ಒಟ್ಟು ಪುಟವೀಕ್ಷಣೆಗಳು

ಶನಿವಾರ, ಡಿಸೆಂಬರ್ 27, 2008

ನಾಯಿ ಸಾಕುವ ನಾಯಿ ಪಾಡು....

‘ನಾಯಿ ಮನೆಕಾಯುತ್ತದೆ. ತಂಗಳನ್ನೂ ಅಮೃತವೆನ್ನುವಂತೆ ಉಣ್ಣುತ್ತದೆ. ಎಂದೆಂದೂ ಮನೆಯ ಸುತ್ತಳತೆಯಲ್ಲೇ ಇದ್ದು ಹೋಗಿ ಬರುವವರ ನಿಗ ನೋಡುತ್ತದೆ. ಬೇಜಾರಿನ ಘಳಿಗೆಗಳಲ್ಲಿ, ಸಂತಸದ ಸಂದರ್ಭಗಳಲ್ಲೂ ಮನೆಯ ಯಜಮಾನನ ಕಾಲ ಬುಡದಲ್ಲೇ ಇದ್ದು ಆ ಕ್ಷಣಗಳ ಸಾಕ್ಷಿಯಾಗುತ್ತದೆ....’

ನಾಯಿಯ ಮೇಲೆ ಪ್ರಬಂಧ ಬರೆಯಲು ತಿಣುಕುತ್ತಿದ್ದ ನನ್ನ ಚಿಕ್ಕ ಮಗನಿಗೆ ಇಷ್ಟು ವಿವರ ಕೊಟ್ಟದ್ದೇ ತಪ್ಪಾಗಿಬಿಟ್ಟಿತು. ಪ್ರಬಂಧ ಬರೆಯುವುದನ್ನು ಅಷ್ಟಕ್ಕೇ ಬಿಟ್ಟವನೇ ತನಗೊಂದು ನಾಯಿಮರಿ ಬೇಕೇ ಬೇಕೆಂದು ಹಟ ಹಿಡಿದು ಕುಳಿತು ಬಿಟ್ಟ. ಸಾಮ, ಬೇಧ, ಮುಗಿದು ದಂಡನೆಯ ತುರೀಯಕ್ಕೆ ನಾನಿಳಿದರೂ ಅವನು ಜಪ್ಪಯ್ಯ ಅನ್ನದೇ ನಾಯಿಯ ಧ್ಯಾನದಲ್ಲೇ ಊಟ, ತಿಂಡಿಗಳನ್ನು ಬಿಟ್ಟು ಸತ್ಯಾಗ್ರಹದ ಹಾದಿ ತುಳಿದ. ಎಷ್ಟಾದರೂ ಹೆತ್ತ ಕರುಳು. ಇವಳೂ ಮಗನ ಪರವಾಗಿ ನಿಂತಳು. ಇಷ್ಟೂ ದಿನ ನನ್ನೆದುರು ನಿಲ್ಲಲೂ ಹೆದರುತ್ತಿದ್ದ ನನ್ನ ಮಗಳೂ ತಮ್ಮನ ಪರವಾಗಿ ವಾದಿಸತೊಡಗಿದಳು.

ಹೀಗೆ ಮನೆಯವರೆಲ್ಲರೂ ನಾಯಿಯೊಂದನ್ನು ತಂದು ಸಾಕುವುದಕ್ಕೆ ತುದಿಗಾಲಲ್ಲಿರುವಾಗ ನನ್ನ ಎಲ್ಲ ಮಾತುಗಳೂ ಅವರನ್ನು ತಡೆಯಲು ವಿಫಲವಾದುವು. ನಾಯಿ ಸಾಕುವುದಕ್ಕೆ ನನ್ನ ವಿರೋಧ ಇರದಿದ್ದರೂ ಅದರಿಂದಾಗಬಹುದಾದ ಹೆಚ್ಚಿನ ಕೆಲಸ ಮಾಡುವವರು ಯಾರೆಂಬುದು ನನಗೆ ಮುಖ್ಯವಾಗಿತ್ತು. ನಾಯಿ ಸಾಕುವುದು ಅಂದರೆ ಬೀದಿಯ ದೊಡ್ಡ ನಾಯಿಯನ್ನು ಕುರು ಕುರು ಅಂದು ಕರೆದು ಮಿಕ್ಕಿದ ಅನ್ನ ಹಾಕುವ ಹಾಗಲ್ಲ. ಮರಿಯೊಂದನ್ನು ತಂದು ಅದು ದೊಡ್ಡದಾಗುವವರೆಗೂ ಕಾಪಾಡುವುದು ಎಷ್ಟು ಕಷ್ಟದ ಕೆಲಸ ಅಂತ ಅನುಭವಿಸೇ ತಿಳಿಯಬೇಕು. ಅದಕ್ಕೂ ಸ್ನಾನ ಮಾಡಿಸಬೇಕು. ಜಡ್ಡಾದಾಗ ಆಸ್ಪತ್ರೆಗೆ ಒಯ್ಯಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಬೆಳಗ್ಗಿನ ಸಿಹಿ ನಿದ್ದೆಯನ್ನು ತ್ಯಜಿಸಿ, ನಾಯಿಯನ್ನು ತಪ್ಪದೇ ಬಯಲಿಗೆ ಕರೆದೊಯ್ಯಬೇಕು. ಗಲೀಜಾದರೆ ಕರ್ಮವೆಂದು ತಿಳಿದು ಬಾಚಿ ಒಗೆಯಬೇಕು. ಮನೆಗೆ ಬಂದ ನೆಂಟರನ್ನೋ, ಪೇಪರು-ಹಾಲಿನ ಹುಡುಗನನ್ನೋ ಅಪ್ಪಿ, ತಪ್ಪಿ ಕಚ್ಚಿದರೆ ದಂಡ ತುಂಬಿಕೊಡಲು ಸದಾ ಸಿದ್ಧವಾಗಿರಬೇಕು.

ನನ್ನ ಮಾತುಗಳನ್ನು ಹೆಂಡತಿ ಮಕ್ಕಳು ಕೇಳಲೇ ಇಲ್ಲ. ಯಾರ ಮನೆಯಲ್ಲಿ ತಾನೇ ಕೇಳುತ್ತಾರೆ? ಜಾತಿ ನಾಯಿ ತಂದರೆ ಅದಕ್ಕೆ ಮಾಂಸ, ಮೊಟ್ಟೆ ಕೊಡಬೇಕಾಗುತ್ತದದೆಂಬ ಕಾರಣಕ್ಕೆ ಕಂತ್ರಿ ಜಾತಿಯ ಮರಿಯನ್ನೇ ಮನೆ ತುಂಬಿಸಿಕೊಳ್ಳಲು ನನ್ನ ಹೆಂಡತಿ ಮಕ್ಕಳಿಗೆ ಸೂಚಿದಳು. ಜಾತಿ ನಾಯಿಯ ಮರಿಗೆ ಸಾವಿರಗಟ್ಟಲೇ ಸುರಿಯುವ ಅಪಾಯ ಸ್ವಲ್ಪದರಲ್ಲಿ ಕಳೆಯಿತು. ಆದರೆ ಶಾಲೆಯಿಂದ ಬಂದ ಕೂಡಲೇ ನನ್ನ ಮಗ ನಾಯಿ ಮರಿ ಹುಡುಕಿಕೊಂಡು ಬೀದಿ, ಬೀದಿ ಸುತ್ತುತ್ತಿದ್ದಾನೆಂದು ಮಗಳು ವರದಿ ಮಾಡಿದಳು. ಹೋಂ ವರ್ಕನ್ನು ಮಾಡದೇ, ಯೂನಿಫಾರಂ ಬದಲಿಸದೇ, ಅನ್ನ ನೀರುಗಳ ಮೋಹ ಕಳೆದುಕೊಂಡು ತಿರುಗುತ್ತಿರುವ ಮಗನ ಬಗ್ಗೆ ಮರುಕ ಹುಟ್ಟಿತು. ಇದು ನಾಯಿ ಮರಿ ಸಿಕ್ಕುವ ಕಾಲ ಅಲ್ಲ, ಆ ಕಾಲ ಬಂದಾಗ ಬೀದಿ ಬೀದಿಗಳಲ್ಲಿ ಬಿಟ್ಟಿ ತಿರುಗುತ್ತಿರುತ್ತವೆ ಅಂತ ಅವನಿಗೆ ಹೇಳಿ, ಹೇಳಿ ಸಾಕಾಯಿತೇ ವಿನಾ ಅವನನ್ನು ನಾಯಿ ಧ್ಯಾನದಿಂದ ಬಿಡಿಸಲಾಗಲಿಲ್ಲ. ಆಸ್ಪತ್ರೆಗಳಲ್ಲಿ ಎಲ್ಲ ಕಾಲಗಳಲ್ಲೂ ಮಕ್ಕಳು ಹುಟ್ಟುತ್ತಲೇ ಇರುತ್ತವೆ. ನಾಯಿಯೂ ಸಿಕ್ಕಬಹುದು. ಆಸ್ಪತ್ರೆಯಿಂದಲೇ ತರೋಣ ಅನ್ನುವ ಅವನ ವಾದಕ್ಕೆ ಉತ್ತರ ಗೊತ್ತಾಗದೇ ಸುಮ್ಮನಾದೆ.

ಅಂತೂ ಇಂತೂ ನಾಯಿ ಮರಿ ಸಿಕ್ಕಿದ್ದೇ ಮತ್ತೊಂದು ಕಥೆ. ತಮ್ಮ ಮನೆಯ ನಾಯಿ ಆರು ಮರಿಗಳನ್ನು ಈದಿದೆ ಅಂತ ನಮ್ಮ ಆಫೀಸಿನ ಪ್ಯೂನ್ ಸಿದ್ದಯ್ಯ ಒಂದು ಗಂಟೆ ಮೊದಲೇ ಮನೆಗೆ ಹೋಗಲು ನನ್ನ ಪರ್ಮಿಷನ್ ಕೇಳಿದ. ಬಾಣಂತಿ ಮಕ್ಕಳನ್ನು ನೋಡಲು ಓಣಿಯ ಹುಡುಗರೆಲ್ಲ ಸೇರಿ ಗದ್ದಲ ಮಾಡುವುದನ್ನು ಕಣ್ಣಿಗೆ ಕಟ್ಟುವ ಹಾಗೆ ವಿವರಿಸಿದ. ಆರು ಮರಿಗಳಲ್ಲಿ ಈಗಾಗಲೇ ಮೂರು ಗಂಡುಮರಿಗಳನ್ನು ಅವರ ನೆಂಟರು ತಮಗೆ ಕೊಡಲೇ ಬೇಕೆಂದು ಕೇಳಿದ್ದಾರೆಂದೂ ಸೇರಿಸಿದ. ಮರುಕ್ಷಣವೇ ನನ್ನ ಮಗನ ನಾಯಿ ಹಂಬಲ ನೆನಪಾಗಿ, ನಮಗೊಂದು ಮರಿಯನ್ನು ಕೊಡಬೇಕೆಂದು ಕೇಳಿದೆ. ಪ್ರಾಣಿ, ಪಕ್ಷಿಗಳ ಮೇಲೆ ಅಷ್ಟೇನೂ ಒಲವಿರದ ನನ್ನ ಬೇಡಿಕೆಗೆ ಸಿದ್ದಯ್ಯ ತಕ್ಷಣವೇ ಒಪ್ಪಿಗೆ ಕೊಟ್ಟುದುದಲ್ಲದೇ ಅದರ ನಿಗ ನೋಡುವುದರಲ್ಲಿ ತಾನೂ ಸಹಾಯ ಮಾಡುವುದಾಗಿ ಮಾತು ಕೊಟ್ಟ. ಮತ್ತು ನಾಯಿ ಸಾಕುವ ನನ್ನ ಮಗನ ನಿರ್ಧಾರವನ್ನು ಮನಸಾರೆ ಹೊಗಳಿದ.

ನಾಯಿಮರಿಯ ಅಡ್ರೆಸೇನೋ ಸಿಕ್ಕಿತು. ಆದರೆ ಅದನ್ನು ಮನೆಗೆ ತರುವ ಬಗ್ಗೆ ಈಗ ಯೋಚನೆ ಸುರುವಾಯಿತು. ಜೊತೆಗೆ ನನಗೆ ಸಿದ್ದಯ್ಯನ ಮನೆಯೂ ಗೊತ್ತಿರದ ಕಾರಣ ಸಿದ್ದಯ್ಯನನ್ನೇ ಮತ್ತೆ ಪುಸಲಾಯಿಸಬೇಕಾಗಿ ಬಂತು. ನಾಯಿ ಮರಿಯನ್ನು ಮನೆಗೆ ತರುವ ಸಂತೋಷದಲ್ಲಿ ನನ್ನ ಮಗ ಈಗಾಗಲೇ ತಾನು ದುಡ್ಡು ಕೂಡಿಡುವ ಹಂದಿ ಬೊಂಬೆಯ ಬಾಯಿಯಿಂದ ಹಲವು ರೂಪಾಯಿಗಳನ್ನು ಕಕ್ಕಿಸಿ ಕ್ಯಾಡ್ ಬರೀಸ್ ಚಾಕಲೇಟುಗಳನ್ನು ಕೊಂಡು ತಂದು ಬೀದಿಯ ಮಕ್ಕಳಿಗೆಲ್ಲ ಹಂಚಿಬಿಟ್ಟಿದ್ದ. ಇನ್ನು ತಡ ಮಾಡುವುದು ಬೇಡವೆಂದು ಮಾರನೇ ದಿನವೇ ಕಾರಿನಲ್ಲಿ ಮಗ ಮತ್ತು ಮಗಳನ್ನಲ್ಲದೇ ಈಗಾಗಲೇ ನಾಯಿ ಸಾಕಿದ ಅನುಭವವಿರುವ ಮಗಳ ಕ್ಲಾಸ್ ಮೇಟ್ ಅನಿತಾಳನ್ನೂ ಕರೆದುಕೊಂಡು ಹೊರಟೆ.

ಆಗಲೇ ಹಗಲು ಕಳೆದು ರಾತ್ರಿ ಅಡಿ ಇಡುತ್ತಿದ್ದ ಹೊತ್ತು. ಸಿದ್ದಯ್ಯ ಕೊಟ್ಟಿದ್ದ ಅಡ್ರೆಸ್ಸಿಗೆ ಅಂತೂ ಇಂತೂ ತಲುಪಿದರೆ ಆಸಾಮಿ ಅವನೇ ಪತ್ತೆ ಇಲ್ಲ. ಇನ್ನೂ ಆಫೀಸಿಂದ ಬಂದೇ ಇಲ್ಲ ಅಂದ ಅವನ ಕುಲಪುತ್ರ. ಪುಣ್ಯಕ್ಕೆ ಯಾವಾಗಲೋ ಅಪ್ಪನನ್ನು ಕಾಣಲು ಬಂದವನು ನನ್ನನ್ನು ನೋಡಿದ್ದ. ಅಪ್ಪನ ಆಫೀಸಿನವರು ಎಂಬ ಕಾರಣಕ್ಕೆ ಅವನೂ ನಾಯಿಮರಿಯೊಂದನ್ನು ನಮಗೆ ಕೊಡಲು ಒಪ್ಪಿದ. ಸರಿ. ತಾಯಿ ನಾಯಿಯ ಕಣ್ಣು ತಪ್ಪಿಸಿ ಒಂದು ಪುಟಾಣಿ ಸ್ಮಾರ್ಟ್ ಮರಿಯನ್ನು ತಂದು ಕಾರಿನ ಹಿಂದಿನ ಸೀಟಿನಲ್ಲಿ ಇಟ್ಟ. ಅವರಮ್ಮ ನಾಯಿ ಮರಿ ಕೂರಿಸಿಕೊಂಡು ಬನ್ನಿರೆಂದು ಕೊಟ್ಟಿದ್ದ ಪ್ಲಾಸ್ಟಿಕ್ ಬುಟ್ಟಿಯನ್ನು ನನ್ನ ಮಗಳು ತೋರಿಸುತ್ತಿದ್ದರೂ ಹಿಂದಿನ ಸೀಟಿನಲ್ಲಿ ವಿರಾಜಮಾನವಾಗಿದ್ದ ಗ್ರಾಮಸಿಂಹದ ಮೋಹಕ ಮುಖಕ್ಕೆ ಸೋತ ನಾನು ಅಲ್ಲೇ ಇರಲಿ ಬಿಡೆ ಎಂದಂದು ಕಾರಿನ ಬಾಗಿಲು ಮುಚ್ಚಿ ಮುಂದೆ ಅಡಿಇಟ್ಟಿದ್ದೆ, ಅಷ್ಟೆ. ಅದೆಲ್ಲಿತ್ತೋ ಆ ತಾಯಿ ನಾಯಿ ವಾಸನೆ ಗ್ರಹಿಸಿಯೇ ಬಂದಿರಬೇಕು. ನನ್ನುದ್ದಕ್ಕೂ ಎಗರಿ ಎಗರಿ ಬೊಗಳ ತೊಡಗಿತು. ಅಂತೂ ಆ ವೇಳೆಗೆ ಅಲ್ಲಿಗೆ ಯೋಜನದೂರಕ್ಕೂ ತನ್ನ ಬಾಯಿಂದ ಬರುವ ಹೆಂಡದ ವಾಸನೆಗೆ ಪ್ರಸಿದ್ಧನೂ, ಹಾಗೇ ಅಂತಹ ಸ್ಥಿತಿಯಲ್ಲಿ ಎದುರು ಸಿಕ್ಕ ಎಲ್ಲರನ್ನೂ ಬಯ್ದು ಕೆಡವುದರಲ್ಲಿ ನಿಷ್ಣಾತನೂ ಆದ ಸಿದ್ದಯ್ಯನ ಸವಾರಿ ಬಂದಿತು. ಪುಣ್ಯಕ್ಕೆ ನನ್ನನ್ನು ಎಂದಿನ ಗೌರಾವಾದರಗಳಲ್ಲೇ ಕಂಡು ಮೇಲೆ ಬೀಳುತ್ತಿದ್ದ ತನ್ನ ನಾಯಿಯಿಂದ ನನ್ನನ್ನು ಬಚಾವು ಮಾಡಿದ. ಬದುಕಿದೆಯಾ ಬಡ ಜೀವವೇ ಎಂದಂದು ಕೊಂಡವನೇ ಮನೆಯತ್ತ ಡ್ರೈವ್ ಮಾಡತೊಡಗಿದೆ.

ಅಂತೂ ಹೀಗೆ ಮನೆ ಸೇರಿದ ನಾಯಿಮರಿಗಾಗಿ ಈಗಾಗಲೇ ತಾನೇ ಸ್ವತಃ ಹಳೆಯ ಹರಿದ ಬೆಡ್ ಶೀಟಿನಿಂದ ತಯಾರಿಸಿದ್ದ ಹಾಸಿಗೆಯನ್ನು ವರಾಂಡದಲ್ಲಿ ಹಾಸಿ ಕಾಯುತ್ತ ನಿಂತಿದ್ದ ನನ್ನ ಮನೆಯಾಕೆ ಯಾಕೋ ಆರತಿ ಮಾಡುವುದೊಂದನ್ನು ಮರೆತು ಬಿಟ್ಟಿದ್ದಳು. ಕಾರು ಮನೆಯ ಮುಂದೆ ನಿಲ್ಲುವುದೇ ತಡ, ಮಗನ ವಾರಿಗೆಯ ಬೀದಿಯ ಮಕ್ಕಳೆಲ್ಲ ನಾಯಿಮರಿಯ ಸ್ವಾಗತಕ್ಕೆ ಸಜ್ಜಾಗಿ ನಿಂತು ಕುತೂಹಲದ ಮೂತಿಗಳಲ್ಲಿ ಮುತ್ತಿಕೊಂಡರು. ಅಂತೂ ಮಕ್ಕಳ ಎಳೆದಾಟ, ಕಿತ್ತಾಟಗಳಲ್ಲಿ ಹಣ್ಣಾದ ಮರಿ ಇದ್ದಕ್ಕಿದ್ದಂತೆ ಕುಂಯ್ ಕುಂಯ್ ಮಾಡತೊಡಗಿತು. ‘ಪಾಪ ಅದರ ಅಮ್ಮ ನೆನಪಾಗಿರಬೇಕು ಅಲ್ಲವೇನಪ್ಪ?’ ಮಗನ ಪ್ರಶ್ನೆಗೆ ಉತ್ತರ ಗೊತ್ತಾಗದಿದ್ದರೂ ಉಳಿದ ಹುಡುಗರನ್ನು ಮನೆಯಿಂದ ಹೊರಕ್ಕೆ ಕಳಿಸಲು ಉಪಾಯವಂತೂ ಸಿಕ್ಕ ಹಾಗಾಯಿತು. ಅಂತೂ ಇಂತೂ ನಾಯಿಯ ಗೃಹಪ್ರವೇಶ ಸಮಾರಂಭವು ಮುಗಿದದ್ದು ನಮ್ಮ ಹೊಟ್ಟೆಗಳಲ್ಲಿ ತಾಳ ಮದ್ದಲೆ ಪ್ರಾರಂಭವಾದ ಮೇಲಷ್ಟೆ. ಊಟಕ್ಕೆ ತಟ್ಟೆಯಮುಂದೆ ಕುಳಿತಾಗ ನಾಯಿಗೇನು ಊಟ ಕೊಡುವುದು ಅನ್ನುವ ಪ್ರಶ್ನೆ. ದೊಡ್ಡ ಬಟ್ಟಲಿನ ತುಂಬ ಹಾಲಿಟ್ಟು ಅದರ ಮುಂದೆ ಹಿಡಿದರೂ ಜಪ್ಪಯ್ಯ ಅನ್ನದೇ ಹಿಂದು ಹಿಂದಕ್ಕೆ ತೆವಳ ತೊಡಗಿದ ಅದು ಮತ್ತೆ ತನ್ನ ಕುಂಯ್ ಕುಂಯ್ ರಾಗವನ್ನು ಆರಂಭಿಸಿತು. ಹೊಸ ಪರಿಸರ ತನಗೆ ತಾನೇ ಸರಿಹೋಗುತ್ತೆ ಅನ್ನುವ ಸಮಾಧಾನದಲ್ಲಿ ಅಂತೂ ಹಾಸಿಗೆ ಸೇರಿದೆವು.

ಒಂದರಘಳಿಗೆಯೂ ಕಳೆದಿತ್ತೋ ಇಲ್ಲವೋ, ಕುಂಯ್ ಕುಂಯ್ ರಾಗ ತಾರಕಕ್ಕೇರಿತು. ಅದು ಎಷ್ಟು ಕರುಣಾರಸಭರಿತವಾಗಿತ್ತೆಂದರೆ, ಆಚೀಚೆಯ ಮನೆಯ ಗೇಟುಗಳೆಲ್ಲ ಸಶಬ್ದವಾಗಿ ತೆರೆದುಕೊಂಡು, ದಪ್ಪ ದಪ್ಪ ಹೆಜ್ಜೆಗಳು ನಮ್ಮ ಮನೆಯತ್ತ ಧಾವಿಸಿಬಂದುದು ನಮ್ಮ ಅರಿವೆಗೆ ಬರುವ ಮೊದಲೇ, ನಮ್ಮ ಅಕ್ಕಪಕ್ಕದವರೆಲ್ಲ ತಮ್ಮ ನಿದ್ರೆಗೆ ಭಂಗ ತರುತ್ತಿರುವ ಈ ರೋದನವನ್ನು ತಕ್ಷಣ ನಿಲ್ಲಿಸದಿದ್ದರೆ ಪೋಲೀಸರಿಗೆ ದೂರು ಕೊಡಬೇಕಾಗುತ್ತದೆನ್ನುವವರೆಗೂ ಮುಟ್ಟಿಹೋಯಿತು. ಎಂದೆಂದೂ ಕತ್ತು ತಗ್ಗಿಸದೇ ಅವರಿವರ ಕಾಲು ಹಿಡಿಯದೇ ನಾನಾಯಿತು ನನ್ನ ದಾರಿಯಾಯಿತು ಎಂದು ತಿರುಗುತ್ತಿದ್ದ ನನ್ನನ್ನು ಮಣಿಸಲೆಂದೇ ಅವ್ರೆಲ್ಲರೂ ಗುಂಪು ಕಟ್ಟಿಕೊಂಡು ನಿಶ್ಯಸ್ತ್ರನನ್ನಾಗಿಸಿದ ಹಾಗೆ ಅನ್ನಿಸಿತು. ಏನು ಮಾಡುವುದು? ಸರಿ ರಾತ್ರಿ. ವಿಧಿ ಇಲ್ಲ. ಅವರ ಕ್ಷಮೆ ಕೇಳಿ, ಮಾರನೇ ದಿನದೊಳಗೆ ಅವರಿಗಾಗಿರುವ ತೊಂದರೆಯನ್ನು ಸರಿಪಡಿಸುತ್ತೇನೆಂದು ಹೇಳಿ ಬೆವರೊರಿಸಿಕೊಂಡೆ. ಮಕ್ಕಳು ಪಾಪ ಮತ್ತೊಂದು ನಾಯಿಮರಿಯ ಹಾಗೆ ನನ್ನ ಕಾಲ ಬುಡದಲ್ಲಿ ತೆಪ್ಪಗೆ ಕೂತಿದ್ದವು. ದೇವರ ದಯೆ. ಅಥವಾ ಅದಕ್ಕೇ ಹಾಡುತ್ತಿದ್ದ ರಾಗದ ಮೇಲೆ ಉದಾಸೀನ ಹುಟ್ಟಿತೋ, ಅಂತೂ ನಾಯಿ ಮರಿ ರಾಗ ಪಾಡುವುದನ್ನು ನಿಲ್ಲಿಸಿ, ಬಟ್ಟಲಲ್ಲಿಟ್ಟಿದ್ದ ಕ್ಷೀರವನ್ನು ತೊಟ್ಟೂ ಬಿಡದಂತೆ ಸ್ವೀಕರಿಸಿ, ವರಾಂಡದ ಕಾಲೊರಸಿನ ಮೇಲೆ ಪವಡಿಸಿತು.

ಬೆಳಿಗ್ಗೆ ಅಲ್ಲಾ ಕೂಗುವ ಮೊದಲೇ ಎದ್ದು ನಾಯಿಮರಿಯನ್ನು ಬಹಿರ್ದೆಶೆಗೆ ಹೊರಗೆ ಕರೆದು ಕೊಂಡು ಹೋಗಬೇಕೆಂಬ ಆತಂಕದಲ್ಲಿ ರಾತ್ರಿಯಿಡೀ ನಿದ್ದೆ ಬಾರದೇ ಹೊರಳಿದೆ. ಅಂತೂ ಬೆಳಗಾಗಿ ನಾಯಿಮರಿಯಿದ್ದ ವರಾಂಡಕ್ಕೆ ಕಣ್ಣು ಹಾಯಿಸಿದರೆ, ಎಲ್ಲಿದೆ ನಾಯಿಮರಿ? ಮಗ, ಮಗಳ ಹಾಸಿಗೆಯೂ ಖಾಲಿ. ಸದ್ಯ ಮಕ್ಕಳು ತಮ್ಮ ಜವಾಬ್ದಾರಿ ತಾವೇ ವಹಿಸಿಕೊಂಡರಲ್ಲಾ ಎಂಬ ಹೆಮ್ಮೆ. ಹತ್ತೇ ನಿಮಿಷ ಇದ್ದ ಈ ಸಮಾಧಾನವನ್ನು ಓಡುತ್ತ ಬಂದ ಮಗಳು ಪುಸ್ಸೆನ್ನಿಸಿದಳು. ‘ಅಪ್ಪಾ ನೋಡು ನಾಯಿಮರಿಯನ್ನು ಯಾರೋ ಪೋಲಿ ಹುಡುಗರು ತಮ್ಮದು ಅಂತ ಎತ್ತಿಕೊಂಡು ಹೋಗುತ್ತಾ ಇದಾರೆ’ ಅವಳು ವಾಕ್ಯ ಮುಗಿಸುವ ಮೊದಲೇ ಅವಳಮ್ಮ ‘ನೀನೇನು ಮಾಡ್ತಾ ಇದ್ದೆ? ಹೇಳಕ್ಕೆ ಗೊತ್ತಾಗಲಿಲ್ವಾ?’ ಸಹಸ್ರನಾಮಾರ್ಚನೆ ಪ್ರಾರಂಭವಾಗುವುದರೊಳಗಾಗಿ ಮಗಳ ಜೊತೆಗೆ ಬಿರು ಹೆಜ್ಜೆಗಳನ್ನಿಡುತ್ತ ಓಡಿದೆ.
‘ಅಂಕಲ್, ನಮ್ಮನೇಲೂ ಇದೇ ಕಲರ್ ನಾಯಿ ಮರಿ ಇದೆ. ಅದೇ ಇರಬೇಕು ಅಂತ ತಗಂಡಿದ್ದೆ. ಆದ್ರೆ ಇದು ಹೆಣ್ಣು, ನಮ್ಮದಲ್ಲ. ತೊಗೊಳ್ಳಿ’ ನಾಯಿಮರಿಯನ್ನು ನನ್ನ ಮುಖಕ್ಕೆ ಹಿಡಿದ ಹುಡುಗನನ್ನು ದಿಟ್ಟಿಸಿದೆ. ಸುಳ್ಳು ಅನ್ನಿಸಲಿಲ್ಲ. ಇಷ್ಟರವರೆಗೂ ನಾಯಿಮರಿಯ ಸಂಭ್ರಮದಲ್ಲಿ ಅದು ಗಂಡೋ, ಹೆಣ್ಣೋ ಯೋಚಿಸದೇ ಇದ್ದ ನನಗೆ ಈಗ ಮತ್ತೊಂದು ವಿಷಯ ಗಮನಕ್ಕೆ ಬಂತು. ಅದೆಂದರೆ ನಮ್ಮ ನಾಯಿ ಮರಿ ಹೆಣ್ಣು! ಮತ್ತು ಇಂದಲ್ಲ ನಾಳೆ ಇಂಥ ಹಲವು ಮರಿಗಳಿಗೆ ಮಾತೆಯಾಗುವ ಪುಣ್ಯವಂತೆ ಅಂತ.

ಫೀಡಿಂಗ್ ಬಾಟಲು, ಒಳಲೆ ಇಲ್ಲದೇ ಅಂತೂ ನಾಯಿ ಮರಿ ಹಾಲು ಕುಡಿಯಲು ಕಲಿಯಿತು. ಆ ಎಳೆಯ ಬೊಮ್ಮಟೆಯ ಮುಂದೆ ತನ್ನ ಪಾಲಿನ ಬ್ರೆಡ್ಡು ಜಾಮುಗಳನ್ನಿಟ್ಟು ಹಿಂದಿನ ದಿನದ ಅಪೂರ್ಣ ಹೋಮ್ ವರ್ಕ್ನ್ನು ಪೂರೈಸಿಕೊಳ್ಳುತ್ತ ಆಟೋ ಬರುವವರೆಗೂ ನಾಯಿ ಮರಿಯ ಸಾಮೀಪ್ಯದಲ್ಲೇ ಸುಖ ಕಾಣುತ್ತಿದ್ದ ಮಗ ಸಂಜೆ ಶಾಲೆಯಿಂದ ಬಂದ ಮೇಲೆ ಆಟಕ್ಕೆ ಹೊರಗೆಲ್ಲೂ ಹೋಗದೇ ಅದರೊಂದಿಗೇ ಆಟ, ಓಟಗಳಿಗೆ ತೊಡಗಿದ. ಅದಕ್ಕೆ ಯಾವ ಹೆಸರಿಡುವುದೆಂದು ಸದಾ ಚರ್ಚೆಯಲ್ಲೇ ಇರುತ್ತಿದ್ದ ಮಕ್ಕಳು ಅಂತೂ ಇಂತೂ ‘ರಾಣಿ’ಎಂಬ ಅಭಿದಾನವನ್ನು ಅದಕ್ಕೆ ಕರುಣಿಸಿದರು.

ಆಗೀಗ ನಾಯಿಸಾಕುವ ಪಾಠ ಹೇಳಿಕೊಡುವ ನೆವದಿಂದ ಮನೆಗೆ ಹೋಗಿ-ಬಂದು ರೂಢಿಯಾಗಿದ್ದ ಸಿದ್ದಯ್ಯ ನನ್ನ ಮನೆಯಾಕೆಯಿಂದ ದುಡ್ಡು ಕಾಸು ಅಷ್ಟಿಷ್ಟು ಗಿಟ್ಟಿಸಿದ. ಬಂದಾಗ ಕಾಫಿಯ ಜೊತೆಗೆ ತಿಂಡಿ-ಊಟಗಳನ್ನೂ ಗಿಟ್ಟಿಸಿಕೊಂಡೇ ವಾಪಸಾಗುತ್ತಿದ್ದ. ಜೊತೆಗೆ ನಾನು ಇಷ್ಟೂ ದಿನ ಹೇಳದೇ ಬಚ್ಚಿಟ್ಟಿದ್ದ ಆಫೀಸಿನ ಕೆಲವು ಸುದ್ದಿಗಳನ್ನು ಮನೆಯಾಕೆಯ ಕಿವಿಗೆ ಹಾಕಿ, ನನ್ನನ್ನು ಅವಳು ಅನುಮಾನಿಸುವಂತೆಯೂ ಮಾಡಿಬಿಟ್ಟ.

ದಿನದಿಂದ ದಿನಕ್ಕೆ ನಮಗೆ ಹೊಂದಿಕೊಳ್ಳುತ್ತ ಹಾಲಿನ ಜೊತೆಗೆ ಬಿಸ್ಕತ್ತು, ರೊಟ್ಟಿಗಳನ್ನೂ ಮೆಲ್ಲುತ್ತ ರಾಣಿ ಎರಡು ತಿಂಗಳು ಕಲೆಯುವಷ್ಟರಲ್ಲಿ ಮನೆಯ ಒಬ್ಬ ಗೌರವಾನ್ವಿತ ಸದಸ್ಯೆಯಾಗಿಬಿಟ್ಟಳು. ಮೈಕೈಗಳ ಜೊತೆಗೇ ಗಂಟಲನ್ನೂ ಬೆಳೆಸಿಕೊಂಡ ಅವಳು ಮನೆಯೆದುರು, ಬೀದಿಯಲ್ಲಿ, ಸುಮ್ಮನೇ ನಡೆದು ಹೋಗುವವರಿಗೂ ತನ್ನ ಅರಚಾಟ, ಕಿರುಚಾಟಗಳಿಂದ ಭಯದ ಬೀಜವನ್ನು ಬಿತ್ತತೊಡಗಿದಳು. ಪೋಸ್ಟ್ ಮ್ಯಾನ್, ಪೇಪರು-ಹಾಲಿನ ಹುಡುಗರು ದೂರದಲ್ಲೇ ನಿಂತು ನಮ್ಮ ಹೆಸರನ್ನು ಗಟ್ಟಿಯಾಗಿ ಒದರುವಂತೆ ಮಾಡಿದಳು. ಎಚ್ಚರಿಕೆ ಎಂಬ ಬೋರ್ಡನ್ನು ಗೇಟಿಗೆ ತಗಲಿಸುವ ಅವಶ್ಯಕತೆ ಬೀಳಲೇ ಇಲ್ಲ.

ನಾಯಿಯೂ ಮತ್ತೊಂದು ಮಗುವಿನಂತಾಯಿತು ನನ್ನಾಕೆಗೆ. ಮಡಿಮೈಲಿಗೆಗಳೆಂದು ಅದನ್ನು ದೂರವಿಡಲು ಅವಳು ಪ್ರಯತ್ನಿಸಿದಶ್ಟೂ ಅದು ಅವಳ ಗಮನ ಸೆಳೆಯಲು ಚಿತ್ರ ವಿಚಿತ್ರ ಆಟಗಳನ್ನು ಹೂಡುತ್ತಿತ್ತು. ಅವಳ ಗದರಿಕೆಗೆ ಜಗ್ಗಿದಂತೆ ತೋರಿಸುತ್ತಲೇ, ಅವಳ ಮೈಮೇಲಿ ಹಾರಿ ಅದನ್ನು ಮುದ್ದಿಸುವಂತೆ ಪೀಡಿಸುತ್ತಿತ್ತು. ನಮ್ಮ ಊಟ ತಿಂಡಿಗಳು ನಡೆಯುತ್ತಿದ್ದಷ್ಟೂ ಹೊತ್ತು ಹೊರಗೇ ಇರುತ್ತಿದ್ದ ಅದು ಯಾವತ್ತೂ ನಮ್ಮ ಊಟದ ತಟ್ಟೆಗೆ ಮೂತಿ ಇಟ್ಟದ್ದು ಇಲ್ಲವೇ ಇಲ್ಲ. ನಮಗಿಂತಲೂ ಹೆಚ್ಚಾಗಿ ಅದು ವರಾಂಡ, ಹಾಲು, ರೂಮುಗಳ ವ್ಯತ್ಯಾಸವನ್ನು ಅಭ್ಯಸಿಸಿದ ಹಾಗೆ ಆಡುತ್ತಿತ್ತು. ವರಾಂಡ,ಹಾಲು ಮತ್ತು ಮುಂದಿನ ಮಕ್ಕಳ ರೂಮು ಬಿಟ್ಟು ಅದು ಒಳಕ್ಕೆ ಬಂದ ದಾಖಲೆ ಇಲ್ಲವೇ ಇಲ್ಲ. ಅದರ ತಟ್ಟೆಗೆ ಅನ್ನ ಬೀಳುವ ಮೊದಲು ಅದೆಂದೂ ಅನ್ನ ತೆಗೆದುಕೊಂಡು ಹೋಗಿದ್ದ ಪಾತ್ರೆಗೆ ಬಾಯಿ ಹಾಕಿದ ಉದಾಹರಣೆಗಳೇ ಇಲ್ಲ. ಮನೆಯ ಸದಸ್ಯರಲ್ಲೊಬ್ಬರು ಮನೆಗೆ ಬರುವವೇಳೆಯೊಳಗೆ ಮನೆಗೆ ಬಾರದಿದ್ದರೆ ಗೇಟಿನಲ್ಲೇ ನಿಂತು ಅವರನ್ನು ಕಾಯುವ ಅದರ ಪರಿ ಎಂಥವರೂ ಮೆಚ್ಚಲೇಬೇಕು. ಅದಕ್ಕೇನಾದರೂ ಅನಾರೋಗ್ಯದ ಸೂಚನೆಗಳಿದ್ದರೆ ನಮಗಿಂತಲೂ ಸ್ಪಷ್ಟವಾಗಿ ಊಟೋಪಚಾರಗಳನ್ನು ಬಿಡುವುದರ ಮೂಲಕ ಪ್ರಕಟಿಸುತ್ತಿತ್ತು. ಆಸ್ಪತ್ರೆಯತ್ತ ಕರೆದೊಯ್ಯುವಾಗ ಥೇಟ್ ರಚ್ಚೆ ಹಿಡಿದ ಮಗುವಿನ ಹಾಗೆ ನಮ್ಮ ಕಾಲು ಕಾಲಿಗೆ ಸುತ್ತಿಕೊಳ್ಳುತ್ತ, ನಮ್ಮ ರಕ್ಷಣೆಯಲ್ಲಿ ತಾನು ಸುಭದ್ರವಾಗಿದ್ದೇನೆಂದು ಪ್ರಕಟಿಸುತ್ತಲೇ ಇರುತ್ತಿತ್ತು.

ಹಬ್ಬಹರಿದಿನಗಳಿಗೆ ನಮ್ಮೂರಿಗೆ ಹೋಗಬೇಕಾಗಿ ಬಂದಾಗ ಈಗ ಸಮಸ್ಯೆಯಾಗತೊಡಗಿತು. ನಾಯಿಮುಂಡೇದು ಅದನ್ನು ಹ್ಯಾಗೆ ಊರಿಗೆ ಕರೆದೊಯ್ಯಲು ಸಾಧ್ಯ? ಕಂಡಕ್ಟರು ಸುಮ್ಮನಿರುತ್ತಾನೆಯೇ? ಪ್ರತಿಸಾರಿ ಕಾರಿನಲ್ಲಿ ಹೋಗುವುದು ಅನವಶ್ಯಕ ಖರ್ಚಿನ ದಾರಿ. ಅದರ ಊಟ ಮತ್ತು ಬಯಲಿನ ಕೆಲಸಗಳಿಗೆ ಒಂದು ಜನವನ್ನು ನೇಮಿಸದೇ ನಮ್ಮ ಪ್ರಯಾಣ ದುಸ್ತರವಾಗತೊಡಗಿತು. ಸಿದ್ದಯ್ಯನೋ ಅವನ ಮಗನೋ ನಾಯಿಯ ಉಸ್ತುವಾರಿ ನೋಡಿಕೊಳ್ಳುತ್ತೇವೆಂದರೂ, ಅವರ ಉಸ್ತುವಾರಿ ನಮ್ಮ ಅಳತೆಗೆ ಮೀರಿದ ಖರ್ಚಾಗಿ ಬಿಡುತ್ತಿತ್ತು. ಜೊತೆಗೆ ಇಡೀ ಬೀದಿಯ ಮೇಲುಸ್ತುವಾರಿ ತನ್ನದೇ ಅನ್ನುವ ಹಾಗೆ ವರ್ತಿಸುವ ನಮ್ಮ ರಾಣಿಯ ಠಾಕು ಠೀಕಿಗೆ ಹೊರ ಬೀದಿಯ ನಾಯಿಗಳು ದೂರದಿಂದಲೇ ಬೈ ಬೈ ಮಾಡುತ್ತಿದ್ದವು. ನಾವು ಕಣ್ಣೆದುರಿಲ್ಲದ ಘಳಿಗೆಯೊಳಗೆ ಅದು ಬೇರೆ ನಾಯಿಯ ಜೊತೆ ಹೊಡೆದಾಡಿ ವಿಜಯ ದುಂದುಭಿ ಮೊಳಗಿಸಿಯೇ ಬರುತ್ತಿತ್ತು. ಕಿವಿಯನ್ನು ಹರಿದುಕೊಂಡೋ, ಕಾಲಿನಲ್ಲಿ ಗಾಯ ಮಾಡಿಕೊಂಡೋ ಬರುತ್ತಿದ್ದ ಅದನ್ನು ಕಾಯುವುದು ನಮ್ಮ ನಾಯಿಪಾಡಾಗಿ ಬದಲಾಯಿತು.

ನಮ್ಮ ಹೆಮ್ಮೆ ಭೂಮಿಗಿಳಿದದ್ದು ಕಳೆದ ಶ್ವಾನ ಮಾಸ. ಬೀದಿ ಬೀದಿಗಳಲ್ಲಿ ರಾಸಕ್ರೀಡೆಗೆ ಅದರ ಸೋದರ ಸಂಭಂಧಿಗಳು ಪ್ರಯತ್ನಿಸುತ್ತಿರುವಾಗ ಇದೆಲ್ಲಿ ಸುಮ್ಮನಿರಲು ಸಾಧ್ಯ? ಬೆಳಗು ಬೈಗುಗಳಿಲ್ಲದೇ ಅದರ ಗೆಳೆಯರನೇಕರು ನಮ್ಮ ಮನೆಯ ಸುತ್ತ ಠಳಾಯಿಸತೊಡಗಿದರು. ನಮ್ಮ ಚೈನು ಅದರ ಉರುಳಾದಂತೆ, ಬಿದ್ದು ಹೊರಳಿ ತನ್ನ ಪ್ರತಿಭಟನೆ ತೋರಿಸತೊಡಗಿತು. ಸ್ವಲ್ಪ ಸದರ ಕೊಟ್ಟರೆ ತಪ್ಪಿಸಿಕೊಂಡು ದಿನಗಟ್ಟಲೆ ಮನೆಗೆ ಬಾರದೇ ತನ್ನ ಗೆಳೆಯರೊಂದಿಗೆ ಕಳೆಯತೊಡಗಿತು. ಲೌಕಿಕದ ಎಲ್ಲ ವಿಚಾರಗಳಲ್ಲೂ ಒಂದು ಬಗೆಯ ನಿರ್ಲಕ್ಷ್ಯ ತೋರಿಸುವ ಸಾಮಾನ್ಯ ಮಧ್ಯಮವರ್ಗದ ನಮ್ಮಂಥವರಿಗೆ ಮುಜುಗರ ಹುಟ್ಟಿಸುವುದೇ ಇಂಥ ಸಂಗತಿಗಳು. ಪಶು ಆಸ್ಪತ್ರೆಗೆ ಕರೆದೊಯ್ದು ಕೃತಕ ಗರ್ಭಧಾರಣೆ ಮಾಡಿಸಿದರೂ ಅದರ ಬಾಣಂತನ ನಮ್ಮನ್ನೊಂದು ಸಮಸ್ಯೆಯಾಗಿ ಕಾಡುವುದು ಖಂಡಿತವಾಗತೊಡಗಿತು. ನಾಯಿಸಾಕಿದ ನಾಯಿಪಾಡು ನಮ್ಮನ್ನು ಕಾಡತೊಡಗಿತು.

ಎಲ್ಲವೂ ನಾನೆಣಿಸಿದಂತೆಯೇ ನಡೆದುಹೋಯಿತು. ಹತ್ತೆಂಟು ದಿನಗಳಲ್ಲಿ ತನ್ನ ಮೂಲ ವಾಂಛೆಯನ್ನು ಪೂರೈಸಿಕೊಂಡ ನಮ್ಮ ರಾಣಿ ಏನೂ ನಡೆದೇ ಇಲ್ಲವೆಂಬಂತೆ ಮಾಮೂಲಿಯಾದರೂ ಮೈಕೈ ತುಂಬಿಕೊಂಡು ದಷ್ಟಪುಷ್ಟವಾಗಿ ಕಾಣತೊಡಗಿದಳು. ಮೊದಲಿನ ಹುಡುಗಾಟಿಕೆ ಮರೆತು ಜವಾಬ್ದಾರಿಯಿಂದ ಬರಿಯ ಗುರುಗುಟ್ಟುವಿಕೆ ಮತ್ತು ಗಂಭೀರ ನಡಿಗೆಗಳಿಂದ ನಡೆದುಕೊಳ್ಳತೊಡಗಿದಳು. ಊಟೋಪಚಾರ ಮತ್ತು ಆರಾಮವನ್ನೇ ಇಷ್ಟಪಡತೊಡಗಿದಳು. ನನ್ನ ಹೆಂಡತಿ ಮನೆಯ ತುಂಬ ಓಡಾಡಬಹುದಾದ ನಾಯಿ ಮರಿಗಳನ್ನು ಕಲ್ಪಿಸಿಕೊಂಡು ನತಮಸ್ತಕಳಾದಳು. ಗಂಡುನಾಯಿಯನ್ನು ತಾರದಿದ್ದದ್ದಕ್ಕೆ ಇದೇ ಮೊದಲ ಬಾರಿ ಸಿಡಿಮಿಡಿ ಮಾಡಿದಳು.

ನಾವು ಏನೇ ಮಾಡಿದರೂ ಕಾಲ ನಿಲ್ಲುವುದಿಲ್ಲವಲ್ಲ. ಪ್ರಸವದ ದಿನ ಸಮೀಪಿಸಿದ ಹಾಗೆ ತನ್ನ ಚಟುವಟಿಕೆ ಮತ್ತು ಕ್ರಿಯಾಶೀಲತೆಗಳನ್ನು ದಮನಿಸಿಕೊಳ್ಳುತ್ತ ಬಂದ ನಮ್ಮ ರಾಣಿ ಅದೊಂದು ಶುಭ ಮುಂಜಾವಿನಲ್ಲಿ ಐದು ಮರಿಗಳಿಗೆ ಜನ್ಮ ನೀಡಿಯೇ ಬಿಟ್ಟಳು. ಸ್ಕ್ಯಾನಿಂಗ್ ಮಾಡಿಸದೇ, ಸಿಸೇರಿಯನ್ನಿನ ಹಂಗಿಲ್ಲದೇ ನಾರ್ಮಲ್ ಡೆಲಿವೆರಿಯಲ್ಲಿ ತನ್ನು ಆರೋಗ್ಯವನ್ನೂ ಉಳಿಸಿಕೊಂಡಳು. ವೈದ್ಯರಿಲ್ಲದೇ, ನರ್ಸುಗಳಿಲ್ಲದೇ, ಸ್ವತಃ ತಾನೇ ತನ್ನ ಗರ್ಭವನ್ನಿಳಿಸಿಕೊಂಡ ಅವಳು, ಈಗ ತನ್ನ ಮಕ್ಕಳನ್ನು ಕಾಪಿಡುವುದರಲ್ಲಿ ಮಗ್ನಳಾಗಿಬಿಟ್ಟಳು. ಕಾಂಪೌಡಿನ ಸುತ್ತ ಠಳಾಯಿಸುತ್ತಲೇ ಮರಿಗಳಿಗೂ ಬದುಕಿನ ಪಾಠ ಕಲಿಸತೊಡಗಿದಳು.

ವಿಧಿ ಯಾರನ್ನು ತಾನೆ ತಮ್ಮ ಪಾಡಿಗೆ ಇರಲು ಬಿಟ್ಟಿದೆ? ಅದು ರಾಜನಿಗೂ, ಮಹರಾಣಿಗೂ ಹಾಗೆ ನಮ್ಮ ರಾಣಿಗೂ ಸಹ. ಹುಟ್ಟಿದ ಐದು ಮರಿಗಳಲ್ಲಿ ಮೂರನ್ನು ಸಿದ್ದಯ್ಯನ ಮಗ ಅವನ ನೆಂಟರಿಗೆ ಕೊಂಡೊಯ್ದರೆ ಒಂದು ನಮ್ಮೆದುರು ಮನೆ ಸೇರಿತು. ಉಳಿದ ಒಂದು ಮರಿ ಪ್ರಾಯಶಃ ಅದಕ್ಕೆಲ್ಲೋ ಬಾಲಾರಿಷ್ಠವಿದ್ದಿರಬೇಕು. ಸದಾ ತಾಯಿಯ ಜೊತೆಯಲ್ಲೇ ಇರುತ್ತಾ, ಸ್ವಾಭಾವಿಕ ಚಟುವಟಿಕೆಗಳಿಂದ ದೂರವೇ ಇರುವ ಮತ್ತು ಮಕ್ಕಳ ಶಬ್ದ ಕೇಳಿದರೆ ಬಾಗಿಲ ಸಂದಿಗೆ ಓಡುವ ಆ ಪುಟ್ಟ ಕಂದನ ಪಾಲನೆ ರಾಣಿಗೆ ಪ್ರಾಯಶಃ ಕಷ್ಟದ್ದೆನಿಸಿರಬೇಕು. ವೈದ್ಯರೂ ಯಾವ ಭರವಸೆಯನ್ನೂ ಕೊಡದೇ ಹೋದರು.

ಆ ಸಂಜೆ ನಮ್ಮ ಬದುಕಿನ ಕರಾಳ ಸಂಜೆ. ನನ್ನ ಮಗನನ್ನು ಶಾಲೆ ಮುಗಿದ ಬಳಿಕ ಮನೆಗೆ ಕರೆತರುವ ಆಟೋ ರಿಕ್ಷಾ ಭರ್ರನೆ ಬಂದು ಆ ಪಾಪಿ ಮರಿಯ ಮೇಲೆ ಹತ್ತಿ ಇಳಿಯಿತು. ನಮ್ಮ ದುಃಖದ ಕಟ್ಟೆಯ ಮಿತಿ ಮೀರಿಸಿ, ನೆಂಟರಿಷ್ಟರು ಸತ್ತಾಗಲೂ ಸೂತಕವಿರದಿದ್ದ ನಮ್ಮ ಕುಟುಂಬ ಆ ಇಡೀ ರಾತ್ರಿ ನತದೃಷ್ಟ ತಾಯಿಯನ್ನು ಸಂತೈಸುತ್ತಲೇ ಬೆಳಗು ಮೂಡಿಸಿತು.

ಪುತ್ರ ಶೋಕ ನಿರಂತರವೆನ್ನುತ್ತದೆ ಗರುಡ ಪುರಾಣ. ಎದೆಯುದ್ದ ಬೆಳೆದ ಮಕ್ಕಳು ಕಣ್ಮುಚ್ಚಿದರೆ ತಂದೆ ತಾಯಿಯರ ದುಃಖಕ್ಕೆ ಪಾರವಾದರೂ ಇದ್ದೀತೆ? ಇದು ಬರಿಯ ಮನುಷ್ಯನಿಗಷ್ಟೇ ಅಲ್ಲ. ಸಕಲ ಜೀವ ಜಂತುಗಳಿಗೂ ಕಾಡುವ ಕರುಳು-ಕೊರಳಿನ ಸಂಬಂಧ. ಮರಿ ತೀರಿಕೊಂಡ ದಿನದಿಂದಲೇ ಲೌಕಿಕದ ಗದ್ದಲಗಳಿಂದ ದೂರಾಗುತ್ತ ಉಳಿದ ನಮ್ಮ ರಾಣಿ ಯಾವಾಗ ಊಟ ಮಾಡುತ್ತಿದ್ದಳೋ, ನಿದ್ರಿಸುತ್ತಿದ್ದಳೋ ಬಲ್ಲವರಿಲ್ಲ. ಸುಮ್ಮಸುಮ್ಮನೆ ಅವರಿವರ ಮೇಲೆ ಹರಿಹಾಯುವುದನ್ನು, ಗುರ್ರೆಂದು ಹೊಸಬರ ಮೈಮೇಲೇರಿ ಹೋಗುವುದನ್ನೂ ಮರೆತೇ ಬಿಟ್ಟ ಅವಳು ನಮಗೆಲ್ಲ ನಿಗೂಢವಾಗತೊಡಗಿದಳು.

ನಾಯಿಯನ್ನು ನಾರಾಯಣ ಸ್ವರೂಪಿ ಅನ್ನುತ್ತಿದ್ದರು ನಮ್ಮಪ್ಪ. ದತ್ತಾತ್ರೇಯ ದೇವರ ಸುತ್ತ ನಾಕು ನಾಯಿಗಳಿರುವುದನ್ನು ಕ್ಯಾಲೆಂಡರಿನಲ್ಲಿ ನೋಡಿದ್ದೇವೆ. ಧರ್ಮರಾಜನ ಜೊತೆ ಸ್ವರ್ಗಕ್ಕೆ ಹೋದುದು ನಾಯಿ ಮಾತ್ರವಂತೆ. ಕುರುಡು ನಾಯಿ ತಾ ಸಂತೇಗೆ ಬಂತಂತೆ ಅಂತ ದಾಸರು ಕರೆದದ್ದು ಈ ಮನುಜ ನಾಯಿಯನ್ನು ತಾನೆ? ನಾಯಿನೆರಳು ಕಳೆದ ಜನ್ಮದ ನೆನಪಂತೆ. ನಾಯಿ ನಿಷ್ಟೆ, ನಾಯ ನಂಬಿಕೆ ಹೇಳಿ ಮುಗಿಸಲು ಅಸಾಧ್ಯವಾದವು. ನಾಯಿ ನಾಲಗೆ ಮತ್ತು ನಾಯಿಯ ಮೂಗೂ ಖ್ಯಾತವಾದುವೇ.

ಹೀಗೆ ಒಂದು ದಿನ ನಮ್ಮ ಕಣ್ಣಳತೆಯಿಂದ ಇದ್ದಕ್ಕಿದ್ದಂತೆ ದೂರವಾದ ನಮ್ಮ ರಾಣಿ ಈಗೆಲ್ಲಿದ್ದಾಳೋ ನಮಗಂತೂ ಗೊತ್ತಿಲ್ಲ. ಅವಳು ಮನೆ ಬಿಟ್ಟು ಹೋಗುವ ಸಂಜೆಯಿಡೀ ನನ್ನಾಕೆಯ ಕಾಲುಕಾಲಿಗೆ ಸುತ್ತಿಕೊಳ್ಳುತ್ತಿತ್ತೆಂದು ಅದು ಕಾಣೆಯಾದ ಮೂರನೇ ದಿನ ನನ್ನಾಕೆ ಬಾಯಿ ಬಿಟ್ಟಮೇಲಷ್ಟೇ ನನಗೆ ತಿಳಿದದ್ದು. ಮಗ ಮತ್ತು ಮಗಳು ಇಬ್ಬರೂ ಎರಡು ದಿನ ಮಂಕಾಗಿದ್ದವರು ನಂತರ ದೈನಿಕದ ಬಿರುಸಿಗೆ ಮಾಮೂಲಾದರೂ ಯಾಕೋ ಮತ್ತೊಂದು ನಾಯಿಯನ್ನು ತಂದು ಸಾಕೋಣ ಅಂತ ಹೇಳಲೇ ಇಲ್ಲ. ಅನ್ನ ವಿಪರೀತ ಮಿಕ್ಕ ದಿನ ಇವಳು ರಾಣಿಯನ್ನು ನೆನೆಸಿಕೊಳ್ಳುತ್ತಾಳಾದರೂ ಹೆಚ್ಚೇನೂ ಲಂಬಿಸುವುದಿಲ್ಲ.

ಕರೆಂಟು ಇಲ್ಲದ ರಾತ್ರಿಗಳಲ್ಲಿ, ನಿದ್ರೆ ಬಾರದೇ ಹೊರಳುವ ದಿನಗಳಲ್ಲಿ, ಈಗ ರಿಟೈರಾಗಿ ಅಪರೂಪಕ್ಕೆ ಆಫೀಸಿಗೆ ಬರುವ ಸಿದ್ದಯ್ಯನನ್ನು ಕಂಡಾಗಲೆಲ್ಲ ನಮ್ಮ ನಾಯಿಯ ನೆನಪು ಒತ್ತರಿಸಿ ಬರುತ್ತದೆ. ದೂರದಲ್ಲೆಲ್ಲೋ ಬೊಗಳುತ್ತಿರುವ ಶಬ್ದ, ನ್ಯಾಷನಲ್ ಜಿಯಾಗ್ರಫಿಕ್ನಲ್ಲಿ ಕಂಡ ಬೇರೆ ಯಾವುದೋ ನಾಯಿಯ ಚಿತ್ರ ಕ್ಷಣಕಾಲ ಮನಸ್ಸನ್ನು ಆರ್ದ್ರಗೊಳಿಸುತ್ತದೆ. ಆದರೂ ನನಗೆ ಮತ್ತೊಂದು ನಾಯಿ ತಂದು ಸಾಕುವ ಮನಸ್ಸು ಬಂದಿಲ್ಲ. ಪ್ರಾಯಶಃ ಮುಂದೂ ಬರಲಾರದು ಅನ್ನಿಸುತ್ತಿದೆ.

(ಕೃಪೆ ’ಮಯೂರ’ ಜನವರಿ ೨೦೦೯)

2 ಕಾಮೆಂಟ್‌ಗಳು:

Mahesh ಹೇಳಿದರು...

sir, tumbaa khushipatte.... sumne odskondu hoytu. thank u.

Thanks to kendasampige too..

best,

kallare
kallaremahesh.wordpress.com

ಅನಾಮಧೇಯ ಹೇಳಿದರು...

tumbaane chennagide saar