ಭಾನುವಾರ ಬೆಳ್ಳಂಬೆಳಿಗ್ಗೆಯೇ ಮೊಬೈಲ್ ಹೊಡಕೊಳ್ಳತೊಡಗಿದಾಗ ಹಿಂದಿನ ದಿನದ ಪಾರ್ಟಿಯ ಹ್ಯಾಂಗೋವರಿನಲ್ಲಿನ್ನೂ ಜೂಗರಿಸುತ್ತಿದ್ದ ನಾನು, ಅಂತೂ ಇಂತೂ ಸಾವರಿಸಿಕೊಂಡು ಎದ್ದು ಕೂರುವ ಹೊತ್ತಿಗೆ ಕರೆ ನಿಂತೇ ಹೋಯಿತು. ಪಾತಾಳಕ್ಕೆಲ್ಲೋ ಜಾರಿಹೋಗುತ್ತಿದ್ದೇನೆನಿಸಿ ಮತ್ತೆ ಮುದುರಿ ಮಲಗಿಕೊಂಡೆ. ಬೆಳಗಿನ ವಾಕಿಂಗ್ಗೆ ಹೋಗಿದ್ದ ಹೆಂಡತಿ ರತ್ನ ಬೀಗ ತೆಗೆದು ಒಳಬರುವುದಕ್ಕೂ ಮತ್ತೆ ಮೊಬೈಲ್ ರಿಂಗಾಗುವುದಕ್ಕೂ ಸರಿ ಹೋಯ್ತು. ಅವಳೇ ಮೊಬೈಲೆತ್ತಿಕೊಂಡು ‘ಇಲ್ಲ, ಅವರಿನ್ನೂ ಮಲಗಿದ್ದಾರೆ’.... . ‘ಅರ್ಜೆಂಟಾ? ಎದ್ದ ಮೇಲೆ ಇದೇ ನಂಬರಿಗೆ ಫೋನ್ ಮಾಡಲು ಹೇಳುತ್ತೇನೆ’. .. ‘ಸರಿ., ಎಬ್ಬಿಸಿ ಫೋನು ಅವರಿಗೇ ಕೊಡುತ್ತೇನೆ’ ಅಂದವಳೇ ನನ್ನ ಭುಜ ಅಲುಗಿಸಿ ‘ನೋಡಿ, ಯಾರೋ ಏನೋ ತುಂಬಾ ಅರ್ಜೆಂಟು ಅಂತಿದಾರೆ. ಏನಾದ್ರೂ ಹೇಳ್ಕೊಳ್ಳಿ..’ ಅಂದು ಮೊಬೈಲನ್ನು ನನ್ನ ಕಿವಿಗೆ ಹಿಡಿದಳು. ಸಾವರಿಸಿಕೊಂಡು ನಾನು ‘ಹ. . .ಲೋ..’ ಅಂದ ಕೂಡಲೇ ಆ ಕಡೆಯಿಂದ ‘ಸಾ..ರ್, ..ನಿನ್ನೆ ಸಂಜೆ ಕಾಮ್ರೇಡ್ ಸೂರಿಯವರನ್ನು ಪೋಲೀಸ್ ನಾಯಿಗಳು ಎತ್ತಿಹಾಕಿಕೊಂಡು ಹೋಗಿವೆ. ನಮಗೆಲ್ಲ ಏನು ಮಾಡಬೇಕೋ ತಿಳೀತಾ ಇಲ್ಲ.’ ಅನ್ನುವ ಅಪರಿಚಿತ ಧ್ವನಿ ಕೇಳಿತು. ‘ಯಾರು? ಯಾರು ಮಾತಾಡ್ತಾ ಇರೋದು?’ ನನ್ನ ಪ್ರಶ್ನೆ ಮುಗಿಯುವ ಮೊದಲೇ ಕರೆ ನಿಂತಿತು. ವಾಸ್ತವದ ಬಿಸಿ ಮುಟ್ಟಿದ್ದೇ ತಡ, ಹ್ಯಾಂಗೋವರು ತಕ್ಷಣ ಇಳಿದು ಹೋಗಿ ಧಿಗ್ಗನೆದ್ದು ಕೂತೆ. ಸೂರಿ ಯಾವತ್ತೋ ಅರೆಸ್ಟ್ ಆಗಬೇಕಾಗಿದ್ದವನು ಈಗ ಸಿಕ್ಕಿಬಿದ್ದಿದ್ದಾನೆ. ಆದರೂ ಅವನ ಬಿಡುಗಡೆಯ ಪ್ರಯತ್ನ ನನ್ನಂಥವನಿಂದ ಸಾಧ್ಯವಾ? ಬೇರೆ ಯಾರ ಸಹಾಯ ಈಗ ಅತ್ಯಗತ್ಯ ಅಂತ ಯೋಚಿಸುತ್ತಲೇ ಬೇಗ ಬ್ರಷ್ ಮಾಡಿಕೊಂಡು ಕಾಫಿ ಕುಡಿಯುತ್ತಲೇ ಗೆಳೆಯ ಪತ್ರಕರ್ತ ದಿವಾಕರನಿಗೆ ಫೋನ್ ಮಾಡಿದೆ. ‘ನೀವು ಕರೆ ಮಾಡಿರುವ ಚಂದಾದಾರರು ವ್ಯಾಪ್ತಿ ಪ್ರದೇಶದ ಹೊರಗೆ ಇದ್ದಾರೆ ಅಥವ ಈ ತಕ್ಷಣ ತಮ್ಮ ಕರೆಗೆ ಅವರು ಪ್ರತಿಕ್ರಯಿಸುತ್ತಿಲ್ಲ’ ಅನ್ನುವ ಉತ್ತರ ಬಂತು. ಸೀದಾ ಪ್ರೆಸ್ ಕ್ಲಬ್ಬಿಗೆ ಹೋಗಿ ಯಾರನ್ನಾದರೂ ಕೇಳೋದು ವಾಸಿ ಅಂತ ಅನ್ನಿಸಿ ನಿಂತ ನಿಲುವಿನಲ್ಲೇ ಸ್ಕೂಟರು ಹತ್ತಿದೆ.
ದಿವಾಕರ ಮನಸ್ಸು ಮಾಡಿದರೆ ಒಬ್ಬ ಸೂರಿಯನ್ನೇನು ವಾರಂಟ್ ಇಲ್ಲದೇ ಬರೀ ವಿಚಾರಣೆಗೆಂದು ಪೋಲೀಸರು ಎತ್ತಿಹಾಕಿಕೊಂಡು ಹೋದವರನ್ನೆಲ್ಲ ಬರೀ ಫೋನಿನ ಮೂಲಕವೇ ಬಿಡಿಸಬಲ್ಲ. ಬರೀ ಅಧಿಕಾರಿಗಳನ್ನದೇ ಸರ್ಕಾರ ನಡೆಸುವವರನ್ನೂ ಬಲ್ಲ ಅವನು ನನ್ನ ಹಾಗೇ ಸೂರಿಗೂ ಒಳ್ಳ್ಳೆಯ ಸ್ನೇಹಿತನೇ. ನಾವು ಮೂವರೂ ಒಂದೇ ಕಾಲೇಜಿನಲ್ಲಿ ಓದಿದವರು. ಸೂರಿ ನಮಗಿಂತ ಒಂದು ವರ್ಷ ದೊಡ್ಡವನು. ಅವನು ಲಾ ಮೊದಲವರ್ಷದಲ್ಲಿದ್ದಾಗ ನಾನೂ ದಿವಾಕರನೂ ಡಿಗ್ರಿಯ ಕಡೇ ವರ್ಷದಲ್ಲಿದ್ದೆವು. ನವ್ಯ ಕವಿತೆ, ಹುಡುಗಿಯರು, ಕಮ್ಯೂನಿಸಂ, ಸಿಗರೇಟು ಹೀಗೆ ನಮ್ಮೊಳಗಿನ ಸಮಾನಾಸಕ್ತಿ ನಮ್ಮನ್ನು ಒಂದುಗೂಡಿಸಿತ್ತು. ಸದಾ ಕುದಿಯುತ್ತಲೇ ಇರುತ್ತಿದ್ದ ಸೂರಿ ನಮಗೆಲ್ಲರಿಗೂ ಹೀರೋ. ಅವನು ಅರೆತೆರೆದ ಕಣ್ಣಲ್ಲಿ ಮಾತಾಡಲು ಶುರುಮಾಡಿದನೆಂದರೆ ಅದರಲ್ಲೂ ವರವರರಾವ್, ದಿಗಂಬರ ಕಾವ್ಯ, ಅಲ್ಲಿಂದ ಮಾರ್ಕ್ಸ್, ಅಸ್ತಿತ್ವವಾದ ಇತ್ಯಾದಿ ಎಲ್ಲಿಂದೆಲ್ಲಿಗೋ ಜಿಗಿದು ತನ್ನ ಪ್ರಚಂಡ ವಾಕ್ ಚಾತುರ್ಯ ತೋರಿಸುತ್ತಿದ್ದ. ಮೂಲತಃ ಬಲಪಂಥದೆಡೆಗೆ ಆಕರ್ಷಿತನಾಗಿದ್ದ ದಿವಾಕರ ಮಾರ್ಕ್ಸಿಸಂನ ಮಿತಿ ಅದರ ಸೋಲುಗಳನ್ನು ನೆನಪಿಸುತ್ತ ಸೂರಿಯ ವಾದವನ್ನು ಕೊಂಚ ಮಸಕುಮಾಡುತ್ತಿದ್ದ. ಸೌಮ್ಯವಾದದ ಮಧ್ಯಮಮಾರ್ಗವೇ ಸೇಫ್ ಅಂತ ಭಾವಿಸಿದ್ದ ನಾನು ಎಂಎ ಮುಗಿಸಿ ಕಾಲೇಜು ಮಾಸ್ತರನಾದರೆ ದಿವಾಕರ ಮತ್ತೇನೇನೋ ಆಗಹೋಗಿ ಕಡೆಗೆ ಬದುಕಿನ ನಿರ್ವಹಣೆಗೆ ಪತ್ರಕರ್ತನಾದ. ಸೂರಿಗೆ ಕಾನೂನು ಪದವಿಗಿಂತಲೂ ಎಡಪಂಥದ ಚಟುವಟಿಕೆಗಳೇ ಹೆಚ್ಚು ಮುಖ್ಯವೆನಿಸಿದ್ದರಿಂದ ಅದೆಲ್ಲಿಗೋ ಸಂಘಟನೆಗೆಂದು ಹೋಗಿದ್ದವನು ಈಗೊಂದೆರಡು ವರ್ಷಗಳಿಂದೀಚೆಗೆ ಅಪರೂಪಕ್ಕೆಂಬಂತೆ ಈ ಊರಿಗೆ ಬರುತ್ತಿರುತ್ತಾನೆ. ಅವನೇನು ಮಾಡುತ್ತಾನೋ, ಅವನ ಬದುಕು ಹೇಗೆ ನಡೆಯುತ್ತಿದೆಯೋ ನನಗಂತೂ ಗೊತ್ತಿಲ್ಲ. ಈಗಲೂ ಕೆಳವರ್ಗದ ಜನರ ಪರವಾಗಿ, ಕೊಳಚೆ ನಿವಾಸಿಗಳ ಪರವಾಗಿ, ಬೀಡಿಕಟ್ಟುವವರ, ಹಮಾಲಿಗಳ ಪರವಾಗಿ ಅವನು ಮೆರವಣಿಗೆ ನಡೆಸಿದ್ದನ್ನು, ಸಭೆ ನಡೆಸಿದ್ದನ್ನು ಸರ್ಕಾರದ ವಿರುದ್ಧ ಧರಣಿ ನಡೆಸಿದ್ದನ್ನು ಪತ್ರಿಕೆಗಳಲ್ಲಿ ಓದಿ ತಿಳಿಯುತ್ತಿರುತ್ತೇನೆ. ಈ ಊರಿಗೆ ಬಂದಾಗಲೆಲ್ಲ ನನ್ನನ್ನೂ ದಿವಾಕರನನ್ನೂ ಅವನು ಮಾತಾಡಿಸದೇ ಹೋದದ್ದೇ ಇಲ್ಲ. ಪಾರ್ಟಿಗೆಂದು ಹಲವು ಸಂಜೆಗಳನ್ನು ಒಟ್ಟಾಗಿ ನಾವು ಕಳೆದಿದ್ದೇವಾದರೂ ಪರಸ್ಪರರ ತೀರ ಖಾಸಗಿ ವಿಚಾರಗಳೆಂದೂ ನಮ್ಮ ನಡುವೆ ಅದಲುಬದಲಾಗಿಲ್ಲ. ಅಲ್ಲದೇ ಸಂಸಾರಸ್ತರ ಮನೆಗೆಂದೂ ಬರಲು ಇಷ್ಟಪಡದ ಸೂರಿಗೆ ನನ್ನ ಮನೆ ಎಲ್ಲಿದೆ ಅಂತ ಕೂಡ ಗೊತ್ತಿಲ್ಲ. ಇನ್ನು ದಿವಾಕರ ಸದಾ ಬ್ಯುಸಿ ಮನುಷ್ಯ. ಅವನ ಪತ್ರಿಕೆಗೆ ಅವನೇ ಜಿಲ್ಲಾ ವರದಿಗಾರನಾಗಿರುವುದರಿಂದ ಅವನಿಗೆ ಕೈ ತುಂಬ ಕೆಲಸ. ಅಪರೂಪಕ್ಕೆ ಸಿಕ್ಕಾಗಷ್ಟು ಶಿಷ್ಟಾಚಾರದ ಮಾತೆಷ್ಟೋ ಅಷ್ಟೇ. ಹಿಂದಿನ ಹಾಗೆ ನೆಲ ಗುದ್ದಿ ನೀರು ತೆಗೆಯುವ ಉತ್ಸಾಹ ನಮ್ಮಲ್ಲಿ ಯಾರಿಗೂ ಉಳಿದೇ ಇಲ್ಲ.
ಪ್ರೆಸ್ ಕ್ಲಬ್ಬಿನ ಕಾಂಪೋಂಡೊಳಗೆ ನನ್ನ ಸ್ಕೂಟರು ನಿಲ್ಲುವುದಕ್ಕೂ ಪೋಲೀಸು ಜೀಪೊಂದು ಆ ಆವರಣದಿಂದ ಹೊರಡುವುದಕ್ಕೂ ಸರಿ ಹೋಯ್ತು. ಪ್ರಾಯಶಃ ಪೋಲಿಸ್ ಇಲಾಖೆಯ ಪ್ರೆಸ್ ಮೀಟ್ಗೆ ಹೋಗಿದ್ದ ಪತ್ರಕರ್ತರನ್ನು ಬಿಡಲು ಬಂದ ವಾಹನವಿರಬೇಕು ಅದು. ‘ಒಂದು ನಿಮಿಷ ಅಲ್ಲೆ ಇರಯ್ಯ’ ಎನ್ನುವ ಹಾಗೆ ಕೈ ತೋರಿಸಿ ಮೂತ್ರ ಮಾಡಿಬರುತ್ತೇನೆನ್ನುವ ಸನ್ನೆ ಮಾಡಿದ ದಿವಾಕರ ಐದು ನಿಮಿಷದ ನಂತರ ಬಂದವನು ಕ್ಯಾಂಟೀನಿಗೆ ಕರೆದೊಯ್ದ. ಸಿಗರೇಟಿಗೆ ಬೆಂಕಿ ತಾಗಿಸಿ ಕಾಫಿ ಗುಟುಕರಿಸುತ್ತ ‘ನೀನು ಯಾಕೆ ಇಲ್ಲಿಯವರೆಗೆ ಬಂದೆ ಅಂತ ನನಗ್ಗೊತ್ತು’ ಅಂದ. ಸ್ನಾನ ತಿಂಡಿಗಳಿಲ್ಲದೇ ಬೆಳಗ್ಗಿನಿಂದ ಇದ್ದ ಒತ್ತಡ ಸ್ವಲ್ಪ ಕಮ್ಮಿಯಾದಂತೆನಿಸಿತು. ಆರಿ ಹೋಗಿದ್ದ ಕಾಫಿಯನ್ನು ಒಂದೇ ಗುಟುಕಿಗೆ ಹೀರಿ ‘just I want to know how he is…’ ಅಂತ ಹೇಳುವಷ್ಟರಲ್ಲೇ ಧ್ವನಿ ಭಾರವಾಗಿ ಮಾತು ತುಂಡಾಗಿ ನಿಂತು ಬಿಟ್ಟಿತು. ದಿವಾಕರ ಹೇಳಿದ ‘ಸರಿಯಾಗಿ ಕೇಳಿಸ್ಕೋ ಮಗನೇ... ನೀನೇನಾದರೂ ಅವನ ಬಗ್ಗೆ ವಿಚಾರಿಸ ಹೋದ್ರೆ.. ..ನೀನ್ಯಾಕೆ ಅವನ ಬಗ್ಗೆ ಆಸಕ್ತಿ ತೋರಿಸ್ತಿದೀಯ ಅನ್ನೋ ಆಸಕ್ತಿ ಪೋಲೀಸರಿಗೆ ಬರುತ್ತೆ. ..ನಿನಗೆ ಅವನ ಪರಿಚಯ ಇದೆ ಅಂದ್ರೆ.. . ಅವನ ಎಲ್ಲ ಕೆಲಸ ಕಾರ್ಯಗಳಲ್ಲಿ ನೀನೂ ಸಹಕರಿಸಿದ್ದೀ ಅಂತ ವ್ಯವಸ್ಥೆ ನಂಬುತ್ತೆ. ನೀನು ಅವನಿಗೆ ಹ್ಯಾಗೆ ಪರಿಚಯ ಅಂತ ತಿಳ್ಕೊಳ್ಳೋಕೆ ಅವರು ಯಾವ ಮಾರ್ಗನಾದರೂ... .. ರೋಲರಿನಿಂದ ಹಿಡಿದು ಏರೋಪ್ಲೇನ್ವರೆಗೂ ..’ ದಿವಾಕರ ತೀರ ಇಷ್ಟು ಅಸ್ತಿತ್ವವಾದೀ ಮನುಷ್ಯ ಅಂತ ನನಗೆ ಗೊತ್ತಿರಲಿಲ್ಲ. ಗೆಳೆಯರು ಅಂದ್ರೆ ಪಾರ್ಟಿಗೆ ಬಾಯಿ ಬಿಡೋ ದರಿದ್ರರು ಅಂತ ತಿಳ್ಕೊಂಡಿದಾನೆ. ಚೀಪ್ ಗೈ. ಸಿಟ್ಟು ಒತ್ತರಿಸಿ ಬಂತು. ಎಲ್ಲೋ ಕಷ್ಟದಲ್ಲಿರುವ ಸ್ನೇಹಿತನಿಗೆ ಸಹಾಯ ಮಾಡುವ ಬದಲು ಸಹಾಯ ಹಸ್ತ ಚಾಚಿರುವವರನ್ನೇ ಬಾವಿಗೆ ದೂಡುವ ದುಷ್ಟತನ. ಥೂ ಅಂತ ಉಗಿದು ಹೊರಟು ಬಿಡಬೇಕೆಂದು ನಿಂತುಕೊಂಡವನನ್ನು ಕೈಹಿಡಿದು ಕೂರಿಸಿ ಹೇಳಿದ ‘ನೋಡು ಮರಿ. ಇವರೆಲ್ಲ ವ್ಯವಸ್ಥೇನ ಹಾಳುಮಾಡೋ ಜನ. ಆಂಟಿ ಸೋಶಿಯಲ್ ಎಲಿಮೆಂಟ್ಸ್. ದಿನವಿಡೀ ದುಡಿಮೆ ಮಾಡಿ ಹೊತ್ತು ಹೊತ್ತಿಗೆ ಗಂಜಿ ಹೊಂಚಿಕೊಳ್ಳಬೇಕಾದ ಜನರಿಗೆ ಅವರ ಬಡತನ ಈ ಸಮಾಜ ಕಟ್ಟಿಕೊಟ್ಟದ್ದು ಅನ್ನುವ ಹಾಗೆ ಅವರ ಬ್ರೇನ್ ವಾಷ್ ಮಾಡಿ ದಂಗೆ ಏಳಿಸ್ತಾರೆ. ನಾವೆಲ್ಲ ಭರವಸೆಯಿಂದ ಆರಿಸಿರೋ ಸರ್ಕಾರದ ವಿರುದ್ಧ ಕೆಲಸ ಮಾಡುತ್ತಾನೆಂದರೆ ಅವನೂ, ಅವನ ಸ್ನೇಹಿತರೆಲ್ಲರೂ ದೇಶದ್ರೋಹಿಗಳು ಅಂತಾನೆ ಸರ್ಕಾರ ಭಾವಿಸುತ್ತೆ. ನೀನು ಸರ್ಕಾರೀ ಅನುದಾನ ಪಡೆಯುವ ಸಂಸ್ಥೆಯ ನೌಕರ. ಸಸ್ಪೆಂಡು ಮಾಡೋದು ಸುಲಭ.’ ಅವನ ಮಾತು ಹೀಗೇ ಮುಂದುವರೆಯಿತು. ‘ಹಾಗಾದರೆ ಅವನನ್ನು ಬಿಡಿಸುವ ದಾರಿ ಯಾವುದೂ ಇಲ್ಲವಾ?’ ನನ್ನ ಮಾತು ಸಾಕೆನ್ನುವಂತೆ ಕೈ ಮಾಡಿ ‘ಮಧ್ಯಾಹ್ನದವರೆಗೂ ಇಲ್ಲೆ ಕೂತಿರು. ಈಗಷ್ಟೇ ಪ್ರೆಸ್ ಮೀಟಿನಲ್ಲಿ ಪೋಲೀಸ್ ಇಲಾಖೆ ಹೇಳಿದ್ದನ್ನು ಹೈಲೈಟ್ ಮಾಡಿ ಒಂದು ಸ್ಕೂಪ್ ವರದಿ ಕಳಿಸಿಬಿಡುತ್ತೇನೆ. ಭಾನುವಾರ. ನಿಂಗೂ ರಜೆ. ಚರ್ಚೆ ಮಾಡ ಮಾಡುತ್ತ ತಣ್ಣಗಿನ ಬಿಯರ್ ಹೀರುವ’ ಅಂತಂದು ಒಳಗೆದ್ದುಹೋದ. ಸ್ನೇಹಿತನ ಜೀವಕ್ಕಿಂತ ಕರ್ತವ್ಯವೇ ಮಿಗಿಲೆಂದು ಭಾವಿಸಿದ ಸ್ನೇಹಿತನನ್ನು ಅಲ್ಲೇ ಬೀಳ್ಕೊಟ್ಟು ಮತ್ತೆ ಸ್ಕೂಟರೇರಿ ಪೋಲೀಸ್ ಸ್ಟೇಷನ್ನಿನ ಕಡೆಗೆ ಹೊರಟೆ.
ಅರೆ, ಏನಾಶ್ಚರ್ಯ? ಸ್ಟೇಷನ್ನಿನ ಮುಂದೆ ನೂರಾರು ಜನ ಜಮಾಯಿಸಿ ಕಾಮ್ರೇಡ್ ಸೂರಿಗೆ ಜೈ ಅಂತಿದಾರೆ. ಅಲ್ಲಿದ್ದ ಜನರೆಲ್ಲ ಸ್ವತಃ ತಮ್ಮ ವಿಷಯವನ್ನು ತಾವೇ ಇತ್ಯರ್ಥ ಪಡಿಸಿಕೊಳ್ಳಲು ಬಂದವರ ಹಾಗೆ ಕಾಣುತ್ತಿದ್ದಾರೆ. ಎಲ್ಲರ ಮುಖದಲ್ಲೂ ದುಗುಡ ಹೆಪ್ಪುಗಟ್ಟಿದೆ. ಯಾವ ಕ್ಷಣ ಏನಾಗುತ್ತೋ ಅನ್ನುವ ಭಯ ಕೂಡ ಅವರ ಮುಖದಲ್ಲಿ ಎದ್ದು ಕಾಣುತ್ತಿದೆ. ಯಾವ ಪುಡಿ ರಾಜಕಾರಣಿಯನ್ನೂ ಮುಂದಿಟ್ಟುಕೊಳ್ಳದೆಯೇ ಅವರೆಲ್ಲ ತಮ್ಮ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ. ಅವರ ನೂಕುನುಗ್ಗಲು ತಡೆಯಲಾರದೇ ಸ್ಟೇಷನ್ನಿನ ಹೊರಗೆ ಕಾವಲಿರುವ ಪೋಲೀಸು ಸಿಬ್ಬಂದಿ ಗಾಳಿಗೆ ತಮ್ಮ ಲಾಠಿ ಬೀಸಿ, ಬಾಯಿಗೆ ಬಂದ ಬೈಯ್ಗಳೆಲ್ಲವನ್ನೂ ಪ್ರಯೋಗಿಸುತ್ತಿದೆ. ಕಾಲೇಜಿನಲ್ಲಿ ನನ್ನ ಪಾಠವನ್ನು ಅತ್ಯಂತ ಶ್ರದ್ಧೆಯಿಂದ ಕೇಳುವ ಸ್ಲಮ್ಮಿನ ಬಹುತೇಕ ಹುಡುಗ ಹುಡುಗಿಯರೂ ಗುಂಪಿನಲ್ಲಿದ್ದಾರೆ. ನನ್ನನ್ನು ಅಲ್ಲಿ ಕಂಡೊಡನೆಯೇ ಯಾರೊಬ್ಬರನ್ನೂ ಒಳಬಿಟ್ಟುಕೊಳ್ಳದೆಯೇ ದರ್ಪತೋರಿಸುತ್ತ ಕೂತಿದ್ದ ಇನ್ಸ್ಪೆಕ್ಟರ್ ಜೊತೆ ನಾನು ಮಾತಾಡುವಂತೆ ಕೈ ಜೋಡಿಸುತ್ತಾರೆ. ಅವರೆಲ್ಲರ ಆರಾಧ್ಯ ದೈವದಂತಿರುವ ಸೂರಿ ಅವರಿಗೆ ಯಾವ ಬಗೆಯ ಮೋಡಿ ಹಾಕಿರಬಹುದೆಂದು ಅಂದಾಜಿಸುತ್ತಲೇ ಹೊಡೆದುಕೊಳ್ಳುತ್ತಿರುವ ಎದೆಯ ಮೇಲೆ ಕೈ ಇಟ್ಟುಕೊಂಡ ನಾನು ಇನ್ಸ್ಪೆಕ್ಟರ ಛೇಂಬರಿನೊಳಕ್ಕೆ ನುಗ್ಗಿದೆ.
‘... ..ಪಾಠ ಮಾಡೋದು ಬಿಟ್ಟು ಕಾಲೇಜು ಮಕ್ಕಳಿಗೆ ಕಮ್ಯೂನಿಸಂ ಬೋಧಿಸೋ ಮೇಸ್ಟರೇ. . .ಬರಬೇಕು.. ಬರಬೇಕು. ಬರೀ ಅದರ್ಶ ಬದುಕಿಗೆ ಸಾಕಾಗಲ್ಲ. ಸ್ವಲ್ಪ ವಾಸ್ತವ ಕೂಡ ನಿಮಗೂ ಅರ್ಥವಾಗಬೇಕು.’ ನನ್ನನ್ನು ನೋಡಿದೊಡನೆಯೇ ಹಿಂದಿನ ಪರಿಚಯ ಇರದಿದ್ದರೂ ವ್ಯಂಗ್ಯದ ಮಾತಲ್ಲಿ ಸ್ವಾಗತಿಸಿದ ಇನ್ಸ್ಪೆಕ್ಟರಿಗೆ ನಮಸ್ಕಾರ ಹೇಳಿದೆ. ನಾನು ಬಂದ ವಿಚಾರ ಯಾವುದೆಂದು ಕೇಳದೇ ಕುರ್ಚಿ ತೋರಿಸುವ ಸೌಜನ್ಯವನ್ನೂ ಮಾಡದೇ ಆತ ನೇರವಾಗಿ ಹೇಳಿದ-“ನೋಡಿ, ಇಲ್ಲಿ ಸೇರಿದಾರಲ್ಲ, ಅವರಲ್ಲಿ ಯಾರಿಗೂ ಕಾನೂನಿನ ಭಯ ಇಲ್ಲ. ಸಮಾಜ, ಮಾನ , ಮರ್ಯಾದೆ ಯಾವುದಕ್ಕೂ ಅವರು ಕ್ಯಾರೇ ಅನ್ನಲ್ಲ. ಈ ಇವರ ಚಿತಾವಣೇಲಿ ಅಪ್ಪರ್ ಕ್ಲಾಸ್ ಜನ ಮರ್ಯಾದೆಯಾಗಿ ಬದುಕಲಾಗುತ್ತಿಲ್ಲ. ಇಂಥವರ ಲೀಡರ್ ಇನ್ನು ಹ್ಯಾಗೆ ಇರಕ್ಕೆ ಸಾಧ್ಯ? ಅದೆಷ್ಟು ಹುಡುಗಿಯರನ್ನು ಅವನು ಪಟಾಯಿಸಿದ್ದಾನೆ ಅನ್ನೋದು ನಮ್ಗೆ ಮಾತ್ರ ಗೊತ್ತು. ಯಾರ ಹತ್ರ ಹ್ಯಾಗೆ ಹ್ಯಾಗೆ ದುಡ್ಡು ಕೀಳಬೇಕೋ ಹಾಗೆಲ್ಲ ಅವನು ಕಿತ್ತಿದ್ದಾನೆ. ಬ್ಲಾಕ್ ಮೇಲ್, ಜೀವ ಭಯ, ಅವನ ಅಸ್ತ್ರಗಳು. ಅವನ ಪರವಾಗಿ ನೀವು ಇಲ್ಲಿಗೆ ಬಂದ್ರಲ್ಲ ಅಂತ ಬೇಜಾರಾಗುತ್ತೆ. ನಿಮಗೂ ಹೇಂಡತಿ ಮಕ್ಕಳು ಇದ್ದಾರೆ. ನಿಮ್ಮ ಮನೆ, ನಿಮ್ಮ ಕೆಲಸ ಎಲ್ಲ ನಮಗೆ ಗೊತ್ತು. ಜೋಪಾನ. ಕ್ರಾಂತಿಯ ಭ್ರಾಂತಿ ಕಿತ್ತುಹಾಕಿ ಮನೆ ಸೇರ್ಕಳಿ. ಖುದ್ದು ಗೃಹಮಂತ್ರಿಗಳ ಆದೇಶದ ಮೇಲೆ ನಾವವನನ್ನು ಅರೆಸ್ಟ್ ಮಾಡಿರೋದು. ನಿಮ್ಮಂಥವರಾರೂ ಅವನಿಗೆ ಕಾನೂನಿನ ಸಹಾಯ ಮಾಡಬಾರದು ಅಂತಾನೇ ನಾವು ಅವನನ್ನು ಶನಿವಾರ ಸಂಜೆ ಒಳಗೆ ಹಾಕಿ ಎತ್ತುತ್ತಿರೋದು. ನಾಳೆ ಕೂಡ ಸರ್ಕಾರಿ ರಜೆ. ಯಾವ ಕೋರ್ಟೂ ಏನೂ ಮಾಡಕ್ಕಾಗಲ್ಲ.” ಸುಮ್ಮನೆ ನಿಂತು ಅವನ ಮಾತು ಕೇಳುತ್ತ ಉಗುಳು ನುಂಗಲೂ ಕಷ್ಟ ಪಡುತ್ತಿದ್ದ ನನ್ನತ್ತ ಒಂದು ಹೆಜ್ಜೆ ಮುಂದಿಟ್ಟು ಬಂದು ಹೆಗಲ ಮೇಲೆ ಕೈ ಇಟ್ಟು ಹೇಳಿದ-“ಇಂಥವರಿಗೆ ಕೊಂಚವೂ ಜೀವನ ಪ್ರೀತಿ ಇರಲ್ಲ ಸಾರ್. ಬರೀ ಸ್ಯಾಡಿಸ್ಟ್. ಅವರಿಗೆ ಸಿಕ್ಕದಿರುವುದು ಬೇರೆ ಯಾರಿಗೂ ದಕ್ಕದೇ ಇರಲಿ ಅಂತ ಈರೀತಿ ಜನರನ್ನ ಎತ್ತಿ ಕಟ್ಟುತ್ತಾರೆ. ನೀವು ಪಾಠ ಚೆನ್ನಾಗಿ ಮಾಡ್ತೀರ ಅಂತ ನನ್ನ ಮಗಳು ಹೇಳಿದ್ದು ಕೇಳಿ ನಾನಿಷ್ಟು ಕೂಲಾಗಿ ನಿಮಗೆ ಹೇಳ್ತಿದೀನಿ. ದಯವಿಟ್ಟು ಈ ವಿಚಾರ ಬಿಟ್ಟು ಮನೆಗೆ ಹೋಗಿ ಹೆಂಡತಿ ಮಕ್ಕಳ ಜೊತೆ ಸಿನಿಮಾ ನೋಡಿ.. .. ಇಲ್ಲಾಂದ್ರೆ ಜೀವನ ಪೂರ್ತಿ ಅವರು ನಿಮ್ಮನ್ನು ನೋಡ್ಕೋ ಬೇಕಾಗುತ್ತೆ.. ..ನಿಮಗೆ ನಮ್ಮ ಇಲಾಖೆ ಕೊಡೋ ಮರ್ಯಾದೆ ಗೊತ್ತಿಲ್ಲ ಅಂತ ಕಾಣುತ್ತೆ” ಅಂದವನೇ ೩೩೦ ಅಂತ ಕೂಗಿದ. ಒಳಕ್ಕೆ ಬಂದು ಸೆಲ್ಯೂಟ್ ಹೊಡೆದ ಪಿಸಿಯೊಬ್ಬನಿಗೆ ನನ್ನನ್ನು ಜೀಪಲ್ಲಿ ಮನೆಗೆ ಬಿಟ್ಟು ಬರಲು ಹೇಳಿ ಅರಚುತ್ತಿದ್ದ ವಾಕಿಟಾಕಿಯಲ್ಲಿ ಏನೋ ಗಹನವಾಗಿ ಮಾತನಾಡತೊಡಗಿದ.
‘ನನ್ನ ಸ್ಕೂಟರು ಇಲ್ಲೇ ಇದೇರಿ’ ಅಂತ ನಾನು ಅಲವತ್ತುಕೊಳ್ಳುತ್ತಿದ್ದರೂ ಬಿಡದೆ ಸ್ಟೇಷನ್ನಿನ ಹಿಂಬಾಗಿಲ ಮೂಲಕ ನನ್ನನ್ನು ದಬ್ಬಿಕೊಂಡೇ ಗೌರವವಾಗಿ ಜೀಪಿಗೆ ತಳ್ಳಿದ ೩೩೦ ನಂಬರಿನ ಪಿಸಿ ಕೂಡ ದಾರಿಯುದ್ದಕ್ಕೂ ನಕ್ಸಲೈಟುಗಳನ್ನು, ಕಮ್ಯುನಿಸ್ಟರನ್ನು ದೇಶದ್ರೋಹಿಗಳು ಅಂತ ಬಯ್ಯುತ್ತಲೇ ಇದ್ದ. ನನ್ನ ಮನೆಯ ದಾರಿ ಬಿಟ್ಟು ಬೇರೆ ದಾರಿ ಹಿಡಿದ ಜೀಪು ಸೀದಾ ನಮ್ಮ ಕಾಲೇಜಿನ ಆಡಳಿತ ಮಂಡಲಿಯ ಅಧ್ಯಕ್ಷರೂ, ನಮ್ಮ ಕ್ಷೇತ್ರದ ಶಾಸಕರೂ,ವಿರೋಧ ಪಕ್ಷದಲ್ಲಿದ್ದರೂ ಗೃಹ ಮಂತ್ರಿಗಳ ಆಪ್ತರೂ ಆದವರ ಮನೆಯ ಮುಂದೆ ನಿಂತಿತು. ಬೆಳಿಗ್ಗೆಯಿಂದ ಹೊಟ್ಟೆಗೆ ಏನೂ ಬೀಳದಿರುವುದೂ, ಜೊತೆಗೆ ಮೇಲಿಂದ ಮೇಲೆ ಕೇಳಿದ ಉಪದೇಶಗಳ ಪ್ರಭಾವವೋ ಏನೋ ತಲೆ ಗಿರ್ ಎನ್ನತೊಡಗಿತು. ೩೩೦ ನಂಬರಿನ ಪೋಲೀಸ್ ಕಾನ್ಸ್ಟೇಬಲ್ ನನ್ನನ್ನು ಎಳೆದುಕೊಂಡೇ ಮನೆಯೊಳಗೆ ಕಾಲಿಟ್ಟ. ವೆರಾಂಡದ ಸ್ಟೂಲಿನ ಮೇಲೆ ನನ್ನನ್ನು ಕುಕ್ಕರಿಸಿ ತಾನು ತೀರ ಪರಿಚಿತ ಎನ್ನುವಂತೆ ಹಲ್ಲು ಕಿಸಿಯುತ್ತ ನಿಂತ. ಅರೆಬರೆ ಎಚ್ಚರದಲ್ಲಿ ಅಲ್ಲಿದ್ದವರನ್ನು ಗಮನಿಸಿದೆ. ಪತ್ರಕರ್ತ,ಗೆಳೆಯ ದಿವಾಕರ ಶಾಸಕರ ಕಿವಿಯಲ್ಲಿ ಏನನ್ನೋ ಹೇಳುತ್ತಿದ್ದ. ನಮ್ಮ ಪ್ರಿನ್ಸಿಪಾಲರು ವಿಧೇಯರಾಗಿ ನಿಂತಿದ್ದರು. ನಾನು ಫೋಟೊದಲ್ಲಿ ಮಾತ್ರ ನೋಡಿದ್ದ ನಮ್ಮ ಡಿ.ವೈ.ಎಸ್ಪಿ ಶಾಸಕರ ಪಕ್ಕದಲ್ಲೇ ವಿರಾಜಮಾನರಾಗಿದ್ದರು. ಇನ್ನೂ ಯಾರೋ ನಾಲ್ಕೈದು ಜನ ಖಾದೀಧಾರಿಗಳು ನನ್ನತ್ತಲೇ ನೋಡುತ್ತ ಹುಸಿನಗೆ ನಕ್ಕಂತಾಯ್ತು. ನಾನು ಕುಸಿದು ಬಿದ್ದೆ.
ಎಚ್ಚರವಾದಾಗ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದ್ದೆ. ಹೆಂಡತಿ ರತ್ನ ದಿಕ್ಕುತೋಚದವಳಂತೆ ಕಾಲ ಬಳಿ ತೂಕಡಿಸುತ್ತಿದ್ದಳು. ಸಾವರಿಸಿ ಕೊಂಡು ಇಲ್ಲಿಗೆ ಯಾವಾಗ ನನ್ನನ್ನು ಅಡ್ಮಿಟ್ ಮಾಡಿರಬಹುದೆಂದು ಆಲೋಚಿಸುತ್ತ ಸುತ್ತ ಮುತ್ತ ನೋಡುತ್ತಿರುವಾಗ, ಆ ಸ್ಪೆಷಲ್ ವಾರ್ಡಿನ ಬಾಗಿಲು ತೆರೆದುಕೊಂಡು ನಮ್ಮ ಕಾಲೇಜಿನ ಆಡಳಿತ ಮಂಡಲಿಯ ಅಧ್ಯಕ್ಷರ ಜೊತೆ ದಿವಾಕರ ಒಳಬಂದ. ‘ಏನೂ ತೊಂದರೆ ಇಲ್ಲವಂತಯ್ಯ. ಸುಮ್ಮನೆ ಗಾಬರಿ ಮಾಡಿಕೊಂಡು ನಮಗೂ ಗಾಬರಿ ಹುಟ್ಟಿಸಿದೆ. ನೋಡು ಸ್ವತಃ ಶಾಸಕರೇ ನಿನ್ನ ಆರೋಗ್ಯದ ಬಗ್ಗೆ ಕಾಳಜಿ ಇಟ್ಟುಕೊಂಡು ಇಲ್ಲಿಯವರೆಗೂ ಬಂದಿದ್ದಾರೆ’ ಅಂದ. ಅವರ ಕೈಯಲ್ಲಿದ್ದ ಬುಟ್ಟಿಯ ತುಂಬ ವಿವಿಧ ರೀತಿಯ ಹಣ್ಣುಗಳು ತುಂಬಿದ್ದವು. ಆಯಾಸವಾದವನಂತೆ ಕಣ್ಣುಮುಚ್ಚಿದೆ. ‘ರೆಸ್ಟ್ ತಗೋಳಿ. ನಿಮಗೆ ಸಂಬಂಧಿಸಿಲ್ಲದ ವಿಷಯದಲ್ಲಿ ತಲೆ ಹಾಕುವುದು ತಪ್ಪು ತಾನೆ? ಪರೀಕ್ಷೆಗಳು ಬೇರೆ ಹತ್ತಿರಕ್ಕೆ ಬರುತ್ತಿವೆ. ನಮ್ಮ ಕಾಲೇಜಿನ ರಿಸಲ್ಟ್ ನಿಮ್ಮಂಥವರ ಕೈಯಲ್ಲೇ ಇರುವುದು’ ಅಂತ ಅವರು ಹೇಳುತ್ತಲೇ ನಿರ್ಗಮಿಸಿದರು. ಅವರನ್ನು ಕಳಿಸಿಕೊಡಲು ರತ್ನ ಕೂಡ ಅವರ ಜೊತೆಯೇ ಹೊರಗೆ ಹೋದಳು. ದಿವಾಕರ (ಬೇಕೆಂತಲೇ?) ನನ್ನ ಹಾಸಿಗೆಯ ಮೇಲೆ ಬಿಟ್ಟುಹೋದ ಅವತ್ತಿನ ಪೇಪರನ್ನು ಎತ್ತಿಕೊಂಡು ನೋಡಿದೆ. “ಸೂರ್ಯನಾರಾಯಣ ಎಂಬ ಶಂಕಿತ ನಕ್ಸಲ್ ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೋಲೀಸರು ಅನಿವಾರ್ಯವಾಗಿ ಸಿಡಿಸಿದ ಗುಂಡಿಗೆ ಬಲಿಯಾದ. ಅವನ ಬಿಡುಗಡೆಗೆ ಅಗ್ರಹಿಸಿ ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಿದ್ದ ಕೆಲವರು ಹಿಂಸಾಚಾರಕ್ಕಿಳಿದಾಗ ಕೆಲವು ಪೋಲೀಸರು ಗಾಯಗೊಂಡರಲ್ಲದೆ, ಹಿಂಸೆಯನ್ನು ನಿಯಂತ್ರಿಸಲು ಪೋಲೀಸರು ನಡೆಸಿದ ಗೋಲೀಬಾರಿನಲ್ಲಿ ಸತ್ತವರ ಸಂಖ್ಯೆ ಮೂರಕ್ಕೇರಿದೆ.” ನಾಲ್ಕು ಸಾಲಿನ ಸುದ್ದಿಯ ಜೊತೆಗೇ ನಮ್ಮ ಶಾಸಕರ ಶೋಕ ಸಂದೇಶ ಜೊತೆಗೆ ಯುವಕರನ್ನು ಹಾದಿ ತಪ್ಪಿಸುತ್ತಿರುವ ಸಮಾಜ ವಿರೋಧೀ ವ್ಯಕ್ತಿಗಳ ಬಗ್ಗೆ ಎಚ್ಚರದಿಂದಿರಬೇಕೆಂಬ ಅವರ ಕಳಕಳಿಯ ಮನವಿಯೂ ಪ್ರಕಟವಾಗಿತ್ತು. ಹೊರಗೆ ಗಲಾಟೆ ಕೇಳಿದಂತಾಗಿ ಮೆಲ್ಲನೆ ನಡೆದು ಕಿಟಕಿಯಿಂದ ಬಗ್ಗಿ ನೋಡಿದೆ. ಎದೆ ಎದೆ ಬಡಿದುಕೊಂಡು ಅಳುತ್ತಿದ್ದವರಿಗೆ ಶಾಸಕರು ಸಮಾಧಾನ ಹೇಳುತ್ತಲೇ ಕಾರು ಹತ್ತಿದರು. ಅವರ ಕಾರನ್ನು ಎರಡು ಪೋಲೀಸ್ ಜೀಪುಗಳು ಹಿಂಬಾಲಿಸಿದವು. ದಿವಾಕರ ಶಾಸಕರ ಕಾರಿನಲ್ಲಿದ್ದನೋ ಪೋಲೀಸರ ಜೀಪಿನಲ್ಲಿದ್ದನೋ ದೂರದಿಂದ ಕಂಡದ್ದು ಅಸ್ಪಷ್ಟವಾಗಿಯೇ ಉಳಿಯಿತು.
(ಕನ್ನಡಪ್ರಭ ಸಂಕ್ರಾತಿ ಕಥಾಸ್ಪರ್ಧೆಯಲ್ಲಿ ಬಹುಮಾನಿತ ಕಥೆ)
2 ಕಾಮೆಂಟ್ಗಳು:
ತುಂಬ ಚೆನ್ನಾಗಿದೆ. ಬಹಳ ದಿನಗಳ ನಂತರ ಒಂದು ಒಳ್ಳೆ ಕತೆ ಓದಿದಂತಾಯಿತು.
- ಕೇಶವ
ಕತೆ ಹಿಡಿಸಿತು..ವಾಸ್ತವ ಕೂಡ ಅದೇ..
ಕಾಮೆಂಟ್ ಪೋಸ್ಟ್ ಮಾಡಿ