ಮಕ್ಕಳ ದಿನಕ್ಕೆ ಹೀಗೊಂದು ಆಲೋಚನೆ.. .. .. .. ..
ನವಂಬರ್ ೧೪ರ ಈ ದಿನ ಮಕ್ಕಳ ದಿನಾಚರಣೆ. ಮಹಿಳೆಯರಿಗೆ, ಹೆತ್ತವರಿಗೆ, ಪ್ರೀತಿಯಲ್ಲಿ ಬಿದ್ದವರಿಗೆ, ಪರಿಸರಕ್ಕೆ, ಪಾಠ ಹೇಳುವ ಮಾಸ್ತರರಿಗೆ ಹೀಗೆ ಎಲ್ಲರಿಗೂ ದಿನಾಚರಣೆಗಳನ್ನು ಆಚರಿಸುವ ನಾವು ನಿಜದ ಅರ್ಥದಲ್ಲಿ ಈ ದಿನಾಚರಣೆಗಳಿಗಿರುವ ಮಹತ್ವವನ್ನು ಮರೆತುಬಿಟ್ಟಿದ್ದೇವೆ. ಮಾಧ್ಯಮಗಳಲ್ಲಿ ಬರುವ ವರದಿಗಳು, ಸಂಘ ಸಂಸ್ಥೆಗಳು ನಡೆಸುವ ಸನ್ಮಾನ, ಗೌರವರ್ಪಣೆಗಳಲ್ಲೇ ಬಹುತೇಕ ದಿನಾಚರಣೆಗಳು ಕಳೆದುಹೋಗಿಬಿಡುತ್ತಿವೆ. ಶಾಲಾ ಕಾಲೇಜುಗಳಂತೂ ಭಾಷಣ ಸ್ಪರ್ಧೆಯನ್ನೋ, ಲೇಖನಸ್ಪರ್ಧೆಯನ್ನೋ ನಡೆಸಿ ತಮ್ಮ ಜವಾಬ್ದಾರಿಯನ್ನು ಮುಗಿಸಿಕೊಳ್ಳುತ್ತಿವೆ. ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳಂತೂ ಸಿನಿಮಾ ಹಾಡುಗಳ ಸಿಡಿಗಳಿಗೆ ಕೈಕಾಲಾಡಿಸುವ ವ್ಯರ್ಥ ಉಪಕ್ರಮಗಳಾಗೇ ನಿಲ್ಲುತ್ತಿವೆ.
ಉದಾಹರಣೆಗೆ ಮಕ್ಕಳದಿನಾಚರಣೆಯನ್ನು ನಾವು ನಡೆಸುತ್ತಿರುವ ಕ್ರಮವನ್ನೇ ನೋಡಿ. ಪಂಡಿತ ನೆಹರೂ ತಮ್ಮ ಜನ್ಮದಿನಾಚರಣೆಯನ್ನು ಮಕ್ಕಳ ದಿನವನ್ನಾಗಿ ಆಚರಿಸಲು ಹೇಳಿದ್ದನ್ನೇ ಮತ್ತೆ ಮತ್ತೆ ನೆನೆಯುತ್ತ, ಅವರು ಅಂದೆಂದೋ ಧರಿಸಿದ್ದ ದಿರಿಸನ್ನೋ, ಅವರು ಬರಹಗಾರರಾಗಿದ್ದನ್ನೋ ಅಥವಾ ಅವರು ಜಾರಿಗೆ ತಂದ ಪಂಚಶೀಲ ತತ್ವವನ್ನೋ ಪುನಃ ಪುನಃ ಹೇಳಿ ಅವರು ಕೋಟಿನ ಗುಂಡಿಗೆ ಸಿಕ್ಕಿಸಿಕೊಳ್ಳುತ್ತಿದ್ದ ಗುಲಾಬಿಯನ್ನು ನಾಚಿಸುತ್ತೇವೆ. ನೆಹರೂ ಯಾವಕಾರಣಕ್ಕೆ ಮಕ್ಕಳಿಗೆ ಇಷ್ಟು ಮಹತ್ವ ನೀಡಿದರು? ಅವರೇಕೆ ಎಲ್ಲ ಮಕ್ಕಳಿಗೂ ‘ಚಾಚಾ’ಆಗಿರಲು ಬಯಸಿದ್ದರು ಎಂದು ಬಹುತೇಕರು ಆಲೋಚಿಸುವುದೇ ಇಲ್ಲ.
‘ಪ್ರತಿಯೊಂದು ಮಗುವೂ ಮನುಷ್ಯನೊಬ್ಬನ ತಂದೆ’ ಎನ್ನುವ ಆಂಗ್ಲ ಗಾದೆಯೊಂದಿದೆ. ಬಾಲ್ಯದಲ್ಲಿ ಕಲಿತ ಬುದ್ಧಿ-ಮನಸ್ಸುಗಳೇ ಮುಂದಿನ ದಿನಮಾನಗಳನ್ನು ರೂಪಿಸುವುದರಿಂದ ಎಲ್ಲರ ಬಾಲ್ಯವೂ ಪರಿಶುದ್ಧವಾಗಿರುತ್ತದೆ ಎನ್ನುವ ಮಾತೂ ಇದೆ. ಹಸಿವು, ನೀರಡಿಕೆ, ನಿದ್ದೆಗಳು ಮಾತ್ರ ಮಕ್ಕಳು ದೊಡ್ಡವರನ್ನು ಕಾಡುವಂತೆ ಮಾಡುತ್ತವೆ. ಉಳಿದಂತೆ ಮಕ್ಕಳ ಮನಸ್ಸು ಎಷ್ಟು ನಿರ್ಮಲವಾಗಿರುತ್ತದೆ ಅಂದರೆ ಅದಕ್ಕೆಂದೇ ನಮ್ಮ ಹಿರಿಯರು ಮಕ್ಕಳನ್ನೂ ದೇವರ ಸ್ವರೂಪ ಅಂತ ಕರೆದದ್ದು. ಕೂಡು ಕುಟುಂಬ ವ್ಯವಸ್ಥೆ ಇದ್ದಷ್ಟೂ ದಿನ ಮಕ್ಕಳು ಪಂಕ್ತಿಭೇದವಿಲ್ಲದೇ, ತರತಮಗಳ ಸೋಕಿಲ್ಲದೇ ಉಂಡು ಆಡಿ ನಲಿಯುತ್ತಿದ್ದವು. ಅಜ್ಜನೋ, ಅಜ್ಜಿಯೋ. ದೊಡ್ಡಮ್ಮ, ದೊಡ್ಡಪ್ಪನೋ ನೀತಿ ಕತೆಗಳನ್ನು ಹೇಳುವ ಮೂಲಕ ಒಳಿತು ಕೆಡುಕಗಳ ವ್ಯತ್ಯಾಸವನ್ನು ಮನದಟ್ಟು ಮಾಡಿ ಮಗುವಿನ ಮನಸ್ಸಿನಲ್ಲಿ ನೈತಿಕತೆಯ ಬೀಜನೆಟ್ಟು ಬೆಳಸಿರುತ್ತಿದ್ದರು. ಅವರು ಕಲಿಸುವ ಬಾಯಿಪಾಠ, ಮಗ್ಗಿ, ಶ್ಲೋಕ, ಅಮರಗಳಿಗೆ ಕಾದು ಉಳಿದ ಮಕ್ಕಳೊಂದಿಗೆ ಬೆರೆತು ಆಡಿ ನಲಿದು ಬಾಲ್ಯವೆಂಬ ಬೆಲ್ಲದ ರುಚಿ ನಿರಂತರ ಉಳಿಯುವಂತೆ ಅದನ್ನು ಸವಿಯುತ್ತಿದ್ದವು. ನಮ್ಮ ಜನಪದರು ಸೃಷ್ಟಿಸಿರುವ ಕತೆ ಹಾಡುಗಳಲ್ಲಂತೂ ಮಕ್ಕಳಿಗೆ ಇಷ್ಟವಾಗುವ ಗಿಡ,ಮರ,ಪಶು, ಪಕ್ಷಿಗಳೂ ಮಾತನಾಡಿ ಬದುಕಿನ ಸೂಕ್ಷ್ಮಗಳನ್ನು ಮಗುವಿನ ಮನಸ್ಸಿನೊಳಗಿಳಿಸಿ ಆ ಮಗು ತನ್ನ ಭಾವೀ ಜೀವನ ರೂಪಿಸಿಕೊಳ್ಳುವ ನಿಜದ ಯತ್ನವಾಗಿ ಇರುತ್ತಿತ್ತು. ಊರೊಳಗಿನ ಉತ್ಸವ, ಜಾತ್ರೆ, ಹಬ್ಬಗಳಲ್ಲಿ ಮನೆಯವರೆಲ್ಲ ಭಾಗವಹಿಸುವ ಮೂಲಕ ಮನುಷ್ಯ ಸಂಬಂಧಗಳ ಅನಾವರಣವನ್ನು ತಮಗೆ ಗೊತ್ತಿಲ್ಲದೇ ಮಕ್ಕಳು ಅರಿಯುತ್ತಿದ್ದವು. ಶಾಲೆ ಮುಗಿದ ಮೇಲೆ ದೊಡ್ಡಬಯಲಲ್ಲಿ ಚಿನ್ನಿದಾಂಡು, ಕಬಡ್ಡಿಗಳನ್ನಾಡಿ ಊರ ಹೊರಗಿನ ತೋಪಿನಲ್ಲಿ ಮರಕೋತಿ ಆಟವಾಡಿ, ರಜಾ ದಿನಗಳಲ್ಲಿ ಹಳ್ಳದಲ್ಲಿ ಈಜಿ ದೈಹಿಕ ಸಾಮರ್ಥ್ಯದ ಜೊತೆಜೊತೆಗೇ ತಾರ್ಕಿಕ ಪ್ರಜ್ಞೆಯನ್ನೂ ಹಿಂದಿನ ಕಾಲದ ಮಕ್ಕಳು ಪಡೆಯುತ್ತಿದ್ದರು.
ಮನೆತುಂಬ ಮಕ್ಕಳಿರುವ ಕಾಲ ಈಗ ಬದಲಾಗಿದೆ. ವಿಘಟಿತ ಕುಟುಂಬ ವ್ಯವಸ್ಥೆ ಎಲ್ಲ ಮನೆ ಊರುಗಳಲ್ಲೂ ವಿಸ್ತರಿಸಿ ನಗರೀಕರಣದ ನೆರಳು ಮನೆಗೊಂದೇ ಮಗುವೆಂಬ ಸೂತ್ರವನ್ನು ಪಠಿಸಿ,ಹೆತ್ತವರ ಹಣೆಯಲ್ಲಿ ಮಗುವಿನ ಭವಿಷ್ಯದ ಚಿಂತೆಯ ಗೆರೆಯನ್ನು ಢಾಳಾಗಿಸಿದೆ. ಬಾಲ್ಯದ ಆಟೋಟಗಳಿಗಿಂತಲೂ ಅರಿವಿರದ ಭಾಷೆಯ ರೈಮುಗಳನ್ನು ಮನಸ್ಸಿಗೊಗ್ಗದ ಶೈಲಿಯಲ್ಲಿ ಹಾಡಿಸುತ್ತ, ಕೃತಕತೆಯನ್ನೆ ಸಹಜವೆಂದುಕೊಳ್ಳುವ ಹಾಗೆ ಬೆಳಸುತ್ತ ನೈಸರ್ಗಿಕವಾಗಿ ಬಿಡುಗಡೆಯಾಗಬೇಕಿರುವ ಮುಗ್ಧತೆಯ ಆವರಣಕ್ಕೆ ಕೌಶಲ್ಯದ ಹೆಸರಿನ ಮೇಲಾಟಗಳು ದಾಳಿ ಇಟ್ಟಿವೆ. ಸಹಜವಾದ ಬೇಕು ಬೇಡಗಳಿಗಿಂತಲೂ ಒತ್ತಾಯದ ಹೇರಿಕೆಗಳು ಮಕ್ಕಳ ಮುಗ್ಧತೆಯನ್ನೇ ಆಪೋಷನ ತೆಗೆದುಕೊಂಡಿವೆ. ‘ಇಂದಿನ ಮಕ್ಕಳೇ ನಾಳಿನ ಪ್ರಜೆಗಳು’ ಎಂದು ಹೇಳುತ್ತಲೇ ಆ ಮಕ್ಕಳನ್ನು ಇರುಳು ಕಂಡ ಬಾವಿಗೆ ಹಗಲಲ್ಲಿ ನೂಕುವ ಕಾಯಕ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ವ್ಯವಸ್ಥಿತವಾಗಿ ನಡೆಯುತ್ತಿದೆ, ಅಷ್ಟೆ.
ಮಕ್ಕಳ ಶಿಕ್ಷಣ, ಅವರ ಹಕ್ಕುಗಳ ಕುರಿತಂತೆ ಇರುವ ನಮ್ಮ ಕಾನೂನುಗಳು, ಕಡ್ಡಾಯ ಶಿಕ್ಷಣದ ಮಹತ್ವ ಇತ್ಯಾದಿ ಬಹುಚರ್ಚಿತ ವಿಷಯಗಳನ್ನು ಬಿಟ್ಟು ಮೇಲ್ನೋಟಕ್ಕೆ ಸಿಗಬಹುದಾದ ಮಕ್ಕಳ ಸಾಹಿತ್ಯ ಮತ್ತು ಮಕ್ಕಳ ಸಿನಿಮಾಗಳನ್ನು ಕುರಿತು ಯೋಚಿಸಹೋದರೆ ಅಲ್ಲೂ ಇದೇ ಕತೆಯೇ! ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಸಾಕಷ್ಟು ವಿಪುಲವಾಗಿಯೇ ಇದೆ. ಅನ್ಯದೇಶಗಳಿಂದ ಬಂದು ನಮ್ಮ ಮಕ್ಕಳ ಮನಸ್ಸಲ್ಲಿ ಕೂತುಬಿಟ್ಟಿರುವ ಡಾನ್ ಕ್ವಿಕ್ಸೋಟ, ಅಲೀಸ್ ಇನ್ ವಂಡರ್ ಲ್ಯಾಂಡ್, ಸಿಂಡ್ರೆಲ, ಡಿಸ್ನಿ ವರ್ಲ್ಡ್ನ ಟಾಮ್ ಅಂಡ್ ಜೆರ್ರಿ ಮತ್ತಿತರ ಕತೆಗಳು, ಕಾರ್ಟೂನ್ ನೆಟ್ವರ್ಕಿನ ಬಹುತೇಕ ತರ್ಕಾತೀತ ಸಶೇಷ ಧಾರಾವಾಹಿಗಳಿಗಿಂತಲೂ ಸಶಕ್ತವಾದ ಅವಕ್ಕಿಂತಲೂ ಕುತೂಹಲ ಮತ್ತು ನೈತಿಕತೆಯನ್ನು ಇನ್ನಷ್ಟು ವಿವರವಾಗಿ ಬಗೆಯಬಲ್ಲ ಸಾಹಿತ್ಯ ಕೃತಿಗಳು ನಮ್ಮಲ್ಲೇ ಇವೆ. ಆದರೆ ಅವನ್ನು ನಮ್ಮ ಭಾಷೆಗಿರುವ ಮಾರುಕಟ್ಟೆಯ ಮಿತಿಯಲ್ಲಿ ಪುನರ್ ನಿರ್ಮಿಸುವುದು ಸಾಧ್ಯವಿಲ್ಲವಾಗಿದೆ. ಪಂಚತಂತ್ರದ ಕತೆಗಳು, ರಾಮಾಯಣ ಮಹಾಭಾರತದ ಕತೆಗಳನ್ನು ಈಗಾಗಲೇ ವಿದೇಶೀ ಸಂಸ್ಥೆಗಳು ಪುನಃ ರೂಪಿಸುತ್ತಿರುವುದನ್ನೂ ಮರೆಯಬಾರದು. ಆದರೆ ಇದು ಹೇಳುವಷ್ಟು ಅಥವ ಬರೆಯುವಷ್ಟು ಸುಲಭದ್ದಲ್ಲ. ಏಕೆಂದರೆ ಮಕ್ಕಳ ಬಹುಮುಖ ಬೆಳವಣಿಗೆಗೆ ಅಂದರೆ ಅವರ ಮಾನಸಿಕ, ಬೌದ್ಧಿಕ, ಸಾಮಾಜಿಕ ಹಾಗೂ ಭಾಷಾ ಬೆಳವಣಿಗೆಯ ಸಹಕಾರಿಯಾಗಿಯೂ ಇವನ್ನೆಲ್ಲ ನಾವು ಉಪಯೋಗಿಸಿಕೊಳ್ಳಬೇಕು ಎಂಬ ವಾದ ಈ ಹಂತದಲ್ಲೇ ಹುಟ್ಟುತ್ತದೆ. ಮಕ್ಕಳ ಸಹಜ ಕುತೂಹಲವನ್ನು ತಣಿಸುವವೆನ್ನುವ ಏಕೈಕ ಕಾರಣ ಇಲ್ಲಿ ಸಾಕಾಗುವುದಿಲ್ಲ. ಇಂಥ ವಿಷಯಗಳಲ್ಲಿ ಸಂಶೋಧನೆ ಮತ್ತು ಪ್ರಯೋಗಗಳನ್ನು ನಡೆಸದ ಹೊರತೂ ಇವನ್ನೆಲ್ಲ ಬರಿಯ ಚರ್ಚೆಯ ವಸ್ತುವನ್ನಾಗಿಯಷ್ಟೇ ನಾವು ಪರಿಗಣಿಸಬೇಕು.
ಮಕ್ಕಳ ಮನಸ್ಸಿಗೆ ಮುದ ನೀಡುವ ಸಾಹಿತ್ಯ ಹೇಗಿರಬೇಕು? ಅವರು ಯಾವ ರೀತಿಯ ಸಾಹಿತ್ಯ ಇಷ್ಟಪಡುತ್ತಾರೆ? ಅವರ ಬುದ್ಧಿ ಭಾವನೆಗಳ ಬೆಳವಣಿಗೆಗೆ ಇಂಬು ನೀಡಬಲ್ಲ ವಿಷಯ ವಿವೇಚನೆ ನಮ್ಮ ಸಾಹಿತಿಗಳಿಗಿದೆಯೇ? ಸಾಹಿತ್ಯದ ಯಾವ ಪ್ರಕಾರ ಮಕ್ಕಳಿಗೆ ಖುಷಿ ಕೊಡುತ್ತದೆ? ಇತ್ಯಾದಿ ಪ್ರಶ್ನೆಗಳಿಗೆ ಸಮಂಜಸ ಉತ್ತರಗಳು ನಮಗಿನ್ನೂ ದೊರೆತಿಲ್ಲ. ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವನ್ನೂ ನಾವು ಮಾಡಿಲ್ಲ. ಮುಂದುವರೆದ ದೇಶಗಳಲ್ಲಿ ಜಾರಿಯಲ್ಲಿರುವ ಮಕ್ಕಳ ಕಾನೂನುಗಳನ್ನು, ಅವರ ಹಕ್ಕುಗಳನ್ನೂ ಕೇಳಿ ತಿಳಿದು ಭಯಗೊಂಡಿರುವ ನಾವು ಈ ದೇಶದಲ್ಲಿ ಅಂಥದೊಂದು ಪ್ರಯತ್ನಕ್ಕೆ ಕೈಹಾಕುವ ಎದೆಗಾರಿಕೆ ಇಟ್ಟುಕೊಂಡಿದ್ದೇವೆಯೇ ಎನ್ನುವುದೂ ಇಲ್ಲಿ ಮುಖ್ಯ. ನಮ್ಮಲ್ಲಿ ವಿಪುಲವಾಗಿ ಲಭ್ಯವಿರುವ ನೀತಿ ಬೋಧಕ ಕೃತಿಗಳು ಇಂದಿನ ಮಕ್ಕಳಲ್ಲಿ ನೈತಿಕತೆಯನ್ನು ಉಳಿಸಿ ಬೆಳಸಬಲ್ಲವೇ ಎನ್ನುವುದೂ ಮುಖ್ಯಪ್ರಶ್ನೆ. ವೈಜ್ಞಾನಿಕವಾಗಿ ತುಂಬ ಮುಂದುವರೆದ ಕಾಲದಲ್ಲಿ ಪಾರ್ವತಿಯ ಮೈಯ ಬೆವರಿನಿಂದ ಗಣೇಶ ಹುಟ್ಟಿದ ಅಂತ ಹೇಳಹೋದರೆ ಅವಳೇನು ನಿತ್ಯವೂ ಸ್ನಾನ ಮಾಡುತ್ತಿರಲಿಲ್ಲವಾ ಅನ್ನುವ ಪ್ರಶ್ನೆ ಚಿಣ್ಣರಿಂದ ಹುಟ್ಟುತ್ತದೆ. ರಾಮ ಸೀತೆಯರು ಕಾಡಿಗೆ ಹೋದರು ಅಂದರೆ ಪಿಕ್ನಿಕ್ಗೆ ಹೋದರಾ ಅಂತ ಕೇಳುವ ಮಕ್ಕಳೂ ಇದ್ದಾರೆ. ಬಾಣ ಬಿರುಸುಗಳು, ಗದೆ, ತೋಮರಗಳು, ಗಜಾಶ್ವಗಳು ಅಣುಬಾಂಬಿನ ಕಾಲದಲ್ಲಿ ಓಬಿರಾಯನ ಕಾಲದ ವ್ಯರ್ಥ ಪರಿಕರಗಳಾಗಿ ಕಾಣುತ್ತವೆ. ಇದರ ಜೊತೆಜೊತೆಗೇ ಮಕ್ಕಳ ಸಾಹಸದ ಧಾರಾವಾಹಿಗಳನ್ನು ನೋಡಿ ಅದನ್ನು ಅನುಸರಿಸಲು ಹೋಗಿ ಅಪಾಯ ಎದುರಿಸಿದ ಮಕ್ಕಳೂ ಕಡಿಮೆ ಏನಿಲ್ಲ. ಅಲ್ಲದೇ ಈ ಕಾಲದ ಮಕ್ಕಳು ಓದುವುದಕ್ಕಿಂತಲೂ ನೋಡುವುದನ್ನೇ, ಅನುಸರಿಸುವುದನ್ನೇ ಹೆಚ್ಚು ಇಷ್ಟಪಡುವವರು. ಏಕೆಂದರೆ ಇಂದಿನ ಬಹುತೇಕ ಮಕ್ಕಳು ಕಲಿಯುತ್ತಿರುವುದು ಇಂಗ್ಲಿಷಿನಲ್ಲಿ. ಅವರ ಓದುವ ಸಾಮರ್ಥ್ಯವೇನಾದರೂ ಇದ್ದರೆ ಅದು ಅವರು ಕಲಿಯುತ್ತಿರುವ ಇಂಗ್ಲಿಷಿನಲ್ಲಿ ಮಾತ್ರ. ಮೂರನೆಯ ಭಾಷೆಯನ್ನಾಗಿ ಅವರು ಮಾತೃ ಭಾಷೆ ಕಲಿಯುವುದರಿಂದ ಜೊತೆಗೆ ಇಂಗ್ಲಿಷಿನಲ್ಲಿ ಮಾತನಾಡುವುದು ಬಹುತೇಕ ಶಾಲೆಗಳಲ್ಲಿ ಕಡ್ಡಾಯವೂ ಆಗಿರುವುದರಿಂದ ಈ ಮಕ್ಕಳು ಕನ್ನಡದ ಪತ್ರಿಕೆಗಳಲ್ಲಿ ಪ್ರಕಟವಾಗುವ ಸಾಹಿತ್ಯವನ್ನು ಓದುತ್ತಾರೆನ್ನುವುದು ಬರಿಯ ಊಹೆಯ ಮಾತು.
ಸಂಶೋಧನಾ ಮಾಹಿತಿಯಿಲ್ಲದೇ ಮಕ್ಕಳ ಮನಸ್ಸನ್ನು ಉದ್ದೀಪಿಸಿ ಅವರಿಗೆ ಅಗತ್ಯವಿರುವ ಕಸುವನ್ನು ಕೊಡುತ್ತೇವೆನ್ನುವುದು ಉಢಾಫೆಯೇ ಆಗುತ್ತದೆ. ವಿವಿಧ ಪೇಯಗಳ ಜಾಹೀರಾತುಗಳಲ್ಲಿ ನಟಿಸುವ ಅಮ್ಮಂದಿರಿಗೆ ಮಾತ್ರ ಮಕ್ಕಳ ಅಗತ್ಯ ಗೊತ್ತಿರುವುದು ಈ ಕಾರಣಕ್ಕೇ! ಸೈದ್ಧಾಂತಿಕ ಅಡಿಪಾಯಗಳ ಮನಶಾಸ್ತ್ರೀಯ ಅಧ್ಯಯನ ಮಾತ್ರ ಇಂಥ ಸಮಸ್ಯೆಗಳನ್ನು ನೀಗಬಲ್ಲುದು. ನಾವೀಗ ಬದುಕುತ್ತಿರುವ ಸಮಾಜ, ಸನ್ನಿವೇಶ, ಆರ್ಥಿಕ ಸವಲತ್ತು, ವಿದ್ಯಾಭ್ಯಾಸದ ಮಟ್ಟ, ಅಂಧಶ್ರದ್ಧೆಗಳು, ಜಾತಿಯ ವಿಷಬೀಜಗಳು, ಲಿಂಗ ಭೇದಗಳು, ಮಕ್ಕಳ ಮನಸ್ಸಿಗೆ ನಿಲುಕದ ಹಾಗೆ ಬೆಳಸುತ್ತೇವೆನ್ನುವುದು ಮತ್ತೆ ಉಢಾಫೆಯೇ. ಇನ್ನು ಮಕ್ಕಳ ಆರೋಗ್ಯ ಮತ್ತು ದೈಹಿಕ ಬೆಳವಣಿಗೆಗಳ ಬಗ್ಗೆ ಸಾಕಷ್ಟು ಮಾಹಿತಿ ನಮಗಿದೆ ಎನ್ನುವುದು ಸಮಾಧಾನದ ವಿಚಾರ. ಪೋಲಿಯೋದಂಥ ಪಿಡುಗು, ಸಿಡುಬಿನಂಥ ಮಹಾಮಾರಿಗಳನ್ನು ನಾವು ಎದುರಿಸಿ ಗೆದ್ದಿದ್ದೇವೆ.
ಆದರೆ ಮಕ್ಕಳ ಸಾಹಿತ್ಯವೆನ್ನುವುದು ದೊಡ್ದವರು ಮಕ್ಕಳಿಗೆಂದು ಬರೆದ ಸರಕಾಗೇ ಉಳಿಯುತ್ತಿದೆ. ಮಕ್ಕಳ ಮನಸ್ಸಿಗೆ ಇದು ಖುಷಿಕೊಡುತ್ತದೆ ಎನ್ನುವ ಊಹಾಪೋಹಗಳಲ್ಲೇ ದೊಡ್ಡವರು ಬರೆದೂ ಬರೆದೂ ಪ್ರಕಟಿಸುತ್ತಿದ್ದೇವೆ. ಪ್ರಾಥಮಿಕ ಶಾಲೆಯ ಪಾಠವೊಂದರಲ್ಲಿ ‘ಅವಳು ಕಮಲ ಇವನು ಬಸವ’ ಎಂದು ಲಿಂಗ ತಾರತಮ್ಯವನ್ನು ಮೆರೆಸುವ ನಾವು ‘ಕಮಲಳ ಲಂಗ ಝಳ ಝಳ’ ಎಂದು ಹೇಳಿ ಅವಳನ್ನು ಲಂಗಕ್ಕೇ ಮಿತಿಗೊಳಿಸುತ್ತೇವೆ. ಇನ್ನು ಮಕ್ಕಳಿಗೆಂದೇ ತಯಾರಾಗುವ ಚಲನಚಿತ್ರಗಳು ಮಕ್ಕಳಿಗೇನು ಬೇಕೋ ಅದನ್ನು ಬಿಟ್ಟು ಉಳಿದೆಲ್ಲ ಮಾರುಕಟ್ಟೆಯ ಮಸಾಲೆಗಳನ್ನು ಇಟ್ಟುಕೊಂಡಿರುತ್ತದೆ. ಕೋತಿ, ಹಾವು, ದೈವ ಮಹಿಮೆ ಇಲ್ಲದೇ ನಮ್ಮ ಮಕ್ಕಳ ಚಿತ್ರಗಳು ನಿರ್ಮಾಣವಾಗುವುದಿಲ್ಲ.ಮಕ್ಕಳ ಅಲೋಚನೆಗಳಿಗೆ ಗಗನದಗಲದ ವಿಶ್ವಾಸವನ್ನು ತುಂಬಿ ಅವರ ಮಾನಸಿಕ, ಬೌದ್ಧಿಕ ವಿಸ್ತರಣಕ್ಕೆ ಸಹಕರಿಸಿದ ಚಿತ್ರಗಳು ಬಂದಿರುವುದು ತೀರ ಅಪರೂಪಕ್ಕೆ. ವೈಜ್ಞಾನಿಕವಾಗಿ ತುಂಬ ಮುಂದುವರೆದಿರುವ ಈ ಕಾಲದಲ್ಲಿ ಮೌಢ್ಯ ಮತ್ತು ಅತಿಮಾನುಷ ಶಕ್ತಿಗಳನ್ನು ಕೊಂಡಾಡುವ ಮಕ್ಕಳ ಚಿತ್ರಗಳನ್ನು ಮೊದಲು ನಿಷೇದಿಸಬೇಕಿದೆ. ಬರಿಯ ಮನರಂಜನೆಯೊಂದೇ ಮಕ್ಕಳ ಚಿತ್ರಗಳ ಮುಖ್ಯ ಉದ್ದೇಶವಾಗಬಾರದು. ಮಕ್ಕಳ ಚಿತ್ರಗಳಲ್ಲೂ ನಾಯಕ-ನಾಯಕಿ ಡ್ಯುಯೆಟ್ ಹಾಡುವುದು, ಅವರ ಪ್ರೀತಿಗಾಗಿ ಮಕ್ಕಳು ಸೇತುವೆಯಾಗುವುದು ಮೊದಲು ನಿಲ್ಲಬೇಕು.
ಈಗಲೂ ಪ್ರಸ್ತುತವಾಗುವ ಪಂಜೆಯವರ ಹಲವು ಕವಿತೆಗಳನ್ನು ನಮ್ಮ ಮಕ್ಕಳು ಕಲಿತಿಲ್ಲ ಎನ್ನುವುದರ ಅರಿವು ನಮಗಿಲ್ಲದಿರುವುದೂ ನೆನಪಾಗಬೇಕಿದೆ. ಪ್ರಾಥಮಿಕ ಶಿಕ್ಷಣದ ಪಠ್ಯಕ್ರಮ ನಿರೂಪಿಸುವ ಜವಾಬ್ದಾರಿ ಹೊತ್ತ ಹಲವರು ಶಿಕ್ಷಣ ಕ್ಷೇತ್ರಕ್ಕಿಂತಲೂ ರಾಜಕೀಯ ವರಸೆಗಳನ್ನು ಅರಿತವರಾಗಿರುತ್ತಾರೆ ಎನುವುದನ್ನು ಬಿಡಿಸಿ ಹೇಳಬೇಕಿಲ್ಲ. ಕಾರಂತರು ಪ್ರಾಯೋಗಿಕವಾಗಿ ನಡೆಸಿದ್ದ ಬಾಲವನ, ಕೇಂದ್ರ ಸರ್ಕಾರ ರೂಪಿಸಿರುವ ಜವಾಹರ ನೆಹರು ವಿದ್ಯಾಲಯ, ಸರ್ಕಾರೀ ಶಾಲೆಗಳಲ್ಲಿ ಇರುವ ಪಠ್ಯಕ್ರಮ, ಅಲ್ಲಿ ವಿತರಿಸಲಾಗುತ್ತಿರುವ ಪಠ್ಯ ಪರಿಕರಗಳು,ಸಮವಸ್ತ್ರ ಸಂಹಿತೆ, ನಮ್ಮ ಮುಂದೇ ಇರುವ ಅವಕಾಶಗಳಾಗಿವೆ. ಖಾಸಗಿ ಶಾಲೆಗಳು ಬೋಧನೆಗೆ ಬಳಸುತ್ತಿರುವ ಅಪಾಯಕಾರೀ ಕ್ರಮಗಳನ್ನು, ಮಕ್ಕಳ ಮನಸ್ಸಿನ ಮೇಲೆ ಹೆಚ್ಚುತ್ತಿರುವ ಒತ್ತಡಗಳನ್ನೂ ಗಮನಿಸಬೇಕು. ಧಾರ್ಮಿಕ ಸಂಸ್ಥೆಗಳು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾರ್ಥನೆಯ ಹೆಸರಲ್ಲಿ ಎಳೆಯ ಮನಸ್ಸುಗಳ ಮೇಲೆ ಹೇರಲಾಗುತ್ತಿರುವ ಒತ್ತಡಗಳನ್ನು ನಾವು ಅರಿಯಬೇಕಿದೆ.
ಪ್ರಾಥಮಿಕ ಶಿಕ್ಷಣವನ್ನು ಎಲ್ಲ ಶಾಲೆಗಳಲ್ಲೂ ಏಕ ಸೂತ್ರದಡಿಯಲ್ಲಿ ಕೊಡದಿದ್ದರೆ ನಾವೇ ನಮ್ಮ ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ಸಾಮಾಜಿಕ ವೈರುಧ್ಯವನ್ನು ಕಲಿಸಿಕೊಟ್ಟಂತಾಗುತ್ತದೆ. ಮತ್ತು ಮೆಕಾಲೆಯಿಂದ ಬಳುವಳಿಯಾಗಿ ಬಂದಿರುವ ಗುಮಾಸ್ತೆಗಳನ್ನು ಸೃಷ್ಟಿಸುತ್ತಿರುವ ಶಿಕ್ಷಣ ಕ್ರಮ ಮುಂದುವರಿಕೆಯಾಗಿಯೇ ಉಳಿಯುತ್ತದೆ. ಇದಕ್ಕಿರುವ ಏಕೈಕ ಉಪಾಯವೆಂದರೆ ಪ್ರಾಥಮಿಕ ಶಿಕ್ಷಣವನ್ನು ಮಾತೃ ಭಾಷೆಯಲ್ಲಿ ಕಡ್ಡಾಯ ಮಾಡುವುದು. ಮತ್ತು ಪ್ರಾಥಮಿಕ ಶಿಕ್ಷಣವನ್ನು ಖಾಸಗೀ ಕಬಂಧ ಬಾಹುಗಳಿಂದ ತಪ್ಪಿಸಿ, ಸಾರ್ವಜನಿಕಗೊಳಿಸಿ ಕಡ್ಡಾಯವಾಗಿಸಿ ಅದನ್ನು ಸರ್ಕಾರವೇ ನಿರ್ವಹಿಸುವುದು. ಮಕ್ಕಳಿಗೇನು ಬೇಕೆಂಬುದನ್ನು ಕಪೋಲಕಲ್ಪಿತ ಸಂಗತಿಯನ್ನಾಗಿಸದೇ ವಿಧಿವತ್ತಾದ ಸಂಶೋಧನೆಯಿಂದ ತಿಳಿದುಕೊಳ್ಳಬೇಕಿದೆ. ಆಗ ಮಾತ್ರ ಮಕ್ಕಳ ದಿನಾಚರಣೆಗೆ ಒಂದು ಅರ್ಥ ಬಂದೀತು. ಇಲ್ಲದೇ ಹೋದರೆ ಅದೂ ಸರ್ಕಾರ ನಡೆಸುವ ಇತರ ಉತ್ಸವಗಳ ಹಾಗೇ ನಮ್ಮ ರಾಷ್ಟ್ರೀಯ ಹಬ್ಬಗಳ ಹಾಗೇ ತೋರುಗಾಣಿಕೆಯ ಸಂಕೇತವಾದೀತು, ಅಷ್ಟೆ.
1 ಕಾಮೆಂಟ್:
ಸರ್ ನಿಮ್ಮ ಕವಿತೆಗಳು,ಬರಹಗಳು ತುಂಬ ಇಷ್ಟವಾಗುತ್ತವೆ.
ಕಾಮೆಂಟ್ ಪೋಸ್ಟ್ ಮಾಡಿ