ಒಟ್ಟು ಪುಟವೀಕ್ಷಣೆಗಳು

ಶನಿವಾರ, ಮಾರ್ಚ್ 18, 2017

ಅನುಸಂಧಾನ-೩

ಕಾವ್ಯವನ್ನು ಬಗೆಯುವ ಬಗೆ

ನಮ್ಮಲ್ಲಿ ಬಹಳ ಜನ ಕವಿತೆಯೆಂದರೆ ಕವಿಗೋಷ್ಠಿಯೆಂದರೆ ಮೂಗು ಮುರಿಯುತ್ತೇವೆ. ಕವಿತೆಯನ್ನು ಓದುವುದು ಅಥವ ಬರೆಯುವುದೆಂದರೆ ಮಾಡಲು ಬೇರೇನೂ ಕೆಲಸವಿಲ್ಲದವರು ಹೊಂಚಿಕೊಂಡ ಕೆಲಸವೆಂದು ಅನ್ನುವವರೂ ಇದ್ದಾರೆ. ಆದರೂ ಸಾಹಿತ್ಯ ಸಮ್ಮೇಳನಗಳ ಮುಖ್ಯ ಆಕರ್ಷಣೆಯೇ ಕವಿಗೋಷ್ಠಿಗಳಾಗಿರುವುದೂ ವಿಶೇಷವೇ. ಪಂಡಿತರಿಗಷ್ಟೇ ಕವಿತೆ ಪಾಮರರಿಗೆ ಏಕದರ ಗೊಡವೆ ಅನ್ನುವವರೂ ಇದ್ದಾರೆ. ಇನ್ನು ಕವಿಯಲ್ಲದವರು ಅಥವ ಕವಿತೆಯ ಗೊಡವೆ ಬೇಡದೆಯೂ ಕವಿತೆಯ ಜೊತೆಗೆ ಅನಿವಾರ್ಯವಾಗಿ ಬೆರೆಯುವವರೆಂದರೆ ಅದನ್ನು ಪಠ್ಯವಾಗಿ ಓದಲೇಬೇಕಿರುವ ವಿದ್ಯಾರ್ಥಿಗಳು ಮತ್ತು ಅದನ್ನವರಿಗೆ ಪಾಠ ಹೇಳಬೇಕಾದ ಗುರುತರ ಜಾವಾಬ್ದಾರಿ ಹೊಂದಿರುವ ಅಧ್ಯಾಪಕರು.
ಕವಿತೆಯನ್ನು ಪಾಠ ಮಾಡುವುದು ಎಂದರೆ ಅಧ್ಯಾಪಕರಿಗೆ ಹಿಂಜರಿಕೆ.ವರ್ಷಾವಧಿ  ಪರೀಕ್ಷೆಯಲ್ಲಿ ಕವಿತೆಗಳ ಮೇಲೆ ಕೇಳಿದ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆಯುವುದೆಂದರೆ ವಿದ್ಯಾರ್ಥಿಗಳಿಗೆ ಅಂಜಿಕೆ. ಅರ್ಥವಾಗದು ಎಂಬ ಅಂಜಿಕೆ ಹುಡುಗರಿಗೆ. ಅರ್ಥವಾಗದಿದ್ದರೆ ಎಂಬ ಅಂಜಿಕೆ ಅಧ್ಯಾಪಕರಿಗೆ. ಓದಿದ ಕವಿತೆ ಅರ್ಥವಾಗದಿದ್ದರೆ ನಮ್ಮ ಅಹಂಕಾರಕ್ಕೆ ಪೆಟ್ಟು. ಅದಕ್ಕೇ ನಮಗೆ ಕವಿತೆಯ ಉಸಾಬರಿಯೇ ಬೇಡ ಎಂದು ಮುಖ ತಿರುಗಿಸುವ ಮಂದಿ ಬಹಳ. ಕವಿತೆಯೊಂದನ್ನು ಓದಿದೊಡನೆಯೇ ಅದು ಅರ್ಥವಾಗಲೇ ಬೇಕು ಎಂದು ದಯವಿಟ್ಟು ಹಠಮಾಡಬೇಡಿ. ಕವಿತೆಯನ್ನು ಅರ್ಥದ ಗೂಟಕ್ಕೆ ಕಟ್ಟಬೇಡಿ. ಅದನ್ನು ಸುಮ್ಮನೆ ವಿಹಾರಕ್ಕೆ ಬಿಡಿ. ಅಂಗಳದಲ್ಲಿ ಆಡಬಯಸುವ ಪುಟ್ಟ ಮಗುವಿನಂತೆ ಕವಿತೆ ಆರಾಮಾಗಿ ನಿಮ್ಮ ಮನದ ಅಂಗಳದಲ್ಲಿ ಆಡಿಕೊಳ್ಳಲಿ. ಕವಿತೆಯ ಭಯವನ್ನು ಗೆಲ್ಲಲು ನಾವು ಆರಂಭದಲ್ಲಿ ಕೈಗೊಳ್ಳಬೇಕಾದ ಸುಲಭ ಉಪಾಯವಿದು.

ಸುಮ್ಮನೆ ಓದುತ್ತಾ ಹೋದರೆ, ಓದುತ್ತಲೇ ಹೋದರೆ ಹೇಗೆ ಈಗ ತಾನೇ ಓಡಾಡಲು ಪ್ರಾರಂಭಿಸಿರುವ ಮಗು ತನ್ನ ಆಟದಲ್ಲಿ ಒಂದು ಲಯ ಕಂಡೀತೋ ಹಾಗೆಯೇ ನೀವೂ ಕವಿತೆಯನ್ನು ಕಾಣಬೇಕು. ಮಗು  ನರ್ತಕರಂತೆ  ಪಾದವನ್ನು ನೆಲಕ್ಕೆ ಜಬ್ಬುವ ಚಂದ ನೋಡಿ. ಅದರ ತೊಡರುಗಾಲು ನಡೆ ನಿಮಗೆ ಸುಖ ಕೊಡದೆ ಇದ್ದೀತೆ? ಅದರ ತೊದಲು ತೊದಲು ನುಡಿ ಜೊಲ್ಲಿನಲ್ಲಿ ಬೆರೆತು ತುಟಿಯಾಚೆ ಜಾರುವ ಚೆಲುವಿಗೆ ಅರ್ಥವನ್ನೇಕೆ ಹಚ್ಚುವಿರಿ? ಕವಿತೆ ಹೇಗೆ ನಡೆಯುವುದು, ಹೇಗೆ ನಗುವುದು, ಹೇಗೆ ಅತಾರ್ಕಿಕವನ್ನು ಪಲುಕುವುದು ಗಮನಿಸಿ.
ಕವಿತೆ ಎಂದರೆ ಮೊದಲು ಗಮನಿಸ ಬೇಕಾದದ್ದು ಅದನ್ನು ಕವಿಯು ಹೇಗೆ ಗುನುಗುನಿಸುವ ಮಾತುಗಳನ್ನು ಹಿಡಿದು ನೇಯ್ದು ಮಾಲೆ ಮಾಡಿದ್ದಾನೆ ಎಂಬುದನ್ನು ಓದಿನ ಮೂಲಕವೇ ದಕ್ಕಿಸಿಕೊಳ್ಳಬೇಕು.
ಕವಿತೆಯ ಗ್ರಹಿಕೆ ಎಂಬುದು ಕವಿತೆಯ ಶಬ್ದ ಸಾಮಗ್ರಿಯಿಂದ ನೀವೇ ಸ್ವಂತ ಕಟ್ಟಿಕೊಂಡ ಗ್ರಹಿಕೆ ಎಂಬುದನ್ನು ಮರೆಯದಿರಿ. ಈ ಪದ್ಯದ ಇನ್ನೊಬ್ಬ ಓದುಗ ಭಿನ್ನವಾದ ಬೇರೆ ಒಂದು ಗ್ರಹಿಕೆಯನ್ನೇ ತನ್ನ ಓದಿನಿಂದ ಕಟ್ಟಿಕೊಂಡರೆ ನೀವು ಆತಂಕಗೊಳ್ಳಬೇಕಿಲ್ಲ. ಸದ್ಯಕ್ಕೆ ಇದು ನಿಮ್ಮ ಕಾವ್ಯ ಗ್ರಹಿಕೆ. ಮುಂದೆ ನಿಮ್ಮ ಓದು ಪರಿಷ್ಕಾರಗೊಂಡಂತೆ ಕವಿತೆ ಬೇರೊಂದು ವಿಭಿನ್ನವಾದ ಗ್ರಹಿಕೆಯನ್ನೇ ಕಟ್ಟಿಕೊಳ್ಳಬಲ್ಲುದು. ಕವಿತೆ ಒಂದೇ; ಆದರೆ ಅದರ ಗ್ರಹಿಕೆಗಳೂ ಅನಂತ. ಈ ನಂಬಿಕೆ ಮತ್ತು ವಿಶ್ವಾಸದೊಂದಿಗೆ ಹೊಸ ಕಾವ್ಯಾರ್ಥಿಗಳು ತಮ್ಮ ಕಾವ್ಯ ಶೋಧವನ್ನು ಮುಂದುವರೆಸಲಿ. ಕವಿತೆಯೆಂಬುದು ನಿರಂತರ ವಿಕಸನಶೀಲವಾದ ಒಂದು ಜೈವಿಕ ಭಾಷಾನುಸಂಧಾನ ಎಂಬ ಅರಿವು ನಿಮಗಿರಲಿ.

ಇನ್ನು ನವ್ಯ ನವೋದಯ ಬಂಡಾಯ ಇತ್ಯಾದಿ ಇತ್ಯಾದಿ ಪ್ರಬೇಧಗಳೆಲ್ಲ ನಮ್ಮ ಓದಿನ ರುಚಿಯನ್ನು ಮತ್ತು ಕವಿತೆಗಳ ಓದಿನ ಮೂಲಕ ನಾವೇ ಕಟ್ಟಿಕೊಂಡ ಗ್ರಹಿಕೆಗಳನ್ನು ಅಳೆಯುವ ಸಾಧನವಾಗಿವೆಯೇ ವಿನಾ ಅವೇ ಅಂತಿಮವಲ್ಲ. ಏಕೆಂದರೆ ಒಂದು ಕಾಲದಲ್ಲಿ ಗಣ ಪ್ರಸ್ತಾರ ಛಂದೋಬಂಧವಿರದುದನ್ನು ಕಾವ್ಯವೆಂದು ಒಪ್ಪುತ್ತಿರಲಿಲ್ಲ. ನಂತರ ಬಂದ ನವೋದಯ ಸಾಹಿತ್ಯ ಮಾರ್ಗ ಲಯ ಮತ್ತು ಭಾವಗೀತಾತ್ಮಕ ಶೈಲಿಯನ್ನು ಮೈಗೂಡಿಸಿಕೊಂಡಿದ್ದರೆ ನಂತರದ ಪ್ರಗತಿಶೀಲ ಮಾರ್ಗ ಸರ್ವ ಸಮಾನತೆಯನ್ನು ಒಟ್ಟು ಜನಕಲ್ಯಾಣವನ್ನು ಬಯಸುವ ಸಮಾಜವಾದದ ಆಯಕಟ್ಟಿನ ಮೇಲೆ ನಿಂತಿತ್ತು. ನವ್ಯ ಕಾವ್ಯವಂತೂ ಕನ್ನಡ ಕಾವ್ಯ ಕೃಷಿಯ ಜಮೀನಿನ ಮೇಲೆ ಬಿದ್ದ ಹೊಸ ಬಗೆಯ ಬೆಳೆ. ಅಲ್ಲಿಯವರೆಗೂ ಮನುಷ್ಯನ ಆಂತರಿಕ ಸಂಗತಿಗಳನ್ನು ಅಷ್ಟಾಗಿ ಪ್ರಕಟಪಡಿಸದೇ ಪ್ರಾಕೃತಿಕ ಬಣ್ಣನೆಯಲ್ಲೇ ಕಳೆದು ಹೋಗಿದ್ದವರು ತಮ್ಮ ತಮ್ಮ ಜೀವನದ ಖಾಸಗೀ ಸಂಗತಿಗಳಿಗೂ ಕಾವ್ಯದ ಸ್ಪರ್ಶ ಕೊಟ್ಟ ಸಂದರ್ಭವಿದು.

ಇನ್ನು ಬಂಡಾಯ ಮಾರ್ಗ ಕನ್ನಡಕಾವ್ಯ ಪರಂಪರೆಗೆ ಹೊಸ ದಿಕ್ಕು ದೆಸೆಗಳನ್ನು‌ ಕೊಟ್ಟು ಬೇಡಿಕೆಯನ್ನು ಹಕ್ಕಾಗಿ ಪ್ರಕಟಿಸುವ ಧೈರ್ಯವಾಗಿ ಮೊಳಗಿದ್ದು ಈಗ ಇತಿಹಾಸ.

ಇನ್ನು ಸದ್ಯದ ಕಾವ್ಯ ಇನ್ನೂ ತನ್ನ ದಾರಿಯನ್ನು ಸ್ಪಷ್ಟಗೊಳಿಸಿಕೊಳ್ಳಬೇಕಿದೆ. ನವೋದಯದ ರಮ್ಯತೆ ಕಳೆದು ನವ್ಯದ ಪ್ರತಿಮೆ ರೂಪಕಗಳೂ ಸವೆದು ಬಂಡಾಯದ ದನಿ ಉಡುಗಿಹೋಗಿರುವ ಸಂದರ್ಭದಲ್ಲಿ ಕಾವ್ಯವೆಂದರೆ ಆ ಕ್ಷಣ ಅನ್ನಿಸಿದ್ದನ್ನು ತತ್ ಕ್ಷಣವೇ ಬರೆದು ಪ್ರಕಟಿಸುವ ಸಾಮಾಜಿಕ ಜಾಲತಾಣಗಳ ಪುಟಗಳಾಗಿ ಬದಲಾಗುತ್ತಿದೆ. ಇದು ಗಮನಿಸಬೇಕಾದ ಮುಖ್ಯ ಸಂಗತಿ. ಕವಿತೆ ಬರೆಯುವವರೆಂದರೆ ಅದ್ಯಾಪಕರೇ ಎಂಬ ಹುಸಿಯನ್ನು ವರ್ತಮಾನದ ಕವಿಗಳು ಅಳಿಸಿಹಾಕಿದ್ದಾರೆ. ಬದುಕಿನ ಹಲವು ಸ್ತರಗಳಿಂದ ಅನುಭವಗಳಿಂದ ಹುರಿಗೊಂಡ ಅನೇಕ ಮನಸ್ಸುಗಳು ಆಧುನಿಕ ಕಾವ್ಯ ಪ್ರಕಾರವನ್ನು ಕಟ್ಟುತ್ತಿವೆ. ತಮಗನ್ನಿಸಿದ್ದನ್ನು ನಿರ್ಭಿಡೆಯಿಂದ ಸ್ಪಷ್ಟವಾಗಿ ಹೇಳುವ ಸಿದ್ಧ ಸಾಮಗ್ರಿ ಈಕಾಲದ ಕವಿಗಳಿಗಿರುವುದು ವಿಶೇಷ.

ದಿನಕ್ಕೊಂದು ಕವಿಯ ಒಂದೇ ಒಂದು ಕವಿತೆಯನ್ನು ಅಭ್ಯಾಸ ಮಾಡುವ ಕ್ರಮವನ್ನು ರೂಢಿಸಿಕೊಂಡರೆ ನಾವೇ ಅತ್ಯುತ್ತಮ ವಿಮರ್ಶಕರಾಗಲು ಸಾಧ್ಯ. ಆದರೆ ಅದಕ್ಕೂ ಮೊದಲು ನಮಗೆ ನಾವೇ ಹಾಕಿಕೊಂಡಿರುವ ಆದರ್ಶದ ಗೆರೆಗಳನ್ನು ಅಳಿಸಿಕೊಳ್ಳಬೇಕು. ಎಲ್ಲವನ್ನೂ ಎಲ್ಲವನ್ನೂ ಮುಗ್ಧತೆಯಿಂದ ನೋಡುವ ಗುಣವನ್ನು ಸಾಧಿಸಬೇಕು. ಆಗ ಬರಿಯ ಪ್ರಕಟಿತ ಕವಿತೆಯೇನು ಬದುಕಿನ ಹಲವು ಪಲುಕಗಳಲ್ಲಿ ನಿತ್ಯನೂತನ ಸಂಗತಿಗಳಲ್ಲಿರುವ ಕಾವ್ಯವನ್ನು ಅರಿಯಲು ಸಾಧ್ಯ. ಏನಂತೀರಿ?

ಕಾಮೆಂಟ್‌ಗಳಿಲ್ಲ: