ಒಟ್ಟು ಪುಟವೀಕ್ಷಣೆಗಳು

ಭಾನುವಾರ, ಡಿಸೆಂಬರ್ 14, 2008

ಕೇಳುವುದು ಮತ್ತು ಕೇಳಿಸಿಕೊಳ್ಳುವುದು

ಅನ್ಯರ ಮಾತುಗಳನ್ನು ಕೇಳುವುದಕ್ಕೂ ಮತ್ತು ಅದನ್ನು ಕೇಳಿಸಿಕೊಳ್ಳುವುದಕ್ಕೂ ಬಹಳ ವ್ಯತ್ಯಾಸಗಳಿವೆ. ಬೇರೆಯವರ ಮಾತುಗಳಷ್ಟನ್ನೇ ಕೇಳುವುದು ಒಂದು ಅರ್ಥದಲ್ಲಿ ದೌರ್ಬಲ್ಯ. ಹಾಗೇ ಕೇಳಿಸಿಕೊಳ್ಳದೇ ಇರುವುದು ಅಪರಾಧ. ಕೇಳುವುದು ಮತ್ತು ಕೇಳಿಸಿಕೊಳ್ಳುವುದರ ನಡುವೆ ಒಂದು ತೆಳುವಾದ ಪರದೆಯಿದೆ. ಅದು ಲೋಕ ಲೋಲಕದ ಜೀವನ ದರ್ಶನದಿಂದ ನಮಗೆ ಲಭಿಸುವಂತಹುದು.

ಆದರೆ ನಮಗೆಲ್ಲ ಸಾಮಾನ್ಯವಾಗಿ ಬೇರೆಯವರನ್ನು ನಾವು ಕೇಳಿಸಿಕೊಳ್ಳುವದಕ್ಕಿಂತ ನಮ್ಮನ್ನು ಇತರರು ಕೇಳಲಿ ಎಂಬ ಆಸೆಯು ಇದ್ದೇ ಇರುತ್ತದೆ. ನಮ್ಮ ಸಂಸಾರದಲ್ಲಿ ನನ್ನ ಮಾತು ನಡೆಯುವುದಿಲ್ಲ, ನನ್ನ ಮಕ್ಕಳು ನನ್ನ ಮಾತನ್ನು ಕೇಳುವುದೇ ಇಲ್ಲ, ನಾನು ಹೇಳಿದ್ದನ್ನು ನಮ್ಮ ಕಛೇರಿಯಲ್ಲಿ ಯಾರೂ ಒಪ್ಪುವುದೇ ಇಲ್ಲ- ಹೀಗೆ ನಮ್ಮ ಇಲ್ಲಗಳ ಸಾಲುಗಳು ಮುಂದುವರೆಯುತ್ತದೆ.

ಹೀಗೆ ಹೇಳುತ್ತೇವಲ್ಲ, ಅದರ ಸರಿಯಾದ ಅರ್ಥ ನಮಗಾಗಿದೆಯೇ ಎನ್ನುವುದು ಇಲ್ಲಿ ಮುಖ್ಯ. ಮೂಲತಃ ನಮ್ಮ ಮಾತನ್ನು ಅನ್ಯರು ಕೇಳಬೇಕೆಂದು ನಾವು ಬಯಸುವುದರಲ್ಲಿ, ನಮ್ಮ ಅಧಿಕಾರವನ್ನು ಸ್ಥಾಪಿಸುವ ಹುನ್ನಾರವಿದೆ. ನಮ್ಮ ಅನುಭವಗಳು ಏನೇ ಇರಲಿ, ನಮ್ಮ ಆಲೋಚನೆಗಳ ಮಟ್ಟ ಎಷ್ಟೇ ಎತ್ತರದ್ದಿರಲಿ, ನಾವು ಹೀಗೆ ನಮ್ಮ ಹಿತಾಸಕ್ತಿಗಳನ್ನು ಸ್ಥಾಪಿಸುವುದರಲ್ಲೇ ನಮ್ಮ ಅಪಾರ ಸಮಯ ಮತ್ತು ಶ್ರಮಗಳನ್ನು ವೃಥಾ ವ್ಯಯಿಸಿರುತ್ತೇವೆ.

ಇನ್ನೊಂದು ರೀತಿಯಲ್ಲಿ ಅನ್ಯರನ್ನು ಕೇಳಿಸಿಕೊಳ್ಳುವುದೆಂದರೆ, ಅವರನ್ನು ಅರ್ಥ ಮಾಡಿಕೊಳ್ಳುವುದು. ಕೇಳಿಸಿಕೊಳ್ಳುವುದು ಒಂದು ಅನುಭವ. ನಮ್ಮ ಒಳಗಿನ ಬದಲಾವಣೆಗೆ ಕಾರಣವಾಗುವಂಥದು. ಆದರೆ ಬರಿದೇ ಹೇಳಿದ್ದನ್ನು ಕೇಳುವುದು ದೌರ್ಬಲ್ಯ. ಅದು ನಮ್ಮ ಅನನುಭವವನ್ನು ಮತ್ತು ನಾವು ಯಾರನ್ನು ನಂಬಿದ್ದೇವೋ ಅವರನ್ನು ಅವಲಂಬಿಸಿರುವ ಕುರುಹಾಗುತ್ತದೆ.

ಮಾತು ಕೇಳುವುದಕ್ಕೆ ಬರಿಯ ವಿಧೇಯತೆ ಸಾಕಾಗುತ್ತದೆ. ಆದರೆ ಮಾತನ್ನು ಕೇಳಿಸಿಕೊಳ್ಳುವುದಕ್ಕೆ ಸಿದ್ಧತೆ ಮತ್ತು ಸ್ವಾತಂತ್ರ್ಯ ಬೇಕಾಗುತ್ತದೆ. ಕೇಳಿಸಿಕೊಳ್ಳುವುದು ಬಹು ಪ್ರಯಾಸದ ಕೆಲಸ. ಏಕೆಂದರೆ ನಾವು ಬೇರೆಯವರ ಮಾತುಗಳನ್ನು ಕೇಳಿಸಿಕೊಳ್ಳುತ್ತೇವೆಂದರೆ ಒಂದೋ ಅವರನ್ನು ಒಪ್ಪುವುದಕ್ಕೆ ಅಥವ ಅವರ ನಿಲುವುಗಳನ್ನು ವಿರೋಧಿಸಲಿಕ್ಕೆ. ಒಪ್ಪಿಗೆಯೂ ಇಲ್ಲದೆ, ವಿರೋಧವೂ ಇಲ್ಲದೆ ನಿಜವಾಗಿ ಅವರು ಏನು ಹೇಳಲು ಬಯಸಿದ್ದಾರೆ ಎಂದು ಸುಮ್ಮನೆ ಕೇಳಿಸಿಕೊಳ್ಳುವುದು ಎಂಥ ಕಷ್ಟದ ಕೆಲಸ ಅಲ್ಲವೇ?

ಇಷ್ಟಕ್ಕೂ ನಾವು ಕೇಳಿಸಿಕೊಂದ ಮಾತುಗಳನ್ನು ಒಪ್ಪುವುದಕ್ಕೆ ಅಥವ ವಿರೋಧಿಸುವುದಕ್ಕೆ ನಮ್ಮದೇ ಆದ ಕಾರಣಗಳಿರುತ್ತವೆ. ನಾವು ಈಗಾಗಲೇ ಒಪ್ಪಿಕೊಂಡ ಸಿದ್ಧಾಂತಗಳನ್ನು ಅಥವ ವಿರೋಧಿಸಿದ ಅಂಶಗಳನ್ನು ಈ ಮೊದಲೇ ನಮ್ಮ ತಲೆಯೊಳಗೆ ಭದ್ರವಾಗಿ ಊರಿಕೊಂಡುಬಿಟ್ಟಿರುವುದು ಇದಕ್ಕೆ ಕಾರಣವಾಗುತ್ತವೆ. ಎಷ್ಟೋ ಬಾರಿ ನಮ್ಮ ಪೂರ್ವಾಗ್ರಹ ಚಿಂತನೆಗಳು ನಮ್ಮ ಒಳಿತನ್ನು ದೂರವಾಗಿಸುತ್ತವೆ.ವಾಸ್ತವದ ನೆಲೆ, ಭಾವನೆಯ ನೆಲೆ, ಆಲೋಚನೆಯ ಸೆಲೆ, ತೀರ್ಮಾನದ ಬಲೆ, ನೀತಿಯ ನೆಲೆ, ಆಧ್ಯಾತ್ಮಿಕ ಸೆಲೆ ಹೀಗೆ ಮಾತು ಎಲ್ಲಿಂದ ಹೊರಟು ಕಡೆಗೆಲ್ಲಿ ಸೇರುತ್ತದೆ ಎಂದು ತಿಳಿಯುವುದಕ್ಕಾದರೂ ನಾವು ಬೇರೆಯವರನ್ನು ಕೇಳಿಸಿಕೊಳ್ಳಲೇಬೇಕು. ಸುಮ್ಮಸುಮ್ಮನೇ ಎದಿರಿರುವವರು ಮಾತು ಮುಗಿಸುವ ಮೊದಲೇ ನಮ್ಮ ನಿರ್ಧಾರವನ್ನು ಅವರ ಮೇಲೆ ಹೊರಿಸ ಹೋಗಿ ಜಗಳಕ್ಕಿಳಿದುಬಿಡುತ್ತೇವೆ. ಹಾಗೆ ಯೋಚಿಸಿದರೆ ನಮ್ಮ ಬಹುತೇಕ ಜಗಳಗಳು ನಮ್ಮ ಮನಸ್ಸಿನಲ್ಲಿ ಈಗಾಗಲೇ ನಾವು ತಯಾರಿಸಿಕೊಂಡ ಸಂಗತಿಗಳೇ ಆಗಿರುತ್ತವೆ. ಅವನು ಹಾಗನ್ನುತ್ತಾನಾದ್ದರಿಂದ ನಾನು ಹೀಗೆ ಹೇಳಲೇ ಬೇಕೆಂದು ಜಗಳಕ್ಕೆ ಮೊದಲೇ ನಾವು ಸಿದ್ಧತೆ ನಡೆಸಿಕೊಂಡುಬಿಟ್ಟಿರುತ್ತೇವೆ! ಒಮ್ಮೆ ನಮ್ಮ ಎದಿರುವಾದಿ ಹಾಗನ್ನದಿದ್ದರೂ ನಾವು ನಮ್ಮೊಳಗೆ ಸಿದ್ಧಮಾಡಿಟ್ಟುಕೊಂಡಿದ್ದ ಉತ್ತರ ಕೊಟ್ಟು ಜಗಳ ಪ್ರಾರಂಭಿಸಿಯೇ ಬಿಡುತ್ತೇವೆ. ಪಾಪ ನಮ್ಮೆದುರು ನಿಂತವರು ಏನು ಹೇಳಲು ಪ್ರಯತ್ನಿಸುತ್ತಿದ್ದರು ಎನ್ನುವುದನ್ನೂ ನಾವು ಕೇಳಿಸಿಕೊಂಡಿರುವುದೇ ಇಲ್ಲ.

ಹೀಗೆಲ್ಲ ಆಗುವುದಾದರೂ ಏಕೆ? ನಾವೆಲ್ಲ ನಮಗೆ ತಿಳಿದಿರುವ ಭಾಷೆಯಲ್ಲಿ ವ್ಯವಹರಿಸುತ್ತಿದ್ದರೂ ನಾವು ನಮ್ಮ ಭಾಷೆಯ ಒಂದೊಂದು ಪದಕ್ಕೂ ನಮ್ಮದೇ ಆದ ಭಾವಮೌಲ್ಯಗಳನ್ನು ಕೊಟ್ಟುಕೊಂಡಿರುತ್ತೇವೆ. ಇದು ನಮ್ಮ ಪರಿಸರ, ಅನುಭವ, ಪರಂಪರೆ ಇತ್ಯಾದಿಗಳಿಂದ ನಾವೇ ಭಾವಿಸಿರುವಂಥದು. ನಾವು ಸಿದ್ಧಮಾಡಿಕೊಂಡಿರುವ ರೀತಿಯೇ ಸರಿ, ಉಳಿದವರೂ ಅದನ್ನು ಜಾರಿಗೆ ತರಬೇಕೆಂಬ ನಮ್ಮ ಹಟವೇ ಈ ಹೊತ್ತಿನ ನಮ್ಮ ಹಲವು ಜಗಳಗಳ, ವ್ಯಾಜ್ಯಗಳ, ಭಿನ್ನಾಭಿಪ್ರಾಯಗಳ ಮೂಲ ಧಾತು. ಇದಕ್ಕೆ ಕಾರಣ ನಾವು ಮಾತನ್ನು ಕೇಳುವುದಕ್ಕೆ ಕೊಡುವ ಮಹತ್ವವನ್ನು ಅದೇ ಮಾತನ್ನು ಕೇಳಿಸಿಕೊಳ್ಳುವುದಕ್ಕೆ ಕೊಡುತ್ತಿಲ್ಲ.


ಮಾತನ್ನು ಕೇಳುವುದಕ್ಕಿಂತ ಅದನ್ನು ಕೇಳಿಸಿಕೊಳ್ಳತೊಡಗಿದರೆ ನಮ್ಮೊಳಗೇ ಬದಲಾವಣೆಗಳಾಗುವುದನ್ನು ನಾವೇ ಗಮನಿಸಬಹುದು. ಆದರೆ ಅಂಥ ಸ್ಥಿತಿಗೆ ದಾಟಿಸಲಾದರೂ ಮತ್ತೊಮ್ಮೆ ನಾವು ನಮ್ಮೊಳಗಿನ ಮಾತುಗಳನ್ನು ಮೊದಲು ಮರೆಯಬೇಕು.

1 ಕಾಮೆಂಟ್‌:

nirusha ಹೇಳಿದರು...

Ramaswamigale,neevu ishtottu helidannu kelisikolluva vyavadanavadaru yarigide heli?