ಒಟ್ಟು ಪುಟವೀಕ್ಷಣೆಗಳು

ಶುಕ್ರವಾರ, ಸೆಪ್ಟೆಂಬರ್ 4, 2009

ವಿಘ್ನ ವಿನಾಶಕ ವಿನಾಯಕ

ಆಷಾಡದ ಗಾಳಿಮಳೆಗಳು ಶ್ರಾವಣದ ಕುಂಭದ್ರೋಣ ಕಡಿಮೆಯಾಗಿ ಭಾದ್ರಪದ ಕಾಲಿಟ್ಟಿದೆ. ಚರಾಚರ ಪ್ರಕೃತಿಯಲ್ಲಿ ಮೇಳೈಸಿದ್ದ ಜಡತನ ಹಿಂದೆ ಸರಿದು ಜೀವನೋತ್ಸಾಹ ಪುಟಿದೇಳುವ ಕಾಲವಿದು ಎಂದು ಆಯುರ್ವೇದ ಹೇಳುತ್ತದೆ. ಮಳೆ ಕಡಿಮೆಯಾದ ಕಾರಣ ರೈತಾಪಿ ಜನರೂ ಬರುವ ದಿನಗಳ ನಿರೀಕ್ಷೆಯಲ್ಲಿ ಇರುತ್ತಾರೆ. ಭಾದ್ರಪದ ಶುಕ್ಲದ ಚೌತಿ ವಿನಾಯಕನ ಹಬ್ಬ. ಗೌರಿ ಮತ್ತು ಗಣೇಶರ ಹಬ್ಬ ಜನಸಮುದಾಯದಲ್ಲಿ ಹರ್ಷ-ಸಂಭ್ರಮಗಳನ್ನು ಅರಳಿಸುತ್ತದೆ.
ಭಾರತೀಯ ದೇವತೆಗಳಲ್ಲಿ ಅತ್ಯಂತ ಲೋಕ ಖ್ಯಾತನಾದವನು ಗಣೇಶನೇ. ಅವನು ಕೇವಲ ವಿಘ್ನ ನಾಶಕನಷ್ಟೇ ಅಲ್ಲ, ಸಿದ್ಧಿ ಪ್ರದಾಯಕನೆಂದೂ ಪೂಜಿಸಲ್ಪಡುತ್ತಾನೆ. ಎಲ್ಲ ಕೆಲಸಗಳ ಆರಂಭದಲ್ಲೂ ಗಣೇಶನನ್ನು ಪ್ರಾರ್ಥಿಸುವುದು ಪಾರಂಪರಿಕವಾಗಿ ನಡೆದು ಬಂದ ಆಚರಣೆ. ಹೀಗೆ ಅಗ್ರಪೂಜೆಗೂ ಮೊದಲ ನಮಸ್ಕಾರದ ಮನ್ನಣೆಗೂ ಪಾತ್ರನಾಗುವ ವಿನಾಯಕ ಭಕ್ತರ ಸಂಕಲ್ಪ ಶಕ್ತಿಗೆ ಬಲದುಂಬಿ ಕಾರ್ಯಸಿದ್ಧಿಯಾಗುವಂತೆ ಹರಸುತ್ತಾನೆಂಬ ನಂಬಿಕೆ ಇದೆ. ಮಹರ್ಷಿ ವೇದವ್ಯಾಸರು ರಚಿಸಿದ ಮಹಾಭಾರತ ಕೃತಿಗೆ ಗಣಪತಿಯೇ ಲಿಪಿಕಾರನೆಂಬ ಹೇಳಿಕೆಯೂ ಪ್ರಸಿದ್ಧವಾದುದೇ ಆಗಿದೆ. ನಮ್ಮ ಪ್ರಾಚೀನ ಕಾವ್ಯಗಳ ಆರಂಭವಂತೂ ಗಣಪತಿಯನ್ನು ನಮಿಸದೇ ಮುಂದೆ ಹೋಗುವುದೇ ಇಲ್ಲ. ಕವಿ, ಕಲಾವಿದ, ಪಂಡಿತ, ಪಾಮರರೆಲ್ಲರಿಗೂ ಗಣೇಶ ಪರಮಪ್ರಿಯ ದೇವರು.
ಮುಂಜಾನೆ ಮೂಡಣದ ಅಂಚಿನಲ್ಲಿ ನಿಧಾನವಾಗಿ ಸಣ್ಣವನಾಗಿ ಕಾಣಿಸಿಕೊಂಡು ನಂತರ ಭೂಮ್ಯಾಕಾಶಗಳನ್ನೆಲ್ಲ ಆವರಿಸಿಕೊಳ್ಳುವ ಸೂರ್ಯನಂತೆ ಸಿದ್ಧಿಪ್ರದ ವಿನಾಯಕನು ಭೂಮ್ಯಾಕಾಶಗಳನ್ನೆಲ್ಲ ವ್ಯಾಪಿಸಿರುವನೆಂದು ಲಕ್ಷೀಶ ಕವಿ ತನ್ನ ಜೈಮಿನಿ ಭಾರತದಲ್ಲಿ ವರ್ಣಿಸಿದ್ದಾನೆ. ಭಾವಜಗತ್ತನ್ನೂ, ಬೌಧ್ಧಿಕ ಜಗತ್ತನ್ನೂ, ವಿಜ್ಞಾನ ಜಗತ್ತನ್ನೂ ಸರಿಸಮನಾಗಿ ವ್ಯಾಪಿಸಿರುವ ಗಣೇಶನನ್ನು ಕುರಿತ ದಂತ ಕತೆಗಳೂ ಲೆಕ್ಕಕ್ಕೇ ಸಿಕ್ಕದಷ್ಟು ಹೇರಳವಾಗಿವೆ. ಶಿವ ಪುರಾಣದಲ್ಲಿ ವರ್ಣಿತನಾಗಿರುವಂತೆ -ಮತ್ತ ಮಾತಂಗ ವದನೋ, ಗಂಗೋಮಾ ಶಂಕರಾತ್ಮಜಃ, ಆಕಾಶದೇಹೋ, ದಿಗ್ಬಾಹುಃ, ಸೋಮಃ ಸೂರ್ಯಾಗ್ನಿಲೋಚನಃ- ಮದಿಸಿರುವ ಆನೆಯ ವದನವಿರುವ ವಿನಾಯಕ ಗಂಗೆ,ಉಮೆ ಮತ್ತು ಶಂಕರರ ಮುದ್ದಿನ ಮಗ. ಆಕಾಶವೇ ಅವನ ಶರೀರವಾದರೆ, ದಿಕ್ಕುಗಳವನ ತೋಳುಗಳು. ಸೂರ್ಯ ಚಂದ್ರರೇ ಅವನ ಕಣ್ಣುಗಳು.- ಈ ವಿಭೂತಿ ರೂಪವನ್ನು ಕಲ್ಪಿಸಿಕೊಂಡ ಮನಸ್ಸಿನ ಹಿಂದೆ ಇರುವ ಭೂಮ ಕಲ್ಪನೆ ಅದ್ಭುತವಾದುದು.
ಪೌರಾಣಿಕ ಮತ್ತು ಜಾನಪದ ಕಥೆಗಳಂತೂ ಗಣೇಶನ ಹುಟ್ಟು ಅವನ ಲೀಲೆ ಮತ್ತು ಮಹಿಮೆಗಳನ್ನು ಹಾಡಿಹೊಗಳಿವೆ. ಆ ಕಥೆಗಳ ಹಿಂದಿರುವ ರೋಚಕ ಕಲ್ಪನೆಯಂತೂ ರಮ್ಯಲೋಕವನ್ನು ಕೇಳುಗನಲ್ಲಿ ಮೂಡಿಸುತ್ತವೆ. ಈ ಕಲ್ಪಿತ ಆವರಣಗಳಿಂದ ಅವನನ್ನು ಬೇರ್ಪಡಿಸಿ ಸಾಕ್ಷಾತ್ ಪರಬ್ರಹ್ಮ ಸ್ವರೂಪನೆಂಬ ಎತ್ತರದ ನೆಲೆಯಲ್ಲಿ ಪರಿಭಾವಿಸಿದ ದಾರ್ಶನಿಕ ಚಿಂತನೆಯೂ ನಮಗೆ ಗೊತ್ತಿದೆ. ಇಡೀ ಬ್ರಹ್ಮಾಂಡದ ಆದಿ, ಮಧ್ಯ, ಅಂತ್ಯಗಳಲ್ಲಷ್ಟೇ ಅಲ್ಲದೆ ಸೃಷ್ಟಿಯ ಎಲ್ಲ ವ್ಯಾಪಾರಗಳಲ್ಲೂ ಗಣಪತಿಯ ಪಾರಮ್ಯವನ್ನೇ ಕಂಡ ಚಿಂತನೆಯೂ ನಮ್ಮ ಪ್ರಾಚೀನ ಚಿಂತನಗಳಲ್ಲಿವೆ. ಅಥರ್ವಶೀರ್ಷದಲ್ಲಿ ಅವನನ್ನು ಹೀಗೆ ವರ್ಣಿಸಲಾಗಿದೆ. - ಸರ್ವಂ ಜಗದಿದಂ ತ್ವತ್ತಸ್ತಿಷ್ಟತಿ, ಸರ್ವಂ ಜಗದಿದಂ ತ್ವಯಿಲಯಮೇಷ್ಯತಿ. ಸರ್ವಂ ಜಗದಿದಂ ತ್ವಯಿಪ್ರತ್ಯೇತಿ, ತ್ವಂ ಭೂಮಿರಾಪೋನಲೋನಿಲೋ ನಭಃ -ಈ ಜಗತ್ತು ನಿನ್ನ ಕಾರಣದಿಂದಲೇ ಉಂಟಾಗಿದೆ. ನಿನ್ನಾಧಾರದ ಮೇಲೇ ನಿಂತಿದೆ. ಕಡೆಗೂ ನಿನ್ನಲ್ಲಿಯೇ ಲೀನವಾಗುವುದು ಈ ಜಗತ್ತು. ಭೂಮಿ, ನೀರು, ಗಾಳಿ, ಬೆಂಕಿ, ಆಕಾಶ ಪಂಚಭೂತಗಳಲ್ಲೂ ನೀನೇ ತುಂಬಿದ್ದೀ-
ಇಂಥ ಉನ್ನತ ನೆಲೆಯಲ್ಲಿ ನಮ್ಮ ಹಿರಿಯರು ಕಂಡಿದ್ದ ಗಣೇಶ ಇವತ್ತು ಬೀದಿಬೀದಿಗಳ ಪೆಂಡಾಲುಗಳಲ್ಲಿ, ಶಾಲೆ ಕಾಲೇಜುಗಳ ಅಂಗಳದಲ್ಲಿ ಅಷ್ಟೇ ಏಕೆ ಸಂತೆ ಮಾಳಗಳ ಜನಸಾಗರದ ಮಧ್ಯದಲ್ಲೂ ವಿಜೃಂಭಿಸುತ್ತಿದ್ದಾನೆ. ಭಕ್ತಿಗೋ ಭಾವಕ್ಕೋ ಅಥವ ವಸೂಲಿ ದಂಧೆಯ ವ್ಯಾಪರಕ್ಕೋ ಪಕ್ಕಾಗುತ್ತಿದ್ದಾನೆ. ಸಿನಿಮಾ ಸಂಗೀತಗಳ ಭರಾಟೆಯಲ್ಲಿ, ಡಿಸ್ಕೋ ಹಾಡುಗಳ ದರಬಾರಿನಲ್ಲಿ ಕೂಡ ಗಣೇಶನ ಮೂರ್ತಿ ಇರುವುದು ಪರಿಸ್ಥಿತಿಯ ವ್ಯಂಗ್ಯವಾಗಿದೆ.
ಉನ್ನತ ನೆಲೆಯಲ್ಲಿ ವಿದ್ಯಾಧಿದೇವತೆಯೆಂದೂ ಪರಿಗಣಿಸಿರುವ ಗಣೇಶ ನಮ್ಮೆಲ್ಲರಲ್ಲೂ ನಾಳಿನ ಒಳ್ಳೆಯದಕ್ಕಾಗಿ ಇಂದು ನಾವು ಕೈಗೆತ್ತಿಕೊಳ್ಳಬೇಕಾದ ಕೆಲಸಕಾರ್ಯಗಳನ್ನು ನಿರ್ವಿಘ್ನವಾಗಿ ನಡೆಸಿಕೊಡಲಿ ಎಂಬುದು ಗಣೇಶ ಚೌತಿಯ ಪ್ರಾರ್ಥನೆಯಾಗಿದೆ. ಇನ್ನು ಗಣೇಶನ ತಾಯಿ ಗೌರಿಯಂತೂ ಸಾಕ್ಷಾತ್ ಪರಶಿವನ ಮಡದಿಯಾಗಿಯೂ ಲೌಕಿಕದ ಎಲ್ಲ ಹೆಣ್ಣುಮಕ್ಕಳ ಹಾಗೆ ಕಷ್ಟ-ಸುಖಗಳನ್ನು ಕಂಡವಳು. ದಾಕ್ಷಾಯಣಿಯಾಗಿ ಅವತರಿಸಿ ಶಿವನನ್ನೇ ವರಿಸಿದ ಛಲವಂತೆ ಅವಳು. ಹೀಗೆ ಗೌರಿ-ಗಣೇಶರ ಹಬ್ಬ ತಾಯಿ-ಮಗುವಿನ ಬಾಂಧವ್ಯದ ಸಂಕೇತವಾಗಿ ನಮಗೆಲ್ಲ ಪಾಠ ಹೇಳುತ್ತಲೇ ಇರುವುದನ್ನೂ ನಾವು ಗಮನಿಸಲೇಬೇಕು.

ಕಾಮೆಂಟ್‌ಗಳಿಲ್ಲ: