ಒಟ್ಟು ಪುಟವೀಕ್ಷಣೆಗಳು

ಮಂಗಳವಾರ, ಡಿಸೆಂಬರ್ 16, 2008

ಪ್ರಶ್ನೋತ್ತರಗಳ ಪರಿಧಿಯಲ್ಲಿ

ಪ್ರಶ್ನೆ ದೊಡ್ಡದೋ ಅಥವಾ ಆ ಪ್ರಶ್ನೆಗೆ ಇರಬಹುದಾದ ಉತ್ತರ ದೊಡ್ಡದೋ? ಸಾಮಾನ್ಯವಾಗಿ ಉತ್ತರವೇ ದೊಡ್ಡದೆಂಬ ಮಾತನ್ನು ನಮ್ಮಲ್ಲಿ ಬಹುತೇಕರು ನಂಬಿದ್ದೇವೆ. ಏಕೆಂದರೆ ಬರೆಯುವ ಪರೀಕ್ಷೆಗಳಲ್ಲೆಲ್ಲ ಕೊಡುವ ಉತ್ತರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ. ಪಾಸು ಆಗಬೇಕೆಂದರೆ ಇರುವ ಪ್ರಶ್ನೆಗಳಲ್ಲಿ ಸುಲಭದ್ದನ್ನಾರಿಸಿಕೊಂಡು ಪರೀಕ್ಷೆ ಬರೆಯದಿದ್ದರೆ ಮತ್ತೆ ಓದಿದುದನ್ನೇ ಓದಬೇಕಾಗುತ್ತದೆ.

ಆದರೆ ಬದುಕಿನಲ್ಲಿ ಉತ್ತರಕ್ಕಿಂತ ಪ್ರಶ್ನೆಯೇ ಮುಖ್ಯ. ಏಕೆಂದರೆ ಪ್ರಶ್ನೆಗಳೇ ಹುಟ್ಟದಿದ್ದರೆ ಬದುಕು ಬರಡಾಗುತ್ತದೆ. ನಿಂತ ನೀರಾಗುತ್ತದೆ. ಬರಡಲ್ಲಿ ಬೆಳೆ ಅಸಾಧ್ಯ. ನಿಂತ ನೀರಿಗೆ ಕೊಳೆಯುವ ಭಯ.

ಎಂಥ ಕ್ಲಿಷ್ಟ ಪ್ರಶ್ನೆಗೂ ಉತ್ತರ ಇದ್ದೇ ಇರುತ್ತದೆಂಬ ನಂಬಿಕೆಯೇ ಬದುಕಿನುದ್ದಕ್ಕೂ ಇರುತ್ತದೆ. ಅಂಥ ಭಾವ ನಶಿಸಿದರೆ ಆ ಕ್ಷಣವೇ ಮನುಷ್ಯ ಅಧೀರನಾಗುತ್ತಾನೆ. ತಾನು ಒಂಟಿಯೆಂದು ಮರುಗುತ್ತಾನೆ. ಎಲ್ಲ ಬಗೆಯ ಪರೀಕ್ಷೆಗಳಲ್ಲೂ ಒಂದೇ ಬಗೆಯ ಸಿದ್ಧ ಉತ್ತರ ಅಥವ ಮಾದರಿ ಉತ್ತರಗಳನ್ನು ಪ್ರಶ್ನೆಗಳೊಟ್ಟಿಗೇ ಸೃಷ್ಟಿಸಿಕೊಳ್ಳಲಾಗುತ್ತದೆ. ಅಂದರೆ ಪ್ರಶ್ನೆ ಹುಟ್ಟಿಸುವವರಿಗೆ ಉತ್ತರ ಎಂಬುದು ಪ್ರಶ್ನೆಗೆ ಮೊದಲೇ ಗೊತ್ತಿರುವುದರಿಂದಲೇ ಅಂಥ ಪ್ರಶ್ನೆಗಳನ್ನು ಅವರು ಕೇಳಿರುತ್ತಾರೆ. ಇನ್ನು ಕೆಲವು ಸಂದರ್ಭಗಳಲ್ಲಿ ಕೇಳುವ ಪ್ರಶ್ನೆಗಳಲ್ಲೇ ಗೊಂದಲವನ್ನು ತುರುಕಿ ಉತ್ತರಿಸುವವನನ್ನು ತಬ್ಬಿಬ್ಬುಗೊಳಿಸಿ ಗೊತ್ತಿರುವ ಉತ್ತರಗಳು ಹೌದೋ ಅಲ್ಲವೋ ಎನ್ನುವ ಅನುಮಾನಗಳನ್ನು ಬಿತ್ತಲಾಗುತ್ತದೆ. ಆದರೆ ಬದುಕಿನ ಪ್ರಶ್ನೆಗಳಿಗೆ ಉತ್ತರ ಆಯಾ ಸಂದರ್ಭಗಳಲ್ಲಿ ಆಯಾ ವ್ಯಕ್ತಿಯು ಹುಡುಕಿಕೊಳ್ಳುವ ಮಾರ್ಗಕ್ಕೆ ಹೊಂದಿಕೊಂಡಿರುತ್ತದೆ. ಅಂದರೆ ಒಂದೇ ಥರದ ಸಮಸ್ಯೆಗಳಿಗೆ ಎಲ್ಲರ ಉತ್ತರವೂ ಬೇರೆ ಬೇರೆಯಾಗಿಯೇ ಇರುತ್ತದೆ. ಇದು ಬದುಕು ನಮಗೆ ಕಲಿಸುವ ಅನನ್ಯ ಪಾಠವಾಗಿದೆ. ಒಂದೇ ಥರದ ಪ್ರಶ್ನೆಗಳಿಗೆ ಒಂದೇ ರೀತಿಯ ಸಿದ್ಧ ಉತ್ತರವಿದೆ ಎಂಬ ವಾದವನ್ನು ಇಲ್ಲಿ ಅಲ್ಲಗಳೆದಂತಾಯಿತು.

ಇನ್ನು ಕೆಲವು ಬಾರಿ ನಮ್ಮಲ್ಲಿ ಸಿದ್ಧವಿರುವ ಉತ್ತರಗಳಿಗೆ ತಕ್ಕಂತೆ ನಮ್ಮ ಪ್ರಶ್ನೆಗಳನ್ನು ಎತ್ತಿರುತ್ತೇವೆ. ನಮ್ಮ ಧಾರ್ಮಿಕ ನಂಬುಗೆ, ಸಾಂಸ್ಕೃತಿಕ ಚಿಂತನೆ, ರಾಜಕೀಯ ಪ್ರಜ್ಞೆ ಪ್ರಶ್ನೆಗಳನ್ನೆಂದೂ ಬಯಸದ ಸದಾ ಸಿದ್ಧ ಉತ್ತರಗಳನ್ನು ಇಟ್ಟುಕೊಂಡಿರುವ ಮತ್ತು ಅದನ್ನೇ ಬಿಂಬಿಸುವ ಸಲುವಾಗಿ ನಾವೇ ನೇಯ್ದು ನಾವೇ ಬಿದ್ದ ಬಲೆಯಾಗಿರುತ್ತದೆ. ಮೋಕ್ಷವೆಂದರೆ ಏನು? ಸತ್ಯವನ್ನೆಂದು ಯಾವುದನ್ನು ಕರೆಯಬೇಕು? ಯಾವ ಧರ್ಮವು ದೊಡ್ಡದು? ಇಂತಹ ಹಲವು ಪ್ರಶ್ನೆಗಳು ತಲೆತಲಾಂತರದಿಂದ ನಮ್ಮೊಳಗಿನ ಭಾವಗಳನ್ನು ಮುಟ್ಟದೆಯೇ ಬರಿದೇ ತೋರಿಕೆಯ ಉತ್ತರಗಳಿಂದಲೇ ತುಂಬಿಹೋಗಿವೆ. ಈ ಉತ್ತರಗಳು ನಾವು ಸ್ವತಃ ಅನುಭವಿಸಿ ಕಂಡುಕೊಂಡ ಉತ್ತರಗಳಲ್ಲದಿದ್ದರೂ ಅವು ನಮ್ಮದೇ ಎಂಬಂತೆ ನಮ್ಮ ತಲೆಯ ಮೇಲೆ ಹೊತ್ತು, ನಮ್ಮ ತಲೆಯೊಳಗೂ ತುಂಬಿಕೊಂಡಿರುತ್ತೇವೆ. ಆ ಕಾರಣದಿಂದಾಗಿಯೇ ಸಿದ್ಧ ಉತ್ತರಗಳನ್ನು ಪರಿಣಾಮಕಾರಿಯಾಗಿ ಸುಂದರವಾಗಿ ಹೇಳಬಲ್ಲವರು ಜ್ಞಾನಿ ಎನ್ನಿಸಿಕೊಳ್ಳುತ್ತಾರೆ. ಅವರಿಗೆ ನಾವು ಮಹತ್ವವನ್ನು ನೀಡಿ ಅವರನ್ನೇ ಆರಾಧಿಸತೊಡಗುತ್ತೇವೆ.

ಆದರೆ ಪ್ರಶ್ನೆಗಳನ್ನೆಂದೂ ಹುಟ್ಟಿಸದ ಸಿದ್ಧ ಉತ್ತರಗಳ ಆಧಾರದ ಮೇಲೇ ತಮ್ಮ ನಿಲುವುಗಳನ್ನು ಪ್ರಕಟಿಸುವುದು ಎಷ್ಟರ ಮಟ್ಟಿಗೆ ನಮ್ಮನ್ನು ವೈಚಾರಿಕವಾಗಿ ಬೆಳಸುತ್ತಿದೆ ಎನ್ನುವುದು ನಮ್ಮನಮ್ಮ ಅನುಭವದಿಂದಲೇ ಕಂಡುಕೊಳ್ಳಬೇಕಾದಉತ್ತರವಾಗಿದೆ. ಹಾಗಾಗಿಯೇ ಬದುಕಿನ ಒಳಸ್ತರಗಳಲ್ಲಿ ಹುಟ್ಟಿಕೊಳ್ಳುವ ಪ್ರಶ್ನೆಗಳಿಗೆ ನಮ್ಮೊಳಗಿಂದಲೇ ಉತ್ತರ ಹುಡುಕುವುದು ಅನಿವಾರ್ಯವೂ ಉಪಯುಕ್ತವೂ ಆದ ದಾರಿಯಾಗಿದೆ. ಮತ್ತು ಪ್ರಶ್ನೋತ್ತರಗಳ ಮಥನದಿಂದ ಉತ್ಪನ್ನವಾದ ನವನೀತವಾಗಿದೆ.

ಕಾಮೆಂಟ್‌ಗಳಿಲ್ಲ: