"ಅನುಸಂಧಾನ"-೧
'ಸಂಪರ್ಕ ಯುಗದ ಅನುಸಂಧಾನ'
ನಾವೀಗ ಬದುಕುತ್ತಿರುವ ಕಾಲಮಾನಕ್ಕೆ "ಸಂಪರ್ಕ ಯುಗ" ವೆಂದು ಕರೆಯುತ್ತಿದ್ದೇವೆ. ನಾವು ವ್ಯಾಪಕವಾಗಿ ಬಳಸುತ್ತಿರುವ "ಸಂಪರ್ಕ" ಎಂಬ ಪದಕ್ಕೆ ಕೆಲವೇ ದಶಕಗಳ ಹಿಂದೆ 'ಕಮ್ಯುನಿಕೇಷನ್' ಎಂದು ಇದ್ದ ಅರ್ಥಕ್ಕೂ ಇದೀಗ ನಾವದನ್ನು ಬಳಸುತ್ತಿರುವ ಅರ್ಥಕ್ಕೂ ಗಾವುದ ಗಾವುದ ದೂರವಿದೆ. ಹಳೆಯ ಪದಕೋಶಗಳಲ್ಲಿ ಸಂಪರ್ಕವೆಂಬ ಶಬ್ದಕ್ಕೆ ಕೂಡುವುದು, ಸ್ಪರ್ಶ, ಮಿಲನ ಮುಂತಾದ ಭೌತಿಕ ಸಂಬಂಧ ಸೂಚಕವಾಗಿದ್ದದ್ದು ಈಗ ದೂರದಿಂದ ನಡೆಯುವ ಸಂವಹನಕ್ಕೂ ಅನ್ವಯಿಸುತ್ತಿದೆ. ಅಷ್ಟೇ ಅಲ್ಲ, ಹಿಂದಿನ ಸಂಪರ್ಕವು ವ್ಯಕ್ತಿ ಮತ್ತು ಸಮುದಾಯಗಳ ಪರಸ್ಪರ ಸಂಬಂಧವನ್ನು ಹೆಚ್ಚಿಸುವ ಕ್ರಿಯೆಯಲ್ಲಿ ತೊಡಗಿದ್ದರೆ ಹೊಸ ಕಾಲದ ಸಂಪರ್ಕ ಸಾಧನಗಳು ಅಸಮಾನತೆಯನ್ನು ಪೋಷಿಸುವ ಮತ್ತು ಅಧಿಕಾರಸ್ಥರ ಹಾಗೂ ಧನವಂತರ ಪ್ರತಿಷ್ಠೆಗಳಾಗಿ ಬದಲಾಗುತ್ತಿದೆ. ಹಳೆಕಾಲದ ಪರಿಕಲ್ಪನೆಯೊಂದು ಹೊಸಕಾಲದಲ್ಲಿ ಪಡೆಯುವ ಸ್ವರೂಪಗಳಿಂದಾಗಿ ಶಬ್ದಕೋಶಗಳೇ ವಿಪರೀತಾರ್ಥಗಳಾಗಿ ಬದಲಾಗುವುದು ಸೋಜಿಗವೇ ಸರಿ.
ನಮ್ಮ ಕಾಲದ ಅಂದರೆ ಆಧುನಿಕ ಕಾಲದ ಕಟುಟೀಕಾಕಾರನಾದ ಇವಾನ್ ಇಲಿಚ್ ಹೀಗೆ ಬದಲಾಗುತ್ತಿರುವ ಹಲವು ಅರ್ಥಪಲ್ಲಟಗಳನ್ನು ಕುರಿತು ತೀವ್ರ ವಿಷಾದ ಪಡುತ್ತಾನೆ. ಇವಾನ್ ಇಲಿಚ್ ಹೇಳುವ ಹಾಗೆ ಆಧುನಿಕವೆಂದು ನಾವೆಲ್ಲ ಕರೆಯುವ ಈ ಕಾಲದಲ್ಲಿ "ಶಿಕ್ಷಣ" ದಿಂದಾಗಿ ನಮ್ಮ "ತಿಳುವಳಿಕೆ" ಕಡಿಮೆಯಾಗುತ್ತಿದೆ. "ಸಂಪರ್ಕ ಸಾಧನಗಳು" ಪರಸ್ಪರರ ಐಹಿಕ ಸಂಪರ್ಕವನ್ನೇ ಕಡಿಮೆಮಾಡಿದೆ. "ವೈದ್ಯಕೀಯ" ಸೌಲಭ್ಯಗಳಿಂದಾಗಿಯೇ "ಅನಾರೋಗ್ಯ" ಹೆಚ್ಚುತ್ತಿದೆ. "ಭದ್ರತಾ ಯೋಜನೆ" ಗಳಿಂದಾಗಿಯೇ 'ಅಪಾಯ'ಗಳು ಹೆಚ್ಚುತ್ತಿವೆ. ಮದುವೆ ಸಮಾರಂಭ, ಸಂಗೀತ ಸಭೆ, ಸಂಸ್ಕೃತಿ ಚಿಂತನೆ, ಕಡೆಗೆ ಶವಸಂಸ್ಕಾರ ಸಂಧರ್ಭಗಳಲ್ಲೂ ಎದುರಿಗಿರುವವರನ್ನು ಬಿಟ್ಟು ಮತ್ತೆಲ್ಲೋ ದೂರದಲ್ಲಿರುವವರೊಂದಿಗೆ ಮೊಬೈಲಿನಲ್ಲಿ ಮಾತನಾಡುತ್ತಲೇ ಇರುವ ನಾವೆಲ್ಲರೂ ಅಸಂಗತ ನಾಟಕವೊಂದರ ಪಾತ್ರಧಾರಿಗಳಾಗಿ ಬದಲಾಗಿಬಿಟ್ಟಿದ್ದೇವೆ.
ಸಂಪರ್ಕವೆಂಬ ಪರಿಕಲ್ಪನೆಯ ಇಂಥ ವೈಪರೀತ್ಯಕ್ಕೆ ವಿರುದ್ಧವಾಗಿ "ಅನುಸಂಧಾನ" ವೆಂಬ ಎದುರುಬದುರು ಕೂತು ಪರಸ್ಪರ ಚರ್ಚಿಸಿ ಹೊಸ ವಿನ್ಯಾಸ ಪಡೆಯುವ ಚಿಂತನೆಯ ರೀತಿಗೆ ನಿಮ್ಮನ್ನು ಕರೆದೊಯ್ಯುವ ಕ್ರಮವಾಗಿ ಈ ಅಂಕಣವನ್ನು ಬರೆಯಲು ಉದ್ದೇಶಿಸಿದ್ದೇನೆ. ಅನುಸಂಧಾನವೆಂದರೆ ಈಗಾಗಲೇ ಸ್ಥಾಪಿತವಾಗಿರುವ ಕ್ರಮವೊಂದನ್ನು ಆಧುನಿಕ ಅನುಭವಗಳ ಮೂಲಕ ಒರೆಗೆ ಹಚ್ಚಿ ಅದರ ಟೊಳ್ಳು ಮತ್ತು ಗಟ್ಟಿತನಗಳನ್ನು ತೆರೆದಿಡುವ ಪರಿಕ್ರಮ. ಕಾವ್ಯದ ಅರ್ಥವಂತಿಕೆಯನ್ನು ಹೆಚ್ಚಿಸುವ ಸಲುವಾಗಿ ಮತ್ತು ಕಾವ್ಯದ ಒಳ ತಿರುಳನ್ನು ಬಗೆಯುವ ಕ್ರಮವಾಗಿ ಬಳಸಲಾಗುತ್ತಿರುವ ಈ "ಅನುಸಂಧಾನ" ಎಂಬ ಶಬ್ದ ಕೇವಲ ಕಾವ್ಯಾಭ್ಯಾಸಿಗಳಿಗಷ್ಟೇ ಸೀಮಿತವಾಗದೇ ಕಾವ್ಯಕ್ಕಿಂತಲೂ ಮಿಗಿಲಾದ ಬದುಕಿನ ಅರ್ಥವಂತಿಕೆಯನ್ನು ಅಳೆಯುವ ಉಪಕರಣವಾಗಲಿ ಎಂಬ ಉದ್ದೇಶದಿಂದ ಈ ಅಂಕಣಕ್ಕೆ "ಅನುಸಂಧಾನ" ವೆಂದು ಕರೆದಿದ್ದೇನೆ.
ಜೊತೆಗೇ ಅಂಕಣಗಳೆಂದರೆ ತುಂಬ ಕ್ಲಿಷ್ಟಕರವಾಗಿ ಮತ್ತು ಗ್ರಾಂಥಿಕವಾಗಿ ಮಾತ್ರ ಬರೆಯಬೇಕೆಂಬ ಪೂರ್ವ ಸೂರಿಗಳ ಫರ್ಮಾನನ್ನು ತಿರಸ್ಕರಿಸಿ ಆಧುನಿಕ ಮನಸ್ಥಿತಿಗಳನ್ನು ಅನಾವರಣಗೊಳಿಸುವ ಸಲುವಾಗಿ ನಿ(ನ)ಮ್ಮೊಳಗಿನೊಂದಿಗೆ ನಿರಂತರ ಮಾತನಾಡುತ್ತಲೇ ಇರುವ ಅವಕಾಶಕ್ಕಾಗಿ ಈ ಅಂಕಣವನ್ನು ಕೇವಲ ಒಂದು ವಿಷಯಕ್ಕೆ ಸೀಮಿತಗೊಳಿಸದೇ ಆಧುನಿಕ ಬದುಕಿನ ಹಲವು ಸ್ಥಿತ್ಯಂತರಗಳನ್ನು ಪುನರ್ವಿಮರ್ಶಿಸುವ ವೇದಿಕೆಯನ್ನಾಗಿ ಕಟ್ಟುವುದು ಉದ್ದೇಶವಾಗಿದೆ.
ಸಿನಿಮಾ , ರಂಗಭೂಮಿ, ಸಾಹಿತ್ಯ, ಸಂಸ್ಕೃತಿ, ರಾಜಕಾರಣ, ಕೃಷಿ, ಉದ್ಯೋಗ ಇತ್ಯಾದಿ ಇತ್ಯಾದಿ ಬದುಕಿನ ವಿವಿಧ ಮಗ್ಗುಲುಗಳನ್ನು ವಿವಿಧ ಆಯಾಮಗಳಲ್ಲಿ ನೋಡಬೇಕೆನ್ನುವ ನಿಲುವಿನ ದ್ಯೋತಕ ಈ ಅನುಸಂಧಾನ. ವಿಷಯಗಳನ್ನು ಪರ ವಿರೋಧದ ನಿಲುವಿನಲ್ಲಿಡದೇ ಕೇವಲ ವಿಷಯವನ್ನಾಗಿ ಚರ್ಚಿಸುತ್ತ, ಅವಲೋಕಿಸುತ್ತ ಹೋದರೆ ಅಡಿಗರು ಹೇಳಿದ ಹಾಗೆ ನೆಲವನ್ನಗೆದು ಅದಿರನ್ನು ಮೇಲೆತ್ತಬಹುದು. ಇಷ್ಟ ದೇವತೆಯ ವಿಗ್ರಹವನ್ನೂ ನಿರ್ಮಿಸಿಕೊಳ್ಳಬಹುದು.
ಈದಿನ ‘ಅನುಸಂಧಾನ’ದ ತೆರೆ ಎದ್ದಿದೆ. ಪ್ರತಿ ಸೋಮವಾರ ಪ್ರಸ್ತುತ ಸಂದರ್ಭದ ವಸ್ತು ವಿಷಯಗಳನ್ನೆತ್ತಿಕೊಂಡು ಚರ್ಚೆಗೆ ಕೂರೋಣ. ನವನೀತವನ್ನು ಪಡೆಯುವ ಸಂಕಲ್ಪ ಮಾಡೋಣ.
ಬೆಂಕಿ ಕಡ್ಡಿ- ಬೆಳಕು,ಶಾಖ ಮತ್ತು ಉರಿಯ ಚಿಕ್ಕತುಂಡು.ನಾವೆಲ್ಲರೂ ಈ ಲೌಕಿಕದ ಬೆಂಕಿಯಲ್ಲಿ ಬೇಯುತ್ತಲೇ ಮತ್ತೊಂದು ಬೆಳಕು, ಶಾಖ ಮತ್ತು ಉರಿಯನ್ನು ಸೃಜಿಸುತ್ತಿರುವವರು.ಅದಕ್ಕೆಂದೇ ಈ ಬರಹಗಳ ಶೀರ್ಷಿಕೆ "ಬೆಂಕಿಕಡ್ಡಿ". ಈಗಾಗಲೇ ಪ್ರಕಟಿಸಿರುವ ಸಂಕಲನಗಳಿಂದ ಮತ್ತು ಹೊಸ ಪದ್ಯ ಹಾಗೇ ಆಕಾಶವಾಣಿಯ ಚಿಂತನಕ್ಕೆ ಬರೆದ ಲೇಖನಗಳನ್ನೂ ಸೇರಿಸುವ ಇರಾದೆ ಈ ಬ್ಲಾಗಿಗನಿಗೆ.
ಒಟ್ಟು ಪುಟವೀಕ್ಷಣೆಗಳು
ಶನಿವಾರ, ಮಾರ್ಚ್ 18, 2017
ಅನುಸಂಧಾನ-೧
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ