ಒಟ್ಟು ಪುಟವೀಕ್ಷಣೆಗಳು

ಮಂಗಳವಾರ, ಡಿಸೆಂಬರ್ 16, 2008

ಬಿಂಬ

ದಿನವೊಂದರಲ್ಲಿ ಕನಿಷ್ಟ ಹದಿನೈದು ಬಾರಿ ಮನುಷ್ಯ ಕನ್ನಡಿಯಲ್ಲಿ ತನ್ನ ಮುಖ ನೋಡಿಕೊಳ್ಳುತ್ತಾನೆ ಎಂದು ಒಂದು ಅಧ್ಯಯನ ಹೇಳುತ್ತದೆ. ಪ್ರತಿ ನೋಟದಲ್ಲೂ ತನ್ನ ಕೆದರಿರುವ ತಲೆಕೂದಲನ್ನು ಸರಿಪಡಿಸಿಕೊಳ್ಳುತ್ತಾನೆ. ಅಥವಾ ಇಣುಕುತ್ತಿರುವ ಬೆಳ್ಳಿಕೂದಲನ್ನು ಕಂಡು ಕಳವಳಗೊಳ್ಳುತ್ತಾನೆ. ಇಲ್ಲವೇ ಕಣ್ಣಂಚ ತುದಿಗಂಟಿದ ಪಿಸುರನ್ನೋ, ತುಟಿತುದಿಯಲ್ಲಿ ಕೂತ ಅನ್ನದಗಳನ್ನೋ ಒರೆಸಿಕೊಳ್ಳುತ್ತಾನೆ. ಕೊಳೆಯಾಗಿರುವ ಬಟ್ಟೆಯನ್ನು ಕಂಡು ಅಸಹ್ಯ ಪಟ್ಟುಕೊಳ್ಳುತ್ತಾನೆ.

ಕನ್ನಡಿ ಎಂದೇ ನಾವೆಲ್ಲ ಸಾಮಾನ್ಯವಾಗಿ ಕರೆಯುವ ಈ ದರ್ಪಣ ಹೀಗೆ ನಮ್ಮ ಮುಖದ ಮೇಲಣ ಬಾಹ್ಯದ ಶುಚಿಗೆ ಕಾರಣವಾಗುವಂತೆಯೇ ಅಶುಚಿಯನ್ನು ಎತ್ತಿ ತೋರುತ್ತದೆ. ಸರಿಯಿಲ್ಲದುದನ್ನು ಸರಿಪಡಿಸಿಕೊಳ್ಳಬೇಕೆಂಬ ಅರಿವನ್ನು ಒಳಗಿನಿಂದ ಮೂಡಿಸುತ್ತದೆ.

ಆದರೆ ಇಲ್ಲಿ ಗಮನಿಸಬೇಕಾದ ಸತ್ಯ ಒಂದಿದೆ. ಅದೆಂದರೆ ಕನ್ನಡಿ ಇದ್ದುದನ್ನು ಇದ್ದಂತೆ ತೋರಿಸಬಲ್ಲುದೇ ವಿನಾ ಇರದೇ ಇರುವುದನ್ನೆಂದೂ ಬಣ್ಣಿಸುವುದಿಲ್ಲ. ವೈಭವೀಕರಿಸುವುದಿಲ್ಲ. ಕನ್ನಡಿಯ ಬಿಂಬ ನಿಜವನ್ನೇ ಪ್ರತಿಫಲಿಸುತ್ತಿದ್ದರೂ ಆ ವಸ್ತುವಿನ ಪೂರಾ ವಿರುದ್ಧದ ಪ್ರತಿಬಿಂಬವನ್ನೆ ಸೃಷ್ಟಿಸಿರುತ್ತದೆ. ಎಡದಲ್ಲಿರುವುದನ್ನು ಬಲದಲ್ಲಿರುವಂತೆ ಅದು ತೋರಿಸುತ್ತಿದ್ದರೂ ನೋಡುವ ನಾವು ಮಾತ್ರ ನಿಜದ ನೆಲೆಯನ್ನೆಂದೂ ಶೋಧಿಸದೆಯೇ ಕನ್ನಡಿಯ ಬಿಂಬವನ್ನೇ ನಿಜವೆಂದು ನಂಬಿಬಿಟ್ಟಿದ್ದೇವೆ.

ಅಲ್ಲಮ ತನ್ನೊಂದು ವಚನದಲ್ಲಿ ಹೀಗೆ ಹೇಳುತ್ತಾನೆ. ಕನ್ನಡಿ ಮತ್ತು ಪಾತ್ರೆಗೆ ಉಪಯೋಗಿಸುವ ಲೋಹವೊಂದೇ ಆದರೂ ಕಂಚಿನ ಪಾತ್ರೆ ಸಂಗ್ರಹಬುದ್ಧಿಯನ್ನು ತೋರಿಸುತ್ತದೆ. ಅದೇ ಲೋಹದಿಂದ ಮಾಡಿದ ಕನ್ನಡಿ ಲೋಕಸತ್ಯವನ್ನು ಹೇಳಲು ಮರೆಮಾಚುವುದಿಲ್ಲ. ಇರುವುದನ್ನು ಪ್ರತಿಫಲಿಸುತ್ತಲೇ ಸತ್ಯದ ಮಾರ್ಗ ಹಿಡಿಯುವ ಕನ್ನಡಿ ಭಾಂಡದ ಸಂಗ್ರಹ ಬುದ್ಧಿಯನ್ನು ಮೀರಿ ವರ್ತಿಸುತ್ತದೆ. ನಾವು ಲೋಕದ ಅನುಭವದ ಪ್ರತಿಬಿಂಬದಿಂದ ನಮ್ಮ ಮುಖಕ್ಕಂಟಿರುವ ಕೊಳೆಯನ್ನು ಒರೆಸಿಕೊಳ್ಳಬೇಕೋ ಅಥವ ಅದೇ ಲೋಕಾನುಭವದಿಂದ ಹುಟ್ಟುವ ನವನೀತವನ್ನು ಸಂಗ್ರಹಿಸಿಟ್ಟುಕೊಳ್ಳಬೇಕೋ ಅದು ಆಯಾ ವ್ಯಕ್ತಿಯು ನಂಬುವ ತತ್ವಾದರ್ಶಗಳ ಮೇಲೆ ನಿಲ್ಲುತ್ತದೆ.

ಆದರೆ ದೊಡ್ದ ಅಳತೆಯ ಕನ್ನಡಿಗಳು ಭ್ರಮೆಯ ಲೋಕವೊಂದರ ಅನಾವರಣದಲ್ಲಿ ನಿರತವಾಗಿ ನಿಜವನ್ನು ಲಂಬಿಸಿರುತ್ತವೆ. ವಾಸ್ತವದ ಅರಿವಿರದವರಿಗೆ ಇದೂ ಒಂದು ಬಗೆಯ ವಂಚನೆಯೇ ಆಗುತ್ತದೆ. ಕಂಬವೆಂದು ತಿಳಿದು ಢೀ ಡಿಕ್ಕಿ ಕೊಟ್ಟ ದುರ್ಯೋಧನ ನೆಲಕ್ಕೆ ಹಾಸಿರುವುದು ಕನ್ನಡಿಯೆಂದು ಭ್ರಮಿಸಿ ಕೊಳದೊಳಕ್ಕೆ ಬೀಳುತ್ತಾನೆ. ನಾವೂ ಹಾಗೆಯೇ ದೂರ ಇಡಬೇಕಾದ ಪದಾರ್ಥಗಳನ್ನು ಮುಚ್ಚಟೆಯಿಂದ ಮುದ್ದಿಸುತ್ತೇವೆ. ಒಯ್ಯಬಾರದ ಒಜ್ಜೆಗಳನ್ನೆಲ್ಲ ತಲೆಯ ಮೇಲೆ ಹೊತ್ತೊಯ್ದು ಮೆರೆಸುತ್ತೇವೆ.

ಕನ್ನಡಿಯೇನೋ ಬಾಹ್ಯದ ಕೊಳಕನ್ನು ಎತ್ತಿತೋರಿಸುತ್ತದೆ. ಆದರೆ ಆಂತರ್ಯದ ಕೊಳಕನ್ನು ಯಾರು ಎತ್ತಿ ತೋರಿಸುತ್ತಾರೆ? ತೋರಿಸಿದರೂ ಒಪ್ಪಿಕೊಳ್ಳುವ ಮನಸ್ಥಿತಿ ಯಾರಿಗಿದೆ? ನಮ್ಮ ಅರಿವನ್ನು ಇತರರೊಂದಿಗೆ ಹಂಚಿಕೊಳ್ಳುವುದು ಇದಕ್ಕಿರುವ ಪರಿಹಾರ. ಅನ್ಯರ ಸಾಧನೆಯನ್ನೆಂದೂ ಒಪ್ಪಿಕೊಳ್ಳದೆಯೇ ಕೊಂಕು ತೆಗೆಯುವ ನಮ್ಮ ಬುದ್ಧಿಯನ್ನು ನಿಯಂತ್ರಿಸಿಕೊಳ್ಳುವುದು ಎರಡನೆಯ ಉಪಾಯ. ಸರೀಕರೊಂದಿಗೆ ಸ್ನೇಹದಿಂದಿರುತ್ತಲೇ ಸ್ವತಃ ಅಗ್ನಿದಿವ್ಯಕ್ಕೆ ಈಡಾಗುವುದು ಕಷ್ಟಸಾಧ್ಯದ ಮಾತು. ತೋಚಿದ್ದೆಲ್ಲವನ್ನೂ ಗೀಚಿ ಮನಸ್ಸು ಹಗುರ ಮಾಡಿಕೊಳ್ಳುವಂತೆಯೇ ಅನಿಸಿದ್ದೆಲ್ಲವನ್ನೂ ಆಡದೆಯೇ ಮೌನಕ್ಕೆ ಶರಣಾಗುವುದು ದಿವಿನಾದ ಮಾರ್ಗ. ಕನ್ನಡಿ ಮುಖದ ಮೇಲಣ ಕಲೆಯನ್ನು ಎತ್ತಿ ತೋರಿಸುವಂತೆಯೇ ಮನಸ್ಸು ಆಂತರ್ಯದಲ್ಲಿನ ಕಲೆಗಳೆಲ್ಲವನ್ನೂ ಗುಡಿಸಿ ಹಾಕುವ ಹದಕ್ಕೆ ನಮ್ಮ ಮನಸ್ಸನ್ನು ಹದಗೊಳಿಸಬೇಕು. ರಾಗ-ದ್ವೇಷಗಳಿಲ್ಲದ ಕರುಣೆ ಆರ್ದ್ರತೆಗಳೇ ಆಗ ನಮ್ಮ ಕಣ್ಣುಗಳಾಗುತ್ತವೆ. ಆಗ ಮನಸ ಕನ್ನಡಿಯೊಳಗಿನ ಬಿಂಬಗಳೆಲ್ಲವೂ ಶೃತಿಯಾಗಿ ಬದುಕು ಹೊಸರಾಗಕ್ಕೆ ತೆರೆದುಕೊಳ್ಳುತ್ತದೆ.

ಕಾಮೆಂಟ್‌ಗಳಿಲ್ಲ: