ಒಟ್ಟು ಪುಟವೀಕ್ಷಣೆಗಳು

ಭಾನುವಾರ, ಮಾರ್ಚ್ 2, 2014

ಶೋಧನೆಗೆ ಸಿಕ್ಕು ಹೈರಾಣಾದ ರಾಮ ಮತ್ತು ಗಾಂಧಿ.




ಹೆಗ್ಗೋಡಿನ ನೀನಾಸಂ ತಿರುಗಾಟದ ಹೆಸರಿನಲ್ಲಿ ಪ್ರತಿವರ್ಷ ದೇಶಾದ್ಯಂತ ನಡೆಸುವ ನಾಟಕ ಪ್ರದರ್ಶನಗಳಿಗೆ ತನ್ನದೇ ಆದ ಪ್ರೇಕ್ಷಕ ವರ್ಗವನ್ನು ಸಂಪಾದಿಸಿಕೊಂಡಿರುವುದು ರಂಗಾಸಕ್ತರೆಲ್ಲರಿಗೂ ತಿಳಿದ ವಿಷಯ. ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಪ್ರಥಮ ಪ್ರದರ್ಶನ ನಡೆಸಿ ಅಲ್ಲಿನ ಪ್ರತಿಕ್ರಿಯಗಳನ್ನು ಗಮನಿಸಿ ಅಲ್ಪಸ್ವಲ್ಪ ಬದಲಾವಣೆಯೊಡನೆ ಸಂಚಾರಕ್ಕೆ ಹೊರಡುವ ತಂಡ ರಂಗಾಸಕ್ತರಿರುವ ಆದರೆ ರಂಗಪ್ರದರ್ಶನಗಳಿಗೆ ಅಪರೂಪಕ್ಕೆ ಅವಕಾಶವಿರುವ ಊರುಗಳಲ್ಲಿ ತನ್ನ ಪ್ರಯೋಗಗಳನ್ನು ಪ್ರದರ್ಶಿಸುವುದರಿಂದಲೋ ಏನೋ ನೀನಾಸಂ ನಾಟಕಗಳ ಪ್ರದರ್ಶನಕ್ಕೆ ಇಂಥ ಊರುಗಳಲ್ಲಿ ಜನರ ಪ್ರತಿಕ್ರಿಯೆ ಮೇಲು ಸ್ತರದ್ದಾಗಿರುತ್ತದೆ. ತಿಪಟೂರಿನ ಭೂಮಿ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಹಾಸ್ಯನಟ ನರಸಿಂಹ ರಾಜು ನೆನಪಲ್ಲಿ ನಡೆಸಿದ ನಾಟಕೋತ್ಸವದಲ್ಲಿ ನೀನಾಸಂ ತನ್ನ ನಾಟಕಗಳನ್ನು ಪ್ರದರ್ಶಿಸಿತು.
೨೦೧೩ರ ತಿರುಗಾಟದಲ್ಲಿ ನೀನಾಸಂ ಎಂ.ಎಲ್. ಶ್ರೀಕಂಠೇಗೌಡರ ಸೀತಾಸ್ವಯಂವರಂ ಮತ್ತು ಮರಾಠಿ ಮೂಲದ ಅಜಿತ್ ದಳವಿಯವರ ಡಿ.ಎಸ್.ಚೌಗಲೆ ಅನುವಾದಿತ ಗಾಂಧಿ ವಿರುದ್ಧ ಗಾಂಧಿ ನಾಟಕಗಳನ್ನು  ಪ್ರದರ್ಶಿಸುತ್ತಿದೆ. ನಾಟಕಗಳ ಅಯ್ಕೆಗೂ ಮಾರ್ಗಸೂಚಿಗಳನ್ನು ಇಟ್ಟುಕೊಂಡಿರುವ ನೀನಾಸಂ,  ಜಾಗತಿಕ ವಲಯದಲ್ಲಿ ಶ್ರೇಷ್ಠವಾದುದೆಂದು ಈಗಾಗಲೇ ಪ್ರಸಿದ್ಧಗೊಂಡಿರುವ  ಕೃತಿಯೊಂದರ ಜೊತೆಗೆ ಮೂಲ ಕನ್ನಡ ಅಥವ ಸಂಸ್ಕೃತದ ಕ್ಲಾಸಿಕ್‌ಗಳನ್ನು ಪ್ರದರ್ಶಿಸುತ್ತ ಬಂದಿದೆ. ಗಾಂಧಿ ವಿರುದ್ಧ ಗಾಂಧಿ ಸಂಕೀರ್ಣ ವಸ್ತುವನ್ನು ಇಟ್ಟುಕೊಂಡ ಬಹು ಚರ್ಚಿತ ಕಥಾನಕವಾದರೆ, ಸೀತಾ ಸ್ವಯಂವರಂ ಆಧುನಿಕ ಕನ್ನಡ ಸಾಹಿತ್ಯದ ಆರಂಭದ ಕಾಲದಲ್ಲಿ ಪ್ರಹಸನದ ಜೊತೆ ಜೊತೆಗೇ ನಾಟಕೀಯ ಅಂಶಗಳುಳ್ಳ ಮೂಲ ರಾಮಾಯಣದ ವಿಶಿಷ್ಟ ರೂಪಾಂತರ. ಎರಡೂ ನಾಟಕಗಳ ನಾಯಕರೂ ಆದರ್ಶಕ್ಕೆ ಕಟ್ಟುಬಿದ್ದು ಶೋಧನೆಗೊಳಗಾದವರೇ ಆಗಿರುವುದು ವಿಶೇಷ. ಏಕೆಂದರೆ ಶ್ರೀರಾಮನನ್ನು ಮರ್ಯಾದಾ ಪುರುಷೋತ್ತಮನೆಂದು ನಂಬಿರುವ ನಮಗೆ ಗಾಂಧಿ ಆದರ್ಶದ ಪರಿಪಾಕ. ಆ ಕಾರಣದಿಂದಾಗಿ ರಾಮ ಮತ್ತು ಗಾಂಧಿ ಯಾವತ್ತಿಗೂ ಪ್ರಸ್ತುತರೇ ಮತ್ತು ಜನಸಮುದಾಯವೊಂದು ತನ್ನನ್ನು ತಾನು ವಿಮರ್ಶಿಸಿಕೊಳ್ಳಲು, ತಿದ್ದಿಕೊಳ್ಳಲು ಈ ಎರಡೂ ಪಾತ್ರಗಳ ಪರಿಧಿ ಮಹತ್ವದ್ದು.
ಮೊದಲ ನಾಟಕ ಸೀತಾ ಸ್ವಯಂವರಂನಲ್ಲಿ ರಾವಣನಿಂದ ರಾಮನ ಸತ್ವ ಪರೀಕ್ಷೆಯಾದರೆ ಎರಡನೆಯ  ನಾಟಕ ಗಾಂಧಿ ವಿರುದ್ಧ ಗಾಂಧಿಯಲ್ಲಿ ಮಹಾತ್ಮನ ಪರೀಕ್ಷೆ ಅವರ ಮಗ ಹರಿಲಾಲನ ಮೂಲಕವೇ ನಡೆಯುತ್ತದೆ. ಪರೀಕ್ಷೆಯಲ್ಲಿ ಸತ್ ಅಂದರೆ ಆದರ್ಶ ಗೆದ್ದಿತೇನೋ ಸರಿ. ಆದರೆ ಪ್ರತಿನಾಯಕರೇಕೆ ತಮ್ಮ ಸೋಲು ತಿಳಿದಿದ್ದೂ ಈ ಪರೀಕ್ಷೆಗೆ ಮುಂದಾಗುತ್ತಾರೆ ಎನ್ನುವುದು ಸೋಜಿಗವಲ್ಲದೇ ಮತ್ತೇನು? ಅಗ್ನಿಗೆ ಪತಂಗ ಹಾಯುವಂತೆ ಪ್ರತಿನಾಯಕರ ಪಾತ್ರಗಳು ನಾಯಕನ ಪಾತ್ರದೊಂದಿಗೆ ಕರಗಿಹೋಗುತ್ತವೆ, ಆ ಮೂಲಕ ಗೊಂದಲದಲ್ಲಿರುವ ವರ್ತಮಾನಕ್ಕೆ ಸ್ಪಷ್ಟ ದಿಕ್ಕನ್ನೂ, ನೇರ ದಾರಿಯನ್ನೂ ಕಲಿಸಿಕೊಡುತ್ತವೆ. ಶ್ರೀಕಂಠೇಶಗೌಡರ ಸೀತಾಸ್ವಯಂವರಂ ಮೂಲ ರಾಮಾಯಣದ ಬಾಲಕಾಂಡದ ವಿಸ್ತರಿತ ಕಲ್ಪಿತ ರೂಪ. ವಿಶ್ವಾಮಿತ್ರರು ರಾಮ ಲಕ್ಷ್ಮಣರನ್ನು ಕೌಶಿಕಾಶ್ರಮಕ್ಕೆ ಕರೆತಂದಿರುವಾಗಲೇ ಸೀತೆಯ ರೂಪಲಾವಣ್ಯಗಳನ್ನು ಅವರಿವರಿಂದ ಕೇಳಿತಿಳಿದುಕೊಂಡ ರಾವಣ ಅವಳನ್ನು ವರಿಸುವ ಸಲುವಾಗಿ ರಾಮನ ರೂಪದಲ್ಲಿ ಮಿಥಿಲೆಗೆ ಬರುತ್ತಾನೆ. ಅವನ ಸಹಚರರಾದ ಮಾರೀಚ ಕರಾಳರೂ ವೇಷ ಬದಲಿಸಿಕೊಂಡು ರಾವಣನನ್ನನುಸರಿಸುತ್ತಾರೆ. ಹೀಗೆ ಪಾತ್ರಗಳೇ ಅದಲುಬದಲಾಗಿ ನಿಜದ ರಾಮನನ್ನೇ ಗೊಂದಲದಲ್ಲಿ ಕೆಡವಿ ಮಾಯಾ ಸೀತೆಯ ಮೋಹಕ್ಕೆ ರಾಮನೇ ಮಾರುಹೋಗಿ ಅಗ್ನಿಗೆ ಹಾಯಲು ಹವಣಿಸುತ್ತಾನೆ. ನಿಜದ ರಾಮನಾರೆಂದು ಪರೀಕ್ಷಿಸಲು ಜನಕಮಹಾರಾಜ ಶಿವಧನಸ್ಸನ್ನೆತ್ತಿ ಹೆಗಲೇರಿಸುವ ಪಂಥ ಒಡ್ಡುತ್ತಾನೆ. ರಾವಣನನ್ನು ಅವಮಾನಿಸಿದ ಕ್ಷತ್ರಿಯ ರಾಮನನ್ನು ಭಾರ್ಗವ ರಾಮ ಬಂದು ಶ್ರೀರಾಮನ ಪ್ರತಾಪಕ್ಕೆ ಮಾರುಹೋಗುವುದರೊಂದಿಗೆ ನಾಟಕ ಮುಗಿಯುತ್ತದೆ.
ಇಡೀ ನಾಟಕವನ್ನು ಯಕ್ಷಗಾನದ ನಾಟ್ಯರೂಪದಲ್ಲೆ ಪ್ರಸ್ತುತಪಡಿಸುವ ನಿರ್ದೇಶಕ ಮಂಜುನಾಥ ಬಡಿಗೇರರು ಸಾಂಪ್ರದಾಯಿಕ ಕಲಾಶೈಲಿಯನ್ನು ಆಧುನಿಕ ಮಾಧ್ಯಮಕ್ಕೆ ಬಗ್ಗಿಸಲು ಸಾಕಷ್ಟು ಶ್ರಮ ವಹಿಸಿದ್ದಾರೆ. ಆದರೆ ಚಂಡೆಯ ಸದ್ದಿಗೆ ತಕ್ಕನಾದ ಏರುದನಿಯ ಸಂಭಾಷಣೆ ಆಧುನಿಕ ರಂಗಪ್ರಯೋಗದಲ್ಲಿ ಅಸಾಧ್ಯವಾದ ಕಾರಣ ಸೂಕ್ಷ್ಮಗಳು ಕಳೆದುಹೋಗಿ ಸಾಂಧ್ರ ರಸಾನುಭವ ಒಡಮೂಡಿಲ್ಲ. ಆದರೂ ಪುಷ್ಪಕ ವಿಮಾನದ ಕಲ್ಪನೆ, ಮುಖವಾಡಗಳ ಉಪಯೋಗ, ನೆರಳು ಬೆಳಕಿನ ವೈವಿಧ್ಯತೆ ಪ್ರಯೋಗವನ್ನು ಗೆಲ್ಲಿಸುತ್ತದೆ. ರಾವಣ ಪಾತ್ರಧಾರಿಯ ಅಂಗ ಸೌಷ್ಠವದೆದುರು ಶ್ರೀರಾಮನ ಪಾತ್ರಧಾರಿ ಸಪೂರ. ಮಾರೀಚ ಕರಾಳ ಪರಶುರಾಮರೆದುರು ಉಳಿದ ಪಾತ್ರಗಳು ಗೌಣ. ಹಿನ್ನೆಲೆ ಸಂಗೀತವೂ ಅದ್ಭುತವೇ.
ಇನ್ನು ಗಾಂಧಿ ವಿರುದ್ಧ ಗಾಂಧಿ ಮಹಾತ್ಮ ಗಾಂಧಿಯವರ ವೈಯುಕ್ತಿಕ ಬದುಕಿನ ಒಂದು ಸೀಳುನೋಟ. ಆದರ್ಶದ ಹೆಸರಿನಲ್ಲಿ ಗಾಂಧಿ ತಮ್ಮ ಕುಟುಂಬದ ಸದಸ್ಯರನ್ನು ಹೆಜ್ಜೆಹೆಜ್ಜೆಗೂ ಅವಮಾನಿಸಿದರು, ತಾತ್ವಿಕ ಅನುಸಂಧಾನವೇ ಮುಖ್ಯವಾಗಿದ್ದ ಗಾಂಧಿ ಸ್ವಂತ ಮಕ್ಕಳ ಶಿಕ್ಷಣಕ್ಕೂ ಎರವಾಗಿದ್ದರು ಎಂಬೆಲ್ಲ ಖಾಸಗಿ ವಿವರಗಳ ಸೂಕ್ಷ್ಮಸ್ತರದ ಅತಿಭಾವುಕತೆಯನ್ನೇ (ಮೆಲೋಡ್ರಾಮ) ಮಾದರಿಯಾಗಿಟ್ಟುಕೊಂಡಿರುವ ಪ್ರಯೋಗ. ಕಡೆಯ ದೃಶ್ಯದಲ್ಲಿ ರಾಜಘಾಟಿನ ಪ್ರತಿಭಟನೆಗಳ ಬಗ್ಗೆ ಗಾಂಧಿ ಪಾತ್ರಧಾರಿ ಹೇಳುವ ವ್ಯಂಗ್ಯದಮಾತೇ ಇಡೀ ನಾಟಕವನ್ನು ಬಂಧಿಸಿರುವ ವಸ್ತು.
ನಾಟಕದುದ್ದಕ್ಕೂ ಹರಿಲಾಲನ ಶೋಧನೆಗೊಳಪಡುವಂತೆ ಚಿತ್ರಿತವಾಗಿರುವ ಗಾಂಧಿಯ ಪಾತ್ರಚಿತ್ರಣ ಈಗಾಗಲೇ ನಾವೆಲ್ಲ ಮೂರ್ತೀಕರಿಸಿಕೊಂಡಿರುವ ಗಾಂಧಿಯ ಪಾತ್ರವನ್ನು ಅಲ್ಲಗಳೆಯುವಷ್ಟು ಶಕ್ತಿಶಾಲಿಯಾಗಿ ಮೂಡಿಬಂದಿದೆ. ಏಕೆಂದರೆ ಹರಿಲಾಲನ ಪಾತ್ರಸೃಷ್ಟಿಯೇ ಅದ್ಭುತ ಕಲ್ಪನೆ ಮತ್ತು ನಾಟಕೀಯ ಅಂಶಗಳಿಂದ ಸುಪುಷ್ಟವಾಗಿದೆ. ಚಳವಳಿ ಮತ್ತು ನೈತಿಕ ಶಿಕ್ಷಣವೇ ಮುಖ್ಯವೆಂದು ಭಾವಿಸಿದ್ದ ಗಾಂಧಿ ಹರಿಲಾಲ ಬ್ಯಾರಿಸ್ಟರ್ ಆಗುವುದನ್ನು ಪ್ರೋತ್ಸಾಹಿಸಲಿಲ್ಲವೆಂಬ ಏಕೈಕ ಕಾರಣಕ್ಕೆ ಹರಿಲಾಲ ತಂದೆ ತನ್ನ ವಿರೋಧಿ ಎಂದೇ ಭಾವಿಸುತ್ತಾನೆ. ಮುಂದೆ ತನ್ನ ನಡಾವಳಿಗಳಿಂದ ಗಾಂಧಿಯ ವ್ಯಕ್ತಿತ್ವವನ್ನು ಭಗ್ನಗೊಳಿಸುತ್ತ ಹೋಗುವ ಹರಿಲಾಲ ಅದರಲ್ಲಿ ಸಾಕಷ್ಟು ಸಫಲನೂ ಆಗುತ್ತಾನೆ. ಕಟ್ಟಿಕೊಂಡಿರುವ ಆದರ್ಶವನ್ನು ಭಂಗಿಸುವುದೆಂದರೆ ವ್ಯಕ್ತಿತ್ವದ ದೃಷ್ಟಿಕೋನವನ್ನೇ ಬದಲಿಸಿದಂತೆ. ಈ ನಿಟ್ಟಿನಲ್ಲಿ ನಾಟಕಕಾರರ ಯತ್ನ ಯಶಸ್ವಿಯಾಗಿದೆ. ನಾಟಕದುದ್ದಕ್ಕೂ ಗಾಂಧೀತತ್ವ ವಿಚಾರಗಳನ್ನು ವಿರೋಧಿಸುತ್ತಲೇ ಇರುವ ಹರಿಲಾಲ ತನ್ನನ್ನು ಪರಿಚಯಿಸಿಕೊಳ್ಳುವುದು ಮಾತ್ರ ತಾನು ಛೋಟ ಗಾಂಧಿಯೆಂದೇ! ಸ್ವಾರಸ್ಯವೆಂದರೆ ಅವನು ಮುಸ್ಲಿಮನಾಗಿ ಮತಾಂತರ ಗೊಂಡಾಗ ಕೂಡ ಅವನು ಅಬ್ದುಲ್ಲಗಾಂಧಿಯಾಗಿಯೇ ಇರುತ್ತಾನೆ. ಅಂದರೆ ಗಾಂಧಿ ಎನ್ನುವುದರಿಂದ ಅವನು ಬಿಡಿಸಿಕೊಳ್ಳಲಾರ, ಥೇಟ್ ಈ ಹೊತ್ತಿನ ಭಾರತದ ರಾಜಕಾರಣದಂತೆ, ಗಾಂಧಿಯ ತತ್ವವನ್ನು ಅರ್ಥಮಾಡಿಕೊಳ್ಳದೆಯೂ ಗಾಂಧಿ ಪಟಕ್ಕೆ ಮಾತ್ರ ಹೂಹಾರ ತಗುಲಿಸುವ ನಮ್ಮ ರಾಜಕೀಯ ಪಕ್ಷಗಳಂತೆ!
ಮೂಲ ನಾಟಕದಲ್ಲಿನ ತಾಕತ್ತೇ ಬೃಹತ್ತಾಗಿರುವಾಗ ನಿರ್ದೇಶಕ ಎಂ. ಗಣೇಶ್ ಪಾತ್ರಗಳಲ್ಲಿನ ಅತಿಭಾವುಕತೆಯನ್ನೇ ನಾಟಕದ ಜೀವಾಳವಾಗಿಸಿದ್ದಾರೆ. ಸಂಘರ್ಷಗಳ ನಿರ್ವಹಣೆಯನ್ನು ನೋವಿನ ಮೂಲಕವೂ ವ್ಯಕ್ತಪಡಿಸಬಹುದೆಂಬ ಸತ್ಯ ಅವರಿಗೆ ತಿಳಿದಿಲ್ಲದಿರುವುದರಿಂದಲೇ ಕಂಠಪೂರ್ತಿ ಕುಡಿದು ಬಂದಾಗಲೂ ಹರಿಲಾಲ ತಾಯಿಯ ತೊಡೆಯ ಮೇಲೆ ತಲೆಯಿಟ್ಟು ಮಲಗುವುದು ಸಾಧ್ಯವಾಗಿದೆ! ನಿರ್ದೇಶಕರ ದೃಷ್ಟಿ ಹರಿಲಾಲನ ಕಡೆಗೇ ಇರುವುದರಿಂದ ಗಾಂಧಿಯನ್ನು ಅವನು ರಿಂಗ್ ಮಾಸ್ಟರ್ ಎಂದು ಸಂಬೋಧಿಸುತ್ತಾನೆ!
ಇದುವರೆಗೂ ಗಾಂಧಿ ಎಂಬ ಶಬ್ದ ನಮ್ಮೊಳಗೆ ತುಂಬಿದ್ದ ಆದರ್ಶವನ್ನು ಭಗ್ನಗೊಳಿಸುವುದರಲ್ಲಿ ನಾಟಕ ಯಶಸ್ವಿಯಾಗಿದೆ. ಕಡೆಯ ದೃಶ್ಯದಲ್ಲಿ ಹರಿಲಾಲ ತಪ್ಪೊಪ್ಪಿಕೊಳ್ಳದೆಯೇ ತನ್ನ ದಾರಿ ತನ್ನದೆನ್ನುವ ಹಾಗೆ ಗಾಂಧಿಯ ವಿರುದ್ಧ ದಿಕ್ಕಿನಲ್ಲಿ ನಡೆದು ಹೋಗುವುದು ಕೂಡ ಒಟ್ಟೂ ನಾಟಕ ಸೃಜಿಸುವ ಅಂತರಾರ್ಥ.
ಪುತಿನ ಅವರ ಮೇಲೊಂದು ಗರುಡ ಹಾರುತಿಹುದು, ಕೆಳಗದರ ನೆರಳು ಓಡುತಿಹುದು ಮತ್ತು ಮೂಡ್ನಾಕೂಡು ಚಿನ್ನಸ್ವಾಮಿಯವರ ನಮ್ಮ ಎಲುಬಿನ ಹಂದರದೊಳಗೊಂದು ಕವಿತೆಗಳನ್ನು ಸಶಕ್ತವಾಗಿ ಬಳಸಲಾಗಿದೆ. ಹಿರಿಯ ಹರಿಲಾಲನ ಪಾತ್ರದಲ್ಲಿ ತಾನೇ ಸ್ವತಃ ಹರಿಲಾಲನೇ ಆಗಿಬಿಡುವ ಚಂದ್ರಶೇಖರ ಯಶಸ್ವಿ ನಟನಾಗುವುದರಲ್ಲಿ ಸಂದೇಹಗಳೇ ಬೇಕಿಲ್ಲ. ಸ್ವತಃ ಕಥಾವಸ್ತುವೇ ಇಲ್ಲಿ ನಾಯಕನಾಗಿರುವುದರಿಂದ ಪಾತ್ರಧಾರಿಗಳು ಬರಿಯ ನೆಪಕ್ಕಷ್ಟೇ ನಟಿಸುತ್ತಾರೆ. ಕಥೆಯೇ ಎಲ್ಲರನ್ನೂ ಎಲ್ಲವನ್ನೂ ಮುನ್ನಡೆಯಿಸಿಬಿಡುತ್ತದೆ. ರಂಗಸಜ್ಜಿಕೆ, ಹಿತವಾದ ಸಂಗೀತಗಳು ಕೂಡ ಪ್ರದರ್ಶನಕ್ಕೆ ಕಳೆಕೊಟ್ಟಿವೆ.


ಕಾಮೆಂಟ್‌ಗಳಿಲ್ಲ: