ಒಟ್ಟು ಪುಟವೀಕ್ಷಣೆಗಳು

ಭಾನುವಾರ, ನವೆಂಬರ್ 2, 2008

aLate

ಅಳತೆ
ಹಿಂದೆಂದೋ ರಾಮಾನುಜನ್ ಪರಿಚಯಿಸಿದ್ದ
ಆ ಅದೇ ಅಂಗುಲದ ಹುಳು
ಮೊನ್ನೆ ಮಾರ್ಕೆಟ್ಟಲ್ಲಿ ಅಚಾನಕ್ಕಾಗಿ ಸಿಕ್ಕು
ಉಭಯ ಕುಶಲೋಪರಿ ಕೇಳಿತು:

ಗುಬ್ಬಚ್ಚಿಯ ಬಾಲ, ಮುದಿ ಗೂಬೆಯ ಹೊಟ್ಟೆ
ಹಂಸದ ಕತ್ತು, ಹಾಗೇ ಹಾಲಕ್ಕಿಯ ಮೂಗು
ಕೊಕ್ಕರೆಯಂತೇ ಇದ್ದ ಇನ್ಯಾರದೋ ತೆಳ್ಳನೆಯ ಕಾಲು,
ಉದ್ದವಾಗುವ ನಾಲಿಗೆ, ಕುಕ್ಕುವ ಕೊಕ್ಕು,
ಯೋನಿ, ಲಿಂಗಗಳನ್ನಳೆಯುವಾಗಲೂ ಸಂತ-
ನಂತಿದ್ದೂ, ಹಾಡನ್ನಳೆಯುವ ನೆವದಲ್ಲಲೆದೂ ಅಳೆದೂ
ಸವೆದಿರುವ ತನ್ನ ಅಳತೆಯ ಪಟ್ಟಿ-
ಗೆ ಪ್ರಮಾಣ ಪತ್ರ ಕೊಟ್ಟವರ ಪಟ್ಟಿ ಬಿಡಿಸಿಟ್ಟಿತು.

ಹಾಗೇ ಬುದ್ಧ, ಬಸವ, ಗಾಂಧಿ, ಏಸು
ಕನಕ, ಪುರಮ್ದರರ ಜೊತೆಗೇ ಬೆರೆವ
ಅದೆಷ್ಟೆಷ್ಟೋ ಹೆಸರುಗಳನುದ್ಧರಿಸಿತು.
ನಿಖರವಾಗದವರಳತೆ ಸೋತೆನೆಂದಿತು.

ಇಷ್ಟಿಷ್ಟೇ ಎಂದು ತುಂಬಿಸಿಕೊಂಡಿದ್ದ ಕೈಯ ಚೀಲ
ಭಾರವೆನ್ನಿಸಿ ಕೈ ಬದಲಿಸಲು, ದೃಷ್ಟಿ ಬದಲಿಸಿದೆ.

ಆ ಹುಳು ಮತ್ತೆಲ್ಲೋ ಮರೆಯಾಗಿ ಹೋಯಿತು!

2 ಕಾಮೆಂಟ್‌ಗಳು:

A.SUBRAMANYA ಹೇಳಿದರು...

CHENNAGIDE

ಹರೀಶ್ ಕೇರ ಹೇಳಿದರು...

ನೀವು ಬ್ಲಾಗ್ ಲೋಕಕ್ಕೆ ಬಂದಿರುವುದು ಖುಷಿಯಾಯಿತು. ವಿಜಯೀಭವ !
- ಹರೀಶ್ ಕೇರ