‘ಮಲೆಗಳಲ್ಲಿ ಮದುಮಗಳು’ ಈ ಶತಮಾನದ ಅತ್ಯುತ್ತಮ ಗದ್ಯ ಕೃತಿಗಳಲ್ಲೊಂದು.ಕನ್ನಡ ಕಾದಂಬರಿಪರಂಪರೆಗೆ ಹೊಸ ವ್ಯಾಖ್ಯೆಯನ್ನು ತನ್ನ ವಿಶಿಷ್ಠ ರಚನಾಕ್ರಮದಿಂದ ಮತ್ತು ಅನುಭವ ಸಾಂಧ್ರತೆಯ ಪಾರಮ್ಯದಿಂದ ಹಾಗೂ ಕಲಾತ್ಮಕ ಪ್ರಯೋಗಗಳಿಂದಲೂ ಬೆಳಗಿಸಿದ ಕೃತಿ. ಪ್ರತಿ ಓದಿನಲ್ಲೂ ಹೊಸ ಹೊಸ ವಿಸ್ತರಣಕ್ಕೆ ಕೊಂಡೊಯ್ಯುವ ಕು.ವೆಂ.ಪುರವರ ಈ ಕಾದಂಬರಿ ಈಗಾಗಲೇ ದೂರದರ್ಶನ ಧಾರಾವಾಹಿಯ ಕೆಲವು ಕಂತುಗಳಿಗೇ ನಿಂತು ಇದನ್ನು ಪುನರ್ಸುಷ್ಟಿಸುವವರ ಎದೆಗಾರಿಕೆಯನ್ನು ಪ್ರಶ್ನಿಸುತ್ತಲೇ ಇದೆ. ಇಡೀ ಕಾದಂಬರಿಯುದ್ದಕ್ಕೂ ಹಲವು ಕಥಾನಕದ ಝರಿಗಳು ಏಕಕಾಲಕ್ಕೆ ಓಡುತ್ತೋಡುತ್ತಲೇ ಒಮ್ಮೆ ಒಂದಾಗುತ್ತ ಮತ್ತೆ ಬೇರೆಯಾಗುತ್ತಲೇ ದರ್ಶನವೊಂದನ್ನು ನೀಡುತ್ತಲೇ ಸಾಗುತ್ತದೆ. ಕಾದಂಬರಿಯ ಪ್ರಸ್ತಾವನೆಯ ‘ಇಲ್ಲಿ ಯಾರೂ ಮುಖ್ಯರಲ್ಲ; ಇಲ್ಲಿ ಯಾರೂ ಅಮುಖ್ಯರಲ್ಲ; ಇಲ್ಲಿ ಯಾವುದು ಯಃಕಶ್ಚಿತವಲ್ಲ’ ಎಂಬ ದಾರ್ಶನಿಕ ಹೇಳಿಕೆಗಳೇ ಈ ಕೃತಿಯನ್ನು ಅರಗಿಸಿಕೊಳ್ಳಲು ಇರುವ ತೋರುಬೆರಳಾಗಿದೆ. ಅದರ ಜೊತೆಗೇ ಕುಸುಮ ಬಾಲೆಯಂಥ ಕಬ್ಬಿಣದ ಕಡಲೆಯನ್ನೇ ರಂಗಕೃತಿಯನ್ನಾಗಿಸಿದ ಸಿ.ಬಸವಲಿಂಗಯ್ಯನವರು ಮದುಮಗಳನ್ನು ರಂಗಕ್ಕೆ ತಂದಿರುವ ಪರಿಯನ್ನು ಅರಿಯಲೂ ಈ ನಾಟಕವನ್ನು ನೋಡಲೇ ಬೇಕೆಂಬ ಆಸೆಗೆ ನೀರೆರೆಯುತ್ತವೆ. ಮೈಸೂರಿನ ರಂಗಾಯಣದಲ್ಲಿ ಪ್ರದರ್ಶಿತವಾಗುತ್ತಿರುವ ನಾಲ್ಕು ವಿರಾಮಗಳ ಜೊತೆಗೆ ನಾಲ್ಕು ಬೇರೆ ಬೇರೆ ರಂಗಸ್ಥಳಗಳಲ್ಲಿ ಒಂಭತ್ತು ಗಂಟೆಗಳ ದೀರ್ಘ ಪ್ರಯೋಗದ ನಾಟಕ ಇದೆಂಬ ಮಾಧ್ಯಮಗಳ ವರದಿ ಕೂಡ ಸಹಜ ಕುತೂಹಲವನ್ನು ರಂಗಾಸಕ್ತರಲ್ಲೂ, ಸಾಹಿತ್ಯಾಸಕ್ತರಲ್ಲೂ ಹುಟ್ಟುಹಾಕಿಬಿಟ್ಟಿದೆ,
ಕನ್ನಡ ಕಾದಂಬರಿ ಲೋಕದಲ್ಲಿ ಕಳೆದ ನಲವತ್ತಮೂರು ವರ್ಷಗಳಿಂದಲೂ ಆಯಾ ಕಾಲದ ವಿಮರ್ಶಕ ಸೂತ್ರಗಳ ವಿವಿಧ ಮಹಜರುಗಳನ್ನು ಯಶಸ್ವಿಯಾಗಿ ಬೇಧಿಸುತ್ತಲೇ ಓದುಗನಲ್ಲಿ ಹೊಸ ಹೊಸ ಕಾಣ್ಕೆಗಳನ್ನು ಕಾಣಿಸುತ್ತಿರುವ ಮದುಮಗಳನ್ನು ರೂಪಾಂತರಿಸಿ ಮರು ಸೃಷ್ಟಿಸುವುದು ಆಲೋಚಿಸಿದಷ್ಟು ಸುಲಭವಾದ ಕೆಲಸವೇನೂ ಅಲ್ಲ. ಕಾದಂಬರಿಯ ತುಂಬ ತುಂಬಿಕೊಂಡಿರುವ ಒಂದೇ ಎನಿಸಿದರೂ ಹಲವು ಕೊಂಬೆಗಳಾಗಿ ಚಾಚಿಕೊಂಡಿರುವ ಇಲ್ಲಿನ ಕಥಾನಕವನ್ನು ವರ್ತಮಾನದಲ್ಲೂ ಸಾಧುವೆನ್ನಿಸುವಂತೆ ಘಟನಾಕ್ರಮದಲ್ಲಿ ಹೇಳುತ್ತಲೇ ಅದನ್ನು ಪ್ರೇಕ್ಷಕ ಅನುಸರಿಸುವಂತೆ ಮಾಡುವುದಕ್ಕೆ ರೂಪಾಂತರಕಾರರು ಅರ್ಜುನ ಜೋಗಿಗಳನ್ನು ನಂತರ ಸುಡುಗಾಡು ಸಿದ್ಧರನ್ನೂ ಹಾಗೇ ಹೆಳವರನ್ನೂ ಕರೆತಂದಿದ್ದಾರೆ. ಕೊರವಂಜಿಗಳೂ ಮಧ್ಯೆ ಬಂದು ಹೋಗುತ್ತಾರೆ. ಅತಿ ವಿಸ್ತಾರದ ಕತೆಯನ್ನು ಹೀಗೆ ಹೇಳಿಸದೇ ಹೋಗಿದ್ದರೆ ಕಥೆಯ ಕೊಂಡಿ ತಪ್ಪಿಹೋಗಿ, ಕಾದಂಬರಿಯನ್ನು ಓದದೇ ನೇರ ನಾಟಕಕ್ಕೆ ಬಂದ ಪ್ರೇಕ್ಷಕ ಗಲಿಬಿಲಿಗೊಳ್ಳುತ್ತಿದ್ದ. ಯಾವತ್ತೂ ಕಾಡುವ ಕಾಳಿದಾಸನ ಅಭಿಜ್ಞಾನ ಶಾಕುಂತಲದ ಉಂಗುರದಂತೇ ಇಲ್ಲಿ ಕೂಡ ಚುಕ್ಕೆಯುಂಗುರದ ಮೂಲಕ ಕಥೆಯನ್ನು ನಿರೂಪಿಸಹೊರಟಿರುವುದು ರೂಪಾಂತರಕಾರರು ಏಕಕಾಲಕ್ಕೆ, ಉಂಗುರದ ಮೂಲಕ ಕ್ಲಾಸಿಕ್ ಕೃತಿಯನ್ನೂ, ಜೋಗಿ, ಸಿದ್ಧರ ಮೂಲಕ ಜನಪದೀಯ ನಂಬುಗೆಗಳನ್ನೂ ಅನಾವರಣಗೊಳಿಸುತ್ತಲೇ ಹೊಸತೊಂದು ಲೋಕಕ್ಕೆ ನೋಡುಗರನ್ನು ಕರೆದೊಯ್ಯುತ್ತಾರೆ.
ಮೂಲತಃ ಕಾದಂಬರಿಯ ಓದಿನ ಸುಖವನ್ನು ನಾಟಕರೂಪದಲ್ಲೂ ಬಯಸುವುದು ಹಾಗೇ ನಾಟಕವನ್ನು ನೋಡು ನೋಡುತ್ತಲೇ ಅಲ್ಲಿ ಕಾದಂಬರಿಯ ಅಥೆಂಟಿಕೇಷನ್ ಬಗ್ಗೆ ಆಲೋಚಿಸುವುದು ನಾವು ಮಾಡಿಕೊಂಡೇ ಬರುತ್ತಿರುವ ಕೆಲಸವಾಗಿರುವುದರಿಂದಲೋ ಏನೋ ಇಂಥ ಅದ್ಭುತ ಕೆಲಸಗಳಲ್ಲಿ ಕೂಡ ನಮ್ಮ ಅಕೆಡಿಮಿಕ್ ವಿಮರ್ಶಾ ಬುದ್ಧಿ ಎರಡೂ ಸೃಜನಶೀಲ ಚಟುವಟಿಕೆಗಳನ್ನು ಅನುಮಾನಿಸಿ ತನಗೆ ಹಿತವೆನ್ನಿಸಿದ ಮಾಧ್ಯಮಕ್ಕೆ ಜೈ ಎನ್ನುತ್ತಿರುವ ಕಾರಣಕ್ಕೋ ಏನೋ ನಾಟಕವನ್ನು ನೋಡುತ್ತ ಸುಖಿಸುತ್ತಿರುವಾಗಲೂ ಹಗುರಕ್ಕೆ ತೇಲಿ ಬರುತ್ತಲೇ ಇದ್ದ ಪ್ರೇಕ್ಷಕರ ಮಾತುಗಳು ಕಾದಂಬರಿಯನ್ನು ಧೇನಿಸುತ್ತಲೇ ನಾಟಕವನ್ನೂ ಜಾಲಾಡುತ್ತಿದ್ದ ಪರಿ ಮೋಜು ತರುತ್ತಿತ್ತು. ಬೆಂಗಳೂರು ವಿ.ವಿ.ಯ ಕನ್ನಡ ವಿಭಾಗದ ವಿದ್ಯಾರ್ಥಿಗಳ ಮಧ್ಯೆ ನಾನು ಸೇರಿಕೊಂಡಿದ್ದ ಕಾರಣ ಹೊಸ ತಲೆಮಾರಿನ ನೋಡುಗರ ವೀಕ್ಷಕ ವಿವರಣೆ ಕೂಡ ಮಧ್ಯೆ ಮಧ್ಯೆ ದಕ್ಕುತ್ತಿತ್ತು. ಆ ವಿದ್ಯಾರ್ಥಿಗಳಲ್ಲೇ ಕೆಲವರು, ಸರಿಯಾಗಿ ಅಭ್ಯಸಿಸದವರಿಗೆ ಕಥೆಯನ್ನು ಜೋಡಿಸಿಕೊಡುತ್ತಿದ್ದರು. ಜೊತೆಗೇ ನೂರೈವತ್ತಕ್ಕೂ ಹೆಚ್ಚು ಪಾತ್ರಗಳು ಬಂದುಹೋಗುವ ವಿಸ್ತೃತ ಕಥಾಹಂದರವಿರುವ ಕಾರಣ ನಿರ್ದೇಶಕರು ಒಬ್ಬೊಬ್ಬ ನಟನಿಂದಲೇ ಎರಡು ಮೂರು ಪಾತ್ರ ಮಾಡಿಸಿರುವುದರಿಂದ ಕೆಲವೊಮ್ಮೆ ಗೊಂದಲವಾಗುತಿದ್ದುದೂ ಸಹಜವಾಗಿತ್ತು. ಅದರಲ್ಲಂತೂ ಜೋಗಪ್ಪಗಳೇ ಪಾತ್ರಗಳಾಗಿ ಬದಲಾದಾಗಲಂತೂ ಇಡೀ ಪ್ರೇಕ್ಷಕ ಸಮುದಾಯವೇ ಒಂದು ಮ್ಯಾಜಿಕ್ಕಿಗೆ ಒಳಗಾದ ಅನುಭವದಲ್ಲಿತ್ತು.
ಒಟ್ಟು ನಾಲ್ಕು ರಂಗಸಜ್ಜಿಕೆಗಳು. ಒಂದೊಂದರಲ್ಲೂ ಎರಡು ಗಂಟೆಗಳ ಪ್ರದರ್ಶನ. ಪ್ರದರ್ಶನದ ನಡುವಿನ ವಿರಾಮದಲ್ಲಿ ಪ್ರೇಕ್ಷಕನೇ ಬೇರೆಯ ರಂಗಸ್ಥಳಕ್ಕೆ ತನ್ನ ಸ್ಥಳವನ್ನು ತಾನೇ ಬದಲಿಸಿಕೊಂಡು ಬೇರೆಯದೇ ಆದ ರಂಗಸ್ಥಳಕ್ಕೆ ಹೊಂದಿಕೊಳ್ಳಬೇಕಾದ ಪರಿ. ನಿಜಕ್ಕೂ ರಂಗದ ಮೇಲೆಯೇ ಸಿದ್ಧಗೊಂಡ ರಸ್ತೆ, ಮನೆ, ಉಬ್ಬು,ಇಳಿಜಾರು. ಮೇಗರವಳ್ಳಿಯ ಶಾಲೆ, ಬೈಸಿಕಲ್ ಪುರಾಣ ಎಲ್ಲವನ್ನೂ ಎಲ್ಲೂ ಕೊಂಚವೂ ಅತಿ ಎನ್ನಿಸದಷ್ಟು ಸಾವಧಾನವಾಗಿ ಎಳೆ ಎಳೆಯಾಗಿ ರಂಗದ ಮೇಲೆ ತೆರೆಸಿದ ಕಲಾ ನಿರ್ದೇಶಕರ ಕೈ ಚಳಕ,(ಪ್ರಮೋದ ಶಿಗ್ಗಾಂವ್) ನಲವತ್ತಕ್ಕೂ ಹೆಚ್ಚು ಹಾಡುಗಳನ್ನು ಸಹ್ಯವೆನ್ನಿಸುವಂತೆ ರಾಗಸಂಯೋಜಿಸಿರುವ ಸಂಗೀತ ನಿರ್ದೇಶಕ,(ಹಂಸಲೇಖ) ಅದನ್ನು ಬರೆದ ಕವಿ(ಡಾ.ಕೆ.ವೈ.ಎನ್) ಒಬ್ಬಿಬರೇ ಈ ಮದುಮಗಳ ತಯ್ಯಾರಿಯಲ್ಲಿ ಕೈಹಾಕಿದವರು? ಎಲ್ಲರೂ ಒಬ್ಬರಿಗಿಂತ ಮತ್ತೊಬ್ಬರು ತಮ್ಮ ಕೈ ಮೇಲಾಗಿಸಿರುವುದರಿಂದಲೇ ಇಂಥದೊಂದು ಪ್ರಯೋಗ ಕನ್ನಡ ರಂಗಭೂಮಿಗೆ ದಕ್ಕಿದೆ, ಆ ಪ್ರಯತ್ನ ಸಾರ್ಥಕವೂ ಆಗಿದೆ.
ರಾತ್ರಿ ಒಂಭತ್ತರಿಂದ ಮಾರನೇ ಬೆಳಗು ಆರೂಕಾಲರವರೆಗೂ ನಾಟಕವನ್ನು ವೀಕ್ಷಿಸಿ, ವಿರಾಮದ ಬಿಡುವಲ್ಲಿ ಸಿಕ್ಕ ಗೆಳೆಯರೊಂದಿಗೆ ಚರ್ಚಿಸಿ, ಮದುಮಗಳ ಮದುವೆಯ ನಾನೂರಕ್ಕೂ ಹೆಚ್ಚು ಚಿತ್ರಗಳನ್ನು ಸೆರೆಹಿಡಿದ ಗೆಳೆಯ ಶ್ರೀರಾಮ ಜಮದಗ್ನಿಯ ಕೆಲಸಕ್ಕೆ ಸಂಭ್ರಮಿಸಿ, ಅದನ್ನು ಸಿಕ್ಕಸಿಕ್ಕವರಿಗೆ ತೋರಿಸಿ, ಮತ್ಯಾವುದೋ ವೆಬ್ ಪೇಜುಗಳಲ್ಲಿ ಲಿಂಕಿಸಿ ಈ ಲೇಖನವನ್ನು ನೇರ ಕೀಲಿಮಣೆಯಲ್ಲಿ ಟಂಕಿಸುತ್ತಿರುವಾಗಲೂ ಅನುಮಾನದ ಸಣ್ಣದೊಂದು ಎಳೆ. ಕಲೆ ಎಂಬ ಮ್ಯಾಜಿಕ್ಕಿಗೆ ಇಂಥ ಪ್ರಯತ್ನಗಳು ಹೊಸ ರೂಪ ತರುವುದು ಸತ್ಯವಾದರೂ ಒಂಭತ್ತು ಗಂಟೆಗಳ ದೀರ್ಘಾವಧಿಯ ಪ್ರದರ್ಶನಕ್ಕೆ ಹೊಸಕಾಲದ, ಅದರಲ್ಲೂ ಸಾಹಿತ್ಯ, ಸಂಗೀತಗಳ ಮೇಲಣ ಅಭಿರುಚಿಯನ್ನೇ ಕಳಕೊಂಡ ಆಧುನಿಕ ಮನೋಭೂಮಿಕೆಯ ಜನ ಸ್ಪಂದಿಸುತ್ತಾರೆಯೇ? ಹಾಗೆ ಸ್ಪಂದಿಸುವ ಗುಣವನ್ನೇ ಕಳಕೊಂಡ ವರ್ತಮಾನಕ್ಕೆ ಇಂಥೆಲ್ಲ ಪ್ರಯತ್ನಗಳೂ ಹೊಳೆಯಲ್ಲಿ ತೇಲಿಬಿಟ್ಟ ಹುಣಿಸೆಯಲ್ಲವೇ?- ಅನ್ನುವ ಅನುಮಾನಗಳೆದ್ದರೂ ಮತ್ತೆ ಮತ್ತೆ ಮಲೆನಾಡಿನ ರಮ್ಯ ಪರಿಸರಕ್ಕೊಯ್ಯುವ ಕಾದಂಬರಿಯನ್ನು ರಂಗರೂಪಕ್ಕೆ ತಂದವರ ಅಪ್ರತಿಮ ಸಾಮರ್ಥ್ಯವನ್ನು ನಾಟಕ ನೋಡಿದವರೆಲ್ಲ ಅನುಭವಿಸಿಯೇ ಅನುಭವಿಸುತ್ತಾರೆನ್ನುವುದು ಮಾತ್ರ ಅಪ್ಪಟ ಸತ್ಯ.
ನಾಟಕವು ಪ್ರಾರಂಭವಾಗುವ ರಂಗಸ್ಥಳವಂತೂ ಒಟ್ಟೊಟ್ಟಿಗೆ ನಾಲ್ಕೈದು ಪಾತ್ರಗಳು ಬೇರೆ ಬೇರೆ ಕಡೆ ಚಲಿಸಬಹುದಾದಷ್ಟು ವಿಶಾಲವಾಗಿರುವುದರಿಂದ ಪಾದರಿ ಜೀವರತ್ನಯ್ಯನ ಬೀಸೋಕಲ್ಲು ಸವಾರಿಯ ಮಜದೊಟ್ಟಿಗೇ, ಹಂದಿ ಶಿಕಾರಿಯ ಕೋಲಾಹಲವನ್ನು ಇನ್ನಿಲ್ಲದಂತೆ ಪ್ರೇಕ್ಷಕನ ಮನಸ್ಸಿನೊಳಕ್ಕೆ ಬಿತ್ತಿಬಿಡುತ್ತದೆ. ಮೊದಲ ವಿರಾಮದವರೆಗೂ ಅಂದರೆ ಮೊದಲ ರಂಗಸ್ಥಳದ ಆಟದವರೆಗೂ ಅತ್ಯಂತ ವೇಗವಾಗಿ ಮತ್ತು ಸಹಜವಾಗಿ ಬಿಚ್ಚಿಕೊಳ್ಳುತ್ತ ಹೋಗುವ ನಾಟಕ ಎರಡನೇಯ ರಂಗಸ್ಥಳದಲ್ಲಿ ಹಂದಿಯೂಟದ ನಂತರ ನಾಗಿಯನ್ನು ವೆಂಕಟಣ್ಣ ಕೂಡುವ ಪ್ಲಾಷ್ ಬ್ಯಾಕ್‌ನಲ್ಲಿ ಸಮ್ಮೋಹನಗೊಳಿಸಿ, ತಿಮ್ಮಿ ಮನೆ ಬಿಟ್ಟು ಹೋದ ಕಾರಣಕ್ಕೆ ಅವಳ ತಾಯಿಯ ಮೇಲೆ ಬರುವ ದೈವದ ಚಿತ್ರಣವಂತೂ ಸೆಲ್ಯುಲಾಯಿಡ್ ಮಾಧ್ಯಮಕ್ಕಿಂತಲೂ ಶಕ್ತಿಶಾಲಿಯಾಗಿ ಮೂಡಿಬರುತ್ತದೆ. ಆದರೆ ನಂತರ ಡ್ರಾಗ್ ಆಗುವ ನಿರೂಪಣೆ ಮೂರನೆಯ ರಂಗಮಂಚದ ಪೂರಾ ಬೋರ್ ಹೊಡೆಸುವಷ್ಟು ಅಶಕ್ತವಾಗಿದೆ. ಮತ್ತು ಕಾವೇರಿಯ ಸಾವು ಹಾಗೂ ದೊಡ್ಡಣ್ಣಹೆಗಡೆಯ ಸಾವಿನ ಸೂತಕ ಇಡೀ ನಾಟಕಕ್ಕೇ ಆವರಿಸುವುದರಿಂದಲೋ ಏನೋ ಅದೂ ಬೆಳಗಿನ ಝಾವದ ಸಮಯ ಅಲ್ಲೊಬ್ಬರು ಇಲ್ಲೊಬ್ಬರು ತೂಕಡಿಸುತ್ತಿರುವಾಗ ನಾಟಕ ನಾಲ್ಕನೆಯ ಕಡೆಯ ರಂಗಸ್ಥಳಕ್ಕೆ ಬದಲಾಗುತ್ತದೆ. ಚಿನ್ನಮ್ಮನನ್ನು ಓಡಿಸಿಕೊಂಡು ಹೋಗುವ ಪೀಂಚಲು ತಿಮ್ಮಿ-ಗುತ್ತಿಗಳು ಹಿಂದೆ ತಂಗಿದ್ದ ಕೋಡುಗಲ್ಲಿನಲ್ಲೇ ಮುಕುಂದಯ್ಯನನ್ನೂ ಚಿನ್ನಮ್ಮರನ್ನೂ ಒಂದಾಗಿಸುತ್ತಾಳೆ. ಈ ಐದನೆಯ ರಂಗಸ್ಥಳ ಕೂಡ ಮೊದಲ ರಂಗಸ್ಥಳದ ಹಾಗೇ ವಿಶಾಲವಾಗಿದ್ದು ಮದುವೆ ಮನೆಯ ಜೊತೆಜೊತೆಗೇ ಕೋಡುಗಲ್ಲು ಬಂಡೆಯನ್ನೂ ಹಾಗೇ ಗುತ್ತಿ ನದಿ ದಾಟುವಾಗ ಅವನ ನಾಯಿ ಸಾಯುವದನ್ನೂ ನಾಟಕದ ಕಡೆಯ ದೃಶ್ಯಗಳನ್ನೂ ಉಣಬಡಿಸುತ್ತದೆ. ಇನ್ನೇನು ಮುಗಿಯಿತೆಂದು ಪ್ರೇಕ್ಷಕ ಚಪ್ಪಾಳೆ ತಟ್ಟಿದರೂ ಮುಂದುವರೆಯುವ ನಾಟಕ ದೇವಯ್ಯನ ಮತಾಂತರವನ್ನು ಭಗ್ನಗೊಳಿಸುವ ಮುಕುಂದಯ್ಯನ ನಂತರವೂ ಮುಂದುವರೆದು ಮತ್ತೆ ಜೋಗಯ್ಯಗಳು ಪ್ರವೇಶಿಸಿ ಉಂಗುರವನ್ನು ಮಂಜುನಾಥನ ಸನ್ನಿಧಿಗೆ ಅರ್ಪಿಸುವ ಮೂಲಕ ಮುಕ್ತಾಯವಾಗುತ್ತದೆ.
ಇಡೀ ನಾಟಕವನ್ನು ಸುಡುಗಾಡು ಸಿದ್ಧರು, ಕೊರವಂಜಿಗಳೂ, ಜೋಗಪ್ಪಗಳೂ ನೆರೇಟ್ ಮಾಡುವ ರೀತಿ ಸೊಗಸಾಗಿ ಬಂದಿದೆ. ಎಲ್ಲೆಲ್ಲಿ ನಾಟಕ ಎಳೆಯುಲ್ಪಟ್ಟಿದೆ ಅನ್ನಿಸುತ್ತದೋ ಅಲ್ಲೆಲ್ಲ ಇವರಿಲ್ಲದಿರುವುದೂ, ಪ್ರಾಯಶಃ ನಾಟಕದ ಪ್ರಸ್ತುತಿಗೆ ಈ ಪಾತ್ರಗಳ ಪೋಷಣೆಯ ಹೊಣೆ ಹೊತ್ತವರೇ ಉತ್ತರ ಹೇಳಬೇಕು. ಕತೆಯ ಎಳೆಗಳಲ್ಲಿ ಬರುವ ಸಾಬರ ಪಾತ್ರಗಳು, ಅವರ ಕುದುರೆ ಮೂಲಕ್ಕಿಂತ ಭಿನ್ನವಾಗಿ ಹಾಸ್ಯದ ಸ್ವರೂಪ ಪಡೆದಿವೆ. ಗುತ್ತಿ ಕಾದಂಬರಿಯಲ್ಲಿ ನಾಯಕನಾದರೆ ಸುಬ್ಬಣ್ಣ ಹೆಗಡೆಯೇ ನಾಟಕದ ತುಂಬ ತುಂಬಿಕೊಳ್ಳುತ್ತಾನೆ. ಪಾದರಿ ಜೀವರತ್ನಯ್ಯ, ನಾಯಿ ಗುತ್ತಿ, ಕುಂಟ ವೆಂಕಟಣ್ಣರ ಪಾತ್ರಧಾರಿಗಳು ಹಲಕಾಲ ನೆನಪಲ್ಲುಳಿಯುತ್ತಾರೆ. ಕಾದಂಬರಿಯ ಮೂಲ ಸ್ವರೂಪವನ್ನು ತಮಗೆ ಬೇಕಾದಂತೆ ತಿರುಚದ ನಿರ್ದೇಶಕರು ಅದರ ವಿವರವನ್ನು ಈ ದೀರ್ಘ ಅವಧಿಯ ನಾಟಕದ ತುಂಬ ಶ್ರಮಪಟ್ಟು ಹಿಡಿದಿರುವ ಅನೇಕ ಕುರುಹುಗಳು ನಾಟಕದುದ್ದಕ್ಕೂ ಸಿಗುತ್ತವೆ. ಅವರೇ ತಮ್ಮದೊಂದು ಸಂದರ್ಶನದಲ್ಲಿ ಹೇಳಿಕೊಂಡಂತೆ ಪುನಃ ಕು.ವೆಂ.ಪು ಅವರನ್ನು ಓದಿಸತೊಡಗುವ ಲಕ್ಷಣಗಳಂತೂ ಇವೆ, ಅವರು ತಮ್ಮ ಈ ಯತ್ನದಲ್ಲಿ ಯಶಸ್ವಿಯೂ ಆಗಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ