“ಚಂದಿರನೇತಕೆ ಓಡುವನಮ್ಮ ಮೋಡಕೆ ಹೆದರಿಹನೆ?” ಶಿಶು ಗೀತೆಯ ಸಾಲುಗಳು ನೆನಪಾದಾಗಲೆಲ್ಲ ನಮ್ಮೊಂದಿಗೆ ಓಡುತ್ತೋಡುತ್ತಲೇ ತಾನು ಮಾತ್ರ ಇದ್ದಂತೆಯೇ ಇರುವ ಚಂದ್ರನ ಬಗ್ಗೆ ಮತ್ಸರ ಹುಟ್ಟುತ್ತದೆ. ಅಳುವ ಮಕ್ಕಳಿಗೆಲ್ಲ ಚಂದಮಾಮನಾಗಿ ಬಂದು ಸಮಾಧಾನ ಮಾಡುವ ಅವನು, ಹದಿಹರಯದವರಲ್ಲಿ ಕುತೂಹಲ ಹುಟ್ಟಿಸುತ್ತ, ಪ್ರೇಮಿಗಳಿಗೆ ಸಂತಸದ ಸಂಭ್ರಮವನ್ನೇ ಹರಿಸುವ ಚಂದ್ರಮ ಮುಪ್ಪಡರಿದವರ ಜೊತೆ ಜೊತೆಗೇ ಹೆಜ್ಜೆ ಹಾಕುತ್ತ ಅವರ ಒಂಟಿತನ ನೀಗಿಸುತ್ತಾನೆ.
ಚಂದ್ರಿಕೆಯ ಬೆಳಕನ್ನೇ ಉಂಡು ಸುಖಿಸುವ ಚಕೋರ ಪಕ್ಷಿಯ ವಿಚಾರವೂ ಎಲ್ಲರಿಗೆ ತಿಳಿದದ್ದೇ ಆಗಿದೆ. ಗಣಪನಿಂದ ಶಪಿತನಾದ ಚಂದ್ರನ ಕತೆಯೂ ನಮಗೆ ಗೊತ್ತು. ಇನ್ನು ಈ ಚಂದ್ರನ ತಿಂಗಳ ಬೆಳಕಿನ ಬಗ್ಗೆ ಗೊತ್ತಿರದವರು ಯಾರಿದ್ದಾರೆ?
ಹಾಲು ಸುರಿದಂತೆ ಬೆಳದಿಂಗಳೆಂದು ಒಬ್ಬರು ಹೇಳಿದರೆ ಹಿಟ್ಟು ಚೆಲ್ಲಿದಂತೆ ಬೆಳದಿಂಗಳೆಂದು ಮತ್ತೊಬ್ಬರ ವಾದ. ಚೆಲ್ಲಲು ಹಾಲು ಸಿಕ್ಕಬಹುದಾದರೂ ಹಾಗೆ ಚೆಲ್ಲಿದ ಹಾಲು ನೆಲದಲ್ಲಿಂಗದೇ ಉಳಿಯಲು ಸಾಧ್ಯವೆ? ಹಿಟ್ಟನ್ನು ಚೆಲ್ಲಿದ್ದಾರೆನ್ನುವವರಿಗೂ ಅಷ್ಟೊಂದು ಹಿಟ್ಟು ಅದೆಲ್ಲಿ ಸಿಕ್ಕುತ್ತದೋ ಗೊತ್ತಿಲ್ಲ.
ಒಟ್ಟಿನಲ್ಲಿ ಉಪಮೆ ಇಲ್ಲದೆ ಗುಣ ವರ್ಣನೆ ಸಾಧ್ಯವಿಲ್ಲದ ಸಂಗತಿ. ಇವನ್ನೆಲ್ಲ ಕವಿತ್ವವೆಂದು ಕರೆದು, ವಿಜ್ಞಾನದ ಮೂಲಕ ಚಂದ್ರನನ್ನು ಕಾಣಹೋದರೂ ಸುತ್ತಿಕೊಳ್ಳುವುದು ಮತ್ತದೇ ಬೆಳದಿಂಗಳು. ಗುರುತ್ವಾಕರ್ಷಣೆಯ ತತ್ವದ ಮೇಲೆ ನಿಂತಿರುವ ನಮ್ಮ ಸೌರ ಮಂಡಲದ ಗ್ರಹಗಳಿಗೆ ಅವುಗಳ ತಾಕತ್ತಿಗೆ ತಕ್ಕಂತೆ ಚಂದ್ರರು ಅವರವರನ್ನು ಸುತ್ತುತ್ತಿದ್ದಾರೆ. ನಮ್ಮ ಭೂಮಿಗೆ ಪಾಪ ಈ ಚಂದ್ರನೊಬ್ಬನೇ ದಿಕ್ಕು. ಆಕಾಶದ ತುಂಬ ಹರಡಿರುವ ಅದೆಷ್ಟೋ ಅಸಂಖ್ಯ ನಕ್ಷತ್ರಗಳು, ತಿಂಗಳ ಬೆಳಕಲ್ಲಿ ಚಂದ್ರನ ಮನೆಯ ಮಿಣುಕು ದೀಪಗಳಂತೆ ಕಾಣುವುದೂ ಸತ್ಯದ ಮಾತೇ!
ಭೂಮಿಯ ಪ್ರದಕ್ಷಿಣೆಯಲ್ಲೇ ಆಯಸ್ಸು ಕಳೆಯುತ್ತಿರುವ ಚಂದ್ರ, ಸೂರ್ಯನ ಬೆಳಕನ್ನೇ ಎರವಲು ಪಡೆದ ಭೂಪ. ನಾವಾಗಲೇ ಅವನ ಮೇಲೂ ಹತ್ತಿಳಿದು ಬಂದು ಕವಿಕಲ್ಪನೆಗಳನೆಲ್ಲ ಸುಳ್ಳು ಮಾಡಿದ್ದೇವೆ. ಆದರೂ ತಿಂಗಳು, ತಿಂಗಳ ಚಂದ್ರನ ವೈಭವದ ಮುಂದೆ ಯಾವ ರಾಜ ಮಹಾರಾಜರ ದರ್ಬಾರು ಕಳೆಗಟ್ಟೀತು?
ಇನ್ನು ಚಂದ್ರನಿಗೂ, ಅಮೃತಕ್ಕೂ ಅವಿನಾವ ಸಂಬಂಧ. ಅವನೊಳಗಿರುವ ಹದಿನಾರು ಕಲೆಗಳಿಂದೊಡಗೂಡಿದ ಅಮೃತವನ್ನು ದೇವ ದೇವತೆಗಳು ಬೇಡಿ ಪಡೆಯುತ್ತಾರಂತೆ. ಹುಣ್ಣಿಮೆಯಂದು ನಳ ನಳಿಸುವ ಚಂದ್ರ ದಾನಾರ್ಥಿಗಳಿಗೆ ಸ್ವಲ್ಪ ಸ್ವಲ್ಪವೇ ಅಮೃತವನ್ನು ಹಂಚುತ್ತ ಕಡೆಗೆ ತಾನೇ ಇಲ್ಲವಾಗುತ್ತಾನೆ. ಅಮಾವಾಸ್ಯೆಯ ಕಾಳಕತ್ತಲೆಯಲ್ಲಿ ಹೊಸ ಜ್ಞಾನ ಸಂಪಾದಿಸಿ, ದಿನದಿಂದ ದಿನಕ್ಕೆ ಮತ್ತೆ ಅಮೃತ ಸಂಚಯನಕ್ಕೆ ತೊಡಗುವ ಚಂದ್ರ ನಮ್ಮ ಬದುಕಿಗೊಂದು ಅರಿವು ಹುಟ್ಟಿಸುತ್ತಾನೆ. ಕಷ್ಟ ಪಟ್ಟು ಪಡೆಯಬೇಕಿರುವ ಜ್ಞ್ನಾನ ಸಂಚಯನ ಆಸಕ್ತರೆಲ್ಲರಿಗೆ ಹಂಚಬೇಕಿರುವ ಔದಾರ್ಯ ಕಲಿಸುತ್ತಿದ್ದಾನೆ. ಅಂದರೆ ಸಂಪೂರ್ಣ ವಿದ್ಯೆ ನಮಗೆ ದಕ್ಕಿತೆಂದ ಕೂಡಲೇ ಅದನ್ನು ಬೇಡುವವರಿಗೆ ಹಂಚುತ್ತ ಪುನಃ ನಾವು ಖಾಲಿಯಾಗಬೇಕು. ಒಳಗೇ ತುಂಬಿಕೊಂಡಿದ್ದ ಅಹಂಕಾರ, ಮತ್ಸರ, ಕೊಬ್ಬುಗಳೆಲ್ಲ ಕರಗಿ ಉರಿವ ಕರ್ಪೂರದ ರೀತಿ ನಮಗೆ ಸಿದ್ಧಿಸಬೇಕು. ಹಾಗೆ ಮೂಡಿದ ಸ್ಥಿತಿಯಿಂದ ಮತ್ತೆ ಜ್ಞಾನ ಸಂಚಯನದ ಹಾದಿ ತುಳಿಯಬೇಕು.
ಇಂದಿನ ದಿನಗಳಲ್ಲಿ ಹೊಳೆಯುವ ನಿಯಾನ್ ಬೆಳಕಿನಲ್ಲಿ, ಝಗಮಗಿಸುವ ಸೋಡಿಯಂ ದೀಪಗಳಡಿಯಲ್ಲಿ ಚಂದ್ರನ ಚಂದ್ರಿಕೆಯ ತಂಪಿರಲಿ, ಅವನ ಇರುವಿಕೆಯೇ ಮರೆತು ಹೋಗುತ್ತಿದೆ. ಅಮಾವಾಸ್ಯೆ, ಹುಣ್ಣಿಮೆಗಳ ವ್ಯತ್ಯಾಸ ತಿಳಿಯದ ಹಾಗೆ ಬೀದಿ ದೀಪಗಳು ಬೆಳಗುತ್ತಲೇ ಇವೆ. ಹೊಳೆ ಹೊಳೆಯುವ ತಾರೆ, ಸುಡು ಸುಡುವ ಸೂರ್ಯನ ಪ್ರಖರತೆ, ಅಮಾವಾಸ್ಯೆಯ ದಟ್ಟ ತಿಮಿರ, ತಂಪೆರಚುವ ಹುಣ್ಣಿಮೆಯ ಹಾಲ್ಬೆಳಕು ಬರಿಯ ಪುಸ್ತಕಗಳಲ್ಲಿ, ಕವಿತೆಗಳ ಸಾಲುಗಳಲ್ಲಷ್ಟೇ ಕಾಣಬೇಕಾದ ಅನಿವಾರ್ಯತೆಯೊದಗಿದೆ. ಇಂಥ ಭವದ ಬದುಕಿನ ನಡುವೆಯೂ ನೈಸರ್ಗಿಕ ಬೆಳಕು-ಕತ್ತಲೆಗಳ ಬಗ್ಗೆ, ಕವಿಕಲ್ಪನೆಯ ಕನಸು- ನಿಜ ವಾಸ್ತವದ ಬಗ್ಗೆ, ಸುಡು ಬಿಸಿಲು- ಜೀವನ ಕ್ರಮದ ಬಗ್ಗೆ, ಕೊಂಚ ಯೋಚಿಸಿದರೆ ಸಾಕು, ನಮ್ಮೊಳಗೂ ಒಬ್ಬ ಚಂದ್ರ ಹುಟ್ಟುತ್ತಾನೆ. ಹೀಗೆ ಹುಟ್ಟುವ ಚಂದ್ರ ತರುವ ಬೆಳ್ಳಂ ಬೆಳಕಿನ ಹುಣ್ಣಿಮೆಯನ್ನು ಅನ್ಯರಿಗೂ ಸ್ಪರ್ಶಿಸುತ್ತ, ಬದುಕುವ ಕನಸೇ ಅಧ್ಭುತ.
ಈ ದಿಕ್ಕಿನಲ್ಲಿ ಆಲೋಚಿಸಲು, ಅಂದರೆ ನಮ್ಮೊಳಗೊಬ್ಬ ಚಂದ್ರನನ್ನು ಸೃಷ್ಟಿಸಿಕೊಳ್ಳಲು, ನಮ್ಮೊಳಗಿಗೆ ಎರವಲು ಬೆಳಕು ತರಲು ನಮಗೆ ನಾವೇ ಕೊಟ್ಟು ಕೊಂಡಿರುವ ಸವಲತ್ತುಗಳನ್ನು ಅಲಕ್ಷಿಸಬೇಕು. ಲೌಕಿಕದ ಸುಖಕ್ಕಿಂತಲೂ ಮಾನಸಿಕ ಸುಖದ ಬಯಕೆ, ಹರಳು ಕಟ್ಟಬೇಕು. ಆಗ ನಮ್ಮೊಳಗೆ ಹುಟ್ಟುವ ಚಂದ್ರ ತನಗೆ ತಾನೇ ಬೆಳದಿಂಗಳನ್ನು ಸೂಸುತ್ತ ಹೋಗುತ್ತಾನೆ.
ಇರಲಿ, ಒಂದು ಋತುವಿಗೆರಡು ಬಾರಿಯಂತೆ ಸಂಪೂರ್ಣ ಭೇಟಿ ಕೊಡುವ ಚಂದ್ರ ಋತು ವಿಲಾಸದ ಅಧ್ಯಯನಕ್ಕೆ ಸಹಕರಿಸುವ ರೀತಿಯೇ ಅನನ್ಯವಾದುದು. ವರ್ಷಾರಂಭದ- ಇಂಗ್ಲಿಷ್ ವರ್ಷವಲ್ಲ, ಯುಗಾದಿಯಿಂದ ಪ್ರಾರಂಭವಾಗುವ ನಮ್ಮ ವರ್ಷ- ವಸಂತದ ನೆಲದಲ್ಲಿ ಚಿಗಿತೆದ್ದ ಹಸಿರು ರಾಶಿಯ ನಡುವೆ ಚಿಗುರು ತಿನ್ನುತ್ತಲೇ ಹಾಡುವ ಕೋಗಿಲೆಗಳ ಪುಳಕದ ಹಗಲಿಗೆ ಸರಿಸಮವಾಗಿ ಜುಗಲಬಂದಿ ನೀಡುವ ರಾತ್ರಿಯನ್ನು ತಯಾರು ಮಾಡುವವನೇ ನಮ್ಮ ಚಂದ್ರ. ಶಾಂತಿರಸ್ತು, ಪುಷ್ಟಿರಸ್ತು, ತುಷ್ಠಿರಸ್ತು, ಎನ್ನುವ ಮೂರು ಮೂಲ ಉದ್ದೇಶದ ಚಂದ್ರ ಹರಿಸುವ ಶಾಂತಿ, ಸಮೃದ್ಧಿ, ಸಂತಸದ ಹೊನಲುಗಳು ಹಗಲ ಬೆಳಕಿನಲ್ಲೇ ಜೂಗರಿಸುತ್ತ ಕಾಲ ಕಳೆಯುವ ಅರಸಿಕರಿಗೆ ಸುಲಭವಾಗಿ ಅರ್ಥವಾಗುವಂಥದಲ್ಲ.
ಜಾತ್ರೆ, ಉತ್ಸವ, ತೇರುಗಳು ಚಂದ್ರನಿಲ್ಲದ ಹೊತ್ತಲ್ಲಿ ನಡೆಯುವದಪರೂಪ. ಅಮಾವಾಸ್ಯೆಯ ಲಕ್ಷ್ಮಿ ಪೂಜೆ, ತೀರ್ಥಹಳ್ಳಿಯ ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ಮಾತ್ರ ಚಂದ್ರ ಇರುವುದಿಲ್ಲ. ಚಂದ್ರ ದರ್ಶನವೇ ಬೇಡದ ಭಾದ್ರಪದ ಶುಕ್ಲ ಚೌತಿಯ ಸಂಜೆ ಆಕಾಶದ ತುಂಬ ಸರ್ಚ್ ಲೈಟ್ ಹಚ್ಚಿಟ್ಟಂತೆ ಬೆಳಕ ಹರಡಿ ಕತ್ತೆತ್ತಿದವರೆಲ್ಲರ ಕಣ್ಣಿಗೂ ಬೀಳುವ ಚಂದ್ರ, ಯುಗಾದಿ ಚಂದ್ರ ದರ್ಶನದ ದಿನ ಮಾತ್ರ ಹುದುಕಿದರೂ ಸಿಗದೆ, ಕತ್ತು ಸೋತು ಕೆಳಗಿಳಿಸಿದ ಮೇಲೆ, ದೂರದಲ್ಲೆಲ್ಲೋ ಕಂಡು ಮಾಯವಾಗುತ್ತಾನೆ. ಹಾಗೆ ಅವನು ಕೊಟ್ಟ ದರ್ಶನದಲ್ಲೇ ಅವನು ಎಡಕ್ಕಿದ್ದನೋ, ಬಲಕ್ಕಿದ್ದನೋ ಎಂಬುದರ ಮೇಲೆ ಆ ವರ್ಷದ ಮಳೆ ಬೆಳೆಯ ಲೆಕ್ಕಾಚಾರ ಮಾಡುತ್ತಿದ್ದ ನಮ್ಮ ಹಿರಿಯರ ನೆನಪಿಸಿಕೊಳ್ಳುವುದೇ ಮತ್ತೊಂದು ಹುಣ್ಣಿಮೆಯ ಹಾಗೆ.
ಶ್ರಾವಣದ ಹುಣ್ಣಿಮೆಯ ವಿಶೇಷವೆಂದರೆ, ಅದು ತೊಟ್ಟ ಜನಿವಾರವನ್ನು ರಿವೈವ್ ಮಾಡಿಸುವ ಹಬ್ಬ. ಜನಿವಾರದ ಎಳೆಗಿಂತಲೂ ತೆಳ್ಳಗೆ, ಬೆಳ್ಳಗೆ, ಮೆತ್ತಗಿರುವ ಒತ್ತು ಶ್ಯಾವಿಗೆಯ ಹಬ್ಬ. ಆ ಶ್ಯಾವಿಗೆಗೆ ಎಳ್ಳು ಕಾಯಿರಸ ಬೆರಸಿದರೆ ಸಿಹಿ ಶ್ಯಾವಿಗೆ. ಕಡ್ಲೆ ಬೀಜದ ಒಗ್ಗರಣೆ ಕೊಟ್ಟು ಕೊತ್ತಂಬರಿಯಿಂದ ಅಲಂಕರಿಸಿದರೆ ಖಾರದ ಶ್ಯಾವಿಗೆ. ಒತ್ತು ಶ್ಯಾವಿಗೆಯ ಜೊತೆಗೆ ಒಬ್ಬಟ್ಟಿನ ಬೋನಸ್ಸು! ಶ್ರಾವಣದ ಜಡಿಮಳೆಯಲ್ಲಿ ಹೊರಗೆಲ್ಲೂ ಹೋಗಲಾಗದೇ ಕೂತು ಬೇಸರ ಬಂದವರಿಗೆ ಭೋಜನ ಪಂದ್ಯವೇರ್ಪಡಿಸಲು ಸಕಾಲ.
ಇನ್ನು ಪ್ರತಿ ಹುಣ್ಣಿಮೆಯ ಸಂಜೆ ಸತ್ಯನಾರಾಯಣ ಪೂಜೆ ನಡೆಸಿ, ಜನರ ಪಾಪ ಶೇಷಗಳೆಲ್ಲವನ್ನೂ ತೊಳೆಯುತ್ತಿರುವ ನಮ್ಮ ಅದೆಷ್ಟೋ ದೇವಸ್ಥಾನಗಳ ಸಮಿತಿಗಳಿಗಂತೂ, ಹುಣ್ಣಿಮೆಯೆಂದರೆ ಕಲೆಕ್ಷನ್. ಹುಣ್ಣಿಮೆ, ಅಮಾವಾಸ್ಯೆಗಳಲ್ಲಷ್ಟೇ ಚಿತ್ತ ವಿಭ್ರಮೆಗೊಳಗಾಗುವ ಜನರನ್ನು ಆಧುನಿಕ ವಿಜ್ಞಾನ ಅನುಮಾನದಿಂದ ನೋಡಿ, ಮನಶಾಸ್ತ್ರ ತಜ್ನರನ್ನು ಕಾಣುವಂತೆ ಸೂಚಿಸಿದರೂ, ಅದೇಕೆ ಹುಣ್ಣಿಮೆಯ ರಾತ್ರಿಗಳಲ್ಲಷ್ಟೇ ಸಮುದ್ರ ಉಕ್ಕಿ ಸೊಕ್ಕುತ್ತದೆ ಎನ್ನುವುದೂ ಗಮನಿಸಬೇಕಾದ ಸತ್ಯ. ಏಕೆಂದರೆ ಭೂಮ್ಯಾಕಾಶ, ನಕ್ಷತ್ರ, ನೀಹಾರಿಕೆಗಳ ಚಲನೆಯನ್ನೇ ಅಧ್ಯಯನಿಸುವ ಕಸುಬಿನವರಿಗೆ ಅದು ವಿಜ್ಞಾನ. ಅದನ್ನೇ ಅರೆ ಬರೆ ತಿಳಿದು, ಕುಂಡಲಿ ಹಾಕಿ ರವಿ, ಕುಜ, ಚಂದ್ರ ಎಂದು ಬರೆದು ಕವಡೆ ಹಾಕುವವನಿಗೆ ಶಾಸ್ತ್ರ. ನಮ್ಮ ಜನ ವಿಜ್ಞಾನಕ್ಕಿಂತ ಅಜ್ಞಾನವನ್ನೇ ಮೆಚ್ಚುವವರಾದ್ದರಿಂದ, ಭವಿಷ್ಯ ಹೇಳುವವರ ಭವಿಷ್ಯವಂತೂ ಉಜ್ವಲವಾಗಿಯೇ ಇರುತ್ತದೆ. ಅಮಾವಾಸ್ಯೆಯ ರಾತ್ರಿ ಭೂತ ಪ್ರೇತಗಳಿಗೆ ಇರುವಂತೆಯೇ ಹುಣ್ಣಿಮೆಯ ರಾತ್ರಿಗಳನ್ನು ಮೋಹಿನಿಯರಿಗೆ,ಬಾಣಂತಿ ದೆವ್ವಗಳಿಗೆ ಮೀಸಲಿಟ್ಟಿರುವ ನಮ್ಮ ಜನ ತಮಗೆಂದು ಮಾತ್ರ ಯಾವ ದಿನಗಳನ್ನೂ ನಿಗದಿಯಾಗಿಸಿಲ್ಲದಿರುವುದೇ ನಮ್ಮೆಲ್ಲ ಅಜ್ಞಾನದ ಮೂಲ ಸತ್ಯ.
ಚಂದ್ರನ ಅತಿ ಹತ್ತಿರದ ಸ್ನೇಹಿತನೆಂದರೆ ಮನ್ಮಥ. ಚಂದ್ರಿಕೆಯ ಸವಿಯಲ್ಲಿ ಪ್ರೇಮಿ ತೊಯ್ಯುತ್ತಿದ್ದರೆ, ಮನ್ಮಥನ ಬಾಣಗಳು ಇನ್ನೇನು ತಾಗುವವೆಂದೇ ಅರ್ಥ. ಇನ್ನು ಹೇಗೆ ತಾನೆ ಆ ಪ್ರ್ರೇಮಿ ರಾತ್ರಿಯ ಉದ್ದಗಲಗಳನ್ನಳೆಯದೇ ಬಿಡಲು ಸಾಧ್ಯ? ಶುಕ ಧ್ವಜ ಮನ್ಮಥ ತನ್ನ ಇಕ್ಷು ಚಾಪದಿಂದ ಸುಮ ಬಾಣಗಳನ್ನು ಬಿಡದಿರುತ್ತಿದ್ದರೆ, ಈ ಲೋಕದ ಜನರಿಗೆ ಅದು ಹೇಗೆ ತಾನೆ ಪ್ರೀತಿ- ವಿರಹಗಳ ಉತ್ಕಟತೆಯ ಅರಿವು ಬರುತ್ತಿತ್ತು? ಕಾಮನ ಹುಣ್ಣಿಮೆಯ ನೆನಪೇ ಮತ್ತೊಂದು ಹುಣ್ಣಿಮೆಯ ಅನುಭವವನ್ನು ಕೊಡಬಲ್ಲುದೆಂದರೆ, ಕಾಮನ ಹುಣ್ಣಿಮೆಯ ನೆನೆಯದೇ ಮುಂದಡಿಯಿಡುವುದು ಅಪರಾಧವಾದೀತು!
ಕಾಮನ ಹುಣ್ಣಿಮೆಯ ಸಾಂಪ್ರದಾಯಿಕ ಆಚರಣೆಗಿಂತಲೂ, ಹೊಸ ತಲೆಮಾರು ಅದನ್ನಾಚರಿಸುವಾಗ ಬದಲಾಯಿಸುತ್ತ ಬಂದ ರಿವಾಜುಗಳನ್ನು ಅಧ್ಯಯನ ಮಾಡಿದರೆ ಅದೇ ಒಂದು ವಿದ್ವತ್ ಪ್ರಬಂಧವಾಗಿಯೇ ಆಗುತ್ತದೆ. ಸ್ವಭಾವತಃ ಪುಕ್ಕಲು ಹುಡುಗರೂ, ಕಾಮೋತ್ಸವದ ದಿನ ತಮ್ಮ ಮಿತಿ ಮೀರಿ ವರ್ತಿಸುವ ರೀತಿಯೇ ಈ ಹಬ್ಬಕ್ಕಿರುವ ವಿಶೇಷತೆಯನ್ನು ಎತ್ತಿ ತೋರಿಸುತ್ತದೆ. ಒಂದೆರಡು ಸ್ವಾರಸ್ಯದ ಸಂಗತಿಗಳನ್ನಿಲ್ಲಿ ನೆನೆಯದೇ ಹೋದರೆ, ಈ ಬರಹ ಇಂಗಿನೊಗ್ಗರಣೆ ಇಲ್ಲದ ತಿಳಿಸಾರಿನಂತಾಗಿ ಬಿಡಬಹುದೆಂಬ ಭಯದಿಂದ ಆವನ್ನೀಗ ನೆನೆಯುತ್ತಿದ್ದೇನೆ.
ಕಾಮನ ಹುಣ್ಣಿಮೆಯ ಹಿಂದಿನ ರಾತ್ರಿ ಊರ ದೇವರ ಜಗಲಿಯಲ್ಲಿ ಆ ಒಂದು ರಾತ್ರಿಗೆಂದೇ ಪ್ರತಿಷ್ಠಾಪಿತನಾಗುವ ದೇವನೆಂದರೆ ಅದು ನಮ್ಮ ಮನ್ಮಥ ದೇವ. ಬತ್ತದ ಹುಲ್ಲಿನಲ್ಲಿ ತಯಾರಿಸಿದ ಮನುಷ್ಯ ಶರೀರ ಹೋಲುವ ಬೊಂಬೆಗೆ ಚಿಂದಿ ಪ್ಯಾಂಟು, ಶರಟುಗಳನ್ನು ತೊಡಿಸಿ, ಮನುಷ್ಯರಂತೇ ಕೂರಿಸುವ ಕೆಲಸ ಅನುಭವದ ಕೈಗಳಿಂದ ಮಾತ್ರ ಸಾಧ್ಯವಿರುವ ಸಂಗತಿ. ಹಾಗೆ ತಯಾರಾದ ಬೊಂಬೆಗೆ ಆ ರಾತ್ರಿಯ ಮಟ್ಟಿಗೆ ಕಡ ತಂದ ಸೂಟು ತೊಡಿಸಿ, ಅಟ್ಟೆ ಕಿತ್ತ ಬೂಟು ತೊಡಿಸಿ, ಆ ವರ್ಷದ ಹಿಟ್ ಸಿನಿಮಾದ ಹೀರೊ ಧರಿಸಿದ್ದ ಟೋಪಿ ಅಥವ ಹ್ಯಾಟು ತೊಡಿಸಿ, ಎಂ.ಜಿ.ಆರ್ ಕನ್ನಡಕ ತೊಡಿಸುವುದು ಕಿರಿಯರ ಕೆಲಸ.
ನಂತರ ದೇವಸ್ಥಾನದ ಅಟ್ಟದಲ್ಲಿ ಜೋಪಾನವಾಗಿ ತೆಗೆದಿರಿಸಿದ್ದ ಕಾಮ ದೇವನ ಹಸ್ತ, ಪಾದ, ಶಿರದ ಆಕೃತಿಗಳಿಗೆ ತಿಂಗಳ ಮೊದಲೇ ಧೂಳು ಹೊಡೆಸಿ, ಹೊಸ ಬಣ್ಣ ಹೊಡೆಸಿ, ಸಿಂಗರಿಸಿದ್ದ ಭಟ್ಟರು ಈ ಮೊದಲು ಹೇಳಿದ ಹಾಗೆ ತಯಾರಾದ ಬೊಂಬೆಗೆ ತೊಡಿಸಿ, ಪ್ರತಿಷ್ಠಾಪಿಸಿ, ಮಂಗಳಾರತಿ ಎತ್ತಿ ನಮಗವನನ್ನು ಹಸ್ತಾಂತರಿಸಿದರೆಂದರೆ ಮುಂದೆ ನಮ್ಮ ಹಿಗ್ಗು ಭುಗಿಲೆದ್ದು ಕುಣಿಯುತಿತ್ತು. ಅವನ ನಿವೇದನೆಗೆಂದೇ ಹೊಸ ಹೊಸ ಬಯ್ಗಳು ಹುಟ್ಟುತ್ತಿದ್ದವು. ಊರಿನ ಹಾದರದ ಸುದ್ದಿಗಳು ಪ್ರಚುರ ಪಡೆಯುತ್ತಿದ್ದುದೇ ಈ ಶುಭ ಸಂದರ್ಭದಲ್ಲಿ. ಕದ್ದು ಮುಚ್ಚಿ ನಡೆಯುತ್ತಿದ್ದ ಪ್ರಣಯ ಪ್ರಸಂಗಗಳು ಊರ ಹೆಬ್ಬಾಗಿಲಿನ ಮುಂದಿನ ಗೋಡೆಯಲ್ಲಿ ಇದ್ದಲಿನಲ್ಲಿ ರಾರಾಜಿಸಿ, ಬೆಳಗಾಗುವುದರಲ್ಲಿ ಎಲ್ಲರ ನಾಲಿಗೆಗಳಲ್ಲಿ ನಲಿದಾಡಲು ತೊಡಗುತ್ತಿದ್ದವು. ವೈದ್ಯರ ನಾಮಫಲಕ ನಾಪಿತನಂಗಡಿಗೆ ಹೋಗಿ, ನಾಪಿತನ ನಾಮ ಫಲಕ ನ್ಯಾಯವಾದಿಯ ಬಾಗಿಲಿನಲ್ಲಿ ತೂಗಾಡಿ, ಕತ್ತೆಯ ಬಾಲಕ್ಕೆ ಕಟ್ಟಿದ್ದ ಪಟಾಕಿ ಸಿಡಿದು ಉಬ್ಬಸದ ಸುಬ್ಬಣ್ಣಯ್ಯ ನಮಗೆಲ್ಲ ಸಹಸ್ರನಾಮ ಶುರುಮಾಡುತ್ತಿದ್ದರು.
ವರಾಡಕ್ಕೆಂದು ಮನೆಯಂಗಳ ತುಳಿಯುವ ಮೊದಲೇ ಅವರವರ ಯೋಗ್ಯತಾನುಸಾರ ಮನೆಯ ಚಿಕ್ಕ ಮಕ್ಕಳ ಮೂಲಕ ತಮ್ಮ ದೇಣಿಗೆ ಕಳಿಸಿದ ಹಿರಿಯರು ಹೆಣ್ಣು ಮಕ್ಕಳನ್ನು ಮನೆಯಿಂದ ಹೊರಗೆ ಕಾಲಿಡದಂತೆ ಕಾಯುತ್ತಿದ್ದರು.
ಕೆಲವು ರಸಿಕ ಶಿಖಾಮಣಿ ಮುದಿಗೊಡ್ದುಗಳು ತಮಗೆ ಗೊತ್ತಿದ್ದ ಕಾಮನ ಪದಗಳನ್ನು ನಮಗೆ ಕದ್ದು ಬರೆದು ಕೊಟ್ಟು ನಾವದನ್ನು ಹಾಡುವಾಗ ಕೇಳಿ ಖುಶಿಪಡುತ್ತ, ದೇಣಿಗೆಯ ಮೊತ್ತಕ್ಕೆ ತಮ್ಮ ಪಾಲೂ ಸೇರಿಸಿ ಧನ್ಯವಾಗುತ್ತಿದ್ದವು. ನಾವು ವರ್ಷವಿಡೀ ಬಾಯಿ ಮುಚ್ಚಿಕೊಂಡು ಮನದಲ್ಲೇ ಧ್ಯಾನಿಸಿದ ಪ್ರಸಂಗಗಳಿಗೆಲ್ಲ ಜೀವ ಬಂದು, ನಮ್ಮೊಳಗಿದ್ದ ಕವಿ ಮಹಾಶಯ ಹೊರಗೆ ಬರುತ್ತಿದ್ದ. ಅದರಲ್ಲೂ ಆಷು ಕವಿತ್ವವಿದ್ದವರಿಗಂತೂ ಮಿಂಚಲು ಒಳ್ಳೆಯ ಅವಕಾಶ ಅದಾಗಿತ್ತು.ಹೀಗೆ ಪ್ರಸಂಗಗಳೆಲ್ಲ ಜೋಗದ ಜಲಪಾತದಂತೆ ಸುರಿದು ಬೀಳುತ್ತಿರುವಾಗ ಸಂನ್ಯಾಸಿಗಳಿಗೂ ಕೋಗಿಲೆಯ ಸ್ವರ ಕೇಳುತ್ತಿತ್ತು.
ಖರ್ಚಿಗೆ ಕಾಸು ಗಿಟ್ಟಿಸಿದ ನಂತರ ಕಾಮದಹನಕ್ಕೆ ಸೌದೆಯ ಉಸ್ತುವಾರಿ. ತೊಟ್ಟಿಲಿನಿಂದ ಆಕಾಶ ಬುmಯವರೆಗೂ ಮನೆಗಳಿಂದ ಸಂಗ್ರಹಿಸಿದ ಬಿದಿರು ಸಾಮಾನುಗಳ ಜೊತೆಗೆ ಮನೆಗಿಷ್ಟೆಂದು ಎತ್ತಿ ತಂದ ಸೌದೆ, ಮರ, ಮುಟ್ಟು. ಮನೆ ಮುಂದಿನ ಗೇಟಿಗೆಂದು ನಿಲ್ಲಿಸಿದ್ದ ಉಣುಗೋಲಿನಿಂದ ಹಿಡಿದು ಏಣಿ ಕಾಲು, ಚಪ್ಪರದ ಗೂಟ, ಹೂವು ಕೀಳುವ ಕೋಲು ಎಲ್ಲವೂ ಕಾಮನ ಚಪ್ಪರಕ್ಕೆ ಬಂದು ಬೀಳುತ್ತಿದ್ದವು. ಹೀಗೆ ಕದ್ದು ತಂದ ಸಾಮಾನುಗಳನ್ನು ಮನೆಗೊಯ್ಯಲು ಬಂದವರಿಗೆ ಬಯ್ಗಳದ ಸ್ವಾಗತ ಕಾದಿರುತ್ತಿದ್ದುದರಿಂದ ಊರ ಮನೆಗಳ ಹಿರಿಯರು ತಮ್ಮ ತಮ್ಮ ಮನೆಯ ಹಿತ್ತಲಿನಲ್ಲಿ ಬಿಡಾರ ಹೂಡಿಕೊಂಡು ನಾವ್ಯಾರೂ ಅವರ ವಸ್ತುಗಳನ್ನು ಕದಿಯದಂತೆ ತಡೆ ಒಡ್ಡುತ್ತಿದ್ದರು. ಮಧ್ಯರಾತ್ರಿ ಕಳೆದ ನಂತರ ಕಾಮನ ರಥ ಊರ ಸಂಚಾರಕ್ಕೆ ಹೊರಡುತಿತ್ತು.
ಎತ್ತು ಕಟ್ಟಿದ ಕಾಮ ರಥದ ಚಾಲಕ ಅಂದರೆ ಕಾಮ ಸಾರಥಿ ಯಾರಾಗುತ್ತಾರೋ ಅವರಿಗೆ ಆ ವರ್ಷ ಮದುವೆ ಆಗೇ ಆಗುತ್ತದೆಂಬ ನಂಬಿಕೆ ಬಲವಾಗಿ ಇದ್ದುದ್ದರಿಂದ ಮದುವೆಯ ವಯಸ್ಸು ಬಂದು ಇನ್ನೂ ಮದುವೆಗೆ ಮನೆಯಲ್ಲಿ ಯಾವ ಸೂಚನೆಗಳೂ ದೊರೆಯದ ಹುಡುಗರು ನಾ ಮೊದಲು ತಾ ಮೊದಲೆಂದು ಕಾಮ ಸಾರಥಿಯಾಗಲು ಮುಂದೆ ಬರುತ್ತಿದ್ದರಿಂದ ಆಯಾ ಮನೆಯವರು ಆ ವರ್ಷ ಆ ಹುಡುಗನ ಮದುವೆಯ ವಿಷಯ ತೆಗೆಯಲೇ ಬೇಕಾಗುತಿತ್ತು. ಎತ್ತು ಕಟ್ಟಿದ ಬಂಡಿಯನ್ನು ಊರಿನ ಬೀದಿ ಬೀದಿಗಳಲ್ಲಿ ಓಡಿಸಿಕೊಂಡು ಹೋಗುವಾಗ ಆ ಕಾಮ ಸಾರಥಿಗಳ ಮುಖದಲ್ಲಿರುತ್ತಿದ್ದ ಕಾತರ, ಏನನ್ನೋ ಕುರಿತ ಅವರ ಕುತೂಹಲ, ಮುಖದ ಮೇಲೆ ಮೂಡಿದ್ದ ನಾಚಿಕೆ, ಉದ್ವೇಗಗಳನ್ನು ಮೀಟಿ, ಹರೆಯದ ಸಂಗೀತವನ್ನು ಅನ್ಯರೂ ಕೇಳುವಂತೆ ಆಗುತ್ತಿತ್ತು.
ಒಂದು ಗುಂಪು ಹೀಗೆ ಕಾಮನ ಮೆರವಣಿಗೆಯಲ್ಲಿ ಸಾಗಿದ್ದರೆ ಮತ್ತೊಂದು ಗುಂಪು, ಹುಡುಗರನ್ನು, ಅವರ ಚೇಷ್ಟೆಗಳನ್ನು ಸುಮ್ಮ ಸುಮ್ಮನೇ ಗದರಿಸುತ್ತ, ತಮ್ಮ ಹಿರಿತನವನ್ನು ತೋರ್ಪಡಿಸುತ್ತಿದ್ದವರ ವಿರುದ್ಧ ತನ್ನ ಕಾರ್ಯಾಚರಣೆಯ ತಯಾರಿಯಲ್ಲಿರುತ್ತಿತ್ತು. ಆ ಮನೆಯವರೂ ಎಂಥ ಕಿಲಾಡಿಗಳೆಂದರೆ, ಅವರೇ ಸ್ವತಃ ಎದ್ದು ಕೂತು ಅವರ ಹಿತ್ತಲದ ಸಾಮನುಗಳ ನಿಗ ನೋಡುತ್ತಿದ್ದರು. ಆದರೆ ಕಾರ್ಯಾಚರಣೆಯ ಪಟ್ಟಿಯಂತೆ ಅವರ ಮನೆಯ ತೆಂಗಿನ ಮರದ ಎಲ್ಲ ಎಳನೀರು ಕಾಮೋತ್ಸವದ ಹುಡುಗರ ಬಾಯಾರಿಕೆ ತಣಿಸಬೇಕು. ಸರಿ, ಮುಂದಿನ ಉಪಾಯವೆಂದರೆ, ಬಂದ ಗುಂಪು ಎರಡಾಗಿ, ಮೊದಲ ಗುಂಪು ಆ ವ್ಯಕ್ತಿಯ ಜೊತೆ ಕ್ಷೇಮ ಸಮಾಚಾರ, ಲೋಕಾರೂಢಿಯ ಮಾತಿಗೆ ಇಳಿಯಿತು. ಸ್ವಭಾವತಃ ಮನುಷ್ಯರಾದವರೆಲ್ಲರೂ ಖುಷಿ ಕೊಡುವ ಸಂಗತಿಗಳಿಗೆ ಸ್ಪಂದಿಸುವ ರೀತಿಯಲ್ಲಿ ಆ ಹಿರಿಯರೂ ತಮ್ಮ ಕಾಲದ ಶೌರ್ಯ
ಸಾಹಸಗಳ ವರ್ಣನೆಗೆ ತೊಡಗಿದರೆ, ಈ ಹೊತ್ತಿಗಾಗಲೇ ಅವರ ತೆಂಗಿನ ಮರಕ್ಕೆ ಸೇದುವ ಹಗ್ಗದ ಸಮೇತ ಮರ ಹತ್ತುವವರು ಹತ್ತಿಯಾಗಿತ್ತು. ಮರದ ಮೇಲಿದ್ದವರು ಇಡಿ ಎಳನೀರಿನ ಕೊಂಬೆಯನ್ನೇ ಕತ್ತರಿಸಿ ಜೊತೆಗೊಯ್ದಿದ್ದ ಹಗ್ಗದ ಮೂಲಕ ಇಳಿಬಿಟ್ಟರೆ, ಆ ಕೊಂಬೆ ಹಗ್ಗದ ಮೇಲೆ ಜಾರುತ್ತ ಬರುತಿತ್ತು. ಕೆಳಗಿದ್ದವರು ಅದನ್ನು ಜೋಪಾನವಾಗಿ ಹೊತ್ತೊಯ್ಯುತ್ತಿದ್ದರು. ಇತ್ತ ತಮ್ಮ ಸಾಹಸ ವಿವರಣೆಯಲ್ಲಿದ್ದ ಹಿರಿಯರಿಗೂ ಕೆತ್ತಿ ತಂದ ಎಳನೀರಿನ ಉಪಚಾರ ನಡೆದು, ಅವರು ಅದನ್ನು ಕುಡಿದು ರುಚಿ ಕಂಡ ಮೇಲಷ್ಟೇ ನಮ್ಮೊಂದಿಗೆ ಜಗಳಕ್ಕಿಳಿಯುತ್ತಿದ್ದರು. ಸಾಹಸವೊಂದರ ಯಶಸ್ಸಿನಲ್ಲಿ ಬೀಗುತ್ತಿದ್ದ ನಮಗೆ ಅವರ ಬಯ್ಗಳು ಹೂ ಹಾರದ ಹಾಗೆ ಕಾಣುತ್ತಿದ್ದವು.
ಹುಣ್ಣಿಮೆಯ ಬೆಳ್ಳಂಬೆಳಗು ಬಾಯಿ ಬಡಿದು ಕೊಳ್ಳುತ್ತ ಆಕಾಶದೆತ್ತರಕ್ಕೆ ಉರಿ ಚಾಚುವ ಚಿತೆಗೆ ಕಾಮನ ಗೊಂಬೆಯನ್ನೆಸೆದು ಚಳಿಯಿಂದ ನಡುಗುತ್ತಿದ್ದ ಮೈ, ಮುಖಗಳಿಗೆ ಬೆಚ್ಚನೆಯ ಶಾಖವನ್ನು ಕೊಟ್ಟು ಕೊಳ್ಳುತ್ತ ಮುಂದಿನ ಕಾಮದಹನದವರೆಗೂ ವಟಗುಟ್ಟುವ ಬಾಯಿ, ಕದಿಯುವ ಕೈ, ಮತ್ತು ಬಂಡಾಯವೇಳುವ ಮನಸ್ಸಿನ ಹತೋಟಿ ಹೇಗೆ ಸಾಧ್ಯವೆಂದು ತಲೆತುರಿಸಿಕೊಳ್ಳುತ್ತ ಮನೆಗೆ ಹೋದರೆ ಅಮ್ಮ ತಲೆ ತುಂಬ ಹರಳೆಣ್ಣೆ ತಟ್ಟಿ ಅಭ್ಯಂಜನ ಮಾಡಿಸಿ, ಬೆಚ್ಚಗೆ ಹೊದಿಸಿ ಮಲಗಿಸುತ್ತಿದ್ದಳು. ನಿದ್ದೆಯಿಂದೆದ್ದು ಕಣ್ಣು ತೆರೆದರೆ ಹೊಯ್ಕೊಂಡ ಬಾಯಿಗೆ ಹೋಳಿಗೆ ತುಪ್ಪ ಬಡಿಸಿ ಆಗಷ್ಟೆ ಮೂಡುತ್ತಿದ್ದ ನಮ್ಮ ಮೀಸೆ ಮೊನೆಯನ್ನು ಅಪ್ಯಾಯವಾಗಿ ನೋಡುತ್ತ ಸಂಭ್ರಮಿಸುತ್ತಿದ್ದುದನ್ನು ಯಾವ ಶಾಲೆಯ ಯಾವ ಸಿಲೆಬಸ್ಸೂ ಒಳಗೊಳ್ಳುವ ಸಾಧ್ಯತೆ ಇಲ್ಲದಿರುವುದರಿಂದಲೇ ಈ ಕಾಲದ ಹುಡುಗರು ಹುಣ್ಣಿಮೆಯ ಬೆಳಕಿಗಿರುವ ಏನೆಲ್ಲ ಅಂತರಾರ್ಥಗಳನ್ನು ಗ್ರಹಿಸಲು ಸೋಲುತ್ತಿದ್ದಾರೆಯೆ ಎನ್ನುವ ಪ್ರಶ್ನೆ ಮೂಡಿಸಿಕೊಳ್ಳುತ್ತ ಚಂದ್ರಮ ಹರಿಸುವ ಚಂದ್ರಿಕೆಯಲ್ಲಿ ಕರಗುವ ಚಂದ್ರಕಾಂತ ಶಿಲೆಗಳು ನಮ್ಮ ಹೊಸ ಪೀಳಿಗೆಯ ಹುಡುಗರೆದೆಗೂ ಒಂದಿಷ್ಟು ಕನಸುಗಳನ್ನು ಬಿತ್ತಲಿ ಎಂದು ಹಾರೈಸೋಣ, ಅಲ್ಲವೇ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ