ಅನುಸಂಧಾನ-೨
ಸಾಹಿತ್ಯ ಸಮ್ಮೇಳನ ಹಾಗೂ ಹಣಕಾಸಿನ ವಹಿವಾಟು
ನಿನ್ನೆಯಷ್ಟೇ ೮೨ನೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ರಾಯಚೂರಿನಲ್ಲಿ ಸಂಪನ್ನಗೊಂಡಿದೆ. ಪ್ರಾಯಶಃ ವ್ಯಾಪಾರವಾಗದೇ ಉಳಿದ ಪುಸ್ತಕಗಳನ್ನು ಪುಸ್ತಕದಂಗಡಿಯವರು ಮುಂದಿನ ಯಾವ ಸಮ್ಮೇಳನಕ್ಕೆ ಹೊತ್ತೊಯ್ಯಬಹುದೆಂದು ಯೋಚಿಸುತ್ತಿರಬಹುದು. ಹಾಗೇ ಗೋಷ್ಠಿಗಳಲ್ಲಿ ಪಾಲ್ಗೊಂಡ 'ವಿದ್ವಾಂಸರು' ಮುಂದಿನ ಸಮ್ಮೇಳನಗಳಲ್ಲೂ ತಮ್ಮ ಹೆಸರು ಇದ್ದೇ ಇರುವುದನ್ನು ಖಾತರಿಗೊಳಿಸಿಕೊಳ್ಳುವುದರಲ್ಲಿ ನಿರತರಾಗಿರಬಹುದು. ತಾಲೂಕು ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಅಧ್ಯಕ್ಷತೆ ವಹಿಸಿದ್ದವರೇ ಅಖಿಲ ಭಾರತ ಸಮ್ಮೇಳನದ ಕವಿಗೋಷ್ಠಿಯಲ್ಲೂ ಅಧ್ಯಕ್ಷತೆ ವಹಿಸುತ್ತಾರೆ. ಮತ್ತೆ ಯಾರಾದರೂ ಪ್ರೀತಿಯಿಂದ ಕರೆದರೆ ಹೋಬಳಿಗೂ ಬಂದಾರು. ಇದೇ ಶ್ರೀಯುತರು ಉಡುಪಿಯ ಸಮ್ಮೇಳನದಲ್ಲೂ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಕಾವ್ಯವಾಚನ ಆರಂಭವಾಗುವ ಮೊದಲೇ ತಮ್ಮ ಆಶೀರ್ವಚನ ನೀಡಿದ್ದರು. ಹೀಗೆ ವಿವಿಧ ಗೋಷ್ಠಿಗಳಲ್ಲಿ ಮತ್ತೆ ಮತ್ತೆ ಪ್ರಸ್ತಾಪವಾಗುವವರ ವಿನಾ ಅನ್ಯ ಬರಹಗಾರರ ಬಗ್ಗೆ ಪರಿಷತ್ತಿಗೆ ಗೊತ್ತೇ ಇಲ್ಲವೇನೋ? ಕರೆದರು ಅನ್ನುವ ಕಾರಣ ಕೊಟ್ಟು ಮತ್ತೆ ಮತ್ತೆ ತಮ್ಮನ್ನೇ ಪ್ರತಿಷ್ಠಾಪಿಸಿಕೊಳ್ಳುವ ಈ ಹಿರಿಯರಿಗೂ ನಾಚಿಕೆ ಮಾನ ಮರ್ಯಾದೆಗಳಿಲ್ಲದಿರುವುದು ಶೃತವಾಗಿದೆ.
ಈಗ ನಮ್ಮ ಸರ್ಕಾರದ ಬಳಿ ಹಣ ಜಾಸ್ತಿಯಾಗಿ ಜಿಲ್ಲಾ ಮತ್ತು ತಾಲ್ಲೂಕು ಸಮ್ಮೇಳನಗಳಿಗೂ ಲಕ್ಷಾಂತರ ರೂಪಾಯಿಗಳ ಅನುದಾನ ಘೋಷಿತವಾಗಿರುವುದರಿಂದ ಸಾಹಿತ್ಯ ಸಮ್ಮೇಳನಗಳೆಂದರೆ, ಪುಸ್ತಕದ ವ್ಯಾಪಾರ ಮತ್ತು ಸಾಹಿತ್ಯದ ಹೆಸರಿನಲ್ಲಿ ನಡೆಯುವ ಹಣಕಾಸಿನ ವಹಿವಾಟಾಗಿಬಿಟ್ಟಿದೆ. ಇಲ್ಲದಿದ್ದರೆ ಈಗ ಇಷ್ಟೊಂದು ಜಿಲ್ಲಾ, ತಾಲ್ಲೂಕು ಸಮ್ಮೇಳನಗಳು ಎಲ್ಲಿ ನಡೆಯುತ್ತಿದ್ದವು? ಇನ್ನು ಎಲ್ಲ ಹೋಬಳಿಗಳಲ್ಲೂ ಸಮ್ಮೇಳನಗಳನ್ನು ನಡೆಸಲೇಬೇಕೆಂದು ನಿರ್ಧರಿಸಿಬಿಟ್ಟರೆ ವರ್ಷವಿಡೀ ಅನ್ಯ ಕಾರ್ಯ ನಿಮಿತ್ತ ರಜಾ ಚೀಟಿಗಳಿಗಾಗಿ ಸಾಹಿತ್ಯಾಸಕ್ತರು ಕೆಲಸ ಕಾರ್ಯಗಳನ್ನು ಬದಿಗೊತ್ತಿ ಸಮ್ಮೇಳನಗಳಿಂದ ಸಮ್ಮೇಳನಗಳಿಗೆ ತಿರುಗುತ್ತಾ ತಮ್ಮ ಜೀವನವನ್ನು ಪಾವನಗೊಳಿಸಿಕೊಳ್ಳಬಹುದು.
ಬಹುತೇಕ ಸಮ್ಮೇಳನಗಳು ಆಯಾಊರಿನಲ್ಲಿರುವ ಮಠ ಮಾನ್ಯಗಳ ಸಹಕಾರ ಮತ್ತು ಸಾನ್ನಿಧ್ಯದಲ್ಲಿ ನಡೆಯುವುದರಿಂದ ನಮ್ಮ ಜನಕ್ಕೆ ಸಾಹಿತ್ಯ ಸಮ್ಮೇಳನವೂ ಒಂದೇ, ಧರ್ಮದ ಹೆಸರಿನಲ್ಲಿ ನಡೆಯುವ ಜಾತಿ ಸಮ್ಮೇಳನವೂ ಒಂದೇ! ಉದ್ಘಾಟನೆಗೆ ಆಗಮಿಸುವ ಶಾಸಕರು ಸಚಿವರು ಅವರ ಹಿಂಬಾಲಕರು ಮತ್ತು ಸಮಾರೋಪದ ನಂತರ ನಡೆಸಲೇಬೇಕಿರುವ ನಗೆಹಬ್ಬದ ದರಿದ್ರ ಜೋಕುಗಳಿಗೆ ಜನ ಜಮಾಯಿಸುತ್ತಾರೆ. ಉಳಿದಂತೆ ನೆಪಕ್ಕೆ ನಡೆಯುವ ಗೋಷ್ಠಿಗಳು ಖಾಲಿ ಕುರ್ಚಿಗಳಿಗೆ ಸಾಕ್ಷಿಯಾಗುತ್ತವೆ. ಸ್ಥಳೀಯ ಸಂಪನ್ಮೂಲದ ಕಾರಣಕೊಟ್ಟುಕೊಂಡು ರಾಜಕೀಯದವರ, ಮಠ ಮಾನ್ಯಗಳ ಒಡ್ಡೋಲಗವಾಗಿ ಪರಿವರ್ತಿತವಾಗುವ ಸಮ್ಮೇಳನಗಳ ಫಲಶೃತಿಯಾದರೂ ಏನು? ಯಾರಿಗೂ ಉತ್ತರ ಗೊತ್ತಿಲ್ಲ. ನೂರು ವರ್ಷಗಳ ಇತಿಹಾಸವಿರುವ ಸಾಹಿತ್ಯ ಪರಿಷತ್ತಿನ ವಿವೇಕಕ್ಕೇನಾಗಿದೆ ? ಈ ಪ್ರಶ್ನೆಗೆ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಅರ್ಥವೇ ಇಲ್ಲವೆಂದು ಕಾಣುತ್ತದೆ. ಏಕೆಂದೆರೆ, ಸಾಹಿತ್ಯ ಪರಿಷತ್ತಿಗೂ, ಸಾಹಿತ್ಯ- ಸಂಸ್ಕೃತಿಗಳಿಗೂ ಸಂಬಂಧ ಕಳಚಿಹೋಗಿ ಬಹಳ ವರ್ಷಗಳೇ ಆಗಿವೆ ಎಂಬುದೀಗ ರಹಸ್ಯದ ಮಾತೇನಲ್ಲ. ರಾಜ್ಯ ಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟದ ಸಾಹಿತ್ಯ ಪರಿಷತ್ ಚುನಾವಣೆಗಳು ನಡೆಯುವುದು ಒಂದು ರಾಜಕೀಯ ಚುನಾವಣೆಯಂತೆಯೇ! ಜಾತಿ ಮತ್ತು ವ್ಯಕ್ತಿಕೇಂದ್ರಿತ ವ್ಯವಸ್ಥೆಯಲ್ಲಿಯೇ.
ಈಗ ಜಿಲ್ಲಾ, ತಾಲ್ಲೂಕು ಸಮ್ಮೇಳನಗಳಿಗೂ ಲಕ್ಷಾಂತರ ರೂ. ಅನುದಾನ ಘೋಷಿತವಾಗಿರುವುದರಿಂದ ಸ್ಪರ್ಧೆ ರಾಜಕೀಯವಾಗಿ ಇನ್ನೂ ಬಿರುಸಾಗಿ, ಯಾರು ಯಾರೋ-ಊರ ಪುಢಾರಿಗಳೆಲ್ಲ-ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾಗಿ ಆಯ್ಕೆಯಾಗುತ್ತಿದ್ದಾರೆ, ಇಲ್ಲವೇ ನಾಮನಿರ್ದೇಶಿತರಾಗುತ್ತಿದ್ದಾರೆ. ಹೀಗಾಗಿ ಸಾಹಿತ್ಯ ಸಮ್ಮೇಳನವೆಂದರೆ, ಸ್ವಾಗತ ಸಮಿತಿ, ವೇದಿಕೆ ಸಮಿತಿ, ಚಪ್ಪರ ಸಮಿತಿ, ಮೆರವಣಿಗೆ ಸಮಿತಿ, ವಸತಿ ಸಮಿತಿ, ಊಟೋಪಚಾರಗಳ ಸಮಿತಿ ಇತ್ಯಾದಿ ಸಮಿತಿಗಳಲ್ಲದೆ, ಪ್ರತಿ ಗೋಷ್ಠಿಯ ಪ್ರಾರ್ಥನೆ, ಸ್ವಾಗತ, ನಿರೂಪಣೆ, ವಂದನಾರ್ಪಣೆಗಳ ಹೆಸರಲ್ಲಿ ಆಹ್ವಾನ ಪತ್ರಿಕೆಯಲ್ಲಿ ಮತ್ತು ವೇದಿಕೆಯ ಮೇಲೆ ಕಾಣಿಸಿಕೊಂಡು ‘ಮಿಂಚ’ ಬಯಸುವ ಹುಂಬ ಪ್ರದರ್ಶನವೇ ಎಂಬಂತಾಗಿದೆ. ಒಂದು ದಿನದ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಜನರ ಹೆಸರು ಮುದ್ರಿತವಾಗುವುದು ಸಾಮಾನ್ಯವಾಗಿದೆ.ಇಂತಹವರ ಮಧ್ಯೆ ಅಲ್ಲಲ್ಲಿ ಸೂಕ್ಷ್ಮತೆಗಳುಳ್ಳ ಜನರೂ ಇದ್ದಾರೆಂಬುದೂ ನಿಜ. ಆದರೆ ಅವರು ಅಲ್ಪಸಂಖ್ಯಾತರು; ಅಸಹಾಯಕರು.
ಮೊನ್ನೆ ಮೊನ್ನೆ ನಡೆದ ನಮ್ಮ ತಾಲ್ಲೂಕು ಸಮ್ಮೇಳನದ ನೇಪಥ್ಯದಲ್ಲಿದ್ದ ನನಗೀಗ ನಾಚಿಕೆಯಾಗುತ್ತಿದೆ. ಸಮ್ಮೇಳನ ಯಶಸ್ವಿಯಾಯಿತೆಂದು ಬೀಗುತ್ತಿದ್ದ ಕಾರ್ಯಕಾರಣಿ ಸಮಿತಿ ಇನ್ನೂ ಉಳಿಸಿಕೊಂಡಿರುವ ಹಲವು ವೆಚ್ಚಗಳ ಬಿಲ್ಲುಗಳನ್ನು ಪಾವತಿಸಬೇಕಿದೆ. ಕಾರ್ಯಕ್ರಮವೇ ಮುಗಿದುಹೋಗಿರುವುದರಿಂದ ಇನ್ನು ಯಾರೂ ಹಣ ಕೊಡಲಾರರು. ನಮ್ಮ ಸಮ್ಮೇಳನಾಧ್ಯಕ್ಷರಂತೂ 'ನನಗೆ ಸಂತೋಷವಾಗಿದೆ’ ಎಂದರು.‘ಆದರೆ ನನಗೆ ಸಂತೋಷವಾಗಿಲ್ಲ’ ಎಂದ ನಾನು, ‘ಸಾಹಿತ್ಯ ಸಮ್ಮೇಳನ ಸಾಹಿತ್ಯದ ಘನತೆ-ಗೌರವಗಳೊಂದಿಗೆ ನಡೆಯಬೇಕು. ಇಂತಹ ಸಮಾರಂಭಗಳು ಊರಿನ ಜನ ತಮ್ಮ ಜಾತಿ ನಡವಳಿಕೆಗಳನ್ನು ಮೀರಿ ನಡೆಯುವಂತಹ ಸಾಂಸ್ಕೃತಿಕ ವಾತಾವರಣ ನಿರ್ಮಿಸಬೇಕು. ಆದರೆ ಇಲ್ಲಿ ಅಂತಹ ನಡವಳಿಕೆಗಳನ್ನು ಪುಷ್ಟೀಕರಿಸುವ ಹಲವು ಸಂಗತಿಗಳಿಗೆ ನಾವು ಸಾಕ್ಷಿಯಾಗಬೇಕಾಯಿತಲ್ಲ" ಎಂದು ನನ್ನ ಮತ್ತು ನನ್ನ ಗೆಳೆಯರ ಬೇಸರವನ್ನು ವ್ಯಕ್ತಪಡಿಸಿದೆ.
ಜೊತೆಗೆ ಈ ಮಾತುಗಳನ್ನೂ ಹೇಳಿದೆ: ‘ಸ್ವಾಮೀಜಿಗಳನ್ನು ರಾಜಕಾರಣಿಗಳನ್ನು ಸಾಹಿತ್ಯ ಸಮ್ಮೇಳನಗಳಿಗೆ ಕರೆಯಬಾರದೆಂದಲ್ಲ. ಏಕೆಂದರೆ ನಮ್ಮ ಸಾಹಿತಿಗಳಲ್ಲನೇಕರು ಸ್ವಾಮೀಜಿಗಳಂತೆಯೇ ಸಾಹಿತ್ಯ ಮಠಗಳನ್ನು ಕಟ್ಟಿಕೊಂಡಿದ್ದಾರೆ! ಇರಲಿ ಬಿಡಿ , ಆದರೆ ಮಠಾಧೀಶರಿಗೆ ಮತ್ತು ರಾಜಕಾರಣಿಗಳಿಗೆ ಈ ಸಂದರ್ಭಕ್ಕೆ ಎಷ್ಟು ಉಚಿತವೋ ಅಷ್ಟು ಮಾತ್ರ ಗೌರವ ಸಲ್ಲಿಸಬೇಕು. ಅವರಿಗೆ ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ಮೀರಿದ ಗೌರವಗಳನ್ನು ಪ್ರದರ್ಶಿಸಬಾರದು. ಅದು ಸಾಧ್ಯವಾಗದಿದ್ದ ಮೇಲೆ ಸಮ್ಮೇಳನಕ್ಕೊಬ್ಬ ಅಧ್ಯಕ್ಷರ ಅಗತ್ಯವಾದರೂ ಏಕೆ ಬೇಕು?'
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ