ಒಟ್ಟು ಪುಟವೀಕ್ಷಣೆಗಳು

ಭಾನುವಾರ, ಅಕ್ಟೋಬರ್ 21, 2012

“ಚಿಲ್ಲರೆ ಅಂಗಡಿಯ ಸಗಟು ಪುರಾಣ!”



ದೇಶೀಯ ಚಿಲ್ಲರೆ ವ್ಯಾಪಾರದಲ್ಲಿ ಹೊರ ದೇಶಗಳು ಬಂಡವಾಳ ಹೂಡುವ ಕುರಿತಂತೆ ಆರ್ಥಿಕ ವಲಯದಲ್ಲಿ ಎದ್ದಿರುವ ಅಲ್ಲೋಲ ಕಲ್ಲೋಲಗಳ ಸಮಗ್ರ ವಿವರ ನಿಮಗೆಲ್ಲರಿಗೂ ಗೊತ್ತಿರುವ ಜ್ವಲಂತ ವಿಷಯ. ಹೇಳೀ ಕೇಳೀ ಹೆಸರಲ್ಲೇ ‘ಚಿಲ್ಲರೆ’ ಇರುವ ವ್ಯಾಪಾರದಲ್ಲಿ ‘ಸಗಟು’ವ್ಯವಹಾರಸ್ಥರಾದ ವಿದೇಶೀ ಬಂಡವಾಳಿಗರಿಗೇನು ಲಾಭ ಇರುತ್ತೆ ಅನ್ನುವ ಉಡಾಫೆ ನನ್ನಲ್ಲಿತ್ತು. ಆದರೆ ಯಾವಾಗ ಮಹಾನಗರಗಳ ದೊಡ್ಡ ದೊಡ್ಡ ಶಾಪಿಂಗ್ ಮಾಲುಗಳನ್ನೂ, ಬಿಗ್ ಬಜಾರುಗಳನ್ನೂ ಗಮನಿಸಿದೆನೋ ಆಗ ಯಾಕೆ ಅವರೆಲ್ಲ ಚಿಲ್ಲರೆ ವ್ಯಾಪಾರದಲ್ಲಿ ಬಂಡವಾಳ ಹಾಕಲು ಸಿದ್ಧರಿದ್ದಾರೆಂದು ತಿಳಿಯಿತು. ನನಗೂ ನಿಮಗೂ ಇದು ಹೊಳೆಯುವುದಕ್ಕೂ ಮೊದಲೇ ಅಮೆರಿಕದವರಿಗೆ, ಮತ್ತು ಆ ದೇಶದ ವಾಲ್ ಮಾರ್ಟ್ ಅನ್ನೋ ಕಂಪನಿಗೆ ಈ ಚಿಲ್ಲರೆ ವ್ಯಾಪಾರದ ಮೂಲಕವೇ ನಮ್ಮ ವ್ಯವಹಾರ ವಹಿವಾಟನೆಲ್ಲ ನಿಯಂತ್ರಿಸಬಹುದೆನ್ನುವ ಸತ್ಯ ಗೊತ್ತಿರುವುದರಿಂದಲೇ ಈ ಸಿಂಗ್,ಚಿದು,ಮುಖರ್ಜಿಗಳನ್ನೆಲ್ಲ ಸರಿಮಾಡಿಕೊಂಡು ಇಲ್ಲಿ ಚಿಲ್ಲರೆ ವ್ಯಾಪಾರ ಶುರು ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ.

ಹೆಚ್ಚು ಕಡಿಮೆ ಒಂದು ಕೋಟಿ ಸಂಖ್ಯೆಯಲ್ಲಿ ನಮ್ಮ ದೇಶದುದ್ದಗಲಕ್ಕೆ ಈ ಚಿಲ್ಲರೆ ಅಂಗಡಿಗಳಿವೆ ಅಂತ ಒಂದು ವರದಿ ಇದೆ. ಅನುಮಾನ ಬಂದರೆ ನಿಮ್ಮ ಮನೆ ಸುತ್ತಮುತ್ತ ಇರೋ ಚಿಲ್ಲರೆ ಅಂಗಡಿಗಳನ್ನು ಮನಸ್ಸಲ್ಲೇ ಲೆಕ್ಕ ಹಾಕಿ. ತರಕಾರಿ ಮಾರೋ ಅಂಗಡಿ, ಅದರ ಪಕ್ಕದಲ್ಲೇ ದಿನಸಿ ಅಂಗಡಿ, ಅದರಾಚೆ ಬಿಸ್ಕತ್ತು, ಚಾಕಲೇಟು, ಸಿಗರೇಟು, ಬೀಡಿ ಮಾರುವ ಅರ್ಥಾತ್ ಪೆಟ್ಟಿ ಅಂಗಡಿ, ಅದರ ಪಕ್ಕಕ್ಕೇ ಬೇಕರಿ, ಅದರಾಚೆ ಪಾನ್ ಶಾಪ್, ಬಸ್ ಸ್ಟಾಂಡ್‌ಸಂಕೀರ್ಣದಲ್ಲಿರುವ ದೊಡ್ಡ ದಿನಸಿ ಅಂಗಡಿ. ಒಂದೇ, ಎರಡೇ ಲೆಕ್ಕಕ್ಕೇ ಸಿಕ್ಕದೇ ಕೋಟಿ ಕೋಟಿ ವ್ಯವಹಾರ ನಡೆಸುವ ಉದ್ದಿಮೆ ಈ ಚಿಕ್ಕ ಪುಟ್ಟ ಅಂಗಡಿಗಳದ್ದು. ಅಂದರೆ ಒಟ್ಟೂ ಅಂಗಡಿಗಳ ಸಂಖ್ಯೆ ಕೋಟಿಯಲ್ಲ ಅದರಾಚೆಯೂ ದಾಟಬಹುದು. ಇದನ್ನೆಲ್ಲ ಕೂತಲ್ಲೇ ಲೆಕ್ಕ ಹಾಕಿದ ವಾಲ್ ಮಾರ್ಟ್ ಒಂದರ್ಥದಲ್ಲಿ ಈ ದೇಶದ ಬೆನ್ನೆಲುಬಾಗಿ  ಆರ್ಥಿಕ ವ್ಯವಹಾರ ನಡೆಸುತ್ತಿರುವ ಚಿಲ್ಲರೆ ವ್ಯಾಪಾರಕ್ಕೇ ಕೊಡಲಿ ಪೆಟ್ಟು ನೀಡಲು ಸಜ್ಜಾಗಿ ನಿಂತಿದ್ದರೆ, ನಮ್ಮ ಹಿತ ಕಾಪಾಡಬೇಕಿದ್ದ ಸರ್ಕಾರವೇ ಅಮೆರಿಕದವರ ಕೊಡಲಿಗೆ ಸಾಣೆ ಹಿಡಿಸಿ ಕೊಡುತ್ತಿದೆ.

ಬೆಂಗಳೂರಿನಂಥ ಪಟ್ಟಣದಲ್ಲಿ ಆರ್ಥಿಕವಾಗಿ ಸಧೃಢವಾಗಿರುವವರಿಗೆ ಈ ಶಾಪಿಂಗ್ ಮಾಲುಗಳೂ, ಅವರ ವಿಶಿಷ್ಠತೆಗಳೂ, ಅವರು ಕೊಡ ಮಾಡುವ ಡಿಸ್ಕೌಂಟ್ ಇತ್ಯಾದಿಗಳೆಲ್ಲ ಆಕರ್ಷಿಸಬಹುದು. ಆದರೆ ನಾವು ಹೇಳಿದ ಸಾಮಾನನ್ನೆಲ್ಲ ಜತನವಾಗಿ ಪ್ಯಾಕ್ ಮಾಡಿ ಪಟ್ಟಿ ಬರೆದು ಲೆಕ್ಕದ ಪುಸ್ತಕದಲ್ಲಿ ಗುರುತು ಹಾಕಿ ತಿಂಗಳಿಗೊಮ್ಮೆ ನಾವು ಕೊಟ್ಟಷ್ಟನ್ನು ಜಮಾ ತೆಗೆದುಕೊಳ್ಳುವ ನಮ್ಮೂರಿನ ಶೆಟ್ಟರ ಅಂಗಡಿಗೆ ಯಾವ ಮಾಲ್ ಅಥವ ಸೂಪರ್ ಸ್ಟೋರ್ಸ್ ಸಮನಾಗಲು ಸಾಧ್ಯವೇ ಇಲ್ಲ. ನಮ್ಮ ಮನೆಯ ಸುಖ ದುಃಖಗಳು, ಸಾವು ನೋವುಗಳು, ಸಂಬಂಧ ಆಚರಣೆಗಳು ನಮ್ಮೂರಿನ ಚಿಲ್ಲರೆ ಅಂಗಡಿಯ ಶೆಟ್ಟರಿಗೆ ಗೊತ್ತಿರುತ್ತಿದ್ದರಿಂದ ಅವರೆಂದೂ ವ್ಯಾಪಾರವನ್ನು ವ್ಯವಹಾರವನ್ನಾಗಿ ಪರಿಗಣಿಸಲೇ ಇಲ್ಲ.  ನೀವು ಆಫೀಸಿಗೆ ಹೋಗುವ ಹಾಗೆ ನಾನು ಅಂಗಡಿಯಲ್ಲಿ ಕೂರುತ್ತೇನೆ ಅನ್ನುವ ತರ್ಕ ಅವರದ್ದಾಗಿತ್ತು. ಅಕ್ಕಿಯಲ್ಲಿ ಹುಳು ಬಂದಿದ್ದರೆ, ಕಡಲೆ ಹಿಟ್ಟು ಕಹಿಯಾಗಿದ್ದರೆ, ದುಸರಾ ಮಾತಿಲ್ಲದೆ ಬೇರೆ ಪದಾರ್ಥ ಕೊಟ್ಟೋ ಅಥವ ವಾಪಾಸು ಪಡೆದುಕೊಂಡೋ ಸಂಬಂಧ ಕಾಪಾಡಿಕೊಳ್ಳುತ್ತಿದ್ದರು. ಈ ಸೂಪರ್ ಮಾರ್ಕೆಟ್ಟಿನವರು ಕೊಟ್ಟ ಸಾಮಾನು ಬದಲಿಸಲೋ ವಾಪಾಸು ಮಾಡಲೋ ಪ್ರಯತ್ನಿಸಿ ನೋಡಿ, ಆಗಷ್ಟೇ ನಿಮಗೆ ನಿಮ್ಮೂರಿನ ಚಿಲ್ಲರೆ ಅಂಗಡಿಯ ಮಹತ್ವ ಗೊತ್ತಾಗುತ್ತದೆ.

ಹಾಗೆ ನೋಡಿದರೆ ಸಣ್ಣಪುಟ್ಟ ಊರುಗಳ ಆರ್ಥಿಕ ಸಮೀಕ್ಷೆ ನಡೆಸಬೇಕಿದ್ದರೆ ಆಯಾ ಊರಿನ ಚಿಲ್ಲರೆ ಅಂಗಡಿಗಳ ವ್ಯಾಪಾರ ಸಾಮರ್ಥ್ಯ ಅಳೆದರೆ ಸಾಕು, ಆರ್ಥಿಕ ಸಮೀಕ್ಷೆಯನ್ನು ಸಲೀಸಾಗಿ ಮುಗಿಸಿಬಿಡಬಹುದು. ಜೊತೆಗೆ ಬೇಕಿರುವುದಕ್ಕಿಂತ ಬೇಡದ ಸಾಮಾನನ್ನೇ ಸ್ಕೀಂ ಹೆಸರಲ್ಲಿ ಮಾರುವ ಸೂಪರ್ ಸ್ಟೋರ್ಸ್‌ಗಳಿಗಿಂತಲೂ ಇವು ಭಿನ್ನ. ಆಯಾ ಊರಿನ ಅಗತ್ಯಕ್ಕನುಗುಣವಾಗಿ, ಆಯಾ ಪ್ರಾದೇಶಿಕ ಸಂಸ್ಕೃತಿಗೆ ಅನುಗುಣವಾಗಿ ಚಿಲ್ಲರೆ ಅಂಗಡಿಗಳ ಮೆನು ಇರುತ್ತದೆ. ದಿನಸಿ ಪದಾರ್ಥಗಳ ಜೊತೆ ಜೊತೆಗೇ ತಲೆನೋವಿನ ಮಾತ್ರೆ, ನಿಂಬೆಹಣ್ಣು, ನಿಂಬುಪ್ಪು, ಚಳ್ಳೆಹುರಿ, ಲಾಟೀನು ಬತ್ತಿ, ಶೇವಿಂಗ್ ಸೋಪು, ಬ್ಲೇಡು ಇತ್ಯಾದಿ ವಸ್ತುಗಳನ್ನೆಲ್ಲ ಈ ಅಂಗಡಿಗಳು ಬೇಕಾದ ಕೂಡಲೇ ಅಗತ್ಯವಿದ್ದವರಿಗೆ ಪೂರೈಸುತ್ತವೆ. ನಗದಿಗಿಂತಲೂ ಉದ್ದರಿಯ ವ್ಯಾಪಾರವೇ ಬಹುತೇಕ ಜಾಸ್ತಿ. ಕೊಬ್ಬರಿ ಸುಲಿಸಿದಾಗ, ಮಗ ಮನಿಯಾರ್ಡರು ಕಳಿಸಿದಾಗ, ವರ್ಷದ ಬೆಳೆ ಬಂದಾಗಷ್ಟೇ ಹಳೆ ಸಾಲ ಚುಕ್ತಾ. ಮತ್ತೆ ಹೊಸ ಸಾಲ. ಒಂದರ್ಥದಲ್ಲಿ ಓವರ್ ಡ್ರಾಫ್ಟ್.

ಈ ಎಲ್ಲ ವಿವರ ಅಂದರೆ ಪುಟ್ಟ ಪೆಟ್ಟಿಗೆ ಅಂಗಡಿಯಲ್ಲಿ ಚಿಲ್ಲರೆಯಾಗಿ ವ್ಯಾಪಾರವಾಗುವ ಒಟ್ಟೂ ವ್ಯವಹಾರದ ಅಂದಾಜು ಅಮೆರಿಕದವರು ಲೆಕ್ಕ ಹಾಕಿ, ಈ ಕ್ಷೇತ್ರವನ್ನೇ ವಶಪಡಿಸಿಕೊಳ್ಳಲು ಹೊರಟಿರುವುದು. ಹಾಗಾದಾಗ ಏನಾಗಬಹುದೆಂದು ಊಹಿಸಿದರೆ ಭಯವಾಗುತ್ತದೆ. ಏಕೆಂದರೆ ಕಷ್ಟ ಕಾರ್ಪಣ್ಯಗಳ ಸಂದರ್ಭಗಳಲ್ಲಿ ದಿನಸಿಯ ಜೊತೆ ನಗದನ್ನೂ ಸಾಲವಾಗಿ ಕೊಡುವ ನಮ್ಮ ಪೆಟ್ಟಿಗೆ ಅಂಗಡಿಗಳವರ ಉದಾರತೆ ಈ ಅಮೆರಿಕದ ವಾಲ್ ಮಾರ್ಟಿಗೆಲ್ಲಿಂದ ಬರಬೇಕು? ಅಲ್ಲದೇ ನಮ್ಮ ಹಬ್ಬ ಹರಿದಿನಕ್ಕೆ, ತಿಥಿ, ವಾರ ನಕ್ಷತ್ರಗಳ ವಿಶೇಷತೆಯ ಆಚರಣೆಗೆ ಬೇಕಾದ ಸಾಮಾನು- ಸರಂಜಾಮುಗಳ ವಿವರ ಅದಕ್ಕೆಲ್ಲಿ ದಕ್ಕಬೇಕು? ಒಂದು ವೇಳೆ ದೇಶೀ ಅಗತ್ಯಗಳನ್ನು ಅರ್ಥಮಾಡಿಕೊಂಡು ಆ ಸೌಲಭ್ಯಗಳನ್ನೆಲ್ಲ ಒದಗಿಸಿದರೂ, ಮೂಲತಃ ಲಾಭದ ಉದ್ದೇಶವನ್ನೇ ಇಟ್ಟುಕೊಂಡಿರುವ ಅಂಥ ಕಂಪನಿಗಳು ವರ್ಷದುದ್ದಕ್ಕೂ ಅವನ್ನೆಲ್ಲ ಮಾರುತ್ತ ಕೂತರೆ, ಅಂಥ ವಿಶಿಷ್ಠ ಆಚರಣೆಗಳ ಅರ್ಥವಾದರೂ ಹ್ಯಾಗೆ ಉಳಿಯಕ್ಕೆ ಸಾಧ್ಯ? ಅದೆಲ್ಲ ಇರಲಿ, ಓದು ತಲೆಗೆ ಹತ್ತದೆ, ಸೊಂಟ ಬಗ್ಗಿಸಿ ಹೊಲ ಗದ್ದೆಗಳಲ್ಲಿ ಗೇಯದ ಶೋಕೀಲಾಲರಿಗೆಲ್ಲ ಸಂತ್ರಸ್ತ ಸಲಹಾ ಕೇಂದ್ರಗಳಾಗಿದ್ದ ಈ ಚಿಲ್ಲರೆ ಅಂಗಡಿಗಳ ವ್ಯವಹಾರ ವಿದೇಶಿಯರ ಪಾಲಾದರೆ ನಮ್ಮ ಹುಡುಗರ ಪಾಡೇನು?

ನಮ್ಮೂರಿನ ಹೈಕಳಿಗೆ ಸರ್ಕಾರೀ ಕಛೇರಿಗಳ ಗುಮಾಸ್ತಿಕೆ, ಬೇಸಾಯ, ಕೂಲಿ, ಚಿಕ್ಕಪುಟ್ಟ ಕಂಟ್ರಾಕ್ಟು ಬಿಟ್ಟರೆ ಉಳಿದಂತೆ ಕೈ ಹಿಡಿಯುತ್ತಿದ್ದ ಉದ್ಯೋಗವೆಂದರೆ ಚಿಲ್ಲರೆ ಅಂಗಡಿ ನಡೆಸುವುದು. ಓದು ತಲೆಗೆ ಹತ್ತದೇ ಅಥವ ವ್ಯವಹಾರವೇ ಸಲೀಸು ಅಂದುಕೊಂಡು ಬಡ್ಡಿಗೆ ದುಡ್ಡು ಕೊಡುವವರಿಗೆ ಕೂತುಕೊಳ್ಳಲೊಂದು ಜಾಗ ಮತ್ತು ಮಾಡಲೊಂದು ಉದ್ಯೋಗವೆಂಬಂತೆ ಈ ಚಿಲ್ಲರೆ ಅಂಗಡಿಗಳು. ಮತ್ತೂ ಕೆಲವೊಮ್ಮೆ ಪಿಯುಸಿಯಲ್ಲೇ ಪ್ರೇಮ ಪ್ರಕರಣ ನಡೆಸಿ, ಮದುವೆಯೂ ಆದ ಸಾಹಸಿಗಳಿಗೆ ಕೈ ಹಿಡಿದು ಬದುಕು ರೂಪಿಸುತ್ತಿದ್ದವು ಈ ಚಿಲ್ಲರೆ ಅಂಗಡಿಗಳೇ! ಹೆಚ್ಚು ಬಂಡವಾಳ ಬೇಡದ ಆದರೆ ಜನರೊಂದಿಗಿನ ಒಡನಾಟವೇ ಮುಖ್ಯವಾದ ಈ ಉದ್ಯೋಗ ಎಲ್ಲರಿಗೆ ಒಲಿಯುವುದೂ ಕಡಿಮೆ. ಇವತ್ತಿದ್ದ ಅಂಗಡಿ ನಾಳೆ ಮಾಯವಾಗುವುದೂ ಈ ಕಾರಣಕ್ಕೇ. ದೊಡ್ಡ ದೊಡ್ಡ ಮಂಡಿ ವರ್ತಕರಿಂದ ಸಾಮಾನು ಸರಂಜಾಮುಗಳನ್ನು ವಾರದ ಲೆಕ್ಕದಲ್ಲಿ ಸಾಲವಾಗಿ ಪಡೆದು ಸ್ಥಾಪಿತವಾಗುವ ಪೆಟ್ಟಿಗೆ ಅಂಗಡಿಗಳು ಮುದೊಂದು ದಿನ ಧೀರುಭಾಯಿ ಅಂಬಾನಿಯಂಥವರ ಇತಿಹಾಸ ಬರೆದಿರುವುದೂ ಸುಳ್ಳಲ್ಲ.

ಚಿಲ್ಲರೆ ದಿನಸಿ ಅಂಗಡಿ ಪ್ರಾರಂಭಿಸುವುದು ಅಂದರೆ ಮಳಿಗೆಯೊಂದನ್ನು ಬಾಡಿಗೆ ಪಡೆಯುವುದು, ಅದಕ್ಕೆ ಶೆಲ್ಪುಗಳನ್ನು ಮಾಡಿಸುವುದು, ಸಕ್ಕರೆ, ಅಕ್ಕಿ, ಗೋಧಿಹಿಟ್ಟಿನಿಂದ ಹಿಡಿದು, ಶ್ಯಾಂಪು, ಸೋಪು, ಪೇಶ್ಟು, ಗುಟ್ಕಾ, ನವರತ್ನ ಎಣ್ಣೆಯವರೆಗೆ ಎಲ್ಲ ಪ್ಲಾಸ್ಟಿಕ್ ಸರಗಳನ್ನೂ ಬಂದವರ ಕಣ್ಣಿಗೆ ಕಾಣುವಂತೆ ನೇತು ಹಾಕುವುದು, ಕ್ಯಾಷ್ ಟೇಬಲ್ಲಿನ ಮೇಲೆ ಮನೆದೇವರ ಫೋಟೋ ಹಾಕಿಸಿ, ಆ ಟೇಬಲ್ಲಿಗೊಂದು ಗಟ್ಟಿ ಬೀಗ ಹಾಕುವುದು ಇತ್ಯಾದಿ ಇತ್ಯಾದಿ ಸೇರಿವೆ. ಆದರೆ ಪೆಟ್ಟಿಗೆ ಅಂಗಡಿ ತೆರೆಯುವುದು ದಿನಸಿ ಅಂಗಡಿ ತೆರೆದಷ್ಟು ಸುಲಭದ ಕೆಲಸವಲ್ಲ. ಏಕೆಂದರೆ ದಿನಸಿ ಅಂಗಡಿ ನಡೆಸುವುದು ಮಳಿಗೆಯಲ್ಲಾದ್ದರಿಂದ ಮಳಿಗೆಯ ಮಾಲಿಕರಿಗೆ ಮುಂಗಡ ಕೊಟ್ಟು, ಕರಾರು ಮಾಡಿಕೊಂಡರೆ ಉಳಿದದ್ದು ಸುಲಭ. ಆದರೆ ಪುಟ್ಟ ಪೆಟ್ಟಿಗೆ ಅಂಗಡಿ ತೆರೆಯುವುದು ಬಲು ಕಷ್ಟದ ಕೆಲಸ. ಪೆಟ್ಟಿಗೆ ತಯಾರಿಸುವ ಬಡಗಿಗಳೂ ದುರ್ಲಭದ ಈ ಕಾಲದಲ್ಲಿ ಪೆಟ್ಟಿಗೆಗೆ ಬೇಕಾದ ಮರಮುಟ್ಟು ಹೊಂದಿಸುವುದೂ ಹಾಗೆ ಜೋಡಿಸಿದ ಪೆಟ್ಟಿಗೆಗೊಂದು ಅನುಕೂಲಕರ ಜಾಗ ಮಾಡಿಕೊಂಡು ಅದನ್ನು ಸ್ಥಾಪಿಸುವುದೂ ಕಷ್ಟ, ಕಷ್ಟ. ಮಳಿಗೆಯಂತೆ ಖಾಸಗಿಯವರ  ಸ್ವತ್ತಿನಲ್ಲಿಲ್ಲದ ಜಾಗದಲ್ಲಿ ಆದರೆ ಸಾರ್ವಜನಿಕರು ಸುಳಿದಾಡುವ ಸ್ಥಳದಲ್ಲಿ ಪೆಟ್ಟಿಗೆ ಅಂಗಡಿಗೆ ಜಾಗ ಹುಡುಕುವುದೇ ಮೊದಲ ಸi ಸ್ಯೆ. ಬಸ್ ಸ್ಟಾಂಡ್, ದೇವಸ್ಥಾನ, ಆಸ್ಪತ್ರೆ, ಶಾಲೆ ಇವು ಪೆಟ್ಟಿಗೆ ಅಂಗಡಿ ಇಡಲು ಸೂಕ್ತ ಸ್ಥಳಗಳು. ಆದರೆ ಈಗಾಗಲೇ ಅಲ್ಲಿ ಅನುಸ್ಥಾಪಿತಗೊಂಡಿರುವ  ಹಳೆಯ ಅಂಗಡಿಗಳವರು ತಮ್ಮ ವ್ಯಾಪಾರ ಕುಸಿಯಬಹುದೆನ್ನುವ ಕಾರಣದಿಂದ ಹೊಸ ಅಂಗಡಿಯವರಿಗೆ ಜಾಗ ಹೊಂದಿಸಿಕೊಡಲು ತಕರಾರು ಎತ್ತಬಹುದು. ಗ್ರಾಮ ಪಂಚಾಯತು, ಪಟ್ಟಣ ಪಂಚಾಯತಿನವರು ಲೈಸೆನ್ಸ್ ಇಲ್ಲ ಅಂತ ಮುಚ್ಚಿಸಬಹುದು. ಅಂಗಡಿಯಾತನ ಅದೃಷ್ಟವೇ ಕೈ ಕೊಟ್ಟು ವ್ಯಾಪಾರ ಸಾಗದೇ ಅಂಗಡಿ ಮುಚ್ಚಬೇಕಾಗಿ ಬರಬಹುದು. ಹಾಗಾಗಿ ಹೊಸ ಪೆಟ್ಟಿಗೆಗಿಂತ ಸಿಕ್ಕಬಹುದಾದ ಹಳೆಯ ಪೆಟ್ಟಿಗೆಗಳ ಕಡೆಯೇ ಗಮನ ಕೊಡಬೇಕಾಗಿ ಬರುತ್ತದೆ. ಆದರೆ ಹಳೆಯ ಪೆಟ್ಟಿಗೆಯನ್ನು ಹೊಸ ರೀತಿಗೆ ಮಾರ್ಪಡಿಸುವುದೂ ಬಡಗಿಯ ಕುಶಲತೆಯ ಮೇಲೆ ನಿಂತಿರುತ್ತದೆ. ಆರಾಮಾಗಿ ಹೊತ್ತು ಸಾಗಿಸಬಹುದಾದ ಪೆಟ್ಟಿಗೆ ಅಂಗಡಿಯಲ್ಲಿ ಇಡಬಹುದಾದ ವಸ್ತುಗಳ ಪಟ್ಟಿಯೇನೂ ಪುಟ್ಟದ್ದಲ್ಲ. ಬರಿ ಬೀಡಿ ಸಿಗರೇಟುಗಳ ವ್ಯಾಪಾರ ಅಷ್ಟೇನೂ ಸುಖಕರವಾದದ್ದೂ ಅಲ್ಲ. ಬೀಡಿ ಸಿಗರೇಟಿನ ಜೊತೆಗೆ ಕಾಫಿ, ಟೀಗಳನ್ನು ಮಾಡಿ ಮಾರಬಹುದು. ಫ್ಲಾಸ್ಕಿನಲ್ಲಿಟ್ಟುಕೊಂಡ ಕಾಫಿ, ಟೀಗಳನ್ನು ಬೀದಿ ಬೀದಿ ಸುತ್ತಿ ಮಾರಿಯೇ ಜೀವನ ನಡೆಸುತ್ತಿರುವವರಿಲ್ಲವೇನು?

ಆದರೆ ಬರೀ ಸಿಗರೇಟು, ಬೀಡಿ, ಟೀ, ಕಾಫಿಗಳನ್ನು ಮಾರುವ ಅಂಗಡಿಯೆಂದರೆ ಯಾಕೋ ಸಮಾಧಾನವಾಗದ ವಿಷಯ. ಧೂಮಪಾನಿಗಳ ಹೊಗೆಯ ಕಾರಣದಿಂದಾಗಿ ಇತರರು ಅತ್ತ ಸುಳಿಯದೇ ಇರಬಹುದು. ಹಾಗಾದಾಗ ಅಂಗಡಿ ಇರುವ ಪ್ರದೇಶಕ್ಕೆ ಅನುಗುಣವಾಗಿ ಅಲ್ಲಿನ ಜನಗಳ ಅಭೀಪ್ಸೆಯಂತೆ ಅಂಗಡಿಯ ಸಾಮಾನಿನ ಪಟ್ಟಿ ಇರಬೇಕಾಗುತ್ತದೆ. ದೇವಸ್ಥಾನದ ಹತ್ತಿರದ ಅಂಗಡಿಯಲ್ಲಿ ಪೂಜೆಗೆ ಬೇಕಾದ ಹಣ್ಣು, ಕಾಯಿ, ಕರ್ಪೂರ, ಊದುಬತ್ತಿಗಳ ಜೊತೆಗೆ ಮಕ್ಕಳು ಇಷ್ಟಪಡುವ ಬಲೂನು, ಪೆಪ್ಪರಮೆಂಟು, ಚಾಕಲೇಟುಗಳು ಅದರ ಜೊತೆಗೇ ವಿಳ್ಳೇದೆಲೆ, ಅಡಕೆ , ಸುಣ್ಣಗಳನ್ನೂ ಇಡಬೇಕಾಗುತ್ತದೆ. ಆಸ್ಪತ್ರೆ ಹತ್ತಿರ ತೆರೆಯುವ ಪೆಟ್ಟಿಗೆ ಅಂಗಡಿಯಲ್ಲಿ ಬ್ರೆಡ್ಡು, ಬಾಳೆಹಣ್ಣು, ಎಳನೀರು ಮುಖ್ಯವಾಗಿ ಇರಲೇಬೇಕು. ಇನ್ನು ಶಾಲೆಯ ಹತ್ತಿರದ ಪೆಟ್ಟಿಗೆ ಅಂಗಡಿಯಲ್ಲಿ ಚುರಮುರಿ, ಖಾರಾಸೇವೆ, ಬಬಲ್ ಗಮ್ಮು, ಸಕ್ಕರೆ ಮಿಠಾಯಿ, ಬಾಲ್ ಪೆನ್ನಿನ ರಿಫಿಲ್, ಬಿಳಿಹಾಳೆ, ಎಕ್ಸರ್‌ಸೈಜ್ ಪುಸ್ತಕ, ಸ್ಕೇಲು, ಖಾಯಂ ಆಗಿ ಇರಲೇಬೇಕಾದ ವಸ್ತುಗಳು. ನಮ್ಮ ಕಾಲದಲ್ಲಿ ಸ್ಲೇಟು ಬಳಪಗಳಿಲ್ಲದಿದ್ದ ಶಾಲೆಯ ಹತ್ತಿರದ ಅಂಗಡಿಗಳು ಯಾವ ಲೆಕ್ಕಕ್ಕೂ ಇರುತ್ತಿರಲಿಲ್ಲ. ಇನ್ನು ಬಸ್ ಸ್ಟಾಂಡ್ ಹತ್ತಿರದ ಅಂಗಡಿಗಳಲ್ಲಿ ಬಾಳೆಹಣ್ಣು, ಎಲೆಯಡಿಕೆ, ತಟ್ಟೆ ಇಡ್ಳಿ, ಬೀಡಿ, ಸಿಗರೇಟು, ನಶ್ಯಾ ಪುಡಿ, ಮಾಮೂಲು ಮೆನು. ಸಂಜೆಯಾದರೆ ಭರ್ರೋ ಎನ್ನುವ ಪಂಪ್ ಸ್ಟೌವಿನಲ್ಲಿ ಬಿಸಿ ಬಿಸಿ ಮೆಣಸಿನ ಕಾಯಿ ಬೋಂಡ ಕರಿಯುವುದಾದರೆ ಇನ್ನೂ ಒಳ್ಳೆಯದು. ಜೊತೆಗೆ ಬಸ್ ಸ್ಟಾಂಡಿನ ಪೆಟ್ಟಿಗೆ ಅಂಗಡಿಗಳವರಿಗೆ ಉಳಿದ ಅಂಗಡಿಯವರಿಗಿಂತ ತಾಳ್ಮೆ ಮತ್ತು ಸಹನೆ ಇರಲೇಬೇಕು. ಏಕೆಂದರೆ ಬಸ್ಸಿಗೆ ಕಾಯುತ್ತ ನಿಂತವರ ತಲಾತಟ್ಟೆ ಮಾತುಗಳು, ಬಂದ ಬಾರದ ಬಸ್ಸುಗಳ ಬಗ್ಗೆ ಎನ್‌ಕ್ವಯರಿಗಳೂ ಸರ್ವೇ ಸಾಮಾನ್ಯ ಸಂಗತಿಗಳು. ಜೊತೆಗೆ ಬಸ್ಸಿಳಿದ ಕೂಡಲೇ ಅಂಗಡಿಯ ಪೆಟ್ಟಿಗೆಯ ಹಿಂದೋಡಿ ಮೂತ್ರ ಮಡುವವರನ್ನೂ ಗದರಿಸಿ ಓಡಿಸಬೇಕಾದ ಗತ್ತು, ಘನಸ್ತಿಕೆಯೂ ಇರಬೇಕಾಗುತ್ತದೆ. ಬಂದು ಹೋಗುವ ಬಸ್ಸುಗಳ ಜೊತೆಗೇ ಯಾವ ಯಾವ ಊರಿಗೆ  ಎಷ್ಟು ದೂರ, ಅಲ್ಲಿಂದ ಮತ್ತೆ ವಾಪಾಸು ಎಷ್ಟು ಹೊತ್ತಿಗೆ ಈ ಕಡೆಗೆ ಬಸ್ಸು ಇದೆ ಇತ್ಯಾದಿ ಲೋಕ ಜ್ಞಾನದ  ವಿಚಾರಗಳು ಇವರಿಗೆ ಗೊತ್ತಿರಲೇಬೇಕು. ಇಲ್ಲವಾದಲ್ಲಿ ಯಾರೂ ಆ ಅಂಗಡಿಯತ್ತ ಹೆಜ್ಜೆ ಹಾಕುವುದೇ ಅನುಮಾನ!

ಈಗ ನೆನಪಿಸಿಕೊಂಡು ಸರಿಯಾಗಿ ಹೇಳಿ, ನಿಮಗೆ ಬೇಕಾದ ಸಾಮಾನನ್ನೆಲ್ಲ ನೀವೇ ತಳ್ಳುಗಾಡಿಗೆ ಹಾಕಿಕೊಂಡು, ಉದ್ದೋಉದ್ದದ ಕ್ಯಾಷ್ ಕೌಂಟರಿನ ಮುಂದೆ ನಿಂತು ಕಾರ‍್ಡ್ ಸ್ವೈಪ್ ಮಾಡಿ ಪ್ಯಾಕ್ ಆದ ಪ್ಲಾಸ್ಟಿಕ್ ಚೀಲಕ್ಕೂ ಎಕ್ಟ್ರಾ ದುಡ್ಡು ಕಕ್ಕಿ ವ್ಯಾಪಾರ  ನಡೆಸುವ ಸೂಪರ್ ಮಾರ್ಕೆಟ್ಟಿನ ಮಾಲೀಕನ ಮುಸುಡಿಯನ್ನಾದರೂ ನೀವು ಯಾವತ್ತಾದರೂ ನೋಡಿದ್ದೀರ? ಇವತ್ತು ಕ್ಯಾಷಿನಲ್ಲಿ ಕೂತವರು ನಾಳೆ ಬಂದಾಗ ಕಾಣುವುದೇ ದುಸ್ತರವಾಗಿರುವ ಈ ವಾಣಿಜ್ಯ ಸಂಕೀರ್ಣಗಳಲ್ಲಿ ವ್ಯಾಪಾರದ ತಹತಹಿಕೆ ಕಾಣುವುದೇ ವಿನಾ ಮನುಷ್ಯ ಸಹಜ ಸಂಬಂಧಗಳೆಂದೂ ಚಿಗುರಿರುವ ಉದಾಹರಣೆಗಳಿಲ್ಲವೇ ಇಲ್ಲ. ಆದರೂ ದೊಡ್ದ ದೊಡ್ಡ ಮಾಲುಗಳ ಜನದಟ್ಟಣೆಯ ನಡುವೆಯೂ ಯುವ ಪ್ರೇಮಿಗಳ ಓಡಾಟ ಮಾತ್ರ ನಿಜಕ್ಕೂ ಚೇತೋಹಾರಿ. ಪೋಲೀಸರ ಕಾಟವಿಲ್ಲದೆ, ಪೋಲಿಗಳ ಕಿಚಾಯಿಸುವಿಕೆಯಿಲ್ಲದೇ ಮಾಲುಗಳ ವೈಭವೋಪೇತ ಹೋಟೆಲ್ಲುಗಳಲ್ಲಿ ಗಂಟೆಗಟ್ಟಲೇ ಕೂತು ಅರ್ಧರ್ಧ ಕಾಫಿ ಕುಡಿಯುವ ಪ್ರೇಮಿಗಳ ಹುಚ್ಚು ಧೈರ್ಯವನ್ನೂ ಪ್ರಶಂಸಿಸಲೇ ಬೇಕು. ಈ ಪ್ರೇಮಿಗಳು ಹೀಗೆ ಬರಿದೇ ಓಡಾಡುವುದನ್ನು ತಪ್ಪಿಸಲು ಸಿಸಿ ಟಿವಿಗಳನ್ನಿಟ್ಟು ಅವರ ಹಿಂದೆ ಖಾಸಗೀ ಸೆಕ್ಯೂರಿಟಿಯೆಂಬ ಹುಂಬ ದಾಂಡಿಗರನ್ನು ಬಿಟ್ಟು ಗದರಿಸುವ ಮಾಲುಗಳೂ ಇವೆಯೆಂದು ಕೇಳಿಬಲ್ಲೆ! ವ್ಯಾಪಾರ ಮಾಡದೇ ಅಲ್ಲಿನ ಹವಾನಿಯಂತ್ರಕಗಳ ತಂಪೆ ರಿಗೆ ಮನಸೋತ ಮನುಷ್ಯ ಸಹಜ ದೌರ್ಬಲ್ಯಗಳು ನನ್ನಂಥ ಮಧ್ಯಮವರ್ಗದವರಲ್ಲಿ ತೀರ ಸಾಮಾನ್ಯ !

ಜಾಗತೀಕರಣದ ಈ ನವಪಲ್ಲಟದ ಕಾಲದಲ್ಲಿ ಎಂಥೆಂಥ ಕೈಗಾರಿಕೆಗಳು, ಉದ್ದಿಮೆಗಳು ನೆಲಕಚ್ಚಿ ನಿರ್ನಾಮವಾಗಿರುವಾಗಲೂ ದಿನದಿಂದ ದಿನಕ್ಕೆ ಚಿಲ್ಲರೆ ಅಂಗಡಿಗಳ ಸಂಖ್ಯೆ ಸಣ್ಣ ಪುಟ್ಟ ಊರುಗಳಲ್ಲಿ ಮಾತ್ರ ಹೆಚ್ಚುತ್ತಲೇ ಇರುವುದನ್ನು ವಿಶ್ಲೇಷಿಸಲು ಎಂಬಿಯೆದಂಥ ಪದವಿಯ ಅವಶ್ಯಕತೆಯೇನೂ ಬೇಕಿಲ್ಲ. ದಿನಕ್ಕೊಂದು ಹೊಸ ಬಡಾವಣೆ ತಲೆ ಎತ್ತುವ ನಗರಗಳಲ್ಲಂತೂ ಇವುಗಳ ಅಗತ್ಯ ತುಂಬ ಹೆಚ್ಚು. ಈ ಚಿಲ್ಲರೆ ಅಂಗಡಿಗಳವರು ಒಂದರ್ಥದಲ್ಲಿ ಹೊಸ ಬಡಾವಣೆಗಳ ಗೈಡ್‌ಗಳಾಗಿಯೂ ಕೆಲಸ ಮಾಡುತ್ತಿರುತ್ತಾರೆ. ಯಾವ ಬೀದಿಯ ಯಾವ ಗುರುತಿನ ಹತ್ತಿರ ಯಾರ ಮನೆ ಇದೆಯೆಂಬ ಸೂಕ್ಷ್ಮ ವಿಷಯ ಈ ಅಂಗಡಿಗಳವರಿಗೆ ಗೊತ್ತಿರುತ್ತದೆ. ಅಲ್ಲದೇ ಯಾವ ಹೊಸಬರು ಆ ಏರಿಯಾಕ್ಕೆ ಯಾವ ಯಾವ ಕಾರಣಕ್ಕೆ ಆಗಾಗ ಬಂದು ಹೋಗುತ್ತಾರೆ, ಹಾಗೆ ಬಂದವರು ಏನೇನು ಮಾಡುತ್ತಾರೆ ಅನ್ನುವುದೆಲ್ಲ ಅವರಿಗೆ ಕರತಲಾಮಲಕ. ನೀವು ಎಷ್ಟು ದುಡ್ಡು ಇಟ್ಟುಕೊಂಡಿರಿ, ಯಾವುದೇ ಬ್ಯಾಂಕಿನ ಕಾರ್ಡು ಇಟ್ಟುಕೊಂಡಿರಿ, ಒಂದು ಸೂಪರ್ ಮಾರ್ಕೆಟ್ಟಿಗೆ ಹೋಗಿ ಒಂದೇ ಒಂದು ಸಿಗರೇಟು ಕೊಳ್ಳಿ ನೋಡೋಣ. ನೀವು ಕೊಳ್ಳಲು ತಯಾರಿದ್ದರೂ ಅವನು ಕೊಡಬೇಕಲ್ಲ! ಅದೇ ದಿನಕ್ಕೊಂದು ಸಾರಿ ಒಂದೇ ಒಂದು ಸಿಗರೇಟು ಕೊಳ್ಳಲು ನಿಮ್ಮ ಮನೆಯ ಹತ್ತಿರವೇ ಇರುವ ಚಿಲ್ಲರೆ ಅಂಗಡಿಗೆ ಒಂದೆರಡು ದಿನ ಹೋಗಿ ನೋಡಿ. ಮೂರನೇ ದಿನ ಹೋಗದೇ ಬಿಟ್ಟಿರೋ ದಾರಿಯಲ್ಲೆಲ್ಲಾದರೂ ಆ ಅಂಗಡಿಯವನು ಸಿಕ್ಕರೆ ನಿಮ್ಮ ಕುಶಲ ವಿಚಾರಿಸದೇ ಬಿಡುವುದಿಲ್ಲ. ಕೆಲಸಕ್ಕೆ ಬಾರದ ಕೆಲಸಗಳಲ್ಲಿ ಮುಳುಗಿ ಹೋಗಿ ಜೀವನ ಸ್ವಾರಸ್ಯ ಕಳೆದುಕೊಂಡವರೆಲ್ಲ ದಿನಕ್ಕೊಂದು ಬಾರಿಯಾದರೂ ಪುಟ್ಟ ಅಂಗಡಿಗಳ ಬಳಿ ನಿಂತು ಅಲ್ಲಿ ನಡೆಯುವ ಮಾತು ಕತೆಗಳಲ್ಲಿ ಭಾಗಿಯಾದರೆ ಜೀವನ ಸ್ವಾರಸ್ಯ ತನಗೆ ತಾನೇ ಪುಟಿಯುತ್ತೆ, ಪುಟವಿಟ್ಟ ಚೆಂಡಿನಂತೆ. ಎಂತೆಂಥ ಮಾತು ಅಂತೀರಿ? ಶ್ಯಾನುಭೋಗರ ಮನೆ ಎಮ್ಮೆ ಕಳೆದು ಹೋಗಿದ್ದರಿಂದ ಹಿಡಿದು ಶ್ಯಾಂಭಟ್ಟರ ಮಗ ಸಾಬರ ಹುಡುಗಿಗೆ ಲೈನು ಹೊಡೆಯುವವರೆಗೆ! ಗ್ರಾಮ ಪಂಚಾಯತು ಸೆಕ್ರೆಟರಿ ಲಂಚ ಕೇಳಿದ ವಿಷಯದಿಂದ ಹಿಡಿದು ತ್ರೀಜಿ ಸ್ಕ್ಯಾಮಿನ ಸುದ್ದಿಯವರೆಗೆ!

ಒಂದು ವೇಳೆ ಈ ಚಿಲ್ಲರೆ ಅಂಗಡಿಗಳೇ ಇರದಿರುತ್ತಿದ್ದರೆ ಮತ್ತೆಷ್ಟು ನಿರುದ್ಯೋಗ ಸಮಸ್ಯೆ ಕಾಡುತ್ತಿತ್ತು, ಅಲ್ಲವೇ? ಹತ್ತಿರ ಹತ್ತಿರ ಕೋಟಿ ಸಂಖ್ಯೆಯ ಅಂಗಡಿಗಳಿವೆಯೆಂದರೆ ಅಷ್ಟೇ ಸಂಖ್ಯೆಯ ಜನ ಈ ಉದ್ಯೋಗದಲ್ಲಿದ್ದಾರೆ. ಅವರನ್ನಾಶ್ರಯಿಸಿರುವವರ ಸಂಖ್ಯೆಯೇನು ಕಡಿಮೆಯೇ? ಈ ಅಂಗಡಿಗಳಲ್ಲಷ್ಟೇ ಮಾರಾಟವಾಗಬಹುದಾದ ನಿಪ್ಪಟ್ಟು, ಕೋಡುಬಳೆ, ಖಾರಾಸೇವೆ, ಕಂಬರಗಟ್ಟು, ಕಡ್ಲೆ ಮಿಠಾಯಿ ಇತ್ಯಾದಿ ಇತ್ಯಾದಿ ವಸ್ತುಗಳನ್ನು ತಯಾರಿಸುವವರ ಸಂಸಾರಗಳಿಗೂ ಈ ಇದೇ ಚಿಲ್ಲರೆ ಅಂಗಡಿಗಳು ಆಶ್ರಯ ತಾಣವಾಗಿಲ್ಲವೇ? ಇಂಥ ಸೂಕ್ಷ್ಮ ತಿಳಿಯದ ನಮ್ಮನ್ನಾಳುವ ದೊರೆಗಳು ಈ ಚಿಲ್ಲರೆ ಮಾರಾಟ ಕ್ಷೇತ್ರಕ್ಕೆ ಬಿಳಿತೊಗಲಿನವರನ್ನು ಮತ್ತವರ ಬಂದವಾಳವನ್ನೂ ಬಯಸುತ್ತಾರೆಂದರೆ ನಮ್ಮ ಆರ್ಥಿಕತೆಗೆ ವಂಚನೆ ಮಾಡಿದಂತಲ್ಲವೇ? ದೇಶದ ಆರ್ಥಿಕ ಸ್ಥಿತಿಯನ್ನು ಕಾಪಾಡಹೊರಟರುವವರಿಗೆ  ತಳಮಟ್ಟದ ತಿಳುವಳಿಕೆ ಇಲ್ಲದೇ ಹೋದರೆ ಹೀಗೇ ಆಗುವುದು.

ಯಾರು ಏನು ಮಾಡಲಿ, ಬಿಡಲಿ, ಈ ಅಂಗಡಿಗಳವರ ಪರ ವಕಾಲತ್ತು ವಹಿಸಲಿ, ಬಿಡಲಿ, ಚುನಾವಣೆಗಳ ಕಾಲದಲ್ಲಿ ಮಾತ್ರ ಬಹುತೇಕ ಚಿಲ್ಲರೆ ಅಂಗಡಿಗಳು ಯಾವುದೋ ಒಂದು ಪಕ್ಷದ ಪರವಾಗಿ ನಿಲ್ಲದೇ ಪಕ್ಷಾತೀತವಾಗಿ ವರ್ತಿಸುವುದನ್ನು ಇವುಗಳನ್ನು ಬಲ್ಲ ಎಲ್ಲರೂ ಬಲ್ಲರು. ಎಲ್ಲ ಬಗೆಯ ಜನರ ಎಲ್ಲ ಅಭಿಪ್ರಾಯಗಳಿಗೂ ಈ ಅಂಗಡಿಗಳು ತೆರೆದ ಕಿವಿಗಳು. ಯಾವ ವಿಧಾನ ಸಭೆ, ಲೋಕಸಭೆಯ ಅಧಿವೇಶನದಲ್ಲೂ ಚರ್ಚೆಯಾಗದ ಹಲವು ವಿಚಾರಗಳು ಈ ಅಂಗಡಿಗಳ ಮುಂಗಟ್ಟುಗಳಲ್ಲಿ ನಡೆಯುತ್ತವೆ. ಗಿಜುಗುಡುವ ಜನಗಳ ಮಧ್ಯದಲ್ಲೂ ತನ್ನ ಪಾಡಿಗೆ ತಾನು ವ್ಯಾಪಾರ ಮಾಡಿಕೊಳ್ಳುತ್ತ, ಜನಗಳ ಅಗತ್ಯಕ್ಕೆ ಸ್ಪಂದಿಸುವ ಈ ಅಂಗಡಿ ಮಾಲೀಕರಿಗೆ ಈ ಪ್ರಬಂಧದ ಮೂಲಕ ಹೆಚ್ಚೆಂದರೆ ನನ್ನ ಕೃತಜ್ಞತೆಗಳನ್ನು ತಿಳಿಸಬಹುದಷ್ಟೇ! ಮತ್ತು ಆ ಮೂಲಕ ತಳಮಟ್ಟದ ಆರ್ಥಿಕ ಬೆಳವಣಿಗೆಗೆ ಕಾರಣವಾಗಿರುವ ಚಿಲ್ಲರೆ ವ್ಯಾಪಾರದಲ್ಲಿ ಖಾಸಗೀ ಬಂಡವಾಳದ ಹೂಡಿಕೆಯನ್ನೂ ವಿರೋಧಿಸಬಹುದು. ಯಾವ ವಿಧೇಯಕ ತಂದರೂ, ಜಾಹೀರಾತಿಗೆ ಕೋಟಿಗಟ್ಟಲೆ ಖರ್ಚುಮಾಡಿದರೂ, ಚಿಲ್ಲರೆ ಅಂಗಡಿಗಳ ಗತ್ತು ಮತ್ತು ಅಗತ್ಯಗಳನ್ನು ಯಾವ ಸೂಪರ್ ಮಾರ್ಕೆಟ್ಟೂ ಸರಿಗಟ್ಟಲಾರದೆಂಬ ಭರತ ವಾಕ್ಯ ನಾನಾಡಬಹುದಾದರೂ ಏಕೋ ಇತ್ತೀಚೆಗೆ ನಮ್ಮನ್ನಾಳುವ ದೊರೆಗಳ ತಿಕ್ಕಲುತನ ಮತ್ತು ಪ್ರಾಯಶಃ ಅವರು ಮಾಡಿಕೊಂಡಿರಬಹುದಾದ ಒಳಒಪ್ಪಂದಗಳ ಸುಳಿ ಮುಗ್ಧ ಪೆಟ್ಟಿ ಅಂಗಡಿಗಳ ಒಡೆಯರ ಜೀವನವನ್ನೆಂದಿಗೂ ಕೊನೆಗೊಳಿಸದಿರಲಿ ಎನ್ನುವ ಆಶಯದೊಡನೆ ಈ ಪ್ರಬಂಧಕ್ಕೆ ಮಂಗಳವಾಕ್ಯ ಹಾಡುತ್ತೇನೆ. ಶುಭಮಸ್ತು!
                                                                           

ಕಾಮೆಂಟ್‌ಗಳಿಲ್ಲ: