ಬೆಂಕಿ ಕಡ್ಡಿ- ಬೆಳಕು,ಶಾಖ ಮತ್ತು ಉರಿಯ ಚಿಕ್ಕತುಂಡು.ನಾವೆಲ್ಲರೂ ಈ ಲೌಕಿಕದ ಬೆಂಕಿಯಲ್ಲಿ ಬೇಯುತ್ತಲೇ ಮತ್ತೊಂದು ಬೆಳಕು, ಶಾಖ ಮತ್ತು ಉರಿಯನ್ನು ಸೃಜಿಸುತ್ತಿರುವವರು.ಅದಕ್ಕೆಂದೇ ಈ ಬರಹಗಳ ಶೀರ್ಷಿಕೆ "ಬೆಂಕಿಕಡ್ಡಿ". ಈಗಾಗಲೇ ಪ್ರಕಟಿಸಿರುವ ಸಂಕಲನಗಳಿಂದ ಮತ್ತು ಹೊಸ ಪದ್ಯ ಹಾಗೇ ಆಕಾಶವಾಣಿಯ ಚಿಂತನಕ್ಕೆ ಬರೆದ ಲೇಖನಗಳನ್ನೂ ಸೇರಿಸುವ ಇರಾದೆ ಈ ಬ್ಲಾಗಿಗನಿಗೆ.
ಒಟ್ಟು ಪುಟವೀಕ್ಷಣೆಗಳು
ಸೋಮವಾರ, ಜುಲೈ 30, 2012
ತೆಂಗಿನ ಗೆರಟೆಯ ಪಿಟೀಲು
ನನ್ನ ಬದುಕಿನಿಂದ ಅಂತರ್ಧಾನನಾಗಿ ಇಪ್ಪತ್ತು ವರ್ಷಗಳ ನಂತರ ಅರಸೀಕೆರೆಯ ಸಂತೆಯಲ್ಲಿ ಮತ್ತೆ ಪ್ರತ್ಯಕ್ಷನಾಗಿ ದರ್ಶನ ನೀಡಿದ ಬಾಲ್ಯದ ಗೆಳೆಯ ಅಲ್ಲಲ್ಲ ಸಖನಾಗಿದ್ದ ಚಂದ್ರನನ್ನು ಕುರಿತೇ ಹೇಳ ಹೊರಟಿದ್ದೇನೆ. ಅವನ ಪೂರ್ಣ ಹೆಸರು ಚಂದ್ರಶೇಖರ ಶಾಸ್ತ್ರಿ. ಓದು ತಲೆಗೆ ಹತ್ತದೇ, ಹಾಗೇ ಆರಂಭದ ಕೆಲಸಗಳನ್ನೂ ಒಪ್ಪವಾಗಿ ಮಾಡದೇ ಬರಿಯ ಹಡಬೆ ತಿರುಗಾಟದಲ್ಲೇ ಯೌವನವನ್ನು ಕಳೆದುಕೊಂಡರೂ ನನ್ನಂಥ ಹತ್ತು ಹಲವರ ಯೌವನ ಕಾಲದ ಗುರುವಾಗಿ, ಆಪ್ತನಾಗಿ, ಸಖನಾಗಿ ಒದಗಿದ ಚಂದ್ರನದು ಹಾಗೆಲ್ಲ ಯಾರೂ ಮರೆಯಲು ಸಾಧ್ಯವಿಲ್ಲದ ವ್ಯಕ್ತಿತ್ವ. ಹಣೆಯಗಲಕ್ಕೂ ವಿಭೂತಿ ಬಳಿದುಕೊಂಡು, ಚಪ್ಪಲಿಯಿಲ್ಲದ ಕಾಲುಗಳನ್ನು ಅಡ್ಡಡ್ಡ ಎಳೆದುಹಾಕುತ್ತ, ಕೀಚುಗಟ್ಟಿದ ಹಲ್ಲುಗಳನ್ನು ಊರಗಲಕ್ಕೆ ಅರಳಿಸುತ್ತ ನನ್ನತ್ತ ನೋಡಿ ಸಂಭ್ರಮ ಪಡುತ್ತ - ಸಂತೆಯ ಜನನಿಬಿಡತೆಯಲ್ಲೂ ಕಿಂಚಿತ್ತೂ ಗಲಿಬಿಲಿಗೊಳ್ಳದೇ ಸಾಬರ ಈರುಳ್ಳಿ ರಾಶಿಗೆ ಬಾಯಿ ಹಾಕಿ, ಅವರಿಂದ ಮರ್ದನಕ್ಕೊಳಗಾಗಿ ದಾರಿಗೆ ನುಗ್ಗಿದ ಬೀಡಾಡಿ ದನಕ್ಕೆ ಢೀ ಕೊಟ್ಟು, ಅದರ ಮೊಂಡು ಕೊಂಬಿನಿಂದ ತನ್ನ ತಿಕಕ್ಕೆ ಹಾಯಿಸಿಕೊಂಡೂ, ಏನೂ ಆಗದವನಂತೆ, ಪಂಚೆ ಮೇಲೆತ್ತಿ ಕಟ್ಟಿಕೊಂಡು - ಅಶೋಕ ವನದಲ್ಲಿ ಸೀತಾಮಾತೆಯೆದುರು ನಿಂತ ಆಂಜನೇಯನಂತೆ ನಿಂತ ಚಂದ್ರನನ್ನು ಕಂಡ ನಾನು ಅವನೇ ಹೌದೋ ಅಲ್ಲವೋ ಎಂದು ಸಂಶಯ ಪಡುತ್ತಿರುವಾಗಲೇ, ಅವನೇ “ಓಹೋ, ಮ್ಯಾನೇಜರು ಸಾಹೇಬರ ಸವಾರಿ ಹುಟ್ಟಿದ ಊರಿನತ್ತ ಚಿತ್ತೈಸಿದೆ. ಕಾರಣ ತಿಳಿಯಲಿಲ್ಲ. ಈ ಪರಿಚಾರಕನ ಗುರುತು ಹತ್ತಿತೋ?” ಅಂತ ನಾಟಕೀಯವಾಗಿ ಕೇಳಿದ. ನೆತ್ತಿಯ ಕೂದಲಷ್ಟೂ ಉದುರಿ ಬೋಳಾದ, ಹೋತದ ಗಡ್ಡದ ನನ್ನನ್ನು ಅವನು ಗುರುತಿಸಿ ಮಾತನಾಡಿಸಿದ್ದು ಬಿಸಿಲದಾರಿಯಲ್ಲಿ ಕಂಡ ಮರದ ನೆರಳಿನಂತೆ ನನಗೆ ತೋರಿತು.
“ಗುರುತು ಹತ್ತದೇ ಉಂಟೇ? ಗುರುಗಳಲ್ಲದೇ ಬೇರಾರನ್ನು ತಾನೇ ಶಿಷ್ಯ ಅನುಸರಿಸಲು ಸಾಧ್ಯ?” ಅಂತ ನಾನೂ ಉತ್ತರಿಸಿದೆ. ದೇಶಾವರಿ ನಗೆ ಹೊಮ್ಮಿಸಿ, ನಶ್ಯವನ್ನೇರಿಸಿಕೊಂಡವನೇ “ನಡಿ ಮಾರಾಯ. ಮನೆಗೆ ಹೋಗೋಣ” ಅಂತ ವರಾತ ತೆಗೆದ. ಅವನ ಹೆಗಲ ಮೇಲಿದ್ದ ಕೈಚೀಲ ಗಮನಿಸಿದೆ. ಸಂತೆಯ ತುಂಬ ಓಡಾಡಿ ಚೀಲದ ಕಂಠದ ತನಕ ತುಂಬಿಸಿದ್ದ ಹೀರೆ, ಬೆಂಡೆ, ಹಾಗಲ, ಸೌತೆ, ಬಾಳೆಕಾಯಿಗಳು ಕಂಡವು. ಎಡಗೈಯಲ್ಲಿ ಬಾಳೆ ಎಲೆಯ ಕಟ್ಟಿನೊಟ್ಟಿಗೇ ಒಣದೊನ್ನೆಯ ಕಟ್ಟನ್ನೂ ಹಿಡಿದಿದ್ದ. ಇಂಗ್ಳಿಷ್ ತರಕಾರಿಗಳೊಂದನ್ನೂ ಕೊಳ್ಳದೇ ಜೊತೆಗೆ ಬಾಳೆಲೆ, ದೊನ್ನೆ ಹಿಡಿದಿದ್ದಾನೆಂದರೆ ನಾಳೆಯೋ ನಾಳಿದ್ದೋ ಅವನ ಮನೆಯಲ್ಲಿ ಯಾರದೋ ಶ್ರಾದ್ಧವಿರಬೇಕೆಂದು ಊಹಿಸಿದೆ. ಬಾಯಿ ಬಿಟ್ಟು ಕೇಳುವುದು ಹೇಗೆಂದು ನಾನು ತಿಣುಕುತ್ತಿರುವಾಗ, ಅವನೇ “ಇದೆಲ್ಲ ನನ್ನ ಹೊಸ ಉದ್ಯೋಗದ ಬಂಡವಾಳ ಮಾರಾಯ. ಟೆನೆನ್ಸಿಯಲ್ಲಿ ಜಮೀನು ಕಳಕೊಂಡು ಬರ್ಬಾದಾಗಿದ್ದ ನಮ್ಮ ಅಪ್ಪ, ಮನೆಯ ಹಿತ್ತಿಲಿಗೇ ಅಂಟಿದಂತಿದ್ದ ಅರ್ಧ ಎಕರೆ ತೆಂಗಿನ ತೋಟದ ಉತ್ಪನ್ನದ ಜೊತೆಗೆ ಅಪರದ ಮಂತ್ರ ಹೇಳಿಕೊಂಡು ಹೇಗೋ ಜೀವನ ಸಾಗಿಸಿದ್ದು ನಿಂಗೂ ಗೊತ್ತು. ನಾನು ಮನೆವಾರ್ತೆ ವಹಿಸಿಕೊಂಡ ಕಾಲಕ್ಕೆ ಇದ್ದ ಇಪ್ಪತ್ತು ತೆಂಗಿನ ಮರದ ಪೈಕಿ ಹದಿನೈದಕ್ಕೆ ನುಸಿ ರೋಗ ತಾಗಿ ತೋಟ ನಾಶವಾಗಿ ಹೋಯ್ತು. ಊರ ಮುಂದಿನ ಆಂಜನೇಯನ ಪೂಜೆ ವಂಶಪಾರಂಪರ್ಯವಾಗಿ ನಮಗುಳಿದದ್ದು ನಿನಗೆ ಗೊತ್ತಲ್ಲ? ಇದ್ದ ಬದ್ದವರೆಲ್ಲ ಹಳ್ಳಿ ಬಿಟ್ಟು ನಗರ ಸೇರುತ್ತಿರುವಾಗ ನಮ್ಮ ಹನುಮಪ್ಪನಿಗೆ ಉಳಿದಿರೋದು ಹಗ್ಗ ಮಾತ್ರ, ನನಗೆಲ್ಲಿಂದ ಶ್ಯಾವಿಗೆ ಹುಟ್ಟಬೇಕು? ಅದಕ್ಕೇ ಈಗ ಮನೆಯಲ್ಲೇ ಪಿತ್ರಾರ್ಜಿತದ ಅಪರ ಮಂತ್ರವನ್ನೇ ಹೇಳಿಕೊಂಡು ಅವರಿವರ ತಿಥಿಗಿಥಿ ಮಾಡಿಸುವ ಕೆಲಸ ಶುರುವಿಟ್ಟುಕೊಂಡಿದ್ದೇನೆ. ಮಾಡುವವರಿಗೆ ಕರ್ತವ್ಯ ತೀರಿದ ಸಮಾಧಾನ. ನನಗೆ ಹೊತ್ತಿನ ಊಟಕ್ಕೆ ದಾರಿ” ಉಸಿರು ನಿಲ್ಲಿಸದೇ ಅವನು ಪ್ರವರ ಬಿಡಿಸಿಟ್ಟ. “ನಡಿ, ನಡಿ, ಅಪರೂಪಕ್ಕೆ ಸಿಕ್ಕಿದ್ದೀಯ. ಅಯೋಧ್ಯೆ ಹೋಟೆಲ್ಲಿನಲ್ಲಿ ಮಸಾಲೆ ದೋಸೆ ತಿನ್ನಿಸುವೆಯಂತೆ” ಅವಸರಿಸಿದ.
ಸಾಯಿನಾಥ ರಸ್ತೆಯುದ್ದಕ್ಕೂ ಹರಡಿದ ದೋಸೆಯ ಘಮಕ್ಕೆ ಬೆರಗಾಗುತ್ತ ಹೋಟೆಲ್ಲಿನೊಳಕ್ಕೆ ಕಾಲಿಟ್ಟೆ. “ಓ, ಅಪರೂಪಕ್ಕೆ ಕಂಡಂತಾಯ್ತು. ನಾಳೆ ನಿಮ್ಮ ತಂದೆಯವರ ಶ್ರಾದ್ಧ ಅಂತ ನಿಮ್ಮ ತಮ್ಮ ಶ್ರೀಕಂಠ ಬೆಳಗ್ಗೆಯೇ ಬಾಳೆಲೆ ಕೊಂಡುಹೋದರಲ್ಲ. ಅಂತೂ ಚಂದ್ರಣ್ಣನವರಿಗೆ ಈವತ್ತು ನಿಮ್ಮಿಂದ ದೋಸೆಯ ಸೇವೆ” ಹೋಟೆಲ್ ಓನರ್ ಶ್ರೀಧರ ನಗುತ್ತ ಮಾತನಾಡಿಸಿದಾಗ ಚಂದ್ರನಿಗೆ ನಾನು ಊರಿಗೆ ಬಂದ ಕಾರಣ ಹೊಳೆಯಿತು. “ಆಗೀಗ ಊರಿಗೆ ಬರುತ್ತಿರುತ್ತೇನೆ. ಆದ್ರೆ ಪೇಟೆ ಗೀಟೆ ತಿರುಗುವಷ್ಟು ಪುರುಸೊತ್ತಿರುಲ್ಲ ಎಲ್ಲ ಸೌಖ್ಯವಾ?” ಸಂಕ್ಷಿಪ್ತವಾಗಿ ಉತ್ತರಿಸಿದೆ. “ಏನು ಸೌಖ್ಯವೋ, ಏನೋ? ತೆಂಗಿಗೆ ಬೆಲೆ ಇಲ್ಲ. ಮೇಲಾಗಿ ನುಸಿ ರೋಗ ಬೇರೆ. ಅಪ್ಪನ ಕಾಲದ ವ್ಯಾಪಾರ ಅಂತ ನಡೆಸಿಕೊಂಡುಹೋಗುತ್ತಿದ್ದೇನೆ. ಇಲ್ಲೆಲ್ಲ ಬರೀ ಉದ್ದರಿಯ ವ್ಯಾಪಾರ. ಹಿಡಿಯುವಂತಿಲ್ಲ, ಬಿಡುವಂತಿಲ್ಲ. ನಾನೂ ನಿಮ್ಮಂತೆಯೇ ಓದಿ ಕೆಲಸ ಗಿಲಸಕ್ಕೆ ಸೇರಿದ್ದರೆ ಈ ಎಂಜಲು ಎತ್ತುವ ಪಡಿಪಾಟಲು ಇರುತ್ತಿರಲಿಲ್ಲ.” ಗಿಜಿಗುಡುತ್ತಿದ್ದ ಹೋಟೆಲ್ಲಿನಲ್ಲಿ ಜನ ಕುರ್ಚಿ ಸಿಕ್ಕದೇ ಕಾಯುತ್ತಿರುವಾಗಲೂ ಶ್ರೀಧರ ಹೇಳುತ್ತಿರುವುದು ಸುಳ್ಳೋ ನಿಜವೋ ಗೊತ್ತಾಗದೇ ಚಂದ್ರ ಅದಾಗಲೇ ರಿಸರ್ವ್ ಮಾಡಿಕೊಂಡಿದ್ದ ಟೇಬಲ್ಲಿನ ಮುಂದೆ ಕೂತೆ. ಆರ್ಡರು ತೆಗೆದುಕೊಳ್ಳಲು ಬಂದ ಮಾಣಿ ಚಂದ್ರನ ಮುಖ ನೋಡುತ್ತಲೇ “ಸ್ಪೆಷಲ್ ಮಸಾಲೆ” ಅಂತ ಕೂಗಿದ. ಚಂದ್ರ ನನ್ನತ್ತ ಬೆರಳು ತೋರಿಸಿದ ಕೂಡಲೇ “ಸ್ಪೆಷಲ್ ಮಸಾಲೆ ಎರಡು” ಅಂತ ಮತ್ತೊಮ್ಮೆ ಕೂಗಿದ. ಈರುಳ್ಳಿ ಆಲೂಗಡ್ಡೆ ಪಲ್ಯದ ಘಮದ ಜೊತೆ ಬೆಣ್ಣೆಯಿಂದ ಅಲಂಕೃತವಾಗಿ ಗಟ್ಟಿ ಚಟ್ಣಿಯೊಂದಿಗೆ ಬಂದ ದೋಸೆಯ ತಟ್ಟೆ ತಕ್ಷಣ ಮುಂದೆಳೆದುಕೊಂಡ ಚಂದ್ರ ನಾನು ಜೊತೆಗಿರುವುದನ್ನೂ ಮರೆತವನಂತೆ ದೋಸೆಯ ಆಸ್ವಾದದಲ್ಲಿ ಮುಳುಗಿ ಹೋದ. ತಿಂಡಿ ಮುಗಿಸಿ ಕಾಫಿ ಕುಡಿದು ಬಿಲ್ ಕೊಡಲು ಹೋದರೆ “ಎಲ್ಲಾದರೂ ಉಂಟೆ? ನೀವು ಆವತ್ತು ಬ್ಯಾಂಕಿನಿಂದ ಸಾಲ ಕೊಡಿಸದೇ ಹೋಗಿದ್ದಿದ್ದರೆ ನಮ್ಮಪ್ಪ ನೇಣುಗಟ್ಟಿಕೊಳ್ಳುತ್ತಿದ್ದರು. ಅವರು ಬದುಕಿರುವವರೆಗೂ ನಿಮ್ಮನ್ನು ನೆನೆಯುತ್ತಲೇ ಇದ್ದರು. ನೀವು ನೀರೆರದ ಸಸಿ ಈಗ ಇಷ್ಟು ದೊಡ್ಡದಾಗಿ ಬೆಳೆದು ತಾಲ್ಲೂಕಿಗೇ ಹೆಸರುವಾಸಿಯಾಗಿದೆ” ಶ್ರೀಧರ ಬಿಲ್ ತೆಗೆದುಕೊಳ್ಳದೇ ಕೃತಜ್ಞತೆಯ ಮಾತಾಡಿದ. ‘ನಾಳೆಯ ತಿಂಡಿಗೆ ಯಾರನ್ನು ಹಿಡಿಯುತ್ತಾರೋ ಶಾಸ್ತ್ರಿಗಳು.. .. .. ನನ್ನ ಐದು ಲಕ್ಷದ ಓಡಿ ಅರ್ಜಿ ನಿಮ್ಮ ಬ್ಯಾಂಕಿನ ಹೆಡ್ಡಾಫೀಸಿನಲ್ಲಿದೆಯಂತೆ. ಒಂಚೂರು ಹೇಳುತ್ತೀರಾ’ ಶ್ರೀಧರನ ಮಾತು ಮುಗಿದು ನಾನು ಮುಜುಗರದಿಂದ ಹೊರಕ್ಕೆ ಬರುವಷ್ಟರಲ್ಲಿ ಎದಿರು ಸಿಕ್ಕವರೊಂದಿಗೆ ಲೋಕಾಭಿರಾಮದ ಮಾತಲ್ಲಿ ಚಂದ್ರ ಮುಳುಗಿ ಹೋಗಿದ್ದ. ಯಾರು ಏನು ಹೇಳಿದರೂ ತನಗೆ ಹೊಳೆದದ್ದನ್ನೇ ಮಾಡುತ್ತ ಅದನ್ನೇ ಸಾಧಿಸುತ್ತ ಬಂದಿರುವ ಚಂದ್ರ ಹಾಗೆಲ್ಲ ಮುಜುಗರಕ್ಕೆ ಈಡಾಗುವವನಲ್ಲವೇ ಅಲ್ಲ ಅಂತ ಮತ್ತೆ ಶೃತವಾಯಿತು.
ರಥಬೀದಿಯಲ್ಲಿ ನಡೆಯ ತೊಡಗಿದೆವು. ದಾರಿಯಲ್ಲಿ ಸಿಕ್ಕವರೊಂದಿಗೆ ಅದೂ ಇದೂ ಮಾತಾಡುತ್ತ, ಹಾಗೆ ಸಿಕ್ಕವರಿಗೆ ನನ್ನ ಪ್ರವರ ಬಿಚ್ಚಿಡುತ್ತ ಅವನು ಎಂದಿನಂತೆ ಕಾಲುಗಳನ್ನು ಎಳೆದು ಹಾಕುತ್ತ ನಡೆಯತೊಡಗಿದ. ಬಾಯಿ ಜ್ವರ ಬಂದ ಜಾನುವಾರಿಗೆ ಏನು ಔಷಧ ಕೊಡಬೇಕು, ಗಬ್ಬ ಹಿಡಿಯದ ಎಮ್ಮೆಗೆ ಸರ್ಕಾರೀ ಪಶು ಆಸ್ಪತ್ರೆಯಲ್ಲಿ ಏಕೆ ಕೃತಕ ಗರ್ಭ ಧಾರಣೆ ಮಾಡಿಸಬೇಕು, ಲಂಚ ತಿನ್ನುವ ತಾಲ್ಲೂಕಾಫೀಸು ಕ್ಲಾರ್ಕಿಗೆ ಹೇಗೆ ಲೋಕಾಯುಕ್ತಕ್ಕೆ ಸಿಕ್ಕಿಸಬೇಕು ಎಂಬೆಲ್ಲ ವಿವರಣೆಗಳನ್ನು ಅವನು ಭೆಟ್ಟಿಯಾದ ಜನರಿಗೆ ಉಚಿತವಾಗಿ ತಿಳಿಸಿಹೇಳುತ್ತ ನಶ್ಯ ಏರಿಸುತ್ತ ಸಾಗುತ್ತಿರುವ ಈ ವಿಶ್ವಾಮಿತ್ರ ಮಹರ್ಷಿಯ ಜೊತೆಗೆ ನಾನು. ಇಪ್ಪತ್ತು ವರ್ಷಗಳಿಂದ ಇದ್ದ ಹಾಗೇ ಇರುವ ಕೊಂಚವೂ ಬದಲಾಗದಿರುವ ಬೀದಿಯಲ್ಲಿ ಯಾವತ್ತಿಗೂ ಬದಲಾಗದ ಅವನ ಮೆರವಣಿಗೆಗೆ ನಾನು ಗರುಡ ದೀಪವಾಗಿ ಹೆಜ್ಜೆ ಹಾಕಿದೆ. ಮೊದಲಿಂದಲೂ ಅವನು ಹೀಗೇ ಬಡಾಯಿಯವನು. ದೇಶದಲ್ಲಿ ಎಮರ್ಜೆನ್ಸಿ ಜಾರಿಯಾಗಿದ್ದಾಗ, ಅಂದರೆ ನಾವಾಗ ಹೈಸ್ಕೂಲು ಓದುತ್ತಿದ್ದಾಗ, ಈ ಮಹರಾಯ ಬೆಳ್ಳಂಬೆಳಗ್ಗೆ ಪ್ರಭಾತ್ ಶಾಖೆಗೆ ಹೋಗಿ ದೇಶಭಕ್ತಿಯ ಬಗ್ಗೆ ಅವರ್ಯಾರೋ ಹೇಳಿಕೊಟ್ಟದ್ದನ್ನೆಲ್ಲ ನಮಗೆಲ್ಲ ಕರ್ಣಾಕರ್ಣಿಕೆ ಮಾಡಿ ಪೋಲೀಸರ ವಿರುದ್ಧ, ಸರ್ಕಾರದ ವಿರುದ್ಧ ಮಾತಾನಾಡುತ್ತ ನಮಗೆಲ್ಲ ಏನೋ ಕಿಚ್ಚು ಹಚ್ಚಿ ಬಿಡುತ್ತಿದ್ದ. ಕ್ಲಾಸಿಗೆ ಚಕ್ಕರು ಹಾಕಿ ಕೆರೆಯಲ್ಲಿ ಈಜುವುದನ್ನೂ, ಅಂಗಡಿ ಸಾಮಾನು ತರಲು ಕೊಟ್ಟ ದುಡ್ಡಿಗೆ ಸುಳ್ಳು ಲೆಕ್ಕ ಒಪ್ಪಿಸಿ ಮಾರ್ನಿಂಗ್ ಶೋನಲ್ಲಿ ಮಲೆಯಾಳೀ ಸಿನಿಮಾ ನೋಡುವುದನ್ನೂ, ಕದ್ದು ಮುಚ್ಚಿ ಬೀಡಿ ಸೇದುವುದನ್ನೂ ಕಲಿಸಿಬಿಟ್ಟ. ಅಪ್ಪ ಅಮ್ಮ ಹೇಳಿದ್ದು ಕೇಳದೇ ನಮಗಿಷ್ಟ ಬಂದದ್ದನ್ನು ಮಾಡುವಂತೆ ತಾಕೀತು ಮಾಡುತ್ತಿದ್ದ. ಸರ್ಕಾರ ಸದಾ ಗುಮಾನಿ ಪಡುತ್ತಿದ್ದ ತಾಲ್ಲೂಕಿನ ಅದೆಷ್ಟೋ ಸಮಾಜವಾದಿ ನಾಯಕರುಗಳಿಗೆ ಕದ್ದು ಮುಚ್ಚಿ ಸರ್ಕಾರದ ವಿರುದ್ಧದ ಸಾಹಿತ್ಯವನ್ನು ತಲುಪಿಸಲು ನಮ್ಮನ್ನೂ ಬಳಸಿಕೊಳ್ಳುತ್ತಿದ್ದ. ನಮ್ಮ ಕಲ್ಯಾಣ ಗುಣಗಳನ್ನೆಲ್ಲ ಸರ್ಕಾರೀ ನೌಕರಿಯಲ್ಲಿದ್ದ ಅಪ್ಪ ಸರಿಯಾಗಿ ಅರ್ಥ ಮಾಡಿಕೊಂಡು ಇವನ ಸಹವಾಸದಲ್ಲಿ ನಾನು ಕೆಡಬಹುದೆಂದು ಹೆದರಿ ಪಿಯುಸಿಗೆ ನನ್ನನ್ನು ಶಿವಮೊಗ್ಗೆಗೆ ಕಳಿಸಿಬಿಟ್ಟರು, ಅಲ್ಲಿಂದಾಚೆಗೆ ನಾನು ಊರಿಗೆ ಬರುವುದೇ ಅಪರೂಪವಾಗಿ ಬಿಟ್ಟಿತು. ಪಿಯುಸಿ ಮುಗಿದ ಮೇಲೆ ಪದವಿ, ಆಮೇಲೆ ಎಂಕಾಂ, ಬ್ಯಾಂಕ್ ನೌಕರಿ, ಪ್ರಮೋಶನ್ನು, ಊರಿಂದೂರಿಗೆ ವರ್ಗ ಇವುಗಳ ನಡುವೆ ಅಪರೂಪಕ್ಕೆ ಊರಿಗೆ ಬಂದರೂ ಚಂದ್ರ್ರನೊಂದಿಗಾಗಲೀ ಅವನ ಗುಂಪಿನೊಂದಿಗಾಗಲೀ ಹೆಚ್ಚು ಬೆರತದ್ದು ಇಲ್ಲವೇ ಇಲ್ಲ. ಯೋಗಕ್ಷೇಮ ಬಿಟ್ಟು ಹೆಚ್ಚು ಮಾತಾಡಲು ಪುರುಸೊತ್ತಾದರೂ ಎಲ್ಲಿರುತ್ತಿತ್ತು? ಇತ್ತ ಊರಲ್ಲೇ ಉಳಿದ ಚಂದ್ರ ಎಸೆಲ್ಸಿಯನ್ನು ದಾಟಲಾರದೇ ಊರ ಆಂಜನೇಯನ ಪೂಜಾರಿಯಾದ. ಸಣ್ಣಂದಿನಲ್ಲೇ ತಾಯಿ ಕಳಕೊಂಡಿದ್ದ ಅವನು, ಪೂಜೆ, ಪುನಸ್ಕಾರ, ಮಡಿ, ಮೈಲಿಗೆಗಳ ಕಾರಣ ಇಪ್ಪತ್ತೆರಡೆಕ್ಕೆಲ್ಲ ಮದುವೆಯಾಗಿ ಸಂಸಾರದ ಕಡಲಲ್ಲಿ ಈಜತೊಡಗಿದ.
ಎದುರು ಸಿಕ್ಕವರೊಬ್ಬರು “ಶಾಸ್ತ್ರಿಗಳೇ, ನಿಮ್ಮ ಮನೆ ಮುಂದೆ ಬರುವಾಗ ನಿಮ್ಮ ಹೆಂಡತಿ ನನ್ನನ್ನು ನಿಲ್ಲಿಸಿ ನಿಮಗೂ ನನಗೂ ಒಟ್ಟಿಗೇ ಮಂಗಳಾರತಿ ಎತ್ತಿದರು. ನಿಮ್ಮ ಮಾತು ಕೇಳಿಕೊಂಡು ಜಮೀನು ಮಾರಿ ಸಿನಿಮಾ ಟಾಕೀಸು ನಡೆಸಿ ಕೈ ಸುಟ್ಟುಕೊಂಡಿದ್ದೂ ಅಲ್ಲದೇ ಈಗ ಮಂಡಿಯಲ್ಲಿ ಕೂರಲೂ ಮನಸ್ಸು ಕೇಳುತ್ತಿಲ್ಲ. ಬೆಳಿಗ್ಗೆಯೇ ಮನೆ ಬಿಟ್ಟವರು ಇನ್ನೂ ಬಂದಿಲ್ಲ. ಹೊಸ ಸಿನಿಮಾ ತರುಕ್ಕೆ ಬೆಂಗಳೂರಿಗೆ ಕಳಿಸಿದ್ರಾ ಅಂತ ನಿಮ್ಮಾಕೆ ಹಂಗಿಸಿದರು, ಮಹರಾಯರೇ. ಯಾರೋ ಇವತ್ತು ತಿಥಿ ಮಾಡಲಿಕ್ಕೆ ಬಂದವರು ಕಾಯುತ್ತಿದ್ದಂತಿತ್ತು” ಅಂತ ಹೇಳಿ ಮುಂದೆ ಸಾಗಿದರು. ತಾನೇನನ್ನೂ ಕೇಳಿಸಿಕೊಂಡೇ ಇಲ್ಲವೆಂಬಂತೆ ಈ ಮಹರಾಯ ‘ಅಲ್ಲಿ ಮರದಡಿಯಲ್ಲಿ ನಲ್ಗಾವ್ಯವೊಂದಿರಲು...’ ಅಂತ ಹಾಡಿಕೊಳ್ಳುತ್ತ ನಡೆಯುತ್ತಿದ್ದ. “ಎಷ್ಟು ಮಕ್ಕಳೋ ನಿನಗೆ” ಕೇಳಿದೆ. “ಎರಡೇ ಎರಡು. ಎರಡೂ ಹೆಣ್ಣೇ. ಇನ್ನೂ ಮದುವೆ ಮಾಡಿಲ್ಲ. ದಿನಕಳೆದು ಸಂಜೆಯಾದರೆ ನಾಳೆಗೇನು ಎನ್ನುವ ಪರಿಸ್ಥಿತಿಯ ನಾನು ಈ ಧಾರಣೆಯ ಕಾಲದಲ್ಲಿ ಅವರಿಗೆ ಮದುವೆ ಮಾಡಿದ ಹಾಗೇ .. ..” ಮುಂದುವರೆಸಿದ. “ನೀನೇ ವಾಸಿ. ಬೇರೆ ಜಾತಿಯಾದರೂ ಇಷ್ಟ ಪಟ್ಟವಳನ್ನೇ ಮದುವೆಯಾದೆ. ಇರುವ ಒಬ್ಬಳೇ ಮಗಳಿಗೂ ಓದುತ್ತಿರುವಾಗಲೇ ಕೆಲಸ ಬೇರೆ ಸಿಕ್ಕಿದೆಯಂತೆ, ಅದೂ ವರ್ಷಕ್ಕೆ ಆರು ಲಕ್ಷಸಂಬಳವಂತೆ, ನಿನ್ನ ತಮ್ಮ ಶ್ರೀಕಂಠನೇ ಹೇಳಿದ” ಅಂದ. ಇವನಿಂದ ಏನನ್ನೂ ಮುಚ್ಚಿಡುವ ಹಾಗಿಲ್ಲ ಅಂದುಕೊಂಡೆ.
ನನ್ನನ್ನು ಮುಂದು ಬಿಟ್ಟುಕೊಂಡು ಚಂದ್ರ ಗೇಟು ತೆರೆದ. “ಏ ಸೀತಾಲಕ್ಷ್ಮಿ, ಬಾ ಇಲ್ಲಿ, ಯಾರು ಬಂದಿದ್ದಾರೇಂತ ನೋಡು ಬಾ. ನನ್ನ ಗೆಳೆಯರನ್ನೆಲ್ಲ ಕೆಲಸಕ್ಕೆ ಬಾರದವರೂಂತ ಛೇಡಿಸುತ್ತೀಯಲ್ಲ, ನೋಡು ಬ್ಯಾಂಕು ಮ್ಯಾನೇಜರು ಬಂದಿದ್ದಾರೆ, ಅವರೂ ನನ್ನ ಸ್ನೇಹಿತರೆ” ಅಂತ ಕೂಗಿದ. ಶ್ರಾದ್ಧದಡಿಗೆಯ ಕೆಲಸಕ್ಕಾಗಿ ಮಡಿ ಸೀರೆಯುಟ್ಟಿದ್ದ ಆಕೆ ಬೆಂಕಿಯುರಿಯಂತೆ ಹೊರಬಂದವರು ನನ್ನನ್ನು ನೋಡಿದೊಡನೆಯೇ ಎಣ್ಣೆ ತೀರಿ ಫಕ್ಕನೆ ನಂದಿ ಹೋದ ದೀಪದಂತೆ ಒದ್ದೆ ಕೈಯನ್ನು ಸೆರಗಿಗೆ ಒರೆಸಿಕೊಳ್ಳುತ್ತ ನಗು ಮುಖ ತೋರಿ “ನಾಳೆ ನಿಮ್ಮನೆಗೆ ಅಡಿಗೆ ಕೆಲಸಕ್ಕೆ ಹೋಗಬೇಕು. ನಿಮ್ಮ ತಾಯಿ ನನ್ನನ್ನಲ್ಲದೆ ಬೇರಾರಿಗೂ ಶ್ರಾದ್ಧದಡಿಗೆಗೆ ಕರೆಯುವುದಿ. ಬಾಯಾರಿಕೆಗೆ ಪಾನಕ ಆಗಬಹುದಾ?” ಅಂತ ಕೇಳಿ, ಚಂದ್ರ ಹೊತ್ತುತಂದು ಜಗಲಿಯಲ್ಲಿಟ್ಟಿದ್ದ ತರಕಾರಿ ಚೀಲವನ್ನೆತ್ತಿಕೊಂಡು ಒಳಹೋದರು. ಜಗಲಿಯಲ್ಲಿ ಕೂತು ಇವನ ಬರವಿಗೇ ಕಾಯುತ್ತಿದ್ದ ಪೂರ್ವಪಂಕ್ತಿಯ ಬ್ರಾಹ್ಮಣರು ಸ್ನಾನದ ಪಂಚೆ ಝಾಡಿಸಿ ತಾವು ಬಹಳ ಹೊತ್ತಿನಿಂದ ಕಾಯುತ್ತಿರುವುದನ್ನು ಸಂಕೇತಿಸಿದರು. “ಸ್ನಾನಕ್ಕೇಳಿ” ಅಂತ ಅವರಿಗೆ ಸೂಚಿಸಿದ ಚಂದ್ರ ‘ಕರ್ತ್ರುಗಳು ಸಿದ್ಧವಾ’ ಅಂತ ಕೇಳಿದ. ನಾನು ಈವತ್ತು ಇಲ್ಲಿಗೆ ಬರಬಾರದಿತ್ತು ಅಂದುಕೊಂಡೇ ಜಗಲಿಯಲ್ಲಿ ಕೂತು ಶೂ ಕಳಚುತ್ತಿರುವಾಗ ಲಕ್ಷಣವಾದ ಹುಡುಗಿಯೊಬ್ಬಳು ಉದ್ದನೆಯ ಸ್ಟೀಲ್ ಲೋಟದಲ್ಲಿ ಬೇಲದ ಹಣ್ಣಿನ ಪಾನಕವನ್ನು ತಂದು ನನ್ನ ಮುಂದಿಟ್ಟಳು. “ನಿಮ್ಮ ಬ್ಯಾಂಕಿನ ಕ್ಲೆರಿಕಲ್ ಪರೀಕ್ಷೆ ಪಾಸು ಮಾಡಿದ್ದೇನೆ. ಮುಂದಿನ ಸೋಮವಾರ ಇಂಟರ್‌ವ್ಯೂ” ಅವಳು ಮಾತು ಮುಗಿಸುವುದರಲ್ಲಿ ನಾನು ಹೇಳಿದೆ “ಸೆಲೆಕ್ಷನ್ ಕಮಿಟಿಯ ಶ್ರೀನಿವಾಸ ಕಾಮತರಿಗೆ ಹೇಳುತ್ತೇನೆ. ನಿನ್ನ ಹೆಸರು ರೋಲ್ ನಂಬರು ಬರೆದುಕೊಡು” “ ಇಲ್ಲ ನಂಗೆ ಬ್ಯಾಂಕು ಸೇರಲು ಇಷ್ಟವಿಲ್ಲ. ಅಪ್ಪ ನಿಮ್ಮ ಸ್ನೇಹಿತರು. ನಿಮ್ಮಿಂದ ನನಗೆ ಬುದ್ಧಿ ಹೇಳಿಸುತ್ತಾರೆ ಅಂತ ನಾನೇ ಆ ವಿಷಯ ತೆಗೆದೆ. ನಂಗೆ ಬೆಂಗಳೂರಿನ ಕಾಲ್‌ಸೆಂಟರಿನಲ್ಲಿ ಕೆಲಸ ಸಿಕ್ಕಿದೆ. ತಿಂಗಳಿಗೆ ಹದಿನೈದು ಸಾವಿರ ಸಂಬಳ. ನಿಮ್ಮ ಬ್ಯಾಂಕು ಸೇರಿದರೆ ಯಾವ ಹಳ್ಳಿಗೆ ಹಾಕ್ತಾರೋ ಅಲ್ಲಿಗೆ ಹೋಗಿ ಬರೋದು, ಬಸ್ಸಿನ ತಾಪತ್ರಯ, ಜೊತೆಗೆ ಮೊಬೈಲ್ ನೆಟ್‌ವರ್ಕ್ ಇಲ್ಲದ ಗಲೀಜು ಹಳ್ಳಿಗಳು ನನಗಾಗಲ್ಲ. . . .” ಅವಳು ಇನ್ನೂ ಏನೇನು ಹೇಳುತ್ತಿದ್ದಳೋ ಮಡಿಪಂಚೆಯುಟ್ಟು ಹಿಂದಿನಿಂದ ಬಂದ ಚಂದ್ರ “ ನನ್ನ ಮಗಳು ಅನಸೂಯ ಕಣಯ್ಯ. ಡಿಗ್ರಿ ಮುಗಿಸಿದ್ದಾಳೆ. ಬೆಂಗಳೂರು ಅಂತ ಕುಣಿತಾಳೆ. ಕಣ್ಣ ಮುಂದೇ ಇರಲಿ ಅಂತ ಅವರಮ್ಮನ ಆಸೆ.. .. ..” “ ರೀ, ಕಾಲು ತೊಳೆಯೋಕ್ಕೆ ಮಣೆ ಹಾಕಿ. ಅಗ್ರ, ತೇದ ಗಂಧ, ತುಳಸಿ, ಸಗಣಿ ಎಲ್ಲವನ್ನೂ ಹಜಾರದಲ್ಲೇ ಮೊರದಲ್ಲಿ ಇಟ್ಟಿದ್ದೇನೆ..” ಸೀತಾಲಕ್ಷ್ಮಿ ಕೂಗಿ ಹೇಳಿದರು. ಅವಸರದಲ್ಲಿ ಚಂದ್ರ ಒಳಕ್ಕೋಡಿದ. “ಪ್ರಾಚೀನಾವೀತಿ. ..ಜನಿವಾರ ಎಡಕ್ಕೆ ಹಾಕ್ಕೊಳ್ಳಿ.. ಪಿತೃಸ್ಥಾನದಲ್ಲಿರೋರಿಗೆ ಎಳ್ಳಿನಿಂದ ಪೂಜೆ ಮಾಡಿ. ..ಕೆಳಗಿಂದ ಮೇಲಕ್ಕೆ .. .. ಸವ್ಯ.. ಜನಿವಾರ ಸರಿಯಾಗಿ ಹಾಕೊಳ್ಳಿ. ..ವಿಶ್ವೇದೇವರನ್ನು ಅಕ್ಷತೇಲಿ ಅಂದ್ರೆ ನೆನೆಸಿದ ಅಕ್ಕೀಲಿ ಪೂಜೆ ಮಾಡಿ. ಮೇಲಿಂದ ಕೆಳಕ್ಕೆ. . . .” ಚಂದ್ರ ಮಂತ್ರ ಹೇಳುತ್ತಲೇ ಕೈ ಕರಣಗಳನ್ನೂ ಬಿಡಿ ಬಿಡಿಯಾಗಿ ಹೇಳಿಕೊಡುತ್ತಿರುವುದು ಸ್ಪಷ್ಟವಾಗಿ ಕೇಳಿಸಿತು. ನಾಳೆ ನಾನೂ ಇದನ್ನೆಲ್ಲ ಮಾಡಬೇಕು. ಜನಿವಾರ ಮೈ ಮೇಲೆ ಇದೆಯೋ ಇಲ್ಲವೋ? ಬಗಲಿಗೆ ಕೈ ಹಾಕಿ ಖಚಿತಪಡಿಸಿಕೊಂಡೆ. ಜಗಲಿಯ ಮಂದಾಸನದಲ್ಲಿ ಕೂತಿದ್ದ ಹಾಗೇ ಜೊಂಪು ಎಳೆಯಿತು. ಗೋಡೆಗೊರಗಿದೆ.
“ಎಲೆ ಹಾಕಿದೆ. ಏಳಪ್ಪ, ಊಟ ಮಾಡೂವಿಯಂತೆ..” ಚಂದ್ರ ನನ್ನನ್ನು ಕೂಗಿ ಎಬ್ಬಿಸಿ ಶ್ರಾದ್ಧದೂಟ ಬಡಿಸಿದ್ದ ಎಲೆಯ ಮುಂದೆ ಕುಳ್ಳಿರಿಸಿದ. ಸುತ್ತುಗಟ್ಟಿ ಪರಿಷೇಚನೆ ಮಾಡಿ ವ್ಯಾನಾಯ ಸ್ವಾಹಾ, ಉದಾನಾಯ ಸ್ವಾಹಾ... ಹೇಳಿ ತುತ್ತು ಬಾಯಿಗಿಡುವ ಹೊತ್ತಲ್ಲಿ ಮೊಬೈಲ್ ರಿಂಗಣಿಸಿತು. ತಮ್ಮ ಶ್ರೀಕಂಠನ ಕಾಲು. “ಅಮ್ಮ ಕಾಯುತ್ತಿದ್ದಾಳೆ. ಮಡೀಲಿ ಅಡಿಗೆ ಮಾಡಿಸಿ ನಿನಗೋಸ್ಕರ ಕಾಯುತ್ತಿದ್ದೇವೆ. ಹೊರಗಡೆ ಎಲ್ಲೂ ಇವತ್ತೊಂದಿನವಾದ್ರೂ ತಿನ್ನಬೇಡ ಅಂತ ಹೇಳು ಅಂತ ಅಮ್ಮ ಹೇಳಿದ್ಲು. ಮಕ್ಕಳೂ ಸ್ಕೂಲಿಂದ ಬರೋ ಹೊತ್ತಾಯ್ತು. ತಕ್ಷಣ ಬಾ. ಇಲ್ಲಾಂದ್ರೆ ಎಲ್ಲಿದ್ದಿ ಹೇಳು. ನಾನೇ ಗಾಡೀಲಿ ಬಂದು ಕರಕೊಂಡು ಬರ್ತೀನಿ.” ಪೇಚಾಟಕ್ಕಿಟ್ಟುಕೊಂಡಿತು. ಏಳುವ ಹಾಗೂ ಇಲ್ಲ. ಕೂರುವ ಹಾಗೂ ಇಲ್ಲ. ಪರಿಸ್ಥಿತಿ ಬಿಗಡಾಯಿಸಿತೆಂದುಕೊಂಡೆ. ಎಲ್ಲಿಗೋ ಹೊರಟವನು ಈ ಕರಡಿಯ ಕೈಯಲ್ಲಿ ಸಿಕ್ಕಿಹಾಕಿಕೊಂಡೆನಲ್ಲ ಎಂದು ಕೊಂಡೆ. “ಮನೆಯಿಂದಲೋ ಫೋನು? ಇವತ್ತು ನೀನು ಈಗ ಊಟ ಮಾಡುತ್ತಿರುವುದು ನಿನ್ನ ಜ್ಞಾತಿಗಳ ಪ್ರಸಾದವನ್ನೇ. ನಿನ್ನ ಅಜ್ಜನ ಅಣ್ಣನ ಮೊಮ್ಮಗನ ಅಂದರೆ ನಿನ್ನಣ್ಣನ ಶ್ರಾದ್ಧ ಪ್ರಸಾದ. ನಿಮ್ಮ ಅಮ್ಮನಿಗೆ ಹೇಳು. ನi ಮನೇಲಿ ಉಂಡರೆ ಅವರಿಗೆ ಬೇಜಾರಾಗುಲ್ಲ” ಚಂದ್ರ ತಕ್ಷಣದ ಉಪಾಯ ಹೇಳಿದ. ಊಟ ಮುಗಿಸಿ ತಾಂಬೂಲ ಮೆಲ್ಲುತ್ತಿರುವಾಗ ಸೀತಾಲಕ್ಷ್ಮಿಯವರು ನನ್ನ ಮನೆ, ಮಕ್ಕಳು, ಉದ್ಯೋಗಗಳ ಪಂಚನಾಮೆ ಮುಗಿಸಿ, ತಮ್ಮ ಮಗಳ ಆಸೆಯನ್ನೇ ನಾನೂ ಬೆಂಬಲಿಸಬೇಕೆಂದು ಆರ್ತವಾಗಿ ಬೇಡಿದರು. ಸಣ್ಣ ಊರುಗಳ ದೊಡ್ಡ ರಾಜಕೀಯ ತಮಗೆ ಇನ್ನು ಬೇಡವೆಂದೂ ಅಂಬಲಿಯೋ ಗಂಜಿಯೋ ದೇವರು ನೀಡಿದಷ್ಟರಲ್ಲೇ ತೃಪ್ತರಾಗಿರುವುದಾಗಿಯೂ ಸೇರಿಸಿದರು. ಹೋಗಿ ಬರುತ್ತೇನೆ ಎಂದೆದ್ದವನು ಚಂದ್ರನಿಗೂ ಹೇಳೋಣವೆಂದರೆ ಅವನಲ್ಲಿ ಕಾಣಲಿಲ್ಲ. ಅಂಗಳಕ್ಕಿಳಿದು ಶೂ ಹಾಕಿಕೊಳ್ಳುವಾಗ ಬಟ್ಟೆಯೊಗೆಯುವ ಕಲ್ಲಿನ ಮೇಲೆ ಕೂತು ತೆಂಗಿನ ಗೆರಟೆ ಹೆರೆಯುತ್ತ ಕೂತಿದ್ದ ಅವನು ಕಾಣಿಸಿದ. ಅದೆಷ್ಟು ತತ್ಪರನಾಗಿ ಅವನು ಗೆರಟೆ ಹೆರೆಯುತ್ತಿದ್ದನೆಂದರೆ ಹಿಂದಿನಿಂದ ನಾನು ಹೋಗಿ ಅವನ ಭುಜ ಅಲುಗಿಸುವವರೆಗೂ ಅವನಿಗೆ ಗಮನವೇ ಇರಲಿಲ್ಲ. ಬಲಿತ ಕಾಯಿಯ ಅರ್ಧಹೋಳು ಗೆರಟೆಯನ್ನು ನುಣ್ಣಗೆ ಹೆರೆಯುತ್ತಿದ್ದಾನೆಂದರೆ ಜಿಲೇಬಿ ಬಟ್ಟಲು ತಯಾರಿಸುತ್ತಿದ್ದಾನೆಂದು ಅರ್ಥೈಸಿಕೊಂಡೆ. ಯಾರ ಮನೆಯ ಯಾವ ಫಂಕ್ಷನ್ನಿಗೆ ಈ ತಯಾರಿಯೆಂದೂ ಕೇಳಿದೆ. ಪೆಚ್ಚಾಗಿ ನಕ್ಕ ಅವನು “ಜಿಲೇಬಿಗಲ್ಲವೋ ಮಾರಾಯಾ. ಬೆಳಗ್ಗೆ ಸಂತೆಯಲ್ಲಿ ಮಾರುತ್ತಿದ್ದ ಗೆರಟೆಯ ಪಿಟೀಲು ನೋಡಲಿಲ್ವಾ ನೀನು? ಅದನ್ನು ಕಂಡಾಗಿನಿಂದ ಅಂಥದೊಂದನ್ನು ಮಾಡಿ ನುಡಿಸುವಾಸೆಯಾಗಿದೆ... ಅದು ಕುನ್ನೈಕುಡಿಯ ಪಿಟೀಲೇ ಆಗಲಿ, ಮೈಸೂರು ನಾಗರಾಜನ ಪಿಟೀಲೇ ಆಗಲಿ, ಅಥ್ವಾ ಈ ಗೆರಟೆಯ ಪಿಟೀಲೇ ಆಗಲಿ, ನಾದ ಹುಟ್ಟೋದು ಅದಕ್ಕೆ ಬಿಗಿದ ತಂತಿಯಿಂದ ತಾನೇ? ನಮ್ಮ ಅನಸೂಯಂಗೆ ಸಂಗೀತ ಅಂದ್ರೆ ಶಾನೇ ಇಷ್ಟ. ಅವಳಿಗೆ ಪಿಟೀಲು ನುಡಿಸೋದು ಚೂರುಪಾರು ಗೊತ್ತು. ಅದಕ್ಕೇ ಈ ತಯಾರಿ” ಎಂದವನೇ ಮತ್ತೆ ತನ್ನ ಕಾಯಕದಲ್ಲಿ ತಲ್ಲೀನನಾದ. ಅವನಾಗಲೇ ಆ ಪಿಟೀಲಿಗೆ ಜೋಡಿಸಲು ಮರದ ಹಿಡಿಯನ್ನೂ, ಗೆರಟೆಯ ಬಾಯಿಗೆ ಅಂಟಿಸಲು ದಪ್ಪನೆಯ ಚರ್ಮದಂಥ ಪೇಪರನ್ನೂ, ತಂತಿಯ ಸಿಂಬೆಯನ್ನೂ ಅಣಿಯಾಗಿಟ್ಟುಕೊಂಡು ಕೂತಿದ್ದ. ಅದು ಹೇಗೋ ನಾನು ಚಂದ್ರನ ಮನೆಯಲ್ಲಿರುವುದನ್ನು ಪತ್ತೆಮಾಡಿದ್ದ ಶ್ರೀಕಂಠ ಬೈಕಿನಲ್ಲಿ ಬಂದು ಹಾರ್ನು ಮಾಡತೊಡಗಿದ. ಬೈಕಿನ ಹಿಂಬದಿ ಸೀಟಿನಲ್ಲಿ ಕೂರುವಾಗ ಮಂಡಿವರ್ತಕನೂ, ಪುರಸಭೆಯ ಉಪಾಧ್ಯಕ್ಷನೂ ಆಗಿರುವ ಅವನು ವರ್ಷಕ್ಕೊಮ್ಮೆ ಬಂದರೂ ಮನೆಯಲ್ಲಿ ನಿಲ್ಲದ ನನ್ನನ್ನು ಕಣ್ಣಲ್ಲೇ ಸುಡುವಂತೆ ನೋಡಿದ. ಹೊರಡುವಾಗ ಚಂದ್ರನಿಗೆ ನಾಳೆ ಬೆಳಿಗ್ಗೆ ಮಡಿಯಲ್ಲಿ ಬಂದು ಜ್ಞಾಪಿಸುವುದಾಗಿಯೂ, ಅಪ್ಪನ ಶ್ರಾದ್ಧದ ಪೂರ್ವಪಂಕ್ತಿಗೆ ಅವನು ಕೂರಬೇಕಿರುವುದರಿಂದ ಹೊರಗೆಲ್ಲೂ ತಿಂಡಿಗಿಂಡಿ ತಿನ್ನಬಾರದೆಂತಲೂ, ಬೇಕಿದ್ದರೆ ಆಚೆ ನಾಳಿದ್ದು ಅವನೇ ಅಯೋಧ್ಯೆ ಹೋಟೆಲ್ಲಿನಲ್ಲಿ ಮಸಾಲೆ ದೋಸೆ ಕೊಡಿಸುವುದಾಗಿಯೂ ಕೂಗಿ ಹೇಳಿ, ಸೀತಾಲಕ್ಷ್ಮಿಗೂ ಬೆಳಗ್ಗೆಯೇ ಮಡಿಯುಟ್ಟು ಬರಬೇಕೆಂದೂ, ಅವನ ಹೆಂಡತಿಗಿನ್ನೂ ಅಳತೆ ಅಂದಾಜುಗಳು ದಕ್ಕಿಲ್ಲವೆಂದೂ, ಸೀತಾಲಕ್ಷ್ಮಿ ಬಾರದಿದ್ದರೆ ಅಮ್ಮ ಗಾಬರಿಪಡುವುದಾಗಿಯೂ ಹೇಳಿದ.
ಮನೆ ಸೇರಿ ಬೆಳಿಗ್ಗೆಯಿಂದ ನಡೆದುದೆಲ್ಲವನ್ನೂ ಅಮ್ಮನಿಗೆ ಸಂಕ್ಷೇಪದಲ್ಲಿ ಹೇಳಿ ನನ್ನ ಊಟವಾಗಿರುವುದನ್ನೂ ಚಂದ್ರನ ಮನೆಯಲ್ಲಿ ನಡೆದ ತಿಥಿಯ ವಿಚಾರವನ್ನೂ ಹೇಳಿದೆ. “ಬಿಡು, ಜ್ಞಾತಿಗಳ ಪ್ರಸಾದ. ನಾಳೆ ನಿಮ್ಮಪ್ಪನದೇ ತಿಥಿ ಇರುವಾಗ ಸ್ವಲ್ಪವಾದರೂ ನೇಮ. ನಿಷ್ಠೆ ಇಟ್ಟುಕೋಬೇಕು ತಾನೆ?” ಅಂತ ಹೇಳಿ ನನ್ನ ಮುಜುಗರಕ್ಕೆ ಚುಕ್ಕಿ ಇಟ್ಟಳು. ಶ್ರೀಕಂಠನ ಹೆಂಡತಿ ಕಾಫಿ ಕೊಡುವಾಗ “ಅಕ್ಕನಂತೂ ಅತ್ತೆ ಇರುವವರೆಗೂ ಈ ಮನೆಗೆ ಬರುವ ಹಾಗಿಲ್ಲ. ಅತ್ತೆ ಮುಂದಿನ ತಿಂಗಳು ಕಾಶೀ ಯಾತ್ರೆಗೆ ಹೊರಟಿದ್ದಾರೆ. ಅಕ್ಕನನ್ನೂ, ಮಗಳನ್ನೂ ಕಳಿಸಿಕೊಡಿ” ಅಂತ ಗುಟ್ಟಾಗಿ ಹೇಳಿದಳು. ಆಗಲಿ ಅನ್ನುವಂತೆ ಕತ್ತು ಹಾಕಿದೆ.
ಮಾರನೇ ದಿನ ಅಪ್ಪನ ತಿಥಿ ಸಾಂಗವಾಗಿ ನಡೆದು ದಾಯಾದಿಗಳೆಲ್ಲ ಪ್ರಸಾದ ಸ್ವೀಕರಿಸಿ ಹೋದ ನಂತರ ಸಂಜೆ ಕಾಫಿ ಕುಡಿಯುವಾಗ ಅಮ್ಮ ತಾನು ಕಾಶಿಗೆ ಹೊರಟ ವಿಚಾರ ಹೇಳಿದಳು. ಅದೂ ಇದೂ ಮಾತಿನ ನಡುವೆ ಅವರಿವರ ಮನೆ ಹೆಣ್ಣುಮಕ್ಕಳ ಮದುವೆ, ಖಾಯಿಲೆ, ಕಸಾಲೆ, ಊರ ರಾಜಕೀಯದ ಸುದ್ದಿ ಹಾದು ಹೋಗುತ್ತಿರುವಾಗ ಇದ್ದೂರಲ್ಲೇ ಉಳಿದ ಕಾರಣ ಬೇಕೋ ಬೇಡವೋ ರಾಜಕೀಯ ಮಾಡೋದು ಅನಿವಾರ್ಯ ಅಂತ ಶ್ರೀಕಂಠ ದನಿ ಸೇರಿಸಿದ. ಚಂದ್ರಶೇಖರ ಶಾಸ್ತ್ರಿಯ ದೊಡ್ಡ ಮಗಳು ಬೆಂಗಳೂರಿನ ಜೆವೆಲ್ರಿಯಲ್ಲಿ ಕೆಲಸಕ್ಕಿರೋ ಪುಟ್ಟಾಚಾರಿಯ ಮಗನ ಜೊತೆ ಶೀಘ್ರದಲ್ಲೇ ಓಡಿಹೋಗುತ್ತಾಳೆಂದು ಭವಿಷ್ಯ ಹೇಳಿದ. “ಗಂಡು ಹುಡುಕಿ ಮದುವೆ ಮಾಡುವ ತಾಕತ್ತಿಲ್ಲದ ನಿನ್ನ ಗೆಳೆಯ ಮಗಳು ಓಡಿ ಹೋಗಲಿ ಅಂತ ಕಾಯುತ್ತಿದ್ದಾನೆ” ಅಂತಂದು ಹಲ್ಲು ಕಚ್ಚಿಕೊಂಡ.
ರಾತ್ರಿ ಊರಿಗೆ ಹೊರಟಾಗ ಅಮ್ಮ ಜತನದಿಂದ ಕಟ್ಟಿಕೊಂಡ ಅಪ್ಪನ ಪ್ರಸಾದವನ್ನು ಬ್ಯಾಗಲ್ಲಿಟ್ಟುಕೊಂಡು ಹೋಗಿ ಬರುವುದಾಗಿ ಹೇಳಿದೆ. ಅಮ್ಮ “ಶ್ರೀಕಂಠನ ಮಗ ಹೈಸ್ಕೂಲು ಮುಗಿಸಿದ ಮೇಲೆ ನಿನ್ನ ಮನೆಯಲ್ಲೇ ಇದ್ದು ಓದಲಿ. ಈ ಊರು ಕೆಟ್ಟು ಹೋಗಿದೆ. ಮಗಳಿಗೆ ಯಾವಾಗ ಮದುವೆ ಮಾಡ್ತೀಯ? ಅವಳೂ ಯಾರನ್ನಾದರೂ ನೋಡಿಕಂಡಿದಾಳಾ?” ಅಂತ ಕೇಳಿ ಶ್ರೀಕಂಠನಿಂದ ಬೈಸಿಕೊಂಡಳು. ಶ್ರೀಕಂಠ ಬೈಕಿನಲ್ಲಿ ರೈಲ್ವೇ ಸ್ಟೇಷನ್ನಿಗೆ ಬಿಟ್ಟು ಹೋದ. ರಾತ್ರಿ ರೈಲಿಗೆ ಮೊದಲೇ ಟಿಕೇಟು ಮಾಡಿಸಿದ್ದ ನನಗೆ ರೈಲು ಒಂದು ಗಂಟೆ ತಡವಾಗಿ ಬರುತ್ತದೆ ಎನ್ನುವ ವಿಚಾರಣೆಯವರ ಸೂಚನೆ ಕೇಳಿಸಿತು. ನಿಲ್ದಾಣದ ಕಲ್ಲುಬೆಂಚಿನ ಮೇಲೆ ಕೂತಿದ್ದ ಅನಸೂಯ ಮೊಬೈಲಿನ ಮೆಸೇಜಿನಲ್ಲಿ ತಲ್ಲೀನಳಾಗಿದ್ದನ್ನು ಗಮನಿಸಿದೆ. ಅವಳ ಪಕ್ಕದಲ್ಲಿದ್ದ ತೆರೆದ ಬಾಯಿಯ ಬ್ಯಾಗಿನಲ್ಲಿ ತೆಂಗಿನ ಗೆರಟೆಯಿಂದ ತಯಾರಿಸಿದ ಪಿಟೀಲು ನಗುತ್ತ ಕೂತಿತ್ತು. ಹೌದಲ್ಲವಾ, ನಾದ ಹುಟ್ಟೋದು ಎಳೆದು ಕಟ್ಟಿದ ತಂತಿಯಿಂದಲೇ ಹೊರತು ಸುತ್ತಿಟ್ಟ ಸಿಂಬೆಯಿಂದ ಅಲ್ಲವಲ್ಲ ಎಂದುಕೊಂಡು ಜೇಬಲ್ಲಿಟ್ಟಿದ್ದ ಸಿಗರೇಟೆಳೆದು ಬೆಂಕಿಕೊಟ್ಟೆ.
(ಸ್ಪೂರ್ಥಿ -ಡಾ.ಯು.ಆರ್.ಅನಂತಮೂರ್ತಿಯವರ ’ಸೂರ್ಯನ ಕುದುರೆ’)
-----------------------------------------------------------------------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
1 ಕಾಮೆಂಟ್:
nice story...
ಕಾಮೆಂಟ್ ಪೋಸ್ಟ್ ಮಾಡಿ