ಒಟ್ಟು ಪುಟವೀಕ್ಷಣೆಗಳು

ಭಾನುವಾರ, ಮಾರ್ಚ್ 2, 2014

ಅಕ್ಕನಿಗೆ

ಪ್ರಜಾವಾಣಿ ದೀಪಾವಳಿ ವಿಶೇಷಾಂಕ ತೀರ್ಪುಗಾರರ ಮೆಚ್ಚುಗೆ ಪಡೆದ ಕವಿತೆ

ಅಕ್ಕನಿಗೆ....

ಬೆಟ್ಟದ ಮೇಲೊಂದು ಮನೆಯ ಮಾಡಿದರೆ
ಮೃಗಗಳಿಗಂಜುವುದನಿವಾರ್ಯ, ನಿಜ
ಜೊತೆ ಜೊತೆಗೇ ಹೊಸಿಲವರೆಗೂ ಬಂದು ಕೈಗೆಟಕುವ ಮೇಘ
ನೆತ್ತಿಗೆ ತಾಗಿದಂತೆ ಮಿನುಗುವ ನಕ್ಷತ್ರ ರಾಶಿ
ಜಯ–ವಿಜಯರಂತೆ ಸರದಿ ಬದಲಾಯಿಸುವ
ಸೂರ್ಯ–ಚಂದ್ರರ ಪಹರೆಯ ಪರಿಯನ್ನನುಭವಿಸುತ್ತಲೇ
ಲೌಕಿಕದ ಇರವ ಮರೆಯಬಹುದು.
ಸಮುದ್ರದ ತಡಿಯ ಜೋಪಡಿಯಲ್ಲಂತೂ
ನೊರೆ, ತೆರೆಗಳ ಜೊತೆಜೊತೆಗೇ
ದಡದುದ್ದಕ್ಕೂ ಚಾಚುವ ಚಾಮರದ ಸೇವೆ–
ಯ ಸುಖದ ಸನಿಹ ಮರಳ ಕಣಕಣದಲ್ಲಿ
ಫಳಫಳನೆ ಹೊಳೆವ ಶಿವನ ಕರುಣೆಯ ಕಿರಣ
ಹುಣ್ಣಿಮೆಗೆ ಉಕ್ಕೇರುವ ಕಡಲ ಒಳಸುಳಿ
ಮೀನು ಬೇಟೆಗೆ ನಿಂತ ದೋಣಿ ಸಾಲು.
ಸಂತೆಯೊಳಗಿನ ಮನೆಯ ಬಯಲಲ್ಲಿ
ಸದ್ದು, ಗದ್ದಲ, ಜನ, ಘಮ, ಧೂಮದ ಮೆರಗು
ಬಣ್ಣಬಣ್ಣದ ಹಣ್ಣು, ವಿಧ ವಿಧದ ತರಕಾರಿ,
ಕಾಳುಕಡಿ, ಜವಳಿ, ಅಗ್ಗದ ಚಪ್ಪಲಿ
ಕೊಂಬಿನಲಂಕಾರ, ಈಳಿಗೆಯ ಮಣೆ, ಹಗ್ಗದಂಗಡಿ ಕಡೆಗೆ
ಸೇಂದಿಯಂಗಡಿಯ ಪಕ್ಕ ಜೂಜುಕಟ್ಟೆಗೆ ಒರಗಿ
ಶಬ್ದಕ್ಕಂಜದೇ ನಿಂತು ಕಾಂಬುವ ಸಂತ.
ಅಕ್ಕ, ಹಾಗಾಗಿಯೇ
ಚನ್ನಮಲ್ಲಿಕಾರ್ಜುನನೇ ಇಳೆಗಿಳಿದು ಬಂದರೂ
ಲೋಕ ವ್ಯಾಪಾರದ ಜೊತೆಗೇ ಅವನೂ ಏಗಬೇಕು
ಸ್ತುತಿ, ನಿಂದೆ, ಇಚ್ಛೆ, ಈರ್ಷ್ಯೆಗಳ ನಡುವಲ್ಲೇ ಸಗ್ಗವ ಧ್ಯಾನಿಸಬೇಕು.

ಕಾಮೆಂಟ್‌ಗಳಿಲ್ಲ: