂಡು ಗಾಳಿಪಟ ಹಾರಿಸುವ ಕವಿ ಫ್ಯಾಂಟಸಿಯ ಲೋಕವೊಂದನ್ನು ಕಟ್ಟಿಕೊಡುತ್ತಲೇ ಆ ದಾರವನ್ನೇ ಹಗ್ಗವನ್ನಾಗಿ ಮಾಡಿಕೊಂಡು ಅವ್ವನನ್ನು ಬಯ್ಯುವ ತನ್ನಪ್ಪನನ್ನು ಹೆಡೆಮುರಿ ಕಟ್ಟುತ್ತಾನೆ. ಚಿತ್ರಪಟದ ಗಾಂಧಿಗೆ ನೂಲುವ ದಾರ ಖಾಲಿಯಾಗಿದೆಯೆಂದು ರಂಗೋಲಿಯಿಂದ ಪಡೆದ ದಾರವನ್ನೇ ನೀಡುವಾಗ ಅವ್ವನಿಗೊಂದು ಸೀರೆ ನೇಯ್ದು ಕೊಡಬೇಕೆಂಬ ಷರತ್ತು ಹಾಕುತ್ತಾನೆ. ಪದ್ಯ ಇಂಥ ರಮ್ಯ ಕಲ್ಪನೆಯಿಂದ ತೆರೆದುಕೊಳ್ಳುವುದಾದರೂ ಮೊದಲೇ ನಿರ್ಧರಿಸಿದ ಅಂತ್ಯ ಪದ್ಯಕ್ಕೆ ಬಂದೆದಗುವುದರಿಂದ, ಪದ್ಯ ಎದೆಗಿಳಿಯದೇ ಬರಿಯ ಫ್ಯಾಂಟಸಿಯ ಲೋಕವೊಂದನ್ನು ಮಾತ್ರ ಕಾಣಿಸಿಬಿಡುತ್ತದೆ.

ವ್ಯಂಗ್ಯದ ಮೊನಚನ್ನು ತಮ್ಮ ಕವಿತೆಗಳಿಗೆ ಆಯುಧವನ್ನಾಗಿ ಮಾಡಿಕೊಂಡಿರುವ ಈ ಕವಿ ‘ವಿಶ್ವ ವಿದ್ಯಾಲಯದ ಸೆಮಿನಾರಿನಲ್ಲಿ’, ‘ರೆಕ್ಕೆಗಳೇ ತ್ರಿಶೂಲವಾದ ದೇಶದಲ್ಲಿ’, ‘ಬಯಲ ಬಸಿರಿನ ಕನವರಿಕೆ’, ಪದ್ಯಗಳಲ್ಲಿ ವ್ಯಂಗ್ಯದ ಮೂಲಕವೇ ಈ ಸಮಾಜ ಅನೂಚಾನವಾಗಿ ನಡೆಸಿಕೊಂಡು ಬರುತ್ತಿರುವ ಆಚರಣೆಗಳಿಗೆ ಉತ್ತರವನ್ನು ನೀಡುತ್ತಾರಾದರೂ, ಏಕೋ ಈ ಉತ್ತರಗಳೆಲ್ಲ ಚಳವಳಿಗಾರರ ಒಣ ಭಾಷಣದಂತೆ ಶುಷ್ಕವಾಗಿವೆಯೇ ವಿನಾ ಕವಿತೆಯಾಗುವಲ್ಲಿ ಸೋತಿವೆ.

ನೆಲದ ನೆತ್ತಿಯ ಮೇಲೆ, ಬಯಲೆಂದರೆ ಬರೀ ಬಯಲಲ್ಲ ಪ್ರಭುವೇ ಪದ್ಯಗಳು ಈ ಕವಿ ಮುಂದೆ ಬೆಳೆಯಬಹುದಾದ ಸಾಧ್ಯತೆಗಳನ್ನು ಹೇಳಿದರೆ ಬಿಡುಗಡೆಯ ಬಿಡಿ ಪದ್ಯಗಳು, ಮುಖವಿರದ ಚಿತ್ರಗಳು, ಮಾತುಗಳ ಸುಟ್ಟವರು ಕವಿತೆಗಳಲ್ಲಿ ಅನೇಕ ಸಾಧ್ಯತೆಗಳನ್ನು ಕಾಣಿಸುತ್ತಾರೆ. ಹುಲಿಯಾಗಲು ಬಣ್ಣ ಹಚ್ಚಿದವರು ಥರದ ಮೂರು ನಾಲ್ಕು ಪದ್ಯಗಳು ಬೇಕೆಂತಲೇ ವ್ಯವಸ್ಥೆಯನ್ನು ಅಣಕಿಸುವ ಸಲುವಾಗಿ ಬರೆದಂತೆ ಭಾಸವಾಗುತ್ತವೆ.

ತನ್ನ ಸ್ವಂತ ಅವ್ವನ ಬದುಕಿನ ಪುಟಗಳನ್ನೇ ಅವ್ವನ ಅಂಗನವಾಡಿ ಶೀರ್ಷಿಕೆಯಲ್ಲಿ ಪದ್ಯವಾಗಿಸಿರುವ ಕವಿ, ಇತ್ತ ಲಯಗಾರಿಕೆಯೂ ಇಲ್ಲದ ಅತ್ತ ಕಥನ ಕವನಗಳಲ್ಲಿರುವ ಕುತೂಹಲದ ಅಂಶಗಳನ್ನೂ ಹಿಡಿದಿಡದೇ ತನ್ನವ್ವನ ಬದುಕನ್ನು ನೆನೆಯುತ್ತಾರೆ. ಅವರ ಮಹತ್ವಾಕಾಂಕ್ಷೆಯ ಪದ್ಯ ಇದಾಗಿದೆಯೆಂಬುದು ಸಂಕಲನವನ್ನು ಇದೇ ಹೆಸರಿನಿಂದ ಕರೆದಿರುವುದು ಕಾರಣವಾಗಿದೆ.

ತಮ್ಮ ಆಶಯಗಳನ್ನು ವೈಭವೀಕರಿಸಲು ಮತ್ತು ತಾವು ನಂಬಿದ ಸಿದ್ಧಾಂತಗಳನ್ನು ಪ್ರತಿಪಾದಿಸಲು ಅರುಣ ಸಂಕಲನದ ರಚನೆಗಳಿಗೆ ಕೈ ಹಾಕಿದ್ದಾರೆ. ವಾಚ್ಯವಾಗಿಯೇ ಉಳಿದುಬಿಡುವ ಇಲ್ಲಿನ ಹಲವು ರಚನೆಗಳ ವಿನ್ಯಾಸ ಓದಿನ ಕ್ಷಣದಲ್ಲಿ ಕಾಡುವುವಾದರೂ ಮರು ಓದಿಗೆ ನಮ್ಮನ್ನು ಹಿಡಿದಿಡುವುದರಲ್ಲಿ ಸೋತಿವೆ. ಅಕಾರಣ ಎಲ್ಲ ತೊಂದರೆಗಳಿಗೂ ಅನ್ಯರನ್ನೇ ಸಂಶಯಿಸುವ/ಹೊಣೆಗಾರರನ್ನಾಗಿಸುವ ಮತ್ತು ಸಾಮಾಜಿಕ ಅಸಮಾನತೆಗೆ ಪ್ರಭುತ್ವವನ್ನೇ ಗುರಿಮಾಡುವ ಬಹುತೇಕರು ಇಂಥ ಸಮಸ್ಯೆಗಳಿಗೆ ಪರ್ಯಾಯವನ್ನು ಹುಡುಕದೇ/ಕಟ್ಟಿಕೊಡದೇ ಬರಿಯ ಸಂಕಟದ ಪ್ರದರ್ಶನಗಳಿಂದಲೇ ಸಮಾಧಾನಗೊಂಡರೆ/ಗೊಳ್ಳುತ್ತಲೇ ಹೋದರೆ, ‘ಕಾವ್ಯ’ ಮುಂದಿನ ದಿನಗಳಲ್ಲಿ ಸಾಗಬೇಕಾದ ಹೊರಳುದಾರಿಗಳ ಬಗ್ಗೆ ಆತಂಕಗಳೂ ಉಂಟಾಗುತ್ತವೆ.

ಕೃತಿ: ಅವ್ವನ ಅಂಗನವಾಡಿ ಕವಿ: ಅರುಣ್ ಜೋಳದ ಕೂಡ್ಲಿಗಿ ವರ್ಷ: ೨೦೧೦
ಪ್ರಕಾಶಕರು: ಅಹರ್ನಿಶಿ, ಶಿವಮೊಗ್ಗ ಪುಟಗಳು ೧೦೪, ಬೆಲೆ ರೂ ೬೦/-

ಶನಿವಾರ, ಮೇ 22, 2010

ಮಲೆಗಳಲ್ಲಿ ಮದುಮಗಳು-ಯಶಸ್ವಿ ರಂಗಪ್ರಯೋಗ

‘ಮಲೆಗಳಲ್ಲಿ ಮದುಮಗಳು’ ಈ ಶತಮಾನದ ಅತ್ಯುತ್ತಮ ಗದ್ಯ ಕೃತಿಗಳಲ್ಲೊಂದು.ಕನ್ನಡ ಕಾದಂಬರಿಪರಂಪರೆಗೆ ಹೊಸ ವ್ಯಾಖ್ಯೆಯನ್ನು ತನ್ನ ವಿಶಿಷ್ಠ ರಚನಾಕ್ರಮದಿಂದ ಮತ್ತು ಅನುಭವ ಸಾಂಧ್ರತೆಯ ಪಾರಮ್ಯದಿಂದ ಹಾಗೂ ಕಲಾತ್ಮಕ ಪ್ರಯೋಗಗಳಿಂದಲೂ ಬೆಳಗಿಸಿದ ಕೃತಿ. ಪ್ರತಿ ಓದಿನಲ್ಲೂ ಹೊಸ ಹೊಸ ವಿಸ್ತರಣಕ್ಕೆ ಕೊಂಡೊಯ್ಯುವ ಕು.ವೆಂ.ಪುರವರ ಈ ಕಾದಂಬರಿ ಈಗಾಗಲೇ ದೂರದರ್ಶನ ಧಾರಾವಾಹಿಯ ಕೆಲವು ಕಂತುಗಳಿಗೇ ನಿಂತು ಇದನ್ನು ಪುನರ್ಸುಷ್ಟಿಸುವವರ ಎದೆಗಾರಿಕೆಯನ್ನು ಪ್ರಶ್ನಿಸುತ್ತಲೇ ಇದೆ. ಇಡೀ ಕಾದಂಬರಿಯುದ್ದಕ್ಕೂ ಹಲವು ಕಥಾನಕದ ಝರಿಗಳು ಏಕಕಾಲಕ್ಕೆ ಓಡುತ್ತೋಡುತ್ತಲೇ ಒಮ್ಮೆ ಒಂದಾಗುತ್ತ ಮತ್ತೆ ಬೇರೆಯಾಗುತ್ತಲೇ ದರ್ಶನವೊಂದನ್ನು ನೀಡುತ್ತಲೇ ಸಾಗುತ್ತದೆ. ಕಾದಂಬರಿಯ ಪ್ರಸ್ತಾವನೆಯ ‘ಇಲ್ಲಿ ಯಾರೂ ಮುಖ್ಯರಲ್ಲ; ಇಲ್ಲಿ ಯಾರೂ ಅಮುಖ್ಯರಲ್ಲ; ಇಲ್ಲಿ ಯಾವುದು ಯಃಕಶ್ಚಿತವಲ್ಲ’ ಎಂಬ ದಾರ್ಶನಿಕ ಹೇಳಿಕೆಗಳೇ ಈ ಕೃತಿಯನ್ನು ಅರಗಿಸಿಕೊಳ್ಳಲು ಇರುವ ತೋರುಬೆರಳಾಗಿದೆ. ಅದರ ಜೊತೆಗೇ ಕುಸುಮ ಬಾಲೆಯಂಥ ಕಬ್ಬಿಣದ ಕಡಲೆಯನ್ನೇ ರಂಗಕೃತಿಯನ್ನಾಗಿಸಿದ ಸಿ.ಬಸವಲಿಂಗಯ್ಯನವರು ಮದುಮಗಳನ್ನು ರಂಗಕ್ಕೆ ತಂದಿರುವ ಪರಿಯನ್ನು ಅರಿಯಲೂ ಈ ನಾಟಕವನ್ನು ನೋಡಲೇ ಬೇಕೆಂಬ ಆಸೆಗೆ ನೀರೆರೆಯುತ್ತವೆ. ಮೈಸೂರಿನ ರಂಗಾಯಣದಲ್ಲಿ ಪ್ರದರ್ಶಿತವಾಗುತ್ತಿರುವ ನಾಲ್ಕು ವಿರಾಮಗಳ ಜೊತೆಗೆ ನಾಲ್ಕು ಬೇರೆ ಬೇರೆ ರಂಗಸ್ಥಳಗಳಲ್ಲಿ ಒಂಭತ್ತು ಗಂಟೆಗಳ ದೀರ್ಘ ಪ್ರಯೋಗದ ನಾಟಕ ಇದೆಂಬ ಮಾಧ್ಯಮಗಳ ವರದಿ ಕೂಡ ಸಹಜ ಕುತೂಹಲವನ್ನು ರಂಗಾಸಕ್ತರಲ್ಲೂ, ಸಾಹಿತ್ಯಾಸಕ್ತರಲ್ಲೂ ಹುಟ್ಟುಹಾಕಿಬಿಟ್ಟಿದೆ,
ಕನ್ನಡ ಕಾದಂಬರಿ ಲೋಕದಲ್ಲಿ ಕಳೆದ ನಲವತ್ತಮೂರು ವರ್ಷಗಳಿಂದಲೂ ಆಯಾ ಕಾಲದ ವಿಮರ್ಶಕ ಸೂತ್ರಗಳ ವಿವಿಧ ಮಹಜರುಗಳನ್ನು ಯಶಸ್ವಿಯಾಗಿ ಬೇಧಿಸುತ್ತಲೇ ಓದುಗನಲ್ಲಿ ಹೊಸ ಹೊಸ ಕಾಣ್ಕೆಗಳನ್ನು ಕಾಣಿಸುತ್ತಿರುವ ಮದುಮಗಳನ್ನು ರೂಪಾಂತರಿಸಿ ಮರು ಸೃಷ್ಟಿಸುವುದು ಆಲೋಚಿಸಿದಷ್ಟು ಸುಲಭವಾದ ಕೆಲಸವೇನೂ ಅಲ್ಲ. ಕಾದಂಬರಿಯ ತುಂಬ ತುಂಬಿಕೊಂಡಿರುವ ಒಂದೇ ಎನಿಸಿದರೂ ಹಲವು ಕೊಂಬೆಗಳಾಗಿ ಚಾಚಿಕೊಂಡಿರುವ ಇಲ್ಲಿನ ಕಥಾನಕವನ್ನು ವರ್ತಮಾನದಲ್ಲೂ ಸಾಧುವೆನ್ನಿಸುವಂತೆ ಘಟನಾಕ್ರಮದಲ್ಲಿ ಹೇಳುತ್ತಲೇ ಅದನ್ನು ಪ್ರೇಕ್ಷಕ ಅನುಸರಿಸುವಂತೆ ಮಾಡುವುದಕ್ಕೆ ರೂಪಾಂತರಕಾರರು ಅರ್ಜುನ ಜೋಗಿಗಳನ್ನು ನಂತರ ಸುಡುಗಾಡು ಸಿದ್ಧರನ್ನೂ ಹಾಗೇ ಹೆಳವರನ್ನೂ ಕರೆತಂದಿದ್ದಾರೆ. ಕೊರವಂಜಿಗಳೂ ಮಧ್ಯೆ ಬಂದು ಹೋಗುತ್ತಾರೆ. ಅತಿ ವಿಸ್ತಾರದ ಕತೆಯನ್ನು ಹೀಗೆ ಹೇಳಿಸದೇ ಹೋಗಿದ್ದರೆ ಕಥೆಯ ಕೊಂಡಿ ತಪ್ಪಿಹೋಗಿ, ಕಾದಂಬರಿಯನ್ನು ಓದದೇ ನೇರ ನಾಟಕಕ್ಕೆ ಬಂದ ಪ್ರೇಕ್ಷಕ ಗಲಿಬಿಲಿಗೊಳ್ಳುತ್ತಿದ್ದ. ಯಾವತ್ತೂ ಕಾಡುವ ಕಾಳಿದಾಸನ ಅಭಿಜ್ಞಾನ ಶಾಕುಂತಲದ ಉಂಗುರದಂತೇ ಇಲ್ಲಿ ಕೂಡ ಚುಕ್ಕೆಯುಂಗುರದ ಮೂಲಕ ಕಥೆಯನ್ನು ನಿರೂಪಿಸಹೊರಟಿರುವುದು ರೂಪಾಂತರಕಾರರು ಏಕಕಾಲಕ್ಕೆ, ಉಂಗುರದ ಮೂಲಕ ಕ್ಲಾಸಿಕ್ ಕೃತಿಯನ್ನೂ, ಜೋಗಿ, ಸಿದ್ಧರ ಮೂಲಕ ಜನಪದೀಯ ನಂಬುಗೆಗಳನ್ನೂ ಅನಾವರಣಗೊಳಿಸುತ್ತಲೇ ಹೊಸತೊಂದು ಲೋಕಕ್ಕೆ ನೋಡುಗರನ್ನು ಕರೆದೊಯ್ಯುತ್ತಾರೆ.
ಮೂಲತಃ ಕಾದಂಬರಿಯ ಓದಿನ ಸುಖವನ್ನು ನಾಟಕರೂಪದಲ್ಲೂ ಬಯಸುವುದು ಹಾಗೇ ನಾಟಕವನ್ನು ನೋಡು ನೋಡುತ್ತಲೇ ಅಲ್ಲಿ ಕಾದಂಬರಿಯ ಅಥೆಂಟಿಕೇಷನ್ ಬಗ್ಗೆ ಆಲೋಚಿಸುವುದು ನಾವು ಮಾಡಿಕೊಂಡೇ ಬರುತ್ತಿರುವ ಕೆಲಸವಾಗಿರುವುದರಿಂದಲೋ ಏನೋ ಇಂಥ ಅದ್ಭುತ ಕೆಲಸಗಳಲ್ಲಿ ಕೂಡ ನಮ್ಮ ಅಕೆಡಿಮಿಕ್ ವಿಮರ್ಶಾ ಬುದ್ಧಿ ಎರಡೂ ಸೃಜನಶೀಲ ಚಟುವಟಿಕೆಗಳನ್ನು ಅನುಮಾನಿಸಿ ತನಗೆ ಹಿತವೆನ್ನಿಸಿದ ಮಾಧ್ಯಮಕ್ಕೆ ಜೈ ಎನ್ನುತ್ತಿರುವ ಕಾರಣಕ್ಕೋ ಏನೋ ನಾಟಕವನ್ನು ನೋಡುತ್ತ ಸುಖಿಸುತ್ತಿರುವಾಗಲೂ ಹಗುರಕ್ಕೆ ತೇಲಿ ಬರುತ್ತಲೇ ಇದ್ದ ಪ್ರೇಕ್ಷಕರ ಮಾತುಗಳು ಕಾದಂಬರಿಯನ್ನು ಧೇನಿಸುತ್ತಲೇ ನಾಟಕವನ್ನೂ ಜಾಲಾಡುತ್ತಿದ್ದ ಪರಿ ಮೋಜು ತರುತ್ತಿತ್ತು. ಬೆಂಗಳೂರು ವಿ.ವಿ.ಯ ಕನ್ನಡ ವಿಭಾಗದ ವಿದ್ಯಾರ್ಥಿಗಳ ಮಧ್ಯೆ ನಾನು ಸೇರಿಕೊಂಡಿದ್ದ ಕಾರಣ ಹೊಸ ತಲೆಮಾರಿನ ನೋಡುಗರ ವೀಕ್ಷಕ ವಿವರಣೆ ಕೂಡ ಮಧ್ಯೆ ಮಧ್ಯೆ ದಕ್ಕುತ್ತಿತ್ತು. ಆ ವಿದ್ಯಾರ್ಥಿಗಳಲ್ಲೇ ಕೆಲವರು, ಸರಿಯಾಗಿ ಅಭ್ಯಸಿಸದವರಿಗೆ ಕಥೆಯನ್ನು ಜೋಡಿಸಿಕೊಡುತ್ತಿದ್ದರು. ಜೊತೆಗೇ ನೂರೈವತ್ತಕ್ಕೂ ಹೆಚ್ಚು ಪಾತ್ರಗಳು ಬಂದುಹೋಗುವ ವಿಸ್ತೃತ ಕಥಾಹಂದರವಿರುವ ಕಾರಣ ನಿರ್ದೇಶಕರು ಒಬ್ಬೊಬ್ಬ ನಟನಿಂದಲೇ ಎರಡು ಮೂರು ಪಾತ್ರ ಮಾಡಿಸಿರುವುದರಿಂದ ಕೆಲವೊಮ್ಮೆ ಗೊಂದಲವಾಗುತಿದ್ದುದೂ ಸಹಜವಾಗಿತ್ತು. ಅದರಲ್ಲಂತೂ ಜೋಗಪ್ಪಗಳೇ ಪಾತ್ರಗಳಾಗಿ ಬದಲಾದಾಗಲಂತೂ ಇಡೀ ಪ್ರೇಕ್ಷಕ ಸಮುದಾಯವೇ ಒಂದು ಮ್ಯಾಜಿಕ್ಕಿಗೆ ಒಳಗಾದ ಅನುಭವದಲ್ಲಿತ್ತು.
ಒಟ್ಟು ನಾಲ್ಕು ರಂಗಸಜ್ಜಿಕೆಗಳು. ಒಂದೊಂದರಲ್ಲೂ ಎರಡು ಗಂಟೆಗಳ ಪ್ರದರ್ಶನ. ಪ್ರದರ್ಶನದ ನಡುವಿನ ವಿರಾಮದಲ್ಲಿ ಪ್ರೇಕ್ಷಕನೇ ಬೇರೆಯ ರಂಗಸ್ಥಳಕ್ಕೆ ತನ್ನ ಸ್ಥಳವನ್ನು ತಾನೇ ಬದಲಿಸಿಕೊಂಡು ಬೇರೆಯದೇ ಆದ ರಂಗಸ್ಥಳಕ್ಕೆ ಹೊಂದಿಕೊಳ್ಳಬೇಕಾದ ಪರಿ. ನಿಜಕ್ಕೂ ರಂಗದ ಮೇಲೆಯೇ ಸಿದ್ಧಗೊಂಡ ರಸ್ತೆ, ಮನೆ, ಉಬ್ಬು,ಇಳಿಜಾರು. ಮೇಗರವಳ್ಳಿಯ ಶಾಲೆ, ಬೈಸಿಕಲ್ ಪುರಾಣ ಎಲ್ಲವನ್ನೂ ಎಲ್ಲೂ ಕೊಂಚವೂ ಅತಿ ಎನ್ನಿಸದಷ್ಟು ಸಾವಧಾನವಾಗಿ ಎಳೆ ಎಳೆಯಾಗಿ ರಂಗದ ಮೇಲೆ ತೆರೆಸಿದ ಕಲಾ ನಿರ್ದೇಶಕರ ಕೈ ಚಳಕ,(ಪ್ರಮೋದ ಶಿಗ್ಗಾಂವ್) ನಲವತ್ತಕ್ಕೂ ಹೆಚ್ಚು ಹಾಡುಗಳನ್ನು ಸಹ್ಯವೆನ್ನಿಸುವಂತೆ ರಾಗಸಂಯೋಜಿಸಿರುವ ಸಂಗೀತ ನಿರ್ದೇಶಕ,(ಹಂಸಲೇಖ) ಅದನ್ನು ಬರೆದ ಕವಿ(ಡಾ.ಕೆ.ವೈ.ಎನ್) ಒಬ್ಬಿಬರೇ ಈ ಮದುಮಗಳ ತಯ್ಯಾರಿಯಲ್ಲಿ ಕೈಹಾಕಿದವರು? ಎಲ್ಲರೂ ಒಬ್ಬರಿಗಿಂತ ಮತ್ತೊಬ್ಬರು ತಮ್ಮ ಕೈ ಮೇಲಾಗಿಸಿರುವುದರಿಂದಲೇ ಇಂಥದೊಂದು ಪ್ರಯೋಗ ಕನ್ನಡ ರಂಗಭೂಮಿಗೆ ದಕ್ಕಿದೆ, ಆ ಪ್ರಯತ್ನ ಸಾರ್ಥಕವೂ ಆಗಿದೆ.
ರಾತ್ರಿ ಒಂಭತ್ತರಿಂದ ಮಾರನೇ ಬೆಳಗು ಆರೂಕಾಲರವರೆಗೂ ನಾಟಕವನ್ನು ವೀಕ್ಷಿಸಿ, ವಿರಾಮದ ಬಿಡುವಲ್ಲಿ ಸಿಕ್ಕ ಗೆಳೆಯರೊಂದಿಗೆ ಚರ್ಚಿಸಿ, ಮದುಮಗಳ ಮದುವೆಯ ನಾನೂರಕ್ಕೂ ಹೆಚ್ಚು ಚಿತ್ರಗಳನ್ನು ಸೆರೆಹಿಡಿದ ಗೆಳೆಯ ಶ್ರೀರಾಮ ಜಮದಗ್ನಿಯ ಕೆಲಸಕ್ಕೆ ಸಂಭ್ರಮಿಸಿ, ಅದನ್ನು ಸಿಕ್ಕಸಿಕ್ಕವರಿಗೆ ತೋರಿಸಿ, ಮತ್ಯಾವುದೋ ವೆಬ್ ಪೇಜುಗಳಲ್ಲಿ ಲಿಂಕಿಸಿ ಈ ಲೇಖನವನ್ನು ನೇರ ಕೀಲಿಮಣೆಯಲ್ಲಿ ಟಂಕಿಸುತ್ತಿರುವಾಗಲೂ ಅನುಮಾನದ ಸಣ್ಣದೊಂದು ಎಳೆ. ಕಲೆ ಎಂಬ ಮ್ಯಾಜಿಕ್ಕಿಗೆ ಇಂಥ ಪ್ರಯತ್ನಗಳು ಹೊಸ ರೂಪ ತರುವುದು ಸತ್ಯವಾದರೂ ಒಂಭತ್ತು ಗಂಟೆಗಳ ದೀರ್ಘಾವಧಿಯ ಪ್ರದರ್ಶನಕ್ಕೆ ಹೊಸಕಾಲದ, ಅದರಲ್ಲೂ ಸಾಹಿತ್ಯ, ಸಂಗೀತಗಳ ಮೇಲಣ ಅಭಿರುಚಿಯನ್ನೇ ಕಳಕೊಂಡ ಆಧುನಿಕ ಮನೋಭೂಮಿಕೆಯ ಜನ ಸ್ಪಂದಿಸುತ್ತಾರೆಯೇ? ಹಾಗೆ ಸ್ಪಂದಿಸುವ ಗುಣವನ್ನೇ ಕಳಕೊಂಡ ವರ್ತಮಾನಕ್ಕೆ ಇಂಥೆಲ್ಲ ಪ್ರಯತ್ನಗಳೂ ಹೊಳೆಯಲ್ಲಿ ತೇಲಿಬಿಟ್ಟ ಹುಣಿಸೆಯಲ್ಲವೇ?- ಅನ್ನುವ ಅನುಮಾನಗಳೆದ್ದರೂ ಮತ್ತೆ ಮತ್ತೆ ಮಲೆನಾಡಿನ ರಮ್ಯ ಪರಿಸರಕ್ಕೊಯ್ಯುವ ಕಾದಂಬರಿಯನ್ನು ರಂಗರೂಪಕ್ಕೆ ತಂದವರ ಅಪ್ರತಿಮ ಸಾಮರ್ಥ್ಯವನ್ನು ನಾಟಕ ನೋಡಿದವರೆಲ್ಲ ಅನುಭವಿಸಿಯೇ ಅನುಭವಿಸುತ್ತಾರೆನ್ನುವುದು ಮಾತ್ರ ಅಪ್ಪಟ ಸತ್ಯ.
ನಾಟಕವು ಪ್ರಾರಂಭವಾಗುವ ರಂಗಸ್ಥಳವಂತೂ ಒಟ್ಟೊಟ್ಟಿಗೆ ನಾಲ್ಕೈದು ಪಾತ್ರಗಳು ಬೇರೆ ಬೇರೆ ಕಡೆ ಚಲಿಸಬಹುದಾದಷ್ಟು ವಿಶಾಲವಾಗಿರುವುದರಿಂದ ಪಾದರಿ ಜೀವರತ್ನಯ್ಯನ ಬೀಸೋಕಲ್ಲು ಸವಾರಿಯ ಮಜದೊಟ್ಟಿಗೇ, ಹಂದಿ ಶಿಕಾರಿಯ ಕೋಲಾಹಲವನ್ನು ಇನ್ನಿಲ್ಲದಂತೆ ಪ್ರೇಕ್ಷಕನ ಮನಸ್ಸಿನೊಳಕ್ಕೆ ಬಿತ್ತಿಬಿಡುತ್ತದೆ. ಮೊದಲ ವಿರಾಮದವರೆಗೂ ಅಂದರೆ ಮೊದಲ ರಂಗಸ್ಥಳದ ಆಟದವರೆಗೂ ಅತ್ಯಂತ ವೇಗವಾಗಿ ಮತ್ತು ಸಹಜವಾಗಿ ಬಿಚ್ಚಿಕೊಳ್ಳುತ್ತ ಹೋಗುವ ನಾಟಕ ಎರಡನೇಯ ರಂಗಸ್ಥಳದಲ್ಲಿ ಹಂದಿಯೂಟದ ನಂತರ ನಾಗಿಯನ್ನು ವೆಂಕಟಣ್ಣ ಕೂಡುವ ಪ್ಲಾಷ್ ಬ್ಯಾಕ್‌ನಲ್ಲಿ ಸಮ್ಮೋಹನಗೊಳಿಸಿ, ತಿಮ್ಮಿ ಮನೆ ಬಿಟ್ಟು ಹೋದ ಕಾರಣಕ್ಕೆ ಅವಳ ತಾಯಿಯ ಮೇಲೆ ಬರುವ ದೈವದ ಚಿತ್ರಣವಂತೂ ಸೆಲ್ಯುಲಾಯಿಡ್ ಮಾಧ್ಯಮಕ್ಕಿಂತಲೂ ಶಕ್ತಿಶಾಲಿಯಾಗಿ ಮೂಡಿಬರುತ್ತದೆ. ಆದರೆ ನಂತರ ಡ್ರಾಗ್ ಆಗುವ ನಿರೂಪಣೆ ಮೂರನೆಯ ರಂಗಮಂಚದ ಪೂರಾ ಬೋರ್ ಹೊಡೆಸುವಷ್ಟು ಅಶಕ್ತವಾಗಿದೆ. ಮತ್ತು ಕಾವೇರಿಯ ಸಾವು ಹಾಗೂ ದೊಡ್ಡಣ್ಣಹೆಗಡೆಯ ಸಾವಿನ ಸೂತಕ ಇಡೀ ನಾಟಕಕ್ಕೇ ಆವರಿಸುವುದರಿಂದಲೋ ಏನೋ ಅದೂ ಬೆಳಗಿನ ಝಾವದ ಸಮಯ ಅಲ್ಲೊಬ್ಬರು ಇಲ್ಲೊಬ್ಬರು ತೂಕಡಿಸುತ್ತಿರುವಾಗ ನಾಟಕ ನಾಲ್ಕನೆಯ ಕಡೆಯ ರಂಗಸ್ಥಳಕ್ಕೆ ಬದಲಾಗುತ್ತದೆ. ಚಿನ್ನಮ್ಮನನ್ನು ಓಡಿಸಿಕೊಂಡು ಹೋಗುವ ಪೀಂಚಲು ತಿಮ್ಮಿ-ಗುತ್ತಿಗಳು ಹಿಂದೆ ತಂಗಿದ್ದ ಕೋಡುಗಲ್ಲಿನಲ್ಲೇ ಮುಕುಂದಯ್ಯನನ್ನೂ ಚಿನ್ನಮ್ಮರನ್ನೂ ಒಂದಾಗಿಸುತ್ತಾಳೆ. ಈ ಐದನೆಯ ರಂಗಸ್ಥಳ ಕೂಡ ಮೊದಲ ರಂಗಸ್ಥಳದ ಹಾಗೇ ವಿಶಾಲವಾಗಿದ್ದು ಮದುವೆ ಮನೆಯ ಜೊತೆಜೊತೆಗೇ ಕೋಡುಗಲ್ಲು ಬಂಡೆಯನ್ನೂ ಹಾಗೇ ಗುತ್ತಿ ನದಿ ದಾಟುವಾಗ ಅವನ ನಾಯಿ ಸಾಯುವದನ್ನೂ ನಾಟಕದ ಕಡೆಯ ದೃಶ್ಯಗಳನ್ನೂ ಉಣಬಡಿಸುತ್ತದೆ. ಇನ್ನೇನು ಮುಗಿಯಿತೆಂದು ಪ್ರೇಕ್ಷಕ ಚಪ್ಪಾಳೆ ತಟ್ಟಿದರೂ ಮುಂದುವರೆಯುವ ನಾಟಕ ದೇವಯ್ಯನ ಮತಾಂತರವನ್ನು ಭಗ್ನಗೊಳಿಸುವ ಮುಕುಂದಯ್ಯನ ನಂತರವೂ ಮುಂದುವರೆದು ಮತ್ತೆ ಜೋಗಯ್ಯಗಳು ಪ್ರವೇಶಿಸಿ ಉಂಗುರವನ್ನು ಮಂಜುನಾಥನ ಸನ್ನಿಧಿಗೆ ಅರ್ಪಿಸುವ ಮೂಲಕ ಮುಕ್ತಾಯವಾಗುತ್ತದೆ.
ಇಡೀ ನಾಟಕವನ್ನು ಸುಡುಗಾಡು ಸಿದ್ಧರು, ಕೊರವಂಜಿಗಳೂ, ಜೋಗಪ್ಪಗಳೂ ನೆರೇಟ್ ಮಾಡುವ ರೀತಿ ಸೊಗಸಾಗಿ ಬಂದಿದೆ. ಎಲ್ಲೆಲ್ಲಿ ನಾಟಕ ಎಳೆಯುಲ್ಪಟ್ಟಿದೆ ಅನ್ನಿಸುತ್ತದೋ ಅಲ್ಲೆಲ್ಲ ಇವರಿಲ್ಲದಿರುವುದೂ, ಪ್ರಾಯಶಃ ನಾಟಕದ ಪ್ರಸ್ತುತಿಗೆ ಈ ಪಾತ್ರಗಳ ಪೋಷಣೆಯ ಹೊಣೆ ಹೊತ್ತವರೇ ಉತ್ತರ ಹೇಳಬೇಕು. ಕತೆಯ ಎಳೆಗಳಲ್ಲಿ ಬರುವ ಸಾಬರ ಪಾತ್ರಗಳು, ಅವರ ಕುದುರೆ ಮೂಲಕ್ಕಿಂತ ಭಿನ್ನವಾಗಿ ಹಾಸ್ಯದ ಸ್ವರೂಪ ಪಡೆದಿವೆ. ಗುತ್ತಿ ಕಾದಂಬರಿಯಲ್ಲಿ ನಾಯಕನಾದರೆ ಸುಬ್ಬಣ್ಣ ಹೆಗಡೆಯೇ ನಾಟಕದ ತುಂಬ ತುಂಬಿಕೊಳ್ಳುತ್ತಾನೆ. ಪಾದರಿ ಜೀವರತ್ನಯ್ಯ, ನಾಯಿ ಗುತ್ತಿ, ಕುಂಟ ವೆಂಕಟಣ್ಣರ ಪಾತ್ರಧಾರಿಗಳು ಹಲಕಾಲ ನೆನಪಲ್ಲುಳಿಯುತ್ತಾರೆ. ಕಾದಂಬರಿಯ ಮೂಲ ಸ್ವರೂಪವನ್ನು ತಮಗೆ ಬೇಕಾದಂತೆ ತಿರುಚದ ನಿರ್ದೇಶಕರು ಅದರ ವಿವರವನ್ನು ಈ ದೀರ್ಘ ಅವಧಿಯ ನಾಟಕದ ತುಂಬ ಶ್ರಮಪಟ್ಟು ಹಿಡಿದಿರುವ ಅನೇಕ ಕುರುಹುಗಳು ನಾಟಕದುದ್ದಕ್ಕೂ ಸಿಗುತ್ತವೆ. ಅವರೇ ತಮ್ಮದೊಂದು ಸಂದರ್ಶನದಲ್ಲಿ ಹೇಳಿಕೊಂಡಂತೆ ಪುನಃ ಕು.ವೆಂ.ಪು ಅವರನ್ನು ಓದಿಸತೊಡಗುವ ಲಕ್ಷಣಗಳಂತೂ ಇವೆ, ಅವರು ತಮ್ಮ ಈ ಯತ್ನದಲ್ಲಿ ಯಶಸ್ವಿಯೂ ಆಗಿದ್ದಾರೆ.

ಭಾನುವಾರ, ಮೇ 9, 2010

ಗೆರೆ .... ಚುಕ್ಕಿ...ಸೊನ್ನೆ....

ಮನೆಯೊಳಗಿನ ಗೋಡೆಗಳಲ್ಲೆಲ್ಲ
ಮಗ ಬರೆದ ಚಿತ್ರಗಳ ದರಬಾರು
ಅಲ್ಲಿರುವ ಅಷ್ಟೊಂದು ಪಾತ್ರಗಳು
ಅವನೇ ಪರಿಚಯಿಸದ ಹೊರತು
ಸುಲಭಕ್ಕೆ ಅರ್ಥವಾಗುವುದಿಲ್ಲ- ನಂಟು ನೂರಾರು.

ಎಲ್ಲಿಂದ ಹೇಗೆ ಬಂತವನಿಗಿಂಥ ಉಮೇದು?
ಮನೆಗೆ ಬಂದವರೆಲ್ಲ ಕೇಳಿಯೇ ಕೇಳುತ್ತಾರೆ-
ಪೆನ್ನು, ಪೆನ್ಸಿಲು ಕೈಗೆಟುಕದ ಹಾಗೆ
ನೀವಿಡದೇ ಇದ್ದುದಕ್ಕೆ, ಬೇಕಾಬಿಟ್ಟಿ ಗೀಚಿಬಿಟ್ಟಿದ್ದಾನೆ
ಟೀ ಕುಡಿಯುತ್ತಲೇ-ಷರಾ ಬರೆಯುತ್ತಾರೆ.

ನಿದ್ರೆ ಬಾರದ ರಾತ್ರಿಗಳಲ್ಲೆಲ್ಲ
ಕವಿತೆಗಳಿಗೆ ಮೊರೆ ಹೋಗುವ ನಾನು
ಸಂಕೀರ್ಣಸಾಲುಗಳನ್ನೋದಿ ಗೋಡೆ ದಿಟ್ಟಿಸುತ್ತೇನೆ
ಉದ್ದೇಶವಿಲ್ಲದೇ ಪುಟ್ಟನೆಳೆದ ಗೆರೆ, ಚುಕ್ಕಿ, ಸೊನ್ನೆಗಳು
ಅನುರಣಿಸುತ್ತವೆ ಯಾವುದೋ ಕವಿಯ ಭಾವ ಲೋಕವನ್ನು.

ಹೀಗೆ ಧೇನಿಸಿದೊಡನೆ ನಮ್ಮ ಕಣ್ಣಳತೆಗೇ ತೆರೆವ
ಚಿದ್ವಿಲಾಸದ ಈ ಸಂಕೇತ ವ್ಯಾಖ್ಯೆಗಳು
ವರ್ತಮಾನದ ಮಿತಿ ಮೀರಿ ಹೊಳೆದರೂ
ಮತ್ತೆ ಇಹದಲ್ಲೇ ಉಳಿದು ಸೆಣಸುವ
ಮನುಷ್ಯಮಾತ್ರರ ಕನಸ ಕಿಲುಬುಗಳು?

ಚಿತ್ತದೊಳಗಿದ್ದುದೆಲ್ಲವನೂ ಮಥಿಸಿ
ಚಿತ್ರವನ್ನಾಗಿಸಿ ಒಂದರ್ಥಕ್ಕೆ ಬಗ್ಗಿಸಿದರೆ,ಅರೆ,
ನಿರರ್ಥಕದ ಕಲ್ಲು ಮಣ್ಣಿನ ವ್ಯರ್ಥದೊಳಗೇ ಸಿಗುವ
ಈ ಅಮೂಲ್ಯ ಪರುಷ ಮಣಿಯ ಸ್ಪರ್ಶ-
ಕ್ಕೆ ಸಿಕ್ಕಿದ್ದೆಲ್ಲವೂ ಬಂಗಾರವಾಗುವುದು ಖರೆ

ಅಂತ ಒಳಗಿಂದ ಅನ್ನಿಸಿದ ಕೂಡಲೇ
ಅವರಿವರ ಒತ್ತಾಯಕ್ಕೆ ಮಣಿದು
ಗೋಡೆಗೆ ಹೊಸ ಬಣ್ಣ ಹೊಡೆಸಬೇಕೆಂದಿದ್ದ ನಿರ್ಧಾರ
ಕೈ ಬಿಟ್ಟೆ. ಕಣ್ಣಳತೆಯ ಕ್ಷಿತಿಜದಲ್ಲೇ ಈಜುವುದಿನ್ನು
ಗುರಿ-ಅನುದಿನದ ಅಂತರಗಂಗೆ ದಾಟುವುದು.


(ದೇಶ ಕಾಲ ವಿಶೇಷ ಸಂಚಿಕೆಯಲ್ಲಿ ಪ್ರಕಟಿತ ಕವಿತೆ)

ಶುಕ್ರವಾರ, ಏಪ್ರಿಲ್ 16, 2010

ದೇಹವೆಂಬ ದೇವಾಲಯ

‘ದೇಹೋ ದೇವಾಲಯಃ ಪ್ರೋಕ್ತೋ, ಜೀವೋ ಹಂಸಃ ಸನಾತನಃ
ತ್ಯಜೇದಜ್ಞಾನ ನಿರ್ಮಾಲ್ಯಂ ಸೋಹಂ ಭಾವೇನ ಪೂಜಯೇತ್.’

ನಮ್ಮ ಹಿರಿಯರು ಕಂಡುಕೊಂಡಿದ್ದ ಆತ್ಮಾರಾಧನೆಯನ್ನು ವಿವರಿಸುವ ಈ ಶ್ಲೋಕ ದೇಹವನ್ನೇ ದೇವಾಲಯವೆಂದು ಭಾವಿಸು ಎಂದು ಹೇಳುತ್ತದೆ. ದೇಹವೆಂಬ ದೇವಾಲಯದಲ್ಲಿ ನೆಲೆಗೊಂಡಿರುವ ಜೀವಾತ್ಮವೆಂಬ ಹಂಸವೇ ಭಗವಂತ ಸ್ವರೂಪಿ. ಅಜ್ಞಾನವೆಂಬ ನಿರ್ಮಾಲ್ಯವನ್ನು ತೆಗೆದುಹಾಕಿ ಅವನೇ ನಾನೆಂಬ ಭಾವದಿಂದ ಪೂಜಿಸಬೇಕು ಎನ್ನುವುದು ತಾತ್ಪರ್ಯ.

ಬಸವಣ್ಣ ಹೇಳಿದ ಉಳ್ಳವರು ಶಿವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯಾ ಎಂಬುದು ಕೂಡ ದೇಹವನ್ನೇ ದೇವಾಲಯವೆಂದು ಬಣ್ಣಿಸಿದ ಒಂದು ವಚನ. ಶಿರವನ್ನು ಹೊನ್ನ ಕಳಸವೆಂದು ಪರಿಭಾವಿಸಿ ಶರೀರವನ್ನು ದೈವ ಪ್ರಭೆಯ ಪ್ರತೀಕವೆಂದು ಭಾವಿಸುವುದು ಉದಾತ್ತ ದೃಷ್ಟಿಕೋನ. ಮೂರು ದಿನ ಬದುಕಿ ಮಣ್ಣ ಪಾಲಾಗುವ ಈ ದೇಹವನ್ನು ಭಗವಂತನ ಆವಾಸ ಸ್ಥಾನವೆಂಬ ಔನ್ನತ್ಯಕ್ಕೇರಿಸುವುದು ಜೀವನ್ಮುಖಿ ಪರಿಕಲ್ಪನೆ ಮತ್ತು ಅದ್ವೈತ ದರ್ಶನದ ಸಹಜ ತಾತ್ಪರ್ಯವೂ ಆಗಿದೆ.

ಹೀಗೆ ದೇಹಕ್ಕೊಂದು ದೇವಾಲಯದ ಕಲ್ಪನೆಯನ್ನಿರಿಸಿಕೊಂಡು, ಅದನ್ನೊಂದು ಆರಾಧನಾ ಮಂದಿರವನ್ನಾಗಿ ಪರಿಭಾವಿಸುವುದು ಮೋಹದ ಜೊತೆಗೇ ಮಮಕಾರವನ್ನೂ ಉಳಿಸುತ್ತದೆ ಎನ್ನುವವರೂ ಇದ್ದಾರೆ. ಆದರೆ ದೇಹವನ್ನೆ ದೇಗುಲವನ್ನಾಗಿ ಪರಿಭಾವಿಸುವವನು ತನ್ನ ಕರ್ತವ್ಯದ ಅರಿವನ್ನೂ ಕಾಣುತ್ತಾನೆ. ಕೇವಲ ದೈಹಿಕ ಸ್ತರದಲ್ಲೇ ಬದುಕಲಾರದ ಮನುಷ್ಯ ಮನಸ್ಸೆಂಬ ಸೇತುವೆಯನ್ನೂ ಈ ದೇಹದೊಂದಿಗೇ ಕಲ್ಪಿಸಿಕೊಂಡಿದ್ದಾನೆ. ಒಬ್ಬರ ಬದುಕಿನುದ್ದಕ್ಕೂ ಚೈತನ್ಯದ ಆಶ್ರಯ ಸ್ಥಾನವಾದ ದೇಹವು ಅದನ್ನು ನಿಯಂತ್ರಿಸುವ ಬುದ್ಧಿ ಮತ್ತು ಶರೀರದ ಕ್ರಿಯೆಗಳಿಗೆ ಭಾವಸ್ಪಂದನದವೊದಗಿಸುವ ಮನಸ್ಸಿಗೂ ಆಧಾರವಾಗಿರುವುದನ್ನು ಗಮನಿಸಬೇಕು. ಹಾಗಾಗಿಯೇ ದೇಹ-ಮನಸ್ಸು-ಬುದ್ಧಿ ಭಾವಗಳ ಸಮ್ಮಿಲನವನ್ನು ದೇಗುಲವೆನ್ನಲೇ ಬೇಕಾಗುತ್ತದೆ. ಈ ದೇವಾಲಯ ಒಂದು ಪೂಜಾಮಂದಿರವಾಗಬೇಕೆಂದರೆ ಅಲ್ಲಿಯೂ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಗಳ ಶೃಂಗವಾಗಲೇಬೇಕು. ಮನಸ್ಸು ಮತ್ತು ಶರೀರಗಳ ಹತೋಟಿ ಇದ್ದಲ್ಲಿ ಮಾತ್ರ ಲೌಕಿಕದ ಬದುಕೂ ಸಹನೀಯವಾಗಿರುತ್ತದೆ ಇಲ್ಲದೆ ಹೋದರೆ ಅದು ನರಕಸದೃಶವಾಗುತ್ತದೆ, ಪಾಪ ಯಾತ್ರೆಯ ಅಂಕಿತವಾಗುತ್ತದೆ.

ದೈಹಿಕ ಆರೋಗ್ಯ ಮತ್ತು ಮಾನಸಿಕ ಸೌಖ್ಯ ನಮ್ಮ ಅಸ್ತಿತ್ವವನ್ನು ತೋರ್ಪಡಿಸಲು ಅಗತ್ಯವಾಗಿ ಬೇಕಾದ ಮೂಲದ್ರವ್ಯಗಳಾಗಿವೆ. ಅಂದರೆ ದೈಹಿಕ ಆರೋಗ್ಯದ ಜೊತೆಜೊತೆಗೇ ಮಾನಸಿಕ ಸ್ವಾಸ್ಥ್ಯವೂ ದೇಹವನ್ನು ದೇಗುಲವನ್ನಾಗಿಸಿಕೊಳ್ಳಲು ಸಹಕರಿಯಾದ ಅಂಶವಾಗಿದೆ. ಯಾವಾಗ ಮನುಷ್ಯ ಸಮಂಜಸವಾಗಿ ಬುದ್ಧಿ ಭಾವಗಳನ್ನೂ, ದೈಹಿಕ ಕಾಮನೆಗಳನ್ನೂ ನಿಯಂತ್ರಿಸುವುದನ್ನು ಮರೆಯುತ್ತಾನೆಯೋ, ಆ ಕ್ಷಣದಿಂದಲೇ ದೇಹ ದೇಗುಲವು ಕುಸಿಯಲು ಪ್ರಾರಂಭವಾಗುತ್ತದೆ. ಆಹಾರ, ಪಾನೀಯ, ಜೀವನ ಶೈಲಿಗಳಲ್ಲಿ ಸ್ವೇಚ್ಛೆಯ ಕೈ ಮೇಲಾದರೆ ಮೈ ಮನಸ್ಸುಗಳ ಆರೋಗ್ಯ ಕೆಡುತ್ತದೆ. ಬದುಕು ಅಸಹನೀಯವಾಗುತ್ತದೆ.

ಶಿವಾಲಯವಾಗಬೇಕಿದ್ದ ದೇಹ ಶವಾಲಯ ಸೇರಿಸುವ ಲೌಕಿಕದ ಆಕರ್ಷಣೆಗಳನ್ನು ಮೀರಿ ನಿಲ್ಲುವ ತಾಕತ್ತು ಸುಲಭವಾಗಿ ಸಿಗುವಂಥಹುದೇನೂ ಅಲ್ಲ. ಅದೂ ಒಂದು ತಪಸ್ಸು. ದೇಹ ಮನಸ್ಸುಗಳ ಮೇಲಣ ಸುಲಭಕ್ಕೆ ದಕ್ಕದ ನಿರಂತರ ಗೆಲುವು ಅದು.

ಇಂದ್ರಿಯಗಳ ದಾಸನಾಗದೇ ರಾಗದ್ವೇಷಗಳನ್ನು ನಿಯಂತ್ರಿಸಿದರೆ ಮನಸ್ಸಿಗೆ ಕ್ಲೇಷವೊದಗದೇ ಅಂತಃಕರಣ ಶುದ್ಧಿ ಸಾಧ್ಯವಾಗುತ್ತದೆ ಎನ್ನುತ್ತದೆ ಭಗವದ್ಗೀತೆ. ಶರೀರ ಮತ್ತು ಬುದ್ಧಿ ಮನಸ್ಸುಗಳ ಮೇಲೆ ನಿಯಂತ್ರಣ ಸಾಧಿಸಿ, ದೇಹವನ್ನು ಕಾಯಕಕ್ಕೆ ಸಮರ್ಪಿಸಿಕೊಂಡರೆ ಮುಕ್ತಿ ಸಿಗುತ್ತದೆ ಎನ್ನುತ್ತದೆ ಕರ್ಮಯೋಗ. ಹೀಗೆ ತಮ್ಮ ದೇಹದ ಮೇಲೆ ಸ್ವನಿಯಂತ್ರಣ ಹೇರಿಕೊಂಡು, ಬುದ್ಧಿ ಭಾವಗಳನ್ನು ಮನಸ್ಸನ್ನೂ ಅಂಕಿತದಲಿಟ್ಟುಕೊಂಡವರ ದೇಹ ದೇಗುಲವೇ ಆಗುತ್ತದೆ. ಅವರಿಗೆ ಅಲ್ಲೆಲ್ಲೋ ಇರುವ ಶಿವಾಲಯಕ್ಕಿಂತಲೂ ತಮ್ಮೊಳಗಿರುವ ಅಂತರಾತ್ಮವೇ ದೇವರಾಗಿ ಕಾಣುತ್ತದೆ. ಅಂಥವರು ಹೊರಗಣ ಬಯಲಿಗೆ ಹೋಗದೆಯೂ ಒಡಲಲ್ಲೆ ಗುಡಿಯನ್ನು ಕಾಣುತ್ತಾರೆ. ಅಂಥವರು ಅಳಿಯುವ ಸ್ಥಾವರಕ್ಕಿಂತಲೂ ಮುಖ್ಯವಾದ ಜಂಗಮ ದೇಗುಲದ ಒಡೆಯರಾಗುತ್ತಾರೆ. ಅಂಥವರಿಗಷ್ಟೇ ದೇಹೋ ದೇವಾಲಯಃ ಪ್ರೋಕ್ತೋ ಎನ್ನುವ ಶ್ಲೋಕದ ಅಂತರಾರ್ಥ ತಿಳಿಯುತ್ತದೆ.

ಬುಧವಾರ, ಏಪ್ರಿಲ್ 14, 2010

ಸಂಚಲನ ಹುಟ್ಟಿಸಿದ ಶಿವಸಂಚಾರದ ನಾಟಕಗಳು

ಕಳೆದ ಹದಿಮೂರು ವರ್ಷಗಳಿಂದ, ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಕನಸು ನನಸು ಮಾಡಲು ಖ್ಯಾತ ರಂಗಕರ್ಮಿಗಳ ಸಹಕಾರದಿಂದ ಹೊಸ ಹೊಸ ನಾಟಕಗಳನ್ನು , ತಂಡಗಳನ್ನು ತಯಾರು ಮಾಡಿ ಆ ನಾಟಕಗಳನ್ನು ನಾಡಿನಾದ್ಯಂತ ಪ್ರದರ್ಶಿಸುತ್ತಿರುವ ‘ಶಿವಸಂಚಾರ’ ರಾಜ್ಯದ ಮುಖ್ಯ ರಂಗ ರೆಪರ್ಟರಿಗಳಲ್ಲೊಂದು. ನೀನಾಸಂ ಮತ್ತು ಶಿವಸಂಚಾರ ತಂಡಗಳು ಕನ್ನಡ ರಂಗಭೂಮಿಯ ಹೊಸ ಆವಿಷ್ಕಾರಗಳನ್ನು ಪ್ರಯೋಗಗಳನ್ನು ಗ್ರಾಮೀಣ ಜನತೆಗೂ ತಿರುಗಾಟದ ಹೆಸರಲ್ಲಿ ಸಿಗುವಂತೆ ಮಾಡಿರುವುದು ಶ್ಲಾಘನೀಯ ಕೆಲಸವೇ ಆಗಿದೆ. ಇಂಥದೇ ಪ್ರಯತ್ನಗಳನ್ನು ಈ ಹಿಂದೆ ಮಾಡಿದ್ದ ಕೊಡಗು ರಂಗ ಮತ್ತು ಧೃವ ರಂಗಗಳು ಹಾಗೇ ತುಮರಿಯ ಕಿನ್ನರ ತಂಡಗಳ ಪ್ರಯತ್ನಗಳನ್ನೂ ನೆನಪಿಸಿಕೊಳ್ಳಲೇಬೇಕು.

ಸಾಂಸ್ಕೃತಿಕ ಚಟುವಟಿಕೆಗಳಿಲ್ಲದ ಸಣ್ಣ ಊರುಗಳಲ್ಲಿ ಟೀವಿಯೊಂದೇ ಸುಲಭ ಮನರಂಜನಾ ಮಾಧ್ಯಮವಾಗಿರುವ ಕಾರಣ ಅಂಥ ಊರುಗಳಲ್ಲಿರುವ ಸಾಹಿತ್ಯ ಸಾಂಸ್ಕೃತಿಕಾಸಕ್ತರು ಇಂಥ ತಂಡಗಳ ಬರವನ್ನೇ ಕಾಯುತ್ತಿರುತ್ತಾರೆ. ಅರಸೀಕೆರೆಯ ಶ್ರೀ ಶಿವಕುಮಾರ ಬಳಗ ಮತ್ತು ತರಳಬಾಳು ಯುವ ವೇದಿಕೆಗಳ ಸಂಯುಕ್ತಾಶ್ರಯದಲ್ಲಿ ಹೊಯ್ಸಳೇಶ್ವರ ಕಾಲೇಜಿನಲ್ಲಿ ನಡೆದ ಮೂರುದಿನಗಳ ನಾಟಕೋತ್ಸವ ‘ಶಿವಸಂಚಾರ’ ೨೦೦೯ರ ನಾಟಕಗಳನ್ನು ಆಸಕ್ತರಿಗೆ ಪ್ರದರ್ಶಿಸಿತು.

ಪ್ರತಿವರ್ಷ ಒಂದು ನಿರ್ದಿಷ್ಟ ವಿಷಯದಲ್ಲಿ ನಾಟಕಗಳನ್ನು ಆಯ್ದು ಅವನ್ನು ಖ್ಯಾತನಾಮರಿಂದ ನಿರ್ಮಿಸುವ ‘ಶಿವಸಂಚಾರ’ದ ಈ ವರ್ಷದ ಆಶಯ ‘ಸ್ವಾತಂತ್ರ್ಯ- ಸಮಾನತೆಯತ್ತ’ ಪರಿಕಲ್ಪನೆಯಲ್ಲಿ ಉರ್ದು ನಾಟಕಕಾರ ಆಗಾ ಹಶ್ರ ಕಶ್ಮೀರಿಯವರ ಯಹೂದಿ ಕೀ ಲಡ್ಕೀ ಆಧರಿಸಿದ ‘ಯಹೂದಿ ಹುಡುಗಿ’ (ಸವಿತಾ, ಬೆಂಗಳೂರು) ಇಟಲಿಯ ನೋಬಲ್ ಪ್ರಶಸ್ತಿ ವಿಜೇತ ದಾರಿಯೋ ಫೋನ can’t pay, won’t pay ಆಧರಿಸಿದ ‘ಕೊಡಲ್ಲ ಕೊಡಕ್ಕಿರಲ್ಲ’(ಮಲ್ಲಿಕಾ ಪ್ರಸಾದ್) ಹಾಗೂ ನಲವಡಿ ಶ್ರೀಕಂಠ ಶಾಸ್ತ್ರಿಗಳ ಮೂಲ ರಂಗನಾಟಕ ಆಧರಿಸಿದ ‘ಹೇಮರೆಡ್ಡಿ ಮಲ್ಲಮ್ಮ’,(ಭಾಗೀರಥಿ ಬಾಯಿ ಕದಂ) ನಾಟಕಗಳನ್ನು ನಿರ್ಮಿಸಿದೆ. ಮಹಿಳಾ ಕೇಂದ್ರಿತ ವಸ್ತು ಹೊಂದಿರುವ ಈ ಮೂರೂ ನಾಟಕಗಳ ನಿರ್ದೇಶಕರು ಮಹಿಳೆಯರೇ ಆಗಿರುವುದು ವಿಶೇಷ.

ಧರ್ಮಾಂಧತೆ, ಹಿಂಸೆ, ಕ್ರೌರ್ಯ, ಅಹಂಕಾರ, ಅಟ್ಟಹಾಸಗಳೇ ಈ ಹೊತ್ತಿನ ವರ್ತಮಾನವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳಾಗಿರುವಾಗ ಅವೆಲ್ಲವನ್ನೂ ಮೀರಿಸುವ ಗಂಡು ಹೆಣ್ಣಿನ ನಡುವಣ ಪ್ರೀತಿ, ಮತ್ತು ಸಹಜ ಮಾನವೀಯ ಮೌಲ್ಯದ ಶ್ರೇಷ್ಠತೆಯನ್ನು ಎತ್ತಿ ತೋರಿಸುವ ಮನೋಜ್ಞ ನಾಟಕ ‘ಯಹೂದಿ ಹುಡುಗಿ’. ಪ್ರೀತಿಯ ನಡುವೆ ಅಡ್ಡ ನಿಲ್ಲುವ ಧರ್ಮದ ಕೃತಕ ಗೋಡೆ ಕ್ರಮೇಣ ನಾಶವಾಗುವ ರೀತಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ರಂಗದ ಮೇಲೆ ತರಲಾಗಿದೆ. ಉರ್ದುವಿನ ಮೂಲ ನಾಟಕವು ಶಾಯಿರಿಯ ಕವಿ ಇಟಗಿ ಈರಣ್ಣನವರ ಪ್ರಾಸ ಬದ್ಧ ಸಂಭಾಷಣೆ ಮತ್ತು ಅವರ ಕುಸುರಿ ಕೆಲಸದಿಂದ ಹೊಸ ರೂಪು ತಳೆದಿದೆ. ಸಂಭಾಷಣೆಯ ಬಿಗಿ ಬಂಧ, ಶಾಯಿರಿಗಳ ಸಮಯೋಚಿತ ಬಳಕೆ ನಾಟಕದ ವಿಶೇಷತೆ ಹೆಚ್ಚಿಸಿವೆ. ಕೊನೆವರೆಗೂ ಕುತೂಹಲವನ್ನು ಕಾಯ್ದುಕೊಳ್ಳುವ ಕತೆಯ ಅಂತ್ಯ ನೋಡುಗರನ್ನು ವಾಸ್ತವದತ್ತ ಆಲೋಚಿಸಲು ಪ್ರೇರೇಪಿಸುತ್ತದೆ.

ಮೇಲು ನೋಟಕ್ಕೆ ಒಬ್ಬ ಕರ್ಮಠ ಯಹೂದಿಯಂತೆ ತೋರುವ ಅಜರಾನ ಕಲ್ಲು ಹೃದಯವು, ಅನ್ಯ ಧರ್ಮದ ಹಾಗೂ ತನ್ನ ಹೆಂಡತಿ- ಮಗುವನ್ನು ಕೊಂದ ವೈರಿಯ ಮಗು ಬೆಂಕಿಯಲ್ಲಿ ಬೆಂದು ಹೋಗಲಿರುವುದನ್ನು ನೋಡುತ್ತಿದ್ದಂತೆ, ಕರಗಿ ಹೋಗಿ ಆ ಮಗುವನ್ನೇ ನಜರಾ ರಕ್ಷಿಸಿ, ಪೋಷಿಸಿ ತನ್ನ ಸಾಕು ಮಗಳಾಗಿ (ರಾಹೀಲ್) ಬೆಳೆಸಿದ ರೀತಿಯು, ಹುಸಿ ಧರ್ಮಕ್ಕಿಂತ ಮನುಷ್ಯ ಪ್ರೀತಿ ದೊಡ್ಡದು ಎಂಬುದನ್ನು ಸಾಬೀತುಪಡಿಸುತ್ತದೆ. ಅಜರಾ, ಮಾರ್ಕಸ್ ಆಗಿ ಅರುಣ್ ಜಿ ಚಿಕ್ಕಾನಂಗಲ ಮತ್ತು ದಿನೇಶ್ ಚಮ್ಮಾಳಿಗೆ ಅವರ ಅಭಿನಯ ಬಹುಕಾಲ ಮನಸ್ಸಲ್ಲುಳಿಯುತ್ತದೆ.

‘ಕೊಡಲ್ಲ ಕೊಡಕ್ಕಿರಲ್ಲ’ ಮೇಲು ನೋಟಕ್ಕೆ ಪ್ರಹಸನವಾಗಿ ಕಾಣುವ ಅಸಂಗತ ನಾಟಕದಂತೆ ಕಂಡರೂ ಈ ಹೊತ್ತಿನ ಅರಾಜಕ ಜಾಗತೀಕರಣದ ಗೊದಲಗಳನ್ನು ಬಿಂಬಿಸಿದ ಪ್ರಸ್ತುತ ಸಮಾಜದ ಪ್ರತಿಬಿಂಬವೆಂದೇ ಭಾವಿಸಬೇಕು.

ನಿರುದ್ಯೋಗ, ನಗರದ ಆಕರ್ಷಣೆ ಮತ್ತು ಹಸಿವಿನ ಮುಂದೆ ಆದರ್ಶಗಳು ಹೇಗೆ ಮೂಲೆಗುಂಪಾಗುತ್ತವೆ, ಜನಸಾಮಾನ್ಯರ ಬದುಕು ಯಾಕೆ ಮೂರಾಬಟ್ಟೆಯಾಗುತ್ತದೆಂಬುದನ್ನು ಸಮರ್ಥವಾಗಲ್ಲದಿದ್ದರೂ ಚೋದ್ಯವಾಗಿ ನಾಟಕ ದ್ವನಿಸುತ್ತದೆ. ಶ್ರಮಿಕ ವರ್ಗದ ಹೋರಾಟದ ಎಳೆಗಳನ್ನು ಬಿಚ್ಚಿಡುತ್ತಲೇ ವಾಸ್ತವವನ್ನು ವಿಡಂಬಿಸುತ್ತಲೇ ಹೊಟ್ಟೆ ಹುಣ್ಣಾಗುವಂತೆ ನಗಿಸುವ ಶಕ್ತಿಯನ್ನೂ ಇಟ್ಟುಕೊಂಡಿರುವುದು ಇದರ ವೈಶಿಷ್ಟ್ಯ. ಅಭಿಜಾತ ಕಲಾವಿದ ಚಾರ್ಲಿ ಚಾಪ್ಲಿನ್‌ನನ್ನು ನೆನಪಿಸುವಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರಧಾರಿ ಅರುಣ್ ಜಿ. ಚಿಕ್ಕಾನಂಗಲ ಸಶಕ್ತರಗಿದ್ದಾರೆ. ಹಾಗೂ ಧಾರಾಳವಾಗಿ ನಗೆ ಬುಗ್ಗೆ ಚಿಮ್ಮಿಸುತ್ತಾರೆ. ಪೊಲೀಸ್ ಬಟ್ಟೆ ಧರಿಸುವಾಗ, ಕದ್ದು ತಂದ ವಸ್ತುಗಳನ್ನು ಗರ್ಭಿಣಿ ಹೆಂಗಸಿನ ಹೊಟ್ಟೆಯಿಂದ ಹೊರ ತೆಗೆಯುವಾಗ ಪ್ರೇಕ್ಷಕರು ಬಿದ್ದುಬಿದ್ದು ನಗುತ್ತಾರೆ. ರಂಗಸಜ್ಜಿಕೆ ಗಮನ ಸೆಳೆಯುತ್ತದೆ. ನಿರ್ದೇಶಕರು ಜಾಗತೀಕರಣದ ಪ್ರಭಾವದಿಂದ ಈಗಾಗಲೇ ಕಾರ್ಖಾನೆಗಳು ಮುಚ್ಚಿಹೋಗಿರುವುದನ್ನು, ಸಾಮಾನ್ಯ ಜನತೆ ಆದರ್ಶ ಮೌಲ್ಯಗಳನ್ನು ಸಿನಿಮಾ ನಾಟಕಗಳಲ್ಲಷ್ಟೇ ನೋಡಬಯಸುವುದನ್ನೂ ಗಮನಿಸದ ಕಾರಣ ಅಸಂಗತವಾಗಿ ಮುಕ್ತಾಯವಾಗುತ್ತದೆ. ಈ ಬಗೆಯ ನಾಟಕಗಳನ್ನು ಗ್ರಾಮಾಂತರದ ಮಂದಿ ಅಷ್ಟಾಗಿ ಇಷ್ಟಪಡುವುದಿಲ್ಲ ಎಂಬ ಅಂಶವನ್ನೂ ತಂಡ ಅರಿಯಬೇಕಿದೆ. ಅಲ್ಲದೇ ಅಗತ್ಯವಿಲ್ಲದೆಯೂ ಅಶ್ಲೀಲ ಸಂಭಾಷಣೆ ಸೇರಿಸಿದ ಉದ್ದೇಶವೂ ಅರ್ಥವಾಗುವುದಿಲ್ಲ.

ಜನಪ್ರಿಯ ಕಂಪೆನಿ ನಾಟಕವಾದ ‘ಹೇಮರೆಡ್ಡಿ ಮಲ್ಲಮ್ಮ’ ಹಳ್ಳಿಯ ಅವಿಭಕ್ತ ಕುಟುಂಬದ ಕಷ್ಟ ಕೋಟಲೆಗಳ ನಡುವೆಯೇ, ಜೀವಸೆಲೆ ಉಕ್ಕಿಸಿ ಅಧ್ಯಾತ್ಮದ ಔನ್ನತ್ಯದಲ್ಲಿ ಪರ್ಯವಸಾನಗೊಳ್ಳುವ ಕೃತಿ. ಅಸ್ಸಾಂ ಮತ್ತು ಕನ್ನಡ ರಂಗಭೂಮಿಗಳ ನಡುವೆ ಸೇತುವೆಯಾಗಿರುವ ಭಾಗೀರಥಿ ಬಾಯಿ ಕದಂ ಅವರ ನಿರ್ದೇಶನದಲ್ಲಿ ಈ ಹಳೆಯ ರಂಗ ನಾಟಕ ಹೊಸುಹುಟ್ಟು ಪಡೆದಿದೆ. ಪ್ರಬುದ್ಧ ಅಭಿನಯ, ಸುಶ್ರಾವ್ಯ ಸಂಗೀತ, ಉತ್ತಮ ಬೆಳಕಿನ ಸಂಯೋಜನೆ ನಾಟಕದ ಯಶಸ್ಸಿಗೆ ಕಾರಣವಾಗಿವೆ. ಅರೆಬರೆ ತಿಳುವಳಿಕೆಯ ಹೇಮರೆಡ್ಡಿಯಾಗಿ ಅಮೋಘ ಬಿರಾದಾರ್ ಅಭಿನಯ ಮನಸೆಳೆಯುತ್ತದೆ.

ನಾಟಕದ ಕ್ಲೈಮ್ಯಾಕ್ಸ್‌ನಲ್ಲಿ ಆಧ್ಯಾತ್ಮದತ್ತ ವಾಲುವ ವೇಮಣ್ಣನ ಪಾತ್ರಕ್ಕೆ ಜೀವನ ನೀನಾಸಂ ಕಾಯಕಲ್ಪ ತುಂಬಿ ನಟಿಸುತ್ತಾರೆ. ಮಲ್ಲಮ್ಮ ಹಾಗೂ ಮಲ್ಲಯ್ಯನ ಪಾತ್ರಧಾರಿಗಳಾದ ವಿ. ಲಕ್ಷ್ಮಿ ಹಾಗೂ ದಿನೇಶ ಚಮ್ಮಾಳಿಗೆ ಬಹುಕಾಲ ಮನಸ್ಸಲ್ಲುಳಿಯುತ್ತಾರೆ. ಮನ ಸೆಳೆಯುವ ಸಂಗೀತಕ್ಕೆ ವಚನಗಳನ್ನು ಬಳಸಿಕೊಂಡಿರುವುದು ಸಮಯೋಚಿತವಗಿ ಬಳಸಿಕೊಂಡಿರುವ ನಿರ್ದೇಶಕರ ಪ್ರಯತ್ನ ಯಶಸ್ವಿಯೂ ಆಗಿದೆ. (ಗುರುವಾದೊಡೆ ಕಾಯಕದಿಂದಲೇ ಜೀವನ್ಮುಕ್ತಿ ಇತ್ಯಾದಿ). ಸಿದ್ಧವೀರಿಯ ಪಾತ್ರಧಾರಿ ಅದೇಕೆ ಸಂಭಾಷಣೆಯನ್ನು ಅವಸರಕ್ಕೆ ಬಿದ್ದಂತೆ ಒಪ್ಪಿಸುತ್ತಾರೋ (ಎಲ್ಲ ಪ್ರದರ್ಶನಗಳ ಅವರ ಎಲ್ಲ ಪಾತ್ರಗಳೂ ಹೀಗೆ ಅವಸರದಲ್ಲೇ ಇದ್ದವು) ಸಂಚಾಲಕರೇ ಉತ್ತರ ಹೇಳಬೇಕು.

ಟೀವಿಯ ಧಾರಾವಾಹಿಗಳಿಂದ ಮೂರು ದಿನ ಮುಕ್ತಿ ಕೊಟ್ಟು ನಮ್ಮೆಲ್ಲರನ್ನೂ ಕಾಡುತ್ತಿರುವ ವರ್ತಮಾನದ ಬೇಗುದಿಗೆ ಸಹಜ ಉತ್ತರವನ್ನೀಯುವ ‘ಶಿವಸಂಚಾರ’ ತಂಡ ಹೀಗೆ ಊರೂರುಗಳಲ್ಲಿ ಭರವಸೆಯ ಬೆಳಕು ಮೂಡಿಸಿದರೆ ಪಂಡಿತಾರಾಧ್ಯರ ಕನಸು ನನಸಾದೀತು, ಅನುಭವ ಮಂಟಪದ ಮೂಲ ಉದ್ದೇಶವೂ ಈಡೇರೀತು.

ಮಂಗಳವಾರ, ಮಾರ್ಚ್ 2, 2010

ಏನ್ ಕೌಂಟರ್

ಭಾನುವಾರ ಬೆಳ್ಳಂಬೆಳಿಗ್ಗೆಯೇ ಮೊಬೈಲ್ ಹೊಡಕೊಳ್ಳತೊಡಗಿದಾಗ ಹಿಂದಿನ ದಿನದ ಪಾರ್ಟಿಯ ಹ್ಯಾಂಗೋವರಿನಲ್ಲಿನ್ನೂ ಜೂಗರಿಸುತ್ತಿದ್ದ ನಾನು, ಅಂತೂ ಇಂತೂ ಸಾವರಿಸಿಕೊಂಡು ಎದ್ದು ಕೂರುವ ಹೊತ್ತಿಗೆ ಕರೆ ನಿಂತೇ ಹೋಯಿತು. ಪಾತಾಳಕ್ಕೆಲ್ಲೋ ಜಾರಿಹೋಗುತ್ತಿದ್ದೇನೆನಿಸಿ ಮತ್ತೆ ಮುದುರಿ ಮಲಗಿಕೊಂಡೆ. ಬೆಳಗಿನ ವಾಕಿಂಗ್‌ಗೆ ಹೋಗಿದ್ದ ಹೆಂಡತಿ ರತ್ನ ಬೀಗ ತೆಗೆದು ಒಳಬರುವುದಕ್ಕೂ ಮತ್ತೆ ಮೊಬೈಲ್ ರಿಂಗಾಗುವುದಕ್ಕೂ ಸರಿ ಹೋಯ್ತು. ಅವಳೇ ಮೊಬೈಲೆತ್ತಿಕೊಂಡು ‘ಇಲ್ಲ, ಅವರಿನ್ನೂ ಮಲಗಿದ್ದಾರೆ’.... . ‘ಅರ್ಜೆಂಟಾ? ಎದ್ದ ಮೇಲೆ ಇದೇ ನಂಬರಿಗೆ ಫೋನ್ ಮಾಡಲು ಹೇಳುತ್ತೇನೆ’. .. ‘ಸರಿ., ಎಬ್ಬಿಸಿ ಫೋನು ಅವರಿಗೇ ಕೊಡುತ್ತೇನೆ’ ಅಂದವಳೇ ನನ್ನ ಭುಜ ಅಲುಗಿಸಿ ‘ನೋಡಿ, ಯಾರೋ ಏನೋ ತುಂಬಾ ಅರ್ಜೆಂಟು ಅಂತಿದಾರೆ. ಏನಾದ್ರೂ ಹೇಳ್ಕೊಳ್ಳಿ..’ ಅಂದು ಮೊಬೈಲನ್ನು ನನ್ನ ಕಿವಿಗೆ ಹಿಡಿದಳು. ಸಾವರಿಸಿಕೊಂಡು ನಾನು ‘ಹ. . .ಲೋ..’ ಅಂದ ಕೂಡಲೇ ಆ ಕಡೆಯಿಂದ ‘ಸಾ..ರ್, ..ನಿನ್ನೆ ಸಂಜೆ ಕಾಮ್ರೇಡ್ ಸೂರಿಯವರನ್ನು ಪೋಲೀಸ್ ನಾಯಿಗಳು ಎತ್ತಿಹಾಕಿಕೊಂಡು ಹೋಗಿವೆ. ನಮಗೆಲ್ಲ ಏನು ಮಾಡಬೇಕೋ ತಿಳೀತಾ ಇಲ್ಲ.’ ಅನ್ನುವ ಅಪರಿಚಿತ ಧ್ವನಿ ಕೇಳಿತು. ‘ಯಾರು? ಯಾರು ಮಾತಾಡ್ತಾ ಇರೋದು?’ ನನ್ನ ಪ್ರಶ್ನೆ ಮುಗಿಯುವ ಮೊದಲೇ ಕರೆ ನಿಂತಿತು. ವಾಸ್ತವದ ಬಿಸಿ ಮುಟ್ಟಿದ್ದೇ ತಡ, ಹ್ಯಾಂಗೋವರು ತಕ್ಷಣ ಇಳಿದು ಹೋಗಿ ಧಿಗ್ಗನೆದ್ದು ಕೂತೆ. ಸೂರಿ ಯಾವತ್ತೋ ಅರೆಸ್ಟ್ ಆಗಬೇಕಾಗಿದ್ದವನು ಈಗ ಸಿಕ್ಕಿಬಿದ್ದಿದ್ದಾನೆ. ಆದರೂ ಅವನ ಬಿಡುಗಡೆಯ ಪ್ರಯತ್ನ ನನ್ನಂಥವನಿಂದ ಸಾಧ್ಯವಾ? ಬೇರೆ ಯಾರ ಸಹಾಯ ಈಗ ಅತ್ಯಗತ್ಯ ಅಂತ ಯೋಚಿಸುತ್ತಲೇ ಬೇಗ ಬ್ರಷ್ ಮಾಡಿಕೊಂಡು ಕಾಫಿ ಕುಡಿಯುತ್ತಲೇ ಗೆಳೆಯ ಪತ್ರಕರ್ತ ದಿವಾಕರನಿಗೆ ಫೋನ್ ಮಾಡಿದೆ. ‘ನೀವು ಕರೆ ಮಾಡಿರುವ ಚಂದಾದಾರರು ವ್ಯಾಪ್ತಿ ಪ್ರದೇಶದ ಹೊರಗೆ ಇದ್ದಾರೆ ಅಥವ ಈ ತಕ್ಷಣ ತಮ್ಮ ಕರೆಗೆ ಅವರು ಪ್ರತಿಕ್ರಯಿಸುತ್ತಿಲ್ಲ’ ಅನ್ನುವ ಉತ್ತರ ಬಂತು. ಸೀದಾ ಪ್ರೆಸ್ ಕ್ಲಬ್ಬಿಗೆ ಹೋಗಿ ಯಾರನ್ನಾದರೂ ಕೇಳೋದು ವಾಸಿ ಅಂತ ಅನ್ನಿಸಿ ನಿಂತ ನಿಲುವಿನಲ್ಲೇ ಸ್ಕೂಟರು ಹತ್ತಿದೆ.
ದಿವಾಕರ ಮನಸ್ಸು ಮಾಡಿದರೆ ಒಬ್ಬ ಸೂರಿಯನ್ನೇನು ವಾರಂಟ್ ಇಲ್ಲದೇ ಬರೀ ವಿಚಾರಣೆಗೆಂದು ಪೋಲೀಸರು ಎತ್ತಿಹಾಕಿಕೊಂಡು ಹೋದವರನ್ನೆಲ್ಲ ಬರೀ ಫೋನಿನ ಮೂಲಕವೇ ಬಿಡಿಸಬಲ್ಲ. ಬರೀ ಅಧಿಕಾರಿಗಳನ್ನದೇ ಸರ್ಕಾರ ನಡೆಸುವವರನ್ನೂ ಬಲ್ಲ ಅವನು ನನ್ನ ಹಾಗೇ ಸೂರಿಗೂ ಒಳ್ಳ್ಳೆಯ ಸ್ನೇಹಿತನೇ. ನಾವು ಮೂವರೂ ಒಂದೇ ಕಾಲೇಜಿನಲ್ಲಿ ಓದಿದವರು. ಸೂರಿ ನಮಗಿಂತ ಒಂದು ವರ್ಷ ದೊಡ್ಡವನು. ಅವನು ಲಾ ಮೊದಲವರ್ಷದಲ್ಲಿದ್ದಾಗ ನಾನೂ ದಿವಾಕರನೂ ಡಿಗ್ರಿಯ ಕಡೇ ವರ್ಷದಲ್ಲಿದ್ದೆವು. ನವ್ಯ ಕವಿತೆ, ಹುಡುಗಿಯರು, ಕಮ್ಯೂನಿಸಂ, ಸಿಗರೇಟು ಹೀಗೆ ನಮ್ಮೊಳಗಿನ ಸಮಾನಾಸಕ್ತಿ ನಮ್ಮನ್ನು ಒಂದುಗೂಡಿಸಿತ್ತು. ಸದಾ ಕುದಿಯುತ್ತಲೇ ಇರುತ್ತಿದ್ದ ಸೂರಿ ನಮಗೆಲ್ಲರಿಗೂ ಹೀರೋ. ಅವನು ಅರೆತೆರೆದ ಕಣ್ಣಲ್ಲಿ ಮಾತಾಡಲು ಶುರುಮಾಡಿದನೆಂದರೆ ಅದರಲ್ಲೂ ವರವರರಾವ್, ದಿಗಂಬರ ಕಾವ್ಯ, ಅಲ್ಲಿಂದ ಮಾರ್ಕ್ಸ್, ಅಸ್ತಿತ್ವವಾದ ಇತ್ಯಾದಿ ಎಲ್ಲಿಂದೆಲ್ಲಿಗೋ ಜಿಗಿದು ತನ್ನ ಪ್ರಚಂಡ ವಾಕ್ ಚಾತುರ್ಯ ತೋರಿಸುತ್ತಿದ್ದ. ಮೂಲತಃ ಬಲಪಂಥದೆಡೆಗೆ ಆಕರ್ಷಿತನಾಗಿದ್ದ ದಿವಾಕರ ಮಾರ್ಕ್ಸಿಸಂನ ಮಿತಿ ಅದರ ಸೋಲುಗಳನ್ನು ನೆನಪಿಸುತ್ತ ಸೂರಿಯ ವಾದವನ್ನು ಕೊಂಚ ಮಸಕುಮಾಡುತ್ತಿದ್ದ. ಸೌಮ್ಯವಾದದ ಮಧ್ಯಮಮಾರ್ಗವೇ ಸೇಫ್ ಅಂತ ಭಾವಿಸಿದ್ದ ನಾನು ಎಂಎ ಮುಗಿಸಿ ಕಾಲೇಜು ಮಾಸ್ತರನಾದರೆ ದಿವಾಕರ ಮತ್ತೇನೇನೋ ಆಗಹೋಗಿ ಕಡೆಗೆ ಬದುಕಿನ ನಿರ್ವಹಣೆಗೆ ಪತ್ರಕರ್ತನಾದ. ಸೂರಿಗೆ ಕಾನೂನು ಪದವಿಗಿಂತಲೂ ಎಡಪಂಥದ ಚಟುವಟಿಕೆಗಳೇ ಹೆಚ್ಚು ಮುಖ್ಯವೆನಿಸಿದ್ದರಿಂದ ಅದೆಲ್ಲಿಗೋ ಸಂಘಟನೆಗೆಂದು ಹೋಗಿದ್ದವನು ಈಗೊಂದೆರಡು ವರ್ಷಗಳಿಂದೀಚೆಗೆ ಅಪರೂಪಕ್ಕೆಂಬಂತೆ ಈ ಊರಿಗೆ ಬರುತ್ತಿರುತ್ತಾನೆ. ಅವನೇನು ಮಾಡುತ್ತಾನೋ, ಅವನ ಬದುಕು ಹೇಗೆ ನಡೆಯುತ್ತಿದೆಯೋ ನನಗಂತೂ ಗೊತ್ತಿಲ್ಲ. ಈಗಲೂ ಕೆಳವರ್ಗದ ಜನರ ಪರವಾಗಿ, ಕೊಳಚೆ ನಿವಾಸಿಗಳ ಪರವಾಗಿ, ಬೀಡಿಕಟ್ಟುವವರ, ಹಮಾಲಿಗಳ ಪರವಾಗಿ ಅವನು ಮೆರವಣಿಗೆ ನಡೆಸಿದ್ದನ್ನು, ಸಭೆ ನಡೆಸಿದ್ದನ್ನು ಸರ್ಕಾರದ ವಿರುದ್ಧ ಧರಣಿ ನಡೆಸಿದ್ದನ್ನು ಪತ್ರಿಕೆಗಳಲ್ಲಿ ಓದಿ ತಿಳಿಯುತ್ತಿರುತ್ತೇನೆ. ಈ ಊರಿಗೆ ಬಂದಾಗಲೆಲ್ಲ ನನ್ನನ್ನೂ ದಿವಾಕರನನ್ನೂ ಅವನು ಮಾತಾಡಿಸದೇ ಹೋದದ್ದೇ ಇಲ್ಲ. ಪಾರ್ಟಿಗೆಂದು ಹಲವು ಸಂಜೆಗಳನ್ನು ಒಟ್ಟಾಗಿ ನಾವು ಕಳೆದಿದ್ದೇವಾದರೂ ಪರಸ್ಪರರ ತೀರ ಖಾಸಗಿ ವಿಚಾರಗಳೆಂದೂ ನಮ್ಮ ನಡುವೆ ಅದಲುಬದಲಾಗಿಲ್ಲ. ಅಲ್ಲದೇ ಸಂಸಾರಸ್ತರ ಮನೆಗೆಂದೂ ಬರಲು ಇಷ್ಟಪಡದ ಸೂರಿಗೆ ನನ್ನ ಮನೆ ಎಲ್ಲಿದೆ ಅಂತ ಕೂಡ ಗೊತ್ತಿಲ್ಲ. ಇನ್ನು ದಿವಾಕರ ಸದಾ ಬ್ಯುಸಿ ಮನುಷ್ಯ. ಅವನ ಪತ್ರಿಕೆಗೆ ಅವನೇ ಜಿಲ್ಲಾ ವರದಿಗಾರನಾಗಿರುವುದರಿಂದ ಅವನಿಗೆ ಕೈ ತುಂಬ ಕೆಲಸ. ಅಪರೂಪಕ್ಕೆ ಸಿಕ್ಕಾಗಷ್ಟು ಶಿಷ್ಟಾಚಾರದ ಮಾತೆಷ್ಟೋ ಅಷ್ಟೇ. ಹಿಂದಿನ ಹಾಗೆ ನೆಲ ಗುದ್ದಿ ನೀರು ತೆಗೆಯುವ ಉತ್ಸಾಹ ನಮ್ಮಲ್ಲಿ ಯಾರಿಗೂ ಉಳಿದೇ ಇಲ್ಲ.
ಪ್ರೆಸ್ ಕ್ಲಬ್ಬಿನ ಕಾಂಪೋಂಡೊಳಗೆ ನನ್ನ ಸ್ಕೂಟರು ನಿಲ್ಲುವುದಕ್ಕೂ ಪೋಲೀಸು ಜೀಪೊಂದು ಆ ಆವರಣದಿಂದ ಹೊರಡುವುದಕ್ಕೂ ಸರಿ ಹೋಯ್ತು. ಪ್ರಾಯಶಃ ಪೋಲಿಸ್ ಇಲಾಖೆಯ ಪ್ರೆಸ್ ಮೀಟ್‌ಗೆ ಹೋಗಿದ್ದ ಪತ್ರಕರ್ತರನ್ನು ಬಿಡಲು ಬಂದ ವಾಹನವಿರಬೇಕು ಅದು. ‘ಒಂದು ನಿಮಿಷ ಅಲ್ಲೆ ಇರಯ್ಯ’ ಎನ್ನುವ ಹಾಗೆ ಕೈ ತೋರಿಸಿ ಮೂತ್ರ ಮಾಡಿಬರುತ್ತೇನೆನ್ನುವ ಸನ್ನೆ ಮಾಡಿದ ದಿವಾಕರ ಐದು ನಿಮಿಷದ ನಂತರ ಬಂದವನು ಕ್ಯಾಂಟೀನಿಗೆ ಕರೆದೊಯ್ದ. ಸಿಗರೇಟಿಗೆ ಬೆಂಕಿ ತಾಗಿಸಿ ಕಾಫಿ ಗುಟುಕರಿಸುತ್ತ ‘ನೀನು ಯಾಕೆ ಇಲ್ಲಿಯವರೆಗೆ ಬಂದೆ ಅಂತ ನನಗ್ಗೊತ್ತು’ ಅಂದ. ಸ್ನಾನ ತಿಂಡಿಗಳಿಲ್ಲದೇ ಬೆಳಗ್ಗಿನಿಂದ ಇದ್ದ ಒತ್ತಡ ಸ್ವಲ್ಪ ಕಮ್ಮಿಯಾದಂತೆನಿಸಿತು. ಆರಿ ಹೋಗಿದ್ದ ಕಾಫಿಯನ್ನು ಒಂದೇ ಗುಟುಕಿಗೆ ಹೀರಿ ‘just I want to know how he is…’ ಅಂತ ಹೇಳುವಷ್ಟರಲ್ಲೇ ಧ್ವನಿ ಭಾರವಾಗಿ ಮಾತು ತುಂಡಾಗಿ ನಿಂತು ಬಿಟ್ಟಿತು. ದಿವಾಕರ ಹೇಳಿದ ‘ಸರಿಯಾಗಿ ಕೇಳಿಸ್ಕೋ ಮಗನೇ... ನೀನೇನಾದರೂ ಅವನ ಬಗ್ಗೆ ವಿಚಾರಿಸ ಹೋದ್ರೆ.. ..ನೀನ್ಯಾಕೆ ಅವನ ಬಗ್ಗೆ ಆಸಕ್ತಿ ತೋರಿಸ್ತಿದೀಯ ಅನ್ನೋ ಆಸಕ್ತಿ ಪೋಲೀಸರಿಗೆ ಬರುತ್ತೆ. ..ನಿನಗೆ ಅವನ ಪರಿಚಯ ಇದೆ ಅಂದ್ರೆ.. . ಅವನ ಎಲ್ಲ ಕೆಲಸ ಕಾರ್ಯಗಳಲ್ಲಿ ನೀನೂ ಸಹಕರಿಸಿದ್ದೀ ಅಂತ ವ್ಯವಸ್ಥೆ ನಂಬುತ್ತೆ. ನೀನು ಅವನಿಗೆ ಹ್ಯಾಗೆ ಪರಿಚಯ ಅಂತ ತಿಳ್ಕೊಳ್ಳೋಕೆ ಅವರು ಯಾವ ಮಾರ್ಗನಾದರೂ... .. ರೋಲರಿನಿಂದ ಹಿಡಿದು ಏರೋಪ್ಲೇನ್‌ವರೆಗೂ ..’ ದಿವಾಕರ ತೀರ ಇಷ್ಟು ಅಸ್ತಿತ್ವವಾದೀ ಮನುಷ್ಯ ಅಂತ ನನಗೆ ಗೊತ್ತಿರಲಿಲ್ಲ. ಗೆಳೆಯರು ಅಂದ್ರೆ ಪಾರ್ಟಿಗೆ ಬಾಯಿ ಬಿಡೋ ದರಿದ್ರರು ಅಂತ ತಿಳ್ಕೊಂಡಿದಾನೆ. ಚೀಪ್ ಗೈ. ಸಿಟ್ಟು ಒತ್ತರಿಸಿ ಬಂತು. ಎಲ್ಲೋ ಕಷ್ಟದಲ್ಲಿರುವ ಸ್ನೇಹಿತನಿಗೆ ಸಹಾಯ ಮಾಡುವ ಬದಲು ಸಹಾಯ ಹಸ್ತ ಚಾಚಿರುವವರನ್ನೇ ಬಾವಿಗೆ ದೂಡುವ ದುಷ್ಟತನ. ಥೂ ಅಂತ ಉಗಿದು ಹೊರಟು ಬಿಡಬೇಕೆಂದು ನಿಂತುಕೊಂಡವನನ್ನು ಕೈಹಿಡಿದು ಕೂರಿಸಿ ಹೇಳಿದ ‘ನೋಡು ಮರಿ. ಇವರೆಲ್ಲ ವ್ಯವಸ್ಥೇನ ಹಾಳುಮಾಡೋ ಜನ. ಆಂಟಿ ಸೋಶಿಯಲ್ ಎಲಿಮೆಂಟ್ಸ್. ದಿನವಿಡೀ ದುಡಿಮೆ ಮಾಡಿ ಹೊತ್ತು ಹೊತ್ತಿಗೆ ಗಂಜಿ ಹೊಂಚಿಕೊಳ್ಳಬೇಕಾದ ಜನರಿಗೆ ಅವರ ಬಡತನ ಈ ಸಮಾಜ ಕಟ್ಟಿಕೊಟ್ಟದ್ದು ಅನ್ನುವ ಹಾಗೆ ಅವರ ಬ್ರೇನ್ ವಾಷ್ ಮಾಡಿ ದಂಗೆ ಏಳಿಸ್ತಾರೆ. ನಾವೆಲ್ಲ ಭರವಸೆಯಿಂದ ಆರಿಸಿರೋ ಸರ್ಕಾರದ ವಿರುದ್ಧ ಕೆಲಸ ಮಾಡುತ್ತಾನೆಂದರೆ ಅವನೂ, ಅವನ ಸ್ನೇಹಿತರೆಲ್ಲರೂ ದೇಶದ್ರೋಹಿಗಳು ಅಂತಾನೆ ಸರ್ಕಾರ ಭಾವಿಸುತ್ತೆ. ನೀನು ಸರ್ಕಾರೀ ಅನುದಾನ ಪಡೆಯುವ ಸಂಸ್ಥೆಯ ನೌಕರ. ಸಸ್ಪೆಂಡು ಮಾಡೋದು ಸುಲಭ.’ ಅವನ ಮಾತು ಹೀಗೇ ಮುಂದುವರೆಯಿತು. ‘ಹಾಗಾದರೆ ಅವನನ್ನು ಬಿಡಿಸುವ ದಾರಿ ಯಾವುದೂ ಇಲ್ಲವಾ?’ ನನ್ನ ಮಾತು ಸಾಕೆನ್ನುವಂತೆ ಕೈ ಮಾಡಿ ‘ಮಧ್ಯಾಹ್ನದವರೆಗೂ ಇಲ್ಲೆ ಕೂತಿರು. ಈಗಷ್ಟೇ ಪ್ರೆಸ್ ಮೀಟಿನಲ್ಲಿ ಪೋಲೀಸ್ ಇಲಾಖೆ ಹೇಳಿದ್ದನ್ನು ಹೈಲೈಟ್ ಮಾಡಿ ಒಂದು ಸ್ಕೂಪ್ ವರದಿ ಕಳಿಸಿಬಿಡುತ್ತೇನೆ. ಭಾನುವಾರ. ನಿಂಗೂ ರಜೆ. ಚರ್ಚೆ ಮಾಡ ಮಾಡುತ್ತ ತಣ್ಣಗಿನ ಬಿಯರ್ ಹೀರುವ’ ಅಂತಂದು ಒಳಗೆದ್ದುಹೋದ. ಸ್ನೇಹಿತನ ಜೀವಕ್ಕಿಂತ ಕರ್ತವ್ಯವೇ ಮಿಗಿಲೆಂದು ಭಾವಿಸಿದ ಸ್ನೇಹಿತನನ್ನು ಅಲ್ಲೇ ಬೀಳ್ಕೊಟ್ಟು ಮತ್ತೆ ಸ್ಕೂಟರೇರಿ ಪೋಲೀಸ್ ಸ್ಟೇಷನ್ನಿನ ಕಡೆಗೆ ಹೊರಟೆ.
ಅರೆ, ಏನಾಶ್ಚರ್ಯ? ಸ್ಟೇಷನ್ನಿನ ಮುಂದೆ ನೂರಾರು ಜನ ಜಮಾಯಿಸಿ ಕಾಮ್ರೇಡ್ ಸೂರಿಗೆ ಜೈ ಅಂತಿದಾರೆ. ಅಲ್ಲಿದ್ದ ಜನರೆಲ್ಲ ಸ್ವತಃ ತಮ್ಮ ವಿಷಯವನ್ನು ತಾವೇ ಇತ್ಯರ್ಥ ಪಡಿಸಿಕೊಳ್ಳಲು ಬಂದವರ ಹಾಗೆ ಕಾಣುತ್ತಿದ್ದಾರೆ. ಎಲ್ಲರ ಮುಖದಲ್ಲೂ ದುಗುಡ ಹೆಪ್ಪುಗಟ್ಟಿದೆ. ಯಾವ ಕ್ಷಣ ಏನಾಗುತ್ತೋ ಅನ್ನುವ ಭಯ ಕೂಡ ಅವರ ಮುಖದಲ್ಲಿ ಎದ್ದು ಕಾಣುತ್ತಿದೆ. ಯಾವ ಪುಡಿ ರಾಜಕಾರಣಿಯನ್ನೂ ಮುಂದಿಟ್ಟುಕೊಳ್ಳದೆಯೇ ಅವರೆಲ್ಲ ತಮ್ಮ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ. ಅವರ ನೂಕುನುಗ್ಗಲು ತಡೆಯಲಾರದೇ ಸ್ಟೇಷನ್ನಿನ ಹೊರಗೆ ಕಾವಲಿರುವ ಪೋಲೀಸು ಸಿಬ್ಬಂದಿ ಗಾಳಿಗೆ ತಮ್ಮ ಲಾಠಿ ಬೀಸಿ, ಬಾಯಿಗೆ ಬಂದ ಬೈಯ್ಗಳೆಲ್ಲವನ್ನೂ ಪ್ರಯೋಗಿಸುತ್ತಿದೆ. ಕಾಲೇಜಿನಲ್ಲಿ ನನ್ನ ಪಾಠವನ್ನು ಅತ್ಯಂತ ಶ್ರದ್ಧೆಯಿಂದ ಕೇಳುವ ಸ್ಲಮ್ಮಿನ ಬಹುತೇಕ ಹುಡುಗ ಹುಡುಗಿಯರೂ ಗುಂಪಿನಲ್ಲಿದ್ದಾರೆ. ನನ್ನನ್ನು ಅಲ್ಲಿ ಕಂಡೊಡನೆಯೇ ಯಾರೊಬ್ಬರನ್ನೂ ಒಳಬಿಟ್ಟುಕೊಳ್ಳದೆಯೇ ದರ್ಪತೋರಿಸುತ್ತ ಕೂತಿದ್ದ ಇನ್ಸ್‌ಪೆಕ್ಟರ್ ಜೊತೆ ನಾನು ಮಾತಾಡುವಂತೆ ಕೈ ಜೋಡಿಸುತ್ತಾರೆ. ಅವರೆಲ್ಲರ ಆರಾಧ್ಯ ದೈವದಂತಿರುವ ಸೂರಿ ಅವರಿಗೆ ಯಾವ ಬಗೆಯ ಮೋಡಿ ಹಾಕಿರಬಹುದೆಂದು ಅಂದಾಜಿಸುತ್ತಲೇ ಹೊಡೆದುಕೊಳ್ಳುತ್ತಿರುವ ಎದೆಯ ಮೇಲೆ ಕೈ ಇಟ್ಟುಕೊಂಡ ನಾನು ಇನ್‌ಸ್ಪೆಕ್ಟರ ಛೇಂಬರಿನೊಳಕ್ಕೆ ನುಗ್ಗಿದೆ.
‘... ..ಪಾಠ ಮಾಡೋದು ಬಿಟ್ಟು ಕಾಲೇಜು ಮಕ್ಕಳಿಗೆ ಕಮ್ಯೂನಿಸಂ ಬೋಧಿಸೋ ಮೇಸ್ಟರೇ. . .ಬರಬೇಕು.. ಬರಬೇಕು. ಬರೀ ಅದರ್ಶ ಬದುಕಿಗೆ ಸಾಕಾಗಲ್ಲ. ಸ್ವಲ್ಪ ವಾಸ್ತವ ಕೂಡ ನಿಮಗೂ ಅರ್ಥವಾಗಬೇಕು.’ ನನ್ನನ್ನು ನೋಡಿದೊಡನೆಯೇ ಹಿಂದಿನ ಪರಿಚಯ ಇರದಿದ್ದರೂ ವ್ಯಂಗ್ಯದ ಮಾತಲ್ಲಿ ಸ್ವಾಗತಿಸಿದ ಇನ್ಸ್‌ಪೆಕ್ಟರಿಗೆ ನಮಸ್ಕಾರ ಹೇಳಿದೆ. ನಾನು ಬಂದ ವಿಚಾರ ಯಾವುದೆಂದು ಕೇಳದೇ ಕುರ್ಚಿ ತೋರಿಸುವ ಸೌಜನ್ಯವನ್ನೂ ಮಾಡದೇ ಆತ ನೇರವಾಗಿ ಹೇಳಿದ-“ನೋಡಿ, ಇಲ್ಲಿ ಸೇರಿದಾರಲ್ಲ, ಅವರಲ್ಲಿ ಯಾರಿಗೂ ಕಾನೂನಿನ ಭಯ ಇಲ್ಲ. ಸಮಾಜ, ಮಾನ , ಮರ್ಯಾದೆ ಯಾವುದಕ್ಕೂ ಅವರು ಕ್ಯಾರೇ ಅನ್ನಲ್ಲ. ಈ ಇವರ ಚಿತಾವಣೇಲಿ ಅಪ್ಪರ್ ಕ್ಲಾಸ್ ಜನ ಮರ್ಯಾದೆಯಾಗಿ ಬದುಕಲಾಗುತ್ತಿಲ್ಲ. ಇಂಥವರ ಲೀಡರ್ ಇನ್ನು ಹ್ಯಾಗೆ ಇರಕ್ಕೆ ಸಾಧ್ಯ? ಅದೆಷ್ಟು ಹುಡುಗಿಯರನ್ನು ಅವನು ಪಟಾಯಿಸಿದ್ದಾನೆ ಅನ್ನೋದು ನಮ್ಗೆ ಮಾತ್ರ ಗೊತ್ತು. ಯಾರ ಹತ್ರ ಹ್ಯಾಗೆ ಹ್ಯಾಗೆ ದುಡ್ಡು ಕೀಳಬೇಕೋ ಹಾಗೆಲ್ಲ ಅವನು ಕಿತ್ತಿದ್ದಾನೆ. ಬ್ಲಾಕ್ ಮೇಲ್, ಜೀವ ಭಯ, ಅವನ ಅಸ್ತ್ರಗಳು. ಅವನ ಪರವಾಗಿ ನೀವು ಇಲ್ಲಿಗೆ ಬಂದ್ರಲ್ಲ ಅಂತ ಬೇಜಾರಾಗುತ್ತೆ. ನಿಮಗೂ ಹೇಂಡತಿ ಮಕ್ಕಳು ಇದ್ದಾರೆ. ನಿಮ್ಮ ಮನೆ, ನಿಮ್ಮ ಕೆಲಸ ಎಲ್ಲ ನಮಗೆ ಗೊತ್ತು. ಜೋಪಾನ. ಕ್ರಾಂತಿಯ ಭ್ರಾಂತಿ ಕಿತ್ತುಹಾಕಿ ಮನೆ ಸೇರ್ಕಳಿ. ಖುದ್ದು ಗೃಹಮಂತ್ರಿಗಳ ಆದೇಶದ ಮೇಲೆ ನಾವವನನ್ನು ಅರೆಸ್ಟ್ ಮಾಡಿರೋದು. ನಿಮ್ಮಂಥವರಾರೂ ಅವನಿಗೆ ಕಾನೂನಿನ ಸಹಾಯ ಮಾಡಬಾರದು ಅಂತಾನೇ ನಾವು ಅವನನ್ನು ಶನಿವಾರ ಸಂಜೆ ಒಳಗೆ ಹಾಕಿ ಎತ್ತುತ್ತಿರೋದು. ನಾಳೆ ಕೂಡ ಸರ್ಕಾರಿ ರಜೆ. ಯಾವ ಕೋರ‍್ಟೂ ಏನೂ ಮಾಡಕ್ಕಾಗಲ್ಲ.” ಸುಮ್ಮನೆ ನಿಂತು ಅವನ ಮಾತು ಕೇಳುತ್ತ ಉಗುಳು ನುಂಗಲೂ ಕಷ್ಟ ಪಡುತ್ತಿದ್ದ ನನ್ನತ್ತ ಒಂದು ಹೆಜ್ಜೆ ಮುಂದಿಟ್ಟು ಬಂದು ಹೆಗಲ ಮೇಲೆ ಕೈ ಇಟ್ಟು ಹೇಳಿದ-“ಇಂಥವರಿಗೆ ಕೊಂಚವೂ ಜೀವನ ಪ್ರೀತಿ ಇರಲ್ಲ ಸಾರ್. ಬರೀ ಸ್ಯಾಡಿಸ್ಟ್. ಅವರಿಗೆ ಸಿಕ್ಕದಿರುವುದು ಬೇರೆ ಯಾರಿಗೂ ದಕ್ಕದೇ ಇರಲಿ ಅಂತ ಈರೀತಿ ಜನರನ್ನ ಎತ್ತಿ ಕಟ್ಟುತ್ತಾರೆ. ನೀವು ಪಾಠ ಚೆನ್ನಾಗಿ ಮಾಡ್ತೀರ ಅಂತ ನನ್ನ ಮಗಳು ಹೇಳಿದ್ದು ಕೇಳಿ ನಾನಿಷ್ಟು ಕೂಲಾಗಿ ನಿಮಗೆ ಹೇಳ್ತಿದೀನಿ. ದಯವಿಟ್ಟು ಈ ವಿಚಾರ ಬಿಟ್ಟು ಮನೆಗೆ ಹೋಗಿ ಹೆಂಡತಿ ಮಕ್ಕಳ ಜೊತೆ ಸಿನಿಮಾ ನೋಡಿ.. .. ಇಲ್ಲಾಂದ್ರೆ ಜೀವನ ಪೂರ್ತಿ ಅವರು ನಿಮ್ಮನ್ನು ನೋಡ್ಕೋ ಬೇಕಾಗುತ್ತೆ.. ..ನಿಮಗೆ ನಮ್ಮ ಇಲಾಖೆ ಕೊಡೋ ಮರ್ಯಾದೆ ಗೊತ್ತಿಲ್ಲ ಅಂತ ಕಾಣುತ್ತೆ” ಅಂದವನೇ ೩೩೦ ಅಂತ ಕೂಗಿದ. ಒಳಕ್ಕೆ ಬಂದು ಸೆಲ್ಯೂಟ್ ಹೊಡೆದ ಪಿಸಿಯೊಬ್ಬನಿಗೆ ನನ್ನನ್ನು ಜೀಪಲ್ಲಿ ಮನೆಗೆ ಬಿಟ್ಟು ಬರಲು ಹೇಳಿ ಅರಚುತ್ತಿದ್ದ ವಾಕಿಟಾಕಿಯಲ್ಲಿ ಏನೋ ಗಹನವಾಗಿ ಮಾತನಾಡತೊಡಗಿದ.
‘ನನ್ನ ಸ್ಕೂಟರು ಇಲ್ಲೇ ಇದೇರಿ’ ಅಂತ ನಾನು ಅಲವತ್ತುಕೊಳ್ಳುತ್ತಿದ್ದರೂ ಬಿಡದೆ ಸ್ಟೇಷನ್ನಿನ ಹಿಂಬಾಗಿಲ ಮೂಲಕ ನನ್ನನ್ನು ದಬ್ಬಿಕೊಂಡೇ ಗೌರವವಾಗಿ ಜೀಪಿಗೆ ತಳ್ಳಿದ ೩೩೦ ನಂಬರಿನ ಪಿಸಿ ಕೂಡ ದಾರಿಯುದ್ದಕ್ಕೂ ನಕ್ಸಲೈಟುಗಳನ್ನು, ಕಮ್ಯುನಿಸ್ಟರನ್ನು ದೇಶದ್ರೋಹಿಗಳು ಅಂತ ಬಯ್ಯುತ್ತಲೇ ಇದ್ದ. ನನ್ನ ಮನೆಯ ದಾರಿ ಬಿಟ್ಟು ಬೇರೆ ದಾರಿ ಹಿಡಿದ ಜೀಪು ಸೀದಾ ನಮ್ಮ ಕಾಲೇಜಿನ ಆಡಳಿತ ಮಂಡಲಿಯ ಅಧ್ಯಕ್ಷರೂ, ನಮ್ಮ ಕ್ಷೇತ್ರದ ಶಾಸಕರೂ,ವಿರೋಧ ಪಕ್ಷದಲ್ಲಿದ್ದರೂ ಗೃಹ ಮಂತ್ರಿಗಳ ಆಪ್ತರೂ ಆದವರ ಮನೆಯ ಮುಂದೆ ನಿಂತಿತು. ಬೆಳಿಗ್ಗೆಯಿಂದ ಹೊಟ್ಟೆಗೆ ಏನೂ ಬೀಳದಿರುವುದೂ, ಜೊತೆಗೆ ಮೇಲಿಂದ ಮೇಲೆ ಕೇಳಿದ ಉಪದೇಶಗಳ ಪ್ರಭಾವವೋ ಏನೋ ತಲೆ ಗಿರ್ ಎನ್ನತೊಡಗಿತು. ೩೩೦ ನಂಬರಿನ ಪೋಲೀಸ್ ಕಾನ್‌ಸ್ಟೇಬಲ್ ನನ್ನನ್ನು ಎಳೆದುಕೊಂಡೇ ಮನೆಯೊಳಗೆ ಕಾಲಿಟ್ಟ. ವೆರಾಂಡದ ಸ್ಟೂಲಿನ ಮೇಲೆ ನನ್ನನ್ನು ಕುಕ್ಕರಿಸಿ ತಾನು ತೀರ ಪರಿಚಿತ ಎನ್ನುವಂತೆ ಹಲ್ಲು ಕಿಸಿಯುತ್ತ ನಿಂತ. ಅರೆಬರೆ ಎಚ್ಚರದಲ್ಲಿ ಅಲ್ಲಿದ್ದವರನ್ನು ಗಮನಿಸಿದೆ. ಪತ್ರಕರ್ತ,ಗೆಳೆಯ ದಿವಾಕರ ಶಾಸಕರ ಕಿವಿಯಲ್ಲಿ ಏನನ್ನೋ ಹೇಳುತ್ತಿದ್ದ. ನಮ್ಮ ಪ್ರಿನ್ಸಿಪಾಲರು ವಿಧೇಯರಾಗಿ ನಿಂತಿದ್ದರು. ನಾನು ಫೋಟೊದಲ್ಲಿ ಮಾತ್ರ ನೋಡಿದ್ದ ನಮ್ಮ ಡಿ.ವೈ.ಎಸ್ಪಿ ಶಾಸಕರ ಪಕ್ಕದಲ್ಲೇ ವಿರಾಜಮಾನರಾಗಿದ್ದರು. ಇನ್ನೂ ಯಾರೋ ನಾಲ್ಕೈದು ಜನ ಖಾದೀಧಾರಿಗಳು ನನ್ನತ್ತಲೇ ನೋಡುತ್ತ ಹುಸಿನಗೆ ನಕ್ಕಂತಾಯ್ತು. ನಾನು ಕುಸಿದು ಬಿದ್ದೆ.
ಎಚ್ಚರವಾದಾಗ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದ್ದೆ. ಹೆಂಡತಿ ರತ್ನ ದಿಕ್ಕುತೋಚದವಳಂತೆ ಕಾಲ ಬಳಿ ತೂಕಡಿಸುತ್ತಿದ್ದಳು. ಸಾವರಿಸಿ ಕೊಂಡು ಇಲ್ಲಿಗೆ ಯಾವಾಗ ನನ್ನನ್ನು ಅಡ್ಮಿಟ್ ಮಾಡಿರಬಹುದೆಂದು ಆಲೋಚಿಸುತ್ತ ಸುತ್ತ ಮುತ್ತ ನೋಡುತ್ತಿರುವಾಗ, ಆ ಸ್ಪೆಷಲ್ ವಾರ್ಡಿನ ಬಾಗಿಲು ತೆರೆದುಕೊಂಡು ನಮ್ಮ ಕಾಲೇಜಿನ ಆಡಳಿತ ಮಂಡಲಿಯ ಅಧ್ಯಕ್ಷರ ಜೊತೆ ದಿವಾಕರ ಒಳಬಂದ. ‘ಏನೂ ತೊಂದರೆ ಇಲ್ಲವಂತಯ್ಯ. ಸುಮ್ಮನೆ ಗಾಬರಿ ಮಾಡಿಕೊಂಡು ನಮಗೂ ಗಾಬರಿ ಹುಟ್ಟಿಸಿದೆ. ನೋಡು ಸ್ವತಃ ಶಾಸಕರೇ ನಿನ್ನ ಆರೋಗ್ಯದ ಬಗ್ಗೆ ಕಾಳಜಿ ಇಟ್ಟುಕೊಂಡು ಇಲ್ಲಿಯವರೆಗೂ ಬಂದಿದ್ದಾರೆ’ ಅಂದ. ಅವರ ಕೈಯಲ್ಲಿದ್ದ ಬುಟ್ಟಿಯ ತುಂಬ ವಿವಿಧ ರೀತಿಯ ಹಣ್ಣುಗಳು ತುಂಬಿದ್ದವು. ಆಯಾಸವಾದವನಂತೆ ಕಣ್ಣುಮುಚ್ಚಿದೆ. ‘ರೆಸ್ಟ್ ತಗೋಳಿ. ನಿಮಗೆ ಸಂಬಂಧಿಸಿಲ್ಲದ ವಿಷಯದಲ್ಲಿ ತಲೆ ಹಾಕುವುದು ತಪ್ಪು ತಾನೆ? ಪರೀಕ್ಷೆಗಳು ಬೇರೆ ಹತ್ತಿರಕ್ಕೆ ಬರುತ್ತಿವೆ. ನಮ್ಮ ಕಾಲೇಜಿನ ರಿಸಲ್ಟ್ ನಿಮ್ಮಂಥವರ ಕೈಯಲ್ಲೇ ಇರುವುದು’ ಅಂತ ಅವರು ಹೇಳುತ್ತಲೇ ನಿರ್ಗಮಿಸಿದರು. ಅವರನ್ನು ಕಳಿಸಿಕೊಡಲು ರತ್ನ ಕೂಡ ಅವರ ಜೊತೆಯೇ ಹೊರಗೆ ಹೋದಳು. ದಿವಾಕರ (ಬೇಕೆಂತಲೇ?) ನನ್ನ ಹಾಸಿಗೆಯ ಮೇಲೆ ಬಿಟ್ಟುಹೋದ ಅವತ್ತಿನ ಪೇಪರನ್ನು ಎತ್ತಿಕೊಂಡು ನೋಡಿದೆ. “ಸೂರ್ಯನಾರಾಯಣ ಎಂಬ ಶಂಕಿತ ನಕ್ಸಲ್ ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೋಲೀಸರು ಅನಿವಾರ್ಯವಾಗಿ ಸಿಡಿಸಿದ ಗುಂಡಿಗೆ ಬಲಿಯಾದ. ಅವನ ಬಿಡುಗಡೆಗೆ ಅಗ್ರಹಿಸಿ ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಿದ್ದ ಕೆಲವರು ಹಿಂಸಾಚಾರಕ್ಕಿಳಿದಾಗ ಕೆಲವು ಪೋಲೀಸರು ಗಾಯಗೊಂಡರಲ್ಲದೆ, ಹಿಂಸೆಯನ್ನು ನಿಯಂತ್ರಿಸಲು ಪೋಲೀಸರು ನಡೆಸಿದ ಗೋಲೀಬಾರಿನಲ್ಲಿ ಸತ್ತವರ ಸಂಖ್ಯೆ ಮೂರಕ್ಕೇರಿದೆ.” ನಾಲ್ಕು ಸಾಲಿನ ಸುದ್ದಿಯ ಜೊತೆಗೇ ನಮ್ಮ ಶಾಸಕರ ಶೋಕ ಸಂದೇಶ ಜೊತೆಗೆ ಯುವಕರನ್ನು ಹಾದಿ ತಪ್ಪಿಸುತ್ತಿರುವ ಸಮಾಜ ವಿರೋಧೀ ವ್ಯಕ್ತಿಗಳ ಬಗ್ಗೆ ಎಚ್ಚರದಿಂದಿರಬೇಕೆಂಬ ಅವರ ಕಳಕಳಿಯ ಮನವಿಯೂ ಪ್ರಕಟವಾಗಿತ್ತು. ಹೊರಗೆ ಗಲಾಟೆ ಕೇಳಿದಂತಾಗಿ ಮೆಲ್ಲನೆ ನಡೆದು ಕಿಟಕಿಯಿಂದ ಬಗ್ಗಿ ನೋಡಿದೆ. ಎದೆ ಎದೆ ಬಡಿದುಕೊಂಡು ಅಳುತ್ತಿದ್ದವರಿಗೆ ಶಾಸಕರು ಸಮಾಧಾನ ಹೇಳುತ್ತಲೇ ಕಾರು ಹತ್ತಿದರು. ಅವರ ಕಾರನ್ನು ಎರಡು ಪೋಲೀಸ್ ಜೀಪುಗಳು ಹಿಂಬಾಲಿಸಿದವು. ದಿವಾಕರ ಶಾಸಕರ ಕಾರಿನಲ್ಲಿದ್ದನೋ ಪೋಲೀಸರ ಜೀಪಿನಲ್ಲಿದ್ದನೋ ದೂರದಿಂದ ಕಂಡದ್ದು ಅಸ್ಪಷ್ಟವಾಗಿಯೇ ಉಳಿಯಿತು.
(ಕನ್ನಡಪ್ರಭ ಸಂಕ್ರಾತಿ ಕಥಾಸ್ಪರ್ಧೆಯಲ್ಲಿ ಬಹುಮಾನಿತ ಕಥೆ)

ಶುಕ್ರವಾರ, ಫೆಬ್ರವರಿ 5, 2010

ಅಭಾವದಿಂದ ಅನುವಾದಗಳವರೆಗೆ....

ಒಂದು ಭಾಷೆಯಲ್ಲಿ, ಒಂದು ನಿರ್ದಿಷ್ಟ ಅವಧಿಯಲ್ಲಿ ಪ್ರಕಟವಾಗುವ ಕೃತಿಗಳ ಅವಲೋಕನವು ಆ ಭಾಷೆಯ ಬರಹಗಾರರು ಆ ಅವಧಿಯಲ್ಲಿ ಕಂಡುಂಡ ಆ ಭಾಷೆಯ ಸಾಮಾಜಿಕ ಸಾಂಸ್ಕೃತಿಕ ಸಂಗತಿಗಳ ಅನಾವರಣವೂ ಆಗಿರುವುದರಿಂದ ಸಾಹಿತ್ಯ ಚರಿತ್ರೆಯ ದಾಖಲೆಯೆಂದೇ ಭಾವಿಸಬೇಕಾಗುತ್ತದೆ. ಆದರೂ ಕಾವೇರಿಯಿಂದ ಕೃಷ್ಣೆಯವರೆಗೂ ವ್ಯಾಪಿಸಿರುವ ಕನ್ನಡದ ಎಲ್ಲ ಕೃತಿಗಳೂ ಒಂದು ಅವಲೋಕನಕ್ಕೆ ಸಿಕ್ಕುವ ಸಾಧ್ಯತೆಗಳೂ ಕಡಿಮೆಯೇ. ಅದರಲ್ಲೂ ಪ್ರತಿವರ್ಷ ಪ್ರಕಟವಾಗುವ ಪುಸ್ತಕಗಳಲ್ಲಿ ಕಾವ್ಯಸಂಕಲನಗಳ ಸಂಖ್ಯೆಯೇ ಅಧಿಕವಿರುವುದು ಎಲ್ಲರೂ ಬಲ್ಲ ಸಂಗತಿ. ಈಗಾಗಲೇ ತಮ್ಮ ಕೃತಿಗಳಿಂದ ಪ್ರಸಿದ್ಧರಾಗಿರುವ ಲೇಖಕರಿಂದ ಹಿಡಿದು ಇನ್ನೂ ಈಗಷ್ಟೇ ಬರೆಯುವ ತುಡಿತಕ್ಕೆ ಸಿಕ್ಕ ಎಳೆಯರವರೆಗೂ ಕವನ ಸಂಕಲನಗಳ ಹರಹು ಇರುವುದರಿಂದ ಈ ಸಮೀಕ್ಷೆ ಪರಿಪೂರ್ಣವಾಗಿರುತ್ತದೆ ಎಂದೇನೂ ಭಾವಿಸಬೇಕಿಲ್ಲ. ಈ ಬರಹಗಾರ ತನ್ನಲ್ಲಿ ಲಭ್ಯವಿದ್ದ ಸಂಕಲನಗಳ ಆಧಾರದ ಮೇಲೆ ಈ ಸಮೀಕ್ಷೆ ನಡೆಸಿದ್ದಾನೆ.
೨೦೦೯ರಲ್ಲಿ ಇಬ್ಬರು ಹಿರಿಯರು ಕಂಬಾರ ಮತ್ತು ಅನಂತಮೂರ್ತಿಗಳ ಸಂಕಲನಗಳ ಜೊತೆಗೆ ಈಗಾಗಲೇ ಕಾವ್ಯ ಕೃಷಿಯಲ್ಲಿ ಹೆಸರು ಮಾಡಿರುವ ಕೆ.ಬಿ.ಸಿದ್ದಯ್ಯ, ಎಸ್.ಮಂಜುನಾಥ್, ಸವಿತಾ ನಾಗಭೂಷಣ ಮತ್ತು ಎಚ್.ಎಲ್.ಪುಷ್ಪ ಅವರ ಸಂಕಲನಗಳೊಟ್ಟಿಗೆ ಜ್ಯೋತಿ ಗುರುಪ್ರಸಾದ, ಸಂತೋಷ ಚೊಕ್ಕಾಡಿ, ಸ್ವಾಮಿನಾಥ, ಚಂ.ಸು.ಪಾಟೀಲ, ಆಲೂರು ದೊಡ್ಡನಿಂಗಪ್ಪ ಮತ್ತು ಎಚ್.ಆರ್.ರಮೇಶರ ಸಂಕಲನಗಳೂ ಸ್ಪರ್ಧೆಗಿಳಿದಿವೆ. ಇವಲ್ಲದೇ ಇದೇ ಪ್ರಥಮ ಬಾರಿಗೆ ಸಂಕಲನ ಪ್ರಕಟಿಸಿರುವ ಕತೆಗಾರ್ತಿ ಸುನಂದಾ ಪ್ರಕಾಶ ಕಡಮೆ, ಸಂತೆಬೆನ್ನೂರು ಫೈಜ್ನಟ್ರಾಜ್, ಆರಿಫ್ ರಾಜ, ಕೆ.ಎಸ್.ಶ್ರೀನಿವಾಸ ಮೂರ್ತಿ, ಎಂ.ಎಸ್.ರುದ್ರೇಶ್ವರ ಸ್ವಾಮಿ, ಶ್ರೀದೇವಿ ಕೆರೆಮನೆ, ಛಾಯಾ ಭಗವತಿ, ಸಿದ್ದು ದೇವರಮನಿ, ಡಾ.ಸಿ.ರವೀಂದ್ರನಾಥ, ರಶ್ಮಿ ಹೆಗಡೆ ಕನ್ನಡ ಕಾವ್ಯ ಶ್ರೀಮಂತಿಕೆಗೆ ತಮ್ಮ ಛಾಪು ಸೇರಿಸಿದ್ದಾರೆ. ಇಷ್ಟಲ್ಲದೇ ರಿಲ್ಕೆ (ಅನಂತಮೂರ್ತಿ), ಪಾಬ್ಲೊ ನೆರೂದ (ಜ.ನಾ.ತೇಜಶ್ರೀ),ಕೈಫಿ ಆಜ್ಮಿ (ವಿಭಾ) ಮಿರ್ಜಾ ಗಾಲಿಬ್ (ಡಾ.ಎನ್.ಜಗದೀಶ್ ಕೊಪ್ಪ) ಕೂಡ ಕನ್ನಡಕ್ಕೆ ಬಂದಿದ್ದಾರೆ.
ಯು.ಆರ್.ಅನಂತಮೂರ್ತಿಗಳ ‘ಅಭಾವ’ ಕಾವ್ಯಾಸಕ್ತರನ್ನು ಖುಷಿಗೊಳಿಸುತ್ತದೆ. ವರ್ಷದ ಕಡೆಯಲ್ಲಿ ಚಂದ್ರಶೇಖರ ಕಂಬಾರರ ‘ಎಲ್ಲಿದೆ ಶಿವಾಪುರ’ ಪ್ರಕಟವಾಗಿದೆ. (೨೦೧೦ರ ಜನವರಿ ೨ರಂದು ವಿದ್ಯುಕ್ತ ಬಿಡುಗಡೆಯಾಗಿದೆ), ೨೦೦೨ರ ‘ಇಲ್ಲಿಯವರೆಗಿನ ಕವಿತೆಗಳು’ ನಂತರ ಇದೀಗ ಕೇವಲ ೧೮ ಕವಿತೆಗಳ ಸಂಕಲನ ‘ಅಭಾವ’ವನ್ನು ಪ್ರಕಟಿಸಿರುವ ಅನಂತಮೂರ್ತಿಗಳು ಅವರ ಗದ್ಯದಷ್ಟು ಸರಾಗವಾಗಿ ಓದುಗರನ್ನು ತೃಪ್ತಿಪಡಿಸಲಾರರಾದರೂ ಅವರು ಸೃಷ್ಟಿಸುವ ರೂಪಕಗಳಿಂದ ಪ್ರಿಯರಾಗುತ್ತಾರೆ. ‘ಉತ್ತುವ ಮನಸ್ಸಿಗೆ ಫಲವಾತ್ತಾಗುತ್ತ.’ ಎನ್ನುವ ಸಾಲುಗಳ ಮೂಲಕ ಬದುಕಿನ ಮಾಗುವಿಕೆಯ ಮತ್ತು ವಿನಯ ಹಾಗೂ ಮಾರ್ದವತೆಯ ಪ್ರತಿನಿಧಿಯಂತೆ ಕಾಣಿಸುತ್ತಾರೆ. ‘ಕಾವ್ಯದ ಆತ್ಮಾನುಸಂಧಾನ’ ಅನ್ನುವ ಪದ್ಯವಂತೂ ಅದರ ಶೀರ್ಷಿಕೆ ಸೂಚಿಸುವ ಹಾಗೇ ಅನುಭವವೊಂದು ಪದ್ಯವಾಗಿ ಬೆಳೆಯುವ ಮತ್ತು ಚಿರಕಾಲ ಮನಸ್ಸೊಳಗೆ ನಿಲ್ಲುವ ಸಂಗತಿಯಾಗಿ ‘ಕಷ್ಟ; ಸಂಕಲ್ಪ ಸಾಲದು; ಅದೃಷ್ಟ ಬೇಕು’ ಅನ್ನುವ ಕವಿಯ ಮಾತಿಗೆ ಓದುಗ ಸಂಭ್ರಮ ಪಡುತ್ತಲೇ ತನ್ನೊಳಗಿನ ಅನುಭವಗಳನ್ನು ನೆನೆಯುವಂತೆ ಮಾಡುತ್ತದೆ. ‘ಈ ನಮ್ಮ ಕಾಲದಲ್ಲಿ ಏನೇನು ಚಂದ?’ ತುಂಟತನವನ್ನೂ ಕವಿತೆಯಾಗಿಸಬಹುದೆನ್ನುವುದರ ಸೂಚನೆಯಾದರೆ, ‘ಸಾವಿನ ಸನ್ನೆ’ ಸಂಕಲನದ ಯಶಸ್ವಿ ಪದ್ಯಗಳಲ್ಲೊಂದು. ‘ಓದುತ್ತ ಹೋದುದನ್ನು ಓದುತ್ತಲೇ ಮರೆಯುತ್ತ/ ಮೈಮುರಿಯುತ್ತ ಎದ್ದು ನಿಲ್ಲುವಾಗ/ ಏನದು ಮತ್ತೆ ಹೊಳೆದಂತಾಗುತ್ತದೆ?’ ಎಂದು ನಿರಂತರ ಕಾಡುವ ಸಾವಿನ ಸನ್ನೆಯನ್ನು ಅನಾವರಣಗೊಳಿಸುತ್ತಾರೆ. ಕಂಬಾರರ ‘ಎಲ್ಲಿದೆ ಶಿವಾಪುರ?’ ಎಂದಿನಂತೆ ಅವರಿಗೆ ಪ್ರಿಯವಾದ ಶಿವಾಪುರದಲ್ಲಿ ಕವಿಯ ಹುಡುಕಾಟವನ್ನೇ ವಸ್ತುವಾಗುಳ್ಳದ್ದು. ದೇಶಗಳಳಿದರೂ ಶಿವಾಪುರ ಉಳಿದೇ ಉಳಿಯುತ್ತದೆ ಎಂಬ ಕವಿಯ ಗಾಢ ನಂಬಿಕೆ ಇಲ್ಲಿನ ಎಲ್ಲ ಪದ್ಯಗಳಲ್ಲೂ ತುಂಬಿ ತುಳುಕಿದೆ. ಕಂಬಾರರಿಗಷ್ಟೇ ಒಲಿದಿರುವ ಜಡೆಮುನಿ,ವಿಶಾಲ ಮರ, ಹರಿಯುವ ನೀರು, ಚಂದ್ರಾಮ ಚುಕ್ಕಿಗಳು ಇಲ್ಲಿನ ಪದ್ಯಗಳಲ್ಲಿ ಕಂಬಾರ ಮುದ್ರೆಗೆ ಸಾಥ್ ನೀಡಿವೆ. ನಾವು ಆಡಿದ್ದು ಮಾಡಿದ್ದು/ಹರಿದು ಹೋಗಿದೆ ನದಿಯ ತೆರೆಗಳೊಡನೆ/ನಿನ್ನೆಯ ಸತ್ಯ ಇಂದಿನ ಚೇಷ್ಟೆಯಾಗಿ/ಕೂಸು ಜೋಗುಳ ಹಾಡಿ ನಮ್ಮನ್ನು ಮಲಗಿಸುತ್ತಿದೆ!-ಎನ್ನುವಷ್ಟೇ ಸಲೀಸಾಗಿ ಕಾಲನಿಗಿಂತ ತರುಣವಾದ ಕಾವ್ಯವಿದೆಯೆಂದು/ನನ್ನಂಥವರ ಮುನ್ನಡೆಸಿ ಹೊಸ ಕ್ಷಿತಿಜ ತೋರಿದವರು (ಅಡಿಗರಿಗೆ) ಎಂದೂ ನೆನೆಯುತ್ತಾರೆ. ಒಂದು ಓದಿಗೆ ದಕ್ಕಲಾರದ, ಪ್ರಬಂಧವೇನೋ ಎನ್ನುವಷ್ಟು ಸವಿವರಗಳ, ಸಾರಾಂಶ ಇಷ್ಟೇ ಎಂದು ಹೇಳಲಾಗದ ಸಂವೇದನಾಶೀಲತೆ ಮತ್ತು ಅನುಭವದೆರಕದ ಈ ಸಂಕಲನ ಬಹಳ ಕಾಲ ಕಾಡುತ್ತದೆ.
‘ಗಲ್ಲೆಬಾನಿ’ ಅಧ್ಯಾತ್ಮವನ್ನು ವಿವಿಧ ನೆಲೆಗಳಲ್ಲಿ ಶೋಧಿಸುತ್ತಿರುವ ಹಾಗೆಯೇ ಸಿದ್ಧಮಾದರಿಗಳನ್ನು ನಿರಾಕರಿಸಿ ಸ್ವಾನುಭವ ಮತ್ತು ಚಳವಳಿಗಳ ಮೂಲಕ ಕಂಡುಕೊಂಡ ತಾತ್ವಿಕತೆಯನ್ನೇ ಬಸಿದು ಕಾವ್ಯ ಕಟ್ಟುತ್ತಿರುವ ಸಿದ್ದಯ್ಯನವರ ನಾಲ್ಕನೇ ಖಂಡಕಾವ್ಯ. ‘ಇಡೀ ದೇಹ ಭವದ ಸಾಲ’ ಎನ್ನುವ ಕವಿ ‘ಕಟ್ಟಕಡೆಗೆ ಸುಲಿದು ಸುಲಿದು ಸುಲಿದು ಚರ್ಮ ಸುಲಿದು ಮೆಟ್ಟು ಹೊಲೆದು ಮೆಟ್ಟೀ ಮೆಟ್ಟೀ ಮೆಟ್ಟೀ ಬಿಟ್ಟುಬಿಟ್ಟೆ ಮೆಟ್ಟು ಬಿಡುವ ಜಾಗದಲ್ಲಿ’ ಎನ್ನುತ್ತಾರೆ. ಕಾಜಗದ ದೋಣಿ ಈಜುವ ಸೋಜಿಗವನ್ನು ಕಾಣಿಸುವ ಸಿದ್ದಯ್ಯನವರ ಈ ಕಾವ್ಯಾಭಿವ್ಯಕ್ತಿ ಒಂದು ರೀತಿಯಲ್ಲಿ ಆತ್ಮಚರಿತ್ರೆಯೇ ಆಗಿದೆ. ಚಮ್ಮಾರನ ನಿತ್ಯ ಕಾಯಕಕ್ಕೆ ಸಹಕಾರಿಯಾಗಿ ತನ್ನೊಡಲ ತುಂಬ ನೀರು ತುಂಬಿಕೊಂಡಿರುವ ಕಲ್ಲಬಾನಿ ಈ ಗಲ್ಲೆಬಾನಿ. ಸಾಮಾಜಿಕ ನಡೆಯನ್ನು ‘ಸಮಾಜೋ ಅಧ್ಯಾತ್ಮ ಪ್ರಯಾಣ’ವೆಂದು ನಂಬಿರುವ ಸಿದ್ದಯ್ಯನವರ ಈ ಕಾವ್ಯ ದಮನಿತ ವರ್ಗದ ಸಾಂಸ್ಕೃತಿಕ ಸಂಗತಿಯನ್ನು ಅನಾವರಣಗೊಳಿಸುತ್ತಲೇ ಕವಿಯೊಳಗಿರುವ ಜೀವಸೆಲೆಯಾಗಿ ಬಹುಕಾಲ ಓದುಗನನ್ನು ಕಾಡುತ್ತದೆ. ಕಳೆದ ವರ್ಷವಷ್ಟೇ ‘ಮಗಳು ಸೃಜಿಸಿದ ಸಮುದ್ರ’ ಹೆಸರಿನ ಸಂಕಲನ ಪ್ರಕಟಿಸಿ ಹೆಸರು ಖ್ಯಾತಿ ಗಳಿಸಿದ್ದ ಎಸ್.ಮಂಜುನಾಥ್ ಮತ್ತೊಂದು ಸಂಕಲನ ‘ಜೀವಯಾನ’ ಪ್ರಕಟಿಸಿದ್ದಾರೆ. ಹೀಗೆ ವರ್ಷಕ್ಕೊಂದು ಸಂಕಲನ ತರುವ ಯಾರೇ ಇರಲಿ, ಈಗಾಗಲೇ ಅವರು ಗಳಿಸಿದ ಖ್ಯಾತಿ ಮತ್ತು ಅವರಿಗಂಟಿದ ಪ್ರ್ರಭಾವಳಿಯ ಮೂಲಕವೇ ಸಾರಸ್ವತ ಲೋಕದ ಬಾಗಿಲು ತಟ್ಟುವುದರಿಂದ ಇಂಥವರು ಸೃಷ್ಟಿಸಿದ ಮಾಯೆಯ ಬಲೆಯನ್ನೇ ವಿಸ್ಮಿತರಾಗಿ ಸಲಹುವ ನಮ್ಮ ಮಾಧ್ಯಮಗಳು ಮತ್ತು ವಿದ್ವಾಂಸರೆಂಬ ವಿಮರ್ಶಕರು ಹಳಬರ ಈ ಆಟಗಳಿಗೆ ಚಪ್ಪಾಳೆ ತಟ್ಟುವ ಭರದಲ್ಲಿ ಇವರೊಟ್ಟಿಗೇ ನಿಂತಿರುವ ಇತರರ ಪ್ರಯತ್ನಗಳನ್ನು ಗಮನಿಸುವ ಗೋಜಿಗೂ ಹೋಗದೇ ಸುಮ್ಮನಿರುವ ಸುಮ್ಮಾನಕ್ಕೆ ಶರಣಾಗಿಬಿಡುತ್ತಾರೇನೋ ಎಂಬ ಅನುಮಾನಗಳೂ ಕಾಡುತ್ತವೆ. ‘ಜೀವಯಾನ’ ಆತ್ಮ ಚರಿತ್ರೆಯ ಪುಟಗಳಂತೆ ನಮ್ಮ ಮುಂದೆ ಬಿಚ್ಚಿಕೊಳ್ಳುತ್ತ ಹೋಗುವುದಾದರೂ ಇದುವರೆಗೆ ರೂಪಕಗಳಲ್ಲೇ ಮಾತನಾಡುತ್ತಿದ್ದ ಮಂಜುನಾಥ್, ಹೊಸ ಪ್ರಮೇಯವೊಂದನ್ನು ಸೃಷ್ಟಿಸಿದ್ದಾರೆಂದೇನೂ ಅನ್ನಿಸುವುದಿಲ್ಲ. ಅವರು ಪುಸ್ತಕದ ಕಡೆಯಲ್ಲಿ ಪ್ರಕಟಿಸಿರುವ ಟಿಪ್ಪಣಿಯಂತೂ-ಅದರಲ್ಲೂ ‘ಒಡಲಾಳ’ಕ್ಕೆ ತಮ್ಮ ಕೃತಿಯನ್ನು ತಾವೇ ಸ್ವತಃ ಹೋಲಿಸಿಕೊಳ್ಳುತ್ತಿರುವುದು ಅಷ್ಟೇನೂ ಆರೋಗ್ಯಕರವಾದುದಲ್ಲ. ಪ್ರಾಯಶಃ ಬೇರೊಬ್ಬರು ಮುನ್ನುಡಿಯ ಮೂಲಕ ಇದೇ ಮಾತುಗಳನ್ನು ಬರೆದಿದ್ದರೆ ಆಗ ಅದು ಬೇರೆಯ ಮಾತು.(ಅನಂತಮೂರ್ತಿ, ಸಿದ್ದಯ್ಯ, ತಮ್ಮ ಸಂಕಲನಗಳಿಗೆ ಬರೆದುಕೊಂಡಿರುವ ಸಾಲುಗಳನ್ನು ಗಮನಿಸಿ). ಆದರೂ ಮಂಜುನಾಥ್ ಇವತ್ತು ಬರೆಯುತ್ತಿರುವ ಕವಿಗಳಲ್ಲೇ ಭಿನ್ನವಾಗಿ ನಿಲ್ಲುತ್ತಾರೆ ಮತ್ತು ನಿರಂತರ ಕಾವ್ಯ ಪ್ರಯೋಗಕ್ಕೆ ತಮ್ಮನ್ನು ಒಪ್ಪಿಸಿಕೊಂಡಿದ್ದಾರೆ ಅನ್ನುವುದರಲ್ಲಿ ಯಾವ ಅನುಮಾನಗಳೂ ಇಲ್ಲ.ಒಂದು ಬಗೆಯ ವಿಷಾದ ಇಲ್ಲಿನ ಪದ್ಯಗಳಿಗೆ ಶೃತಿಯಾಗಿದೆ. ಮರಾಠಿಯಲ್ಲಿ ಕಳೆದ ದಶಕದಲ್ಲಿ ಆತ್ಮ ಚರಿತ್ರೆಗಳು ಸುದ್ದಿ ಮಾಡಿದ ಹಾಗೇ ಈ ಬಗೆಯ ಪದ್ಯಗಳು (ಎಚ್.ಎಸ್.ವಿ ಯವರ ಉತ್ತರಾಯಣ ನಾ.ಮೊಗಸಾಲೆಯವರ ಇಹಪರದ ಕೊಳ) ಪ್ರ್ರಾಯಶಃ ಇನ್ನು ಮುಂದೆ ಹೆಚ್ಚುಹೆಚ್ಚಾಗಿ ಪ್ರಕಟವಾಗಲಿವೆಯಾ ಎಂಬ ಅನುಮಾನವೂ ಕಾಡುತ್ತಿದೆ. ಮನದ ಬನದಲ್ಲಿ ಹೆಜ್ಜೆಯಿಕ್ಕಿದ ನವಿಲೆ (ಮಗಳಿಗೆ) ಅಂಜಿ ನಡುಗಿರಬೇಕು ಪಟದ ದೇವರುಗಳೆಲ್ಲ (ಅಣ್ಣನ ರೋಷಾವೇಷ) ಅಂಗಾಲ ಮುದ್ದಿಸಿದ ಮಳೆ ಬಿದ್ದ ಹೂಮಣ್ಣು (ಊರಿದ ಬೇರಿನ ಗುಂಟ) ಅಂಗೈಯ ಆಕಾಶದಲಿ ಹೊಳೆವ ನಕ್ಷತ್ರ (ಆ ಮುದ್ದು ಕವಚ)ದಂಥ ಸಾಲುಗಳು ಹಾಗೂ ೩೩ ಮತ್ತು ೩೪ನೆ ಪದ್ಯಗಳು ಕವಿ-ಪತ್ನಿ ಮತ್ತು ಮಗಳ ಕುರಿತು ಬರೆದದ್ದು ಖುಷಿಗೊಳಿಸುತ್ತವೆ. ಮಂಜುನಾಥರ ಪ್ರತಿಭೆಗೆ ತಲೆದೂಗಿಸುತ್ತವೆ.
‘ಜಾತ್ರೆಯಲ್ಲಿ ಶಿವ’ ಸಂಕಲನದಲ್ಲಿ ತಮ್ಮ ಕಾವ್ಯ ಮಾರ್ಗವನ್ನು ತಾವೇ ಮೀರಿದ ಸವಿತಾ ನಾಗಭೂಷಣ ಇದೀಗ ‘ದರುಶನ’ ಪ್ರಕಟಿಸಿದ್ದಾರೆ. ಉದ್ದುದ್ದದ ಭಾಷಣಕ್ಕೋ, ಕಂಡರಿಯದ ಆಧ್ಯಾತ್ಮಕ್ಕೋ ತೆಕ್ಕೆಬೀಳದೇ ಸಹಜ ಲಯ ಮತ್ತು ವಾಸ್ತವದ ಸಣ್ಣ ಪುಟ್ಟ ಪ್ರತಿಮೆಗಳಲ್ಲೇ ತಮ್ಮ ಕಾವ್ಯವನ್ನು ಕಟ್ಟುತ್ತಾರೆ. ಬಾಲ್ಯ, ಅಮ್ಮನ ನೆನಪು, ಪ್ರೀತಿ ಇವುಗಳ ನಡುವೆಯೇ ಬುದ್ಧ, ಗಾಂಧಿ ಕೂಡ ನಸುನಗುವುದು ಈ ಸಂಕಲನದ ವಿಶೇಷ. ಕೆಲವು ಪದ್ಯಗಳು ನೀತಿಪಾಠವಾಗಿ ಬದಲಾಗುವುದು ಏಕೋ ಕವಿಯೇ ಉತ್ತರಿಸಬೇಕು. ‘ಗುಜರಾತ್‌ಗೆ ಕವಿ ಸ್ಪಂದನ’ ಈ ಸಂಕಲನದ ಹೈಲೈಟ್. ಸಂಕಲನಕ್ಕಾಗುವಷ್ಟು ಪದ್ಯಗಳಾದೊಡನೆಯೇ ಪ್ರಕಟಿಸಿಬಿಟ್ಟರೆ ಜೊಳ್ಳು-ಕಾಳು ಎರಡರ ಮಿಶ್ರಣವೂ ಆಗುತ್ತೆ ಅನ್ನುವುದಕ್ಕೆ ಕೂಡ ಈ ಸಂಕಲನ ಸಹಜ ಉದಾಹರಣೆ.
ಅಮೃತಮತಿಯ ಸ್ವಗತವನ್ನು ಗಾಜುಗೋಳದ ಮೂಲಕ ಹಾಯಿಸಿದ್ದ ಎಚ್.ಎಲ್.ಪುಷ್ಪ ‘ಲೋಹದ ಕಣ್ಣು’ ತೆರೆದು ಹೊಸ ಕವಿತೆಗಳನ್ನು ಬರೆದಿದ್ದಾರೆ. ಅಲ್ಲಮನ ಪ್ರಭಾವಲಯದ ರೂಪಕಗಳಲ್ಲೇ ಬದುಕನ್ನು ಚಿತ್ರಿಸುವ ಪರಿ ಬೆರಗಾಗಿಸುತ್ತದೆ. ಈಗಾಗಲೇ ತಮಗೆ ಸಿದ್ಧಿಸಿದ ಮಾರ್ಗಗಳಲ್ಲೇ ಅನ್ಯ ಕವಯತ್ರಿಯರು ದಾಪುಗಾಲಿಡುತ್ತಿರುವಾಗ ಈಗಲೂ ಪುಷ್ಪ ಆತಂಕದಲ್ಲಿ ಆಧ್ಯಾತ್ಮವನ್ನರಸುತ್ತಿರುವುದು ವಿಶೇಷವೆನ್ನಿಸುತ್ತದೆ. ಸಂಕಲನದ ತುಂಬ ಸಾರ್ಥಕ ಕವಿತೆಗಳಿರುವುದು, ಒಂದು ಪಾತಳಿಗೆ ಸಿಲುಕದೇ ಆ ಎಲ್ಲ ಕವಿತೆಗಳೂ ತಮಗಿರದ ನೆಲೆಯನ್ನು ಕುರಿತೇ ಶೋಧಿಸುತ್ತಿರುವುದೂ ಹೆಚ್ಚುಗಾರಿಕೆ. ‘ಮಳೆಯ ಜಾಡಿನಲ್ಲಿ ಡಾಂಟೆ ಇತ್ಯಾದಿ’ ನಿಜದ ಪ್ರಯೋಗ. ಜಂಭದ ಗಾಳಿಕುದುರೆಗೆ ತಿಳಿದಿರಲಿ/ಬಯಲಿಗೆ ಬಯಲು ಎಂದೂ ಜೊತೆಯಲ್ಲವೆಂದು ಎನ್ನುವ ಅರಿವಿರುವ ಕವಿ ಕರುಣೆಯ ಕಣ್ಣು ತೆರೆದಲ್ಲದೆ/ಈ ತನು, ತನುವಿನ ಭವ ಹಿಂಗದು ಎನ್ನುತ್ತಾರೆ. ಅಪ್ಪಳಿಸುವ ಅಲೆಯೆದುರು/ವಿಳಾಸವಿಲ್ಲದ ನಾನು ತಬ್ಬಿಬ್ಬಾಗಿದ್ದೇನೆ/.. ../ಮಾರ್ದನಿಯಿಲ್ಲದ ಪುಟ್ಟ ಹಕ್ಕಿ ಎಂದೂ ಸಂತೈಸಿಕೊಳ್ಳುತ್ತಾರೆ. ಕನ್ನಡ ಕಾವ್ಯದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿರುವ ಆಧ್ಯಾತ್ಮದ ಹುಡುಕುವಿಕೆ ಇಲ್ಲಿನ ಪದ್ಯಗಳ ಮೂಲಕೇಂದ್ರ. ಆತ್ಮ ಸಂಗಾತಕ್ಕೆ ನೀನುಂಟು, ಏಕಲವ್ಯನೆಂಬ ಗುರುವಿಗೆ, ದಾರಿ ಕಳಕೊಂಡಿದೆ ಕವಿತೆ, ನದೀಮುಖ, ಕುಣಿವ ನವಿಲುಗಳು ಮುಂತಾದ ಪದ್ಯಗಳು ಪುಷ್ಪ ಅವರು ಶೋಧಿಸುತ್ತಿರುವ ಲೋಕದ ದಾರಿಗೆ ಇಡುತ್ತಿರುವ ಹೆಜ್ಜೆಗಳ ಕುರುಹಾಗಿ ತೋರುತ್ತವೆ.
‘ಚಂದ್ರಮತಿಯ ಮಾಂಗಲ್ಯ’ ಎನ್ನುವ ಅದ್ಭುತ ರೂಪಕವನ್ನೇ ಹೆಸರಾಗಿಸಿರುವ ಸ್ವಾಮಿನಾಥರ ನಾಲ್ಕನೇ ಸಂಕಲನದಲ್ಲಿರುವ ೪೮ ಪದ್ಯಗಳಲ್ಲಿ ನವೋದಯ, ನವ್ಯ ಮತ್ತು ಬಂಡಾಯದ ಮಿಶ್ರಣವಿದೆ. ‘ಪಂಚಭೂತ’ದಂಥ ಸರಳ ಲಯದೊಟ್ಟಿಗೇ ‘ರಕ್ಕಸ ಮತ್ತು ರಾಜಕುಮಾರಿ’ಯಂಥ ಕಥನ ಕವನಗಳನ್ನೂ ಅವರು ಬರೆಯಬಲ್ಲರು. ಬಿ.ಸಿ.ರಾಮಚಂದ್ರ ಶರ್ಮ ಹಾಗೂ ಜಿ.ಎಸ್.ಶಿವರುದ್ರಪ್ಪನವರ ಕವಿತೆಗಳ ಓದು ಈ ಕವಿಯ ಹಲವು ರಚನೆಗಳಿಗೆ ಸ್ಪೂರ್ತಿ ನೀಡಿವೆ. ತಕ್ಷಣಕ್ಕೇ ಕತ್ತಲಲ್ಲಿ ಫಳಫಳ ಹೊಳೆಯುವ ತಾಳಿ/ಕೊಳೆತಿತ್ತು ಕಾಲನ ಕಾಲು/ನಕ್ಕಿತ್ತು ಕಾಮನ ಬಿಲ್ಲು/ನುಡಿದಿತ್ತು ಕೊರಳು ಕಾಲದಷ್ಟೇ ಸತ್ಯ-ಕಾವ್ಯ ಸತ್ಯವನ್ನು ನವ್ಯದ ಪ್ರತಿಮೆಗಳಲ್ಲಿ ಹಿಡಿದಿಡುವ ಕವಿಗೆ ಭೇಷ್ ಅನ್ನಲೇಬೇಕಾಗುತ್ತದೆ.
‘ಎಡವಟ್ಟು ಬದುಕಿನ ಲಯಗಳು’ ಎನ್ನುವ ಕ್ಯಾಚೀ ಹೆಸರಿನ ಸಂಕಲನದ ಮೂಲಕ ಕಾವ್ಯಲೋಕ ಪ್ರವೇಶಿಸಿದ್ದ ಎಚ್.ಆರ್.ರಮೇಶ ‘ಸಾಸುವೆ ಹೂವ ಚರಿತ’ ಎನ್ನುವ ಸಾಮಾನ್ಯ ಹೆಸರಿಗೇಕೆ ಸೋತರೋ ಗೊತ್ತಾಗುತ್ತಿಲ್ಲ. ಸಾಸುವೆ ಅಂದ ಕೂಡಲೇ ನೆನಪಾಗುವ ಬುದ್ಧ ಈ ಸಂಕಲನದ ತುಂಬೆಲ್ಲ ಓಡಾಡಿದ್ದಾನೆ. ಎಲ್ಲ ಹೊಸತು ಎನ್ನುವ ಹಾಗೆ ಬರೆಯುತ್ತಿರುವವರಲ್ಲಿ ಎಚ್.ಆರ್.ರಮೇಶ ಒಬ್ಬರು. ಕವಿತೆ ಅರ್ಥಪೂರ್ಣವಾಗಿದ್ದರೆ ಮಾತ್ರ ಕಾಲದೇಶವನ್ನು ಮೀರಿ ನಿಲ್ಲುತ್ತೆ ಎನ್ನುವ ಅರಿವಿರುವ ಕವಿ ಹಳೆಯ ರೂಪಕಗಳನ್ನು ಫ್ರಿಜ್ಜಲ್ಲಿಟ್ಟು/ಫ್ರೆಶ್ ಆಗಿ ಅರ್ಪಿಸಲಾರೆ/ಇದೋ ಇಲ್ಲಿ ಬಿದ್ದಿರುವ ಕಲ್ಲನ್ನೇ ಎತ್ತಿ/ಕೊಡುವೆ ಅಂತ ಮೊದಲ ಪದ್ಯದಲ್ಲೇ ಕುತೂಹಲ ಹುಟ್ಟಿಸುತ್ತಾರೆ. ಸಂಕಲನದ ತುಂಬ ಒಟ್ಟಂದಕ್ಕಂಟದೇ ಅಲ್ಲಿಲ್ಲಿ ಚದುರಿ ಹೋಗಿರುವ ಪದ್ಯದ ವಸ್ತುಗಳು ವಿಕ್ಷಿಪ್ತಮನಸ್ಸನ್ನೇ ಎತ್ತಿ ತೋರುತ್ತವೆ. ಜೈವಿಕ ವಿವರಗಳನ್ನು ಒದಗಿಸುತ್ತಲೇ ಕಾವ್ಯವನ್ನು ಧೇನಿಸುವುದು ಈ ಕವಿಗೆ ಒಗ್ಗಿರುವ ಸಂಗತಿ.ಕವಿಯೊಬ್ಬ ತನಗೆ ತಾನೇ ಆಡಿಕೊಂಡ ಮಾತುಗಳು ಓದುಗನ ಮಾತುಗಳೂ ಆದಾಗ ಕಾವ್ಯ ಯಶಸ್ವಿಯಾಗುತ್ತೆ. ಅಂಥ ಯಶಸ್ಸಿನಲ್ಲೀಗ ರಮೇಶ ಇದ್ದಾರೆ. ಅನಂತಮೂರ್ತಿಯವರ ಮುನ್ನುಡಿ ಕೂಡ ರಮೇಶರ ಕಾವ್ಯಕಸುಬನ್ನು ಉದ್ದೀಪಿಸಿದೆ.
ಸಂತೋಷ ಚೊಕ್ಕಾಡಿಯವರ ‘ನಿನ್ನ ರಾಗವ ಹುಡುಕು’ ಅವರ ಕಾವ್ಯ ಯಾತ್ರೆಯ ಮೂರನೆಯ ಕುಸುಮ. ಹೊಸ ಪ್ರಯೋಗಗಳಿಗೆ ಹೋಗದೇ ಸಹಜ ಸರಳ ಲಯಗಳಲ್ಲೇ ತಮ್ಮ ಕವಿತೆಗಳನ್ನು ಆಗಿಸುವ ಚೊಕ್ಕಾಡಿಯವರ ಹಲವು ರಚನೆಗಳು ಸುನೀತದ ರೂಪದಲ್ಲಿವೆ. ಮಗಳಿಗೆ ಅನ್ನುವ ಪದ್ಯ ಜಗದ ಎಲ್ಲ ಅಪ್ಪಂದಿರ ಬಯಾಗ್ರಫಿಯಂತಿದೆ ಎನ್ನುವುದು ಉತ್ಪ್ರೇಕ್ಷೆಯಲ್ಲ. ಕಾಯಬೇಕು ಕವಿತೆಗೆ, ಕವಿತೆಯ ಹಾದಿ, ಕವಿತೆ, ನಿನ್ನ ರಾಗವ ಹುಡುಕು, ದಿನದ ಯಾತ್ರೆ ಈ ಕವಿ ಕಾವ್ಯಕ್ಕೆ ಬರೆದ ಭಾಷ್ಯದಂತಿವೆ. ಸ್ವರ್ಗ ಕಾಮ, ಗಾಢ ಮೌನದ ಇರುಳು ಬಹಳ ಕಾಲ ಮನಸ್ಸಲ್ಲುಳಿಯುವ ರಚನೆಗಳು. ಸಂಕಲನದ ಪರಿವಿಡಿಯಲ್ಲಿ ಪುಟ ಸಂಖ್ಯೆ ಇರದಿರುವುದು, ಸಗಟು ಖರೀದಿಗಾಗಿ ಪ್ರಕಟಣೆಯ ವರ್ಷವನ್ನೇ ಹಿಂದಕ್ಕೋ-ಮುಂದಕ್ಕೋ ಬದಲಾಯಿಸಿರುವುದೂ, ಕವನಸಂಕಲನಗಳಿಗೆ ಇರುವ ಪ್ರಕಾಶಕರ ಬರವನ್ನು ಸಾಬೀತು ಪಡಿಸುತ್ತದೆ.
‘ಚುಕ್ಕಿ’ ಸಂಕಲನದ ಮೂಲಕ ಹೆಸರು ಮತ್ತು ಖ್ಯಾತಿಗಳನ್ನು ಕಂಡುಕೊಂಡ ಜ್ಯೋತಿ ಗುರುಪ್ರಸಾದ್ ತಮ್ಮ ಎರಡನೆಯ ಸಂಕಲನ ‘ಮಾಯಾ ಪೆಟ್ಟಿಗೆ’ ತೆರೆದಿಟ್ಟಿದ್ದಾರೆ. ೯೦ ಪದ್ಯಗಳನ್ನು ಈ ಸಂಕಲನದಲ್ಲಿ ಅಡಕಿರಿದಿದ್ದರೂ ಬಹು ಕಾಲ ಮನಸ್ಸಲ್ಲಿ ನಿಲ್ಲುವ ರಚನೆಗಳು ಬಹಳ ಕಡಿಮೆ. ಹೆಸರಿಗಷ್ಟೇ ಮಾಯಾಪೆಟ್ಟಿಗೆ ತೆರೆದರೆ ಅವೇ ಅವೇ ಹಳೆಯ ಹಲುಬಿಕೆಗಳ ಆಗರ. ಜೊತೆಗೆ ಕವನ ರಚನೆ ಇಷ್ಟು ಸಲೀಸಾದ ಕೆಲಸವಾಗಿಬಿಟ್ಟರೆ, ಕೂತಲ್ಲಿ ನಿಂತಲ್ಲಿ ಅಧ್ಯಾತ್ಮದ ಹೊಳಹು ಮಿಂಚಿದರೆ, ಕಾವ್ಯ ಕ್ರಿಯೆಯ ಮೇಲೇ ಸಂಶಯಗಳು ಹುಟ್ಟುತ್ತವೆ. ಜೊತೆಗೆ ಸರಳವಾಗಿರುತ್ತವೆ ಎಂಬ ಕಾರಣಕ್ಕೆ ಎಲ್ಲ ಪತ್ರಿಕೆಗಳಲ್ಲೂ ಇಂಥ ರಚನೆಗಳೇ ವಿಜೃಂಭಿಸುತ್ತಿರುವುದನ್ನೂ ವಿಷಾದದಿಂದಲೇ ನೋಡಬೇಕಾಗಿದೆ. ಈಗಂತೂ ಪತ್ರಿಕೆಗಳ ಸಾಪ್ತಾಹಿಕಗಳಲ್ಲಿ, ಮಾಸಿಕ, ವಾರಪತ್ರಿಕೆಗಳಲ್ಲಿ ಮೇಲಿಂದ ಮೇಲೆ ಕಾಣಿಸಿಕೊಳ್ಳುವ ಕೆಲವು ಹೆಸರುಗಳು ಬೇಕೆಂತಲೇ ಆಧ್ಯಾತ್ಮಿಕ ತುಡಿತ, ಬುದ್ಧ ಅಲ್ಲಮ ಜೋಗಿ ಫಕೀರ ಜಂಗಮ ಸೂಫಿ ಮೊದಲಾದವರ ಜೊತೆಗಿನ ಅನುಸಂಧಾನವೆಂಬಂತೆ ತಮ್ಮ ಕವಿತೆಗಳನ್ನು ನೇಯುತ್ತಿದ್ದರೂ, ಮೇಲ್ನೋಟಕ್ಕೆ ಅವು ಸಾಧುವೆಂದೆನಿಸಿದರೂ, ಇವರೆಲ್ಲ ವರ್ತಮಾನದಲ್ಲಿ ಕಾಡುತ್ತಿರುವ ಸಮಸ್ಯೆಗಳಿಂದ ಪಲಾಯನ ಮಾಡಿರುವುದರ ಕುರುಹಾಗಿ ತೋರುತ್ತದೆ. ನಗರ ಕೇಂದ್ರಿತ ಸಮಸ್ಯೆಗಳು, ನಿಲ್ಲದ ವರ್ಗ ವರ್ಣಗಳ ಮೇಲಾಟಗಳು, ಹಿಂಸೆಯ ಬದಲಾಗುತ್ತಿರುವ ಮುಖಗಳು ನಮ್ಮ ಕವಿಗಳನ್ನು ಕಾಡದೇ ಇದೆಯೇ ಅಥವ ಅವರೆಲ್ಲ ಲೌಕಿಕದಿಂದ ದಿವಂಗತರಾಗಿದ್ದಾರೆಯೇ ಎನ್ನುವುದೂ ಇಲ್ಲಿ ಮುಖ್ಯ ಪ್ರಶ್ನೆಯಾಗಿದೆ.
ಆದರೂ ಮುನ್ನುಡಿಯ ಮೂಲಕ ಹೊಸಬರ ಬಗ್ಗೆ ತುಂಬು ಭರವಸೆಯ ಮಾತುಗಳನ್ನಾಡುವವರಂತೆ ಅನಂತಮೂರ್ತಿ ಕಂಡರೂ ಇಂಥ ಬರಹಗಳಲ್ಲೂ ಅವರೇ ಮುಂಚೂಣಿಗೆ ನಿಂತು ಹೊಸಬರ ಬಗ್ಗೆಯ ಮಾತೂ ಅವರಿಗೆ- ಅವರೊಪ್ಪಿದ ಸಿದ್ಧಾಂತ ಮತ್ತು ಮೌಲ್ಯಗಳ ಪ್ರತಿಪಾದನೆಯ ಸ್ವತ್ತಾಗುತ್ತದೇ ವಿನಾ ಮುನ್ನುಡಿ ಬಯಸಿದವರ ಕಾವ್ಯ ಪ್ರಖರತೆಯನ್ನಳೆಯುವ ಸಾಧನವಾಗುವುದಿಲ್ಲವೆಂಬುದನ್ನೂ ಗಮನಿಸಬೇಕು. ಜೊತೆಗೇ ಅನಂತಮೂರ್ತಿಯವರಂಥ ಹಿರಿಯರು ಕಿರಿಯರನ್ನು ಪ್ರೋತ್ಸಾಹಿಸಬೇಕೆನ್ನುವ ಏಕೈಕ ಉದ್ದೇಶದಿಂದ ತೀರ ಧಾರಾಳವಾಗಿಬಿಟ್ಟರೂ ಸೂಕ್ಷ್ಮವನ್ನಿರಿಯದ ಈ ಕಿರಿಯರು ತಾವೇ ‘ಕವಿಶ್ರೇಷ್ಠ’ರೆಂದು ಭಾವಿಸುವ ಅಪಾಯವೂ ಇರುತ್ತದೆ. ವ್ಯಕ್ತಿಗತ ಪರಿಚಯಗಳನ್ನೇ ಮುನ್ನುಡಿಯ ಮಾನದಂಡಗಳನ್ನಾಗಿಸಿಕೊಳ್ಳಬೇಡಿ ಅಂತ ಹಿರಿಯರಿಗೆ ಹೇಳುವುದೂ ಅಸಾಧ್ಯದ ಮಾತು! ಸಂಧ್ಯಾದೇವಿಯವರ ಅದ್ಭುತ ಸಂಕಲನ ಪ್ರಕಟಿಸಿದ್ದ ‘ಕಾವ್ಯಮಂಡಲ’ ಮಾಯಾಪೆಟ್ಟಿಗೆಯಲ್ಲಿ ಏನು ವಿಶೇಷ ಕಂಡುಕೊಡಿತೋ ಆ ಸಂಸ್ಥೆಯೇ ಹೇಳಬೇಕು.
‘ಕವಿತೆಗೆ ಬೆಂಕಿ ಬಿತ್ತು’ ವಿಲಕ್ಷಣ ಹೆಸರಿನ ಸಂಕಲನ ಪ್ರಕಟಿಸಿದ್ದ ಚಂ.ಸು.ಪಾಟೀಲ ‘ಅದಕ್ಕೇ ಇರಬೇಕು’ ಅನ್ನುವ ಸಾಮಾನ್ಯ ಹೆಸರನ್ನು ತಮ್ಮ ಹೊಸಸಂಕಲನಕ್ಕಿಟ್ಟಿದ್ದಾರೆ. ಪುಸ್ತಕವನ್ನು ಬೇಕಾಬಿಟ್ಟಿ ಪ್ರಕಟಿಸುವ ಪ್ರಕಾಶಕರಿಗೆ ಉದಾಹರಣೆ ಈ ಪುಸ್ತಕ. ಪದ್ಯಗಳಿಗೆ ಪರಿವಿಡಿಯೇ ಇಲ್ಲದಂತೆ ಪ್ರಕಟಿಸಿರುವುದು ಅಕ್ಷಮ್ಯ. ಮುನ್ನುಡಿ ಇಲ್ಲದೇ ಪುಸ್ತಕಗಳನ್ನು ಪ್ರಕಟಿಸುವುದು ಕೆಲವರ ಶೈಲಿಯಾದರೆ ತಮ್ಮ ಸಮಕಾಲೀನರಿಂದ ಒಳ್ಳೆಯ ಮಾತು ಬರೆಸುವ ಸುಲಭೋಪಾಯ ಕೆಲವರದು. ಇಲ್ಲೂ ಹಾಗೇ ಹೆಚ್ಚು ನಿಕಷಕ್ಕೊಡ್ಡದೇ ಪಿ.ಚಂದ್ರಿಕಾ ತಮ್ಮ ಕೆಲಸವನ್ನು ನಿಭಾಯಿಸಿದ್ದಾರೆ. ಹಲವು ಹೇಳಿಕೆಗಳಲ್ಲೇ ಕವಿತೆಗಳನ್ನು ಆಗಿಸುವ ಪಾಟೀಲರು ಪ್ರಾಸಕ್ಕೇ ಗಂಟುಬೀಳುತ್ತಾರೆ. ‘ಅದಕ್ಕೇ ಇರಬೇಕು’ ಅನ್ನುವ ಪದ್ಯ ಹೊಸ ವಿಸ್ತರಣಕ್ಕೆ ಕೈ ಇಟ್ಟಿರುವುದರ ಭರವಸೆಯ ಸಂಕೇತ.
‘ನೇಕಾರ’ ಎನ್ನುವ ಕಾಯಕದ ದೀಕ್ಷೆ ಹಿಡಿದು ಕವನ ಸಂಕಲನವಾಗಿಸಿದ್ದ ಆಲೂರು ದೊಡ್ಡನಿಂಗಪ್ಪ ಹೊಸ ಸಂಕಲನ ‘ಮುಟ್ಟು’ ತಂದಿದ್ದಾರೆ. ಅಲ್ಲಮನ ಬೆಡಗಿನ ವಚನಗಳನ್ನು ತಮ್ಮ ಕಾವ್ಯಾಭಿವ್ಯಕ್ತಿಯ ಅನುಕೂಲಕ್ಕೆ ಬಳಸಿಕೊಳ್ಳುವ ಆಲೂರು ರಂಗಭೂಮಿಯೊಂದಿಗಿನ ತಮ್ಮ ಸಂಬಂಧವನ್ನೂ ಕವಿತೆಯಾಗಿಸುತ್ತಾರೆ. ತತ್ವಪದಕಾರರೂ ಆಗೀಗ ಇವರ ಕವಿತೆಗಳೊಳಕ್ಕೆ ಇಳಿಯುವುದು ಹಾಗೇ ಕವಿ ಓದುಗನನ್ನು ತನ್ನೊಳಗನ್ನು ಮುಟ್ಟು ಎಂದು ಪ್ರಾರ್ಥಿಸುತ್ತಿರುವುದೂ ಮೊದಲ ಓದಿಗೇ ಶೃತವಾಗುತ್ತದೆ. ಮೊದಲ ಓದಿಗೆ ಥಟ್ಟನೆ ಅರ್ಥವಾಗದ ಆದರೆ ಆಕರ್ಷಣೆ ಕಳೆದುಕೊಳ್ಳದ ರಚನೆಗಳ ಬಗ್ಗೆ ಕವಿ ಯೋಚಿಸುವುದು ಒಳಿತು. ಸಮುದ್ರವೇ ಉರಿಯುತಿಹುದು/ಮೀನು ಮೊಸಳೆ ಮರ ಏರಿಹುದ ಕಂಡೆ/ಉರಿವ ಬೆಂಕಿ ನಂದಿಸಲು/ನೆಲ್ಲುಲ್ಲು ಭಾದೆ ಖಾಲಿ ಖಾಲಿ ಸಾಲುಗಳಲ್ಲಿ ಅಲ್ಲಮನನ್ನು ಮೈಮೇಲೇರಿಸಿಕೊಂಡಂತೆ ಕವಿ ಕಾಣುತ್ತಾರೆ.
ಈ ವರ್ಷ ಮೊದಲ ಸಂಕಲನ ಪ್ರಕಟಿಸಿದವರಲ್ಲಿ ಹಿರಿಯರು ಕಿರಿಯರೂ ಇದ್ದಾರೆ. ಕತೆಗಾರ್ತಿಯಾಗಿ ಈಗಾಗಲೇ ಪ್ರಸಿದ್ಧರಾಗಿರುವ ಸುನಂದಾ ಪ್ರಕಾಶ ಕಡಮೆಯವರ ‘ಸೀಳುದಾರಿ’, ಅವರ ಕತೆಗಳಂತೆಯೇ ನವಿರುತನ ಮತ್ತು ಖಾಸಗಿ ಅನುಭವಗಳ ಅನಾವರಣದ ಕಾರಣದಿಂದಾಗಿ ಮನಸೆಳೆಯುತ್ತದೆ. ಬೆಂಗಳೂರು ಬಿಟ್ಟು ಉಳಿದ ಕಡೆ ಮುದ್ರಣಗೊಂಡ ಪುಸ್ತಕಗಳಲ್ಲಿ ಕಣ್ಣಿಗೆ ಹಿತವಾದ ಫೋಂಟ್‌ಗಳನ್ನು ಬಳಸದ ಮತ್ತು ವಿನ್ಯಾಸದಲ್ಲಿ ಹೊಸತನ ಕಾಣಿಸದ ಕಾರಣ ಆ ಪುಸ್ತಕಗಳ ಓದಿಗೆ ಸ್ವಲ್ಪ ಕಷ್ಟಪಡಲೇಬೇಕಾಗುತ್ತದೆ. ಈ ಸಂಕಲನಕ್ಕೂ ಈ ತೊಂದರೆ ಬಾಧಿಸಿದೆ. ‘ಏಣಿ ಗೀಣಿ ಮುಟ್ಟದೇನೇ/ನಿಲುಕಬೇಕು ನಕ್ಷತ್ರ ಇಲ್ಲೇ’ ಎನ್ನುವ ಕವಿಗೆ ಪುಟ್ಟರೆಕ್ಕೆಗಿರುವ ಭಾರ ಜೀವದ ಅರಿವು ಇರುವದರಿಂದಲೇ ಸಂಕಲನದ ಕವಿತೆಗಳು ಅಪ್ಪಟ ವೈಯುಕ್ತಿಕ ಅನ್ನಿಸಿಕೆಗಳಾಗಿದ್ದೂ ಕವಿತೆಗಳಾಗುವಲ್ಲಿ ಯಶಸ್ವಿಯಾಗಿವೆ. ಎಂ.ಎಸ್.ರುದ್ರೇಶ್ವರ ಸ್ವಾಮಿ ‘ಪ್ರೀತಿ ಮತ್ತು ನೀರು’ ಅವರ ಮೊದಲ ಸಂಕಲನ ಹೌದೋ ಅಲ್ಲವೋ ಅನ್ನುವ ಅನುಮಾನ ಹುಟ್ಟಿಸುತ್ತಾರೆ. ಬೆಳಕಿನಲ್ಲಿ ಕಂಡದ್ದೆಲ್ಲ ಅರ್ಥವಾಗುವುದಿಲ್ಲ ಅನ್ನುವ ಮಾರ್ಮಿಕ ಹೇಳಿಕೆಯಲ್ಲಿ ಕವಿತೆಯನ್ನರಳಿಸಿ ಸೋಜಿಗ ಹುಟ್ಟಿಸುವ ಈ ಸಂಕಲನದಲ್ಲಿ ಕಲಾವಿದ ಮನೋಹರ್‌ರ ಚಿತ್ರಗಳನ್ನು ಹಿತವಾಗಿ ಬಳಸಿಕೊಂಡಿರುವುದು ಖುಷಿ ತರುತ್ತದೆ. ಮೊದಲನೆಯ ಓದಿಗೆ ಹಿತವೆನ್ನಿಸಿದರೂ ಮರು ಓದಿನಲ್ಲಿ ಸಂಕಲನದ ಕವಿತೆಗಳು ಶೋಕೇಸಿನ ಬೊಂಬೆಗಳಂತೆ ಕಾಣತೊಡಗುತ್ತವೆ.
ಬಹಳ ತಡವಾಗಿ ಸಂಕಲನ ತಂದಿರುವ ಕೆ.ಎಸ್.ಶ್ರೀನಿವಾಸಮೂರ್ತಿ ತಮ್ಮ ‘ಸೈಟಾದರೂ ಬೇಡವೇ ಸ್ವಾಮಿ ನಮಗೆ’ಎನ್ನುವ ಹೆಸರಿನ ಸಂಕಲನದ ತುಂಬ ಅಯೋವಾವನ್ನು, ಅಲ್ಲಿನ ಬದುಕನ್ನೂ ಚಿತ್ರಿಸಿದ್ದಾರೆ. ರಾಮಾನುಜನ್ ಅವರ ಕೆಲವು ಕವಿತೆಗಳನ್ನು ನೆನಪಿಸುವ ಶಕ್ತಿ ಇಲ್ಲಿನ ಪದ್ಯಗಳಿಗಿದ್ದರೂ, ಹೊಸ ಪರಿಭಾಷೆಯಲ್ಲಿ ಕನ್ನಡ ಕಾವ್ಯವನ್ನು ಕಟ್ಟುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಪ್ರಾಯಶಃ ಶ್ರೀನಿವಾಸಮೂರ್ತಿಯಂಥವರ ಪ್ರಯೋಗಗಳು ಗಮನಿಸುವವರಿಲ್ಲದಂತಾಗುವ ಅವಸ್ಥೆ ಇಂದಿನದು.
ಪತ್ರಿಕೆಗಳಲ್ಲಿ ಪ್ರಕಟವಾಗುವ ತಮ್ಮ ಕವಿತೆಗಳ ಮೂಲಕ ಈಗಾಗಲೇ ಪರಿಚಿತರಾಗಿರುವ ಆರಿಫ್ ರಾಜರ ‘ಜಂಗಮ ಫಕೀರನ ಜೋಳಿಗೆ’ ಸಂಕಲನದ ಮುನ್ನುಡಿಯಲ್ಲಿ ಎಚ್.ಎಸ್.ಶಿವಪ್ರಕಾಶ್ ಇವತ್ತಿನ ಕವಿಗಳ ಮಿತಿಗಳನ್ನು ವಿಶ್ಲೇಷಿಸುತ್ತಲೇ ಆರಿಫ್ ಮುಸ್ಲಿಂತನವನ್ನು ಕವಿತೆಯಾಗಿಸುತ್ತಿದ್ದಾರೇ ಹೊರತು ಕಾವ್ಯವನ್ನು ಇಸ್ಲಾಂ ಧರ್ಮಕ್ಕೆ ಸೇರಿಸುತ್ತಿಲ್ಲ ಎನ್ನುವ ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ. ಕಾವ್ಯ ಬರೆಯುವವರಿಗೆ ಅತ್ಯಗತ್ಯ ಬೇಕಿರುವ ಇರುವುದರ ಮೋಹ ಮತ್ತು ಇರದುದುರ ದಾಹ ಕುರಿತ ಅವರ ಮಾತುಗಳು ಕೇವಲ ಆರಿಫ್‌ಗೆ ಮಾತ್ರವಲ್ಲದೆ ಪದ್ಯ ಬರೆಯ ಹೊರಟ ಹೊಸ ತಲೆಮಾರಿನ ಎಲ್ಲ ಕವಿಗಳಿಗೂ ಹೇಳಿದಂತಿದೆ. ದೇವರು ದೊಡ್ಡವನು/ನಿತ್ಯದ ನೀರಸದಲ್ಲೂ ನಮಗೆ ಗೊತ್ತಿಲ್ಲದಂತೆ ಆಗಾಗ/ಬಹುಮಾನಗಳನ್ನಿಟ್ಟಿರುತ್ತಾನೆ/ಆ ಅಳು ಆಲಿಸಲು ಕೆಲವೊಬ್ಬರಿಗಾದರೂ/ಕಿವಿಗಳನ್ನು ಕೊಟ್ಟಿರುತ್ತಾನೆ (ಆ ಅಳು ಈಗಲೂ ಅಲ್ಲಿ) ಸಾಲುಗಳಲ್ಲಿ ತಮ್ಮ ಮೇಲೆ ಭರವಸೆ ಇಟ್ಟುಕೊಳ್ಳಬಹುದೆಂಬ ವಿಶ್ವಾಸವನ್ನು ಆರಿಫ್ ರಾಜ ಮೂಡಿಸುತ್ತಾರೆ. ಕವಿತೆಗಳ ಶೀರ್ಷಿಕೆಗೂ ಕವಿತೆಗಳಿಗೂ ಬಳಸಿರುವ ಫಾಂಟ್‌ಗಳ ಅಳತೆಗಳಲ್ಲಿ ಹೆಚ್ಚು ವ್ಯತ್ಯಾಸವಿಲ್ಲದಿರುವುದು ಓದಿಗೆ ತೊಡಕಾಗಿದೆ. ಬದುಕಿನ ದುರಂತದ ಮುಖಗಳ ಜೊತೆಜೊತೆಗೇ ಪುಳಕದ ಕ್ಷಣಗಳನ್ನೂ ಕವಿ ದಾಖಲಿಸಿದ್ದಾರೆ.
ತುಂಬ ಅಚ್ಚುಕಟ್ಟಾದ ಮುದ್ರಣ, ಹಿತವಾದ ಮುಖಚಿತ್ರವಿರುವ ‘ಪುಟಾಣಿ ಕೆಂಪು ಶೂ’ ಛಾಯಾ ಭಗವತಿಯವರ ಮೊದಲ ಸಂಕಲನ. ವ್ಯಕ್ತಿ ಸಂಬಂಧಗಳು ಮತ್ತು ಲಯ ಪ್ರಾಸಗಳಲ್ಲೇ ಕವಿತೆಗಳನ್ನು ನೇಯುವ ಕವಿಗೆ ಆ ಪ್ರಾಸಗಳೇ ಮಿತಿಯೊದಗಿಸಿವೆ. ಬಹುತೇಕ ಕವಿತೆಗಳ ವಸ್ತುವಾಗಿ ಕವಿಯನ್ನು ಕಾಡಿರುವ ಹೆಣ್ಣು ಮತ್ತು ಕೂಸು ಇಲ್ಲಿನ ಪದ್ಯಗಳಿಗೆ ಸುಲಭ ದಾರಿಯೊದಗಿಸಿವೆ ಅಷ್ಟೆ. ಸಂಕಲನದ ಯಶಸ್ವೀ ಪದ್ಯ ಶೀರ್ಷಿಕೆಯ ಪದ್ಯವೇ ಆಗಿದೆ, ಮತ್ತು ಬಹುಕಾಲ ಕಾಡುತ್ತದೆ ಕೂಡ.
‘ನನಗೀಗ ಬೆಳಕಿನದೇ ಧ್ಯಾನ’ ಎಂದು ಪರಿತಪಿಸುವ ಸಿದ್ದು ದೇವರಮನಿ ‘ಬರುವ ನಾಳೆಗಳಿಗೆ ರಾತ್ರಿಗಳೇ ಇರುವುದಿಲ್ಲ’ ಎಂಬ ದೀರ್ಘ ಶೀರ್ಷಿಕೆಯ ಸಂಕಲನ ಪ್ರಕಟಿಸಿ ಪ್ರಖರ ಓಪನಿಂಗ್ ಪಡೆದುಕೊಂಡಿದ್ದಾರೆ. ಆರ್ತಗೊಂಡ ಮನಸ್ಸಿನ ಸಹಜ ಲಯದಲ್ಲಿ ಇಲ್ಲಿನ ಪದ್ಯಗಳು ಬೆಳೆದಿವೆ. ಷರೀಫಜ್ಜನನ್ನು ಗೋರಿಯಿಂದೇಳಿಸಿ ಯುದ್ಧಕ್ಕೆ ಸಿದ್ಧಗೊಂಡ ದೇಶಕ್ಕೆ ಕರೆದೊಯ್ಯುವ ಬಯಕೆಯ ಈ ಕವಿ ಅನ್ನಿಸಿದ್ದನ್ನೆಲ್ಲ ಕಾಗದಕ್ಕಿಳಿಸದೇ ಅವು ಸಾಂಧ್ರವಾಗುವವರೆಗೂ ಕಾದು ಬರೆದರೆ ಭವಿಷ್ಯದಲ್ಲಿ ಉತ್ತಮ ಕವಿತೆಗಳನ್ನು ಕೊಡಬಲ್ಲ ತಾಕತ್ತಿರುವವನು.
ಈಗಾಗಲೇ ಸಾರಸ್ವತ ಲೋಕಕ್ಕೆ ಚಿರಪರಿಚಿತರಾಗಿರುವ ಸಂತೆಬೆನ್ನೂರು ಫೈಜ್ನಟ್ರಾಜ್ ‘ಎದೆಯೊಳಗಿನ ತಲ್ಲಣ’ಗಳನ್ನೇ ಸಂಕಲಿಸಿ ಮೊದಲ ಕೃತಿ ಹೊರತಂದಿದ್ದಾರೆ. ಹುಡುಗೀ ನಿನ್ನ ಕಣ್ಣು ಕೊಳ/ಈಜುವಾಸೆ... ಮುಳುಗುವ ಭಯ ಎಂದು ಬರೆಯುವ ಕವಿ ಕವಿತೆಯಾಗು ಎಂದಿಗೂ ಕಥೆಯಾಗಬೇಡ ಎಂಬ ಎಚ್ಚರವನ್ನು ಇಟ್ಟುಕೊಂಡವರೂ ಆಗಿರುವದರಿಂದ ಮೊದಲ ಸಂಕಲನದ ಎಲ್ಲ ಪರಿಮಿತಿಗಳ ಜೊತೆಗೇ ಸಹ್ಯವೆನ್ನಿಸುತ್ತಾರೆ. ತೋಚಿದ್ದನ್ನೆಲ್ಲ ಗೀಚದೇ ಧ್ಯಾನಿಸಿದರೆ ತಲ್ಲಣಗಳಿಗೆ ತಹಬಂದಿ ನೀಡುವ ಉತ್ತರ ಈ ಕವಿಗೆ ಸಿಕ್ಕಾವು. ಆಗ ಅವರ ಪದ್ಯಗಳ ರೀತಿಯೂ ಬದಲಿಸೀತು.
‘ನಿಜಕ್ಕೂ ನಿನ್ನ ಕಾಡಿದ್ದು, ನೀ ಬೇಡಿದ್ದು ಅವನೊಬ್ಬನೇನೆ?/ನಿಜ ಹೇಳು ಮುಟ್ಟು ಮೈಲಿಗೆ ಬಸಿರು ಬಾಣಂತನ ಕಾಡಲಿಲ್ಲವೇ ನಿನ್ನ?/ನಿಜದ ಅರ್ಜುನರ ರಗಳೆ ದಾಟಲಿಕ್ಕೆ ಈ ‘ಚೆನ್ನ’ನೆಂಬೋ ಅರ್ಜುನ ನೀ ತಬ್ಬಿದ ದೋಣಿ ಮಾತ್ರವೇ?’ ಎಂದು ಕೇಳುವ ಧೈರ್ಯವಿರುವ ರಶ್ಮಿ ಹೆಗಡೆ ‘ಲೆಕ್ಕಕ್ಕೆ ಸಿಗದವರು’ ಸಂಕಲನದಲ್ಲಿ ‘ಒಳಗಿನ ಸದ್ದುಗಳು ಕಾಲನೆದುರು ಶೀಲ ಕಳೆದುಕೊಳ್ಳದಿರಲಿ’ ಎಂದೂ ಪ್ರಾರ್ಥಿಸುತ್ತಾರೆ. ‘ಎಷ್ಟು ಬೇಗ ಬಣ್ಣ ಬದಲಾಯಿಸುತ್ತವೆ-ಇಲ್ಲಿ ನಂಬುಗೆಗಳು/ಜಾತ್ರೆಯಿಂದ ಆಶೆಪಟ್ಟು ತಂದ-ಬಣ್ಣದ ಗೊಂಬೆಗಳು’ ಎಂಬ ವಾಸ್ತವ ಅರಿತಿರುವವರೂ ಆಗಿರುವುದರಿಂದ ಇವರ ಮುಂದಿನ ಕವಿತೆಗಳ ಬಗ್ಗೆ ಸಹಜ ಕುತೂಹಲ ಮತ್ತು ವಿಶ್ವಾಸವಿಟ್ಟುಕೊಳ್ಳಬಹುದೆಂದು ಅವರೇ ವಿಶ್ವಾಸ ಮೂಡಿಸುತ್ತಾರೆ.
‘ನಾನು ಗೆಲ್ಲುತ್ತೇನೆ’ ಎನ್ನುವ ಹೆಸರಿನ ಸಂಕಲನ ತಂದಿರುವ ಶ್ರೀದೇವಿ ಕೆರೆಮನೆ ಸಾಮಾನ್ಯ ಲಯ ಮತ್ತು ಪ್ರಾಸಗಳಲ್ಲೇ ಕವಿತೆಗಳನ್ನರಸುವವರು. ಹಾಗಾಗಿ ಅವರ ಪದ್ಯಗಳೆಲ್ಲ ಪ್ರಾಸದ ತ್ರಾಸದಲ್ಲಿ ಮೇಲುಸಿರು ಬಿಡುತ್ತವೆ. ದ್ರೌಪದಿ, ಮಂಥರೆ, ಗಾಂಧಾರಿ,ಊರ್ಮಿಳೆ, ಮಾಧವಿ .. . ಇವರ ಪದ್ಯಗಳಲ್ಲಿ ಬರುತ್ತಾರಾದರೂ, ಹಿರಿಯ ಕವಿಗಳ ಓದು ಮತ್ತು ಸುಲಭದಲ್ಲಿ ಪದ್ಯ ಬರೆಯಬಹುದೆನ್ನುವ ಭಾವ ಬದಲಾದರೆ ಇವರು ನಿಜದಕವಿತೆಗಳನ್ನೂ ಬರೆದಾರು.
ಮೂರೇ ಮೂರು ಸಾಲುಗಳಲ್ಲಿ ಅನುಭವವನ್ನು ಓದುಗನಿಗೆ ಹೇಗೆ ಯಶಸ್ವಿಯಾಗಿ ದಾಟಿಸಬಹುದೆಂಬುದಕ್ಕೆ ಹಾಯ್ಕುಗಳು ಪ್ರಕಾರ ಒಂದು ಉದಾಹರಣೆ. ಆದರೆ ಈಗಾಗಲೇ ಮಿನಿ-ಮಿಡಿಗಳ ಭರಾಟೆಯಲ್ಲಿ ಕನ್ನಡ ಕಾವ್ಯ ದೊರಕಿಸಿಕೊಂಡದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚು. ಟ್ಯಾಬ್ಲಾಯಿಡ್ ಹಾಗು ಗಂಭೀರ ಸಾಹಿತ್ಯ ಪ್ರೊಮೋಟ್ ಮಾಡಲು ಇಷ್ಟವಿಲ್ಲದ ಪತ್ರಿಕೆಗಳು ಮಿನಿ-ಮಿಡಿಗಳನ್ನು ಹಾಗೇ ಹಾಯ್ಕು ಎನ್ನುವ ಮೂರು ಸಾಲಿನ ಭಗವದ್ಗೀತೆಯನ್ನು ಪ್ರಕಟಿಸಿ ಅದನ್ನೊಂದು ಸಾಹಿತ್ಯ ಪ್ರಕಾರವಾಗಿ ಪೋಷಿಸುತ್ತಿವೆ. ಉಳಿದ ಜಾಗೆ ಭರ್ತಿಮಾಡಲಷ್ಟೇ ಬಳಸಬಹುದಾದ ಆ ಕ್ಷಣಕ್ಕೆ ಹಾಯ್ ಎನ್ನಿಸುವ ಇವು ಗಂಭೀರ ಓದಿಗೆ ರುಚಿಸುವುದಿಲ್ಲ. ‘ಮೂರು ಸಾಲು ಮರ’ ಎನ್ನುವ ಹಾಯ್ಕು ಸಂಕಲನ ಪ್ರಕಟಿಸಿರುವ ಡಾ.ಸಿ.ರವೀಂದ್ರನಾಥ್ ಒಟ್ಟುಗೂಡಿಸಿದ್ದರ ಅರ್ಧದಷ್ಟು ರಚನೆಗಳನ್ನು ಕೈ ಬಿಟ್ಟಿದ್ದಿದ್ದರೂ ಸಂಕಲನದ ಮೌಲ್ಯವೇನೂ ಕಡಿಮೆಯಾಗುತ್ತಿರಲಿಲ್ಲ.
ಇನ್ನು ಈ ವರ್ಷ ಪ್ರಕಟವಾದ ಅನುವಾದಗಳನ್ನು ಕುರಿತಂತೆ ಎರಡು ಮಾತು: ಮಿರ್ಜಾಗಾಲಿಬನನ್ನು ಕನ್ನಡಕ್ಕೆ ಬಗ್ಗಿಸಿ ಕೊಟ್ಟಿರುವ ಡಾ.ಎನ್.ಜಗದೀಶ್, ಕೊಪ್ಪ ಪುಸ್ತಕದ ಆಕೃತಿಗೆ ಕೊಟ್ಟ ಗಮನವನ್ನು ತರ್ಜುಮೆಗೆ ಕೊಡದ ಕಾರಣ (ಅವರು ಇಂಗ್ಲಿಷ್ ಮೂಲಕ ಅನುವಾದಿಸಿದ್ದಾರೆ) ಈಗಾಗಲೇ ಪರಿಚಿತನಾಗಿರುವ ಗಾಲೀಬ್ ಹೊಸದೇನನ್ನೂ ಇಲ್ಲಿ ಹೇಳುತ್ತಿಲ್ಲ. ಆದರೂ ಗಾಲೀಬ ಮತ್ತು ಅಂದಿನ ಸಾಮಾಜಿಕ ಸ್ಥಿತಿಗತಿಗಳ ಕುರಿತಂತೆ ಅವರು ಕೊಟ್ಟಿರುವ ಟಿಪ್ಪಣಿ ಗಾಲೀಬನ ಗಜಲುಗಳ ಕನ್ನಡ ಅವತರಿಣಿಕೆಗೆ ಮೂಲ ಉರ್ದುವನ್ನೇ ಆಶ್ರಯಿಸಿದರೆ ಒಳ್ಳೆಯದೊಂದು ಕೆಲಸ ಮಾಡಬಹುದೆಂಬುದರ ಸೂಚನೆಯಾಗಿದೆ.
ಸ್ಪ್ಯಾನಿಷ್ ಭಾಷೆಯಲ್ಲಿ ತನ್ನ ಪದ್ಯಗಳನ್ನು ಪ್ರಕಟಿಸಿದ್ದ ಪಾಬ್ಲೊ ನೆರೂದ ಜಗತ್ತಿನ ಬಹುತೇಕ ಎಲ್ಲ ಭಾಷೆಗಳಿಗೂ ಅನುವಾದಗೊಂಡಿದ್ದಾನೆ. ಸ್ಪ್ಯಾನಿಶ್‌ನಿಂದ ಇಂಗ್ಲಿಷ್‌ಗೆ ಆಮೇಲೆ ಇತರೆ ಭಾಷೆಗಳಿಗೆ ಇವು ಬರುವುದರಿಂದಾಗಿ ಮೂಲ ಸಾಂಸ್ಕೃತಿಕ ಒತ್ತಡಗಳು ಅನುವಾದಕನ ಅಭೀಪ್ಸೆಗೆ ತಕ್ಕಂತೆ ಬದಲಾಗುತ್ತಲೇ ಹೋಗುತ್ತದೆ. ಇದು ಎಲ್ಲ ಅನುವಾದಕರನ್ನೂ ಕಾಡಿದ ಕಷ್ಟ ಮತ್ತು ಸವಾಲು. ಜ.ನಾ.ತೇಜಶ್ರೀ ‘ಕಡಲ ತಡಿಯ ಗುಡಾರ’ಅನುವಾದಿಸಿದ್ದಾರೆ ಅನ್ನುವುದಕ್ಕಿಂತ ರೂಪಾಂತರಕ್ಕೆ ಪ್ರಯತ್ನಿಸಿದ್ದಾರೆ ಎನ್ನುವುದು ಸೂಕ್ತ. ನೆರೂದನ ರಾಜಕೀಯ ಮತ್ತು ಕ್ರಾಂತಿ ಕುರಿತ ಪದ್ಯಗಳನ್ನು ಬಿಟ್ಟು ಅವನ ಸಾನೆಟ್ಟುಗಳನ್ನು ಮತ್ತು ಪ್ರೇಮ ಕವಿತೆಗಳನ್ನು ಅನುವಾದಕಿ ಆಯ್ಕೆಮಾಡಿಕೊಂಡ ರೀತಿ ಸೊಗಸೆನ್ನಿಸುತ್ತದೆ. ಪುಸ್ತಕ ವಿನ್ಯಾಸವೂ ಹಿತವಾಗಿದೆ. ಕನ್ನಡದಲ್ಲಿ ಬೆರಳೆಣಿಕೆಗೆ ಸಿಗುತ್ತಿದ್ದ ಪ್ರಕಾಶಕರ ಸಂಖ್ಯೆ ಗಣನೀಯವಾಗಿ ಏರಿರುವುದನ್ನು ಗಮನಿಸಲೇಬೇಕು.
ಹಿಂದಿ ಸಿನಿಮಾದ ಹಾಡುಗಳನ್ನೂ ಸೇರಿದಂತೆ ಕೈಫಿ ಆಜ್ಮಿಯವರ ಗಜಲುಗಳು ಮತ್ತು ಕವಿತೆಗಳನ್ನು ‘ಬೆತ್ತಲೆ ರಸ್ತೆಯ ಕನಸಿನ ದೀಪ’ ಎನ್ನುವ ಹೆಸರಲ್ಲಿ ದಿ.ವಿಭಾ ತಿರಕಪಡಿ ಅನುವಾದಿಸಿದ್ದನ್ನು ಇದೀಗ ಲಡಾಯಿ ಪ್ರಕಾಶನ ಪ್ರಕಟಿಸಿ ಅನುವಾದಕಿಗೆ ಹಾಗೇ ಮೂಲಕ್ಕೆ ಗೌರವ ತಂದಿದೆ. ಅಪ್ಪಟ ಕನ್ನಡದವೇ ಅನ್ನಿಸುವ ಇಲ್ಲಿನ ಪದ್ಯಗಳು ಗತಿಸಿದ ಅನುವಾದಕಿಯ ನೆನಪನ್ನು ಹಾಗೂ ಆಕೆಯ ಆಯ್ಕೆಯ ರುಚಿಯನ್ನೂ ತೆರೆದಿಡುತ್ತವೆ.
ಅನಂತಮೂರ್ತಿ ಏನು ಮಾಡಿದರೂ ಸುದ್ದಿಯಾಗುವುದಷ್ಟೇ ಅಲ್ಲ ಅಲ್ಲೊಂದು ಹೊಸತನ ಇರುತ್ತದೆ. ಅವರ ‘ಶತಮಾನದ ಕವಿ ರಿಲ್ಕೆ’ ಪುಸ್ತಕ ಕೂಡ ಈ ಮಾತಿಗೆ ನಿದರ್ಶನ. ಈಗಾಗಲೇ ಬ್ರೆಕ್ಟ್, ಯೇಟ್ಸ್ ಮುಂತಾದವರನ್ನು ಕನ್ನಡಕ್ಕೆ ಸಮರ್ಥವಾಗಿ ಪರಿಚಯಿಸಿರುವ ಅವರು ಈ ಸಂಕಲನದಲ್ಲಿ ಬರಿಯ ರಿಲ್ಕೆ ಕವಿತೆಗಳನ್ನಲ್ಲದೇ ರಿಲ್ಕೆಯ ತಂತುಗಳನ್ನು ತಮ್ಮ ಸ್ವಂತದ ಕವಿತೆಗಳಲ್ಲೂ ಕಾಣಿಸಿದ್ದಾರೆ. ಜೊತೆಗೆ ಅನುವಾದವೆನ್ನುವ ಮಹಾಯಜ್ಞದಲ್ಲಿ ಅವರು ಅನುಸರಿಸಿದ ವಿಧಾನವನ್ನು ಟಿಪ್ಪಣಿಸಿ (ಓ.ಎಲ್.ಎನ್ ಅವರ ಟಿಪ್ಪಣಿಯೂ ಸೇರಿದಂತೆ ಪ್ರಕಟಿಸಿ) ಇತರ ಅನುವಾದಕರಿಗೆ ಮಾದರಿಯೂ ಆಗಿದ್ದಾರೆ.
ಹೃದಯ ಬುದ್ಧಿಗಳನ್ನು ಏಕಕಾಲದಲ್ಲಿ ಆವರಿಸಿಕೊಳ್ಳುವ ‘ಕವಿ ಸಮಯ’ ಈ ಹೊತ್ತಿನ ದಂದುಗಗಳಲ್ಲಿ ಸಿಕ್ಕದಿರುವಂಥದು. ಹಳಬರೆಲ್ಲ ತಮಗೆ ಸಿದ್ಧಿಸಿದ ಹಾದಿಯಲ್ಲಿ ಅಲ್ಲೇ ಗಿರಕಿ ಹೊಡೆಯುತ್ತ, ಮತ್ತೆ ಮತ್ತೆ ಅವವೇ ಪ್ರತಿಮೆ ರೂಪಕಗಳಲ್ಲಿ ಅವರದೇ ಮಾದರಿಗಳಲ್ಲಿ ಮುಂದುವರೆಯುತ್ತಿರುವಾಗ ಹೊಸಬರಂತೂ ನಿಶ್ಯಕ್ತ ಸಾಲುಗಳಲ್ಲಿ ನಿಲ್ಲಲೂ ಆಗದಂಥ ಸ್ಥಿತಿಯಲ್ಲಿದ್ದಾರೆ. ತತ್ವ ಸಿದ್ಧಾಂತಗಳ ಚಾಣಾಕ್ಷ ಹೆಣಿಗೆಯನ್ನೇ ಕಾವ್ಯವೆಂದು ನಂಬಿರುವ ಕವಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಈ ವರ್ಷ ಪ್ರಕಟವಾದ ಕವನ ಸಂಕಲನಗಳ ಜೊತೆಗೇ ಪ್ರಕಟವಾದ ಅನುವಾದಗಳು ಹೇಗೆ ನಮ್ಮನ್ನು ಶ್ರೀಮಂತಗೊಳಿಸಿವೆ ಎನ್ನುವ ಬೆರಗನ್ನಷ್ಟೇ ನಿಮ್ಮೊಂದಿಗೆ ಹಂಚಿಕೊಳ್ಳುತ್ತ (ಈ ವರ್ಷ ಪ್ರಕಟವಾದ ಸಂಕಲನಗಳ ಪ್ರಾತಿನಿಧಿಕ ಅಂಶಗಳನ್ನಿಟ್ಟುಕೊಂಡು ಆಲೋಚಿಸಹೋದರೆ ಅದೇ ಒಂದು ಪ್ರೌಢ ಪ್ರಬಂಧಕ್ಕಾಗುವ ವಸ್ತು ಎನ್ನಿಸಿದ್ದರಿಂದ ಪುಟಮಿತಿಯ ಕಾರಣದಿಂದಾಗಿ ಇದಕ್ಕಿಂತ ಹೆಚ್ಚು ಹೇಳುವುದು ಸಾಧ್ಯವಾಗುತ್ತಿಲ್ಲ) ಈ ಲೇಖನವನ್ನು ಪರಿಸಮಾಪ್ತಿಗೊಳಿಸುತ್ತಿದ್ದೇನೆ.
(ಋಣ: ಸಂಚಯ ಸಾಂಸ್ಕೃತಿಕ ಪತ್ರಿಕೆ ಸಂಚಿಕೆ ೮೪)