ಒಟ್ಟು ಪುಟವೀಕ್ಷಣೆಗಳು

ಶನಿವಾರ, ಮಾರ್ಚ್ 18, 2017

ಅನುಸಂಧಾನ-೪

ಚಾರಿತ್ರಿಕ ಸತ್ಯ V/S  ಸಾಹಿತ್ಯಕ ಸತ್ಯ.

ಚರಿತ್ರೆ ಮತ್ತು ಸಾಹಿತ್ಯ ಪರಂಪರೆ ಯಾವತ್ತೂ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಚಲಿಸುವ ಸತ್ಯಗಳು. ಚರಿತ್ರೆಯನ್ನು ಆಳುವ ವರ್ಗ ಬರೆಯಿಸುವ ಪ್ರಯತ್ನದಲ್ಲಿದ್ದರೆ ಸಾಹಿತಿಯೊಬ್ಬ ಆಯಾ ಕಾಲದ ಸತ್ಯಗಳನ್ನು ತನಗೆ ಹೊಂದುವ ಮಾಧ್ಯಮದಲ್ಲಿ ಪ್ರಕಟಿಸುತ್ತಾ ಸಾಹಿತ್ಯಕ ಸತ್ಯವೊಂದನ್ನು ಮುಂದಿನ ತಲೆಮಾರಿಗೆ ದಾಟಿಸುವ ಪ್ರಯತ್ನದಲ್ಲಿರುತ್ತಾನೆ. ಚರಿತ್ರಕಾರ ಅರಸೊತ್ತಿಗೆಯ ಅಥವ ಆಳುವವರ ಹಂಗಿನಲ್ಲಿರುವುದರಿಂದ ಸತ್ಯಕ್ಕಿಂತಲೂ ಮುಖ್ಯವಾಗಿ ಆಳುವವರನ್ನು ಸಂಪ್ರೀತಗೊಳಿಸುವ ಉದ್ದೇಶದಿಂದ ವಿಷಯಾಂತರ ಮಾಡುತ್ತಲೇ ವೈಭವೀಕರಿಸಿದ ಸಂಗತಿಗಳಿಂದ ಇತಿಹಾಸದ ಪುಟಗಳನ್ನು ತುಂಬಿಸುತ್ತಿರುತ್ತಾನೆ. ಆದರೆ ನಿಷ್ಠಾವಂತ ಸಾಹಿತಿ ಮಾತ್ರ ಇದ್ದುದನ್ನು ಇದ್ದಂತೆಯೇ ವರ್ತಮಾನದ ಸತ್ಯವನ್ನು ಭವಿಷ್ಯದ ಉಪಯೋಗಕ್ಕಾಗಿ ದಾಖಲಿಸುವುದರಲ್ಲಿ ಮಗ್ನನಾಗಿರುತ್ತಾನೆ.

ಈ ಮಾತನ್ನು ಸಮರ್ಥಿಸಲು ಕೆಲವೊಂದು ಉದಾಹರಣೆಗಳನ್ನೀಗ ನೋಡೋಣ. ವಿಜಯನಗರದ ಅರಸರ ಕಾಲವೆಂದರೆ ಇತಿಹಾಸದ ಪ್ರಕಾರ ಭಾರೀ ವೈಭವದ ಸತ್ಯ ನ್ಯಾಯ ಮತ್ತು ಸಂಪಧ್ಭರಿತ ಕಾಲ. ಸರಿ ಸುಮಾರು ಇದೇ ಅವಧಿಯಲ್ಲಿ ಅಂದರೆ ೧೫ನೇ ಶತಮಾನದ ಅಂತ್ಯದಲ್ಲೇ ದಾಸ ಸಾಹಿತ್ಯ ಮುಂಚೂಣಿಯಲ್ಲಿದ್ದ ಕಾಲದಲ್ಲೇ ದಾಸ ಶ್ರೇಷ್ಠ ಪುರಂದರ ದಾಸರ ರಚನೆಯೊಂದು  "ಸತ್ಯವಂತರಿಗಿದು ಕಾಲವಲ್ಲ , ದುಷ್ಟ ಜನರಿಗಿದು ಸುಭಿಕ್ಷ ಕಾಲ" ಎಂದು ಆ ಕಾಲವನ್ನು ಬಣ್ಣಿಸುತ್ತದೆ. ನಮ್ಮ ಜನಪದರಂತೂ ರಾಮ ರಾಜ್ಯವಾಳಿದರೂ ರಾಗಿ ಬೀಸೋದು ತಪ್ಪುವುದಿಲ್ಲ ಎಂಬ ಅಪ್ಪಟ ಸತ್ಯವನ್ನು ನಂಬಿದವರು. ಹಾಗಾಗಿಯೇ ಸದ್ಯ ನಾವೆಲ್ಲರೂ ಮೇಲಿಂದ ಮೇಲೆ ಚರ್ಚಿಸುತ್ತಿರುವ ಟಿಪ್ಪು ಮತ್ತು ಭಗತ್ ಸಿಂಗರನ್ನು ಚರಿತ್ರೆ ಹೇಳಿದ ಸತ್ಯದಲ್ಲಿ ಅಳೆಯಬೇಕೋ ಅಥವ ಆ ಕಾಲದ ಸಾಹಿತ್ಯದಲ್ಲಿ ಒಡಮೂಡಿರುವ ಬೆಳಕಲ್ಲಿ ಅರಿಯಬೇಕೋ? ಸದ್ಯ ನಮ್ಮ ಮುಂದೆ ಹಲವು ಚರಿತ್ರೆಗಳಿವೆ. ಈಗಾಗಲೇ ಚರ್ಚಿಸಿದಂತೆ ಆಯಾ ಕಾಲದ ಚರಿತ್ರಕಾರರು ತಮಗೆ ಅನುಕೂಲ ಕಂಡ ಹಾಗೆ ಇತಿಹಾಸವನ್ನು ನಿರ್ಮಿಸಿರುವ ಕಾರಣ ಆಯಾ ಪಂಥ ಬದ್ಧತೆ ಮತ್ತು ಪ್ರಾಂತ್ಯಬದ್ಧಗಳಾಚೆಗೆ ಇವನ್ನು ನಂಬುವುದು ಅಥವ ಬಿಡುವುದು ಜನಮಾನಸಕ್ಕೆ ಬಿಟ್ಟ ಸಂಗತಿಗಳಾಗಿವೆ.

ಸ್ವಾತಂತ್ರೋತ್ತರ ಭಾರತದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ಕುರಿತಂತೆಯೇ ಹಲವು ಸತ್ಯಗಳು ನಮ್ಮಮುಂದಿವೆ. ಬ್ರಿಟಿಷರಿಂದ ಭಾರತವನ್ನು ಬಿಡಿಸಿಕೊಟ್ಟ ಮಹಾತ್ಮರ ಆತ್ಮ ಚರಿತ್ರೆಗೂ ಅವರ ಬದುಕಿನ ಮುಖ್ಯ ಘಟ್ಟಗಳನ್ನು ಕುರಿತಂತೆ ಇರುವ ಗಾಂಧಿ ವರ್ಸೆಸ್ ಗಾಂಧಿ ನಾಟಕದ ವಸ್ತುವಿಗೂ ಅಜಗಜಾಂತರ ವ್ಯತ್ಯಾಸಗಳಿವೆ. ೧೯೭೫ರಿಂದ ೧೯೭೭ರವರೆಗಿನ ತುರ್ತುಪರಿಸ್ಥಿತಿಯ ಕಾಲವನ್ನು ಕುರಿತೂ ಹಲವು ಜಿಜ್ಞಾಸೆಗಳಿವೆ. ಇಂದಿರಾ ಅಂದರೆ ಇಂಡಿಯಾ ಇಂಡಿಯಾ ಅಂದರೆ ಇಂದಿರಾ ಅಂದ ಭಟ್ಟಂಗಿಗಳ ಹಾಗೆಯೇ ಆಕೆಯನ್ನು ದುರ್ಗೆಯೆಂದು ಚಿತ್ರಿಸಿದ ಕಲಾವಿದರೂ ಇದ್ದಾರೆ. ಅದುವರೆಗೂ ಭಾರತವನ್ನಾಳಿದ ಕಾಂಗ್ರೆಸ್ಸನ್ನು ಧೂಳೀಪಟ ಮಾಡಿದ ಕೀರ್ತಿ ಈ ತುರ್ತುಪರಿಸ್ಥಿತಿಯದೇ ಕೊಡುಗೆ ಅನ್ನುವದರಲ್ಲಿ ಯಾವ ಅನುಮಾನಗಳೂ ಇಲ್ಲದಿರುವಾಗ ಹೊಗಳುಭಟರ ಕಲಾವಿದರ ಅನ್ನಿಸಿಕೆಗಳು ವೈಯುಕ್ತಿಕ ಮಟ್ಟದವೋ ಇತಿಹಾಸಕ್ಕೆ ಸಂದ ಸತ್ಯಗಳೋ ಎನ್ನುವುದನ್ನು ಪರಿಶೀಲಿಸಬೇಕು.

ಇನ್ನು ಚರಿತ್ರೆಯ ಅಂಶವೊಂದನ್ನುಹಿನ್ನೆಲೆಯನ್ನಾಗಿ ಇಟ್ಟುಕೊಂಡು ರಚಿತವಾಗುವ ಸಾಹಿತ್ಯಕ ಕೃತಿಗಳು ಸಮಾಜದ ಮೇಲೆ ಬೀರುವ ಪರಿಣಾಮಗಳು ಯಾವತ್ತೂ ಅಪಾರವಾಗಿರುತ್ತವೆ. ಬಸವಣ್ಣನವರ ಕಲ್ಯಾಣ ಕ್ರಾಂತಿಯ ವಸ್ತುವನ್ನು ಹೊಂದಿದ್ದ ಲಂಕೇಶರ ಸಂಕ್ರಾಂತಿ, ಕಾರ್ನಾಡರ ತುಘಲಕ್ ಮತ್ತು ತಲೆದಂಡ, ಬೈರಪ್ಪನವರ ಆವರಣ ಮುಂತಾದವು ಇತಿಹಾಸವನ್ನು ವರ್ತಮಾನದ ಕಣ್ಣಲ್ಲಿ ಕಂಡ ಅಪರೂಪದ ಪ್ರಯೋಗಗಳು. ಇನ್ನು ಪುರಾಣ ರಾಮಾಯಣ ಮಹಾಭಾರತಗಳಂತೂ ಆಧುನಿಕ ಮನೋಭೂಮಿಕೆಯ ಮೇಲೆ ಇನ್ನಿಲ್ಲದ ಪರಿಣಾಮ ಬೀರುತ್ತಿರುವ ಕಾರಣ ಇಂದಿಗೂ ಆ ಮಹಾಕಾವ್ಯಗಳು ಹೊಸ ಹೊಸ ರೀತಿಯಲ್ಲಿ ಅನಾವರಣಗೊಳ್ಳುತ್ತಲೇ ಇವೆ.
ಮಹಾಭಾರತವನ್ನು ಪುನರ್ ರಚಿಸಿದ ಪರ್ವ,(ಬೈರಪ್ಪ) ಪುರಾಣ ಪ್ರಸಂಗವೊಂದನ್ನು ಆಧುನಿಕ ಜಿಜ್ಞಾಸೆಗೆ ದೂಡಿದ ಯಯಾತಿ, (ಕಾರ್ನಾಡ್) ಪರಮಾತ್ಮನನ್ನೇ ಪ್ರಶ್ನಿಸಿದ ಜಲಗಾರ (ಕುವೆಂಪು) ಹುಡುಕುತ್ತಾ ಹೋದರೆ ಇತಿಹಾಸವನ್ನು ಪ್ರಶ್ನಿಸಿದ  ಹಲವು ಕೃತಿಗಳು ಕನ್ನಡ ಸಾಹಿತ್ಯದಲ್ಲಿ ಒಡಮೂಡಿರುವುದನ್ನು ಕಾಣಬಹುದು. ಇನ್ನು ಬ್ರಿಟಿಷ್ ಆಡಳಿತ ಕಟ್ಟಿಕೊಟ್ಟ ಮೆಕಾಲೆ ಪ್ರಣೀತ ನಮ್ಮ ವಿದ್ಯಾಭ್ಯಾಸದ ಕ್ರಮ ಸಮಷ್ಟಿಯ ಸುಖಕ್ಕಿಂತಲೂ ವೈಯುಕ್ತಿಕ ಲಾಭದ ಮೇಲೇ ದೃಷ್ಟಿ ಇಟ್ಟುಕೊಂಡಿರುವ ಕಾರಣ ವರ್ಗಾಧಾರಿತ ವರ್ಣಾಶ್ರಮ ಧರ್ಮವನ್ನು ಜಾತಿ ಸೂಚಕವನ್ನಾಗಿ ಬದಲಿಸಿತು. ಭಾರತವಷ್ಟೇ ಅಲ್ಲದೆ ಜಾಗತಿಕ ಸಾಹಿತ್ಯದ ಮೇರು ಕೃತಿಗಳಾದ ವೇದಗಳನ್ನು ಸ್ಮೃತಿಗಳನ್ನು ವಿವಿಧ ನ್ಯಾಯಗಳನ್ನು
ಅಲ್ಲಗಳೆದು ಅವೆಲ್ಲವನ್ನೂ ಸಂಕುಚಿತ ಮನೋಸ್ಥಿತಿಯಿಂದ ನೋಡುವಂತೆ ಮಾಡಿದ್ದೂ ಆಧುನಿಕ ವಿದ್ಯಾಭ್ಯಾಸದ ಕ್ರಮವೇ!

ಚರಿತ್ರೆಯು ಬರೆಸಲ್ಪಡುವ ಸರಕಾದರೆ ಸಾಹಿತ್ಯವು‌ ಸಮುದಾಯವೊಂದು ಕಣ್ಣಾರೆ ಕಂಡು ದಾಖಲಿಸಿದ ಅಪ್ಪಟ ಸಾಕ್ಷಿಯಾಗಿದೆ. ಹಾಗಾಗಿಯೇ ಚರಿತ್ರಕಾರರು ಸೃಷ್ಟಿಸುವ ಸುಳ್ಳಿಗಿಂತಲೂ ಸಾಹಿತ್ಯವು ಸೃಷ್ಟಿಸುವ ಸತ್ಯಗಳು ಜನಮಾನಸದಲ್ಲಿ‌ ಚಿರಕಾಲ ನಿಲ್ಲುತ್ತವೆ ಮತ್ತು ಚಿಂತನೆಗೆ ಹಚ್ಚುತ್ತವೆ.

ಕಾಮೆಂಟ್‌ಗಳಿಲ್ಲ: