ಗೀತಾಚಾರ್ಯನಾದ ಶ್ರೀ ಕೃಷ್ಣ ಭಾರತೀಯ ಚಿಂತನೆ ಮತ್ತು ಜೀವನ ತತ್ವಗಳ ಮೇಲೆ ಅದ್ಭುತ ಪ್ರಭಾವ ಬೀರಿದವನು. ಅತ್ಯಂತ ಆಳವಾಗಿ ಮತ್ತು ವಿಸ್ತಾರವಾಗಿ ಅವನ ಪ್ರಭಾವಳಿ ಇದೆ. ನಮ್ಮ ಮತಧರ್ಮ- ತತ್ವ ದೃಷ್ಟಿ, ಅಧ್ಯಾತ್ಮ- ಯೋಗ, ಕಾವ್ಯ- ಶಿಲ್ಪ, ಸಂಗೀತ-ನರ್ತನ, ಸಂಸ್ಕೃತಿ-ನಾಗರೀಕತೆ ಹೀಗೆ ಜೀವನದ ವೈವಿಧ್ಯತೆಗೆ ಸಂಬಂಧಿಸಿದ ಎಲ್ಲ ಕ್ಷೇತ್ರಗಳಲ್ಲಿಯೂ ಅವನು ಇದ್ದಾನೆ. ಅಂದರೆ ಈ ಎಲ್ಲ ಕ್ಷೇತ್ರಗಳ ಪರಿಣಿತರಿಗೂ ಕೃಷ್ಣನ ಪ್ರಭಾವಲಯ ತಟ್ಟಿದೆ. ಅವನು ನಮ್ಮೆಲ್ಲರ ಹೃದಯ-ಬುದ್ಧಿಗಳನ್ನು ಆಕರ್ಷಿಸಿದ ಸರ್ವಕಾಲಿಕ ಕಿಂದರಜೋಗಿಯೆಂದೇ ಖ್ಯಾತನಾಗಿದ್ದಾನೆ. ಯುವಕ-ಯುವತಿಯರು, ಋಷಿ-ಮುನಿಗಳು, ಪಂಡಿತ-ಪಾಮರರು, ವ್ಯವಹಾರ ಚತುರರು-ರಾಜಕೀಯ ನಿಪುಣರೂ ಅವನ ಮಾಂತ್ರಿಕ ಶಕ್ತಿಗೆ ತಲೆದೂಗಿದ್ದಾರೆ.
ಭಾಗವತ ಮತ್ತು ಭಾರತದ ಕತೆಗಳಂತೆಯೇ ನಮ್ಮ ಜಾನಪದರೂ ಕೃಷ್ಣನನ್ನು ಪೋಷಿಸಿ ಬೆಳಸಿದ್ದಾರೆ. ಅವನ ಜೀವನದ ಘಟನೆಗಳಿಗೆ ಲೌಕಿಕದ ಆಸೆ-ಆಮಿಷಗಳನ್ನೂ ತಳುಕು ಹಾಕಿ ಸಂಭ್ರಮಿಸಿದ್ದಾರೆ. ಶೈಶವದಿಂದಲೂ ಗಾರುಡಿಗನೆಂದೇ ಬಿಂಬಿಸಲ್ಪಟ್ಟ ಅವನು ಬಾಲ್ಯದಲ್ಲಿ ಬೆಣ್ಣೆ ಕದ್ದ ಬಾಲಕೃಷ್ಣ, ಯೌವನದಲ್ಲಿ ಗೋಪಿಯರ ಮನಸ್ಸು ಕದ್ದ ಗೋಪೀ ಕೃಷ್ಣ, ದ್ವಾರಕೆಯನ್ನು ಕಟ್ಟಿದ ನಿರ್ಮಾತೃ ಶ್ರೀ ಕೃಷ್ಣ, ಪಾಂಡವರ ಪರವಾಗಿ ನಿಂತ ಧರ್ಮೋದ್ಧಾರಕ, ಯುದ್ಧದ ಗೊಂದಲದ ನಡುವೆಯೇ ಗೀತೆಯನ್ನು ಬೋಧಿಸಿದ ಗೀತಾಚಾರ್ಯ.
ಹೀಗೆ ಸಲಹೆಗಾರನಾಗಿ, ರಾಯಭಾರಿಯಾಗಿ, ಸದಾ ಧರ್ಮದ ಪರವಾಗಿ, ಸದ್ಗುಣಿಗಳ ಪರವಾಗಿ, ದಿಕ್ಕಿಲ್ಲದವರ ಪರವಾಗಿ ಅವನು ನಿಂತಿದ್ದಾನೆ. ರಾಜಕೀಯವಾಗಿ ಪ್ರಮುಖ ಸ್ಥಾನವನ್ನು ಪಡೆಯದೆಯೂ ರಾಜನಿರ್ಮಾತೃವಾಗಿಯೇ ಅವನು ಉಳಿದಿದ್ದಾನೆ. ತನ್ನ ತಂತ್ರ, ಪ್ರತಿತಂತ್ರಗಳಿಂದ ರಾಜಕಾರಣವನ್ನು ನಿಯಂತ್ರಿಸಿದ ಕೃಷ್ಣ ಸದಾ ಸುಚೇತನ ಸ್ವರೂಪಿ. ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಶಸ್ತ್ರ ಸನ್ಯಾಸ ಮಾಡಿದ್ದ ಅರ್ಜುನನಿಗೆ ಸಾರಥಿಯಾಗಿ, ವಿಷಾದ ಭರಿತನಾಗಿದ್ದ ಪಾರ್ಥನಿಗೆ ಬುದ್ಧಿ-ಮನಸ್ಸುಗಳ ಸ್ಥಿಮಿತತೆಯನ್ನು ಬೋಧಿಸಿದವನು. ಗೀತೆಯ ಒಂದೊಂದು ಸಾಲೂ ಸೋಲಿನ ಭಯದಲ್ಲಿರುವವರಿಗೆ ಗೆಲುವಿನ ಸಂಜೀವಿನಿ ಕೊಡುವಂಥದು.
ಭಗವದ್ಗೀತೆಯಲ್ಲಿ ಪ್ರತಿಪಾದಿತವಾಗಿರುವ ಜೀವನ ತತ್ವವು ಸ್ವತಃ ಆ ತತ್ವಗಳಿಗೆ ಬದ್ಧನಾಗಿದ್ದ ಗುರುವಿನ ನಿಶ್ಚಿತ ಅಭಿಪ್ರಾಯಗಳನ್ನು ತಿಳಿಸುತ್ತದೆ. ಜೀವನೋತ್ಸಾಹವನ್ನು ತಗ್ಗಿಸದ, ಜ್ಞಾನದ ನಿಧಿಯೇ ಆಗಿರುವ ತತ್ವವಾಗಿದೆ. ಮನುಷ್ಯ ಹೇಗೆ ತನ್ನ ಜೀವಿತವನ್ನು ಶ್ರೇಷ್ಠವಾಗಿಸಿಕೊಳ್ಳಬಹುದೆಂಬುದರ ದಾರಿದೀವಿಗೆಯೂ ಆಗಿದೆ.
ಸಾಮಾನ್ಯ ಜೀವನದಲ್ಲಿ ನಾವು ತೋರುವ ಉತ್ಸಾಹ ಸ್ವಾರ್ಥಕ್ಕೆ ನೇರವಾಗಿ ಸಂಬಂಧಿಸಿರುತ್ತದೆ. ನಮ್ಮೆಲ್ಲರ ಕಾರ್ಯಕಲಾಪಗಳನ್ನು ಕಳವಳಗಳಿಂದ, ಭಾವೋದ್ರೇಕಗಳಿಂದ, ಅನುಕಂಪ-ದುಃಖಗಳಿಂದ ಇವೇ ಮೊದಲಾದ ಉಪಕರಣಗಳಿಂದ ನಮ್ಮ ಸ್ವಾರ್ಥಕ್ಕೆ ಲಾಭ ತರುವಂತೆ ಹೆಣೆದು ಕೊಂಡಿರುತ್ತೇವೆ. ಹಾಗೆ ಲಾಭ ಬಾರದಾದಾಗ ಜೀವನೋತ್ಸಾಹವೇ ಉಡುಗಿಹೋಗುತ್ತದೆ. ನಮ್ಮ ನೀತಿ ನಡವಳಿಕೆಗಳ ಹಿಂದಿನ ಚಾಲಕ ಶಕ್ತಿಯನ್ನೇ ಕಳೆದುಕೊಂಡು ಅಂತರಂಗದಲ್ಲಿ ಕಳವಳವೂ, ಬಹಿರಂಗದಲ್ಲಿ ಜಡತನವೂ ಸೇರಿದ ಉದಾಸೀನದೆಡೆಗೆ ನಾವು ಸಾಗುತ್ತೇವೆ. ಇಂತಹುದೇ ಸ್ಥಿತಿಯಲ್ಲಿದ್ದ ಅರ್ಜುನನಿಗೆ- ಅನಾಸಕ್ತನಾಗಿದ್ದಾಗಲೂ ಉತ್ಸಾಹ ಕಳೆದುಕೊಳ್ಳದ, ಕಳವಳಗೊಳ್ಳದೆಯೂ ಕಾರ್ಯಮಗ್ನನಾಗುವ ಸಾಧ್ಯತೆಯನ್ನು ಶ್ರೀಕೃಷ್ಣ ತನ್ನ ತತ್ವಬೋಧೆಯ ಮೂಲಕ ತಿಳಿಸಿ ಹೇಳಿದ. ಸ್ವಾರ್ಥ ಮೂಲವಾದ ಆಸೆ ಮತ್ತು ಭಾವೋದ್ರೇಕಗಳಿಂದ ಮುಕ್ತರಾದಾಗ ಮಾತ್ರ ಸರ್ವೋತ್ಕೃಷ್ಟತೆ ಸಾಧ್ಯವೆಂದು ಮನಗಾಣಿಸಿದ.
ಅವನು ನಮಗೆ ಬರಿಯ ಪುರಾಣದ ಪಾತ್ರವಲ್ಲ. ಕೇವಕ ಇತಿಹಾಸದ ನೆನಪೂ ಅಲ್ಲ. ಅವನೆಂದರೆ ಸದಾ ನಮ್ಮೊಂದಿಗಿರುವ ಸತ್ಯದ ಸಂಗತಿ. ಎಂದಿಗೂ ಬರೆದು ಮುಗಿಸಲಾಗದ ಕವಿತೆಯ ಪ್ರತಿಮೆ. ಜೊತೆಗಾತಿಯ ಕಾಲಂದುಗೆಗಳ ಝಲುರು. ಕಾಲ ಕಳೆದಂತೆಲ್ಲ ಅವನ ಧ್ವನಿ ಮತ್ತು ಆಕಾರಗಳಿಗೆ ಹೊಸ ರೂಪ ಮತ್ತು ಮಹತ್ವಗಳು ಜೊತೆಯಾಗುತ್ತಲೇ ನಡೆದಿವೆ. ಪ್ರಾಚೀನ ಆದರ್ಶದೊಡನೆ ಸಮಕಾಲೀನ ವ್ಯಸನಗಳನ್ನು ಸಮೀಕರಿಸಿಕೊಳ್ಳುವುದಕ್ಕೆ,ತತ್ವ ಜ್ಞಾನದೊಂದಿಗೆ ಆಧುನಿಕ ಪಡಿಪಾಟಲುಗಳನ್ನು ಅರ್ಥೈಸಿಕೊಳ್ಳುವುದಕ್ಕೆ ಕೃಷ್ಣ ತೋರಿಸಿರುವ ದಾರಿ ಸಮನ್ವಯದ ಕೊರತೆಯಿಂದ ನಲುಗುತ್ತಿರುವ ನಮಗೆ ಸಿದ್ಧೌಷಧವಾಗಿದೆ.
ಶ್ರೀಕೃಷ್ಣನ ಕತೆ ನಮ್ಮೆಲ್ಲರನ್ನೂ ಬೃಂದಾವನದ ಚಕ್ಕಂದಕ್ಕೆ, ದ್ವಾರಕೆಯ ಸೌಂದರ್ಯಕ್ಕೆ, ವ್ರಜದ ಕಷ್ಟ-ನಿಷ್ಟುರಗಳಿಗಷ್ಟೇ ಕರೆದೊಯ್ಯುವುದಿಲ್ಲ. ಬದಲಿಗೆ ಅವನ ಕತೆ ನಮ್ಮ ನಮ್ಮ ಪಯಣದ ಜೊತೆ ಜೊತೆಗೇ ಸಾಥಿಯಾಗುವ ಗೆಲುವಿನ ದಾರಿಗಿರುವ ಕಂಟಕಗಳನ್ನು ನಿವಾರಿಸುವ ಸುಲಭಕ್ಕೆ ದಕ್ಕುವ ಸಾಧನವೂ ಆಗಿದೆ.
ಇಷ್ಟೆಲ್ಲ ಪ್ರಭಾವ, ಪರಿಣಾಮಗಳು ನಮ್ಮ ಮೇಲಿದ್ದರೂ, ವಾಸುದೇವ ಕೃಷ್ಣನ ಅಸೀಮ ವ್ಯಕ್ತಿತ್ವದ ಎಲ್ಲ ಮಜಲುಗಳನ್ನೂ ವಿಮರ್ಶಿಸಿ, ಇದಮಿತ್ಥಂ ಎನ್ನುವ ವಿಶ್ಲೇಷಣೆ ಯಾರಿಂದಲೂ ಇದುವರೆಗೂ ಸಾಧ್ಯವಾಗಿಲ್ಲ. ವೇದವ್ಯಾಸರಿಂದಲೇ ಈ ಕೆಲಸ ಆಗದಿರುವಾಗ, ಅದಕ್ಕೆ ಕೈ ಹಾಕುವುದೆಂದರೆ ತಿಳಿಗೇಡಿತನದ್ದೇ ಆಗಿಬಿಡುತ್ತದೆ.
ಅವನ ರಾಜನೀತಿ ಮತ್ತು ಧರ್ಮ ಸೂಕ್ಷ್ಮಗಳು ಆಧುನಿಕ ಕಾಲದಲ್ಲೂ ಅನುಸರಿಸಲು ಯೋಗ್ಯವಾದುದೇ ಆಗಿದೆ. ತಾತ್ವಿಕತೆ, ಸ್ಥಿತಪ್ರಜ್ಞತೆ, ಸೌಂದರ್ಯ ಪ್ರಜ್ಞೆ, ಸಂಗೀತ, ನೃತ್ಯಗಳ ಮೇಲಣ ಅಪೂರ್ವ ಹಿಡಿತ, ವೀರೋಚಿತ ಸಹೃದಯತೆ ಕೃಷ್ಣನ ಆಸ್ತಿಗಳು. ನಮ್ಮೆಲ್ಲರಿಗೆ ಹಂಚಿಯೂ ಇನ್ನೂ ಉಳಿಯಬಹುದಾದ ಅಪ್ರತಿಮ ಖಣಿಯವನು.
ಆದರ್ಶವ್ಯಕ್ತಿಯೊಬ್ಬನಿಗಿರಬೇಕಾದ ಸಕಲ ಗುಣಗಳನ್ನು ಸ್ವತಃ ಹೊಂದಿದ್ದರೂ, ಅನ್ಯರ ಆದರ್ಶಗಳನ್ನೆಂದಿಗೂ ಲಘುವಾಗಿ ಕಾಣದ ಕೃಷ್ಣ ಈ ಕಾರಣದಿಂದಲೇ ಎಲ್ಲರಲ್ಲೂ ವಿಶ್ವಾಸ ಗಳಿಸುತ್ತಾನೆ. ಅತ್ಯಾಧುನಿಕ ಮನಶಾಸ್ತ್ರಜ್ಞನಿಗಿರಬೇಕಿರುವ ಸಕಲ ಸಂಯಮಗಳನ್ನು ಆವಿರ್ಭವಿಸಿಕೊಂಡಿದ್ದ ಅವನು ಸರ್ವಕಾಲದ ನಾಯಕ. ಮನುಕುಲದ ಮುಖ್ಯ ಪ್ರಾಣ. ದುರ್ಬಲರ, ದೀನರ ಪರಮಾಪ್ತ ಸಖ. ಅವನಿಗಿದ್ದ ಮನೋವಿಶ್ಲೇಷಣಾ ಸಾಮರ್ಥ್ಯ, ಚಿಕಿತ್ಸಕ ಗುಣ, ಅಪ್ಪಟ ದೇಶೀಯವಾದದ ಪ್ರಜ್ಞೆ, ಆಧುನಿಕ ಮನೋಭೂಮಿಕೆಯಲ್ಲಿ ಅರ್ಥೈಸಿಕೊಂಡರೆ ಕಾಣುವುದು ಬರೀ ಗೋಪಾಲಕನದಲ್ಲ, ಬದಲಿಗೆ ಅದು ಒಬ್ಬ ದೊಡ್ಡ ಮನೋಚಿಕಿತ್ಸಕನದು.
ಖಿನ್ನತೆಯಲ್ಲಿ ಬಳಲುತ್ತಲೇ ಇರುವ ಈ ದಿನಮಾನದ ನಮಗೆ ಅವನ ತತ್ವಬೋಧೆಗಳು ಕೊಡಬಹುದಾದ ಔಷಧ ಬಹು ಮೌಲ್ಯದ್ದು. ಬದುಕಿನ ಯುದ್ಧ ಭೂಮಿಯ ಮುಂದೆ ಪೈಪೋಟಿಯ ಅಕ್ಷೋಹಿಣೀ ಸೈನ್ಯಗಳು ಜಮಾಯಿಸಿರುವ ವರ್ತಮಾನದ ಸಂಕಟಗಳಲ್ಲಿ ವ್ಯಕ್ತಿತ್ವಗಳು ನಾಶವಾಗಿ, ಉಳಿಯಬಹುದಾದ ವ್ಯಕ್ತಿಗಳೂ ಮತ್ತಾರಿಂದಲೋ ಆಳಿಸಿಕೊಳ್ಳಬಹುದಾದ ಸೀಮಾತೀತ ದುರ್ವಿಧಿಗಳೇ ಕಾಡುತ್ತಿರುವ ಪ್ರಸ್ತುತದಲ್ಲಿ ಕೃಷ್ಣ ಕೊಡಬಹುದಾದ ನೆರವು, ಅವನ ಗೀತಾಬೋಧೆಯ ನೇರವೂ, ಸರಳವೂ ಮತ್ತು ಸುಲಭದಲ್ಲಿ ಅಳವಡಿಸಿಕೊಳ್ಳಲೂಬಹುದಾದ ನಿರ್ಮಮಕಾರತ್ವದ ಗುಣ.
ಆಧುನಿಕ ಮನಶಾಸ್ತ್ರಜ್ಞನೊಬ್ಬ ಚಿಕಿತ್ಸೆಗೆಂದು ತನ್ನಲ್ಲಿಗೆ ಬರುವ ಖಿನ್ನತೆಯಿಂದ ಬಳಲುತ್ತಿರುವ ರೋಗಿಯನ್ನು ಹೇಗೆ ಸಂತೈಸುತ್ತಾನೆಯೋ ಅಂಥದೇ ಭಾವಗುಣ ಶ್ರೀಕೃಷ್ಣನಲ್ಲಿದೆ. ದೂತನಾಗಿ ಬಂದಾಗ ವಿದುರನಮನೆಯಲ್ಲಿಯೇ ಉಳಿಯುವ ಕೃಷ್ಣ, ಬಾಲ್ಯಸಖ ಮಕರಂದ ಮತ್ತು ಕುಚೇಲರ ಪ್ರಸಂಗಗಳಲ್ಲಿ ವರ್ತಿಸುವ ರೀತಿಯೇ ಸದಾ ಸ್ಮರಣೆಯಲ್ಲಿ ಉಳಿಯುವಂಥದು. ಖಿನ್ನತೆಗಿರುವ ಏಕೈಕ ದಿವ್ಯೌಷಧವಾದ ಆಪ್ತಸಂಭಾಷಣೆಯನ್ನು ಕೈಗೊಳ್ಳುತ್ತಿದ್ದ ಕೃಷ್ಣ ಕರ್ಣನನ್ನೂ, ಕುಂತಿಯನ್ನೂ ಒಂದೇ ರೀತಿಯ ಮಾತಿನ ಅಸ್ತ್ರದಿಂದ ಬಂಧಿಸುತ್ತಾನೆ. ಸ್ವಂತ ತಂಗಿ ಸುಭದ್ರೆಗಿಂತಲೂ ನಂಬಿದ ದ್ರೌಪದಿಯನ್ನೇ ಸದಾ ಕಾಯುತ್ತಾನೆ. ಯಾರು ತಮಗೆ ಬೇರಾರೂ ಇಲ್ಲವೆಂದು ಭಾವಿಸಿ ಕೃಷ್ಣನಲ್ಲಿ ಮೊರೆಹೋಗುತ್ತಾರೋ ಅವರೆಲ್ಲರಿಗೆ ಕೃಷ್ಣ ಸಹಾಯ ಹಸ್ತ ಚಾಚುತ್ತಾನೆ, ಮುಕ್ತಿಯ ಹಾದಿಯನ್ನೂ ದಯಪಾಲಿಸುತ್ತಾನೆ. ಮನುಷ್ಯನ ಮೂಲ ವಾಂಛೆಯನ್ನೇ ಉದ್ದೀಪಿಸಿ ಅದನ್ನೇ ಚಿಕಿತ್ಸೆಯ ಸೌಲಭ್ಯವನ್ನಾಗಿಸಿಕೊಳ್ಳುವ ಕೃಷ್ಣ ಪೌರಾಣಿಕ ಪಾತ್ರವಾಗುವುದಕ್ಕಿಂತಲೂ ಮನೋಚಿಕಿತ್ಸಕ ವೈದ್ಯ ನಾರಾಯಣನಂತೆಯೇ ಆಪತ್ತಿಗೆ ಒದಗುತ್ತಾನೆ, ನಿಷ್ಕಾಮ ಭಕ್ತಿಗೆ ಒಲಿಯುತ್ತಾನೆ.
ಎಲ್ಲ ಸಮಸ್ಯೆಗಳ ಮೂಲ ಸ್ವತಃ ಆ ವ್ಯಕ್ತಿಯೇ ಆಗಿರುತ್ತಾನೆಂಬ ಸತ್ಯವನ್ನು ಮರೆಮಾಚದೇ ಶೃತಪಡಿಸುವ ಅವನು ಯಾರು ಯಾವುದರಲ್ಲಿ ನಂಬಿಕೆ ಇಟ್ಟಲ್ಲಿ ಹೆಚ್ಚು ಲಾಭ ಬರಬಹುದೆಂದು ಊಹಿಸುತ್ತಾನೆ. ಮನುಷ್ಯ ವ್ಯಾಪಾರಗಳನ್ನೇ ವಿಶ್ಲೇಷಿಸುವ ಅಪಾರ ಅನುಭವ ಅವನ ಜೊತೆಗಿರುವುದರಿಂದ ಅವನ ಊಹೆಗಳೇ ಸತ್ಯವಾಗಿ ಹೊರಹೊಮ್ಮಿ ಅವನೇ ಸತ್ಯವಾಗಿ ಉಳಿದುದೆಲ್ಲ ಮಿಥ್ಯವಾಗಿರುವ ಹಲವು ನಿದರ್ಶನಗಳನ್ನು ಕಾಣಬಹುದು.
ಬದುಕಲು ರಾಜಿ ಮುಖ್ಯವಾದರೂ ಎಲ್ಲರನ್ನೂ, ಎಲ್ಲವನ್ನೂ ಎಲ್ಲ ಕಾಲದಲ್ಲಿಯೂ ತೃಪ್ತಿಗೊಳಿಸಿಕೊಂಡಿರಲು ಅಸಾಧ್ಯವಾಗಿರುವುದರಿಂದಲೇ, ಕೆಲವು ಸಂದರ್ಭಗಳಲ್ಲಿ ಕೆಲವರೊಂದಿಗೆ ದ್ವೇಷ, ಮನಸ್ತಾಪಗಳು ಅನಿವಾರ್ಯ ಆಗಿಯೇ ಆಗುತ್ತದೆಂಬುದನ್ನೂ ಅವನು ವಿವರಿಸಿ ಹೇಳಬಲ್ಲ. ಆತ್ಮ ಸಂಭಾಷಣೆಯ ಪರಮಸ್ಥಿಯಲ್ಲಿ ಖಿನ್ನತೆಯೆಂಬುದೂ ಬದುಕನ್ನೆದುರಿಸಲು ಆ ವ್ಯಕ್ತಿ ಬಳಸಿದ ಮತ್ತೊಂದು ಸಾಧನವೆಂದು ಸ್ವತಃ ಆ ವ್ಯಕ್ತಿಗೇ ಮನದಟ್ಟು ಮಾಡಿಕೊಡುವ ಅವನು, ಈ ಸೈಕೋ ಥೆರಪಿಯ ಕಟ್ಟ ಕಡೆಯ ಹಂತದಲ್ಲಿ ಜಾಗೃತಗೊಳ್ಳುವ ಆತ್ಮವಿಶ್ವಾಸವನ್ನು ಉಛ್ರಾಯ ಸ್ಥಿತಿಗೆ ತಂದು ಬಿಟ್ಟುಬಿಡುತ್ತಾನೆ. ಮತ್ತು ಹೀಗೆ ಆತ್ಮ ವಿಶ್ವಾಸವನ್ನು ರೀಛಾರ್ಜ್ ಮಾಡಿಕೊಂಡ ವ್ಯಕ್ತಿ ಸಹಜವಾಗಿ ಸೋಲಿನ ಭಯದಿಂದ ಹೊರ ಬರುತ್ತಾನೆ ಮತ್ತು ತನ್ನ ಹೋರಾಟದಲ್ಲಿ ಮಾಡು ಇಲ್ಲವೇ ಮಡಿ ಎನ್ನುವ ಸೂತ್ರಕ್ಕೆ ಒಳಪಡುತ್ತಾನೆ.
ದುರ್ಯೋಧನನೊಡನೆ ಕೃಷ್ಣ ದೂತನಾಗಿ ವ್ಯವಹರಿಸಿದ್ದನ್ನು, ಕಂಸನನ್ನು ವಧಿಸಿದೊಡನೆ ಉಗ್ರಸೇನನನ್ನೇ ರಾಜನಾಗಿ ಮುಂದುವರೆಸಿದ್ದನ್ನು, ಯಾದವರ ಕುಲ ಕಸುಬು ಹೈನುಗಾರಿಕೆಯನ್ನು ವಿಸ್ತರಿಸಿದ್ದನ್ನು, ದ್ವಾರಕೆಯನ್ನು ನಿರ್ಮಿಸಿ ಶತ್ರುಗಳಿಂದ ದೂರ ಉಳಿದದ್ದನ್ನು, ಈ ಮನೋ ಬಲದ ಹಿಂದಿರುವ ಅನಿವಾರ್ಯ ಸೂತ್ರಗಳನ್ನೂ ನಾವು ಅರಿಯಬೇಕು. ಸೋಲೆಂಬುದು ಖಂಡಿತವಾದಾಗ ಸದ್ಯಕ್ಕೆ ತಪ್ಪಿಸಿಕೊಂಡು ಹೋಗುವುದು ನಂತರ ಸಂದರ್ಭ ಬಂದಾಗ ದಂಡೆತ್ತಿ ಬಂದು ಶತ್ರು ದಮನ ಮಾಡುವುದೂ ಕೃಷ್ಣನ ಕಲೆ. ಅದು ನಮೊಗೊಲಿದರೆ ನಾವೆಲ್ಲ ವಿಪರೀತಮತಿಯ ಚತುರ ರಾಯಭೇರಿಗಳಾದೇವು, ರಾಜ ನಿರ್ಮಾತೃಗಳೂ ಆದೇವು.
ಶಿಷ್ಟ ರಕ್ಷಣೆ, ದುಷ್ಟ ನಿಗ್ರಹಣೆಯೇ ತನ್ನ ಗುರಿಯೆನ್ನುವ, ಧರ್ಮಸಂಸ್ಥಾಪನೆಯೇ ತನ್ನ ಉದ್ದೇಶವೆನ್ನುವ ಕೃಷ್ಣ ಯುಗಯುಗಗಳಲ್ಲೂ ಈ ಅಭಯ ವಾಕ್ಯ ಪರಿಪಾಲನೆಗೆ ಬಳಸುವುದೆಂದರೆ ತನ್ನನ್ನು ನಂಬಿದವರ ಮನಃ ಪ್ರಚೋದನೆ. ಸಾಧು, ಸಜ್ಜನರ ರಕ್ಷಣೆಗೆ ಅವನು ಅವತರಿಸುತ್ತಾನೆಂದರೆ, ಈ ಲೋಕದ ವ್ಯವಹಾರದಲ್ಲಿ ದುರ್ಜನರ ಪಾಲೂ ಮುಂದುವರೆಯುತ್ತಲೇ ಇರಬೇಕು. ಇಲ್ಲವಾದರೆ ಅವನು ಅವತರಿಸುವ ಪ್ರಮೇಯವೇ ಬರುವುದಿಲ್ಲವಲ್ಲ! ಇಂಥ ಸಂದರ್ಭದಲ್ಲಿ ನಮಗುಳಿಯುವ ದಾರಿಯೆಂದರೆ ಒಂದೋ ಸಜ್ಜನರಾಗಿ ಅವನ ನಾಮಸ್ಮರಣೆಯಲ್ಲಿ ಅವನ ಹಾದಿ ಕಾಯುವುದು ಅಥವ ನಮ್ಮ ದುಷ್ಟತನವನ್ನು ಪ್ರದರ್ಶಿಸುತ್ತ ಅವನು ನಮ್ಮ ಸಂಹಾರಕ್ಕೆಂದು ಅವತರಿಸುವ ದಿನಗಳಿಗೆ ಕಾಯುವುದು.
ಈ ಆಪ್ತ ಸಲಹಾ ಕೇಂದ್ರ ಕೇವಲ ಮೊರೆಹೋದವರಿಗಷ್ಟೇ ಅಲ್ಲ, ಮದ ಹರಿಯದೇ ನಿಂತ ದುರ್ಯೋಧನರಿಗೂ ಸದಾ ತನ್ನ ಬಾಗಿಲು ತೆಗೆದಿರಿಸಿದೆ. ಈ ಕೇಂದ್ರದ ಮಹಾಪ್ರಬಂಧಕರ ಅಪ್ಪಣೆ ಚೀಟಿ ಸಿಗುವುದಕ್ಕೆ ಮಾತ್ರ ನಿರಂತರ ಕಾಯುವಿಕೆಯ ಕುಚೇಲ ನಿಷ್ಠೆ ಇರಬೇಕು ಅಥವ ಅವಮಾನದ ಭಯ, ಸಂಶಯದ ಜೊತೆಗೇ ಅಂಟಿಸಿಕೊಂಡ ಲೋಭ, ಬಾಹುಬಲದ ಮೇಲಿನ ಅತೀವ ನಂಬಿಕೆಗಳ ಮೇಲೇ ನಿಂತು, ವಿಜೃಂಭಿಸುತ್ತಲೇ ಎದುರಿನವರು ಕರೆದರೆಂದು ದ್ವಂದ್ವ ಯುದ್ಧಕ್ಕೆ ಧುಮುಕುವ ಜರಾಸಂಧನ, ಕಂಸನ ಮನಃಸ್ಥಿತಿ ನಮಗಿರಬೇಕು. ಇಬ್ಬರನ್ನೂ ಶ್ರೀಕೃಷ್ಣ ಸಲಹುತ್ತಾನೆ, ಸಂಭಾಳಿಸುತ್ತಾನೆ. ಪಾತ್ರವನ್ನು ಒಪ್ಪಿಕೊಳ್ಳುವ ಎದೆಗಾರಿಕೆ ನಮಗೆ ಬೇಕು ಅಷ್ಟೆ!
2 ಕಾಮೆಂಟ್‌ಗಳು:
olle vimarshe, olle vimarsheya guttugala bagge tilisi
ನಿಮ್ಮ ಬರವಣಿಗೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಶ್ರೀ ಕೃಷ್ಣನ ಗುಣಗಾನ ಅದ್ಭುತವಾಗಿದೆ.
ಇದೇ ರೀತಿಯಾಗಿ ಇನ್ನು ಹೆಚ್ಚಿನ ಬರವಣಿಗೆಗಳು ನಿಮ್ಮಿಂದ ಮೂಡಿ ಬರಲೆಂದು ಆಶಿಸುತ್ತೇನೆ.
ಕಾಮೆಂಟ್ ಪೋಸ್ಟ್ ಮಾಡಿ