ಒಟ್ಟು ಪುಟವೀಕ್ಷಣೆಗಳು

ಭಾನುವಾರ, ಫೆಬ್ರವರಿ 8, 2009

ದುರ್ಗದ ಕವಿಗೋಷ್ಠಿ ಕೇಳಿ ಬಂದ ಮೇಲೆ.....

ಸಾಹಿತ್ಯದ ಹೆಸರಲ್ಲಿ ನಡೆಯುತ್ತಿರುವ ಜನಜಾತ್ರೆ ಚಿತ್ರದುರ್ಗದಲ್ಲಿ ಸಂಪನ್ನವಾಗಿದೆ. ಗೋಷ್ಠಿಗಳಲ್ಲಿ ಮಂಡಿಸಿದ ಪ್ರಬಂಧಗಳ ಮೇಲಣ ಚರ್ಚೆಗಳಿಗಿಂತಲೂ ಈ ಸಮ್ಮೇಳನ ವಿವಾದಗಳಿಂದ ಆರಂಭವಾಗಿ ವಿವಾದಗಳಲ್ಲೇ ಅಂತ್ಯ ಕಂಡಿದೆ. ಇಷ್ಟೂ ದಿನ ಮುದ್ರಿತ ವಿಚಾರಗಳನ್ನು ಹಲ್ಲುಬಿದ್ದ ಬಾಯಲ್ಲಿ ಅಸ್ಪಷ್ಟವಾಗಿ ಓದುತ್ತಿದ್ದ ಅಧ್ಯಕ್ಷೀಯ ಭಾಷಣದ ರೀತಿ ಬದಲಾಗಿ ಮಠ ಮಾನ್ಯಗಳನ್ನು., ವ್ಯವಸ್ಥೆಯನ್ನೂ ಛೀಕರಿಸುವ ಮೂಲಕ ಮಿಂಚಬಹುದೆನ್ನುವ ಮತ್ತು ಚಪ್ಪಾಳೆ ಗಿಟ್ಟಿಸಬಹುದೆನ್ನುವ ಅಪ್ಪಟ ಸತ್ಯ ಮತ್ತೆ ವಿಜೃಂಭಿಸಿದೆ. ಉಧ್ಘಾಟನೆಯ ನಂತರ ಮಾತ್ಯಾವುದೇ ಗೋಷ್ಠಿಗಳಲ್ಲೂ ಕಾಣಿಸಿಕೊಳ್ಳದ ಸಮ್ಮೇಳನಾಧ್ಯಕ್ಷರು ಮುಕ್ತ ಸಂವಾದದಲ್ಲಿ ಪಾಲ್ಗೊಂಡು ಮತ್ತೆ ವಿಜೃಂಭಿಸಿದ್ದಾರೆ. ಅಪರೂಪಕ್ಕೆಂಬಂತೆ ಮಾರುದ್ದದ ನಿರ್ಣಯಗಳ ಪಟ್ಟಿ ಬದಲಾಗಿ ಮೂರೇ ಮೂರು ನಿರ್ಣಯಗಳು ಸಮ್ಮೇಳನದ ಅಂಗಳದಿಂದ ಬಿಂಬಿಸಲ್ಪಟ್ಟಿವೆ.

ಅವ್ಯವಸ್ಥೆಯ ಆಗರವೆಂದು ನಮ್ಮ ಮಾಧ್ಯಮಗಳು ಈ ಸಮ್ಮೇಳನಕ್ಕೆ ಹಣಿಪಟ್ಟಿ ಕಟ್ಟಿದ್ದರೂ, ಈ ಹಿಂದಿನ ಸಮ್ಮೇಳನಗಲ್ಲೂ ಒಂದೆರಡು ದಿನಗಳ ಮಟ್ಟಿಗಾದರೂ ಭಾಗವಹಿಸುತ್ತಲೇ ಇರುವ ನನಗೆ ಅದೇನೂ ವಿಶೇಷ ಎನ್ನಿಸಲೇ ಇಲ್ಲ. ಈ ಹಿಂದೆ ತುಮಕೂರಿನ ಸಮ್ಮೇಳನದಲ್ಲಿ ಊಟ ತಿಂಡಿಗಳ ಸರತಿಯಲ್ಲೇ ನಿಂತು ನಿಂತು ಸಮ್ಮೇಳನ ಅವಧಿ ಪೂರೈಸಿದ ಸ್ನೇಹಿತರ ಅನುಭವ ನೆನಪಾಯಿತು. ಶಿವಮೊಗ್ಗದಲ್ಲೂ ಧೂಳಿನ ಜೊತೆಗೇ ವಿವಾದಗಳೂ ಕಣ್ಣಿಗೆ ಬಿದ್ದುದು ಮರೆತು ಹೋಗಿಲ್ಲ. ಕನಕಪುರದಲ್ಲಿ ಸಮ್ಮೇಳನದ ಅಂಗಳದ ತುಂಬ ಭೈರಪ್ಪ ಪರ-ವಿರೋಧದ ಮಾತುಗಳು ಕೈಕೈ ಮಿಲಾಯಿಸುವ ಮಟ್ಟಕ್ಕೆ ಮುಟ್ಟಿದ್ದೂ ನೆನಪ ನೆಲೆಯಿಂದ ದೂರವಾಗಿಲ್ಲ. ಹಾಗೇ ತಾವು ಭಾಗವಹಿಸ ಬೇಕಿರುವ ಗೋಷ್ಠಿಯ ಸಮಯಕ್ಕೆ ಆಗಮಿಸಿ ನಂತರ ಅಂತರ್ಧಾನವಾಗುವ ನಮ್ಮ ಹಿರಿಯ ಬರಹಗಾರ, ಲೇಖಕ, ಚಿಂತಕರ ಆಂತರ್ಯವೂ ಬದಲಾಗಿಲ್ಲ. ಕರೆಯದೇ ಬರಲು ಅವರೇನು ಗತಿಗೆಟ್ಟಿದ್ದಾರಾ ಅಂದರೆ ಪಾಪ ಪ್ರತಿ ಸಮ್ಮೇಳನದಲ್ಲೂ ಒ ಒ ಡಿ ಯ ಆಸೆಯಿಂದ ಬಂದು ಬೀದಿಗಳಲ್ಲೇ ಮಲಗಿ, ಹೊತ್ತು ಹೊತ್ತಿಗೆ ಊಟ ತಿಂಡಿಗಳಿಲ್ಲದೇ ಪರಿತಪಿಸಿಯೂ ಮತ್ತೆ ಮುಂದಿನ ಸಮ್ಮೇಳನ ಯಾವ ಊರಲ್ಲಿ ನಡೆಯುತ್ತೆ, ಅಲ್ಲಾದರೂ ಈ ನಾಯಿ ಪಾಡು ತಪ್ಪಲಿ ಎಂದು ಅಂದುಕೊಳ್ಳುತ್ತಲೇ ಬಸ್ಸು ಹತ್ತುವ ಲಕ್ಷಾಂತರ ಸಾಹಿತ್ಯಾಸಕ್ತ ಬಂಧುಗಳ ಅಲವತ್ತುಗಳನ್ನು ದಾಖಲಿಸಿದವರಾದರೂ ಯಾರು? ಚಿತ್ರದುರ್ಗದಿಂದ ವಾಪಸು ಬಂದು ಎರಡು ದಿನವಾದರೂ ಭವ್ಯ ವೇದಿಕೆ ಮತ್ತು ಪುಸ್ತಕದಂಗಡಿಗಳ ಸಾಲು ಮತ್ತೆ ಮತ್ತೆ ನೆನಪ ಜೇನನ್ನು ಮನಸ್ಸಿಗೆ ಉಣ್ಣಿಸುತ್ತಲೇ ಇವೆ.

ಹಾಗೆ ನೋಡಿದರೆ ನಮ್ಮ ಮಾಧ್ಯಮಗಳು ಬಿಂಬಿಸದಷ್ಟೇನೂ ವ್ಯವಸ್ಥೆ ಕೆಟ್ಟಿರಲಿಲ್ಲ. ಎಲ್ಲ ಸಮ್ಮೇಳನಗಳಲ್ಲೂ ನಡೆಯುವ ಹಾಗೇ ಈ ಸಮ್ಮೇಳನದಲ್ಲೂ ಯಾವ ಗೋಷ್ಠಿಗಳೂ ಸರಿಯಾದ ಸಮಯಕ್ಕೆ ಪ್ರಾರಂಭವಾಗಲಿಲ್ಲ. ಹಾಗಾಗಿ ಹೊತ್ತಿಗೆ ಸರಿಯಾಗಿ ಮುಗಿಯಲಿಲ್ಲ. ಅದರ ಕಾರಣದಿಂದ ಮುಂದಿನ ಗೋಷ್ಠಿಗಳೂ ಮುಂದು ಮುಂದಕ್ಕೆ ಹೋದವು, ಅಷ್ಟೆ! ಎಲ್ಲ ಕಡೆ ನಡೆಯುವ ಹಾಗೇ ಇಲ್ಲೂ ಸಾಹಿತ್ಯಕ್ಕಿಂತಲೂ ಸಾಹಿತ್ಯೇತರ ಸಂಗತಿಗಳಾದ ಕೃಷಿ, ಕೈಗಾರಿಕೆ, ರಾಜಕೀಯ, ಇತ್ಯಾದಿ ವಿಷಯಗಳಲ್ಲಿ ಚರ್ಚೆ-ಗೋಷ್ಠಿಗಳು ಎಡವುತ್ತೆಡುವತ್ತಲೇ ನಡೆದುವು. ಎಲ್ಲೆಲ್ಲಿ ರಾಜಕೀಯದವರನ್ನೂ, ಖಾಕಿಕಾವಿಗಳನ್ನೂ ಮನಬಂದಂತೆ ಹಳಿಯಲಾಯಿತೋ ಅಲ್ಲೆಲ್ಲ ಚಪ್ಪಾಳೆಗಳು ಮುಗಿಲು ಮುಟ್ಟಿದವು. ಆದರೆ ಊಟದ ವ್ಯವಸ್ಥೆಯಲ್ಲಿ, ಅಸ್ತವ್ಯಸ್ಥತೆಯನ್ನು ತಡೆಯುವುದರಲ್ಲಿ, ಇದೇ ಖಾಕಿ ಕಾವಿಗಳು ಹೆಣಗುತ್ತಿದ್ದುದನ್ನು ಅಪ್ಪಿತಪ್ಪಿ ಬಾಯಿ ಮಾತಿಗಾದರೂ ಹೇಳಲೇ ಇಲ್ಲ. ಇನ್ನು ಗೋಷ್ಠಿಗಳೋ ಅವುಗಳ ಸ್ವರೂಪಗಳೋ ಕಳೆದ ಎಪ್ಪತ್ತನಾಲ್ಕು ಸಮ್ಮೇಳನಗಳಲ್ಲಿ ನಡೆದುದರ ಪುನರಾವರ್ತನೆಯೇ! ಗೋಷ್ಠಿಗಳಲ್ಲಿ ಭಾಗವಹಿಸದವರಲ್ಲಿ ಬಹುತೇಕರು ಆಯಾ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದವರಿದ್ದರೂ ಆಯ್ಕೆಯಲ್ಲಿ ಅನಿವಾರ್ಯ ಒತ್ತಡಗಳು ಇದ್ದೇ ಇರುತ್ತವೆ ಎನುವುದಕ್ಕೆ ಪುರಾವೆಯಾದುವು. ಸ್ವತಃ ಸಮ್ಮೇಳನಾಧ್ಯಕ್ಷರೇ ಅದರಿಂದ ಹೊರಗುಳಿದು ಹೊಸ ಭಾಷ್ಯ ಬರೆದ ವಿಶೇಷಕ್ಕೂ ಈ ಸಮ್ಮೇಳನವೇ ಮುನ್ನುಡಿ ಬರೆದುದೂ ಸ್ವಾರಸ್ಯ ದ ಸಂಗತಿ.

ಹಲವರಂತೆ ನಾನೂ ಸಮ್ಮೇಳನಗಳಲ್ಲಿ ಭಾಗವಹಿಸುವುದು ರಾಜ್ಯಾದ್ಯಂತ ಇರುವ ನನ್ನ ಅನೇಕ ಸ್ನೇಹಿತರೂ ಹಿರಿಯ ಬರಹಗಾರರೂ ಅಲ್ಲಿನ ಪುಸ್ತಕದಂಗಡಿಗಳಲ್ಲಿ ಸಿಕ್ಕೇ ಸಿಕ್ಕುತ್ತಾರೆನ್ನುವ ವಿಶ್ವಾಸದಿಂದ. ಮತ್ತು ಹಾಗೆ ಸಿಕ್ಕವರೊಡನೆ ನನ್ನ ಅನ್ನಿಸಿಕೆಗಳನ್ನೂ ಹಾಗೇ ಅನುಮಾನಗಳನ್ನೂ ಹಂಚಿಕೊಳ್ಳುವ ಮುಕ್ತ ಅವಕಾಶದ ಆಸೆಯಿಂದ. ಜೊತೆಗೇ ನನ್ನ ಸಹಬರಹಗಾರರ ತವಕ ತಲ್ಲಣಗಳನ್ನು ಮತ್ತವರ ಕಷ್ಠ ಸುಖಗಳನ್ನು ಮುಖತಾ ಹಂಚಿಕೊಳ್ಳಬಹುದೆನ್ನುವ ದುರಾಸೆಯಿಂದ!

ಆದರೆ ಈ ಸಮ್ಮೇಳನದಲ್ಲಿ ಹಿರಿಯ ಬರಹಗಾರರಿರಲಿ ಚಿತ್ರದುರ್ಗ ಸೀಮೆಯ ಅನೇಕ ಯುವ ಬರಹಗಾರರಾರೂ ಸಿಕ್ಕಲಿಲ್ಲ. ಸ್ವತಃ ಆ ಜಿಲ್ಲೆಯವರಾಗಿದ್ದೂ ಈಗಾಗಲೇ ತಮ್ಮ ಸಂಕಲನಗಳಿಂದ ಸಂಚಲನಗೊಳಿಸಿದ ಎಚ್.ಆರ್.ರಮೇಶ, ಆನಂದ ಋಗ್ವೇದಿ, ತಾರಿಣಿ, ಪಕ್ಕದ ಜಿಲ್ಲೆಯ ಅರುಣ ಜೋಳದಕೂಡ್ಲಿಗಿ, ಪೀರ ಭಾಷಾ, ಇವರಾರೂ ಕವಿಗೋಷ್ಠಿಯಲ್ಲಿ ಅಹ್ವಾನಿತರಾಗಿರಲೇ ಇಲ್ಲ. ಅಹ್ವಾನಿತ ಕವಿಗಳ ಪಟ್ಟಿ ಸಾಕಷ್ಟು ದೊಡ್ಡದಿದ್ದರೂ ಅಷ್ಟಿಷ್ಟು ಓದಿಕೊಂಡಿರುವ ಮತ್ತು ವರ್ತಮಾನದಲ್ಲಿ ಸಾಹಿತ್ಯ ಕೃಷಿ ಮಾಡುತ್ತಿರುವವರ ಹೆಸರುಗಳನ್ನು ಬಲ್ಲೆನೆಂಬ ನನ್ನ ವಿಶ್ವಾಸವನ್ನು ಆ ಪಟ್ಟಿ ಅಣಕಿಸಿತು. ನಾಲ್ಕೈದು ಹೆಸರುಗಳನ್ನು ಪತ್ರಿಕೆಗಳಲ್ಲಿ ಪ್ರಕಟವಾಗುವ ಕವಿತೆಗಳ ಮೂಲಕ ಗುರುತಿಸಿ ಹೊರತು ಪಡಿಸ ಬಹುದೇ ವಿನಾ ಉಳಿದವರೂ ಕವಿಗಳೆಂದು ಗೊತ್ತ್ತಾಗಿದ್ದೇ ನಿರೂಪಕರು ಅವರ ಕೃತಿಗಳನ್ನು ಹೆಸರಿಸಿದ ನಂತರ.

ಮೊದಲ ಕವಿಗೋಷ್ಠಿಯ ಆಶಯ ಭಾಷಣಮಾಡಿದ ಎಲ್.ಹನುಮಂತಯ್ಯನವರು ತಾವು ನೆಚ್ಚಿದ ಬಂಡಾಯದ ನೆಲೆಯನ್ನು ಮತ್ತೆ ಪ್ರಸ್ತಾಪಿಸುತ್ತಲೇ ಪದ್ಯವೊಂದನ್ನು ಓದಿದ ರೀತಿ ಪುಳಕಗೊಳಿಸಿತು. ಹನುಮಂತಯ್ಯ ಈಗಾಗಲೇ ಇಂಥ ಹತ್ತು ಹಲವು ಗೋಷ್ಠಿಗಳಲ್ಲಿ ಭಾಗವಹಿಸಿ ಇದೇ ಬಗೆಯ ಹತ್ತಿಪ್ಪತ್ತು ಭಾಷಣಗಳನ್ನು ನಮಗೆಲ್ಲ ಉಣಬಡಿಸಿದವರು. ಹಾಗೇ ಅಧ್ಯಕ್ಷತೆ ವಹಿಸಿದ್ದ ಸುಮತೀಂದ್ರ ನಾಡಿಗರಂತೂ ಅವರ ಪದ್ಯಗಳಿಗಿಂತಲೂ ಮಾತಿಗೆ ನಿಂತರೆ ಮುಗಿಸದ ಖ್ಯಾತಿಯವರು. ತಮ್ಮ ಹಳೆಯ ಎರಡು ಪದ್ಯಗಳನ್ನು ಅವರು ಆಕರ್ಷಕವಾಗಿ ಮಂಡಿಸಿದರಾದರೂ ಅವರು ಅಧ್ಯಕ್ಷೀಯ ಭಾಷಣವನ್ನು ಮಾಡಲಿಲ್ಲವೆನ್ನುವುದು ನನ್ನ ತಕರಾರು. ಕವಿಗೋಷ್ಠಿಯ ಅಧ್ಯಕ್ಷರು ಆ ಗೋಷ್ಠಿಯಲ್ಲಿ ಮಂಡಿಸಿದ ಕವಿತೆಗಳನ್ನು ಅವುಗಳ ವಿಷೇಷತೆಯನ್ನೂ ಹಾಗೇ ಕಾವ್ಯ ಹೊರಳಿದ ಹೊಸದಿಕ್ಕನ್ನೂ ಗುರ್ತಿಸಿ ಹೇಳಬೇಕಾದ ಜವಾಬ್ದಾರಿ ಇರುವಂಥವರು. ಅದರೆ ನಮ್ಮ ಮಾಧ್ಯಮಗಳು ಕಾಯುತ್ತಿರುತ್ತವೆ ಮತ್ತು ಗೋಷ್ಠಿಯ ಕಡೆಯವರೆಗೂ ಕೂರುವ ತಾಳ್ಮೆ ಕೆಲವರಿಗಿರುವುದಿಲ್ಲವೆಂಬ ನೆಪಒಡ್ಡಿ ಆಹ್ವಾನಿತ ಕವಿಗಳು ತಮ್ಮ ಪದ್ಯಗಳನ್ನು ಪ್ರಸ್ತುತಿಗೊಳಿಸುವ ಮೊದಲೇ ಅಧ್ಯಕ್ಷೀಯ ಮಾತುಗಳನ್ನು ಮುಗಿಸಿಬಿಡುವುದು ವರ್ತಮಾನದ ಕಾವ್ಯಕೃಷಿಕರಿಗೆ ತೋರಿಸುತ್ತಿರುವ ಅನಾದರವೆಂದೇ ನಾನು ಭಾವಿಸಿದ್ದೇನೆ. ಹಾಗೆಯೇ ಕಾವ್ಯಾಸಕ್ತರಾರಿಗೂ ಗೊತ್ತಿರದ ಮತ್ತು ಕೇವಲ ಪ್ರಾತಿನಿಧ್ಯದ ದೃಷ್ಟಿಯಿಂದಲೇ ತಯಾರಿಸುವ ಈ ಕವಿಪಟ್ಟಿಗೂ ನನ್ನ ಪರಮ ವಿರೋಧವನ್ನು ದಾಖಲಿಸುತ್ತಲೇ ಬಂದಿದ್ದೇನೆ. ಈ ಸಮ್ಮೇಳನದಲ್ಲೂ ನಿಜವಾದ ಕವಿತೆಗಳನ್ನು ಓದಿದವರು ಲಕ್ಷೀಪತಿ ಕೋಲಾರ, ಕಂಜರ್ಪಣೆ, ಬ.ಹ.ರಮಾಕುಮಾರಿ, ಬಿಳಿಗೆರೆ ಮತ್ತು ಹೆಸರು ನೆನಪಲ್ಲಿ ಉಳಿಯದ ಇನ್ನಿಬ್ಬರು ಮಾತ್ರ. ಗೆಳೆಯ ನಿಸಾರ್ ತನ್ನ ಕವಿತೆಯನ್ನು ಆಕರ್ಷಕವಾಗಿ ಮಂಡಿಸಿದನಾದರೂ ಆ ಬಗೆಯ ಕವಿತೆಗಳು ಕೇವಲ ಹೇಳಿಕೆಗಳಾಗುತ್ತವೆ ಮತ್ತು ಯಾರೂ ಬರೆಯಬಹುದಾದ ಸಾಲುಗಳಾಗುತ್ತವೆ ಎನ್ನುವುದನ್ನು ಮರೆಯಬಾರದು. ಕೆಲವು ಕವಿಗೋಷ್ಠಿಗಳಲ್ಲಿ ಖಾಲಿ ಕುರ್ಚಿಗಳಿಗೆ ಪದ್ಯ ಓದುವ ಅನಿವಾರ್ಯತೆಗಾಗಿ ಸಂಕಟ ಪಟ್ಟಿರುವ ನಾನು ದುರ್ಗದ ಕವಿಗೋಷ್ಠಿಯಲ್ಲಿ ಇಡೀ ಸಭಾಂಗಣ ಕಿಕ್ಕಿರಿದು ತುಂಬಿದ್ದ ಅಪ್ರತಿಮ ಕ್ಷಣಗಳಿಗೆ ಸಂತಸ ಪಟ್ಟಿದ್ದೇನೆ. ಹಾಗೆಯೇ ತುಂಬಿದ ಸಭೆಗೆ ಕಿಂಚಿತ್ತೂ ಸಾಥ್ ಕೊಡದ ಕವಿಗಣದ ಉಢಾಫೆಗೆ ಮರುಕ ಪಟ್ಟಿದ್ದೇನೆ.

ಕವಿಗೋಷ್ಠಿ ನಡೆಯುತ್ತಿರುವಾಗಲೇ ಅದಕ್ಕೆ ಜಯಂತ ಕಾಯ್ಕಿಣಿಯ ಸಾರಥ್ಯ ಸಿಕ್ಕು, ಸಂಧ್ಯಾದೇವಿ ಉದ್ಘಾಟಿಸಿ ಕವಿಪಟ್ಟಿಯಲ್ಲಿ ಎಸ್.ಮಂಜುನಾಥ್, ಪ್ರತಿಭಾ ಒಳಗೊಂಡಂತೆ ನಮ್ಮ ತಲೆಮಾರಿನ ಹತ್ತು ಹಲವು ಹೆಸರುಗಳನ್ನು ಕಲ್ಪಿಸಿಕೊಳ್ಳುತ್ತ ಹೋದೆ. ಆ ಕಲ್ಪನೆಯೇ ಒಂದು ಕವಿತೆಯಾಗಿ ಸಂತಸ ಮೈತುಂಬಿಕೊಳ್ಳುತ್ತಿರುವಾಗಲೇ ದುರ್ಗದ ರೈಲ್ವೇ ನಿಲ್ದಾಣವನ್ನು ಹೊತ್ತಿಗೆ ಸರಿಯಾಗಿ ಸೇರದಿದ್ದರೆ ಓಓಡಿ ಸೌಲಭ್ಯವಿಲ್ಲದ ನಾನು ಮಾರನೇ ದಿನಕ್ಕೂ ರಜೆ ಕೊಡಬೇಕಾಗುತ್ತದೆನ್ನುವ ನಿಜವಾಸ್ತವ ನೆನಪಾಗಿ ಸಮ್ಮೇಳನದ ಅಂಗಳದಿಂದ ನಿರ್ಗಮಿಸಿದೆ.

ಊರು ತಲುಪವವರೆಗೂ ಕಂಜರ್ಪಣೆಯವರೊಂದಿಗೆ ಕೆ.ಪಿ.ಸುರೇಶರ ಹೊಸ ಸಂಕಲನದ ಪದ್ಯಗಳನ್ನು , ವಸುದೇಂಧ್ರ ತಮ್ಮ ಅಂಗಡಿಯಲ್ಲಿ ಪುಸ್ತಕ ಮಾರುತ್ತಿದ್ದ ರೀತಿಯನ್ನು ಹಾಗೇ ಸಂಚಯದ ಸ್ಟಾಲಿನಲ್ಲಿ ಕನಸು ಕಂಡಿದ್ದ ಕವಿಗೋಷ್ಠಿ ಖದರು ಕಳೆದುಕೊಂಡುದನ್ನೂ ಮೆಲ್ಲುತ್ತ ಪ್ರಯಾಣಿಸಿದೆ. ಈಗ ನನ್ನೆದುರು ನಮ್ಮ ಪತ್ರಿಕೆಗಳು ಪ್ರಕಟಿಸಿದ ನಾಲ್ಕೂ ದಿನದ ಸಮ್ಮೇಳನದ ವಿವರಗಳನ್ನು ಹರಡಿಕೊಂಡಿದ್ದೇನೆ. ಉಡುಪಿಯಲ್ಲಿ ನಡೆದುದೇ ತುಮಕೂರಲ್ಲಿ ಘಟಿಸಿದುದೇ ಅಥವಾ ಕನಕಪುರದಲ್ಲಿ ಅಪ್ಪಳಿಸಿದ ಅಲೆಗಳೇ ಇಲ್ಲಿಯೂ ಮುಂದುವರೆದಿದೆ, ವರದಿಗಾರರ ಹೆಸರುಗಳೂ ವರದಿಗಾರಿಕೆಯ ರೀತಿಯೂ ಹೆಚ್ಚೇನೂ ಬದಲಾಗಿಲ್ಲ. ಇನ್ನು ಸಾಹಿತ್ಯ ಮಾತ್ರ ಸಮಾಜವನ್ನು ಬದಲಿಸಿಬಿಡುತ್ತದೆಂಬ ಹೇಳಿಕೆ ಎಷ್ಟು ಸರಿ ಎಷ್ಟು ತಪ್ಪು ಎಂಬ ಗೊಂದಲದಲ್ಲಿ ಉಳಿದಿದ್ದೇನೆ.

1 ಕಾಮೆಂಟ್‌:

Bedre Manjunath ಹೇಳಿದರು...

ಮಾನ್ಯರೆ, ದುರ್ಗದ ಕವಿಗೋಷ್ಠಿಯ ಲೇಖನ ಚೆನ್ನಾಗಿದೆ. ನನ್ನದೂ ಒಂದು ಗೊಣಗಿದೆ. ಅದಕ್ಕೆ ಕವಿತೆ ರೂಪ ಕೊಟ್ಟು ಇಲ್ಲಿಟ್ಟಿದ್ದೇನೆ. ಅನ್ಯಥಾ ತಿಳಿಯದಿರಿ.
http://bedrebaraha.blogspot.com/

ಮರುಹುಟ್ಟು

ಕಾವ್ಯ ಸತ್ತುಹೋಗಿದೆ! - ಘೋಷಿಸಿದರು
ನಾಡಿ ಹಿಡಿದ ನಾಡಿಗರು, ಕಾವ್ಯದ ಡಾಕ್ಟರರು
ಅಮೃತೋತ್ಸವ ವೇದಿಕೆಯಲ್ಲಿ
ಅಯ್ಯೋ! ಪ್ರೇತವಾದೆವೆ ನಾವೆಲ್ಲಾ
ಹಲುಬಿದವನು ವೇದಾತೀರದ ಕವಿ.
ಬುದ್ಧಿವಂತರ ಮರಡಿಯ ಕಣಿವೆಯಲ್ಲಿಮಲಗಿಸಿ
ಎತ್ತರೆತ್ತರದ ಸ್ಮಾರಕ ಕಟ್ಟೋಣ
ಆರಾಧನೆಯಲ್ಲಿ ಕಾವ್ಯಾಂಜಲಿ ಅರ್ಪಿಸೋಣ
ತೀರ್ಥಕ್ಕೆ ವ್ಯವಸ್ಥೆಯಾಗಿದೆ
ಪಾಸಾಯಿತು ಠರಾವು
ವೇದಿಕೆ ಏರಿತು ಜಾತ್ಯತೀತ ಶವಸಂಪುಟ
ಕಾವ್ಯಪುಷ್ಪಗಳಿಂದ ಸಿಂಗರಿತ ಕಳೇವರ
ಜಡಿಯಲು ಬಂಗಾರ, ಬೆಳ್ಳಿ, ಪ್ಲಾಟಿನಂ, ಹಿತ್ತಾಳೆ
ಇಂಗಳದಾಳಿನ ತಾಮ್ರದ ಉದ್ದುದ್ದ ಮೊಳೆಗಳು
ಕವಿಗೊಂದು ಮೊಳೆ, ಸುದೀರ್ಘ ಜಡಿತ
ಹುಗಿದುಬಿಡಿ ಬೇಗ, ತಡವಾದೀತು ತೀರ್ಥಕ್ಕೆ
ಕವಿ, ಕಿವಿ, ಕಾವ್ಯೋದ್ಧಾರಕರ ಅವಸರ
ಅಯ್ಯಯ್ಯೋ! ಸ್ವಲ್ಪ ತಾಳಿರಪ್ಪ. ಬರಹೇಳಿದ್ದೇವೆ
ದೂರದೂರದ ಬಂಧು ಬಾಂಧವರೆಲ್ಲರಿಗೆ
ಕವಿಗಳ ಜೊತೆ ಕಾವಿಗಳೂ ಭೋರಿಟ್ಟರು
ದಾರದ ಪೌರೋಹಿತ್ಯ, ಭಾರದ ಪಾರುಪತ್ಯ!
ಯಬ್ಬೇ! ನನ್ನವ್ವಾ! ಇಷ್ಟು ಬೇಗ ಹೊರಟೆಯಲ್ಲೇ
ಗೋಳಾಡಿದ ಹೂಗೊಂಚಲು ತಂದ ತಾಳ್ಯದಯ್ಯ
ಮೊಳೆ ಎಬ್ಬಲು ಸಲಾಕೆ ತಂದ ಮುತ್ತೆತ್ತಿರಾಯ!
ಜಂಗುಳಿಯ ಸರಿಸಿ, ಒಂದೊಂದೇ ಮೊಳೆ ಎಬ್ಬಿಸಿ
ಪ್ರೀತಿ ಅಮೃತ ಸವರಿ, ತುಟಿ ಹಚ್ಚಿ, ಉಸಿರು ತುಂಬಿ
ಎದೆ ಭಾರವನಿಳಿಸಿ, ಪುಪ್ಪುಸಗಳ ಒತ್ತಿ, ಅಪ್ಪಿ ಹಿಡಿದೆತ್ತಿ
ಮರು ಜೀವ ನೀಡಿ ಪವಾಡವನ್ನೇ ಸೃಷ್ಟಿಸಿದ ಶಾಂತೇಶ
ಕವಿಗೋಷ್ಠಿಯ ಕೂರಂಬು ಸಾಲುಗಳ, ಖಡ್ಗದಾರ್ಭಟಕೆ
ಬವಳಿಬಂದು ಬಿದ್ದಿದ್ದ ಕಾವ್ಯ ಕನ್ನಿಕೆ ಧಿಗ್ಗನೆದ್ದವಳೇ
ಧನ್ಯ ಕವಿಯೇ, ಧನ್ಯ. ಹುಗಿದು ಬಿಡುತ್ತಿದ್ದರುನನ್ನನಿವರು,
ನೀ ಬರುವುದು ಸ್ವಲ್ಪ ತಡವಾಗಿದ್ದರು
ಹೂಗೊಂಚಲು ಬಿಡಿಸಿ, ಮುಡಿಗೇರಿಸಿ
ಕಾವ್ಯಾಂಬರದ ರೇಶಿಮೆ ನಡೆಮುಡಿಯ ಮೇಲೆ
ಹೂ ಹೆಜ್ಜೆ ಹಾಕಿ, ಬೆಳದಿಂಗಳ ನಗೆ ಚೆಲ್ಲಿ
ಅಂತರ್ಧಾನಳಾದಳು ಕವಿಯ ಎದೆಯಲ್ಲಿ
ಕಾವ್ಯ ಕನ್ನಿಕೆ ಸತ್ತಿಲ್ಲ, ಸಾಯುವುದೂ ಇಲ್ಲ
ಅಮೃತದ ಸಾಲುಗಳಿರುವವರೆಗೂ ಅಮರ ಜೀವಿ
ಅಮೃತೋಪಮ ಕಾವ್ಯಧಾರೆ ಸುರಿಯುತಿದೆ, ಎಲ್ಲೆಲ್ಲೂ
ಬನ್ನಿರಿ! ಹಿಡಿಯಿರಿ! ಸವಿಯಿರಿ! ಹಂಚಿರಿ!
(ಚಿತ್ರದುರ್ಗದಲ್ಲಿ ನಡೆದ ಅಮೃತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಸ್ಪೂರ್ತಿಯಿಂದ.)
ಬೇದ್ರೆ ಮಂಜುನಾಥ