ಒಟ್ಟು ಪುಟವೀಕ್ಷಣೆಗಳು

ಬುಧವಾರ, ಜೂನ್ 10, 2009

ದೆಸಿತನದ ಸೊಗಡಿಗೆ ಆಧುನಿಕತೆಯ ಬಡಿವಾರ

ದೇಸೀತನದ ಘಮಲಿಗೆ ಆಧುನಿಕತೆಯ ಬಡಿವಾರ

ಚ. ಹ. ರಘುನಾಥರ ಬಿಡಿ ಬರಹಗಳನ್ನು ಓದಿದಾಗೆಲ್ಲಾ ಅವರೊಬ್ಬ ಸಾಹಿತ್ಯದ ವಿನಮ್ರ ವಿದ್ಯಾರ್ಥಿಯೆಂದು ಮತ್ತೆ ಮತ್ತೆ ಮನದಟ್ಟಾಗುತ್ತದೆ. ಸೂಕ್ಷ್ಮ ಮನಸ್ಸಿನ ಅಂತರ್ಮುಖೀ ವ್ಯಕ್ತಿತ್ವವೊಂದು ಸುತ್ತಣ ವಿವರಗಳನ್ನು, ಘಟನೆಗಳನ್ನು ಗಮನಿಸಿದ, ಗ್ರಹಿಸಿದ ಮತ್ತವುಗಳನ್ನು ಅತಿ ವಿಶಿಷ್ಟತೆಯಿಂದ ಬರಹಗಳನ್ನಾಗಿಸುವ ಕಲೆ ಅವರಿಗೆ ಸಿದ್ಧಿಸಿದೆ. ಈಗಾಗಲೇ ಕವಿಯಾಗಿ, ಕಥೆಗಾರನಾಗಿ ಹೊಸ ಪೀಳಿಗೆಯ ಲೇಖಕರ ನಡುವೆ ತಮ್ಮದೇ ಛಾಪನ್ನಿರಿಸಿಕೊಂಡಿರುವ ರಘುನಾಥರ ಪ್ರಬಂಧ ಸಂಕಲನ “ ರಾಗಿಮುದ್ದೆ” ದೇಸೀತನದ ಘಮಲನ್ನು ನೆನಪಿಸುತ್ತಲೇ ಆಧುನಿಕ ಬಡಿವಾರಗಳನ್ನು ಅಣಕಿಸುತ್ತದೆ, ವಿಮರ್ಶಿಸುತ್ತದೆ.

ಆತ್ಮೀಯತೆಯಿಂದ ನೇರವಾಗಿ ಸಹಜವಾಗಿ ಸಂಕೋಚಗಳಿಲ್ಲದೆ ತಮಗನಿಸಿದ್ದನ್ನು ದಿಟವಾಗಿ ಹೇಳುವುದು ಈ ಎಲ್ಲಾ ಪ್ರಬಂಧಗಳ ಮೂಲ ಗುಣ. ಗ್ರಾಮೀಣ ಬದುಕನ್ನು ಚಿತ್ರಿಸುತ್ತಲೇ ನಗರ ಜೀವನದ ತಲ್ಲಣಗಳನ್ನು ತೆರೆದಿಡುವ ರಘುನಾಥರ ಶೈಲಿ ಪ್ರಿಯವಾಗುತ್ತದೆ. ಸೂಕ್ಷ್ಮ ಮನಸ್ಸೊಂದು ಬದುಕನ್ನು ಅರಿಯುವ ಪ್ರಯತ್ನ ಇಲ್ಲಿನ ಪ್ರಬಂಧಗಳಲ್ಲಿ ಢಾಳಾಗಿದೆ. ಲೇಖಕನ ಸ್ವಂತ ಅನುಭವದ ಸ್ಪರ್ಶ ಈರೀತಿಯ ಬರಹಗಳಲ್ಲಿಲ್ಲದೇ ಹೋದಲ್ಲಿ ಅವು ಹೈಸ್ಕೂಲಿನ ಚರ್ಚಾಸ್ಪರ್ಧೆಯ ಭಾಷಣಗಳಾಗಿಬಿಡುತ್ತವೆ ಎನ್ನುವ ಅರಿವು ಅವರಿಗೆ ಗೊತ್ತಿದೆ. ಹಾಗಾಗಿಯೆ “ಅಧರಂ ಮಧುರಂ” ನಂತಹ ಕಾಮನ್ ಹ್ಯಾಂಗೋವರ್‌ನಲ್ಲಿ ಮಿಡಿಯುತ್ತಲೇ ಅಮೆಝಾನ್ ಕಾಡುಗಳಲ್ಲೂ ಹಲ್ಲು ತೊಳೆಸಿಕೊಳ್ಳಬಲ್ಲರು! ಮುಂಜಾನೆಯ “ಯಾತ್ರೆ” ಯ ಚಿತ್ರಗಳನ್ನು ಕಣ್ಮುಂದೆ ನಿಲ್ಲಿಸಬಲ್ಲಂತೆಯೇ ಚಂದಿರನನ್ನು ಕಂಬ ಕಂಬಗಳಿಗೆ ನೇಣು ಹಾಕಬಲ್ಲರು. ಜಾತ್ರೆಯ ಕಾಮನಬಿಲ್ಲು ಬಿಡಿಸಿಡುತ್ತಲೇ ಗುಬ್ಬಿಗಳಿಗೆ ಮನೆಯನ್ನೂ ಕಟ್ಟಿಕೊಡಬಲ್ಲವರು-ಚ.ಹ.ರಘುನಾಧ.

ಹೊಸ ಪೀಳಿಗೆಯ ಲೇಖಕರಲ್ಲಿ ಕವಿಗಳ ಸಂಖ್ಯೆ ವಿಫುಲವಾಗಿದೆ. ಕಥೆಗಾರರಂತೆ ಕಾದಂಬರಿಕಾರರ ಲೆಕ್ಕವೂ ಸಿಗುತ್ತವೆ. ಆದರೆ ಪ್ರಬಂಧ ನೇಯುವುದು ಸುಲಭದ ಮಾತಲ್ಲ ಎಂದು ಗೊತ್ತಿರುವುದರಿಂದಲೋ ಏನೋ ಈ ಕೆಲಸಕ್ಕೆ ಕೈ ಹಾಕಿದವರ ಸಂಖ್ಯೆ ತೀರ ಕಡಿಮೆ.

ಪ್ರಬಂಧವು ಸುಲಲಿತವಾಗುವುದು ಲಾಲಿತ್ಯದಿಂದ. ಕಾವ್ಯಗುಣದ ಜೊತೆಗೇ ಸ್ವಾರಸ್ಯಕರ ಅನುಭವಗಳನ್ನು ಮತ್ತು ಸೃಜನಶೀಲತೆಗಳನ್ನು ಅವು ಒಳಗೊಂಡಿರಬೇಕು. ಶಬ್ದಾರ್ಥಗಳ ಮೇಲಾಟದ ಜೊತೆಗೆ ಚಿಂತನಶೀಲತೆಯ ಸ್ಪರ್ಶವೂ ಪ್ರಬಂಧಕ್ಕಿರಬೇಕು. ಸೀಮಿತ ಚೌಕಟ್ಟಿನಲ್ಲೇ ವಸ್ತುವೊಂದನ್ನು ಆಕರ್ಷಕವಾಗಿ ಹೇಳುತ್ತಲೇ ಸಾಮಾಜಿಕ, ಸಾಂಸ್ಕೃತಿಕ ಪಲ್ಲಟಗಳನ್ನೂ ಅದು ಬಿಂಬಿಸಬೇಕು. ವಿಡಂಬನೆ ಮೂಲ ಉದ್ದೇಶವಲ್ಲದಿದ್ದರೂ ವಿಮರ್ಶಾತ್ಮಕ ನೆಲೆಯಲ್ಲಿ ವಸ್ತುವನ್ನ ಅನಾವರಣಗೊಳಿಸಿರಬೇಕು!......... ಪ್ರಬಂಧಗಳ ಮಾದರಿಗಳನ್ನು ಕುರಿತು ನೆನಪಿಸಿಕೊಂಡರೆ ಈ ಕಾಲದಲ್ಲಿ ನಮಗೆ ಅನುಭವಗಳ ಕೊರತೆಯಿದೆಯೇನೋ ಅನ್ನಿಸುತ್ತದೆ. ನಗರ ಜೀವನದ ಪಡಿಪಾಟಲುಗಳು ಸಂದರ್ಭವನ್ನ ಸಹಜವಾಗಿ ಗ್ರಹಿಸುವುದನ್ನ ನಿಯಂತ್ರಿಸುತ್ತಿದೆಯೇನೋ ಎಂಬ ಅನುಮಾನಗಳೂ ಕಾಡುತ್ತವೆ.

ಮೂರ್ತಿರಾವ್, ಗೊರೂರು ಮುಂತಾದವರು ಸಹಜವಾಗಿ ಸಮೃದ್ಧವಾಗಿ ಬೆಳೆದ ಪ್ರಬಂಧ ಪ್ರಕಾರವನ್ನು ನೆನಪಿಸಿಕೊಂಡರೆ ಅದು ವಿನಮ್ರತೆಯಿಲ್ಲದವರಿಗೆ ಒಲಿಯದ ಕಬ್ಬಿಣದ ಕಡಲೆ ಎಂದೇ ಭಾಸವಾಗುತ್ತದೆ. ಆದರೆ ರಘುನಾಥ ಸಮರ್ಥವಾಗಿ ಅದನ್ನು ಎದುರಿಸಿ ಗೆದ್ದಿದ್ದಾರೆ. ಸಾಹಿತ್ಯ, ಚಲನಚಿತ್ರ, ಪ್ರಯಾಣ ಮುಂತಾದ ಆಸಕ್ತಿಗಳ ಮೂಲಕ ಮನುಷ್ಯ ಸಂಬಂಧಗಳ ರೀತಿಯನ್ನು ಅವುಗಳ ವಿಭಿನ್ನ ನೆಲೆಗಳನ್ನು ಅನ್ವೇಷಿಸುವ ಶೈಲಿ ಗುಣಗ್ರಾಹಿಯಾದುದೇ ಆಗಿದೆ. ತೀವ್ರತೆಯ ತುರೀಯಕ್ಕೇರದೇ ಅನುಭವದ ಪಾತಳಿಯಲ್ಲಿ ಸಣ್ಣ ಸಂಗತಿಗಳನ್ನು ವಿಶ್ಲೇಷಿಸುವ ರೀತಿ ಮೆಚ್ಚತಕ್ಕದ್ದೇ ಆಗಿದೆ.

ಸಂಕಲನದಲ್ಲಿರುವ ಒಂದು ಡಜನ್ ಪ್ರಬಂಧಗಳನ್ನು ಒಂದೇ ಬೀಸಿನಲ್ಲಿ ಓದಿದರೆ ಅವುಗಳ ಸ್ವಾರಸ್ಯ ಮನಸ್ಸಿಗಿಳಿಯುವುದಿಲ್ಲ. ಕವಿತೆಗಳನ್ನೋ, ಕಥೆಗಳನ್ನೋ ಒಂದು ಸ್ಥಿರವಾದ ಮಾನಸಿಕ ಸ್ಥಿತಿಯಲ್ಲಿ ಮಾತ್ರ ಓದಲು ಸಾಧ್ಯ. ಪೂರ್ವ ತಯಾರಿಯಿರದಿದ್ದರೆ ಪದ್ಯಗಳ ಓದು ಒಂದು ರೀತಿಯಲ್ಲಿ ಶಿಕ್ಷೆಯೇ!. ಈ ಅಪಾಯಗಳನ್ನು ಪ್ರಬಂಧಗಳು ಮೀರಿರುವುದರಿಂದ ಪ್ರಯಾಣದ ನಡುವೆಯೋ, ಊಟದ ವಿರಾಮದಲ್ಲಿಯೋ ಇವನ್ನು ಅಸ್ವಾದಿಸಲು ಸಾಧ್ಯ. ಆದರೆ ಒಂದು ಸಿಟ್ಟಿಂಗ್‌ನಲ್ಲಿ ಒಂದಕ್ಕಿಂತ ಹೆಚ್ಚು ಪ್ರಬಂಧಗಳನ್ನು ಓದಿದರೆ ಅವುಗಳಲ್ಲಿ ಅಡಗಿರುವ ವಿಡಂಬನೆಯ ಶೃತಿ ನಮಗೆ ನಿಲುಕುವುದಿಲ್ಲ. ಹಾಗೆಯೇ ಆ ಪ್ರಬಂಧಗಳ ಒಳ ಹೂರಣದ ರುಚಿಯೂ ಸಿದ್ಧಿಸುವುದಿಲ್ಲ.

ಫ಼ೀಚರು (ಸಾಂದರ್ಭಿಕ ಬರಹ), ಫ಼ಿಲ್ಲರು (ಲಹರಿ) ಮತ್ತು ಲಲಿತ ಪ್ರಬಂಧಗಳೆಂದು ಸಂಕಲನದಲ್ಲಿರುವ ಬರಹಗಳನ್ನು ವಿಭಾಗಿಸಬಹುದಾದರೂ, ಮೂಲತಃ ಈ ಮೂರು ಪ್ರಭೇದಗಳ ಗುಣ ಧರ್ಮ ಒಂದೇ ಆಗಿರುವುದರಿಂದ ಇವನ್ನೆಲ್ಲಾ ಪ್ರಬಂಧಗಳೆಂದು ಕರೆಯಲು ಅಡ್ಡಿಪಡಿಸುವುದಿಲ್ಲ. ರಾಗಿಮುದ್ದೆ, ಹಲ್ಲು ತೊಳಿಸಿಕೊಳ್ಳುತ್ತಾ ಅಮೆಝಾನ್ ಕಾಡುಗಳಲ್ಲಿ, ನಾಯಿ ನೆರಳು, ಗುಬ್ಬಿಗಳಿಗೊಂದು ಮನೆಯಕಟ್ಟಿಕೊಟ್ಟೆವು ಲಲಿತ ಪ್ರಬಂಧಗಳಾದರೆ, ಅಧರಂ ಮಧುರಂ, ಸಂಪೂರ್ಣ ರಾಮಾಯಣ, ಅವಳು ಅಹಲ್ಯೆ-ಇವನು ನಹುಷ ಫ಼ೀಚರುಗಳು. ಉಳಿದೆಲ್ಲಾ ಬರಹಗಳು ಕವಿತೆಗಳಂತೆ ನಿಧಾನಕ್ಕೆ ಆವರಿಸುವ ತಮ್ಮೊಳಗೇ ಬೆಳಕನ್ನಿಟ್ಟುಕೊಂಡಿರುವ ನುಡಿ ಚಿತ್ರಗಳು. ಸುಲಲಿತ ಪ್ರಬಂಧಗಳಲ್ಲಿ ಕನ್ನಡದ ಹಿರಿಯ ಪ್ರಬಂಧಕಾರರ ನೆರಳುಗಳಿದ್ದರೆ ಫ಼ೀಚರುಗಳಲ್ಲಿ ಲೇಖಕರೊಳಗಿನ ಪತ್ರಕರ್ತ ಪ್ರತ್ಯಕ್ಷನಾಗುತ್ತಾನೆ. ಉಳಿದಂತೆ ನುಡಿ ಚಿತ್ರಗಳಲ್ಲಿ ರಘುನಾಥ್ ಗಮನ ಸೆಳೆಯುತ್ತಾರೆ.

“ರಾಗಿಮುದ್ದೆ” ದೇಸೀಧಾನ್ಯದ ಹಲವು ಮಗ್ಗಲುಗಳನ್ನು ಪರಿಚಯಿಸುತ್ತಲೇ ಹಳೆಯ ಮೈಸೂರುಪ್ರಾಂತದ ಆಹಾರ ಪದ್ಧತಿಯನ್ನು ವಿವರಿಸುವ ಸುಲಲಿತ ಪ್ರಬಂಧ. ಉಳ್ಳವರ ಮನೆಯ ಮಕ್ಕಳ ಜೇಬಲ್ಲಿ ವಿವಿಧ ತಿನಿಸಿದ್ದರೆ ಇಲ್ಲದವರ ಮನೆಯ ಮಕ್ಕಳಿಗೆ ಮುದ್ದೆಪಾತ್ರೆಯ ತಳದ “ಸೀಕು” ಚಾಕಲೇಟು! ಅನ್ನುತ್ತಲೇ “ರಾಗಿ ಲಕ್ಷ್ಮಣಯ್ಯ” ನವರನ್ನು ಪ್ರಾಸಂಗಿಕವಾಗಿ ನೆನೆಯುವುದು ಹಿತವೆನ್ನಿಸುತ್ತದೆ.

“ನಾಯಿನೆರಳು” ಲಘುಬರಹದ ಹಾಗೆ ಕಂಡರೂ ಅನುಭವವೊಂದರ ಪರಿಪಾಕ. ವಿಷಾದದ ತೀವ್ರತೆಯಲ್ಲಿ ಮುಕ್ತಾಯವಾಗುವ ಪ್ರಬಂಧ ಓದುಗನನ್ನು ಒಂದು ವಿಷಣ್ಣತೆಗೆ ದೂಡಿಬಿಡುತ್ತದೆ.

ರಾಮಾಯಣದ ಅಹಲ್ಯೆಯನ್ನು ಮಹಾಭಾರತ ನಹುಷನೊಂದಿಗೆ ಥಳಕುಹಾಕಿ ಹೊಸ ಪ್ರಮೇಯವೊಂದನ್ನು ಹಾಗೇ ಆ ಪಾತ್ರಗಳಿಗೆ ಇದುವರೆಗೂ ನಾವು ಒದಗಿಸಿದ “ಬೀಸ” ನ್ನು ಬೆಚ್ಚಿಬೀಳಿಸುವ ಹಾಗೆ ಬಿಕ್ಷೆಯ ಸ್ವರೂಪವನ್ನು ಹಿಡಿದಿಡುವ “ಅವಳು ಅಹಲ್ಯೆ-ಇವನು ನಹುಷ” ಪ್ರಬಂಧ ಸ್ವರೂಪ ಮೀರಿದ ಒಂದು ರೀತಿಯ ಗಪದ್ಯ.

“ಅಧರಂ ಮಧುರಂ” ಚುಂಬನದ ಮಹತ್ತನ್ನು ಕಾಮನ್ ಹ್ಯಾಂಗೋವರಿನಲ್ಲಿ ತೇಲಾಡಿಸುತ್ತಲೇ ಸಾಹಿತ್ಯ ಪರಂಪರೆಯ ಮೂಲಕ ಚಮಕಾಯಿಸುವ ರೀತಿ “ಫ಼ೀಚರ್”ನ ಮಿತಿಗೆ ನಿಂತುಬಿಡುವುದರಿಂದ ಪ್ರಬಂಧದ ಹರಿವು ಕಳಕೊಂಡ ಬರಿಯ ಲಹರಿಯಾಗಿದೆ.

“ಮನಸ್ಸಿನ ಸ್ಥಾವರ ಹಾಗೂ ಜಂಗಮ ಭಾವಗಳ ಬೆಸೆಯಲೊಂದು ಸೇತು ಬೇಕೆನಿಸುತ್ತದೆ” ಎಂದು ಕೊನೆಗೊಳ್ಳುವ “ಫ಼್ಲೈ ಓವರ್” ತನ್ನೊಡಲಲ್ಲಿ ಇಟ್ಟುಕೊಂಡಿರುವುದು ವಿಷಾದ ತೀವ್ರತೆಯನ್ನು. “ಬಡವರಿಗೆ ಎರಡು ನಿಮಿಷದ ಏರೋಪ್ಲೇನ್ ಪ್ರಯಾಣ” ಎನ್ನುವುದು “ಅತಿ” ಅನ್ನಿಸಿದರೂ ಆಧುನಿಕತೆಯ ಭೂತ-ಭವಿಷ್ಯಗಳನ್ನು ತನ್ನದೇ ರೀತಿಯಲ್ಲಿ ಓದುಗನಿಗೆ ದಾಟಿಸುವಲ್ಲಿ ಸಮರ್ಥವಾಗಿದೆ.

“ಮಳೆಯ ಮೂರು ಹನಿ” ಓದುಗನಲ್ಲಿ ಹೊಮ್ಮಿಸುವ ಮಾರ್ದನಿ ಹಲವುದಿನಗಳವರೆಗೂ ಕಾಡುವ ಸಮರ್ಥ ರೂಪಕ. ಕಥೆಯೋ ಕವಿತೆಯೋ ಲಲಿತ ಪ್ರಬಂಧವೋ ಈ ಎಲ್ಲವನ್ನೂ ಮೀರಿ ಓದುಗನಿಗೆ ಬೆರಗನ್ನು, ಬೆಳಗನ್ನು ಮೂರು ಬೇರೆ ಬೇರೆ ಹನಿಗಳಲ್ಲಿ ಎಸ್ಕಲೇಟ್ ಮಾಡಿಸುವ ಎಸ್ಕಲೇಟರ್.

ಸಂಕಲನದ ಸಹಜ ಪ್ರಬಂಧಗಳಲ್ಲೊಂದಾದ “ಹಲ್ಲು ತೊಳೆಸಿಕೊಳ್ಳುತ್ತಾ ಅಮೆಝಾನ್ ಕಾಡುಗಳಲ್ಲಿ” ಲೇಖಕರ ಸ್ವವಿವರಗಳನ್ನು ಹೆಕ್ಕಲು ಸಹಾಯ ಮಾಡುತ್ತದೆ. ಅನುಭವವನ್ನು ಬರಹವನ್ನಾಗಿಸಿದ ಅಭಿವ್ಯಕ್ತಿಯ ಶಕ್ತಿ ಇಲ್ಲಿ ಕೆಲಸ ಮಾಡಿದೆ.

“ಕಂಬ ಕಂಬಗಳಿಗೆ ಚಂದಿರನ ನೇಣು” ಮಳೆಯ ಮೂರುಹನಿ ರೀತಿಯದ್ದು. ಶಾಂತ ಮನಸ್ಥಿತಿಯಲ್ಲಿ ಮಾತ್ರ ಇದರ ಓದಿನ ರುಚಿ ದಕ್ಕೀತು. ಮುಂಜಾನೆಯ “ಯಾತ್ರೆ” ಯ ಚಿತ್ರಗಳು ಪಾಯಖಾನೆಯ ಪ್ರಸಂಗಗಳನ್ನು ಸ್ವಾರಸ್ಯವಾಗಿ ನಿರೂಪಿಸುತ್ತಲೇ ಲೇಖಕರ “ಬಯಲ” ಬಯಕೆಯನ್ನು ಹೊರಹೊಮ್ಮಿಸುತ್ತದೆ.

ಸಂಕಲನದ ಕಡೆಯ ಮೂರು ನಿಬಂಧಗಳು ಲೌಕಿಕ ಸತ್ಯವನ್ನು ಅನುಭವದ ಕಣ್ಣಲ್ಲಿ ಕಂಡ ದಾಖಲೆಗಳು. ಸ್ವಲ್ಪ ಅತಿಯೆನ್ನಿಸಿದರೂ ಉಳಿದವರಿಗಿಂತ “ನನ್ನ ಕಾಣ್ಕೆ” ಬೇರೆಯದು ಎಂದು ಈ ನಿಬಂಧಗಳು ಸೂಕ್ಷ್ಮ ವಾಗಿ ಮಿಡಿಯುತ್ತವೆ.

ಹೀಗೆ ವೈಯುಕ್ತಿಕ ಅನುಭವಗಳ ವಿವರಗಳನ್ನು ಈ ಪ್ರಬಂಧಗಳಲ್ಲಿ ಹಿಡಿದಿಡಲು ರಘುನಾಥ ಪ್ರಯತ್ನಿಸಿದ್ದಾರೆ. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಅವರ ಅನುಭವಗಳು ಇಲ್ಲಿನ ಎಲ್ಲಾ ಪ್ರಬಂಧಗಳಿಗೆ ಖಚಿತತೆಯನ್ನು ಒದಗಿಸುವುದರ ಜೊತೆಗೆ ಸಾರ್ವತ್ರಿಕಗೊಳಿಸುವ ಗೆರೆಯಿಂದಲೂ ಬೇರ್ಪಡಿಸಿವೆ. ಇದು ಈ ಸಂಕಲನದ ಮಿತಿ ಮತ್ತು ಹೆಚ್ಚುಗಾರಿಗೆಯೂ ಆಗಿದೆ. ಭಾಷೆಯನ್ನು ಬಳಸಿರುವ ಕ್ರಮ, ವಾಕ್ಯ ರಚನಾ ವಿಧಾನ, ಅನೇಕ ಸಂಗತಿಗಳನ್ನು ಕುರಿತು ಹೇಳುತ್ತಲೇ ಅವೆಲ್ಲವನ್ನೂ ಏಕತ್ರಗೊಳಿಸಿ ಒಂದು ಕೇಂದ್ರಕ್ಕೆ ಒಗ್ಗಿಸುವ ರೀತಿ, ಮಧ್ಯೆ ಮಧ್ಯೆ ಆಧುನಿಕ ಕನ್ನಡ ಕಾವ್ಯದ ಅನಾಯಾಸ ಉದ್ಧರಣೆ ಪ್ರಬಂಧಗಳ ಅರ್ಥ ಸಾಧ್ಯತೆಯನು ವಿಸ್ತರಿಸಿದೆ.

ಈ ಲೇಖನ ವಿಮರ್ಶೆಯಲ್ಲ. ವಿಮರ್ಶೆಯಗುರಿ ಮತ್ತು ಅದರ ಆಶಯಗಳು ಕೃತಿಯೊಂದರ ಸೌಷ್ಟವತೆಯನ್ನು ಕರಾರುವಾಕ್ಕಾಗಿ ಅಳೆದು “ಇದಮಿತ್ತಂ” ಎಂದು ಕೊಡುವ ಅರ್ಹತಾಪತ್ರ. ಅಂತಹ ಅರ್ಹತೆಯನ್ನು ಈ ಸಂಕಲನ ಇಟ್ಟುಕೊಂಡಿದೆಯೋ ಇಲ್ಲವೋ ಆದರೆ ನಿತ್ಯ ಜಂಜಡದ ಸದ್ಯೋವರ್ತಮಾನದಲ್ಲಿ ನಮ್ಮೊಳಗಿದ್ದೂ ನಮ್ಮದಲ್ಲವಾಗಿದ್ದ ಅದೆಷ್ಟೋ ಸಂಗತಿಗಳಿಗೆ ಮರು ಹುಟ್ಟು ನೀಡಿ ಕ್ಷಣ ಕಾಲವಾದರೂ ನಮ್ಮೊಳಗಿನೊಂದಿಗೆ ಸಂಭಾಷಿಸಲು ಅವಕಾಶ ಮಾಡಿಕೊಡುತ್ತದೆ. ಅಂಥ ಅವಕಾಶ ನೀಡಿದ ಲೇಖಕನಿಗೆ ಅಭಿನಂದಿಸುವುದಷ್ಟೇ ಈ ಲೇಖನದ ಉದ್ದೇಶ.

ಕಾಮೆಂಟ್‌ಗಳಿಲ್ಲ: