ಒಟ್ಟು ಪುಟವೀಕ್ಷಣೆಗಳು

ಶುಕ್ರವಾರ, ಫೆಬ್ರವರಿ 5, 2010

ಅಭಾವದಿಂದ ಅನುವಾದಗಳವರೆಗೆ....

ಒಂದು ಭಾಷೆಯಲ್ಲಿ, ಒಂದು ನಿರ್ದಿಷ್ಟ ಅವಧಿಯಲ್ಲಿ ಪ್ರಕಟವಾಗುವ ಕೃತಿಗಳ ಅವಲೋಕನವು ಆ ಭಾಷೆಯ ಬರಹಗಾರರು ಆ ಅವಧಿಯಲ್ಲಿ ಕಂಡುಂಡ ಆ ಭಾಷೆಯ ಸಾಮಾಜಿಕ ಸಾಂಸ್ಕೃತಿಕ ಸಂಗತಿಗಳ ಅನಾವರಣವೂ ಆಗಿರುವುದರಿಂದ ಸಾಹಿತ್ಯ ಚರಿತ್ರೆಯ ದಾಖಲೆಯೆಂದೇ ಭಾವಿಸಬೇಕಾಗುತ್ತದೆ. ಆದರೂ ಕಾವೇರಿಯಿಂದ ಕೃಷ್ಣೆಯವರೆಗೂ ವ್ಯಾಪಿಸಿರುವ ಕನ್ನಡದ ಎಲ್ಲ ಕೃತಿಗಳೂ ಒಂದು ಅವಲೋಕನಕ್ಕೆ ಸಿಕ್ಕುವ ಸಾಧ್ಯತೆಗಳೂ ಕಡಿಮೆಯೇ. ಅದರಲ್ಲೂ ಪ್ರತಿವರ್ಷ ಪ್ರಕಟವಾಗುವ ಪುಸ್ತಕಗಳಲ್ಲಿ ಕಾವ್ಯಸಂಕಲನಗಳ ಸಂಖ್ಯೆಯೇ ಅಧಿಕವಿರುವುದು ಎಲ್ಲರೂ ಬಲ್ಲ ಸಂಗತಿ. ಈಗಾಗಲೇ ತಮ್ಮ ಕೃತಿಗಳಿಂದ ಪ್ರಸಿದ್ಧರಾಗಿರುವ ಲೇಖಕರಿಂದ ಹಿಡಿದು ಇನ್ನೂ ಈಗಷ್ಟೇ ಬರೆಯುವ ತುಡಿತಕ್ಕೆ ಸಿಕ್ಕ ಎಳೆಯರವರೆಗೂ ಕವನ ಸಂಕಲನಗಳ ಹರಹು ಇರುವುದರಿಂದ ಈ ಸಮೀಕ್ಷೆ ಪರಿಪೂರ್ಣವಾಗಿರುತ್ತದೆ ಎಂದೇನೂ ಭಾವಿಸಬೇಕಿಲ್ಲ. ಈ ಬರಹಗಾರ ತನ್ನಲ್ಲಿ ಲಭ್ಯವಿದ್ದ ಸಂಕಲನಗಳ ಆಧಾರದ ಮೇಲೆ ಈ ಸಮೀಕ್ಷೆ ನಡೆಸಿದ್ದಾನೆ.
೨೦೦೯ರಲ್ಲಿ ಇಬ್ಬರು ಹಿರಿಯರು ಕಂಬಾರ ಮತ್ತು ಅನಂತಮೂರ್ತಿಗಳ ಸಂಕಲನಗಳ ಜೊತೆಗೆ ಈಗಾಗಲೇ ಕಾವ್ಯ ಕೃಷಿಯಲ್ಲಿ ಹೆಸರು ಮಾಡಿರುವ ಕೆ.ಬಿ.ಸಿದ್ದಯ್ಯ, ಎಸ್.ಮಂಜುನಾಥ್, ಸವಿತಾ ನಾಗಭೂಷಣ ಮತ್ತು ಎಚ್.ಎಲ್.ಪುಷ್ಪ ಅವರ ಸಂಕಲನಗಳೊಟ್ಟಿಗೆ ಜ್ಯೋತಿ ಗುರುಪ್ರಸಾದ, ಸಂತೋಷ ಚೊಕ್ಕಾಡಿ, ಸ್ವಾಮಿನಾಥ, ಚಂ.ಸು.ಪಾಟೀಲ, ಆಲೂರು ದೊಡ್ಡನಿಂಗಪ್ಪ ಮತ್ತು ಎಚ್.ಆರ್.ರಮೇಶರ ಸಂಕಲನಗಳೂ ಸ್ಪರ್ಧೆಗಿಳಿದಿವೆ. ಇವಲ್ಲದೇ ಇದೇ ಪ್ರಥಮ ಬಾರಿಗೆ ಸಂಕಲನ ಪ್ರಕಟಿಸಿರುವ ಕತೆಗಾರ್ತಿ ಸುನಂದಾ ಪ್ರಕಾಶ ಕಡಮೆ, ಸಂತೆಬೆನ್ನೂರು ಫೈಜ್ನಟ್ರಾಜ್, ಆರಿಫ್ ರಾಜ, ಕೆ.ಎಸ್.ಶ್ರೀನಿವಾಸ ಮೂರ್ತಿ, ಎಂ.ಎಸ್.ರುದ್ರೇಶ್ವರ ಸ್ವಾಮಿ, ಶ್ರೀದೇವಿ ಕೆರೆಮನೆ, ಛಾಯಾ ಭಗವತಿ, ಸಿದ್ದು ದೇವರಮನಿ, ಡಾ.ಸಿ.ರವೀಂದ್ರನಾಥ, ರಶ್ಮಿ ಹೆಗಡೆ ಕನ್ನಡ ಕಾವ್ಯ ಶ್ರೀಮಂತಿಕೆಗೆ ತಮ್ಮ ಛಾಪು ಸೇರಿಸಿದ್ದಾರೆ. ಇಷ್ಟಲ್ಲದೇ ರಿಲ್ಕೆ (ಅನಂತಮೂರ್ತಿ), ಪಾಬ್ಲೊ ನೆರೂದ (ಜ.ನಾ.ತೇಜಶ್ರೀ),ಕೈಫಿ ಆಜ್ಮಿ (ವಿಭಾ) ಮಿರ್ಜಾ ಗಾಲಿಬ್ (ಡಾ.ಎನ್.ಜಗದೀಶ್ ಕೊಪ್ಪ) ಕೂಡ ಕನ್ನಡಕ್ಕೆ ಬಂದಿದ್ದಾರೆ.
ಯು.ಆರ್.ಅನಂತಮೂರ್ತಿಗಳ ‘ಅಭಾವ’ ಕಾವ್ಯಾಸಕ್ತರನ್ನು ಖುಷಿಗೊಳಿಸುತ್ತದೆ. ವರ್ಷದ ಕಡೆಯಲ್ಲಿ ಚಂದ್ರಶೇಖರ ಕಂಬಾರರ ‘ಎಲ್ಲಿದೆ ಶಿವಾಪುರ’ ಪ್ರಕಟವಾಗಿದೆ. (೨೦೧೦ರ ಜನವರಿ ೨ರಂದು ವಿದ್ಯುಕ್ತ ಬಿಡುಗಡೆಯಾಗಿದೆ), ೨೦೦೨ರ ‘ಇಲ್ಲಿಯವರೆಗಿನ ಕವಿತೆಗಳು’ ನಂತರ ಇದೀಗ ಕೇವಲ ೧೮ ಕವಿತೆಗಳ ಸಂಕಲನ ‘ಅಭಾವ’ವನ್ನು ಪ್ರಕಟಿಸಿರುವ ಅನಂತಮೂರ್ತಿಗಳು ಅವರ ಗದ್ಯದಷ್ಟು ಸರಾಗವಾಗಿ ಓದುಗರನ್ನು ತೃಪ್ತಿಪಡಿಸಲಾರರಾದರೂ ಅವರು ಸೃಷ್ಟಿಸುವ ರೂಪಕಗಳಿಂದ ಪ್ರಿಯರಾಗುತ್ತಾರೆ. ‘ಉತ್ತುವ ಮನಸ್ಸಿಗೆ ಫಲವಾತ್ತಾಗುತ್ತ.’ ಎನ್ನುವ ಸಾಲುಗಳ ಮೂಲಕ ಬದುಕಿನ ಮಾಗುವಿಕೆಯ ಮತ್ತು ವಿನಯ ಹಾಗೂ ಮಾರ್ದವತೆಯ ಪ್ರತಿನಿಧಿಯಂತೆ ಕಾಣಿಸುತ್ತಾರೆ. ‘ಕಾವ್ಯದ ಆತ್ಮಾನುಸಂಧಾನ’ ಅನ್ನುವ ಪದ್ಯವಂತೂ ಅದರ ಶೀರ್ಷಿಕೆ ಸೂಚಿಸುವ ಹಾಗೇ ಅನುಭವವೊಂದು ಪದ್ಯವಾಗಿ ಬೆಳೆಯುವ ಮತ್ತು ಚಿರಕಾಲ ಮನಸ್ಸೊಳಗೆ ನಿಲ್ಲುವ ಸಂಗತಿಯಾಗಿ ‘ಕಷ್ಟ; ಸಂಕಲ್ಪ ಸಾಲದು; ಅದೃಷ್ಟ ಬೇಕು’ ಅನ್ನುವ ಕವಿಯ ಮಾತಿಗೆ ಓದುಗ ಸಂಭ್ರಮ ಪಡುತ್ತಲೇ ತನ್ನೊಳಗಿನ ಅನುಭವಗಳನ್ನು ನೆನೆಯುವಂತೆ ಮಾಡುತ್ತದೆ. ‘ಈ ನಮ್ಮ ಕಾಲದಲ್ಲಿ ಏನೇನು ಚಂದ?’ ತುಂಟತನವನ್ನೂ ಕವಿತೆಯಾಗಿಸಬಹುದೆನ್ನುವುದರ ಸೂಚನೆಯಾದರೆ, ‘ಸಾವಿನ ಸನ್ನೆ’ ಸಂಕಲನದ ಯಶಸ್ವಿ ಪದ್ಯಗಳಲ್ಲೊಂದು. ‘ಓದುತ್ತ ಹೋದುದನ್ನು ಓದುತ್ತಲೇ ಮರೆಯುತ್ತ/ ಮೈಮುರಿಯುತ್ತ ಎದ್ದು ನಿಲ್ಲುವಾಗ/ ಏನದು ಮತ್ತೆ ಹೊಳೆದಂತಾಗುತ್ತದೆ?’ ಎಂದು ನಿರಂತರ ಕಾಡುವ ಸಾವಿನ ಸನ್ನೆಯನ್ನು ಅನಾವರಣಗೊಳಿಸುತ್ತಾರೆ. ಕಂಬಾರರ ‘ಎಲ್ಲಿದೆ ಶಿವಾಪುರ?’ ಎಂದಿನಂತೆ ಅವರಿಗೆ ಪ್ರಿಯವಾದ ಶಿವಾಪುರದಲ್ಲಿ ಕವಿಯ ಹುಡುಕಾಟವನ್ನೇ ವಸ್ತುವಾಗುಳ್ಳದ್ದು. ದೇಶಗಳಳಿದರೂ ಶಿವಾಪುರ ಉಳಿದೇ ಉಳಿಯುತ್ತದೆ ಎಂಬ ಕವಿಯ ಗಾಢ ನಂಬಿಕೆ ಇಲ್ಲಿನ ಎಲ್ಲ ಪದ್ಯಗಳಲ್ಲೂ ತುಂಬಿ ತುಳುಕಿದೆ. ಕಂಬಾರರಿಗಷ್ಟೇ ಒಲಿದಿರುವ ಜಡೆಮುನಿ,ವಿಶಾಲ ಮರ, ಹರಿಯುವ ನೀರು, ಚಂದ್ರಾಮ ಚುಕ್ಕಿಗಳು ಇಲ್ಲಿನ ಪದ್ಯಗಳಲ್ಲಿ ಕಂಬಾರ ಮುದ್ರೆಗೆ ಸಾಥ್ ನೀಡಿವೆ. ನಾವು ಆಡಿದ್ದು ಮಾಡಿದ್ದು/ಹರಿದು ಹೋಗಿದೆ ನದಿಯ ತೆರೆಗಳೊಡನೆ/ನಿನ್ನೆಯ ಸತ್ಯ ಇಂದಿನ ಚೇಷ್ಟೆಯಾಗಿ/ಕೂಸು ಜೋಗುಳ ಹಾಡಿ ನಮ್ಮನ್ನು ಮಲಗಿಸುತ್ತಿದೆ!-ಎನ್ನುವಷ್ಟೇ ಸಲೀಸಾಗಿ ಕಾಲನಿಗಿಂತ ತರುಣವಾದ ಕಾವ್ಯವಿದೆಯೆಂದು/ನನ್ನಂಥವರ ಮುನ್ನಡೆಸಿ ಹೊಸ ಕ್ಷಿತಿಜ ತೋರಿದವರು (ಅಡಿಗರಿಗೆ) ಎಂದೂ ನೆನೆಯುತ್ತಾರೆ. ಒಂದು ಓದಿಗೆ ದಕ್ಕಲಾರದ, ಪ್ರಬಂಧವೇನೋ ಎನ್ನುವಷ್ಟು ಸವಿವರಗಳ, ಸಾರಾಂಶ ಇಷ್ಟೇ ಎಂದು ಹೇಳಲಾಗದ ಸಂವೇದನಾಶೀಲತೆ ಮತ್ತು ಅನುಭವದೆರಕದ ಈ ಸಂಕಲನ ಬಹಳ ಕಾಲ ಕಾಡುತ್ತದೆ.
‘ಗಲ್ಲೆಬಾನಿ’ ಅಧ್ಯಾತ್ಮವನ್ನು ವಿವಿಧ ನೆಲೆಗಳಲ್ಲಿ ಶೋಧಿಸುತ್ತಿರುವ ಹಾಗೆಯೇ ಸಿದ್ಧಮಾದರಿಗಳನ್ನು ನಿರಾಕರಿಸಿ ಸ್ವಾನುಭವ ಮತ್ತು ಚಳವಳಿಗಳ ಮೂಲಕ ಕಂಡುಕೊಂಡ ತಾತ್ವಿಕತೆಯನ್ನೇ ಬಸಿದು ಕಾವ್ಯ ಕಟ್ಟುತ್ತಿರುವ ಸಿದ್ದಯ್ಯನವರ ನಾಲ್ಕನೇ ಖಂಡಕಾವ್ಯ. ‘ಇಡೀ ದೇಹ ಭವದ ಸಾಲ’ ಎನ್ನುವ ಕವಿ ‘ಕಟ್ಟಕಡೆಗೆ ಸುಲಿದು ಸುಲಿದು ಸುಲಿದು ಚರ್ಮ ಸುಲಿದು ಮೆಟ್ಟು ಹೊಲೆದು ಮೆಟ್ಟೀ ಮೆಟ್ಟೀ ಮೆಟ್ಟೀ ಬಿಟ್ಟುಬಿಟ್ಟೆ ಮೆಟ್ಟು ಬಿಡುವ ಜಾಗದಲ್ಲಿ’ ಎನ್ನುತ್ತಾರೆ. ಕಾಜಗದ ದೋಣಿ ಈಜುವ ಸೋಜಿಗವನ್ನು ಕಾಣಿಸುವ ಸಿದ್ದಯ್ಯನವರ ಈ ಕಾವ್ಯಾಭಿವ್ಯಕ್ತಿ ಒಂದು ರೀತಿಯಲ್ಲಿ ಆತ್ಮಚರಿತ್ರೆಯೇ ಆಗಿದೆ. ಚಮ್ಮಾರನ ನಿತ್ಯ ಕಾಯಕಕ್ಕೆ ಸಹಕಾರಿಯಾಗಿ ತನ್ನೊಡಲ ತುಂಬ ನೀರು ತುಂಬಿಕೊಂಡಿರುವ ಕಲ್ಲಬಾನಿ ಈ ಗಲ್ಲೆಬಾನಿ. ಸಾಮಾಜಿಕ ನಡೆಯನ್ನು ‘ಸಮಾಜೋ ಅಧ್ಯಾತ್ಮ ಪ್ರಯಾಣ’ವೆಂದು ನಂಬಿರುವ ಸಿದ್ದಯ್ಯನವರ ಈ ಕಾವ್ಯ ದಮನಿತ ವರ್ಗದ ಸಾಂಸ್ಕೃತಿಕ ಸಂಗತಿಯನ್ನು ಅನಾವರಣಗೊಳಿಸುತ್ತಲೇ ಕವಿಯೊಳಗಿರುವ ಜೀವಸೆಲೆಯಾಗಿ ಬಹುಕಾಲ ಓದುಗನನ್ನು ಕಾಡುತ್ತದೆ. ಕಳೆದ ವರ್ಷವಷ್ಟೇ ‘ಮಗಳು ಸೃಜಿಸಿದ ಸಮುದ್ರ’ ಹೆಸರಿನ ಸಂಕಲನ ಪ್ರಕಟಿಸಿ ಹೆಸರು ಖ್ಯಾತಿ ಗಳಿಸಿದ್ದ ಎಸ್.ಮಂಜುನಾಥ್ ಮತ್ತೊಂದು ಸಂಕಲನ ‘ಜೀವಯಾನ’ ಪ್ರಕಟಿಸಿದ್ದಾರೆ. ಹೀಗೆ ವರ್ಷಕ್ಕೊಂದು ಸಂಕಲನ ತರುವ ಯಾರೇ ಇರಲಿ, ಈಗಾಗಲೇ ಅವರು ಗಳಿಸಿದ ಖ್ಯಾತಿ ಮತ್ತು ಅವರಿಗಂಟಿದ ಪ್ರ್ರಭಾವಳಿಯ ಮೂಲಕವೇ ಸಾರಸ್ವತ ಲೋಕದ ಬಾಗಿಲು ತಟ್ಟುವುದರಿಂದ ಇಂಥವರು ಸೃಷ್ಟಿಸಿದ ಮಾಯೆಯ ಬಲೆಯನ್ನೇ ವಿಸ್ಮಿತರಾಗಿ ಸಲಹುವ ನಮ್ಮ ಮಾಧ್ಯಮಗಳು ಮತ್ತು ವಿದ್ವಾಂಸರೆಂಬ ವಿಮರ್ಶಕರು ಹಳಬರ ಈ ಆಟಗಳಿಗೆ ಚಪ್ಪಾಳೆ ತಟ್ಟುವ ಭರದಲ್ಲಿ ಇವರೊಟ್ಟಿಗೇ ನಿಂತಿರುವ ಇತರರ ಪ್ರಯತ್ನಗಳನ್ನು ಗಮನಿಸುವ ಗೋಜಿಗೂ ಹೋಗದೇ ಸುಮ್ಮನಿರುವ ಸುಮ್ಮಾನಕ್ಕೆ ಶರಣಾಗಿಬಿಡುತ್ತಾರೇನೋ ಎಂಬ ಅನುಮಾನಗಳೂ ಕಾಡುತ್ತವೆ. ‘ಜೀವಯಾನ’ ಆತ್ಮ ಚರಿತ್ರೆಯ ಪುಟಗಳಂತೆ ನಮ್ಮ ಮುಂದೆ ಬಿಚ್ಚಿಕೊಳ್ಳುತ್ತ ಹೋಗುವುದಾದರೂ ಇದುವರೆಗೆ ರೂಪಕಗಳಲ್ಲೇ ಮಾತನಾಡುತ್ತಿದ್ದ ಮಂಜುನಾಥ್, ಹೊಸ ಪ್ರಮೇಯವೊಂದನ್ನು ಸೃಷ್ಟಿಸಿದ್ದಾರೆಂದೇನೂ ಅನ್ನಿಸುವುದಿಲ್ಲ. ಅವರು ಪುಸ್ತಕದ ಕಡೆಯಲ್ಲಿ ಪ್ರಕಟಿಸಿರುವ ಟಿಪ್ಪಣಿಯಂತೂ-ಅದರಲ್ಲೂ ‘ಒಡಲಾಳ’ಕ್ಕೆ ತಮ್ಮ ಕೃತಿಯನ್ನು ತಾವೇ ಸ್ವತಃ ಹೋಲಿಸಿಕೊಳ್ಳುತ್ತಿರುವುದು ಅಷ್ಟೇನೂ ಆರೋಗ್ಯಕರವಾದುದಲ್ಲ. ಪ್ರಾಯಶಃ ಬೇರೊಬ್ಬರು ಮುನ್ನುಡಿಯ ಮೂಲಕ ಇದೇ ಮಾತುಗಳನ್ನು ಬರೆದಿದ್ದರೆ ಆಗ ಅದು ಬೇರೆಯ ಮಾತು.(ಅನಂತಮೂರ್ತಿ, ಸಿದ್ದಯ್ಯ, ತಮ್ಮ ಸಂಕಲನಗಳಿಗೆ ಬರೆದುಕೊಂಡಿರುವ ಸಾಲುಗಳನ್ನು ಗಮನಿಸಿ). ಆದರೂ ಮಂಜುನಾಥ್ ಇವತ್ತು ಬರೆಯುತ್ತಿರುವ ಕವಿಗಳಲ್ಲೇ ಭಿನ್ನವಾಗಿ ನಿಲ್ಲುತ್ತಾರೆ ಮತ್ತು ನಿರಂತರ ಕಾವ್ಯ ಪ್ರಯೋಗಕ್ಕೆ ತಮ್ಮನ್ನು ಒಪ್ಪಿಸಿಕೊಂಡಿದ್ದಾರೆ ಅನ್ನುವುದರಲ್ಲಿ ಯಾವ ಅನುಮಾನಗಳೂ ಇಲ್ಲ.ಒಂದು ಬಗೆಯ ವಿಷಾದ ಇಲ್ಲಿನ ಪದ್ಯಗಳಿಗೆ ಶೃತಿಯಾಗಿದೆ. ಮರಾಠಿಯಲ್ಲಿ ಕಳೆದ ದಶಕದಲ್ಲಿ ಆತ್ಮ ಚರಿತ್ರೆಗಳು ಸುದ್ದಿ ಮಾಡಿದ ಹಾಗೇ ಈ ಬಗೆಯ ಪದ್ಯಗಳು (ಎಚ್.ಎಸ್.ವಿ ಯವರ ಉತ್ತರಾಯಣ ನಾ.ಮೊಗಸಾಲೆಯವರ ಇಹಪರದ ಕೊಳ) ಪ್ರ್ರಾಯಶಃ ಇನ್ನು ಮುಂದೆ ಹೆಚ್ಚುಹೆಚ್ಚಾಗಿ ಪ್ರಕಟವಾಗಲಿವೆಯಾ ಎಂಬ ಅನುಮಾನವೂ ಕಾಡುತ್ತಿದೆ. ಮನದ ಬನದಲ್ಲಿ ಹೆಜ್ಜೆಯಿಕ್ಕಿದ ನವಿಲೆ (ಮಗಳಿಗೆ) ಅಂಜಿ ನಡುಗಿರಬೇಕು ಪಟದ ದೇವರುಗಳೆಲ್ಲ (ಅಣ್ಣನ ರೋಷಾವೇಷ) ಅಂಗಾಲ ಮುದ್ದಿಸಿದ ಮಳೆ ಬಿದ್ದ ಹೂಮಣ್ಣು (ಊರಿದ ಬೇರಿನ ಗುಂಟ) ಅಂಗೈಯ ಆಕಾಶದಲಿ ಹೊಳೆವ ನಕ್ಷತ್ರ (ಆ ಮುದ್ದು ಕವಚ)ದಂಥ ಸಾಲುಗಳು ಹಾಗೂ ೩೩ ಮತ್ತು ೩೪ನೆ ಪದ್ಯಗಳು ಕವಿ-ಪತ್ನಿ ಮತ್ತು ಮಗಳ ಕುರಿತು ಬರೆದದ್ದು ಖುಷಿಗೊಳಿಸುತ್ತವೆ. ಮಂಜುನಾಥರ ಪ್ರತಿಭೆಗೆ ತಲೆದೂಗಿಸುತ್ತವೆ.
‘ಜಾತ್ರೆಯಲ್ಲಿ ಶಿವ’ ಸಂಕಲನದಲ್ಲಿ ತಮ್ಮ ಕಾವ್ಯ ಮಾರ್ಗವನ್ನು ತಾವೇ ಮೀರಿದ ಸವಿತಾ ನಾಗಭೂಷಣ ಇದೀಗ ‘ದರುಶನ’ ಪ್ರಕಟಿಸಿದ್ದಾರೆ. ಉದ್ದುದ್ದದ ಭಾಷಣಕ್ಕೋ, ಕಂಡರಿಯದ ಆಧ್ಯಾತ್ಮಕ್ಕೋ ತೆಕ್ಕೆಬೀಳದೇ ಸಹಜ ಲಯ ಮತ್ತು ವಾಸ್ತವದ ಸಣ್ಣ ಪುಟ್ಟ ಪ್ರತಿಮೆಗಳಲ್ಲೇ ತಮ್ಮ ಕಾವ್ಯವನ್ನು ಕಟ್ಟುತ್ತಾರೆ. ಬಾಲ್ಯ, ಅಮ್ಮನ ನೆನಪು, ಪ್ರೀತಿ ಇವುಗಳ ನಡುವೆಯೇ ಬುದ್ಧ, ಗಾಂಧಿ ಕೂಡ ನಸುನಗುವುದು ಈ ಸಂಕಲನದ ವಿಶೇಷ. ಕೆಲವು ಪದ್ಯಗಳು ನೀತಿಪಾಠವಾಗಿ ಬದಲಾಗುವುದು ಏಕೋ ಕವಿಯೇ ಉತ್ತರಿಸಬೇಕು. ‘ಗುಜರಾತ್‌ಗೆ ಕವಿ ಸ್ಪಂದನ’ ಈ ಸಂಕಲನದ ಹೈಲೈಟ್. ಸಂಕಲನಕ್ಕಾಗುವಷ್ಟು ಪದ್ಯಗಳಾದೊಡನೆಯೇ ಪ್ರಕಟಿಸಿಬಿಟ್ಟರೆ ಜೊಳ್ಳು-ಕಾಳು ಎರಡರ ಮಿಶ್ರಣವೂ ಆಗುತ್ತೆ ಅನ್ನುವುದಕ್ಕೆ ಕೂಡ ಈ ಸಂಕಲನ ಸಹಜ ಉದಾಹರಣೆ.
ಅಮೃತಮತಿಯ ಸ್ವಗತವನ್ನು ಗಾಜುಗೋಳದ ಮೂಲಕ ಹಾಯಿಸಿದ್ದ ಎಚ್.ಎಲ್.ಪುಷ್ಪ ‘ಲೋಹದ ಕಣ್ಣು’ ತೆರೆದು ಹೊಸ ಕವಿತೆಗಳನ್ನು ಬರೆದಿದ್ದಾರೆ. ಅಲ್ಲಮನ ಪ್ರಭಾವಲಯದ ರೂಪಕಗಳಲ್ಲೇ ಬದುಕನ್ನು ಚಿತ್ರಿಸುವ ಪರಿ ಬೆರಗಾಗಿಸುತ್ತದೆ. ಈಗಾಗಲೇ ತಮಗೆ ಸಿದ್ಧಿಸಿದ ಮಾರ್ಗಗಳಲ್ಲೇ ಅನ್ಯ ಕವಯತ್ರಿಯರು ದಾಪುಗಾಲಿಡುತ್ತಿರುವಾಗ ಈಗಲೂ ಪುಷ್ಪ ಆತಂಕದಲ್ಲಿ ಆಧ್ಯಾತ್ಮವನ್ನರಸುತ್ತಿರುವುದು ವಿಶೇಷವೆನ್ನಿಸುತ್ತದೆ. ಸಂಕಲನದ ತುಂಬ ಸಾರ್ಥಕ ಕವಿತೆಗಳಿರುವುದು, ಒಂದು ಪಾತಳಿಗೆ ಸಿಲುಕದೇ ಆ ಎಲ್ಲ ಕವಿತೆಗಳೂ ತಮಗಿರದ ನೆಲೆಯನ್ನು ಕುರಿತೇ ಶೋಧಿಸುತ್ತಿರುವುದೂ ಹೆಚ್ಚುಗಾರಿಕೆ. ‘ಮಳೆಯ ಜಾಡಿನಲ್ಲಿ ಡಾಂಟೆ ಇತ್ಯಾದಿ’ ನಿಜದ ಪ್ರಯೋಗ. ಜಂಭದ ಗಾಳಿಕುದುರೆಗೆ ತಿಳಿದಿರಲಿ/ಬಯಲಿಗೆ ಬಯಲು ಎಂದೂ ಜೊತೆಯಲ್ಲವೆಂದು ಎನ್ನುವ ಅರಿವಿರುವ ಕವಿ ಕರುಣೆಯ ಕಣ್ಣು ತೆರೆದಲ್ಲದೆ/ಈ ತನು, ತನುವಿನ ಭವ ಹಿಂಗದು ಎನ್ನುತ್ತಾರೆ. ಅಪ್ಪಳಿಸುವ ಅಲೆಯೆದುರು/ವಿಳಾಸವಿಲ್ಲದ ನಾನು ತಬ್ಬಿಬ್ಬಾಗಿದ್ದೇನೆ/.. ../ಮಾರ್ದನಿಯಿಲ್ಲದ ಪುಟ್ಟ ಹಕ್ಕಿ ಎಂದೂ ಸಂತೈಸಿಕೊಳ್ಳುತ್ತಾರೆ. ಕನ್ನಡ ಕಾವ್ಯದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿರುವ ಆಧ್ಯಾತ್ಮದ ಹುಡುಕುವಿಕೆ ಇಲ್ಲಿನ ಪದ್ಯಗಳ ಮೂಲಕೇಂದ್ರ. ಆತ್ಮ ಸಂಗಾತಕ್ಕೆ ನೀನುಂಟು, ಏಕಲವ್ಯನೆಂಬ ಗುರುವಿಗೆ, ದಾರಿ ಕಳಕೊಂಡಿದೆ ಕವಿತೆ, ನದೀಮುಖ, ಕುಣಿವ ನವಿಲುಗಳು ಮುಂತಾದ ಪದ್ಯಗಳು ಪುಷ್ಪ ಅವರು ಶೋಧಿಸುತ್ತಿರುವ ಲೋಕದ ದಾರಿಗೆ ಇಡುತ್ತಿರುವ ಹೆಜ್ಜೆಗಳ ಕುರುಹಾಗಿ ತೋರುತ್ತವೆ.
‘ಚಂದ್ರಮತಿಯ ಮಾಂಗಲ್ಯ’ ಎನ್ನುವ ಅದ್ಭುತ ರೂಪಕವನ್ನೇ ಹೆಸರಾಗಿಸಿರುವ ಸ್ವಾಮಿನಾಥರ ನಾಲ್ಕನೇ ಸಂಕಲನದಲ್ಲಿರುವ ೪೮ ಪದ್ಯಗಳಲ್ಲಿ ನವೋದಯ, ನವ್ಯ ಮತ್ತು ಬಂಡಾಯದ ಮಿಶ್ರಣವಿದೆ. ‘ಪಂಚಭೂತ’ದಂಥ ಸರಳ ಲಯದೊಟ್ಟಿಗೇ ‘ರಕ್ಕಸ ಮತ್ತು ರಾಜಕುಮಾರಿ’ಯಂಥ ಕಥನ ಕವನಗಳನ್ನೂ ಅವರು ಬರೆಯಬಲ್ಲರು. ಬಿ.ಸಿ.ರಾಮಚಂದ್ರ ಶರ್ಮ ಹಾಗೂ ಜಿ.ಎಸ್.ಶಿವರುದ್ರಪ್ಪನವರ ಕವಿತೆಗಳ ಓದು ಈ ಕವಿಯ ಹಲವು ರಚನೆಗಳಿಗೆ ಸ್ಪೂರ್ತಿ ನೀಡಿವೆ. ತಕ್ಷಣಕ್ಕೇ ಕತ್ತಲಲ್ಲಿ ಫಳಫಳ ಹೊಳೆಯುವ ತಾಳಿ/ಕೊಳೆತಿತ್ತು ಕಾಲನ ಕಾಲು/ನಕ್ಕಿತ್ತು ಕಾಮನ ಬಿಲ್ಲು/ನುಡಿದಿತ್ತು ಕೊರಳು ಕಾಲದಷ್ಟೇ ಸತ್ಯ-ಕಾವ್ಯ ಸತ್ಯವನ್ನು ನವ್ಯದ ಪ್ರತಿಮೆಗಳಲ್ಲಿ ಹಿಡಿದಿಡುವ ಕವಿಗೆ ಭೇಷ್ ಅನ್ನಲೇಬೇಕಾಗುತ್ತದೆ.
‘ಎಡವಟ್ಟು ಬದುಕಿನ ಲಯಗಳು’ ಎನ್ನುವ ಕ್ಯಾಚೀ ಹೆಸರಿನ ಸಂಕಲನದ ಮೂಲಕ ಕಾವ್ಯಲೋಕ ಪ್ರವೇಶಿಸಿದ್ದ ಎಚ್.ಆರ್.ರಮೇಶ ‘ಸಾಸುವೆ ಹೂವ ಚರಿತ’ ಎನ್ನುವ ಸಾಮಾನ್ಯ ಹೆಸರಿಗೇಕೆ ಸೋತರೋ ಗೊತ್ತಾಗುತ್ತಿಲ್ಲ. ಸಾಸುವೆ ಅಂದ ಕೂಡಲೇ ನೆನಪಾಗುವ ಬುದ್ಧ ಈ ಸಂಕಲನದ ತುಂಬೆಲ್ಲ ಓಡಾಡಿದ್ದಾನೆ. ಎಲ್ಲ ಹೊಸತು ಎನ್ನುವ ಹಾಗೆ ಬರೆಯುತ್ತಿರುವವರಲ್ಲಿ ಎಚ್.ಆರ್.ರಮೇಶ ಒಬ್ಬರು. ಕವಿತೆ ಅರ್ಥಪೂರ್ಣವಾಗಿದ್ದರೆ ಮಾತ್ರ ಕಾಲದೇಶವನ್ನು ಮೀರಿ ನಿಲ್ಲುತ್ತೆ ಎನ್ನುವ ಅರಿವಿರುವ ಕವಿ ಹಳೆಯ ರೂಪಕಗಳನ್ನು ಫ್ರಿಜ್ಜಲ್ಲಿಟ್ಟು/ಫ್ರೆಶ್ ಆಗಿ ಅರ್ಪಿಸಲಾರೆ/ಇದೋ ಇಲ್ಲಿ ಬಿದ್ದಿರುವ ಕಲ್ಲನ್ನೇ ಎತ್ತಿ/ಕೊಡುವೆ ಅಂತ ಮೊದಲ ಪದ್ಯದಲ್ಲೇ ಕುತೂಹಲ ಹುಟ್ಟಿಸುತ್ತಾರೆ. ಸಂಕಲನದ ತುಂಬ ಒಟ್ಟಂದಕ್ಕಂಟದೇ ಅಲ್ಲಿಲ್ಲಿ ಚದುರಿ ಹೋಗಿರುವ ಪದ್ಯದ ವಸ್ತುಗಳು ವಿಕ್ಷಿಪ್ತಮನಸ್ಸನ್ನೇ ಎತ್ತಿ ತೋರುತ್ತವೆ. ಜೈವಿಕ ವಿವರಗಳನ್ನು ಒದಗಿಸುತ್ತಲೇ ಕಾವ್ಯವನ್ನು ಧೇನಿಸುವುದು ಈ ಕವಿಗೆ ಒಗ್ಗಿರುವ ಸಂಗತಿ.ಕವಿಯೊಬ್ಬ ತನಗೆ ತಾನೇ ಆಡಿಕೊಂಡ ಮಾತುಗಳು ಓದುಗನ ಮಾತುಗಳೂ ಆದಾಗ ಕಾವ್ಯ ಯಶಸ್ವಿಯಾಗುತ್ತೆ. ಅಂಥ ಯಶಸ್ಸಿನಲ್ಲೀಗ ರಮೇಶ ಇದ್ದಾರೆ. ಅನಂತಮೂರ್ತಿಯವರ ಮುನ್ನುಡಿ ಕೂಡ ರಮೇಶರ ಕಾವ್ಯಕಸುಬನ್ನು ಉದ್ದೀಪಿಸಿದೆ.
ಸಂತೋಷ ಚೊಕ್ಕಾಡಿಯವರ ‘ನಿನ್ನ ರಾಗವ ಹುಡುಕು’ ಅವರ ಕಾವ್ಯ ಯಾತ್ರೆಯ ಮೂರನೆಯ ಕುಸುಮ. ಹೊಸ ಪ್ರಯೋಗಗಳಿಗೆ ಹೋಗದೇ ಸಹಜ ಸರಳ ಲಯಗಳಲ್ಲೇ ತಮ್ಮ ಕವಿತೆಗಳನ್ನು ಆಗಿಸುವ ಚೊಕ್ಕಾಡಿಯವರ ಹಲವು ರಚನೆಗಳು ಸುನೀತದ ರೂಪದಲ್ಲಿವೆ. ಮಗಳಿಗೆ ಅನ್ನುವ ಪದ್ಯ ಜಗದ ಎಲ್ಲ ಅಪ್ಪಂದಿರ ಬಯಾಗ್ರಫಿಯಂತಿದೆ ಎನ್ನುವುದು ಉತ್ಪ್ರೇಕ್ಷೆಯಲ್ಲ. ಕಾಯಬೇಕು ಕವಿತೆಗೆ, ಕವಿತೆಯ ಹಾದಿ, ಕವಿತೆ, ನಿನ್ನ ರಾಗವ ಹುಡುಕು, ದಿನದ ಯಾತ್ರೆ ಈ ಕವಿ ಕಾವ್ಯಕ್ಕೆ ಬರೆದ ಭಾಷ್ಯದಂತಿವೆ. ಸ್ವರ್ಗ ಕಾಮ, ಗಾಢ ಮೌನದ ಇರುಳು ಬಹಳ ಕಾಲ ಮನಸ್ಸಲ್ಲುಳಿಯುವ ರಚನೆಗಳು. ಸಂಕಲನದ ಪರಿವಿಡಿಯಲ್ಲಿ ಪುಟ ಸಂಖ್ಯೆ ಇರದಿರುವುದು, ಸಗಟು ಖರೀದಿಗಾಗಿ ಪ್ರಕಟಣೆಯ ವರ್ಷವನ್ನೇ ಹಿಂದಕ್ಕೋ-ಮುಂದಕ್ಕೋ ಬದಲಾಯಿಸಿರುವುದೂ, ಕವನಸಂಕಲನಗಳಿಗೆ ಇರುವ ಪ್ರಕಾಶಕರ ಬರವನ್ನು ಸಾಬೀತು ಪಡಿಸುತ್ತದೆ.
‘ಚುಕ್ಕಿ’ ಸಂಕಲನದ ಮೂಲಕ ಹೆಸರು ಮತ್ತು ಖ್ಯಾತಿಗಳನ್ನು ಕಂಡುಕೊಂಡ ಜ್ಯೋತಿ ಗುರುಪ್ರಸಾದ್ ತಮ್ಮ ಎರಡನೆಯ ಸಂಕಲನ ‘ಮಾಯಾ ಪೆಟ್ಟಿಗೆ’ ತೆರೆದಿಟ್ಟಿದ್ದಾರೆ. ೯೦ ಪದ್ಯಗಳನ್ನು ಈ ಸಂಕಲನದಲ್ಲಿ ಅಡಕಿರಿದಿದ್ದರೂ ಬಹು ಕಾಲ ಮನಸ್ಸಲ್ಲಿ ನಿಲ್ಲುವ ರಚನೆಗಳು ಬಹಳ ಕಡಿಮೆ. ಹೆಸರಿಗಷ್ಟೇ ಮಾಯಾಪೆಟ್ಟಿಗೆ ತೆರೆದರೆ ಅವೇ ಅವೇ ಹಳೆಯ ಹಲುಬಿಕೆಗಳ ಆಗರ. ಜೊತೆಗೆ ಕವನ ರಚನೆ ಇಷ್ಟು ಸಲೀಸಾದ ಕೆಲಸವಾಗಿಬಿಟ್ಟರೆ, ಕೂತಲ್ಲಿ ನಿಂತಲ್ಲಿ ಅಧ್ಯಾತ್ಮದ ಹೊಳಹು ಮಿಂಚಿದರೆ, ಕಾವ್ಯ ಕ್ರಿಯೆಯ ಮೇಲೇ ಸಂಶಯಗಳು ಹುಟ್ಟುತ್ತವೆ. ಜೊತೆಗೆ ಸರಳವಾಗಿರುತ್ತವೆ ಎಂಬ ಕಾರಣಕ್ಕೆ ಎಲ್ಲ ಪತ್ರಿಕೆಗಳಲ್ಲೂ ಇಂಥ ರಚನೆಗಳೇ ವಿಜೃಂಭಿಸುತ್ತಿರುವುದನ್ನೂ ವಿಷಾದದಿಂದಲೇ ನೋಡಬೇಕಾಗಿದೆ. ಈಗಂತೂ ಪತ್ರಿಕೆಗಳ ಸಾಪ್ತಾಹಿಕಗಳಲ್ಲಿ, ಮಾಸಿಕ, ವಾರಪತ್ರಿಕೆಗಳಲ್ಲಿ ಮೇಲಿಂದ ಮೇಲೆ ಕಾಣಿಸಿಕೊಳ್ಳುವ ಕೆಲವು ಹೆಸರುಗಳು ಬೇಕೆಂತಲೇ ಆಧ್ಯಾತ್ಮಿಕ ತುಡಿತ, ಬುದ್ಧ ಅಲ್ಲಮ ಜೋಗಿ ಫಕೀರ ಜಂಗಮ ಸೂಫಿ ಮೊದಲಾದವರ ಜೊತೆಗಿನ ಅನುಸಂಧಾನವೆಂಬಂತೆ ತಮ್ಮ ಕವಿತೆಗಳನ್ನು ನೇಯುತ್ತಿದ್ದರೂ, ಮೇಲ್ನೋಟಕ್ಕೆ ಅವು ಸಾಧುವೆಂದೆನಿಸಿದರೂ, ಇವರೆಲ್ಲ ವರ್ತಮಾನದಲ್ಲಿ ಕಾಡುತ್ತಿರುವ ಸಮಸ್ಯೆಗಳಿಂದ ಪಲಾಯನ ಮಾಡಿರುವುದರ ಕುರುಹಾಗಿ ತೋರುತ್ತದೆ. ನಗರ ಕೇಂದ್ರಿತ ಸಮಸ್ಯೆಗಳು, ನಿಲ್ಲದ ವರ್ಗ ವರ್ಣಗಳ ಮೇಲಾಟಗಳು, ಹಿಂಸೆಯ ಬದಲಾಗುತ್ತಿರುವ ಮುಖಗಳು ನಮ್ಮ ಕವಿಗಳನ್ನು ಕಾಡದೇ ಇದೆಯೇ ಅಥವ ಅವರೆಲ್ಲ ಲೌಕಿಕದಿಂದ ದಿವಂಗತರಾಗಿದ್ದಾರೆಯೇ ಎನ್ನುವುದೂ ಇಲ್ಲಿ ಮುಖ್ಯ ಪ್ರಶ್ನೆಯಾಗಿದೆ.
ಆದರೂ ಮುನ್ನುಡಿಯ ಮೂಲಕ ಹೊಸಬರ ಬಗ್ಗೆ ತುಂಬು ಭರವಸೆಯ ಮಾತುಗಳನ್ನಾಡುವವರಂತೆ ಅನಂತಮೂರ್ತಿ ಕಂಡರೂ ಇಂಥ ಬರಹಗಳಲ್ಲೂ ಅವರೇ ಮುಂಚೂಣಿಗೆ ನಿಂತು ಹೊಸಬರ ಬಗ್ಗೆಯ ಮಾತೂ ಅವರಿಗೆ- ಅವರೊಪ್ಪಿದ ಸಿದ್ಧಾಂತ ಮತ್ತು ಮೌಲ್ಯಗಳ ಪ್ರತಿಪಾದನೆಯ ಸ್ವತ್ತಾಗುತ್ತದೇ ವಿನಾ ಮುನ್ನುಡಿ ಬಯಸಿದವರ ಕಾವ್ಯ ಪ್ರಖರತೆಯನ್ನಳೆಯುವ ಸಾಧನವಾಗುವುದಿಲ್ಲವೆಂಬುದನ್ನೂ ಗಮನಿಸಬೇಕು. ಜೊತೆಗೇ ಅನಂತಮೂರ್ತಿಯವರಂಥ ಹಿರಿಯರು ಕಿರಿಯರನ್ನು ಪ್ರೋತ್ಸಾಹಿಸಬೇಕೆನ್ನುವ ಏಕೈಕ ಉದ್ದೇಶದಿಂದ ತೀರ ಧಾರಾಳವಾಗಿಬಿಟ್ಟರೂ ಸೂಕ್ಷ್ಮವನ್ನಿರಿಯದ ಈ ಕಿರಿಯರು ತಾವೇ ‘ಕವಿಶ್ರೇಷ್ಠ’ರೆಂದು ಭಾವಿಸುವ ಅಪಾಯವೂ ಇರುತ್ತದೆ. ವ್ಯಕ್ತಿಗತ ಪರಿಚಯಗಳನ್ನೇ ಮುನ್ನುಡಿಯ ಮಾನದಂಡಗಳನ್ನಾಗಿಸಿಕೊಳ್ಳಬೇಡಿ ಅಂತ ಹಿರಿಯರಿಗೆ ಹೇಳುವುದೂ ಅಸಾಧ್ಯದ ಮಾತು! ಸಂಧ್ಯಾದೇವಿಯವರ ಅದ್ಭುತ ಸಂಕಲನ ಪ್ರಕಟಿಸಿದ್ದ ‘ಕಾವ್ಯಮಂಡಲ’ ಮಾಯಾಪೆಟ್ಟಿಗೆಯಲ್ಲಿ ಏನು ವಿಶೇಷ ಕಂಡುಕೊಡಿತೋ ಆ ಸಂಸ್ಥೆಯೇ ಹೇಳಬೇಕು.
‘ಕವಿತೆಗೆ ಬೆಂಕಿ ಬಿತ್ತು’ ವಿಲಕ್ಷಣ ಹೆಸರಿನ ಸಂಕಲನ ಪ್ರಕಟಿಸಿದ್ದ ಚಂ.ಸು.ಪಾಟೀಲ ‘ಅದಕ್ಕೇ ಇರಬೇಕು’ ಅನ್ನುವ ಸಾಮಾನ್ಯ ಹೆಸರನ್ನು ತಮ್ಮ ಹೊಸಸಂಕಲನಕ್ಕಿಟ್ಟಿದ್ದಾರೆ. ಪುಸ್ತಕವನ್ನು ಬೇಕಾಬಿಟ್ಟಿ ಪ್ರಕಟಿಸುವ ಪ್ರಕಾಶಕರಿಗೆ ಉದಾಹರಣೆ ಈ ಪುಸ್ತಕ. ಪದ್ಯಗಳಿಗೆ ಪರಿವಿಡಿಯೇ ಇಲ್ಲದಂತೆ ಪ್ರಕಟಿಸಿರುವುದು ಅಕ್ಷಮ್ಯ. ಮುನ್ನುಡಿ ಇಲ್ಲದೇ ಪುಸ್ತಕಗಳನ್ನು ಪ್ರಕಟಿಸುವುದು ಕೆಲವರ ಶೈಲಿಯಾದರೆ ತಮ್ಮ ಸಮಕಾಲೀನರಿಂದ ಒಳ್ಳೆಯ ಮಾತು ಬರೆಸುವ ಸುಲಭೋಪಾಯ ಕೆಲವರದು. ಇಲ್ಲೂ ಹಾಗೇ ಹೆಚ್ಚು ನಿಕಷಕ್ಕೊಡ್ಡದೇ ಪಿ.ಚಂದ್ರಿಕಾ ತಮ್ಮ ಕೆಲಸವನ್ನು ನಿಭಾಯಿಸಿದ್ದಾರೆ. ಹಲವು ಹೇಳಿಕೆಗಳಲ್ಲೇ ಕವಿತೆಗಳನ್ನು ಆಗಿಸುವ ಪಾಟೀಲರು ಪ್ರಾಸಕ್ಕೇ ಗಂಟುಬೀಳುತ್ತಾರೆ. ‘ಅದಕ್ಕೇ ಇರಬೇಕು’ ಅನ್ನುವ ಪದ್ಯ ಹೊಸ ವಿಸ್ತರಣಕ್ಕೆ ಕೈ ಇಟ್ಟಿರುವುದರ ಭರವಸೆಯ ಸಂಕೇತ.
‘ನೇಕಾರ’ ಎನ್ನುವ ಕಾಯಕದ ದೀಕ್ಷೆ ಹಿಡಿದು ಕವನ ಸಂಕಲನವಾಗಿಸಿದ್ದ ಆಲೂರು ದೊಡ್ಡನಿಂಗಪ್ಪ ಹೊಸ ಸಂಕಲನ ‘ಮುಟ್ಟು’ ತಂದಿದ್ದಾರೆ. ಅಲ್ಲಮನ ಬೆಡಗಿನ ವಚನಗಳನ್ನು ತಮ್ಮ ಕಾವ್ಯಾಭಿವ್ಯಕ್ತಿಯ ಅನುಕೂಲಕ್ಕೆ ಬಳಸಿಕೊಳ್ಳುವ ಆಲೂರು ರಂಗಭೂಮಿಯೊಂದಿಗಿನ ತಮ್ಮ ಸಂಬಂಧವನ್ನೂ ಕವಿತೆಯಾಗಿಸುತ್ತಾರೆ. ತತ್ವಪದಕಾರರೂ ಆಗೀಗ ಇವರ ಕವಿತೆಗಳೊಳಕ್ಕೆ ಇಳಿಯುವುದು ಹಾಗೇ ಕವಿ ಓದುಗನನ್ನು ತನ್ನೊಳಗನ್ನು ಮುಟ್ಟು ಎಂದು ಪ್ರಾರ್ಥಿಸುತ್ತಿರುವುದೂ ಮೊದಲ ಓದಿಗೇ ಶೃತವಾಗುತ್ತದೆ. ಮೊದಲ ಓದಿಗೆ ಥಟ್ಟನೆ ಅರ್ಥವಾಗದ ಆದರೆ ಆಕರ್ಷಣೆ ಕಳೆದುಕೊಳ್ಳದ ರಚನೆಗಳ ಬಗ್ಗೆ ಕವಿ ಯೋಚಿಸುವುದು ಒಳಿತು. ಸಮುದ್ರವೇ ಉರಿಯುತಿಹುದು/ಮೀನು ಮೊಸಳೆ ಮರ ಏರಿಹುದ ಕಂಡೆ/ಉರಿವ ಬೆಂಕಿ ನಂದಿಸಲು/ನೆಲ್ಲುಲ್ಲು ಭಾದೆ ಖಾಲಿ ಖಾಲಿ ಸಾಲುಗಳಲ್ಲಿ ಅಲ್ಲಮನನ್ನು ಮೈಮೇಲೇರಿಸಿಕೊಂಡಂತೆ ಕವಿ ಕಾಣುತ್ತಾರೆ.
ಈ ವರ್ಷ ಮೊದಲ ಸಂಕಲನ ಪ್ರಕಟಿಸಿದವರಲ್ಲಿ ಹಿರಿಯರು ಕಿರಿಯರೂ ಇದ್ದಾರೆ. ಕತೆಗಾರ್ತಿಯಾಗಿ ಈಗಾಗಲೇ ಪ್ರಸಿದ್ಧರಾಗಿರುವ ಸುನಂದಾ ಪ್ರಕಾಶ ಕಡಮೆಯವರ ‘ಸೀಳುದಾರಿ’, ಅವರ ಕತೆಗಳಂತೆಯೇ ನವಿರುತನ ಮತ್ತು ಖಾಸಗಿ ಅನುಭವಗಳ ಅನಾವರಣದ ಕಾರಣದಿಂದಾಗಿ ಮನಸೆಳೆಯುತ್ತದೆ. ಬೆಂಗಳೂರು ಬಿಟ್ಟು ಉಳಿದ ಕಡೆ ಮುದ್ರಣಗೊಂಡ ಪುಸ್ತಕಗಳಲ್ಲಿ ಕಣ್ಣಿಗೆ ಹಿತವಾದ ಫೋಂಟ್‌ಗಳನ್ನು ಬಳಸದ ಮತ್ತು ವಿನ್ಯಾಸದಲ್ಲಿ ಹೊಸತನ ಕಾಣಿಸದ ಕಾರಣ ಆ ಪುಸ್ತಕಗಳ ಓದಿಗೆ ಸ್ವಲ್ಪ ಕಷ್ಟಪಡಲೇಬೇಕಾಗುತ್ತದೆ. ಈ ಸಂಕಲನಕ್ಕೂ ಈ ತೊಂದರೆ ಬಾಧಿಸಿದೆ. ‘ಏಣಿ ಗೀಣಿ ಮುಟ್ಟದೇನೇ/ನಿಲುಕಬೇಕು ನಕ್ಷತ್ರ ಇಲ್ಲೇ’ ಎನ್ನುವ ಕವಿಗೆ ಪುಟ್ಟರೆಕ್ಕೆಗಿರುವ ಭಾರ ಜೀವದ ಅರಿವು ಇರುವದರಿಂದಲೇ ಸಂಕಲನದ ಕವಿತೆಗಳು ಅಪ್ಪಟ ವೈಯುಕ್ತಿಕ ಅನ್ನಿಸಿಕೆಗಳಾಗಿದ್ದೂ ಕವಿತೆಗಳಾಗುವಲ್ಲಿ ಯಶಸ್ವಿಯಾಗಿವೆ. ಎಂ.ಎಸ್.ರುದ್ರೇಶ್ವರ ಸ್ವಾಮಿ ‘ಪ್ರೀತಿ ಮತ್ತು ನೀರು’ ಅವರ ಮೊದಲ ಸಂಕಲನ ಹೌದೋ ಅಲ್ಲವೋ ಅನ್ನುವ ಅನುಮಾನ ಹುಟ್ಟಿಸುತ್ತಾರೆ. ಬೆಳಕಿನಲ್ಲಿ ಕಂಡದ್ದೆಲ್ಲ ಅರ್ಥವಾಗುವುದಿಲ್ಲ ಅನ್ನುವ ಮಾರ್ಮಿಕ ಹೇಳಿಕೆಯಲ್ಲಿ ಕವಿತೆಯನ್ನರಳಿಸಿ ಸೋಜಿಗ ಹುಟ್ಟಿಸುವ ಈ ಸಂಕಲನದಲ್ಲಿ ಕಲಾವಿದ ಮನೋಹರ್‌ರ ಚಿತ್ರಗಳನ್ನು ಹಿತವಾಗಿ ಬಳಸಿಕೊಂಡಿರುವುದು ಖುಷಿ ತರುತ್ತದೆ. ಮೊದಲನೆಯ ಓದಿಗೆ ಹಿತವೆನ್ನಿಸಿದರೂ ಮರು ಓದಿನಲ್ಲಿ ಸಂಕಲನದ ಕವಿತೆಗಳು ಶೋಕೇಸಿನ ಬೊಂಬೆಗಳಂತೆ ಕಾಣತೊಡಗುತ್ತವೆ.
ಬಹಳ ತಡವಾಗಿ ಸಂಕಲನ ತಂದಿರುವ ಕೆ.ಎಸ್.ಶ್ರೀನಿವಾಸಮೂರ್ತಿ ತಮ್ಮ ‘ಸೈಟಾದರೂ ಬೇಡವೇ ಸ್ವಾಮಿ ನಮಗೆ’ಎನ್ನುವ ಹೆಸರಿನ ಸಂಕಲನದ ತುಂಬ ಅಯೋವಾವನ್ನು, ಅಲ್ಲಿನ ಬದುಕನ್ನೂ ಚಿತ್ರಿಸಿದ್ದಾರೆ. ರಾಮಾನುಜನ್ ಅವರ ಕೆಲವು ಕವಿತೆಗಳನ್ನು ನೆನಪಿಸುವ ಶಕ್ತಿ ಇಲ್ಲಿನ ಪದ್ಯಗಳಿಗಿದ್ದರೂ, ಹೊಸ ಪರಿಭಾಷೆಯಲ್ಲಿ ಕನ್ನಡ ಕಾವ್ಯವನ್ನು ಕಟ್ಟುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಪ್ರಾಯಶಃ ಶ್ರೀನಿವಾಸಮೂರ್ತಿಯಂಥವರ ಪ್ರಯೋಗಗಳು ಗಮನಿಸುವವರಿಲ್ಲದಂತಾಗುವ ಅವಸ್ಥೆ ಇಂದಿನದು.
ಪತ್ರಿಕೆಗಳಲ್ಲಿ ಪ್ರಕಟವಾಗುವ ತಮ್ಮ ಕವಿತೆಗಳ ಮೂಲಕ ಈಗಾಗಲೇ ಪರಿಚಿತರಾಗಿರುವ ಆರಿಫ್ ರಾಜರ ‘ಜಂಗಮ ಫಕೀರನ ಜೋಳಿಗೆ’ ಸಂಕಲನದ ಮುನ್ನುಡಿಯಲ್ಲಿ ಎಚ್.ಎಸ್.ಶಿವಪ್ರಕಾಶ್ ಇವತ್ತಿನ ಕವಿಗಳ ಮಿತಿಗಳನ್ನು ವಿಶ್ಲೇಷಿಸುತ್ತಲೇ ಆರಿಫ್ ಮುಸ್ಲಿಂತನವನ್ನು ಕವಿತೆಯಾಗಿಸುತ್ತಿದ್ದಾರೇ ಹೊರತು ಕಾವ್ಯವನ್ನು ಇಸ್ಲಾಂ ಧರ್ಮಕ್ಕೆ ಸೇರಿಸುತ್ತಿಲ್ಲ ಎನ್ನುವ ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ. ಕಾವ್ಯ ಬರೆಯುವವರಿಗೆ ಅತ್ಯಗತ್ಯ ಬೇಕಿರುವ ಇರುವುದರ ಮೋಹ ಮತ್ತು ಇರದುದುರ ದಾಹ ಕುರಿತ ಅವರ ಮಾತುಗಳು ಕೇವಲ ಆರಿಫ್‌ಗೆ ಮಾತ್ರವಲ್ಲದೆ ಪದ್ಯ ಬರೆಯ ಹೊರಟ ಹೊಸ ತಲೆಮಾರಿನ ಎಲ್ಲ ಕವಿಗಳಿಗೂ ಹೇಳಿದಂತಿದೆ. ದೇವರು ದೊಡ್ಡವನು/ನಿತ್ಯದ ನೀರಸದಲ್ಲೂ ನಮಗೆ ಗೊತ್ತಿಲ್ಲದಂತೆ ಆಗಾಗ/ಬಹುಮಾನಗಳನ್ನಿಟ್ಟಿರುತ್ತಾನೆ/ಆ ಅಳು ಆಲಿಸಲು ಕೆಲವೊಬ್ಬರಿಗಾದರೂ/ಕಿವಿಗಳನ್ನು ಕೊಟ್ಟಿರುತ್ತಾನೆ (ಆ ಅಳು ಈಗಲೂ ಅಲ್ಲಿ) ಸಾಲುಗಳಲ್ಲಿ ತಮ್ಮ ಮೇಲೆ ಭರವಸೆ ಇಟ್ಟುಕೊಳ್ಳಬಹುದೆಂಬ ವಿಶ್ವಾಸವನ್ನು ಆರಿಫ್ ರಾಜ ಮೂಡಿಸುತ್ತಾರೆ. ಕವಿತೆಗಳ ಶೀರ್ಷಿಕೆಗೂ ಕವಿತೆಗಳಿಗೂ ಬಳಸಿರುವ ಫಾಂಟ್‌ಗಳ ಅಳತೆಗಳಲ್ಲಿ ಹೆಚ್ಚು ವ್ಯತ್ಯಾಸವಿಲ್ಲದಿರುವುದು ಓದಿಗೆ ತೊಡಕಾಗಿದೆ. ಬದುಕಿನ ದುರಂತದ ಮುಖಗಳ ಜೊತೆಜೊತೆಗೇ ಪುಳಕದ ಕ್ಷಣಗಳನ್ನೂ ಕವಿ ದಾಖಲಿಸಿದ್ದಾರೆ.
ತುಂಬ ಅಚ್ಚುಕಟ್ಟಾದ ಮುದ್ರಣ, ಹಿತವಾದ ಮುಖಚಿತ್ರವಿರುವ ‘ಪುಟಾಣಿ ಕೆಂಪು ಶೂ’ ಛಾಯಾ ಭಗವತಿಯವರ ಮೊದಲ ಸಂಕಲನ. ವ್ಯಕ್ತಿ ಸಂಬಂಧಗಳು ಮತ್ತು ಲಯ ಪ್ರಾಸಗಳಲ್ಲೇ ಕವಿತೆಗಳನ್ನು ನೇಯುವ ಕವಿಗೆ ಆ ಪ್ರಾಸಗಳೇ ಮಿತಿಯೊದಗಿಸಿವೆ. ಬಹುತೇಕ ಕವಿತೆಗಳ ವಸ್ತುವಾಗಿ ಕವಿಯನ್ನು ಕಾಡಿರುವ ಹೆಣ್ಣು ಮತ್ತು ಕೂಸು ಇಲ್ಲಿನ ಪದ್ಯಗಳಿಗೆ ಸುಲಭ ದಾರಿಯೊದಗಿಸಿವೆ ಅಷ್ಟೆ. ಸಂಕಲನದ ಯಶಸ್ವೀ ಪದ್ಯ ಶೀರ್ಷಿಕೆಯ ಪದ್ಯವೇ ಆಗಿದೆ, ಮತ್ತು ಬಹುಕಾಲ ಕಾಡುತ್ತದೆ ಕೂಡ.
‘ನನಗೀಗ ಬೆಳಕಿನದೇ ಧ್ಯಾನ’ ಎಂದು ಪರಿತಪಿಸುವ ಸಿದ್ದು ದೇವರಮನಿ ‘ಬರುವ ನಾಳೆಗಳಿಗೆ ರಾತ್ರಿಗಳೇ ಇರುವುದಿಲ್ಲ’ ಎಂಬ ದೀರ್ಘ ಶೀರ್ಷಿಕೆಯ ಸಂಕಲನ ಪ್ರಕಟಿಸಿ ಪ್ರಖರ ಓಪನಿಂಗ್ ಪಡೆದುಕೊಂಡಿದ್ದಾರೆ. ಆರ್ತಗೊಂಡ ಮನಸ್ಸಿನ ಸಹಜ ಲಯದಲ್ಲಿ ಇಲ್ಲಿನ ಪದ್ಯಗಳು ಬೆಳೆದಿವೆ. ಷರೀಫಜ್ಜನನ್ನು ಗೋರಿಯಿಂದೇಳಿಸಿ ಯುದ್ಧಕ್ಕೆ ಸಿದ್ಧಗೊಂಡ ದೇಶಕ್ಕೆ ಕರೆದೊಯ್ಯುವ ಬಯಕೆಯ ಈ ಕವಿ ಅನ್ನಿಸಿದ್ದನ್ನೆಲ್ಲ ಕಾಗದಕ್ಕಿಳಿಸದೇ ಅವು ಸಾಂಧ್ರವಾಗುವವರೆಗೂ ಕಾದು ಬರೆದರೆ ಭವಿಷ್ಯದಲ್ಲಿ ಉತ್ತಮ ಕವಿತೆಗಳನ್ನು ಕೊಡಬಲ್ಲ ತಾಕತ್ತಿರುವವನು.
ಈಗಾಗಲೇ ಸಾರಸ್ವತ ಲೋಕಕ್ಕೆ ಚಿರಪರಿಚಿತರಾಗಿರುವ ಸಂತೆಬೆನ್ನೂರು ಫೈಜ್ನಟ್ರಾಜ್ ‘ಎದೆಯೊಳಗಿನ ತಲ್ಲಣ’ಗಳನ್ನೇ ಸಂಕಲಿಸಿ ಮೊದಲ ಕೃತಿ ಹೊರತಂದಿದ್ದಾರೆ. ಹುಡುಗೀ ನಿನ್ನ ಕಣ್ಣು ಕೊಳ/ಈಜುವಾಸೆ... ಮುಳುಗುವ ಭಯ ಎಂದು ಬರೆಯುವ ಕವಿ ಕವಿತೆಯಾಗು ಎಂದಿಗೂ ಕಥೆಯಾಗಬೇಡ ಎಂಬ ಎಚ್ಚರವನ್ನು ಇಟ್ಟುಕೊಂಡವರೂ ಆಗಿರುವದರಿಂದ ಮೊದಲ ಸಂಕಲನದ ಎಲ್ಲ ಪರಿಮಿತಿಗಳ ಜೊತೆಗೇ ಸಹ್ಯವೆನ್ನಿಸುತ್ತಾರೆ. ತೋಚಿದ್ದನ್ನೆಲ್ಲ ಗೀಚದೇ ಧ್ಯಾನಿಸಿದರೆ ತಲ್ಲಣಗಳಿಗೆ ತಹಬಂದಿ ನೀಡುವ ಉತ್ತರ ಈ ಕವಿಗೆ ಸಿಕ್ಕಾವು. ಆಗ ಅವರ ಪದ್ಯಗಳ ರೀತಿಯೂ ಬದಲಿಸೀತು.
‘ನಿಜಕ್ಕೂ ನಿನ್ನ ಕಾಡಿದ್ದು, ನೀ ಬೇಡಿದ್ದು ಅವನೊಬ್ಬನೇನೆ?/ನಿಜ ಹೇಳು ಮುಟ್ಟು ಮೈಲಿಗೆ ಬಸಿರು ಬಾಣಂತನ ಕಾಡಲಿಲ್ಲವೇ ನಿನ್ನ?/ನಿಜದ ಅರ್ಜುನರ ರಗಳೆ ದಾಟಲಿಕ್ಕೆ ಈ ‘ಚೆನ್ನ’ನೆಂಬೋ ಅರ್ಜುನ ನೀ ತಬ್ಬಿದ ದೋಣಿ ಮಾತ್ರವೇ?’ ಎಂದು ಕೇಳುವ ಧೈರ್ಯವಿರುವ ರಶ್ಮಿ ಹೆಗಡೆ ‘ಲೆಕ್ಕಕ್ಕೆ ಸಿಗದವರು’ ಸಂಕಲನದಲ್ಲಿ ‘ಒಳಗಿನ ಸದ್ದುಗಳು ಕಾಲನೆದುರು ಶೀಲ ಕಳೆದುಕೊಳ್ಳದಿರಲಿ’ ಎಂದೂ ಪ್ರಾರ್ಥಿಸುತ್ತಾರೆ. ‘ಎಷ್ಟು ಬೇಗ ಬಣ್ಣ ಬದಲಾಯಿಸುತ್ತವೆ-ಇಲ್ಲಿ ನಂಬುಗೆಗಳು/ಜಾತ್ರೆಯಿಂದ ಆಶೆಪಟ್ಟು ತಂದ-ಬಣ್ಣದ ಗೊಂಬೆಗಳು’ ಎಂಬ ವಾಸ್ತವ ಅರಿತಿರುವವರೂ ಆಗಿರುವುದರಿಂದ ಇವರ ಮುಂದಿನ ಕವಿತೆಗಳ ಬಗ್ಗೆ ಸಹಜ ಕುತೂಹಲ ಮತ್ತು ವಿಶ್ವಾಸವಿಟ್ಟುಕೊಳ್ಳಬಹುದೆಂದು ಅವರೇ ವಿಶ್ವಾಸ ಮೂಡಿಸುತ್ತಾರೆ.
‘ನಾನು ಗೆಲ್ಲುತ್ತೇನೆ’ ಎನ್ನುವ ಹೆಸರಿನ ಸಂಕಲನ ತಂದಿರುವ ಶ್ರೀದೇವಿ ಕೆರೆಮನೆ ಸಾಮಾನ್ಯ ಲಯ ಮತ್ತು ಪ್ರಾಸಗಳಲ್ಲೇ ಕವಿತೆಗಳನ್ನರಸುವವರು. ಹಾಗಾಗಿ ಅವರ ಪದ್ಯಗಳೆಲ್ಲ ಪ್ರಾಸದ ತ್ರಾಸದಲ್ಲಿ ಮೇಲುಸಿರು ಬಿಡುತ್ತವೆ. ದ್ರೌಪದಿ, ಮಂಥರೆ, ಗಾಂಧಾರಿ,ಊರ್ಮಿಳೆ, ಮಾಧವಿ .. . ಇವರ ಪದ್ಯಗಳಲ್ಲಿ ಬರುತ್ತಾರಾದರೂ, ಹಿರಿಯ ಕವಿಗಳ ಓದು ಮತ್ತು ಸುಲಭದಲ್ಲಿ ಪದ್ಯ ಬರೆಯಬಹುದೆನ್ನುವ ಭಾವ ಬದಲಾದರೆ ಇವರು ನಿಜದಕವಿತೆಗಳನ್ನೂ ಬರೆದಾರು.
ಮೂರೇ ಮೂರು ಸಾಲುಗಳಲ್ಲಿ ಅನುಭವವನ್ನು ಓದುಗನಿಗೆ ಹೇಗೆ ಯಶಸ್ವಿಯಾಗಿ ದಾಟಿಸಬಹುದೆಂಬುದಕ್ಕೆ ಹಾಯ್ಕುಗಳು ಪ್ರಕಾರ ಒಂದು ಉದಾಹರಣೆ. ಆದರೆ ಈಗಾಗಲೇ ಮಿನಿ-ಮಿಡಿಗಳ ಭರಾಟೆಯಲ್ಲಿ ಕನ್ನಡ ಕಾವ್ಯ ದೊರಕಿಸಿಕೊಂಡದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚು. ಟ್ಯಾಬ್ಲಾಯಿಡ್ ಹಾಗು ಗಂಭೀರ ಸಾಹಿತ್ಯ ಪ್ರೊಮೋಟ್ ಮಾಡಲು ಇಷ್ಟವಿಲ್ಲದ ಪತ್ರಿಕೆಗಳು ಮಿನಿ-ಮಿಡಿಗಳನ್ನು ಹಾಗೇ ಹಾಯ್ಕು ಎನ್ನುವ ಮೂರು ಸಾಲಿನ ಭಗವದ್ಗೀತೆಯನ್ನು ಪ್ರಕಟಿಸಿ ಅದನ್ನೊಂದು ಸಾಹಿತ್ಯ ಪ್ರಕಾರವಾಗಿ ಪೋಷಿಸುತ್ತಿವೆ. ಉಳಿದ ಜಾಗೆ ಭರ್ತಿಮಾಡಲಷ್ಟೇ ಬಳಸಬಹುದಾದ ಆ ಕ್ಷಣಕ್ಕೆ ಹಾಯ್ ಎನ್ನಿಸುವ ಇವು ಗಂಭೀರ ಓದಿಗೆ ರುಚಿಸುವುದಿಲ್ಲ. ‘ಮೂರು ಸಾಲು ಮರ’ ಎನ್ನುವ ಹಾಯ್ಕು ಸಂಕಲನ ಪ್ರಕಟಿಸಿರುವ ಡಾ.ಸಿ.ರವೀಂದ್ರನಾಥ್ ಒಟ್ಟುಗೂಡಿಸಿದ್ದರ ಅರ್ಧದಷ್ಟು ರಚನೆಗಳನ್ನು ಕೈ ಬಿಟ್ಟಿದ್ದಿದ್ದರೂ ಸಂಕಲನದ ಮೌಲ್ಯವೇನೂ ಕಡಿಮೆಯಾಗುತ್ತಿರಲಿಲ್ಲ.
ಇನ್ನು ಈ ವರ್ಷ ಪ್ರಕಟವಾದ ಅನುವಾದಗಳನ್ನು ಕುರಿತಂತೆ ಎರಡು ಮಾತು: ಮಿರ್ಜಾಗಾಲಿಬನನ್ನು ಕನ್ನಡಕ್ಕೆ ಬಗ್ಗಿಸಿ ಕೊಟ್ಟಿರುವ ಡಾ.ಎನ್.ಜಗದೀಶ್, ಕೊಪ್ಪ ಪುಸ್ತಕದ ಆಕೃತಿಗೆ ಕೊಟ್ಟ ಗಮನವನ್ನು ತರ್ಜುಮೆಗೆ ಕೊಡದ ಕಾರಣ (ಅವರು ಇಂಗ್ಲಿಷ್ ಮೂಲಕ ಅನುವಾದಿಸಿದ್ದಾರೆ) ಈಗಾಗಲೇ ಪರಿಚಿತನಾಗಿರುವ ಗಾಲೀಬ್ ಹೊಸದೇನನ್ನೂ ಇಲ್ಲಿ ಹೇಳುತ್ತಿಲ್ಲ. ಆದರೂ ಗಾಲೀಬ ಮತ್ತು ಅಂದಿನ ಸಾಮಾಜಿಕ ಸ್ಥಿತಿಗತಿಗಳ ಕುರಿತಂತೆ ಅವರು ಕೊಟ್ಟಿರುವ ಟಿಪ್ಪಣಿ ಗಾಲೀಬನ ಗಜಲುಗಳ ಕನ್ನಡ ಅವತರಿಣಿಕೆಗೆ ಮೂಲ ಉರ್ದುವನ್ನೇ ಆಶ್ರಯಿಸಿದರೆ ಒಳ್ಳೆಯದೊಂದು ಕೆಲಸ ಮಾಡಬಹುದೆಂಬುದರ ಸೂಚನೆಯಾಗಿದೆ.
ಸ್ಪ್ಯಾನಿಷ್ ಭಾಷೆಯಲ್ಲಿ ತನ್ನ ಪದ್ಯಗಳನ್ನು ಪ್ರಕಟಿಸಿದ್ದ ಪಾಬ್ಲೊ ನೆರೂದ ಜಗತ್ತಿನ ಬಹುತೇಕ ಎಲ್ಲ ಭಾಷೆಗಳಿಗೂ ಅನುವಾದಗೊಂಡಿದ್ದಾನೆ. ಸ್ಪ್ಯಾನಿಶ್‌ನಿಂದ ಇಂಗ್ಲಿಷ್‌ಗೆ ಆಮೇಲೆ ಇತರೆ ಭಾಷೆಗಳಿಗೆ ಇವು ಬರುವುದರಿಂದಾಗಿ ಮೂಲ ಸಾಂಸ್ಕೃತಿಕ ಒತ್ತಡಗಳು ಅನುವಾದಕನ ಅಭೀಪ್ಸೆಗೆ ತಕ್ಕಂತೆ ಬದಲಾಗುತ್ತಲೇ ಹೋಗುತ್ತದೆ. ಇದು ಎಲ್ಲ ಅನುವಾದಕರನ್ನೂ ಕಾಡಿದ ಕಷ್ಟ ಮತ್ತು ಸವಾಲು. ಜ.ನಾ.ತೇಜಶ್ರೀ ‘ಕಡಲ ತಡಿಯ ಗುಡಾರ’ಅನುವಾದಿಸಿದ್ದಾರೆ ಅನ್ನುವುದಕ್ಕಿಂತ ರೂಪಾಂತರಕ್ಕೆ ಪ್ರಯತ್ನಿಸಿದ್ದಾರೆ ಎನ್ನುವುದು ಸೂಕ್ತ. ನೆರೂದನ ರಾಜಕೀಯ ಮತ್ತು ಕ್ರಾಂತಿ ಕುರಿತ ಪದ್ಯಗಳನ್ನು ಬಿಟ್ಟು ಅವನ ಸಾನೆಟ್ಟುಗಳನ್ನು ಮತ್ತು ಪ್ರೇಮ ಕವಿತೆಗಳನ್ನು ಅನುವಾದಕಿ ಆಯ್ಕೆಮಾಡಿಕೊಂಡ ರೀತಿ ಸೊಗಸೆನ್ನಿಸುತ್ತದೆ. ಪುಸ್ತಕ ವಿನ್ಯಾಸವೂ ಹಿತವಾಗಿದೆ. ಕನ್ನಡದಲ್ಲಿ ಬೆರಳೆಣಿಕೆಗೆ ಸಿಗುತ್ತಿದ್ದ ಪ್ರಕಾಶಕರ ಸಂಖ್ಯೆ ಗಣನೀಯವಾಗಿ ಏರಿರುವುದನ್ನು ಗಮನಿಸಲೇಬೇಕು.
ಹಿಂದಿ ಸಿನಿಮಾದ ಹಾಡುಗಳನ್ನೂ ಸೇರಿದಂತೆ ಕೈಫಿ ಆಜ್ಮಿಯವರ ಗಜಲುಗಳು ಮತ್ತು ಕವಿತೆಗಳನ್ನು ‘ಬೆತ್ತಲೆ ರಸ್ತೆಯ ಕನಸಿನ ದೀಪ’ ಎನ್ನುವ ಹೆಸರಲ್ಲಿ ದಿ.ವಿಭಾ ತಿರಕಪಡಿ ಅನುವಾದಿಸಿದ್ದನ್ನು ಇದೀಗ ಲಡಾಯಿ ಪ್ರಕಾಶನ ಪ್ರಕಟಿಸಿ ಅನುವಾದಕಿಗೆ ಹಾಗೇ ಮೂಲಕ್ಕೆ ಗೌರವ ತಂದಿದೆ. ಅಪ್ಪಟ ಕನ್ನಡದವೇ ಅನ್ನಿಸುವ ಇಲ್ಲಿನ ಪದ್ಯಗಳು ಗತಿಸಿದ ಅನುವಾದಕಿಯ ನೆನಪನ್ನು ಹಾಗೂ ಆಕೆಯ ಆಯ್ಕೆಯ ರುಚಿಯನ್ನೂ ತೆರೆದಿಡುತ್ತವೆ.
ಅನಂತಮೂರ್ತಿ ಏನು ಮಾಡಿದರೂ ಸುದ್ದಿಯಾಗುವುದಷ್ಟೇ ಅಲ್ಲ ಅಲ್ಲೊಂದು ಹೊಸತನ ಇರುತ್ತದೆ. ಅವರ ‘ಶತಮಾನದ ಕವಿ ರಿಲ್ಕೆ’ ಪುಸ್ತಕ ಕೂಡ ಈ ಮಾತಿಗೆ ನಿದರ್ಶನ. ಈಗಾಗಲೇ ಬ್ರೆಕ್ಟ್, ಯೇಟ್ಸ್ ಮುಂತಾದವರನ್ನು ಕನ್ನಡಕ್ಕೆ ಸಮರ್ಥವಾಗಿ ಪರಿಚಯಿಸಿರುವ ಅವರು ಈ ಸಂಕಲನದಲ್ಲಿ ಬರಿಯ ರಿಲ್ಕೆ ಕವಿತೆಗಳನ್ನಲ್ಲದೇ ರಿಲ್ಕೆಯ ತಂತುಗಳನ್ನು ತಮ್ಮ ಸ್ವಂತದ ಕವಿತೆಗಳಲ್ಲೂ ಕಾಣಿಸಿದ್ದಾರೆ. ಜೊತೆಗೆ ಅನುವಾದವೆನ್ನುವ ಮಹಾಯಜ್ಞದಲ್ಲಿ ಅವರು ಅನುಸರಿಸಿದ ವಿಧಾನವನ್ನು ಟಿಪ್ಪಣಿಸಿ (ಓ.ಎಲ್.ಎನ್ ಅವರ ಟಿಪ್ಪಣಿಯೂ ಸೇರಿದಂತೆ ಪ್ರಕಟಿಸಿ) ಇತರ ಅನುವಾದಕರಿಗೆ ಮಾದರಿಯೂ ಆಗಿದ್ದಾರೆ.
ಹೃದಯ ಬುದ್ಧಿಗಳನ್ನು ಏಕಕಾಲದಲ್ಲಿ ಆವರಿಸಿಕೊಳ್ಳುವ ‘ಕವಿ ಸಮಯ’ ಈ ಹೊತ್ತಿನ ದಂದುಗಗಳಲ್ಲಿ ಸಿಕ್ಕದಿರುವಂಥದು. ಹಳಬರೆಲ್ಲ ತಮಗೆ ಸಿದ್ಧಿಸಿದ ಹಾದಿಯಲ್ಲಿ ಅಲ್ಲೇ ಗಿರಕಿ ಹೊಡೆಯುತ್ತ, ಮತ್ತೆ ಮತ್ತೆ ಅವವೇ ಪ್ರತಿಮೆ ರೂಪಕಗಳಲ್ಲಿ ಅವರದೇ ಮಾದರಿಗಳಲ್ಲಿ ಮುಂದುವರೆಯುತ್ತಿರುವಾಗ ಹೊಸಬರಂತೂ ನಿಶ್ಯಕ್ತ ಸಾಲುಗಳಲ್ಲಿ ನಿಲ್ಲಲೂ ಆಗದಂಥ ಸ್ಥಿತಿಯಲ್ಲಿದ್ದಾರೆ. ತತ್ವ ಸಿದ್ಧಾಂತಗಳ ಚಾಣಾಕ್ಷ ಹೆಣಿಗೆಯನ್ನೇ ಕಾವ್ಯವೆಂದು ನಂಬಿರುವ ಕವಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಈ ವರ್ಷ ಪ್ರಕಟವಾದ ಕವನ ಸಂಕಲನಗಳ ಜೊತೆಗೇ ಪ್ರಕಟವಾದ ಅನುವಾದಗಳು ಹೇಗೆ ನಮ್ಮನ್ನು ಶ್ರೀಮಂತಗೊಳಿಸಿವೆ ಎನ್ನುವ ಬೆರಗನ್ನಷ್ಟೇ ನಿಮ್ಮೊಂದಿಗೆ ಹಂಚಿಕೊಳ್ಳುತ್ತ (ಈ ವರ್ಷ ಪ್ರಕಟವಾದ ಸಂಕಲನಗಳ ಪ್ರಾತಿನಿಧಿಕ ಅಂಶಗಳನ್ನಿಟ್ಟುಕೊಂಡು ಆಲೋಚಿಸಹೋದರೆ ಅದೇ ಒಂದು ಪ್ರೌಢ ಪ್ರಬಂಧಕ್ಕಾಗುವ ವಸ್ತು ಎನ್ನಿಸಿದ್ದರಿಂದ ಪುಟಮಿತಿಯ ಕಾರಣದಿಂದಾಗಿ ಇದಕ್ಕಿಂತ ಹೆಚ್ಚು ಹೇಳುವುದು ಸಾಧ್ಯವಾಗುತ್ತಿಲ್ಲ) ಈ ಲೇಖನವನ್ನು ಪರಿಸಮಾಪ್ತಿಗೊಳಿಸುತ್ತಿದ್ದೇನೆ.
(ಋಣ: ಸಂಚಯ ಸಾಂಸ್ಕೃತಿಕ ಪತ್ರಿಕೆ ಸಂಚಿಕೆ ೮೪)

ಕಾಮೆಂಟ್‌ಗಳಿಲ್ಲ: