ಒಟ್ಟು ಪುಟವೀಕ್ಷಣೆಗಳು

ಗುರುವಾರ, ನವೆಂಬರ್ 29, 2012

ಕನಸು ಕೂರಿಗೆಯ ಕಣ್ಣು

ಕೃತಿಯೆನ್ನುವುದು
ಕಲಾವಿದನ ಮನ-
ಸ್ಸಿನ ಕನ್ನಡಿ,
ಒಳಗೇ ಉಳಿದ ಉಮ್ಮಳಗಳಿಗೊಂದು ರೂಪ
ಕೊಡಲೆಂದೇ ಕವಿ ಬರೆದ ಕವಿತೆಯ ಸಾಲು,
ತನ್ನೊಳಗನ್ನೇ ತೆರೆತೆರೆದು ತೋರಿಸುವ ಗಾಯಕ.
ಶ್ರೋತೃವಿನ ಮನಸ್ಸಿನ ಆಳಕ್ಕೆ ಇಳಿದಂತೆ;
ನೂರೆಂಟು ಬಣ್ಣಗಳ ಲೋಕ ವ್ಯಾಪಾರದ ನಡುವೆ
ಚಿತ್ತಾಪಹಾರೀ ಕಾಣ್ಕೆಗೆ ತುಡಿಯುವುದು
ಇರುವುದು ಸತತ, ಕಂಗೆಟ್ಟ ಮನಸ್ಸು-
ಗಳ ಕಳವಳವಕ್ಕಷ್ಟು ಸಮಾಧಾನ, ಸೋತು
ಕೂತವರಿಗೆ ಕೊಂಚ ಸಾಂತ್ವನದ ಮಾತು.
ಲಲಿತ ಕಲೆಯೆಂದರೆ ಕ್ಷಣ ಭಂಗುರಕ್ಕೊಂದು ಅಲ್ಪ ವಿರಾಮ.
ಕಟ್ಟು ಹಾಕಿ ಬಂಧಿಸಿರುವ ಚಿತ್ರಗಳಲ್ಲಂತೂ
ನಿಷ್ಕರ್ಷಕ್ಕೆ ಸಿಲುಕುವ ಪಲುಕಗಳನ್ನಿತ್ತು
ಸೌಂದರ್ಯೋಪಾಸನೆಯ ಮಾತುಗಳನ್ನಾಡಬಹುದು
ಚಿತ್ತ ಭಿತ್ತಿಯ ಮೇಲೆ ಸಾಲು ಸಾಲು ಅಸ್ಪಷ್ಠ ಚಿತ್ರಗಳ-
ಮೆರವಣಿಗೆ, ಮಾಸಲು ಬಣ್ಣಗಳಭಿಷೇಕ
ಸ್ಪರ್ಶಕ್ಕಷ್ಟೇ ಸಿಲುಕುವ ಸೂಕ್ಷ್ಮಗಳನ್ನೇನು ಮಾಡಬೇಕು?
ಅನುಭೂತಿಯೆಂದರೆ ದೌರ್ಬಲ್ಯವೆನ್ನುವ ವಾದ-
ಕ್ಕೆ ಮನದ ಮೂಲೆ ಮೂಲೆಯ ಪರಿಮಳದ ಗಂಧ
ಮೂಗಿಗಡರುವುದಿಲ್ಲ, ಗಾಳಿತೊನೆದತ್ತಲೇ ಅದರ ನಿತ್ಯ ಪಯಣ.
ಧರೆಗಿಳಿಯುತ್ತಿದ್ದಭಿಸಾರಿಕೆಯ ಸಂಗಕ್ಕೆ ಮಧು-ಚಂದ್ರ
ದ ಬಣ್ಣವೇ ಬದಲಾಗಿರುವ ಸತ್ಯದ ಮುಂದೆ
ಆರು* ಕಟ್ಟುವ ಕನಸು ಮಣ್ಣು ಪಾಲು-
ಅಂತ ಗೊತ್ತಿದ್ದರೂ ಮತ್ತೆ ಮತ್ತೆ ತುಡಿಯುವಾತ್ಮಕ್ಕೆ
ಬಯಲ ಮೋಹವ ಬಿಡದ ಸುರತದಾಸೆ, ಶಾಶ್ವತ-
ದ ಸಾವಿರದ ಕನಸ ಕೂರಿಗೆ*ಯ ಸಣ್ಣ ಕಣ್ಣು!

ಆರು= ಭೂಮಿ ಹದ ಮಾಡುವ ಕ್ರಿಯೆ, ಅರಿಷಡ್ವರ್ಗ
ಕೂರಿಗೆ= ಬೀಜ ಬಿತ್ತುವ ಉಪಕರಣ
(ವಿಜಯ ಕರ್ನಾಟಕ ದೀಪಾವಳಿ ವಿಶೇಷಾಂಕ 2012 ರಲ್ಲಿ ಪ್ರಕಟಿತ ಕವಿತೆ)

ಭಾನುವಾರ, ಅಕ್ಟೋಬರ್ 21, 2012

“ಚಿಲ್ಲರೆ ಅಂಗಡಿಯ ಸಗಟು ಪುರಾಣ!”



ದೇಶೀಯ ಚಿಲ್ಲರೆ ವ್ಯಾಪಾರದಲ್ಲಿ ಹೊರ ದೇಶಗಳು ಬಂಡವಾಳ ಹೂಡುವ ಕುರಿತಂತೆ ಆರ್ಥಿಕ ವಲಯದಲ್ಲಿ ಎದ್ದಿರುವ ಅಲ್ಲೋಲ ಕಲ್ಲೋಲಗಳ ಸಮಗ್ರ ವಿವರ ನಿಮಗೆಲ್ಲರಿಗೂ ಗೊತ್ತಿರುವ ಜ್ವಲಂತ ವಿಷಯ. ಹೇಳೀ ಕೇಳೀ ಹೆಸರಲ್ಲೇ ‘ಚಿಲ್ಲರೆ’ ಇರುವ ವ್ಯಾಪಾರದಲ್ಲಿ ‘ಸಗಟು’ವ್ಯವಹಾರಸ್ಥರಾದ ವಿದೇಶೀ ಬಂಡವಾಳಿಗರಿಗೇನು ಲಾಭ ಇರುತ್ತೆ ಅನ್ನುವ ಉಡಾಫೆ ನನ್ನಲ್ಲಿತ್ತು. ಆದರೆ ಯಾವಾಗ ಮಹಾನಗರಗಳ ದೊಡ್ಡ ದೊಡ್ಡ ಶಾಪಿಂಗ್ ಮಾಲುಗಳನ್ನೂ, ಬಿಗ್ ಬಜಾರುಗಳನ್ನೂ ಗಮನಿಸಿದೆನೋ ಆಗ ಯಾಕೆ ಅವರೆಲ್ಲ ಚಿಲ್ಲರೆ ವ್ಯಾಪಾರದಲ್ಲಿ ಬಂಡವಾಳ ಹಾಕಲು ಸಿದ್ಧರಿದ್ದಾರೆಂದು ತಿಳಿಯಿತು. ನನಗೂ ನಿಮಗೂ ಇದು ಹೊಳೆಯುವುದಕ್ಕೂ ಮೊದಲೇ ಅಮೆರಿಕದವರಿಗೆ, ಮತ್ತು ಆ ದೇಶದ ವಾಲ್ ಮಾರ್ಟ್ ಅನ್ನೋ ಕಂಪನಿಗೆ ಈ ಚಿಲ್ಲರೆ ವ್ಯಾಪಾರದ ಮೂಲಕವೇ ನಮ್ಮ ವ್ಯವಹಾರ ವಹಿವಾಟನೆಲ್ಲ ನಿಯಂತ್ರಿಸಬಹುದೆನ್ನುವ ಸತ್ಯ ಗೊತ್ತಿರುವುದರಿಂದಲೇ ಈ ಸಿಂಗ್,ಚಿದು,ಮುಖರ್ಜಿಗಳನ್ನೆಲ್ಲ ಸರಿಮಾಡಿಕೊಂಡು ಇಲ್ಲಿ ಚಿಲ್ಲರೆ ವ್ಯಾಪಾರ ಶುರು ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ.

ಹೆಚ್ಚು ಕಡಿಮೆ ಒಂದು ಕೋಟಿ ಸಂಖ್ಯೆಯಲ್ಲಿ ನಮ್ಮ ದೇಶದುದ್ದಗಲಕ್ಕೆ ಈ ಚಿಲ್ಲರೆ ಅಂಗಡಿಗಳಿವೆ ಅಂತ ಒಂದು ವರದಿ ಇದೆ. ಅನುಮಾನ ಬಂದರೆ ನಿಮ್ಮ ಮನೆ ಸುತ್ತಮುತ್ತ ಇರೋ ಚಿಲ್ಲರೆ ಅಂಗಡಿಗಳನ್ನು ಮನಸ್ಸಲ್ಲೇ ಲೆಕ್ಕ ಹಾಕಿ. ತರಕಾರಿ ಮಾರೋ ಅಂಗಡಿ, ಅದರ ಪಕ್ಕದಲ್ಲೇ ದಿನಸಿ ಅಂಗಡಿ, ಅದರಾಚೆ ಬಿಸ್ಕತ್ತು, ಚಾಕಲೇಟು, ಸಿಗರೇಟು, ಬೀಡಿ ಮಾರುವ ಅರ್ಥಾತ್ ಪೆಟ್ಟಿ ಅಂಗಡಿ, ಅದರ ಪಕ್ಕಕ್ಕೇ ಬೇಕರಿ, ಅದರಾಚೆ ಪಾನ್ ಶಾಪ್, ಬಸ್ ಸ್ಟಾಂಡ್‌ಸಂಕೀರ್ಣದಲ್ಲಿರುವ ದೊಡ್ಡ ದಿನಸಿ ಅಂಗಡಿ. ಒಂದೇ, ಎರಡೇ ಲೆಕ್ಕಕ್ಕೇ ಸಿಕ್ಕದೇ ಕೋಟಿ ಕೋಟಿ ವ್ಯವಹಾರ ನಡೆಸುವ ಉದ್ದಿಮೆ ಈ ಚಿಕ್ಕ ಪುಟ್ಟ ಅಂಗಡಿಗಳದ್ದು. ಅಂದರೆ ಒಟ್ಟೂ ಅಂಗಡಿಗಳ ಸಂಖ್ಯೆ ಕೋಟಿಯಲ್ಲ ಅದರಾಚೆಯೂ ದಾಟಬಹುದು. ಇದನ್ನೆಲ್ಲ ಕೂತಲ್ಲೇ ಲೆಕ್ಕ ಹಾಕಿದ ವಾಲ್ ಮಾರ್ಟ್ ಒಂದರ್ಥದಲ್ಲಿ ಈ ದೇಶದ ಬೆನ್ನೆಲುಬಾಗಿ  ಆರ್ಥಿಕ ವ್ಯವಹಾರ ನಡೆಸುತ್ತಿರುವ ಚಿಲ್ಲರೆ ವ್ಯಾಪಾರಕ್ಕೇ ಕೊಡಲಿ ಪೆಟ್ಟು ನೀಡಲು ಸಜ್ಜಾಗಿ ನಿಂತಿದ್ದರೆ, ನಮ್ಮ ಹಿತ ಕಾಪಾಡಬೇಕಿದ್ದ ಸರ್ಕಾರವೇ ಅಮೆರಿಕದವರ ಕೊಡಲಿಗೆ ಸಾಣೆ ಹಿಡಿಸಿ ಕೊಡುತ್ತಿದೆ.

ಬೆಂಗಳೂರಿನಂಥ ಪಟ್ಟಣದಲ್ಲಿ ಆರ್ಥಿಕವಾಗಿ ಸಧೃಢವಾಗಿರುವವರಿಗೆ ಈ ಶಾಪಿಂಗ್ ಮಾಲುಗಳೂ, ಅವರ ವಿಶಿಷ್ಠತೆಗಳೂ, ಅವರು ಕೊಡ ಮಾಡುವ ಡಿಸ್ಕೌಂಟ್ ಇತ್ಯಾದಿಗಳೆಲ್ಲ ಆಕರ್ಷಿಸಬಹುದು. ಆದರೆ ನಾವು ಹೇಳಿದ ಸಾಮಾನನ್ನೆಲ್ಲ ಜತನವಾಗಿ ಪ್ಯಾಕ್ ಮಾಡಿ ಪಟ್ಟಿ ಬರೆದು ಲೆಕ್ಕದ ಪುಸ್ತಕದಲ್ಲಿ ಗುರುತು ಹಾಕಿ ತಿಂಗಳಿಗೊಮ್ಮೆ ನಾವು ಕೊಟ್ಟಷ್ಟನ್ನು ಜಮಾ ತೆಗೆದುಕೊಳ್ಳುವ ನಮ್ಮೂರಿನ ಶೆಟ್ಟರ ಅಂಗಡಿಗೆ ಯಾವ ಮಾಲ್ ಅಥವ ಸೂಪರ್ ಸ್ಟೋರ್ಸ್ ಸಮನಾಗಲು ಸಾಧ್ಯವೇ ಇಲ್ಲ. ನಮ್ಮ ಮನೆಯ ಸುಖ ದುಃಖಗಳು, ಸಾವು ನೋವುಗಳು, ಸಂಬಂಧ ಆಚರಣೆಗಳು ನಮ್ಮೂರಿನ ಚಿಲ್ಲರೆ ಅಂಗಡಿಯ ಶೆಟ್ಟರಿಗೆ ಗೊತ್ತಿರುತ್ತಿದ್ದರಿಂದ ಅವರೆಂದೂ ವ್ಯಾಪಾರವನ್ನು ವ್ಯವಹಾರವನ್ನಾಗಿ ಪರಿಗಣಿಸಲೇ ಇಲ್ಲ.  ನೀವು ಆಫೀಸಿಗೆ ಹೋಗುವ ಹಾಗೆ ನಾನು ಅಂಗಡಿಯಲ್ಲಿ ಕೂರುತ್ತೇನೆ ಅನ್ನುವ ತರ್ಕ ಅವರದ್ದಾಗಿತ್ತು. ಅಕ್ಕಿಯಲ್ಲಿ ಹುಳು ಬಂದಿದ್ದರೆ, ಕಡಲೆ ಹಿಟ್ಟು ಕಹಿಯಾಗಿದ್ದರೆ, ದುಸರಾ ಮಾತಿಲ್ಲದೆ ಬೇರೆ ಪದಾರ್ಥ ಕೊಟ್ಟೋ ಅಥವ ವಾಪಾಸು ಪಡೆದುಕೊಂಡೋ ಸಂಬಂಧ ಕಾಪಾಡಿಕೊಳ್ಳುತ್ತಿದ್ದರು. ಈ ಸೂಪರ್ ಮಾರ್ಕೆಟ್ಟಿನವರು ಕೊಟ್ಟ ಸಾಮಾನು ಬದಲಿಸಲೋ ವಾಪಾಸು ಮಾಡಲೋ ಪ್ರಯತ್ನಿಸಿ ನೋಡಿ, ಆಗಷ್ಟೇ ನಿಮಗೆ ನಿಮ್ಮೂರಿನ ಚಿಲ್ಲರೆ ಅಂಗಡಿಯ ಮಹತ್ವ ಗೊತ್ತಾಗುತ್ತದೆ.

ಹಾಗೆ ನೋಡಿದರೆ ಸಣ್ಣಪುಟ್ಟ ಊರುಗಳ ಆರ್ಥಿಕ ಸಮೀಕ್ಷೆ ನಡೆಸಬೇಕಿದ್ದರೆ ಆಯಾ ಊರಿನ ಚಿಲ್ಲರೆ ಅಂಗಡಿಗಳ ವ್ಯಾಪಾರ ಸಾಮರ್ಥ್ಯ ಅಳೆದರೆ ಸಾಕು, ಆರ್ಥಿಕ ಸಮೀಕ್ಷೆಯನ್ನು ಸಲೀಸಾಗಿ ಮುಗಿಸಿಬಿಡಬಹುದು. ಜೊತೆಗೆ ಬೇಕಿರುವುದಕ್ಕಿಂತ ಬೇಡದ ಸಾಮಾನನ್ನೇ ಸ್ಕೀಂ ಹೆಸರಲ್ಲಿ ಮಾರುವ ಸೂಪರ್ ಸ್ಟೋರ್ಸ್‌ಗಳಿಗಿಂತಲೂ ಇವು ಭಿನ್ನ. ಆಯಾ ಊರಿನ ಅಗತ್ಯಕ್ಕನುಗುಣವಾಗಿ, ಆಯಾ ಪ್ರಾದೇಶಿಕ ಸಂಸ್ಕೃತಿಗೆ ಅನುಗುಣವಾಗಿ ಚಿಲ್ಲರೆ ಅಂಗಡಿಗಳ ಮೆನು ಇರುತ್ತದೆ. ದಿನಸಿ ಪದಾರ್ಥಗಳ ಜೊತೆ ಜೊತೆಗೇ ತಲೆನೋವಿನ ಮಾತ್ರೆ, ನಿಂಬೆಹಣ್ಣು, ನಿಂಬುಪ್ಪು, ಚಳ್ಳೆಹುರಿ, ಲಾಟೀನು ಬತ್ತಿ, ಶೇವಿಂಗ್ ಸೋಪು, ಬ್ಲೇಡು ಇತ್ಯಾದಿ ವಸ್ತುಗಳನ್ನೆಲ್ಲ ಈ ಅಂಗಡಿಗಳು ಬೇಕಾದ ಕೂಡಲೇ ಅಗತ್ಯವಿದ್ದವರಿಗೆ ಪೂರೈಸುತ್ತವೆ. ನಗದಿಗಿಂತಲೂ ಉದ್ದರಿಯ ವ್ಯಾಪಾರವೇ ಬಹುತೇಕ ಜಾಸ್ತಿ. ಕೊಬ್ಬರಿ ಸುಲಿಸಿದಾಗ, ಮಗ ಮನಿಯಾರ್ಡರು ಕಳಿಸಿದಾಗ, ವರ್ಷದ ಬೆಳೆ ಬಂದಾಗಷ್ಟೇ ಹಳೆ ಸಾಲ ಚುಕ್ತಾ. ಮತ್ತೆ ಹೊಸ ಸಾಲ. ಒಂದರ್ಥದಲ್ಲಿ ಓವರ್ ಡ್ರಾಫ್ಟ್.

ಈ ಎಲ್ಲ ವಿವರ ಅಂದರೆ ಪುಟ್ಟ ಪೆಟ್ಟಿಗೆ ಅಂಗಡಿಯಲ್ಲಿ ಚಿಲ್ಲರೆಯಾಗಿ ವ್ಯಾಪಾರವಾಗುವ ಒಟ್ಟೂ ವ್ಯವಹಾರದ ಅಂದಾಜು ಅಮೆರಿಕದವರು ಲೆಕ್ಕ ಹಾಕಿ, ಈ ಕ್ಷೇತ್ರವನ್ನೇ ವಶಪಡಿಸಿಕೊಳ್ಳಲು ಹೊರಟಿರುವುದು. ಹಾಗಾದಾಗ ಏನಾಗಬಹುದೆಂದು ಊಹಿಸಿದರೆ ಭಯವಾಗುತ್ತದೆ. ಏಕೆಂದರೆ ಕಷ್ಟ ಕಾರ್ಪಣ್ಯಗಳ ಸಂದರ್ಭಗಳಲ್ಲಿ ದಿನಸಿಯ ಜೊತೆ ನಗದನ್ನೂ ಸಾಲವಾಗಿ ಕೊಡುವ ನಮ್ಮ ಪೆಟ್ಟಿಗೆ ಅಂಗಡಿಗಳವರ ಉದಾರತೆ ಈ ಅಮೆರಿಕದ ವಾಲ್ ಮಾರ್ಟಿಗೆಲ್ಲಿಂದ ಬರಬೇಕು? ಅಲ್ಲದೇ ನಮ್ಮ ಹಬ್ಬ ಹರಿದಿನಕ್ಕೆ, ತಿಥಿ, ವಾರ ನಕ್ಷತ್ರಗಳ ವಿಶೇಷತೆಯ ಆಚರಣೆಗೆ ಬೇಕಾದ ಸಾಮಾನು- ಸರಂಜಾಮುಗಳ ವಿವರ ಅದಕ್ಕೆಲ್ಲಿ ದಕ್ಕಬೇಕು? ಒಂದು ವೇಳೆ ದೇಶೀ ಅಗತ್ಯಗಳನ್ನು ಅರ್ಥಮಾಡಿಕೊಂಡು ಆ ಸೌಲಭ್ಯಗಳನ್ನೆಲ್ಲ ಒದಗಿಸಿದರೂ, ಮೂಲತಃ ಲಾಭದ ಉದ್ದೇಶವನ್ನೇ ಇಟ್ಟುಕೊಂಡಿರುವ ಅಂಥ ಕಂಪನಿಗಳು ವರ್ಷದುದ್ದಕ್ಕೂ ಅವನ್ನೆಲ್ಲ ಮಾರುತ್ತ ಕೂತರೆ, ಅಂಥ ವಿಶಿಷ್ಠ ಆಚರಣೆಗಳ ಅರ್ಥವಾದರೂ ಹ್ಯಾಗೆ ಉಳಿಯಕ್ಕೆ ಸಾಧ್ಯ? ಅದೆಲ್ಲ ಇರಲಿ, ಓದು ತಲೆಗೆ ಹತ್ತದೆ, ಸೊಂಟ ಬಗ್ಗಿಸಿ ಹೊಲ ಗದ್ದೆಗಳಲ್ಲಿ ಗೇಯದ ಶೋಕೀಲಾಲರಿಗೆಲ್ಲ ಸಂತ್ರಸ್ತ ಸಲಹಾ ಕೇಂದ್ರಗಳಾಗಿದ್ದ ಈ ಚಿಲ್ಲರೆ ಅಂಗಡಿಗಳ ವ್ಯವಹಾರ ವಿದೇಶಿಯರ ಪಾಲಾದರೆ ನಮ್ಮ ಹುಡುಗರ ಪಾಡೇನು?

ನಮ್ಮೂರಿನ ಹೈಕಳಿಗೆ ಸರ್ಕಾರೀ ಕಛೇರಿಗಳ ಗುಮಾಸ್ತಿಕೆ, ಬೇಸಾಯ, ಕೂಲಿ, ಚಿಕ್ಕಪುಟ್ಟ ಕಂಟ್ರಾಕ್ಟು ಬಿಟ್ಟರೆ ಉಳಿದಂತೆ ಕೈ ಹಿಡಿಯುತ್ತಿದ್ದ ಉದ್ಯೋಗವೆಂದರೆ ಚಿಲ್ಲರೆ ಅಂಗಡಿ ನಡೆಸುವುದು. ಓದು ತಲೆಗೆ ಹತ್ತದೇ ಅಥವ ವ್ಯವಹಾರವೇ ಸಲೀಸು ಅಂದುಕೊಂಡು ಬಡ್ಡಿಗೆ ದುಡ್ಡು ಕೊಡುವವರಿಗೆ ಕೂತುಕೊಳ್ಳಲೊಂದು ಜಾಗ ಮತ್ತು ಮಾಡಲೊಂದು ಉದ್ಯೋಗವೆಂಬಂತೆ ಈ ಚಿಲ್ಲರೆ ಅಂಗಡಿಗಳು. ಮತ್ತೂ ಕೆಲವೊಮ್ಮೆ ಪಿಯುಸಿಯಲ್ಲೇ ಪ್ರೇಮ ಪ್ರಕರಣ ನಡೆಸಿ, ಮದುವೆಯೂ ಆದ ಸಾಹಸಿಗಳಿಗೆ ಕೈ ಹಿಡಿದು ಬದುಕು ರೂಪಿಸುತ್ತಿದ್ದವು ಈ ಚಿಲ್ಲರೆ ಅಂಗಡಿಗಳೇ! ಹೆಚ್ಚು ಬಂಡವಾಳ ಬೇಡದ ಆದರೆ ಜನರೊಂದಿಗಿನ ಒಡನಾಟವೇ ಮುಖ್ಯವಾದ ಈ ಉದ್ಯೋಗ ಎಲ್ಲರಿಗೆ ಒಲಿಯುವುದೂ ಕಡಿಮೆ. ಇವತ್ತಿದ್ದ ಅಂಗಡಿ ನಾಳೆ ಮಾಯವಾಗುವುದೂ ಈ ಕಾರಣಕ್ಕೇ. ದೊಡ್ಡ ದೊಡ್ಡ ಮಂಡಿ ವರ್ತಕರಿಂದ ಸಾಮಾನು ಸರಂಜಾಮುಗಳನ್ನು ವಾರದ ಲೆಕ್ಕದಲ್ಲಿ ಸಾಲವಾಗಿ ಪಡೆದು ಸ್ಥಾಪಿತವಾಗುವ ಪೆಟ್ಟಿಗೆ ಅಂಗಡಿಗಳು ಮುದೊಂದು ದಿನ ಧೀರುಭಾಯಿ ಅಂಬಾನಿಯಂಥವರ ಇತಿಹಾಸ ಬರೆದಿರುವುದೂ ಸುಳ್ಳಲ್ಲ.

ಚಿಲ್ಲರೆ ದಿನಸಿ ಅಂಗಡಿ ಪ್ರಾರಂಭಿಸುವುದು ಅಂದರೆ ಮಳಿಗೆಯೊಂದನ್ನು ಬಾಡಿಗೆ ಪಡೆಯುವುದು, ಅದಕ್ಕೆ ಶೆಲ್ಪುಗಳನ್ನು ಮಾಡಿಸುವುದು, ಸಕ್ಕರೆ, ಅಕ್ಕಿ, ಗೋಧಿಹಿಟ್ಟಿನಿಂದ ಹಿಡಿದು, ಶ್ಯಾಂಪು, ಸೋಪು, ಪೇಶ್ಟು, ಗುಟ್ಕಾ, ನವರತ್ನ ಎಣ್ಣೆಯವರೆಗೆ ಎಲ್ಲ ಪ್ಲಾಸ್ಟಿಕ್ ಸರಗಳನ್ನೂ ಬಂದವರ ಕಣ್ಣಿಗೆ ಕಾಣುವಂತೆ ನೇತು ಹಾಕುವುದು, ಕ್ಯಾಷ್ ಟೇಬಲ್ಲಿನ ಮೇಲೆ ಮನೆದೇವರ ಫೋಟೋ ಹಾಕಿಸಿ, ಆ ಟೇಬಲ್ಲಿಗೊಂದು ಗಟ್ಟಿ ಬೀಗ ಹಾಕುವುದು ಇತ್ಯಾದಿ ಇತ್ಯಾದಿ ಸೇರಿವೆ. ಆದರೆ ಪೆಟ್ಟಿಗೆ ಅಂಗಡಿ ತೆರೆಯುವುದು ದಿನಸಿ ಅಂಗಡಿ ತೆರೆದಷ್ಟು ಸುಲಭದ ಕೆಲಸವಲ್ಲ. ಏಕೆಂದರೆ ದಿನಸಿ ಅಂಗಡಿ ನಡೆಸುವುದು ಮಳಿಗೆಯಲ್ಲಾದ್ದರಿಂದ ಮಳಿಗೆಯ ಮಾಲಿಕರಿಗೆ ಮುಂಗಡ ಕೊಟ್ಟು, ಕರಾರು ಮಾಡಿಕೊಂಡರೆ ಉಳಿದದ್ದು ಸುಲಭ. ಆದರೆ ಪುಟ್ಟ ಪೆಟ್ಟಿಗೆ ಅಂಗಡಿ ತೆರೆಯುವುದು ಬಲು ಕಷ್ಟದ ಕೆಲಸ. ಪೆಟ್ಟಿಗೆ ತಯಾರಿಸುವ ಬಡಗಿಗಳೂ ದುರ್ಲಭದ ಈ ಕಾಲದಲ್ಲಿ ಪೆಟ್ಟಿಗೆಗೆ ಬೇಕಾದ ಮರಮುಟ್ಟು ಹೊಂದಿಸುವುದೂ ಹಾಗೆ ಜೋಡಿಸಿದ ಪೆಟ್ಟಿಗೆಗೊಂದು ಅನುಕೂಲಕರ ಜಾಗ ಮಾಡಿಕೊಂಡು ಅದನ್ನು ಸ್ಥಾಪಿಸುವುದೂ ಕಷ್ಟ, ಕಷ್ಟ. ಮಳಿಗೆಯಂತೆ ಖಾಸಗಿಯವರ  ಸ್ವತ್ತಿನಲ್ಲಿಲ್ಲದ ಜಾಗದಲ್ಲಿ ಆದರೆ ಸಾರ್ವಜನಿಕರು ಸುಳಿದಾಡುವ ಸ್ಥಳದಲ್ಲಿ ಪೆಟ್ಟಿಗೆ ಅಂಗಡಿಗೆ ಜಾಗ ಹುಡುಕುವುದೇ ಮೊದಲ ಸi ಸ್ಯೆ. ಬಸ್ ಸ್ಟಾಂಡ್, ದೇವಸ್ಥಾನ, ಆಸ್ಪತ್ರೆ, ಶಾಲೆ ಇವು ಪೆಟ್ಟಿಗೆ ಅಂಗಡಿ ಇಡಲು ಸೂಕ್ತ ಸ್ಥಳಗಳು. ಆದರೆ ಈಗಾಗಲೇ ಅಲ್ಲಿ ಅನುಸ್ಥಾಪಿತಗೊಂಡಿರುವ  ಹಳೆಯ ಅಂಗಡಿಗಳವರು ತಮ್ಮ ವ್ಯಾಪಾರ ಕುಸಿಯಬಹುದೆನ್ನುವ ಕಾರಣದಿಂದ ಹೊಸ ಅಂಗಡಿಯವರಿಗೆ ಜಾಗ ಹೊಂದಿಸಿಕೊಡಲು ತಕರಾರು ಎತ್ತಬಹುದು. ಗ್ರಾಮ ಪಂಚಾಯತು, ಪಟ್ಟಣ ಪಂಚಾಯತಿನವರು ಲೈಸೆನ್ಸ್ ಇಲ್ಲ ಅಂತ ಮುಚ್ಚಿಸಬಹುದು. ಅಂಗಡಿಯಾತನ ಅದೃಷ್ಟವೇ ಕೈ ಕೊಟ್ಟು ವ್ಯಾಪಾರ ಸಾಗದೇ ಅಂಗಡಿ ಮುಚ್ಚಬೇಕಾಗಿ ಬರಬಹುದು. ಹಾಗಾಗಿ ಹೊಸ ಪೆಟ್ಟಿಗೆಗಿಂತ ಸಿಕ್ಕಬಹುದಾದ ಹಳೆಯ ಪೆಟ್ಟಿಗೆಗಳ ಕಡೆಯೇ ಗಮನ ಕೊಡಬೇಕಾಗಿ ಬರುತ್ತದೆ. ಆದರೆ ಹಳೆಯ ಪೆಟ್ಟಿಗೆಯನ್ನು ಹೊಸ ರೀತಿಗೆ ಮಾರ್ಪಡಿಸುವುದೂ ಬಡಗಿಯ ಕುಶಲತೆಯ ಮೇಲೆ ನಿಂತಿರುತ್ತದೆ. ಆರಾಮಾಗಿ ಹೊತ್ತು ಸಾಗಿಸಬಹುದಾದ ಪೆಟ್ಟಿಗೆ ಅಂಗಡಿಯಲ್ಲಿ ಇಡಬಹುದಾದ ವಸ್ತುಗಳ ಪಟ್ಟಿಯೇನೂ ಪುಟ್ಟದ್ದಲ್ಲ. ಬರಿ ಬೀಡಿ ಸಿಗರೇಟುಗಳ ವ್ಯಾಪಾರ ಅಷ್ಟೇನೂ ಸುಖಕರವಾದದ್ದೂ ಅಲ್ಲ. ಬೀಡಿ ಸಿಗರೇಟಿನ ಜೊತೆಗೆ ಕಾಫಿ, ಟೀಗಳನ್ನು ಮಾಡಿ ಮಾರಬಹುದು. ಫ್ಲಾಸ್ಕಿನಲ್ಲಿಟ್ಟುಕೊಂಡ ಕಾಫಿ, ಟೀಗಳನ್ನು ಬೀದಿ ಬೀದಿ ಸುತ್ತಿ ಮಾರಿಯೇ ಜೀವನ ನಡೆಸುತ್ತಿರುವವರಿಲ್ಲವೇನು?

ಆದರೆ ಬರೀ ಸಿಗರೇಟು, ಬೀಡಿ, ಟೀ, ಕಾಫಿಗಳನ್ನು ಮಾರುವ ಅಂಗಡಿಯೆಂದರೆ ಯಾಕೋ ಸಮಾಧಾನವಾಗದ ವಿಷಯ. ಧೂಮಪಾನಿಗಳ ಹೊಗೆಯ ಕಾರಣದಿಂದಾಗಿ ಇತರರು ಅತ್ತ ಸುಳಿಯದೇ ಇರಬಹುದು. ಹಾಗಾದಾಗ ಅಂಗಡಿ ಇರುವ ಪ್ರದೇಶಕ್ಕೆ ಅನುಗುಣವಾಗಿ ಅಲ್ಲಿನ ಜನಗಳ ಅಭೀಪ್ಸೆಯಂತೆ ಅಂಗಡಿಯ ಸಾಮಾನಿನ ಪಟ್ಟಿ ಇರಬೇಕಾಗುತ್ತದೆ. ದೇವಸ್ಥಾನದ ಹತ್ತಿರದ ಅಂಗಡಿಯಲ್ಲಿ ಪೂಜೆಗೆ ಬೇಕಾದ ಹಣ್ಣು, ಕಾಯಿ, ಕರ್ಪೂರ, ಊದುಬತ್ತಿಗಳ ಜೊತೆಗೆ ಮಕ್ಕಳು ಇಷ್ಟಪಡುವ ಬಲೂನು, ಪೆಪ್ಪರಮೆಂಟು, ಚಾಕಲೇಟುಗಳು ಅದರ ಜೊತೆಗೇ ವಿಳ್ಳೇದೆಲೆ, ಅಡಕೆ , ಸುಣ್ಣಗಳನ್ನೂ ಇಡಬೇಕಾಗುತ್ತದೆ. ಆಸ್ಪತ್ರೆ ಹತ್ತಿರ ತೆರೆಯುವ ಪೆಟ್ಟಿಗೆ ಅಂಗಡಿಯಲ್ಲಿ ಬ್ರೆಡ್ಡು, ಬಾಳೆಹಣ್ಣು, ಎಳನೀರು ಮುಖ್ಯವಾಗಿ ಇರಲೇಬೇಕು. ಇನ್ನು ಶಾಲೆಯ ಹತ್ತಿರದ ಪೆಟ್ಟಿಗೆ ಅಂಗಡಿಯಲ್ಲಿ ಚುರಮುರಿ, ಖಾರಾಸೇವೆ, ಬಬಲ್ ಗಮ್ಮು, ಸಕ್ಕರೆ ಮಿಠಾಯಿ, ಬಾಲ್ ಪೆನ್ನಿನ ರಿಫಿಲ್, ಬಿಳಿಹಾಳೆ, ಎಕ್ಸರ್‌ಸೈಜ್ ಪುಸ್ತಕ, ಸ್ಕೇಲು, ಖಾಯಂ ಆಗಿ ಇರಲೇಬೇಕಾದ ವಸ್ತುಗಳು. ನಮ್ಮ ಕಾಲದಲ್ಲಿ ಸ್ಲೇಟು ಬಳಪಗಳಿಲ್ಲದಿದ್ದ ಶಾಲೆಯ ಹತ್ತಿರದ ಅಂಗಡಿಗಳು ಯಾವ ಲೆಕ್ಕಕ್ಕೂ ಇರುತ್ತಿರಲಿಲ್ಲ. ಇನ್ನು ಬಸ್ ಸ್ಟಾಂಡ್ ಹತ್ತಿರದ ಅಂಗಡಿಗಳಲ್ಲಿ ಬಾಳೆಹಣ್ಣು, ಎಲೆಯಡಿಕೆ, ತಟ್ಟೆ ಇಡ್ಳಿ, ಬೀಡಿ, ಸಿಗರೇಟು, ನಶ್ಯಾ ಪುಡಿ, ಮಾಮೂಲು ಮೆನು. ಸಂಜೆಯಾದರೆ ಭರ್ರೋ ಎನ್ನುವ ಪಂಪ್ ಸ್ಟೌವಿನಲ್ಲಿ ಬಿಸಿ ಬಿಸಿ ಮೆಣಸಿನ ಕಾಯಿ ಬೋಂಡ ಕರಿಯುವುದಾದರೆ ಇನ್ನೂ ಒಳ್ಳೆಯದು. ಜೊತೆಗೆ ಬಸ್ ಸ್ಟಾಂಡಿನ ಪೆಟ್ಟಿಗೆ ಅಂಗಡಿಗಳವರಿಗೆ ಉಳಿದ ಅಂಗಡಿಯವರಿಗಿಂತ ತಾಳ್ಮೆ ಮತ್ತು ಸಹನೆ ಇರಲೇಬೇಕು. ಏಕೆಂದರೆ ಬಸ್ಸಿಗೆ ಕಾಯುತ್ತ ನಿಂತವರ ತಲಾತಟ್ಟೆ ಮಾತುಗಳು, ಬಂದ ಬಾರದ ಬಸ್ಸುಗಳ ಬಗ್ಗೆ ಎನ್‌ಕ್ವಯರಿಗಳೂ ಸರ್ವೇ ಸಾಮಾನ್ಯ ಸಂಗತಿಗಳು. ಜೊತೆಗೆ ಬಸ್ಸಿಳಿದ ಕೂಡಲೇ ಅಂಗಡಿಯ ಪೆಟ್ಟಿಗೆಯ ಹಿಂದೋಡಿ ಮೂತ್ರ ಮಡುವವರನ್ನೂ ಗದರಿಸಿ ಓಡಿಸಬೇಕಾದ ಗತ್ತು, ಘನಸ್ತಿಕೆಯೂ ಇರಬೇಕಾಗುತ್ತದೆ. ಬಂದು ಹೋಗುವ ಬಸ್ಸುಗಳ ಜೊತೆಗೇ ಯಾವ ಯಾವ ಊರಿಗೆ  ಎಷ್ಟು ದೂರ, ಅಲ್ಲಿಂದ ಮತ್ತೆ ವಾಪಾಸು ಎಷ್ಟು ಹೊತ್ತಿಗೆ ಈ ಕಡೆಗೆ ಬಸ್ಸು ಇದೆ ಇತ್ಯಾದಿ ಲೋಕ ಜ್ಞಾನದ  ವಿಚಾರಗಳು ಇವರಿಗೆ ಗೊತ್ತಿರಲೇಬೇಕು. ಇಲ್ಲವಾದಲ್ಲಿ ಯಾರೂ ಆ ಅಂಗಡಿಯತ್ತ ಹೆಜ್ಜೆ ಹಾಕುವುದೇ ಅನುಮಾನ!

ಈಗ ನೆನಪಿಸಿಕೊಂಡು ಸರಿಯಾಗಿ ಹೇಳಿ, ನಿಮಗೆ ಬೇಕಾದ ಸಾಮಾನನ್ನೆಲ್ಲ ನೀವೇ ತಳ್ಳುಗಾಡಿಗೆ ಹಾಕಿಕೊಂಡು, ಉದ್ದೋಉದ್ದದ ಕ್ಯಾಷ್ ಕೌಂಟರಿನ ಮುಂದೆ ನಿಂತು ಕಾರ‍್ಡ್ ಸ್ವೈಪ್ ಮಾಡಿ ಪ್ಯಾಕ್ ಆದ ಪ್ಲಾಸ್ಟಿಕ್ ಚೀಲಕ್ಕೂ ಎಕ್ಟ್ರಾ ದುಡ್ಡು ಕಕ್ಕಿ ವ್ಯಾಪಾರ  ನಡೆಸುವ ಸೂಪರ್ ಮಾರ್ಕೆಟ್ಟಿನ ಮಾಲೀಕನ ಮುಸುಡಿಯನ್ನಾದರೂ ನೀವು ಯಾವತ್ತಾದರೂ ನೋಡಿದ್ದೀರ? ಇವತ್ತು ಕ್ಯಾಷಿನಲ್ಲಿ ಕೂತವರು ನಾಳೆ ಬಂದಾಗ ಕಾಣುವುದೇ ದುಸ್ತರವಾಗಿರುವ ಈ ವಾಣಿಜ್ಯ ಸಂಕೀರ್ಣಗಳಲ್ಲಿ ವ್ಯಾಪಾರದ ತಹತಹಿಕೆ ಕಾಣುವುದೇ ವಿನಾ ಮನುಷ್ಯ ಸಹಜ ಸಂಬಂಧಗಳೆಂದೂ ಚಿಗುರಿರುವ ಉದಾಹರಣೆಗಳಿಲ್ಲವೇ ಇಲ್ಲ. ಆದರೂ ದೊಡ್ದ ದೊಡ್ಡ ಮಾಲುಗಳ ಜನದಟ್ಟಣೆಯ ನಡುವೆಯೂ ಯುವ ಪ್ರೇಮಿಗಳ ಓಡಾಟ ಮಾತ್ರ ನಿಜಕ್ಕೂ ಚೇತೋಹಾರಿ. ಪೋಲೀಸರ ಕಾಟವಿಲ್ಲದೆ, ಪೋಲಿಗಳ ಕಿಚಾಯಿಸುವಿಕೆಯಿಲ್ಲದೇ ಮಾಲುಗಳ ವೈಭವೋಪೇತ ಹೋಟೆಲ್ಲುಗಳಲ್ಲಿ ಗಂಟೆಗಟ್ಟಲೇ ಕೂತು ಅರ್ಧರ್ಧ ಕಾಫಿ ಕುಡಿಯುವ ಪ್ರೇಮಿಗಳ ಹುಚ್ಚು ಧೈರ್ಯವನ್ನೂ ಪ್ರಶಂಸಿಸಲೇ ಬೇಕು. ಈ ಪ್ರೇಮಿಗಳು ಹೀಗೆ ಬರಿದೇ ಓಡಾಡುವುದನ್ನು ತಪ್ಪಿಸಲು ಸಿಸಿ ಟಿವಿಗಳನ್ನಿಟ್ಟು ಅವರ ಹಿಂದೆ ಖಾಸಗೀ ಸೆಕ್ಯೂರಿಟಿಯೆಂಬ ಹುಂಬ ದಾಂಡಿಗರನ್ನು ಬಿಟ್ಟು ಗದರಿಸುವ ಮಾಲುಗಳೂ ಇವೆಯೆಂದು ಕೇಳಿಬಲ್ಲೆ! ವ್ಯಾಪಾರ ಮಾಡದೇ ಅಲ್ಲಿನ ಹವಾನಿಯಂತ್ರಕಗಳ ತಂಪೆ ರಿಗೆ ಮನಸೋತ ಮನುಷ್ಯ ಸಹಜ ದೌರ್ಬಲ್ಯಗಳು ನನ್ನಂಥ ಮಧ್ಯಮವರ್ಗದವರಲ್ಲಿ ತೀರ ಸಾಮಾನ್ಯ !

ಜಾಗತೀಕರಣದ ಈ ನವಪಲ್ಲಟದ ಕಾಲದಲ್ಲಿ ಎಂಥೆಂಥ ಕೈಗಾರಿಕೆಗಳು, ಉದ್ದಿಮೆಗಳು ನೆಲಕಚ್ಚಿ ನಿರ್ನಾಮವಾಗಿರುವಾಗಲೂ ದಿನದಿಂದ ದಿನಕ್ಕೆ ಚಿಲ್ಲರೆ ಅಂಗಡಿಗಳ ಸಂಖ್ಯೆ ಸಣ್ಣ ಪುಟ್ಟ ಊರುಗಳಲ್ಲಿ ಮಾತ್ರ ಹೆಚ್ಚುತ್ತಲೇ ಇರುವುದನ್ನು ವಿಶ್ಲೇಷಿಸಲು ಎಂಬಿಯೆದಂಥ ಪದವಿಯ ಅವಶ್ಯಕತೆಯೇನೂ ಬೇಕಿಲ್ಲ. ದಿನಕ್ಕೊಂದು ಹೊಸ ಬಡಾವಣೆ ತಲೆ ಎತ್ತುವ ನಗರಗಳಲ್ಲಂತೂ ಇವುಗಳ ಅಗತ್ಯ ತುಂಬ ಹೆಚ್ಚು. ಈ ಚಿಲ್ಲರೆ ಅಂಗಡಿಗಳವರು ಒಂದರ್ಥದಲ್ಲಿ ಹೊಸ ಬಡಾವಣೆಗಳ ಗೈಡ್‌ಗಳಾಗಿಯೂ ಕೆಲಸ ಮಾಡುತ್ತಿರುತ್ತಾರೆ. ಯಾವ ಬೀದಿಯ ಯಾವ ಗುರುತಿನ ಹತ್ತಿರ ಯಾರ ಮನೆ ಇದೆಯೆಂಬ ಸೂಕ್ಷ್ಮ ವಿಷಯ ಈ ಅಂಗಡಿಗಳವರಿಗೆ ಗೊತ್ತಿರುತ್ತದೆ. ಅಲ್ಲದೇ ಯಾವ ಹೊಸಬರು ಆ ಏರಿಯಾಕ್ಕೆ ಯಾವ ಯಾವ ಕಾರಣಕ್ಕೆ ಆಗಾಗ ಬಂದು ಹೋಗುತ್ತಾರೆ, ಹಾಗೆ ಬಂದವರು ಏನೇನು ಮಾಡುತ್ತಾರೆ ಅನ್ನುವುದೆಲ್ಲ ಅವರಿಗೆ ಕರತಲಾಮಲಕ. ನೀವು ಎಷ್ಟು ದುಡ್ಡು ಇಟ್ಟುಕೊಂಡಿರಿ, ಯಾವುದೇ ಬ್ಯಾಂಕಿನ ಕಾರ್ಡು ಇಟ್ಟುಕೊಂಡಿರಿ, ಒಂದು ಸೂಪರ್ ಮಾರ್ಕೆಟ್ಟಿಗೆ ಹೋಗಿ ಒಂದೇ ಒಂದು ಸಿಗರೇಟು ಕೊಳ್ಳಿ ನೋಡೋಣ. ನೀವು ಕೊಳ್ಳಲು ತಯಾರಿದ್ದರೂ ಅವನು ಕೊಡಬೇಕಲ್ಲ! ಅದೇ ದಿನಕ್ಕೊಂದು ಸಾರಿ ಒಂದೇ ಒಂದು ಸಿಗರೇಟು ಕೊಳ್ಳಲು ನಿಮ್ಮ ಮನೆಯ ಹತ್ತಿರವೇ ಇರುವ ಚಿಲ್ಲರೆ ಅಂಗಡಿಗೆ ಒಂದೆರಡು ದಿನ ಹೋಗಿ ನೋಡಿ. ಮೂರನೇ ದಿನ ಹೋಗದೇ ಬಿಟ್ಟಿರೋ ದಾರಿಯಲ್ಲೆಲ್ಲಾದರೂ ಆ ಅಂಗಡಿಯವನು ಸಿಕ್ಕರೆ ನಿಮ್ಮ ಕುಶಲ ವಿಚಾರಿಸದೇ ಬಿಡುವುದಿಲ್ಲ. ಕೆಲಸಕ್ಕೆ ಬಾರದ ಕೆಲಸಗಳಲ್ಲಿ ಮುಳುಗಿ ಹೋಗಿ ಜೀವನ ಸ್ವಾರಸ್ಯ ಕಳೆದುಕೊಂಡವರೆಲ್ಲ ದಿನಕ್ಕೊಂದು ಬಾರಿಯಾದರೂ ಪುಟ್ಟ ಅಂಗಡಿಗಳ ಬಳಿ ನಿಂತು ಅಲ್ಲಿ ನಡೆಯುವ ಮಾತು ಕತೆಗಳಲ್ಲಿ ಭಾಗಿಯಾದರೆ ಜೀವನ ಸ್ವಾರಸ್ಯ ತನಗೆ ತಾನೇ ಪುಟಿಯುತ್ತೆ, ಪುಟವಿಟ್ಟ ಚೆಂಡಿನಂತೆ. ಎಂತೆಂಥ ಮಾತು ಅಂತೀರಿ? ಶ್ಯಾನುಭೋಗರ ಮನೆ ಎಮ್ಮೆ ಕಳೆದು ಹೋಗಿದ್ದರಿಂದ ಹಿಡಿದು ಶ್ಯಾಂಭಟ್ಟರ ಮಗ ಸಾಬರ ಹುಡುಗಿಗೆ ಲೈನು ಹೊಡೆಯುವವರೆಗೆ! ಗ್ರಾಮ ಪಂಚಾಯತು ಸೆಕ್ರೆಟರಿ ಲಂಚ ಕೇಳಿದ ವಿಷಯದಿಂದ ಹಿಡಿದು ತ್ರೀಜಿ ಸ್ಕ್ಯಾಮಿನ ಸುದ್ದಿಯವರೆಗೆ!

ಒಂದು ವೇಳೆ ಈ ಚಿಲ್ಲರೆ ಅಂಗಡಿಗಳೇ ಇರದಿರುತ್ತಿದ್ದರೆ ಮತ್ತೆಷ್ಟು ನಿರುದ್ಯೋಗ ಸಮಸ್ಯೆ ಕಾಡುತ್ತಿತ್ತು, ಅಲ್ಲವೇ? ಹತ್ತಿರ ಹತ್ತಿರ ಕೋಟಿ ಸಂಖ್ಯೆಯ ಅಂಗಡಿಗಳಿವೆಯೆಂದರೆ ಅಷ್ಟೇ ಸಂಖ್ಯೆಯ ಜನ ಈ ಉದ್ಯೋಗದಲ್ಲಿದ್ದಾರೆ. ಅವರನ್ನಾಶ್ರಯಿಸಿರುವವರ ಸಂಖ್ಯೆಯೇನು ಕಡಿಮೆಯೇ? ಈ ಅಂಗಡಿಗಳಲ್ಲಷ್ಟೇ ಮಾರಾಟವಾಗಬಹುದಾದ ನಿಪ್ಪಟ್ಟು, ಕೋಡುಬಳೆ, ಖಾರಾಸೇವೆ, ಕಂಬರಗಟ್ಟು, ಕಡ್ಲೆ ಮಿಠಾಯಿ ಇತ್ಯಾದಿ ಇತ್ಯಾದಿ ವಸ್ತುಗಳನ್ನು ತಯಾರಿಸುವವರ ಸಂಸಾರಗಳಿಗೂ ಈ ಇದೇ ಚಿಲ್ಲರೆ ಅಂಗಡಿಗಳು ಆಶ್ರಯ ತಾಣವಾಗಿಲ್ಲವೇ? ಇಂಥ ಸೂಕ್ಷ್ಮ ತಿಳಿಯದ ನಮ್ಮನ್ನಾಳುವ ದೊರೆಗಳು ಈ ಚಿಲ್ಲರೆ ಮಾರಾಟ ಕ್ಷೇತ್ರಕ್ಕೆ ಬಿಳಿತೊಗಲಿನವರನ್ನು ಮತ್ತವರ ಬಂದವಾಳವನ್ನೂ ಬಯಸುತ್ತಾರೆಂದರೆ ನಮ್ಮ ಆರ್ಥಿಕತೆಗೆ ವಂಚನೆ ಮಾಡಿದಂತಲ್ಲವೇ? ದೇಶದ ಆರ್ಥಿಕ ಸ್ಥಿತಿಯನ್ನು ಕಾಪಾಡಹೊರಟರುವವರಿಗೆ  ತಳಮಟ್ಟದ ತಿಳುವಳಿಕೆ ಇಲ್ಲದೇ ಹೋದರೆ ಹೀಗೇ ಆಗುವುದು.

ಯಾರು ಏನು ಮಾಡಲಿ, ಬಿಡಲಿ, ಈ ಅಂಗಡಿಗಳವರ ಪರ ವಕಾಲತ್ತು ವಹಿಸಲಿ, ಬಿಡಲಿ, ಚುನಾವಣೆಗಳ ಕಾಲದಲ್ಲಿ ಮಾತ್ರ ಬಹುತೇಕ ಚಿಲ್ಲರೆ ಅಂಗಡಿಗಳು ಯಾವುದೋ ಒಂದು ಪಕ್ಷದ ಪರವಾಗಿ ನಿಲ್ಲದೇ ಪಕ್ಷಾತೀತವಾಗಿ ವರ್ತಿಸುವುದನ್ನು ಇವುಗಳನ್ನು ಬಲ್ಲ ಎಲ್ಲರೂ ಬಲ್ಲರು. ಎಲ್ಲ ಬಗೆಯ ಜನರ ಎಲ್ಲ ಅಭಿಪ್ರಾಯಗಳಿಗೂ ಈ ಅಂಗಡಿಗಳು ತೆರೆದ ಕಿವಿಗಳು. ಯಾವ ವಿಧಾನ ಸಭೆ, ಲೋಕಸಭೆಯ ಅಧಿವೇಶನದಲ್ಲೂ ಚರ್ಚೆಯಾಗದ ಹಲವು ವಿಚಾರಗಳು ಈ ಅಂಗಡಿಗಳ ಮುಂಗಟ್ಟುಗಳಲ್ಲಿ ನಡೆಯುತ್ತವೆ. ಗಿಜುಗುಡುವ ಜನಗಳ ಮಧ್ಯದಲ್ಲೂ ತನ್ನ ಪಾಡಿಗೆ ತಾನು ವ್ಯಾಪಾರ ಮಾಡಿಕೊಳ್ಳುತ್ತ, ಜನಗಳ ಅಗತ್ಯಕ್ಕೆ ಸ್ಪಂದಿಸುವ ಈ ಅಂಗಡಿ ಮಾಲೀಕರಿಗೆ ಈ ಪ್ರಬಂಧದ ಮೂಲಕ ಹೆಚ್ಚೆಂದರೆ ನನ್ನ ಕೃತಜ್ಞತೆಗಳನ್ನು ತಿಳಿಸಬಹುದಷ್ಟೇ! ಮತ್ತು ಆ ಮೂಲಕ ತಳಮಟ್ಟದ ಆರ್ಥಿಕ ಬೆಳವಣಿಗೆಗೆ ಕಾರಣವಾಗಿರುವ ಚಿಲ್ಲರೆ ವ್ಯಾಪಾರದಲ್ಲಿ ಖಾಸಗೀ ಬಂಡವಾಳದ ಹೂಡಿಕೆಯನ್ನೂ ವಿರೋಧಿಸಬಹುದು. ಯಾವ ವಿಧೇಯಕ ತಂದರೂ, ಜಾಹೀರಾತಿಗೆ ಕೋಟಿಗಟ್ಟಲೆ ಖರ್ಚುಮಾಡಿದರೂ, ಚಿಲ್ಲರೆ ಅಂಗಡಿಗಳ ಗತ್ತು ಮತ್ತು ಅಗತ್ಯಗಳನ್ನು ಯಾವ ಸೂಪರ್ ಮಾರ್ಕೆಟ್ಟೂ ಸರಿಗಟ್ಟಲಾರದೆಂಬ ಭರತ ವಾಕ್ಯ ನಾನಾಡಬಹುದಾದರೂ ಏಕೋ ಇತ್ತೀಚೆಗೆ ನಮ್ಮನ್ನಾಳುವ ದೊರೆಗಳ ತಿಕ್ಕಲುತನ ಮತ್ತು ಪ್ರಾಯಶಃ ಅವರು ಮಾಡಿಕೊಂಡಿರಬಹುದಾದ ಒಳಒಪ್ಪಂದಗಳ ಸುಳಿ ಮುಗ್ಧ ಪೆಟ್ಟಿ ಅಂಗಡಿಗಳ ಒಡೆಯರ ಜೀವನವನ್ನೆಂದಿಗೂ ಕೊನೆಗೊಳಿಸದಿರಲಿ ಎನ್ನುವ ಆಶಯದೊಡನೆ ಈ ಪ್ರಬಂಧಕ್ಕೆ ಮಂಗಳವಾಕ್ಯ ಹಾಡುತ್ತೇನೆ. ಶುಭಮಸ್ತು!
                                                                           

ಸೋಮವಾರ, ಸೆಪ್ಟೆಂಬರ್ 17, 2012

ಪಕ್ಕದ ಮನೆಯಲ್ಲಿ. . . . . . .

ಬಿಳೀ ಗೋಡೆಯ ಮೇಲೆ
ಈಗಷ್ಟೇ ಬಿಡಿಸಿರುವ ನವ್ಯ ಚಿತ್ರ
ಕಲಾವಿದ ಸಹಿ ಹಾಕುವುದನ್ನು ಮರೆತಿದ್ದಾನೆ,.

ಅಂಗಳದ ತುಳಸಿ ಕಟ್ಟೆಯ ಸುತ್ತ
ಪುಟ್ಟ ಕೃಷ್ಣನ ಹೆಜ್ಜೆ ಗುರುತು
ಬೃಂದಾವನ ಕಟ್ಟಿದ ಪೋರ ಮೃತ್ತಿಕೆಯಲ್ಲಾಡಿ ಬಳಲಿರಬೇಕು,..

ತಾತನ ಬೆನ್ನ ಮೇಲೆ ಅಂಬಾರಿ ಉತ್ಸವ
ಅಜ್ಜಿಯಂತೂ ಕತೆಗಳ ಅಕ್ಷಯ ಪಾತ್ರೆ
ಬರುವ ಹಾಗಿಲ್ಲ ಗುರುತಿನವರು ಯಾರೂ ಬರಿಗೈಯಲ್ಲಿ. . .

ತಡವಾಗಿ ಬಂದರೆ ಅಪ್ಪ
ಷೋಕಾಸು ನೋಟೀಸಿಗುತ್ತರಿಸಬೇಕು
ತಪ್ಪೊಪ್ಪಿಗೆಯೊಂದೇ ಕ್ಷಮೆಗೆ ದಾರಿ,..

ಬಿಸಿ ಮಮ್ಮು ಉಣಿಸಲಿಕೆ ಅಮ್ಮ
ಪಾಪ ಚಂದ್ರನನ್ನೇ ಧರೆಗೆ ಕರೆದು ತರುತ್ತಾಳೆ
ಯಕ್ಷಿಣಿಯರದೇ ನಿತ್ಯ ಲಾಲಿ ಹಾಡು,.

ಪಕ್ಕದ ಮನೆಯಲ್ಲಿ ಪುಟ್ಟ ಪೋರನೇ ರಾಜ
ಉಳಿದವರೆಲ್ಲ ಅವನಿಗೆ ಶರಣು ಹೋದ ಸಾಮಂತರು!

ವಿಘ್ನವಿನಾಶಕ ವಿನಾಯಕ

ಆಷಾಡದ ಗಾಳಿಮಳೆಗಳು ಶ್ರಾವಣದ ಕುಂಭದ್ರೋಣ ಕಡಿಮೆಯಾಗಿ ಭಾದ್ರಪದ ಕಾಲಿಟ್ಟಿದೆ. ಚರಾಚರ ಪ್ರಕೃತಿಯಲ್ಲಿ ಮೇಳೈಸಿದ್ದ ಜಡತನ ಹಿಂದೆ ಸರಿದು ಜೀವನೋತ್ಸಾಹ ಪುಟಿದೇಳುವ ಕಾಲವಿದು ಎಂದು ಆಯುರ್ವೇದ ಹೇಳುತ್ತದೆ. ಮಳೆ ಕಡಿಮೆಯಾದ ಕಾರಣ ರೈತಾಪಿ ಜನರೂ ಬರುವ ದಿನಗಳ ನಿರೀಕ್ಷೆಯಲ್ಲಿ ಇರುತ್ತಾರೆ. ಭಾದ್ರಪದ ಶುಕ್ಲದ ಚೌತಿ ವಿನಾಯಕನ ಹಬ್ಬ. ಗೌರಿ ಮತ್ತು ಗಣೇಶರ ಹಬ್ಬ ಜನಸಮುದಾಯದಲ್ಲಿ ಹರ್ಷ-ಸಂಭ್ರಮಗಳನ್ನು ಅರಳಿಸುತ್ತದೆ.

ಭಾರತೀಯ ದೇವತೆಗಳಲ್ಲಿ ಅತ್ಯಂತ ಲೋಕ ಖ್ಯಾತನಾದವನು ಗಣೇಶನೇ. ಅವನು ಕೇವಲ ವಿಘ್ನ ನಾಶಕನಷ್ಟೇ ಅಲ್ಲ, ಸಿದ್ಧಿ ಪ್ರದಾಯಕನೆಂದೂ ಪೂಜಿಸಲ್ಪಡುತ್ತಾನೆ. ಎಲ್ಲ ಕೆಲಸಗಳ ಆರಂಭದಲ್ಲೂ ಗಣೇಶನನ್ನು ಪ್ರಾರ್ಥಿಸುವುದು ಪಾರಂಪರಿಕವಾಗಿ ನಡೆದು ಬಂದ ಆಚರಣೆ. ಹೀಗೆ ಅಗ್ರಪೂಜೆಗೂ ಮೊದಲ ನಮಸ್ಕಾರದ ಮನ್ನಣೆಗೂ ಪಾತ್ರನಾಗುವ ವಿನಾಯಕ ಭಕ್ತರ ಸಂಕಲ್ಪ ಶಕ್ತಿಗೆ ಬಲದುಂಬಿ ಕಾರ್ಯಸಿದ್ಧಿಯಾಗುವಂತೆ ಹರಸುತ್ತಾನೆಂಬ ನಂಬಿಕೆ ಇದೆ. ಮಹರ್ಷಿ ವೇದವ್ಯಾಸರು ರಚಿಸಿದ ಮಹಾಭಾರತ ಕೃತಿಗೆ ಗಣಪತಿಯೇ ಲಿಪಿಕಾರನೆಂಬ ಹೇಳಿಕೆಯೂ ಪ್ರಸಿದ್ಧವಾದುದೇ ಆಗಿದೆ. ನಮ್ಮ ಪ್ರಾಚೀನ ಕಾವ್ಯಗಳ ಆರಂಭವಂತೂ ಗಣಪತಿಯನ್ನು ನಮಿಸದೇ ಮುಂದೆ ಹೋಗುವುದೇ ಇಲ್ಲ. ಕವಿ, ಕಲಾವಿದ, ಪಂಡಿತ, ಪಾಮರರೆಲ್ಲರಿಗೂ ಗಣೇಶ ಪರಮಪ್ರಿಯ ದೇವರು.

ಮುಂಜಾನೆ ಮೂಡಣದ ಅಂಚಿನಲ್ಲಿ ನಿಧಾನವಾಗಿ ಸಣ್ಣವನಾಗಿ ಕಾಣಿಸಿಕೊಂಡು ನಂತರ ಭೂಮ್ಯಾಕಾಶಗಳನ್ನೆಲ್ಲ ಆವರಿಸಿಕೊಳ್ಳುವ ಸೂರ್ಯನಂತೆ ಸಿದ್ಧಿಪ್ರದ ವಿನಾಯಕನು ಭೂಮ್ಯಾಕಾಶಗಳನ್ನೆಲ್ಲ ವ್ಯಾಪಿಸಿರುವನೆಂದು ಲಕ್ಷೀಶ ಕವಿ ತನ್ನ ಜೈಮಿನಿ ಭಾರತದಲ್ಲಿ ವರ್ಣಿಸಿದ್ದಾನೆ. ಭಾವಜಗತ್ತನ್ನೂ, ಬೌಧ್ಧಿಕ ಜಗತ್ತನ್ನೂ, ವಿಜ್ಞಾನ ಜಗತ್ತನ್ನೂ ಸರಿಸಮನಾಗಿ ವ್ಯಾಪಿಸಿರುವ ಗಣೇಶನನ್ನು ಕುರಿತ ದಂತ ಕತೆಗಳೂ ಲೆಕ್ಕಕ್ಕೇ ಸಿಕ್ಕದಷ್ಟು ಹೇರಳವಾಗಿವೆ. ಶಿವ ಪುರಾಣದಲ್ಲಿ ವರ್ಣಿತನಾಗಿರುವಂತೆ -ಮತ್ತ ಮಾತಂಗ ವದನೋ, ಗಂಗೋಮಾ ಶಂಕರಾತ್ಮಜಃ, ಆಕಾಶದೇಹೋ, ದಿಗ್ಬಾಹುಃ, ಸೋಮಃ ಸೂರ್ಯಾಗ್ನಿಲೋಚನಃ- ಮದಿಸಿರುವ ಆನೆಯ ವದನವಿರುವ ವಿನಾಯಕ ಗಂಗೆ,ಉಮೆ ಮತ್ತು ಶಂಕರರ ಮುದ್ದಿನ ಮಗ. ಆಕಾಶವೇ ಅವನ ಶರೀರವಾದರೆ, ದಿಕ್ಕುಗಳವನ ತೋಳುಗಳು. ಸೂರ್ಯ ಚಂದ್ರರೇ ಅವನ ಕಣ್ಣುಗಳು.- ಈ ವಿಭೂತಿ ರೂಪವನ್ನು ಕಲ್ಪಿಸಿಕೊಂಡ ಮನಸ್ಸಿನ ಹಿಂದೆ ಇರುವ ಭೂಮ ಕಲ್ಪನೆ ಅದ್ಭುತವಾದುದು.
ಪೌರಾಣಿಕ ಮತ್ತು ಜಾನಪದ ಕಥೆಗಳಂತೂ ಗಣೇಶನ ಹುಟ್ಟು ಅವನ ಲೀಲೆ ಮತ್ತು ಮಹಿಮೆಗಳನ್ನು ಹಾಡಿಹೊಗಳಿವೆ. ಆ ಕಥೆಗಳ ಹಿಂದಿರುವ ರೋಚಕ ಕಲ್ಪನೆಯಂತೂ ರಮ್ಯಲೋಕವನ್ನು ಕೇಳುಗನಲ್ಲಿ ಮೂಡಿಸುತ್ತವೆ. ಈ ಕಲ್ಪಿತ ಆವರಣಗಳಿಂದ ಅವನನ್ನು ಬೇರ್ಪಡಿಸಿ ಸಾಕ್ಷಾತ್ ಪರಬ್ರಹ್ಮ ಸ್ವರೂಪನೆಂಬ ಎತ್ತರದ ನೆಲೆಯಲ್ಲಿ ಪರಿಭಾವಿಸಿದ ದಾರ್ಶನಿಕ ಚಿಂತನೆಯೂ ನಮಗೆ ಗೊತ್ತಿದೆ. ಇಡೀ ಬ್ರಹ್ಮಾಂಡದ ಆದಿ, ಮಧ್ಯ, ಅಂತ್ಯಗಳಲ್ಲಷ್ಟೇ ಅಲ್ಲದೆ ಸೃಷ್ಟಿಯ ಎಲ್ಲ ವ್ಯಾಪಾರಗಳಲ್ಲೂ ಗಣಪತಿಯ ಪಾರಮ್ಯವನ್ನೇ ಕಂಡ ಚಿಂತನೆಯೂ ನಮ್ಮ ಪ್ರಾಚೀನ ಚಿಂತನಗಳಲ್ಲಿವೆ.

ಅಥರ್ವಶೀರ್ಷದಲ್ಲಿ ಅವನನ್ನು ಹೀಗೆ ವರ್ಣಿಸಲಾಗಿದೆ. - ಸರ್ವಂ ಜಗದಿದಂ ತ್ವತ್ತಸ್ತಿಷ್ಟತಿ, ಸರ್ವಂ ಜಗದಿದಂ ತ್ವಯಿಲಯಮೇಷ್ಯತಿ. ಸರ್ವಂ ಜಗದಿದಂ ತ್ವಯಿಪ್ರತ್ಯೇತಿ, ತ್ವಂ ಭೂಮಿರಾಪೋನಲೋನಿಲೋ ನಭಃ -ಈ ಜಗತ್ತು ನಿನ್ನ ಕಾರಣದಿಂದಲೇ ಉಂಟಾಗಿದೆ. ನಿನ್ನಾಧಾರದ ಮೇಲೇ ನಿಂತಿದೆ. ಕಡೆಗೂ ನಿನ್ನಲ್ಲಿಯೇ ಲೀನವಾಗುವುದು ಈ ಜಗತ್ತು. ಭೂಮಿ, ನೀರು, ಗಾಳಿ, ಬೆಂಕಿ, ಆಕಾಶ ಪಂಚಭೂತಗಳಲ್ಲೂ ನೀನೇ ತುಂಬಿದ್ದೀ-

ಇಂಥ ಉನ್ನತ ನೆಲೆಯಲ್ಲಿ ನಮ್ಮ ಹಿರಿಯರು ಕಂಡಿದ್ದ ಗಣೇಶ ಇವತ್ತು ಬೀದಿಬೀದಿಗಳ ಪೆಂಡಾಲುಗಳಲ್ಲಿ, ಶಾಲೆ ಕಾಲೇಜುಗಳ ಅಂಗಳದಲ್ಲಿ ಅಷ್ಟೇ ಏಕೆ ಸಂತೆ ಮಾಳಗಳ ಜನಸಾಗರದ ಮಧ್ಯದಲ್ಲೂ ವಿಜೃಂಭಿಸುತ್ತಿದ್ದಾನೆ. ಭಕ್ತಿಗೋ ಭಾವಕ್ಕೋ ಅಥವ ವಸೂಲಿ ದಂಧೆಯ ವ್ಯಾಪರಕ್ಕೋ ಪಕ್ಕಾಗುತ್ತಿದ್ದಾನೆ. ಸಿನಿಮಾ ಸಂಗೀತಗಳ ಭರಾಟೆಯಲ್ಲಿ, ಡಿಸ್ಕೋ ಹಾಡುಗಳ ದರಬಾರಿನಲ್ಲಿ ಕೂಡ ಗಣೇಶನ ಮೂರ್ತಿ ಇರುವುದು ಪರಿಸ್ಥಿತಿಯ ವ್ಯಂಗ್ಯವಾಗಿದೆ.

ಉನ್ನತ ನೆಲೆಯಲ್ಲಿ ವಿದ್ಯಾಧಿದೇವತೆಯೆಂದೂ ಪರಿಗಣಿಸಿರುವ ಗಣೇಶ ನಮ್ಮೆಲ್ಲರಲ್ಲೂ ನಾಳಿನ ಒಳ್ಳೆಯದಕ್ಕಾಗಿ ಇಂದು ನಾವು ಕೈಗೆತ್ತಿಕೊಳ್ಳಬೇಕಾದ ಕೆಲಸಕಾರ್ಯಗಳನ್ನು ನಿರ್ವಿಘ್ನವಾಗಿ ನಡೆಸಿಕೊಡಲಿ ಎಂಬುದು ಗಣೇಶ ಚೌತಿಯ ಪ್ರಾರ್ಥನೆಯಾಗಿದೆ. ಇನ್ನು ಗಣೇಶನ ತಾಯಿ ಗೌರಿಯಂತೂ ಸಾಕ್ಷಾತ್ ಪರಶಿವನ ಮಡದಿಯಾಗಿಯೂ ಲೌಕಿಕದ ಎಲ್ಲ ಹೆಣ್ಣುಮಕ್ಕಳ ಹಾಗೆ ಕಷ್ಟ-ಸುಖಗಳನ್ನು ಕಂಡವಳು. ದಾಕ್ಷಾಯಣಿಯಾಗಿ ಅವತರಿಸಿ ಶಿವನನ್ನೇ ವರಿಸಿದ ಛಲವಂತೆ ಅವಳು. ಹೀಗೆ ಗೌರಿ-ಗಣೇಶರ ಹಬ್ಬ ತಾಯಿ-ಮಗುವಿನ ಬಾಂಧವ್ಯದ ಸಂಕೇತವಾಗಿ ನಮಗೆಲ್ಲ ಪಾಠ ಹೇಳುತ್ತಲೇ ಇರುವುದನ್ನೂ ನಾವು ಗಮನಿಸಲೇಬೇಕು.
                                                                                

ಭಾನುವಾರ, ಸೆಪ್ಟೆಂಬರ್ 2, 2012

ಮೇಸ್ಟ್ರುಗಳಿಗೊಂದು ನಮನ



‘ಗುರುವಿನ ಗುಲಾಮನಾಗುವವರೆಗೆ ದೊರೆಯದಣ್ಣ ಮುಕುತಿ’- ದಾಸರು ಬರೆದುದನ್ನು ಹಾಡಾಗಿಸಿ  ಬಿತ್ತರಿಸುವ   ಆಕಾಶವಾಣಿಯ ಗೀತಾರಾಧನವನ್ನು ಕೇಳಿದಾಗ ಸೆಪ್ಟೆಂಬರ್ ಐದರ ಶಿಕ್ಷಕರ ದಿನಾಚರಣೆಯ ನೆನಪು ಬರುವುದು! ಗುರುವಿನ ‘ಗುಲಾಮ’ನಾಗಬೇಕೆನ್ನುವುದನ್ನು ತನಗೆ ತೋರಿದ ಹಾಗೆ ಅರ್ಥೈಸಿಕೊಂಡು ಅದನ್ನು ಶೋಷಣೆಯ ಮತ್ತೊಂದು ಮುಖವೆಂದು ವಾದಿಸಿದ ಗೆಳೆಯನ ನೆನಪೂ ಜೊತೆ ಜೊತೆಗೇ ನುಗ್ಗಿಬಂತು. ಮೊನ್ನೆ ಮೊನ್ನೆ ಶಿಕ್ಷೆಯ ಹೆಸರಲ್ಲಿ ಶಾಲೆಯೊಂದು ಮಕ್ಕಳನ್ನು ಹಿಂಸಿಸಿದ ವರದಿ ಪತ್ರಿಕೆಗಳಲ್ಲಿ ಓದಿದ್ದು ಇನ್ನೂ ಹಸಿ ಹಸಿಯಾಗಿ ನೆನಪಿನಲ್ಲಿರುವಾಗಲೇ ಶಿಕ್ಷಕನೊಬ್ಬ ತನ್ನ ಕಾಮಾತುರತೆಗೆ ತನ್ನ ಶಿಷ್ಯೆಯೊಬ್ಬಳನ್ನು ಬಳಸಿಕೊಂಡ ಸುದ್ದಿಯೂ ಸ್ಮರಣೆಗೆ ಬಂತು.

ಆದರೆ ಗುರುವೆನ್ನುವ ಶಬ್ದಾರ್ಥದ ಪರಿಚಯ ನಮಗಾದಲ್ಲಿ ದಾಸವಾಣಿಯ ಸರಿಯಾದ ಅರ್ಥ ಹೊಳೆಯಲು ಸಾಧ್ಯ. ಸಾಮಾನ್ಯಾರ್ಥದಲ್ಲಿ ಗುರುವೆಂದರೆ ಶಿಕ್ಷಕ. ಕಲಿಯುವವರಿಗೆ ವಿದ್ಯೆಯನ್ನು ಕಲಿಸಿಕೊಡುವವನು. ಮಠ, ಮಾನ್ಯಗಳ ನೇಮ ನಿಷ್ಠೆಗೆ ತಮ್ಮನ್ನು ಒಪ್ಪಿಸಿಕೊಂಡವರಿಗೆ ಗುರುವೆನ್ನುವುದು ಆರಾಧ್ಯ ದೈವದ ಲೌಕಿಕ ಮುಖ. ಕಾವಿ ತೊಟ್ಟು, ಸಂಸಾರ ತ್ಯಜಿಸಿ, ಆಶೀರ್ವಚನಕ್ಕೆ ಕುಳಿತ ಮಠದಯ್ಯ! ಪುಂಡರಿಗೆ, ಲೋಕದ ಸಾಮಾನ್ಯ  ನಿಯಮ ಮೀರಿ ನಡೆಯುವ ಗುಂಪಿಗೆ ನಾಯಕನಾದವನನ್ನೂ ಗುರುವೆಂದು ಸಂಭೋದಿಸುವುದನ್ನೂ ಕಾಣುತ್ತೇವೆ. ಇನ್ನು ಛಂಧಶ್ಶಾಸ್ತ್ರದ ಗಣಪ್ರಸ್ತಾರದ ಪ್ರಕಾರ ಗುರುವೆಂದರೆ ದೀರ್ಘವಾದುದು, ಒತ್ತಕ್ಷರವಿರುವುದು ಅಥವ ಮಹಾ ಪ್ರಾಣವಾಗಿರುವುದು.

ಮೇಲ್ನೋಟಕ್ಕೆ ಕಾಣುವ ಗುರುವಿನ ಹೊರಾರ್ಥಗಳನ್ನೆಲ್ಲ ಒಂದೆಡೆ ಸೇರಿಸಿದಾಗ ಒಂದು ಗಮನೀಯ ಅಂಶ ಹೊಳೆಯುತ್ತದೆ. ಅದು ಗುರುವೆಂದರೆ ಹಿರಿತನವನ್ನು ತನ್ನೊಟ್ಟಿಗೆ ಹೊತ್ತೊಯ್ಯುತ್ತಿರುವುದು. ಆಕರ್ಷಣೆಯ ಒಂದಂಶವನ್ನು  ತನ್ನೊಂದಿಗೆ ಬೆಸೆಸಿಕೊಂಡಿರುವುದು. ಅಥವ ಗುರು ಹೆಸರಿನ ಗ್ರಹದ ಹಾಗೆ ಗಾತ್ರ ಮತ್ತು ಭಾರದಲ್ಲಿ ದೊಡ್ಡದಾಗಿರುವುದು.

ಈ ಎಲ್ಲ ಅರ್ಥಗಳನ್ನು ನಿಘಂಟಿನಲ್ಲಿ ಕಾಣಬಹುದಾದರೂ ಗುರುವೆಂಬ ಅರಿವಿಗೆ ಇರುವ ವಿಶಾಲಾರ್ಥವನ್ನು ನಾವು ಗಮನಿಸಬೇಕು. ಬರಿ ಮರಳ ಮೇಲೆ ಅಕ್ಷರ ತಿದ್ದಿಸಿದ ಓಚಯ್ಯನವರಿಂದ ಹಿಡಿದು ಆಧುನಿಕ ವಿಜ್ಞಾನವನ್ನು ಬೋಧಿಸುತ್ತಿರುವ ವಿಶ್ವ ವಿದ್ಯಾಲಯದ ಪ್ರೊಫೆಸರವರೆಗೂ ಈ ಗುರುವಿನ ಅಂಶ ಚದುರಿರುವುದನ್ನು ಯಾರುತಾನೆ ಅಲ್ಲಗಳೆಯಲು ಸಾಧ್ಯ? ಪ್ರಾಥಮಿಕ ಶಾಲೆಗಳಲ್ಲಿ ಕಲಿತ ಸರಳ ಕೂಡು ಕಳೆಯುವ ಲೆಕ್ಕ ದಕ್ಕದೇ ಆಧುನಿಕ ಬೀಜ ಶಾಸ್ತ್ರದ ಬೃಹನ್ನಿಯಮಗಳು ತಲೆಗೆ ಹೋಗಿಸಿಕೊಂಡವರುಂಟೇ? ಅ, ಆ, ಇ, ಈ ತಿದ್ದಿ ತೀಡಿ ಕಲಿತ ಬಾಲ ಬುದ್ಧಿಗೆ ಮಾತ್ರ ಪಂಪ, ರನ್ನ, ಕುಮಾರವ್ಯಾಸರನ್ನೂ ಅರೆದು ಕುಡಿಯುವ ಛಲ ಹುಟ್ಟಲು ಸಾಧ್ಯ.

ಹಾಗಾಗಿ ಪುನಃ ಪುನಃ ನಮಗೆ ಈಗಲಾದರೂ ಮನವರಿಕೆಯಾಗಬೇಕಿರುವುದೆಂದರೆ ಪ್ರಾಥಮಿಕ ಹಂತದಲ್ಲಿ ಕಲಿಕೆಗೆ ಗಮನ ನೀಡದ ಯಾರೂ ಉನ್ನತ ಶಿಕ್ಷಣದತ್ತ ತಾವೇ ತಾವಾಗಿ ಹೋಗಿರುವುದಿಲ್ಲ. ಆದರೆ ಸಮಾಜೋರಾಜಕೀಯ ಸ್ಥಿತ್ಯಂತರಗಳು ಕಲಿಸುವ ಗುರುವಿಗಿಂತಲೂ ಕಲಿಯುವ ವಿದ್ಯೆಯನ್ನು ದೊಡ್ಡದು ಮಾಡಿವೆ. ‘ವರ್ಣ ಮಾತ್ರಂ ಕಲಿಸಿದಾತಂ ಗುರು’ವೆನ್ನುವ ಮಾತು ಮೂಲೆಗೆ ಬಿದ್ದಿದೆ. ಗುರುಮುಖೇನ ಪ್ರಸಾದವಾಗಬೇಕಿರುವ ಸಂಗೀತದಂಥ ಸಾಂಸ್ಕೃತಿಕ ವಿದ್ಯೆಯೂ ಸಂತೆಗೆ ಮೂರು ಮೊಳ ನೇಯುವ ಜಾಯಮಾನಕ್ಕೆ ಒಗ್ಗಿಹೋಗಿರುವ ದುರಂತ ಕಣ್ಣಮುಂದೆಯೇ ಇದೆ.
‘ಆಚಾರ್ಯ ದೇವೋಭವ’ ಎಂದು ನಂಬಿದ್ದ ಆರ್ಷೇಯ ಪರಂಪರೆಗೆ ದ್ರೋಣಾಚಾರ್ಯರು ಹೇಗೋ ಹಾಗೇ ಇಚ್ಛಾಮರಣಿ ಭೀಷ್ಮರೂ ಕುರುಕುಲದ ಗುರುಗಳಾಗಿದ್ದವರು. ಕೃಷ್ಣ ದ್ವೈಪಾಯನರಂತೂ ರಾಜಗುರುಗಳಾಗಿ ಮೆರೆದವರು. ವಿಶಾಮಿತ್ರ, ಪರಶುರಾಮ, ವಸಿಷ್ಠ, ಸಾಂದೀಪನಿಯಂಥ ಹಲವು ಗುರುಗಳು ತಿದ್ದಿ ತೀಡಿ ನಿರ್ಮಿಸಿದ ಶಿಷ್ಯವೃಂದ ಈ ನಾಡು ಮರೆಯದೇ ಇರುವಂಥದು.ಒಬ್ಬ ಸಾಮಾನ್ಯ ಶಿಕ್ಷಕ ಪಾಠ ಹೇಳುತ್ತಾನೆ. ಒಳ್ಳೆಯ ಶಿಕ್ಷಕನಾದವನು ಅದನ್ನು ವಿವರಿಸಿ ತಿಳಿಸುತ್ತಾನೆ. ಉತ್ತಮ ಶಿಕ್ಷಕನಾದವನು ಪ್ರಾತ್ಯಕ್ಷಿಕೆಯ ಮೂಲಕ ಮನದಟ್ಟು ಮಾಡಿಸಿದರೆ, ಅತ್ಯುತ್ತಮ ಶಿಕ್ಷಕನಾದವನು ತಾನೂ ಕಲಿಕೆಯೊಂದಿಗೆ ಕಲಿಯುತ್ತ, ಕಲಿಯುತ್ತಿರುವವರನ್ನೂ ಉದ್ದೀಪಿಸುತ್ತಲೇ ಇರುತ್ತಾನೆ.

ನಾವೆಲ್ಲ ಬೆಳೆದು ದೊಡ್ಡವರಾಗಿ ನಮ್ಮ ಕಾಲಿನ ಮೇಲೆ ನಾವು ನಿಂತಿರುವ ಈ ಸನ್ನಿವೇಶದಲ್ಲಿ ನಮಗೆ ನಮ್ಮ ಸಾಧನೆಯೇ ಮುಖ್ಯವಾಗಿ ಕಾಣುತ್ತದೆ. ಆದರೆ ನಮ್ಮ ಈ ಸಾಧನೆಯ ಹಿಂದೆ ನಮ್ಮ ಹೆತ್ತವರ ಅಲ್ಪ ಸ್ವಲ್ಪ ಪಾಲಿನ ಜೊತೆಗೇ ನಮ್ಮ ಎಳವೆಯಲ್ಲಿ ವರ್ಣಮಾಲೆ ಕಲಿಸಿ, ಮಗ್ಗಿ ಹೇಳಿಸಿ, ಕುತೂಹಲದ ಪ್ರಶ್ನೆಗಳಿಗೆ ಸಮಾಧಾನದ ಉತ್ತರದ ಜೊತೆಗೇ ವಾರ್ಷಿಕೋತ್ಸವದ ನಾಟಕಕ್ಕೆ ನಮ್ಮ ಮುಖಕ್ಕೆ ಬಣ್ಣ ಹಚ್ಚಿದ ಮೇಸ್ಟ್ರುಗಳನ್ನು ಮರೆತೇ ಬಿಟ್ಟಿರುತ್ತೇವೆ. ಪ್ರದರ್ಶನದ  ವಿಗ್ರಹಗಳಂತೆ ಈಗ ನಳನಳಿಸುತ್ತಿರುವ ನಮಗೆ, ಮೊದಲ ಚಾಣದ ಪೆಟ್ಟು ಕೊಟ್ಟ ಆ ಪುಣ್ಯಾತ್ಮರುಗಳು ಬದುಕಿದ್ದಾರೋ ಇಲ್ಲವೋ ಅವರ ಸುದ್ದಿ ನಮಗೆ ಗೊತ್ತಾಗುವುದೇ ಇಲ್ಲ.

ಕಲಿಯುವ ವಿದ್ಯೆಗೂ, ಬದುಕಿಗೆ ಆಧಾರವಾಗುವ ನೌಕರಿಗೂ ಅರ್ಥಾರ್ಥ ಸಂಬಂಧಗಳೇ ಇರದ ಇವತ್ತಿನ ಸ್ಥಿತಿಯಲ್ಲಿ ನಿನ್ನೆ ಮೊನ್ನೆಗಳ ಗಾಯಗಳೆ ಮಾಯದಿರುವಾಗ ಬಾಲ್ಯದ ಆರಾಮಕ್ಕೆ ಹೊರಳುವ ವಿರಾಮ ನಮಗಿದೆಯೇ ಎನ್ನುವುದೂ ಇಲ್ಲಿ ಮುಖ್ಯ.  ಹಾಗೊಂದು ವೇಳೆ ಅದು ಸಾಧ್ಯವಾದರೆ ನಮ್ಮ ನೆನಪಿನ ಕೊಂಡಿ ಕಚ್ಚಿಕೊಳ್ಳುವುದು ಕೇವಲ ಪ್ರಾಥಮಿಕ ಶಾಲೆಯ ಕಲಿಕೆಯವರೆಗೆ ಮಾತ್ರ. ಪ್ರೌಢ ಶಾಲೆ, ಕಾಲೇಜುಗಳಲ್ಲಿ ನಾವು ನಡೆಸಿದ್ದ ಪುಂಡಾಟಿಕೆಯೋ, ಅಂದಾದುಂದಿಯೋ ನೆನಪಿಗೆ ದಕ್ಕುವುದೇ ವಿನಾ ಪಾಠ ಹೇಳಿದ್ದ ಕೆಲವರಷ್ಟೇ ಸ್ಮೃತಿಗೆ ಬರುತ್ತಾರೆ. ಆದರೆ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಕಲಿಸಿದ್ದ ಶಾಸ್ತ್ರಿ, ಮಗ್ಗಿ ಕಲಿಸಿದ ಮಂಜಪ್ಪ, ಹಿಂದಿಯ ಹೈ, ನೈ ಗೊತ್ತಿರದಿದ್ದರೂ ಕತೆಯ ಮೂಲಕವೇ ರಮ್ಯ ಲೋಕಕ್ಕೆ ನಮ್ಮನ್ನೊಯ್ಯುತ್ತಿದ್ದ ಲಕ್ಷ್ಮಮ್ಮ ಟೀಚರ್, ನೆನೆಸಿಕೊಂಡಾಗಲೆಲ್ಲ ಮನಸಿನಾಳಕ್ಕೆ ಬರುತ್ತಾರೆ. ಲಂಕೇಶರನ್ನು, ಅನಂತಮೂರ್ತಿಗಳನ್ನು ‘ಮೇಸ್ಟ್ರು’ ಎಂದೇ ಕರೆದು ಖುಷಿಗೊಳ್ಳುವ ನಮಗೆ ಅವರನ್ನು ಅನ್ಯರಂತೆ ಭಾವಿಸಲು ಬೇಸರ!

ನಮ್ಮ ಅರಿವಿಗೆ ಬಾರದೇ ನಾವು ನಮಗೆ ಕಲಿಸಿದವರನ್ನು ನಕಲು ಮಾಡಿರುತ್ತೇವೆ. ಏಕೆಂದರೆ ಒಬ್ಬ ಉತ್ತಮ ಶಿಕ್ಷಕನಾದವನು ತನ್ನ ಶಿಷ್ಯರನ್ನೂ ತನ್ನ ಪ್ರತಿರೂಪದಂತೆಯೇ ಎರಕ ಹೊಯ್ದಿರುತ್ತಾನೆ. ಬಾಲ್ಯದಲ್ಲಿ ಕಲಿತ ಪಾಠಗಳು ಬದುಕಿನ ತುಂಬ ಉಳಿಯುತ್ತವೆ. ನಮಗೆ ಪಾಠ ಹೇಳಿದ್ದ ಅವರನ್ನು ಮತ್ತು ಅವರಂಥವರನ್ನು ಗೌರವಿಸಲು, ನಮ್ಮ ಶುಭಾಶಯಗಳನ್ನು ಅವರಿಗೆ ತಲುಪಿಸಲು ಸರಿಯಾದ ದಿನವೆಂದರೆ ಸೆಪ್ಟೆಂಬರ್ ಐದನೇ ತಾರೀಖಿನ ಶಿಕ್ಷಕರ ದಿನ. ೧೯೬೨ರಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಈ ದೇಶದ ಮೊದಲ ಪ್ರಜೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕಾಲಕ್ಕೆ ಅವರ ಶಿಷ್ಯರು, ಅಭಿಮಾನಿಗಳು ಅವರ ಹುಟ್ಟುಹಬ್ಬವನ್ನಾಚರಿಸಲು ಒತ್ತಾಯಿಸಿದಾಗ ಅವರು ಅದನ್ನು ‘ಶಿಕ್ಷಕರ ದಿನ’ವೆಂದು ಆಚರಿಸಿದರೆ ಮಾತ್ರ ತಮ್ಮ ಒಪ್ಪಿಗೆ ನೀಡುವುದಾಗಿ ಹೇಳಿದರಂತೆ. ಸ್ವತಃ ತತ್ವ ಶಾಸ್ತ್ರ ಅಧ್ಯಾಪಕರಾಗಿ, ದೆಹಲಿ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಕೆಲಸ ಮಾಡಿದ್ದ ಅವರು ಶಿಕ್ಷಕ ವೃತ್ತಿಗೆ ತಂದು ಕೊಟ್ಟ ದೊಡ್ಡ ಗೌರವ, ಘನತೆಗಳನ್ನು ಈ ಕಾಲದ ಶಿಕ್ಷಕರು ಉಳಿಸಿಕೊಂಡಿದ್ದಾರೆಯೇ ಎನ್ನುವುದೂ ಇಲ್ಲಿ ಬಹು ಮುಖ್ಯ ಪ್ರಶ್ನೆ.


ಸಾಕ್ರೆಟಿಸ್ ಕೂಡ ಗುರುವಾಗಿದ್ದವನೇ. ಅವನು ಸ್ವತಃ ತನ್ನನ್ನೇ ಕಲಿಕೆಗೆ ತೊಡಗಿಸಿಕೊಂಡವನೆಂದು ಭಾವಿಸಿದ್ದನೇ ಹೊರತು ಪಾಠ ಹೇಳುವ ಕಸುಬು ತನ್ನದಲ್ಲವೆಂದೇ ಪರಿಭಾವಿಸಿದ್ದ. ಅವನು ಜಾಣ್ಮೆ ಮತ್ತು ಒಳ್ಳೆಯತನಗಳು ಪ್ರೀತಿ ಮತ್ತು ಸ್ನೇಹದಿಂದ ಹುಟ್ಟುವುವೆಂಬ ಪರಮ ಸತ್ಯದ ಪ್ರತಿಪಾದಕನೂ ಆಗಿದ್ದ. ಶಿಷ್ಯನ ಕಲಿಕೆಗೆ ತಾನೊಂದು ತೃಣ ಮೂಲವೆಂದೇ ನಂಬಿದ್ದ ಸಾಕ್ರೆಟೀಸ್, ಕಲಿಯುವವನಿಗೆ/ಕಲಿಸುವವನಿಗೆ  ಬೇಕಿರುವ ತಾಳ್ಮೆ ಮತ್ತು ಶ್ರಮಗಳನ್ನು ಎಂದೂ ದುರುಪಯೋಗ ಮಾಡಿಕೊಳ್ಳಲೇ ಇಲ್ಲವಂತೆ.

ಕಲಿಕೆಯ ಕಾಲದ ಸರಿಸುಮಾರು ೨೫,೦೦೦ ಗಂಟೆಗಳನ್ನು ವಿದ್ಯಾರ್ಥಿಯೊಬ್ಬನು ವ್ಯಯಿಸಬೇಕಾಗುತ್ತದೆ. ಶಿಕ್ಷಕರೇ ಇಲ್ಲದ ಶಾಲೆಗಳು, ಸೂರೇ ಇಲ್ಲದ ಶಾಲೆಗಳು, ಹೊಸತೇನನ್ನೂ ಕಲಿಸದೇ ತಮ್ಮ ಸರ್ವಿಸ್ ಮುಗಿಸುವ ಶಿಕ್ಷಕರೂ ತುಂಬಿರುವ ಈ ದಿನಮಾನಗಳ ಶೈಕ್ಷಣಿಕ ಜಗತ್ತು ತಾನು ಕೊಡಬೇಕಾದ ಸವಲತ್ತು ಮತ್ತು ನಿರ್ವಹಿಸಬೇಕಾದ ಜವಾಬ್ದಾರಿಗಳನ್ನು ಸ್ವತಃ ಆಲೋಚಿಸಿದೆಯೇ ಎಂದರೆ ಅದು ನಿರಾಶೆಗೊಳಿಸುವ ಸ್ಥಿತಿಯಲ್ಲಿದೆ.

ವಿಶ್ವ ವಿದ್ಯಾಲಯಗಳ/ಕಾಲೇಜು ಅಧ್ಯಾಪಕರಿಗೆ ಯು.ಜಿ.ಸಿ ವೇತನ ನೀಡುವ ಸರಕಾರ ಅವರನ್ನೆಂದಿಗೂ ಇತರ ಕೆಲಸಗಳಿಗೆ ಬಳಸಿಕೊಳ್ಳುವುದಿಲ್ಲ. ಜೊತೆಗೆ ವಾರಕ್ಕೆ ಹೆಚ್ಚೆಂದರೆ ಐದಾರು ಗಂಟೆಗಳ ಪಾಠ ಹೇಳಬೇಕಿರುವ ಅವರಲ್ಲಿ ಹೆಚ್ಚಿನವರು ತಮ್ಮ ವೃತ್ತಿಯನ್ನೆಂದೂ ಗೌರವದ ಹುದ್ದೆಯೆಂದು ಭಾವಿಸಿರುವುದೇ ಇಲ್ಲ. ಹುಡುಗರಿಗೆ ಬೇಕೋ ಬೇಡವೋ ಸಿಲೆಬಸ್ ಮುಗಿಸಿ ಕೈ ತೊಳೆದುಕೊಳ್ಳುವ ಇವರಿಗೆ ಕಾಲೇಜಿನ ಫಲಿತಾಂಶಕ್ಕಿಂತಲೂ ತಮ್ಮ ಇಂಕ್ರಿಮೆಂಟು, ಡಿ.ಎ ಹೆಚ್ಚಳಗಳಲ್ಲೇ ಪರಮ ಆಸಕ್ತಿ. ಅನೇಕ ವಿಶ್ವವಿದ್ಯಾಲಯಗಳು ವ್ಯವಸ್ಥೆಯ ವಿರುದ್ಧ ಯುವಜನರನ್ನು ಸಂಘಟಿಸುವ ಕೇಂದ್ರಗಳಾಗಿವೆಯೆಂಬ ಕೂಗೂ ಇತ್ತೀಚೆಗೆ ಮಾರ್ದನಿಗೊಳ್ಳುತ್ತಿದೆ.

ಪಿ.ಯು.ಕಾಲೇಜುಗಳ ಉಪನ್ಯಾಸಕರಿಗೆ ಇಬ್ಬಂದಿಯಲ್ಲಿ ತೊಡಗಿಕೊಂಡ ವಯಸ್ಸಿನ ಹುಡುಗರೊಂದಿಗೆ  ಒಡನಾಟ.
ಹದಿ ಹರೆಯದ, ಎಳಸಿನ್ನೂ ಮಾಗಿರದ ಹುಡುಗರಿಗೆ ತಮ್ಮ ಭಾವಿ ಜೀವನದ ಕನಸುಗಳು ಚಿಗುರೊಡೆಯುವ ಕಾಲ. ಈಗಿನ ವ್ಯವಸ್ಥೆಯಲ್ಲಂತೂ ಪಿ.ಯು ವಿದ್ಯಾಭ್ಯಾಸ ಉನ್ನತ ಶಿಕ್ಷಣದ ಹೆಬ್ಬಾಗಿಲಾಗಿರುವುದರಿಂದ ವಿಜ್ಞಾನ ವಿಭಾಗದ ಹುಡುಗರಿಗಂತೂ ಇದು ಅಗ್ನಿಪರೀಕ್ಷೆಯ ಕಾಲ. ಸಿ.ಇ.ಟಿಯ ಕೋಚಿಂಗ್ ಕ್ಲಾಸುಗಳಿಂದ ಲಕ್ಷಗಟ್ಟಲೆ ಬಾಚುತ್ತಿರುವ ಮೇಸ್ಟ್ರುಗಳಿಗಂತೂ ಸುಗ್ಗಿಯ ಹಬ್ಬ. ಇನ್ನು ಕಲೆ ಅಥವ ವಾಣಿಜ್ಯ ವಿಭಾಗದ ಹೆಚ್ಚಿನ ವಿದ್ಯಾರ್ಥಿಗಳಿಗೆ ಕಾಲೇಜೆನ್ನುವುದು ಮೋಜಿನ ಕೂಟ. ಅವರನ್ನು ಕಾಯುವುದೇ ಉಪನ್ಯಾಸಕರ ಕಾಯಕ.

ಪ್ರೌಢ ಶಿಕ್ಷಣದ ಹೊತ್ತಿಗಾಗಲೇ ಜೊಳ್ಳುಕಾಳುಗಳೆಲ್ಲ ತೂರಿ ಹೋಗಿ ಗಟ್ಟಿ ಕಾಳುಗಳಷ್ಟೇ ಉಳಿದಿರುವುದರಿಂದ ಈ ಹಂತದ ಶಿಕ್ಷಕರು ತಮ್ಮ ವೃತ್ತಿಯಲ್ಲಿ ಹೆಚ್ಚು ಶ್ರಮ ವಹಿಸದೇ ಆದರೆ ಎಸ್.ಎಸ್.ಎಲ್.ಸಿ ಎಂಬ ಗುಮ್ಮನನ್ನು ಎದುರಿಸುವ ಧೈರ್ಯವನ್ನು ಹುಡುಗರಿಗೆ ತುಂಬಬೇಕಿರುತ್ತದೆ. ಈ ಹಂತದ ವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿಯ ಪೋಷಕರ ಪಾಲೂ ಮುಖ್ಯವಾಗಿರುವುದರಿಂದ ಮತ್ತು ಮುಂದಿನ ವಿದ್ಯಾಭ್ಯಾಸದ ಅಂದಾಜು ಈಗಲೇ ದಕ್ಕುವುದರಿಂದ ವಿದ್ಯಾರ್ಥಿಗಳನ್ನು ತಯಾರು ಮಾಡುವ ಕಠಿಣ ಕೆಲಸ ಸರಿಸಮನಾಗಿ ಹಂಚಿಹೋಗಿರುತ್ತದೆ.

ಆದರೆ ಪ್ರಾಥಮಿಕ ವಿದ್ಯಾಭ್ಯಾಸದ ಕಾಲವೆಂದರೆ ಅದು   ಸಸಿಯೊಂದು ನೆಟ್ಟ ಸ್ಥಳದಲ್ಲಿ ಗಟ್ಟಿಯಾಗಿ ನಿಂತು ಗಿಡವಾಗಬೇಕಾದ, ರೂಪಾಂತರಕ್ಕೆ ಕಾತರಿಸುವ ರಸನಿಮಿಷವಾಗಿದೆ. ಹಾಗಾಗಿ ಈ ಹಂತದ ವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿಗಿಂತಲೂ ಅವನನ್ನು ತಯಾರು ಮಾಡುವ ಶಿಕ್ಷಕನ ಜವಾಬ್ದಾರಿ ಮುಖ್ಯವಾಗಿರುತ್ತದೆ. ಸುತ್ತಲಿನ ಕಳೆಕಿತ್ತು ಆ ಗಿಡದ ಪರಿಪೋಷಣೆಯ ಕರ್ತವ್ಯ ನಿಭಾಯಿಸುವ ಛಲ ತೋರಿಸಬೇಕಾಗುತ್ತದೆ. ಕಾಲಕಾಲಕ್ಕೆ ಬೇಕಾದ ಗೊಬ್ಬರ, ನೀರು, ನಿಯಂತ್ರಣ ಹಾಗೂ ಅನ್ಯ ಸಂಕರಣಗಳಿಂದಲೂ ಸಸಿಯನ್ನು ಕಾಪಾಡುವ ನೈತಿಕತೆಯನ್ನು ಬಿತ್ತಬೇಕಿರುವ ಕಾಲ ಇದಾಗಿರುತ್ತದೆ.

ದುರಂತವೆಂದರೆ ನಮ್ಮ ಬಹಳಷ್ಟು ಪ್ರಾಥಮಿಕ ಶಾಲೆಗಳಲ್ಲಿ ಮೂಲ ಸೌಲಭ್ಯಗಳ  ಕೊರತೆಯಿದೆಯೆಂದು  ಸರ್ಕಾರವೇ ಒಪ್ಪಿಕೊಂಡಿದೆ. ‘ಸರ್ವ ಶಿಕ್ಷಣ ಅಭಿಯಾನ’, ‘ಮರಳಿ ಬಾ ಶಾಲೆಗೆ’, ಇತ್ಯಾದಿ ಯೋಜನೆಗಳ ಅನುಷ್ಠಾನಕ್ಕಾಗಿ ಕೋಟಿಗಟ್ಟಲೆ ವ್ಯಯಿಸುವ ಸರ್ಕಾರ, ಇಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ಹುರುಪುಗೊಳಿಸುವ  ಕೆಲಸವನ್ನಾಗಲೀ, ಕಾಲ ಕಾಲಕ್ಕೆ ಬೇಕಾಗುವ ತರಬೇತಿಯನ್ನಾಗಲೀ ವ್ಯವಸ್ಥಿತವಾಗಿ ನೀಡುತ್ತಿಲ್ಲ. ಶಿಕ್ಷಕರ ಸಹಕಾರವಿಲ್ಲದೇ ಒಂದೇ ಒಂದು ಚುನಾವಣೆಯನ್ನು ನಡೆಸುವ ಸ್ಥಿತಿಯಲ್ಲಿ ಸರ್ಕಾರವಿಲ್ಲ. ಜನ ಗಣತಿ, ದನ ಗಣತಿಗಳೆಂದು ವರ್ಷವಿಡೀ ಅಂಕಿ ಸಂಖ್ಯೆಗಳ ಮಾಯಾಲೋಕದಲ್ಲೇ ಅವರನ್ನು ಇರಿಸುವ ನಮ್ಮ ವ್ಯವಸ್ಥೆ ಇತ್ತೀಚಿನ ‘ಅಕ್ಷರ ದಾಸೋಹ’ದ ಸಮರ್ಪಕ ಅನುಷ್ಠಾನಕ್ಕೂ ಇವರನ್ನೇ ಬಳಸಿಕೊಳ್ಳುತ್ತಿದೆ. ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲೆಲ್ಲೂ ಜವಾನರ ಹುದ್ದೆಯೇ ಇಲ್ಲದಿರುವುದರಿಂದ ಶಾಲೆಯ ಕಸ ಗುಡಿಸುವ ಕೆಲಸವನ್ನು ನಮ್ಮ ಚಿಣ್ಣರ ಪುಟ್ಟ ಕೈಗಳೇ ಮಾಡುತ್ತಿವೆಯೆನ್ನುವುದೂ ನಮ್ಮಲ್ಲಿ ಬಹಳ ಜನಕ್ಕೆ ಗೊತ್ತಿಲ್ಲ.     

ಸರ್ಕಾರಿ ಶಾಲೆಗಳ ಸ್ಥಿತಿ ಹೀಗಿದ್ದರೆ ಖಾಸಗಿ ಶಾಲೆಗಳ ಸ್ಥಿತಿ ಇದಕ್ಕಿಂತ ಇನ್ನೂ ಶೋಚನೀಯವಾಗಿದೆ. ಬಹಳಷ್ಟು ಖಾಸಗೀ ಪ್ರಾಥಮಿಕ ಶಾಲೆಗಳು ಸರ್ಕಾರದ ಅನುದಾನವಿಲ್ಲದೇ ನಡೆಯುತ್ತಿರುವುದರಿಂದ ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸರಿಯಾದ ಸಂಬಳ ಸಿಕ್ಕುವುದೇ ಇಲ್ಲ. ಹಾಗಾಗಿ ಕನಿಷ್ಠ ವಿದ್ಯಾರ್ಹತೆಯೂ ಇಲ್ಲದ ಮಂದಿ ಶಿಕ್ಷಕರಾಗಿ ಕೆಲಸಮಾಡುವುದರಿಂದ ನಮ್ಮ ಪುಟ್ಟ ಮಕ್ಕಳ ಭವಿಷ್ಯ ಅದೆಷ್ಟು ಉಜ್ವಲವಾಗಿ ಬೆಳಯಬಲ್ಲುದೆಂಬುದು ನಮ್ಮ ಲೋಕ ಜ್ಞಾನಕ್ಕೆ ಬಿಟ್ಟ ಸಂಗತಿಯಾಗಿದೆ. ಜೊತೆಗೇ ಮಧ್ಯಮ ವರ್ಗದವರೆಲ್ಲರೂ ಖಾಸಗಿ ಶಾಲೆಗಳಿಗೇ ತಮ್ಮ ಮಕ್ಕಳನ್ನು ಸೇರಿಸುವುದರಿಂದಾಗಿ ಸರ್ಕಾರೀ ಶಾಲೆಗಳಲ್ಲಿ ಉಳಿಯುವ ಮಕ್ಕಳೆಂದರೆ ಒಂದೋ ಪೋಷಕರ ಗಮನದಲ್ಲಿಲ್ಲದ ಪೋಲಿಗಳು ಅಥವ ಬಡತನ ರೇಖೆಗಿಂತಲೂ ಕಡಿಮೆ ಇರುವ ಮತ್ತು ಹೆಚ್ಚಿನ ವೇಳೆ ಮಧ್ಯಾಹ್ನದ ಬಿಸಿ ಊಟದ ಆಸೆಗೆ ಶಾಲೆಗೆ ಬರುವ ಮಕ್ಕಳು.

ಇಂಥ ಮಕ್ಕಳ ಜೊತೆ ಬಡಿದಾಡಿ ಪಾಠ ಪ್ರವಚನ ಹೇಳಬೇಕಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಪರಿಶ್ರಮಕ್ಕೆ  ತಕ್ಕ ಪ್ರತಿಫಲ ಅವರಿಗಿದೆಯೇ? ಮೊನ್ನೆ ಮೊನ್ನೆ ನಡೆದ ಶಿಕ್ಷಕಿ ಪ್ರೇಮಳ ದುರಂತ ಮರಣದ ನೆನಪೂ ಸಾರ್ವಜನಿಕ ನೆನಪಿನಿಂದ ಮರೆಯಾಗಿ ಹೋಗಿದೆ. ಶಾಲಾ ಉಸ್ತುವಾರಿ ಸಮಿತಿಗಳಂತೂ ರಾಜಕೀಯದ ಕೂಪಗಳಾಗಿರುವುದರಿಂದ ಘನತೆಯಿಂದ ಬದುಕಬೇಕೆನ್ನುವ ಶಿಕ್ಷಕನನ್ನು ಆ ಕನಸಿನಿಂದಲೂ ದೂರ ದೂಡುತ್ತಿವೆ.

ಪ್ರಾಥಮಿಕ ಶಾಲೆಯ ಶಿಕ್ಷಕರಷ್ಟು ರಾಜಕೀಯ ಮಾಡುವ ಎದೆಗಾರಿಕೆ ಉಳಿದ ಸರ್ಕಾರಿ ನೌಕರರಿಗಿಲ್ಲವೆಂಬುದೂ ಅಷ್ಟೇ ಸತ್ಯದ ವಿಚಾರ. ನಮ್ಮ ಬಹುತೇಕ ರಾಜಕೀಯ ನಾಯಕರ ಬೇರುಗಳಿರುವುದೇ ಈ ಶಿಕ್ಷಕರೆಂಬ ಹಣೆಪಟ್ಟಿಯಲ್ಲಿರುವ ಹಳ್ಳಿಗಾಡಿನ ಜನರನ್ನು ಮರುಳುಗೊಳಿಸುವ ಊಸರವಳ್ಳಿಗಳಲ್ಲಿ. ಪಾಠ ಮಾಡುವುದಿರಲಿ ಶಾಲೆಯ ಹೊಸ್ತಿಲನ್ನೇ ತುಳಿಯದೇ ತಿಂಗಳು ತಿಂಗಳು ಸಂಬಳ ಎಣಿಸಿಕೊಳ್ಳುವವರೂ ಸಾಕಷ್ಟು ಮಂದಿ ಇದ್ದಾರೆ.

‘ಶಿಕ್ಷಕರ ದಿನಾಚರಣೆ’ಯ ಈ ಮಹತ್ವದ ದಿನದಲ್ಲಾದರೂ ಅವರ ವೃತ್ತಿಗಿರುವ ಘನತೆ ಗಾಂಭೀರ್ಯಗಳನ್ನು ಅವರು ಉಳಿಸಿಕೊಳ್ಳುವ ಸಂಕಲ್ಪ ಮಾಡಲಿ. ಹಾಗೇ ಸಮಾಜವನ್ನು ತಿದ್ದಿ ತೀಡಿ ಬೆಳಸುತ್ತಿರುವ ಆ ಇಡೀ ಶಿಕ್ಷಕ ಸಮುದಾಯವನ್ನು ಆದರಿಸಿ, ಗೌರವಿಸುವ ಸಂಕಲ್ಪ ಎಲ್ಲೆಡೆಯಿಂದಲೂ ಮೂಡಿ ಬರಲಿ.


ಬುಧವಾರ, ಆಗಸ್ಟ್ 29, 2012

http://epapervijayavani.in/epapermain.aspx?queryed=9&eddate=08%2F25%2F2012

ಮಂಗಳವಾರ, ಆಗಸ್ಟ್ 28, 2012

ಪ್ರಣಯೋನ್ಮಾದದಾಚೆಯ ಅರಿವಿಗೆ ಕಾತರಿಸುವ ‘ಅವನರಿವಲ್ಲಿ’



ಯುವ ಬರಹಗಾರರು ಆಧುನಿಕ ಕನ್ನಡ ಕಾವ್ಯದ ಹೊಸ ವಿಸ್ತರಣಕ್ಕೆ ಕೈ ಹಾಕುತ್ತಿರುವುದರ ಪುರಾವೆಗಳು ಆ ಬರಹಗಾರರ ಕೃತಿಗಳಿಂದ ಮನನ ಮಾಡಿಕೊಡುತ್ತಿರುವ ಸಮಯವಿದು. ಏಕಮುಖಿಯಾಗಿದ್ದ ಕನ್ನಡ ಕಾವ್ಯಕ್ಕೆ ಸಮಕಾಲೀನ ಬದುಕಿನ ಸವಾಲುಗಳನ್ನು ಸಂಕಟಗಳನ್ನು ಸಾಧ್ಯತೆಗಳನ್ನು ತಾವು ಕಂಡುಂಡ ಹಾದಿಯ ಪಲುಕುಗಳನ್ನು ಹೌದೆನ್ನಿಸುವಂತೆ ದಾಖಲಿಸುತ್ತಿರುವ ಈ ಹೊತ್ತಿನ ಬರಹಗಾರರ ಕಾವ್ಯದ ನಡಿಗೆ ಕನ್ನಡ ಕಾವ್ಯಕ್ಕೆ ಹೊಸ ಅನುಸಂಧಾನಗಳನ್ನು, ಸಾಧ್ಯತೆಗಳನ್ನು ಪೋಣಿಸುತ್ತಿದೆ.
ಈಗಾಗಲೇ ತಮ್ಮ ಕವನ ಸಂಕಲನಗಳಿಂದ, ಅನುವಾದಗಳಿಂದ ಖ್ಯಾತರಾಗಿರುವ ಜ.ನಾ.ತೇಜಶ್ರೀ ಅವನರಿವಲ್ಲಿ ಹೆಸರಿನ ಖಂಡ ಕಾವ್ಯ ಪ್ರಕಟಿಸಿದ್ದಾರೆ. ಇತ್ತ ನೀಳ್ಗವಿತೆಯೂ ಅಲ್ಲದ ಅತ್ತ ಮಹಾಕಾವ್ಯವೂ ಅಲ್ಲದ ಖಂಡ ಕಾವ್ಯ ಪರಂಪರೆಗೆ ಮತ್ತೊಂದು ಕೊಂಡಿ ಈ ಕೃತಿಯಿಂದ ಸಾಧ್ಯವಾಗಿದೆ. ಹೊಸಸಂವೇದನೆಗಳಿಗೆ, ತಾಜಾ ಅನುಭವಗಳಿಗೆ, ಸಾಕ್ಷಿಪ್ರಜ್ಞೆಯಾಗಿರುವ ಡಾ.ಯು.ಆರ್.ಅನಂತಮೂರ್ತಿ ಈ ಪುಸ್ತಕಕ್ಕೊಂದು ಸಾರ್ಥಕ ಪ್ರವೇಶವನ್ನು ತಮ್ಮ ಮುನ್ನುಡಿಯಿಂದ ಅಗು ಮಾಡಿದ್ದಾರೆ.

ಸುಮಾರು ಅರವತ್ತು ಪುಟಗಳಿಷ್ಟಿರುವ ಈ ದೀರ್ಘ ಕವಿತೆ ಮೂರು ಭಾಗಗಳಲ್ಲಿ ತೆರೆದುಕೊಂಡಿದೆಯಾದರೂ ಅವೆಲ್ಲವನ್ನೂ ಬೇರೆ ಬೇರೆ ಕವಿತೆಗಳನ್ನಾಗಿಯೂ ಆಸ್ವಾದಿಸಬಹುದು. ಅಂದರೆ ಹಿಂದು ಮುಂದಿನ ಅಡ್ಡಕಗಳಿಲ್ಲದೆಯೂ ಪರಸ್ಪರ ಬೇರೆಯಾಗಿಯೂ ಹಾಗೇ  ಒಂದಾಗಿಯೂ ಇಲ್ಲಿನ ಕವಿತೆಗಳು ಕವಿಯ ಸಂವೇದನೆಯನ್ನು ಓದುಗನಿಗೆ ವರ್ಗಾಯಿಸುವುದರಲ್ಲಿ ಯಶಸ್ವಿಯಾಗಿವೆ. ಹೆಣ್ಣನ್ನು ಭೋಗದ ವಸ್ತುವೆಂದೇ ಭಾವಿಸಿದ್ದ ಗಂಡಿಗೆ ಪ್ರೌಢ ಹೆಣ್ಣೊಬ್ಬಳು ಮುಟ್ಟಿಸಿದ ಸಂಕೇತವಿದು.
ಪ್ರಣಯವನ್ನು ಕುರಿತಂತೆ ಇರುವ ಪ್ರಚಲಿತ ಪ್ರತಿಮೆ, ರೂಪಕಗಳ ಹರಹಿನಿಂದ ಬೇರೆಯಾದ ಆದರೆ ಕಾಯದ ಕಣಕಣವನ್ನೇ ಕವಿತೆಯ ರೂಪಕವನ್ನಾಗಿಸಿರುವ ಕ್ರಮ ಕನ್ನಡಕ್ಕೆ ಅದರಲ್ಲೂ ಹೆಣ್ಣೊಬ್ಬಳ ಅಂತರಗಂಗೆ ಇಷ್ಟೊಂದು ರಭಸವಾಗಿ ಹರಿಯಬಲ್ಲದೆಂಬುದಕ್ಕೂ ಈ ಖಂಡಕಾವ್ಯ ಅಪರೂಪದ ಪುರಾವೆಯಾಗಿದೆ. ಸಾವು ಮತ್ತು ಬದುಕಿನ ನಡುವೆಯ ಲೋಕ ಲೋಲಕವಾದ ಜೀವವೊಂದರ ಯಾತನೆಯು ಈ ಪರಿಯಾಗಿ ಇಷ್ಟೊಂದು ಉನ್ಮಾದವನ್ನು ಉಂಟುಮಾಡಬಹುದೆನ್ನುವ ಪರಿಯೇ ಇಲ್ಲಿ ಕವಿತೆಯಾಗಿ ಅರಳಿದೆ.

ಅವನರಿವಲ್ಲಿ ಎನ್ನುವ ಶೀರ್ಷಿಕೆ ಇಹದ ಇವನಲ್ಲಿ ಅವನನ್ನು ಕಂಡದ್ದಕ್ಕೆ ಸಾಕ್ಷಿಯೊದಗಿಸುತ್ತದೆ. ಇಲ್ಲಿನ ಚಿನ್ನಕ್ಕಿಂತ ಅಲ್ಲಿನ ಚನ್ನನ ಮೋಹಕ್ಕೆ ಬಿದ್ದ ಪರಂಪರೆ ನಮ್ಮದು. ಹಾಗೆಯೇ ಇರುವುದರಲ್ಲಿಯೇ ಇರದುದನ್ನು ಕಲ್ಪಿಸಿಕೊಂಡು ಸಮಾಧಾನಿಯಾಗಿರುವುದೂ ಈ ನೆಲದ ಅನಿವಾರ್ಯ. ಈ ಎರಡರ ನಡುವಿನ ಗೆರೆಯನ್ನು ತೇಜಶ್ರೀ ಇಲ್ಲಿ ಮಾಸಲಾಗಿಸಿದ್ದಾರೆ. ಲೌಕಿಕದ ಅನುಭವದಲ್ಲೇ ಪಾರಮ್ಯವನ್ನು ಗಳಿಸುವುದೆಂದರೆ ಇದೇ ಇರಬೇಕೆಂದು ಕವಯತ್ರಿ ಭಾವಿಸಿದ್ದಾರೆ. ಹಾಗೂ ಅವರ ಭಾವನೆಯನ್ನು ಓದುಗನೂ ಅನುಭವಿಸುತ್ತಾನೆ.

ಯಮುನೆಯ ಅಲೆಯಾಗಿತ್ತು /ನನ್ನೆದೆ ನಿನ್ನೆ ರಾತ್ರಿ ಹಾಗೆ/ ಹಿಂದೆಂದೂ ಅದು /ಢವ ಢವ ಆಡಿರಲಿಲ್ಲ ಎಂದು ಮೊದಲಸಾಲಿನಲ್ಲೇ ಪ್ರಣಯಕ್ಕೆ ಕಾದ ರಾಧೆಯನ್ನು ನೆನಪಿಸುವ ಕವಿತೆ ನನ್ನಸ್ತಿತ್ವಕ್ಕೆ ಸ್ಥಿತಪ್ರಜ್ಞೆ ಒದಗುತ್ತದೆ/ನಾನುಇಲ್ಲವಾಗುತ್ತದೆ/ ನೀನೇ ಎಲ್ಲವಾಗುತ್ತದೆ ಎಂದು ಕೊನೆಗೊಳ್ಳುವಾಗ ಮುಟ್ಟಿಸುವ ಸಂದೇಶ ಪ್ರಣಯಾದಾಚೆಯ ಅದ್ವೈತವನ್ನು ಕುರಿತಲ್ಲದೇ ಬೇರಾನಾಗಿರಲು ಸಾಧ್ಯ? ಮೇಲ್ನೋಟಕ್ಕೆ ಇಡೀ ಕವಿತೆ ಎಲ್ಲ ಪ್ರೇಮ ಕವಿತೆಗಳ ಹಾಗೆ ಗಂಡುಹೆಣ್ಣುಗಳ ಪ್ರಣಯ, ಅಂಗಸುಖ, ಕಾಯುವಿಕೆಯ ವಿರಹವನ್ನು ಕುರಿತಂತೆ ಕಾಣುವುದಾದರೂ ಪುನರೋದಿಗೆ ದಕ್ಕುವುದೆಂದರೆ ಲೌಕಿಕದಾಚೆಯ ಪರಮಸುಖಕ್ಕೆ, ಅದ್ವೈತಕ್ಕೆ, ಅರ್ಧನಾರೀಶ್ವರ ಕಲ್ಪನೆಗೆ ಈ ಕವಿ ಧ್ಯಾನಿಸಿದ್ದಾರೆ ಮತ್ತು ಆ ಸ್ಥಿತಿಯೇ ಎಲ್ಲ ಪ್ರಣಯಿಗಳಿಗೂ ದಕ್ಕಲೆಂದೇ ಕಾತರಿಸಿದ್ದಾರೆ.

ಗಂಡು ಜೋಗಿಯಾಗಿ ಹೆಣ್ಣು ಅಕ್ಕನಾಗಿ ಒದಗಿದರೆ ಆಗಬಹುದಾದ ರೆ ಇಲ್ಲಿನ ಕವಿತೆಯ ಧ್ಯಾನ. ಸೋಲನ್ನೆಂದೂ ಒಪ್ಪಿಕೊಳ್ಳದ ಗಂಡು ಮತ್ತು ಸುಲಭಕ್ಕೆ ತೃಪ್ತಳಾಗದ ಹೆಣ್ಣಿನ ಆಂತರ್ಯ ಇಲ್ಲಿನ ಚಿತ್ರಕ ಶಕ್ತಿ. ಹೇಳುವುದನ್ನು ಗಟ್ಟಿಯಾಗಿ ಹೇಳದೇ ಆದರೆ ಗಂಡನ್ನು ಸೂಕ್ಷ್ಮವಾಗಿ ಛೇಡಿಸಿರುವ ಕವಯತ್ರಿ ಆ ಸೂಕ್ಷ್ಮ ತಕ್ಷಣಕ್ಕೆ ಮತ್ತು ಸುಲಭಕ್ಕೆ ತಾಗದಂತೆ ಎಚ್ಚರವನ್ನೂ ವಹಿಸಿದ್ದಾರೆ. ನನ್ನವಳು ನೀನು, ನನ್ನ ಹೆಣ್ಣು, ನನ್ನ ಪ್ರೇಯಸಿ,/ನನ್ನ ಮಡದಿ... ಬೆಳಕೇ... /-ನಿನ್ನ ಗಂಟಲಿಂದ ಒಸರಿದ ಜೀವರಸಕ್ಕೆ /ಬಾಯೊಡ್ಡಿದೆ ನಾನು, ಸುರಿಯಿತು/ ಧಾರಾಕಾರ ಮಳೆ, ಧನ್ಯಳಾದೆ ಎಂದು ಹೇಳಿದ್ದವಳೇ ನಾನು ಕಾದಿದ್ದು ನಿನ್ನೊಂದು ಮಾತಿಗೆ/ಉತ್ತರವಾಗಿ ಸಿಕ್ಕಿದ್ದು ಬರಿಯ ಮೌನ/ ಮುಖಕ್ಕೆ ಎರಚಿದ್ದು /ನನ್ನದೇ ನಿಟ್ಟುಸಿರಿನ ತುಣುಕುಗಳು/ ನಿನ್ನಾಳದ ವಿರಹ ಬೆಂಕಿ ನನ್ನೊಳಗೆ ಎಂದು ಕಾತರಿಸುತ್ತಾಳೆ. ಪಕ್ಕದಲ್ಲಿ ಇವನಿದ್ದರೂ ಮುಂದುವರಿದು ಗಳಿಗೆ ಗಳಿಗೆಯೂ ನನ್ನೊಳಗೆ /ಹುಚ್ಚುಹೊಳೆಯಂತೆ ಬೊಬ್ಬಿರಿಯುತ್ತಿರುವ /ನೀನೆಂಬ ವಿರಹ/ಲೋಕವನ್ನು ನುಂಗಿ ನೊಣೆದುಬಿಡುತ್ತದೆಯೆನ್ನಿಸುತ್ತಿದೆ ಎನ್ನುವಾಗ ಏನನ್ನು ಕುರಿತು ಕವಿಯ ಧ್ಯಾನವಿದೆ ಎಂದು ಅರಿಯಬಹುದು. ಬಿಡು ಬಿಡು. ಆದದ್ದಾಯಿತು/ಗುಲಗಂಜಿಗೂ ಕಪ್ಪಿನ ದೃಷ್ಟಿಬೊಟ್ಟು/ಸೋಲು-ಗೆಲುವಿನ ಹುಚ್ಚು ಜೂಜಾಟದಲ್ಲಿ /ನನಗೂ ನಿನಗೂ ಕೆಲಸವೇನು? ಎಂದು ಪ್ರಶ್ನಿಸುತ್ತಾರಲ್ಲ ಅದು ಇಹದ ಗಂಡಿಗೋ ಅಥವ ಪರದ ಮೋಹನನಿಗೋ ಓದುಗನೇ ಊಹಿಸಬೇಕು!
ಎಲ್ಲ ತಕರಾರುಗಳ ಬದಿಗೊತ್ತಿ /ಒಂದು ಗಳಿಗೆ ನನ್ನ ಮಗುವಾಗು/ಬಾರೋ, ನಿನ್ನ/ತುಂಟಾಟದಲ್ಲಿ ನೆನಪಿನ ಜೋಕಾಲಿಯನ್ನು / ಹಿಗ್ಗಿಸುತ್ತೇನೆ, ನಾನು ಎನ್ನುವಾಗ ತ್ರಿಮೂರ್ತಿಗಳನ್ನೇ ಮಗುವನ್ನಾಗಿಸಿದ ಅನಸೂಯೆ ಕೂಡ ನೆನಪಾಗುತ್ತಾಳೆ. ಈ ಸಾಲುಗಳ ನಡುವೆಯೇ ಕ್ವಚಿತ್ತಾಗಿ ಬರುವ ಸಾಲು ಇದು ಆಳಕ್ಕೆ ಎಟುಕದ್ದು ಕಡಲು; ಕಣ್ಣುಗಳೊಳಗಿಗೊಂದು ಪ್ರಜ್ಞೆ/ ಕಡಲಿನ ಮಾತೆಂಬುದು ಆಜ್ಞೆ. ಇಲ್ಲಿ ಕವಯತ್ರಿ ಬಳಸಿರುವ ಕಡಲಿನ ಪ್ರತಿಮೆ ಸುಲಭಕ್ಕೆ ಎಟುಕದ ಆಳದ್ದು ಹಾಗೇ ಒಳಗಣ್ಣಿಂದಷ್ಟೇ ಕಾಣಬಹುದಾದ ಪ್ರಜ್ಞೆ.

ಹರಿವಿಗೆ ಕೊನೆಯಿಲ್ಲ/ಅರಿವಿಗೆ ಹೊಸತೆಲ್ಲ;/ಕೃಷ್ಣಾ,/ ಎಂದು ಕರೆಯುತ್ತಾಳಲ್ಲ ಆ ಕರೆ ರಾಧೆ ಕೃಷ್ಣನಿಗೆ ಹೇಳಿದ್ದಲ್ಲ ಬದಲಿಗೆ ಅದು ಕಾಯದ ಮೋಹಕ್ಕೆ ಬಿದ್ದು ಕಾಯದೇ ಕಾಡುವ ಗಂಡಿಗೆ.
ಪ್ರಣಯೋನ್ಮಾದದಲ್ಲಿ ವಿರಹಿ ರಾಧೆಯ ಮನಃಪಟಲವನ್ನು ತೇಜಶ್ರೀ ಬಿಚ್ಚಿಡುತ್ತಾರಾದರೂ ಒಮೊಮ್ಮೆ ಆಕೆ ಬಳಸಿರುವ ಪದಗಳು ಕಾವ್ಯದ ಓಘಕ್ಕೆ ಪೆಟ್ಟುಕೊಡುತ್ತವೆ. ಆಕಳಿನ ಕೆಚ್ಚಲ ಗೆಜ್ಜೆಯ ಹಾಲಹೊಳೆ ಎನ್ನುವುದರ ಬದಲು ಆಕಳ ಕೆಚ್ಚಲಿನಿಂದ  ಹಾಲಹೊಳೆ ಸಾಕಿತ್ತು. ಅಸ್ತಿಪಂಜರವನ್ನು ಅಸ್ಥಿಪಂಜರ ಎಂದೂ ಬಳಸಿರುವ ತಪ್ಪು ನಡೆದಿದೆ. ಅಸ್ತಿ ಎಂದರೆ ಇದೆ ಎಂದರ್ಥ ಅಷ್ಟೆ. ಮೂಳೆಯ ಮಜ್ಜೆಯೊಳಗೆ  ಎನ್ನುವುದನ್ನು ಮೂಳೆಯೊಳಗಿನ ಮಜ್ಜೆಯಂತೆ ಎಂದು ತಿದ್ದಿಕೊಂಡು ಓದಿದರೆ ಸಿಗುವ ಅರ್ಥಾಂತರಗಳೇ ಬೇರೆ. ಉಳಿಯಿಡಿದು ಎಂದು ತಪ್ಪಾಗಿ ಬಳಸುವುದನ್ನು ಉಳಿ ಹಿಡಿದು ಎಂದು ಬಳಸುವುದು ಸೂಕ್ತ ತಾನೆ? 

ಆಧುನಿಕ ಕನ್ನಡ ಕಾವ್ಯದ ಅಸಂಖ್ಯಾತ ಪ್ರಯೋಗಗಳಲ್ಲಿ ತಕ್ಷಣಕ್ಕೆ ಥಟ್ಟಂತ ಕಣ್ಣಿಗೆ ಬೀಳುವ ಪ್ರಯೋಗ ತೇಜಶ್ರೀ ಮಾಡಿದ್ದಾರೆ. ಅವನರಿವಲಿ ಖಂಡಕಾವ್ಯ ಪ್ರಣಯವು ಮುಟ್ಟಿಸಬೇಕಾದ ಅಂತಿಮ ಸ್ಥಿತಿಯನ್ನು ಧ್ಯಾನಿಸುತ್ತಲೇ ಜಯದೇವನ ಗೀತ ಗೋವಿಂದದ ಪುನರೋದಿಗೆ ನಮ್ಮನ್ನು ಪ್ರೇರೇಪಿಸುತ್ತದೆಂಬುದು ಹೆಚ್ಚುಗಾರಿಕೆಯ ಮಾತಲ್ಲ. ಬದಲಿಗೆ ಅದು ಈ ಖಂಡಕಾವ್ಯವನ್ನು ಅಳೆಯಲು ಸದ್ಯಕ್ಕಿರುವ ಮತ್ತೊಂದು ತಕ್ಕಡಿ ಎಂದೇ ತೋರುತ್ತದೆ. 
ಶೀರ್ಷಿಕೆ ಅವನರಿವಲ್ಲಿ ಕವಿ ಜ.ನಾ.ತೇಜಶ್ರೀ ಪ್ರಕಟಣೆ ಕನ್ನಡ ಸಂಘ, ಸಂತ ಜೋಸೆಫರ ವಾಣಿಜ್ಯ ಕಾಲೇಜು, ಬೆಂಗಳೂರು     ಪುಟ ೮೮ ಮೌಲ್ಯ ರೂ ೮೦/- ಪ್ರಕಟಣ ವರ್ಷ-೨೦೧೧




    


ಭಾನುವಾರ, ಆಗಸ್ಟ್ 19, 2012

ನಮಸ್ಕಾರ


¢£ÀzÀ ªÉÆzÀ® ¨ÁjUÉ  UÀÄgÀÄUÀ¼ÉÆÃ, »jAiÀÄgÉÆÃ, ¥ÀjavÀgÉÆà CxÀªÀ ¸ÀºÉÆÃzÉÆåÃVUÀ¼ÉÆà J¢gÁzÀgÉ £ÀªÀĸÁÌgÀ D£ÀĪÀÅzÀÄ ¨sÁgÀwÃAiÀÄ ¸ÀA¸ÀÌöÈwAiÀÄ zÉÆåÃvÀPÀ. ºÁUÉ £ÀªÀĸÁÌgÀ C£ÀÄߪÁUÀ UÉÆwÛ®èzÉ PÉÊ ªÀÄÄV¢gÀÄvÀÛzÉ ªÀÄvÀÄÛ vÀ¯É ¨ÁV ªÀA¢¸ÀĪÀÅzÀÄ £ÀqÉ¢gÀÄvÀÛzÉ. £ÀA zsÁvÀÄ«¤AzÀ ¤µÀà£ÀߪÁzÀ £ÀªÀĸÁÌgÀ ¨ÁUÀÄ C£ÀÄߪÀ CxÀðªÀ£Éßà ºÉÆA¢zÉ. CAzÀgÉ £ÀªÀÄVAvÀ ªÀAiÀĹì£À°è, C£ÀĨsÀªÀzÀ°è, eÁÕ£ÀzÀ°è ªÀÄÄA¢gÀĪÀªÀgÀ ªÀÄÄAzÉ ¨ÁUÀ¯Éà ¨ÉÃPÉA§ÄzÀÄ CAvÀgÁxÀð. £À£ÀßzÉA§ÄzÀÄ AiÀiÁªÀÅzÀÆ E®è, J®èªÀÇ D ¸ÀªÀð±ÀPÀÛ£ÀzÀÄ C£ÀÄߪÀ ¤gÀºÀAPÀgÀt PÀÆqÀ £ÀªÀĸÀÌj¸ÀĪÀÅzÀgÀ°èzÉ. vÀ¯É JAzÀgÉ ²gÀ. CxÁðAvÀgÀzÀ°è ªÀÄ£ÀĵÀå zÉúÀzÀ PÀ¼À¸À. CAzÀgÉ CzÀÄ CºÀAPÁgÀzÀ PÉÃAzÀæ ¸ÀܼÀ. vÀ¯É vÀVι CAzÀgÉ CºÀAPÁgÀªÀ£ÀÄß CzÀÄ«Ä C£ÀåjUÉ UËgÀªÀ PÉÆqÀĪÀ QæAiÉÄ £ÀªÀĸÀÌj¸ÀĪÀÅzÀgÀ°èzÉ. DzÀÝjAzÀ¯Éà UËgÀªÀ¥ÀǪÀðPÀ £ÀªÀĸÁÌgÀªÉAzÀgÉ vÀ¯É ¨ÁV¹ PÉÊ ªÀÄÄVAiÀÄĪÀ C©üªÁzÀ£É. ºÉvÀÛªÀjUÉ, UÀÄgÀÄUÀ½UÉ, D±ÀæAiÀÄ zÁvÀjUÉ, C£ÀßzÁvÀjUÉ £ÀªÀĸÀÌj¸ÀĪÀÅzÀÄ £ÀªÀÄä ¸ÀA¥ÀæzÁAiÀÄ. £ÀA- CAzÀgÉ £À«Ä¸ÀÄ ¨ÁUÀÄ C£ÀÄߪÀÅzÀÄ ºÀ¼ÉAiÀÄ PÁ®zÀ zÉêÀ¸ÁÜ£ÀUÀ¼À UÀ¨sÀðUÀÄr ºÉÆPÁÌUÀ CjªÁUÀÄvÀÛzÉ. ªÀÄ£ÀĵÁåPÀÈwAiÀÄ JvÀÛgÀQÌAvÀ®Æ PÀrªÉÄ JvÀÛgÀzÀ F UÀ¨sÀðUÀÄrAiÉƼÀUÉ ¥ÀæªÉò¸À¨ÉÃPÉAzÀgÉ vÀ¯É vÀVιAiÉÄà £ÀqÉAiÀĨÉÃPÀÄ.   

vÀ¯É ¨ÁV¹, PÉÊ ªÀÄÄVzÀÄ, zsÁ夸ÀÄvÀÛ¯Éà ¥ÀæzÀQëuÉ ºÁQ ¢ÃWÀðzÀAqÀ £ÀªÀĸÁÌÌgÀ ºÁPÀĪÀÅzÀgÀ°è ±ÁjÃjPÀ QæAiÉÄUÀ¼ÀµÉÖà C®èzÉ CªÀÅ ªÀiÁ£À¹PÀ ¹zÀÞvÉAiÀÄ£ÀÆß ¨ÉÃqÀÄvÀÛªÉ. DvÀðvÉAiÀÄ ¨sÁªÀ«®è¢zÀÝ°è ªÀÄ£À¸ÀÄì ªÀÄtÂAiÀÄĪÀÅ¢®è. ªÀÄ£À¸ÀÄì ªÀÄtÂAiÀÄzÉà CºÀAPÁgÀ wÃgÀĪÀÅ¢®è. ºÁV®èzÀ £ÀªÀĸÁÌgÀ Mt ²µÁÖZÁgÀªÁUÀÄvÀÛzÉAiÉÄà «£Á ¸ÀzÀÄÎtªÁUÀĪÀÅzÉà E®è. zÉúÀ ªÀÄ£À¸ÀÄì ªÀÄvÀÄÛ D¯ÉÆÃZÀ£ÉUÀ¼ÀÄ MAzÀÄ ¸ÀºÀd ©AzÀÄ«£À°è ¸ÀA¢ü¹zÁUÀµÉÖà «£ÀAiÀÄ MqÀªÀÄÆqÀÄvÀÛzÉ.CºÀAPÁgÀ C½AiÀÄÄvÀÛzÉ. DzÀgÉ EA¢£À ªÀvÀðªÀiÁ£ÀzÀ°è ªÁåªÀºÁjPÀvÉAiÉÄà ªÀÄÄRåªÁzÀ ¯ËQPÀzÀ°è £ÀªÀĸÁÌgÀªÉ£ÀĪÀÅzÀÄ ±ÀĵÀÌ AiÀiÁAwæPÀ QæAiÉÄAiÀiÁUÀÄwÛzÉ. £ÀªÀĸÀÌj¸À®àqÀ¨ÉÃPÁzÀ eÁUÀzÀ°ègÀĪÀªÀgÀÄ eÁw DzsÁjvÀ, °AUÀ ¨ÉÃzsÀzÀ ¥ÀæwÃUÁ«Ä £ÀqÉAiÀÄļÀîªÀgÁVzÀÝgÉ £ÀªÀĸÀÌÌj¸ÀĪÀªÀ¤UÉ ¸ÀºÀd UËgÀªÀ, «£ÀAiÀÄ, «ªÉÃZÀ£ÉUÀ¼ÀÄ zÀÆgÀªÁV ²µÁÖZÁgÀzÀ QæAiÉÄAiÀiÁV G½AiÀÄÄvÀÛzÉ. 

EµÀÖPÀÆÌ £ÀªÀĸÁÌgÀ CAzÀªÀgÀ ªÀÄ£À¹ì£À°è EgÀĪÀ ¤d¨sÁªÀªÉãÀÄ C£ÀÄߪÀÅzÀÄ £ÀªÀĸÀÌj¸À®àlÖªÀjUÉ CjAiÀÄĪÀ jÃwAiÀiÁzÀgÀÆ E®èªÀ®è! zÉÆæúÀ aAvÀ£À, ¸ÁéxÀð, ¸ÉÃr£À ¨sÁªÀ EzÀÆÝ «£ÀAiÀÄzÀ £ÁlPÀ £ÀqÉ¢gÀ§ºÀÄzÀ®è?
ªÀÄt¢gÀ° ªÀÄÄr, ªÀÄvÉÛ ªÀÄÄV¢gÀ° PÀAiÀiï, ªÀÄvÉÛ ªÀÄrAiÀiÁVgÀ° ¨Á¼Éé C£ÀÄߪÀÅzÀÄ PÀĪÉA¥ÀÅ £ÀªÀÄUÉ PÉÆlÖ zÀȶÖ. PÉêÀ® DAVPÀ «£Áå¸ÀªÀ£Éßà C®èzÉ ªÀÄÄA¢£À §zÀÄPÀ®Æè PÀ¼ÀAPÀ vÀlÖzÀAvÉ ¨Á¼À¨ÉÃPÉ£ÀÄߪÀ ¥Àj CzɵÀÄÖ ¸ÉÆUÀ¸ÁzÀÄzÀÄ. PÀ¼ÀAPÀ §gÀzÀ ºÁUÉ CAzÀgÉ ±ÀÄavÀézÀ WÀ£À¹ÛPÉ. CzÀ£ÀÄß PÁ¦lÄÖPÉƼÀÄîªÀÅzÉAzÀgÉ CzÉÆAzÀÄ C¹zsÁgÀ ªÀævÀ. CAzÀgÉ PÀwÛAiÀÄ®ÄV£À ªÉÄît £ÀqÉ. PÉÆAZÀ JZÀÑgÀvÀ¦àzÀgÀÆ C¥ÁAiÀÄ PÀnÖlÖ §ÄwÛ. zsÀÈqsÀ EZÁÒ±ÀQÛ, PÀ¤µÀ× §zÀÞvÉ ªÀÄvÀÄÛ ¯ÉÆÃPÀ ¤AzÀ£ÉAiÀÄ ¨sÀAiÀÄ ±ÀÄavÀézÀ ¥ÀgÀªÀÄ ¸ÉÆÃ¥Á£ÀUÀ¼ÀÄ. F ¸ÉÆÃ¥Á£ÀUÀ¼À°è PÉÆ¼É PÀÆgÀzÀAvÉ PÁ¦qÀĪÀ QæAiÉÄ ®WÀĪÁzÀÄzÉãÀÆ C®è. CzÉÆAzÀÄ ¨sÁªÀ±ÀÄ¢ÞAiÀÄ ¤vÀå ¸ÀÆvÀæ.  ¤gÀAvÀgÀªÁV ªÀÄ£ÀªÀ£ÀÄß ±ÉÆâü¹PÉƼÀÄîvÀÛ¯Éà EgÀĪÀªÀgÀÄ ªÀiÁvÀæ EzÀ£ÀÄß ªÀiÁqÀ§®ègÀÄ. DzÀgÉ ªÀÄ£À¹ì£À ªÉÄÃ¯É ¯ËQPÀzÀ PÉÆ¼É PÀ®ä±ÀUÀ¼À£ÀÄß ºÁAiÀÄUÉÆqÀzÉ avÀÛZÁAZÀ®åPÉÆ̼ÀUÁUÀzÉà ¨sÁªÀ£ÉʪÀÄð®å PÁ¥ÁrPÉƼÀÄîªÀÅzÀÄ J®èjAzÀ ¸ÁzsÀå«®èzÀ ¸ÀAUÀw. ªÀÄ£ÀªÀ ±ÉÆâü¸À¨ÉÃPÀÄ ¤ZÀÑ, ¢£À ¢£À ªÀiÁqÀĪÀ ¥Á¥À ¥ÀÅtåzÀ ªÉZÀÑ C£ÀÄߪÀ zÁ¸ÀgÀ ªÀiÁvÀÄ PÀÆqÀ EzÀ£Éßà zsÀ餹zÉ. 

DzÀgÉ EwÛÃZÉUÉ £ÀªÀÄä £ÀªÀĸÁÌgÀUÀ¼É®è ¯ËQPÀzÀ jZÀÄåAiÉįïUÀ¼ÁV §zÀ¯ÁVªÉ. CAzÀgÉ UËgÀªÀ ¨sÁªÀ, ¥Àæ¥ÀwÛ ¨sÁªÀ, ¸ÉßúÀ ¨sÁªÀUÀ½®èzÀ vÉÆÃgÀÄUÁtÂPÉAiÀÄ £ÀªÀĸÁÌgÀ PÉÊPÀÄ®ÄPÀĪÀÅzÀgÉÆA¢UÉ ªÀÄÄVAiÀÄÄwÛzÉ. vÀ¯É ¨ÁV £ÀªÀĸÀÌj¸ÀĪÀÅzÀPÀÆÌ PÉÊPÉÆlÄÖ CAzÀgÉ ºÀ¸ÀÛ ¯ÁWÀªÀ ªÀiÁr AiÀÄÄzÀÞPÉÌ DºÁ餸ÀĪÀÅzÀPÀÆÌ ªÀåvÁå¸ÀUÀ½zÉÝà EªÉ. ¨sÁªÀ ±ÀÄ¢ÞAiÀÄÄ DvÀä UËgÀªÀUÀ½®è¢zÀÝ°è ºÀÄlÄÖªÀÅzÀÄ PÀµÀÖ ¸ÁzsÀåzÀ ªÀiÁvÀÄ. £ÀªÀĸÉÛ C£ÀÄߪÀÅzÀÄ EAxÀ°è §j ºÁdjAiÀÄ ¸ÀAPÉÃvÀ ªÀiÁvÀæªÉà «£Á ¨sÁUÀªÀ»¸ÀÄ«PÉAiÀÄ zÉÆåÃvÀPÀªÁUÀĪÀÅ¢®è.

  

ಬುಧವಾರ, ಆಗಸ್ಟ್ 15, 2012

ಜಲದ ಕಣ್ಣುಗಳನ್ನು ಅರಳಿಸಬೇಕಿದೆ .. . . . .

ಜಲದ ಕಣ್ಣುಗಳನ್ನು ಅರಳಿಸಬೇಕಿದೆ ದಿನ ಕಳೆದ ಹಾಗೆ ಯಾಂತ್ರಿಕವಾಗುತ್ತಿರುವ ಬದುಕ ಪಲುಕುಗಳನ್ನು, ಆಧುನಿಕತೆಯ ಮೂಲಕ ಕಂಡುಕೊಂಡಿರುವ ಸವಲತ್ತುಗಳ ಉರುಳುಗಳನ್ನು, ರೌರವ ನರಕವನ್ನು ನಮ್ಮೊಳಗೆ ಸೃಷ್ಟಿಸಿರುವ ಒತ್ತಡಗಳನ್ನೂ ನೀಗಿಕೊಳ್ಳಲು ಲಲಿತಕಲೆಯ ಒಂದಲ್ಲ ಒಂದು ವಿಭಾಗ ನಮ್ಮ ನೆರವಿಗೆ ಬಂದೊದಗುತ್ತಲೇ ಇವೆ. ಅದು ಸಾಹಿತ್ಯ ಓದುವುದು, ಚಿತ್ರಕಲೆಯನ್ನೋ, ಶಿಲ್ಪಕಲೆಯನ್ನೋ ನೋಡುವುದು, ಸಂಗೀತವನ್ನು ಕೇಳುವುದು ಹಾಗೇ ನೋಡನೋಡುತ್ತಲೇ ಕೇಳುವುದೂ ಆಗಿರುವ ಸಿನಿಮಾ ಅಥವ ನಾಟಕ ಯಾವುದೋ ಒಂದು ಆಗಿ ನಮ್ಮ ವಿಷಾದದ ಹೊತ್ತುಗಳಲ್ಲಿ ಚೈತ್ರದ ಚಿಗುರನ್ನು ಪಲ್ಲವಿಸಿವೆ, ಸಂತಸದ ಸಮಯವನ್ನು ದುಪ್ಪಟ್ಟುಗೊಳಿಸಿವೆ. ಲಲಿತ ಕಲೆ ಮನುಷ್ಯನಿಗೆ ಬೇಕೇ ಬೇಕು ಅಂತ ವಾದಿಸುವವರ ಸಮಸಮವಾಗಿ ಅದೆಲ್ಲವನ್ನೂ ನಿರಾಕರಿಸಿ ಕಲೆಯ ಗೊಡವೆಗೆ ಕೈಹಾಕದೆಯೇ ಭವ್ಯವಾಗಿ ಬದುಕು ನಡೆಸಿದವರ, ನಡೆಸುತ್ತಿರುವವರ ದೊಡ್ದ ಪಟ್ಟಿಯೇ ನಮ್ಮೆದುರು ತೆರೆದುಕೊಳ್ಳುತ್ತದೆ. ಆದರೂ ಕಲೆ ಮನುಷ್ಯನಲ್ಲಿ ಕಡಿಮೆಯಾಗುತ್ತಿರುವ ಮನುಷ್ಯತ್ವವನ್ನು ಪೂರೈಸಿಕೊಳ್ಳಲಾದರೂ ಬೇಕೇ ಬೇಕು. ಏಕೆಂದರೆ ಲಲಿತಕಲೆಯ ವಿವಿಧ ವಿಭಾಗಗಳಲ್ಲೂ ಒಂದು ಸಾಮಾನ್ಯವಾದ ಧರ್ಮವಿದೆ. ಅದೆಂದರೆ ಬದುಕನ್ನು ಪ್ರೀತಿಸುವಂತೆ ಉದ್ದೀಪಿಸಿ ಅದರ ಅರ್ಥವನ್ನು ಹಿಗ್ಗಲಿಸಿ ಸಾರ್ಥಕಪಡಿಸುವುದು. ಪ್ಲೇಟೋ ತನ್ನ ಆದರ್ಶ ರಾಜ್ಯದಲ್ಲಿ ಕವಿಗಳಿಗೆ ಜಾಗವಿರುವುದಿಲ್ಲ ಅಂತ ಹೇಳಿದ್ದು ನೆನಪಿರುವ ಹಾಗೇ ಕಾಳಿದಾಸನಿಲ್ಲದ ಭೋಜರಾಜನನ್ನು, ಪಂಪನಿಲ್ಲದ ಅರಿಕೇಸರಿಯನ್ನೂ ಊಹಿಸಿಕೊಳ್ಳುವುದು ಅಸಾಧ್ಯ. ವ್ಯಾಂಗೋ ಗೆರೆಗಳಿಗೆ ಜೀವ ಬರಿಸಿದ್ದನ್ನು, ತನ್ನ ಗಾಯನದಿಂದಲೇ ದೀಪ ಬೆಳಗಿಸಿದ ಸಂಗೀತಗಾರನ ಕತೆಯಂಥ ಹಲವು ಕಥಾನಕಗಳನ್ನು, ಚಾಪ್ಲಿನ್‌ನಿಂದ ಹಿಡಿದು ನಿನ್ನೆ ಮೊನ್ನೆ ಸಿನಿಮಾದ ವ್ಯಾಕರಣ ಕಲಿತು ಅದ್ಭುತ ಚಿತ್ರಗಳನ್ನು ಮಾಡುತ್ತಲೇ ಇರುವ ಅಸಂಖ್ಯರನ್ನು, ನೀನಾಸಂ, ರಂಗಾಯಣ, ಎನೆಸ್ಡಿ ಮುಂತಾದ ಸಂಸ್ಥೆಗಳ ಮೂಲಕ ತಯಾರಾಗಿ ಈಗ ಸದ್ಯದ ಸಿನಿಮಾ, ರಂಗಭೂಮಿ, ದೂರದರ್ಶನಗಳಲ್ಲಿ ಹೊಸತನವನ್ನು ತಂದು ತಂದು ಪೇರಿಸುತ್ತಿರುವ ಪ್ರತಿಭೆಗಳನ್ನೂ ಹಾಗೆಲ್ಲ ನೇಪಥ್ಯಕ್ಕೆ ಸರಿಸುವ ಹಾಗಿಲ್ಲ. ಆದರೂ ಒಟ್ಟೂ ಪ್ರಜಾ ಸಂಖ್ಯೆಗೆ ಲಲಿತಕಲೆಗಳ ಮೋಡಿಗೆ ಸಿಲುಕಿದವರ ಸಂಖ್ಯೆಯನ್ನು ಹೋಲಿಸಿದರೆ ಅದು ಕಡಿಮೆಯೆಂದೇ ನಮಗೆಲ್ಲರಿಗೂ ಗೊತ್ತು. ಹಾಗಿದ್ದೂ ಸಾಹಿತಿಗಳ ನಡುವೆ, ಸಿನಿಮಾ ಮಾಡುವವರ ನಡುವೆ, ಸಂಗೀತಗಾರರ ನಡುವೆ, ಕಲಾವಿದರ ನಡುವೆ ಒಂದು ಅಘೋಷಿತ ಯುದ್ಧ ನಡೆಯುತ್ತಲೇ ಇರುತ್ತದೆ. ತಾನು ನಂಬಿದ್ದು, ಸ್ರೃಷ್ಟಿಸಿದ್ದೇ ಮಹತ್ವದ್ದು ಅನ್ನುವ ಇರಾದೆಯೇ ಇದಕ್ಕೆಲ್ಲ ಮೂಲ. ಏಕಂ ಸತ್ ವಿಪ್ರಾ ಬಹುದಾ ವದಂತಿ ಅನ್ನುವುದು ಗೊತ್ತಿದ್ದೂ ಇರುವ ಒಂದೇ ಸತ್ಯವನ್ನು ಸಾಹಿತಿಗಳೂ ಕಲಾವಿದರೂ ಅವರವರಿಗೆ ತಿಳಿದ ಮಟ್ಟದಲ್ಲಿ ವ್ಯಾಖ್ಯಾನಿಸುತ್ತಿರುವುದೂ ಇದಕ್ಕೆ ಪ್ರಮುಖ ಕಾರಣ. ಲಲಿತ ಕಲೆಗಳ ಒಂದೊಂದು ವಿಭಾಗಕ್ಕೂ ಒಂದೊಂದು ವಿಶೇಷ ಲಕ್ಷಣಗಳಿವೆ. ಪ್ರತಿ ಕಲೆಗೂ ಸಾಧನಗಳು ಬೇರೆ,ಬೇರೆ. ಸಾಹಿತಿ ತಾನು ತನ್ನ ಕಾಲದಲ್ಲಿ ನೋಡಿದ್ದನ್ನು ಅನುಭವಿಸಿದ್ದನ್ನು ಆಗಿನ ಭಾಷೆ, ಶೈಲಿ, ಸಂಪ್ರದಾಯ, ಕಟ್ಟಳೆಗಳನ್ನು ಅನುಸರಿಸಿ ದಾಖಲು ಮಾಡುತ್ತಾನೆ. ತನ್ನ ಪ್ರತಿಭೆಗೆ ತಕ್ಕ ಶಬ್ದಾರ್ಥ,ಧ್ವನಿಗಳ ಮೂಲಕ ಆ ಸಮಯದಲ್ಲಿ ಹೊಳೆದ ಸೌಂದರ್ಯವನ್ನು ಬುದ್ಧಿಯಿಂದ ಸೆರೆಹಿಡಿದು, ಧಾರಣೆಯಿಂದ ನಿಲ್ಲಿಸಿ ತನ್ನ ಕೃತಿಯಲ್ಲೊಂದು ಜಾಗವನ್ನು ಕೊಟ್ಟು ಸಲಹಿರುತ್ತಾನೆ. ಸಾಹಿತ್ಯವೆಂಬುದು ಎಲ್ಲ ಕಾಲಕ್ಕೂ ಸಹಜವಾದ, ಮಾನವ ಪ್ರಪಂಚಕ್ಕೆಲ್ಲ ಸಾಮಾನ್ಯವಾಗಿ ಹೊಂದುವ, ರಸಸೃಷ್ಟಿಯಾಗಿರುವುದರಿಂದ ಸಾಹಿತಿಯೊಬ್ಬನ ಕೃತಿ ಮುಂದೆ ಎಲ್ಲ ಕಾಲದಲ್ಲೂ ಅದನ್ನು ಸವಿಯುವವರಿಗೆ ಅಕ್ಷಯಪಾತ್ರೆಯಾಗಿ ಒದಗುತ್ತಲೇ ಇರುತ್ತದೆ, ಅದಕ್ಕೆ ಅಂಥ ತಾಕತ್ತು ಇದ್ದರೆ. ಹಾಗೇ ದೂಷಿಸುವವರಿಗೂ ಅದು ಅಕ್ಷಯಪಾತ್ರೆಯೇ ಸರಿ! ಇನ್ನು ಚಿತ್ರಕಾರ-ಚಿತ್ರಕ್ಕೆ ಬೇಕಾಗುವ ಬಣ್ಣ, ರೂಪರೇಖೆ, ಕುಂಚ, ಹಲಗೆ, ಕಾಗದ,ಬಟ್ಟೆ ಇತ್ಯಾದಿ ಇತ್ಯಾದಿಗಳನ್ನು ಅನುಕೂಲಕ್ಕೆ ತಕ್ಕಂತೆ ಯೋಚಿಸಿ ಯೋಜಿಸುತ್ತಾನೆ. ಸಂಗೀತವಂತೂ ನಾದ, ಶಾರೀರ, ಪಕ್ಕ ವಾದ್ಯ, ಸಾಧನೆ ಇತ್ಯಾದಿಗಳಿಂದ ಹುಲುಸುಗೊಂಡರೆ, ಶಿಲ್ಪಿ ತನ್ನ ವ್ಯವಸಾಯಕ್ಕೆ ಮಣ್ಣು, ಕಲ್ಲು, ಗಾರೆ, ಮರ, ಲೋಹ, ಬಟ್ಟೆ, ಬೆಂಡು. ಉಳಿ, ಸುತ್ತಿಗೆ, ಚಾಣ ಇತ್ಯಾದಿಗಳನ್ನು ಬಳಸಿ ತನ್ನಿಷ್ಟದ ಕೃತಿಯನ್ನು ರಚಿಸುತ್ತಾನೆ. ರಸಾಸ್ವಾದನೆ ಅದನ್ನು ಸವಿಯುವವರ ಮಟ್ಟಕ್ಕೆ ತಕ್ಕ ಆಳ ಅಗಲಗಳ ವ್ಯಾಖ್ಯೆಯನ್ನು ತುಂಬಿಕೊಡುತ್ತದೆ. ಬದುಕಿನ ಅರ್ಥವನ್ನು ಬಗೆಬಗೆಯಾಗಿ ಬಗೆಯುತ್ತಲೇ ಇರುವ ಸಾಹಿತಿ-ಕಲಾವಿದರನ್ನು ಅನುಮಾನಿಸುವುದು, ಸನ್ಮಾನಿಸುವುದು, ಸಾಮಾಜಿಕ ಸಾಂಸ್ಕೃತಿಕ ಕಾರಣಗಳಿಂದ ಅವನನ್ನು ಎತ್ತಿ ಮೆರಸುವುದು ಹಾಗೇ ಎತ್ತಿ ಎಸೆಯುವುದನ್ನೂ ಲೌಕಿಕ ಮಾಡುತ್ತಲೇ ಬಂದಿದೆ. ಟಿ.ಆರ್.ಪಿಗಳ ಕಾಲದಲ್ಲಿ ಇದು ಸಹಜವೂ, ನ್ಯಾಯವೂ ಆದುದೇ ಆಗಿದೆ! ಸಮಾಜದ ಆಶಯಕ್ಕೆ ಅಂದರೆ ಪ್ರಭುತ್ವಕ್ಕೆ ಪೂರಕವಾಗಿ ಕೃತಿ ರಚಿಸುವವನಿಗೆ ಇರುವ ಮಾನ ಮರ್ಯಾದೆಗಳು ಅದಕ್ಕೆ ವಿರೋಧಿಯಾಗಿರುವವನಿಗೆ ಸಲ್ಲುವುದು ಯಾವತ್ತೂ ವಿಳಂಬವೇ. ಏಕೆಂದರೆ ಸತ್ಯದ ಹುಡುಕುವಿಕೆಯಲ್ಲಿ ಯಾವತ್ತೂ ಪರಿಣಾಮಗಳು ತಟ್ಟಂತ ಸಿಕ್ಕ ಉದಾಹರಣೆಗಳು ಇಲ್ಲವೇ ಇಲ್ಲ. ಸತ್ಯ ಎನ್ನುವುದು ಸಿಗುತ್ತದೋ ಇಲ್ಲವೋ ಅಂಥದೊಂದು ಸತ್ಯವನ್ನು ಬೆನ್ನು ಹಿಡಿದು ಹೊರಡುವುದೇ ನಿಜಕ್ಕೂ ಅಗ್ನಿದಿವ್ಯದ ಅಸಲಿಯತ್ತು. ಉಪನಿಷತ್ತಿನಿಂದ ಓಷೋವರೆಗೂ ಈ ಇದೇ ಸತ್ಯದ ಹುಡುಕುವಿಕೆಯೇ ನಮ್ಮೆಲ್ಲ ಸಾಹಿತಿ-ಕಲಾವಿದರನ್ನೂ ಪೋಷಿಸಿದೆ, ತನ್ನ ಉದರದಲ್ಲಿಟ್ಟುಕೊಂಡು ಕಾಪಾಡಿದೆ. ತಾನು ಬದುಕಿದ್ದ ಕಾಲದಲ್ಲಿ ಅಜ್ಞಾತನಾಗಿದ್ದ ಬೋದಿಲೇರ್, ಸತ್ತ ನಂತರವೇ ತೀವ್ರ ತರದ ಚರ್ಚೆಗಳನ್ನು ಹುಟ್ಟುಹಾಕಿದ ಬ್ರೆಕ್ಟ್, ಎಂಟುನೂರು ವರ್ಷಗಳ ಹಿಂದೆ ರಚಿತವಾದರೂ ಇವತ್ತಿಗೂ ಹೊಸ ಹೊಸ ಜಿಜ್ಞಾಸೆಗಳಿಗೆ ಒಡ್ಡುವ ವಚನಗಳು, ಲಿಯಾನಾರ್ಡೊ ಡಾವಿಂಚಿಯ ಚಿತ್ರಗಳು, ಯಾವುದೋ ಉತ್ಖನನದಲ್ಲಿ ಸಿಕ್ಕುವ ಪುರಾತನರ ಜೀವನಶೈಲಿಯ ಪುರಾವೆಗಳು ಯಾವತ್ತೂ ವರ್ತಮಾನದ ಜನಜೀವನ ಆಧುನಿಕತೆಯ ಬಾಗಿಲಿನಲ್ಲಿದ್ದೂ ಹೇಗೆ ಇನ್ನೂ ತನ್ನ ಹಳೆಯ ಹೊಸಿಲಲ್ಲೇ ಏದುಸಿರು ಬಿಡುತ್ತಿದೆ ಅಂತ ಪ್ರಮಾಣೀಕರಿಸುತ್ತಲೇ ಬಂದಿವೆ. ವರ್ತಮಾನದ ಸಾಹಿತ್ಯ ನಿರ್ಮಾಪಕರನ್ನು, ಅದರಲ್ಲೂ ಪರಂಪರೆಯ ಹಂಗಿಲ್ಲದೇ ತಾನು ತಿಳಿದ ಸಂಗತಿಯೇ ದೊಡ್ಡದೆಂದು ವಾದಕ್ಕೆ ನಿಲ್ಲುವವರನ್ನು ಪರಂಪರೆಯೆಂಬ- ಬಳಸದೇ ಅಂದಗೆಟ್ಟ ಸರೋವರಕ್ಕೆ ಒಮ್ಮೆ ಕರೆದೊಯ್ದು-ಈಗಿನ ಬಹುತೇಕರು ಹೇಳುವ ಹಾಗೇ ಆ ಸರೋವರದ ನೀರು ಬಳಸುವವರಿಲ್ಲದೇ ಕೊಳಚೆಯಾಗಿ ಕೆಸರು ತುಂಬಿದೆ. ಹಸಿರು ಪಾಚಿಗಟ್ಟಿ ಹೂಳು ತುಂಬಿಕೊಂಡಿದೆ-ಅದರ ಹೂಳನ್ನೆತ್ತಿ ತೆಗೆದು ಎಸೆದು, ಸ್ವಲ್ಪ ಆಳಕ್ಕೆ ಅದನ್ನು ತೋಡಿ ವಿಸ್ತರಿಸಿ, ಎಲ್ಲೋ ಮುಚ್ಚಿ ಹೋಗಿರುವ ಜಲದ ಕಣ್ಣುಗಳನ್ನು ತೆರೆದು ಹೆಚ್ಚು ನೀರು ಬಂದು ಸೇರುವಂತೆ ಮಾಡಿದರೆ ಜೊತೆಗೇ ಕುಸಿದಿರುವ ಸೋಪಾನದ ಪಾವಟಿಗೆಗಳನ್ನು ದುರಸ್ತಿ ಮಾಡಿಸಿದರೆ ಆ ಕೊಳದ ನೀರನ್ನೇ ಆಶ್ರಯಿಸಿ ಉದ್ಯಾನವನ್ನೇ ಬೆಳಸಬಹುದು. ಉದ್ಯಾನ ನಿರ್ಮಾಣವಾದರೆ ಅಳುವ ಮಕ್ಕಳು ಆಟವಾಡಲು ಬಂದಾವು. ಹಕ್ಕಿ ಪಕ್ಷಿಗಳ ಜೊತೆಜೊತೆಗೇ ದಣಿವಾರಿಸಿಕೊಳ್ಳಲು ನಮಗೂ ಒಂದಿಷ್ಟು ತಾವು ಸಿಕ್ಕುತ್ತದೆ. ಆಗ ಆರಾಮವಾಗಿ ಕೂತು ಮುರಿದು ಕಟ್ಟಿದ ಸರೋವರದ ದಡದಲ್ಲಿ ಭಾಷೆಯ ಸಂಗತಿಗಳನ್ನು ಅರ್ಥಮಾಡಿಕೊಳ್ಳಬಹುದು. ಅದು ಬಿಟ್ಟು ಯಾವ ಮೂಲದಿಂದ ಮನೆಯ ನಲ್ಲಿಯಲ್ಲಿ ನೀರು ಬರುತ್ತದೋ ಎಂಬ ಅರಿವಿಲ್ಲದೇ ಬರಿದೇ ತೋಡಿ ತೋಡಿ ಬಳಸಿದರೆ ನೀರಿನ ಮಹತ್ವ ಅರಿಯುವುದಾದರೂ ಹೇಗೆ? ಭಾಷೆಯ ಸಂಗತಿ ಸಿದ್ಧಿಸುವುದಾದರೂ ಹೇಗೆ?- ಅಂತ ಕೇಳೋಣವೆಂದರೆ ನಮ್ಮ ಲೋಕೋಪಯೋಗಿ ಇಲಾಖೆಯು ಹೆಜ್ಜೆ ಹೆಜ್ಜೆಗೆ ತೋಡಿಸಿರುವ ಕೊಳವೆ ಬಾವಿಗಳ ಅಟಾಟೋಪದಲ್ಲಿ ಜಲದ ಕಣ್ಣುಗಳೇ ಮಾಯವಾಗಿ ಆಳದಾಳಕ್ಕೆ ತೋಡಿದರೂ ಬರಿಯ ಧೂಳೇ ಎದ್ದೆದ್ದು ಮುಖಕ್ಕೆ ರಾಚುತ್ತಿರುವ ವರ್ತಮಾನದಲ್ಲಿ ಸರೋವರದ ಕಲ್ಪನೆಗಳೇ ಸುಳ್ಳಾಗುತ್ತಿರುವಾಗ ಸರಸವೆಂಬುದು ಸುಲಭಕ್ಕೆ ದಕ್ಕದ ಸಂಗತಿಯಾಗುತ್ತಿದೆ. ಕವಿ-ಕಲಾವಿದನ ಕೈಯಲ್ಲಿ ಅರಳುವ ಹೂವು ಸಹೃದಯರ ಹೃದಯವನ್ನು ಮುಟ್ಟಬೇಕು ಅನ್ನುವುದು ಎಲ್ಲ ಕೃತಿಕಾರರ ಗುರಿ. ಕೃತಿ ಎನ್ನುವುದು ಅಳತೆ,ಬಣ್ಣ,ತೂಕ,ಸಮಂಜಸ ಆಕಾರ ಇತ್ಯಾದಿಗಳ ಶಾಸ್ತ್ರಬದ್ಧ ನಿರೂಪಣೆ. ಕೊಂಚ ಏರುಪೇರಾದರೂ ಅದನ್ನು ಸಮಾಜ ಸ್ವೀಕರಿಸುವುದಿಲ್ಲ. ಸಹೃದಯ ಎನ್ನುವವನೂ ಈ ಸಮಾಜದಿಂದಲೇ ಬಂದವನಾದ್ದರಿಂದ ಅವನನ್ನು ಸುಲಭಕ್ಕೆ ಒಪ್ಪಿಸಲಾಗುವುದಿಲ್ಲ. ತನ್ನ ಕೃತಿಯೇ ಶ್ರೇಷ್ಠ ಅಂತ ನಂಬಿರುವ ಕೃತಿಕಾರ ಅದನ್ನು ಪ್ರಮಾಣಿಸಲು ತಕ್ಕ ಪರಿಸರವನ್ನು ನಿರ್ಮಾಣ ಮಾಡಬೇಕಾಗುತ್ತದೆ. ಕೃತಿಯನ್ನು ಕಡ್ಡಾಯವಾಗಿ ಒಪ್ಪಿಸಲಾಗುವುದಿಲ್ಲವಾದರೂ ಅತ್ಯುತ್ತಮವಾದ ಕೃತಿ ಕಂಡೊಡನೆಯೇ ಓದುಗನನ್ನು/ನೋಡುಗನನ್ನು ಅದು ಚಕಿತಗೊಳಿಸುತ್ತದೆ. ವಿಶೇಷವೊಂದನ್ನು ಕಂಡೊಡನೆಯೇ ಬಾಕಿಯೆಲ್ಲವನ್ನೂ ಮರೆತು, ಅದರ ಅರ್ಥ ಸಂಕೇತಗಳನ್ನು ಧ್ಯಾನಿಸುತ್ತ, ಅದು ಗ್ರಾಹ್ಯವಾದಂತೆಲ್ಲ ಕಣ್ಣರಳಿಸಿಕೊಂಡು, ಕಿವಿ ತೆರೆದುಕೊಂಡು, ನೆತ್ತರ ಕಾವು ಏರಿಸಿಕೊಂಡು ಮೆಚ್ಚುಗೆಯ ಮಾತನಾಡುವುದು ಸಹೃದಯನ ಲಕ್ಷಣ. ಹಾಗೇ ತನ್ನರಿವನ್ನು ಹಿರಿದುಗೊಳಿಸದ ಏನನ್ನೂ ಅದು ಎಷ್ಟೇ ಮೌಲ್ಯದ್ದಿದ್ದರೂ ಈ ಸಹೃದಯ ಅದನ್ನು ನಿರಾಕರಿಸಿ ಕೈಕೊಡವಿ ಬಿಡುತ್ತಾನೆ. ಉಳಿ ಹಿಡಿದವರನ್ನೆಲ್ಲ ಶಿಲ್ಪಿಯೆಂದು ಒಪ್ಪದ, ಪದ್ಯ ಕಟ್ಟುವವರನ್ನೆಲ್ಲ ಕವಿಗಳೆಂದು ಒಪ್ಪದ, ಎಗರೆಗರಿ ಬೀಳುವರನ್ನೆಲ್ಲ ನರ್ತಕರೆಂದು ಮಾನ್ಯ ಮಾಡದ, ಮನೆ ಕಟ್ಟುವ ಮೇಸ್ತ್ರಿಗಳನ್ನೆಂದೂ ವಾಸ್ತು ಶಿಲ್ಪಿ ಅಂತ ಕರೆಯದ ದಾಷ್ಟೀಕತನ ಈ ಸಹೃದಯನದ್ದು. ಆವೇಶ ಶುದ್ಧಿ ಮತ್ತು ರೂಪಣ ನಾವೀನ್ಯತೆ ಇದ್ದವರು ಪರಂಪರೆ ಮೀರಿಸುವ ತಾಕತ್ತು ತೋರಿಸುತ್ತಾರೆ. ಅಂಥ ಹೆಚ್ಚುಗಾರಿಕೆಗಳನ್ನು ಈ ಲೋಕ ಮಾನ್ಯ ಮಾಡುತ್ತಲೇ ಬಂದಿದೆ. ಆದರೆ ತಾನೇ ಘೋಷಿಸಿಕೊಂಡ ನಾವೀನ್ಯತೆ ಮೂಲೆ ಸೇರಿದೆ. ಕಲೆ ಕಲೆಯಾಗದೇ ಕಲೆಯಿಂದ ಅನ್ಯ ಕೆಲಸಗಳನ್ನು ಮಾಡಿಸಿದಾಗಲೆಲ್ಲ ವಿಪ್ಲವಗಳುಂಟಾಗಿವೆ. ಕಲೆ ಇರುವ ನೀತಿ ನಿಯಮಗಳನ್ನು ಗಾಳಿಗೆ ತೂರಿ ಜೀವನದರ್ಶನವನ್ನು ಬಿಂಬಿಸದೇ ಚಪಲತೆಗಳನ್ನೂ, ವಿಕ್ಷಿಪ್ತತೆಯನ್ನೂ ಸಲ್ಲದ ಮಾರ್ಗಗಳಲ್ಲಿ ಪ್ರದರ್ಶಿಸಹೋದಾಗಲೆಲ್ಲ ಅಭಿವ್ಯಕ್ತಿ ಸ್ವಾತಂತ್ರ್ಯದ ಮಾತು ಹೆಚ್ಚುಹೆಚ್ಚು ಚರ್ಚಿತವಾಗಿದೆ. ಇರುವುದನ್ನು ಕೆಡಹದೇ ಹೊಸತನ್ನು ಕಟ್ಟುವುದು ಹೇಗೆ ಸಾಧ್ಯ ಎಂಬ ಮೊಟ್ಟೆ-ಕೋಳಿಗಳ, ಬೀಜ-ವೃಕ್ಷಗಳ ಹಳೆಯ ಮಾತು ಮತ್ತೆ ಮತ್ತೆ ಮಥಿಸಿದೆ. ಹುಟ್ಟಿದ ನವನೀತವೂ ಇತಿಹಾಸಕ್ಕೆ ಸೇರಿದೆ. ರಾಜ್ಯ, ಸಾಮ್ರಾಜ್ಯಗಳು ಉರುಳಿ, ರಾಜ ಮಹಾರಾಜರು ಅಳಿದು, ಸರ್ವಾಧಿಕಾರಿಗಳೂ ಮಡಿದು ಇತಿಹಾಸ ಮತ್ತೆ ಮತ್ತೆ ಅನುರಣಿಸುವ ಸತ್ಯವೆಂದರೆ ಕಲೆಯೂ, ಕಲಾವಿದರೂ ನೂರ್ಕಾಲ ಸಾಯದೇ ಬದುಕಿದ್ದಾರೆ, ಬದುಕುಳಿದಿರುವವರಿಗೂ ಮಾರ್ಗದರ್ಶಕರಾಗಿ ದಿಕ್ಸೂಚಿಗಳಾಗಿ ನಿಲ್ಲದ ನಾವೆಗೆ ದಿಕ್ಕು ದೆಸೆ ಕಾಣಿಸಿದ್ದಾರೆ. ಕಲೆ ಇಂಥವರೇ ಬೇಕೆಂಬ ಬಲೆಯನ್ನೇನೂ ನೇಯ್ದಿಲ್ಲ. ಕಲೆಯೊಡನೆ ಸೆಣಸಾಡುವುದೆಂದರೆ ಅದನ್ನು ಅರೆದು ಕುಡಿಯುವುದು ಎಂದೇನೂ ಅಲ್ಲ. ಕಲೆಯನ್ನು ಆಸ್ವಾದಿಸುವ ಕಣ್ಣು,ಕಿವಿ,ಮೂಗುಗಳ ಸೂಕ್ಷ್ಮ ನಮಗೆ ಗೊತ್ತಿರಬೇಕಷ್ಟೆ. ನಮಗೇ ಅರಿವಿರದ ಸಹಸ್ರ ಭಾವಗಳು ಸದಾ ನಮ್ಮೊಡನೆ ಯುದ್ಧಕ್ಕೆ ನಿಂತೇ ಇರುತ್ತವೆ. ಶಾಂತಿಯ ಮಂತ್ರ ಜಪಿಸಿ ಅವನ್ನು ತಣಿಸುವ ಸೂಕ್ಷ್ಮತೆ ಬೇಕಷ್ಟೆ. ಬದುಕಿನ ವಿಕಟಾಟ್ಟಹಾಸಗಳ ನಡುವೆಯಿರುವ ನೆಮ್ಮದಿಯ ಸಣ್ಣದನಿಯೊಂದನ್ನು ಉದ್ದೀಪಿಸಿ, ಅದನ್ನೇ ಬೆಳಸಿ, ಅನ್ಯರ ದುಃಖ ದುಮ್ಮಾನಗಳನ್ನೂ ನಮ್ಮದೆನ್ನುವಂತೆ ಕಾಣುವ ವಿನಯ ಸಾಹಿತ್ಯದ ಓದು ಕಲಿಸಿದರೆ, ಸಂಗೀತದ ಭಾವತೀವ್ರತೆಗಳು ಸಂಕಟವನ್ನೂ, ಸಂತೋಷವನ್ನೂ ರಾಗ ಛಾಯೆಯ ಅನುಸರಣೆಯಿಂದಲೇ ಶ್ರೋತೃವಿನಲ್ಲಿ ಪಡಿಮೂಡಿಸುತ್ತದೆ. ಕಲಾಕೃತಿಯೊಂದು ಅದನ್ನು ಪರಿಶೀಲಿಸುವ ಹಂತದಲ್ಲೇ ನೋಡುಗನಲ್ಲಿ ಭಾವಸಾಗರವನ್ನು ಕಾಣಿಸಿರುತ್ತದೆ. ಎಂದಿಗೂ ನಿಲ್ಲದ ಕಾಲದ ಗಡಿಯಾರದಲ್ಲಿ ನಾವೆಲ್ಲರೂ ಚಲಿಸುವ ಮುಳ್ಳುಗಳೇ. ಕಾಲ ಸರಿದಂತೆ, ಅನುಭವ ಸಾಂಧ್ರವಾದಂತೆ ವ್ಯಾಖ್ಯೆಗಳು ಬದಲಾಗುವುದು ಸಹಜ. ಆಧುನಿಕತೆ ತನ್ನೊಡಲೊಳಗೇ ಪರಂಪರೆಯನ್ನು ಧರಿಸಿದೆ. ಕಾಲದ ಪ್ರವಾಹದಲ್ಲಿ ಸಮಾಜವಾದದ ಪಳಿಯುಳಿಕೆಗಳಷ್ಟೇ ಉಳಿದಿರುವ ಹೊತ್ತಲ್ಲಿ ಮುಂದೊಂದು ದಿನ ಜಾಗತೀಕರಣದ ದಿವ್ಯ ಅನುಸಂಧಾನಗಳೂ ಬಣ್ಣಕಳಕೊಂಡ ಬಟ್ಟೆಯಾಗುವುದೂ ಖಚಿತ ಮತ್ತು ಸರ್ವ ವಿದಿತ. ಇಂತೆಲ್ಲ ತಿಳುವಳಿಕೆಗಳಿದ್ದರೂ ಮತ್ತೆ ಮತ್ತೆ ಕೆಸರೆರಚಿ ಎದುರಿನವರ ಬಟ್ಟೆ ಗಲೀಜು ಮಾಡುವುದು, ನಿರ್ವಿವಾದವಾಗಬಾರದೆಂಬ ಏಕೈಕ ಕಾರಣಕ್ಕೆ ಪ್ರತಿವಾದವನ್ನು ಹುಟ್ಟುಹಾಕುವುದು, ಅಭಿವ್ಯಕ್ತಿ ಸ್ವಾತಂತ್ರ್ಯದ ಮಾತೆತ್ತಿ ವಿಕೃತದ ಹೇಳಿಕೆಗಳಲ್ಲೇ ಸ್ವಮಗ್ನವಾಗುವುದು ಇತಿಹಾಸದುದ್ದಕ್ಕೂ ನಡೆದಿರುವ ನಡೆಯುತ್ತಲೇ ಇರುವ ಮತ್ತು ಮುಂದೂ ನಡೆಯುವ ಮತ್ತು ಆ ಮೂಲಕವೇ ಕಲೆಯ ಅನುಸಂಧಾನಕ್ಕೆ ಸಾಮಾನ್ಯರನ್ನೂ ಎಳೆತರುವುದು ನಡೆದೇ ಇರುತ್ತದೆ, ಸೂರ್ಯಚಂದ್ರರಿರುವವರೆಗೂ! ( ಈ ಪ್ರಬಂಧಕ್ಕೆ ವಿ.ಸೀತಾರಾಮಯ್ಯನವರ ‘ಕವಿ ಕಾವ್ಯದೃಷ್ಟಿ’ ವಿವೇಚನೆಗಳ ಪುಸ್ತಕ ಸ್ಪೂರ್ತಿ ನೀಡಿದೆ)

ಕಾಲ ಕಲಿಸಿದ ಪಾಠ

ಕಾಲ ಕಲಿಸಿದ ಪಾಠ ಹಣ್ಣೆಲೆಯೊಂದು ತೊಟ್ಟು ಕಳಚಿ ಸಂಬಂಧ ತೊರೆದುಕೊಳ್ಳುವಾಗ ಗಗನದಾಚೆಯ ಗಗನಕ್ಕೆ ಮುಖಮಾಡಿ ನಿಂತ ಸ್ಥಾವರದ ಮರ, ಆ ಮರದ ಮೇಲೇ ಸವಾರಿಯೇರಿ ಕೊಂಬೆ ತುದಿಯಲ್ಲಿ ಕೂತ ಜಂಗಮದ ಹಕ್ಕಿ ತಮ್ಮ ತಮ್ಮೊಳಗೇ ಕಳೆದು ಹೋಗಿದ್ದವು. ಗುರುತ್ವಾಕರ್ಷಣೆಗೆ ಸಿಲುಕಿದ ಎಲೆ ಗಾಳಿಯಲೆಗುಂಟ ಇಳಿದು, ಏರಿ ಮತ್ತೆ ಮರು ಕ್ಷಣವೇ ಹೌಹಾರಿ- ದ ಹೊಂಬಣ್ಣದ ಮುದಿಯೆಲೆ ನೇರ ಮರದ ಬುಡಕ್ಕೇ ಬಿತ್ತು. ಅದರ ನರ ಮಂಡಲದಲ್ಲಿ ಬಿಸಿಲ ಝಳದಷ್ಟೇ ಬಿಸಿ ತಾಸೆರಡು ತಾಸೊಳಗೇ ಬಾಡಿ ಮರದ ಬುಡಕ್ಕೆ ಪೊಡಮಟ್ಟಿತು. ದಪ್ಪ ಕಾಂಡ ಬರಸೆಳೆದು ಮಲ್ಲಿಗೆಯಂತೆ ಮೈಗಾನಿಸಿ ಹಿಡಿದು ಕ್ಷೇಮ ವಿಚಾರಿಸಿ ಕುಶಲ ಕೇಳಿತು- ‘ಮುಗಿಯಿತಾಯುಷ್ಯ, ಮುಂದಿಲ್ಲ ಭವಿಷ್ಯ’ ಬಿಕ್ಕಿದೆಲೆಗೆ ಕಾಂಡದ ಸಮಾಧಾನ ‘ಈಗಷ್ಟೇ ಮಾಗಿದ್ದೀ, ಮಣ್ಣೊಳಗೆ ಮಣ್ಣಾಗು ಸಾರ ಹೀರುವ ಬೇರಿಗೆ ಗೊಬ್ಬರವಾಗು ಮತ್ತೆ ಚಿಗುರು, ಎಲೆ, ಹೂ, ಬೀಜ ಸಲ್ಲದು ಕಾಲ ಚಕ್ರದವಜ್ಞೆ, ವ್ಯರ್ಥ ಜಗಳ’ ಆವತ್ತಿನಿಂದ ಹೀಗೆ; ಹಣ್ಣೆಲೆಯುದುರುತ್ತದೆ, ಚಿಗುರು ಮೊಗ್ಗೊಡೆಯುತ್ತದೆ ಹೂವು, ಕಾಯಿ, ಹಣ್ಣು, ಮತ್ತೆ ಹಣ್ಣೆಲೆ,,,, ಈಗ ಸ್ಥಾವರ ಮರದ ಧ್ಯಾನ ಹಾಗೇ ಜಂಗಮ ಹಕ್ಕಿಯ ಜ್ಞಾನ ಎರಡೂ ಹಣ್ಣಾದವರಿಗೆ ಅರ್ಥವಾಗುತ್ತದೆ.

ಸೋಮವಾರ, ಜುಲೈ 30, 2012

ತೆಂಗಿನ ಗೆರಟೆಯ ಪಿಟೀಲು

ನನ್ನ ಬದುಕಿನಿಂದ ಅಂತರ್ಧಾನನಾಗಿ ಇಪ್ಪತ್ತು ವರ್ಷಗಳ ನಂತರ ಅರಸೀಕೆರೆಯ ಸಂತೆಯಲ್ಲಿ ಮತ್ತೆ ಪ್ರತ್ಯಕ್ಷನಾಗಿ ದರ್ಶನ ನೀಡಿದ ಬಾಲ್ಯದ ಗೆಳೆಯ ಅಲ್ಲಲ್ಲ ಸಖನಾಗಿದ್ದ ಚಂದ್ರನನ್ನು ಕುರಿತೇ ಹೇಳ ಹೊರಟಿದ್ದೇನೆ. ಅವನ ಪೂರ್ಣ ಹೆಸರು ಚಂದ್ರಶೇಖರ ಶಾಸ್ತ್ರಿ. ಓದು ತಲೆಗೆ ಹತ್ತದೇ, ಹಾಗೇ ಆರಂಭದ ಕೆಲಸಗಳನ್ನೂ ಒಪ್ಪವಾಗಿ ಮಾಡದೇ ಬರಿಯ ಹಡಬೆ ತಿರುಗಾಟದಲ್ಲೇ ಯೌವನವನ್ನು ಕಳೆದುಕೊಂಡರೂ ನನ್ನಂಥ ಹತ್ತು ಹಲವರ ಯೌವನ ಕಾಲದ ಗುರುವಾಗಿ, ಆಪ್ತನಾಗಿ, ಸಖನಾಗಿ ಒದಗಿದ ಚಂದ್ರನದು ಹಾಗೆಲ್ಲ ಯಾರೂ ಮರೆಯಲು ಸಾಧ್ಯವಿಲ್ಲದ ವ್ಯಕ್ತಿತ್ವ. ಹಣೆಯಗಲಕ್ಕೂ ವಿಭೂತಿ ಬಳಿದುಕೊಂಡು, ಚಪ್ಪಲಿಯಿಲ್ಲದ ಕಾಲುಗಳನ್ನು ಅಡ್ಡಡ್ಡ ಎಳೆದುಹಾಕುತ್ತ, ಕೀಚುಗಟ್ಟಿದ ಹಲ್ಲುಗಳನ್ನು ಊರಗಲಕ್ಕೆ ಅರಳಿಸುತ್ತ ನನ್ನತ್ತ ನೋಡಿ ಸಂಭ್ರಮ ಪಡುತ್ತ - ಸಂತೆಯ ಜನನಿಬಿಡತೆಯಲ್ಲೂ ಕಿಂಚಿತ್ತೂ ಗಲಿಬಿಲಿಗೊಳ್ಳದೇ ಸಾಬರ ಈರುಳ್ಳಿ ರಾಶಿಗೆ ಬಾಯಿ ಹಾಕಿ, ಅವರಿಂದ ಮರ್ದನಕ್ಕೊಳಗಾಗಿ ದಾರಿಗೆ ನುಗ್ಗಿದ ಬೀಡಾಡಿ ದನಕ್ಕೆ ಢೀ ಕೊಟ್ಟು, ಅದರ ಮೊಂಡು ಕೊಂಬಿನಿಂದ ತನ್ನ ತಿಕಕ್ಕೆ ಹಾಯಿಸಿಕೊಂಡೂ, ಏನೂ ಆಗದವನಂತೆ, ಪಂಚೆ ಮೇಲೆತ್ತಿ ಕಟ್ಟಿಕೊಂಡು - ಅಶೋಕ ವನದಲ್ಲಿ ಸೀತಾಮಾತೆಯೆದುರು ನಿಂತ ಆಂಜನೇಯನಂತೆ ನಿಂತ ಚಂದ್ರನನ್ನು ಕಂಡ ನಾನು ಅವನೇ ಹೌದೋ ಅಲ್ಲವೋ ಎಂದು ಸಂಶಯ ಪಡುತ್ತಿರುವಾಗಲೇ, ಅವನೇ “ಓಹೋ, ಮ್ಯಾನೇಜರು ಸಾಹೇಬರ ಸವಾರಿ ಹುಟ್ಟಿದ ಊರಿನತ್ತ ಚಿತ್ತೈಸಿದೆ. ಕಾರಣ ತಿಳಿಯಲಿಲ್ಲ. ಈ ಪರಿಚಾರಕನ ಗುರುತು ಹತ್ತಿತೋ?” ಅಂತ ನಾಟಕೀಯವಾಗಿ ಕೇಳಿದ. ನೆತ್ತಿಯ ಕೂದಲಷ್ಟೂ ಉದುರಿ ಬೋಳಾದ, ಹೋತದ ಗಡ್ಡದ ನನ್ನನ್ನು ಅವನು ಗುರುತಿಸಿ ಮಾತನಾಡಿಸಿದ್ದು ಬಿಸಿಲದಾರಿಯಲ್ಲಿ ಕಂಡ ಮರದ ನೆರಳಿನಂತೆ ನನಗೆ ತೋರಿತು. “ಗುರುತು ಹತ್ತದೇ ಉಂಟೇ? ಗುರುಗಳಲ್ಲದೇ ಬೇರಾರನ್ನು ತಾನೇ ಶಿಷ್ಯ ಅನುಸರಿಸಲು ಸಾಧ್ಯ?” ಅಂತ ನಾನೂ ಉತ್ತರಿಸಿದೆ. ದೇಶಾವರಿ ನಗೆ ಹೊಮ್ಮಿಸಿ, ನಶ್ಯವನ್ನೇರಿಸಿಕೊಂಡವನೇ “ನಡಿ ಮಾರಾಯ. ಮನೆಗೆ ಹೋಗೋಣ” ಅಂತ ವರಾತ ತೆಗೆದ. ಅವನ ಹೆಗಲ ಮೇಲಿದ್ದ ಕೈಚೀಲ ಗಮನಿಸಿದೆ. ಸಂತೆಯ ತುಂಬ ಓಡಾಡಿ ಚೀಲದ ಕಂಠದ ತನಕ ತುಂಬಿಸಿದ್ದ ಹೀರೆ, ಬೆಂಡೆ, ಹಾಗಲ, ಸೌತೆ, ಬಾಳೆಕಾಯಿಗಳು ಕಂಡವು. ಎಡಗೈಯಲ್ಲಿ ಬಾಳೆ ಎಲೆಯ ಕಟ್ಟಿನೊಟ್ಟಿಗೇ ಒಣದೊನ್ನೆಯ ಕಟ್ಟನ್ನೂ ಹಿಡಿದಿದ್ದ. ಇಂಗ್ಳಿಷ್ ತರಕಾರಿಗಳೊಂದನ್ನೂ ಕೊಳ್ಳದೇ ಜೊತೆಗೆ ಬಾಳೆಲೆ, ದೊನ್ನೆ ಹಿಡಿದಿದ್ದಾನೆಂದರೆ ನಾಳೆಯೋ ನಾಳಿದ್ದೋ ಅವನ ಮನೆಯಲ್ಲಿ ಯಾರದೋ ಶ್ರಾದ್ಧವಿರಬೇಕೆಂದು ಊಹಿಸಿದೆ. ಬಾಯಿ ಬಿಟ್ಟು ಕೇಳುವುದು ಹೇಗೆಂದು ನಾನು ತಿಣುಕುತ್ತಿರುವಾಗ, ಅವನೇ “ಇದೆಲ್ಲ ನನ್ನ ಹೊಸ ಉದ್ಯೋಗದ ಬಂಡವಾಳ ಮಾರಾಯ. ಟೆನೆನ್ಸಿಯಲ್ಲಿ ಜಮೀನು ಕಳಕೊಂಡು ಬರ್ಬಾದಾಗಿದ್ದ ನಮ್ಮ ಅಪ್ಪ, ಮನೆಯ ಹಿತ್ತಿಲಿಗೇ ಅಂಟಿದಂತಿದ್ದ ಅರ್ಧ ಎಕರೆ ತೆಂಗಿನ ತೋಟದ ಉತ್ಪನ್ನದ ಜೊತೆಗೆ ಅಪರದ ಮಂತ್ರ ಹೇಳಿಕೊಂಡು ಹೇಗೋ ಜೀವನ ಸಾಗಿಸಿದ್ದು ನಿಂಗೂ ಗೊತ್ತು. ನಾನು ಮನೆವಾರ್ತೆ ವಹಿಸಿಕೊಂಡ ಕಾಲಕ್ಕೆ ಇದ್ದ ಇಪ್ಪತ್ತು ತೆಂಗಿನ ಮರದ ಪೈಕಿ ಹದಿನೈದಕ್ಕೆ ನುಸಿ ರೋಗ ತಾಗಿ ತೋಟ ನಾಶವಾಗಿ ಹೋಯ್ತು. ಊರ ಮುಂದಿನ ಆಂಜನೇಯನ ಪೂಜೆ ವಂಶಪಾರಂಪರ್ಯವಾಗಿ ನಮಗುಳಿದದ್ದು ನಿನಗೆ ಗೊತ್ತಲ್ಲ? ಇದ್ದ ಬದ್ದವರೆಲ್ಲ ಹಳ್ಳಿ ಬಿಟ್ಟು ನಗರ ಸೇರುತ್ತಿರುವಾಗ ನಮ್ಮ ಹನುಮಪ್ಪನಿಗೆ ಉಳಿದಿರೋದು ಹಗ್ಗ ಮಾತ್ರ, ನನಗೆಲ್ಲಿಂದ ಶ್ಯಾವಿಗೆ ಹುಟ್ಟಬೇಕು? ಅದಕ್ಕೇ ಈಗ ಮನೆಯಲ್ಲೇ ಪಿತ್ರಾರ್ಜಿತದ ಅಪರ ಮಂತ್ರವನ್ನೇ ಹೇಳಿಕೊಂಡು ಅವರಿವರ ತಿಥಿಗಿಥಿ ಮಾಡಿಸುವ ಕೆಲಸ ಶುರುವಿಟ್ಟುಕೊಂಡಿದ್ದೇನೆ. ಮಾಡುವವರಿಗೆ ಕರ್ತವ್ಯ ತೀರಿದ ಸಮಾಧಾನ. ನನಗೆ ಹೊತ್ತಿನ ಊಟಕ್ಕೆ ದಾರಿ” ಉಸಿರು ನಿಲ್ಲಿಸದೇ ಅವನು ಪ್ರವರ ಬಿಡಿಸಿಟ್ಟ. “ನಡಿ, ನಡಿ, ಅಪರೂಪಕ್ಕೆ ಸಿಕ್ಕಿದ್ದೀಯ. ಅಯೋಧ್ಯೆ ಹೋಟೆಲ್ಲಿನಲ್ಲಿ ಮಸಾಲೆ ದೋಸೆ ತಿನ್ನಿಸುವೆಯಂತೆ” ಅವಸರಿಸಿದ. ಸಾಯಿನಾಥ ರಸ್ತೆಯುದ್ದಕ್ಕೂ ಹರಡಿದ ದೋಸೆಯ ಘಮಕ್ಕೆ ಬೆರಗಾಗುತ್ತ ಹೋಟೆಲ್ಲಿನೊಳಕ್ಕೆ ಕಾಲಿಟ್ಟೆ. “ಓ, ಅಪರೂಪಕ್ಕೆ ಕಂಡಂತಾಯ್ತು. ನಾಳೆ ನಿಮ್ಮ ತಂದೆಯವರ ಶ್ರಾದ್ಧ ಅಂತ ನಿಮ್ಮ ತಮ್ಮ ಶ್ರೀಕಂಠ ಬೆಳಗ್ಗೆಯೇ ಬಾಳೆಲೆ ಕೊಂಡುಹೋದರಲ್ಲ. ಅಂತೂ ಚಂದ್ರಣ್ಣನವರಿಗೆ ಈವತ್ತು ನಿಮ್ಮಿಂದ ದೋಸೆಯ ಸೇವೆ” ಹೋಟೆಲ್ ಓನರ್ ಶ್ರೀಧರ ನಗುತ್ತ ಮಾತನಾಡಿಸಿದಾಗ ಚಂದ್ರನಿಗೆ ನಾನು ಊರಿಗೆ ಬಂದ ಕಾರಣ ಹೊಳೆಯಿತು. “ಆಗೀಗ ಊರಿಗೆ ಬರುತ್ತಿರುತ್ತೇನೆ. ಆದ್ರೆ ಪೇಟೆ ಗೀಟೆ ತಿರುಗುವಷ್ಟು ಪುರುಸೊತ್ತಿರುಲ್ಲ ಎಲ್ಲ ಸೌಖ್ಯವಾ?” ಸಂಕ್ಷಿಪ್ತವಾಗಿ ಉತ್ತರಿಸಿದೆ. “ಏನು ಸೌಖ್ಯವೋ, ಏನೋ? ತೆಂಗಿಗೆ ಬೆಲೆ ಇಲ್ಲ. ಮೇಲಾಗಿ ನುಸಿ ರೋಗ ಬೇರೆ. ಅಪ್ಪನ ಕಾಲದ ವ್ಯಾಪಾರ ಅಂತ ನಡೆಸಿಕೊಂಡುಹೋಗುತ್ತಿದ್ದೇನೆ. ಇಲ್ಲೆಲ್ಲ ಬರೀ ಉದ್ದರಿಯ ವ್ಯಾಪಾರ. ಹಿಡಿಯುವಂತಿಲ್ಲ, ಬಿಡುವಂತಿಲ್ಲ. ನಾನೂ ನಿಮ್ಮಂತೆಯೇ ಓದಿ ಕೆಲಸ ಗಿಲಸಕ್ಕೆ ಸೇರಿದ್ದರೆ ಈ ಎಂಜಲು ಎತ್ತುವ ಪಡಿಪಾಟಲು ಇರುತ್ತಿರಲಿಲ್ಲ.” ಗಿಜಿಗುಡುತ್ತಿದ್ದ ಹೋಟೆಲ್ಲಿನಲ್ಲಿ ಜನ ಕುರ್ಚಿ ಸಿಕ್ಕದೇ ಕಾಯುತ್ತಿರುವಾಗಲೂ ಶ್ರೀಧರ ಹೇಳುತ್ತಿರುವುದು ಸುಳ್ಳೋ ನಿಜವೋ ಗೊತ್ತಾಗದೇ ಚಂದ್ರ ಅದಾಗಲೇ ರಿಸರ್ವ್ ಮಾಡಿಕೊಂಡಿದ್ದ ಟೇಬಲ್ಲಿನ ಮುಂದೆ ಕೂತೆ. ಆರ್ಡರು ತೆಗೆದುಕೊಳ್ಳಲು ಬಂದ ಮಾಣಿ ಚಂದ್ರನ ಮುಖ ನೋಡುತ್ತಲೇ “ಸ್ಪೆಷಲ್ ಮಸಾಲೆ” ಅಂತ ಕೂಗಿದ. ಚಂದ್ರ ನನ್ನತ್ತ ಬೆರಳು ತೋರಿಸಿದ ಕೂಡಲೇ “ಸ್ಪೆಷಲ್ ಮಸಾಲೆ ಎರಡು” ಅಂತ ಮತ್ತೊಮ್ಮೆ ಕೂಗಿದ. ಈರುಳ್ಳಿ ಆಲೂಗಡ್ಡೆ ಪಲ್ಯದ ಘಮದ ಜೊತೆ ಬೆಣ್ಣೆಯಿಂದ ಅಲಂಕೃತವಾಗಿ ಗಟ್ಟಿ ಚಟ್ಣಿಯೊಂದಿಗೆ ಬಂದ ದೋಸೆಯ ತಟ್ಟೆ ತಕ್ಷಣ ಮುಂದೆಳೆದುಕೊಂಡ ಚಂದ್ರ ನಾನು ಜೊತೆಗಿರುವುದನ್ನೂ ಮರೆತವನಂತೆ ದೋಸೆಯ ಆಸ್ವಾದದಲ್ಲಿ ಮುಳುಗಿ ಹೋದ. ತಿಂಡಿ ಮುಗಿಸಿ ಕಾಫಿ ಕುಡಿದು ಬಿಲ್ ಕೊಡಲು ಹೋದರೆ “ಎಲ್ಲಾದರೂ ಉಂಟೆ? ನೀವು ಆವತ್ತು ಬ್ಯಾಂಕಿನಿಂದ ಸಾಲ ಕೊಡಿಸದೇ ಹೋಗಿದ್ದಿದ್ದರೆ ನಮ್ಮಪ್ಪ ನೇಣುಗಟ್ಟಿಕೊಳ್ಳುತ್ತಿದ್ದರು. ಅವರು ಬದುಕಿರುವವರೆಗೂ ನಿಮ್ಮನ್ನು ನೆನೆಯುತ್ತಲೇ ಇದ್ದರು. ನೀವು ನೀರೆರದ ಸಸಿ ಈಗ ಇಷ್ಟು ದೊಡ್ಡದಾಗಿ ಬೆಳೆದು ತಾಲ್ಲೂಕಿಗೇ ಹೆಸರುವಾಸಿಯಾಗಿದೆ” ಶ್ರೀಧರ ಬಿಲ್ ತೆಗೆದುಕೊಳ್ಳದೇ ಕೃತಜ್ಞತೆಯ ಮಾತಾಡಿದ. ‘ನಾಳೆಯ ತಿಂಡಿಗೆ ಯಾರನ್ನು ಹಿಡಿಯುತ್ತಾರೋ ಶಾಸ್ತ್ರಿಗಳು.. .. .. ನನ್ನ ಐದು ಲಕ್ಷದ ಓಡಿ ಅರ್ಜಿ ನಿಮ್ಮ ಬ್ಯಾಂಕಿನ ಹೆಡ್ಡಾಫೀಸಿನಲ್ಲಿದೆಯಂತೆ. ಒಂಚೂರು ಹೇಳುತ್ತೀರಾ’ ಶ್ರೀಧರನ ಮಾತು ಮುಗಿದು ನಾನು ಮುಜುಗರದಿಂದ ಹೊರಕ್ಕೆ ಬರುವಷ್ಟರಲ್ಲಿ ಎದಿರು ಸಿಕ್ಕವರೊಂದಿಗೆ ಲೋಕಾಭಿರಾಮದ ಮಾತಲ್ಲಿ ಚಂದ್ರ ಮುಳುಗಿ ಹೋಗಿದ್ದ. ಯಾರು ಏನು ಹೇಳಿದರೂ ತನಗೆ ಹೊಳೆದದ್ದನ್ನೇ ಮಾಡುತ್ತ ಅದನ್ನೇ ಸಾಧಿಸುತ್ತ ಬಂದಿರುವ ಚಂದ್ರ ಹಾಗೆಲ್ಲ ಮುಜುಗರಕ್ಕೆ ಈಡಾಗುವವನಲ್ಲವೇ ಅಲ್ಲ ಅಂತ ಮತ್ತೆ ಶೃತವಾಯಿತು. ರಥಬೀದಿಯಲ್ಲಿ ನಡೆಯ ತೊಡಗಿದೆವು. ದಾರಿಯಲ್ಲಿ ಸಿಕ್ಕವರೊಂದಿಗೆ ಅದೂ ಇದೂ ಮಾತಾಡುತ್ತ, ಹಾಗೆ ಸಿಕ್ಕವರಿಗೆ ನನ್ನ ಪ್ರವರ ಬಿಚ್ಚಿಡುತ್ತ ಅವನು ಎಂದಿನಂತೆ ಕಾಲುಗಳನ್ನು ಎಳೆದು ಹಾಕುತ್ತ ನಡೆಯತೊಡಗಿದ. ಬಾಯಿ ಜ್ವರ ಬಂದ ಜಾನುವಾರಿಗೆ ಏನು ಔಷಧ ಕೊಡಬೇಕು, ಗಬ್ಬ ಹಿಡಿಯದ ಎಮ್ಮೆಗೆ ಸರ್ಕಾರೀ ಪಶು ಆಸ್ಪತ್ರೆಯಲ್ಲಿ ಏಕೆ ಕೃತಕ ಗರ್ಭ ಧಾರಣೆ ಮಾಡಿಸಬೇಕು, ಲಂಚ ತಿನ್ನುವ ತಾಲ್ಲೂಕಾಫೀಸು ಕ್ಲಾರ್ಕಿಗೆ ಹೇಗೆ ಲೋಕಾಯುಕ್ತಕ್ಕೆ ಸಿಕ್ಕಿಸಬೇಕು ಎಂಬೆಲ್ಲ ವಿವರಣೆಗಳನ್ನು ಅವನು ಭೆಟ್ಟಿಯಾದ ಜನರಿಗೆ ಉಚಿತವಾಗಿ ತಿಳಿಸಿಹೇಳುತ್ತ ನಶ್ಯ ಏರಿಸುತ್ತ ಸಾಗುತ್ತಿರುವ ಈ ವಿಶ್ವಾಮಿತ್ರ ಮಹರ್ಷಿಯ ಜೊತೆಗೆ ನಾನು. ಇಪ್ಪತ್ತು ವರ್ಷಗಳಿಂದ ಇದ್ದ ಹಾಗೇ ಇರುವ ಕೊಂಚವೂ ಬದಲಾಗದಿರುವ ಬೀದಿಯಲ್ಲಿ ಯಾವತ್ತಿಗೂ ಬದಲಾಗದ ಅವನ ಮೆರವಣಿಗೆಗೆ ನಾನು ಗರುಡ ದೀಪವಾಗಿ ಹೆಜ್ಜೆ ಹಾಕಿದೆ. ಮೊದಲಿಂದಲೂ ಅವನು ಹೀಗೇ ಬಡಾಯಿಯವನು. ದೇಶದಲ್ಲಿ ಎಮರ್ಜೆನ್ಸಿ ಜಾರಿಯಾಗಿದ್ದಾಗ, ಅಂದರೆ ನಾವಾಗ ಹೈಸ್ಕೂಲು ಓದುತ್ತಿದ್ದಾಗ, ಈ ಮಹರಾಯ ಬೆಳ್ಳಂಬೆಳಗ್ಗೆ ಪ್ರಭಾತ್ ಶಾಖೆಗೆ ಹೋಗಿ ದೇಶಭಕ್ತಿಯ ಬಗ್ಗೆ ಅವರ್ಯಾರೋ ಹೇಳಿಕೊಟ್ಟದ್ದನ್ನೆಲ್ಲ ನಮಗೆಲ್ಲ ಕರ್ಣಾಕರ್ಣಿಕೆ ಮಾಡಿ ಪೋಲೀಸರ ವಿರುದ್ಧ, ಸರ್ಕಾರದ ವಿರುದ್ಧ ಮಾತಾನಾಡುತ್ತ ನಮಗೆಲ್ಲ ಏನೋ ಕಿಚ್ಚು ಹಚ್ಚಿ ಬಿಡುತ್ತಿದ್ದ. ಕ್ಲಾಸಿಗೆ ಚಕ್ಕರು ಹಾಕಿ ಕೆರೆಯಲ್ಲಿ ಈಜುವುದನ್ನೂ, ಅಂಗಡಿ ಸಾಮಾನು ತರಲು ಕೊಟ್ಟ ದುಡ್ಡಿಗೆ ಸುಳ್ಳು ಲೆಕ್ಕ ಒಪ್ಪಿಸಿ ಮಾರ್ನಿಂಗ್ ಶೋನಲ್ಲಿ ಮಲೆಯಾಳೀ ಸಿನಿಮಾ ನೋಡುವುದನ್ನೂ, ಕದ್ದು ಮುಚ್ಚಿ ಬೀಡಿ ಸೇದುವುದನ್ನೂ ಕಲಿಸಿಬಿಟ್ಟ. ಅಪ್ಪ ಅಮ್ಮ ಹೇಳಿದ್ದು ಕೇಳದೇ ನಮಗಿಷ್ಟ ಬಂದದ್ದನ್ನು ಮಾಡುವಂತೆ ತಾಕೀತು ಮಾಡುತ್ತಿದ್ದ. ಸರ್ಕಾರ ಸದಾ ಗುಮಾನಿ ಪಡುತ್ತಿದ್ದ ತಾಲ್ಲೂಕಿನ ಅದೆಷ್ಟೋ ಸಮಾಜವಾದಿ ನಾಯಕರುಗಳಿಗೆ ಕದ್ದು ಮುಚ್ಚಿ ಸರ್ಕಾರದ ವಿರುದ್ಧದ ಸಾಹಿತ್ಯವನ್ನು ತಲುಪಿಸಲು ನಮ್ಮನ್ನೂ ಬಳಸಿಕೊಳ್ಳುತ್ತಿದ್ದ. ನಮ್ಮ ಕಲ್ಯಾಣ ಗುಣಗಳನ್ನೆಲ್ಲ ಸರ್ಕಾರೀ ನೌಕರಿಯಲ್ಲಿದ್ದ ಅಪ್ಪ ಸರಿಯಾಗಿ ಅರ್ಥ ಮಾಡಿಕೊಂಡು ಇವನ ಸಹವಾಸದಲ್ಲಿ ನಾನು ಕೆಡಬಹುದೆಂದು ಹೆದರಿ ಪಿಯುಸಿಗೆ ನನ್ನನ್ನು ಶಿವಮೊಗ್ಗೆಗೆ ಕಳಿಸಿಬಿಟ್ಟರು, ಅಲ್ಲಿಂದಾಚೆಗೆ ನಾನು ಊರಿಗೆ ಬರುವುದೇ ಅಪರೂಪವಾಗಿ ಬಿಟ್ಟಿತು. ಪಿಯುಸಿ ಮುಗಿದ ಮೇಲೆ ಪದವಿ, ಆಮೇಲೆ ಎಂಕಾಂ, ಬ್ಯಾಂಕ್ ನೌಕರಿ, ಪ್ರಮೋಶನ್ನು, ಊರಿಂದೂರಿಗೆ ವರ್ಗ ಇವುಗಳ ನಡುವೆ ಅಪರೂಪಕ್ಕೆ ಊರಿಗೆ ಬಂದರೂ ಚಂದ್ರ್ರನೊಂದಿಗಾಗಲೀ ಅವನ ಗುಂಪಿನೊಂದಿಗಾಗಲೀ ಹೆಚ್ಚು ಬೆರತದ್ದು ಇಲ್ಲವೇ ಇಲ್ಲ. ಯೋಗಕ್ಷೇಮ ಬಿಟ್ಟು ಹೆಚ್ಚು ಮಾತಾಡಲು ಪುರುಸೊತ್ತಾದರೂ ಎಲ್ಲಿರುತ್ತಿತ್ತು? ಇತ್ತ ಊರಲ್ಲೇ ಉಳಿದ ಚಂದ್ರ ಎಸೆಲ್ಸಿಯನ್ನು ದಾಟಲಾರದೇ ಊರ ಆಂಜನೇಯನ ಪೂಜಾರಿಯಾದ. ಸಣ್ಣಂದಿನಲ್ಲೇ ತಾಯಿ ಕಳಕೊಂಡಿದ್ದ ಅವನು, ಪೂಜೆ, ಪುನಸ್ಕಾರ, ಮಡಿ, ಮೈಲಿಗೆಗಳ ಕಾರಣ ಇಪ್ಪತ್ತೆರಡೆಕ್ಕೆಲ್ಲ ಮದುವೆಯಾಗಿ ಸಂಸಾರದ ಕಡಲಲ್ಲಿ ಈಜತೊಡಗಿದ. ಎದುರು ಸಿಕ್ಕವರೊಬ್ಬರು “ಶಾಸ್ತ್ರಿಗಳೇ, ನಿಮ್ಮ ಮನೆ ಮುಂದೆ ಬರುವಾಗ ನಿಮ್ಮ ಹೆಂಡತಿ ನನ್ನನ್ನು ನಿಲ್ಲಿಸಿ ನಿಮಗೂ ನನಗೂ ಒಟ್ಟಿಗೇ ಮಂಗಳಾರತಿ ಎತ್ತಿದರು. ನಿಮ್ಮ ಮಾತು ಕೇಳಿಕೊಂಡು ಜಮೀನು ಮಾರಿ ಸಿನಿಮಾ ಟಾಕೀಸು ನಡೆಸಿ ಕೈ ಸುಟ್ಟುಕೊಂಡಿದ್ದೂ ಅಲ್ಲದೇ ಈಗ ಮಂಡಿಯಲ್ಲಿ ಕೂರಲೂ ಮನಸ್ಸು ಕೇಳುತ್ತಿಲ್ಲ. ಬೆಳಿಗ್ಗೆಯೇ ಮನೆ ಬಿಟ್ಟವರು ಇನ್ನೂ ಬಂದಿಲ್ಲ. ಹೊಸ ಸಿನಿಮಾ ತರುಕ್ಕೆ ಬೆಂಗಳೂರಿಗೆ ಕಳಿಸಿದ್ರಾ ಅಂತ ನಿಮ್ಮಾಕೆ ಹಂಗಿಸಿದರು, ಮಹರಾಯರೇ. ಯಾರೋ ಇವತ್ತು ತಿಥಿ ಮಾಡಲಿಕ್ಕೆ ಬಂದವರು ಕಾಯುತ್ತಿದ್ದಂತಿತ್ತು” ಅಂತ ಹೇಳಿ ಮುಂದೆ ಸಾಗಿದರು. ತಾನೇನನ್ನೂ ಕೇಳಿಸಿಕೊಂಡೇ ಇಲ್ಲವೆಂಬಂತೆ ಈ ಮಹರಾಯ ‘ಅಲ್ಲಿ ಮರದಡಿಯಲ್ಲಿ ನಲ್ಗಾವ್ಯವೊಂದಿರಲು...’ ಅಂತ ಹಾಡಿಕೊಳ್ಳುತ್ತ ನಡೆಯುತ್ತಿದ್ದ. “ಎಷ್ಟು ಮಕ್ಕಳೋ ನಿನಗೆ” ಕೇಳಿದೆ. “ಎರಡೇ ಎರಡು. ಎರಡೂ ಹೆಣ್ಣೇ. ಇನ್ನೂ ಮದುವೆ ಮಾಡಿಲ್ಲ. ದಿನಕಳೆದು ಸಂಜೆಯಾದರೆ ನಾಳೆಗೇನು ಎನ್ನುವ ಪರಿಸ್ಥಿತಿಯ ನಾನು ಈ ಧಾರಣೆಯ ಕಾಲದಲ್ಲಿ ಅವರಿಗೆ ಮದುವೆ ಮಾಡಿದ ಹಾಗೇ .. ..” ಮುಂದುವರೆಸಿದ. “ನೀನೇ ವಾಸಿ. ಬೇರೆ ಜಾತಿಯಾದರೂ ಇಷ್ಟ ಪಟ್ಟವಳನ್ನೇ ಮದುವೆಯಾದೆ. ಇರುವ ಒಬ್ಬಳೇ ಮಗಳಿಗೂ ಓದುತ್ತಿರುವಾಗಲೇ ಕೆಲಸ ಬೇರೆ ಸಿಕ್ಕಿದೆಯಂತೆ, ಅದೂ ವರ್ಷಕ್ಕೆ ಆರು ಲಕ್ಷಸಂಬಳವಂತೆ, ನಿನ್ನ ತಮ್ಮ ಶ್ರೀಕಂಠನೇ ಹೇಳಿದ” ಅಂದ. ಇವನಿಂದ ಏನನ್ನೂ ಮುಚ್ಚಿಡುವ ಹಾಗಿಲ್ಲ ಅಂದುಕೊಂಡೆ. ನನ್ನನ್ನು ಮುಂದು ಬಿಟ್ಟುಕೊಂಡು ಚಂದ್ರ ಗೇಟು ತೆರೆದ. “ಏ ಸೀತಾಲಕ್ಷ್ಮಿ, ಬಾ ಇಲ್ಲಿ, ಯಾರು ಬಂದಿದ್ದಾರೇಂತ ನೋಡು ಬಾ. ನನ್ನ ಗೆಳೆಯರನ್ನೆಲ್ಲ ಕೆಲಸಕ್ಕೆ ಬಾರದವರೂಂತ ಛೇಡಿಸುತ್ತೀಯಲ್ಲ, ನೋಡು ಬ್ಯಾಂಕು ಮ್ಯಾನೇಜರು ಬಂದಿದ್ದಾರೆ, ಅವರೂ ನನ್ನ ಸ್ನೇಹಿತರೆ” ಅಂತ ಕೂಗಿದ. ಶ್ರಾದ್ಧದಡಿಗೆಯ ಕೆಲಸಕ್ಕಾಗಿ ಮಡಿ ಸೀರೆಯುಟ್ಟಿದ್ದ ಆಕೆ ಬೆಂಕಿಯುರಿಯಂತೆ ಹೊರಬಂದವರು ನನ್ನನ್ನು ನೋಡಿದೊಡನೆಯೇ ಎಣ್ಣೆ ತೀರಿ ಫಕ್ಕನೆ ನಂದಿ ಹೋದ ದೀಪದಂತೆ ಒದ್ದೆ ಕೈಯನ್ನು ಸೆರಗಿಗೆ ಒರೆಸಿಕೊಳ್ಳುತ್ತ ನಗು ಮುಖ ತೋರಿ “ನಾಳೆ ನಿಮ್ಮನೆಗೆ ಅಡಿಗೆ ಕೆಲಸಕ್ಕೆ ಹೋಗಬೇಕು. ನಿಮ್ಮ ತಾಯಿ ನನ್ನನ್ನಲ್ಲದೆ ಬೇರಾರಿಗೂ ಶ್ರಾದ್ಧದಡಿಗೆಗೆ ಕರೆಯುವುದಿ. ಬಾಯಾರಿಕೆಗೆ ಪಾನಕ ಆಗಬಹುದಾ?” ಅಂತ ಕೇಳಿ, ಚಂದ್ರ ಹೊತ್ತುತಂದು ಜಗಲಿಯಲ್ಲಿಟ್ಟಿದ್ದ ತರಕಾರಿ ಚೀಲವನ್ನೆತ್ತಿಕೊಂಡು ಒಳಹೋದರು. ಜಗಲಿಯಲ್ಲಿ ಕೂತು ಇವನ ಬರವಿಗೇ ಕಾಯುತ್ತಿದ್ದ ಪೂರ್ವಪಂಕ್ತಿಯ ಬ್ರಾಹ್ಮಣರು ಸ್ನಾನದ ಪಂಚೆ ಝಾಡಿಸಿ ತಾವು ಬಹಳ ಹೊತ್ತಿನಿಂದ ಕಾಯುತ್ತಿರುವುದನ್ನು ಸಂಕೇತಿಸಿದರು. “ಸ್ನಾನಕ್ಕೇಳಿ” ಅಂತ ಅವರಿಗೆ ಸೂಚಿಸಿದ ಚಂದ್ರ ‘ಕರ್ತ್ರುಗಳು ಸಿದ್ಧವಾ’ ಅಂತ ಕೇಳಿದ. ನಾನು ಈವತ್ತು ಇಲ್ಲಿಗೆ ಬರಬಾರದಿತ್ತು ಅಂದುಕೊಂಡೇ ಜಗಲಿಯಲ್ಲಿ ಕೂತು ಶೂ ಕಳಚುತ್ತಿರುವಾಗ ಲಕ್ಷಣವಾದ ಹುಡುಗಿಯೊಬ್ಬಳು ಉದ್ದನೆಯ ಸ್ಟೀಲ್ ಲೋಟದಲ್ಲಿ ಬೇಲದ ಹಣ್ಣಿನ ಪಾನಕವನ್ನು ತಂದು ನನ್ನ ಮುಂದಿಟ್ಟಳು. “ನಿಮ್ಮ ಬ್ಯಾಂಕಿನ ಕ್ಲೆರಿಕಲ್ ಪರೀಕ್ಷೆ ಪಾಸು ಮಾಡಿದ್ದೇನೆ. ಮುಂದಿನ ಸೋಮವಾರ ಇಂಟರ್‌ವ್ಯೂ” ಅವಳು ಮಾತು ಮುಗಿಸುವುದರಲ್ಲಿ ನಾನು ಹೇಳಿದೆ “ಸೆಲೆಕ್ಷನ್ ಕಮಿಟಿಯ ಶ್ರೀನಿವಾಸ ಕಾಮತರಿಗೆ ಹೇಳುತ್ತೇನೆ. ನಿನ್ನ ಹೆಸರು ರೋಲ್ ನಂಬರು ಬರೆದುಕೊಡು” “ ಇಲ್ಲ ನಂಗೆ ಬ್ಯಾಂಕು ಸೇರಲು ಇಷ್ಟವಿಲ್ಲ. ಅಪ್ಪ ನಿಮ್ಮ ಸ್ನೇಹಿತರು. ನಿಮ್ಮಿಂದ ನನಗೆ ಬುದ್ಧಿ ಹೇಳಿಸುತ್ತಾರೆ ಅಂತ ನಾನೇ ಆ ವಿಷಯ ತೆಗೆದೆ. ನಂಗೆ ಬೆಂಗಳೂರಿನ ಕಾಲ್‌ಸೆಂಟರಿನಲ್ಲಿ ಕೆಲಸ ಸಿಕ್ಕಿದೆ. ತಿಂಗಳಿಗೆ ಹದಿನೈದು ಸಾವಿರ ಸಂಬಳ. ನಿಮ್ಮ ಬ್ಯಾಂಕು ಸೇರಿದರೆ ಯಾವ ಹಳ್ಳಿಗೆ ಹಾಕ್ತಾರೋ ಅಲ್ಲಿಗೆ ಹೋಗಿ ಬರೋದು, ಬಸ್ಸಿನ ತಾಪತ್ರಯ, ಜೊತೆಗೆ ಮೊಬೈಲ್ ನೆಟ್‌ವರ್ಕ್ ಇಲ್ಲದ ಗಲೀಜು ಹಳ್ಳಿಗಳು ನನಗಾಗಲ್ಲ. . . .” ಅವಳು ಇನ್ನೂ ಏನೇನು ಹೇಳುತ್ತಿದ್ದಳೋ ಮಡಿಪಂಚೆಯುಟ್ಟು ಹಿಂದಿನಿಂದ ಬಂದ ಚಂದ್ರ “ ನನ್ನ ಮಗಳು ಅನಸೂಯ ಕಣಯ್ಯ. ಡಿಗ್ರಿ ಮುಗಿಸಿದ್ದಾಳೆ. ಬೆಂಗಳೂರು ಅಂತ ಕುಣಿತಾಳೆ. ಕಣ್ಣ ಮುಂದೇ ಇರಲಿ ಅಂತ ಅವರಮ್ಮನ ಆಸೆ.. .. ..” “ ರೀ, ಕಾಲು ತೊಳೆಯೋಕ್ಕೆ ಮಣೆ ಹಾಕಿ. ಅಗ್ರ, ತೇದ ಗಂಧ, ತುಳಸಿ, ಸಗಣಿ ಎಲ್ಲವನ್ನೂ ಹಜಾರದಲ್ಲೇ ಮೊರದಲ್ಲಿ ಇಟ್ಟಿದ್ದೇನೆ..” ಸೀತಾಲಕ್ಷ್ಮಿ ಕೂಗಿ ಹೇಳಿದರು. ಅವಸರದಲ್ಲಿ ಚಂದ್ರ ಒಳಕ್ಕೋಡಿದ. “ಪ್ರಾಚೀನಾವೀತಿ. ..ಜನಿವಾರ ಎಡಕ್ಕೆ ಹಾಕ್ಕೊಳ್ಳಿ.. ಪಿತೃಸ್ಥಾನದಲ್ಲಿರೋರಿಗೆ ಎಳ್ಳಿನಿಂದ ಪೂಜೆ ಮಾಡಿ. ..ಕೆಳಗಿಂದ ಮೇಲಕ್ಕೆ .. .. ಸವ್ಯ.. ಜನಿವಾರ ಸರಿಯಾಗಿ ಹಾಕೊಳ್ಳಿ. ..ವಿಶ್ವೇದೇವರನ್ನು ಅಕ್ಷತೇಲಿ ಅಂದ್ರೆ ನೆನೆಸಿದ ಅಕ್ಕೀಲಿ ಪೂಜೆ ಮಾಡಿ. ಮೇಲಿಂದ ಕೆಳಕ್ಕೆ. . . .” ಚಂದ್ರ ಮಂತ್ರ ಹೇಳುತ್ತಲೇ ಕೈ ಕರಣಗಳನ್ನೂ ಬಿಡಿ ಬಿಡಿಯಾಗಿ ಹೇಳಿಕೊಡುತ್ತಿರುವುದು ಸ್ಪಷ್ಟವಾಗಿ ಕೇಳಿಸಿತು. ನಾಳೆ ನಾನೂ ಇದನ್ನೆಲ್ಲ ಮಾಡಬೇಕು. ಜನಿವಾರ ಮೈ ಮೇಲೆ ಇದೆಯೋ ಇಲ್ಲವೋ? ಬಗಲಿಗೆ ಕೈ ಹಾಕಿ ಖಚಿತಪಡಿಸಿಕೊಂಡೆ. ಜಗಲಿಯ ಮಂದಾಸನದಲ್ಲಿ ಕೂತಿದ್ದ ಹಾಗೇ ಜೊಂಪು ಎಳೆಯಿತು. ಗೋಡೆಗೊರಗಿದೆ. “ಎಲೆ ಹಾಕಿದೆ. ಏಳಪ್ಪ, ಊಟ ಮಾಡೂವಿಯಂತೆ..” ಚಂದ್ರ ನನ್ನನ್ನು ಕೂಗಿ ಎಬ್ಬಿಸಿ ಶ್ರಾದ್ಧದೂಟ ಬಡಿಸಿದ್ದ ಎಲೆಯ ಮುಂದೆ ಕುಳ್ಳಿರಿಸಿದ. ಸುತ್ತುಗಟ್ಟಿ ಪರಿಷೇಚನೆ ಮಾಡಿ ವ್ಯಾನಾಯ ಸ್ವಾಹಾ, ಉದಾನಾಯ ಸ್ವಾಹಾ... ಹೇಳಿ ತುತ್ತು ಬಾಯಿಗಿಡುವ ಹೊತ್ತಲ್ಲಿ ಮೊಬೈಲ್ ರಿಂಗಣಿಸಿತು. ತಮ್ಮ ಶ್ರೀಕಂಠನ ಕಾಲು. “ಅಮ್ಮ ಕಾಯುತ್ತಿದ್ದಾಳೆ. ಮಡೀಲಿ ಅಡಿಗೆ ಮಾಡಿಸಿ ನಿನಗೋಸ್ಕರ ಕಾಯುತ್ತಿದ್ದೇವೆ. ಹೊರಗಡೆ ಎಲ್ಲೂ ಇವತ್ತೊಂದಿನವಾದ್ರೂ ತಿನ್ನಬೇಡ ಅಂತ ಹೇಳು ಅಂತ ಅಮ್ಮ ಹೇಳಿದ್ಲು. ಮಕ್ಕಳೂ ಸ್ಕೂಲಿಂದ ಬರೋ ಹೊತ್ತಾಯ್ತು. ತಕ್ಷಣ ಬಾ. ಇಲ್ಲಾಂದ್ರೆ ಎಲ್ಲಿದ್ದಿ ಹೇಳು. ನಾನೇ ಗಾಡೀಲಿ ಬಂದು ಕರಕೊಂಡು ಬರ್ತೀನಿ.” ಪೇಚಾಟಕ್ಕಿಟ್ಟುಕೊಂಡಿತು. ಏಳುವ ಹಾಗೂ ಇಲ್ಲ. ಕೂರುವ ಹಾಗೂ ಇಲ್ಲ. ಪರಿಸ್ಥಿತಿ ಬಿಗಡಾಯಿಸಿತೆಂದುಕೊಂಡೆ. ಎಲ್ಲಿಗೋ ಹೊರಟವನು ಈ ಕರಡಿಯ ಕೈಯಲ್ಲಿ ಸಿಕ್ಕಿಹಾಕಿಕೊಂಡೆನಲ್ಲ ಎಂದು ಕೊಂಡೆ. “ಮನೆಯಿಂದಲೋ ಫೋನು? ಇವತ್ತು ನೀನು ಈಗ ಊಟ ಮಾಡುತ್ತಿರುವುದು ನಿನ್ನ ಜ್ಞಾತಿಗಳ ಪ್ರಸಾದವನ್ನೇ. ನಿನ್ನ ಅಜ್ಜನ ಅಣ್ಣನ ಮೊಮ್ಮಗನ ಅಂದರೆ ನಿನ್ನಣ್ಣನ ಶ್ರಾದ್ಧ ಪ್ರಸಾದ. ನಿಮ್ಮ ಅಮ್ಮನಿಗೆ ಹೇಳು. ನi ಮನೇಲಿ ಉಂಡರೆ ಅವರಿಗೆ ಬೇಜಾರಾಗುಲ್ಲ” ಚಂದ್ರ ತಕ್ಷಣದ ಉಪಾಯ ಹೇಳಿದ. ಊಟ ಮುಗಿಸಿ ತಾಂಬೂಲ ಮೆಲ್ಲುತ್ತಿರುವಾಗ ಸೀತಾಲಕ್ಷ್ಮಿಯವರು ನನ್ನ ಮನೆ, ಮಕ್ಕಳು, ಉದ್ಯೋಗಗಳ ಪಂಚನಾಮೆ ಮುಗಿಸಿ, ತಮ್ಮ ಮಗಳ ಆಸೆಯನ್ನೇ ನಾನೂ ಬೆಂಬಲಿಸಬೇಕೆಂದು ಆರ್ತವಾಗಿ ಬೇಡಿದರು. ಸಣ್ಣ ಊರುಗಳ ದೊಡ್ಡ ರಾಜಕೀಯ ತಮಗೆ ಇನ್ನು ಬೇಡವೆಂದೂ ಅಂಬಲಿಯೋ ಗಂಜಿಯೋ ದೇವರು ನೀಡಿದಷ್ಟರಲ್ಲೇ ತೃಪ್ತರಾಗಿರುವುದಾಗಿಯೂ ಸೇರಿಸಿದರು. ಹೋಗಿ ಬರುತ್ತೇನೆ ಎಂದೆದ್ದವನು ಚಂದ್ರನಿಗೂ ಹೇಳೋಣವೆಂದರೆ ಅವನಲ್ಲಿ ಕಾಣಲಿಲ್ಲ. ಅಂಗಳಕ್ಕಿಳಿದು ಶೂ ಹಾಕಿಕೊಳ್ಳುವಾಗ ಬಟ್ಟೆಯೊಗೆಯುವ ಕಲ್ಲಿನ ಮೇಲೆ ಕೂತು ತೆಂಗಿನ ಗೆರಟೆ ಹೆರೆಯುತ್ತ ಕೂತಿದ್ದ ಅವನು ಕಾಣಿಸಿದ. ಅದೆಷ್ಟು ತತ್ಪರನಾಗಿ ಅವನು ಗೆರಟೆ ಹೆರೆಯುತ್ತಿದ್ದನೆಂದರೆ ಹಿಂದಿನಿಂದ ನಾನು ಹೋಗಿ ಅವನ ಭುಜ ಅಲುಗಿಸುವವರೆಗೂ ಅವನಿಗೆ ಗಮನವೇ ಇರಲಿಲ್ಲ. ಬಲಿತ ಕಾಯಿಯ ಅರ್ಧಹೋಳು ಗೆರಟೆಯನ್ನು ನುಣ್ಣಗೆ ಹೆರೆಯುತ್ತಿದ್ದಾನೆಂದರೆ ಜಿಲೇಬಿ ಬಟ್ಟಲು ತಯಾರಿಸುತ್ತಿದ್ದಾನೆಂದು ಅರ್ಥೈಸಿಕೊಂಡೆ. ಯಾರ ಮನೆಯ ಯಾವ ಫಂಕ್ಷನ್ನಿಗೆ ಈ ತಯಾರಿಯೆಂದೂ ಕೇಳಿದೆ. ಪೆಚ್ಚಾಗಿ ನಕ್ಕ ಅವನು “ಜಿಲೇಬಿಗಲ್ಲವೋ ಮಾರಾಯಾ. ಬೆಳಗ್ಗೆ ಸಂತೆಯಲ್ಲಿ ಮಾರುತ್ತಿದ್ದ ಗೆರಟೆಯ ಪಿಟೀಲು ನೋಡಲಿಲ್ವಾ ನೀನು? ಅದನ್ನು ಕಂಡಾಗಿನಿಂದ ಅಂಥದೊಂದನ್ನು ಮಾಡಿ ನುಡಿಸುವಾಸೆಯಾಗಿದೆ... ಅದು ಕುನ್ನೈಕುಡಿಯ ಪಿಟೀಲೇ ಆಗಲಿ, ಮೈಸೂರು ನಾಗರಾಜನ ಪಿಟೀಲೇ ಆಗಲಿ, ಅಥ್ವಾ ಈ ಗೆರಟೆಯ ಪಿಟೀಲೇ ಆಗಲಿ, ನಾದ ಹುಟ್ಟೋದು ಅದಕ್ಕೆ ಬಿಗಿದ ತಂತಿಯಿಂದ ತಾನೇ? ನಮ್ಮ ಅನಸೂಯಂಗೆ ಸಂಗೀತ ಅಂದ್ರೆ ಶಾನೇ ಇಷ್ಟ. ಅವಳಿಗೆ ಪಿಟೀಲು ನುಡಿಸೋದು ಚೂರುಪಾರು ಗೊತ್ತು. ಅದಕ್ಕೇ ಈ ತಯಾರಿ” ಎಂದವನೇ ಮತ್ತೆ ತನ್ನ ಕಾಯಕದಲ್ಲಿ ತಲ್ಲೀನನಾದ. ಅವನಾಗಲೇ ಆ ಪಿಟೀಲಿಗೆ ಜೋಡಿಸಲು ಮರದ ಹಿಡಿಯನ್ನೂ, ಗೆರಟೆಯ ಬಾಯಿಗೆ ಅಂಟಿಸಲು ದಪ್ಪನೆಯ ಚರ್ಮದಂಥ ಪೇಪರನ್ನೂ, ತಂತಿಯ ಸಿಂಬೆಯನ್ನೂ ಅಣಿಯಾಗಿಟ್ಟುಕೊಂಡು ಕೂತಿದ್ದ. ಅದು ಹೇಗೋ ನಾನು ಚಂದ್ರನ ಮನೆಯಲ್ಲಿರುವುದನ್ನು ಪತ್ತೆಮಾಡಿದ್ದ ಶ್ರೀಕಂಠ ಬೈಕಿನಲ್ಲಿ ಬಂದು ಹಾರ್ನು ಮಾಡತೊಡಗಿದ. ಬೈಕಿನ ಹಿಂಬದಿ ಸೀಟಿನಲ್ಲಿ ಕೂರುವಾಗ ಮಂಡಿವರ್ತಕನೂ, ಪುರಸಭೆಯ ಉಪಾಧ್ಯಕ್ಷನೂ ಆಗಿರುವ ಅವನು ವರ್ಷಕ್ಕೊಮ್ಮೆ ಬಂದರೂ ಮನೆಯಲ್ಲಿ ನಿಲ್ಲದ ನನ್ನನ್ನು ಕಣ್ಣಲ್ಲೇ ಸುಡುವಂತೆ ನೋಡಿದ. ಹೊರಡುವಾಗ ಚಂದ್ರನಿಗೆ ನಾಳೆ ಬೆಳಿಗ್ಗೆ ಮಡಿಯಲ್ಲಿ ಬಂದು ಜ್ಞಾಪಿಸುವುದಾಗಿಯೂ, ಅಪ್ಪನ ಶ್ರಾದ್ಧದ ಪೂರ್ವಪಂಕ್ತಿಗೆ ಅವನು ಕೂರಬೇಕಿರುವುದರಿಂದ ಹೊರಗೆಲ್ಲೂ ತಿಂಡಿಗಿಂಡಿ ತಿನ್ನಬಾರದೆಂತಲೂ, ಬೇಕಿದ್ದರೆ ಆಚೆ ನಾಳಿದ್ದು ಅವನೇ ಅಯೋಧ್ಯೆ ಹೋಟೆಲ್ಲಿನಲ್ಲಿ ಮಸಾಲೆ ದೋಸೆ ಕೊಡಿಸುವುದಾಗಿಯೂ ಕೂಗಿ ಹೇಳಿ, ಸೀತಾಲಕ್ಷ್ಮಿಗೂ ಬೆಳಗ್ಗೆಯೇ ಮಡಿಯುಟ್ಟು ಬರಬೇಕೆಂದೂ, ಅವನ ಹೆಂಡತಿಗಿನ್ನೂ ಅಳತೆ ಅಂದಾಜುಗಳು ದಕ್ಕಿಲ್ಲವೆಂದೂ, ಸೀತಾಲಕ್ಷ್ಮಿ ಬಾರದಿದ್ದರೆ ಅಮ್ಮ ಗಾಬರಿಪಡುವುದಾಗಿಯೂ ಹೇಳಿದ. ಮನೆ ಸೇರಿ ಬೆಳಿಗ್ಗೆಯಿಂದ ನಡೆದುದೆಲ್ಲವನ್ನೂ ಅಮ್ಮನಿಗೆ ಸಂಕ್ಷೇಪದಲ್ಲಿ ಹೇಳಿ ನನ್ನ ಊಟವಾಗಿರುವುದನ್ನೂ ಚಂದ್ರನ ಮನೆಯಲ್ಲಿ ನಡೆದ ತಿಥಿಯ ವಿಚಾರವನ್ನೂ ಹೇಳಿದೆ. “ಬಿಡು, ಜ್ಞಾತಿಗಳ ಪ್ರಸಾದ. ನಾಳೆ ನಿಮ್ಮಪ್ಪನದೇ ತಿಥಿ ಇರುವಾಗ ಸ್ವಲ್ಪವಾದರೂ ನೇಮ. ನಿಷ್ಠೆ ಇಟ್ಟುಕೋಬೇಕು ತಾನೆ?” ಅಂತ ಹೇಳಿ ನನ್ನ ಮುಜುಗರಕ್ಕೆ ಚುಕ್ಕಿ ಇಟ್ಟಳು. ಶ್ರೀಕಂಠನ ಹೆಂಡತಿ ಕಾಫಿ ಕೊಡುವಾಗ “ಅಕ್ಕನಂತೂ ಅತ್ತೆ ಇರುವವರೆಗೂ ಈ ಮನೆಗೆ ಬರುವ ಹಾಗಿಲ್ಲ. ಅತ್ತೆ ಮುಂದಿನ ತಿಂಗಳು ಕಾಶೀ ಯಾತ್ರೆಗೆ ಹೊರಟಿದ್ದಾರೆ. ಅಕ್ಕನನ್ನೂ, ಮಗಳನ್ನೂ ಕಳಿಸಿಕೊಡಿ” ಅಂತ ಗುಟ್ಟಾಗಿ ಹೇಳಿದಳು. ಆಗಲಿ ಅನ್ನುವಂತೆ ಕತ್ತು ಹಾಕಿದೆ. ಮಾರನೇ ದಿನ ಅಪ್ಪನ ತಿಥಿ ಸಾಂಗವಾಗಿ ನಡೆದು ದಾಯಾದಿಗಳೆಲ್ಲ ಪ್ರಸಾದ ಸ್ವೀಕರಿಸಿ ಹೋದ ನಂತರ ಸಂಜೆ ಕಾಫಿ ಕುಡಿಯುವಾಗ ಅಮ್ಮ ತಾನು ಕಾಶಿಗೆ ಹೊರಟ ವಿಚಾರ ಹೇಳಿದಳು. ಅದೂ ಇದೂ ಮಾತಿನ ನಡುವೆ ಅವರಿವರ ಮನೆ ಹೆಣ್ಣುಮಕ್ಕಳ ಮದುವೆ, ಖಾಯಿಲೆ, ಕಸಾಲೆ, ಊರ ರಾಜಕೀಯದ ಸುದ್ದಿ ಹಾದು ಹೋಗುತ್ತಿರುವಾಗ ಇದ್ದೂರಲ್ಲೇ ಉಳಿದ ಕಾರಣ ಬೇಕೋ ಬೇಡವೋ ರಾಜಕೀಯ ಮಾಡೋದು ಅನಿವಾರ್ಯ ಅಂತ ಶ್ರೀಕಂಠ ದನಿ ಸೇರಿಸಿದ. ಚಂದ್ರಶೇಖರ ಶಾಸ್ತ್ರಿಯ ದೊಡ್ಡ ಮಗಳು ಬೆಂಗಳೂರಿನ ಜೆವೆಲ್ರಿಯಲ್ಲಿ ಕೆಲಸಕ್ಕಿರೋ ಪುಟ್ಟಾಚಾರಿಯ ಮಗನ ಜೊತೆ ಶೀಘ್ರದಲ್ಲೇ ಓಡಿಹೋಗುತ್ತಾಳೆಂದು ಭವಿಷ್ಯ ಹೇಳಿದ. “ಗಂಡು ಹುಡುಕಿ ಮದುವೆ ಮಾಡುವ ತಾಕತ್ತಿಲ್ಲದ ನಿನ್ನ ಗೆಳೆಯ ಮಗಳು ಓಡಿ ಹೋಗಲಿ ಅಂತ ಕಾಯುತ್ತಿದ್ದಾನೆ” ಅಂತಂದು ಹಲ್ಲು ಕಚ್ಚಿಕೊಂಡ. ರಾತ್ರಿ ಊರಿಗೆ ಹೊರಟಾಗ ಅಮ್ಮ ಜತನದಿಂದ ಕಟ್ಟಿಕೊಂಡ ಅಪ್ಪನ ಪ್ರಸಾದವನ್ನು ಬ್ಯಾಗಲ್ಲಿಟ್ಟುಕೊಂಡು ಹೋಗಿ ಬರುವುದಾಗಿ ಹೇಳಿದೆ. ಅಮ್ಮ “ಶ್ರೀಕಂಠನ ಮಗ ಹೈಸ್ಕೂಲು ಮುಗಿಸಿದ ಮೇಲೆ ನಿನ್ನ ಮನೆಯಲ್ಲೇ ಇದ್ದು ಓದಲಿ. ಈ ಊರು ಕೆಟ್ಟು ಹೋಗಿದೆ. ಮಗಳಿಗೆ ಯಾವಾಗ ಮದುವೆ ಮಾಡ್ತೀಯ? ಅವಳೂ ಯಾರನ್ನಾದರೂ ನೋಡಿಕಂಡಿದಾಳಾ?” ಅಂತ ಕೇಳಿ ಶ್ರೀಕಂಠನಿಂದ ಬೈಸಿಕೊಂಡಳು. ಶ್ರೀಕಂಠ ಬೈಕಿನಲ್ಲಿ ರೈಲ್ವೇ ಸ್ಟೇಷನ್ನಿಗೆ ಬಿಟ್ಟು ಹೋದ. ರಾತ್ರಿ ರೈಲಿಗೆ ಮೊದಲೇ ಟಿಕೇಟು ಮಾಡಿಸಿದ್ದ ನನಗೆ ರೈಲು ಒಂದು ಗಂಟೆ ತಡವಾಗಿ ಬರುತ್ತದೆ ಎನ್ನುವ ವಿಚಾರಣೆಯವರ ಸೂಚನೆ ಕೇಳಿಸಿತು. ನಿಲ್ದಾಣದ ಕಲ್ಲುಬೆಂಚಿನ ಮೇಲೆ ಕೂತಿದ್ದ ಅನಸೂಯ ಮೊಬೈಲಿನ ಮೆಸೇಜಿನಲ್ಲಿ ತಲ್ಲೀನಳಾಗಿದ್ದನ್ನು ಗಮನಿಸಿದೆ. ಅವಳ ಪಕ್ಕದಲ್ಲಿದ್ದ ತೆರೆದ ಬಾಯಿಯ ಬ್ಯಾಗಿನಲ್ಲಿ ತೆಂಗಿನ ಗೆರಟೆಯಿಂದ ತಯಾರಿಸಿದ ಪಿಟೀಲು ನಗುತ್ತ ಕೂತಿತ್ತು. ಹೌದಲ್ಲವಾ, ನಾದ ಹುಟ್ಟೋದು ಎಳೆದು ಕಟ್ಟಿದ ತಂತಿಯಿಂದಲೇ ಹೊರತು ಸುತ್ತಿಟ್ಟ ಸಿಂಬೆಯಿಂದ ಅಲ್ಲವಲ್ಲ ಎಂದುಕೊಂಡು ಜೇಬಲ್ಲಿಟ್ಟಿದ್ದ ಸಿಗರೇಟೆಳೆದು ಬೆಂಕಿಕೊಟ್ಟೆ. (ಸ್ಪೂರ್ಥಿ -ಡಾ.ಯು.ಆರ್.ಅನಂತಮೂರ್ತಿಯವರ ’ಸೂರ್ಯನ ಕುದುರೆ’) -----------------------------------------------------------------------------

ninnavastege

ಉದ್ದೀಪನದ ಮದ್ದು ಮೆದ್ದಿದ್ದೀಯೇನೆ, ಹುಡುಗಿ ಮೂರ್ತದಿಂದಮೂರ್ತಕ್ಕೆ ನಿನ್ನ ನೆಗೆತ? ಅವಯವದ ಆಕಾರಕ್ಕೆ ಆಸಕ್ತ ಲೌಕಿಕದಲ್ಲಿ ತುಂಡಿನುಡುಗೆಯ ನೀನು ನಭದ ನಕ್ಷತ್ರ- ವಲ್ಲವೆಂದು ಪ್ರಮಾಣಿಸುವುದು ಕಡು ಕಷ್ಟ. ರಸ, ರೂಪ, ಗಂಧ ದಂದುಗದ ವ್ಯಾಪಾರವಿಲ್ಲಿ ವಜ್ರ ಹೊಳೆಯುವ ಹಾಗೇ ಗಾಜೂ ಲಕಲಕಿಸುವ ದಿಲ್ಲಿ ಕಾಣುವರು ಕಣ್ಣಿದ್ದವರು ಸತ್ಯ ದರ್ಶನದಲ್ಲಿ- ಕಂಡದ್ದೆಲ್ಲ ಲಯವಾಗಿ ಹೋಗುವುದು, ದಿಟ. ಸ್ಮರಣೆಯಿದ್ದರೆ ತಾನೆ ಭವದ ನಂಟಿನ ನಂಜು ಸಿಂಹಾಸನಗಳಲುಗಿ ಒರೆಯ ಕತ್ತಿಗೆ ರಕ್ತದ ಕಲೆ- ಯಂಟುವುದು ಕ್ರಾಂತಿಯ ಹೆಸರಲ್ಲಿ ಮತ್ತೆ ಮೆರೆದಾಟ ಹೂಡಿದವಿವೇಕಿಗಳ ನಡುವೆಯೇ ಬುದ್ಧನೆದ್ದದ್ದು? ಭವದನುಭವದ ಸುಡುಸುಡುವ ಮಾತಿಗೆ ನಲುಗಿ ಅಕ್ಕ ಬಟ್ಟೆ ಬಿಚ್ಚೆಸೆದು, ಮೊಲೆಹಿಡಿಯುವೆವೆಂಬ ತ್ರಿಮೂರ್ತಿಗಳಿಗನಸೂಯೆ ತಾಯಾಗಿ ಹಾಲೂಡಿಸಿದ್ದು ರೇಣುಕೆಯ ತಲೆಯುರುಳಿಸಿ, ರಾಮ ವರವ ಬೇಡಿದ್ದು? ಕಂಚುಕದ ಕಟ್ಟ ಸಡಿಲಿಸುವ ಮೊದಲು ಕೊಂಚ ಕಣ್ಣು ಬಿಡು ನಾಕೇ ನಾಕು ತಂತಿಯ ನಾದ ತುಂಬಿ ನಿಂತಿದೆದೆಯಲ್ಲಿ ಸೃಷ್ಟಿ ಪೂರ್ವದ ಪ್ರಳಯ ಕಾಲ ಬುಡದಲ್ಲಿ ಹೆಪ್ಪುಗಟ್ಟಿದೆ ಕಪ್ಪು ಕಗ್ಗತ್ತಲಿನ ರಾತ್ರಿಯಲ್ಲಿ. ರವಿಯಿರದಾಕಾಶ, ಶಶಿ ಕಂತುತ್ತಲೇ ಇದ್ದಾನೆ ಪಕ್ಷಕ್ಕೊಮ್ಮೆ ಚಕೋರದಾರಾಮಕ್ಕಂತೂ ನಿಗದಿ ಬಿಡುವು ಮತ್ಸ್ಯಕನ್ಯೆಯೇ ನೀನು? ಪಾದವಿಲ್ಲದೇ ನಿಲ್ಲಲಾಗದು ಕಾಣು; ದಶಾವತಾರ ಮುಗಿವವರೆಗೂ ವಿಕಾಸದುಮ್ಮಳದ ಕನಸು. ವ್ಯಕ್ತಮಧ್ಯದಸ್ತಿತ್ವಕ್ಕೆ ಅದ್ವೈತ ಎಂದಿಗೂ ಹಿಂಗದ ಹಸಿವು.