ಒಟ್ಟು ಪುಟವೀಕ್ಷಣೆಗಳು

ಬುಧವಾರ, ಡಿಸೆಂಬರ್ 17, 2008

ಉಳಿದ ಪ್ರತಿಮೆಗಳು

ಚರಿತ್ರೆ ಈವರೆಗೂ ಸವೆಸಿದ ಪ್ರತಿಮೆಗಳನೆಲ್ಲ
ಒಂದರ ಮೇಲೊಂದರಂತೆ ಇಟ್ಟು
ಒಂದಪೂರ್ವ ರೂಪ ಮೂಡಿಸಿಬಿಡಬಹುದೆಂದು
ವ್ರತಕ್ಕೆ ಕೂತವರು ಫಲಕ್ಕೆ ಕಾಯುವ ಹಾಗೆ
ಜಯ-ವಿಜಯ, ಸನಕ ಸನಂದನರ ದಂಡು.

ಸತ್ತ ಮಗನಿಗೆ ಮತ್ತೆ ಜೀವ ಬರಿಸುವುದಕ್ಕೆ
ಸಾವಿರದ ಮನೆಯ ಸಾಸಿವೆಯ ಅರಸಿ
ಮುಸುಕಿದ್ದ ಮಬ್ಬಷ್ಟೂ ಕಳೆದು ನಿಗಿ ನಿಗಿ ಹೊಳೆದ ಸತ್ಯ-
ದೆದುರಲ್ಲಿ ಮಂಡಿಯೂರಿದವಳಿಗೆಂಥ ಉಪದೇಶ?
ಬುದ್ಧನ ಮುಗುಳ್ನಗೆ ಇನ್ನೂ ಮಾಸಿಲ್ಲ.

ಬೆನ್ನ ಹಿಂದೇ ಇರುವ ಸಾವ ಠಾವಿನ ಗುರುತು
ಗೊತ್ತಿದ್ದರೂ ಬಿಡದದೆಂಥದೋ ಬಡಿವಾರ
ಧರ್ಮನುತ್ತರ ಕೇಳಿ ತೃಪ್ತ ಯಕ್ಷನ ಹಿಂದೆ
ಭಯ, ವಿಹ್ವಲೆ ಶಚಿಗೆ, ನಹುಷನರಮನೆ ಮೇನೆ
ಯುದ್ಧ ಮುಗಿದ ಮೇಲೇ, ಉತ್ತರೆಗೆ ಹೆರಿಗೆ ಬೇನೆ.

ಬೆಂಬಿಡದ ಬೇತಾಳ ತಂದಿತ್ತ ಜಿಜ್ಞಾಸೆಗುತ್ತರ
ಗೊತ್ತಿದ್ದೂ ಬಾಯಿ ಬಿಡದಿದ್ದರೆ ತಲೆ ಸಹಸ್ರ ಚೂರು
ಮೌನ ಧಿಕ್ಕರಿಸಿ ಹೊರಬಿದ್ದ ಮಾತಿಗೆ ಛಕ್ಕನೆ ಜಿಗಿ-
ದೆದ್ದು ಮತ್ತೆ ರೆಂಬೆಗೇ ಜೋತು ಬೀಳುವ ಆಟ
ಸುಳಿವ ಗಾಳಿಯಲಿ ಬರುವ ಸೌಗಂಧಿಕೆಯ ಸೊಗಡು.

ಹೀಗೆ ನಮ್ಮೊಳಗೆ ನಮ್ಮೊಡನೆ ನಮ್ಮ ಜೊತೆಗೇ ಬೆಳೆವ
ಛಂದಸ್ಸು, ರಗಳೆ, ರೂಪಕದಂಥ ಎಷ್ಟೊಂದು ಕತೆಗಳು
ಹುಲಿ, ಹಾವುಗಳ ಹಲ್ಲುಗಳನ್ನೇ ಕಿತ್ತು
ಬೇಕಾದಂತೆ ಆಡಿಸುವ ಛಲದಂಕ ಮಲ್ಲರ ಪಟ್ಟಿಗೆ
ಕತೆ, ಕಾವ್ಯ, ಸಂಗೀತ, ನಾಟಕಗಳೂ ಒತ್ತಿಟ್ಟಿಗೆ.

ಆದರೂ ದೇಶ ಕಾಲಗಳಾಚೆ ನಿಲ್ಲಬಲ್ಲ ಕತೆಗಳೂ ಕೂಡ
ನೆಲಕ್ಕಿಳಿದು ಭ್ರಮೆಗೊಂಡು ತತ್ತರಿಸುತಿಹವು
ಇಂದ್ರಪ್ರಸ್ಥ, ಅಮರಾವತಿ, ಬೃಂದಾವನದ ನೆನಕೆಗಳು
ಬರಿದೇ ಬರೆದು ಹೋದವರ ಕನಸುಗಳು
ಲೌಕಿಕದ ಮೈಲಿಗೆಗೆ ಮೈಲುಗಲ್ಲಾಗುವವು.

ದೇಶ ಕಾಲಗಳಾಚೆ, ಕೋಶವ್ಯಾಪ್ತಿಯ ಮೀರಿ
ವಿಕಸಿಸುವ ಸಹಜ ಆಂತರ್ಯದಲ್ಲಿ
ಯುದ್ಧ ಭೂಮಿಯ ನಡುವೆ ಗೀತೆ ದಕ್ಕಿದ ಹಾಗೆ
ಸಂತೆಯೊಳಗಿಂದಲೇ ಸಂತ ಎದ್ದು ಬರಬೇಕು
ಉಳಿದ ಪ್ರತಿಮೆಗಳಿಗಾದರೂ ಜೀವ ತುಂಬಬೇಕು.
=========೦======== (ಪ್ರಜಾವಾಣಿ ದೀಪಾವಳಿ ಕವನಸ್ಪರ್ಧೆ-೨೦೦೫ ಪ್ರಥಮ ಬಹುಮಾನ ಪಡೆದ ಕವಿತೆ)

1 ಕಾಮೆಂಟ್‌:

ಜಿ ಎನ್ ಮೋಹನ್ ಹೇಳಿದರು...

ರಾಮಸ್ವಾಮಿಯವರೇ

ನೀವು ಬಳಸುತ್ತಿದ್ದ ಮೊದಲಿನ ವಿನ್ಯಾಸವೇ ಚೆನ್ನಾಗಿತ್ತು. ಅದನ್ನೇ ಉಳಿಸಿಕೊಳ್ಲಬಹುದೇನೋ...?

-ಜಿ ಎನ್ ಮೋಹನ್