ಒಟ್ಟು ಪುಟವೀಕ್ಷಣೆಗಳು

ಗುರುವಾರ, ಜನವರಿ 1, 2009

ವಿಮಾ ರಂಗದ ಮೇಲೆ ಉದಾರೀಕರಣದ ಕರಿ ನೆರಳು

ವಿಮಾರಂಗದ ಮೇಲೆ ಉದಾರೀಕರಣದ ಕರಿನೆರಳು
ಸದ್ಯೋವರ್ತಮಾನದ ಜಾಗತಿಕ ಹಣಕಾಸು ಪರಿಸ್ಥಿತಿ ತಿಳಿದವರಿಗೆ ಈಗಿನ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ವಿವರಿಸಬೇಕಿಲ್ಲ. ಈಗಾಗಲೇ ನಮ್ಮ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಹಲವು ‘ದೈತ್ಯ’ ಕಂಪನಿಗಳು ಮತ್ತವುಗಳ ಒಡೆತನದಲ್ಲಿದ್ದ ಬ್ಯಾಂಕು, ವಿಮೆ, ಇತರೆ ಹಣಕಾಸು ವ್ಯವಹಾರಗಳೆಲ್ಲ ಕುಸಿದುಬಿದ್ದು ಆ ಕಂಪನಿಗಳು ದಿವಾಳಿಯಾಗಿರುವ , ಆಗುತ್ತಿರುವ ಸಂದರ್ಭ ಇದು. ಅಮೇರಿಕಾದಲ್ಲಾದ ತಲ್ಲಣಗಳು ಹೀಗೆ ಇಡೀ ವಿಶ್ವವನ್ನೇ ಅಲ್ಲಾಡಿಸಬಹುದೆಂದು ಜಾಗತೀಕರಣ ಪ್ರಕ್ರಿಯೆ ಶುರುವಾಗುವ ಮುನ್ನ ಊಹಿಸಲು ಸಾಧ್ಯವೂ ಇರಲಿಲ್ಲ. ಆದರೆ ಈಗ ಜಾಗತೀಕರಣದ ಬಲೆ ಬೀಸಿ ಎಲ್ಲ ಸಾರ್ವಭೌಮ ದೇಶಗಳನ್ನೂ ತನ್ನ ಹಿಡಿತದಲ್ಲಿಟ್ಟುಕೊಂಡಿರುವ ಅಮೆರಿಕಕ್ಕೆ ನೆಗಡಿಯಾದರೆ ಈ ದೇಶಗಳ ಮೂಗಿನಲ್ಲಿ ನೀರು ಸೋರತೊಡಗುತ್ತದೆ. ಅದು ಕೆಮ್ಮಿದರೆ ಈ ದೇಶಗಳು ಆಸ್ಪತ್ರೆ ಸೇರುತ್ತವೆ.

ಅಮೇರಿಕದ ಆರ್ಥಿಕತೆ ಅಪಾಯದ ಅಂಚು ತಲುಪಿದೆ ಎಂದು ಹೇಳಲು ನಾವೇನು ಆರ್ಥಿಕ ತಜ್ಞರಾಗಿರಬೇಕಿಲ್ಲ. ಜಾಗತೀಕರಣ ಮತ್ತು ಉದಾರೀಕರಣದ ಹುಚ್ಚು ಹತ್ತಿಸಿ ಎಲ್ಲ ಅರ್ಥವ್ಯವಸ್ಥೆಯನ್ನೂ ಖಾಸಗಿಯವರಿಗೆ ಒಪ್ಪಿಸಿದ ಪರಿಣಾಮ ಇದು. ಜಗತ್ತಿನ ಎಲ್ಲ ದೇಶಗಳೂ ಪರಸ್ಪರ ವ್ಯಾವಹಾರಿಕವಾಗಿ ಬೆಸೆದುಕೊಂಡಿರುವ ಕಾರಣ ಅಮೆರಿಕದ ಬಿಕ್ಕಟ್ಟು ಎಲ್ಲ ದೇಶಗಳ ಅರ್ಥ ವ್ಯವಸ್ಥೆಯ ಮೇಲೂ ತನ್ನ ಪರಿಣಾಮ ತೋರುತ್ತ ಸಾಗಿದೆ. ಬ್ರಜಿಲ್ ಮತ್ತು ಇಂಡೋನೇಷಿಯಾದ ಪರಿಸ್ಥಿತಿಯಂತೂ ಶೋಚನೀಯವಾಗಿದೆ. ನಮ್ಮ ದೇಶದ ಮೇಲೆ ಈ ಕಂಪನದ ಪರಿಣಾಮ ತೀವ್ರವಾಗಿಲ್ಲವಾದರೂ ಅಲ್ಪ ಸ್ವಲ್ಪ ನಷ್ಟ ಉಂಟುಮಾಡಿದೆ. ಅಮೆರಿಕ ಮತ್ತು ಸಾಫ್ಟ್ವೇರನ್ನು ನಂಬಿದ್ದ ಬಹುತೇಕ ಖಾಸಗಿ ಸಂಸ್ಥೆಗಳು ತಮ್ಮ ನೌಕರರ ಸಂಖ್ಯೆ ತಗ್ಗಿಸುತ್ತಲೋ, ಅಥವಾ ಅವರ ಸಂಬಳ ಕಡಿತಗೊಳಿಸಿಯೋ ಸುದ್ದಿ ಮಾಡುತ್ತಲೇ ಇವೆ. ಮಾಧ್ಯಮ ಕ್ಷೇತ್ರದ ಮೇಲೂ ಇದರ ಕರಿನೆರಳು ಬಿದ್ದ ಕಾರಣ ನಿಯತಕಾಲಿಕೆಗಳ ಅವಧಿ ಬದಲಾಗತೊಡಗಿದೆ. ಕನ್ನಡದಲ್ಲೂ ಪ್ರಕಟವಾಗುವ ‘ದಿ ಸಂಡೆ ಇಂಡಿಯನ್’ ಪತ್ರಿಕೆಯ ಸ್ಥಳೀಯ ಸಾಪ್ತಾಹಿಕ ಆವೃತ್ತಿಗಳು ಪಾಕ್ಷಿಕ ಪತ್ರಿಕೆಗಳಾಗಿ ಬದಲಾಗಿವೆ.

ಪುಣ್ಯದ ಮಾತೆಂದರೆ ನಮ್ಮ ದೇಶದ ಸಾರ್ವಜನಿಕ ವಲಯದ ಬ್ಯಾಂಕು ಮತ್ತು ವಿಮಾ ವಲಯ ‘ಜಾಗತಿಕ ಕುಸಿತ’ವೆಂದು ಬಿಂಬಿಸಲಾಗಿರುವ ಅಮೆರಿಕಾ ಪ್ರಣೀತ ಅರ್ಥ ವ್ಯವಸ್ಥೆಯ ನರಳಾಟವನ್ನು ಮೆಟ್ಟಿ ನಿಂತಿವೆ. ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ ದೊಡ್ಡ ಮಟ್ಟದಲ್ಲಿ ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತಿರುವುದರ ಜೊತೆಜೊತೆಗೇ ಇನ್ನಿತರ ರಾಷ್ಠ್ರೀಕೃತ ಬ್ಯಾಂಕುಗಳೂ ವಿವಿಧ ಹುದ್ದೆಗಳಿಗೆ ನೇಮಕಾತಿಯ ವಿವರಗಳನ್ನು ಪ್ರಕಟಿಸುತ್ತಲೇ ಇವೆ. ಈ ದೇಶದ ಅತಿದೊಡ್ಡ ವಿಮಾ ಸಂಸ್ಥೆಯಾದ ಎಲ್ಲೈಸಿ ಬರುವ ವರ್ಷದಲ್ಲಿ ಹತ್ತು ಸಾವಿರ ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆಯೆಂದು ಅದರ ಅಧ್ಯಕ್ಷರು ಪ್ರಕಟಿಸಿದ್ದಾರೆ. ಈ ಸಂಸ್ಥೆಗಳು ಗಟ್ಟಿಯಾಗಿ ನಿಲ್ಲಲು ಅವೆಲ್ಲ ಸಾರ್ವಜನಿಕ ವಲಯದಲ್ಲಿರುವುದು ಮತ್ತು ಜನರಿಗೆ ಉತ್ತರ ದಾಯಿತ್ವವನ್ನು ಹೊಂದಿರುವುದೂ ಕಾರಣ.

ಅಮೆರಿಕಕ್ಕೇನಾಗಿತ್ತು? ಹಣಕಾಸು ಬಂಡವಾಳದ ತೀರದ ದಾಹ ಹಾಗೂ ಅನಿರ್ಭಂಧಿತ ಮುಕ್ತ ಮಾರುಕಟ್ಟೆಯು ಅಲ್ಲಿನ ಪ್ರಭುತ್ವದ ನಿಯಂತ್ರಣ ಪರಿಧಿಯಿಂದ ದೂರ ಉಳಿದದ್ದೇ ಎಂದು ಈಗಾಗಲೇ ವಿಶ್ಲೇಷಿಸಲಾಗಿದೆ. ಅಲ್ಲಿ ಗೃಹಸಾಲ ನೀಡುತ್ತಿದ್ದ ಖಾಸಗೀ ಸಂಸ್ಥೆಗಳು ತಮಗೆ ಅಡವಿಡಲಾಗುವ ಸ್ಥಿರಾಸ್ತಿಯ ಮೌಲ್ಯವನ್ನು ಊಹಾತ್ಮಕವಾಗಿ ಹೆಚ್ಚಿಸಿ ಅರ್ಜಿದಾರನ ಸಾಲ ವಾಪಸಾತಿಯ ಅರ್ಹತೆಗಳನ್ನು ಲೆಕ್ಕಿಸದೇ ಸಾಲ ನೀಡಿದವು. ಸರ್ಕಾರದ ನಿಯಂತ್ರಣ ಪರಿಧಿಯನ್ನು- ಅವು ಬರಿಯ ಕಾಗದದ ಹುಲಿಗಳು-ಬೇಕೆಂತಲೇ ಕಣ್ತಪ್ಪಿಸಿ ಹೂಡಿಕೆದಾರರನ್ನು ಪುಸಲಾಯಿಸಿ ಸಾರ್ವಜನಿಕ ಬಂಡವಾಳ ಸಂಗ್ರಹಿಸಲಾಯಿತು. ಯಾವಾಗ ಸ್ತಿರಾಸ್ಥಿಯ ಮಾರುಕಟ್ಟೆ ಮೌಲ್ಯ ಸರಿಯಾಗಿ ಅಳೆಯಲಾಯಿತೋ ಆವಾಗ ಹೀಗೆ ಊಹಾತ್ಮಕವಾಗಿ ಆಕಾಶದೆತ್ತರಕ್ಕೆ ಜಿಗಿದಿದ್ದ ಈ ಖಾಸಗೀ ಹಣಕಾಸು ಸಂಸ್ಥೆಗಳ ಶೇರು ಬೆಲೆ ನೆಲ್ಲ ಕಚ್ಚ ತೊಡಗಿದವು. ಮೊದಲೇ ಹೀಗಾಗಬಹುದೆಂದು ಅರಿತಿದ್ದ ದೈತ್ಯರು ವಹಿವಾಟಿನಿಂದ ದೂರ ಉಳಿಯತೊಡಗಿದ ಕಾರಣ ಪರಿಸ್ಥಿತಿ ಮತ್ತಷ್ಟು ಹದ ಕೆಟ್ಟಿತು. ಪರಿಣಾಮ ಈ ಖಾಸಗಿಯವರ ಹುಚ್ಚಾಟಗಳ ಮೇಲೆ ಬಂಡವಾಳ ಹೂಡಿದ್ದವರೆಲ್ಲ ಪಾತಾಳಕ್ಕೆ ಬಿದ್ದರು. ಲಾಭಕ್ಕಿಂತಲೂ ಬರಿಯ ಕೈ ಬದಲಾವಣೆಯನ್ನೇ ನಂಬಿಕೊಂಡಿದ್ದ ಅದೆಷ್ಟೋ ಚಿಕ್ಕ ಪುಟ್ಟ ಕಂಪನಿಗಳು ಬಾಗಿಲು ಹಾಕಿಕೊಂಡವು. ಅವು ಜಾಗತಿಕ ಮಾರುಕಟ್ಟೆಯ ಹಲವು ಸ್ತರಗಳಲ್ಲಿ ಹೂಡಿದ್ದ ಅಥವ ಈಗಾಗಲೇ ಅಲ್ಪಸ್ವಲ್ಪ ಮುಂಗಡ ಕೊಟ್ಟು ಕಾದಿರಿಸಿದ್ದ ವ್ಯವಹಾರಗಳನ್ನೆಲ್ಲ ಅರ್ಧಕ್ಕೇ ಬಿಟ್ಟವು. ಪರಿಣಾಮ ಅಮೆರಿಕವನ್ನೇ ನಂಬಿಕೊಂಡಿರುವ ಸಾಫ್ಟ್ವೇರ್ ಪ್ರಪಂಚ ಅಲ್ಲಾಡತೊಡಗಿತು.

ಒಂದು ಅಂದಾಜಿನಂತೆ ಒಂದು ಟ್ರಿಲಿಯನ್ ಅಮೆರಿಕನ್ ಡಾಲರ್ ಹಣ ಈ ಜಾಗತಿಕ ಕುಸಿತದಿಂದಾಗಿ ಕೊಚ್ಚಿಹೋಗಿದೆ. ಬೇರ್ಸ್ಟರ್ನ್, ಎಐಜಿ, ಅವಿವಾ, ಫೋರ್ಟಿಸ್ ಇನ್ನೂ ಮುಂತಾದ ಹೂಡಿಕೆ, ಬ್ಯಾಂಕಿಂಗ್ ಮತ್ತು ವಿಮಾ ವ್ಯವಹಾರದ ಕಂಪೆನಿಗಳು ಮತ್ತೆ ತಲೆ ಎತ್ತಲಾರದ ದುರವಸ್ಥೆ ತಲುಪಿದವು. ಅಮೆರಿಕದ ಸರ್ಕಾರ ನಷ್ಟ ಪೀಡಿತ ಹಣಕಾಸು ಸಂಸ್ಥೆಗಳಿಗೆ, ಬ್ಯಾಂಕ್ ಮತ್ತು ವಿಮಾ ಕಂಪನಿಗಳಿಗೆ ೭೦೦ ಬಿಲಿಯನ್ ಡಾಲರ್ ನೆರವು ಘೋಷಿಸಿ ಅವುಗಳ ನೆರವಿಗೆ ನಿಂತಿದೆ. ಎಐಜಿ ಕಂಪನಿಯ ೭೯.೯% ಶೇರುಗಳನ್ನು ಸರ್ಕಾರವೇ ಖರೀದಿಸಿ ಅದಕ್ಕೆ ೮೫ ಬಿಲಿಯನ್ ಡಾಲರ್ ನೆರವು ಕೊಟ್ಟಿದೆ. ಬ್ಯಾಂಕ್ ಆಫ್ ಅಮೆರಿಕ ಮೆರಿಲ್ ಲಿಂಚ್ ಕಂಪನಿಯನ್ನು ವಶಪಡಿಸಿಕೊಂಡಿದೆ. ಬ್ರಿಟನ್ ಸರ್ಕಾರವಂತೂ ಖಾಸಗೀ ಬ್ಯಾಂಕುಗಳನ್ನೆಲ್ಲ ತನ್ನ ಸುಪರ್ದಿಗೆ ತೆಗೆದುಕೊಂಡು ಪುನಃ ರಾಷ್ಠ್ರೀಕರಣದ ಕೆಲಸಕ್ಕೆ ಕೈ ಹಾಕಿದೆ.

ಪರಿಸ್ಥಿತಿ ಹೀಗಿರುವಾಗ ಲಜ್ಜರಹಿತವಾದ ಮತ್ತು ಅಮೆರಿಕದ ಅಣತಿಗೆ ತಕ್ಕಂತೆ ಕುಣಿಯುತ್ತಿರುವ ಮನಮೋಹನ್ ಸಿಂಗ್ ಪ್ರಣೀತ ಉದಾರವಾದೀ ಸರ್ಕಾರ ಲೋಕಸಭೆ ಮತ್ತು ರಾಜ್ಯಸಭೆಗಳ ಕಲಾಪದಲ್ಲಿ ವಿಮಾ ಮಸೂದೆಗೆ ತಿದ್ದುಪಡಿ ತರುವ ಅಧಿಸೂಚನೆ ಮಂಡಿಸಿದೆ. ಹೊಸ ವಿಧೇಯಕದ ಪ್ರಕಾರ ವಿಮಾ ವಲಯದಲ್ಲಿ ಖಾಸಗೀ ಬಂಡವಾಳ ಹೂಡಿಕೆ ೪೯% ಕ್ಕೆ ಏರುತ್ತದೆ. ಮತ್ತು ಸಾರ್ವಜನಿಕ ರಂಗದ ವಿಮಾ ಸಂಸ್ಥೆ ಎಲ್ಲೈಸಿಯ ಬಂಡವಾಳವನ್ನು ಈಗಿರುವ ೫ ಕೋಟಿಗಳಿಂದ ೧೦೦ ಕೋಟಿಗಳಿಗೆ ಹೆಚ್ಚಿಸಿ ಸಾರ್ವಜನಿಕವಾಗಿ ಅದನ್ನು ಸಂಗ್ರಹಿಸಲಾಗುತ್ತದೆ. ಅಂದರೆ ಅದನ್ನು ಖಾಸಗಿಯವರಿಗೆ ಹಂತಹಂತವಾಗಿ ಬಿಟ್ಟುಕೊಡಲಾಗುತ್ತದೆ. ಮೇಲ್ನೋಟಕ್ಕೆ ಇದೊಂದು ಉದಾರವಾದೀ ಸರ್ಕಾರದ ಧೃಢ ಹೆಜ್ಜೆಯಂತೆ ಮತ್ತು ಬಂಡವಾಳವನ್ನು ಆಕರ್ಷಿಸುವ ಯೋಜನೆಯಂತೆ ಕಂಡರೂ ಇದೂ ಅಮೆರಿಕದ ಕನಸನ್ನು ನನಸಾಗಿಸುವ ದುರುದ್ದೇಶ ಹೊಂದಿರುವ ಮತ್ತು ಈ ದೇಶದ ಅಸಂಖ್ಯಾತ ಜನರು ಸಾರ್ವಜನಿಕ ಸಂಸ್ಥೆಗಳ ಮೇಲೆ ಇಟ್ಟಿರುವ ಅಚಲ ವಿಶ್ವಾಸವನ್ನೇ ಪ್ರಶ್ನಿಸುತ್ತಿರುವ ವಿಧೇಯಕವಾಗಿದೆ. ಸರ್ಕಾರದ ಪಂಚವಾರ್ಷಿಕ ಯೋಜನೆಗಳೂ ಸೇರಿದಂತೆ ದೇಶದ ಬಹುತೇಕ ನೀರಾವರಿ, ಸಾರಿಗೆ ಮತ್ತು ವಿದ್ಯುತ್ ಯೋಜನೆಗಳಿಗೆ ಹಣಕಾಸು ನೆರವು ನೀಡುತ್ತಿದ್ದ ಬೃಹತ್ ಉದ್ಯಮವೊಂದು ಖಾಸಗಿಯವರ ಪಾಲಾದರೆ ದೇಶದ ಆರ್ಥಿಕತೆಯ ಮೇಲಾಗುವ ಪರಿಣಾಮಗಳು ಒಂದೆರಡಲ್ಲ. ಮುಖ್ಯವಾಗಿ ಜಾಗತಿಕ ವಿಮಾವಲಯದಲ್ಲಿ ತಾವೇ ದೈತ್ಯರೆಂದು ಬಿಂಬಿಸಿಕೊಳ್ಳುವ ಎಐಜಿ, ಪ್ಯುಡೆನ್ಶಿಯಲ್, ಅವಿವಾ ಈಗಾಗಲೇ ನಷ್ಟದ ಭರದಿಂದ ಕುಸಿದು ಕೂತಿದ್ದರೂ ಈ ನೆಲದಲ್ಲಿ ಈಗಾಗಲೇ ಕಾಲಿಟ್ಟಿರುವುದರಿಂದ ಸಾರ್ವಜನಿಕ ಸಂಸ್ಥೆಯೊಂದು ಇಷ್ಟು ದಿನಗಳ ಕಾಲ ಸಂಗ್ರಹಿಸಿರುವ ದೊಡ್ಡ ಮೊತ್ತದ ‘ಲೈಫ್ ಫಂಡ್’ ಮತ್ತು ವಿಶ್ವಾಸದ ಜಾಲವನ್ನು ಬೇಧಿಸಿ ಲಾಭಬಡುಕತನದ ಪೈಪೋಟಿಯ ಮೂಲಕ ಹುಚ್ಚು ಹಿಡಿಸುತ್ತವೆ. ಲಾಭದ ಆಸೆಗೆ ಬಿದ್ದ ಗ್ರಾಹಕರು ಅರಿವು ಪಡೆಯುವುದರೊಳಗಾಗಿ ತಮ್ಮ ಕಷ್ಟಾರ್ಜಿತವನ್ನೆಲ್ಲ ಕಳೆದುಕೊಂಡಿರುತ್ತಾರೆ. ಶೇರು ಮಾರುಕಟ್ಟೆಯೆಂಬ ಮಾಯಾಮೋಹಿನಿಯ ಪಾಶದ ಜೂಜಿಗೆ ಬಿದ್ದ ಸಾಮಾನ್ಯ ಹೂಡಿಕೆದಾರ ತನ್ನದೆಲ್ಲವನ್ನೂ ಕಳೆದುಕೊಳ್ಳುತ್ತಾನೆ.

ಖಾಸಗೀ ಕಂಪನಿಗಳ ಕೆಲ ಸ್ವಾರಸ್ಯಗಳು:
1.AIG (ಟಾಟಾ ಕಂಪನಿಯ ಸಹಯೋಗಿ) ದಿವಾಳಿ ಘೋಷಿಸಲು ಕೆಲವೇ ಗಂಟೆಗಳ ಮೊದಲು ಅಮೆರಿಕದ ಸರ್ಕಾರ ಕೊಡಮಾಡಿದ ೮೫ ಬಿಲಿಯನ್ ಡಾಲರ್ ಮೂಲಕ ಕೃತಕ ಉಸಿರಾಟ ಪಡೆಯಿತು.
೨. ಪ್ಯುಡೆನ್ಶಿಯಲ್ ದಾವೆ ಕೊಡಲಾಗದೇ ತನ್ನನ್ನು ತಾನು ದಿವಾಳಿ ಎಂದು ಘೋಷಿಸಿಕೊಂಡಿದ್ದ ಇತಿಹಾಸ ಹೊಂದಿದೆ.
೩. ಫೋರ್ಟಿಸ್ ತನ್ನೆಲ್ಲ ಹಕ್ಕುಗಳನ್ನು ಯೂರೋಪಿನ ಮೂರು ದೇಶಗಳಿಗೆ ಮಾರಿಕೊಂಡಿದೆ.
೪. ING ಮತ್ತು aegon ಕಂಪೆನಿಗಳಿಗೆ ಡಚ್ ಸರ್ಕಾರ ಹಣಕಾಸು ಸಹಾಯ ವಿಸ್ತರಿಸಿ ಬೆಂಬಲಿಸಿದೆ.
೫. ಅಮೆರಿಕ, ಯೂರೋಪ್, ಜಪಾನ್ ದೇಶಗಳಲ್ಲಿ ವಿಮಾ ವಹಿವಾಟು ಋಣಾತ್ಮಕವಾಗುತ್ತಿದೆ.

ಜಾಗತಿಕ ಸ್ಥಿತಿ ಹೀಗಿರುವಾಗ ಮುಕ್ತ ಮಾರುಕಟ್ಟೆಯ ಉದಾರೀಕರಣ ನೀತಿ ವಿಫಲವಾಗಿರುವ ಉದಾಹರಣೆ ಕಣ್ಣೆದುರೇ ಇರುವಾಗ ಅಲ್ಲದೇ ಅಮೆರಿಕಾ, ಯೂರೋಪ್, ಡಚ್ ಸರ್ಕಾರಗಳು ತಮ್ಮ ದೇಶದ ಕಂಪನಿಗಳು ದಿವಾಳಿಯಾಗುವುದನ್ನು ತಪ್ಪಿಸಲು ಅವನ್ನೆಲ್ಲ ಕೊಂಡು ಕೊಂಡು ರಾಷ್ಟ್ರೀಕರಣ ಮಾಡುತ್ತಿರುವ ವರ್ತಮಾನದಲ್ಲಿ ನಮ್ಮ ದೇಶದ ನೇತಾರರು ನಮ್ಮ ಸಾರ್ವಜನಿಕ ವಲಯವನ್ನು ಖಾಸಗಿಗೊಳಿಸುವ ವಿಧೇಯಕವನ್ನು ಮಡಿಸುತ್ತಿದ್ದಾರೆ. ಆ ಮೂಲಕ ಅಮೆರಿಕದ ದುರುದ್ದೇಶಗಳನ್ನು ಈ ದೇಶದ ಸಾಮಾನ್ಯ ಜನತೆಯ ಮೇಲೆ ಹೇರುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಜಾಗತಿಕ ಬಿಕ್ಕಟ್ಟಿನ ಪರಿಣಾಮ ನಮ್ಮ ಅರ್ಥ ವ್ಯವಸ್ಥೆಯ ಮೇಲಾಗದಂತೆ ನಮ್ಮ ಸಾರ್ವಜನಿಕ ರಂಗವನ್ನು ಬಲಪಡಿಸಬೇಕಿತ್ತು. ಅದು ಬಿಟ್ಟು ನಷ್ಟದಲ್ಲಿರುವ ವಿದೇಶೀ ಕಂಪನಿಗಳಿಗೆ ನಡೆಮುಡಿ ಹಾಸುತ್ತಿರುವ ಕಾರಣವಾದರೂ ಏನು? ಜಾಗತಿಕ ಹಣಕಾಸು ಬಂಡವಾಳ ಅಂದರೆ ಅಮೆರಿಕದ ಪ್ರಾಬಲ್ಯ ಮತ್ತು ಇಷ್ಟಾರ್ಥವನ್ನು ಪೂರೈಸಲು ದೇಶದ ಆರ್ಥಿಕ ಹಿತಾಸಕ್ತಿಯನ್ನು ಬಲಿಕೊಡಲು ಈ ಸರ್ಕಾರ ಹೊರಟಿದೆ.

ಇನ್ನು ಕೆಲವೇ ದಿನಗಳ ತನ್ನ ಆಯುಷ್ಯ ಹೊಂದಿರುವ ಈ ಸರ್ಕಾರ ಜನ ವಿರೋಧಿ ಮತ್ತು ದೇಶದ ಆರ್ಥಿಕ ಭದ್ರತೆಗೆ ವಿರುದ್ಧವಾದ ಈ ಸನ್ನದನ್ನು ಪ್ರಕಟಿಸುವ ಉದ್ದೇಶವಾದರೂ ಏನು? ನಮ್ಮ ಎಷ್ಟು ಜನ ಲೋಕಸಭಾಸದಸ್ಯರಿಗೆ/ ರಾಜ್ಯ ಸಭಾ ಸದಸ್ಯರಿಗೆ ಭವಿಷ್ಯದ ಚಿಂತೆ ಇದೆ? ಎಷ್ಟು ಜನರಿಗೆ ಸಮಸ್ಯೆಯ ಅರಿವಿದೆ? ಅದನ್ನು ನಾವು ಅವರಿಗೆ ತಿಳಿಸಿ ಹೇಳಬೇಕಿದೆ. ಸಮೂಹ ಮಾಧ್ಯಮಗಳ ಮೂಲಕ ಜನಸಾಮಾನ್ಯರಿಗೆ ಪರಿಸ್ಥಿತಿಯನ್ನು ವಿವರಿಸುವ ಕೆಲಸ ಈಗ ಜರೂರಾಗಿ ಆಗಬೇಕಿದೆ. ಮತ್ತು ನಮ್ಮ ಮುದ್ರಣ ಮಾಧ್ಯಮವೂ ಸಮಸ್ಯೆಯನ್ನು ಕೂಲಂಕುಷವಾಗಿ ಅವಲೋಕಿಸುವ ಮತ್ತು ವಿಶ್ಲೇಷಿಸುವುದೂ ಅತ್ಯಗತ್ಯ ಮಾಡಲೇ ಬೇಕಾದ ಕೆಲಸವಾಗಿದೆ.

ಕಾಮೆಂಟ್‌ಗಳಿಲ್ಲ: