ಒಟ್ಟು ಪುಟವೀಕ್ಷಣೆಗಳು

ಸೋಮವಾರ, ಜೂನ್ 27, 2011

ಅಂತರಂಗದ ಅಭ್ಯಾಸಕ್ಕೊಂದು ಪುಟ್ಟ ಟಿಪ್ಪಣಿ - ರಾಧಿಕಾ ನಡಹಳ್ಳಿ-ತುಂಬಿಕೊಳ್ಳುವ ತವಕ

ಅಂತರಂಗದ ಅಭ್ಯಾಸಕ್ಕೊಂದು ಪುಟ್ಟ ಟಿಪ್ಪಣಿ.
ಸಮಕಾಲೀನ ಕನ್ನಡ ಕಾವ್ಯ ಕ್ರಿಯೆಯು ಇಷ್ಟೂ ದಿನ ಹರಿದು ಬಂದ ಕಾವ್ಯ ಪರಂಪರೆಯನ್ನೇ ಹೊರಳು ಹಾದಿಗೆ ತಂದು ನಿಲ್ಲಿಸಿರುವ ಸಂದರ್ಭವಿದು. ಕಾವ್ಯ ಕ್ರಿಯೆಗೆ ಪರಂಪರೆಯ ಅರಿವು ಮತ್ತು ಅನುಭವಗಳ ಪಾರಮ್ಯ ಬೇಕೆನ್ನುವ ಮೂಲ ಮಂತ್ರವನ್ನೇ ಧಿಕ್ಕರಿಸಿ ನುಡಿದುದೆಲ್ಲವನ್ನೂ ಕಾವ್ಯ ಸಂಭವವೆಂದು ತಮಗೊಲಿದ ಮಿತಿಯ ಐಕಾನುಗಳಲ್ಲಿ ಪರ್ಯಾಲೋಚಿಸುತ್ತಿರುವ ಆಧುನಿಕ ಕವಿತೆಗಳ ವಿಪುಲ ಸಾಮ್ರಾಜ್ಯ ಮುದ್ರಣಮಾಧ್ಯಮವನ್ನು ಮೀರಿ ನಿಂತು, ಅಂತರ್ಜಾಲದ ಸಾಮಾಜಿಕ ತಾಣಗಳಲ್ಲಿ, ವೆಬ್ ಪುಟಗಳಲ್ಲಿ, ಹಾಗೇ ಅನ್ನಿಸಿದ್ದೆಲ್ಲವನ್ನೂ ಬರೆದು ಬರೆದ ತಕ್ಷಣವೇ ಪ್ರಕಟಿಸಿಯೂ ಬಿಡುವ ಅವಕಾಶವಿರುವ ಬ್ಲಾಗುಗಳಲ್ಲಿ ತನ್ನ ವಿಸ್ತರತೆಯನ್ನು ಮೆರೆಯುತ್ತಿದೆ.

ಕಾವ್ಯದ ವಿಪುಲ ಬೆಳೆಯಿರುವ ಹಸಿರುಕ್ರಾಂತಿಯಂತೇ ತೋರುವ ಕಾವ್ಯಕ್ರಾಂತಿಯ ಈ ದಿನಗಳಲ್ಲಿ ಯುವ ಬರಹಗಾರರ ಮೊದಲ ಪುಸ್ತಕಕ್ಕೆ ಪ್ರೋತ್ಸಾಹ ಧನ ನೀಡಿ ಪುಸ್ತಕ ಪ್ರಕಟಿಸುವುದಕ್ಕೆ ನೆರವಾಗುತ್ತಿರುವ ಪುಸ್ತಕ ಪ್ರಾಧಿಕಾರದ ಯೋಜನೆಯಡಿ ರಾಧಿಕಾ ಅವರ ಈ ಸಂಕಲನ ‘ತುಂಬಿಕೊಳ್ಳುವ ತವಕ’ ಪ್ರಕಟವಾಗುತ್ತಿದೆ. ರೂಪಕಗಳಿಗೂ ಪದ್ಯದ ಶೀರ್ಷಿಕೆಗಳಿಗೂ ಬರ ಬಂದಿರುವ ಕಾಲದಲ್ಲಿ ಚಿಂತನೆಗೆ ಹಚ್ಚಬಲ್ಲ ತಲೆಬರಹ ನೀಡಿರುವ ಕವಿಗೆ ಅಭಿನಂದನೆ.

ಹೊಸ ಕವಿಯ ಮೊದಲ ಸಂಕಲನದ ಸಮಸ್ಯೆಗಳು ಸಂಕೀರ್ಣವಾಗಿರುತ್ತವೆ. ಎಷ್ಟು ಕವಿತೆಗಳನ್ನು ಸೇರಿಸಬೇಕೆನ್ನುವುದರಿಂದ ಹಿಡಿದು ಅವುಗಳ ಅನುಕ್ರಮಣಿಕೆಯ ಕ್ರಮ, ಪ್ರಕಾಶಕರ ಜೊತೆ ಮಾಡಿಕೊಳ್ಳಲೇ ಬೇಕಾದ ಒಡಂಬಡಿಕೆಗಳು, ಪ್ರಕಟಣೆಯ ಹಿಂದಿನ ಹಲವು ಹಂತಗಳನ್ನು ಸುಸೂತ್ರವಾಗಿ ನಿವಾರಿಸಿಕೊಳ್ಳುವ ಜಾಣತನ-ಇತ್ಯಾದಿ, ಇತ್ಯಾದಿ. ಅದೃಷ್ಟಕ್ಕೆ ಈ ಕವಿಯ ಪ್ರಸ್ತುತ ಸಂಕಲನದಲ್ಲಿ ಕಡಿಮೆ ಸಂಖ್ಯೆಯಲ್ಲಿ ಕವಿತೆಗಳಿರುವುದು, ‘ಸಂಚಯ’ ಇದನ್ನು ಪ್ರಕಟಿಸುತ್ತಿರುವುದು ಕವಿಯ ಕಾವ್ಯ ಪ್ರವೇಶದ ಹಾದಿಯನ್ನು ಸುಗಮಗೊಳಿಸಿವೆ. ಪುಸ್ತಕ ಪ್ರಕಟನೆಯ ಹಿಂದಿನ ಕರಾಳ ಹಸ್ತಗಳ ಹಿಡಿತದಿಂದಲೂ ಅವರು ಪಾರಾಗಿದ್ದಾರೆ.

ಒಬ್ಬ ಕವಿ ತನ್ನ ಕಾವ್ಯ ಸೃಷ್ಟಿಗೆ ತನ್ನದೇ ಆದ ಮನೋಧರ್ಮವೊಂದನ್ನು ಸ್ಥಾಪಿಸಿಕೊಂಡಿರುತ್ತಾನೆ ಮತ್ತು ಸ್ಥಾಪಿಸಿಕೊಂಡಿರಲೇ ಬೇಕು. ಬದುಕಿನಲ್ಲಿ ನಿತ್ಯ ಕಾಡುತ್ತಲೇ ಇರುವ ಮೂಲಭೂತ ಸಮಸ್ಯೆಗಳಿಗೆ ಅವನು ನೀಡುವ ಪ್ರತಿಕ್ರಿಯೆ ಮತ್ತು ಅಂಥ ಸಮಸ್ಯೆಗಳು ಆ ಕವಿಯ ಭಾವಕೋಶದ ಮೇಲೆ ಕೆತ್ತಿದ ಸಾಮಾಜಿಕ ಮತ್ತು ಭಾವನಾತ್ಮಕ ಸ್ಥಿತ್ಯಂತರಗಳು ಅವನ ಕಾವ್ಯ ಕ್ರಿಯೆಗೆ ಪುಷ್ಟಿ ನೀಡುತ್ತವೆ. ವರ್ತಮಾನದ ಸಂಗತಿಗಳಿಗೆ ತಟ್ಟನೆ ನೀಡಿ ಬಿಡುವ ಪ್ರತಿಕ್ರಿಯೆಗಳು ಬರಿಯ ಹೇಳಿಕೆಗಳಾಗೇ ಉಳಿದುಬಿಡುತ್ತವೆ. ಹಾಗಾದಾಗ ಅಪ್ಪಟ ಕಾವ್ಯ ಹುಟ್ಟಲಾರದು. ಹೀಗೆ ಲೋಕದ ಸಂಗತಿಗಳಿಗೆ ಭಾವನಾತ್ಮಕ ಪ್ರತಿಕ್ರಿಯೆ ನೀಡುವಲ್ಲಿ ಇರುವ ಅತಿ ಸೂಕ್ಷ್ಮ ಸಂಗತಿಯೇ ಕಾವ್ಯವಾಗಿ ಅರಳುತ್ತದೆ. ಭಾಷೆಯನ್ನು ದುಡಿಸಿಕೊಳ್ಳುವ ಹಲವು ಸಾಧ್ಯತೆಗಳ ಅರಿವಿನ ಜೊತೆಗೇ ಖಾಸಗಿ ಅನುಭವವನ್ನು ಪರಂಪರೆಯ ತಟ್ಟೆಯಲ್ಲಿಟ್ಟು ತೂಗಿ ನೋಡುವ ವ್ಯವಧಾನವೂ ಕವಿಗೆ ಇರಬೇಕಾಗುತ್ತದೆ. ನಮ್ಮ ಅನೇಕ ಯುವ ಕವಿಗಳಿಗೆ ಈ ತಾಳ್ಮೆ ಮತ್ತು ಸಂಯಮಗಳು ಇಲ್ಲದಿರುವುದರಿಂದಲೇ ಅವರಿಗೆ ಆ ಕ್ಷಣದಲ್ಲಿ ಅನ್ನಿಸಿದ್ದನ್ನೂ ಓದುಗರೂ ಕಾವ್ಯವೆಂದು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಒದಗಿ ಬಿಟ್ಟಿದೆ. ಪ್ರಸ್ತುತ ಸಂಕಲನದಲ್ಲಿ ‘ನಾನು’ ಅನ್ನುವ ಆತ್ಮ ಪ್ರತ್ಯಯದಲ್ಲೇ ಬದುಕಿನ ವಿವಿಧ ಮಗ್ಗುಲಗಳನ್ನು ವಿಶಿಷ್ಟವಾಗಿ ಮತ್ತು ಪ್ರತಿರಮ್ಯತೆಯ ಸ್ಥಾಯಿಯಲ್ಲೇ ಹಿಡಿದಿರುವ ರಾಧಿಕಾ ನಡಹಳ್ಳಿಯವರ ಈ ಸಂಕಲನ ಆಧುನಿಕ ಬಿಕ್ಕಟ್ಟುಗಳಿಂದ ಪಾರಾಗಿದೆಯೆಂದು ಧೈರ್ಯವಾಗಿ ಹೇಳಬಹುದು.

ಚಳಿಗಾಲ ಕವಿತೆ
ಕೆಂಡದ ನೆನಪ ಅಗ್ಗಿಷ್ಟಿಕೆಯ ಮುಂದೆ
ಬಿಸಿ ನೆನಪ ಹೊದ್ದು ಕೈ ಉಜ್ಜುತ್ತ ಕೂತಿದೆ
ಅಗ್ಗಿಷ್ಟಿಕೆಯ ಕೆಂಡದ ಬಿಸಿಯ ತನ್ನೊಳಗೂ
ಆವಾಹಿಸಿಕೊಳ್ಳಲು ಸಜ್ಜಾಗಿದೆ (ಸಂಕೇತ)

‘ಕವಿತೆ’ ಎಂದರೆ ಯಾವುದೆನ್ನುವ ನಿತ್ಯನೂತನ ಪ್ರಶ್ನೆ ಇವರ ಈ ಸಂಕಲನ್ದುದ್ದಕ್ಕೂ ಚಾಚಿಕೊಂಡಿದೆ. ವ್ಯಾಖ್ಯಾನ ಕವಿಯ ಕೆಲಸವಲ್ಲ. ಅದು ಓದುಗನ ಹಕ್ಕು. ಬರಿಯ ಹೇಳಿಕೆಗಳಾಗದ ಇಂಥ ಸಾಲುಗಳು ಅರ್ಥದ ಸಮುದ್ರದಲ್ಲಿ ಎದ್ದೆದ್ದು ಹಾರುವ ಅಲೆಗಳಂತೆ ಮೊದಲ ಓದಿನಲ್ಲೇ ವಿಸ್ಮಯಗೊಳಿಸುತ್ತವೆ, ತನ್ಮಯಗೊಳಿಸುತ್ತವೆ.

ಮೌನದುರಿಯ ಮಾತಿನಲಾರಿಸಬಹುದೇ
ಮಾತಿನುರಿಯ ಮೌನದಲಿ ಮರೆಸಬಹುದೇ
ಮಾತ ಮರೆಸಲು ಮೌನದ ಮೊರೆಯೇ
ಮೌನ ಮುಗಿಸಲು ಮಾತಿನ ಹೊಳೆಯೇ (ವ್ಯತ್ಯಾಸ)

ಶಬ್ದ ಮತ್ತು ಅದರೊಳಗಿನ ಲಯದ ಹದವರಿತ ಮನಸ್ಸು, ಆಶಯ ಮತ್ತು ಆಕೃತಿಗಳ ಅನನ್ಯ ಸಂಯೋಜನೆಯನ್ನು ನಿರ್ಮಿಸಬಲ್ಲುದು. ಹೀಗಾದಾಗಲೇ ಲಯ ವಿನ್ಯಾಸ ತನಗೆ ತಾನೇ ಏರ್ಪಡುತ್ತದೆ. ಈ ಕಾರಣಕ್ಕೆ ಇಲ್ಲಿನ ಬಹುತೇಕ ಪದ್ಯಗಳು ನಮ್ಮೊಳಗನ್ನು ಬೆಳಗುತ್ತವೆ.

ಇರುಳು ಅರ್ಧ ಕಳೆದಿದೆ
ಕೆಲ ತಾಸಿಗೆ ಹೊಸ ಬೆಳಕಿದೆ
ಎದೆಯೊಳಗಿನ್ನೂ ಕತ್ತಲಿದೆ
ನೀ ಬಂದ ಮೇಲಷ್ಟೇ ಬೆಳಗಲಿದೆ (ಪ್ರಥಮ)

ಎನ್ನುವುದು ಮೊದಲ ಓದಿಗೆ ಬರಿಯ ಅಂತ್ಯ ಪ್ರಾಸದ ಸರ್ಕಸ್ಸಿನಂತೆ ಕಂಡರೂ ಮರು ಓದಿಗೆ ಕವಿಯು ‘ಪ್ರಥಮ’ ಅನ್ನುವುದನ್ನು ಸಂಖ್ಯಾಸೂಚಕವಾಗಿ ಬಳಸಿದ್ದಾರೋ, ಪುರುಷ ವಾಚಕವಾಗಿ ಬಳಸಿದ್ದಾರೋ, ಅಥವ ಶ್ರೇಣೀಕರಣದ ವ್ಯಂಗ್ಯವಾಗಿ ಬಳಸಿದ್ದಾರೋ ಎನ್ನುವ ಕುತೂಹಲ ಹುಟ್ಟುತ್ತದೆ. ಪ್ರಯೋಗಗಳೇ ಕಡಿಮೆಯಾಗುತ್ತಿರುವ ಕಾಲದಲ್ಲಿ ಇದೂ ಉಚಿತವೇ!

ಅವನುಸಿರು ಒಮ್ಮೆಯೂ
ಸುಳಿಯದ ಗಾಳಿಯಲ್ಲೂ
ಅದೇನೋ ಗಂಧ ತೇಲಿದಂತಾಗಿ
ಹೃದಯ ಬಡಿತ ಏರಿ
ಕೊಂಚ ಬೆವರಿದಳು (ತಿಳಿ)

ಹರೆಯದ ಪುಳಕಗಳನ್ನು ಸಮರ್ಥವಾಗಿ ತೆರೆದಿಡುವ ಈ ಸಾಲುಗಳು ಹೃದಯ ಬಡಿತ ಏರಿ/ ಕೊಂಚ ಬೆವರಿದಳು ಅನ್ನುವುದು ಆಧುನಿಕ ಮನೋಭಾವದವರಿಗೆ ವಿಶಿಷ್ಠವೆನ್ನಿಸದಿದ್ದರೂ _ ಏಕೆಂದರೆ ಆಧುನಿಕ ಬದುಕು ಬಗೆಯುತ್ತಿರುವ ಜೀವನ ಕ್ರಮದಲ್ಲಿ ಅಮೂರ್ತ ಭಾವನೆಗಳಿಗಿಂತಲೂ ಮೂರ್ತ ಅನುಭವದ್ದೇ ಮೇಲುಗೈಯ್ಯಾಗಿರುವ ಕಾರಣ- ಒಳ್ಳೆಯ ಸಾಲುಗಳಾಗಿ ಕಾಣುತ್ತವೆ. ಆದರೂ ಪದ್ಯ ಮುಂದುವರೆಸಿದ ಕವಿ

ಬಣ್ಣ ತಿಳಿಯದ ಕಣ್ಣ ಕುರಿತು
ಕನಸ ಕಟ್ಟದಿದ್ದರೂ
ಇಂದಿನ ಮನಸ ಖುಷಿಯ
ನೆನಪಿಗೊಂದು ಕಾವ್ಯ ಬರೆದಿಟ್ಟಳು (ತಿಳಿ)

ಅನ್ನುವುದು ವ್ಯರ್ಥ ಮುಂದುವರೆಸಿದ ಸಾಲುಗಳಾಗಿ ತೋರುತ್ತವೆ. ಅಮೂರ್ತವಾಗಿ ಹೊಳೆದುದನ್ನು ಮೂರ್ತವಾಗಿ ತೋರಿಸಲೇಬೇಕೆನ್ನುವ ಹಟ ಕಾವ್ಯವಾಗುವುದಿಲ್ಲ ಎನ್ನುವ ಅರಿವು ಕವಿಗೆ ಹುಟ್ಟಬೇಕು.

ಅರರೇ ಇಲ್ಲೇ ಬಾಗಿಲಲ್ಲೇ ನಿಲ್ಲಿಸಿ ಏನಿದು ಯೋಚನೆ
ಹೋಗು ಒಳಗೆ- ಇದೋ ಬಂದೆ
ಇಟ್ತ ಚುಕ್ಕೆಯ ಎಳೆ ಸೇರಿಸಿ
ಅಮ್ಮಾ ನೋಡಲ್ಲಿ ಯಾರು ಬಂದರು?! (ಎಳೆ)

ಎಲ್ಲೆಲ್ಲೋ ಬಿಡಿಸಿಟ್ಟಿರುವ ಚುಕ್ಕೆಗಳನ್ನು ಸೇರಿಸಿ ರಂಗವಲ್ಲಿ ಅರಳಿಸುವ ಹಾಗೇ ಬದುಕಿನ ಚುಕ್ಕೆಗಳಾಗಿರುವ ನಮ್ಮೊಳಗನ್ನೂ ಸಂಬಂಧದ ಎಳೆ ಸೇರಿಸಿ ಜೋಡಿಸಬೇಕಿದೆ. ಇಂಥ ಹಂಬಲ ಈ ಕವಿಗಿದೆ. ಸಂಬಂಧಗಳನ್ನೇ ನಿರಾಕರಿಸುವ ‘ಸ್ಟೇ ಟುಗೆದರ್’ ಕಾಲದಲ್ಲಿ ಇದೂ ಅಪರೂಪವೇ.

ತಲ್ಲಣಗೊಳಿಸಿದ ಅನುಭವ
ಒಳಗಿದ್ದರೆ ಕ್ಷಣ ಕ್ಷಣ
ಅಣು ಅಣು ತಲ್ಲಣ
ಹೊರಬಂದ ಕ್ಷಣ ನಿರಾಳ
ಮರುಕ್ಷಣ ಅನುಮಾನ
ಪ್ರಶ್ನೆಗಳ ಆಕ್ರಮಣ (ಬರೆ)

ಕಬ್ಬಿಣದ ಸಲಾಕೆಯನ್ನು ನಿಗಿ ನಿಗಿ ಬೆಂಕಿಯಲ್ಲಿ ಕಾಯಿಸಿ ಮೈ ಸುಡುವ ‘ಬರೆ’ಯ ಹಾಗೇ ಬರೆಯುವುದು ಕೂಡ ಮನಸ್ಸನ್ನು ಸುಟ್ಟು ಸುಟ್ಟು ಶೋಧಿಸಬೇಕಾದದ್ದು. ಬರೆ ಎನ್ನುವ ಪದವೇ ಅನುಭವದ ಅರ್ಥಕೋಶದಿಂದ ಕಾಣೆಯಾಗುತ್ತಿರುವ ದಿನಗಳಲ್ಲಿ ಆ ಶಬ್ದವನ್ನೇ ಶಬ್ದ ಗಾರುಡಿಯನ್ನಾಗಿಸಿಕೊಂಡಿರುವ ಕ್ರಮ ಅವರ ತಕ್ಕಮಟ್ಟಿನ ಸಾಧನೆಯ ಕುರುಹಾಗಿ ಕಾಣುತ್ತದೆ.

ಹಗಲೆಲ್ಲ ಕವಿತೆ ಧ್ಯಾನ
ಇರುಳು ಅದರದೇ ಸನ್ನಿಧಾನ (ಪಾಠ)

ಕವಿತೆಯನ್ನು ಮತ್ತು ಕವಿತೆ ಹುಟ್ಟುವ ರೀತಿಯನ್ನೂ ಈ ಕವಿ ತಮ್ಮ ಹಲವು ರಚನೆಗಳಲ್ಲಿ ಚಿಂತಿಸಿದ್ದಾರೆ. ಚಿಂತನೆಯ ಲವಲೇಷವೂ ಇರದ ದುರ್ಭರ ದಿನಗಳಲ್ಲಿ ಈಕೆಯ ಕಾವ್ಯ ಕನ್ನಿಕೆ ನಡೆಯುತ್ತಿರುವುದೂ ಸೋಜಿಗವೆನ್ನಿಸುತ್ತದೆ.

ನಿನ್ನ ಕೊರಳ ಮೌನದ ನಕಲಿ
ಆಭರಣ ಕಳಚಿ ನಿಲ್ಲು
ಇಲ್ಲಿ ಸಂಭ್ರಮದಿಂದ ಕಾದಿದೆ
ಅಸಲಿ ಮಾತಿನ ಮುತ್ತಿನ ಹಾರ (ಹಾರದ ನಿರೀಕ್ಷೆ)

ಅನ್ನುವಲ್ಲಿ ಕೂಡ ‘ಹಾರದ ನಿರೀಕ್ಷೆ’ ಎನ್ನುವುದು ಕೊರಳಿಗೆ ಹಾಕುವ ಹಾರವೋ ಅಥವ ಹಾಗೇ ಹಗುರಕ್ಕೆ ಹಾರದೇ ಭದ್ರವಾಗಿ ನಿಲ್ಲುವ ನಿರೀಕ್ಷೆಯೇ ಎನ್ನುವ ಪರಿ ಕೂಡ ಓದುಗನ ವಿಸ್ತರಣೆಗೆ ಬಿಟ್ಟ ವಿಚಾರ.

ಇಷ್ಟೆಲ್ಲ ಹೇಳಿದ ಮಾತ್ರಕ್ಕೆ ಈ ಸಂಕಲನದ ಉಳಿದ ಪದ್ಯಗಳಿಗೂ ಈ ಮಾತು ಅನ್ವಯಿಸುತ್ತದೆ ಎನ್ನುವಂತಿಲ್ಲ. ಏಕೆಂದರೆ ಬರಿಯ ನಿರೀಕ್ಷೆಗಳು, ಕನಸುಗಳು, ಹೇಳಿಕೆಗಳನ್ನು ಕೂಡ ಪದ್ಯವಾಗಿಸುವ ಧಾರಾಳ ವಾಚಾಳಿತನ ಉಳಿದ ಹಲವು ಪದ್ಯಗಲಲ್ಲಿ ಕಾಣುತ್ತದೆ. ಒಂದು ಸಂಕಲನವೆಂದರೆ ಗಟ್ಟಿ ಮತ್ತು ಜೊಳ್ಳು ಕಾಳುಗಳ ಮಿಶ್ರಣ. ಗಟ್ಟಿಕಾಳುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಜೊಳ್ಳು ಕಾಳುಗಳು ಕಡಿಮೆ ಇದ್ದರೆ ಓದುಗ ಬದುಕುತ್ತಾನೆ. ಇಲ್ಲಿ ಜೊಳ್ಳು ಕಾಳುಗಳು ವಿಪರೀತಾವಾಗದೇ ಇರುವುದು ಸಮಾಧಾನದ ಅಂಶ.

ಸ್ವಮಗ್ನ ಸ್ಥಿತಿಗಳಲ್ಲಿ ಅನ್ನಿಸಿದ್ದನ್ನು ಕಾವ್ಯವೆನ್ನುವ ಆಧುನಿಕ ಕಾಲದಲ್ಲಿ ಹೃದಯೊಳಕ್ಕೂ ಇಳಿಯುವ ಸಾರ್ಥಕ ಸಾಲುಗಳನ್ನು ನೀಡಿರುವ ಕವಿಗೆ ಅಭಿನಂದನೆ ಸಲ್ಲಿಸುತ್ತಲೇ ಅವರು ಕನ್ನಡ ಕಾವ್ಯ ಪರಂಪರೆಯೊಂದಿಗೆ ತಮ್ಮ ಪುಟ್ಟ ಹೆಜ್ಜೆಗಳನ್ನೂ ಸೇರಿಸಬೇಕೆನ್ನುವ ತವಕವಿರುವುದನ್ನು ಗುರುತಿಸಿದ್ದೇನೆ. ಅದಕ್ಕೆ ತಯಾರಿಯಾಗಿ ಈಗಾಗಲೇ ತನಗೆ ದಕ್ಕಿರುವ ಸಂಗತಿಗಳಾಚೆಗಿನ ದಕ್ಕದ ಸಂಗತಿಗಳಿಗೂ ಕವಿ ಕಣ್ಣು ಕೈ ಕಿವಿಗಳನ್ನು ಚಾಚಬೇಕಿದೆ. ದೀರ್ಘ ಪರಂಪರೆಯ ಸವಿಸ್ತಾರ ಆಲಾಪಗಳನ್ನು ಅಭ್ಯಸಿಸುತ್ತಲೇ ಕಾಲಕ್ಕೆ ತಕ್ಕುದಾದ ಹ್ರಸ್ವ ಸ್ವರ ಪ್ರಸ್ತಾರವನ್ನೂ ಈಕೆ ದಕ್ಕಿಸಿಕೊಳ್ಳಲಿ ಎನ್ನುವ ಆಶಯದ ಜೊತೆಗೇ ನೀವೂ ಪದ್ಯಗಳನ್ನು ನಿಮ್ಮದಾಗಿಸಿಕೊಳ್ಳಿ ಎಂದು ಬಿನ್ನವಿಸಿಕೊಳ್ಳುತ್ತಾ ಸ್ನೇಹದ ಹೆಸರಲ್ಲಿ ಇಂಥ ಅಪ್ಪಟ ಜವಾಬ್ದಾರಿ ನೀಡಿದ ಪ್ರಕಾಶಕ ಮಿತ್ರ ಶ್ರೀ ಡಿ.ವಿ.ಪ್ರಹ್ಲಾದರನ್ನೂ ನೆನೆಯುತ್ತೇನೆ. ನಮಸ್ಕಾರ.




1 ಕಾಮೆಂಟ್‌:

Badarinath Palavalli ಹೇಳಿದರು...

ಒಳ್ಳೆಯ ವಿಮರ್ಷೆಯು ಚಿನ್ನವನ್ನು ಮತ್ತಷ್ಟು ಪುಟಗೊಳಿಸುತ್ತದೆ. ಅಂತೆಯೇ ನಿಮ್ಮ ಈ ಬರಹ ನನಗೆ ರಾಧಿಕಾ ನಡಹಳ್ಳಿಯವರ ಪರಿಚಯ ಮಾಡಿಕೊಟ್ಟು ಉಪಕರಿಸಿತು.

ಸತ್ವವಿರುವ ಬರಹಗಾರ್ತಿ ಈಕೆ.

ತಾವು blog follow option ಇಟ್ಟರೆ, ನನಗೆ ನಿಮ್ಮ ಬರಹಗಳೂ ತಲುಪುತ್ತವೆ ಸಾರ್.

ನನ್ನ ಬ್ಲಾಗಿಗೂ ಸ್ವಾಗತ.
www.badari-poems.blogspot.com