ಒಟ್ಟು ಪುಟವೀಕ್ಷಣೆಗಳು

ಗುರುವಾರ, ನವೆಂಬರ್ 19, 2009

ನುಡಿಸಿರಿ- ಸಾಹಿತ್ಯ ಮತ್ತು ಸಂಸ್ಕೃತಿಗಳ ಭವ್ಯ ಮಿಲನ

ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ‘ನುಡಿಸಿರಿ-೨೦೦೯’ರಲ್ಲಿ ಭಾಗವಹಿಸಿದ ಸಂಭ್ರಮ, ಖುಷಿ ಮತ್ತು ಸಮ್ಮೇಳನವನ್ನು ಆಯೋಜಕರು ರೂಪಿಸಿದ್ದ ರೀತಿಗಳನ್ನು ಹಂಚಿಕೊಳ್ಳುವ ಯತ್ನ ಈ ಲೇಖನದ್ದು.
ನಮ್ಮಲ್ಲಿ ಬಹಳ ಜನ ಸಾಹಿತ್ಯ ಸಮ್ಮೇಳನಗಳನ್ನು ‘ಸಂತೆ’ ಎಂದು ಕರೆದಿದ್ದೇವೆ/ಭಾವಿಸಿದ್ದೇವೆ. ಆಯೋಜಕರ ಮರ್ಜಿಗನುಗುಣವಾಗಿ, ಆಳುವ ಸರ್ಕಾರದ ನೀತಿಗನುಗುಣವಾಗಿ ಸಮ್ಮೇಳನಗಳ ಕಾರ್ಯಕ್ರಮಗಳು ರೂಪುಗೊಳ್ಳುವುದರಿಂದಾಗಿ ಇಂಥ ಅಪವಾದಗಳು ತಪ್ಪಿದ್ದಲ್ಲ. ಅದರಲ್ಲೂ ಕನ್ನಡ ಸಾಹಿತ್ಯ ಸಮ್ಮೇಳನಗಳಂತೂ ‘ಸಾಹಿತ್ಯ’ವೊಂದನ್ನು ಬಿಟ್ಟು ಉಳಿದೆಲ್ಲ ಚಟುವಟಿಕೆಗಳನ್ನೂ ನಡೆಸಿರುತ್ತವೆ. ಹಲವು ಕಾರಣಗಳಿಂದಾಗಿ ಪದೇ ಪದೇ ಮುಂದೂಡಲ್ಪಡುವ ಈ ಸಮ್ಮೇಳನಗಳು ಸ್ವಾಗತ ಸಮಿತಿಯ ಅಧ್ಯಕ್ಷರ ಮತ್ತು ಎಲ್ಲಿ ಸಮ್ಮೇಳನ ನಡೆಯಲು ಆಯೋಜಿಸಲಾಗಿದೆಯೋ ಆ ಸ್ಥಳದ ಸಚಿವ/ಶಾಸಕ/ಸಂಸದರ ಕೃಪಾಶೀರ್ವಾದದಿಂದ ನಡೆಯಬೇಕಿರುವ ಕಾರಣ ರಾಜಕೀಯ ಬದಲಾವಣೆಗಳೂ ಇಂಥ ಸಮ್ಮೇಳನಗಳ ಹಣೆಯ ಬರಹವನ್ನೇ ಬದಲಾಯಿಸಿಬಿಡುತ್ತವೆ. ಊಟ-ತಿಂಡಿಗಳ ವಿತರಣೆ, ಪ್ರದೇಶವಾರು ಭೋಜನ ವಿಶೇಷತೆಯನ್ನು ಪ್ರದರ್ಶಿಸುವ ಸಲುವಾಗಿ ಮಠ, ಮಾನ್ಯಗಳನ್ನೂ ಓಲೈಸಿಲಾಗಿರುತ್ತದೆ. ಹೀಗೆ ಸಾಹಿತ್ಯ ಸಂಗತಿಗಳಿಗಿಂತಲೂ ಸಾಹಿತ್ಯೇತರ ಸಂಗತಿಗಳೇ ಮುಖ್ಯವಾಗಿ ಸಮ್ಮೇಳನಾಧ್ಯಕ್ಷರ ಆಯ್ಕೆಯಿಂದಲೂ ಕಸರತ್ತುಗಳ ಮೇಲೆ ಕಸರತ್ತುಗಳು ನಡೆದು ಅದು ಇಡೀ ಸಮ್ಮೇಳನದ ಸ್ವರೂಪವನ್ನೇ ಬದಲಿಸಿಬಿಡುವುದೂ ಸರ್ವೇ ಸಾಮಾನ್ಯವಾದ ವಿಷಯವಾಗಿದೆ. ಸಮ್ಮೇಳನಗಳಲ್ಲಿ ಮಂಡಿಸಲಾಗುವ ನಿರ್ಣಯಗಳಂತೂ ಹನುಮಂತನ ಬಾಲದಂತೆ ಬೆಳೆದೂ, ಬೆಳೆದೂ ಬೆಳೆಯುತ್ತವೇ ವಿನಾ ಅವುಗಳ ಅನುಷ್ಠಾನ ಎಂಬುದಂತೂ ಯಾವ ಸರ್ಕಾರಗಳಿಂದಲೂ ಸಾಧ್ಯವಾಗದಿರುವುದೂ ಇಂಥ ನಿರ್ಣಯಗಳ ಮೇಲಿನ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಿದೆ. ಸಮ್ಮೇಳನದ ವೆಚ್ಚಕ್ಕಾಗಿ ಸರ್ಕಾರ ಕೊಡಮಾಡುವ ಅನುದಾನ, ಈಗಂತೂ ಅದು ಒಂದು ಕೋಟಿ ರೂಪಾಯಿ, ಅದರ ಮೇಲೆ ಸರ್ಕಾರೀ ನೌಕರರ ಒಂದು ದಿನದ ವೇತನ, ಸ್ಥಳೀಯ ಸಂಸ್ಥೆಗಳ ಹಣಕಾಸಿನ ಬೆಂಬಲ, ಮಠ ಮಾನ್ಯಗಳ ಸಹಾಯ ಹೀಗೆ ಒಟ್ಟೂ ಸೇರುವ ಹತ್ತಿರ ಹತ್ತಿರ ನಾಲ್ಕು ಕೋಟಿ ರೂಪಾಯಿ ಒಂದು ಸಮ್ಮೇಳನಕ್ಕೆ ಬಳಸಲಾಗುತ್ತದೆ.
ಮೂರು ದಿನಗಳ ನುಡಿಜಾತ್ರೆಗೆ ಅದ್ದೂರಿ ಖರ್ಚು ಅನಿವಾರ್ಯವೆಂದು ಒಪ್ಪಿಕೊಳ್ಳಬಹುದಾದರೂ ಇಂಥ ಸಮ್ಮೇಳನಗಳ ಫಲಶೃತಿ ಎಷ್ಟರ ಮಟ್ಟಿಗೆ ನಾಡು-ನುಡಿಗಳ ಬೆಳವಣಿಗೆಗೆ ಪೂರಕವಾಗಿದೆ ಮತ್ತು ಸಫಲವಾಗಿದೆ ಎಂಬ ಪ್ರಶ್ನೆ ನಿರುತ್ತರವಾಗಿಯೇ ಉಳಿಯುತ್ತದೆ. ಒಂದು ನಿರ್ದಿಷ್ಟ ವಿಚಾರದ ಮೇಲೆಂದೂ ಚರ್ಚೆ ನಡೆಸದ ಈ ಸಮ್ಮೇಳನಗಳಲ್ಲಿ ಪಾಲ್ಗೊಳ್ಳುವ ವಿಷಯ ತಜ್ಞರ ಉಪನ್ಯಾಸಗಳಿಗಿಂತಲೂ ಮುಖ್ಯಮಂತ್ರಿಗಳ/ರಾಜಕಾರಣಿಗಳ ರಾಜಕೀಯ ಭಾಷಣಗಳೇ ನಮ್ಮ ಮಾಧ್ಯಮಗಳಲ್ಲಿ ಸಿಂಹ ಪಾಲು ಪಡೆಯುತ್ತವೆ. ಇದುವರೆಗೂ ನಾಲ್ಕೈದು ಸಮ್ಮೇಳನಗಳಲ್ಲಿ ಪ್ರತಿನಿಧಿಯಾಗಿ/ಆಹ್ವಾನಿತನಾಗಿ ಭಾಗವಹಿಸಿರುವ ನಾನು ಯಾವ ಕಾರ್ಯಕ್ರಮವೂ ನಿಗದಿತ ಸಮಯಕ್ಕೆ ಪ್ರಾರಂಭವಾಗಿ ನಿಗದಿತ ಸಮಯಕ್ಕೆ ಮುಕ್ತಾಯವಾದುದನ್ನು ಕಂಡೇ ಇಲ್ಲ. ವಿಷಯವನ್ನು ಪ್ರವೇಶಿಸದೆಯೇ ‘ವಿಚಾರ ಪೂರ್ಣ’ ಭಾಷಣವನ್ನು ನೀಡಿದ ಅಪ್ರತಿಮರನ್ನೂ ಇಂಥ ಸಮ್ಮೇಳನಗಳಲ್ಲಿ ಕಂಡಿದ್ದೇನೆ. ತಮ್ಮ ಹೆಸರು ಒಂದಲ್ಲ ಒಂದು ಗೋಷ್ಠಿಯಲ್ಲಿ ಕನಿಷ್ಠ ಪ್ರತಿಕ್ರಿಯೆಯಲ್ಲಾದರೂ ಇರದಿದ್ದಲ್ಲಿ ಅಂಥ ಸಮ್ಮೇಳನಗಳಿಂದ ದೂರ ಉಳಿಯುವ ‘ಗಣ್ಯ ಸಾಹಿತಿ’ಗಳನ್ನೂ ಕಂಡಿದ್ದೇನೆ. ಇಷ್ಟೆಲ್ಲ ಪೀಠಿಕೆ ಇಲ್ಲದೇ ಮೂಡುಬಿದರೆಯ ‘ನುಡಿಸಿರಿ’ಯನ್ನು, ಅಲ್ಲಿ ನಡೆದ ನಿಜ ಸಾಹಿತ್ಯ ಸಮಾರಾಧನೆಯನ್ನೂ ವರ್ಣಿಸಲಾಗುವುದಿಲ್ಲವಲ್ಲ!
ನುಡಿಸಿರಿ- ಡಾ.ಮೋಹನ ಆಳ್ವ ತಾವು ಕಂಡ ಕನಸನ್ನು ನನಸು ಮಾಡಿದ ಬಗೆ. ೨೦೦೩ರ ಸಾಹಿತ್ಯ ಸಮ್ಮೇಳನವನ್ನು ಮೂಡುಬಿದರೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಡೆಸಿ ಬಂದ ಅನುಭವ ಕೂಡ ಅವರ ಈ ಕನಸಿನ ಹಿಂದೆ ಕೆಲಸ ಮಾಡಿದೆ. ಸರ್ಕಾರದ ಅನುದಾನ ಪಡೆದ ಮೇಲೆ ಅದರ ಋಣಕ್ಕೆ ಬಿದ್ದ ಕಾರಣದಿಂದಾಗಿ ಪಾಲಿಸಲೇ ಬೇಕಾದ ಶಿಷ್ಟಾಚಾರವೆಂಬ ಸೋಗು ಕೂಡ ಅವರ ಮನಸ್ಸಿನ ಮೇಲೆ ಇನ್ನಿಲ್ಲದ ಪ್ರಭಾವ ಬೀರಿರಬೇಕು. ಹಾಗೆಂತಲೇ ೨೦೦೪ರಿಂದ ಈವರೆಗೆ ನಡೆಸಿರುವ ಆರು ನುಡಿಸಿರಿ ಸಮ್ಮೇಳನಗಳನ್ನು ಸರ್ಕಾರದ ಅಥವಾ ಸಾರ್ವಜನಿಕರ ವಂತಿಗೆ ಪಡೆಯದೇ ಅವರು ಯಶಸ್ವಿಯಾಗಿ ನಡೆಸಿದ್ದಾರೆ. ಸಾಹಿತ್ಯ ಸಮ್ಮೇಳನಗಳಿಗೆ ಹೋಲಿಸಿದರೆ- ಹೋಲಿಸಬಾರದು ಬಿಡಿ. ಏಕೆಂದರೆ ಸರ್ಕಾರದ/ ಆಳುವವರ ಹಂಗಿನಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳೂ ಗೊತ್ತಿದ್ದೋ/ಗೊತ್ತಿಲ್ಲದೆಯೋ ಕಾಣದ ಕೈಗಳ ಸೂತ್ರಕ್ಕೆ ಕುಣಿದಿರುತ್ತವೆ. ಆದರೆ ನುಡಿಸಿರಿ ಸಂಪೂರ್ಣವಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರಾಯೋಜಕತ್ವದಲ್ಲಿ ಮತ್ತು ಅದರ ಎಲ್ಲ ನೌಕರ ವರ್ಗದವರ ಸಹಕಾರದಲ್ಲಿ ನಡೆಯುತ್ತಿರುವುದರಿಂದ ಎಲ್ಲ ವಿಚಾರಗಳಲ್ಲೂ ಅತ್ಯಂತ ಕರಾರುವಾಕ್ಕಾಗಿ, ಗೌಜು ಗೋಜಲುಗಳಿಲ್ಲದ ನಿರ್ದಿಷ್ಠ ಪ್ರಯತ್ನವಾಗಿ ರೂಪುಗೊಳ್ಳುತ್ತಿದೆ. ಕಳೆದ ಆರು ಸಮ್ಮೇಳನಗಳಲ್ಲಿ ನುಡಿಸಿರಿ ಚರ್ಚಿಸಿದ ವಿಷಯಗಳನ್ನೇ ಗಮನಿಸಿ: ಪ್ರೊ.ಬರಗೂರು ರಾಮಚಂದ್ರಪ್ಪನವರ ಅಧ್ಯಕ್ಷತೆಯಲ್ಲಿ ೨೦೦೪ರಲ್ಲಿ ‘ಕನ್ನಡ ಮನಸ್ಸು:ಸಾಹಿತ್ಯಕ-ಸಾಂಸ್ಕೃತಿಕ ಜವಾಬ್ದಾರಿಗಳು’ ೨೦೦೫ರಲ್ಲಿ ಎಸ್.ಎಲ್.ಭೈರಪ್ಪನವರ ಅಧ್ಯಕ್ಷತೆಯಲ್ಲಿ ‘ಕನ್ನಡ ಮನಸ್ಸು: ಬೌದ್ಧಿಕ ಸ್ವಾತಂತ್ರ್ಯ’ ೨೦೦೬ರಲ್ಲಿ ಡಾ.ಚಂದ್ರಶೇಖರ ಕಂಬಾರರ ಅಧ್ಯಕ್ಷತೆಯಲ್ಲಿ ‘ಕನ್ನಡ ಮನಸ್ಸು:ಪ್ರಚಲಿತ ಪ್ರಶ್ನೆಗಳು’, ೨೦೦೭ರಲ್ಲಿ ಪ್ರೊ.ಜಿ.ವೆಂಕಟಸುಬ್ಬಯ್ಯನವರ ಗುರುತ್ವದಲ್ಲಿ ‘ಕನ್ನಡ ಮನಸ್ಸು: ಸಾಹಿತಿಯ ಜವಾಬ್ದಾರಿಗಳು’, ೨೦೦೮ರಲ್ಲಿ ಡಾ.ಚನ್ನವೀರ ಕಣವಿಯವರ ಅಧ್ಯಕ್ಷತೆಯಲ್ಲಿ ‘ಕನ್ನಡ ಮನಸ್ಸು:ಶಕ್ತಿ ಮತ್ತು ವ್ಯಾಪ್ತಿ’ ಹಾಗೂ ಮೊನ್ನೆ ಸಂಪನ್ನಗೊಂಡ ೨೦೦೯ರ ಪ್ರೊ.ಹಂ.ಪ.ನಾ ಅವರ ಅಧ್ಯಕ್ಷತೆಯಲ್ಲಿ ನಡೆದ ‘ಕನ್ನಡ ಮನಸ್ಸು:ಸಮನ್ವಯದೆಡೆಗೆ’. ಈ ಎಲ್ಲ ನುಡಿಹಬ್ಬಗಳೂ ಒಂದು ವಿಷಯವನ್ನು ಕೇಂದ್ರವನ್ನಾಗಿಟ್ಟುಕೊಂಡು ಅದರ ಸುತ್ತ ನಾಡಿನ ಹಲವು ಚಿಂತಕರ/ವಾಗ್ಮಿಗಳ/ವಿದ್ವಾಂಸರ ಅಭಿಪ್ರಾಯಗಳನ್ನು ಕ್ರೋಢೀಕರಿಸಿಕೊಂಡು ನಮ್ಮೆಲ್ಲರ ಚಿಂತನಶೀಲತೆಗೆ ಹೊಸ ಪರಿಕಲ್ಪನೆ ಮತ್ತು ಸಾಧ್ಯತೆಗಳನ್ನು ವಿಸ್ತರಿಸಿರುವುದನ್ನು ಹೇಗೆ ತಾನೆ ಅಲ್ಲಗಳೆಯಲು ಸಾಧ್ಯ? ಇದರ ಜೊತೆಗೇ ೨೦೦೪ರ ಸಮ್ಮೇಳನವೊಂದನ್ನು ಬಿಟ್ಟು ಉಳಿದೆಲ್ಲ ಸಮ್ಮೇಳನಗಳಲ್ಲಿ ಆಹ್ವಾನಿತ ಗಣ್ಯರೆಲ್ಲರ ಉಪನ್ಯಾಸಗಳನ್ನು ದ್ವನಿಸುರುಳಿಗಳಿಂದ ಸಂಗ್ರಹಿಸಿ ಅಕ್ಷರರೂಪಕ್ಕಿಳಿಸಿ ಪುಸ್ತಕವನ್ನಾಗಿಸಿ ಪ್ರಕಟಿಸಿರುವುದಂತೂ ಅಕ್ಷರಮೋಹ ಇರುವವರೆಲ್ಲ ಮೋಹನ ಆಳ್ವರನ್ನು ಭೇಷ್ ಅನ್ನುವಂತೆ ಮಾಡುತ್ತವೆ.
ಸಮ್ಮೇಳನದ ಉದ್ಘಾಟನೆಯಿಂದ ಅದು ಸಮರೋಪ ಕಾಣುವವರೆಗೂ ಎಲ್ಲ ಕಡೆಯೂ ಸಮಯವನ್ನು ಅತ್ಯಂತ ಕಟ್ಟುನಿಟ್ಟಾಗಿ ಪರಿಪಾಲಿಸುವುದಲ್ಲದೇ ಉದ್ದೇಶಿತ ವಿಷಯದಡಿಯಲ್ಲೇ ಎಲ್ಲ ಚರ್ಚೆಗಳನ್ನು ಕೇಂದ್ರೀಕರಿಸುವುದು ಗೋಷ್ಠಿಗಳ ನಡುವಿನ ಕೆಲವೇ ನಿಮಿಷಗಳನ್ನೂ ಸ್ಥಳೀಯ ಶಾಲೆಗಳ ಮಕ್ಕಳ ಮೂಲಕ ಗಾದೆ ಮಾತುಗಳನ್ನೂ, ಕೃಷಿ ಸಂಬಂಧೀ ಮಾತುಗಳನ್ನೂ, ಕನ್ನಡ ಸಾಹಿತ್ಯದ ಮರೆಯಬಾರದ ಮಾತುಗಳನ್ನೂ ಹೇಳಿಸುವ ಮೂಲಕ ಆ ಮಕ್ಕಳಿಗೂ ಅವಕಾಶಕೊಡುವುದೂ, ಅವರಿಗೆ ಸಾಹಿತ್ಯ ಸಾಂಸ್ಕೃತಿಕ ಲೋಕವನ್ನು ಪರಿಚಯಿಸಿಕೊಡುವುದೂ ಕೇವಲ ದೂರದೃಷ್ಟಿಯುಳ್ಳ ಮಹನೀಯರು ಮಾತ್ರ ಮಾಡಬಹುದಾದ ಅಪರೂಪದ ಹಾಗೂ ಅತಿ ಜರೂರಾಗಿ ಎಲ್ಲರೂ ಅನುಕರಿಸಲೇ ಬೇಕಾದುದೂ ಆಗಿದೆ.
ಬರಿಯ ಸಾಹಿತ್ಯವನ್ನಷ್ಟೇ ಅಲ್ಲದೇ ಸಾಂಸ್ಕೃತಿಕ ಚಟುವಟಿಕೆಗಳಿಗೂ ನುಡಿಸಿರಿ ಅಪಾರ ಅವಕಾಶವನ್ನು ಒದಗಿಸಿಕೊಡುತ್ತದೆ. ಸಂಜೆ ಒಟ್ಟೊಟ್ಟಿಗೇ ನಾಲ್ಕು ಬೇರೆ ಬೇರೆ ವೇದಿಕೆಗಳಲ್ಲಿ ವಿವಿಧ ಕಾರ್ಯಕ್ರಮಗಳು ಜರುಗುತ್ತವೆ. ಯಾರಿಗೆ ಏನು ಇಷ್ಟವೋ ಅವರು ಅದನ್ನು ಸವಿಯಲು/ಆಸ್ವಾದಿಸಲು ಇದಕ್ಕಿಂತ ಹೆಚ್ಚಿನ ಅವಕಾಶ ಬೇಕೆ? ಬೆಳಿಗ್ಗೆ ಆರಕ್ಕೇ ಶಾಸ್ತ್ರೀಯ ಸಂಗೀತ ಮುಖ್ಯ ವೇದಿಕೆಯಲ್ಲಿ. ಗೋಷ್ಠಿಗಳ ನಡುನಡುವೆಯೇ ಮಾತಿನ ಮಂಟಪ-ನಗೆ ಚಟಾಕಿಗಳನ್ನು ಸಿಡಿಸಿದರೆ, ಕವಿ ಸಮಯ-ಕವಿನಮನ, ಕವಿಯ ಮಾತಿನ ಜೊತೆಗೇ ಕವಿತೆಗೆ ರಾಗ ಸಂಯೋಜಿಸಿ ಅದನ್ನು ಕೇಳಿಸುವ ಉತ್ಸಾಹ. ಕಥಾಸಮಯದಲ್ಲಿ ಕತೆಗಾರರು ತಮ್ಮ ಅನನ್ಯ ಅನುಭವಗಳನ್ನು ಹಂಚಿಕೊಳ್ಳುತ್ತಲೇ ತಮ್ಮ ಕತೆಯೊಂದನ್ನು ಓದುವ ಅವಕಾಶ. ಇದರ ಜೊತೆಗೇ ನಾಡು-ನುಡಿಗೆ ಸಂದುಹೋದವರ ನೆನಪಿಗೆ ಮಾತಿನ ಶ್ರದ್ಧಾಂಜಲಿ.
ಬರಿಯ ಬೌದ್ಧಿಕ ಹಸಿವಲ್ಲ ಹೊಟ್ಟೆಯ ಹಸಿವಿಗೂ ಏಕಕಾಲದಲ್ಲಿ ದಾಸೋಹ. ಮುಖ್ಯರಿಗೆ ಬಡಿಸಿದ ಭಕ್ಷ್ಯ ಭೋಜ್ಯಗಳೇ ಪ್ರತಿನಿಧಿಗಳಿಗೂ. ಯಾರಿಗೂ ಯಾವುದರಲ್ಲೂ ವ್ಯತ್ಯಾಸದ ಭಾವವಿಲ್ಲ. ಎಲ್ಲರನ್ನೂ ಏಕತ್ರಗೊಳಿಸಿ ಧನ್ಯರನ್ನಾಗಿಸಿದ ಅಪೂರ್ವ ಕ್ಷಣಗಳು.
ಕನ್ನಡದ ಕೆಲಸಗಳನ್ನು ಬರಿಯ ಸರ್ಕಾರೀ ಸಂಸ್ಥೆಗಳು, ಅಕಾಡೆಮಿ, ಪರಿಷತ್ತಿನಂಥ ಪರತಂತ್ರ ಸಂಸ್ಥೆಗಳು ಮಾತ್ರ ಮಾಡಬೇಕೆನ್ನುವ ಸಾಮಾನ್ಯ ಅಭಿಪ್ರಾಯವನ್ನು ಹುಸಿಗೊಳಿಸಿ ಅದನ್ನು ಈ ನಾಡಿನ ಸಾಹಿತ್ಯ ಸಂಸ್ಕೃತಿಗಳನ್ನು ಗೌರವಿಸುವ ಯಾರೂ ಮಾಡಬಹುದೆನ್ನುವ ಸತ್ಯವನ್ನೂ ಡಾ.ಮೋಹನ ಆಳ್ವ ಮಾಡಿತೋರಿಸುತ್ತಿದ್ದಾರೆ. ಭಾಷೆ ಮತ್ತು ಸಂಸ್ಕೃತಿಗಳನ್ನು ರೂಪಿಸುವ, ನಿರ್ವಚಿಸುವ, ನಿರ್ಧರಿಸುವ ಮತ್ತು ನಿರ್ವಹಿಸುವ ಅವಕಾಶ ಮತ್ತು ಜವಾಬ್ದಾರಿಗಳನ್ನು ಪ್ರಭುತ್ವಗಳ ಮೂಲಕ ಮಾಡಿಸದೇ ಅದನ್ನು ಸಮುದಾಯದ ಮೂಲಕ ಸಾಧಿಸುವ ಪ್ರಯತ್ನ ನುಡಿಸಿರಿಯದ್ದಾಗಿದೆ. ಅದು ಈ ನೆಲದ ಬಹುರೂಪೀ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುತ್ತಿರುವ ಪುರಾವೆಯಾಗಿಯೂ ಕಾಣುತ್ತಿದೆ. ರಾಜಕೀಯ ಒತ್ತಡಗಳಿಗೆ ಮಣಿಯದೇ, ಧಾರ್ಮಿಕ ಬಣ್ಣಗಳಿಗೂ ಅವಕಾಶ ನೀಡದೇ ಕೇವಲ ಋಜುಮಾರ್ಗದಲ್ಲಿ ನಡೆಸಲೇಬೇಕೆಂಬುದು ಇಡೀ ವ್ಯವಸ್ಥಾಪನಾ ಸಮಿತಿಯ ಕನಸು ನನಸಾದ ಬಗೆ ಇದು. ಅನ್ಯರ ಹಣಕಾಸು ಮುಟ್ಟದೇ ಇರುವ ಕಾರಣಕ್ಕೇ ಇಂಥ ಶಕ್ತಿ ಮತ್ತು ವ್ಯಾಪ್ತಿ ನುಡಿಸಿರಿಗೆ ಸಾಧಿಸಿದೆ.
ನಮ್ಮ ಸರ್ಕಾರ ವಿಶ್ವ ಕನ್ನಡ ಸಮ್ಮೇಳನ ನಡೆಸುತ್ತೇನೆಂದು ಹೇಳುತ್ತಲೇ ಇದೆ. ಹಲವು ಕಾರಣಗಳಿಂದ ಹಲವು ರಾಜಕೀಯ/ಸಾಮಾಜಿಕ ಒತ್ತಡಗಳನ್ನು ಮುಂದುಮಾಡಿ ಅದರ ನೆವದಿಂದ ವಿಶ್ವ ಕನ್ನಡ ಸಮ್ಮೇಳನ ಮುಂದು ಮುಂದಕ್ಕೆ ಹೋಗುತ್ತಲೇ ಇದೆ. ಪಕ್ಕದ ಮಹಾರಾಷ್ಟ್ರದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ಅಲ್ಲಿನ ಸರ್ಕಾರ ಹಣ ನೀಡಿದರೂ ಅದರಲ್ಲಿ ಭಾಗವಹಿಸಲು ಅದಕ್ಕೆ ಅವಕಾಶ ಇಲ್ಲವಂತೆ. ಆ ನಾಡಿನ ಚಿಂತಕರೂ, ಬುದ್ಧಿಜೀವಿಗಳೂ, ಸಾಹಿತಿಗಳೂ ಹಾಗೂ ಸಾಹಿತ್ಯಾಸಕ್ತರು ಮಾತ್ರ ಭಾಗವಹಿಸುವ ಸಮ್ಮೇಳನ ಅದಂತೆ. ನಮಗೂ ಅಂಥ ಸದವಕಾಶ ಬಂದೀತೆ? ಮುಖ್ಯ ಮಂತ್ರಿಗಳು ಬಂದೇ ಸಮ್ಮೇಳನವನ್ನು ಉದ್ಘಾಟಿಸಬೇಕೆನ್ನುವ ಮನೋಭಾವನೆ ದೂರವಾಗಬೇಕಾದರೆ ಅತ್ಯಗತ್ಯವಾಗಿ ನುಡಿಸಿರಿಯಲ್ಲಿ ಭಾಗವಹಿಸಿ ಅಲ್ಲಿನ ಚರ್ಚೆಗಳಲ್ಲಿ ಭಾಗವಹಿಸಿ ಕಲಿಯಬೇಕು.
ಮೂರೂ ದಿನ ಅಲ್ಲಿನ ಸಂಭ್ರಮ, ಸಂತೋಷಗಳಲ್ಲಿ ಭಾಗವಹಿಸಿ ಬರುವಾಗ ಕೇವಲ ಕುತೂಹಲಕ್ಕೆ ವ್ಯವಸ್ಥಾಪನಾ ಸಮಿತಿಯಲ್ಲಿರುವ ಒಬ್ಬರನ್ನು ಖರ್ಚು ವೆಚ್ಚಗಳ ಬಗ್ಗೆ ಕೇಳಿದೆ. ನುಡಿಸಿರಿಗೆ ನಲವತ್ತು ಲಕ್ಷ, ವಿರಾಸತ್ ಉತ್ಸವಕ್ಕೆ (ಶಾಸ್ತ್ರೀಯ ಸಂಗೀತ ನೃತ್ಯಗಳ ಹಬ್ಬ) ಅರವತ್ತು ಲಕ್ಷ ನಮ್ಮ ಅಂದಾಜು ವೆಚ್ಚ. ಸ್ವಲ್ಪ ಏರಿಳಿತ ಆಗಬಹುದು ಎಂದರವರು. ಕೇವಲ ನಲವತ್ತು ಐವತ್ತು ಲಕ್ಷಗಳಲ್ಲಿ ಇಷ್ಟು ಅಚ್ಚುಕಟ್ಟಾಗಿ ಸಂಭ್ರಮವಾಗಿ ನುಡಿಹಬ್ಬವನ್ನು ನಡೆಸಬಹುದಾದಲ್ಲಿ ನಮ್ಮ ಸಾಹಿತ್ಯ ಸಮ್ಮೇಳನಗಳಿಗೇಕೆ ನಾಲ್ಕೈದು ಕೋಟಿ ಸುರಿಯುತ್ತಿದ್ದೇವೆ/ಸಾರ್ವಜನಿಕರ ದುಡ್ಡನ್ನು ದುಂದು ಮಾಡುತ್ತಿದ್ದೇವೆ ಅನ್ನುವ ಪ್ರಶ್ನೆಗಳನ್ನು ನಿಮ್ಮಲ್ಲಿಯೂ ಹುಟ್ಟಿಸಿ ಈ ಲೇಖನವನ್ನು ಪರಿಸಮಾಪ್ತಿಗೊಳಿಸುತ್ತಿದ್ದೇನೆ.

ಕಾಮೆಂಟ್‌ಗಳಿಲ್ಲ: