ಒಟ್ಟು ಪುಟವೀಕ್ಷಣೆಗಳು

ಬುಧವಾರ, ಸೆಪ್ಟೆಂಬರ್ 2, 2009

ಯುದ್ಧ ಭಯ

ಚರಿತ್ರೆಯುದ್ದಕ್ಕೂ ಯುದ್ಧಗಳು ನಡೆಯುತ್ತಲೇ ಬಂದಿವೆ. ಅದರಲ್ಲೂ ಧರ್ಮದ ನೆವದಲ್ಲಿ ನಡೆದ ಯುದ್ಧಗಳಂತೂ ಹೆಚ್ಚು. ಹಾಗೇ ಸಾಮ್ರಾಜ್ಯ ವಿಸ್ತರಣೆ, ಲೂಟಿ-ಕೊಳ್ಳೆಗಳಿಗಾಗಿಯೇ ನಡೆದ ಯುದ್ಧಗಳೂ ಸಾಕಷ್ಟಿವೆ. ಯುದ್ಧಾನಂತರ ಯುದ್ಧಪರಿಣಾಮಗಳಿಂದ ಉಂಟಾದ ರೋಗ-ರುಜಿನಗಳು, ಆರ್ಥಿಕ ಸಂಕಷ್ಟಗಳೂ, ತತ್ತರಿಸಿದ ಜನಸಾಮಾನ್ಯರ ಬದುಕುಗಳೂ ಯುದ್ಧ ಪಿಪಾಸುಗಳ ಬುದ್ಧಿಗೆ ಸಾಣೆ ಹಿಡಿಯದ ಕಾರಣ ಈ ಆಧುನಿಕ ಯುಗದಲ್ಲೂ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಈಗಲೂ ಯುದ್ಧಗಳು ನಡೆಯುತ್ತಲೇ ಇರುವುದು ಮನುಕುಲಕ್ಕೇ ಹಿಡಿದ ಗ್ರಹಣವಾಗಿದೆ.

ಯುದ್ಧವೆಂದರೆ ನರಮೇಧ. ಸಂಪತ್ತಿನ ವಿನಾಕಾರಣ ನಾಶ. ಅಲೆಕ್ಸಾಂಡರ್, ಅಶೋಕನಂಥ ಯುದ್ಧಪಿಪಾಸುಗಳು ಯುದ್ಧಾನಂತರ ಪಶ್ಚಾತ್ತಾಪ ಪಟ್ಟದ್ದು ಇತಿಹಾಸಕ್ಕೆ ಸೇರಿತೇ ವಿನಾ ಅದು ಪಾಠವಾಗಲೇ ಇಲ್ಲ. ಬರೀ ಸೈನಿಕರ ನಡುವೆ ನಡೆಯುತ್ತಿದ್ದ ಸಾಮ್ರಾಜ್ಯಶಾಹೀ ಯುದ್ಧಗಳಿಗಿಂತ ಆಧುನಿಕ ಯುಗದ ಯುದ್ಧ ಪರಿಣಾಮಗಳು ಅಪಾಯಕಾರಿಯಾಗಿವೆ. ಹಿಂದೆಲ್ಲ ಯುದ್ಧವೆಂದರೆ ಬರಿಯ ಸೈನಿಕರ, ರಾಜ ಸಾಮಂತರುಗಳ ಸೋಲು-ಗೆಲುವಿನಲ್ಲಿ ಮುಗಿಯುತ್ತಿದ್ದವು. ಸಾಮಾನ್ಯ ಜನರಿಗೆ ತೆರಿಗೆಯ ಹೊರೆ ಬಿಟ್ಟರೆ ಉಳಿದಂತೆ ಜನಜೀವನದ ಮೇಲೆ ಪರಿಣಾಮ ಇರುತ್ತಿರಲಿಲ್ಲ. ಆದರೆ ಆಧುನಿಕ ಯುಗದ ಯುದ್ಧಗಳಲ್ಲಿ ಬಳಸಲಾಗುತ್ತಿರುವ ಆಪಾಯಕಾರೀ ಪರಮಾಣು ಶಸ್ತ್ರಾಸ್ತ್ರಗಳು ಜನಸಾಮಾನ್ಯರ ಬದುಕನ್ನು ಮೂರಾಬಟ್ಟೆಯಾಗಿಸುವುದಷ್ಟೇ ಅಲ್ಲದೆ ನೆಮ್ಮದಿಯನ್ನು ನಾಶಮಾಡಿ ಹತಾಶ ಸ್ಥಿತಿಗೆ ಒಯ್ಯುತ್ತವೆ. ಧರ್ಮದ ಹೆಸರಲ್ಲಿ ನಡೆಯುತ್ತಲೇ ಇರುವ ದಾಳಿಗಳಂತೂ ಮನುಷ್ಯನ ಕ್ರೂರ ಮನಸ್ಸಿನ ಪ್ರದರ್ಶನದಂತಿದೆ. ಹಿಂದೆಲ್ಲ ಯುದ್ಧಗಳಲ್ಲೂ ನೀತಿ,ನಿಯಮ, ಕಟ್ಟುಪಾಡುಗಳಿದ್ದುವಂತೆ. ಅವನ್ನು ಮೀರುವ ಅನೈತಿಕ ನಡವಳಿಕೆ ಹಿಂದಿನವರಿಗೆ ಇರಲಿಲ್ಲ. ಆದರೆ ಆಧುನಿಕರಾದಷ್ಟೂ ಮೋಸಕಪಟಗಳಿಗೂ ಆಧುನಿಕತೆಯ ಮೊಹರು ಬೀಳುತ್ತಿದೆ. ಕಟ್ಟುಪಾಡುಗಳನ್ನು ಮೀರಿ ವ್ಯವಸ್ಥೆಗೆ ಸಡ್ಡು ಹೊಡೆಯುವುದೇ ಗೆಲುವಿನ ಮಜಲಾಗುತ್ತಿದೆ.

ಇತ್ತೀಚೆಗಂತೂ ಧರ್ಮಾಂಧತೆ ಹೆಚ್ಚಿ ಮತಮೋಹವನ್ನು ಜಾಗೃತಗೊಳಿಸಿ ಶ್ರೇಷ್ಟತೆಯ ಭ್ರಮೆ ಹುಟ್ಟಿಸಿ ಅನ್ಯರನ್ನು ಕೀಳಾಗಿ ಕಾಣಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ವ್ಯಕ್ತಿಯ ಇಂಥ ದುಷ್ಟತನವನ್ನು ನಿಗ್ರಹಿಸಬೇಕಾದ ವ್ಯವಸ್ಥೆಯನ್ನೇ ಕತ್ತಲಿನಲ್ಲಿಟ್ಟಿರುವ ಧರ್ಮ ಮತ್ತು ಧರ್ಮಾಧಾರಿತ ಸೀಮಿತ ಚೌಕಟ್ಟಿನ ಧೋರಣೆಗಳು ಆ ವ್ಯಕ್ತಿಯನ್ನು ಬೆಂಬಲಿಸುತ್ತವೆ. ಧರ್ಮ ಪ್ರಚಾರ ಮತ್ತು ವಿಸ್ತರಣೆಯ ಹೆಸರಲ್ಲಿ ನಡೆಯುವ ಪುಂಡಾಟಿಕೆಗಳನ್ನು ಸತ್ಕ್ರಿಯೆ ಎಂದು ಬಿಂಬಿಸುವುದರಿಂದಾಗಿ ಜನಸಾಮಾನ್ಯರ ಮೇಲೆ ಅದರ ಪರಿಣಾಮ ಘೋರವಾಗುತ್ತದೆ. ವ್ಯಕ್ತಿಯೊಬ್ಬನ ನಂಬಿಕೆಗಳನ್ನು, ಆಚರಣೆಗಳನ್ನು ಪ್ರಶ್ನಿಸುವ ಮತ್ತು ಅಧಿಕಾರಯುತವಾಗಿ ಹೀಗೇ ಮಾಡಿ ಎಂದು ಆದೇಶಿಸುವ ಮೂಲಕ ಅವನ ಮೂಲಭೂತ ಹಕ್ಕುಗಳನ್ನೇ ಕಸಿದುಕೊಂಡಂತಾಗುತ್ತದೆ. ಧರ್ಮ ನೆಲೆಯಲ್ಲಿ ನಡೆಯುವ ಯುದ್ಧ ಮತ್ತು ದಂಗೆಗಳು ಹಾಗೇ ಪುಂಡಾಟಿಕೆಗಳು ಅತ್ಯಂತ ಅಮಾನವೀಯವೂ ಕ್ರೂರವೂ ಆಗಿರುತ್ತವೆಂದು ವಿವರಿಸಿ ಹೇಳಬೇಕಿಲ್ಲ.

ಧರ್ಮದ ನೆಲೆಗಟ್ಟಿನ ಹಾಗೆಯೇ ಜನಾಂಗೀಯ ನೆಲೆಗಳ ಆದಾರದ ಮೇಲೆ ನಡೆಯುವ ಹಲ್ಲೆ ಮತ್ತು ಗಲಭೆಗಳೂ ಜನಾಂಗೀಯ ವಾದಿಗಳ ಅಹಂಕಾರ ಮತ್ತು ಅವರ ಶ್ರೇಷ್ಠತೆಯ ಪರಿಕಲ್ಪನೆಯನ್ನೂ ಆಧರಿಸಿರುತ್ತವೆ. ಬಿಳಿಯರು ಕರಿಯರ ಮೇಲೆ ನಡೆಸುತ್ತಿರುವ ದುರಾಚಾರ, ಒಂದು ದೇಶದಲ್ಲಿ ತಲೆತಲಾಂತರದಿಂದ ನೆಲೆಸಿರುವವರನ್ನು ಅವರ ಮೂಲ ನೆಲೆಯ ಕಾರಣದಿಂದಾಗಿ ವಿದೇಶಿಯರಂತೆ ಕಾಣುವುದೂ ಹೆಚ್ಚಾಗುತ್ತಿದೆ. ಹಿಟ್ಲರ್ ಮತ್ತು ಮುಸಲೋನಿ ಇನ್ನೂ ಜೀವಂತವಾಗಿರುವುದು ನಮ್ಮೆಲ್ಲರ ದುರದೃಷ್ಟ.

ಮೂಲತಃ ಯುದ್ಧವೆನ್ನುವುದೇ ಮನುಕುಲದ ವಿರೋಧಿ. ಜೀವಪಿಪಾಸುಗಳ ಅಂತಿಮ ಆಯ್ಕೆ. ಅದು ಯಾವತ್ತೂ ಸಹಿಸಲಸಾಧ್ಯವಾದ ಅತ್ಯಂತ ಕ್ರೂರ ಕೆಲಸವೆಂಬುದನ್ನು ಮತ್ತೆ ಮತ್ತೆ ಒತ್ತಿ ಹೇಳಬೇಕಾದ ಅಗತ್ಯತೆ ಇಲ್ಲ. ಪರಸ್ಪರ ವಿದ್ವೇಷ, ಪೂರ್ವಾಗ್ರಹ ಪೀಡಿತ ನಂಬಿಕೆ ಎಂಬ ಭ್ರಾಂತುಗಳು ಈ ಅಮಾನವೀಯ ಕೃತ್ಯದ ಹಿಂದಿರುವ ಶಕ್ತಿಗಳು.
ಬುದ್ಧನ ಬದ್ಧತೆ, ಗಾಂಧೀಜಿಯ ಅಹಿಂಸಾತತ್ವ ಯಾವಕಾಲಕ್ಕೂ ಇಂಥ ಯುದ್ಧಗಳ ಪಾಶಗಳಿಂದ ನಮ್ಮನ್ನು ಬಿಡಿಸಿ ತರಬಲ್ಲ ಅಸ್ತ್ರಗಳು. ಸೋದರತ್ವ ಮತ್ತು ಸ್ನೇಹ ಸಂಬಂಧಗಳು ಮಾತ್ರ ಜಗತ್ತಿನ ಯುದ್ಧಗಳನ್ನು ನಿವಾರಿಸಬಲ್ಲವು. ಬುದ್ಧ ಮತ್ತು ಗಾಂಧಿ ಆ ಕಾರಣಕ್ಕೇ ಸರ್ವಕಾಲಿಕ ನಾಯಕರಾಗುತ್ತಾರೆ. ಶಾಂತಿ ಮಂತ್ರದ ಹರಿಕಾರರಾಗಿ ಗೋಚರಿಸುತ್ತಾರೆ.

ಕಾಮೆಂಟ್‌ಗಳಿಲ್ಲ: