ಒಟ್ಟು ಪುಟವೀಕ್ಷಣೆಗಳು

ಭಾನುವಾರ, ಸೆಪ್ಟೆಂಬರ್ 2, 2012

ಮೇಸ್ಟ್ರುಗಳಿಗೊಂದು ನಮನ‘ಗುರುವಿನ ಗುಲಾಮನಾಗುವವರೆಗೆ ದೊರೆಯದಣ್ಣ ಮುಕುತಿ’- ದಾಸರು ಬರೆದುದನ್ನು ಹಾಡಾಗಿಸಿ  ಬಿತ್ತರಿಸುವ   ಆಕಾಶವಾಣಿಯ ಗೀತಾರಾಧನವನ್ನು ಕೇಳಿದಾಗ ಸೆಪ್ಟೆಂಬರ್ ಐದರ ಶಿಕ್ಷಕರ ದಿನಾಚರಣೆಯ ನೆನಪು ಬರುವುದು! ಗುರುವಿನ ‘ಗುಲಾಮ’ನಾಗಬೇಕೆನ್ನುವುದನ್ನು ತನಗೆ ತೋರಿದ ಹಾಗೆ ಅರ್ಥೈಸಿಕೊಂಡು ಅದನ್ನು ಶೋಷಣೆಯ ಮತ್ತೊಂದು ಮುಖವೆಂದು ವಾದಿಸಿದ ಗೆಳೆಯನ ನೆನಪೂ ಜೊತೆ ಜೊತೆಗೇ ನುಗ್ಗಿಬಂತು. ಮೊನ್ನೆ ಮೊನ್ನೆ ಶಿಕ್ಷೆಯ ಹೆಸರಲ್ಲಿ ಶಾಲೆಯೊಂದು ಮಕ್ಕಳನ್ನು ಹಿಂಸಿಸಿದ ವರದಿ ಪತ್ರಿಕೆಗಳಲ್ಲಿ ಓದಿದ್ದು ಇನ್ನೂ ಹಸಿ ಹಸಿಯಾಗಿ ನೆನಪಿನಲ್ಲಿರುವಾಗಲೇ ಶಿಕ್ಷಕನೊಬ್ಬ ತನ್ನ ಕಾಮಾತುರತೆಗೆ ತನ್ನ ಶಿಷ್ಯೆಯೊಬ್ಬಳನ್ನು ಬಳಸಿಕೊಂಡ ಸುದ್ದಿಯೂ ಸ್ಮರಣೆಗೆ ಬಂತು.

ಆದರೆ ಗುರುವೆನ್ನುವ ಶಬ್ದಾರ್ಥದ ಪರಿಚಯ ನಮಗಾದಲ್ಲಿ ದಾಸವಾಣಿಯ ಸರಿಯಾದ ಅರ್ಥ ಹೊಳೆಯಲು ಸಾಧ್ಯ. ಸಾಮಾನ್ಯಾರ್ಥದಲ್ಲಿ ಗುರುವೆಂದರೆ ಶಿಕ್ಷಕ. ಕಲಿಯುವವರಿಗೆ ವಿದ್ಯೆಯನ್ನು ಕಲಿಸಿಕೊಡುವವನು. ಮಠ, ಮಾನ್ಯಗಳ ನೇಮ ನಿಷ್ಠೆಗೆ ತಮ್ಮನ್ನು ಒಪ್ಪಿಸಿಕೊಂಡವರಿಗೆ ಗುರುವೆನ್ನುವುದು ಆರಾಧ್ಯ ದೈವದ ಲೌಕಿಕ ಮುಖ. ಕಾವಿ ತೊಟ್ಟು, ಸಂಸಾರ ತ್ಯಜಿಸಿ, ಆಶೀರ್ವಚನಕ್ಕೆ ಕುಳಿತ ಮಠದಯ್ಯ! ಪುಂಡರಿಗೆ, ಲೋಕದ ಸಾಮಾನ್ಯ  ನಿಯಮ ಮೀರಿ ನಡೆಯುವ ಗುಂಪಿಗೆ ನಾಯಕನಾದವನನ್ನೂ ಗುರುವೆಂದು ಸಂಭೋದಿಸುವುದನ್ನೂ ಕಾಣುತ್ತೇವೆ. ಇನ್ನು ಛಂಧಶ್ಶಾಸ್ತ್ರದ ಗಣಪ್ರಸ್ತಾರದ ಪ್ರಕಾರ ಗುರುವೆಂದರೆ ದೀರ್ಘವಾದುದು, ಒತ್ತಕ್ಷರವಿರುವುದು ಅಥವ ಮಹಾ ಪ್ರಾಣವಾಗಿರುವುದು.

ಮೇಲ್ನೋಟಕ್ಕೆ ಕಾಣುವ ಗುರುವಿನ ಹೊರಾರ್ಥಗಳನ್ನೆಲ್ಲ ಒಂದೆಡೆ ಸೇರಿಸಿದಾಗ ಒಂದು ಗಮನೀಯ ಅಂಶ ಹೊಳೆಯುತ್ತದೆ. ಅದು ಗುರುವೆಂದರೆ ಹಿರಿತನವನ್ನು ತನ್ನೊಟ್ಟಿಗೆ ಹೊತ್ತೊಯ್ಯುತ್ತಿರುವುದು. ಆಕರ್ಷಣೆಯ ಒಂದಂಶವನ್ನು  ತನ್ನೊಂದಿಗೆ ಬೆಸೆಸಿಕೊಂಡಿರುವುದು. ಅಥವ ಗುರು ಹೆಸರಿನ ಗ್ರಹದ ಹಾಗೆ ಗಾತ್ರ ಮತ್ತು ಭಾರದಲ್ಲಿ ದೊಡ್ಡದಾಗಿರುವುದು.

ಈ ಎಲ್ಲ ಅರ್ಥಗಳನ್ನು ನಿಘಂಟಿನಲ್ಲಿ ಕಾಣಬಹುದಾದರೂ ಗುರುವೆಂಬ ಅರಿವಿಗೆ ಇರುವ ವಿಶಾಲಾರ್ಥವನ್ನು ನಾವು ಗಮನಿಸಬೇಕು. ಬರಿ ಮರಳ ಮೇಲೆ ಅಕ್ಷರ ತಿದ್ದಿಸಿದ ಓಚಯ್ಯನವರಿಂದ ಹಿಡಿದು ಆಧುನಿಕ ವಿಜ್ಞಾನವನ್ನು ಬೋಧಿಸುತ್ತಿರುವ ವಿಶ್ವ ವಿದ್ಯಾಲಯದ ಪ್ರೊಫೆಸರವರೆಗೂ ಈ ಗುರುವಿನ ಅಂಶ ಚದುರಿರುವುದನ್ನು ಯಾರುತಾನೆ ಅಲ್ಲಗಳೆಯಲು ಸಾಧ್ಯ? ಪ್ರಾಥಮಿಕ ಶಾಲೆಗಳಲ್ಲಿ ಕಲಿತ ಸರಳ ಕೂಡು ಕಳೆಯುವ ಲೆಕ್ಕ ದಕ್ಕದೇ ಆಧುನಿಕ ಬೀಜ ಶಾಸ್ತ್ರದ ಬೃಹನ್ನಿಯಮಗಳು ತಲೆಗೆ ಹೋಗಿಸಿಕೊಂಡವರುಂಟೇ? ಅ, ಆ, ಇ, ಈ ತಿದ್ದಿ ತೀಡಿ ಕಲಿತ ಬಾಲ ಬುದ್ಧಿಗೆ ಮಾತ್ರ ಪಂಪ, ರನ್ನ, ಕುಮಾರವ್ಯಾಸರನ್ನೂ ಅರೆದು ಕುಡಿಯುವ ಛಲ ಹುಟ್ಟಲು ಸಾಧ್ಯ.

ಹಾಗಾಗಿ ಪುನಃ ಪುನಃ ನಮಗೆ ಈಗಲಾದರೂ ಮನವರಿಕೆಯಾಗಬೇಕಿರುವುದೆಂದರೆ ಪ್ರಾಥಮಿಕ ಹಂತದಲ್ಲಿ ಕಲಿಕೆಗೆ ಗಮನ ನೀಡದ ಯಾರೂ ಉನ್ನತ ಶಿಕ್ಷಣದತ್ತ ತಾವೇ ತಾವಾಗಿ ಹೋಗಿರುವುದಿಲ್ಲ. ಆದರೆ ಸಮಾಜೋರಾಜಕೀಯ ಸ್ಥಿತ್ಯಂತರಗಳು ಕಲಿಸುವ ಗುರುವಿಗಿಂತಲೂ ಕಲಿಯುವ ವಿದ್ಯೆಯನ್ನು ದೊಡ್ಡದು ಮಾಡಿವೆ. ‘ವರ್ಣ ಮಾತ್ರಂ ಕಲಿಸಿದಾತಂ ಗುರು’ವೆನ್ನುವ ಮಾತು ಮೂಲೆಗೆ ಬಿದ್ದಿದೆ. ಗುರುಮುಖೇನ ಪ್ರಸಾದವಾಗಬೇಕಿರುವ ಸಂಗೀತದಂಥ ಸಾಂಸ್ಕೃತಿಕ ವಿದ್ಯೆಯೂ ಸಂತೆಗೆ ಮೂರು ಮೊಳ ನೇಯುವ ಜಾಯಮಾನಕ್ಕೆ ಒಗ್ಗಿಹೋಗಿರುವ ದುರಂತ ಕಣ್ಣಮುಂದೆಯೇ ಇದೆ.
‘ಆಚಾರ್ಯ ದೇವೋಭವ’ ಎಂದು ನಂಬಿದ್ದ ಆರ್ಷೇಯ ಪರಂಪರೆಗೆ ದ್ರೋಣಾಚಾರ್ಯರು ಹೇಗೋ ಹಾಗೇ ಇಚ್ಛಾಮರಣಿ ಭೀಷ್ಮರೂ ಕುರುಕುಲದ ಗುರುಗಳಾಗಿದ್ದವರು. ಕೃಷ್ಣ ದ್ವೈಪಾಯನರಂತೂ ರಾಜಗುರುಗಳಾಗಿ ಮೆರೆದವರು. ವಿಶಾಮಿತ್ರ, ಪರಶುರಾಮ, ವಸಿಷ್ಠ, ಸಾಂದೀಪನಿಯಂಥ ಹಲವು ಗುರುಗಳು ತಿದ್ದಿ ತೀಡಿ ನಿರ್ಮಿಸಿದ ಶಿಷ್ಯವೃಂದ ಈ ನಾಡು ಮರೆಯದೇ ಇರುವಂಥದು.ಒಬ್ಬ ಸಾಮಾನ್ಯ ಶಿಕ್ಷಕ ಪಾಠ ಹೇಳುತ್ತಾನೆ. ಒಳ್ಳೆಯ ಶಿಕ್ಷಕನಾದವನು ಅದನ್ನು ವಿವರಿಸಿ ತಿಳಿಸುತ್ತಾನೆ. ಉತ್ತಮ ಶಿಕ್ಷಕನಾದವನು ಪ್ರಾತ್ಯಕ್ಷಿಕೆಯ ಮೂಲಕ ಮನದಟ್ಟು ಮಾಡಿಸಿದರೆ, ಅತ್ಯುತ್ತಮ ಶಿಕ್ಷಕನಾದವನು ತಾನೂ ಕಲಿಕೆಯೊಂದಿಗೆ ಕಲಿಯುತ್ತ, ಕಲಿಯುತ್ತಿರುವವರನ್ನೂ ಉದ್ದೀಪಿಸುತ್ತಲೇ ಇರುತ್ತಾನೆ.

ನಾವೆಲ್ಲ ಬೆಳೆದು ದೊಡ್ಡವರಾಗಿ ನಮ್ಮ ಕಾಲಿನ ಮೇಲೆ ನಾವು ನಿಂತಿರುವ ಈ ಸನ್ನಿವೇಶದಲ್ಲಿ ನಮಗೆ ನಮ್ಮ ಸಾಧನೆಯೇ ಮುಖ್ಯವಾಗಿ ಕಾಣುತ್ತದೆ. ಆದರೆ ನಮ್ಮ ಈ ಸಾಧನೆಯ ಹಿಂದೆ ನಮ್ಮ ಹೆತ್ತವರ ಅಲ್ಪ ಸ್ವಲ್ಪ ಪಾಲಿನ ಜೊತೆಗೇ ನಮ್ಮ ಎಳವೆಯಲ್ಲಿ ವರ್ಣಮಾಲೆ ಕಲಿಸಿ, ಮಗ್ಗಿ ಹೇಳಿಸಿ, ಕುತೂಹಲದ ಪ್ರಶ್ನೆಗಳಿಗೆ ಸಮಾಧಾನದ ಉತ್ತರದ ಜೊತೆಗೇ ವಾರ್ಷಿಕೋತ್ಸವದ ನಾಟಕಕ್ಕೆ ನಮ್ಮ ಮುಖಕ್ಕೆ ಬಣ್ಣ ಹಚ್ಚಿದ ಮೇಸ್ಟ್ರುಗಳನ್ನು ಮರೆತೇ ಬಿಟ್ಟಿರುತ್ತೇವೆ. ಪ್ರದರ್ಶನದ  ವಿಗ್ರಹಗಳಂತೆ ಈಗ ನಳನಳಿಸುತ್ತಿರುವ ನಮಗೆ, ಮೊದಲ ಚಾಣದ ಪೆಟ್ಟು ಕೊಟ್ಟ ಆ ಪುಣ್ಯಾತ್ಮರುಗಳು ಬದುಕಿದ್ದಾರೋ ಇಲ್ಲವೋ ಅವರ ಸುದ್ದಿ ನಮಗೆ ಗೊತ್ತಾಗುವುದೇ ಇಲ್ಲ.

ಕಲಿಯುವ ವಿದ್ಯೆಗೂ, ಬದುಕಿಗೆ ಆಧಾರವಾಗುವ ನೌಕರಿಗೂ ಅರ್ಥಾರ್ಥ ಸಂಬಂಧಗಳೇ ಇರದ ಇವತ್ತಿನ ಸ್ಥಿತಿಯಲ್ಲಿ ನಿನ್ನೆ ಮೊನ್ನೆಗಳ ಗಾಯಗಳೆ ಮಾಯದಿರುವಾಗ ಬಾಲ್ಯದ ಆರಾಮಕ್ಕೆ ಹೊರಳುವ ವಿರಾಮ ನಮಗಿದೆಯೇ ಎನ್ನುವುದೂ ಇಲ್ಲಿ ಮುಖ್ಯ.  ಹಾಗೊಂದು ವೇಳೆ ಅದು ಸಾಧ್ಯವಾದರೆ ನಮ್ಮ ನೆನಪಿನ ಕೊಂಡಿ ಕಚ್ಚಿಕೊಳ್ಳುವುದು ಕೇವಲ ಪ್ರಾಥಮಿಕ ಶಾಲೆಯ ಕಲಿಕೆಯವರೆಗೆ ಮಾತ್ರ. ಪ್ರೌಢ ಶಾಲೆ, ಕಾಲೇಜುಗಳಲ್ಲಿ ನಾವು ನಡೆಸಿದ್ದ ಪುಂಡಾಟಿಕೆಯೋ, ಅಂದಾದುಂದಿಯೋ ನೆನಪಿಗೆ ದಕ್ಕುವುದೇ ವಿನಾ ಪಾಠ ಹೇಳಿದ್ದ ಕೆಲವರಷ್ಟೇ ಸ್ಮೃತಿಗೆ ಬರುತ್ತಾರೆ. ಆದರೆ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಕಲಿಸಿದ್ದ ಶಾಸ್ತ್ರಿ, ಮಗ್ಗಿ ಕಲಿಸಿದ ಮಂಜಪ್ಪ, ಹಿಂದಿಯ ಹೈ, ನೈ ಗೊತ್ತಿರದಿದ್ದರೂ ಕತೆಯ ಮೂಲಕವೇ ರಮ್ಯ ಲೋಕಕ್ಕೆ ನಮ್ಮನ್ನೊಯ್ಯುತ್ತಿದ್ದ ಲಕ್ಷ್ಮಮ್ಮ ಟೀಚರ್, ನೆನೆಸಿಕೊಂಡಾಗಲೆಲ್ಲ ಮನಸಿನಾಳಕ್ಕೆ ಬರುತ್ತಾರೆ. ಲಂಕೇಶರನ್ನು, ಅನಂತಮೂರ್ತಿಗಳನ್ನು ‘ಮೇಸ್ಟ್ರು’ ಎಂದೇ ಕರೆದು ಖುಷಿಗೊಳ್ಳುವ ನಮಗೆ ಅವರನ್ನು ಅನ್ಯರಂತೆ ಭಾವಿಸಲು ಬೇಸರ!

ನಮ್ಮ ಅರಿವಿಗೆ ಬಾರದೇ ನಾವು ನಮಗೆ ಕಲಿಸಿದವರನ್ನು ನಕಲು ಮಾಡಿರುತ್ತೇವೆ. ಏಕೆಂದರೆ ಒಬ್ಬ ಉತ್ತಮ ಶಿಕ್ಷಕನಾದವನು ತನ್ನ ಶಿಷ್ಯರನ್ನೂ ತನ್ನ ಪ್ರತಿರೂಪದಂತೆಯೇ ಎರಕ ಹೊಯ್ದಿರುತ್ತಾನೆ. ಬಾಲ್ಯದಲ್ಲಿ ಕಲಿತ ಪಾಠಗಳು ಬದುಕಿನ ತುಂಬ ಉಳಿಯುತ್ತವೆ. ನಮಗೆ ಪಾಠ ಹೇಳಿದ್ದ ಅವರನ್ನು ಮತ್ತು ಅವರಂಥವರನ್ನು ಗೌರವಿಸಲು, ನಮ್ಮ ಶುಭಾಶಯಗಳನ್ನು ಅವರಿಗೆ ತಲುಪಿಸಲು ಸರಿಯಾದ ದಿನವೆಂದರೆ ಸೆಪ್ಟೆಂಬರ್ ಐದನೇ ತಾರೀಖಿನ ಶಿಕ್ಷಕರ ದಿನ. ೧೯೬೨ರಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಈ ದೇಶದ ಮೊದಲ ಪ್ರಜೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕಾಲಕ್ಕೆ ಅವರ ಶಿಷ್ಯರು, ಅಭಿಮಾನಿಗಳು ಅವರ ಹುಟ್ಟುಹಬ್ಬವನ್ನಾಚರಿಸಲು ಒತ್ತಾಯಿಸಿದಾಗ ಅವರು ಅದನ್ನು ‘ಶಿಕ್ಷಕರ ದಿನ’ವೆಂದು ಆಚರಿಸಿದರೆ ಮಾತ್ರ ತಮ್ಮ ಒಪ್ಪಿಗೆ ನೀಡುವುದಾಗಿ ಹೇಳಿದರಂತೆ. ಸ್ವತಃ ತತ್ವ ಶಾಸ್ತ್ರ ಅಧ್ಯಾಪಕರಾಗಿ, ದೆಹಲಿ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಕೆಲಸ ಮಾಡಿದ್ದ ಅವರು ಶಿಕ್ಷಕ ವೃತ್ತಿಗೆ ತಂದು ಕೊಟ್ಟ ದೊಡ್ಡ ಗೌರವ, ಘನತೆಗಳನ್ನು ಈ ಕಾಲದ ಶಿಕ್ಷಕರು ಉಳಿಸಿಕೊಂಡಿದ್ದಾರೆಯೇ ಎನ್ನುವುದೂ ಇಲ್ಲಿ ಬಹು ಮುಖ್ಯ ಪ್ರಶ್ನೆ.


ಸಾಕ್ರೆಟಿಸ್ ಕೂಡ ಗುರುವಾಗಿದ್ದವನೇ. ಅವನು ಸ್ವತಃ ತನ್ನನ್ನೇ ಕಲಿಕೆಗೆ ತೊಡಗಿಸಿಕೊಂಡವನೆಂದು ಭಾವಿಸಿದ್ದನೇ ಹೊರತು ಪಾಠ ಹೇಳುವ ಕಸುಬು ತನ್ನದಲ್ಲವೆಂದೇ ಪರಿಭಾವಿಸಿದ್ದ. ಅವನು ಜಾಣ್ಮೆ ಮತ್ತು ಒಳ್ಳೆಯತನಗಳು ಪ್ರೀತಿ ಮತ್ತು ಸ್ನೇಹದಿಂದ ಹುಟ್ಟುವುವೆಂಬ ಪರಮ ಸತ್ಯದ ಪ್ರತಿಪಾದಕನೂ ಆಗಿದ್ದ. ಶಿಷ್ಯನ ಕಲಿಕೆಗೆ ತಾನೊಂದು ತೃಣ ಮೂಲವೆಂದೇ ನಂಬಿದ್ದ ಸಾಕ್ರೆಟೀಸ್, ಕಲಿಯುವವನಿಗೆ/ಕಲಿಸುವವನಿಗೆ  ಬೇಕಿರುವ ತಾಳ್ಮೆ ಮತ್ತು ಶ್ರಮಗಳನ್ನು ಎಂದೂ ದುರುಪಯೋಗ ಮಾಡಿಕೊಳ್ಳಲೇ ಇಲ್ಲವಂತೆ.

ಕಲಿಕೆಯ ಕಾಲದ ಸರಿಸುಮಾರು ೨೫,೦೦೦ ಗಂಟೆಗಳನ್ನು ವಿದ್ಯಾರ್ಥಿಯೊಬ್ಬನು ವ್ಯಯಿಸಬೇಕಾಗುತ್ತದೆ. ಶಿಕ್ಷಕರೇ ಇಲ್ಲದ ಶಾಲೆಗಳು, ಸೂರೇ ಇಲ್ಲದ ಶಾಲೆಗಳು, ಹೊಸತೇನನ್ನೂ ಕಲಿಸದೇ ತಮ್ಮ ಸರ್ವಿಸ್ ಮುಗಿಸುವ ಶಿಕ್ಷಕರೂ ತುಂಬಿರುವ ಈ ದಿನಮಾನಗಳ ಶೈಕ್ಷಣಿಕ ಜಗತ್ತು ತಾನು ಕೊಡಬೇಕಾದ ಸವಲತ್ತು ಮತ್ತು ನಿರ್ವಹಿಸಬೇಕಾದ ಜವಾಬ್ದಾರಿಗಳನ್ನು ಸ್ವತಃ ಆಲೋಚಿಸಿದೆಯೇ ಎಂದರೆ ಅದು ನಿರಾಶೆಗೊಳಿಸುವ ಸ್ಥಿತಿಯಲ್ಲಿದೆ.

ವಿಶ್ವ ವಿದ್ಯಾಲಯಗಳ/ಕಾಲೇಜು ಅಧ್ಯಾಪಕರಿಗೆ ಯು.ಜಿ.ಸಿ ವೇತನ ನೀಡುವ ಸರಕಾರ ಅವರನ್ನೆಂದಿಗೂ ಇತರ ಕೆಲಸಗಳಿಗೆ ಬಳಸಿಕೊಳ್ಳುವುದಿಲ್ಲ. ಜೊತೆಗೆ ವಾರಕ್ಕೆ ಹೆಚ್ಚೆಂದರೆ ಐದಾರು ಗಂಟೆಗಳ ಪಾಠ ಹೇಳಬೇಕಿರುವ ಅವರಲ್ಲಿ ಹೆಚ್ಚಿನವರು ತಮ್ಮ ವೃತ್ತಿಯನ್ನೆಂದೂ ಗೌರವದ ಹುದ್ದೆಯೆಂದು ಭಾವಿಸಿರುವುದೇ ಇಲ್ಲ. ಹುಡುಗರಿಗೆ ಬೇಕೋ ಬೇಡವೋ ಸಿಲೆಬಸ್ ಮುಗಿಸಿ ಕೈ ತೊಳೆದುಕೊಳ್ಳುವ ಇವರಿಗೆ ಕಾಲೇಜಿನ ಫಲಿತಾಂಶಕ್ಕಿಂತಲೂ ತಮ್ಮ ಇಂಕ್ರಿಮೆಂಟು, ಡಿ.ಎ ಹೆಚ್ಚಳಗಳಲ್ಲೇ ಪರಮ ಆಸಕ್ತಿ. ಅನೇಕ ವಿಶ್ವವಿದ್ಯಾಲಯಗಳು ವ್ಯವಸ್ಥೆಯ ವಿರುದ್ಧ ಯುವಜನರನ್ನು ಸಂಘಟಿಸುವ ಕೇಂದ್ರಗಳಾಗಿವೆಯೆಂಬ ಕೂಗೂ ಇತ್ತೀಚೆಗೆ ಮಾರ್ದನಿಗೊಳ್ಳುತ್ತಿದೆ.

ಪಿ.ಯು.ಕಾಲೇಜುಗಳ ಉಪನ್ಯಾಸಕರಿಗೆ ಇಬ್ಬಂದಿಯಲ್ಲಿ ತೊಡಗಿಕೊಂಡ ವಯಸ್ಸಿನ ಹುಡುಗರೊಂದಿಗೆ  ಒಡನಾಟ.
ಹದಿ ಹರೆಯದ, ಎಳಸಿನ್ನೂ ಮಾಗಿರದ ಹುಡುಗರಿಗೆ ತಮ್ಮ ಭಾವಿ ಜೀವನದ ಕನಸುಗಳು ಚಿಗುರೊಡೆಯುವ ಕಾಲ. ಈಗಿನ ವ್ಯವಸ್ಥೆಯಲ್ಲಂತೂ ಪಿ.ಯು ವಿದ್ಯಾಭ್ಯಾಸ ಉನ್ನತ ಶಿಕ್ಷಣದ ಹೆಬ್ಬಾಗಿಲಾಗಿರುವುದರಿಂದ ವಿಜ್ಞಾನ ವಿಭಾಗದ ಹುಡುಗರಿಗಂತೂ ಇದು ಅಗ್ನಿಪರೀಕ್ಷೆಯ ಕಾಲ. ಸಿ.ಇ.ಟಿಯ ಕೋಚಿಂಗ್ ಕ್ಲಾಸುಗಳಿಂದ ಲಕ್ಷಗಟ್ಟಲೆ ಬಾಚುತ್ತಿರುವ ಮೇಸ್ಟ್ರುಗಳಿಗಂತೂ ಸುಗ್ಗಿಯ ಹಬ್ಬ. ಇನ್ನು ಕಲೆ ಅಥವ ವಾಣಿಜ್ಯ ವಿಭಾಗದ ಹೆಚ್ಚಿನ ವಿದ್ಯಾರ್ಥಿಗಳಿಗೆ ಕಾಲೇಜೆನ್ನುವುದು ಮೋಜಿನ ಕೂಟ. ಅವರನ್ನು ಕಾಯುವುದೇ ಉಪನ್ಯಾಸಕರ ಕಾಯಕ.

ಪ್ರೌಢ ಶಿಕ್ಷಣದ ಹೊತ್ತಿಗಾಗಲೇ ಜೊಳ್ಳುಕಾಳುಗಳೆಲ್ಲ ತೂರಿ ಹೋಗಿ ಗಟ್ಟಿ ಕಾಳುಗಳಷ್ಟೇ ಉಳಿದಿರುವುದರಿಂದ ಈ ಹಂತದ ಶಿಕ್ಷಕರು ತಮ್ಮ ವೃತ್ತಿಯಲ್ಲಿ ಹೆಚ್ಚು ಶ್ರಮ ವಹಿಸದೇ ಆದರೆ ಎಸ್.ಎಸ್.ಎಲ್.ಸಿ ಎಂಬ ಗುಮ್ಮನನ್ನು ಎದುರಿಸುವ ಧೈರ್ಯವನ್ನು ಹುಡುಗರಿಗೆ ತುಂಬಬೇಕಿರುತ್ತದೆ. ಈ ಹಂತದ ವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿಯ ಪೋಷಕರ ಪಾಲೂ ಮುಖ್ಯವಾಗಿರುವುದರಿಂದ ಮತ್ತು ಮುಂದಿನ ವಿದ್ಯಾಭ್ಯಾಸದ ಅಂದಾಜು ಈಗಲೇ ದಕ್ಕುವುದರಿಂದ ವಿದ್ಯಾರ್ಥಿಗಳನ್ನು ತಯಾರು ಮಾಡುವ ಕಠಿಣ ಕೆಲಸ ಸರಿಸಮನಾಗಿ ಹಂಚಿಹೋಗಿರುತ್ತದೆ.

ಆದರೆ ಪ್ರಾಥಮಿಕ ವಿದ್ಯಾಭ್ಯಾಸದ ಕಾಲವೆಂದರೆ ಅದು   ಸಸಿಯೊಂದು ನೆಟ್ಟ ಸ್ಥಳದಲ್ಲಿ ಗಟ್ಟಿಯಾಗಿ ನಿಂತು ಗಿಡವಾಗಬೇಕಾದ, ರೂಪಾಂತರಕ್ಕೆ ಕಾತರಿಸುವ ರಸನಿಮಿಷವಾಗಿದೆ. ಹಾಗಾಗಿ ಈ ಹಂತದ ವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿಗಿಂತಲೂ ಅವನನ್ನು ತಯಾರು ಮಾಡುವ ಶಿಕ್ಷಕನ ಜವಾಬ್ದಾರಿ ಮುಖ್ಯವಾಗಿರುತ್ತದೆ. ಸುತ್ತಲಿನ ಕಳೆಕಿತ್ತು ಆ ಗಿಡದ ಪರಿಪೋಷಣೆಯ ಕರ್ತವ್ಯ ನಿಭಾಯಿಸುವ ಛಲ ತೋರಿಸಬೇಕಾಗುತ್ತದೆ. ಕಾಲಕಾಲಕ್ಕೆ ಬೇಕಾದ ಗೊಬ್ಬರ, ನೀರು, ನಿಯಂತ್ರಣ ಹಾಗೂ ಅನ್ಯ ಸಂಕರಣಗಳಿಂದಲೂ ಸಸಿಯನ್ನು ಕಾಪಾಡುವ ನೈತಿಕತೆಯನ್ನು ಬಿತ್ತಬೇಕಿರುವ ಕಾಲ ಇದಾಗಿರುತ್ತದೆ.

ದುರಂತವೆಂದರೆ ನಮ್ಮ ಬಹಳಷ್ಟು ಪ್ರಾಥಮಿಕ ಶಾಲೆಗಳಲ್ಲಿ ಮೂಲ ಸೌಲಭ್ಯಗಳ  ಕೊರತೆಯಿದೆಯೆಂದು  ಸರ್ಕಾರವೇ ಒಪ್ಪಿಕೊಂಡಿದೆ. ‘ಸರ್ವ ಶಿಕ್ಷಣ ಅಭಿಯಾನ’, ‘ಮರಳಿ ಬಾ ಶಾಲೆಗೆ’, ಇತ್ಯಾದಿ ಯೋಜನೆಗಳ ಅನುಷ್ಠಾನಕ್ಕಾಗಿ ಕೋಟಿಗಟ್ಟಲೆ ವ್ಯಯಿಸುವ ಸರ್ಕಾರ, ಇಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ಹುರುಪುಗೊಳಿಸುವ  ಕೆಲಸವನ್ನಾಗಲೀ, ಕಾಲ ಕಾಲಕ್ಕೆ ಬೇಕಾಗುವ ತರಬೇತಿಯನ್ನಾಗಲೀ ವ್ಯವಸ್ಥಿತವಾಗಿ ನೀಡುತ್ತಿಲ್ಲ. ಶಿಕ್ಷಕರ ಸಹಕಾರವಿಲ್ಲದೇ ಒಂದೇ ಒಂದು ಚುನಾವಣೆಯನ್ನು ನಡೆಸುವ ಸ್ಥಿತಿಯಲ್ಲಿ ಸರ್ಕಾರವಿಲ್ಲ. ಜನ ಗಣತಿ, ದನ ಗಣತಿಗಳೆಂದು ವರ್ಷವಿಡೀ ಅಂಕಿ ಸಂಖ್ಯೆಗಳ ಮಾಯಾಲೋಕದಲ್ಲೇ ಅವರನ್ನು ಇರಿಸುವ ನಮ್ಮ ವ್ಯವಸ್ಥೆ ಇತ್ತೀಚಿನ ‘ಅಕ್ಷರ ದಾಸೋಹ’ದ ಸಮರ್ಪಕ ಅನುಷ್ಠಾನಕ್ಕೂ ಇವರನ್ನೇ ಬಳಸಿಕೊಳ್ಳುತ್ತಿದೆ. ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲೆಲ್ಲೂ ಜವಾನರ ಹುದ್ದೆಯೇ ಇಲ್ಲದಿರುವುದರಿಂದ ಶಾಲೆಯ ಕಸ ಗುಡಿಸುವ ಕೆಲಸವನ್ನು ನಮ್ಮ ಚಿಣ್ಣರ ಪುಟ್ಟ ಕೈಗಳೇ ಮಾಡುತ್ತಿವೆಯೆನ್ನುವುದೂ ನಮ್ಮಲ್ಲಿ ಬಹಳ ಜನಕ್ಕೆ ಗೊತ್ತಿಲ್ಲ.     

ಸರ್ಕಾರಿ ಶಾಲೆಗಳ ಸ್ಥಿತಿ ಹೀಗಿದ್ದರೆ ಖಾಸಗಿ ಶಾಲೆಗಳ ಸ್ಥಿತಿ ಇದಕ್ಕಿಂತ ಇನ್ನೂ ಶೋಚನೀಯವಾಗಿದೆ. ಬಹಳಷ್ಟು ಖಾಸಗೀ ಪ್ರಾಥಮಿಕ ಶಾಲೆಗಳು ಸರ್ಕಾರದ ಅನುದಾನವಿಲ್ಲದೇ ನಡೆಯುತ್ತಿರುವುದರಿಂದ ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸರಿಯಾದ ಸಂಬಳ ಸಿಕ್ಕುವುದೇ ಇಲ್ಲ. ಹಾಗಾಗಿ ಕನಿಷ್ಠ ವಿದ್ಯಾರ್ಹತೆಯೂ ಇಲ್ಲದ ಮಂದಿ ಶಿಕ್ಷಕರಾಗಿ ಕೆಲಸಮಾಡುವುದರಿಂದ ನಮ್ಮ ಪುಟ್ಟ ಮಕ್ಕಳ ಭವಿಷ್ಯ ಅದೆಷ್ಟು ಉಜ್ವಲವಾಗಿ ಬೆಳಯಬಲ್ಲುದೆಂಬುದು ನಮ್ಮ ಲೋಕ ಜ್ಞಾನಕ್ಕೆ ಬಿಟ್ಟ ಸಂಗತಿಯಾಗಿದೆ. ಜೊತೆಗೇ ಮಧ್ಯಮ ವರ್ಗದವರೆಲ್ಲರೂ ಖಾಸಗಿ ಶಾಲೆಗಳಿಗೇ ತಮ್ಮ ಮಕ್ಕಳನ್ನು ಸೇರಿಸುವುದರಿಂದಾಗಿ ಸರ್ಕಾರೀ ಶಾಲೆಗಳಲ್ಲಿ ಉಳಿಯುವ ಮಕ್ಕಳೆಂದರೆ ಒಂದೋ ಪೋಷಕರ ಗಮನದಲ್ಲಿಲ್ಲದ ಪೋಲಿಗಳು ಅಥವ ಬಡತನ ರೇಖೆಗಿಂತಲೂ ಕಡಿಮೆ ಇರುವ ಮತ್ತು ಹೆಚ್ಚಿನ ವೇಳೆ ಮಧ್ಯಾಹ್ನದ ಬಿಸಿ ಊಟದ ಆಸೆಗೆ ಶಾಲೆಗೆ ಬರುವ ಮಕ್ಕಳು.

ಇಂಥ ಮಕ್ಕಳ ಜೊತೆ ಬಡಿದಾಡಿ ಪಾಠ ಪ್ರವಚನ ಹೇಳಬೇಕಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಪರಿಶ್ರಮಕ್ಕೆ  ತಕ್ಕ ಪ್ರತಿಫಲ ಅವರಿಗಿದೆಯೇ? ಮೊನ್ನೆ ಮೊನ್ನೆ ನಡೆದ ಶಿಕ್ಷಕಿ ಪ್ರೇಮಳ ದುರಂತ ಮರಣದ ನೆನಪೂ ಸಾರ್ವಜನಿಕ ನೆನಪಿನಿಂದ ಮರೆಯಾಗಿ ಹೋಗಿದೆ. ಶಾಲಾ ಉಸ್ತುವಾರಿ ಸಮಿತಿಗಳಂತೂ ರಾಜಕೀಯದ ಕೂಪಗಳಾಗಿರುವುದರಿಂದ ಘನತೆಯಿಂದ ಬದುಕಬೇಕೆನ್ನುವ ಶಿಕ್ಷಕನನ್ನು ಆ ಕನಸಿನಿಂದಲೂ ದೂರ ದೂಡುತ್ತಿವೆ.

ಪ್ರಾಥಮಿಕ ಶಾಲೆಯ ಶಿಕ್ಷಕರಷ್ಟು ರಾಜಕೀಯ ಮಾಡುವ ಎದೆಗಾರಿಕೆ ಉಳಿದ ಸರ್ಕಾರಿ ನೌಕರರಿಗಿಲ್ಲವೆಂಬುದೂ ಅಷ್ಟೇ ಸತ್ಯದ ವಿಚಾರ. ನಮ್ಮ ಬಹುತೇಕ ರಾಜಕೀಯ ನಾಯಕರ ಬೇರುಗಳಿರುವುದೇ ಈ ಶಿಕ್ಷಕರೆಂಬ ಹಣೆಪಟ್ಟಿಯಲ್ಲಿರುವ ಹಳ್ಳಿಗಾಡಿನ ಜನರನ್ನು ಮರುಳುಗೊಳಿಸುವ ಊಸರವಳ್ಳಿಗಳಲ್ಲಿ. ಪಾಠ ಮಾಡುವುದಿರಲಿ ಶಾಲೆಯ ಹೊಸ್ತಿಲನ್ನೇ ತುಳಿಯದೇ ತಿಂಗಳು ತಿಂಗಳು ಸಂಬಳ ಎಣಿಸಿಕೊಳ್ಳುವವರೂ ಸಾಕಷ್ಟು ಮಂದಿ ಇದ್ದಾರೆ.

‘ಶಿಕ್ಷಕರ ದಿನಾಚರಣೆ’ಯ ಈ ಮಹತ್ವದ ದಿನದಲ್ಲಾದರೂ ಅವರ ವೃತ್ತಿಗಿರುವ ಘನತೆ ಗಾಂಭೀರ್ಯಗಳನ್ನು ಅವರು ಉಳಿಸಿಕೊಳ್ಳುವ ಸಂಕಲ್ಪ ಮಾಡಲಿ. ಹಾಗೇ ಸಮಾಜವನ್ನು ತಿದ್ದಿ ತೀಡಿ ಬೆಳಸುತ್ತಿರುವ ಆ ಇಡೀ ಶಿಕ್ಷಕ ಸಮುದಾಯವನ್ನು ಆದರಿಸಿ, ಗೌರವಿಸುವ ಸಂಕಲ್ಪ ಎಲ್ಲೆಡೆಯಿಂದಲೂ ಮೂಡಿ ಬರಲಿ.


ಕಾಮೆಂಟ್‌ಗಳಿಲ್ಲ: