ಒಟ್ಟು ಪುಟವೀಕ್ಷಣೆಗಳು

ಮಂಗಳವಾರ, ಆಗಸ್ಟ್ 28, 2012

ಪ್ರಣಯೋನ್ಮಾದದಾಚೆಯ ಅರಿವಿಗೆ ಕಾತರಿಸುವ ‘ಅವನರಿವಲ್ಲಿ’



ಯುವ ಬರಹಗಾರರು ಆಧುನಿಕ ಕನ್ನಡ ಕಾವ್ಯದ ಹೊಸ ವಿಸ್ತರಣಕ್ಕೆ ಕೈ ಹಾಕುತ್ತಿರುವುದರ ಪುರಾವೆಗಳು ಆ ಬರಹಗಾರರ ಕೃತಿಗಳಿಂದ ಮನನ ಮಾಡಿಕೊಡುತ್ತಿರುವ ಸಮಯವಿದು. ಏಕಮುಖಿಯಾಗಿದ್ದ ಕನ್ನಡ ಕಾವ್ಯಕ್ಕೆ ಸಮಕಾಲೀನ ಬದುಕಿನ ಸವಾಲುಗಳನ್ನು ಸಂಕಟಗಳನ್ನು ಸಾಧ್ಯತೆಗಳನ್ನು ತಾವು ಕಂಡುಂಡ ಹಾದಿಯ ಪಲುಕುಗಳನ್ನು ಹೌದೆನ್ನಿಸುವಂತೆ ದಾಖಲಿಸುತ್ತಿರುವ ಈ ಹೊತ್ತಿನ ಬರಹಗಾರರ ಕಾವ್ಯದ ನಡಿಗೆ ಕನ್ನಡ ಕಾವ್ಯಕ್ಕೆ ಹೊಸ ಅನುಸಂಧಾನಗಳನ್ನು, ಸಾಧ್ಯತೆಗಳನ್ನು ಪೋಣಿಸುತ್ತಿದೆ.
ಈಗಾಗಲೇ ತಮ್ಮ ಕವನ ಸಂಕಲನಗಳಿಂದ, ಅನುವಾದಗಳಿಂದ ಖ್ಯಾತರಾಗಿರುವ ಜ.ನಾ.ತೇಜಶ್ರೀ ಅವನರಿವಲ್ಲಿ ಹೆಸರಿನ ಖಂಡ ಕಾವ್ಯ ಪ್ರಕಟಿಸಿದ್ದಾರೆ. ಇತ್ತ ನೀಳ್ಗವಿತೆಯೂ ಅಲ್ಲದ ಅತ್ತ ಮಹಾಕಾವ್ಯವೂ ಅಲ್ಲದ ಖಂಡ ಕಾವ್ಯ ಪರಂಪರೆಗೆ ಮತ್ತೊಂದು ಕೊಂಡಿ ಈ ಕೃತಿಯಿಂದ ಸಾಧ್ಯವಾಗಿದೆ. ಹೊಸಸಂವೇದನೆಗಳಿಗೆ, ತಾಜಾ ಅನುಭವಗಳಿಗೆ, ಸಾಕ್ಷಿಪ್ರಜ್ಞೆಯಾಗಿರುವ ಡಾ.ಯು.ಆರ್.ಅನಂತಮೂರ್ತಿ ಈ ಪುಸ್ತಕಕ್ಕೊಂದು ಸಾರ್ಥಕ ಪ್ರವೇಶವನ್ನು ತಮ್ಮ ಮುನ್ನುಡಿಯಿಂದ ಅಗು ಮಾಡಿದ್ದಾರೆ.

ಸುಮಾರು ಅರವತ್ತು ಪುಟಗಳಿಷ್ಟಿರುವ ಈ ದೀರ್ಘ ಕವಿತೆ ಮೂರು ಭಾಗಗಳಲ್ಲಿ ತೆರೆದುಕೊಂಡಿದೆಯಾದರೂ ಅವೆಲ್ಲವನ್ನೂ ಬೇರೆ ಬೇರೆ ಕವಿತೆಗಳನ್ನಾಗಿಯೂ ಆಸ್ವಾದಿಸಬಹುದು. ಅಂದರೆ ಹಿಂದು ಮುಂದಿನ ಅಡ್ಡಕಗಳಿಲ್ಲದೆಯೂ ಪರಸ್ಪರ ಬೇರೆಯಾಗಿಯೂ ಹಾಗೇ  ಒಂದಾಗಿಯೂ ಇಲ್ಲಿನ ಕವಿತೆಗಳು ಕವಿಯ ಸಂವೇದನೆಯನ್ನು ಓದುಗನಿಗೆ ವರ್ಗಾಯಿಸುವುದರಲ್ಲಿ ಯಶಸ್ವಿಯಾಗಿವೆ. ಹೆಣ್ಣನ್ನು ಭೋಗದ ವಸ್ತುವೆಂದೇ ಭಾವಿಸಿದ್ದ ಗಂಡಿಗೆ ಪ್ರೌಢ ಹೆಣ್ಣೊಬ್ಬಳು ಮುಟ್ಟಿಸಿದ ಸಂಕೇತವಿದು.
ಪ್ರಣಯವನ್ನು ಕುರಿತಂತೆ ಇರುವ ಪ್ರಚಲಿತ ಪ್ರತಿಮೆ, ರೂಪಕಗಳ ಹರಹಿನಿಂದ ಬೇರೆಯಾದ ಆದರೆ ಕಾಯದ ಕಣಕಣವನ್ನೇ ಕವಿತೆಯ ರೂಪಕವನ್ನಾಗಿಸಿರುವ ಕ್ರಮ ಕನ್ನಡಕ್ಕೆ ಅದರಲ್ಲೂ ಹೆಣ್ಣೊಬ್ಬಳ ಅಂತರಗಂಗೆ ಇಷ್ಟೊಂದು ರಭಸವಾಗಿ ಹರಿಯಬಲ್ಲದೆಂಬುದಕ್ಕೂ ಈ ಖಂಡಕಾವ್ಯ ಅಪರೂಪದ ಪುರಾವೆಯಾಗಿದೆ. ಸಾವು ಮತ್ತು ಬದುಕಿನ ನಡುವೆಯ ಲೋಕ ಲೋಲಕವಾದ ಜೀವವೊಂದರ ಯಾತನೆಯು ಈ ಪರಿಯಾಗಿ ಇಷ್ಟೊಂದು ಉನ್ಮಾದವನ್ನು ಉಂಟುಮಾಡಬಹುದೆನ್ನುವ ಪರಿಯೇ ಇಲ್ಲಿ ಕವಿತೆಯಾಗಿ ಅರಳಿದೆ.

ಅವನರಿವಲ್ಲಿ ಎನ್ನುವ ಶೀರ್ಷಿಕೆ ಇಹದ ಇವನಲ್ಲಿ ಅವನನ್ನು ಕಂಡದ್ದಕ್ಕೆ ಸಾಕ್ಷಿಯೊದಗಿಸುತ್ತದೆ. ಇಲ್ಲಿನ ಚಿನ್ನಕ್ಕಿಂತ ಅಲ್ಲಿನ ಚನ್ನನ ಮೋಹಕ್ಕೆ ಬಿದ್ದ ಪರಂಪರೆ ನಮ್ಮದು. ಹಾಗೆಯೇ ಇರುವುದರಲ್ಲಿಯೇ ಇರದುದನ್ನು ಕಲ್ಪಿಸಿಕೊಂಡು ಸಮಾಧಾನಿಯಾಗಿರುವುದೂ ಈ ನೆಲದ ಅನಿವಾರ್ಯ. ಈ ಎರಡರ ನಡುವಿನ ಗೆರೆಯನ್ನು ತೇಜಶ್ರೀ ಇಲ್ಲಿ ಮಾಸಲಾಗಿಸಿದ್ದಾರೆ. ಲೌಕಿಕದ ಅನುಭವದಲ್ಲೇ ಪಾರಮ್ಯವನ್ನು ಗಳಿಸುವುದೆಂದರೆ ಇದೇ ಇರಬೇಕೆಂದು ಕವಯತ್ರಿ ಭಾವಿಸಿದ್ದಾರೆ. ಹಾಗೂ ಅವರ ಭಾವನೆಯನ್ನು ಓದುಗನೂ ಅನುಭವಿಸುತ್ತಾನೆ.

ಯಮುನೆಯ ಅಲೆಯಾಗಿತ್ತು /ನನ್ನೆದೆ ನಿನ್ನೆ ರಾತ್ರಿ ಹಾಗೆ/ ಹಿಂದೆಂದೂ ಅದು /ಢವ ಢವ ಆಡಿರಲಿಲ್ಲ ಎಂದು ಮೊದಲಸಾಲಿನಲ್ಲೇ ಪ್ರಣಯಕ್ಕೆ ಕಾದ ರಾಧೆಯನ್ನು ನೆನಪಿಸುವ ಕವಿತೆ ನನ್ನಸ್ತಿತ್ವಕ್ಕೆ ಸ್ಥಿತಪ್ರಜ್ಞೆ ಒದಗುತ್ತದೆ/ನಾನುಇಲ್ಲವಾಗುತ್ತದೆ/ ನೀನೇ ಎಲ್ಲವಾಗುತ್ತದೆ ಎಂದು ಕೊನೆಗೊಳ್ಳುವಾಗ ಮುಟ್ಟಿಸುವ ಸಂದೇಶ ಪ್ರಣಯಾದಾಚೆಯ ಅದ್ವೈತವನ್ನು ಕುರಿತಲ್ಲದೇ ಬೇರಾನಾಗಿರಲು ಸಾಧ್ಯ? ಮೇಲ್ನೋಟಕ್ಕೆ ಇಡೀ ಕವಿತೆ ಎಲ್ಲ ಪ್ರೇಮ ಕವಿತೆಗಳ ಹಾಗೆ ಗಂಡುಹೆಣ್ಣುಗಳ ಪ್ರಣಯ, ಅಂಗಸುಖ, ಕಾಯುವಿಕೆಯ ವಿರಹವನ್ನು ಕುರಿತಂತೆ ಕಾಣುವುದಾದರೂ ಪುನರೋದಿಗೆ ದಕ್ಕುವುದೆಂದರೆ ಲೌಕಿಕದಾಚೆಯ ಪರಮಸುಖಕ್ಕೆ, ಅದ್ವೈತಕ್ಕೆ, ಅರ್ಧನಾರೀಶ್ವರ ಕಲ್ಪನೆಗೆ ಈ ಕವಿ ಧ್ಯಾನಿಸಿದ್ದಾರೆ ಮತ್ತು ಆ ಸ್ಥಿತಿಯೇ ಎಲ್ಲ ಪ್ರಣಯಿಗಳಿಗೂ ದಕ್ಕಲೆಂದೇ ಕಾತರಿಸಿದ್ದಾರೆ.

ಗಂಡು ಜೋಗಿಯಾಗಿ ಹೆಣ್ಣು ಅಕ್ಕನಾಗಿ ಒದಗಿದರೆ ಆಗಬಹುದಾದ ರೆ ಇಲ್ಲಿನ ಕವಿತೆಯ ಧ್ಯಾನ. ಸೋಲನ್ನೆಂದೂ ಒಪ್ಪಿಕೊಳ್ಳದ ಗಂಡು ಮತ್ತು ಸುಲಭಕ್ಕೆ ತೃಪ್ತಳಾಗದ ಹೆಣ್ಣಿನ ಆಂತರ್ಯ ಇಲ್ಲಿನ ಚಿತ್ರಕ ಶಕ್ತಿ. ಹೇಳುವುದನ್ನು ಗಟ್ಟಿಯಾಗಿ ಹೇಳದೇ ಆದರೆ ಗಂಡನ್ನು ಸೂಕ್ಷ್ಮವಾಗಿ ಛೇಡಿಸಿರುವ ಕವಯತ್ರಿ ಆ ಸೂಕ್ಷ್ಮ ತಕ್ಷಣಕ್ಕೆ ಮತ್ತು ಸುಲಭಕ್ಕೆ ತಾಗದಂತೆ ಎಚ್ಚರವನ್ನೂ ವಹಿಸಿದ್ದಾರೆ. ನನ್ನವಳು ನೀನು, ನನ್ನ ಹೆಣ್ಣು, ನನ್ನ ಪ್ರೇಯಸಿ,/ನನ್ನ ಮಡದಿ... ಬೆಳಕೇ... /-ನಿನ್ನ ಗಂಟಲಿಂದ ಒಸರಿದ ಜೀವರಸಕ್ಕೆ /ಬಾಯೊಡ್ಡಿದೆ ನಾನು, ಸುರಿಯಿತು/ ಧಾರಾಕಾರ ಮಳೆ, ಧನ್ಯಳಾದೆ ಎಂದು ಹೇಳಿದ್ದವಳೇ ನಾನು ಕಾದಿದ್ದು ನಿನ್ನೊಂದು ಮಾತಿಗೆ/ಉತ್ತರವಾಗಿ ಸಿಕ್ಕಿದ್ದು ಬರಿಯ ಮೌನ/ ಮುಖಕ್ಕೆ ಎರಚಿದ್ದು /ನನ್ನದೇ ನಿಟ್ಟುಸಿರಿನ ತುಣುಕುಗಳು/ ನಿನ್ನಾಳದ ವಿರಹ ಬೆಂಕಿ ನನ್ನೊಳಗೆ ಎಂದು ಕಾತರಿಸುತ್ತಾಳೆ. ಪಕ್ಕದಲ್ಲಿ ಇವನಿದ್ದರೂ ಮುಂದುವರಿದು ಗಳಿಗೆ ಗಳಿಗೆಯೂ ನನ್ನೊಳಗೆ /ಹುಚ್ಚುಹೊಳೆಯಂತೆ ಬೊಬ್ಬಿರಿಯುತ್ತಿರುವ /ನೀನೆಂಬ ವಿರಹ/ಲೋಕವನ್ನು ನುಂಗಿ ನೊಣೆದುಬಿಡುತ್ತದೆಯೆನ್ನಿಸುತ್ತಿದೆ ಎನ್ನುವಾಗ ಏನನ್ನು ಕುರಿತು ಕವಿಯ ಧ್ಯಾನವಿದೆ ಎಂದು ಅರಿಯಬಹುದು. ಬಿಡು ಬಿಡು. ಆದದ್ದಾಯಿತು/ಗುಲಗಂಜಿಗೂ ಕಪ್ಪಿನ ದೃಷ್ಟಿಬೊಟ್ಟು/ಸೋಲು-ಗೆಲುವಿನ ಹುಚ್ಚು ಜೂಜಾಟದಲ್ಲಿ /ನನಗೂ ನಿನಗೂ ಕೆಲಸವೇನು? ಎಂದು ಪ್ರಶ್ನಿಸುತ್ತಾರಲ್ಲ ಅದು ಇಹದ ಗಂಡಿಗೋ ಅಥವ ಪರದ ಮೋಹನನಿಗೋ ಓದುಗನೇ ಊಹಿಸಬೇಕು!
ಎಲ್ಲ ತಕರಾರುಗಳ ಬದಿಗೊತ್ತಿ /ಒಂದು ಗಳಿಗೆ ನನ್ನ ಮಗುವಾಗು/ಬಾರೋ, ನಿನ್ನ/ತುಂಟಾಟದಲ್ಲಿ ನೆನಪಿನ ಜೋಕಾಲಿಯನ್ನು / ಹಿಗ್ಗಿಸುತ್ತೇನೆ, ನಾನು ಎನ್ನುವಾಗ ತ್ರಿಮೂರ್ತಿಗಳನ್ನೇ ಮಗುವನ್ನಾಗಿಸಿದ ಅನಸೂಯೆ ಕೂಡ ನೆನಪಾಗುತ್ತಾಳೆ. ಈ ಸಾಲುಗಳ ನಡುವೆಯೇ ಕ್ವಚಿತ್ತಾಗಿ ಬರುವ ಸಾಲು ಇದು ಆಳಕ್ಕೆ ಎಟುಕದ್ದು ಕಡಲು; ಕಣ್ಣುಗಳೊಳಗಿಗೊಂದು ಪ್ರಜ್ಞೆ/ ಕಡಲಿನ ಮಾತೆಂಬುದು ಆಜ್ಞೆ. ಇಲ್ಲಿ ಕವಯತ್ರಿ ಬಳಸಿರುವ ಕಡಲಿನ ಪ್ರತಿಮೆ ಸುಲಭಕ್ಕೆ ಎಟುಕದ ಆಳದ್ದು ಹಾಗೇ ಒಳಗಣ್ಣಿಂದಷ್ಟೇ ಕಾಣಬಹುದಾದ ಪ್ರಜ್ಞೆ.

ಹರಿವಿಗೆ ಕೊನೆಯಿಲ್ಲ/ಅರಿವಿಗೆ ಹೊಸತೆಲ್ಲ;/ಕೃಷ್ಣಾ,/ ಎಂದು ಕರೆಯುತ್ತಾಳಲ್ಲ ಆ ಕರೆ ರಾಧೆ ಕೃಷ್ಣನಿಗೆ ಹೇಳಿದ್ದಲ್ಲ ಬದಲಿಗೆ ಅದು ಕಾಯದ ಮೋಹಕ್ಕೆ ಬಿದ್ದು ಕಾಯದೇ ಕಾಡುವ ಗಂಡಿಗೆ.
ಪ್ರಣಯೋನ್ಮಾದದಲ್ಲಿ ವಿರಹಿ ರಾಧೆಯ ಮನಃಪಟಲವನ್ನು ತೇಜಶ್ರೀ ಬಿಚ್ಚಿಡುತ್ತಾರಾದರೂ ಒಮೊಮ್ಮೆ ಆಕೆ ಬಳಸಿರುವ ಪದಗಳು ಕಾವ್ಯದ ಓಘಕ್ಕೆ ಪೆಟ್ಟುಕೊಡುತ್ತವೆ. ಆಕಳಿನ ಕೆಚ್ಚಲ ಗೆಜ್ಜೆಯ ಹಾಲಹೊಳೆ ಎನ್ನುವುದರ ಬದಲು ಆಕಳ ಕೆಚ್ಚಲಿನಿಂದ  ಹಾಲಹೊಳೆ ಸಾಕಿತ್ತು. ಅಸ್ತಿಪಂಜರವನ್ನು ಅಸ್ಥಿಪಂಜರ ಎಂದೂ ಬಳಸಿರುವ ತಪ್ಪು ನಡೆದಿದೆ. ಅಸ್ತಿ ಎಂದರೆ ಇದೆ ಎಂದರ್ಥ ಅಷ್ಟೆ. ಮೂಳೆಯ ಮಜ್ಜೆಯೊಳಗೆ  ಎನ್ನುವುದನ್ನು ಮೂಳೆಯೊಳಗಿನ ಮಜ್ಜೆಯಂತೆ ಎಂದು ತಿದ್ದಿಕೊಂಡು ಓದಿದರೆ ಸಿಗುವ ಅರ್ಥಾಂತರಗಳೇ ಬೇರೆ. ಉಳಿಯಿಡಿದು ಎಂದು ತಪ್ಪಾಗಿ ಬಳಸುವುದನ್ನು ಉಳಿ ಹಿಡಿದು ಎಂದು ಬಳಸುವುದು ಸೂಕ್ತ ತಾನೆ? 

ಆಧುನಿಕ ಕನ್ನಡ ಕಾವ್ಯದ ಅಸಂಖ್ಯಾತ ಪ್ರಯೋಗಗಳಲ್ಲಿ ತಕ್ಷಣಕ್ಕೆ ಥಟ್ಟಂತ ಕಣ್ಣಿಗೆ ಬೀಳುವ ಪ್ರಯೋಗ ತೇಜಶ್ರೀ ಮಾಡಿದ್ದಾರೆ. ಅವನರಿವಲಿ ಖಂಡಕಾವ್ಯ ಪ್ರಣಯವು ಮುಟ್ಟಿಸಬೇಕಾದ ಅಂತಿಮ ಸ್ಥಿತಿಯನ್ನು ಧ್ಯಾನಿಸುತ್ತಲೇ ಜಯದೇವನ ಗೀತ ಗೋವಿಂದದ ಪುನರೋದಿಗೆ ನಮ್ಮನ್ನು ಪ್ರೇರೇಪಿಸುತ್ತದೆಂಬುದು ಹೆಚ್ಚುಗಾರಿಕೆಯ ಮಾತಲ್ಲ. ಬದಲಿಗೆ ಅದು ಈ ಖಂಡಕಾವ್ಯವನ್ನು ಅಳೆಯಲು ಸದ್ಯಕ್ಕಿರುವ ಮತ್ತೊಂದು ತಕ್ಕಡಿ ಎಂದೇ ತೋರುತ್ತದೆ. 
ಶೀರ್ಷಿಕೆ ಅವನರಿವಲ್ಲಿ ಕವಿ ಜ.ನಾ.ತೇಜಶ್ರೀ ಪ್ರಕಟಣೆ ಕನ್ನಡ ಸಂಘ, ಸಂತ ಜೋಸೆಫರ ವಾಣಿಜ್ಯ ಕಾಲೇಜು, ಬೆಂಗಳೂರು     ಪುಟ ೮೮ ಮೌಲ್ಯ ರೂ ೮೦/- ಪ್ರಕಟಣ ವರ್ಷ-೨೦೧೧




    


ಕಾಮೆಂಟ್‌ಗಳಿಲ್ಲ: