ಒಟ್ಟು ಪುಟವೀಕ್ಷಣೆಗಳು

ಭಾನುವಾರ, ಜನವರಿ 25, 2009

ತಪಸ್ಸೆಂಬ ತಾಪ

‘ತಪಸ್ಸು’ ಎಂಬ ಪದವನ್ನು ನಿತ್ಯದ ಮಾತುಗಳಲ್ಲಿ ನಾವೆಲ್ಲ ಬಳಸುತ್ತಲೇ ಇರುತ್ತೇವೆ. ತಪಸ್ಸು ಎಂಬ ಪದ ‘ತಪ್’ ಧಾತುವಿನಿಂದ ನಿಷ್ಪನ್ನವಾದ ಪದ. ಅಂದರೆ ಕಷ್ಟ ಪಡು ಎಂದರ್ಥ. ಒಂದು ಉದ್ದೇಶ ಸಾಧನೆಗಾಗಿ ದೈಹಿಕ ಕಾಮನೆಗಳನ್ನು, ಲೌಕಿಕದ ಸುಖಸವಲತ್ತುಗಳನ್ನು ಸ್ವಯಂಪ್ರೇರಣೆಯಿಂದ ಬಿಟ್ಟುಕೊಟ್ಟು ಕಷ್ಟಕ್ಕೆ ಒಡ್ಡಿಕೊಳ್ಳುವುದು ತಪಸ್ಸು. ಹಿಮಾಲಯದ ತಪ್ಪಲಿಗೋ, ಗುಹೆಯ ಏಕಾಂತಕ್ಕೋ ತೆರಳಿದ ಮಾತ್ರಕ್ಕೇ ತಾಪಕ್ಕೆ ಸಿಲುಕಿದವರೆಲ್ಲ ತಪಸ್ವಿಗಳಾಗುವುದಿಲ್ಲ. ಸಂಕಲ್ಪವನ್ನು ಸ್ವಶಕ್ತಿಯ ಮೂಲಕ ಸಿದ್ಧಿಯ ನೆಲೆಗೆ ಒಯ್ಯುವುದು ತಪಸ್ಸಿನ ಉದ್ದೇಶ. ಅದರ ಪರಿಕಲ್ಪನೆ ವೇದೋಪನಿಷತ್ತುಗಳ ಕಾಲದಿಂದಲೂ ಪರಂಪರೆ ನಮಗೆ ಕಲಿಸುತ್ತ ಬಂದಿದೆ. ಮನಸ್ಸು ಮತ್ತು ಇಂದ್ರಿಯಗಳ ಮೇಲಿನ ಅಪಾರ ಹಿಡಿತವೇ ತಪಸ್ಸಿನ ಮೂಲ. ಪಂಚೇದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮಗಳು ಲೌಕಿಕದ ವಿವಿಧ ಸಂವೇದನೆಗಳನ್ನು ಮೊಗೆಮೊಗೆದು ಮನಸ್ಸಿನ ಕಣಜದೊಳಗೆ ತುಂಬುತ್ತಲೇ ಇರುತ್ತವೆ. ಹಾಗೆ ಸಿಕ್ಕ ಸಂವೇದನೆಗಳನ್ನು ಅನುಭವಿಸುವಂತೆ ಮನಸ್ಸು ದೇಹವನ್ನು ಪ್ರಚೋದಿಸುತ್ತದೆ. ಪ್ರಲೋಭನೆಗೆ ಒಳಗಾದಾಗ ಸಹಜವಾಗಿ ಚಂಚಲವಾಗುವ ಮನಸ್ಸು ದೇಹದ ಮೇಲಿನ ಹಿಡಿತವನ್ನು ಕಳೆದುಕೊಳ್ಳುತ್ತದೆ. ಆಕರ್ಷಣೆಯ ಸುಳಿಗೆ ಸಿಕ್ಕ ದೇಹ ಉತ್ಕಂಠಿತತೆಯ ಮೋಹದಲ್ಲಿ ಪರಿವೆಯ ಇರವನ್ನೇ ಮರೆಮಾಚುತ್ತದೆ.

ಸಿದ್ಧಿ ಮತ್ತು ಸಾಧನೆಯ ಉದ್ದೇಶವಿದ್ದವರು ಸಹಜವಾಗಿ ಲೌಕಿಕ ಒಡ್ಡುವ ಆಮಿಷಗಳಿಂದ ಹೊರಗಿರಲು ಪ್ರಯತ್ನಿಸುತ್ತಲೇ ಇರುತ್ತಾರೆ. ಒಮ್ಮೆ ಸಿದ್ಧಿ ಕೈ ವಶವಾಯಿತೆಂದರೆ ನಂತರ ಲೌಕಿಕದ ಯಾವ ಆಮಿಷಗಳೂ ಸಿದ್ಧಿಸಿದ ಬಲದ ಮುಂದೆ ಅಗಣ್ಯವಾಗುತ್ತವೆ. ದುರಂತವೆಂದರೆ ಸಾಧನೆಯ ಹೊಸ್ತಿಲು ಮುಟ್ಟಿದೊಡನೆಯೇ ಅದು ತಮ್ಮ ಪಾಲಿಗೆ ಸಿದ್ಧಿಸಿತೆಂದು ಭಾವಿಸುವ ಅಲ್ಪಮತಿಗಳು ಲೌಕಿಕ ಒಡ್ಡುವ ಮಾನ, ಸನ್ಮಾನಗಳ, ಭರದಲ್ಲಿ ಸಿಲುಕಿ ಸ್ವಲ್ಪದರಲ್ಲೇ ಸಿಗಬಹುದಾಗಿದ್ದ ಸಿದ್ಧಿಯಿಂದ ಬಹು ಬೇಗ ಬಲುದೂರಕ್ಕೆ ಕ್ರಮಿಸಿಬಿಡುತ್ತಾರೆ. ಸಿದ್ಧಿ ಎಂಬುದು ಆಗ ಅಂಥವರಿಗೆ ಎಟುಕದ ನಕ್ಷತ್ರವಾಗುತ್ತದೆ. ಸದಾ ಚಂಚಲತೆಗೆ ಸಿಕ್ಕು ಇಂದ್ರಿಯದ ಹತೋಟಿಯನ್ನು ಕಳೆದುಕೊಳ್ಳುವ ಮನಸ್ಸನ್ನು ನಿಗ್ರಹಿಸುವ ಕ್ರಿಯೆ ಅತಿ ಕಷ್ಟಕರವಾದುದು. ಅದು ತಾಪದಾಯ್ಕವಾದುದು. ಸದಾ ಸುಡುತ್ತಲೇ ಇರುವಂಥದು. ಆದುದರಿಂದಲೇ ಅದು ತಪಸ್ಸು.

ನಮ್ಮ ಪ್ರಾಚೀನ ಪರಂಪರೆಯಲ್ಲಂತೂ ತಪಸ್ಸಿನ ಪ್ರಸ್ತಾಪ ಆಗಾಗ ಬರುತ್ತಲೇ ಇರುತ್ತದೆ. ದೇವಗಂಗೆಯನ್ನು ಪಿತೃಮೋಕ್ಷಕ್ಕಾಗಿ ಧರೆಗೆ ತಂದ ಭಗೀರಥನ ಹೆಸರಂತೂ ಸರ್ವದಾ ಪ್ರಸ್ತಾಪ ಯೋಗ್ಯವಾದುದೇ ಆಗಿದೆ. ವಿಶ್ವಾಮಿತ್ರನೆಂಬ ಸಾಮಾನ್ಯ ಬ್ರಹ್ಮರ್ಷಿ ಎಂಬ ಅಸಾಮಾನ್ಯ ಪದವಿ ಪಡೆದುದರ ಹಿಂದೆ ತಪಸ್ಸಿನ ಬಲವಿದೆ. ಗಾಂಧಿ ಬಸವರೂ ತಪಸ್ವಿಗಳಾಗಿದ್ದಕ್ಕೇ ಲೌಕಿಕದ ಆಮಿಷಗಳನ್ನು ಗೆದ್ದು ತಮ್ಮ ಸಾಧನೆಯ ದಾರಿಯನ್ನು ಲೋಕಕ್ಕೆ ತಿಳಿಸಲು ಸಾಧ್ಯವಾದದ್ದು. ಸಂಕಲ್ಪವೆಂಬುದು ಸಿದ್ಧಿಯಾಗಿ ಬದಲಾದಾಗ ತಪಸ್ಸಿನ ಉದ್ದೇಶ ಪರಿಪೂರ್ಣವಾಗುತ್ತದೆ. ‘ತಪೋ ಬ್ರಹ್ಮೇತಿ’ ಎನ್ನುತ್ತದೆ ಉಪನಿಷತ್ತು. ಭಗವದ್ಗೀತೆ ತಪಸ್ಸನ್ನು ಮೂರು ಬಗೆಯಲ್ಲಿ ವಿಭಾಗಿಸಿ ಕಾಯಿಕ, ವಾಚಿಕ ಮತ್ತು ಮಾನಸಿಕ ಎಂದು ಹೆಸರಿಸುತ್ತದೆ. ಶುಚಿತ್ವ, ಸರಳತೆ, ಬ್ರಹ್ಮಚರ್ಯ, ಅಹಿಂಸೆ ಇವ್ಯ್ ಕಾಯಿಕ ತಪಸ್ಸಿನ ಧಾತುಗಳು. ಉದ್ವೇಗಕ್ಕೆ ಅವಕಾಶ ಕೊಡದೇ ಹಿತವೂ, ಪ್ರಿಯವೂ, ಸತ್ಯವೂ ಆದ ಮಾತನಾಡುವುದು ವಾಚಿಕ ತಪಸ್ಸು. ಮನಸ್ಸನ್ನು ಹದಗೊಳಿಸಿಕೊಂಡು ಆಹ್ಲಾದತೆಯನ್ನು ಕಾಪಾಡಿಕೊಳ್ಳುವುದು, ಇಂದ್ರಿಯಗಳನ್ನು ನಿಗ್ರಹಿಸಿಕೊಳ್ಳುತ್ತಲೇ ಭಾವಶುದ್ಧಿಯನ್ನು ಕಾಪಾಡಿಕೊಳ್ಳುವುದು ಮಾನಸಿಕ ತಪಸ್ಸು. ಕಾಯಿಕ ಮತ್ತು ವಾಚಿಕ ತಪಸ್ಸುಗಳನ್ನು ನಮ್ಮದಾಗಿಸಿಕೊಳ್ಳಬಹುದಾದರೂ ಮಾನಸಿಕ ತಪಸ್ಸು ಸುಲಭಕ್ಕೆ ಒಗ್ಗಿ ಬಗ್ಗುವಂಥದಲ್ಲ. ಅದಕ್ಕೆ ಅಚಲ ಸಂಕಲ್ಪ ಮತ್ತು ಸತತ ಸಾಧನೆ ಬೇಕಾಗುತ್ತದೆ. ವಿದ್ಯಾರ್ಥಿಯೊಬ್ಬ ತನ್ನ ಓದಿನಲ್ಲಿ ಹಿರಿದನ್ನು ಸಾಧಿಸಬೇಕಾದರೆ ಅವನಿಗೆ ತಾನು ವಿದ್ಯಾರ್ಥಿ ಎಂಬ ಅರಿವಿನ ಜೊತೆಜೊತೆಗೇ ತಾನು ಸಾಗಬೇಕಾದ ದಾರಿಯ ಸ್ಪಷ್ಟ ಕಲ್ಪನೆ ಇರಬೇಕಾಗುತ್ತದೆ. ಗೊಂದಲಕ್ಕೆ ಬಿದ್ದ ಹಾಗೆಲ್ಲ ಅವನ ಶೈಕ್ಷಣಿಕ ಶ್ರೇಯಾಂಕಗಳು ಕಡಿಮೆಯಾಗುತ್ತ ಹೋಗುತ್ತವೆ. ಈ ಮಾತು ಕಲೆ, ಸಾಹಿತ್ಯ, ವಿಜ್ಞಾನ, ಆಧ್ಯಾತ್ಮ, ಕೃಷಿ, ವಾಣಿಜ್ಯ- ಹೀಗೆ ಬದುಕಿನ ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುತ್ತದೆ.

ತಪಸ್ಸು ಎಂಬುದು ಜಟಾಜೂಟಗಳನ್ನು ಬಿಟ್ಟುಕೊಂಡು ಮರವೊಂದರ ಕೆಳಗೆ ಕೂತ ಮಾತ್ರಕ್ಕೆ ಎಟುಕುವಂಥದಲ್ಲ. ತೋರುಗಾಣಿಕೆಗೇ ತಪಸ್ಸಿಗೆ ಕೂತವರ ಮಾತು ಬೇರೆ!. ತಪಸ್ಸು ಎಂಬುದು ಸವೆದುಹೋದ ಅರ್ಥಕಳಕೊಂಡ ಪದವಲ್ಲ. ಅದು ಎತ್ತೆತ್ತರದ ಸುಮೇರುಗಳಿಗೆ ಮನುಷ್ಯನ ಮನಸ್ಸನ್ನು ಒಯ್ಯುವ ಮತ್ತು ಅಂಥ ಎತ್ತರದಲ್ಲೂ ವಿನಮ್ರತೆಯನ್ನು ಕಾಪಾಡಿಕೊಳ್ಳುವ ಕಲೆಯನ್ನು ಕಲಿಸುವ ವಿಷಿಷ್ಟ ಬೆರಗು. ನಮ್ಮ ಸಣ್ಣತನಗಳನ್ನು ಕಳೆದು ಹೊಸ ಎತ್ತರಗಳನ್ನು ಕೊಡುವ ಸಾಧನ.

1 ಕಾಮೆಂಟ್‌:

ಚಿತ್ರಾ ಸಂತೋಷ್ ಹೇಳಿದರು...

"...ಅದು ಎತ್ತೆತ್ತರದ ಸುಮೇರುಗಳಿಗೆ ಮನುಷ್ಯನ ಮನಸ್ಸನ್ನು ಒಯ್ಯುವ ಮತ್ತು ಅಂಥ ಎತ್ತರದಲ್ಲೂ ವಿನಮ್ರತೆಯನ್ನು ಕಾಪಾಡಿಕೊಳ್ಳುವ ಕಲೆಯನ್ನು ಕಲಿಸುವ ವಿಷಿಷ್ಟ ಬೆರಗು. ನಮ್ಮ ಸಣ್ಣತನಗಳನ್ನು ಕಳೆದು ಹೊಸ ಎತ್ತರಗಳನ್ನು ಕೊಡುವ ಸಾಧನ.." ಎಷ್ಟು ಒಳ್ಳೆಯ ಮಾತನ್ನು ಹೇಳಿದ್ದೀರಿ ಸರ್. ಬರಹ ತುಂಬಾನೇ ಇಷ್ಟವಾಯಿತು.
-ಚಿತ್ರಾ